ನಮ್ಮ ದೇಶಕ್ಕೆ 1947ರಲ್ಲಿ ಸ್ವಾತ್ರಂತ್ರ್ಯ ದೊರಕಿದಾಗ ಈ ದೇಶ 565 ಸಣ್ಣ ಸಣ್ಣ ರಾಜ್ಯಗಳಿಂದ ಕೂಡಿದ್ದು, ಅವೆಲ್ಲವೂ ವಂಶಪಾರಂಪರ್ಯ ರಾಜರ ಆಳ್ವಿಕೆಯಲ್ಲಿತ್ತು. ಆ ಎಲ್ಲಾ ರಾಜ್ಯಗಳನ್ನೂ ಅಂದಿನ ಗೃಹಮಂತ್ರಿಗಳಾಗಿದ್ದ ಉಕ್ಕಿನ ಮನುಷ್ಯ ಎಂದೇ ಪ್ರಖ್ಯಾತರಾಗಿದ್ದ ಶ್ರೀ ವಲ್ಲಭಾ ಭಾಯ್ ಪಟೇಲ್ ಅವರು ಒಕ್ಕೂಟದ ದೇಶದ ಭಾಗವವಾಗಿ ತಂದಿದ್ದಲ್ಲದೇ, ಆ ಎಲ್ಲಾ ರಾಜ್ಯಗಳಲ್ಲಿಯೂ ವಂಶಪಾರಂಪರ್ಯ ರಾಜರ ಆಳ್ವೆಕೆಯನ್ನು ಕೊನೆಗಾಣಿಸಿ, ಜನರಿಂದ ಜನರಿಗಾಗಿ ಜನರಿಗೋಸ್ಕರವೇ ಇರುವಂತಹ ಪ್ರಜೆಗಳೇ ಪ್ರಭುಗಳು ಎಂದು ನೇರವಾಗಿ ಪ್ರಜೆಗಳಿಂದಲೇ ತಮ್ಮನ್ನು ಮುನ್ನಡೆಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ನಮಗೆಲ್ಲರಿಗೂ ತಿಳಿಸಿರುವ ವಿಷಯ.
ಅಂದಿನ ಬಹುತೇಕ ರಾಜ್ಯಗಳ ರಾಜವಂಶದವರು ಸರ್ಕಾರ ಕೊಟ್ಟ ಸವಲತ್ತು ಮತ್ತು ಪಿಂಚಣಿಯನ್ನು ಅನುಭವಿಸುತ್ತಾ ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತಿದ್ದರೆ, ಇನ್ನೂ ಕೆಲವು ರಾಜವಂಶದವರು ಮತ್ತು ಸ್ವಾತ್ರಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಅಂದಿನ ಕಾಂಗ್ರೇಸ್ ನಾಯಕರುಗಳು ಚುನಾವಣೆ ಸ್ಲರ್ಧಿಸಿ ಪ್ರಜಾಸತ್ತಾತ್ಮಕವಾಗಿಯೇ ಅಧಿಕಾರಕ್ಕೆ ಏರಿ ಅವರಿಗೆ ವಯಸ್ಸಾದ ನಂತರವೋ ಅವರ ಮರಣಾನಂತರವೋ ಆ ಅಧಿಕಾರ ಜನ ಸಾಮಾನ್ಯರಿಗೆ ಸಿಗುವ ಬದಲು, ಆ ಅಧಿಕಾರ ತಮ್ಮ ಕುಟುಂಬದವರಿಗೇ ಮೀಸಲು ಎನ್ನುವಂತಹ ಅಲಿಖಿತ ನಿಯಮವನ್ನು ರೂಢಿಗೆ ತಂದು ಪರೋಕ್ಷವಾಗಿ ವಂಶಪಾರಂಪರ್ಯ ಆಡಳಿತವೇ ಮುಂದುವರೆದಿರುವುದು ಪ್ರಪಂಚದ ಅತಿದೊಡ್ಡ ಪ್ರಜಾತಂತ್ರ ದೇಶವಾದ ನಮ್ಮ ದೇಶದಲ್ಲಿನ ವಿಪರ್ಯಾಸವೇ ಸರಿ.
ಇನ್ನು ನಮ್ಮ ಕರ್ನಾಟಕ ರಾಜ್ಯದಲ್ಲಂತು ವಯಸ್ಸು 80+ ಆಗಿ ಸ್ವತಂತ್ರವಾಗಿ ನಡೆಯಲು ಬಿಡಿ, ಸ್ಪಷ್ಟವಾಗಿ ಮಾತನಾಡಲು ಸಹಾ ಸಾಧ್ಯವಿಲ್ಲದ, ಮಾತನಾಡಲು ಬಿಡಿ ಡೈಪರ್ ಹಾಕಿಕೊಂಡು ವೀಲ್ ಛೇರ್ ಮೇಲೆ ಕುಳಿತುಕೊಳ್ಳುವವರೆಲ್ಲಾ ಅಧಿಕಾರದ ಆಸೆಯಿಂದಾಗಿ ಇನ್ನೂ ಸಕ್ರೀಯ ರಾಜಕಾರಣದಲ್ಲೇ ಮುಂದುವರೆದು ತಮ್ಮ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರನ್ನು ಅಧಿಕಾರಕ್ಕೆ ತರುವುದೇ ತಮ್ಮ ಧ್ಯೇಯ ಎನ್ನುತ್ತಿರುವ ಸಂಧರ್ಭದಲ್ಲೇ ಅವಿಭಜಿತ ದಕ್ಷಿಣಕನ್ನಡದವರಾದ, ತಮ್ಮ ಸರಳ ಮತ್ತು ಸಜ್ಜನಿಕೆಯಿಂದಾಗಿಯೇ ಅಜಾತ ಶತ್ರು ಎಂದೇ ಪ್ರಖ್ಯಾತವಾಗಿರುವ, ಕುಂದಾಪುರ ಕ್ಷೇತ್ರದ ವಾಜಪೇಯಿ ಎಂದೇ ಖ್ಯಾತಿ ಪಡೆದಿರುವ, ಕುಂದಾಪುರ ಹಾಲಿ ಬಿಜೆಪಿ ಶಾಸಕರಾದ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಸೋಮವಾರ ಪತ್ರಿಕಾ ಪ್ರಕಟಣೆಯನ್ನು ಹೊರಡಿಸುವ ಮೂಲಕ ಉತ್ತಮ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆ ಎಂದರೂ ತಪ್ಪಾಗದು. ಬಿಜೆಪಿ ಪಕ್ಷದಲ್ಲಿ 75 ವರ್ಷದ ನಂತರ ಟಿಕೆಟ್ ಕೊಡಲಾಗದು ಎಂಬ ಅಲಿಖಿತ ನಿಯಮ ರೂಡಿಯಲ್ಲಿ ಇದ್ದರೂ, ಸತತವಾಗಿ 5 ಬಾರಿ ಕುಂದಾಪುರದದ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, ಈ ಬಾರಿಯೂ ಸಹಾ ಅವರಿಗೇ ಟಿಕೆಟ್ ಸಿಗುತ್ತದೆ ಎಂಬ ಖಾತರಿ ಇದ್ದರೂ ಸಹಾ, ಚುನಾವಣಾ ರಾಜಕೀಯದಿಂದ ಸ್ವಯಂ ನಿವೃತ್ತಿ ಪಡೆದುಕೊಂಡು ಯುವಕರಿಗೆ ಅನುವು ಮಾಡಿಕೊಟ್ಟಿರುವುದು ಸದ್ಯದ ಪರಿಸ್ಥಿತಿಯಲ್ಲಿ ಅನನ್ಯ ಮತ್ತು ಅನುಕರಣೀಯವೇ ಆಗಿದೆ.
ಈ ದೇಶದ ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದ ಶ್ರೀ ಎ. ಜಿ. ಕೊಡ್ಗಿಯವರು 1994ರ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟರ ವಿರುದ್ಧ ಸೋತ ನಂತರ ಅವರು ರಾಜಕೀಯ ನಿವೃತ್ತಿಯನ್ನು ಪಡೆದು 1999ರ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ನೆಚ್ಚಿನವರಾಗಿದ್ದ ಸರಳ ಸಜ್ಜನರಾದ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಬಿಜೆಪಿ ಪಕ್ಷದ ಟಿಕೆಟ್ ಕೊಡಿಸಿ ತಮ್ಮನ್ನು ಸೋಲಿಸಿದ್ದ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ ಅವರನ್ನು ತಮ್ಮ ಶಿಷ್ಯನ ಮುಖಾಂತರ ಸೋಲಿಸುವ ಮೂಲಕ ಅಭಿನವ ದ್ರೋಣಾಚಾರ್ಯ ಎನಿಸಿಕೊಂಡರು. ಹಾಗೆ ಕುಂದಾಪುರದಲ್ಲಿ 1999 ರಿಂದ ಆರಂಭವಾದ ಶ್ರೀನಿವಾಸ ಶೆಟ್ಟರ ಪ್ರಖ್ಯಾತಿ, ತಮ್ಮ ನಿಸ್ವಾರ್ಥ ಜನಸೇವೆಯಿಂದಾಗಿ 2004ರಲ್ಲಿ ಕಾಂಗ್ರೆಸ್‌ನ ಅಶೋಕ್ ಕುಮಾರ್ ಹೆಗ್ಡೆ ಅವರನ್ನು ಸೋಲಿಸುವ ಮೂಲಕ ಎರಡನೇ ಬಾರಿಗೆ ಶಾಸಕರಾದರು. ಮುಂದೆ 2008ರಲ್ಲಿ ಮತ್ತೆ ಚುನಾವಣಾ ಕಣದಲ್ಲಿ ಕಾಂಗ್ರೆಸ್‌ನ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿ ಹ್ಯಾಟ್ರಿಕ್ ಸಾಧಿಸಿದ್ದಲ್ಲದೇ ವರ್ಷದಿಂದ ವರ್ಷಕ್ಕೆ ಅವರು ಕ್ಷೇತ್ರದಲ್ಲಿ ತಳಮಟ್ಟದಿಂದಲೂ ಭಧ್ರವಾಗುತ್ತಾ ಹೋದರು. ಮೂರು ಬಾರಿ ಸತತವಾಗಿ ಗೆದ್ದಿದ್ದರೂ, ಕೇವಲ ಒಂದೆರದು ಬಾರಿ ಗೆದ್ದವರಲ್ಲಾ ಮಂತ್ರಿಗಳಾಗಿದ್ದರೂ ಯಾವುದೇ ಅಧಿಕಾರದ ಆಸೆಗಾಗಿ ಯಾವ ನಾಯಕರ ಮನೆಯನ್ನೂ ಎಡತಾಗದೇ ತಾವಾಯಿತು, ತಮ್ಮ ಕ್ಷೇತ್ರವಾಯಿತು ಎಂದ್ದಿದ ಶ್ರೀನಿವಾಸ ಶೆಟ್ಟರಿಗೆ 2012ರಲ್ಲಿ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆಯ ಸಮಯದಲ್ಲಿ ನಿಮ್ಮನ್ನು ಮಂತ್ರಿ ಮಾಡುತ್ತಿದ್ದೇವೆ ಈ ಕೂಡಲೇ ಬೆಂಗಳೂರಿಗೆ ಬನ್ನಿ ಎಂದು ಅಧಿಕೃತವಾಗಿ ತಿಳಿಸಿದ ಪಕ್ಷ, ಮಾರನೇ ದಿನ ಯಾರದ್ದೋ ಲಾಭಿಗೆ ಒಳಗಾಗಿ ಶ್ರೀನಿವಾಸ ಶೆಟ್ಟರ ಬದಲು ಮತ್ತೊಬ್ಬರನ್ನು ಮಂತ್ರಿ ಮಾಡಿದಾಗ ಸ್ವಾಭಿಮಾನಿ ಶೆಟ್ಟರು ಮೊದಲ ಬಾರಿಗೆ ಬಿಜೆಪಿಯ ವಿರುದ್ಧ ಅಕ್ರೋಶವನ್ನು ವ್ಯಕ್ತ ಪಡಿಸಿದರು.
ಇಂತಹ ಪರಿಸ್ಥಿತಿಯ ಲಾಭವನ್ನು ಪಡೆಯಲು ಹವಣಿಸಿದ ಇತರೇ ಪಕ್ಷಗಳು 2013ರಲ್ಲಿ ತಮ್ಮ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಎಷ್ಟೇ ಗೋಗರೆದರೂ, ನನಗೆ ಬಿಜೆಪಿಯ ಕೆಲವು ನಾಯಕರ ವಿರುದ್ಧ ಅಸಮಾಧಾನ ಇದೆಯೇ ಹೊರತು ಬಿಜೆಪಿಯ ವಿರುದ್ಧವಲ್ಲ. ಹಿಂದುತ್ವದ ವಿರುದ್ಧ ಇರುವ ಯಾವುದೇ ಪಕ್ಷಕ್ಕೆ ತಾನು ಸೇರಿಕೊಳ್ಳುವುದಿಲ್ಲಾ ಎಂದು ಖಡಾಖಂಡಿತವಾಗಿ ತಿಳಿಸಿ ಪಕ್ಷೇತರರಾಗಿ ಸ್ವರ್ಧಿಸಿದಾಗ, ಕುಂದಾಪುರದ ಮತದಾರರು, ಜಾತಿ ಮತ, ಧರ್ಮ ಭಾಷೆಯ ಹಂಗಿಲ್ಲದೇ ಮತ್ತೆ ಶ್ರೀನಿವಾಸರ ಶೆಟ್ಟರನ್ನು ಬೆಂಬಲಿಸಿದ ಕಾರಣ, ಕಾಂಗ್ರೆಸ್‌ನ ಮಲ್ಯಾಡಿ ಶ್ರೀನಿವಾಸ ಶೆಟ್ಟರ ವಿರುದ್ಧ ಅಭೂತಪೂರ್ವವಾಗಿ ಜಯಗಳಿಸುವ ಮೂಲಕ ನಾಲ್ಕನೇ ಭಾರಿಗೆ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎನಿಸಿಕೊಂಡರು. ನಂತರದ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ತನ್ನ ತಪ್ಪಿನ ಅರಿವಾಗಿ ಶೆಟ್ಟರ ಬಳಿ ಕ್ಷಮೆ ಕೋರಿದ್ದನ್ನು ಮನ್ನಿಸಿ ಮರಳಿ ಮಾತೃ ಪಕ್ಷಕ್ಕೆ ಹಿಂದಿರುಗಿ 2018ರಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ರಾಕೇಶ್ ಮಲ್ಲಿಯವರಿಗೆ ಸೋಲಿನ ರುಚಿ ತೋರಿಸಿದ್ದರೂ ತಮ್ಮ ರೀತಿ ರಿವಾಜುಗಳಲ್ಲಿ ಸ್ವಲ್ಪವೂ ಬದಲಾಗಲೇ ಇಲ್ಲ.
ಬಿಜೆಪಿ ಪಕ್ಷ ಅಧಿಕಾರಕ್ಕೆ ಮತ್ತೆ ಬಂದರೂ ಮಂತ್ರಿಗಿರಿಗಾಗಿ ಪಕ್ಷದ ಯಾವ ನಾಯಕರನ್ನಾಗಲೀ, ತಮ್ಮ ಜಾತಿಯ ಮಠಾಧೀಷರನ್ನಾಗಲೀ ಎಡತಾಗದೇ, ಯಥಾಪ್ರಕಾರ ತಮ್ಮ ಕ್ಷೇತ್ರದ ಮತದಾರ ಪ್ರಭುವಿನ ಯೋಗಕ್ಷೇಮದಲ್ಲಿ ನಿರತರಾಗಿದ್ದರು. ಆ ಕ್ಷೇತ್ರದಲ್ಲೇ ಇರುವ ನನ್ನ ಬಹಳ ಆತ್ಮೀಯರಿಂದ ಹಲವಾರು ವರ್ಷಗಳಿಂದಲೂ ತಿಳಿದಿರುವ ವಿಷಯವೇನೆಂದರೆ, ಶ್ರೀನಿವಾಸ ಶೆಟ್ಟರ ಬಳಿ ಸಹಾಯ ಕೇಳಿಕೊಂಡು ಅವರ ಮನೆಗೆ ಹೋದವರು ಯಾರೋ ಸಹಾ ಬರಿಗೈಯಲ್ಲಿ ಹಿಂದಿರುಗಿ ಬಂದಿಲ್ಲ. ಸರ್ಕಾರದಿಂದ ಅವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗದೇ ಹೋದಲ್ಲಿ ಕನಿಷ್ಠ ಪಕ್ಷ ವಯಕ್ತಿಕವಾಗಿಯಾದರೂ ಸಹಾಯ ಮಾಡಿ ಕಳುಹಿಸುತ್ತಿದ್ದ ಕಾರಣ, ಆಗರ್ಭ ಶ್ರೀಮಂತರಾದ ಹಾಲಾಡಿ ಶ್ರೀನಿವಾಸ ಶೆಟ್ಟರು ತಮ್ಮ ಅನೇಕ ಅಸ್ತಿಯನ್ನು ಮಾರಬೇಕಾದಂತಹ ಪರಿಸ್ಥಿತಿಯೂ ಬಂದಿದೆ.
ಇಂತಹ ಸರಳ ಸಜ್ಜನ ರಾಜಕಾರಣಿಯಾದ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟರು ಈ ಬಾರಿಯ ಚುನಾವಣೆಯಿಂದ ಸ್ವಯಂ ನಿವೃತ್ತಿಯನ್ನು ಪಡೆಡು ತಮ್ಮನ್ನು ರಾಜಕೀಯಕ್ಕೆ ಕರೆದುಕೊಂಡು ಬಂದಿದ್ದದ್ದಲ್ಲದೇ, ಆರಂಭದ ಎರಡು ಅವಧಿಗಳಲ್ಲಿ ತಮ್ಮ ಗೆಲುವಿಗಾಗಿ ಅಪಾರವಾಗಿ ಶ್ರಮಿಸಿದ್ದ ತಮ್ಮ ರಾಜಕೀಯ ಗುರುಗಳಾದ ಶ್ರೀ ಎ ಜಿ ಕೊಡ್ಗಿ ಅವರ ಋಣವನ್ನು ತೀರಿಸುವ ಸಲುವಾಗಿ ಎ ಜಿ ಕೊಡ್ಗಿ ಅವರ ಪುತ್ರರಾದ ಮತ್ತು ಸ್ಥಳೀಯ ಮಟ್ಟದಲ್ಲಿ ಸಜ್ಜನ ನಾಯಕರೆಂದೇ ಪ್ರಸಿದ್ಧರಾಗಿರುವ ಶ್ರೀ ಕಿರಣ್ ಕೊಡ್ಗಿ ಅವರಿಗೆ ಈ ಬಾರಿ ಕುಂದಾಪುರದ ಟಿಕೆಟ್ ಕೊಡಬೇಕೆಂದು ಬಿಜೆಪಿ ಪಕ್ಷದ ಸಂಸದೀಯ ಸಭೆಯಲ್ಲಿ ತಿಳಿಸಿದ್ದಾರೆ. ಈ ರೀತೀ ಏಕಾಏಕಿ ತಮ್ಮ ನೆಚ್ಚಿನ ನಾಯಕರು ಚುನಾವಣಾ ರಾಜಕೀಯದಿಂದ ನಿವೃತ್ತಿಯನ್ನು ಘೋಷಿಸಿರುವುದು ಹಾಲಾಡಿಯವರ ಅಭಿಮಾನಿಗಳಲ್ಲಿ ತೀವ್ರವಾದ ನಿರಾಸೆ ಮೂಡಿಸಿದ್ದು, ಇನ್ನೂ ಕೇವಲ 72 ವರ್ಷದ ಹಾಲಾಡಿಯವರೇ ಮತ್ತೊಮ್ಮೆ ಸ್ಪರ್ಧಿಸಿ ಈ ಬಾರಿಯಾದರೂ ಮಂತ್ರಿಯಾಗಬೇಕು ಎನ್ನುವ ಒತ್ತಡವನ್ನು ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಶಾಸಕರ ಮನೆಗೆ ಬಂದು ಆಗ್ರಹಿಸುತ್ತಿದ್ದಾರಾದರೂ, ಶ್ರೀನಿವಾಸ ಶೆಟ್ಟರು ತಮ್ಮ ಈ ನಿರ್ಧಾರ ಅಚಲ ಎಂದು ಹೇಳುವ ಮೂಲಕ ರಾಜ್ಯದ ರಾಜ್ಯಕಾರಣದಲ್ಲಿ ಉತ್ತಮವಾದ ಮೇಲ್ಪಂಕ್ತಿಯನ್ನು ಹಾಕಿದ್ದಾರೆ ಎಂದರೂ ತಪ್ಪಾಗದು.
ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಸತತವಾಗಿ ಐದು ಅವಧಿಗೆ ನನ್ನನ್ನು ಬಹು ನಿರೀಕ್ಷೆಯೊಂದಿಗೆ ಆಯ್ಕೆ ಮಾಡಿದ ನನ್ನ ಕ್ಷೇತ್ರದ ಎಲ್ಲಾ ಜಾತಿ, ಧರ್ಮದ ಮತದಾರ ಬಾಂಧವರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ವಇಚ್ಚೆಯಿಂದ ಸ್ಪರ್ಧಿಸದೇ ಇರಲು ನಿಶ್ಚಯಿಸಿರುತ್ತೇನೆ. ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ನನಗೆ ಮಾರ್ಗದರ್ಶನ ನೀಡಿದ ಹಾಗೂ ಸಹಕಾರ ನೀಡಿದ ಪಕ್ಷದ ಎಲ್ಲಾ ಪ್ರಮುಖರಿಗೆ, ಹಿರಿ- ಕಿರಿಯ ಸ್ನೇಹಿತರಿಗೆ, ಅಧಿಕಾರಿ ವರ್ಗದವರಿಗೆ, ಮಾಧ್ಯಮದವರಿಗೆ ಹಾಗೂ ಕ್ಷೇತ್ರದ ಎಲ್ಲ ಮತದಾರರಿಗೂ ನನ್ನ ಮನ:ಪೂರ್ವಕ ಕೃತಜ್ಞತೆಗಳು. ಮತದಾರರು ನನ್ನ ಮೇಲೆ ಇಟ್ಟ ಪ್ರೀತಿ ಮತ್ತು ನಂಬಿಕೆಯೇ ನಾನು ಈ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಕರ್ತವ್ಯ ನಿರ್ವಹಿಸಲು ಪ್ರೇರಣೆಯಾಗಿದ್ದು, ಬಿಜೆಪಿ ಪಕ್ಷದಿಂದ ಮತ್ತು ಪಕ್ಷೇತರನಾಗಿ ಸ್ಪರ್ಥಿಸಿದ್ದಾಗಲೂ ನನ್ನನ್ನು ಆಯ್ಕೆ ಮಾಡಿದ್ದ ಸಮಸ್ತ ಮತಬಾಂಧವರಿಗೂ ಮತ್ತೊಮ್ಮೆ ಕೃತಜ್ಞತೆಯನ್ನು ಸಲ್ಲಿಸಿದ್ದಲ್ಲದೇ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗೆ ತನ್ನೆಲ್ಲಾ ಮತಬಾಂಧವರೂ ಸಹಕಾರ ನೀಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.
ಐದು ಬಾರಿ ಜನಪ್ರಿಯ ಶಾಸಕರಾದರೂ ಶ್ರೀನಿವಾಸ ಶೆಟ್ಟರನ್ನು ಮಂತ್ರಿಯನ್ನಾಗಿ ಮಾಡದೇ ಹೋದದ್ದಕ್ಕೆ ಅನೇಕರಿಗೆ ಬೇಸರವಿದ್ದರೂ, ಬಹಳ ವರ್ಷಗಳಿಂದಲೂ ಅವರನ್ನು ನೋಡಿಕೊಂಡು ಬರುತ್ತಿರುವವರಿಗೆ ಅವರ ಸರಳ ಸಜ್ಜನಿಕೆ, ಮತ್ತು ಒಳಗೊಂದು ಹೊರಗೊಂದು ಮಾತನಾಡದೇ ನೇರವಾಗಿ ಮಾತನಾಡುವ ಸ್ವಭಾವವೇ ಮುಳ್ಳಾಯಿತೇನೋ ಎನ್ನಿಸಿದ್ದಂತೂ ಸುಳ್ಳಲ್ಲಾ. ರಾಜಕೀಯ ನಾಯಕನಾಗಿ ಅದರ ನಾಜೂಕುತನಗಳನ್ನು ತಿಳಿಯದೇ ಮುಗ್ಧನಾಗಿದ್ದ ಶ್ರೀನಿವಾಸ ಶೆಟ್ಟರನ್ನು ಮಂತ್ರಿಯನ್ನಾಗಿಸಿದ್ದರೆ, ಅವರ ಹೆಸರಿನಲ್ಲಿ ಸ್ವಜಾತೀಯ ಪಕ್ಷದವರು ಅಧಿಕಾರದ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ, ಇನ್ನು ವಿರೋಧ ಪಕ್ಷದ ಕಾಂಗ್ರೆಸ್ಸಿಗರು ಈ ಅಮಾಯಕ ಶೆಟ್ಟರ ಮೇಲೆ ಯಾವುದೋ ಇಲ್ಲದ ಸಲ್ಲದ ಆಪಾದನೆಗಳನ್ನು ಹೂರೆಸಿ ಅವರನ್ನು ರಾಜಕೀಯವಾಗಿ ಮೇಲೆಳದ ಹಾಗೆ ಮಾಡುತ್ತಿದ್ದಂತೂ ಸತ್ಯ. ಹಾಗಾಗಿ ಮಂತ್ರಿಯಾಗದೇ ಹೋದರೂ, ಪಕ್ಷದ ವಿರುದ್ಧ ಅಪಸ್ವರ ಎತ್ತದೇ ಬೇರೇ ಪಕ್ಷಕ್ಕೆ ಪಕ್ಷಾಂತರ ಮಾಡದೇ ಸ್ವಾಭಿಮಾನಿಯಾಗಿ ಕೇವಲ ಸ್ವಕ್ಷೇತ್ರದಲ್ಲಷ್ಟೇ ಅಲ್ಲದೇ ರಾಜ್ಯಾದ್ಯಂತ ರಾಜನಾಗಿಯೇ ಹೆಸರುವಾಸಿಯಾದಂತಹ ಧೀಮಂತ ವ್ಯಕ್ತಿಯಾಗಿ ಕರ್ನಾಟಕದ ವಾಜಪೇಯಿ ಎನ್ನುವ ಅವರ ಅಭಿಮಾನಿಗಳ ಆಶಯಕ್ಕೆ ಎಳ್ಳಷ್ಟೂ ಚ್ಯುತಿತಾರದಂತೆ, ಕೆಸರಿನಲ್ಲಿದ್ದರೂ ಕೆಸರನ್ನು ತನ್ನ ಮೈಗೆ ಅಂಟಿಸಿಕೊಳ್ಳದ ಕಮಲದಂತೆ ರಾಜಕೀಯಲ್ಲಿದ್ದರೂ ರಾಜಕೀಯದ ಕೆಸರನ್ನು ಅಂಟಿಸಿಕೊಳ್ಳದೇ ಜನಸಾಮಾನ್ಯರಿಗೂ ಎಂತಹ ಸಮಯದಲ್ಲಾದರೂ ಸಿಗುವಂತಹ ಅಜಾತ ಶತ್ರುವಿನಂತಹ ವ್ಯಕ್ತಿಯಾಗಿರುವ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟರ ಈ ರಾಜಕೀಯ ನಿರ್ಧಾರ, ಕೈಲಾಗದೇ ಹೋದರೂ ಸಾಯುವವರೆಗೂ ಸಕ್ರೀಯ ಚುನಾವಣಾ ರಾಜಕೀಯದಲ್ಲೇ ಇರಲು ಬಯಸಿರುವ ಎಲ್ಲಾ ಪಕ್ಷದ ರಾಜಕೀಯ ನಾಯಕರುಗಳಿಗೆ ಮಾದರಿಯಾಗಲಿ ಎನ್ನುವುದೇ ಇಡೀ ರಾಜ್ಯದ ಜನರ ಆಶಯವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ