ಹೇಳಿ ಕೇಳಿ ಕರ್ನಾಟಕ ಸಂಗೀತ, ರಂಗಭೂಮಿ, ಚಲನಚಿತ್ರ, ನೃತ್ಯ, ಮತ್ತು ಇತರ ಸಾಂಸ್ಕೃತಿಕ ಕಲೆಗಳ ಬೀಡು. ಅದೇ ರೀತಿಯಲ್ಲಿ ಸಾಹಿತ್ಯ ಮತ್ತು ಸಂವಾದಾತ್ಮಕ ಚಟುವಟಿಕೆಗಳಿಗೂ ಇಲ್ಲಿ ಕೊರತೆಯೇನಿಲ್ಲ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ವರ್ಷದ 365 ದಿನಗಳೂ ಈ ರೀತಿಯ ಒಂದಲ್ಲಾ ಒಂದು ಚಟುವಟಿಕೆಗಳು ನಡೆಯುತ್ತಲೇ ಇದ್ದು ಅವುಗಳಲ್ಲಿ ಬಹುತೇಕ ಬೆಂಗಳೂರಿನ ದಕ್ಷಿಣ ಭಾಗದಲ್ಲಿದ್ದ ಪುರಭವನ, ರವೀಂದ್ರ ಕಲಾಕ್ಷೇತ್ರಗಳಲ್ಲಿಯೇ ನಡೆಯುತ್ತಿದ್ದ ಕಾರಣ 70ರ ದಶಕದಲ್ಲಿ ಬೆಂಗಳೂರಿನ ಉತ್ತರ ಭಾಗದಲ್ಲೂ ಅಂತಹ ಸುಂದರವಾದ ರಂಗಮಂದಿರ ಇದ್ದಿದ್ದರೆ ಎಷ್ಟು ಚೆನ್ನಾ ಎಂದು ಯೋಚಿಸುದ್ದಾಗಲೇ. 1961 ರಲ್ಲಿ ಸ್ಥಾಪಿತವಾಗಿದ್ದ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥೆಯ ಕೆ.ಕೆ. ಮೂರ್ತಿ ಸಾರಥ್ಯದಲ್ಲಿ ಮಲ್ಲೇಶ್ವರದ ಗಾಯತ್ರಿ ಬಡಾಣೆಯಲ್ಲಿ 1980ರಲ್ಲಿ ಸ್ಥಾಪಿತವಾದ ಚೌಡಯ್ಯಸ್ಮಾರಕ ಭವನದ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಲಲಿತ ಕಲೆ ಎನ್ನುವುದು ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು ಅದು ವ್ಯಕ್ತಿಯ ಸೃಜನಶೀಲತೆಯನ್ನು ಹೆಚ್ಚಿಸುತ್ತಲ್ಲದೇ, ಒತ್ತಡವನ್ನು ನಿವಾರಿಸುವುದರಲ್ಲಿ ಬಹು ಮುಖ್ಯಪಾತ್ರವನ್ನು ವಹಿಸುತ್ತದೆ. ಹಾಗಾಗಿ ಮನುಷ್ಯರಿಗೆ ಮನೋರಂಜನೆ ಎನ್ನುವುದು ಅತ್ಯಾವಶ್ಯಕವಾಗಿದ್ದು, ಶಾಸ್ತ್ರೀಯ ಸಂಗೀತ, ನಾಟಕ, ಹರಿಕಥೆ ಮುಂತಾದವುಗಳತ್ತ ಹರಿಸುತ್ತಾರೆ ತಮ್ಮ ಚಿತ್ತ, ಈ ರೀತಿಯ ಉತ್ತಮವಾದ ಹವ್ಯಾಸಗಳಿಂದಾಗಿ ಹೆಚ್ಚಿನ ಜನರೊಂದಿಗೆ ಸಂಪರ್ಕವನ್ನೂ ಸಾಧಿಸಬಹುದಲ್ಲದೇ, ಅವರೊಂದಿಗ ತಮ್ಮ ತಮ್ಮ ಭಾವನೆಗಳನ್ನು ಅದರಲ್ಲೂ ಸಂತೋಷ, ದುಃಖ ಅಥವಾ ಕೋಪವನ್ನು ವ್ಯಕ್ತಪಡಿಸುವ ಮೂಲಕ ಮನಸ್ಸಿಗೆ ನೆಮ್ಮದಿಯನ್ನು ತಂದು ಕೊಳ್ಳಬಹುದಾಗಿದೆ. ಇದೇ ನಿಟ್ಟಿನಲ್ಲಿ ಕೆ.ಕೆ ಮೂರ್ತಿಯವರ ಸಾರಥ್ಯದ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥೆಯ ಮೂಲಕ ಲಲತ ಕಲೆಗೆ ಸಂಬಂಧ ಪಟ್ಟ ಅನೇಕ ಕಾರ್ಯಕ್ರಮಗಳು ನಿರಂತವಾಗಿ ನಡೆಸುತ್ತಲಿರುತ್ತದೆ.
70ರ ದಶಕದಲ್ಲಿ ಬಿಡಿಎ ಅಧ್ಯಕ್ಷರಾಗಿದ್ದ ಶ್ರೀ ಕೆ.ಕೆ. ಮೂರ್ತಿಗಳ ತಂದೆಯವರಾದ ಶ್ರೀ ಕೆ. ಪುಟ್ಟುರಾವ್ ಮತ್ತು ಏಳು ತಂತಿಗಳ ಪಿಟೀಲು ನುಡಿಸುವ ಮೂಲಕ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಶ್ರೇಷ್ಠ ಸಂಗೀತಗಾರ ಎಂದೇ ಪ್ರಖ್ಯಾತರಗಿದ್ದ ಶ್ರೀ ತಿರುಮಕೂಡಲು ಚೌಡಯ್ಯ ಅವರಿಬ್ಬರೂ ಪರಮಾಪ್ತ ಸ್ನೇಹಿತರಾಗಿರುತ್ತಾರೆ.
ಮೈಸೂರಿನ ಬಳಿ ಕಾವೇರಿ ನದಿಯ ದಡದಲ್ಲಿರುವ ತಿರುಮಕೂಡಲು ನರಸೀಪುರ ಗ್ರಾಮದಲ್ಲಿ 1895ರಲ್ಲಿ ಜನಿಸಿದ ಚೌಡಯ್ಯನವರಿಗೆ ಬಾಲ್ಯದಿಂದಲೂ ವಿದ್ಯೆಗಿಂತಲೂ ಸಂಗೀತದಲ್ಲಿ ಬಹಳ ಆಸಕ್ತಿಯಿದ್ದದ್ದನ್ನು ಗಮನಿಸಿದ ಅವರ ಪೋಷಕರು 1910ರಲ್ಲಿ ಮೈಸೂರು ರಾಜಮನೆತನದ ಸಂಗೀತಗಾರರಾಗಿದ್ದ ಗಾನವಿಶಾರದ ಬಿಡಾರಂ ಕೃಷ್ಣಪ್ಪನವರ ಬಳಿ 1918 ರವರೆಗೆ ಗುರುಕುಲ ಪದ್ಧತಿಯಲ್ಲಿ ಅತ್ಯಂತ ಕಠಿಣ ಮತ್ತು ಶಿಸ್ತಿನಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸವನ್ನು ಮಾಡುತ್ತಾರೆ. ಮೂಲತಃ 4 ತಂತಿಗಳ ವಿದೇಶೀ ವಾದ್ಯವಾಗಿದ್ದ ವಯಲಿನ್ನಿಗೆ ಮನಸೋತ ಶ್ರೀ ಚೌಡಯ್ಯನವರು ಅದನ್ನು ನುಡಿಸುವುದರಲ್ಲಿ ಕರತಲಾಮರಕರಾಗಿ ನಾಡಿನಾದ್ಯಂತ ಸಂಗೀತ ಕಛೇರಿಗಳನ್ನು ಕೊಡಲು ಆರಂಭಿಸುತ್ತಾರೆ.
ಆರಂಭಿಕ ದಿನಗಳಲ್ಲಿ ಸಾಂಪ್ರದಾಯಿಕವಾದ ನಾಲ್ಕು ತಂತಿಗಳ ಪಿಟೀಲು ನುಡಿಸುತ್ತಿದ್ದ ಚೌಡಯ್ಯನವವರಿಗೆ 1927 ರ ಸಮಯದಲ್ಲಿ ಇನ್ನೂ ಧ್ವನಿ ವರ್ಧಕ ಸಾಧನಗಳಿಲ್ಲದ ಕಾರಣ, ಸಂಗೀತ ಕಛೇರಿಗಳಲ್ಲಿ ಹಿಂದಿನ ಸಾಲುಗಳಲ್ಲಿ ಕುಳಿತು ಕೊಳ್ಳುವ ಕೇಳುಗರಿಗೆ ಅವರು ನುಡಿಸುತ್ತಿದ್ದ ಪಿಟೀಲುವಾದನ ಸರಿಯಾಗಿ ಕೇಳಸದೇ ಇದ್ದದ್ದನ್ನು ಗಮನಿಸಿ, ಅದೊಮ್ಮೆ ಮೈಸೂರಿನಲ್ಲಿ ಅವರ ಗುರು ಬಿಡಾರಂ ಕೃಷ್ಣಪ್ಪನವರ ಗಾಯನ ಕಛೇರಿಯೊಂದರಲ್ಲಿ, ತಾವೇ ವಿನ್ಯಾಸ ಗೊಳಿಸಿದ ಏಳು ತಂತಿಗಳ ಪಿಟೀಲು ಬಳಸಿ ಸಂಗೀತ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಕ್ಕೆ ಕಾರಣೀಭೂತರಾಗುತ್ತಾರೆ. ಅಂದಿನ ಸಭೆಯಲ್ಲಿ ಉಪಸ್ಥಿತರಿದ್ದ ಮತ್ತೊಬ್ಬ ಮಹಾನ್ ಸಂಗೀತ ಸಾಧಕರಾದ ಶ್ರೀ ವೀಣಾ ಶೇಷಣ್ಣನವರು ಚೌಡಯ್ಯನವರ ಈ ಏಳು ತಂತಿಯ ಪಿಟೀಲಿನ ಬಗ್ಗೆ ಸಂತಸ ಪಟ್ಟು ಅವರ ಸಾಧನೆಯನ್ನು ಕೊಂಡಾಡುತ್ತಾರೆ.
ಗುರು ಬಿಡಾರಂ ಕೃಷ್ಣಪ್ಪನವರ ಪ್ರಸನ್ನ ಸೀತಾ ರಾಮ ಮಂದಿರ ದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಗಾಯನ, ಪಿಟೀಲು, ವೀಣೆ ಮತ್ತು ಕೊಳಲು ತರಬೇತಿ ನೀಡಿರುವುದನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಚೌಡಯ್ಯನವರು ಮೈಸೂರಿನಲ್ಲಿ ಅಯ್ಯನಾರ್ ಸಂಗೀತ ಮಹಾವಿದ್ಯಾಲಯವನ್ನು ಸ್ಥಾಪಿಸಿದ್ದಲ್ಲದೇ ಅದರ ಮೂಲಕ ಸರ್ಕಾರದ ವಿದ್ಯಾರ್ಥಿವೇತನದೊಂದಿಗೆ ಅನೇಕ ಅಂಧ ವಿದ್ಯಾರ್ಥಿಗಳಿಗೆ ಸಂಗೀತಾಭ್ಯಾಸವನ್ನು ಮಾಡಿಸುತ್ತಾರೆ. ಸಂಗೀತದ ಜೊತೆಯಲ್ಲೇ ಅಭಿನಯದಲ್ಲೂ ಆಸಕ್ತಿ ಹೊಂದಿದ್ದ ಚೌಡಯ್ಯನವರು ಅನೇಕ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ ನಂತರ ವಾಣಿ ಎಂಬ ಸಿನಿಮಾವನ್ನು ನಿರ್ಮಿಸಿ ಅದರಲ್ಲಿ ಮುಖ್ಯಪಾತ್ರವನ್ನು ನಿರ್ವಹಿಸುತ್ತಾರೆ.
ದೇಶಾದ್ಯಂತ ಸಂಚರಿಸಿ ತಮ್ಮ ಪಿಟೀಲುವಾದನದ ನಾದ ಸುಧೆಯನ್ನು ಸಂಗೀತಾಸಕ್ತರ ತೃಷೆಯನ್ನು ತಣಿಸಿದ್ದಲ್ಲದೇ, ಕರ್ನಾಟಕ ಸಂಗೀತದಲ್ಲಿ ವಿಶಿಷ್ಟಸಾಧನೆಯನ್ನು ಮಾಡಿದ್ದಕ್ಕಾಗಿ ಸರ್ಕಾರ ಮತ್ತು ಹತ್ತು ಹಲವಾರು ಸಂಸ್ಥೆಗಳಿಂದ ಸಂಗೀತ ಮತ್ತು ನಾಟಕ ಅಕಾಡೆಮಿಗಳ ಪ್ರಶಸ್ತಿಗೂ ಭಾಜನರಾಗಿದ್ದ ಚೌಡಯ್ಯವನರು ತಮ್ಮ 72 ನೇ ವಯಸ್ಸಿನಲ್ಲಿ 19 ಜನವರಿ 1967 ರಂದು ವಯೋಸಹಜವಾಗಿ ನಿಧನರಾರುವ ಮೂಲಕ ಕರ್ನಾಟಕ ಸಂಗೀತ ಕ್ಷೇತ್ರದ ಮಿನುಗು ತಾರೆಯೊಂದು ಮರೆಯಾಗುತ್ತದೆ. ಅವರ ನಂತರ ಅವರ ಮೊಮ್ಮಗರಾಗಿದ್ದ ಅಮರನಾಥ್ ಅರ್ಥಾತ್ ಅಂಬರೀಶ್ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಪಳಗಿ ಕನ್ನಡದ ಹೆಸರಾಂತ ಚಿತ್ರನಟರಾಗಿದ್ದಲ್ಲದೇ, ರಾಜಕೀಯಕ್ಕೆ ಧುಮುಕಿ, ಸಾಂಸದ ಮತ್ತು ಶಾಸಕರಾಗಿ, ಕೇಂದ್ರ ಮತ್ತು ರಾಜ್ಯಸರ್ಕಾರದಲ್ಲಿ ಕೆಲ ಕಾಲ ಮಂತ್ರಿಗಳು ಆಗಿದ್ದರು. ಚೌಡಯ್ಯನವರ ಮತ್ತೊಬ್ಬ ಮೊಮ್ಮಗ ಚಂದನ್ ಕುಮಾರ್, ತಮ್ಮ ತಾತನಂತೆಯೇ ಪಿಟೀಲು ವಾದಕರಾಗಿ ತಾತನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಅಂತಹ ಮಹಾನ್ ಸಾಧಕರಾಗಿದ್ದ ಶ್ರೀ ಪಿಟೀಲು ಚೌಡಯ್ಯನವರ ಸಾಧನೆ ಮತ್ತು ಹೆಸರನ್ನು ಅಜರಾಮರವಾಗಿಸಬೇಕು ಎಂಬ ನಿಟ್ಟಿನಲ್ಲಿ ಕೆ.ಕೆ ಮೂರ್ತಿಗಳು ಮಲ್ಲೇಶ್ವರದ 16ನೇ ಅಡ್ಡರಸ್ತೆಯಲ್ಲಿದ್ದ ಗಾಯತ್ರಿ ಪಾರ್ಕ್ ಸಮೀಪದಲ್ಲೇ ಸ್ಥಳೀಯ ಮಕ್ಕಳ ನೆಚ್ಚಿನ ಆಟದ ಮೈದಾನವಾಗಿದ್ದ ಇದ್ದ ವೈಟ್ ಫೀಲ್ಡ್ ಎಂದೇ ಪ್ರಸಿದ್ಧವಾಗಿದ್ದ ಸ್ಥಳವನ್ನು ಸಾಂಸ್ಕೃತಿಕ ಕಟ್ಟಡದ ನಿರ್ಮಾಣಕ್ಕಾಗಿ ಗುರುತು ಮಾಡಿಕೊಂಡು, ತಮ್ಮ ಬಿಡಿಎ ಅಧ್ಯಕ್ಷಗಿರಿಯ ಅಧಿಕಾರದ ಪ್ರಭಾವವನ್ನು ಬಳಸಿ ಬೆಂಗಳೂರು ಮಹಾನಗರ ಪಾಲಿಕೆಯಿಂದ 99 ವರ್ಷಗಳ ಕಾಲಕ್ಕೆ ಆ ಸ್ಥಳವನ್ನು ಭೋಗ್ಯಕ್ಕೆ ಪಡೆದುಕೊಳ್ಳುತ್ತಾರೆ.
ಈ ಸ್ಮಾರಕ ಭವನ ಅತ್ಯಂತ ವೈಶಿಷ್ಯವಾಗಿರಬೇಕೆಂದು ನಿರ್ಧರಿಸಿ, ಅಂದಿನ ಕಾಲದಲ್ಲೇ ಅನೇಕ ವೈಶಿಷ್ಟ್ಯ ಪೂರ್ಣ ಕಟ್ಟಡದ ವಿನ್ಯಾಸಕ್ಕ ಹೆಸರುವಾಸಿಯಾಗಿದ್ದ ಶ್ರೀ ಎಸ್.ಎನ್. ಮೂರ್ತಿ ಅವರನ್ನು ವಾಸ್ತುಶಿಲ್ಪಿಯಾಗಿ ನೇಮಿಸಿಕೊಂಡು ಪಿಟೀಲು ಚೌಡಯ್ಯನವರ ಸ್ಮಾರಕ ಭವನವಾಗಿದ್ದರಿಂದ ಇಡೀ ಕಟ್ಟಡವನ್ನು ವಯಲೀನ್ ಆಕಾರದಲ್ಲೇ ವಿನ್ಯಾಸ ಮಾಡಿಸಿ, ಅಂದಿನ ರಾಷ್ಟ್ರಪತಿಗಳಾಗಿದ್ದ ಶ್ರೀ ವಿ.ವಿ. ಗಿರಿ ಅವರಿಂದ ಶಿಲಾನ್ಯಾಸವನ್ನೂ ಮಾಡಿಸುತ್ತಾರೆ. ಆದರೆ ಈ ಸ್ಮಾರಕ ಭವನದ ನಿರ್ಮಾಣದ ಯೋಜನೆಯನ್ನು ಕೈಗೆತ್ತಿಕೊಂಡಾಗ ಅವರ ಬಳಿ ಹೆಚ್ಚಿನ ಹಣ ಇರದ ಕಾರಣ, ಆ ಕಟ್ಟಡದ ನಿರ್ಮಾಣಕ್ಕಾಗಿ ಸಾರ್ವಜನಿಕರಲ್ಲಿ ದೇಣಿಗೆ ಸಂಗ್ರಹಿಸಲು ನಿರ್ಧರಿಸಿದರೂ, ಕೇವಲ ಸಾರ್ವಜನಿಕರ ದೇಣಿಗೆಯಿಂದ ಮಾತ್ರವೇ ಕಟ್ಟಡವನ್ನು ಪೂರ್ಣಗೊಳಿಸಲು ಸಾದ್ಯವಿಲ್ಲದ ಕಾರಣ, ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಗುಂಡೂರಾವ್ ಅವರೊಂದಿಗೆ ಇದ್ದ ತಮ್ಮ ಸ್ನೇಹದಿಂದಾಗಿ ಸರ್ಕಾರದ ಕಡೆಯಿಂದ 20 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಲ್ಲದೇ, ಹೆಚ್ಚಿನ ಹಣಕ್ಕಾಗಿ ಸಿಂಡಿಕೇಟ್ ಬ್ಯಾಂಕ್ ನಿಂದ 5 ಲಕ್ಷ ರೂಪಾಯಿ ಸಾಲವನ್ನು ತೆಗೆದುಕೊಳ್ಳುತ್ತಾರೆ.
ವಯಲಿನ್ ಆಕಾರದಲ್ಲಿ ಅಷ್ಟು ದೊಡ್ಡ ಕಟ್ಟಡವನ್ನು ಕಟ್ಟುವುದು ನಿಜಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿ ಎಂಟು ಹತ್ತು ಬಾರಿ ಭಾಗಶಃ ಒಡೆದು ಮತ್ತೆ ಕಟ್ಟಿ ಸುಮಾರು 7 ವರ್ಷಗಳ ಸತತ ಪ್ರಯತ್ನದ ನಂತರವೇ ಚೌಡಯ್ಯ ಸ್ಮಾರಕ ಭವನ ಈಗಿನ ರೂಪವನ್ನು ತಾಳುತ್ತದೆ. ಆ ಕಟ್ಟಡದ ಮೇಲೆ ಅಂದಿನ ಕೆಇಬಿ ಸಿಬ್ಬಂದಿಯ ಸಹಾಯದಿಂದ ಪಿಟೀಲಿನ ತಂತಿಯಂತೆ ಕಾಣುವ ಸಲುವಾಗಿ ಅಲ್ಯೂಮಿನಿಯಂ ತಂತಿಯನ್ನು ಜೋಡಿಸಲಾಗುತ್ತದೆ. ಹೀಗೆ ಅಂದಿನ ಕಾಲಕ್ಕೇ ಸುಮಾರು 36 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಮಾರು 1100 ಆಸನ ಸಾಮರ್ಥ್ಯವುಳ್ಳ, ಕಟ್ಟಡದ ಆವರಣದಲ್ಲಿಯೇ ಸುಮಾರು 500 ಕಾರ್‌ಗಳನ್ನು ನಿಲ್ಲಿಸುವಷ್ಟು ಸ್ಥಳದೊಂದಿಗೆ ವಿಶಿಷ್ಟವಾದ ಕಟ್ಟದ ಸಿದ್ಧವಾಗಿ ಪಂಡಿತ್ ನೆಹರು ಅವರ ಜನ್ಮದಿನವಾದ ನವೆಂಬರ್ 14 1980ರಲ್ಲಿ ಅಧಿಕೃತವಾಗಿ ಉದ್ಘಾಟನೆಗೊಳ್ಳುತ್ತದೆ.
ಸುಸಜ್ಜಿತ ಸಭಾಭವನ, ಸಾಂಸ್ಕೃತಿಕ ಕೇಂದ್ರ ಎಂಬೆಲ್ಲಾ ವಿಶೇಷತೆಗಳಿಂದ ಕೂಡಿರುವ, ಸಂಗೀತಗಾರನ ನೆನಪಿಗಾಗಿ ಮೀಸಲಾಗಿರುವ ಮತ್ತು ಅವರು ನುಡಿಸುತ್ತಿದ್ದ ವಾದ್ಯ ಪಿಟೀಲಿನಂತೆ ವಿನ್ಯಾಸದಲ್ಲಿರುವ ವಿಶ್ವದ ಏಕೈಕ ಸಭಾಂಗಣ ಇದಾಗಿರುವುದು ಕನ್ನಡಿಗರ ಹೆಮ್ಮೆಯ ವಿಷಯವಾಗಿದೆ. ಇನ್ನು ಸಭಾಂಗಣದ ವೇದಿಕೆ, ರಂಗ ಸಜ್ಜಿಕೆ, ಬೆಳಕು ಮತ್ತು ಧ್ವನಿವರ್ಧಕಗಳು ತಾಂತ್ರಿಕವಾಗಿ ಅತ್ಯುತ್ತಮವಾಗಿದ್ದು, ಆ ವೇದಿಕೆಯ ಮೇಲೆ ಕಲಾ ಪ್ರದರ್ಶನ ಮಾಡುವ ಕಲಾವಿದರುಗಳಿಗೂ ಮತ್ತು ಅದನ್ನು ನೋಡಲು ಬರುವ ಪ್ರೇಕ್ಷಕರಿಗೂ ವಿಶಿಷ್ಟವಾದ ಅನುಭವವನ್ನು ಕೊಡುವ ಕಾರಣ, ಇಲ್ಲಿ ಕಾರ್ಯಕ್ರಮಗಳನ್ನು ಕೊಡುವುದು ಪ್ರತಿಷ್ಟೆಯ ಸಂಕೇತ ಎಂದೇ ಅನೇಕ ಕಲಾವಿದರುಗಳು ಭಾವಿಸುತ್ತಾರೆ,

ಅಂದಿನಿಂದ ಇಂದಿನವರೆಗೂ ಈ ಸಭಾಂಗಣದಲ್ಲಿ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಕಚೇರಿಗಳು, ಜಾಝ್, ಬ್ಯಾಲೆಗಳು, ಸಾಂಪ್ರದಾಯಿಕ ಮತ್ತು ಸಮಕಾಲೀನ ನೃತ್ಯ ಪ್ರದರ್ಶನಗಳು, ಫ್ಯಾಶನ್ ಶೋಗಳು, ನಾಟಕಗಳು, ಜುಗಲ್ಬಂದಿಗಳು, ಗಜಲ್ಗಳು, ಅಂತರಾಷ್ಟ್ರೀಯ ಸಂಗೀತ ಉತ್ಸವಗಳು, ಪದವಿ ಸಮಾರಂಭಗಳು ಮತ್ತು ಶಾಲಾ ದಿನದ ಕಾರ್ಯಕ್ರಮಗಳು ನಿರಂತವಾಗಿ ನಡೆಯುತ್ತಲೇ ಇದ್ದು, ಡಿ. ಕೆ. ಪಟ್ಟಮ್ಮಾಳ್, ಸೆಮ್ಮಂಗುಡಿ ಶ್ರೀನಿವಾಸ್ ಅಯ್ಯರ್, ಉಸ್ತಾದ್ ಅಮ್ಜದ್ ಅಲಿ ಖಾನ್, ಎಲ್. ಸುಬ್ರಮಣಿಯಂ, ವಿ. ದೊರೆಸ್ವಾಮಿ ಅಯ್ಯಂಗಾರ್, ಮಹಾರಾಜಪುರಂ ಸಂತಾನಂ, ಎಂ. ಗಂಗೂಬಾಯಿ ಹಾನಗಲ್, ಯು. ಶ್ರೀನಿವಾಸ್ ರಂತಹ ಸಾವಿರಾರು ಖ್ಯಾತ ಕಲಾವಿದರುಗಳು ಇಲ್ಲಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಿರುವುದಲ್ಲದೇ, ಸಾವಿರಾರು ಕಲಾವಿದರರುಗಳಿಗೆ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಇದೇ ವೇದಿಕೆಯಲ್ಲಿ ಪ್ರದಾನ ಮಾಡಲಾಗಿರುವುದು ವಿಶೇಷವಾಗಿದೆ. ಅದೂ ಅಲ್ಲದೇ ಇಂದಿನ ತಲೆಮಾರಿನ ಸಾವಿರಾರು ಕಲಾವಿದರುಗಳಿಗೆ ಈ ಸಭಾಂಗಣ ಅಚ್ಚುಮೆಚ್ಚಿನ ತಾಣವಾಗಿದ್ದು, ಇಲ್ಲಿಯ ಕಾರ್ಯಕ್ರಮಕ್ಕೆ ತಾಮುಂದೂ ನಾಮುಂದು ಎಂದು ಮುಗಿಬೀಳುತ್ತಿರುವ ಕಾರಣ, ಸದಾ ಕಾಲವೂ ಈ ಸಭಾಂಗಣದಲ್ಲಿ ಒಂದಲ್ಲಾ ಒಂದು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಈ ಬೃಹತ್ ಭವನದಲ್ಲಿ ಡಿಜಿಟಲ್ ಕ್ರಾಸ್ ಓವರ್, ಗ್ರಾಫಿಕ್ ಇಕ್ವಿಲೈಝರ್, ಮಾಡರ್ನ್ ಮಿಕ್ಸಿಂಗ್ ಕನ್ಸೋಲರ್ ಮತ್ತು ಧ್ವನಿಘಟಕಗಳ ಸುಸಜ್ಜಿತ ವ್ಯವಸ್ಥೆಯಿದ್ದು ಇದರ ನಿರ್ವಹಣೆಗೆಂದೇ ತಿಂಗಳಿಗೆ ಸುಮಾರು 4 ಲಕ್ಷ ರೂಪಾಯಿ ವೆಚ್ಚವನ್ನು ಮಾಡಲಾಗುವ ಮೂಲಕ ಸದಾಕಾಲವೂ ಈ ಭವನ ಅಧುನಿಕವಾಗಿ ಸುಸ್ಥಿತಿಯಲ್ಲಿಟ್ಟಿಕೊಂಡಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.
ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯುತ್ತಿರಬಹುದಾದ ಯಾವುದಾದರೂ ಒಂದು ಕಾರ್ಯಕ್ರಮವನ್ನು ವೀಕ್ಷಿಸಿ, ಹಾಗೇ ಅದರ ಪಕ್ಕದಲ್ಲಿರುವ ತಿರುಮಲ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿ ಆ ಸಪ್ತಗಿರಿ ಒಡೆಯ ವೇಂಕಟೇಶ್ವರಸಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ
🙏🙏👌👌👍👍
LikeLiked by 1 person
[…] ಪ್ರದೇಶವೇ ವೈಯ್ಯಾಳೀಕಾವಲ್ . ಕಳೆದ ವಾರ ಚೌಡಯ್ಯ ಸ್ವಾರಕ ಭವನದ ಬಗ್ಗೆಯ ಲೇಖನದಲ್ಲಿ ಗಾಯತ್ರಿಪಾರ್ಕ್ […]
LikeLike