ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನ ವಿಧಾನಸೌಧದಲ್ಲಿ ಜನಪ್ರತಿನಿಧಿಗಳು ಕುಳಿತು ರಾಜ್ಯಭಾರ ನಡೆಸಿದರೆ, ಅವರು ನಡೆಸುತ್ತಿರುವ ಆಡಳಿತ ಸರಿ ಇದೆಯೇ ಎಂದು ನೋಡಿಕೊಳ್ಳುವ ಸಲುವಾಗಿಯೇ ಕೇಂದ್ರಸರ್ಕಾರದಿಂದ ನಿಯೋಜಿತವಾಗಿರುವ ರಾಜ್ಯಪಾಲರು ಈ ಶಕ್ತಿಕೇಂದ್ರದಿಂದ ಕೂಗಳತೆಯೇ ದೂರದಲ್ಲೇ ಇರುವ ರಾಜಭವನದಲ್ಲಿ ವಾಸಿಸುತ್ತಿದ್ದಾರೆ. ಇಂತಹ ರಾಜಭವನ ನಿರ್ಮಾಣದ ಹಿಂದೆಯೂ ರೋಚಕವಾದ ಇತಿಹಾಸವಿದ್ದು ಆದರ ಸಂಪೂರ್ಣ ಚರಿತ್ರೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
1799 ರಲ್ಲಿ ಟಿಪ್ಪು ಸುಲ್ತಾನನ ಆಳ್ವಿಕೆ ಕೊನೆಗೊಂಡ ನಂತರ ಕೆಲವು ವರ್ಷಗಳ ಕಾಲ ಶ್ರೀರಂಗಪಟ್ಟಣದಲ್ಲಿಯೇ ನೆಲೆಗೊಂಡಿದ್ದ ಬ್ರಿಟಿಷ್ ಪಡೆಗಳು ನಂತರ ಅವರಿಗೆ ಕೊಡುವ ಯುದ್ದದ ಭತ್ಯೆ ನಿಂತು ಹೋದ ಕಾರಣ ಕ್ಷಿಪ್ರವಾಗಿ ಸಿಪಾಯಿದಂಗೆ ನಡೆಸಿದ ಕಾರಣ, ಶ್ರಿರಂಗ ಪಟ್ಟಣ ನಮಗೆ ಸುರಕ್ಷಿತಸ್ಥಳವಲ್ಲ ಎಂದು ನಿರ್ಧರಿಸಿದ ಬ್ರಿಟೀಷರು, ಬೆಂಗಳೂರಿನ ಆಹ್ಲಾದಕರ ವಾತಾವರಣದಿಂದ ಆಕರ್ಷಿತಗೊಂಡು ತಮ್ಮ ಆಡಳಿತವನ್ನು ಬೆಂಗಳೂರಿಗೆ ವರ್ಗಾಯಿಸಿದ್ದಲ್ಲದೇ, ಕೆಂಪೇಗೌಡರು ಕಟ್ಟಿದ್ದ ಹಳೇ ಬೆಂಗಳೂರನ್ನು ಹೊರತು ಪಡಿಸಿ, ಹಲಸೂರು ಕೆರೆಯ ಆಸುಪಾಸಿನಲ್ಲಿ ತಮ್ಮ ಮಿಲಿಟರಿ ಕಂಟೋನ್ಮೆಂಟ್ ಸ್ಥಾಪಸಿದ್ದಲ್ಲದೇ, ಮದ್ರಾಸಿನಿಂದ ಬೆಂಗಳೂರಿಗೆ ರೈಲ್ವೇ ಸಂಪರ್ಕವನ್ನು ಮೈಸೂರು ಮಹಾರಾಜರ ನೆರವಿನಿಂದ ಮಾಡಿಸಿ ಈಗಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ರಿಚ್ಮಂಡ್ ರಸ್ತೆ ಸುತ್ತಮುತ್ತಲೂ ಬ್ರಿಟಿಷರ ಮಿಲಿಟರಿ ನೆಲೆಯಾಗಿ ಹೆಚ್ಚಿನ ಸಂಖ್ಯೆಯ ಯುರೋಪಿಯನ್ನರು ಮತ್ತು ಆಂಗ್ಲೋ-ಇಂಡಿಯನ್ನರು ಮತ್ತು ಮಿಷನರಿಗಳ ನೆಲೆಯಾಗಿದ್ದಲ್ಲದೇ, ಅವರ ಮೋಜು ಮಸ್ತಿಗೆಂದು ವಿವಿಧ ರೀತಿಯ ಕ್ಲಬ್ಬುಗಳು ಆರಂಭವಾಗಿ ಕೇವಲ ಅವರಿಗಷ್ಟೇ ಪ್ರವೇಶವಿತ್ತು.
ಇಂತಹ ಸಂದರ್ಭದಲ್ಲಿ ದೂರದ ಇರಾನ್ ನಿಂದ ಕುದುರೆ ವ್ಯಾಪಾರಕ್ಕೆಂದು ಸಮುದ್ರ ಮೂಲಕ ಕರ್ನಾಟಕದ ಕರಾವಳಿ ಪ್ರಾಂತ್ಯಕ್ಕೆ ಬಂದು ನಂತರ ಕೊಡಗು ಮತ್ತು ಮೈಸೂರಿನ ಮೂಲಕ ಬೆಂಗಳೂರಿಗೆ ಬಂದ ಅಗಾ ಅಲಿ ಆಸ್ಕರ್ ಇಲ್ಲಿನ ಹವಾಮಾನಕ್ಕೆ ಮನಸೋತು ಇಲ್ಲಿಯೇ ನೆಲೆಸಿದ್ದಲ್ಲದೇ, ಕೆಲವೇ ಸಮಯದಲ್ಲಿ ಮಾರ್ಕ್ ಕಬ್ಬನ್ ಆದಿಯಾಗಿ ಅನೇಕ ಬ್ರಿಟೀಷ್ ಅಧಿಕಾರಿಗಳ ಗೆಳೆತನ ಬೆಳೆಸಿಕೊಂಡು ಅವರೊಂದಿಗೆ ರಾತ್ರಿಯ ಕ್ಲಬ್ಬುಗಳಲ್ಲಿ ಮೋಜು ಮಸ್ತಿ ಮಾಡುವಷ್ಟರ ಮಟ್ಟಿಗೆ ಬೆಳೆದು ಬಿಡುತ್ತಾನೆ.
ಇದೇ ಅಲಿ ಅಸ್ಕರ್ ಮುಂದೆ ಪ್ರಸ್ತುತ ಈ ರಾಜ್ಯಪಾಲರ ನಿವಾಸ, ರಾಜ್ಯ ಅತಿಥಿ ಗೃಹವಾಗಿರುವ ಬಾಲಾಬ್ರೂಯಿ ಮತ್ತು ಲೀಲಾ ನಿವಾಸ್ ಸೇರಿದಂತೆ ಒಟ್ಟು ಐದು ಸುಂದರವಾದ ಬಂಗಲೆಗಳನ್ನು ನಿರ್ಮಿಸಿ ಅವುಗಳಿಗೆ ಬೆಹೆಷ್ಟ್, ಅಲಿಯಾಬಾದ್, ಹುಸೇನಾಬಾದ್, ಅಜಿಮಾಬಾದ್ ಮತ್ತು ಅಸ್ಕರಾಬಾದ್ ಎಂದು ಹೆಸರಿಸಿರುತ್ತಾನೆ. 1834 ರಿಂದ 1861 ರ ವರೆಗೆ ಬ್ರಿಟಿಷರಿಗೆ ಮೈಸೂರು ಪ್ರಾಂತ್ಯಗಳ ಕಮಿಷನರ್ ಆಗಿದ್ದ ಸರ್ ಮಾರ್ಕ್ ಕಬ್ಬನ್ ಅವರು ಅರೇಬಿಯನ್ ಕುದುರೆಗಳನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದದಲ್ಲದೇ ಅಲಿ ಅಸ್ಗರ್ ಗೆಳೆತನದಿಂದ ಅವರ ಲಾಯದಲ್ಲಿ ಕನಿಷ್ಠ ಐವತ್ತು ಕುದುರೆಗಳು ಇರುತ್ತವೆ. ಇದೇ ಗೆಳೆತನದಲ್ಲೇ ಅಂದಿನ ಹೈಗ್ರೌಂಡ್ಸ್ ಪ್ರದೇಶದಲ್ಲಿ ಸುಮಾರು 92.3 ಎಕರೆಯಷ್ಟು (67.6 ಎಕರೆ ಅಳತೆಯಲ್ಲಿ ಕಟ್ಟಡವಿದ್ದರೆ, ಪಶ್ಚಿಮಕ್ಕೆ ಕಟ್ಟಡಗಳಿಲ್ಲದ 24.7 ಎಕರೆಯಷ್ಟು ಖಾಲಿ ಜಾಗ) ಪ್ರದೇಶದಲ್ಲಿ ಒಂದೇ ಅಂತಸ್ತಿನ ಸುಂದರ ಕಟ್ಟಡವಾಗಿ ನಿರ್ಮಾಣವಾಗಿದ್ದ ಆ ಕಟ್ಟಡವನ್ನು ಅಲಿ ಅಸ್ಗರ್ ನಿಂದ ಸರ್ಕಾರಿ ಅನುದಾನದ ಮೂಲಕ ಖರೀಧಿಸಿ 1840 ಮತ್ತು 1842 ರ ನಡುವೆ ಈ ಬಂಗಲೆಯನ್ನು ಔಟ್ ಹೌಸ್ ಮತ್ತು ಲಾಯಗಳೊಂದಿಗೆ ನಿರ್ಮಿಸಿ ಕೆಲ ಕಾಲ ವಾಸಿಸುತ್ತಿರುತ್ತಾರೆ. ಕಬ್ಬನ್ ಹೋದ ನಂತರ, ಅವರ ಬಂಗಲೆ ಮತ್ತು ಇತರ ಆಸ್ತಿಯು ಅವರ ಏಜೆಂಟ್ ಮೇಜರ್ ಫ್ರೆಡ್ರಿಕ್ ಗ್ರೇ ಅವರ ಉಸ್ತುವಾರಿಗೆ ಬಂದಾಗ ಆತ ಆ ಬಂಗಲೆಯನ್ನು ಮಾರಾಟಕ್ಕೆ ಇಟ್ಟಾಗ, ಕಬ್ಬನ್ ಉತ್ತರಾಧಿಕಾರಿಯಾದ ಲೆವಿನ್ ಬೆಂಥೆಮ್ ಬೌರಿಂಗ್ ನವೆಂಬರ್ 13, 1862 ರಂದು ಆ ಕಟ್ಟಡವನ್ನು ಅಧಿಕೃತವಾಗಿ ಅಂದಿನ ಬ್ರಿಟಿಷ್ ಸರ್ಕಾರದ ಪರವಾಗಿ ಖರೀಧಿಸಿ ಅದನ್ನು ಕಮಿಷನರ್ ಅವರ ಅಧಿಕೃತ ನಿವಾಸವನ್ನಾಗಿ ಮಾಡಲಾಗುತ್ತದೆ.
1874 ರಲ್ಲಿ ಪ್ರಿನ್ಸ್ ಆಫ್ ವೇಲ್ಸ್, ನಂತರ ಕಿಂಗ್ ಎಡ್ವರ್ಡ್ VII ಭಾರತಕ್ಕೆ ಭೇಟಿ ನೀಡಿದಾಗ ಈ ಕಟ್ಟಡದಲ್ಲಿ ಬಾಲ್ ರೂಮ್ ಒಂದನ್ನು ನಿರ್ಮಿಸಿ ಅದಕ್ಕೆ ರಾಜಕುಮಾರನನ್ನು ಬಾಂಬೆಗೆ ಕರೆತಂದ ಹಡಗಿನ ನೆನಪಿನಾರ್ಥವಾಗಿ ಸೆರಾಪಿಸ್ ರೂಮ್ ಎಂದು ಕರೆಯಲಾಗುತ್ತದೆ. ದೊಡ್ಡ ಕಿಟಕಿಗಳನ್ನು ಹೊಂದಿದ್ದ ಆ ಕೋಣೆಯಲ್ಲಿ ಬಿಳಿ ಮತ್ತು ಚಿನ್ನದ ಬಣ್ಣದಲ್ಲಿ ಅಲಂಕರಿಸಿದ್ದಲ್ಲದೇ, ಅಲ್ಲಿನ ದರ್ಬಾರ್ ಹಾಲಿಗೆ ಕೆಂಪು ಮತ್ತು ಚಿನ್ನದ ಭವ್ಯವಾದ ವಸ್ತ್ರದಿಂದ ಮರು ರೂಪಿಸಲಾಗುತ್ತದೆ. ಇದೇ ಸಮಯದಲ್ಲಿಯೇ ಬಿಲಿಯರ್ಡ್ಸ್ ಟೇಬಲ್ ಸಹ ಅಳವಡಿಸಲಾಗುತ್ತದೆ. 1895-96ರಲ್ಲಿ ಸರ್ ವಿಲಿಯಂ ಮ್ಯಾಕ್‌ವರ್ತ್ ಯಂಗ್ ಅವರು ಇಲ್ಲಿ ವಾಸವಿದ್ದಾಗ, ಕಟ್ಟಡ ಸುತ್ತಲೂ ಮೋಟು ಗೋಡೆಯನ್ನು ಕಟ್ಟಿ ದೊಡ್ಡದಾದ ಬಾಲಸ್ಟ್ರೇಡ್ (ಹಳೆಯ ಎರಕಹೊಯ್ದ ಕಬ್ಬಿಣದ ಬೇಲಿ) ಜೊತೆಗೆ ಕಾವಲುಗಾರ ಕೊಠಡಿಯನ್ನು ಕಟ್ಟಲಾಗುತ್ತದೆ.
ಕರ್ನಲ್ ಸರ್ ಡೊನಾಲ್ಡ್ ರಾಬರ್ಟ್‌ಸನ್ ನಿವಾಸಿಯಾಗಿದ್ದಾಗ ಅಲ್ಲಿನ ಸೇವಕರಿಗೆ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿದರೆ, ಸರ್ ಹಗ್ ಡಾಲಿ ಅವರ ಕಾಲದಲ್ಲಿ ಆ ಗುಡಿಸಲುಗಳ ಜಾಗದಲ್ಲಿ ಸುಸಜ್ಜಿತವಾದ ಕಟ್ಟಡಗಳು ನಿರ್ಮಿಸಿದ್ದಲ್ಲದೇ ಅವರ ಕಾಲದಲ್ಲೇ ಡ್ಯಾನ್ಸಿಂಗ್ ಹಾಲ್‌ನ ಮೇಲ್ಛಾವಣಿಯನ್ನು ಎತ್ತರಿಸಿದರು ಮತ್ತು ಹಳೆಯ ಕಬ್ಬನ್ ಅಸೆಂಬ್ಲಿ ಕೊಠಡಿಗಳು ಮತ್ತು ಕೋರ್ಟ್‌ಗಳ ವಸ್ತುಗಳನ್ನು ಬಳಸಿಕೊಂಡು ನೆಲದ ಮೇಲೆ ಬೋರ್ಡ್‌ಗಳನ್ನು ಅಳವಡಿಸಿದ್ದರು. ಅದೇ ರೀತಿಯ ಹಳೆಯ ಅಡುಗೆ ಮನೆಯನ್ನು ಸುಂದರವಾದ ತೇಗದ ಮರದ ಫಲಕದೊಂದಿಗೆ ಪ್ರಸ್ತುತ ಊಟದ ಮನೆಯಾಗಿ ಆಗಿ ಪರಿವರ್ತಿಸಲಾಯಿತು. ಮುಂದೆ,1909 ರಲ್ಲಿ ಸರ್ ಸ್ಟುವರ್ಟ್ ಮಿಟ್‌ಫೋರ್ಡ್ ಫ್ರೇಸರ್ ನಿವಾಸಿಯಾಗಿದ್ದಾಗ, ಆ ಕಟ್ಟಡಕ್ಕೆ ವಿದ್ಯುದ್ದೀಕರಣವನ್ನು ಮಾಡಲಾಗುತ್ತದೆ. 1916-1920ರ ಶ್ರೀ ಕಾಬ್‌ನ ಸಮಯದಲ್ಲಿ ಎಡಭಾಗದಲ್ಲಿ ಚಿಕ್ಕ ವರಾಂಡಾ ಮತ್ತು ಮುಖಮಂಟಪವನ್ನು ನಿರ್ಮಿಸಲಾಗುತ್ತದೆ. ಬ್ರಿಟಿಷರ ಅಸ್ತಿತ್ವದಲ್ಲಿರುವವರೆಗೂ ಈ ಕಟ್ಟಡದಲ್ಲಿ ಆವರವರ ಅನುಕೂಲಕ್ಕೆ ತಕ್ಕಂತೆ ಅನೇಕ ಬದಲಾವಣೆಗಳನ್ನು ಮಾಡಲಾಗುತ್ತದೆ.
15 ಆಗಸ್ಟ್ 1947ರಲ್ಲಿ ಭಾರತಕ್ಕೆ ಸ್ವಾತ್ರಂತ್ರ ಬಂದ ನಂತರ 565 ಸಣ್ಣ ಸಣ್ಣರಾಜ್ಯಗಳು ಸರ್ದಾರ್ ಪಟೇಲರ ನೇತೃತ್ವದಲ್ಲಿ ಒಕ್ಕೂಟರಾಷ್ಟ್ರ ಭಾಗವಾದಾಗ, ಬಹುತೇಕ ರಾಜ ಮಹಾರಾಜರುಗಳು ಆಯಾಯಾ ರಾಜ್ಯದ ರಾಜ್ಯಪಾಲರಾಗಿ ನೇಮಕಗೊಂಡಂತೆ ಮೈಸೂರು ಮಹಾರಾಗಿದ್ದ ಶ್ರೀ ಜಯ ಚಾಮರಾಜೇಂದ್ರ ಒಡೆಯರ್ ಅವರು ಕರ್ನಾಟಕದ ಮೊದಲ ರಾಜ್ಯಪಾಲರಾಗಿ ನೇಮಕಗೊಂಡಾಗ ಇದೇ ಕಟ್ಟಡ ಅವರ ಅಧಿಕೃತ ನಿವಾಸವಾಗಿ ಪರಿವರ್ತನೆಗೊಂಡಿದ್ದಲ್ಲದೇ, ರಾಜಭವನ ಎಂದು ಕರೆಯಲಾರಂಭಿಸಲಾಗುತ್ತದೆ. ಮೈಸೂರು ಮಹಾರಾಜರಿಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ತಮ್ಮದೇ ಅದ ಅನೇಕ ಸ್ವಂತ ಅರಮನೆಗಳಿದ್ದ ಕಾರಣ, ಅವರು ಈ ಕಟ್ಟಡವನ್ನು ಉಪಯೋಗಿಸದೇ ಹೋದಾಗ, ಇದೇ ಕಟ್ಟಡ ರಾಜ್ಯಸರ್ಕಾರದ ಅಧಿಕೃತ ಅತಿಥಿಗೃಹವಾಗಿ ಪರಿವರ್ತನೆಗೊಂಡು ದೇಶದ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಕೇಂದ್ರ ಸರ್ಕಾರದ ಸಚಿವರು ಮತ್ತು ಇತರ ರಾಜ್ಯಗಳ ಮುಖ್ಯಮಂತ್ರಿಗಳಂತಹ ಗಣ್ಯರು ಉಳಿದುಕೊಳ್ಳುವಂತಹ ತಾಣವಾಗುತ್ತದೆ. ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ ಮತ್ತು ಕೆಲವು ವಿಶೇಷ ಸಂದರ್ಭಗಳಲ್ಲಿ ಇದೇ ಪ್ರದೇಶದಲ್ಲಿಯೇ ಸರ್ಕಾರದ ವತಿಯಿಂದಲೇ ಅಧಿಕೃತ ಪಾರ್ಟಿಗಳು ಆಯೋಜಿಸಿಲಾಗುತ್ತಿರುತ್ತದೆ. ಕಾಂಗ್ರೆಸ್ ಪಕ್ಷವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೇ ಕಟ್ಟಡವನ್ನು ತನ್ನ ಶಾಸಕಾಂಗ ಸಭೆಗಳಿಗೂ ಬಳಸಿಕೊಳ್ಳುತ್ತದೆ
1964ರಲ್ಲಿ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ಅವರರನ್ನು ಮದ್ರಾಸ್ ರಾಜ್ಯಪಾಲರಾಗಿ ವರ್ಗಾವಣೆ ಮಾಡಿದಾಗ, ಅವರ ಅಉತ್ತರಾಧಿಕಾರಿಯಾಗಿ ನೇಮಕಗೊಂಡ ಜನರಲ್ ಎಸ್ ಎಂ ಶ್ರೀನಾಗೇಶ್ ಅವರು ಈ ಕಟ್ಟಡವನ್ನು ತಮ್ಮ ನಿವಾಸಕ್ಕಾಗಿ ಸುಪರ್ಧಿಗೆ ತೆಗೆದುಕೊಂಡ ನಂತರ ಅಂದಿನಿಂದ ಇಂದಿನ ವರೆಗೂ ರಾಜ್ಯದ ರಾಜ್ಯಪಾಲರ ನಿವಾಸವಾಗಿ ರಾಜಭವನ ಎಂದೇ ಕರೆಯಲ್ಪಡುತ್ತಿದೆ. 1967ರಲ್ಲಿ ಶ್ರೀ ವಿ.ವಿ. ಗಿರಿ ಮತ್ತು ಶ್ರೀ ಜಿ.ಎಸ್. ಪಾಠಕ್ ಅವರ ಕಾಲದಲ್ಲಿ ಒಂದೇ ಅಂತಸ್ತಿನ ಕಟ್ಟಡದ ಮೇಲೆ ಮೂಲ ಕಟ್ಟಡದ ವಾಸ್ತುಶಿಲ್ಪದ ಶೈಲಿಗೆ ಕಿಂಚಿತ್ತೂ ಕುಂದು ಬಾರದಂತೆ ಎಚ್ಚರಿಕೆಯಿಂದ ಮೊದಲ ಮಹಡಿಯನ್ನು ಕಟ್ಟುವ ಮೂಲಕ ರಾಜಭವನವನ್ನು ವಿಸ್ತರಿಸಿ, ಅಲ್ಲಿ ದೇಶ ವಿದೇಶಗಳಿಂದ ತರಿಸಿದ ವರ್ಣಚಿತ್ರಗಳನ್ನು ಹಾಕಿಸುವ ಮೂಲಕ ಅದ್ಭುತವಾದ ಕಲಾ ಸಂಗ್ರಹವನ್ನಾಗಿ ಮಾಡಲಾಗಿದೆ.
1994-95ರ ಗವರ್ನರ್ ಆಗಿದ್ದ ಖುರ್ಷಿದ್ ಆಲಂ ಖಾನ್ ಅವರ ಕಾಲದಲ್ಲಿ ಸುಮಾರು 153 ವರ್ಷಗಳಷ್ಟು ಹಳೆಯದಾದ ಮುಖ್ಯ ಕಟ್ಟಡವನ್ನು ಬಲಪಡಿಸುವುದರ ಜೊತೆಗೆ, ಹೆಚ್ಚಿನ ಸೌಕರ್ಯಗಳನ್ನು ರಚಿಸಲಾಯಿತಲ್ಲದೇ, ಅಂದಿನ ಮದ್ರಾಸ್ ಟೆರೇಸ್ ಮೇಲ್ಛಾವಣಿಯ ಬದಲಾಗಿ RCC ಛಾವಣಿಯಿಂದ ಬದಲಾಯಿಸಲಾಯಿತು. ನಂತರ ರಾಜ್ಯಪಾಲರಾಗಿ ಬಂದ ಶ್ರೀಮತಿ ರಮಾದೇವಿ ಅವರು ಬ್ಯಾಂಕ್ವೆಟ್ ಹಾಲ್ ಅನ್ನು ಉತ್ತಮವಾಗಿ ನವೀಕರಿಸಿದ್ದಲ್ಲದೇ, ಅವರ ನೇತೃತ್ವದಲ್ಲಿಯೇ ಅಲ್ಲಿನ ಉದ್ಯಾನವನದಲ್ಲಿ ಲಾಲ್ ಬಾಗ್ ನಲ್ಲಿ ಇರುವಂತಹ ಗಾಜಿನ ಮನೆಯನ್ನು ನಿರ್ಮಿಸಲಾಗಿದೆ.
ಹೀಗೆ ಒಬ್ಬ ಖಾಸಗೀ ವ್ಯಕ್ತಿಯ ಅಭಿವ್ಯಕ್ತವಾಗಿ ನಿರ್ಮಾಣವಾದ ಆ ಭವ್ಯವಾದ ಕಟ್ಟಡ, ನಂತರ ದಿನಗಳಲ್ಲಿ ಬ್ರಿಟೀಷ್ ಅಧಿಕಾರಿಗಳ ಇಚ್ಚೆಯಂತೆ ಹತ್ತು ಹಲವಾರು ಬದಲಾವಣೆಗಳನ್ನು ಮಾಡಿಸಿಕೊಂಡು ವಿವಿಧ ಅಧಿಕಾರಿಗಳ ನಿವಾಸವಾಗಿ ಅಂದಿನ ಕಮಿಷಿನರ್ ಕಛೇರಿಯಾಗಿ, ಸ್ವಾತ್ರಂತ್ಯಾನಂತರ ರಾಜಭವನವಾಗಿ ರಾಜ್ಯಪಾಲರ ನಿವಾಸವಾಗಿರುವುದರ ಜೊತೆಗೆ ದೇಶ ವಿದೇಶಗಳಿಂದ ಬರುವ ಗಣ್ಯರಿಗೆ ಸರ್ಕಾರದ ಅಧಿಕೃತ ಅತಿಥಿಗೃಹವಾಗಿ ಇಂದಿಗೂ ತನ್ನ ಗಾಂಭೀರ್ಯವನ್ನು ಉಳಿಸಿಕೊಂಡು, ಒಂದು ಸುದೀರ್ಘವಾದ ಮತ್ತು ವಿಶಿಷ್ಟವಾದ ಇತಿಹಾಸದ ಸಂಕೇತವಾಗಿ ಉಳಿದು ಕೊಂಡಿರುವುದು ನಿಜಕ್ಕೂ ಆಭಿನಂದನಾರ್ಹವಾಗಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ
ಇದುವರೆವಿಗೂ ಕರ್ನಾಟಕ ರಾಜ್ಯದ ರಾಜ್ಯಪಾಲರುಗಳ ವಿವರಗಳು ಈ ರೀತಿಯಾಗಿದೆ
| ರಾಜ್ಯಪಾಲರುಗಳ ಹೆಸರು | ಅವಧಿ ಆರಂಭ | ಅವಧಿ ಮುಕ್ತಾಯ | |
| 1 | ಜಯಚಾಮರಾಜ ಒಡೆಯರ್ | 1 ನವೆಂಬರ್ 1956 | 4 ಮೇ 1964 |
| 2 | ಎಸ್. ಎಂ. ಶ್ರೀನಾಗೇಶ್ | 4 ಮೇ 1964 | 2 ಏಪ್ರಿಲ್ 1965 |
| 3 | ವಿ.ವಿ. ಗಿರಿ | 2 ಏಪ್ರಿಲ್ 1965 | 13 ಮೇ 1967 |
| 4 | ಗೋಪಾಲ್ ಸ್ವರೂಪ್ ಪಾಠಕ್ | 13 ಮೇ 1967 | 30 ಆಗಸ್ಟ್ 1969 |
| 5 | ಧರ್ಮ ವೀರ | 23 ಅಕ್ಟೋಬರ್ 1969 | 1 ಫೆಬ್ರವರಿ 1972 |
| 6 | ಮೋಹನ್ ಲಾಲ್ ಸುಖಾಡಿಯ | 1 ಫೆಬ್ರವರಿ 1972 | 10 ಜನವರಿ 1976 |
| 7 | ಉಮಾ ಶಂಕರ್ ದೀಕ್ಷಿತ್ | 10 ಜನವರಿ 1976 | 2 ಆಗಸ್ಟ್ 1977 |
| 8 | ಗೋವಿಂದ ನಾರಾಯಣ | 2 ಆಗಸ್ಟ್ 1977 | 15 ಏಪ್ರಿಲ್ 1983 |
| 9 | ಅಶೋಕನಾಥ್ ಬ್ಯಾನರ್ಜಿ | 16 ಏಪ್ರಿಲ್ 1983 | 25 ಫೆಬ್ರವರಿ 1989 |
| 10 | ಪೆಂಡೆಕಂಟಿ ವೆಂಕಟಸುಬ್ಬಯ್ಯ | 26 ಫೆಬ್ರವರಿ 1988 | 5 ಫೆಬ್ರವರಿ 1990 |
| 11 | ಭಾನು ಪ್ರತಾಪ್ ಸಿಂಗ್ | 8 ಮೇ 1990 | 6 ಜನವರಿ 1991 |
| 12 | ಖುರ್ಷಿದ್ ಆಲಂ ಖಾನ್ | 6 ಜನವರಿ 1991 | 2 ಡಿಸೆಂಬರ್ 1999 |
| 13 | ವಿ ಎಸ್ ರಮಾದೇವಿ | 2 ಡಿಸೆಂಬರ್ 1999 | 20 ಆಗಸ್ಟ್ 2002 |
| 14 | ಟಿ.ಎನ್. ಚತುರ್ವೇದಿ | 21 ಆಗಸ್ಟ್ 2002 | 20 ಆಗಸ್ಟ್ 2007 |
| 15 | ರಾಮೇಶ್ವರ ಠಾಕೂರ್ | 21 ಆಗಸ್ಟ್ 2007 | 24 ಜೂನ್ 2009 |
| 16 | ಎಚ್ ಆರ್ ಭಾರದ್ವಾಜ್ | 24 ಜೂನ್ 2009 | 29 ಜೂನ್ 2014 |
| 17 | ಡಾ.ಕೆ.ರೋಸಯ್ಯ | 29 ಜೂನ್ 2014 | 31 ಆಗಸ್ಟ್ 2014 |
| 18 | ವಜುಭಾಯಿ ರುಡಾಭಾಯಿ ವಾಲಾ | 1 ಸೆಪ್ಟೆಂಬರ್ 2014 | ಜುಲೈ 6, 2021 |
| 19 | ತಾವರಚಂದ್ ಗೆಹ್ಲೋಟ್ | ಜುಲೈ 6, 2021 | ಪ್ರಸ್ತುತ 2023 |
ಈ ಮೇಲ್ಕಂಡ ವಿಷಯಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಿಂದಲೂ ಮತ್ತು ಕರ್ನಾಟಕ ರಾಜ್ ಭವನದ ಅಧಿಕೃತ ವೆಬ್‌ಸೈಟ್ ನಿಂದ ಪಡೆಯಲಾಗಿದೆ
ಉತ್ತಮ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು
LikeLike
ಧನ್ಯೋಸ್ಮಿ
LikeLike
ತುಂಬಾ ಮುತುವರ್ಜಿಯಿಂದ ವಿಷಯ ಸಂಗ್ರಹಿಸಿ ಪ್ರಕಟಿಸಿದ್ದೀರಿ. ತಮ್ಮ ಆಸಕ್ತಿ ಮತ್ತು ಶ್ರಮಕ್ಕಾಗಿ ಧನ್ಯವಾದಗಳು. ಇಂತಹ ವಿಷಯಗಳ ಬಗೆಗಿನ ಲೇಖನಗಳಲ್ಲಿ ಎಲ್ಲಿಯೋ ಒಂದು ಕೊರತೆ, ತಪ್ಪಿದ ಕೊಂಡಿ ಸಾಮಾನ್ಯ. ಇಲ್ಲಿ ಅಂತಹದೇನೂ ಇಲ್ಲದಿರುವುದು ಈ ಲೇಖನದ ಹೆಚ್ಚುಗಾರಿಕೆ. ನಾನು ಓದಿರುವ ಇತಿಹಾಸಕ್ಕೆ ಸಂಬಂಧಿಸಿದ ಲೇಖನಗಳಲ್ಲಿ ಇದೊಂದು ಉತ್ಕೃಷ್ಟ ಲೇಖನ. ಲೇಖನ ಕೃಷಿ ಮುಂದುವರಿಯಲಿ.
LikeLiked by 1 person
ಧನ್ಯೋಸ್ಮಿ
LikeLike
Your font too small, cant able to read, earlier as par your mail, i increased my mobile letter font size still no use,
Pl tell me how can it will be improved
Your articles are always exlent, i dont want miss to read
LikeLiked by 1 person
Rather than reading on mobile see if you can read it on laptop/desktop or on the some other mobile as it’s working fine for others
LikeLike