ನೂಲಿನಂತೆ ಸೀರೆ ತಾಯಿಯಂತೆ ಮಗಳು

ಅಲ್ಪನಿಗೆ ಐಶ್ವರ್ಯ ಬಂದ್ರೇ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿಯುವವರೇ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ಸಾವಿರಾರು ಕೋಟಿಗಳ ವ್ಯವಹಾರದ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕಿಯಾಗಿದ್ದರೂ ಸಾಮಾನ್ಯವಾದ ಸೀರೇ ಉಟ್ಟು ನಿರಾಭರಣೆಯಾಗಿ ಒಂದು ಚೂರು ಹಮ್ಮು ಬಿಮ್ಮಿಲ್ಲದೇ ಯಾವುದೇ ಪ್ರಚಾರದ ಗೀಳಿಲ್ಲದೇ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ಸುಧಾಮೂರ್ತಿಯವರು ಸರಳ ಸಹನಾಮೂರ್ತಿ ಆಗಿ  ನಮ್ಮ ನಿಮ್ಮೆಲ್ಲರ ಮಧ್ಯೆ ಇರುವುದು ನಿಜಕ್ಕೂ ಹೆಮ್ಮೆ ಪಡುವಂತಹ ವಿಷಯವಾಗಿದೆ.

sudha3ಆರಂಭದಲ್ಲಿ ತಮ್ಮ ಪತಿ ಶ್ರೀ ನಾರಾಯಣ ಮೂರ್ತಿಗಳು ಮತ್ತು ಅವರ ಸ್ನೇಹಿತರೊಂದಿಗೆ ಭುಜಕ್ಕೆ ಭುಜಕೊಟ್ಟು ಇನ್ಫೋಸಿಸ್ ನಂತಹ ಅಂತರಾಷ್ಟ್ರೀಯ ಮಟ್ಟದ ಬಹುಕೋಟಿ ವ್ಯವಹಾರದ ಬೃಹತ್ತಾದ ಕಂಪನಿಯನ್ನು ಕಟ್ಟಿ ಬೆಳಸಿ ಅದು ಹೆಮ್ಮರವಾದ ಕೂಡಲೇ ಅಲ್ಲಿನ ಸಕ್ರೀಯ ಕೆಲಸಕ್ಕೆ ರಾಜಿನಾಮೆ ನೀಡಿ ತಮ್ಮದೇ ಆದ ಇನ್ವೋಸಿಸ್ ಫೌಂಡೇಶನ್ ಕಟ್ಟಿಕೊಂಡು ಅದರ ಮೂಲಕ ವಿವಿಧ ಸಮಾಜ ಸೇವೆ ಆರಂಭಿಸಿದ್ದಲ್ಲದೇ, ತಮಗೆ ಚಿಕ್ಕವಯಸ್ಸಿನಿಂದಲೂ ಇಷ್ಟವಿದ್ದ ಬೋಧನಾ ವೃತ್ತಿಯನ್ನು ಕೈಗೆ ಎತ್ತಿಕೊಂಡು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮತ್ತು ತರಬೇತಿಯನ್ನು ಒದಗಿಸುವ ಆಸಕ್ತಿಯಿಂದ ಬೆಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸಂದರ್ಶಕ ಪ್ರಾಧ್ಯಾಪಿಕೆಯಾಗಿರುವುದರ ಜೊತೆಗೆ ಕ್ರೈಸ್ಟ್‌ ಕಾಲೇಜಿನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಇದರ ಜೊತೆ ತಮ್ಮ ಅನುಭವವನ್ನೆಲ್ಲಾ ಕನ್ನಡ ಮತ್ತು ಇಂಗ್ಲೀಷಿನಲ್ಲಿ ಅಕ್ಷರ ರೂಪಕ್ಕೆ ಇಳಿಸಿ ಹತ್ತಾರು ಪುಸ್ತಕಗಳನ್ನು ಬರೆಯುವ ಮೂಲಕ ಅವರಲ್ಲಿದ್ದ ಲೇಖಕಿಯನ್ನು ಹೊರಜಗತ್ತಿಗೆ ವಿಶಿಷ್ಟವಾಗಿ ಪರಿಚಯ ಮಾಡಿ ಕೊಟ್ಟಿದ್ದಾರೆ.

ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವ, ಅದರಲ್ಲೂ ಗ್ರಾಮೀಣ ಜನರಲ್ಲಿ ಶಿಕ್ಷಣ, ಸಾಮಾಜಿಕ ನೈರ್ಮಲ್ಯ, ಬಡತನ ನಿರ್ಮೂಲನೆ ಮತ್ತು ಇನ್ನೂ ಅನೇಕ ವಿಷಯಗಳ ಕುರಿತು ಅವರು ಜಾಗೃತಿಯನ್ನು ನಿರಂತರವಾಗಿ ಮೂಡಿಸುತ್ತಿದ್ದಾರೆ. ದೇಶದ ಪ್ರಧಾನಿಗಳು ಕರೆ ನೀಡಿದ ಸ್ವಚ್ಛ ಭಾರತದ ಅಭಿಯಾನಕ್ಕೆ ಹೃತ್ಪೂರ್ವಕವಾಗಿ ಕೈ ಜೋಡಿಸಿ ಅದನ್ನು ಸಾಕಾರಗೊಳಿಸುವ ಪೂರಕವಾಗಿ ವಿವಿದೆಡೆಯಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸಿಕೊಡುವ ಮೂಲಕ ಜನರಿಗೆ ಸ್ವಚ್ಚ ಭಾರತ ಮತ್ತು ನೈರ್ಮಲ್ಯೀಕರಣವನ್ನು ಅರ್ಥಮಾಡಿಕೊಡುತ್ತಿದ್ದಾರೆ. ಹೀಗೆ ಸಾರ್ವಜನಿಕ ಶೌಚಾಲಯ ಕಟ್ಟಿಸುವ ಹಿಂದೆಯೂ ಅವರದ್ದೇ ಆದ ಒಂದು ಸುಂದರವಾದ ರೋಚಕ ಕತೆಯಿದೆ. ಅವರು ಇಂಜೀನಿಯರಿಂಗ್ ಓದುತ್ತಿದ್ದ ಸಮಯದಲ್ಲಿ ಇಡೀ ಕಾಲೇಜಿನಲ್ಲಿ 599 ಹುಡುಗರಿದ್ದರೆ ಸುಧಾ ಅವರೊಬ್ಬರೇ ಹೆಣ್ಣುಮಗಳು. ಹಾಗಾಗಿ ಅವರ ಕಾಲೇಜಿನಲ್ಲಿ ಮಹಿಳಾ ಶೌಚಾಲಯವೇ ಇರಲಿಲ್ಲವಂತೆ. ಅಂದು ತಾವು ತಮ್ಮ ಕಾಲೇಜಿನಲ್ಲಿ ಎದುರಿಸಿದ್ದ ಗಂಭೀರ ಸವಾಲನ್ನು ಇಂದು ಮತ್ತಾವ ಹೆಣ್ಣುಮಕ್ಕಳೂ ಅನುಭವಿಸಬಾರದು ಎಂಬು ಧೃಢ ನಿರ್ಧಾರದಿಂದ ತಮ್ಮ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಹೆಣ್ಣುಮಕ್ಕಳಿಗೆ 16,000ಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿ ಕೊಟ್ಟಿರುವುದು ಗಮನಾರ್ಹವಾಗಿದೆ.

sudha4ದೇಶದಲ್ಲಿ ಅದರಲ್ಲೂ ಪ್ರಮುಖವಾಗಿ ನಮ್ಮ ರಾಜ್ಯದಲ್ಲಿ ಯಾವುದೇ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸಿದಾಗಲೂ ತಮ್ಮ ಇನ್ಫೋಸಿಸ್ ಫೌಂಡೇಶನ್ ಮುಖಾಂತರ ಪರಿಹಾರವನ್ನು ಕೊಡುವುದರಲ್ಲಿ ಸುಧಾ ಮೂರ್ತಿಯವರದ್ದು ಎತ್ತಿದ ಕೈ. ಪ್ರವಾಹ, ಬರ ಪೀಡಿತ ಪ್ರದೇಶಗಳ ಜನರಿಗೆ ಸಹಾಯ ಮಾಡುವುದರಲ್ಲೂ ಉತ್ಸಾಹದಿಂದ ತೊಡಗಿಸಿಕೊಳ್ಳುವುದಲ್ಲದೇ ನೂರಾರು ಹಳ್ಳಿಗಳಲ್ಲಿ ಸಾವಿರಾರು ಜನರಿಗೆ ಪುನರ್ವಸತಿ ಕಲ್ಪಿಸಿಕೊಟ್ಟಿದ್ದಾರೆ. ಇವೆಲ್ಲದರ ಜೊತೆ ನಾನಾ ಕಾರಣಗಳಿಂದಾಗಿ ವಿದ್ಯೆಯಿಂದ ವಂಚಿತರಾದವರಿಗೆ ಸೂಕ್ತವಾದ ವಿದ್ಯೆಯನ್ನು ಕೊಡಿಸುವುದು ಆವರ ಮೆಚ್ಚಿನ ಕಾರ್ಯವಾಗಿದ್ದು ಈಗಾಗಲೇ ಸಾವಿರಾರು ಮಕ್ಕಳು ಈ ಸೌಲಭ್ಯವನ್ನು ಪಡೆದುಕೊಂದಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ online classesಗಾಗಿ ಕಷ್ಟಪಡುತ್ತಿರುವ ಮಕ್ಕಳಿಗಾಗಿ ಲ್ಯಾಪ್‌ಟಾಪ್, ಇಂಟರ್ನೆಟ್ ಡಾಂಗಲ್ ಮತ್ತು ಒಂದು ವರ್ಷದ ಚಂದಾದಾರಿಕೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ಅನೇಕ ಮಕ್ಕಳು ಮನೆಯಲ್ಲಿಯೇ ತಮ್ಮ ಅಧ್ಯಯನವನ್ನು ಸುಗಮವಾಗಿ ಮುಂದುವರಿಸಲು ಸಹಕರಿಸಿದ್ದಾರೆ. ಹೀಗೆ ಹತ್ತು ಹಲವಾರು ವಿಧದಲ್ಲಿ ಸಮಾಜಿಕ ಸೇವೆಗಳಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡಿರುವ ಶ್ರೀಮತಿ ಸುಧಾ ಮೂರ್ತಿಯವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಿ ಕಳೆದವಾರ ರಾಷ್ಟ್ರಪತಿಗಳ ಭವನದಲ್ಲಿ ಎಲ್ಲಾ ಪದ್ಮ ಪ್ರಶಸ್ತಿ ಪುರಸ್ಕೃತರಿಗೂ ನೀಡಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಾಧಾರಣವಾಗಿ ಗಂಡನ ಮನೆಗೆ ಸೊಸೆಯಾಗಿ ಹೋದ ಯಾವುದೇ ಹೆಣ್ಣು ಮಕ್ಕಳು ತಪ್ಪು ಮಾಡಿದ ಕೂಡಲೇ, ಅತ್ತೇ ಅದವಳು ಅದೇನು ಹೇಳಿಕೊಟ್ಟಿದ್ದಾರೋ ನಿಮ್ಮ ಅಮ್ಮಾ ಅಪ್ಪಾ ಎಂದು ಮಗಳು ಮಾಡಿದ ತಪ್ಪಿಗೆ ಅವಳ ಹೆತ್ತವರನ್ನು ವಿನಾಕಾರಣ ದೂಷಿಸುತ್ತಾರೆ. ಹಾಗೆ ಅವರು ಹೇಳೋದ್ರಲ್ಲೂ ತಪ್ಪೇನಿಲ್ಲಾ. ಮನೆಯೇ ಮೊದಲ ಪಾಠ ಶಾಲೆ. ತಾಯಿ ತಂದೆಯರೇ ಮೊದಲ ಗುರುಗಳು. ಹಾಗಾಗಿ ಮಕ್ಕಳಿಗೆ ಸಂಸ್ಕಾರ ಮತ್ತು ಸಂಪ್ರದಾಯಗಳು ಚಿಕ್ಕವಯಸ್ಸಿನಿಂದಲೂ ಅಪ್ಪಾ ಅಮ್ಮನನ್ನು ನೋಡಿಯೇ ಕಲಿತಿರ್ತಾರೆ ಮತ್ತು ಅದನ್ನು ಅವರು ಜೀವನ ಪರ್ಯಂತ ಪಾಲಿಸ್ತಾರೆ ಎನ್ನುವುದಕ್ಕೆ ಜ್ವಲಂತ ಉದಾಹಣೆಯೊಂದು ಕಳೆದ ವಾರ ರಾಷ್ಟಪತಿ ಭವನದಲ್ಲಿ ಪದ್ಮಪ್ರಶಸ್ತಿ ಸಭೆಯಲ್ಲಿ ನಡೆದಿದೆ.

sudha2ಶ್ರೀಮತಿ ಸುಧಾಮೂರ್ತಿಯವರಿಗೆ ರಾಷ್ಟ್ರಪತಿಗಳು ಪದ್ಮಪ್ರಶಸ್ತಿಯನ್ನು ವಿತರಿಸುವಂತಹ ಸುಂದರವಾದ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರ ಹತ್ತಿರದ ಕುಟುಂಬದವರು ಆ ಸಮಾರಂಭದಲ್ಲಿ ಭಾಗವಹಿಸಿದ್ದರು. ಸ್ವತಃ ಶ್ರೀ ನಾರಾಯಣ ಮೂರ್ತಿಯವರ ಜೊತೆಗೆ ಅವರ ಮಗ ರೋಹನ್, ಸುಧಾಮೂರ್ತಿಯವರ ಸಹೋದರಿ ಡಾ. ಸುನಂದಾ ಕುಲಕರ್ಣಿ ಅಲ್ಲದೇ ವಿಶೇಷವಾಗಿ ಅಮ್ಮನ ಸಂತಸದ ಕ್ಷಣಗಳಲ್ಲಿ ಒಂದಾಗುವ ಸಲುವಾಗಿ ದೂರದ ಇಂಗ್ಲೆಂಡ್ನಿಂದ ಅವರ ಮಗಳು ಶ್ರೀಮತಿ ಅಕ್ಷತಾ ಸುನೇಕ್ ಸಹಾ ಅಮ್ಮನಂತೆಯೇ ಸರ್ವೇ ಸಾಧಾರಣವಾದ ಸರಳ ಉಡುಪಿನಲ್ಲಿ ಯಾವುದೇ ರೀತಿಯ ಹಮ್ಮು ಬಿಮ್ಮು ಆ ಸಮಾರಂಭಕ್ಕೆ ತಮ್ಮ ಕುಟುಂಬದ ಜೊತೆಯಲ್ಲಿ ಆಗಮಿಸಿದ್ದಾರೆ.

sudha7ಹೀಗೆ ಕಾರ್ಯಕ್ರಮದ ನೀತಿ ನಿಯಮಗಳಂತೆ ಅವರಲ್ಲರೂ ತಮಗೆ ನಿಗಧಿಪಡಿಸಿದ್ದ ಜಾಗಗಳಲ್ಲಿ ಕುಳಿತುಕೊಂಡಿದ್ದಾರೆ. ಸುಮಾರು ಆರು ತಿಂಗಳುಗಳ ಹಿಂದೆ ಹೀಗೆ ಕುಳಿತಿದ್ದರೆ ಯಾವುದೇ ಸಮಸ್ಯೆಗಳಾಗಲೀ ಅಭಾಸಗಳಾಗಲೀ ಆಗುತ್ತಿರಲಿಲ್ಲ. ಆದರೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎನ್ನುವಂತೆ ಅಕ್ಷತಾ ಮೂರ್ತಿ ಈಗ ಕೇವಲ ಶ್ರೀಮತಿ ಸುಧಾಮೂರ್ತಿ ಮತ್ತು ಶ್ರೀ ನಾರಾಯಣ ಮೂರ್ತಿಗಳ ಭಾರತದ ಹೆಣ್ಣು ಮಗಳಷ್ಟೇ ಆಗಿರದೇ ಆಕೆ ಪ್ರಸ್ತುತ ಇಂಗ್ಲೆಂಡಿನ ಪ್ರಧಾನ ಮಂತ್ರಿಗಳಾದ ಶ್ರೀ ರಿಷಿ ಸುನೇಕ್ ಅವರ ಪತ್ನಿಯಾಗಿದ್ದಾರೆ. ಹಾಗಾಗಿ ಆಕೆ ಇಂಗ್ಲೇಂಡ್ ದೇಶದ ಪ್ರಥಮ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

sudha6ನಮ್ಮ ದೇಶದ ವಿದೇಶಾಂಗ ನೀತಿಯ ಅನುಗುಣವಾಗಿ ಅಂತಹ ಸಭೆ ಸಮಾರಂಭಗಳಲ್ಲಿ ರಾಜಗೌರವ ನೀಡುವ ಸಂಪ್ರದಾಯವಿದ್ದು, ಅಂತಹ ವಿದೇಶಿ ಗಣ್ಯರನ್ನು ಸಾರ್ವಜನಿಕರೊಂದಿಗೆ ಕೂರಿಸದೇ, ನಮ್ಮ ದೇಶದ ವಿದೇಶಾಂಗ ಮಂತ್ರಿಗಳು ಅಥವಾ ಸರ್ಕಾರದ ಪರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಹಿರಿಯರೊಂದಿಗೆ ಕೂರಿಸುವ ಸತ್ ಸಂಪ್ರದಾಯವಿದೆ. ಶ್ರೀಮತಿ ಸುನೆಕ್ ಅವರು ಕಾರ್ಯಕ್ರಮದಲ್ಲಿ ಭಾಗವಿಸುವ ಸುಳಿವಿರದಿದ್ದ ನಮ್ಮ ಭದ್ರತಾಸಿಬ್ಬಂದಿಗೆ ಆರಂಭದಲ್ಲಿ ಅವರನ್ನು ಗುರುತು ಹಿಡಿಯದಿದ್ದರೂ, ಕೆಲವೇ ನಿಮಿಷಗಳಲ್ಲಿ ತಮ್ಮ ತಪ್ಪಿನ ಅರಿವಾಗಿದೆ. ಕೂಡಲೇ ಆಕೆಯ ಬಳಿ ಹೋಗಿ ಶಿಷ್ಟಾಚಾರವನ್ನು ವಿವರಿಸಿ ಆಕೆಯನ್ನು ವಿದೇಶಾಂಗ ಸಚಿವರಾದ ಶ್ರೀ ಜೈ ಶಂಕರ್ ಅವರ ಪಕ್ಕದಲ್ಲಿ ಕುಳಿತುಕೊಳ್ಳಲು ವಿನಮ್ತತೆಯಿಂದ ಕೇಳಿ ಕೊಳ್ಳಲಾಗಿದೆ.

sudhaಅದಕ್ಕೆ ಸರಿಯಾಗಿ ಆಕೆಯೂ ಸಹಾ ಯಾವುದೇ ಮರು ಮಾತನಾಡದೇ ಸಭೆಯಲ್ಲಿದ್ದ ಹೆಚ್ಚಿನ ಜನರಿಗೆ ಅಲ್ಲಿ ಏನಾಗುತ್ತಿದೆ ಎಂಬುದರ ಅರಿವಾಗುವ ಮುನ್ನವೇ ಸದ್ದಿಲ್ಲದೇ ಜೈ ಶಂಕರ್ ಅವರ ಪಕ್ಕದಲ್ಲಿ ಕುಳಿತುಕೊಂಡು ತನ್ನ ತಾಯಿಯವರು ನಮ್ಮ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರ ಅಮೃತಹಸ್ತದಿಂದ ಪದ್ಮ ಪ್ರಶಸ್ತಿಯನ್ನು ಸ್ವೀಕರಿಸಿದ್ದನ್ನು ಕಣ್ತುಂಬಿಸಿಕೊಂಡಿದ್ದಲ್ಲದೇ ಇಡೀ ಕಾರ್ಯಕ್ರಮದ ಪೂರ್ತಿ ಅಲ್ಲಿದ್ದು ಎಲ್ಲರೂ ಪ್ರಶಸ್ತಿಗಳನ್ನು ಸ್ವೀಕರಿಸಿಸುವಾಗ ಸಂಭ್ರದಿಂದ ಚಪ್ಪಾಳೆ ತಟ್ಟುತ್ತಾ ಹರ್ಷವನ್ನು ಸೂಚಿಸುತ್ತಾ, ಸಭೆ ಅಧಿಕೃತವಾಗಿ ಸಮಾಪ್ತಿಯಾದ ನಂತರ ಆಕೆ ಮತ್ತೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಅಲ್ಲಿಂದ ತೆರಳಿದ್ದಾರೆ.

ನಮ್ಮ ದೇಶದಲ್ಲಿ ಕೇವಲ ಗ್ರಾಮ ಪಂಚಾಯ್ತಿಯ ಸದಸ್ಯರೋ ಅಥವಾ ನಗರ ಪಾಲಿಕೆ ಸದ್ಯರಾದರೂ ಸಾಕು ಅವರ ಕುಟುಂಬದವರು ಆಕಾಶದಿಂದ ಉದುರಿದವರು ಎನ್ನುವಂತಹ ಆರ್ಭಟ ತೋರುತ್ತಾ, ನಾನ್ಯಾರು ಗೊತ್ತಾ? ನನ್ನ ಪವರ್ ಏನೂಂತಾ ಗೊತ್ತಾ? ನನಗೆ ಅವರು ಗೊತ್ತು ನನಗೆ ಇವರು ಗೊತ್ತು ಅಂತಾ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವವರೇ ಹೆಚ್ಚಾಗಿರುವಾಗ, ಸ್ವಲ್ಪವೂ ಸದ್ದು ಗದ್ದಲವಿಲ್ಲದೆ, ಯಾವುದೇ ಚರ್ಚೆಗೂ ಆಸ್ಪದ ನೀಡದೇ ತಾನು ಇಂಗ್ಲೇಂಡ್ ದೇಶದ ಪ್ರಧಾನ ಮಂತ್ರಿಯ ಪತ್ನಿ ಇಂಗ್ಲೇಂಡಿನ ಫಸ್ಟ್ ಲೇಡಿ ಎನ್ನುವ ಅಹಂಕಾರ ವಿಲ್ಲದೇ ತನ್ನ ತಾಯಿಯಂತೆಯೇ ಬಹಳ ಸರಳ ಮತ್ತು ಆಷ್ಟೇ ಸೌಮ್ಯವಾಗಿ ಕಾರ್ಯಕ್ರಮಕ್ಕೆ ಬಂದು ಕುಟುಂಬಸ್ಥರೊಂದಿಗೆ ಕುಳಿತು ನಂತರ ಸಭೆಯ ಶಿಷ್ಟಾಚಾರವನ್ನೂ ಆಕೆ ಪಾಲಿಸಿದ ವಿಷಯವನ್ನು ತಿಳಿದಾತ ಥಟ್ ಎಂದು ಮನಸ್ಸಿನಲ್ಲಿ ಮೂಡಿದ್ದೇ, ನೂಲಿನಂತೆ ಸೀರೆ ತಾಯಿಯಂತೆ ಮಗಳು ಎಂಬ ಗಾದೆ.

sunekತಾವು ವಿದೇಶದಲ್ಲಿದ್ದರೂ, ತಮ್ಮ ಪತಿಯವರು ಇಂಗ್ಲೆಂಡ್ ಪ್ರಧಾನಿಯಾದರೂ, ಭಾರತಕ್ಕೆ ಬಂದ ಕೂಡಲೇ, ತಾನೊಬ್ಬ ಭಾರತೀಯಳು ಇಲ್ಲಿನ ರೀತಿಯ ಸಂಸ್ಕಾರಕ್ಕೆ ಬದ್ಧಳು ಎಂಬುದನ್ನು ಗಮನದ್ದಲ್ಲಿಟ್ಟುಕೊಂಡು ಅದನ್ನು ಅಕ್ಷರಶಃ ಪಾಲಿಸಿದ್ದು ನಿಜಕ್ಕೂ ಅನನ್ಯ ಮತ್ತು ಅನುಕರಣೀಯವೇ ಸರಿ. ಇಂತಹ ಸರಳ ಸಜ್ಜನಿಕೆಯ ಸಂಸ್ಕಾರ ಖಂಡಿತವಾಗಿಯೂ ಆಕೆಯ ತಾಯಿಯಂದ ಪಡೆದ ಬಳುವಳಿ ಎಂದರೂ ತಪ್ಪಾಗದು. ವಿಶ್ವ ವಿಖ್ಯಾತವಾದ ಶ್ರೇಷ್ಠ ಸಾಫ್ಟ್ ವೇರ್ ಕಂಪನಿಯಾದ ಇನ್ಫೋಸಿಸ್‌ನ ಸಹ ಸಂಸ್ಥಾಪಕರಾಗಿದ್ದರೂ ಸುಧಾ ಮೂರ್ತಿಯವರೂ ಸಹಾ ಎಲ್ಲಿಯೂ ತಾನು ಅಷ್ಟು ಶ್ರೀಮಂತೆ ಎಂದು ತೋರಿಸಿಕೊಳ್ಳುವುದಿಲ್ಲ. ಸರಳವಾದ ಸೀರೆ ಹಾಗೇ ನೀಟಾಗಿ ತಲೆಯನ್ನು ಬಾಚಿಕೊಂಡು ಅದಕ್ಕೊಂದು ಚೂರು ಹೂವನ್ನು ಮುಡಿದುಕೊಂಡು ಹಣೆಯಲ್ಲಿ ಅಗಲವಾದ ಕುಂಕುಮ ಕೊರಳಲ್ಲಿ ಸರಳವಾದ ಮಂಗಲ ಸೂತ್ರದ ಹೊರತಾಗಿ ಮತ್ತಿನ್ನೇನೂ ಹೆಚ್ಚಿನದನ್ನು ಕಾಣಲಾಗದು. ಇಂಗ್ಲೆಂಡಿನಲ್ಲಿ ರಿಷಿ ಸುನಕ್‌ ಇನ್ನೇನು ಪ್ರಧಾನಿ ಆಗುತ್ತಾರೆ ಎಂಬ ಸುದ್ದಿ ಹರಿದಾಡಿದಾಗ ಮತ್ತು ಆವರು ಸ್ವಲ್ಪ ತಡವಾಗಿ ಪ್ರಧಾನಿಗಳಾದಾಗ, ನಿಮ್ಮ ಅಳಿಯ ಇಂಗ್ಲೇಂಡ್ ದೇಶದ ಪ್ರಧಾನಿಗಳಾಗಿರುವುದು ನಿಮಗೆ ಹೇಗೆ ಅನಿಸುತ್ತದೆ? ಎಂಬ ಪ್ರಶ್ನೆಯನ್ನು ಪತ್ರಕರ್ತರು ಸುಧಾ ಮೂರ್ತಿಯವರನ್ನು ಕೇಳಿದಾಗ, ಆಕೆ ಅತ್ಯಂತ ವಿನಮ್ರವಾಗಿ ಆ ಸಂಗತಿ ವಯಕ್ತಿಯವಾಗಿ ನಮ್ಮ ಕುಟುಂಬದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಮತ್ತು ನಾವಾಗಲೀ ನಮ್ಮ ಸಂಸ್ಥೆಯಾಗಲಿ ಅವರ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲಾ ಎಂದು ಸ್ಪಷ್ಟ ಪಡಿಸಿದ್ದರು.

ಹೀಗೆ ಸುಧಾಮೂರ್ತಿ ಮತ್ತು ಇಂಗ್ಲೆಂಡ್‌ನ ಪ್ರಥಮ ಮಹಿಳೆಯಾಗಿದ್ದರೂ, ಅದೆಲ್ಲವನ್ನೂ ಬದಿಗೊತ್ತಿ ಕೇವಲ ತಾಯಿಯೊಬ್ಬಳ ಮಗಳಾಗಿ ಯಾವುದೇ ಆಡಂಬರಕ್ಕೆ ಎಡೆಮಾಡಿಕೊಡದೆ ಸಾರ್ವಜನಿಕರ ಮಧ್ಯದ ಸಾಲಿನಲ್ಲಿ ಕುಳಿತಿದ್ದ ಅಕ್ಷತಾ ಸುನೇಕ್ ಅವರನ್ನು ಗಮನಿಸಿದಾಗ, ಮೈಸೂರು ದಿವಾನರಾಗಿದ್ದಾಗ ಸರ್ಕಾರಿ ಕೆಲಸದ ಸಮಯದಲ್ಲಿ ಸರ್ಕಾರದ ಖರ್ಚಿನ ಮೂಂಬತ್ತಿ ಹಚ್ಚಿಕೊಂಡು ಕೆಲಸವನ್ನು ಮುಗಿಸಿದ ನಂತರ ತಮ್ಮ ವಯಕ್ತಿಕ ಹಣದಿಂದ ಖರೀದಿಸಿದ ಮೋಂಬತ್ತಿ ಹಚ್ಚಿಕೊಂಡು ಪುಸ್ತಕಗಳನ್ನು ಓದುತ್ತಿದ್ದ ಮತ್ತು ತಮ್ಮ ದಿವಾನ ಪದವಿಗೆ ರಾಜೀನಾಮೆ ನೀಡಿ ಮನೆಗೆ ಹೋಗುವಾಗ ಸರ್ಕಾರೀ ವಾಹನದ ಬದಲಾಗಿ ತಮ್ಮ ವಯಕ್ತಿಕ ವಾಹನದಲ್ಲಿ ಪಯಣಿಸಿದ ನಾಡು ಕಂಡ ಶ್ರೇಷ್ಠ ಇಂಜೀನಿಯರ್ ಸರ್. ಎಂ. ವಿಶ್ವೇಶ್ವರಯ್ಯನವರ ನೆನಪಾಯಿತು. ಇಂತಹ ಸರಳ ಸಜ್ಜನಿಕೆಯ ಗಣ್ಯ್ರರನ್ನೇ ನೋಡಿಯೇ ತುಂಬಿದ ಕೊಡ ಎಂದೂ ತುಳುಕುವುದಿಲ್ಲ ಎನ್ನುವ ಗಾದೆಯನ್ನು ನಮ್ಮ ಹಿರಿಯರು ಮಾಡಿರಬಹುದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

3 thoughts on “ನೂಲಿನಂತೆ ಸೀರೆ ತಾಯಿಯಂತೆ ಮಗಳು

  1. ಸರ್ M ವಿಶ್ವೇಶ್ವರಯ್ಯ, JRD ಟಾಟಾ, Dr ಎಚ್ಛೆನ್ ಮತ್ತು Dr ರಾಜಕುಮಾರ್ ನನ್ನ ಪಾಲಿನ ಆದರ್ಶ ವ್ಯಕ್ತಿಗಳು. ಬಹುಷಃ ಶ್ರೀಮತಿ ಸುಧಾಮೂರ್ತಿ ಯವರು ಸದ್ಯದಲ್ಲೇ ಸೇರ್ಪಡೆಯಾಗಬಹುದು. 🙂🙂

    Liked by 1 person

    1. ಶ್ರೀಮತಿ ಸುಧಾ ಮೂರ್ತಿ ಅವರು ಪದ್ಮ ಪ್ರಶಸ್ತಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಅವರು ಮತ್ತು ಅವರ ಮಗಳು ನಡೆದುಕೊಂಡ ರೀತಿ, ನಡವಳಿಕೆ ಮತ್ತು ಅವರ ಸರಳತೆ ಬಗ್ಗೆ ಚೆನ್ನಾಗು ವಿವರಿಸಿದ್ದೀರಿ. ಸುಧಾ ಮೂರ್ತಿಯವರಂಥವರು ನಭೂತೋ ನಭವಿಷ್ಯತಿ. ಅಷ್ಟು ಶ್ರೀಮಂತರಾಗಿದ್ದರೂ ಅವರ ಸರಳತೆ, ವಿನಯವನ್ನಂತೂ ನಿಜವಾಗಿ ಮೆಚ್ಚಲೇಬೇಕು. ಇಂಥವರನ್ನು ನೋಡಿಯೇ “ತುಂಬಿದ ಕೊಡ ತುಳುಕಲ್ಲ” ಎಂಬ ಗಾದೆಯನ್ನು ಮಾಡಿರಬೇಕು. ಇವರ ನಡವಳಿಕೆಯನ್ನು ಎಷ್ಟು ಕೊಂಡಾಡಿದರೂ ಸಾಲದು.

      Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s