ಆಟೋ ಬರಹಗಳು ಮತ್ತು ಸಮಾಜದ ಸ್ವಾಸ್ಥ್ಯತೆ

auto_blrವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಮತ್ತು ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತವಾಗಿರುವ ಬೆಂಗಳೂರು ನಗರದಲ್ಲಿ ವಾಸಿಸುವವರಿಗೆ ಆಟೋ ಒಂದು ಬಹು ಮುಖ್ಯ ಸಂಪರ್ಕವಾಹನವಾಗಿದೆ. ಸಾರಿಗೆ ಸಂಸ್ಥೆ ಎಷ್ಟೇ ಬಸ್ಸುಗಳನ್ನು ಹಾಕಿದ್ದರೂ, ನಗರದಲ್ಲಿ ವಿವಿಧ ಕಡೆ ಮೆಟ್ರೋ ವ್ಯವಸ್ಥೆ ಇದ್ದರೂ, ಸ್ವಂತದ ವಾಹನಗಳನ್ನು ಹೊಂದಿರದವರಿಗೆ ಆಟೋ ಒಂದು ಅವಿಭಾಜ್ಯ ಅಂಗವಾಗಿದೆ ಎಂದರೂ ತಪ್ಪಾಗದು. ಆಟೋ ಚಾಲಕರಲ್ಲಿ ಅನೇಕರು ವಿದ್ಯಾವಂತರಾಗಿದ್ದು ತಮ್ಮ ಓದಿಗೆ ತಕ್ಕ ಕೆಲಸ ಸಿಗದ ಕಾರಣ ಜೀವನೋಪಾಯಕ್ಕಾಗಿ ಆಟೋ ಓಡಿಸುತ್ತಿದ್ದರೆ, ಇನ್ನೂ ಅನೇಕರು ಜೀವನದಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ನೊಂದು ಬೆಂದು ಸಹಾ ಹೊಟ್ಟೆಯ ಪಾಡಿಗೆ ಬಾಡಿಗೆ ಆಟೋಗಳನ್ನು ಓಡಿಸುತ್ತಲೇ, ತಮ್ಮ ನೋವು ನಲಿವುಗಳನ್ನು ಆಟೋ ಹಿಂದಿನ ಬರಹಗಳ ಮೂಲಕ ವ್ಯಕ್ತಪಡಿಸುತ್ತಿರುವುದನ್ನು ನಾವೆಲ್ಲರೂ ಗಮನಿಸುತ್ತಿರುತ್ತೇವೆ.

Auto_shankarಅಟೋ ಹಿಂದಿನ ಅನೇಕ ಬರಹಗಳು ಬಹಳ ಕುತೂಹಲಕಾರಿ ಮತ್ತು ವಿಚಿತ್ರವಾಗಿರುತ್ತವೆ. ಕೆಲವೊಮ್ಮೆ ಓದಿದ ಕೂಡಲೇ ಅದರೊಂದಿಗೆ ನಮ್ಮನ್ನು ಸಮೀಕರಣ ಮಾದಿಕೊಂಡು ಸಣ್ಣ ನಗೆ ಅರಳಿದರೆ, ಕೆಲವೊಮ್ಮೆ ಮೊದಲ ಕ್ಷಣದಲ್ಲೇ ಅದು ಅರ್ಥವಾಗದೇ, ತಲೆಗೆ ಹುಳಾ ಬಿಟ್ಟುಕೊಂಡು ಸ್ವಲ್ಪ ಸಮಯದ ನಂತರ ಅರ್ಥವಾದಾಗ ಆ ಬರಹವನ್ನು ಬರೆದವನ ಅಥವಾ ಬರೆಸಿದವನ ಬುದ್ದಿವಂತಿಕೆ ಮೆಚ್ಚಿಗೆ ಸೂಚಿಸುತ್ತೇವೆ. ಆದರೆ ಕೆಲವು ಬರಹಗಳು ಬಹಳ ವಿಭಿನ್ನವಾಗಿದ್ದು ಆ ಬರಹಗಾರನ ಮನದಾಳಾದ ಮಾತಾಗಿದ್ದರೆ, ಇನ್ನೂ ಕೆಲವು ಮೋಜು ಮಸ್ತಿಗೆ ಬರೆಸಿದಂತಿರುತ್ತದೆ. ಕನ್ನಡದ ಖ್ಯಾತ ನಟ ಮತ್ತು ನಿರ್ದೇಶಕ ಶಂಕರ್ ನಾಗ್ ಸತ್ತು 30+ ವರ್ಷಗಳು ಕಳೆದರೂ ಇಂದಿಗೂ ಅವರ ಚಿತ್ರದೊಂದಿಗೆ ಆಟೋ ರಾಜ ಇಲ್ಲವೇ ಆಟೋ ಶಂಕರ್ ಎಂಬುದನ್ನು ಹಾಕಿಕೊಂಡಿರುವುದನ್ನು ಗಮನಿಸಿದಾಗ, ಒಬ್ಬ ವ್ಯಕ್ತಿಯ ಅನುಪಸ್ಥಿತಿಯಲ್ಲಿಯೂ ಆತ ಇಷ್ಟು ವರ್ಷಗಳ ಕಾಲ ಜನ ಮಾನಸದಲ್ಲಿ ಇದ್ದಾನೆಂದರೆ ಆತನ ಸಾಧನೆ ನಿಜಕ್ಕೂ ಅತ್ಯದ್ಭುತವಾಗಿರಲೇ ಬೇಕು ಎಂದೆನಿಸುತ್ತದೆ.

auto5ಬಹಳ ಹಿಂದಿನಿಂದಲೂ ಆಟೋದ ಪ್ರಖ್ಯಾತ ಬರಹ ಅಂಕಲ್ ಆಫೀಸಿಗೆ, ಆಂಟೀ ಟಾಕೀಸಿಗೆ ಎಂಬುದು ಇಂದಿಗೂ ಈ ಉಚಿತ ಬಸ್ ಪ್ರಯಾಣವನ್ನು ಕುರಿತಾಗಿ ಹೇಳಿರುವಂತೆ ಪ್ರಸ್ತುತ ಎನಿಸುತ್ತದೆ. ಇನ್ನು ಅಮ್ಮನ/ಅಪ್ಪನ/ತಂದೆ-ತಾಯಿ/ಅಕ್ಕ ಭಾವನ ಅರ್ಶಿವಾದ ಎಂಬುದನ್ನು ನೋಡಿದಾಗ ಛೇ.. ಅಶೀರ್ವಾದ ಪದವನ್ನೂ ತಪ್ಪಾಗಿ ಬರೆದಿರುವ/ಬರೆಸಿರುದರ ಬಗ್ಗೆ ಬೇಸರ ಮೂಡುತ್ತದೆ. ಅತಿ ವೇಗ, ತಿಥಿ ಬೇಗ, ಗುದ್ಬೇಡ ಗುರು ನಮ್ಮ ಓನರ್ ಬಡವ ಮತ್ತು ಗರ್ಭಿಣಿಯರಿಗೆ ಉಚಿತ ಎಂಬ ಬರಹಗಳು ಚಾಲಕರ ಸಾಮಾಜಿಕ ಕಳಕಳಿಯ ಬಗ್ಗೆ ಹೆಮ್ಮೆ ಮೂಡಿಸುತ್ತದೆ.

ಛೀ ತುಂಟೀ, ಛೀ ಕಳ್ಳೀ, ಇನ್ನು ಪ್ರೀತಿಯ ಹುಡುಗ, ಮೋಸದ ಹುಡುಗಿ, ಮೋಸಗಾರ್ತಿ, ಪ್ರೀತ್ಸೇ, ಪ್ರೀತ್ಸೊ ಮುನ್ನ ಯಾಚಿಸು ಚಿನ್ನ, ಓ ಮಲ್ಲಿಗೆ ನೀ ಎಲ್ಲಿಗೆ, ಲವ್‌ ಮಾಡಿದ್ರೆ ಲವ್‌ ಸ್ಟೊರಿ, ಕೈ ಕೊಟ್ರೆ ಕ್ರೈಮ್‌ ಸ್ಟೋರಿ, ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರಿಬ್ಯಾಡ, abcd ಕಲಿತ ನಾರಿ, ಪ್ರೇಮಿ ಜೊತೆ ಪರಾರಿ, love is slow poison, Catch me if you can, touch me not, ಮುಂತಾದ ಬರಹಗಳನ್ನು ಓದಿದಾಗಲಂತೂ ಆ ಭಗ್ನ ಚಾಲಕನ ಮೇಲೆ ಖಂಡಿತವಾಗಿಯೂ ಮರುಕವುಂಟಾಗುತ್ತದೆ.

ಇನ್ನೂ ಕೆಲವು ಕನ್ನಡಾಭಿಮಾನದ ಆಟೋಚಾಲಕರು ಜೈ ಕನ್ನಡಾಂಬೆ, ಜೈ ಕರ್ನಾಟಕ ಮಾತೆ, ಕನ್ನಡಿಗ, ಕನ್ನಡದ ಕಂದ, ಕೈಮುಗಿದು ಏರು ಇದು ಕನ್ನಡಿಗನ ತೇರು, ಸ್ವಾಭಿಮಾನಿ ಕನ್ನಡಿಗ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಗಾಂಚಲಿ ಬಿಡಿ ಕನ್ನಡದಲ್ಲಿ ಮಾತನಾಡಿ ಎಂಬೆಲ್ಲಾ ಬರಹಗಳು ಒಂದು ಕ್ಷಣ ಕನ್ನಡತನವನ್ನು ಮೂಡಿಸುತ್ತಾದರೂ, ಸೂಕ್ಷ್ಮವಾಗಿ ಗಮನಿಸಿದಲ್ಲಿ ಇವೆಲ್ಲವೂ ಸಮಾಜದ ಸೌಹಾರ್ಧತೆ ಮತ್ತು ಈ ದೇಶದ ಒಕ್ಕೂಟ ಸಂಸ್ಕೃತಿಯನ್ನು ಧಿಕ್ಕರಿಸುವ ಇಲ್ಲವೇ ಹಾಳು ಮಾಡಲು ಸಣ್ಣದಾಗಿ ಹಚ್ಚುವ ಕಿಡಿಗಳು ಎನಿಸಿಕೊಳ್ಳುತ್ತದೆ.

WhatsApp Image 2023-07-25 at 11.07.04ಆಟೋ ಬರಹಗಳ ಕುರಿತಾದ ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಅಂದ್ರೇ, ಇತ್ತೀಚೆಗೆ ಆಟೋ ಒಂದರ ಮೇಲಿನ ಈ ಬರಹ ಟ್ವಿಟರ್ ನಲ್ಲಿ ಬಹಳ ಟ್ರೆಂಡ್ ಆಗಿದ್ದು ಅದರ ಪರ ಮತ್ತು ವಿರೋಧಗಳ ಕುರಿತಾಗಿ ಬಹಳಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಕನ್ನಡ ಭಾಷೆಯ ಹೆಸರಿನಲ್ಲಿ ಇಲ್ಲಸಲ್ಲದ ಅಕ್ಷೇಪಗಳನ್ನು ಮಾಡುತ್ತಾ, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿತ್ತು ಅದರ ಮುಂದುವರೆದ ಭಾಗದಂತೆ, ಪರಭಾಷಿಕರನ್ನು ಕೆಣಕಲೆಂದೇ ಬೆಂಗಳೂರಿನ ಆಟೋ ಚಾಲಕನೊಬ್ಬ ತಮ್ಮ ಆಟೋ ಹಿಂದೆ ‘You are in Karnataka, learn Kannada. Don’t show your attitude, you f*******. You have come to beg here. ಅಂದರೆ, ನೀನು ಕರ್ನಾಟಕದಲ್ಲಿರುವೆ. ಕನ್ನಡ ಕಲಿ. ಅಹಂಕಾರ ತೋರಿಸಬೇಡ. ನೀನು ಇಲ್ಲಿಗೆ ಭಿಕ್ಷೆ ಬೇಡಲು ಬಂದಿದ್ದೀಯಾ ಎಂಬುದರ ಜೊತೆಗೆ ಅಶ್ಲೀಲಕರ ಪದವೊಂದನ್ನು ಸಹಾ ಬಳಸಿರುವ ಬರಹವೊಂದು, ಅನ್ಯಭಾಷಿಗರಿಗೆ ನೀಡಿದ ನೈತಿಕ ಪೋಲೀಸ್ ಗಿರಿಯ ಎಚ್ಚರಿಕೆ  ಈಗ ಎಲ್ಲೆಲ್ಲೂ ವೈರಲ್ ಆಗಿ, ಸಾಮಾಜಿಕ ಜಾಲತಾಣಗಳಲ್ಲಿ ಅದರ ಪರ ವಿರೋಧದ ಚರ್ಚೆ ಕೂಡ ಆರಂಭವಾಗಿದೆ. ಈ ಬರಹದ ಕುರಿತು ಪರಭಾಷಿಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರೆ, ಅದನ್ನು ಸಮರ್ಥನೆ ಮಾಡಿಕೊಳ್ಳಲು ಕೆಲವು ಕೆಚ್ಚದೆಯ ಕನ್ನಡಿಗರು ಸಹಾ ಮುಂದಾಗಿರುವುದು ಒಂದು ರೀತಿಯ ಆಭಾಸಕ್ಕೆ ಎಡೆ ಮಾಡಿಕೊಟ್ಟಿದೆ ಎಂದರೂ ತಪ್ಪಾಗದು.

ಕರ್ನಾಟದ ರಾಜಧಾನಿಯಲ್ಲಿ ಕನ್ನಡಿಗ ಅದೆಷ್ಟೋ ವರ್ಷಗಳ ಹಿಂದೆಯೇ ಅಲ್ಪಸಂಖ್ಯಾತನಾಗಿ ಹೋಗಿದ್ದಾನೆ. ಡಿಸೆಂಬರ್ 2022ರ ಪ್ರಕಾರ ಅಧಿಕೃತವಾಗಿ ಬೆಂಗಳೂರಿನಲ್ಲಿ 44.5% ಜನರು ಕನ್ನಡ ಭಾಷಿಗರೂ, 15.2% ತಮಿಳಿಗರೂ, 14% ತೆಲುಗರು, 12.1% ಉರ್ದು ಭಾಷಿಕರು, 5.5% ಹಿಂದಿ ಭಾಷಿಕರೂ ಮತ್ತು 2.9% ಮಲಯಾಳಂ ಭಾಷೆ ಮಾತನಾಡುವವರು ಇದ್ದಾರೆ ಎಂದು ತಿಳಿಸಿದರೂ, ನಿಜ ಹೇಳಬೇಕೆಂದರೆ ಬೆಂಗಳೂರಿನಲ್ಲಿ ಕನ್ನಡಿಗರು ಸಂಖ್ಯೆ ಶೇ 25ಕ್ಕೂ ಕಡಿಮೆ ಇದ್ದು, ಅಷ್ಟೇ ಪ್ರಮಾಣದಲ್ಲಿ ಉತ್ತರ ಭಾರತೀಯರು ಮತ್ತು ದೇಶದ ಇತರೇ ಭಾಷಿಕರು ಇದ್ದಾರೆ. ಸ್ವಾತಂತ್ರ್ಯಾ ನಂತರ ITI, HMT, HAL, BEL, BEML, BHEL ಮಂತಾದ ಸಾರ್ವಜನಿಕ ವಲಯ ಸರ್ಕಾರಿ ಕಛೇರಿಗಳು ಬೆಂಗಳೂರಿನಲ್ಲಿ ಆರಂಭವಾಗಿದ್ದರಿಂದ ಸಹಜವಾಗಿ ಕರ್ನಾಟಕದ ಅಕ್ಕ ಪಕ್ಕ ರಾಜ್ಯದವರು ಉದ್ಯೋಗವನ್ನು ಅರಸಿಕೊಂಡು ಬೆಂಗಳೂರಿಗೆ ಬಂದು ನೆಲೆ ಊರಿದರೆ, 90ರ ದಶಕದಲ್ಲಿ ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಅವರ ಅವರ ಜಾಗತೀಕರಣದಿಂದ ಬಹುರಾಷ್ಟ್ರೀಯ ಕಂಪನಿಗಳನ್ನು ಕೆಂಪು ನೆಲಹಾಸನ್ನು ಹಾಕಿ ಸ್ವಾಗತ ಕೋರಿದ ಪರಿಣಾಮ ಸಾವಿರಾರು ಮಾಹಿತಿ ತಂತ್ರಜ್ಞಾನದ ಕಂಪನಿಗಳು ಬೆಂಗಳೂರಿನಲ್ಲಿ ಆರಂಭವಾದ ಕಾರಣ, ಉತ್ತರ ಭಾರತೀಯರನ್ನೂ ಬೆಂಗಳೂರಿಗೆ ಆಕರ್ಷಿಸಿರುವುದು ಸಹಜ ಪ್ರಕ್ರಿಯೆಯಾಗಿದೆ.

ಅಂದು ಹಾಗೆ ಬೆಂಗಳೂರಿಗೆ ವಲಸೆ ಬಂದ ಅನ್ಯಭಾಷಿಕರೊಂದಿಗೆ ನಮ್ಮ ಕನ್ನಡಿಗರು ತಮ್ಮ ಔದಾರ್ಯತೆಯನ್ನು ತೋರಿಸಿಕೊಳ್ಳಲೆಂದೋ ಇಲ್ಲವೇ , ನೀರು ಕೇಳಿದರೆ ಪಾನಕ ಕೊಡುವ ಹೃದಯವಂತರು ಎಂದು ಪ್ರಾಮಾಣಿಸಿಕೊಳ್ಳಲೆಂದು ನಾವುಗಳೇ ಆವರ ಭಾಷೆಯಲ್ಲೋ ಇಲ್ಲವೇ ಇಂಗ್ಲೀಷಿನಲ್ಲಿ ಹರುಕು ಮುರುಕು ಮಾತನಾಡಿಸುವ ಮೂಲಕ ಅವರು ಕನ್ನಡವನ್ನು ಕಲಿಯುವ ಅನಿವಾರ್ಯತೆಯನ್ನು ಸೃಷ್ಟಿಸದೇ, ಈಗ ಹೆಮ್ಮರವಾಗಿ ಹೋದ ಮೇಲೆ ಈ ರೀತಿಯ ಬರಹಗಳನ್ನು ಹಾಕಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವುದು ಎಷ್ಟು ಸರಿ?

auto3ತನ್ನ ಭಾಷಾಭಿಮಾನವನ್ನು ನಿಜವಾಗಿಯೂ ತೋರಿಸಿಕೊಳ್ಳ ಬೇಕು ಎನ್ನುವಂತಹ ಚಾಲಕರು, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂಬ ಬರಹವನ್ನೋ, ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂದೋ, ಕನ್ನಡ ಕಲಿಯಿರಿ ಸೌಹಾರ್ಧತೆ ಉಳಿಸಿರಿ ಎನ್ನುವ ಬರಹಗಳನ್ನು ಹಾಕಿಸಿಕೊಂಡು ತಮ್ಮ ಆಟೋದಲ್ಲಿ ಪ್ರಯಾಣಿಸುವವರ/ವ್ಯವಹರಿಸುವವರ ಜೊತೆ ಆದಷ್ಟೂ ಕನ್ನಡಲ್ಲೇ ಸಂಭಾಷಣೆ ಮಾಡಿದ್ದಲ್ಲಿ ಪರೋಕ್ಷವಾಗಿ ಅನ್ಯಭಾಷಿಕರು ಕರ್ನಾಟಕದಲ್ಲಿ ಜೀವಿಸಬೇಕಾದರೇ ಕನ್ನಡವನ್ನು ಕಲಿತು ಕೊಳ್ಳುವುದು ಅನಿವಾರ್ಯವಾಗಿ ತಕ್ಕ ಮಟ್ಟಿಗೆ ವ್ಯವಹಾರ ಮಾಡುವಷ್ಟಾದರೂ ಕನ್ನಡವನ್ನು ಕಲಿತು, ಕನ್ನಡ್ ಗೊತ್ತಿಲ್ಲಾ ಎಂಬುದನ್ನು ಕೇಳುವುದನ್ನು ತಪ್ಪಿಸಬಹುದಾಗಿತ್ತು.

ಕರ್ನಾಟಕಕ್ಕೆ/ಬೆಂಗಳೂರಿಗೆ ಬರುವವರಿಗೆಲ್ಲರಿಗೂ ಕನ್ನಡ ಗೊತ್ತಿರಲೇ ಬೇಕು ಎನ್ನುವುದು ಸರಿಯಲ್ಲಾ.  ಅದೇ ರೀತಿಯಲ್ಲಿ ದಶಕಗಳಿಂದ ಕರ್ನಾಟಕದಲ್ಲಿದ್ದರೂ ಇನ್ನೂ ಕನ್ನಡ ಕಲಿಯದೇ ಇರುವವರಿಗೆ ನಿಜವಾಗಿಯೂ ಕನ್ನಡ ಕಲಿಸಬೇಕೆಂದಿದ್ದರೇ ಅದನ್ನೇ ಸೌಜನ್ಯವಾಗಿ ನೀನು ಕರ್ನಾಟಕದಲ್ಲಿರುವೆ ಕನ್ನಡ ಕಲಿ ಎಂದಿದ್ದರೂ ಈ ರೀತಿಯ ಅಪಸೌವ್ಯಗಳು ನಡೆಯುತಿರಲಿಲ್ಲ. ಅದು ಬಿಟ್ಟು ಅಹಂಕಾರ ತೋರಿಸಬೇಡ ನೀನು ಇಲ್ಲಿಗೆ ಭಿಕ್ಷೆ ಬೇಡಲು ಬಂದಿದ್ದೀಯಾ ಎಂಬುದರ ಜೊತೆಗೆ ಅಶ್ಲೀಲಕರ ಪದವನ್ನು ಬಳಸುವ ಮೂಲಕ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಹಾಕುವಂತಾದರೆ, ಇನ್ನೂ ಭಾಷೆಯ ಹೆಸರಿನಲ್ಲಿ ತಮ್ಮ ಹೊಟ್ಟೆ ಪಾಡನ್ನು ನಡೆಸಿಕೊಂಡು ಹೋಗುವ ಕೆಲವು ಉಟ್ಟು ಖನ್ನಢ ಓಲಾಟಗಾರರಿಗೆ ಮತ್ತಷ್ಟು ಗಂಜಿಯನ್ನು ಒದಗಿಸಲು ಮಾತ್ರಾ ಸಾಧ್ಯವಾಗಿದೆ ಎಂದರೂ ಸುಳ್ಳಾಗದು.

ಕನ್ನಡದ ಹೆಸರಿನಲ್ಲಿ ಕೆಲವೊಂದು ರಾಜಕೀಯ ಪಕ್ಷಗಳ ಪರೋಕ್ಷ ಬೆಂಬಲಿಗರಾಗಿರುವ ಕೆಲವು ಕನ್ನಡ ಹೋರಾಟಗಾರರು, ಇದರ ಕುರಿತು ಕನ್ನಡ/ಕನ್ನಡಿಗರ ಅಸ್ಮಿತೆ, ಅಸ್ತಿತ್ವ ಎಂಬೆಲ್ಲಾ ದೊಡ್ಡ ದೊಡ್ಡ ಪದಗಳನ್ನು ಬಳಸುತ್ತಾ, ಈ ದೇಶಕ್ಕೆ ಎರಡನೇ ಅತಿ ಹೆಚ್ಚು ತೆರಿಗೆ ನೀಡುವುದೇ ಬೆಂಗಳೂರು ಆದರೂ ಕೇಂದ್ರ ಸರ್ಕಾರ ಕನ್ನಡ ಮತ್ತು ಕನ್ನಡಿಗರಿಗೆ ಮಲತಾಯಿ ಧೋರಣೆ ತೋರಿಸುತ್ತಿದೆ. ಇದು ಸಂವಿಧಾನ ವಿರೋಧಿ ಕೃತ್ಯ ಎಂಬೆಲ್ಲಾ ಮಾತುಗಳನ್ನು ಅಡುವ ಮೂಲಕ ಕನ್ನಡಿಗರ ದಿಕ್ಕನ್ನು ತಪ್ಪಿಸುತ್ತಿದ್ದು, ಈ ಬರಹವನ್ನು ಬರೆಸಿಕೊಂಡಿರುವ ಆಟೋ ಚಾಲಕರೂ ಅದೇ ಗುಂಪಿನವರೇ ಇರಬಹುದೇ ಎಂಬ ಸಂಶಯ ಮೂಡುತ್ತಿದೆ.

ಸ್ವಾತಂತ್ರ್ಯಾನಂತರ ಭಾರತದ ಒಕ್ಕೂಟ ರಾಷ್ಟ್ರದ ಭಾಗವಾಗಿ ಅಂದಿನ ಮೈಸೂರು ರಾಜ್ಯ ಮೊತ್ತ ಮೊದಲ ರಾಜ್ಯವಾಗಿ ಸೇರಿಕೊಂಡ ನಂತರ, ಈ ದೇಶದ ನಾಗರೀಕರು ದೇಶಾದ್ಯಂತ ಯಾವುದೇ ಭಾಗದಲ್ಲಾದರೂ ವಾಸ ಮಾಡಬಹುದು ಎಂಬ ಹಕ್ಕನ್ನು ಅವರು ಹೇಳುವ ಸಂವಿಧಾನವೇ ಕೊಟ್ಟಿದೆ ಎಂಬುದನ್ನು ಬೇಕೆಂದೇ ಮರೆ ಮಾಚುತ್ತಾರೆ. ಇನ್ನು ಇಲ್ಲಿಗೆ ಬಂದಿರುವರು ಕಳ್ಳತನವಾಗಲೀ ಮೋಸವನ್ನಾಗಲೀ ಮಾಡದೇ, ಕಷ್ಟ ಪಟ್ಟು ತಮ್ಮ ಬೆವರು ಸುರಿಸಿ ಸಂಪಾದಿಸಿದ ಹಣದಲ್ಲಿ ಸ್ವಲ್ಪ ಪ್ರಮಾಣ ತೆರಿಗೆ ಕಟ್ಟುತ್ತಿದ್ದಾರೆಯೇ ಹೊರತು, ಅವರ್ಯಾರೂ, ಇಲ್ಲಿಗೆ ಭಿಕ್ಷೆ ಬೇಡಲು ಬಂದಿಲ್ಲಾ ಎಂಬುದನ್ನು ಮನಗಾಣ ಬೇಕಿದೆ.

ಇದೇ ಸಂಘಟನೆಯ ಕೆಲವು ಹೋರಾಟಗಾರು ಕೆಲವು ದಶಕಗಳ ಹಿಂದೆ ಕರ್ನಾಟಕದಿಂದ ಮಹಾರಾಷ್ಟ್ರದ ಮುಂಬೈ ನಗರಕ್ಕೆ ಓಡಿ ಹೋಗಿ ಆಶ್ರಯ ಪಡೆದದ್ದೂ ಕನ್ನಡಿಗರ ಹೋಟೆಲ್ ಇಲ್ಲವೇ ಬಾರಿನಲ್ಲಿ ಎಂಬುದನ್ನು ಮರೆತಂತಿದೆ. ದೇಶದ ಅತ್ಯಂತ ಹೆಚ್ಚಿನ ತೆರಿಗೆ ನೀಡುವ ನಗರವಾದ ಮುಂಬೈ ನಲ್ಲಿರುವ ಶೇ 85-90% ರಷ್ಟು ಹೋಟೆಲ್ಲುಗಳು ಮತ್ತು ಬಾರಿನ ಮಾಲಿಕರು ಕರಾವಳಿ ಮೂಲಕದ ಕನ್ನಡಿಗರದ್ದೇ ಆಗಿದ್ದು, ಅವರೆಲ್ಲರೂ ಅಲ್ಲಿನ ಭಾಷೆ ಮತ್ತು ಸಂಸ್ಕಾರಗಳನ್ನು ಕಲಿತು ಅವರೊಂದಿಗೆ ಸಹಬಾಳ್ವೆ ನಡೆಸುತ್ತಲೇ, ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಅಲ್ಲವೇ? ಅದೇ ರೀತಿ ಅಮೇರಿಕಾ ಸೇರಿದಂತೆ ಪ್ರಪಂಚಾದ್ಯಂತ ನೆಲೆಸಿರುವ ಕನ್ನಡಿಗರೂ ಸಹಾ When you are in Rom, be like a Roman ಎನ್ನುವ ಆಂಗ್ಲ ನಾಣ್ಣುಡಿಯಂತೆ ಅಲ್ಲಿನ ಕಾನೂನು ಮತ್ತು ರೀತಿ ರಿವಾಜುಗಳ ಅನುಗುಣವಾಗಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿರುವ ಈ ರೀತಿಯ ಸಂಕುಚಿತ ಮನೋಭಾವನೆಯ ಬರಹವನ್ನು ನೋಡಿ ಅಲ್ಲಿನವರು ಆಕ್ರೋಶಗೊಂಡ ಕನ್ನಡಿಗರ ವಿರುದ್ಧ ದಂಗೆ ಏಳುವಂತಾದರೆ ಅಂತಹ ನಿರಾಶ್ರಿತ ಕನ್ನಡಿಗರ ಪುನರ್ವಸತಿಯ ಬಗ್ಗೆ ಈ ತಥಾಕಥಿತ ಓಲಾಟಗಾರ ನಿಲುವೇನು ಎಂದು ಹೇಳುತ್ತಾರೆಯೇ? ನಿಜ ಹೇಳಬೇಕೆಂದರೆ ಈ ರೀತಿಯ ದುರಹಂಕಾರದ ಬೆದರಿಕೆಯ ದಬ್ಬಾಳಿಕೆಯಿಂದಲೇ ರೋಲ್ ಕಾಲ್ ಮಾಡಿಕೊಂಡು ಜೀವಿಸುತ್ತಿರುವ ಹೋರಾಟಗಾರರಿಗೆ ಮತ್ತು ಪ್ರಸ್ತುತ ಸರ್ಕಾರ ಜಾರಿಗೆ ತಂದಿರುವ ಬಿಟ್ಟಿ ಬಸ್ ಪ್ರಯಾಣ ಭಾಗ್ಯದಿಂದ ಸ್ಥಳೀಯರು ಆಟೋ ಹತ್ತುವುದೇ ಅಪರೂಪ ಆಗಿರುವಾಗ, ಅನ್ಯಭಾಷಿಕರೇ ಅವರ ಗಿರಾಕಿಗಳಾಗಿರುವ ಅವರ ವಿರುದ್ಧವೇ ಈ ರೀತಿಯ ದುರಹಂಕಾರಿ ಮಾತುಗಳನ್ನು ಆಡುವ ಮೂಲಕ ತಮ್ಮ ಆದಯಕ್ಕೆ ತಾವೇ ಕತ್ತರಿ ಹಾಕಿಕೊಂಡು, ತಮ್ಮ ಆಮಧನಿಯನ್ನು ತಾವೇ ಕೈಯ್ಯಾರೆ ಹಾಳು ಮಾಡಿಕೊಂಡಂತೆ ಆಗುವುದಿಲ್ಲವೇ?

WhatsApp Image 2023-07-25 at 11.13.29ಹೀಗೆಂದ ಮಾತ್ರಕ್ಕೆ ನೀವು ಮನುವಾದಿಗಳು, ಸಂವಿಧಾನ ವಿರೋಧಿಗಳು, ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದೀರಿ ಎಂದು ಹಾರಾಡುವ ಅವಶ್ಯಕತೆ ಇಲ್ಲಾ. ಹತ್ತಾರು ದಶಕಗಳಿಂದ ಇಲ್ಲಿದ್ದರೂ, ಇನ್ನೂ ಕೆಲವರು ಇಲ್ಲಿಯೇ ಹುಟ್ಟು ಬೆಳೆದಿದ್ದರೂ, ಇನ್ನೂ ಕನ್ನಡ ಕಲಿಯುವ ಪ್ರಯತ್ನವನ್ನೂ ಮಾಡಿಲ್ಲದವರ ವಿರುದ್ಧ ಖಂಡಿತವಾಗಿಯೂ ನಮ್ಮದೂ ಆಕ್ರೋಶವಿದೆ. ಆದರೆ ಈಗಾಗಲೇ ತಿಳಿಸಿದಂತೆ ಅವರಿಗೆ ಕರ್ನಾಟಕದಲ್ಲಿ ಇರಲು ಕನ್ನಡ ಕಲಿಯುವುದು ಅನಿವಾರ್ಯ ಎಂಬ ಪರಿಸ್ಥಿತಿಯನ್ನು ನಾವು ಸೃಷ್ಟಿ ಮಾಡದಿರುವುದು ಮತ್ತು ಅವರಿಗೆ ಕನ್ನಡ ಕಲಿಸುವ ವ್ಯವಸ್ಥೆಯನ್ನು ಮಾಡದೇ ಇರುವುದೂ ಸಹಾ ನಮ್ಮ ಕಡೆಯಿಂದ ಆದ ತಪ್ಪಾಗಿದೆ ಮತ್ತು ಅದನ್ನು ತಿದ್ದಿಕೊಳ್ಳಬೇಕಿದೆ

ವಿಪರೀತವಾದ ಅಂಗ್ಲ ವ್ಯಾಮೋಹ ಮತ್ತು ಪಾಶ್ಚಿಮಾತ್ಯ ಪ್ರಭಾವದಿಂದಾಗಿ ನಮ್ಮ ಮಕ್ಕಳನ್ನೇ ಕನ್ನಡ ಶಾಲೆಗೆ ಕಳುಹಿಸದೇ ಲಕ್ಷ ಲಕ್ಷ ಹಣ ಖರ್ಚು ಮಾಡಿ ಖಾಸಗೀ ಆಂಗ್ಲ ಮಾಧ್ಯಮದ ಅಂತರಾಷ್ಟೀಯ ಶಿಕ್ಷಣವನ್ನು ಕಲಿಸುಕೊಡಲು ಮುಂದಾಗಿರುವಾಗ, ಇನ್ನು ಹೊರಗಿನಿಂದ ಬಂದವರನ್ನು ಕನ್ನಡ ಕಲಿ ಎಂದು ದಬ್ಬಾಳಿಕೆ ಮಾಡುವುದು ಹಾಸ್ಯಾಸ್ಪದ ಎನಿಸುತ್ತದೆ.  ಪ್ರತೀ ವರ್ಷ ರಾಜ್ಯೋತ್ಸವದ ಸಮಯದಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳಿಂದ ಜನರ ತೆರಿಗೆ ಹಣದಿಂದ ಕೋಟ್ಯಾಂತರ ಅನುದಾನ ಪಡೆದುಕೊಳ್ಳುವ ಕನ್ನಡಪರ ಸಂಘಟನೆಗಳು ಈವರೆಗೂ ಒಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಉದ್ದಾರ ಮಾಡಿದ ಉದಾರಣೆ ಇದೆಯೇ? ಅದೇ ರೀತಿ, ರಾಮ ನಮಮಿ, ಆಯುಧಪೂಜೆ, ರಾಜ್ಯೋತ್ಸವ, ಸ್ವಾತ್ರಂತ್ಯ ದಿನೋತ್ಸವ, ಗಣರಾಜ್ಯೋತ್ಸವ ಗಳನ್ನು ತಮ್ಮ ಸ್ಥಳೀಯ ಆಟೋ ಸ್ಟಾಂಡುಗಳಲ್ಲಿ ಅದ್ದೂರಿಯಿಂದ ಆಚರಿಸುವ ಆಟೋ ಚಾಲಕರ ಸಂಘದವರು ಕನ್ನಡದ ಶಾಲೆಗಳನ್ನು ಉದ್ದಾರ ಮಾಡಿದ ಉದಾಹರಣೆ ಇದೆಯೇ?

ಇತ್ತಿಚೆಗೆ ದೆಹಲಿ ಮೂಲದ ಮಹಿಳೆಯೊಬ್ಬರು ಯೂಟ್ಯೂಬ್ ವೀಕ್ಷಣೆ ಮಾಡುತ್ತಿದ್ದ ಮಧ್ಯದಲ್ಲಿ ಕನ್ನಡದ ಜಾಹೀರಾತು ಪ್ರಸಾರವಾದದ್ದನ್ನೇ ಆಕ್ಷೇಪಿಸಿ ನಾನು ಕರ್ನಾಟಕದಲ್ಲಿದ್ದೇನೆ ಎಂದು ಮಾತ್ರಕ್ಕೆ ಕನ್ನಡ ಅರ್ಥವಾಗಬೇಕು ಎಂದಿಲ್ಲ ಎಂದು ಗೂಗಲ್‌ಗೆ ಪ್ರಶ್ನೆ ಹಾಕಿದ್ದಾಗ, ಅಂತಹವರ ವಿರುದ್ಧವು ಇದೇ ರೀತಿಯ ಸಾತ್ವಿಕ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಲ್ಲದೇ, ಕನ್ನಡ ಭಾಷೆಯ ವಿಷಯಗಳು, ಕನ್ನಡ ಭಾಷೆಯ ಜಾಹೀರಾತುಗಳ ಕರ್ನಾಟಕದಲ್ಲಲ್ಲದೇ ಬೇರೆ ಯಾವ ರಾಜ್ಯದಲ್ಲಿ ಪ್ರಸಾರ ಮಾಡಲು ಸಾಧ್ಯ? ಕನ್ನಡ ಗೊತ್ತಿಲ್ಲದೇ ಇದ್ದಲ್ಲಿ ಎಂದರೆ ಕಲಿಯಲು ಪ್ರಯತ್ನಿಸ ಬೇಕೇ ಹೊರತು, ಕರ್ನಾಟಕದಲ್ಲಿ ಕನ್ನಡವೇ ಏಕೆ? ಎಂದು ಪ್ರಶ್ನಿಸುವುದು ನಿಮ್ಮ ದರ್ಪ ಮತ್ತು ಮೂರ್ಖತನವನ್ನು ತೋರಿಸುತ್ತದೆ. ಕನ್ನಡ ಈ ರಾಷ್ಟ್ರದ ಅಧಿಕೃತ ಭಾಷೆಗಳಲ್ಲಿ ಒಂದು ಮತ್ತು ಕರ್ನಾಟಕದ ಆಡಳಿತ ಮತ್ತು ವ್ಯವಹಾರಿಕ ಭಾಷೆ ಆಗಿರುವ ಕಾರಣ, ಇಲ್ಲಿರುವ ಕಾರಣಕ್ಕೆ ಕನ್ನಡ ಭಾಷೆಯನ್ನು ಕಲಿತು, ಕನ್ನಡದಲ್ಲೇ ವ್ಯವಹರಿಸುವುದು ನಿಮ್ಮ ಆದ್ಯ ಕರ್ತವ್ಯ ಎಂದೂ ಸಹಾ ತಿಳಿ ಹೇಳಲಾಗಿತ್ತು.

ಈ ಪ್ರಕರಣ ಎಲ್ಲಾ ಭಾರತೀಯರಿಗೂ ಎಚ್ಚರಿಕೆಯ ಗಂಟೆಯಾಗಿದ್ದು, ಭಾರತೀಯರು, ಭಾರತದ ಯಾವುದೇ ರಾಜ್ಯಕ್ಕೆ ತೆರಳಿ ನೆಲೆಸಿ, ಅಲ್ಲಿ ಕೆಲಸ ಮಾಡುವ ಹಕ್ಕು ಎಲ್ಲರಿಗೂ ಇದೆ. ಅದೇ ರೀತಿಯಾಗಿ ಅಲ್ಲಿನ ಭಾಷೆ ಕಲಿಯಲೇ ಬೇಕು ಎಂಬ ಅಧಿಕೃತ ನಿಮಗಳೇನೂ ಇಲ್ಲದಿದ್ದರೂ, ಸೌಜನ್ಯತೆಗಾಗಿ ಮತ್ತು ಸುಲಭವಾದ ಸಂವಹನಕ್ಕಾಗಿ ಸ್ಥಳೀಯ ಭಾಷೆಯನ್ನು ಕಲಿತಲ್ಲಿ ಸೌಹಾರ್ಧತೆಯಿಂದ ಬಾಳಿ ಬದುಕಬಹುದಾಗಿದೆ. ಆ ಸ್ಥಳೀಯ ಭಾಷೆಗೆ ಅವಮಾನ ಮಾಡುವುಕ್ಕಿಂತ ಅದೇ ಸ್ಥಳೀಯ ಭಾಷೆಗಳಲ್ಲೇ ವ್ಯವಹರಿಸಿದಾಗ ಸಿಗುವ ಗೌರವವೇ ಬೇರೆ. ವೇಷ ಬೇರೆ, ಭಾಷೆ ಬೇರೆ, ದೇಶ ಒಂದೇ ಭಾರತ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

One thought on “ಆಟೋ ಬರಹಗಳು ಮತ್ತು ಸಮಾಜದ ಸ್ವಾಸ್ಥ್ಯತೆ

  1. ಹೊರನಾಡ ಕನ್ನಡ ಸಂಘಗಳ ಪದಾಧಿಕಾರಿಯಾಗಿ 10 ವರ್ಷಕ್ಕಿಂತ ಹೆಚ್ಚುಕಾಲ ಕಾರ್ಯ ನಿರ್ವಹಿಸಿ, ಸುಮಾರು 3000 ಕ್ಕಿಂತ ಹೆಚ್ಚು ವಿವಿಧ ರೀತಿಯ ಕನ್ನಡ ಕೃತಿಗಳನ್ನು ಓದಿ ಈಗ 3 ದಶಕಗಳಿಂದ ಬೆಂಗಳೂರು ನಿವಾಸಿಯಾಗಿರುವ ನಾನು ತಮ್ಮ ಅಭಿಪ್ರಾಯವನ್ನು ಖಂಡಿತ ಒಪ್ಪುತ್ತೇನೆ. ಅಭಿಮಾನ ಬೇರೆ, ದುರಭಿಮಾನ ಬೇರೆ. ದುರಭಿಮಾನ ಒಪ್ಪುವಂತಹದ್ದಲ್ಲ. ಪರಭಾಷಿಗರೊಂದಿಗೆ ನಮ್ಮ ಊರಲ್ಲೇ ಅವರ ಭಾಷೆ ಮಾತನಾಡಿ ನಮ್ಮ ಭಾಷಾ ಪಾಂಡಿತ್ಯ ತೋರಿಸುವ ಕೆಟ್ಟ ಚಪಲ ಬಿಟ್ಟಲ್ಲಿ ಅನ್ಯಭಾಷಿಗರಿಗೆ ನಮ್ಮ ಭಾಷೆ ಕಲಿಯಲು ಅನುಕೂಲ ಮತ್ತು ಅನಿವಾರ್ಯ ಉಂಟಾಗಬಹುದು.

    Liked by 1 person

Leave a comment