ರಾಜ್ಯದ ಜನತೆ ತಮ್ಮ ಜನಪ್ರತಿನಿಧಿಗಳನ್ನು ಪ್ರಜಾತಾಂತ್ರಿಕವಾಗಿ ಆಯ್ಕೆ ಮಾಡಿದರೆ, ಆ ಜನಪ್ರತಿನಿಧಿಗಳು ತಮ್ಮ ವಿಧಾನ ಸಭೆಯ ಕಲಾಪಗಳು ಸುಗಮವಾಗಿ ನಡೆದುಕೊಂಡು ಹೋಗುವಂತೆ ಮಾಡಲು ಮತ್ತು ತಮ್ಮ ಅಹವಾಲುಗಳನ್ನು ಸ್ವೀಕರಿಸಿ ಅದಕ್ಕೆ ತಕ್ಕ ಪರಿಹಾರವನ್ನು ಆಡಳಿತ ಪಕ್ಷದ ಕಡೆಯಿಂದ ಕೊಡಿಸಲು ವಿಧಾನ ಸಭಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಹೀಗೆ ವಿಧಾನಸಭೆ ಸಭಾಧ್ಯಕ್ಷರಾಗಿ ಆಯ್ಕೆ ಆದ ಕೂಡಲೇ, ಅವರು ತಮ್ಮ ಮಾತೃ ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷಾತೀತರಾಗಿದ್ದು ಇಡೀ ವಿಧಾನಸಭೆಯನ್ನು ನಡೆಸುಕೊಂಡು ಹೋಗಬೇಕಾಗುತ್ತದೆ. ಇದುವರೆವಿಗೂ ಕರ್ನಾಟಕದ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾದ ಬಹುತೇಕರು ಇದೇ ಸತ್ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.
ಆದರೆ ನೆನ್ನೆ ವಿಧಾನಸಭೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿದ ಕಾರಣಕ್ಕಾಗಿ ಬಿಜೆಪಿಯ 10 ಮಂದಿ ಶಾಸಕರನ್ನು ವಿಧಾನಸಭೆ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿರುವ ಆದೇಶ ನೋಡಿದಾಗ ಮತ್ತು ಅದರ ಹಿಂದಿನ ದಿನದ ವಿಧಾನಸಭಾಧ್ಯಕ್ಷರ ನಡೆಯನ್ನು ಗಮನಿಸಿದಾಗ, ಪ್ರಸಕ್ತ ಸಭಾಧ್ಯಕ್ಷರು ಎಲ್ಲೋ ತಮ್ಮ ಮಾತೃ ಪಕ್ಷದ ಪರ ಓಲೈಕೆ ಮಾಡುತ್ತಿದ್ದಾರೆಯೇ? ಎನ್ನುವ ಅನುಮಾನ ಜನಸಾಮಾನ್ಯರಲ್ಲಿ ಮೂಡಿಬರುತ್ತಿದೆ.
ಕಾಂಗ್ರೇಸ್ ಪಕ್ಷ ರಾಜ್ಯಾದ್ಯಂತ ಅಭೂತಪೂರ್ವವಾಗಿ ಗೆಲುವನ್ನು ಕಂಡಿದ್ದರೂ ಕರಾವಳಿ ಭಾಗದಲ್ಲಿ ಕೇವಲ ಯು.ಟಿ. ಖಾದರ್ ಒಬ್ಬರೇ ಆಯ್ಕೆಯಾದಾಗ, ಸಹಜವಾಗಿಯೇ ದೊಡ್ಡ ಖಾತೆಯ ಮಂತ್ರಿಯಾಗ ಬಹುದು ಎಂಬ ಕನಸನ್ನು ಕಂಡಿದ್ದರಲ್ಲಿ ತಪ್ಪಿಲ್ಲ. ಆದರೆ ಕಾಂಗ್ರೇಸ್ ಪಕ್ಷದ ದೂ(ದು)ರಾಲೋಚನೆಯಿಂದಾಗಿ ಅವರನ್ನು ವಿಧಾನ ಸಭಾಧ್ಯಕ್ಷರನ್ನಾಗಿ ಮಾಡಿದಾಗ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡು, ವಿಧಾನಸಭೆಯ ಅಧಿವೇಶನದ ಮೊದಲನೇ ದಿನವೇ ತಮ್ಮ ಉಚ್ಚಾರಗಳಿಂದಾಗಿ ನಗೆಪಾಟಲು ಆದ ಕೂಡಲೇ, ವಿಕೃತ ಮನಸ್ಸಿನ ಕಾಂಗ್ರೇಸ್ಸಿಗರು ಅದು ಖಾದರ್ ಅವರ ವಯಕ್ತಿಯ ತಪ್ಪು ಎಂಬುದನ್ನು ಮರೆಮಾಚಲು ಬಿಜೆಪಿಯವರು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ, ಖಾದರ್ ಉಚ್ಚಾರ ದಕ್ಷಿಣ ಕನ್ನಡದ ಹಾಗಿದೆ, ಬ್ಯಾರಿ ಭಾಷೆಯ ಹಾಗಿದೆ ಎಂಬ ಗೂಬೆ ಕೂರಿಸಲು ಪ್ರಯತ್ನಿಸಿದರೂ, ಜನರಿಗೆ ಮಂಕು ಬೂದಿ ಬಳಿಯಲು ಸಾಧ್ಯವಾಗದೇ, ಆ ವಿಷಯ ಹಾಗೆಯೇ ಗೌಣವಾಯಿತು.
ನಂತರ ಆಡಳಿತ ಪಕ್ಷದ ಕಡೆಯವರು ಮಾತನಾಡುವುದಕ್ಕೆ ಯಥೇಚ್ಚವಾದ ಸಮಯ ನೀಡಿ, ವಿರೋಧ ಪಕ್ಷದವರು ಮಾತನಾಡಲು ಆರಂಭಿಸುತ್ತಿದ್ದಂತೆಯೇ, ತಾವು ಜನಪ್ರತಿನಿಧಿಗಳು ಎಂಬುದನ್ನೂ ಮರೆತ ಕಾಂಗ್ರೇಸ್ ಶಾಸಕರು ತೋಳು ತಟ್ಟಿ ಕೂಗಾಡುವುದನ್ನೇ ನೆಪ ಮಾಡಿಕೊಂಡು ಅವರ ದುರ್ವತನೆಗೆ ಬುದ್ದಿ ಹೇಳದೇ, ನೀವು ಮಾತನಾಡಿದ್ದು ಸಾಕು ಕುತ್ಕೋಲ್ಲೀ ಕುತ್ಕೋಲ್ಲಿ ಎಂದೋ ಇಲ್ಲವೇ ಬೇಗ ಬೇಕ ಮಾತು ಮುಗಿಸಿ ಎಂದು ಮಲತಾಯಿ ಧೋರಣೆ ತೋರಿಸುತ್ತಿರುವುದು ಈಗ ಜಗಜ್ಜಾಹೀರಾಗಿದೆ.
ಮೋದಿಯವರನ್ನು ಸೋಲಿಸಬೇಕು ಎಂಬ ಏಕೈಕ ಉದ್ದೇಶದಿಂದ ಸುಮಾರು 26 ಪಕ್ಷಗಳು ಸೇರಿಕೊಂಡು ರಚಿಸಿಕೊಂಡ ಒಕ್ಕೂಟದ ಎರಡನೇ ಸಭೆ ಆರಂಭದಲ್ಲಿ ಶಿಮ್ಲಾದಲ್ಲಿ ನಡೆಯಬೇಕಿತ್ತಾದರೂ, ನಂತರ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಒತ್ತಾಯದ ಮೇರೆಗೆ ಬೆಂಗಳೂರಿಗೆ ಬದಲಾಗಿ ಜುಲೈ 17 ಮತ್ತು 18 ನೇ ತಾರೀಖು ತಾಜ್ ವೆಸ್ಟ್ ಎಂಡ್ ಹೋಟೆಲ್ಲಿನಲ್ಲಿ ನಡೆದದ್ದು ಈಗ ಇತಿಹಾಸ. ಈ ಸಭೆ ಸಂಪೂರ್ಣವಾಗಿ ಖಾಸಗಿ ಸಭೆಯಾಗಿದ್ದು, ಇದಕ್ಕೂ ರಾಜ್ಯಸರ್ಕಾರಕ್ಕೂ ಕೊಂಚವೂ ಸಂಬಂಧವೇ ಇರದೇ ಇದ್ದರೂ, ಲಜ್ಜೆಗೆಟ್ಟ ಈ ಸರ್ಕಾರ, ಸರ್ಕಾರದ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಕಾಂಗ್ರೇಸ್ ಪಕ್ಷದ ಮಿತ್ರ ಪಕ್ಷಗಳ ಸಭೆಗೆ ಬರುವ ವಿರೋಧ ಪಕ್ಷಗಳ ನಾಯಕರುಗಳನ್ನು ವಿಮಾನ ನಿಲ್ದಾಣದಿಂದ ಕರೆತರುವುದರಿಂದ ಹಿಡಿದು ಅವರ ಎರಡೂ ದಿನಗಳ ಆತಿಥ್ಯದ ನಂತರ ವಿಮಾನಗಳಿಗೆ ಹತ್ತಿಸುವ ವರೆಗೂ ಸೇವೆ ಮಾಡಲು ಸುಮಾರು 30 ಸರ್ಕಾರಿ IAS & IPS ಅಧಿಕಾರಿಗಳನ್ನು ನಿಯೋಜಿಸಿದ್ದಲ್ಲದೇ, ಅವರೆಲ್ಲರಿಗೂ ಸರ್ಕಾರಿ ಕಾರುಗಳು ಮತ್ತಿತರೇ ಸೌಲಭ್ಯಗಳನ್ನು ನೀಡಿದ್ದದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇಂತಹ ಯಾವುದೇ ನಾಯಕರುಗಳು ಬಂದರೂ ಅವರ ಭಧ್ರತೆಗೆ ತಗುಲುವ ವೆಚ್ಚವನ್ನು ಕಾರ್ಯಕ್ರಮ ಆಯೋಜಿಸಿದವರಾಗಲೇ, ಇಲ್ಲವೇ ಸೌಲಭ್ಯ ಪಡೆದವರಾಗಲೀ ಕೊಡಬೇಕೆಂಬ ನಿಯಮ ಇದ್ದರೂ ಉದ್ಧಟತನ ತೋರಿದ ರಾಜ್ಯಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಸದನದಲ್ಲಿ ನಡೆಸಿದ ಪ್ರತಿಭಟನೆಗೆ ಉತ್ತರ ಕೊಡುವುದಕ್ಕೆ ಆಗದ ಹುಂಬ ರಾಜ್ಯ ಸರ್ಕಾರವನ್ನು ಮುಜುಗರದಿಂದ ತಪ್ಪಿಸುವ ಸಲುವಾಗಿ ವಿಧಾನಸಭಾಧ್ಯಕ್ಷರು 10 ಬಿಜೆಪಿಶಾಸಕರನ್ನು ಅಮಾನತ್ತು ಮಾಡುವ ಮೂಲಕ ತಮ್ಮ ಅಧಿಕಾರವನ್ನು ಮತ್ತೊಮ್ಮೆ ದುರುಪಯೋಗ ಪಡಿಸಿಕೊಂಡಿರುವುದು ಸ್ಪಷ್ಟವಾಗಿದೆ.
ಅಷ್ಟೇ ಅಲ್ಲದೇ ಸಭಾಧ್ಯಕ್ಷರಾದ ನಂತರ ತಮ್ಮ ಮಾತೃಪಕ್ಷದ ಯಾವುದೇ ಸಭೆ ಸಮಾರಂಭಗಳಿಗೆ ಹೋಗಬಾರದು ಎಂಬ ನಿಯಮವನ್ನೂ ಮೀರಿ ಮೊದಲನೇ ದಿನದ ರಾತ್ರಿ ಸಭೆಗೆ ಬಂದವರೊಡನೆ ಊಟ ಮಾಡುವ ಮೂಲಕ, ತಾವಿನ್ನೂ ಕಾಂಗ್ರೇಸ್ ಪಕ್ಷದ ಶಾಸಕರು ಎಂಬುದನ್ನೇ ತೋರಿಸಿಕೊಟ್ಟಿದ್ದಾರೆ. ಇದರ ಕುರಿತಾಗಿಯೇ ಪ್ರತಿಪಕ್ಷಗಳ ಸದಸ್ಯರು ಆಡಳಿತ ಪಕ್ಷದಿಂದ ಉತ್ತರವನ್ನು ಕೇಳಲು ಮುಂದಾಗಿ ಸಭೆಯ ಭಾವಿಗೆ ಇಳಿದಾಗ, ಅವರ ಪ್ರಶ್ನೆಗೆ ಸರಕಾರದಿಂದ ಉತ್ತರ ಕೊಡಿಸಬೇಕಾದ ಸಭಾಧ್ಯಕ್ಷರೇ, ಸಭೆಯನ್ನು ನಿಯಂತ್ರಿಸುವ ಬದಲು ಪೂರ್ವನಿರ್ಧಾರದಂತೆಯೇ ಏನೋ? ಉಪಸಭಾಧ್ಯಕ್ಷರನ್ನು ಕರೆದು ಅವರ ಸುಪರ್ಧಿಗೆ ಸಭೆಯನ್ನು ವಹಿಸಿ ಪಲಾಯನ ಮಾಡ್ಡಿದ್ದಾರೆ. ಈ ಕ್ರಮದಿಂದ ಮತ್ತಷ್ಟೂ ಆಕ್ರೋಶಗೊಂಡ ಜೆಜೆಪಿ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ಹೆಚ್ಚುಮಾಡಿದ್ದಲ್ಲದೇ, ತಮ್ಮ ಕೈಯ್ಯಲ್ಲಿದ್ದ ಕಾಗದವನ್ನು ಹರಿದು ಉಪಸಭಾಧ್ಯಕ್ಷರತ್ತ ತೂರಿದ್ದನ್ನೇ ನೆಪಮಾಡಿಕೊಂಡ ಸಭಾಧ್ಯಕ್ಷರು, ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ, ಕೂಡಲೇ ಮಾಡಿದಾಗ ಮತ್ತೆ ಬಂದ ಸಭಾಧ್ಯಕ್ಷರು ಎಕಾ ಏಕೀ 10 ಬಿಜೆಪಿ ಸದಸ್ಯರನ್ನು ಅಮಾನತು ಮಾಡುವ ಮೂಲಕ ತಮ್ಮ ಮಾತೃಪಕ್ಷದ ರಕ್ಷಣೆಗೆ ಬಂದಿದ್ದಾರೆ.
ಇದೆಲ್ಲವೂ ಪೂರ್ವ ನಿರ್ಧಾರಿತವೋ ಎನ್ನುವಂತೆ, ಸಭೆಯಲ್ಲಿ ಇಲ್ಲದೇ ಇದ್ದ ಮುಖ್ಯಮಂತ್ರಿಗಳೂ ಸಹಾ ಕನ್ನಡದ ಸಿನಿಮಾದಲ್ಲಿ ಕಡೆಯಲ್ಲಿ ಬರುವ ಪೋಲಿಸರಂತೆ ಸಭೆಗೆ ಬಂದು ಸಭಾಧ್ಯಕ್ಷರ ನಡೆಯನ್ನು ಸಮರ್ಥನೆ ಮಾಡಿಕೊಂಡಿರುವುದಲ್ಲದೇ, ಉಪಸಭಾಧ್ಯಕ್ಷರ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಜಾತಿ ಸಮೀಕರಣ ಮಾಡಿ, ಇದು ಬಿಜೆಪಿಯವ ಹಿಂದುಳಿದ ಪಕ್ಷದವರ ವಿರುದ್ಧ ಧಮನಕಾರಿಯ ಧೋರಣೆಯನ್ನೂ ತೋರಿಸುತ್ತದೆ ಎಂದು ಹೇಳಿರುವುದು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ. ಈವರೆವಿಗೂ ಸಭಾಧ್ಯಕ್ಷರು ಮತ್ತು ಉಪಸಭಾಧ್ಯಕ್ಷರು ಜಾತ್ಯಾತೀತರು ಮತ್ತು ಪಕ್ಷಾತೀತರು ಎಂದು ತಿಳಿದಿದ್ದ ನಾಡಿನ ಜನತೆಗೆ ಕಾಂಗ್ರೇಸ್ಸಿಗರ ಈ ನಡೆ ಅನುಮಾನಕ್ಕೆ ಈಡು ಮಾಡಿಕೊಡುತ್ತಿದೆ.
ಕೇವಲ 10 ಜನ ಬಿಜೆಪಿ ಶಾಸಕರ ಅಮಾನತು ಮಾಡಿದ ಕೂಡಲೇ, ಸಭಾಧ್ಯಕ್ಷರು ಲಲ್ಲೂ ಪ್ರಸಾದ್ ಯಾದವ್ ಜೊತೆ ಬಿರ್ಯಾನಿ ತಿಂದಿದ್ದೂ ಮತ್ತು ರಾಜ್ಯಸರ್ಕಾರ ಈ ಖಾಸಗಿ ಸಮಾರಂಭಕ್ಕೆ ಸರಕಾರಿ ಯಂತ್ರ ಮತ್ತು ಆಡಳಿತಾಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣ ಮುಚ್ಚಿ ಹೋಯಿತು ಎಂದು ನಂಬಿದಲ್ಲಿ ಅದಕ್ಕಿಂತಲೂ ಮುಠ್ಥಾಳತನ ಮತ್ತೊಂದಿಲ್ಲ. ರಾಜ್ಯದ ಅಭಿವೃದ್ಧಿಗೆ ಯಾವುದೇ ನೀತಿ ನಿಯಮಗಳು ಇಲ್ಲದೇ ಕೇವಲ ಬಿಟ್ಟಿ ಭಾಗ್ಯಗಳ ಮೂಲಕ ಅಧಿಕಾರಕ್ಕೆ ಬಂದ ಈ ಸರ್ಕಾರ, ಈಗಾಗಲೇ ತಾನು ಹೇಳಿದ್ದನ್ನು ಕೊಡಲಾಗದೇ ಓಟು ಹಾಕಿ ಗೆಲ್ಲಿಸಿದ ಜನರ ಆಕ್ರೋಶಕ್ಕೆ ತುತ್ತಾಗಿದೆ.
ಇವರು ಮಾಡುವ ಅನಾಚರಗಳನ್ನು ಪ್ರಶ್ನಿಸಿದ ಕೂಡಲೇ ವಿರೋಧ ಪಕ್ಷದವರ ಮೇಲೆ ಮುಗಿಬಿದ್ದು ದಬ್ಬಾಳಿಕೆ ನಡೆಸಲೆಂದೇ, ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ಶಿವರಾಜ್ ತಂಗಡಗಿ, ದಿನೇಶ್ ಗುಂಡೂರಾವ್ ಮತ್ತು ಇತ್ತೀಚೆಗಷ್ಟೇ ಕಾಂಗ್ರೇಸ್ ಸೇರಿಕೊಂಡು ತನ್ನ ಸ್ವಾಮಿಭಕ್ತಿಯನ್ನು ತೋರಿಸಲು ಹೊಸದರಲ್ಲಿ ಅಗಸ ಗೋಣಿಯನ್ನೂ ಎತ್ತಿ ಎತ್ತೀ ಒಗೆದಾ ಎನ್ನುವಂತೆ ಶಿವಲಿಂಗೇ ಗೌಡರು ಇವೆಲ್ಲದರ ಜೊತೆಗೆ ಸದಾಕಾಲವೂ ಎಲ್ಲರೂ ತನ್ನದೇ ಮಾತನ್ನು ಕೇಳಬೇಕು ಎಂದು ಎಲ್ಲದ್ದರಲ್ಲಿಯೂ ಮೂಗು ತೂರಿಸಿಕೊಂಡು ಬರುವ ಚಿಕ್ಕಬಳ್ಳಾಪುರದ ಅಚಾನಕ್ ಶಾಸಕ ಪ್ರದೇಪ್ ಈಶ್ವರ್ ಅವರನ್ನು ನೇಮಿಸಿಕೊಂಡಂತಿದೆ. ಇಷ್ಟು ಸಣ್ಣ ವಿಷಯಕ್ಕೆ ವಿರೋಧ ಪಕ್ಷದ ಶಾಸಕರನ್ನು ಅಮಾನತುಗೊಳಿಸುವ ನಿರ್ಧಾರಕ್ಕೆ ಬಂದರೆ, ಈ ಹಿಂದೆ ಸಿದ್ದರಾಮಯ್ಯ ವಿಧಾನಸೌಧದ ಬಾಗಿಲನ್ನು ಒದ್ದು ಅಂದಿನ ಪೋಲೀಸ್ ಅಧಿಕಾರಿ ಶಂಕರ್ ಬಿದಿರಿ ಅವರನ್ನು ಅವಮಾನಿಸಿದಾಗ, ಕಳೆದ ವಿಧಾನಭೆಯಲ್ಲಿ ಸ್ಪೀಕರ್ ಅವರ ಮೈಕ್ ಕಿತ್ತು ಬಿಸಾಡಿದ್ದ ಝಮೀರ್ ಮತ್ತು ವಿಧಾನ ಪರಿಷತ್ತಿನ ಸಭಾಪತಿ ದಿ.ಧರ್ಮೇಗೌಡರ ಕಾಲರ್ ಕೊರಳ ಪಟ್ಟಿ ಹಿಡಿದು ದೂಡಿದ್ದ ಕಾಂಗ್ರೇಸ್ ಶಾಸಕ ಮತ್ತು ಇದೇ ರೀತಿಯಲ್ಲೇ ಸಭಾಧ್ಯಕ್ಶರ ವಿರುದ್ದ ಪೇಪರ್ ತೂರಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಶಾಸಕ ಸ್ಥಾನದಿಂದ ಶಾಶ್ವತವಾಗಿಯೇ ಅನರ್ಹಗೊಳಿಸಬೇಕಿತ್ತಲ್ಲವೇ? ಸಿದ್ದರಾಮಯ್ಯನವರ ಈ ಸರ್ಕಾರ ಪ್ರಥಮ ಅಧಿವೇಶನದಲ್ಲಿಯೇ ಈ ರೀತಿಯಾಗಿ ಶಾಸಕರನ್ನು ಅಮಾನತು ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿರುವುದನ್ನು ಗಮನಿಸುತ್ತಿರುವ ಜನರು ಸಹಾ ಇನ್ನು ಐದು ವರ್ಷಗಳ ಇಂತಹ ಸರ್ಕಾರವನ್ನು ಹೇಗಪ್ಪಾ ತಾಳಿಕೊಳ್ಳುವುದು ಎಂದು ಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.
ಪ್ರಜಾಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಎನ್ನುವುದು ಸಹಜ ಪ್ರಕ್ರಿಯೆಯಾಗಿದ್ದು ಆಡಳಿತ ಪಕ್ಷದಲ್ಲಿ ಇದ್ದವರು ಹೆಚ್ಚಿನ ತಾಳ್ಮೆ ವಹಿಸಿಕೊಂಡು ರಾಜ್ಯವನ್ನು ಮುನ್ನಡಸ ಬೇಕಾಗುತ್ತದೆ. ಸುಖಾಸುಮ್ಮನೇ ತಾಳ್ಮೆ ಕಳೆದುಕೊಂಡು ಸ್ಪೀಕರ್ ಅವರ ಮೂಲಕ ಹಿಂಬಾಗಿಲಿನಿಂದ ವಿರೋಧ ಪಕ್ಷದ ಶಾಸಕರನ್ನು ಹತ್ತಿಕ್ಕುವುದು ಕೇವಲ ಜನ ವಿರೋಧಿ ಅಷ್ಟೇ ಅಲ್ಲದೇ ಮಾಡಿದ ತಪ್ಪನ್ನು ಒಪ್ಪಿಕೊಳ್ಳಲಾಗದೇ, ವಿರೋಧ ಪಕ್ಷದ ಪ್ರಶ್ನೆಗಳಿಗೆ ಉತ್ತರಿಸಲಾಗದ ರಣಹೇಡಿಗಳು ಎಂದು ತೋರಿಸಿಕೊಂಡತಾಗುತ್ತದೆ. ಭೂತದ ಬಾಯಿಯಲ್ಲಿ ಭಗವದ್ಗೀತೆ ಎನ್ನುವಂತೆ ಮಾತೆತ್ತಿದ್ದರೆ ಜಿಜೆಪಿಯವರು ಸಂವಿಧಾನ ವಿರೋಧಿಗಳು, ಬಿಜೆಪಿ ಸರ್ಕಾರ ಇರುವಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತದೆ ಎಂದು ದೇಶ ವಿದೇಶಗಳಲ್ಲಿ ಮಾನ ಮಾರ್ಯಾದೆ ಇಲ್ಲದೇ ಡಂಗೂರ ಹೊಡೆಯುವ ಇದೇ ಕಾಂಗ್ರೇಸ್ ನಾಯಕರಿಗೆ ಈ ಘಟನೆಗೆಳು ನಡೆದ ನಂತರ ಯಾವುದೇ ಪಕ್ಷಗಳನ್ನು ಟೀಕಿಸುವ ಯಾವುದೇ ನೈತಿಕತೆ ಅರ್ಹತೆಯನ್ನೂ ಉಳಿಸಿಕೊಂಡಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಇನ್ನು ಮೊದಲನೇ ಅಧಿವೇಶನದಲ್ಲಿಯೇ ನಿಸ್ಪಕ್ಷಪಾತವಾಗಿ ಸಭೆಯನ್ನು ನಡೆಸಲು ಆಗದ ವಿಧಾನಸಭಾಧ್ಯಕ್ಷರೂ ಸಹಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ವಯಕ್ತಿಯವಾಗಿ ಒಳ್ಳೆಯದು ಎನ್ನುವುದೇ ಜನರ ಭಾವನೆಯಾಗಿದೆ.
ಆನೆ ನಡೆದದ್ದೇ ಹಾದಿ ಎಂದು ತನ್ನ ಸರ್ವಾಧಿಕಾರಿ ಧೋರಣೆಯಿಂದ ಸಿದ್ದರಾಮಯ್ಯರವರು ಈ ರೀತಿಯಾಗಿ ತುಘಲಕ್ ದರ್ಬಾರ್ ನಡೆಸುತ್ತಿರುವುದನ್ನು ಜನರೂ ಸಹಾ ಗಮನಿಸುತ್ತಿದ್ದು ಮುಂಬರುವ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರವನ್ನು ನೀಡಲು ಸಿದ್ದರಾಗಿದ್ದಾರೆ ಎನ್ನುವುದು ಖಚಿತ ಮತ್ತು ನಿಶ್ಚಿತವಾಗಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ
ಮಂಗಳೂರಿನಿಂದ ಬೆಂಗಳೂರು ಮಾರ್ಗವಾಗಿ ಚೆನ್ನೈ ಗೆ ಹೋಗುವ ಒಂದು ksrtc ಬಸ್ ಇದೆ. 3 ದಶಕದ ಹಿಂದೆ ಮಲ್ಟಿ axle ವೋಲ್ವೋ, ಕಂಪ್ಯೂಟರ್ ಇಲ್ಲದ ದಿನಗಳಲ್ಲಿ ಇಂದಿನ ರಾಜಹಂಸ, ಸೂಪರ್ ಡಿಲಕ್ಸ್ ಹೆಸರಿನಲ್ಲಿ ಈ ಮಾರ್ಗದಲ್ಲಿ ಓಡು ತ್ತಿತ್ತು.. ಬೆಂಗಳೂರಿನಲ್ಲಿ ಪೂರಾ ಖಾಲಿಯಾಗುತ್ತಿದ್ದ ಆ ಬಸ್ ಟಿಕೆಟ್ ಕಾದಿರಿಸಲಾಗದವರಿಗೆ ವರದಾನವಾಗಿತ್ತು. ತಿಂಗಳಲ್ಲಿ 2 ಬಾರಿಯಾದರೂ ಕಚೇರಿ ಕೆಲಸದ ನಿಮಿತ್ತ ಮದರಾಸಿಗೆ ಹೋಗುತ್ತಿದ್ದ ನಾನು ಅನೇಕ ಬಾರಿ ಈ ಬಸ್ಸಿನಲ್ಲಿ ಹೋಗುತ್ತಿದ್ದೆ. ಅದೊಂದು ದಿನ ಎಂದಿನಂತೆ ಜನ ಇಳಿಯುವಲ್ಲಿಯೇ ಬಸ್ ಹತ್ತಲು ಕಾಯುತ್ತಿದ್ದೆ. ಹೊರಡುವ ವೇಳೆಯಾಗಿದ್ದರೂ ಬಸ್ ಬಂದಿರದ ಬಸ್ ಕೊನೆಗೆ ಬಂತು. ನಾನು ಆ ಮುಸ್ಲಿಂ ನಿರ್ವಾಹಕರಿಗೆ ” ಏಕೆ ಇಷ್ಟು ಲೇಟ್ ” ಎಂದೆ. ಆತ ” ದಾರೀಲಿ ಬಾಲ ಮಲೆ ಬಂತು ಮಾರ್ರೆ ” ಅಂದ. ಮಹಿಳೆಯರು ಮುಸಿ ಮುಸಿ ನಕ್ಕರೆ ಕೆಲ ಪುರುಷರು ಗೊತ್ತಾಗುವಂತೆಯೇ ನಕ್ಕರು. ನಮ್ಮ ಸಭಾಧ್ಯಕ್ಷರು ಮಾತನಾಡುವುದು ಇದೇ ಕನ್ನಡ.
ಸಭಾಧ್ಯಕ್ಷರಿಗೆ ಬಾಯಿಯೇ ಭಲ. ಈ ಮನುಷ್ಯ ನಿಗೆ
ಕನ್ನಡ ಸರಿಯಾಗಿ ಮಾತನಾಡಲು ಬಾರದೆಂದು ಇವರಿಗೆ ಗೊತ್ತಿರಲಿಲ್ಲವೇ? ಅಥವಾ ಸಭೆ, ಭಾಷೆ ಏನಾದರೂ ಆಗಲಿ ಪಕ್ಸ ( ಪಕ್ಷ ಅಲ್ಲ 😄) ಮುಖ್ಯ ಎಂಬ ಅಸಡ್ಡೆಯೇ?
ಅಧಿಕಾರಕ್ಕೆ ಬಂದ 10 ವಾರಗಳಲ್ಲಿ ದೇಶಕ್ಕೆ, ರಾಜ್ಯಕ್ಕೆ, ಭಾಷೆಗೆ, ಜನತೆಗೆ ಹೆಸರು, ಮರ್ಯಾದೆ ತರುವ ಒಂದೇ ಒಂದು ಕೆಲಸವನ್ನೂ ಇವರು ಮಾಡಿಲ್ಲ. ಕೆಟ್ಟ ಭಾಷೆಯಲ್ಲಿ ಹೇಳುವುದಾದರೆ ಮಾಡಿರುವುದೆಲ್ಲ ಹಲ್ಕಟ್ ಕೆಲಸಗಳೇ. ಜನ ಬಾಯಿಗೆ ಬಂದಂತೆ ಬೈದರೂ ನಿರ್ಲಜ್ಜರಿಗೆ ಅದರ ಪರಿವೆಯಿಲ್ಲ. ಇಂದಿನ ಸ್ಪೆಷಲ್ ಕೆಲವೇ ತಿಂಗಳುಗಳಲ್ಲಿ ಎರಡನೇ ಬಾರಿ ಹಾಲಿನ ಬೆಲೆ ಏರಿಕೆ. ಏನು ಮಾಡುವುದು, ಕೈಗೆ ಸಿಗುವುದಿಲ್ಲವಲ್ಲ!!
LikeLiked by 1 person