ಮರಳಿ ಬಾರದ ಲೋಕಕ್ಕೆ ಪಯಣಿಸಿದ ಸಕಲಕಲಾ ವಲ್ಲಭ ಸಿ. ಆರ್. ಸತ್ಯ

ಬಹಳ ಅದೃಷ್ಟ ಮಾಡಿದ್ದಲ್ಲಿ ಮಾತ್ರವೇ ಮನುಷ್ಯರಾಗಿ ಹುಟ್ತಾರಂತೆ. ಆದರೆ ಹಿಂದಿನ ಜನ್ಮದಲ್ಲಿ ಬಹಳಷ್ಟು ಪುಣ್ಯಕಾರ್ಯಗಳನ್ನು ಮಾಡಿದವರು ಈ ಜನ್ಮದಲ್ಲಿ ವಿಶೇಷವಾದ ವ್ಯಕ್ತಿಗಳಾಗಿ ಜನ್ಮ ತಾಳುತ್ತಾರಂತೆ. ಸ್ವತಃ ಅತ್ಯಂತ ಅಸಾಧಾರಣ ಬಹುಮುಖ ಪ್ರತಿಭೆಯಾಗಿದ್ದರೂ, ತಮ್ಮ ಜೀವಮಾನವಿಡೀ ದೇಶ ಖ್ಯಾತನಾಮರೊಂದಿಗೆ ಕೆಲಸ ಮಾಡಿಯೂ ಸಹಾ ಎಲ್ಲಿಯೂ ಅವರ ಹೆಸರನ್ನು ಬಳಸಿಕೊಳ್ಳದೇ ತನ್ನ ಸ್ವಸಾಮರ್ಥ್ಯದಿಂದಲೇ ಪ್ರಖ್ಯಾತರಾಗಿದ್ದ ಚಿನ್ಯಾ ರಾಮಚಂದ್ರರಾವ್ ಸತ್ಯ ಎಲ್ಲರ ಪ್ರೀತಿಯ C. R ಸತ್ಯರವರು ತಮ್ಮ 80ನೇ ವಯಸ್ಸಿನಲ್ಲಿ ಮಂಗಳವಾರ 4.4.23ರಂದು ನಮ್ಮೆಲ್ಲರನ್ನೂ ಅಗಲಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದ್ದು ಅವರ ಬಹುಮುಖ ಪ್ರತಿಭೆಯ ಕಿರುಪರಿಚಯವನ್ನು ಮಾಡಿಕೊಳ್ಳೋಣ

satya5

ಮೂಲತಃ ಮೈಸೂರಿನ ಮೂಲದವರಾದ ಸಾಂಪ್ರದಾಯಿಕ ಕುಟುಂಬದ ಈ ನಾಡು ಕಂಡ ಶ್ರೇಷ್ಠ ಬರಹಗಾರರಾಗಿದ್ದ ಶ್ರೀ ಎ.ಆರ್. ಕೃಷ್ಣಮೂರ್ತಿಗಳ ಮೊಮ್ಮಗನಾಗಿ, ಎಂ.ಇ.ಎಸ್ ನಲ್ಲ್ಲಿ ವೈದ್ಯರಾಗಿದ್ದ ಶ್ರೀ ರಾಮಚಂದ್ರರಾವ್ ಅವರ ಮಗನಾಗಿ ಆಗಸ್ಟ್ 12, 1942ರಲ್ಲಿ ಮೈಸೂರಿನಲ್ಲಿ ಜನನವಾದರೂ ಅವರ ವಿದ್ಯಾಭ್ಯಾಸವೆಲ್ಲಾ ಬೆಂಗಳೂರಿನಲ್ಲೇ ಆಗುತ್ತದೆ. ಸತ್ಯರವರಿಗೆ ಸುಮಾರು ಎರಡು ವರ್ಷದವರಾಗಿದ್ದಾಗ ಊರಿಗೆ ಹೋಗಿದ್ದಾಗ ಅವರು ವಿಪರೀತವಾದ ಖಾಯಿಲೆಗೆ ತುತ್ತಾಗಿ ಊರಿನಲ್ಲಿದ್ದ ವೈದ್ಯರಿಗೆ ತೋರಿಸಿದರೂ ಅವರ ಚಿಕಿತ್ಸೆ ಫಲಿಸದೇ ಮಗು ನಿಶ್ಚಲರಾದಾಗ, ಆ ವೈದ್ಯರು ಮಗು ಸತ್ತು ಹೋಗಿದೆ ಎಂದು ಅಧಿಕೃತವಾಗಿ ಘೋಷಿಸಿದಾಗ ಅದಾಗಲೇ ಕತ್ತಲಾಗಿದ್ದ ಪರಿಣಾಮ ಮನೆಯ ಹೊರಗಿನ ಅಂಗಳದಲ್ಲಿ ಮೃತ ದೇಹವು ಕೆಡದಿರಲೆಂದು ಮಂಜುಗೆಡ್ಡೆಯನ್ನು ದೇಹದ ಸುತ್ತಲೂ ಹಾಕಿ ಮನೆಯವರೆಲ್ಲರೂ ಬೇಸರದಿಂದ ಇರುತ್ತಾರೆ. ಹೀಗೆ ಮಗು ಸತ್ತ ವಿಷಯ ಆ ಊರಿಗೆ ಅಚಾನಕ್ಕಾಗಿ ಬಂದಿದ್ದ ಅವರಿಗೆ ಪರಿಚಿತರೇ ಆಗಿದ್ದ ಮತ್ತೊಬ್ಬ ವೈದ್ಯರಿಗೆ ತಿಳಿದು ಅವರು ಮಗುವನ್ನು ನೋಡಲು ಬಂದಾಗ. ಮಗುವಿನ ನಾಡಿ ಮಿಡಿಯುತ್ತಿದ್ದದ್ದನ್ನು ಕಂಡು ಕೂಡಲೇ ಅದರ ಅಕ್ಕ ಪಕ್ಕದಲ್ಲಿ ಹಾಕಿದ್ದ ಮಂಜುಗೆಡ್ಡೆಯನ್ನು ತೆಗೆಸಿ ಮಗುವಿಗೆ ಚೆಚ್ಚನೆಯ ಶಾಖವನ್ನು ಕೊಟ್ಟು ತಮಗೆ ತಿಳಿದಿದ್ದ ಚಿಕಿತ್ಸೆಯನ್ನು ಕೊಟ್ಟು ಆ ಮಗುವಿಗೆ ಪುನರ್ಜನ್ಮವನ್ನು ಕೊಡುತ್ತಾರೆ. ಮುಂದೆ ಆ ಮಗುವಿಗೆ ಉಪನಯನವಾದಾಗ, ಪುರೋಹಿತರು ಮಗೂ, ಇಷ್ಟು ದಿನಗಳ ಕಾಲ ಬಾಲ್ಯಾವಸ್ಥೆಯ ಒಂದು ಜನ್ಮವಾದರೆ, ಈಗ ಉಪನಯನವಾಗಿ ದ್ವಿಜನಾಗಿದ್ದೀ ಅಂದರೆ ಇದು ನಿನ್ನ ಎರಡನೇ ಜನ್ಮ ಎಂದು ಹೇಳಿದಾಗ ಆ ಮಗು ಇಲ್ಲಾ ಪುರೋಹಿತರೇ ಇದು ನನ್ನ ಮೂರನೇ ಜನ್ಮ ಎಂದು ಮೇಲಿನ ಪ್ರಸಂಗವನ್ನು ತಿಳಿಸಿದಾಗ ಆ ವಟುವಿನ ಹಾಸ್ಯ ಪ್ರಜ್ಞೆಗೆ ಉಪನಯಕ್ಕೆ ಬಂದಿದ್ದವರೆಲ್ಲರೂ ಮೆಚ್ಚಿ ನಕ್ಕಿದ್ದರಂತೆ.

ಹೀಗೆ ಬಾಲ್ಯದಿಂದಲೇ ಹಾಸ್ಯಪ್ರವೃತ್ತಿಯನ್ನು ಅಳಸಿಕೊಂಡು ಬಂದಿದ್ದಂತಹ ಸತ್ಯರವರು ತಮ್ಮ ವಿದ್ಯಾಭ್ಯಾಸವನ್ನು ಸಂಪೂರ್ಣವಾಗಿ ಬೆಂಗಳೂರಿನ ನ್ಯಾಷಿನಲ್ ಸ್ಕೂಲ್, ನ್ಯಾಷಿನಲ್ ಹೈಸ್ಕೂಲ್ ನಂತರ ನ್ಯಾಷಿನಲ್ ಕಾಲೇಜಿನಲ್ಲಿ ಪದವಿ ಪೂರ್ವವನ್ನು ಮುಗಿಸಿ ಬಸವನಗುಡಿಯ ಬಿ.ಎಂ.ಎಸ್, ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ನಲ್ಲಿ ಬಿ.ಇ. ಮುಗಿಸುವ ಹೊತ್ತಿಗಾಗಲೇ ಅವರಲ್ಲಿದ್ದ ಕವಿ ಹೃದಯ ಜಾಗೃತವಾಗಿ ತಮ್ಮ 17ನೇ ವಯಸ್ಸಿನಲ್ಲಿಯೇ ಆಚೆ ಮನೆಯ ಸುಬ್ಬಮ್ಮನಿಗೆ ಎಂಬ ವಿಡಂಬಣಾತ್ಮಕ ಹಾಸ್ಯಗೀತೆಯನ್ನು ರಾಶಿಯವರ ಸಂಪಾದಕತ್ವದಲ್ಲಿ ಮೂಡಿ ಬರುತ್ತಿದ್ದ ಅಂದಿನ ಕಾಲದ ಹೆಸರಾಂತ ಹಾಸ್ಯ ಪತ್ರಿಕೆಯಾದ ಕೊರವಂಜಿಗೆ ಬರೆದು ಕಳುಹಿಸಿ ಆ ಕವನ ಆ ಪತ್ರಿಕೆಯಲ್ಲಿ ಪ್ರಕಟವಾಗಿ ಅಂದಿನ ಕಾಲದಕ್ಕೇ 2 ರೂಪಾಯಿ ಗೌರವ ಧನವನ್ನು ಪಡೆದ ಹೆಗ್ಗಳಿಕೆಯೂ ಸತ್ಯರವರದ್ದು

ಏಕಾದಶಿ ಉಪವಾಸ ಎಲ್ಲೊ ಸ್ವಲ್ಪ ತಿಂತಾರಷ್ಟೇ ಉಪ್ಪಿಟ್ಟು ಅವಲಕ್ಕಿ ಪಾಯಸ|| ಪ ||
ಮೂರೋ ನಾಲ್ಕೋ ಬಾಳೆಹಣ್ಣು ಸ್ವಲ್ಪ ಚಕ್ಕುಲಿ ಕೋಡುಬಳೆ ಘಂಟೆಗೆ ಎರಡೆ ಸೀಬೆ ಹಣ್ಣು
ಆಗಾಗ ಒಂದೊಂದು ಕಿತ್ತಳೆ ಮಧ್ಯಾಹ್ನಕೆಲ್ಲ ರವೆ ಉಂಡೆ ಹುರುಳಿ ಕಾಳಿನ ಉಸಲಿ
ಎಲ್ಲೊ ಸ್ವಲ್ಪ ಬಿಸಿ ಸಂಡಿಗೆ ಐದೊ ಆರೋ ಇಡ್ಲಿ ರಾತ್ರಿಗೆ ಪಾಪ ಉಪ್ಪಿಟ್ಟೇ ಗತಿ
ಒಂದ್ ಲೋಟದ ತುಂಬಾ ಹಾಲು ಪಕ್ಕದ ಮನೆಯ ರಾಮೇ ಗೌಡರ ಸೀಮೆ ಹಸುವಿನ ಹಾಲು ||

1964 ರಲ್ಲಿ ತಮ್ಮ ಮೆಕ್ಯಾನಿಕಲ್ ಇಂಜಿನಿಯರಿಂಗ್‌ ಪದವಿಯನ್ನು ಪೂರ್ಣಗೊಳಿಸಿ, 1965 ರಲ್ಲಿ ಮುಂಬೈನ ಭಾಭಾ ಅಟಾಮಿಕ್ ಎನರ್ಜಿ ಎಸ್ಟಾಬ್ಲಿಷ್‌ಮೆಂಟ್‌ನಲ್ಲಿ ಪರಮಾಣು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತಮ್ಮ ಸ್ನಾತಕೋತ್ತರ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅದೇ ತಂತ್ರಜ್ಞಾನದಲ್ಲಿಯೇ ತಮ್ಮ ಕೆಲಸವನ್ನು ಮುಂದುವರೆಸುವ ಆಸೆಯಿಂದ ಅವರು ಮತ್ತು ಅವರ ಸಹಪಾಠೀ ಕನ್ನಡಿಗ ಶ್ರೀ ರಾಘವೇಂದ್ರ ಸಂದರ್ಶನಕ್ಕೆ ಹೋದಾಗ, ಆ ಸಂದರ್ಶನದ ಮುಖ್ಯಸ್ಥರಾಗಿ ಆಧುನಿಕ ಭಾರತದ ಅಪ್ರತಿಮ ವಿಜ್ಞಾನಿ, ಭಾರತದ ಮೊದಲನೆ ಅಣು ಬಾಂಬ್ ಕಾರ್ಯಕ್ರಮದ ಹರಿಕಾರರಾಗಿದ್ದ ರಾಜಾರಾಮಣ್ಣನವರು ಇದ್ದು ಕಾಕತಾಳಿಯದಂತೇ ಅವರೂ ಸಹಾ ಕನ್ನಡಿಗರೇ ಆಗಿದ್ದು ಸತ್ಯಾರವರ ಸಂದರ್ಶನದಿಂದ ಸಂತೃಷ್ಟರಾಗಿ ನೀವು, ಬಾಂಬೆ, ರಾಜಾಸ್ಥಾನ್, ದೆಹಲಿ ಕಲ್ಕತ್ತಾ ಈ ನಾಲ್ಕು ಪ್ರದೇಶದಲ್ಲಿ ಎಲ್ಲಿಗೆ ಸೇರಲು ಇಚ್ಚಿಸುತ್ತೀರೀ? ಎಂದು ಪ್ರಶ್ನಿಸಿದಾಗ, ಮನೆಯಿಂದ ಅಷ್ಟು ದೂರದ ಆ ಬಿಸಿಲು ಪ್ರದೇಶದ ಬದಲು ಕೇರಳದ ತುಂಬೆ ಉಡ್ಡಯಣ ಕೇಂದ್ರಕ್ಕೆ ಸೇರಿಕೊಳ್ಳಲು ಇಚ್ಚಿಸುತ್ತೇನೆ ಎಂದಾಗ ಅರೇ ಮೆಟ್ರೋ ಪ್ರದೇಶವನ್ನು ಬಿಟ್ಟು ಕೇರಳದ ಕುಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಆಶ್ಚರ್ಯ ಚಕಿತರಾಗಿರುತ್ತಾರೆ.

satya2

ನಂತರ ಸತ್ಯರವರ ಆಗ್ರಹದ ಮೇರೆಗೆ ಅವರ ಸ್ನೇಹಿತ ರಾಘವೇಂದ್ರರೂ ಸಹ ತುಂಬೆಯನ್ನೇ ಆಯ್ಕೆ ಮಾಡಿಕೊಂಡು ಅವರಿಬ್ಬರೂ ಕೇವಲ ಎರಡು ಮೂರು ವರ್ಷಗಳ ಹಿಂದೆಯಷ್ಟೇ ಬೆಸ್ತರೇ ಹೆಚ್ಚಾಗಿದ್ದಂತಹ ಸಮುದ್ರದ ತಟದಲ್ಲಿದ್ದ ಕೇರಳದ ತಿರುವನಂತ ಪುರದ ಹತ್ತಿರವಿದ್ದ ತುಂಬೆ ಉಡ್ಡಯಣ ಪ್ರದೇಶಕ್ಕೆ ಹೋಗಿ ಅಲ್ಲಿನ ಅಧಿಕಾರಿಗಳಿಗೆ ತಾವು ಹೊಸದಾಗಿ ಇಲ್ಲಿ ಕೆಲಸಕ್ಕೆ ಸೇರಲು ಬಂದಿದ್ದೇವೆ ಎಂದು ತಮ್ಮ ಆಜ್ಞಾಪತ್ರವನ್ನು ತೋರಿದಾಗ ಆ ಅಧಿಕಾರಿಗಳು ತಮ್ಮ ಅಕ್ಕ ಪಕ್ಕದಲ್ಲಿದ್ದ ಮತ್ತಿಬ್ಬರು ಸಹೋದ್ಯೋಗಿಗಳಿಗೆ ನೋಡಿ ಇವರಿಬ್ಬರಲ್ಲಿ ನಿಮಗೆ ಯಾರು ಬೇಕೋ ಆರಿಸಿಕೊಳ್ಳಿ ಎಂದಾಗ ಒಬ್ಬರು ನನಗೆ ರಾಘವೇಂದ್ರ ಅವರು ಇರಲಿ ಎಂದಾಗ ಮತ್ತೊಬ್ಬರು ಉಳಿದಿರುವ ಮತ್ತೊಬ್ಬರು ನನ್ನ ತಂಡಕ್ಕೆ ಸೇರಿಕೊಳ್ಳಲಿ ಎಂದರು. ಹಾಗೆ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡವರೇ ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ ಅಗ ಅವರು ಭಾರತೀಯ ಏರೋಸ್ಪೇಸ್ ವಿಜ್ಞಾನಿಯಾಗಿ ರಾಕೆಟ್ ಲಾಂಚರ್ ನಲ್ಲಿ ಕೆಲಸ ಮಾಡುತ್ತಿದ್ದು ನಂತರ ಭೌತಶಾಸ್ತ್ರ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ನಲ್ಲಿ ಸಾಧನೆ ಮಾಡಿ ಅಣ್ವಸ್ತ್ರದಲ್ಲಿಯೂ ಹೆಸರು ಮಾಡಿದ್ದಲ್ಲದೇ, 2002 ರಿಂದ 2007 ರವರೆಗೆ ಭಾರತದ 11 ನೇ ರಾಷ್ಟ್ರಪತಿಗಳಾಗಿಯೂ ಸೇವೆ ಸಲ್ಲಿಸಿದ್ದರು. ಹೀಗೆ ತಾವು ಕೆಲಸಕ್ಕೆ ಸೇರಿಕೊಂಡ ಮೊದಲನೇ ದಿನದಿಂದಲೂ ನಾಡಿನ ದಿಗ್ಗಜರುಗಳೊಂದಿಗೆ ಕೆಲಸ ಮಾಡುವ ಸುಯೋಗ ಅವರದ್ದಾಗಿತ್ತು. ಮುಂದೆ ISRO ಕಟ್ಟಿ ಬೆಳಸಿದ ವಿಕ್ರಂ ಸಾರಾಭಾಯ್ ಅವರೊಂದಿಗೂ ಸಹಾ ಕೆಲಸ ಮಾಡಿ ಅವರಿಂದಲೂ ಸೈ ಎನಿಸಿಕೊಂಡಿದ್ದು ಸತ್ಯರವರ ಹೆಗ್ಗಳಿಕೆ.

ಹೀಗೆ ತಿರುವನಂತಪುರಂನ ತುಂಬಾ ರಾಕೆಟ್ ಉಡಾವಣಾ ಕೇಂದ್ರದಲ್ಲಿ ರಾಕೆಟ್ ಇಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ನಂತರದ ದಿನಗಳಲ್ಲಿ, ಸೌಂಡಿಂಗ್ ರಾಕೆಟ್‌ಗಳು, ಪೇಲೋಡ್ ಏಕೀಕರಣ ಮತ್ತು ಪೇಲೋಡ್ ಅರ್ಹತೆಗೆ ಅಗತ್ಯವಿರುವ ಎಲ್ಲಾ ರಚನಾತ್ಮಕ ಮತ್ತು ಪೇಲೋಡ್ ಸಾಧನಗಳನ್ನು ಅವರು ವಿನ್ಯಾಸಗೊಳಿಸಿದರು. ನಂತರದ ದಿನಗಳಲ್ಲಿ ಅವರು ಕಾಂಪೋಸಿಟ್ ನೊಸ್‌ಕೋನ್‌ಗಳು ಮತ್ತು ರಾಕೆಟ್ ಮೋಟಾರ್ ಟ್ಯೂಬ್‌ಗಳಿಗೆ ಬದಲಾಯಿಸಿಕೊಂಡರು, ಅಂತಿಮವಾಗಿ ಕಾಂಪೊಸಿಟ್ಸ್ ತಂತ್ರಜ್ಞಾನದಲ್ಲಿ ಪೂರ್ಣ ಸಮಯ ಕೆಲಸ ಮಾಡಿದರು. ಮೊದಲು ಫೈಬರ್‌ಗ್ಲಾಸ್ ಪ್ರಯೋಗಾಲಯದ ಮುಖ್ಯಸ್ಥರಾಗಿ ಮತ್ತು ನಂತರ ಗ್ರೂಪ್ ಡೈರೆಕ್ಟರ್, ಕಾಂಪೋಸಿಟ್ಸ್ ಆಗಿದ್ದರು.

rocket

60ರ ದಶಕದಲ್ಲಿ ತುಂಬ ರಾಕೆಟ್ ಉಡ್ಡಯಣ ಕೇಂದ್ರದಲ್ಲಿ ರಾಕೆಟ್ ಒಂದನ್ನು ಉಡಾಯಿಸುವ ಸಲುವಾಗಿ ರಾಕೆಟ್ ಮೂಗಿನ ಕೋನ್ ಅನ್ನು ಬೈಸಿಕಲ್ ಮೇಲೆ ಹೊತ್ತು ಕೊಂಡು ಹೋಗುತ್ತಿರುವ ಈ ಪೋಟೋ ಬಹಳಷ್ಟು ಪ್ರಸಿದ್ಧಿಯಾಗಿದೆ. ಈ ಫೋಟೋವನ್ನು ಪ್ರಸಿದ್ಧ ಫ್ರೆಂಚ್ ಮಾನವತಾವಾದಿ ಛಾಯಾಗ್ರಾಹಕ ಕಪ್ಪು ಬಿಳುಪು ಪೋಟೋಗಳಿಗಾಗಿಯೇ ಪ್ರಖ್ಯಾತರಾಗಿದ್ದ ಹೆನ್ರಿ ಕಾರ್ಟಿಯರ್ ಬ್ರೆಸನ್ ಅವರು ತೆಗೆದಿದ್ದಾರೆ. ಅಚ್ಚರಿಯ ವಿಷಯವೇನೆಂದರೆ ಆ ರೀತಿಯಾಗಿ ರಾಕೆಟ್ ಕೋನ್ ಹಿಡಿದುಕೊಂಡು ಸೈಕಲ್ ಪಕ್ಕದಲ್ಲಿ ನಡೆಯುತ್ತಿರುವ ವ್ಯಕ್ತಿಯೇ ಸಿ ಆರ್ ಸತ್ಯ ಅವರಾಗಿದ್ದರು. ಅಂದು ಸಂಜೆ ರಾಕೆಟ್ ಉಡ್ಡಯಣ ನಿಶ್ಚಿತವಾಗಿದ್ದು, ಅವರು ಕೆಲಸ ಮಾಡುತ್ತಿದ್ದ ಪ್ರದೇಶದಿಂದ ಉಡ್ಡಯಣ ಕೇಂದ್ರ ಸುಮಾರು 2 ಕಿಮೀ ದೂರವಿದ್ದು ಕಾರಣಾಂತರಗಳಿಂದ ಅವರನ್ನು ಕರೆದೊಯ್ಯಲು ಪೂರ್ವನಿರ್ಧಾರಿತ ಜೀಪ್ ಬಾರದ ಕಾರಣ, ನಿಗಧಿತ ಉಡ್ಡಯಣಕ್ಕೆ ತೊಂದರೆ ಆಗಬಾರದೆಂದು ಅಲ್ಲಿಯೇ ಇದ್ದ ಬೆಸ್ತರೊಬ್ಬರ ಸೈಕಲ್ ಮೇಲೆ ಅವರ ಸಹೋದ್ಯೋಗಿಯೊಂದಿಗೆ ರಾಕೆಟ್ ಕೋನ್ ಸಾಗಿಸಿ ಕಲಾಂ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ರಾಕೆಟ್ ಉಡ್ಡಯಣ ಮಾಡಿದ್ದು ಈಗ ಇತಿಹಾಸ.

ಆ ಜನ್ಮ ಬ್ರಹ್ಮಚಾರಿಗಳಾಗಿದ್ದ ಕಲಾಂ ಅವರ ಜೊತೆಯಲ್ಲಿ ಆವರ ಹೆಗಲಿಗೆ ಹೆಗಲು ಕೊಟ್ಟು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದ ಸತ್ಯ ಮತ್ತು ಅವರ ಸಹೋದ್ಯೋಗಿಗಳು ನಂತರದ ದಿನದಲ್ಲಿ ಮದುವೆ ಮಾಡಿ ಕೊಂಡರೂ ಸರಿಯಾದ ಸಮಯಕ್ಕೆ ಮನೆಗೆ ಹೋಗದೇ ಹೋದಾಗ ಅವರೆಲ್ಲರ ಪತ್ನಿಯರೂ ಸೇರಿಕೊಂಡು ಕಲಾಂ ಅವರ ಮನೆಯ ಮುಂದೆ, ತಮ್ಮ ಪತಿಯಂದಿರನ್ನು ನಿಗಧಿತ ಸಮಯಕ್ಕೆ ಸರಿಯಾಗಿ ಮನೆಗೆ ಕಳುಹಿಸಿ ಕೊಡಬೇಕೆಂದು ಧರಣಿ ಹೂಡಿದ್ದರಂತೆ.

ವೃತ್ತಿಯಲ್ಲಿ ವಿಜ್ಣಾನಿಗಳಾಗಿದ್ದರೂ ಸತ್ಯರವರು ಪ್ರವೃತ್ತಿಯಲ್ಲಿ ಬಹುಮುಖ ಪ್ರತಿಭೆಯಾಗಿ ಸಕಲ ಕಲಾ ವಲ್ಲಭರಾಗಿದ್ದರು. ಕೇರಳದಲ್ಲೊಂದು ಕರ್ನಾಟಕ ಸಂಘವೊಂದನ್ನು ಕಟ್ಟಿ ಅಲ್ಲಿ ಅನಂತ ಎಂಬ ಪತ್ರಿಕೆಯನ್ನು ಹೊರತಂದು ಅದರ ಮೂಲಕ ಸಾಹಿತ್ಯ, ನಾಟಕ, ಸಂಗೀತದ ಮೂಲಕ ಹೊರ ರಾಜ್ಯದಲ್ಲೂ ಕನ್ನಡದ ಕಂಪನ್ನು ಹರಿಸಿದ್ದಲ್ಲದೇ ತಾವೂ ಸಹಾ ಮಲೆಯಾಳಂ ಭಾಷೆಯನ್ನು ಕಲಿತು ಕನ್ನಡದ ಅನೇಕ ಕೃತಿಗಳನ್ನು ಮಲೆಯಾಳಕ್ಕೂ ಅದೇ ರೀತಿ ಮಲೆಯಾಳಂನ ಅನೇಕ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ ಕೀರ್ತಿಯೂ ಸತ್ಯರವರದ್ದಾಗಿದೆ. ಅದೊಮ್ಮೆ ತಿರುವನಂತಪುರದ ಆಕಾಶವಾಣಿ ಕೇಂದ್ರದವರು ತಿರುವನಂತಪುರದ ಪ್ರಸಿದ್ಧ ಅನಂತ ಪದ್ಮನಾಭ ದೇವಾಲಯದ ಕುರಿತಾದ ಕಾರ್ಯಕ್ರಮವನ್ನು ನಡೆಸಿ ಕೊಡಲು ಕೋರಿಕೊಂಡಾಗ, ತಾವು ಇಂಜೀನಿಯರಿಂಗ್ ಹಿನ್ನಲೆಯುಳ್ಳವರಾದ ಕಾರಣ ಅಲ್ಲಿನ ಧಾರ್ಮಿಕ ವಿಧಿವಿಧಾನಗಳಿಗಿಂತಲೂ ಆ ದೇವಾಲಯದ ವಾಸ್ತುಶಿಲ್ಪದ ಬಗ್ಗೆ ಮಾತನಾಡುತ್ತೇನೆ ಎಂದು ಆರಂಭಿಸಿದ ಅವರ ದೇವಾಲಯದ ಅಧ್ಯಯನ ಸುಮಾರು ಎರಡು ಮೂರು ವರ್ಷಗಳ ಕಾಲ ಮುಂದುವರೆದು ಅನಂತ ಪದ್ಮನಾಭ ದೇಗುಲದ ನಿರ್ಮಾಣದ ಹಿಂದಿನ ವಿಜ್ಞಾನ ಮತ್ತು ಇತಿಹಾಸದ ವಿಸ್ತೃತ ಅಧ್ಯಯನ ನಡೆಸಿ ಅದರ ಸಂಪೂರ್ಣ ಇತಿಹಾಸವನ್ನು ಅವರು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಕಟಿಸುವ ವರೆಗೂ ಮುಂದುವರಿದಿತ್ತು..

ಅದೇ ರೀತಿ ಪುರಂದರದಾಸರ ಸುಮಾರು 50-60 ಕೃತಿಗಳನ್ನು ಮಲೆಯಾಳಂ ಭಾಷೆಗೆ ಭಾಷಾಂತರಿಸಿ ಅದಕ್ಕೆ ಸೂಕ್ತ ರಾಗ ಮತ್ತು ತಾಳ ಮತ್ತು ಸ್ವರಗಳನ್ನು ಹಾಕಿ ಪುಸ್ತಕ ರೂಪದಲ್ಲಿ ಪ್ರಕಟಿಸಿ ಅದನ್ನು ತಿರುವನಂತಪುರದ ಆಕಾಶವಾಣಿಯ ನಿಲಯದ ಸಂಗೀತ ಕಲಾವಿದರುಗಳಿಗೆ ಉಚಿತವಾಗಿ ನೀಡಿದ್ದಲ್ಲದೇ ಆ ಎಲ್ಲಾ ಕಲಾವಿದರುಗಳನ್ನೂ ತಮ್ಮ ಮನೆಗೇ ಕರೆಸಿಕೊಂಡು ಅವರುಗಳಿಗೆ ಪುರಂದರರ ಕೃತಿಗಳನ್ನು ಸ್ಪಷ್ಟ ಉಚ್ಚಾರದಲ್ಲಿ ಹಾಡುವಂತೆ ಕಲಿಸಿದ್ದಲ್ಲದೇ, ತಿರುವನಂತಪುರ ಆಕಾಶವಾಣಿಯಲ್ಲಿ ನಿರಂತರವಾಗಿ ಪುರಂದರದಾಸರ ಕೀರ್ತನೆಯನ್ನು ಹಾಡುವಂತೆ ಮಾಡಿದ್ದಲ್ಲದೇ ಅವರು ಅಲ್ಲಿ ಇರುವವರೆಗೂ ನಿರಂತರವಾಗಿ ಪುರಂದರ ಆರಾಧನೆಯನ್ನು ಮಾಡಿಸಿದ ಹೆಮ್ಮೆಯೂ ಸಹಾ ಸತ್ಯರವರದ್ದಾಗಿದೆ

ಸತ್ಯರವರು ಇಸ್ರೋದಲ್ಲಿದ್ದಾಗಲೇ ಅವರು ಟಾಟಾ ಗ್ರೂಪ್‌ಗೆ ಸಲಹೆಗಾರರಾಗಿದಲ್ಲದೇ, 1989 ರಲ್ಲಿ ಇಸ್ರೋಗೆ ರಾಜೀನಾಮೆ ನೀಡಿದ ನಂತರ ಬೆಂಗಳೂರಿನಲ್ಲಿ ಕಾಂಪೋಸಿಟ್ಸ್‌ನಲ್ಲಿ ಟಾಟಾ ಅಡ್ವಾನ್ಸ್‌ಡ್ ಮೆಟೀರಿಯಲ್ಸ್ ಲಿಮಿಟೆಡ್‌ನಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಕೆಲಸಕ್ಕೆ ಸೇರಿಕೊಂಡು ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಕಂಪನಿಯನ್ನು ನಿರ್ಮಿಸುವ ಮೂಲಕ ರಕ್ಷಣೆ, ದೂರಸಂಪರ್ಕ ಮತ್ತು ವೈದ್ಯಕೀಯ ಉದ್ಯಮಗಳಿಗೆ ಹೆಚ್ಚು ಅತ್ಯಾಧುನಿಕ ಸಂಯೋಜನೆಗಳನ್ನು ವಿನ್ಯಾಸಗೊಳಿಸಲು ಮತ್ತು ತಯಾರಿಸ ಬಲ್ಲ ಅತ್ಯುತ್ತಮವಾದ ತಂಡವನ್ನು ಬೆಂಗಳೂರಿನಲ್ಲಿಯೇ ಕಟ್ಟಿದ್ದರು.

ಇವೆಲ್ಲವೂ ಅವವರ ವೃತಿಪರ ಚಟುವಟಿಕೆಗಳಾದರೆ, ಹೆಬ್ಬಾಳದ ಆನಂದ ನಗರಕ್ಕೆ ಹತ್ತಿರದಲ್ಲೇ ಇದ್ದ ಹೆಬ್ಬಾಳದ ಕೆರೆಯನ್ನು ಸ್ವಚ್ಚಗೊಳಿಸಿ ಅದರ ನೀರನ್ನು ಬಳಸಿಕೊಳ್ಳುವಂತಾಗಲು ಥೋರೋ ಫೌಂಡೇಶನ್‌ ಎಂಬ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಹೆಬ್ಬಾಳದ ಕೆರೆಯನ್ನು ತಾಂತ್ರಿಕವಾಗಿ ಪುನರುಜ್ಜೀವನಗೊಳಿಸುವ ನಾಯಕತ್ವವನ್ನು ವಹಿಸಿಕೊಂಡಿದ್ದಲ್ಲದೇ, ಸರೋವರ ಪ್ರಾಧಿಕಾರವು ಆ ಕೆರೆಯನ್ನು ಸ್ವಾಧೀನಪಡಿಸಿಕೊಳ್ಳುವವರೆಗೂ ಅದರ ಪುನರುಜ್ಜೀವನದಲ್ಲಿ ಸತ್ಯರವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಸತ್ಯ ಅವರು 1959 ರಿಂದ ಕೊರವಂಜಿಯಲ್ಲಿ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದವರು ನಂತರ ದಿನಗಳಲ್ಲಿ ಕೊರಂವಂಜಿ ನಿಂತು ಹೋದ ನಂತರ ರಾಶಿಯವರ ಮಗ ಆರಂಭಿಸಿದ ಅಪರಂಜಿಯಲ್ಲಿ ನಿರಂತರವಾಗಿ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದಲ್ಲದೇ ಅನೇಕ ವೈಜ್ಞಾನಿಕ ಲೇಖನಗಳನ್ನು ದೇಶದ ವಿವಿಧ ಪತ್ರಿಕೆ ಮತ್ತು ವಾರಪತ್ರಿಕೆಗಳಿಗೆ ಬರೆದಿದ್ದಾರೆ. ತಮ್ಮ ತಾತ ಡಾ. ಎಆರ್ ಕೃಷ್ಣ ಶಾಸ್ತ್ರಿಗಳು, ದೇವರಾಯನದುರ್ಗ ಶೇಷಗಿರಿ ರಾವ್ ಅವರ ಜೀವನ ಚರಿತ್ರೆಯಲ್ಲದೇ ತಮ್ಮೊಂದಿಗೆ ಕೆಲಸ ಮಾಡಿದ ಖ್ಯಾತ ವ್ಯಕ್ತಿಗಳಾದ ಯು.ಆರ್.ರಾವ್ ಹಾಗೂ ವಿಕ್ರಮ್ ಸಾರಾಭಾಯ್ ಅವರ ಜೀವನ ಚರಿತ್ರೆಗಳನ್ನೂ ಸಿ.ಆರ್.ಸತ್ಯ ಅವರು ಬರೆದಿದ್ದಾರೆ. ಸಹ್ಯಂದ್ರಿಂದಾಚೆಗೆ ಎಂಬ ತಮ್ಮ ಅನುಭವಗಳ ಕಥನವಲ್ಲದೇ, ಈಗಾಗಲೇ ತಿಳಿಸಿದಂತೆ ತಿರುವನಂತಪುರ ಅನಂತ ಪದ್ಮನಾಭ ದೇವಾಲಯದ ವಾಸ್ತು ಶಿಲ್ಪದ ಕುರಿತಾಗಿ ತಮ್ಮ ಅಧ್ಯಯನದ ಅಳಿವಿಲ್ಲದ ಸ್ಥಾವರ ಎಂದು ಕನ್ನಡದಲ್ಲಿಯೂ Sentinels of Glory ಎಂಬ ಅದರ ಇಂಗ್ಲೀಶ್ ಅವತರಣಿಕೆಯೂ ಸಹಾ ಅತ್ಯಂತ ಜನಪ್ರಿಯತೆಯನ್ನು ಪಡೆದಿದ್ದಲ್ಲದೇ, ಈ ಪುಸ್ತಕವನ್ನು ಅಬ್ದುಲ್ ಕಲಾಮ್ ಸಹಾ ಮೆಚ್ಚಿಕೊಂಡಿದ್ದರು.

trimukhi

ಇತ್ತೀಚೆಗೆ ಕೆಲ ವರ್ಷಗಳ ಹಿಂದೆ ತಮ್ಮದೇ ಅನುಭವದ ಒಂದು ರೀತಿಯ ಅತ್ಮಕಥೆ ಎನ್ನುವಂತಹ ತ್ರಿಮುಖಿ ಎಂಬ ಪುಸ್ತಕವನ್ನು ಸಹಾ ಪ್ರಕಟಿಸಿದ್ದಲ್ಲದೇ ಅದರಲ್ಲಿ ತಮ್ಮ ಬಾಲ್ಯದಿಂಂದ ವಿದ್ಯಾಭ್ಯಾಸದವರೆಗೂ ಒಂದು ಭಾಗ, ನಂತರ ಅವರ ಸೇವಾವೃತ್ತಿಯ ಎರಡನೆಯ ಭಾಗ ಮತ್ತು ನಿವೃತ್ತಿಯ ನಂತರದ ನೂರನೇ ಭಾಗವಾಗಿ ವಿಂಗಡಿಸಿ ಸಮಸ್ತ ಕನ್ನಡಿಗರೂ ಓದಲೇ ಬೇಕಾದಂತಹ ಪುಸ್ತಕವನ್ನು ನಮ್ಮೆಲ್ಲರಿಗೂ ಬಿಟ್ಟು ಹೋಗಿದ್ದಾರೆ.

ಸತ್ಯರವರ ಸಾಧನೆಗಳನ್ನು ಗುರುತಿಸಿ ಅವರಿಗೆ
ಕರ್ನಾಟಕ ಭೂಷಣ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಹಾ ಲಭಿಸಿತ್ತು

ಮಡದಿ ಶ್ಯಾಮಲ ಮತ್ತು ಆರತಿಗೊಬ್ಬಳು ಮಗಳು ಸೌಮ್ಯ ಮತ್ತು ಕೀರ್ತಿಗೊಬ್ಬ ಮಗ ಶ್ರೀಹರ್ಷ ಆವರಿಬ್ಬರಿಗೂ ಮದುವೆಯಾಗಿ ಅಳಿಯ, ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ಸುಂದರವಾದ ಸಂಸಾರವನ್ನು ನಡೆಸುತ್ತಿದ್ದರು.

satya

1965ರಲ್ಲಿ ಕೆಲಸಕ್ಕೆ ಸೇರಿದಾಗಿಂದಲೂ ಡಾ ಕಲಾಂ ಅವರೊಂದಿಗಿದ್ದ ಸ್ನೇಹದಿಂದಾಗಿ ಅದೊಮ್ಮೆ ಅದೊಮ್ಮೆ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಡಾ ಕಲಾಂ ಅವರನ್ನು ಭೇಟಿ ಮಾಡಿದಾಗ, ನೀವು ಯಾವಾಗಲೂ ಅಧಿಕೃತ ಸಭೆಗಳು ಮತ್ತು ಅತಿಥಿ ಗೃಹಗಳಲ್ಲಿ ತಯಾರಿಸಿದ ಆಹಾರವನ್ನು ಸೇವಿಸುತ್ತೀರಿ. ಇಂದು ನೀವೇಕೆ ನಮ್ಮ ಮನೆಗೆ ಊಟಕ್ಕೆ ಬರಬಾರದು? ಎಂದು ಸತ್ಯರವರು ಕೇಳಿದಾಗ ಸಂತೋಷದಿಂದ . ಡಾ.ಕಲಾಂ ಅವರು ಆಹ್ವಾನವನ್ನು ಒಪ್ಪಿಕೊಂಡಿದ್ದಲ್ಲದೇ, ನ್ಯಾಷನಲ್ ಏರೋನಾಟಿಕಲ್ ಲ್ಯಾಬೊರೇಟರಿಯಲ್ಲಿ (NAL) ಅವರ ಸಂಶೋಧನಾ ಮಂಡಳಿಯ ಸಭೆಯನ್ನು ಮುಗಿಸಿದ ನಂತರ ಸತ್ಯಾರರೊಂದಿಗೆ ಅವರ ಮನೆಗೆ ಹೋಗಿ ಅವರ ಇಡೀ ಕುಟುಂಬದೊಡನೆ ಊಟವನ್ನು ಆನಂದಿಸಿ ಸುಮಾರು ಸುಮಾರು ಮೂರು ಗಂಟೆಗಳ ಕಾಲ ಅವರ ಮನೆಯಲ್ಲಿದ್ದರು. ನಂತರ ಅವರು ರಾಷ್ಟ್ರಪತಿಗಳಾಗಿದ್ದಾಗ 2006 ರಲ್ಲಿ,ರಾಷ್ಟ್ರಪತಿ ಭವನದಲ್ಲಿ ಅವರನ್ನು ಭೇಟಿಮಾಡಿದಾಗ ಕಲಾಂ ರವರು ಸತ್ಯರವರ ಮಡದಿಗೆ ನಮಸ್ಕರಿಸಿ, ನಿಮ್ಮ ಮನೆಯ ವಡು ಮಾಂಗ (ಮಾವಿನ ಉಪ್ಪಿನಕಾಯಿ) ರುಚಿ ಇನ್ನೂ ನನ್ನ ನಾಲಿಗೆಯಲ್ಲಿದೆ ಎಂದಿದ್ದರಂತೆ

ಹೀಗೆ ಇಸ್ರೋದ ಈ ಮಾಜಿ ರಾಕೆಟ್ ವಿಜ್ಞಾನಿಗಳಾಗಿ 1965 ರಿಂದ ಆರಂಭವಾದ ಸಣ್ಣ ಸಣ್ಣ ರಾಕೆಟ್ ಉಡಾವಣೆಯಿಂದ ಇಸ್ಸಾಟ್ ಉಪಗ್ರಹಗಳಲ್ಲದೇ ಇತ್ತೀಚಿನ ಚಂದ್ರಯಾದವರೆಗೂ ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶ ರಂಗದಲ್ಲಿ ಅಮೋಘ ಸೇವೆ ಸಲ್ಲಿಸಿದ್ದರು ಇಸ್ರೋದ ಮಾಜಿ ರಾಕೆಟ್ ವಿಜ್ಞಾನಿ ಸಿ.ಆರ್.ಸತ್ಯ ಅವರು ಅನಾರೋಗ್ಯದಿಂದ ಬೆಂಗಳೂರಿನಲ್ಲಿ ತಮ್ಮ ಮನೆಯ ಸಮೀಪದಲ್ಲೇ ಇರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ 4.4.23ರಂದು ಕೊನೆಯುಸಿರು ಎಳೆದಿರುವುದು ವಿಜ್ಞಾನ ಲೋಕ, ಕಲಾಲೋಕ ಮತ್ತು ಸಾರಸ್ವತಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರೂ ತಪ್ಪಾಗದು.

60-70ರ ದಶಕದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ದಿಗ್ಗಜರುಗಳಾಗಿದ್ದ ಅಮೇರಿಕಾ ಮತ್ತು ರಷ್ಯಾದೇಶಗಳು ರಾಕೆಟ್ ತಂತ್ರಜ್ಞಾನವನ್ನು ಕೊಡಲು ಒಪ್ಪದೇ ಹೋದದ್ದನ್ನೇ ಸವಾಲಾಗಿ ಸ್ವೀಕರಿಸಿ ಸ್ವದೇಶೀ ಕ್ರಯೋಜನಿಕ್ ಇಂಜೀನ್ ಗಳನ್ನು ತಯಾರಿಸಿ ತನ್ಮೂಲಕ ನೂರಾರು ದೇಶಗಳ ನೂರಾರು ಉಪಗ್ರಹಗಳನ್ನು ಏಕಕಾಲಕ್ಕೆ ಕಕ್ಷೆಗೆ ಏರಿಸುವಂತಹ ಸಾಮಾರ್ಥ್ಯವನ್ನು ಇಸ್ರೋ ಇಂದು ಹೊಂದಿರುವುದರ ಹಿಂದೆ ಸಿ.ಆರ್ ಸತ್ಯರವರ ಕಾಣಿಕೆಯೂ ಅಮೋಘವಾಗಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ನಾವು ನೀವು ಕೋರೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಮರಳಿ ಬಾರದ ಲೋಕಕ್ಕೆ ಪಯಣಿಸಿದ ಸಕಲಕಲಾ ವಲ್ಲಭ ಸಿ. ಆರ್. ಸತ್ಯ

  1. ಶ್ರೀ ಸಿ.ಆರ್.ಸತ್ಯ ಅವರ ಬಗ್ಗೆ ಬರೆದಿರುವ ಲೇಖನ ತುಂಬಾ ಚೆನ್ನಾಗಿದೆ. ಇಷ್ಟೆಲ್ಲ ವಿಚಾರಗಳು ನನಗೆ ತಿಳಿದಿರಲಿಲ್ಲ. ಒಂದು ಸಾರಿ ವೈ.ಎಂ.ಎನ್.ಮೂರ್ತಿಯವರ ಹ್ಯೂಮರ್ ಕ್ಲಬ್ ನಲ್ಲೋ ಎಲ್ಲೋ ಇವರನ್ನು ಯಾರೋ ಪರಿಚಯ ಮಾಡಿಸಿ “ಆಚೆ ಮನೆ ಸುಬ್ಬಮ್ಮಂಗೆ ಏಕಾದಶಿ ಉಪವಾಸ” ಹಾಡನ್ನು ಬರೆದಿರುವವರು ಇವರೇ ಎಂದು ಹೇಳಿದ್ದರು. ಈ ಹಾಡನ್ನು ನಾವು ಪ್ರೈಮರಿ ಶಾಲೆಯಲ್ಲಿ ಇದ್ದಾಗಿನಿಂದಲೂ ಕೇಳುತ್ತಿದ್ದೇವೆ. ದಿಮಗತರ ಆತ್ಮಕ್ಕೆ ಚಿರಶಾಂತಿ ಸಿಗಲಿ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s