ಸ್ವಾತಂತ್ರ್ಯೋತ್ಸವದ ಲೆಖ್ಖಾಚಾರ

ಎಲ್ಲರಿಗೂ 77ನೇ ಸ್ವಾತ್ರಂತ್ರ್ಯ ದಿನಾಚರಣೆಯ ಹಾರ್ಧಿಕ ಶುಭಾಶಗಳು. ಅರೇ! ನಮ್ಮ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತು ಈಗ 2023 ಕ್ಕೆ 76ವರ್ಷಗಳು ಆಗುತ್ತದೆ ಆದರೆ 77 ಸ್ವಾತ್ರಂತ್ರ್ಯ ದಿನಾಚರಣೆ ಎಂದು ಏಕೆ ಕರೆಯಲಾಗುತ್ತದೆ? ಎಂಬುದನ್ನು ತಿಳಿಯುವ ಮೊದಲು ನಮ್ಮ ದೇಶದ ಇತಿಹಾಸವನ್ನು ಒಮ್ಮೆ ಇಣಿಕಿ ಹಾಕೋಣ ಬನ್ನಿ.

ab

7ನೇ ಶತಮಾನದಲ್ಲಿ ಅಖಂಡ ಭಾರತ ದೇಶವು ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಮತ್ತು ಇರಾನ್‌ನಿಂದ ಇಂಡೋನೇಷ್ಯಾದವರೆಗೆ ಸುಮಾರು 83 ಲಕ್ಷ ಚದರ ಕಿಲೋಮೀಟರ್ ನಷ್ಟು ವಿಸ್ತೀರ್ಣದ ಅತ್ಯಂತ ಸುಭಿಕ್ಷವಾದ ನಾಡಾಗಿತ್ತು. ರತ್ನಗರ್ಭ ವಸುಂಧರಾ ಎನ್ನುವ ಹೆಸರಿಗೆ ಅನ್ವರ್ಥದಂತೆ ಮುತ್ತು ವಜ್ರ ವೈಢೂರ್ಯಗಳನ್ನು ಬಳ್ಳ ಬಳ್ಳಗಳಲ್ಲಿ ರಸ್ತೆಗಳಲ್ಲಿ ಮಾರಾಟಮಾಡುತ್ತಿದ್ದಂತಹ ಸುವರ್ಣಮಯವಾಗಿದ್ದರೆ, ಇನ್ನು ಭಾರತದಲ್ಲಿ ಹೇರಳವಾಗಿ ದೊರೆಯುತ್ತಿದ್ದ ಸಾಂಬಾರು ಪದಾರ್ಥಗಳನ್ನು ವಿದೇಶಿಗರು ಚಿನ್ನದೊಂದಿಗೆ ವಿನಿಮಯ ಮಾಡಿಕೊಳ್ಳುವಷ್ಟು ಸಂಪದ್ಭರಿತವಾಗಿತ್ತು ನಮ್ಮೀ ದೇಶ.

ಇಂತಹ ಸಂಪದ್ಭರಿತ ರಾಷ್ಟ್ರದ ಮೇಲೇ ಸುಮಾರು 7ನೇ ಶತಮಾನದಿಂದಲೂ ಲೂಟಿ ಮಾಡುವ ಸಲುವಾಗಿ ಮಧ್ಯ ಪ್ರಾಚ್ಯದ ಅರಬ್ಬಿನ ಮುಸಲ್ಮಾನ ಧಾಳಿಕೋರರು ಪದೇ ಪದೇ ಭಾರತದ ಮೇಲೆ ಧಾಳಿ ನಡೆಸುತ್ತಲೇ ಬಂದರೂ ನಮ್ಮ ದೇಶದ ಕ್ಷಾತ್ರತೇಜದ ರಾಜ ಮಹರಾಜರುಗಳು ಸುಮಾರು ಮೂರ್ನಾಲ್ಕು ಶತಮಾನಗಳ ಕಾಲ ಸಮರ್ಥವಾಗಿ ಹೊಡೆದು ಹಿಮ್ಮೆಟ್ಟಿಸಿದ್ದರು. ಹಾಗೆ ಬಂದ ಲೂಟಿ ಕೋರರು ಹಿಂದೂ ದೇವಾಲಯಗಳು ಮತ್ತು ಸಿರಿವಂತರ ಮನೆಗಳಮೇಲೆ ಧಾಳಿ ಮಾಡಿ ಕೈಗೆ ಸಿಕ್ಕಷ್ಟು ಸಂಪತ್ತನ್ನು ಲೂಟಿ ಮಾಡಿಕೊಂಡು ಹೋಗುತ್ತಿದ್ದರು. ಆದರೆ, 11-12ನೇ ಶತಮಾನದಲ್ಲಿ ನಮ್ಮ ರಾಜರುಗಳಲ್ಲಿ ಒಡಕು ಮೂಡಿಸಲು ಸಫಲರಾದ ವಿದೇಶೀ ಧಾಳಿಕೋರರು ತಮ್ಮ ಆಕ್ರಮಣಕಾರಿ ಧೋರಣೆಯಿಂದಾಗಿ ಒಂದೋದೇ ಪ್ರದೇಶಗಳು ವಿದೇಶಿಗರ ಪಾಲಾಗುತ್ತಾ ಬಂದವು.

ಕುರಿ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎನ್ನುವಂತೆ ಮೊಘಲರ ಆಕ್ರಮಣದ ನಂತರ ಕ್ರಮೇಣ ಹೂಣರು ಶಕರು, ಡಚ್ಚರು, ಫೆಂಚರು ಸತವಾಗಿ ಭಾರತ ದೇಶದ ಮೇಲೆ ದಂಡೆತ್ತಿ ಬಂದು ಭಾರತ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದುಕೊಂಡು ಹೋದರೂ, ಅತ್ಯಂತ ಸಂಪತ್ಭರಿತವಾದ ದೇಶವಾಗಿಯೇ ಇತ್ತಲ್ಲದೇ, ಭಾರತದ ಸಾಂಬಾರು ಪದಾರ್ಥಗಳಿಗೆ ಯುರೋಪಿಯನ್ ರಾಷ್ಟ್ರಗಳಲ್ಲಿ ಚಿನ್ನದ ಬೆಲೆ ಇದ್ದದ್ದನ್ನು ಗಮನಿಸಿದ ಇಂಗ್ಲೇಂಡ್ ಮೂಲದ ಈಸ್ಟ್ ಇಂಡಿಯಾ ಕಂಪನಿ ಅರಬ್ಬಿ ಸಮುದ್ರದ ಮೂಲಕ, ಭಾರತದೊಂದಿಗೆ ಸಾಂಬಾರು ಪದಾರ್ಥಗಳಲ್ಲದೇ, ಹತ್ತಿ, ರೇಷ್ಮೆ, ಚಹಾ ಮತ್ತು ಅಫೀಮು ಮುಂತಾದ ಪದಾರ್ಥಗಳ ವ್ಯಾಪಾರ ಮಾಡುವ ಸಲುವಾಗಿ ಆಗಸ್ಟ್ 24, 1608 ರಂದು ಇಂದಿನ ಗುಜರಾತಿನ ಸೂರತ್ ಬಂದರಿನಲ್ಲಿ ಮೊತ್ತ ಮೊದಲ ಬಾರಿಗೆ ಭಾರತ ಉಪ ಖಂಡಕ್ಕೆ ಬಂದಿಳಿದರು.

ಅರಂಭದಲ್ಲಿ ವ್ಯಾಪಾರವನ್ನೇ ಮೂಲ ಉದ್ದೇಶವನ್ನಾಗಿಸಿಕೊಂಡು ನೂರಾರು ಸಣ್ಣ ಸಣ್ಣ ರಾಜ್ಯಗಳಾಗಿ ಹರಿದು ಹಂಚಿಹೋಗಿದ್ದ ರಾಜರುಗಳ ಸ್ನೇಹ ಸಖ್ಯವನ್ನು ಸಂಪಾದಿಸಿದ ನಂತರ ಕ್ರಮೇಣ ಆ ರಾಜರುಗಳ ನಡುವೆ ಪರಸ್ಪರ ವೈಮನಸ್ಯ ಬರುವಂತೆ ಮಾಡಿದ ಪರಿಣಾಮ, 1757 ರಲ್ಲಿ ಪ್ಲಾಸಿ ಯುದ್ಧದ ನಂತರ, ಬ್ರಿಟಿಷರು ಭಾರತದಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದ್ದಲ್ಲದೇ, ಭಾರತವನ್ನು ತಮ್ಮ ವಸಾಹತುಶಾಹಿ ರಾಷ್ಟ್ರವನ್ನಾಗಿಸಿ ಕೊಂಡಿದ್ದಲ್ಲದೇ, ಉಳಿದ ಎಲ್ಲಾ ಧಾಳಿಕೋರರಿಗಿಂತಲೂ ನೂರ್ಪಟ್ಟು ಸಂಪತ್ತನ್ನು ಭಾರತದಿಂದ ತಮ್ಮ ದೇಶಕ್ಕೆ ಹೊಡೆದುಕೊಂಡಿದ್ದು ನಿಜಕ್ಕೂ ದುರಾದೃಷ್ಟಕರ.

mangalpande

ಆರಂಭದಲ್ಲಿ ಬ್ರಿಟೀಷರನ್ನು ತಲೆ ಮೇಲೆ ಕೂರಿಸಿ ಮೆರೆದಾಡಿದ್ದ ಭಾರತೀಯರಿಗೆ ನಂತರ ಅವರ ಒಡೆದು ಆಳುವ ನೀತಿಗಳು ತಿಳಿಯುತ್ತಿದ್ದಂತೆಯೇ, 1857ರಲ್ಲಿ ಮಂಗಲ ಪಾಂಡೆ ಎಂಬ ಬ್ರಿಟಿಷ್ ಸೇನೆಯಲ್ಲಿದ್ದ ಸೈನಿಕನೇ, ಬ್ರಿಟೀಷರ ವಿರುದ್ಧ ತಿರುಗಿ ಬಿದ್ದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಹುಟ್ಟು ಹಾಕಿದಾಗ, ಸೂರ್ಯ ಮುಳುಗದ ಸಾಮ್ರಾಜ್ಯದ ಪ್ರಭುಗಳು ಎಂದು ಕರೆದುಕೊಳ್ಳುತ್ತಿದ್ದ ಬ್ರಿಟೀಷರು ಒಬ್ಬ ಸಾಮಾನ್ಯ ಸೈನಿಕನ ಯಕಶ್ಚಿತ್ ದಂಗೆಗೆ ಬೆದರಿದನ್ನು ಗಮನಿಸಿದ ಇತರೇ ಭಾರತೀಯರು ಸಹಾ ಒಗ್ಗಟ್ಟಾಗಿ ಬ್ರಿಟೀಷರನ್ನು ಈ ದೇಶದಿಂದ ಹೊರ ಹಾಕಲು ಅವರ ಮೇಲೆ ಮುಗಿಬಿದ್ದಾಗ, ಭಾರತೀಯರಿಂದ ಈ ಪರಿಯಾದ ಧಾಳಿಯನ್ನು ನಿರೀಕ್ಷಿಸದಿದ್ದ ಈಸ್ಟ್ ಇಂಡಿಯಾ ಕಂಪನಿ, ಬ್ರಿಟೀಷರಿಗೆ, ಇನ್ನು ಮುಂದೆ ತಾವು ಈ ದೇಶವನ್ನು ಆಳುವುದು ಕಷ್ಟ ಎಂಬುದನ್ನು ಅರಿತು ಭಾರತದ ಸಂಪೂರ್ಣ ಅಧಿಕಾರವನ್ನು ಅಂದಿನ ಬ್ರಿಟಿಷ್ ರಾಣಿಯ ಸುಪರ್ದಿಗೆ ವಹಿಸಿಕೊಟ್ಟರು.

ಹೀಗೆ ಈಸ್ಟ್ ಇಂಡಿಯಾ ಕಂಪನಿಯಿಂದ ಅಧಿಕಾರ ವಹಿಸಿಕೊಂಡ ಬ್ರಿಟನ್ನಿನ ರಾಣಿಗೆ ಇರಾನ್‌ನಿಂದ ಇಂಡೋನೇಷ್ಯಾದವರೆಗೆ ಸುಮಾರು 83 ಲಕ್ಷ ಚದರ ಕಿಲೋಮೀಟರ್ ನಷ್ಟು ವಿಶಾಲವಾಗಿ ಹರಡಿದ್ದ ಈ ನಾಡನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ರಾಜ್ಯಭಾರ ಮಾಡುವುದು ದುಸ್ತರ ಎನಿಸಿ, ಬ್ರಿಟಿಷರು ಭಾರತದಿಂದ ಸಂಪೂರ್ಣವಾಗಿ ಕಾಲು ಕೀಳುವ ಮೊದಲು ಕಡೆಯ 61 ವರ್ಷಗಳಲ್ಲಿ ಸುಮಾರು 7 ಬಾರಿ ಭಾರತವನ್ನು ವಿಭಜನೆ ಮಾಡಿದರು. ಬ್ರಿಟೀಷರು ಪ್ರಪಂಚಾದ್ಯಂತ ಬಹುತೇಕ ರಾಷ್ಟ್ರಗಳನ್ನು ತಮ್ಮ ವಸಾಹತುಶಾಯಿಯ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಅಲ್ಲಿನ ಸಂಪತ್ತನ್ನು ಸೂರೆಗೊಂಡು ನಂತರ ಅಲ್ಲಿಂದ ಸದ್ದಿಲ್ಲದೇ ಕಾಲ್ತೆಗೆದರೆ, ಭಾರತವನ್ನು ಮಾತ್ರಾ ಇಷ್ಟೊಂದು ಬಾರಿ ವಿಭಜನೆ ಮಾಡಿ ಭಾರತದ ವಿಸ್ತೀರ್ಣವನ್ನು ಕೇವಲ 33 ಲಕ್ಷ ಚದರ ಕಿಲೋಮೀಟರ್ ಗಷ್ಟೇ ಸೀಮಿತಗೊಳಿಸಿ ಭಾರತ ದೇಶ ಏಷ್ಯಾ ಮತ್ತು ಪ್ರಪಂಚದಲ್ಲಿ ಅತ್ಯಂತ ಪ್ರಭಲ ರಾಷ್ಟ್ರವಾಗುವುದನ್ನು ತಪ್ಪಿಸಿದರು ಎನ್ನುವ ವಿಷಯ ತಿಳಿದಾಗ ಸಕಲ ಭಾರತೀಯರ ರಕ್ತ ಕುದಿಯುತ್ತದೆ ಎಂದರೂ ಅತಿಶಯವಾಗದು.

netaji

ಈ ದೇಶದ ಲಕ್ಷಾಂತರ ಕ್ರಾಂತಿಕಾರಿ ಹೋರಾಟಗಾರರು ಪದೇ ಪದೇ ಬ್ರಿಟೀಷರ ಮೇಲೆ ಆಂತರಿಕವಾಗಿ ಎಲ್ಲಾ ಕಡೆಯಿಂದಲೂ ಹೋರಾಟ ನಡೆಸುತ್ತಿದ್ದರೆ, ಬರ್ಮ, ಇಂಡೋನೇಷ್ಯಾ, ಸಿಲೋನ್, ಸಿಂಗಾಪುರ್ ನಲ್ಲಿ ಇದ್ದ ಭಾರತೀಯ ಮೂಲವಾಸಿಗರನ್ನು ಒಗ್ಗೂಡಿಸಿ ಅವರಿಂದಲೇ ಆಜಾದ್ ಹಿಂದ್ ಫೌಜ್ ಎಂಬ ಸೇನೆಯನ್ನು ಕಟ್ಟಿ ಬ್ರಿಟೀಷರ ವಿರುದ್ಧ ನೇತಾಜಿ ಸುಭಾಷ್ ಚಂದ್ರ ಬೋಸರು ಸತತವಾಗಿ ಧಾಳಿ ನಡೆಸುತ್ತಿದ್ದದ್ದನ್ನು ಸಹಿಸಲಾಗದ ಬ್ರಿಟೀಷರು ಅಂತಿಮವಾಗಿ ಆಗಸ್ಟ್ 15, 1947 ರಂದು ಭಾರತ ದೇಶಕ್ಕೆ ಸ್ವಾತ್ರಂತ್ರ್ಯ ಕೊಟ್ಟು ಹೋಗುವ ಮುನ್ನಾ ಸುಮಾರು 339 ವರ್ಷಗಳ ಕಾಲ ಈ ದೇಶದಲ್ಲಿ ಆಳ್ವಿಕೆ ನಡೆಸಿ ಕೇವಲ ಈ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದದ್ದಲ್ಲದೇ, ನಮ್ಮ ದೇಶದ ಬಹುದೊಡ್ಡ ಆಸ್ತಿಯಾಗಿದ್ದ ಗುರುಕುಲ ಎಂಬ ಬೌಧ್ದಿಕ ಸಂಪತ್ತನ್ನು ತಮ್ಮ ಮೆಕಾಲೆ ಶಿಕ್ಷಣ ನೀತಿಯಿಂದ ಹಾಳು ಗೆಡವಿ ಹೋಗಿರುವುದನ್ನು ಇಂದಿಗೂ ಸರಿ ಪಡಿಸಲು ಆಗದೇ ಪರಿತಪಿಸಬೇಕಾಗಿರುವುದು ನಿಜಕ್ಕೂ ದುರಾದೃಷ್ಟವೇ ಸರಿ.

WhatsApp Image 2023-08-14 at 20.22.08

ಆಗಸ್ಟ್ 15, 1947 ರಂದು ಪಂಡಿತ್ ನೆಹರು ಅವರ ನೇತೃತ್ವದಲ್ಲಿ ಪ್ರಜಾಸತ್ತಾತ್ಮಕ ಸಾರ್ವಭೌಮ ರಾಷ್ಟ್ರವಾಗಿ ಹೊರಹೊಮ್ಮಿದ ಈ ದಿನವನ್ನು ಪ್ರತೀ ವರ್ಷವೂ ದೇಶಾದ್ಯಂತ ಸಡಗರ ಸಂಭ್ರಗಳಿಂದ ಆಚರಿಸುವ ಪದ್ದತಿಯನ್ನು ರೂಢಿಗೆ ತರಲಾಯಿತು. ಕೆಲವು ಖಾಸಗಿ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಮತ್ತು ಸರ್ಕಾರೀ ಆಚರಣೆಗಷ್ಟೇ ಸೀಮಿತವಾಗಿದ್ದರೆ ಸಾರ್ವಜನಿಕರು ಸಿಕ್ಕ ರಜಾ ದಿನಕ್ಕೆ ಅಕ್ಕ ಪಕ್ಕ ಮತ್ತೆರಡು ರಜೆ ಹಾಕಿ ಪ್ರವಾಸಗಳಲ್ಲಿ ಮಜಾ ಮಾಡುತ್ತಿದ್ದದ್ದನ್ನು ಕಂಡ ಪ್ರಸ್ತುತ ಸರ್ಕಾರ, ದೇಶವಾಸಿಗಳಲ್ಲೂ ದೇಶಾಭಿಮಾನ ಮೂಡಿಸುವ ಸಲುವಾಗಿ ಸ್ವಾತಂತ್ರ್ಯೋತ್ಸವ ಎಲ್ಲರೂ ಆಚರಿಸುವಂತೆ ಮಾಡಲು, ಹರ್ ಘರ್ ತಿರಂಗಾ ಎನ್ನುವ ಅಭಿಯಾನ ಜಾರಿಗೆ ತಂದು ತನ್ಮೂಲಕ ದೇಶಾದ್ಯಂತ ಜನರು ತಮ್ಮ ತಮ್ಮ ಮನೆಗಳ ಮೇಲೆ ಆಗಸ್ಟ್ 13 ರಿಂದ 15ರ ವರೆಗೆ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರೋತ್ಸಾಹ ನೀಡಿದ ಕಾರಣ ಇಂದು ಸುಮಾರು 20 ಕೋಟಿಗಳಿಗೂ ಅಧಿಕ ಮನೆಯವರು ಅತ್ಯಂತ ಸಂತೋಷದಿಂದ ಈ ಆಭಿಯಾನದಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ಹೆಮ್ಮೆ ಪಡುವಂತಹ ಸಂಗತಿಯಾಗಿದೆ.

WhatsApp Image 2023-08-15 at 06.07.25

ಇನು ಸಂಭ್ರಮಾಚರಣೆಗಳ ನಡುವೆ ಇದು 76ನೇ ವರ್ಷದ ಸ್ವಾತ್ರಂತ್ರ್ಯೋತ್ಸವವೂ ಇಲ್ಲವೇ 77 ನೇ ಸ್ವಾತಂತ್ರ್ಯ ದಿನಾಚರಣೆಯೋ ಎಂಬ ಜಿಜ್ಞಾಸೆ ಮೂಡುತ್ತಿದ್ದು ಗೊಂದಲದ ಪ್ರಶ್ನೆ ಜನರ ಮನಸ್ಸಿನಲ್ಲಿರುವುದು ಸಹಜವಾಗಿದೆ. 1948 ರಿಂದ 2023ರ ವರೆಗೆ ಗಣಿತದ ಪ್ರಕಾರ 76 ವರ್ಷಗಳಾದರೂ, ತಾಂತ್ರಿಕವಾಗಿ 77ನೇ ವರ್ಷದ ಅಚರಣೆಯಾಗಿದೆ. ನಮ್ಮ ದೇಶದ ಪತ್ರಿಕಾ ಮಾಹಿತಿ ಬ್ಯೂರೋ ಅರ್ಥಾತ್ PIB (Press Information Bureau) ಈ ಎಲ್ಲಾ ಗೊಂದಲಕ್ಕೂ ತೆರೆ ಎಳೆದು, ಸ್ವಾತಂತ್ರ್ಯ ಸಿಕ್ಕ ಕೂಡಲೇ ಒಮ್ಮೆ ಉತ್ಸವ ಆಗಿರುತ್ತದೆ. ಒಂದು ವರ್ಷ ತುಂಬಿದಾಗ ಮಾಡಿದ್ದು ಎರಡನೇ ಉತ್ಸವ. 2 ವರ್ಷ ತುಂಬಿದಾಗ 3ನೆ ಉತ್ಸವ. ಇಂದಿನ ವರೆಗೆ ಲೆಖ್ಖಾ ಹಾಕಿದಲ್ಲಿ ಇದು 77 ನೇ ಸ್ವಾತಂತ್ರ್ಯ ದಿನೋತ್ಸವ ಎಂಬುದಾಗಲಿದೆ ಎಂದು ಖಚಿತ ಪಡಿಸಿದೆ.

WhatsApp Image 2023-08-15 at 13.58.39

ನಮ್ಮ ದೇಶದ ಸ್ವಾತ್ರಂತ್ರ್ಯ ಪೂರ್ವ ಇತಿಹಾಸ ಮತ್ತು ಸ್ವಾತ್ರಂತ್ರೋತ್ಸವದ ಬಗ್ಗೆ ಇಷ್ಟೆಲ್ಲಾ ಮಾಹಿತಿಗಳನ್ನು ತಿಳಿದುಕೊಂಡ ಮೇಲೆ, ಈ ಕೂಡಲೇ ನಿಮ್ಮ ನಿಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ವಿವಿಧತೆಯಲ್ಲೂ ಏಕತೆಯನ್ನು ಸಾರುವ ನಮ್ಮ ದೇಶದ ಸೌಹಾರ್ಧತೆ ಮತ್ತು ಸಾರ್ವಭೌಮತೆಯನ್ನು ಎತ್ತಿ ಹಿಡಿತೀರಿ ಅಲ್ವೇ?

ಏನಂತೀರೀ?

ಸೃಷ್ಟಿಕರ್ತ, ಉಮಾಸುತ

3 thoughts on “ಸ್ವಾತಂತ್ರ್ಯೋತ್ಸವದ ಲೆಖ್ಖಾಚಾರ

  1. ತುಂಬಾ ಒಳ್ಳೆಯ ಲೇಖನ, ನಿಜ ವಿಷಯ ಈಗಿನ ಪೀಳಿಗೆಗೆ ಗೊತ್ತಿರುವುದಿಲ್ಲ.

    Like

Leave a reply to S.N.Ravisharma Cancel reply