ಸರ್. ಕೆ.ಪಿ. ಪುಟ್ಟಣ್ಣ ಚಟ್ಟಿ ಪುರಭವನ

ಬೆಂಗಳೂರಿನ ಹೃದಯಭಾಗವಾಗಿರುವ ಸಂಪಂಗಿರಾಮ ನಗರದ ಮೈಸೂರು ರಸ್ತೆ ಮತ್ತು ಜಯಚಾಮರಾಜ ರಸ್ತೆಯ ಮಧ್ಯದಲ್ಲಿರುವ ಇರುವ ಪುರಾತನ ಕಟ್ಟಡವಾಗಿರುವ, ಸಾರ್ವಜನಿಕ ಸಭೆ ಮತ್ತು ಸಮಾರಂಭಗಳಲ್ಲದೇ ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಿರುವ ಪುರಭವನ ಅರ್ಥಾತ್ ಸರ್ ಕೆ.ಪಿ.ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ಎಂಬ ಹೆಸರು ಇಟ್ಟ ಕಾರಣವೇನು? ಆ ಕಟ್ಟಡದ ಇತಿಹಾಸ ಮತ್ತು ವೈಶಿಷ್ಟ್ಯತೆಗಳೇನು? ಪುಟ್ಟಣ್ಣಚೆಟ್ಟಿ ಎಂದರೆ ಯಾರು? ಎಂಬೆಲ್ಲಾ ಕುತೂಹಲಕಾರಿ ವಿಷಯಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

th5ಟೌನ್ ಹಾಲ್ ಎಂದರೆ, ಸಾಮಾನ್ಯವಾಗಿ ಸ್ಥಳೀಯ ಆಡಳಿತಕ್ಕಾಗಿ ಬಳಸಲಾಗುವ ಕಟ್ಟಡ ಇಲ್ಲವೇ, ನ್ಯಾಯಾಲಯದ ಅಧಿವೇಶನಗಳು, ಸಾರ್ವಜನಿಕ ಸಭೆಗಳು, ಮನರಂಜನೆಗಳು ಮುಂತಾದ ಉದ್ದೇಶಗಳಿಗಾಗಿ ಬಳಸಲಾಗುವ ದೊಡ್ಡ ಸಭಾಂಗಣವಾಗಿರುತ್ತದೆ. ಬೆಂಗಳೂರಿನಲ್ಲಿಯೂ ಅಂತಹದ್ದೇ ಆದ ಸುಂದರವಾದ ಟೌನ್ ಹಾಲ್ ಇದ್ದು, ಅಲ್ಲಿ ಸಭೆ ಸಮಾರಂಭ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ಪ್ರಸಿದ್ದಿ ಪಡೆಯುವುದಕ್ಕಿಂತಲೂ ಹೆಚ್ಚಾಗಿ, ಬ್ರಿಟೀಷರ ಕಾಲದಿಂದಲೂ ಹೃದಯಭಾಗದಲ್ಲಿರುವ ಈ ಪುರಭವನದ ಮುಂದೆಯೇ ಅಂದಿನ ಅಧಿಕಾರಿಗಳ ವಿರುದ್ಧ ಹಲವಾರು ಪ್ರತಿಭಟನೆಗಳು ಮತ್ತು ಪ್ರದರ್ಶನಗಳ ವೇದಿಕೆಯಾಗಿ ಕಾರ್ಯನಿರ್ವಹಿಸಿದ್ದ ಕಾರಣ, ಇಂದಿಗೂ ಸಹಾ ವಿವಿಧ ಪ್ರತಿಭಟನಾಕಾರರು ತಮ್ಮ ಸಮಸ್ಯೆಗಳನ್ನು ಮತ್ತು ಕಾಳಜಿಗಳನ್ನು ಜನರ ಮುಂದೆ ಪ್ರಸ್ತುತ ಪಡಿಸಲು ಇದೇ ಟೌನ್ ಹಾಲ್ ಬಳಸಿಕೊಳ್ಳುತ್ತಿರುವುದು ವಿಷಾಧನೀಯವಾಗಿದೆ.

mirja_ismailಈ ಕಟ್ಟಡದ ಶಂಕುಸ್ಥಾಪನೆಯ 1933 ರ ಮಾರ್ಚ್ 6 ರಂದು ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಅವರು ಅಮೃತ ಹಸ್ತದಿಂದ ಆರಂಭವಾಗಿ ಸುಮಾರು ಸುಮಾರು ಎರಡೂವರೆ ವರ್ಷಗಳಲ್ಲಿ ಸಂಫೂರ್ಣವಾಯಿತು. ಇಂತಹ ಸುಂದರವಾದ ಕಟ್ಟಡದ ರೂಪುರೇಶೆಗಳು ಅಂದಿನ ಕಾಲದ ಶ್ರೇಷ್ಠ ವಾಸ್ತುಶಿಲ್ಪಿಗಳಾಗಿದ್ದ ಶ್ರೀ ಎಸ್. ಲಕ್ಷ್ಮೀನರಸಪ್ಪನವರ ಕಲ್ಪನೆಯಾಗಿದ್ದರೆ, ಆ ಬೃಹತ್ ಕಟ್ಟಡದ ಮುಖ್ಯ ಗುತ್ತಿಗೆದಾರರಾಗಿದ್ದ ಶ್ರೀ ಚಿಕ್ಕನಂಜುಂಡಪ್ಪನವರು ಸಾಕಾರಗೊಳಿಸಿದರು. ಈ ಕಟ್ಟಡಕ್ಕೆ ಅಂದಿನ ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಸಮರ್ಥ ಮಾರ್ಗದರ್ಶನವಿದ್ದು, ಸೆಪ್ಟೆಂಬರ್ 11, 1935 ರಂದು ಅಂದಿನ ಮೈಸೂರಿನ ಯುವರಾಜರಾಗಿದ್ದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರಿಂದ ಉದ್ಘಾಟನೆಗೊಂಡಿತು.

th3ಅಂದಿನ ಕಾಲದಲ್ಲಿಯೇ ಸುಮಾರು 1.75 ಲಕ್ಷ. ವೆಚ್ಚದಲ್ಲಿ ಯುರೋಪಿಯನ್ ಕ್ಲಾಸಿಕಲ್ ಗ್ರೀಕೋ-ರೋಮನ್ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವ ಭವ್ಯವಾಗಿ ನಿರ್ಮಾಣವಾದ ಈ ಸಭಾಂಗಣವು, ಆಯತಾಕಾರದ ಆಕಾರದಲ್ಲಿದ್ದು, ಎರಡು ಅಂತಸ್ತುಗಳನ್ನು ಹೊಂದಿದೆ. ಆರಂಭದಲ್ಲಿ ಸುಮಾರು 1038 ಜನರಿಗೆ ಆಸನದ ಸೌಕರ್ಯವನ್ನು ಹೊಂದಿದ್ದು, ಇಡೀ ಒಳಾಂಗಣವನ್ನು ತೇಗದ ಮರದಲ್ಲಿ ವಿಸ್ತೃತವಾಗಿ ಮಾಡಲಾಗಿತ್ತು. ಹೊರಭಾಗದ ಮುಖಮಂಟಪದ ಎರಡೂ ಬದಿಗಳಲ್ಲಿ ಒಂದೇ ರೀತಿಯ ಟಸ್ಕನ್ ಸ್ಥಂಭಗಳು ಈ ಕಟ್ಟಡಕ್ಕೆ ಸೊಗಸಾದ ಸೌಂದರ್ಯದ ನೋಟವನ್ನು ಕೊಡುವುದಲ್ಲದೇ, ಕಟ್ಟಡದ ಒಳೆಗೆಡೆ ಹೋಗಲು ಹಾಕಿರುವ ಮೆಟ್ಟಿಲುಗಳನ್ನು ಏರುತ್ತಿದ್ದರೆ, ಒಂದು ರೀತಿಯ ರಾಜಗಾಂಭೀರ್ಯದಂತ ಠೀವಿಯನ್ನು ಕೊಡುವಂತಹ ಸುಂದರವಾದ ಅನುಭವವನ್ನು ವರ್ಣಿಸುವುದಕ್ಕಿಂತಲೂ ಅನುಭವಿಸಿದರೇ ಹೆಚ್ಚು ಮುದ ನೀಡುತ್ತದೆ.

Th1ಪ್ರಮುಖವಾಗಿ ಈ ಪುರಭವನವನ್ನು ಮನರಂಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಕಾರ್ಯನಿರ್ವಹಿಸಲು ನಿರ್ಮಿಸಲಾಗಿದ್ದ ಕಾರಣ, ಆರಂಭದ ಸುಮಾರು ಮೂರು ದಶಕಗಳ ಕಾಲ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಬಹುತೇಕ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಿಗೂ ಇದೇ ಕೇಂದ್ರತಾಣಗಿದ್ದು, ಅನೇಕ ಸಭೆ ಸಮಾರಂಭಗಳಿಗೆ ಈ ಸಭಾಂಗಣ ದೊರಕದೇ ಹೋಗುತ್ತಿದ್ದ ಕಾರಣ, ಇದರ ಪಕ್ಕದಲ್ಲಿಯೇ 1963 ರಲ್ಲಿ ರವೀಂದ್ರ ಕಲಾಕ್ಷೇತ್ರವನ್ನು ಕಟ್ಟಿದ್ದರೂ ಪುರಭವನದ ಮಹತ್ವ ಅಥವಾ ಅಥವಾ ಆಕರ್ಷಣೆಯೇನೂ ಕಡಿಮೆಯಾಗಿರಲಿಲ್ಲ. ಅಂದಿನ ಮತ್ತು ಇಂದಿನ ಕಾಲದ ಸಾಂಸ್ಕೃತಿಕ ಲೋಕದ ಕಲಾವಿದರುಗಳಿಗೆ ಟೌನ್ ಹಾಲಿನಲ್ಲಿ ತಮ್ಮ ನಾಟಕ, ನೃತ್ಯ, ಸಂಗೀತ ಕಾರ್ಯಕ್ರಮಗಳನ್ನು ಮಾಡುವುದು ಪ್ರತಿಷ್ಠಿತೆಯ ಸಂಕೇತವಾಗಿದೆ.

th71976ರಲ್ಲಿ ರಷ್ಯಾದ ಪ್ರತಿಷ್ಟಿತ ಬ್ಯಾಲೆಟ್ ಪ್ರದರ್ಶನ ಇದೇ ಟೌನ್ ಹಾಲ್ ನಲ್ಲಿ ಆಯೋಚಿಸಲಾಗಿದ್ದು, ಆ ಕಾರ್ಯಕ್ರಮದ ವೀಕ್ಷಣೆಗೆ ರಾಜ್ಯದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಡಿ ದೇವರಾಜ್ ಅರಸ್ ಅವರು ಬಂದಿದ್ದಾಗ ಅಲ್ಲಿನ ಆಸನ ಮತ್ತು ಧ್ವನಿ ವ್ಯವಸ್ಥೆಗೆ ಸಂಬಂಧಿಸಿದಂತಹ ಕೆಲವು ಸಮಸ್ಯೆಗಳಿಂದಾಗ ಕಾರ್ಯಕ್ರಮ ರಸಭಂಗವಾದ ಕಾರಣ, ಸುಮಾರು 10 ಲಕ್ಷಗಳ ವೆಚ್ಚದಲ್ಲಿ ಇಡೀ ಸಭಾಂಗಣದ ನವೀಕರಣಕ್ಕೆ ಆದೇಶಿಸಿದರು.

ಸರ್ಕಾರದ ಆರ್ಥಿಕ ನೆರವಿದ್ದರೂ, ವಿವಿಧ ಕಾರಣಗಳಿಂದಾಗ ಸಭಾಂಗಣದ ನವೀಕರಣವು ಹಲವಾರು ವರ್ಷಗಳ ಕಾರ ನೆನೆಗುದಿಗೆ ಬಿದ್ದು ಅಂತಿಮವಾಗಿ ಮಾರ್ಚ್ 1990 ರಲ್ಲಿ ಆ ಐತಿಹಾಸಿಕ ಕಟ್ಟಡವನ್ನು ಸಂಪೂರ್ಣವಾಗಿ ಸಾರ್ವಜನಿಕರಿಗೆ ಮುಚ್ಚಿ ಸುಮಾರು 65 ಲಕ್ಷಗಳ ವೆಚ್ಚದಲ್ಲಿ ನವೀಕರಿಸಲಾಯಿತು. ವೇದಿಕೆಯ ಮುಂದಿನ ಸಾಲುಗಳಲ್ಲಿ ಕುಳಿತಂತಹ ಗಣ್ಯವ್ಯಕ್ತಿಗಳು ಕಾರ್ಯಕ್ರಮಗಳನ್ನು ಅರಾಮಾವಾಗಿ ವೀಕ್ಷಿಸಲು ಅನುಕೂಲವಾಗುವಂತೆ ವಿಸ್ತೃತ ವೇದಿಕೆಯ ಎತ್ತರವನ್ನು ಸ್ವಲ್ಪ ಕೆಳಮಟ್ಟಕ್ಕೆ ಇಳಿಸಿ ಸಂಪೂರ್ಣ ತೇಗದ ಮರದಿಂದ ವೇದಿಕೆಯನ್ನು ಮರುನಿರ್ಮಿಸಲಾಯಿತು. ಅದೇ ರೀತಿ ಒಂದರ ಪಕ್ಕದಲ್ಲಿ ಒಂದು ದಟ್ಟಣೆಯಿಂದ ಕೂಡಿದ್ದ ಆಸನಗಳ ಸಾಮರ್ಥ್ಯವನ್ನು 1038 ರಿಂದ 810 ಆಸನಗಳಿಗೆ ಇಳಿಸಲಾಯಿತು.

WhatsApp Image 2023-04-29 at 15.51.13ಇಂತಹ ಭವ್ಯವಾದ ಸಭಾಂಗಣದ ನಿರ್ಮಾಣದ ಸಮಯದಲ್ಲಿ ಪರೋಪಕಾರಿಗಳು ಎಂದೇ ಹೆಸರುವಾಸಿಯಾಗಿದ್ದ ಮತ್ತು ಬೆಂಗಳೂರು ನಗರ ಪುರಸಭೆಯ ಮಾಜಿ ಅಧ್ಯಕ್ಷರಾಗಿದ್ದ ಮತ್ತು ಅಂದಿನ ಕಾಲಕ್ಕೆ ಸುಮಾರು 75000 ರೂಗಳನ್ನು ದೇಣಿಗೆಯಾಗಿ ನೀಡಿದ್ದ ಸರ್ ಕೆ.ಪಿ ಪುಟ್ಟಣ್ಣ ಚೆಟ್ಟಿಯವರು ಹೆಸರನ್ನು ಇಟ್ಟು ಗೌರವವನ್ನು ಸಲ್ಲಿಸಲಾಗಿದೆ.

ಇಂತಹ ಕೊಡುಗೈ ದಾನಿಗಳಾಗಿದ್ದ ಪುಟ್ಟಣ್ಣ ಚೆಟ್ಟಿಯವರ ಹೆಸರನ್ನು ಕೇಳಿದಾಕ್ಷಣ ಇವರು ತಮಿಳಿಗರೋ ಇಲ್ಲವೇ ತೆಲುಗರೋ ಇರಬೇಕು ಎಂದು ತಿಳಿದಲ್ಲಿ ಅದು ಸಂಪೂರ್ಣವಾಗಿ ತಪ್ಪಾಗಿದ್ದು. ಪುಟ್ಟಣ್ಣ ಚೆಟ್ಟಿಯವರು ಅಪ್ಪಟ ಕನ್ನಡಿಗರಾಗಿದ್ದು ಅದರಲ್ಲೂ ಬೆಂಗಳೂರಿನ ಸ್ಥಳವಂದಿಗರಾಗಿರುವುದು ವಿಶೇಷವಾಗಿದೆ. ಬೆಂಗಳೂರು ಬಳಿಯ ಕೃಷ್ಣರಾಜಪುರದ ಯಲ್ಲಪ್ಪ ಚೆಟ್ಟಿ ಮತ್ತು ಯಲ್ಲಮ್ಮ ದಂಪತಿಗಳ ಸುಪುತ್ರರಾಗಿ 1859 ರ ವರ್ಷದ 29 ಏಪ್ರಿಲ್ ರಂದು ಅತ್ಯಂತ ಸಿರಿವಂತ ಕುಟುಂಬದಲ್ಲೇ ಜನಿಸಿದರು. ತಮ್ಮ ಪ್ರೌಢಶಾಲೆಯ ವಿದ್ಯಾಭ್ಯಾಸವನ್ನು ಬೆಂಗಳೂರಿನ ವೆಸ್ಲಿಯನ್ ವಿಷನ್ ಹೈಸ್ಕೂಲಿನಲ್ಲಿಯೂ, ಕಾಲೇಜು ವಿಧ್ಯಾಭ್ಯಾಸವನ್ನು ಸೆಂಟ್ರಲ್ ಕಾಲೇಜಿನಲ್ಲಿ ಮುಂದುವರೆಸುತ್ತಿದ್ದಾಗ, ಕಾರಣಾಂತರಗಳಿಂದ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದೆ ಇದ್ದ ಕಾರಣ ಅಧಿಕೃತವಾಗಿ ಯಾವುದೇ ಪದವಿಯನ್ನೂ ಪಡೆಯದಿದ್ದರೂ, ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಹೆಚ್ಚಿನ ಪ್ರಭುತ್ವವನ್ನು ಪಡೆದಿದ್ದ ಕಾರಣ, ತಮ್ಮ 19ನೇ ವಯಸ್ಸಿನಲ್ಲಿಯೇ ಮೈಸೂರು ಸರ್ಕಾರದ ಸಿವಿಲ್ ಸರ್ವೀಸಸ್ ಸೇರಿದ ಪುಟ್ಟಣ್ಣ ಚೆಟ್ಟಿ ಅವರು, ತಮ್ಮ ಕರ್ತವ್ಯ ನಿಷ್ಠೆ, ಆಡಳಿತ ಸಾಮರ್ಥ್ಯ, ಸರಳ ಸ್ವಭಾವದಿಂದಾಗಿ ಅಂದಿನ ಮೈಸೂರು ರಾಜ್ಯದ ರೈಲ್ವೆ ಟ್ರಾಫಿಕ್ ಮ್ಯಾನೇಜರ್, ಸಹಾಯಕ ಕಮಿಷನರ್, ಡೆಪ್ಯುಟಿ ಕಮಿಷನರ್, ಜಿಲ್ಲಾಧಿಕಾರಿ ಇವೇ ಮುಂತಾದ ಉನ್ನತ ಹುದ್ದೆಗಳನ್ನು ಹಂತ ಹಂತವಾಗಿ ಅಲಂಕರಿಸಿ ಶಿವಮೊಗ್ಗ, ಕೋಲಾರ, ಬೆಂಗಳೂರುಗಳಲ್ಲಿ ಸೇವೆ ಸಲ್ಲಿಸಿದರು.

pc1908 ರಿಂದ 1912 ರವರೆಗೂ ಅವರು ಬೆಂಗಳೂರು ಸಿಟಿ ಕೌನ್ಸಿಲ್ನ ಸದಸ್ಯರಾಗಿದ್ದ ನಂತರ 1913 ರಲ್ಲಿ, ಪುಟ್ಟಣ್ಣ ಚೆಟ್ಟಿಯವರು ಬೆಂಗಳೂರು ಪುರಸಭೆಯ ಅಧ್ಯಕ್ಷರಾಗಿ ಚುನಾಯಿತರಾಗಿ 1919 ರವರೆಗೆ ಸೇವೆ ಸಲ್ಲಿಸಿದರು ಇದೇ ಸಮಯದಲ್ಲಿಯೇ ವಿಕ್ಟೋರಿಯಾ ಆಸ್ಪತ್ರೆಯು ಸಹಾ ನಿರ್ಮಾಣವಾಗುತ್ತಿದ್ದಾಗ ಆಸ್ಪತ್ರೆಯ ಹೊರರೋಗಿ ವಿಭಾಗ ನಿರ್ಮಾಣಕ್ಕೆ 25000 ರೂ ದೇಣಿಗೆಯನ್ನು ನೀಡಿದ್ದಲ್ಲದೇ ಅವರ ಅಧಿಕಾರಾವಧಿಯಲ್ಲಿಯೇ ಅವರ ಆವರಿಂದಲೇ ಉದ್ಘಾಟನಗೊಂಡಿದ್ದು ವಿಶೇಷವಾಗಿತ್ತು. ಮೈಸೂರು ವಿಶ್ವವಿದ್ಯಾಲಯದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ 20000 ರೂ ದೇಣಿಗೆ ನೀಡಿದ್ದಲ್ಲದೇ, ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ದೂರದ ಹಳ್ಳಿಗಳಿಂದ ಬರುವ ತಮ್ಮ ಸ್ವಜಾತಿಯ ವಿದ್ಯಾರ್ಥಿಗಳಿಗಾಗಿ ಬಸವನಗುಡಿಯಲ್ಲಿ ವೀರಶೈವ ಉಚಿತ ವಿದ್ಯಾರ್ಥಿನಿಲಯ ಕಟ್ಟಿಸಿ ಅದಕ್ಕೆ85000 ರೂ.ಗಳಷ್ಟು ಸಹಾಯ ಧನವನ್ನು ನೀಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಹಾಯ ವರ್ಗದ ಸದಸ್ಯರಾಗಿದ್ದ ಪುಟ್ಟಣ್ಣ ಚೆಟ್ಟಿಯವರು ಪರಿಷತ್ತಿಗೆ ಅಪಾರ ಧನಸಹಾಯ ಮಾಡಿ ಅದರ ಅಭಿವೃದ್ಧಿಗೆ ಕಾರಣರಾದರು.

ತಮ್ಮ ಸರಳ ಸ್ವಭಾವ ಹಾಗೂ ಕರ್ತವ್ಯ ಪ್ರಜ್ಞೆಗೆ ಹೆಸರಾದ ಇವರು ಕೊಡುಗೈ ದಾನಿಗಳಾಗಿ ಸದಾ ಬಡಜನರ ಏಳಿಗೆಗೆ ಸಹಾಯ ಮಾಡುವ ಪ್ರವೃತ್ತಿಯನ್ನು ಹೊಂದಿದ್ದರು. ಇವರ ನಡೆ, ನುಡಿ, ಸಹಾಯ ಮನೋಭಾವ, ಮುಖಂಡತ್ವತನ ಜನರ ಮೇಲೆ ಬಹಳಷ್ಟು ಪರಿಣಾಮ ಬೀರಿದ. ಇವರ ದೃಢ ಸ್ವಭಾವ ಹಾಗೂ ಧೀಮಂತ ವ್ಯಕ್ತಿತ್ವ ಮೈಸೂರಿನ ಜನರಿಗೆ ಅಪ್ಯಾಯಮಾನವಾಗಿತ್ತು. ಇವರ ನಿಸ್ವಾರ್ಥ ಸೇವಾ ಮನೋಭಾವ, ಇವರಿಗೆ ಅಪಾರ ಕೀರ್ತಿ ತಂದುಕೊಟ್ಟಿದ್ದನ್ನು ಗಮನಿಸಿದ ಶ್ರೀ ಮನ್ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶ್ರೀ ಪುಟ್ಟಣ್ಣನವರಿಗೆ ರಾಜಸಭಾ ಭೂಷಣ ಎಂಬ ಪ್ರಶಸ್ತಿಯನ್ನು ನೀದಿದರೆ, ಅಂದಿನ ಭಾರತ ಸರ್ಕಾರ ದಿವಾನ್ ಬಹದ್ದೂರ್, ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. 1918 ರಲ್ಲಿ ಇವರು ಅಧಿಕಾರದಿಂದ ನಿವೃತ್ತರಾದರೂ, ವಿಶ್ರಾಂತ ಜೀವನವನ್ನು ಅನುಭವಿಸಲು ಇಚ್ಚಿಸದೇ ಮತ್ತಷ್ಟು ಸೇವಾಕಾರ್ಯಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡರು.

ತಮ್ಮ ನಿವೃತ್ತಿಯ ನಂತರ ಚೆಟ್ಟಿಯವರು ಮೈಸೂರು ಬ್ಯಾಂಕ್ ಮತ್ತು ಕೇಂದ್ರ ಸಹಕಾರ ಬ್ಯಾಂಕ್, ಬೆಂಗಳೂರು, ಶ್ರೀ ಕೃಷ್ಣರಾಜೇಂದ್ರ ಮಿಲ್ಸ್ ಅಧ್ಯಕ್ಷರು ಮತ್ತು ಮೈಸೂರು ವಿಶ್ವವಿದ್ಯಾಲಯದ ಸಹವರ್ತಿಯಾಗಿವಿವಿಧ ನೇಮಕಾತಿಗಳಲ್ಲಿ ಸೇವೆ ಸಲ್ಲಿಸಿದ್ದಲ್ಲದೇ, ಈ ನಾಡು ಕಂಡ ಮತ್ತೊಬ್ಬ ಶ್ರೇಷ್ಠ ಕೊಡುಗೈ ದಾನಿಗಳಾಗಿದ್ದ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರು ಆರಂಭಿಸಿದ ಧರ್ಮಸಂಸ್ಥೆಯ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸಂಧರ್ಭದಲ್ಲಿಯೇ ಜುಲೈ23, 1938ರಲ್ಲಿ ತಮ್ಮ 82ರ ವಯಸ್ಸಿನಲ್ಲಿ ನಿಧನರಾದರು.

th8ಇಂತಹ ಶ್ರೇಷ್ಠ ಸಮಾಜ ಸೇವಕ ಮತ್ತು ಕೊಡುಗೈ ದಾನಿಗಳ ಹೆಸರನ್ನು ಹೊತ್ತಿರುವ ಬೆಂಗಳೂರಿನ ಪುರಭವನ ಬೆಂಗಳೂರಿನ ಜನರ ಪಾಲಿಗೆ ಒಂದು ಹೆಗ್ಗುರುತಾಗಿದ್ದು, ಬಹಳ ಅಕ್ಕರೆಯಿಂದ ಕಾಣುತ್ತಾರೆ ಎಂಬುದಕ್ಕೆ ಜ್ವಲಂತ ಉದಾಹರಣೆಯಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2014ರ ಜನವರಿಯಲ್ಲಿ ಸಾಲ ಪಡೆಯುವ ಸಲುವಾಗಿ ಇದೇ ಪುರಭವನವನ್ನು ಖಾಸಗಿ ಸಂಸ್ಥೆಗೆ ಒತ್ತೆ ಇಡುವ ಪ್ರಸ್ತಾಪವನ್ನು ಮುಂದಿಟ್ಟಾಗ ಬೆಂಗಳೂರಿಗರು ಒಗ್ಗಟ್ಟಿನಿಂದ ಅದರ ವಿರುದ್ಧ ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದಾಗ, ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಆ ಸಭಾಂಗಣವನ್ನು ಅಂದಿನ ಕಾಲಕ್ಕೆ 5 ಕೋಟಿಗಳಿಗೆ ತೆಗೆದುಕೊಂಡು ಕನ್ನಡದ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತವಾದ ವೇದಿಕೆಯನ್ನು ಉಳಿಸಿಕೊಟ್ಟಿದ್ದು ಶ್ಲಾಘನೀಯವಾಗಿದೆ. ಇತ್ತೀಚೆಗೆ ಕಳಪೆ ವಾತಾಯನ, ಮುರಿದ ಸೀಟುಗಳು, ಕೊಳಕು ಒಳಾಂಗಣಗಳು ಮತ್ತು ಕಳಪೆ ನಿರ್ವಹಣೆಯ ವೇದಿಕೆಯ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ, ಟೌನ್ ಹಾಲ್ ನಲ್ಲಿ ಉತ್ತಮ ಆಸನ ಸೌಲಭ್ಯ ಮತ್ತು ಕೇಂದ್ರೀಕೃತ ಹವಾನಿಯಂತ್ರಣದೊಂದಿಗೆ ಅತ್ಯಾಧುನಿಕ ಬೆಳಕು ಮತ್ತು ಧ್ವನಿ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಕಟ್ಟಡಕ್ಕೆ ಹೊಸ ಜೀವವನ್ನು ಸುಮಾರು 5 ಕೋಟಿ ರೂ ವೆಚ್ಚದಲ್ಲಿ ಬಿಬಿಎಂಪಿ ನೀಡಿರುವುದು ಅಭಿನಂದನಾರ್ಹವಾಗಿದೆ.

th6ಇಂದಿನ ಆಧುನಿಕ ಯುಗದಲ್ಲಿ, ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಖ್ಯಾತಿಯನ್ನು ಹೊಂದಿರುವ ಬೆಂಗಳೂರಿನಲ್ಲಿ 90 ವರ್ಷಗಳ ಹಿಂದೆ ನಿರ್ಮಾಣವಾದ ಈ ಭವ್ಯವಾದ ಸಭಾಂಗಣವು ಇಂದಿಗೂ ತನ್ನ ಹೆಗ್ಗುರುತನ್ನು ಮತ್ತು ಹೆಮ್ಮೆಯನ್ನು ಉಳಿಸಿಕೊಳ್ಳಲು ಸಮರ್ಥವಾಗಿರುವ ಮೂಲಕ ಸಾವಿರಾರು ಉದಯೋನ್ಮುಖ ಕಲಾವಿದರುಗಳಿಗೆ ವೇದಿಕೆಯನ್ನು ಒದಗಿಸಿ ಕೊಟ್ಟಿದ್ದರೆ, ಹೋರಾಟದಿಂದಲೇ ಹೊಟ್ಟೆಯನ್ನು ತುಂಬಿಸಿಕೊಳ್ಳುವ ಕಾಯಕದಲ್ಲಿರುವ ಸಾವಿರಾರು ಸ್ವಘೋಷಿತ ಬುದ್ದಿ ಜೀವಿಗಳು ಮತ್ತು ಗಂಜೀ ಗಿರಾಕಿಗಳಿಗೂ ಆಶ್ರಯ ತಾಣವಾಗಿರುವುದು ವಿಪರ್ಯಾಸವಾಗಿದೆ.

ಕೊಡುಗೈ ದಾನಿ ಸರ್ ಕೆ.ಪಿ. ಪುಟ್ಟಣ್ಣಚಟ್ಟಿ ಅವರ ಬಗ್ಗೆ ಮತ್ತು ಅವರ ಹೆಸರಿನಲ್ಲಿರುವ ಪುರಭವನದ ಬಗ್ಗೆ ಇಷ್ಟೆಲ್ಲಾ ಮಾಹಿತಿಯನ್ನು ತಿಳಿದ ನಂತರ ಮುಂದಿನ ಬಾರಿ ಆ ಕಟ್ಟಡ ಮುಂದೆ ಹಾದು ಹೋಗುವಾಗ ಸ್ವಲ್ಪ ಸಮಯ ಮಾಡಿಕೊಂಡು ಸಭಾಂಗಣದೊಳಗೆ ಹೋಗಿ ಅದನ್ನು ಕಣ್ತುಂಬಿಸಿಕೊಳ್ಳುವುದಲ್ಲದೇ, ಇಂತಹ ಭವ್ಯವಾದ ಸಭಾಂಗಣದ ನಿರ್ಮಾಣಕ್ಕೆ ಕಾರಣೀಭೂತರಾದ ಪ್ರಾಥಃಸ್ಮರಣೀಯರಾದ ಶ್ರೀ ಕೆ.ಪಿ. ಪುಟ್ಟಣ್ಣಚಟ್ಟಿಯವನ್ನು ಮನಸಾರೆ ನೆನೆಸಿಕೊಳ್ತೀರೀ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

ಅದೃಷ್ಟ ಎನ್ನುವಂತೆ ಈ ಲೇಖನವು ನಾಡಿನ ಖ್ಯಾತ ಪತ್ರಿಕೆಗಳಾದ ವಿಕ್ರಮ ಮತ್ತು ಸಂಪದ ಸಾಲು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ

ವಿಕ್ರಮ

PC_Vikrama
ಸಂಪದ ಸಾಲು

pc_Sampada_Salu

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s