ಅಕ್ಕಿಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ

ಮಂಡ್ಯಾ ಜಿಲ್ಲೆ ಕೇವಲ ಸಕ್ಕರೇ ನಾಡು ಮಾತ್ರವಲ್ಲದೇ, ಸಂಗೀತ, ಸಾಹಿತ್ಯ ಮತ್ತು ದೇವಾಲಯಗಳ ಬೀಡಾಗಿದ್ದು, ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿರುವ ಅಕ್ಕಿಹೆಬ್ಬಾಳಿನ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ದರ್ಶನವನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ಮಾಡೋಣ ಬನ್ನಿ.

paddy3ಕರ್ನಾಟಕದ ಜೀವನದಿ ಕಾವೇರಿಯ ಅತಿದೊಡ್ಡ ಉಪನದಿಯಾದ ಹೇಮಾವತಿ ನದಿ ತಟದಲ್ಲಿ ಅಕ್ಕಿಹೆಬ್ಬಾಳು ಗ್ರಾಮವು ಇದ್ದು ಇಲ್ಲಿನ ಕೊಂಕಣೇಶ್ವರ ಶಿವಾಲಯದಲ್ಲಿ ದೊರೆತಿರುವ ಹೊಯ್ಸಳರ ಕಾಲದ ಎರಡು ಶಾಸನದಿಂದಾಗಿ, ಅಕ್ಕಿಹೆಬ್ಬಾಳು ಗ್ರಾಮದ ಹಳೆಯ ಹೆಸರು ಮತ್ತು ಕೊಂಕಣೇಶ್ವರ ದೇವರ ಬಗ್ಗೆ ಮಾಹಿತಿ ಸಿಗುತ್ತದೆ. ಈ ಊರಿನ ಮೂಲ ಹೆಸರು ತಂಡಲಪುರ ಎಂಬುದಾಗಿದ್ದು, ಹೇಮಾವತಿ ನದಿಯ ತೀರದಲ್ಲಿರುವ ಈ ಗ್ರಾಮದಲ್ಲಿ ಈ ಹಿಂದೆ ಹೆಚ್ಚಾಗಿ ಭತ್ತ ಬೆಳೆಯುತ್ತಿದ್ದದ್ದಲ್ಲದೇ, ಹೊಯ್ಸಳರ ಕಾಲದಲ್ಲಿ ಹೇಮಾವತಿ ನದಿಯನ್ನು ಹೆಬ್ಬಹಳ್ಳ ಎಂದು ಕರೆಯುತ್ತಿದ್ದ ಕಾರಣ ಈ ಗ್ರಾಮಕ್ಕೆ ಅಕ್ಕಿಹೆಬ್ಬಾಳು ಎಂಬ ಹೆಸರು ಬಂದಿತೆಂದು ನಂಬಲಾಗಿದೆ. ಅಲ್ಲಿ ದೊರೆತಿರುವ ಶಾಸನದ ಪ್ರಕಾರ, ಅಳತೆಗಾಗಿ ಬಳಸುವ ಸಾಧನವಾದ ಕೊಳಗದಲ್ಲಿ ಅಳತೆ ಮಾಡಿ ಸುಂಕವನ್ನು ಪಡೆಯಿತ್ತಿದ್ದದ್ದರಿಂದ ಇಲ್ಲಿನ ಈಶ್ವರನನ್ನು ಕೊಳಗೇಶ್ವರ ಎಂದು ಕರೆಯಲಾಗುತ್ತಿದ್ದು ನಂತರ ಅದು ಜನರ ಆಡುಭಾಷೆಯಲ್ಲಿ ಕೊಂಕಣೇಶ್ವರ ಎಂದಾಗಿದೆೆ ಎನ್ನುವುದು ಸ್ಥಳೀಯರ ಆಭಿಪ್ರಾಯವಾಗಿದೆ.

lakshmiಇಲ್ಲಿ ಶ್ರೀ ಲಕ್ಶ್ಮೀನರಸಿಂಹಸ್ವಾಮಿ ನೆಲೆಗೊಂಡ ಹಿಂದೆಯೂ ಒಂದು ರೋಚಕವಾದ ಪುರಾಣವಿದೆ. ಸಪ್ತರ್ಷಿಗಳಲ್ಲಿ ಒಬ್ಬರಾದ ಕೃತಯುಗದ ಶ್ರೀ ಗೌತಮ ಋಷಿಗಳು ತಮ್ಮ ದೂರದೃಷ್ಟಿಯಿಂದ ಮುಂದೆ ಬರುವ ಕಲಿಯುಗದಲ್ಲಿ ಜನರ ಕಷ್ಟಗಳನ್ನು ಪರಿಹರಿಸುವ ಸಲುವಾಗಿ ದಶಾವತಾರಗಳಲ್ಲಿ ಒಂದಾದ, ನರಸಿಂಹ ಸ್ವಾಮಿಯ ಕುರಿತಾಗಿ ಇಲ್ಲಿನ ಬದರಿಕಾವೃಕ್ಷದ ಕೆಳಗೆ ಕುಳಿತು ಅನೇಕ ವರ್ಷಗಳ ಕಾಲ ತಪಸ್ಸು ಮಾಡುತ್ತಾರೆ. ಗೌತಮ ಋಷಿಗಳ ತಪಸ್ಸಿಗೆ ಮೆಚ್ಚಿ ಲಕ್ಶ್ಮೀ ಸಮೇತನಾಗಿ ಸ್ವಾಮಿಯು ಪಶ್ವಿಮಾಭಿಮುಖವಾಗಿ ಪ್ರತ್ಯಕ್ಷವಾದಾಗ, ಭಕ್ತರ ಕಷ್ಟಗಳನ್ನು ಪರಿಹರಿಸುವ ಸಲುವಾಗಿ ಈ ಪ್ರದೇಶದಲ್ಲೇ ಶಾಶ್ವತವಾಗಿ ನೆಲೆಸಬೇಕೆಂಬ ಗೌತಮರ ಕೋರಿಕೆಯ ಮೇರೆಗೆ ನರಸಿಂಹಸ್ವಮಿಯು ಲಕ್ಷ್ಮೀಸಮೇತರಾಗಿ ಇಲ್ಲಿಯೇ ನೆಲೆಸಲು ಒಪ್ಪಿಕೊಂಡ ಪರಿಣಾಮವಾಗಿಯೇ ಗೌತಮ ಮಹರ್ಷಿಗಳು ಇಲ್ಲಿ ಪಶ್ವಿಮಾಭಿಮುಖವಾಗಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಎನ್ನಲಾಗಿದೆ. ಹೀಗೆ ಗೌತಮರು ನೆಲೆಸಿದ್ದ ಬೀಡಾಗಿದ್ದರಿಂದ ಇದನ್ನು ಗೌತಮ ಕ್ಷೇತ್ರ ಮತ್ತು ದಕ್ಷಿಣ ಬದಾರೀಕಾಶ್ರಮ ಎಂದೂ ಕರೆಯಲಾಗುತ್ತದೆ.

akk_Templeಸಾಧಾರಣವಾಗಿ ಬಹುತೇಕ ದೇವಾಲಯಗಳು ಪೂರ್ವಾಭಿಮುಖವಾಗಿಯೋ ಇಲ್ಲವೇ ಉತ್ತರಾಭಿಮುಖವಾಗಿಯೋ ಇರುವುದು ಸಹಜವಾದರೇ ಇಲ್ಲಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯು ಪಶ್ವಿಮಾಭಿಮುಖವಾಗಿ ಇರುವ ಕಾರಣ, ದೇವಾಲಯವನ್ನೂ ಸಹಾ ಪಶ್ಚಿಮಾಭಿಮುಖವಾಗಿಯೇ ನಿರ್ಮಿಸಲಾಗಿದೆ. ದೇವಾಲಯವು ಚೌಕಾಕೃತಿಯ ಕಲ್ಲಿನ ಗೋಡೆಗಳ ಪ್ರಾಕಾರದಿಂದ ನಿರ್ಮಿತವಾಗಿದ್ದು, ಪ್ರಾಕಾರದ ಮಧ್ಯದಲ್ಲಿ ಗರ್ಭಗುಡಿ ಉತ್ತರಕ್ಕೆ ಏಕ ಕೊಠಡಿಯ ಲಕ್ಷ್ಮೀಗುಡಿ ಹಾಗೂ ಆಗ್ನೆಯ ಮೂಲೆಯಲ್ಲಿ ಯಜ್ಞ ಶಾಲೆ ಇದೆ. ದೇವಾಲಯದಲ್ಲಿ ಗರ್ಭಗೃಹ, ಅಂತರಾಳ, ಮಹಾ ಮಂಟಪ ಮತ್ತು ಮುಖ ಮಂಟಪಗಳನ್ನು ಹೊಂದಿದ್ದು, ಇಲ್ಲಿನ ರಚನಾ ಶೈಲಿಯು ವಿಜಯನಗರದ ನಂತರದ ಕಾಲದ ರೀತಿಯಲ್ಲಿ ಇದ್ದರೂ, ಗರ್ಭಗೃಹದಲ್ಲಿ ಇರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ವಿಗ್ರಹವು ಹೊಯ್ಸಳ ಶೈಲಿಗೆ ಸೇರಿರುವುದು ವಿಶೇಷವಾಗಿದೆ. ನರಸಿಂಹ ಸ್ವಾಮಿಯ ಎಡತೊಡೆಯ ಮೇಲೆ ಕುಳಿತಿರುವ ಮಹಾಲಕ್ಷ್ಮಿಯ ವಿಗ್ರಹವು ಸುಖಾಸನದಲ್ಲಿದ್ದು, ಮೂರ್ತಿಯು ನಾಲ್ಕು ಕೈಗಳನ್ನೂ ಹೊಂದಿದೆ, ಮೇಲಿನ ಎಡಗೈಯಲ್ಲಿ ಶಂಖ, ಬಲಗೈಯಲ್ಲಿ ಚಕ್ರವನ್ನು ಹಿಡಿದಿದ್ದರೆ, ಇನ್ನು ಎರಡು ಕೈಗಳ ಮಹಾ ಲಕ್ಷ್ಮಿಯು ಎಡಗೈಯಲ್ಲಿ ಅಮೃತ ಕಳಶವಿದ್ದರೆ, ಬಲಗೈಯಲ್ಲಿ ಸ್ವಾಮಿಯನ್ನು ಆಲಂಗಿಸಿರುವ ರೀತಿಯಲ್ಲಿ ಇದ್ದು ನೋಡಲು ಮನಮೋಹಕವಾಗಿದೆ.

ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿಯೂ ಗರುಡ ಗಂಭ ಅರ್ಥಾತ್ ಧ್ವಜಸ್ತಂಭವನ್ನು ಕಾಣ ಬಹುದು. ಆದರೆ ಈ ದೇವಾಲಯದಲ್ಲಿ ಗರುಡಗಂಭ ಇಲ್ಲದೇ ಇರುವುದನ್ನು ಗಮನಿಸಿ, ಸುಮಾರು 600 ವರ್ಷಗಳ ಹಿಂದೆ ಚೋಳರು ಈ ದೇವಾಯದಲ್ಲಿ ಗರುಡಗಂಭದ ಜಾಗದಲ್ಲಿ ಬೃಹತ್ತಾದ ಬೃಂದಾವನವನ್ನು ನಿರ್ಮಿಸಿದರು ಎನ್ನಲಾಗುತ್ತದೆ. ಈ ಬೃಂದಾವನ ಕಟ್ಟೆಯಲ್ಲಿ ತುಳಸಿ ಸಸ್ಯವನ್ನು ನೆಟ್ಟಿ ಪೋಷಿಸುತ್ತಿದ್ದಾರೆ. ಈ ಬೃಂದಾವನವನ್ನು ಶ್ರದ್ಧಾ ಭಕ್ತಿಯಿಂದ ಸುಮಾರು 256 ಸಲ ಪ್ರದಕ್ಷಣೆ ಮಾಡಿದಲ್ಲಿ ಮನಸ್ಸಿನಲ್ಲಿ ಇರುವ ಎಲ್ಲಾ ಆಸೆಗಳು ಈಡೇರುತ್ತದೆ ಎಂಬ ಪ್ರತೀತಿ ಇರುವ ಕಾರಣ, ಇಲ್ಲಿಗೆ ಬರುವ ಭಕ್ತಾದಿಗಳು ಇದನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಪರಿಪಾಲಿಸುವುದು ಇಲ್ಲಿನ ವಿಶೇಷವಾಗಿದೆ.

ak13ಪ್ರತಿ ವರ್ಷವು ರಥಸಪ್ತಮಿಯಾದ ಒಂದು ವಾರದ ನಂತರ ನಂತರ ಮಾಘ ಮಾಸದ ಕೃಷ್ಣಪಕ್ಷ, ಪ್ರತಿಪತ್ /ದ್ವಿತೀಯ ಮಹಾನಕ್ಷತ್ರದ ದಿನದಿಂದ ಸುಮಾರು ಐದು ದಿನಗಳಕಾಲ ಬಹಳ ಅದ್ದೂರಿಯಿಂದ ಇಲ್ಲಿನ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವವು ನಡೆಯುತ್ತಲಿದ್ದು, ಆ ಜಾತ್ರೆಗೆ ದೇಶ ವಿದೇಶಗಳಿಂದ ಸಹಸ್ರಾರು ಭಕ್ತಾದಿಗಳು ಅಗಮಿಸಿ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸಿ ಕೃತಾರ್ಥರಾಗುತ್ತಾರೆ.

ಜಾತ್ರೆಯ ಮೊದಲನೆಯ ದಿನದಂದು ಅಭಿಷೇಕೋತ್ಸವವಾಗಿದ್ದು, ಶ್ರೀಲಕ್ಷ್ಮೀನರಸಿಂಹಸ್ವಾಮಿಗೆ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಸೇರಿಸಿ ದೇವರಿಗೆ ಪಂಚಾಮೃತಾ ಅಭಿಷೇಕ ಮಾಡುತ್ತಾರೆ. ಈ ದೇವಾಲಯದಲ್ಲಿ ನಿತ್ಯ ಪಾನೀಯ ಅಭಿಷೇಕ ನಡೆಯುತ್ತದೆ.

ಜಾತ್ರೆಯ ಎರಡನೆಯ ದಿನ ಕಲ್ಯಾಣೋತ್ಸವವಾಗಿದ್ದು ಅಂದು ಭಗವಾನ್ ವಿಷ್ಣು ಮತ್ತು ಮಹಾ ಲಕ್ಷ್ಮೀ ಯವರಿಗೆ ಅದ್ದೂರಿಯಿಂದ ಕಲ್ಯಾಣ ಮಾಡಿಸುತ್ತಾರೆ. ಈ ಕಲ್ಯಾಣೋತ್ಸವವನ್ನು ನೋಡಲು ದೇವಾನು ದೇವತೆಗಳು ಖುದ್ದಾಗಿ ಬರುತ್ತಾರೆ ಎಂಬ ಪ್ರತೀತಿ ಇರುವ ಕಾರಣ ಸಹಸ್ರಾರು ಭಕ್ತಾದಿಗಳು ಅಂದು ದೇವಲಯಲ್ಲಿ ಬರುತ್ತಾರೆ.

ak9ಇನ್ನುಜಾತ್ರೆಯ ಮೂರನೆಯ ದಿನ ಪಲ್ಲಕ್ಕಿ ಉತ್ಸವವಿದ್ದು ಈ ದಿನ ಶ್ರೀಲಕ್ಷ್ಮೀನರಸಿಂಹಸ್ವಾಮಿಯ ಉತ್ಸವ ಮೂರ್ತಿಯನ್ನು ಬಗೆ ಬಗೆ ಹೂಗಳಿಂದ ಸುಂದರವಾಗಿ ಅಲಂಕಾರ ಮಾಡಿ ದೇವರನ್ನು ರಾತ್ರಿ ವೇಳೆ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾರೆ. ಈ ಸಮಯದಲ್ಲಿ ಉತ್ಸವದ ಜೊತೆ ಮುಂದೆ ವಿವಿಧ ಜನಪದ ಕಲಾ ತಂಡಗಳು ತಮ್ಮ ಕಲಾಪ್ರದಶ್ರನದ ಮೂಲಕ ಭಕ್ತಾದಿಗಳ ಮನರಂಜನೆ ಮಾಡುತ್ತಾರೆ. ಸಂಜೆ ಸೂರ್ಯಾಸ್ತಾ ನಂತರ ಕ್ಷ್ಮೀನರಸಿಂಹಸ್ವಾಮಿಯ ದೇವಾಲಯದಿಂದ ಆರಂಭವಾಗುವ ಈ ಉತ್ಸವ ಅಕ್ಕಿಹೆಬ್ಬಾಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯ ಮೆರವಣಿಗೆಯ ನಂತರ ಮತ್ತೇ ದೇವಾಲಯದ ಗುಡಿ ದುಂಬಿಸುವ ವೇಳೆಗೆ ಮಧ್ಯರಾತ್ರಿ ಮೂರುಗಂಟೆ ಆಗಿರುತದೆ ಎಂದರೆ ಉತ್ಸತ್ವದ ವಿಜೃಂಭಣೆ ಮತ್ತು ಸಂಭ್ರಮದ ಅರಿವಾಗುತ್ತದೆ.

ಜಾತ್ರೆಯ ನಾಲ್ಕನೆಯ ದಿನ ಅದ್ದೂರಿಯ ರಥೋತ್ಸವವಿದ್ದು, ಹಿಂದಿನ ದಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿದ್ದ ಉತ್ಸವ ಮೂರ್ತಿಯನ್ನು ಅದ್ದೂರಿಯ ಅಲಂಕಾರ ಮಾಡಿದ ರಥದಲ್ಲಿ ಕೂರಿಸಲಾಗುತ್ತದೆ. ಈಗೆ ಸ್ವಾಮಿಯನ್ನು ರಥದಲ್ಲಿ ಸ್ಥಾಪಿಸಿದ ಕೂಡಲೇ, ಆಕಾಶದಲ್ಲಿ 50 ರಿಂದ 60 ಅಡಿ ಎತ್ತರದಲ್ಲಿ ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷವಾಗುವ ಗರುಡ ಪಕ್ಷಿಗಳು ರಥದ ಸುತ್ತಲೂ ಪ್ರದಕ್ಷಿಣೆ ಹಾಕಿದ ನಂತರವಷ್ಟೇ ರಥವನ್ನು ಎಳೆಯಲಾಗುತ್ತದೆ. ಹೀಗೆ ಮಹಾ ವಿಷ್ಣುವಿನ ವಾಹನ ಗರುಡನ ಆಜ್ಞೆ ನೀಡುವುದು ಅತ್ಯಂತ ವಿಶೇಷವಾಗಿದ್ದು, ಈ ಅಭೂತಪೂರ್ವವಾದ ದೃಷ್ಯವನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ದೇಶ-ವಿದೇಶಗಳಿಂದ ಭಕ್ತರು ಆಗಮಿಸಿ ಉಘೇ-ಉಘೇ ಲಕ್ಷ್ಮೀನರಸಿಂಹ ಎಂದು ಮುಗಿಲು ಮುಟ್ಟುವ ಹಾಗೆ ಜಯಘೋಷಗಳನ್ನು ಹಾಕುತ್ತಾ, ರಥದ ಕಳಸಕ್ಕೆ ಬಾಳೇ ಹಣ್ಣು ಎಸೆದು ಕೃತಾರ್ಥರಾಗುವ ಪರಿ ನಿಜಕ್ಕೂ ಅದ್ಭುತ ಮತು ಅವರ್ಣೀಯವೇ ಸರಿ. ಸ್ವಾಮಿಯ ದರ್ಶನ ಮಾಡಿ ದೇವರಿಗೆ ಹಣ್ಣುಕಾಯಿ ಅರ್ಪಿಸಿ ನಮಿಸಿದ ಅನಂತರ ಬಂದಿರುವ ಎಲ್ಲಾ ಭಕ್ತರಿಗೂ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.

ಜಾತ್ರೆಯ ಐದನೆಯ ಹಾಗೂ ಅಂದಿನ ದಿನದಂದು ತೆಪ್ಪೋತ್ಸವವಿದ್ದು, ಆ ದಿನ ದೇವರಿಗೆ ಹೇಮಾವತಿ ನದಿಯ ನೀರಿನಿಂದ ಆಭಿಷೇಕಮಾಡಿ ತೆಪ್ಪದ ಮೇಲೆ ಇರಿಸಿ ದೇವರಿಗೆ ಜಲಕ್ರೀಡೆ ಆಡಿಸಿದ ನಂತರ ಗುಡಿ ತುಂಬಿಸುತ್ತಾರೆ.

ಪ್ರತಿನಿತ್ಯವೂ ಸ್ವಾಮಿಗೆ ವಿವಿಧ ರೀತಿಯ ಅಭಿಷೇಕ ಮತ್ತು ಷೋಡಶೋಪಚಾರ ಪೂಜೆಗಳು ನಡೆದರೆ, ಹಬ್ಬ ಹರಿದಿನಗಳು, ಶ್ರೀ ನರಸಿಂಹ ಜಯಂತಿ, ಶಂಕರಜಯಂತಿ ಹಾಗು ರಾಮ ನವಮಿ ಯಂದು ವಿಶೇಷವಾದ ಪೂಜೆಗಳು ಮಾಡಲಾಗುತ್ತದೆ.

ಸುಮಾರು ನೂರು ವರ್ಷಗಳ ಹಿಂದೆ ಈ ಅಕ್ಕಿ ಹೆಬ್ಬಾಳುವಿನಲ್ಲಿ ಮಲೇರೀಯಾ ರೋಗ ಬಂದ ಕಾರಣ, ಇಡೀ ಊರಿನ ಜನರು ಗುಳೇ ಹೋಗಿ ಅಲ್ಲಿಂದ ಸುಮಾರು 3 ಕಿ.ಮೀ ದೂರದಲ್ಲಿ ಹೊಸ ಊರನ್ನು ಕಟ್ಟಿ ಕೊಂಡು ಜನರು ವಾಸಿಸುತ್ತಿರುವ ಕಾರಣ, ಹಳೇ ಊರಿನಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಶ್ರೀ ಕೊಂಕಣೇಶ್ವರ ದೇವಾಲಯ ಮತ್ತು ಇತ್ತೀಚೆಗೆ ನಿರ್ಮಿಸಿರುವ ಯಾತ್ರಿನಿವಾಸ್ ಅದರ ಪಕ್ಕದಲ್ಲೇ ಪ್ರಶಾಂತವಾಗಿ ಹರಿಯುತ್ತಿರುವ ಹೇಮಾವತಿ ಅದರ ಸುತ್ತಲೂ ಹಸಿರಿನಿಂದ ಕೂಡಿದ ಗದ್ದೆಗಳು ಮತ್ತು ತೋಟಗಳಿವೆ.

ನೂರಾರು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ದೇವಾಲಯ ಪ್ರಕೃತಿಯ ವಿಕೋಪಗಳಿಂದಾಗಿ ಶಿಥಿಲಾವಸ್ಥೆಗೆ ತಲುಪುತ್ತಿದ್ದದ್ದನ್ನು ಗಮನಿಸಿದ ಸ್ಥಳೀಯರು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಸಮಿತಿಯನ್ನು ರಚಿಸಿಕೊಂಡು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ನ್ಯಾಸ ಟ್ರಸ್ಟ್ ನ ಸಹಯೋಗದೊಂದಿಗೆ ದೇವಾಲಯದ ಪುನರುಜ್ಜೀವನ ಕಾರ್ಯವನ್ನು ನೆರವೇರಿಸಿರುವುದು ಶ್ಲಾಘನೀಯವಾಗಿದೆ.

armitraಇನ್ನು ಅಕ್ಕಿಹೆಬ್ಬಾಳು ಸಾಹಿತ್ಯ ಕ್ಷೇತ್ರಕ್ಕೆ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದೆ. ಇದೇ ಗ್ರಾಮದಲ್ಲಿ ಹುಟ್ಟಿ ಬೆಳೆದ ಡಾ.ನಾಗಪ್ಪ ಇವರು ಹಿಂದಿ ಭಾಷೆಯಲ್ಲಿ ಎಂ.ಎ ಪದವಿ ಪಡೆದ ಪ್ರಪ್ರಥಮ ದಕ್ಷಿಣ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರಾರಾಗಿದ್ದಾರೆ. ಬೆಂಗಳೂರಿನಲ್ಲಿ ಪ್ರಥಮ ಕಲಾಮಂದಿರ ನಿಮಾಣ ಮಾಡಲು ಕಾರಣೀಭೂತರಾದ ಶ್ರೀ ಅ.ನಾ.ಸುಬ್ಬರಾಯರು ಅಕ್ಕಿಹೆಬ್ಬಾಳಿನವರು. ಆಧ್ಯಾತ್ಮಿಕ ಸಾಹಿತ್ಯದಲ್ಲಿ ಪ್ರಖ್ಯಾತರಾಗಿ ಪಂಪ ಪ್ರಶಸ್ತಿಯ ಪುರಸ್ಕೃತರೂ ಅಗಿರುವ ಶ್ರೀ ಎ.ಎನ್. ಮೂರ್ತಿರಾವ್ ಸಹಾ ಇದೇ ಗ್ರಾಮದವರಾಗಿದ್ದರೆ, ಇನ್ನೂ ಹಾಸ್ಯ ಸಾಹಿತ್ಯಕ್ಕೆ ಹೆಸರುವಾಸಿಯಾದ ಶ್ರೀ ಅ.ರಾ.ಮಿತ್ರರವರು ಕೂಡ ಇದೇ ಗ್ರಾಮದವರು. ಆಕಾಶವಾಣಿ ಈರಣ್ಣ ಎಂಬ ಖ್ಯಾತಿಯ ರಂಗಕರ್ಮಿ ಶ್ರೀ ಎ.ಎಸ್.ಮೂರ್ತಿ, ವಿಡಂಬನಾ ಸಾಹಿತಿ ಅ.ರಾ.ಶೇಷಗಿರಿ, ಪತ್ರಿಕೋದ್ಯಮಕ್ಕೆ ಕೀರ್ತಿ ತಂದ ಕೃ.ನ.ಮೂರ್ತಿ ಕಾದಂಬರಿಕಾರ ಅ.ರಾ. ಆನಂದ, ಶಿಶುಸಾಹಿತಿ ಅ.ರಾ.ಚಂದ್ರ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿದ್ದ ಶ್ರೀ ಎ. ಆರ್.ಶಶಿಧರ್ ಭಾರಿಘಾಟ್, ಭರತನಾಟ್ಯ ಪ್ರವೀಣರಾದ ಶ್ರೀಧರ್, ಅಖಿಲ ಭಾರತ್ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ವಿಜಯಲಕ್ಷ್ಮಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಶ್ರೀ ಎ.ಎಸ್.ನಾಗರಾಜು ಈ ಎಲ್ಲಾ ಸಾಧಕರು ಅಕ್ಕಿಹೆಬ್ಬಾಳು ಗ್ರಾಮದ ಹಿರಿಮೆ ಮತ್ತು ಗರಿಮೆಯನ್ನು ವಿಶ್ವವಿಖ್ಯಾತ ಗೊಳಿಸಿದ್ದಾರೆ ಎಂದರು ಅತಿಶಯವಾಗದು.

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯಿಂದ ಕೇವಲ 14 ಕಿಲೋಮೀಟರ್ ದೂರದಲ್ಲಿರುವ ಅಕ್ಕಿ ಹೆಬಾಳಿಗೆ ಉತ್ತಮವಾದ ಬಸ್ ಸೌಲಭ್ಯವಿದ್ದರೆ, ಮೈಸೂರು ಅರಸೀಕೆರೆ ರೈಲು ಮಾರ್ಗದ ಮೂಲಕವೂ ಅಕ್ಕಿಹೆಬ್ಬಾಳನ್ನು ತಲುಪಬಹುದಾಗಿದೆ. ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿ ಕೊಂಡೋ ಇಲ್ಲವೇ ರಥೋತ್ಸವದ ಸಮಯದಲ್ಲೋ ಅಕ್ಕಿ ಹೆಬ್ಬಾಳಿಗೆ ಭೇಟಿ ನೀಡಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಮತ್ತು ಕೊಂಕಣೇಶ್ವರನ ದರ್ಶನ ಪಡೆದು ಸ್ವಾಮಿಯ ಕೃಪಾಶೀಋವಾದಕ್ಕೆ ಪಾತ್ರರಾದ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

5 thoughts on “ಅಕ್ಕಿಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ

  1. ಅಕ್ಕಿಹೆಬ್ಬಾಳಿನ ಮತ್ತು ಅಲ್ಲಿನ ಸಾಂಸ್ಕೃತಿಕ ಪರಂಪರೆಯ ಬಗ್ಗೆ ವಿಷದವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು. ಒಮ್ಮೆ ಕ್ಷೇತ್ರ ದರ್ಶನ ಮಾಡಲು ಉತ್ಸುಕನಾಗಿದ್ದೇನೆ. ಲೇಖನಕ್ಕೆ ಧನ್ಯವಾದಗಳು

    Like

  2. ಇತಿಹಾಸ ನಿರೂಪಣೆ ಸರಿ ಇಲ್ಲ.
    ಈ ಪ್ರದೇಶವು ಕೊಂಗಾಳ್ನಾಡು ೭೦ಕ್ಕೆ ಸೇರಿದ ಭಾಗವಾಗಿತ್ತು. ಮೊದಲಿಗೆ ಗಂಗರ ಮಾಂಡಲಿಕರಾಗಿದ್ದ ಇವರು ಆರಂಭದಲ್ಲಿ ಹೊಯ್ಸಳರ ವಿರುದ್ಧ ತಿರುಗಿ ಬಿದ್ದರು. ವಿಷ್ಣುವರ್ಧನನು ಇವರನ್ನು ಸೋಲಿಸಿ ಕೊಂಗಾಳ್ವರ ರಾಜಕುಮಾರಿ ಚಂದಲ ದೇವಿಯನ್ನು ಮದುವೆ ಆದನು. ಕೊಂಗಾಳ್ನಾಡಿನ ಮುಖ್ಯ ಪಟ್ಟಣವಾಗಿದ್ದ ಈ ಊರಿಗೆ ಹೆಬ್ಬೊಳಲು ಅಂದರೆ ದೊಡ್ಡ ಪಟ್ಟಣ ಎಂಬ ಹೆಸರಿತ್ತು. ಕೊಂಗಾಳ್ವರು ಇಲ್ಲಿ ಕೊಂಗಾಳೇಶ್ವರ ದೇವಾಲಯವನ್ನು ನಿರ್ಮಿಸಿ ದತ್ತಿಯನ್ನು ಬಿಟ್ಟರು. ಇದರ ನಿರ್ಮಾಣ ಕಾಲ ಸುಮಾರು ೧೦ ನೆ ಶತಮಾನ. ಇದು ಮುಂದೆ ಕೊಂಕಣೇಶ್ವರ ಎಂದು
    ಅಪಭ್ರಂಶ ಗೊಂಡಿತು. ಈ ಭಾಗದಲ್ಲಿ ಪ್ರಾಚೀನ ಕಾಲದಿಂದಲೂ ನದಿಗೆ ಅಣೆಕಟ್ಟನ್ನು ನಿರ್ಮಿಸಿ ಹೆಚ್ಚಾಗಿ ಅಕ್ಕಿಯನ್ನು (ಭತ್ತ,) ಬೆಳೆಯುತ್ತಿದ್ದುದರಿಂದ ಇದಕ್ಕೆ ಅಕ್ಕಿ ಹೆಬ್ಬಾಳು ಎಂಬ ಹೆಸರು ಬಂದಿತು

    ಇತಿಹಾಸ ಇನ್ನೂ ಇದೆ. ಇಲ್ಲಿ ತಿಳಿಸಲು ಸಾಧ್ಯವಿಲ್ಲ

    ಮಹಾರಾಜ ಜಯ ಚಾಮ ರಾಜ ಒಡೆಯರ personal physician ಆಗಿದ್ದ ಸೀನಿಯರ್ ಸರ್ಜನ್ ಸುಬ್ಬ ರಾಯರು ಈ ಊರಿನವರು.

    Like

    1. Dear Dr. S. Nanjunda Swamy, My forefathers are from Old Akkihebbalu. My maternal grandfather, from Narasipur, was the Postmaster in the New Town. I am researching the Eswara Temple. Can you kindly contact me? viswa.sharma@gmail.com

      Like

  3. Hi I have born in this village .extremely happy to read such wonderfull article we are visiting every year with out fail

    Like

  4. ನನ್ನ ಹಿಂದಿನ ಟಿಪ್ಪಣಿಯಲ್ಲಿ ಕೊಂಗಾಳ್ನಾಡು ೭೦ ಎಂದು ತಪ್ಪಾಗಿ ನಮೂದಿಸಿದ್ದೆ. ಅದು ಕೊಂಗಾಳ್ನಾಡು ೮೦೦೦ ಎಂದು ಗಂಗರ ಕಾಲದಲ್ಲಿ ಪ್ರಸಿದ್ದಿಯಾಗಿತ್ತು. ನಂತರ ಕೊಂಗಾಲ್ನಾಡು ಸಹಸ್ರ ಎಂದು ಆಯಿತು.

    Like

Leave a reply to speedy72f358fdea Cancel reply