ಕರ್ನಾಟಕದ ರಾಜಧಾನಿ ಪ್ರಪಂಚದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು, ಭಾರತದ ಸಿಲಿಕಾನ್ ವ್ಯಾಲಿ ಎಂದೇ ಹೆಸರಾಗಿರುವ ಕಾರಣ, ಬೆಂಗಳೂರಿನ ಖ್ಯಾತಿ ಈಗ ಕೇವಲ ಕರ್ನಾಟಕ ಅಥವಾ ಭಾರತ ದೇಶಕ್ಕೆ ಮಾತ್ರವೇ ಸೀಮಿತವಾಗಿರದೇ, ಇಡೀ ಜಗತ್ರ್ಪಸಿದ್ಧವಾಗಿದೆ. ಹೇಗೆ ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಕನ್ನಡಿಗರು ನೆಲೆಸಿದ್ದಾರೆಯೋ, ಅದೇ ರೀತಿಯಲ್ಲೇ ಜಗತ್ತಿನ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಕಛೇರಿಯನ್ನು ಹೊಂದುವುದು ಪ್ರತಿಷ್ಠತೆಯ ಸಂಕೇತ ಎಂದು ಭಾವಿಸಿರುವುದು ಗಮನಾರ್ಹವಾಗಿದೆ. ಇಂತಹ ಪ್ರತಿಷ್ಠಿತವಾದ ಬೆಂಗಳೂರನ್ನು ಕೆಂಪೇಗೌಡರು ತಮ್ಮ ಬಾಲ್ಯಾವಸ್ಥೆಯಲ್ಲಿ ತಮ್ಮ ತಂದೆಯ ಜೊತೆ ವಿಜಯನಗರದ ರಾಜಧಾನಿ ಹಂಪೆಯಂತಹ ಸುಂದರವಾದ ನಗರವನ್ನು ಕಟ್ಟುವ ಹಂಬಲ ವ್ಯಕ್ತ ಪಡಿಸಿದ್ದನ್ನು ಕಳೆದ ಸಂಚಿಕೆಯಲ್ಲಿ ತಿಳಿದಿದ್ದು ಈಗ ಬೆಂಗಳೂರಿನ ಸಂಪೂರ್ಣ ಇತಿಹಾಸವನ್ನು ಸವಿವರವಾಗಿ ತಿಳಿಯೋಣ ಬನ್ನಿ.
ಸಾಥಾರಣವಾಗಿ ಬೆಂಗಳೂರು ಎಂಬ ಹೆಸರು ಹೇಗೆ ಬಂದಿತು ಎಂದು ಯಾವುದೇ ಬೆಂಗಳೂರಿಗರನ್ನು ಕೇಳಿದರೂ ಥಟ್ ಅಂತಾ ಬೆಂದಕಾಳೂರು ಎಂಬ ಹೆಸರು ಜನರ ಆಡು ಭಾಷೆಯಲ್ಲಿ ಅಪಭ್ರಂಷವಾಗಿ ಬೆಂಗಳೂರು ಆಗಿದೆ ಎಂದೇ ಹೇಳುತ್ತಾರೆ. ಇನ್ನೂ ಕೆಲವು ಸುಮಾರು 500 ವರ್ಷಗಳ ಹಿಂದೆ ಕೆಂಪೇಗೌಡರು ಕಟ್ಟಿದ ಊರು ಎಂದೂ ಹೇಳುತ್ತಾರೆ. ಅಚ್ಚರಿಯ ವಿಷಯವೇನೆಂದರೆ ಬೆಂಗಳೂರು ಮತ್ತು ಬೆಂಗಳೂರಿನ ಹೆಸರು ಈ ಮುಂಚೆಯೇ ಅಸ್ತಿತ್ವದಲ್ಲಿತ್ತು ಎನ್ನುವುದು ಎಲ್ಲರಿಗೂ ಕುತೂಹಲ ಮೂಡಿಸುತ್ತದೆ. ದೇವನೊಬ್ಬ ನಾಮ ಹಲವು ಎನ್ನುವಂತೆ ಬೆಂಗಳೂರಿಗೆ ಆ ಹೆಸರು ಬರಲು ಅನೇಕ ಕೂತೂಹಲಕಾರಿ ಸಂಗತಿಗಳಿದ್ದು ಅವುಗಳಲ್ಲಿ ಪ್ರಮುಖವಾದವು ಹೀಗಿವ.
ಕರ್ನಾಟಕವನ್ನು ಆಳಿದ ಪ್ರಮುಖ ರಾಜ ವಂಶರಲ್ಲಿ ಗಂಗಾ ರಾಜವಂಶ ಅತ್ಯಂತ ಪ್ರಮುಖವಾಗಿದೆ. ಕ್ರಿಶ, 250 ರಿಂದ 1004 ವರೆಗೆ ಪಶ್ಚಿಮ ಗಂಗರು ಮೈಸೂರು ರಾಜ್ಯ (ಗಂಗಾವಾಡಿ)ಯನ್ನು ಆಳಿದರೆ, ಪೂರ್ವ ಗಂಗರು ಕಳಿಂಗವನ್ನು 1028 ರಿಂದ 1434-35 ರವರೆಗೆ ಆಳಿದರು ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದ್ದು, ಈ ಗಂಗರ ಕಾಲದಲ್ಲಿ ಬೆಂಗಳೂರಿನ ಈ ಪ್ರದೇಶದಲ್ಲಿ ಕಾವಲುಗಾರರು ವಾಸಿಸುತ್ತಿದ್ದ ಕಾರಣ ಈ ಊರಿಗೆ ಬೆಂಗಾವಲೂರು ಎಂದು ಕರೆಯುತ್ತಿದ್ದರು. ನಂತರದ ದಿನಗಳಲ್ಲಿ ಅದು ಬೆಂಗಳೂರಾಗಿದೆ ಎಂದೂ ಹೇಳಲಾಗುತ್ತದಾದರೂ ಇದಕ್ಕೆ ಯಾವುದೇ ಅಧಿಕೃತವಾದ ಪುರಾವೆಗಳು ಇದುವರೆವಿಗೂ ಲಭ್ಯವಿಲ್ಲವಾಗಿದೆ
ಬೆಂಗಳೂರು ಎಂಬ ಹೆಸರಿನ ಅಧಿಕೃತ ಪುರಾವೆಯಾಗಿ ಪ್ರಸ್ತುತ ಬೆಂಗಳೂರಿನ ಹೊರವಲಯವಾದ ಬೇಗೂರಿನಲ್ಲಿ ಸುಮಾರು 1300 ವರ್ಷಗಳ ಹಿಂದೆ ಚೋಳರು ನಿರ್ಮಿಸಿದ್ದಾರೆ ಎಂದು ಹೇಳುವ ಶ್ರೀ ನಾಗನಾಥೇಶ್ವರ ದೇವಾಲಯವಿದ್ದು ಅದು ಪಂಚಲಿಂಗಗಳ ಕ್ಷೇತ್ರ ಎಂದೇ ಪ್ರಖ್ಯಾತಿ ಪಡೆದಿರುವ ಈ ದೇವಾಲಯದಲ್ಲಿ ಸಿಕ್ಕ ಕ್ರಿ.ಶ 890 ಕ್ಕೆ ಸೇರಿದ ವೀರಗಲ್ಲಿನ ಹಳೇಗನ್ನಡ ಶಾಸನದಲ್ಲಿ, ಬೆಂಗುಳುರು ಕಾಳಗದೊಳ್ ಬುಟ್ಟನಾ ಶೆಟ್ಟಿ ಸತ್ತಮ್ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಶಾಸನವನ್ನು ಅರ್ಥೈಸಿಸಿದ ಇತಿಹಾಸಕಾರರು ಆ ಪ್ರದೇಶದ ಮಾಂಡಲೀಕನಾಗಿದ್ದ ನಾಗತ್ತರನ ಮಗ ಬುಟ್ಟನಾ ಶೆಟ್ಟಿ ಎಂಬುವನು ಬೆಂಗುಳುರು ಕಾಳಗದಲ್ಲಿ ಮೃತನಾದ ಎಂದು ತಿಳಿಸಿದ್ದು ಇದು ಬೆಂಗಳೂರು ಕದನ ಅಥವಾ ಜೈನ ಗಂಗರು ಮತ್ತು ಶೈವ ನೊಳಂಬರ ನಡುವಿನ ಬೆಂಗಳೂರಿನ ಯುದ್ಧದ ಬಗ್ಗೆ ಹೇಳುತ್ತದೆ. ಪ್ರಸ್ತುತ ಈ ಶಾಸನ ಬೆಂಗಳೂರಿನ ವಸ್ತುಸಂಗ್ರಹಾಲಯದಲ್ಲಿದೆ. ಹೀಗೆ ಬೆಂಗಳೂರು ಎಂಬ ಹೆಸರು ಒಂಬತ್ತನೇ ಶತಮಾನ ಕಾಲದಲ್ಲಿಯೇ ಇತ್ತು ಎಂಬುದನ್ನು ಎತ್ತಿ ಹಿಡಿಯುತ್ತದೆ.
ಈ ಮೂದಲೇ ತಿಳಿಸಿದಂತೆ ಜನ ಜನಿತವಾದ ಕಥೆಯ ಪ್ರಕಾರ, ಕ್ರಿ.ಶ 13ನೇ ಶತಮಾನದಲ್ಲಿ ಹೊಯ್ಸಳ ವಂಶದ ರಾಜ ವೀರ ಬಲ್ಲಾಳ-II ಅವರು ಈಗಿನ ಯಲಹಂಕದ ಬಳಿ ಸುಮಾರು ಗಂಟೆಗಳ ಕಾಲ ಬೇಟೆಯಾಡುತ್ತಾ, ಕತ್ತಲಾದ ನಂತರ ದಿಕ್ಕು ತಪ್ಪಿ ಅಲೆದಾಡುತ್ತಿರುತ್ತಾರೆ. ಸುಮಾರು ಗಂಟೆಗಳ ಕಾಲ ಅಲೆದಾಟದಿಂದ ಹಸಿವು ಮತ್ತು ನೀರಡಿಕೆಯಿಂದ ಸುಸ್ತಾಗಿದ್ದ ರಾಜನಿಗೆ ದೂರದಲ್ಲೊಂದು ಸಣ್ಣ ಗುಡಿಸಲು ಕಾಣಿಸಿದ ಕೂಡಲೇ ಅಲ್ಲಿಗೆ ಹೋದಾಗ, ಆ ಗುಡಿಸಲಿನಲ್ಲಿದ್ದ ವೃದ್ಧ ಮಹಿಳೆಯೊಬ್ಬಳು ಅಚಾನಕ್ಕಾಗಿ ದಣಿದು ಬಂದಿದ್ದ ಆ ರಾಜನಿಗೆ ತನ್ನ ಬಳಿಯಿದ್ದ ಬೇಯಿಸಿದ ಕಾಳುಗಳನ್ನು ನೀಡಿ ಆತನ ಹಸಿವನ್ನು ನೀವಾರಿಸುತ್ತಾರೆ. ಆಕೆಯ ಆದರಾತಿಥ್ಯಕ್ಕೆ ಮೆಚ್ಚಿದ ರಾಜನು ಆಕೆಗೆ ಸತ್ಕಾರ ಮಾಡಿದ್ದಲ್ಲದೇ, ಬೆಂದ ಕಾಳುಗಳನ್ನು ನೀಡಿ ತನ್ನ ಹಸಿವನ್ನು ನಿವಾರಿಸಿದ ಸ್ಮರಣಾರ್ಥ ಆ ಪ್ರದೇಶವನ್ನು ಅಂದಿನಿಂದ ಬೆಂದ ಕಾಳು ಊರು ಎಂದು ಕರೆಯುತ್ತಾನೆ. ನಂತರದ ದಿನಗಳಲ್ಲಿ ಅದು ಜನರ ಆಡು ಭಾಷೆಯಲಿ ಬೆಂಗಳೂರು, ಭ್ಯಾಂಗಲೂರ್ ಎಂದಾಗಿರಬಹುದು ಎಂದು ಹೇಳುತ್ತಾರಾದರೂ ಈ ಮೇಲೆ ತಿಳಿಸಿದಂತೆ 9ನೇ ಶತಮಾನದ ಶಾಸನದಲ್ಲೇ ಬೆಂಗಳುರು ಎಂಬ ಊರಿನ ಹೆಸರು ಪ್ರಸ್ತಾಪವಾಗಿರುವ ಕಾರಣ, ಈ ಬೆಂದಕಾಳೂರು ಬೆಂಗಳೂರು ಆಗಿರಬಹುದು ಎಂಬುದಕ್ಕೆ ಹೆಚ್ಚಿನ ಮಹತ್ವ ಇಲ್ಲವಾಗಿದೆ ಎಂದರೂ ತಪ್ಪಾಗದು.
ಇನ್ನು ಇಲ್ಲಿನ ಭೂಭಾಗ ಮತ್ತು ವೈಜ್ಞಾನಿಕ ಹಿನ್ನಲೆಗಳಿಂದ ನೋಡಿದಲ್ಲಿ, ಬೆಂಗಳೂರಿನ ಮಧ್ಯ ಭಾಗಗಳಲ್ಲಿ ಸ್ಫಟಿಕ ಶಿಲೆ ಮತ್ತು ಗ್ರಾನೈಟ್ (ಬೆಣಚು ಕಲ್ಲು) ಕಲ್ಲುಗಳ ಅಪಾರ ನಿಕ್ಷೇಪಗಳಿಂದ ಕೂಡಿದೆ ಎಂದು ಭೂವೈಜ್ಞಾನಿಕ ಪುರಾವೆಗಳು ಸಾಬೀತಾಗಿದ್ದು, ಈ ಬೆಣಚುಕಲ್ಲುಗಳಿಂದ ಕೂಡಿದ ಈ ಭೂಭಾಗವನ್ನು ಬಿಳಿಯ ಕಲ್ಲಿನೂರು ಕರೆಯಲಾಗುತ್ತಿದ್ದು ನಂತರದ ದಿನಗಳಲ್ಲಿ, ಬಿಳಿಕಲ್ಲಿನೂರು ಎಂದಾಗಿ ಹಾಗೆಯೇ ಜನರ ಆಡುಭಾಷೆಯಲ್ಲಿ ಅಪಭ್ರಂಷವಾಗುತ್ತಲೇ, ಬೆಂಗಳೂರು ಎಂದಾಗಿದೆ ಎಂದು ಸಹಾ ಹೇಳಲಾಗುತ್ತದೆ.
ಮತ್ತೊಂದು ಪ್ರತೀತಿಯ ಪ್ರಕಾರ, ಕೆಂಪೇಗೌಡರ ಕಾಲದಲ್ಲಿ ಬೃಹದಾರಣ್ಯದ ಕಾಡಾಗಿದ್ದ ಈ ಪ್ರದೇಶ ಅದೊಮ್ಮೆ ಇದ್ದಕ್ಕಿದ್ದಂತೆಯೇ ಹಬ್ಬಿದ ಕಾಡ್ಗಿಚ್ಚಿನ ಪರಿಣಾಮ ಇಡೀ ಕಾಡೆಲ್ಲವೂ ಸುಟ್ಟು ಕರಿಕಲಾದ ಸಂದರ್ಭದಲ್ಲಿ, ಕೆಂಪೇಗೌಡರು ಅದೇ ಜಾಗದಲ್ಲಿ ಮತ್ತೊಮ್ಮೆ ನಗರವನ್ನು ಕಟ್ಟಿ ಅದಕ್ಕೆ ಬೆಂದ ಕಾಡೂರು ಎಂದು ಹೆಸರಿಟ್ಟರು ನಂತರದ ಅದು ಕಾಲಕ್ರಮೇಣ ಬೆಂಗಳೂರಾಗಿದೆ ಎನ್ನುವ ವಾದವೂ ಇದೆ. ಹೀಗೆ ಬೆಂಗಳೂರು ಎಂಬ ಹೆಸರು ಒಂದೇ ಆದರೂ ಆ ಹೆಸರು ಬರಲು ಹತ್ತಾರು ವೃತ್ತಾಂತಗಳಿದ್ದು ಅವೆಲ್ಲವೂ ಅತ್ಯಂತ ರೋಚಕವಾಗಿರುವುದಲ್ಲದೇ ಒಂದೊಂದಕ್ಕೂ ಅದರದ್ದೇ ಆದ ಇತಿಹಾಸ ಮತ್ತು ಪುರಾವೆಗಳು ಇರುವುದು ವಿಶೇಷವಾಗಿದೆ.
ಈ ಪಟ್ಟಣಕ್ಕೆ ಕೇವಲ ಬೆಂಗಳೂರು ಎಂಬ ಹೆಸರಲ್ಲದೇ, ಕಲ್ಯಾಣ ನಗರ ಎಂಬ ಮತ್ತೊಂದು ಹೆಸರು ಸಹಾ ಕ್ರಿ.ಶ. 1800ರಿಂದಲೂ ಸಹಾ ಬಳಕೆಯಲ್ಲಿರುವುದಕ್ಕೇ ಅನೇಕ ಆಧಾರಗಳು ಲಭಿಸಿವೆ. ಬೆಂಗಳೂರಿನ ನಗರ್ತಪೇಟೆಯ ನಗರೇಶ್ವರ ದೇವಾಲಯದ ಮುಖಮಂಟಪ ಶಿಲಾಶಾಸನದ ಆರನೆಯ ಸಾಲಿನಲ್ಲಿ ಕಲ್ಯಾಣನಗರೀವಾಸ ನಗರಸ್ತ್ರ್ಯೆಃ ಮಹಾಜನ್ಯೆಃ ಶ್ರೀಮತಃ ಕಲುದೇವತಸ್ಯ ಎಂಬ ಉಲ್ಲೇಖವಿದೆ. ಇದಷ್ಟೇ ಅಲ್ಲದೇ, ಬೆಂಗಳೂರಿನ ಸರ್ಪಭೂಷಣ ಶಿವಯೋಗಿಗಳ 1820ರ ಕಾಲಘಟ್ಟದಲ್ಲಿನ ಹಸ್ತಪ್ರತಿಯೊಂದರ ಅಂತ್ಯದಲ್ಲಿ ಶ್ರೀಮತ್ಕಲ್ಯಾನ ನಗರ ಸಿದ್ಧಾಂತ ಸುಬ್ರಹ್ಮಣ್ಯ ಸಿವಯೋಗಿ ಎಂಬ ಉಲ್ಲೇಖವಿದ್ದರೆ, ಕ್ರಿ.ಶ 1900ರ ಕಾಲದಲ್ಲಿ ಪ್ರಕಟವಾದ ವೇದ ಬ್ರಹ್ಮ ಸಾಗ್ಗೆರೆ ಶ್ರೀಕಂಠಶಾಸ್ತ್ರಿಗಳು ಸಂಪಾದಿಸಿದ ರಘುವಂಶ ಕಾವ್ಯ ಎಂಬ ಪುಸ್ತಕ ಮುದ್ರಣ ಗೊಂಡಿರುವುದು ಶ್ರೀಮತ್ಕಲ್ಯಾಣನಗರದ ಬೆಂಗಳೂರು ಬುಕ್ ಡಿಪೋ ಮುದ್ರಣ ಶಾಲೆಯಲ್ಲಿ ಎಂದು ನಮೂದಿಸಲಾಗಿದೆ,
1907ರಲ್ಲಿ ಪ್ರಕಟವಾದ ಬೆಂಗಳೂರಿನ ಶ್ರೀ ದೊಡ್ಡ ಬೆಲೆ ನಾರಾಯಣ ಶಾಸ್ತ್ರಿಗಳ ಕೈವಲ್ಯ ಕಲ್ಪವಲ್ಲರಿ ಪುಸಕ್ತದ ಕನ್ನಡ ಟೀಕೆ ಪುಸಕ್ತದ ಮುಖಪುಟದಲ್ಲಿಯೂ ಸಹಾ ಕಲ್ಯಾಣನಗರ ಪ್ರಾಂತದೊಳು ಪುಟ್ಟ ಮಹಾ ಶಿವಯೋಗಿ ಎನಿಸಿಕೊಂಡು ಯಶಸ್ಸು ಸಂಪಾದಿಸಿದ ಸಣ್ಣಪ್ಪ ಸ್ವಾಮಿಯೆಂಬ ಸರ್ವಭೂಷಣನೆಂಬ ಶಿವಯೋಗಿಯಿಂದ ವಿರಚಿತವಾದ ಕೈವಲ್ಯವಲ್ಲಂ ಎಂದೇ ನಮೂದಿಸಿದೆ. ಈ ಎಲ್ಲಾ ಆಧಾರಗಳ ಮೂಲಕ ಬೆಂಗಳೂರು ನಗರಕ್ಕೆ ಕ್ರಿ.ಶ ಸುಮಾರು 1800 ರಿಂದ 1910ರ ಕಾಲಘಟ್ಟದಲ್ಲಿ ಕಲ್ಯಾಣನಗರ ಎಂಬ ಮತ್ತೊಂದು ಹೆಸರೂ ಚಾಲ್ತಿಯಲ್ಲಿ ಇತ್ತೆಂಬುದು ಖಚಿತವಾಗುತ್ತದೆ.
ಅದಾಗಲೇ ಅಸ್ತಿತ್ವದಲ್ಲಿದ್ದ ಒಂದು ಸಣ್ಣ ಊರಾಗಿ, ಅತ್ಯಂತ ಸುಂದರವಾಗಿ ಮತ್ತು ವ್ಯವ್ಯಸ್ಥಿತವಾಗಿ ಮೂರು ಹಂತಗಳಲ್ಲಿ ಅರ್ಥಾತ್ ಕಾಲಘಟ್ಟಗಳಲ್ಲಿ ವಿಸ್ತಾರವಾಗಿದ್ದು ನಾಡಪ್ರಭು ಕೆಂಪೇಗೌಡರ ಕಾಲದ ಹಳೆಯ ಬೆಂಗಳೂರು ಒಂದಾದರೆ, 1800ರ ಆರಂಭದಲ್ಲಿ ಬ್ರಿಟೀಷರು ಶ್ರೀರಂಗಪಟ್ಟಣದಿಂದ ತಮ್ಮ ಸೇನಾ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಿಸಿ ಕಟ್ಟಿಕೊಂಡ ಹೊಸಾ ಬೆಂಗಳೂರಾಗಿದ್ದು ಇನ್ನು ಸ್ವಾತಂತ್ಯಾನಂತರ ಅದರಲ್ಲೂ 90ರ ದಶಕದ ನಂತರ ವಿಪರೀತವಾಗಿ ಬೃಹತ್ ಬೆಂಗಳೂರು ಆಗಿ ಬೆಳೆದಿದ್ದು ಆ ಮೂರು ಕಾಲಘಟ್ಟಗಳಲ್ಲಿ ಬೆಂಗಳೂರು ನಗರ ಹೇಗೆ ಬೆಳೆಯಿತು ಮತ್ತು ಅಂದು ಹೇಗಿದ್ದ ನಗರ ಇಂದು ಹೇಗಾಗಿದೆ ಎಂಬುದನ್ನು ಸವಿವರವಾಗಿ ತಿಳಿಯೋಣ ಬನ್ನಿ.
ಆದಿ ಪುರಾಣ ಕವಿರಾಜ ಮಾರ್ಗದಲ್ಲೇ ಹೇಳಿರುವಂತೆ ಕಾವೇರಿಯಿಂದ ಗೋದಾವರಿಯ ತೀರದವರೆಗೂ ಕರ್ನಾಟಕದ ರಾಜರು ಆಳುತ್ತಿದ್ದ ಸಮಯದಲ್ಲೇ, ಸುಮಾರು 14ನೇ ಶತಮಾನದ ಅಂತ್ಯಭಾಗದಲ್ಲಿ ಕಂಚಿ ಬಳಿಯ ಯಣಮಂಜಿ ಪುತ್ತೂರಿನ ಪಾಳೇಗಾರರಾಗಿದ್ದ ರಣ ಬೈರೇಗೌಡ ಮತ್ತು ಸೋದರರು ಅಲ್ಲಿನ ನಡೆದ ಕ್ಷಿಪ್ರರಾಜಕೀಯ ಕ್ರಾಂತಿಯಿಂದಾಗಿ ನಿರಾಶ್ರಿತರಾದಾಗ ಅವರು ಎತ್ತಿನಬಂಡಿಗಳಲ್ಲಿ ವಲಸೆ ಬಂದು ಯಲಹಂಕ ದಾಟಿ ಇಂದಿನ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಆವತಿ ಎಂಬ ಗ್ರಾಮದಲ್ಲಿ ನೆಲಸಿದರೆಂಬ ಪ್ರತೀತಿ ಇದ್ದು ಮುಂದೆ ಅದೇ ವಂಶದವರೇ ವಿಜಯನಗರದ ಸಾಮಂತರಾಗಿ ಯಲಹಂಕ, ಮಾಗಡಿ ಪ್ರದೇಶದಗಳನ್ನು ಆಳಿದರೆಂದು ಜನರ ನಂಬಿಕೆಯಾಗಿದೆ. ಬೆಂಗಳೂರಿನ ನಿರ್ಮಾತರಾದ ಕೆಂಪೇಗೌಡರೂ ಸಹಾ ಅದೇ ವಂಶದವರಾಗಿದ್ದಾರೆ.
ಇನ್ನು ಐತಿಹಾಸಿಕವಾಗಿ ಹೇಳಬೇಕೆಂದರೆ ಈ ಆವತಿ ಬೆಟ್ಟದ ತಪ್ಪಲಿನಲ್ಲಿಯೇ ನೆಲಸಿದ್ದ ರಣಬೈರೇಗೌಡ ಮತ್ತವರ ಸಹೊದರರಿಗೆ ಈ ಪ್ರದೇಶದಲ್ಲಿಯೇ ಏಳು ಕೊಪ್ಪರಿಗೆ ತುಂಬಿದ ನಿಧಿ ಮತ್ತು ಭೂದೇವಿ ಶ್ರೀದೇವಿ ಸಹಿತ ಚನ್ನಕೇಶವ ಸ್ವಾಮಿ ಜತೆಗೆ ವೇಣುಗೋಪಾಲನ ವಿಗ್ರಹಗಳು ದೊರೆಕಿತಂತೆ. ಈ ಹಣದಿಂದಲೇ ತಮ್ಮ ಸಮ್ರಾಜ್ಯವನ್ನು ಕಟ್ಟಿದ ಅವರು, ವಿಜಯನಗರದ ಸಾಮಂತರಾಗಿ ಅ ಪ್ರದೇಶದಲ್ಲಿ ನೆಲೆಗೊಳ್ಳುತ್ತಾರೆ. ತಮಗೆ ಆಶ್ರಯ ನೀಡಿದ ಆ ಬೆಟ್ಟದ ಮೇಲೆ ದೇವಾಲಯವನ್ನು ಕಟ್ಟಿಸಿ ಅಲ್ಲಿ ತಮಗೆ ಸಿಕ್ಕ ತಿಮ್ಮರಾಯಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿ ನಂತರ ದೇವನಹಳ್ಳಿಯ ಕೋಟೆ ಬಳಿ ಶ್ರೀವೇಣುಗೋಪಾಲಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದರು. ಇಂದಿಗೂ ಸಹಾ ಈ ಎರಡೂ ದೇವಸ್ಥಾನಗಳ ವಿಗ್ರಹಗಳ ನಡುವ ಬಹಳ ಸಾಮ್ಯತೆ ಕಂಡು ಬರುವುದು ಗಮನಾರ್ಹವಾಗಿದೆ.
ಗುರು ವಿದ್ಯಾರಣ್ಯರ ಸಾರಥ್ಯದಲ್ಲಿ ಹಕ್ಕ ಬುಕ್ಕರ ನೇತೃತ್ಚದಲ್ಲಿ ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಆಳ್ವಿಕೆಗೆ ಬಂದ ವಿಜಯ ನಗರದ ಹಿಂದವೀ ಸಾಮ್ರಾಜ್ಯ ಕಟ್ಟಿದ ನಂತರ 1509–1529ರ ವರಗೆ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಪರವ ವೈಭವದಿಂದ ಶ್ರೀ ಕೃಷ್ಣದೇವರಾಯರ ಅಧಿಕಾರ ನಡೆಸುತ್ತಿದ್ದ ಸಮಯದಲ್ಲೇ ಯಲಹಂಕದ ನಾಡಪ್ರಭುಗಳಾಗಿದ್ದ ಶ್ರೀ ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳಿಗೆ 1510 ರಲ್ಲಿ ಜನಿಸಿದ ಮಗುವಿಗೆ ತಮ್ಮ ಕುಲದೇವತೆಯಾದ ಕೆಂಪಮ್ಮ ಹಾಗೂ ಭೈರವರ ಅನುಗ್ರಹದಿಂದ ಜನಿಸಿದ ಎಂಬ ನಂಬಿಕೆಯಿಂದ ಆ ಮಗುವಿಗೆ ಕೆಂಪ, ಕೆಂಪಯ್ಯ, ಕೆಂಪಣ್ಣ ಎಂಬ ಹೆಸರಿನಿಂದ ಕರೆದು ನಂತರ ಪ್ರಜೆಗಳು ಗೌರವಾದರದಿಂದ, ಚಿಕ್ಕರಾಯ, ಕೆಂಪರಾಯ ಎಂದು ಸಂಭೋಧಿಸಿ ಕಡೆಗೆ ಹಿರಿಯ ಕೆಂಪೇಗೌಡ ಎಂದು ಪ್ರಖ್ಯಾತರಾಗುತ್ತಾರೆ.
ವಿಜಯ ನಗರದ ರಾಜಧಾನಿಯಾಗಿದ್ದ ಹಂಪೆಯಲ್ಲಿ ಪ್ರತೀ ವರ್ಷವೂ ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದ ದಸರಾ ಸಮಾರಂಭವನ್ನು ನೋಡಲು ಸಣ್ಣ ವಯಸ್ಸಿನಿಂದಲೂ ತಮ್ಮ ತಂದೆಯವರೊಡನೆ ಹೋಗುತ್ತಿದ್ದ ಬಾಲಕ ಕೆಂಪೇಗೌಡರಿಗೆ ಅಲ್ಲಿ ಮುತ್ತು, ಹವಳ ಪಚ್ಚೆಗಳನ್ನು ಬಳ್ಳ ಬಳ್ಳಗಳಲ್ಲಿ ರಸ್ತೆಗಳಲ್ಲಿ ಮಾರುತ್ತಿದ್ದ ಪರಿ, ಅಲ್ಲಿನ ಸಂಪ್ರದಾಯ, ಶ್ರೀಮಂತಿಕೆ ಮತ್ತು ವೈಭವದ ದಸರಾ ನೋಡಿ ಆಕರ್ಷಿತರಾಗಿ ತಾವೂ ಸಹಾ ದೊಡ್ಡವರಾಗಿ ರಾಜ್ಯಭಾರ ಮಾಡುವಂತಹ ಸಮಯ ಬಂದಾಗ ಇಂತಹದ್ದೇ ಭವ್ಯವಾದ ನಗರವೊಂದನ್ನು ಕಟ್ಟುವ ಕನಸನ್ನು ಕಾಣುತ್ತಿದ್ದರಂತೆ. ಈ ಬಾಲಕ ಕೆಂಪೇಗೌಡರ ಶಿಕ್ಷಣ ಹೆಸರಘಟ್ಟದ ಬಳಿ ಇರುವ ಐವರುಕಂಡ ಪುರದ ಗುರುಕುಲದಲ್ಲಿ ನಡೆದು ಬಹಳ ಸಣ್ಣ ವಯಸ್ಸಿಗೇ ಯಲಹಂಕದ ಕಾರ್ಯಾಭಾರವನ್ನು ವಹಿಕೊಳ್ಳುತ್ತಾರೆ. ಶ್ರೀ ಕೃಷ್ಣದೇವರಾಯರ ಆಡಳಿತ ವೈಖರಿಯನ್ನೇ ಆದರ್ಶವಾಗಿಟ್ಟುಕೊಂಡು ನಡೆಸುತ್ತಿದ್ದ ಅವರ ಕಾರ್ಯದಕ್ಷತೆ ವಿಜಯನಗರದವೆಗೂ ಹಬ್ಬಿತ್ತು.
ಆದಿಗುರು ಶಂಕರಾಚಾರ್ಯರಿಗೆ ಪ್ರಸವದದ ಬೇನೆಯಲ್ಲಿದ್ದ ಕಪ್ಪೆಗೆ ಹಾವು ಆಶ್ರಯ ನೀಡುತ್ತಿದ್ದದ್ದನ್ನು ಶೃಂಗೇರಿಯಲ್ಲಿ ಕಂಡು ಇದಕ್ಕಿಂತಲೂ ಉತ್ತಮವಾದ ಶಾಂತಿಧಾಮ ಇನ್ನೆಲ್ಲಿಯೂ ಇರದು ಎಂದು ಅಲ್ಲಿಯೇ ತಮ್ಮ ಪೀಠವನ್ನು ಕಟ್ಟಿದಂತೆ, ಅದೊಮ್ಮೆ ಕೆಂಪೇಗೌಡರು ತಮ್ಮ ಆಪ್ತ ಸ್ನೇಹಿತ ಗಿಡ್ಡೇಗೌಡರೊಂದಿಗೆ ಬೇಟೆಯಾಡಲು ಕೋಡಿಗೇಹಳ್ಳಿ ಕಾಡಿಗೆ ಹೋಗಿದ್ದಾಗ, ಅವರೊಂದಿಗೆ ಬಂದಿದ್ದ ಬೇಟೆ ನಾಯಿ ಮೊಲವೊಂದನ್ನು ನೋಡಿ ಅದರ ಮೇಲೆ ಧಾಳಿ ಮಾಡಲು ಮುಂದಾದಾಗ, ಬಹಳ ಅಚ್ಚರಿಯಂತೆ, ಮೊಲವೇ ಬೇಟೇ ನಾಯಿಯ ವಿರುದ್ಧ ತಿರುಗಿ ಬಿದ್ದು ಬೇಟೆ ನಾಯಿಯನ್ನು ಅಟ್ಟಿಸಿಕೊಂಡು ಕಾಡಿನಿಂದ ಹೊರಗೋಡಿಸಿದ ಘಟನೆಯನ್ನು ಕಂಡು ಇದಕ್ಕಿಂತಲೂ ಕ್ಷಾತ್ರ ತೇಜದ ಜಾಗ ಮತ್ತೊಂದು ಇರಲಾರದು ಎಂದೆಣಿಸಿ, ಇದೇ ಸ್ಥಳದಲ್ಲೇ ಬಾಲ್ಯದ ಕನಸಾದ ಸುಂದರವಾದ ನಗರವೊಂದನ್ನು ಕಟ್ಟಬೇಕು ಎಂದು ನಿರ್ಧರಿಸಿದರು. ಕೂಡಲೇ ತಮ್ಮ ಕನಸಿನ ನಗರದ ನೀಲಿ ನಕಾಶೆಯನ್ನು ಸಿದ್ಧಪಡಿಸಿ, ವಿಜಯನಗರದ ಸಾಮ್ರ್ಯಾಜರ ಅಪ್ಪಣೆ, ಆಶೀರ್ವಾದ ಮತ್ತು ಅನುದಾನಕ್ಕಾಗಿ ಮೊರೆ ಹೋಗುತ್ತಾರೆ. ಆ ನೂತನ ನಗರ ನಿರ್ಮಾಣದ ವಿವರಣೆ ಕೇಳಿದ ವಿಜಯನಗರದ ಆರಸರು ಪ್ರಭಾವಿತರಾಗಿ, ಅಂದಿನ ಕಾಲಕ್ಕೇ ಸುಮಾರು ಐವತ್ತು ಸಾವಿರ ಚಿನ್ನದ ವರಾಹಗಳ ಜೊತೆಗೆ ಇನ್ನೂ ಆರು ಸಂಸ್ಥಾನಗಳನ್ನೂ ಕೆಂಪೇಗೌಡರಿಗೆ ಉಂಬಳಿಯಾಗಿ ಕೊಟ್ಟು ನಮ್ಮ ನಾಡಿಗೇ ಖ್ಯಾತಿ ತರುವಂತಹ ಅತ್ಯಂತ ಸುಂದರ ಮತ್ತು ಪ್ರಮುಖ ವಾಣಿಜ್ಯ ಕೇಂದ್ರವಾಗುವಂತಹ, ಹೇರಳ ಜಲ ಸಂಪನ್ಮೂಲ ಹೊಂದಿರುವ ಎಲ್ಲಾ ಧರ್ಮ, ಮತ ಮತ್ತು ಭಾಷಿಗರೂ ಸಹಬಾಳ್ವೆಯಿಂದ ಇರುವಂತಹ ನಗರವನ್ನು ನಿರ್ಮಿಸಿ ಎಂದು ಆಶೀರ್ವದಿಸುತ್ತಾರೆ.
ಪ್ರಭುಗಳ ಅಪ್ಪಣೆಯ ಜೊತೆಗೆ ಅನುದಾನವೂ ದೊರೆತ ನಂತರ ಕ್ರಿ.ಶ. 1537ರಲ್ಲಿ ತಮ್ಮ ಇಪ್ಪತ್ತೇಳನೇ ವಯಸ್ಸಿನಲ್ಲಿ ತಾವು ವಿದ್ಯೆ ಕಲಿತ ಹೆಸರಘಟ್ಟದ ಬಳಿಯ ಐವರುಕಂಡಪುರದ ಗುರುಕುಲದ ಗುರುಗಳನ್ನು ಸಂಪರ್ಕಿಸಿ ನಗರದ ನಿರ್ಮಾಣಕ್ಕೆ ಪ್ರಶಸ್ತ ಮಹೂರ್ತವನ್ನು ನಿಗಧಿ ಪಡಿಸಿಕೊಂಡು ಎಲ್ಲರಿಗೂ ಅನುಕೂಲವಾಗುವಂತೆ ತಮ್ಮ ಪ್ರಾಂತ್ಯದ ದೊಮ್ಮಲೂರು ಮತ್ತು ಯಲಹಂಕದ ನಡುವಿನ ಅಲ್ಲಲ್ಲಿ ಗುಡ್ಡಗಳು, ಅನೇಕ ನದಿಮೂಲಗಳು, ಕೆರೆ ನಿರ್ಮಾಣಕ್ಕೆ ಅಗತ್ಯವಾದ ಕಣಿವೆ ಪ್ರದೇಶ, ನಗರ ನಿರ್ಮಾಣಕ್ಕೆ ಸಮತಟ್ಟಾದ ಭೂಪ್ರದೇಶ, ಸಾಕಷ್ಟು ಮಳೆ ಬೀಳುವ ಮತ್ತು ಹಿತಕರ ಹವಾಗುಣ ಹೊಂದಿದ್ದ ಪ್ರದೇಶವನ್ನು ಗುರುತಿಸಿ ಅಲ್ಲಿ ನೂತನ ನಗರವೊಂದಕ್ಕೆ ಭೂಮಿ ಪೂಜೆ ಆರಂಭವಾಗಿ, ಸಂಪ್ರದಾಯಿಕವಾಗಿ ಮುಗಿಲು ಮುಟ್ಟುವಂತಹ ವೇದಘೋಷಗಳ ನಡುವೆ ಪುರೋಹಿತರು ಹೋಮ ಹವನಾದಿಗಳನ್ನು ನಡೆಸುತ್ತಿದ್ದರೆ, ನೇಗಿಲು ಹೊತ್ತ ಬಿಳಿ ಬಣ್ಣದ ನಾಲ್ಕು ಜೋಡಿ ಎತ್ತುಗಳು ನಾಲ್ಕು ದಿಕ್ಕುಗಳಲ್ಲಿ ಗೆರೆ ಎಳೆದು ನಗರದ ಗಡಿಯನ್ನು ನಿರ್ಧರಿಸಿಲಾಯಿತು. ಬಸವನಗುಡಿಯ ದೊಡ್ಡ ಬಸವಣ್ಣನ ದೇವಾಲಯ ಮತ್ತು ದೊಡ್ಡ ಪೇಟೆಯ ಆಂಜನೇಯ ದೇವಾಲಯವೇ ಅಂದು ಬೆಂಗಳೂರಿನ ಭೂಮಿಪೂಜೆ ಮಾಡಿದ ಸ್ಥಳ ಎಂದು ಬಲ್ಲವರು ಹೇಳುತ್ತಾರೆ.
ಬಾಲ್ಯದಿಂದಲೂ ವಿಜಯನಗರದ ವ್ಯವಸ್ಥಿತ ವಾಣಿಜ್ಯ ಕೇಂದ್ರಗಳಿಂದ ಪ್ರಭಾವಿತರಾಗಿದ್ದರಿಂದ ಅದೇ ಅನುಭವದ ಮೂಲಕ ರೈತರ ಮತ್ತು ವರ್ತಕರ ಸಗಟು ವ್ಯಾಪಾರಕ್ಕಾಗಿ ದೊಡ್ಡ ಪೇಟೆ ಮತ್ತು ಪ್ರಜೆಗಳ ಚಿಲ್ಲರೇ ವ್ಯಾಪಾರಕ್ಕಾಗಿ ಚಿಕ್ಕಪೇಟೆಯನ್ನು ಕಟ್ಟಿಸಿ ಅದರ ಅಕ್ಕ ಪಕ್ಕದಲ್ಲೇ, ಹೆಸರೇ ಸೂಚಿಸುವಂತೆ, ಅಕ್ಕಿಪೇಟೆ, ರಾಗಿಪೇಟೆ, ಅರಳೆ ಪೇಟೆ, ತರಗು ಪೇಟೆಯಲ್ಲಿ ದವಸ ಧಾನ್ಯಗಳ ಮಾರಾಟಕ್ಕಾದರೆ, ಕುಂಬಾರ ಪೇಟೆ ಮಡಿಕೆಗಳ ಮಾರಾಟ, ಗಾಣಿಗರ ಪೇಟೆ ಎಣ್ಣೆ ಮಾರಾಟ, ಉಪ್ಪಾರರ ಪೇಟೆ ಉಪ್ಪಿನ ಮಾರಾಟ, ತಿಗಳರ ಪೇಟೆಯಲ್ಲಿ ಹೂವಿನ ಮಂಡಿ, ನಗರ್ತ ಪೇಟೆ ಚಿನ್ನ, ಬೆಳ್ಳಿ ಆಚಾರಿಗಳಿಗಾದರೆ, ಬಳೇಪೇಟೆ ಬಳೆ, ಸರ ಮಾರಾಟ ಮಾಡುವ ಬಲಿಜಿಗರಿಗೆ ಹೀಗೆ ವೃತ್ತಿ, ಕುಲ ಕಸುಬುದಾರರು ವಾಸಿಸಲು ಮತ್ತು ವ್ಯಾಪಾರ ವಹಿವಾಟು ನಡೆಸಲು ಯೋಗ್ಯವಾಗುವಂತಹ ನಗರವನ್ನು ನಿರ್ಮಾಣ ಮಾಡಲು ಮುಂದಾದರು.
ಕೇವಲ ವ್ಯಾಪಾರ ಮತ್ತು ವಾಣಿಜ್ಯ, ವಹಿವಾಟುಗಳಿಂದಲೇ ನಾಡನ್ನು ಕಟ್ಟಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದ ಕೆಂಪೇಗೌಡರು, ಕೃಷಿ ಮತ್ತು ಕೃಷಿಯಾಧಾರಿತ ಚಟುವಟಿಕೆಗಳನ್ನೇ ನೆಚ್ಚಿಕೊಂಡ ನಾಡಿನ ಬಹುಸಂಖ್ಯಾತ ಕೃಷಿಕರು ಮತ್ತು ಹೈನುಗಾರರ ಅನುಕೂಲಕ್ಕಾಗಿ ಹೊಸಾ ನಗರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿಕ್ಕ ಮತ್ತು ದೊಡ್ಡ ಗಾತ್ರದ ಕೆರೆಗಳನ್ನು ಕಟ್ಟಿಸಿದರ ಪರಿಣಾಮವಾಗಿಯೇ ಇಂದಿಗೂ ಕಾಣ ಸಿಗುವ ಕೆಂಪಾಂಬುಧಿಕೆರೆ, ಕಾರಂಜಿಕೆರೆ, ಸಂಪಂಗಿರಾಮಕೆರೆ, ಧರ್ವಂಬುಧಿಕೆರೆ, ಗಂಧದ ಕೋಟಿ, ಹಲಸೂರು ಕೆರೆ, ಯಡೆಯೂರು ಕೆರೆ, ಸಿದ್ಧನಕಟ್ಟೆ, ಗಿಡ್ಡಪ್ಪನಕೆರೆ, ಜಕ್ಕರಾಯನಕೆರೆ, ದೊಮ್ಮಲೂರುಕೆರೆ, ಬೆಳ್ಳಂದೂರುಕೆರೆ, ಲಾಲ್ಬಾಗ್ ಮುಂತಾದ ಕೆರೆಗಳನ್ನು ಕಟ್ಟಿಸಿ ಜನರಿಗೆ ಮತ್ತು ದನಕರುಗಳಿಗೆ ಕುಡಿಯುವ ನೀರಿನ ಜೊತೆಗೆ ಕೃಷಿ ಚಟುವಟಿಕೆಗೆ ಬಳಸಿಕೊಂಡು ಜೀವನಾಶ್ಯಕವಾದ ಆಹಾರ ಧಾನ್ಯ, ಹಣ್ಣು, ತರಕಾರಿ, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು ಮುಂತಾದ ಬೆಳೆ ಬೆಳೆಯುವ ರೈತರಿಗೆ ಅನುಕೂಲ ಮಾಡಿಕೊಟ್ಟರು. ಮಳೆಯ ನೀರು ಸುಮ್ಮನೇ ಪೋಲಾಗಂತೆ ತಡೆಯುವ ಸಲುವಾಗಿ ನಗರದ ಬಡಾವಣೆಗಳಲ್ಲಿ ಮತ್ತು ಎತ್ತರದ ಪ್ರದೇಶಗಳಿಂದ ಅವರು ಕಟ್ಟಿಸಿದ ಕೆರೆಗಳಿಗೆ ನೀರು ಸರಾಗವಾಗಿ ಹರಿಯುವಂತೆ ರಾಜಕಾಲುವೆಗಳ ನಿರ್ಮಾಣ, ಮಳೆ ನೀರಿನಿಂದ ಒಂದು ಕೆರೆ ತುಂಬಿದ ಕೂಡಲೇ ಮತ್ತೊಂದು ರಾಜಕಾಲುವೆಗಳ ಮುಖಾಂತರ ಇನ್ನೊಂದು ಕೆರೆಗೆ ನೀರು ಹರಿಸಲಾಗುತ್ತಿತ್ತು. ಈ ವ್ಯವಸ್ಥೆಯನ್ನು ನೋಡಿಕೊಳ್ಳಲು ನುರಿತ ನೀರುಗಂಟಿಗಳನ್ನು ವಿಜಯನಗರದಿಂದ ಕರೆತರಲಾಗಿತ್ತು. ಹೀಗೆ ಎಲ್ಲಾ ಕೊರೆಗಳು ತುಂಬಿದ ಮೇಲೆ ಕೋಟೆಯ ಹೊರವಲಯದ ಕಾಲುವೆಗಳಿಗೆ ಹರಿಸಲಾಗುತ್ತಿತ್ತು. ಇದೊಂದು ಕೋಟೆಯ, ನಗರದ ಮತ್ತು ನಾಗರೀಕರ ಸುರಕ್ಷೆಯ ವ್ಯವಸ್ಥೆಯಾಗಿತ್ತು.
ನಗರ ವಾಣಿಜ್ಯವಾಗಿ ಅಭಿವೃದ್ಧಿ ಹೊಂದುತ್ತಿದ್ದಂತೆ ಶತ್ರುಗಳ ಕಾಟ ಬರಬಹುದು ಎಂಬ ದೂರಾಲೋಚನೆಯಿಂದ ನಗರದ ರಕ್ಷಣೆಗೆಂದು ಸುತ್ತಲೂ ಕೋಟೆಯನ್ನು ನಿರ್ಮಿಸಿ ಯಲಹಂಕ, ಕೆಂಗೇರಿ, ಹಲಸೂರು ಮತ್ತು ಆನೇಕಲ್ಲಿನಲ್ಲಿ ಈ ಕೋಟೆಯ ಮಹಾದ್ವಾರಗಳನ್ನು ನಿರ್ಮಿಸುವ ಮೂಲಕ ಜನರ ಮತ್ತು ಸಂಪತ್ತಿನ ಸುರಕ್ಷತೆಯನ್ನು ನೋಡಿಕೊಂಡರು. ನಗರದ ಸುರಕ್ಷೆತೆಯ ದೃಷ್ಟಿಯಿಂದ ತಿಗಳರ ಪೇಟೆಯ ಧರ್ಮರಾಮ ಸ್ವಾಮಿಯ ದೇವಸ್ಥಾನವನ್ನು ಕೇಂದ್ರ ಬಿಂದುವನ್ನಾಗಿಟ್ಟು ಕೊಂಡು ಸಮಾನಾಂತರ ದೂರದಲ್ಲಿ ಹಲಸೂರು, ಈಗಗಿನ ಲಾಲ್ ಬಾಗ್ , ಸದಾಶಿವನಗರ (ಈಗಿನ ಮೇಖ್ರೀ ಸರ್ಕಲ್) ಮತ್ತು ಕೆಂಪಾಂಬುಧಿ ಕೆರೆಯ ಬಳಿ ಎತ್ತರದ ಆಯಕಟ್ಟಿನ ಸ್ಥಳಗಳಲ್ಲಿ ವೀಕ್ಷಣಾಗೋಪುರಗಳನ್ನು ಕಟ್ಟಿ ದಿನದ 24 ಗಂಟೆಗಳ ಕಾಲ ಸತತ ಪಹರೆಯನ್ನು ನಿಯೋಜಿಸಿದ್ದರು. ಬಸವನಗುಡಿಯ ಎತ್ತರದ ಬಂಡೆಯಿಂದ ಪ್ರತಿ ಸಂಜೆ ಕಹಳೆ ಊದಿ ಎಲ್ಲಾ ಸರಿಯಾಗಿದೆ ಎನ್ನುವ ಸಂಕೇತದ ವ್ಯವಸ್ಥೆ ಮಾಡಲಾಗಿದ್ದು, ಅಪಾಯದ ಸಮಯದಲ್ಲಿ, ಎಚ್ಚರಿಕೆಯ ಕಹಳೆಯನ್ನು ಊದುವ ಮೂಲಕ ಶತ್ರುಗಳ ಸುಳಿವಿನ ಎಚ್ಚರಿಕೆಯನ್ನು ನೀಡುವಂತಹ ವ್ಯವಸ್ಥೆ ಮಾಡಲಾಗಿದ್ದು ಇಂದು ಆ ಪ್ರದೇಶವು ಬ್ಯೂಗಲ್ ರಾಕ್ ಎಂದೇ ಪ್ರಸಿದ್ಧವಾಗಿದೆ. ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿಅಂದು ಅವರು ಕಟ್ಟಿಸಿರುವ ಕಾವಲು ಗೋಪುರಗಳು ಇಂದು ಬೆಂಗಳೂರಿನ ಹೆಗ್ಗುರುತಾಗಿದ್ದು, ಅದೇ ಗೋಪುರವನ್ನೇ ಬೆಂಗಳೂರು ಬೃಹತ್ ಮಹಾನಗರಪಾಲಿಕೆ ತನ್ನ ಲಾಂಛನವನ್ನಾಗಿ ಮಾಡಿಕೊಂಡಿರುವುದು ವಿಶೇಷವಾಗಿದೆ.
ಹೀಗೆ ಶತ್ರುಗಳಿಂದ ಬೆಂಗಳೂರನ್ನು ರಕ್ಷಿಸಲು ನಗರದ ಸುತ್ತಲೂ ಸುಭದ್ರವಾದ ಕೋಟೆಗಳನ್ನು ಕಟ್ಟಿ ಅದಕ್ಕೊಂದು ಚಂದದ ದ್ವಾರವನ್ನು ನಿರ್ಮಾಣಮಾಡಲು ಮುಂದಾಗಿದ್ದಾಗ, ಎಷ್ಟೇ ಶ್ರಮ ವಹಿಸಿದರೂ, ಆ ಕೋಟೆಯ ಮುಖ್ಯ ದ್ವಾರವು ಪದೇ ಪದೇ ಬಿದ್ದು ಹೋಗುತ್ತಿತ್ತಂತೆ. ಅದನ್ನು ಸರಿಪಡಿಸಲು ಸುತ್ತಮುತ್ತಲಿನ ಅನೇಕ ನುರಿತ ಕೆಲಸಗಾರರನ್ನು ಕರೆತಂದರೂ ಆದು ವಿಫಲವಾಗುತ್ತಿದ್ದದ್ದನ್ನು ಕಂಡ ಕೆಂಪೇಗೌಡರು, ತಮ್ಮ ಹಿರಿಯರ ಸಲಹೆಯ ಮೇರೆಗೆ ಜ್ಯೋತಿಷಿಗಳ ಮೊರೆ ಹೋದಾಗ, ಅವರ ಕುಟುಂಬದ ಗರ್ಭಿಣಿಯೊಬ್ಬಳನ್ನು ನರ ಬಲಿಯಾಗಿ ಕೊಟ್ಟಲ್ಲಿ ಈ ಸಮಸ್ಯೆಗೆ ಪರಿಹಾರವಾಗ ಬಹುದು ಎಂದು ತಿಳಿಸಿದಾಗ, ತಮ್ಮ ಕುಟುಂಬದವರನ್ನು ಹೇಗೆ ಬಲಿ ಕೊಡುವುದು ಎಂಬ ಜಿಜ್ಞಾಸೆಯಲ್ಲಿದ್ದಾಗ, ಈ ವಿಷಯವನ್ನು ತಿಳಿದ ಕೆಂಪೇಗೌಡರ ಗರ್ಭಿಣಿ ಸೊಸೆ ಲಕ್ಷಮ್ಮ ತಮ್ಮ ನಾಡಿನ ರಕ್ಷಣೆಗಾಗಿ, ಸ್ವಯಂ ಪ್ರೇರಿತಳಾಗಿ ಕತ್ತಿಯಿಂದ ತನ್ನ ಶಿರಚ್ಛೇದ ಮಾಡಿಕೊಂಡು ಸಮರ್ಪಣೆ ಮಾಡಿದ ನಂತರ ಕೋಟೆಯ ಮುಖ್ಯದ್ವಾರದ ಸಮಸ್ಯೆ ಪರಿಹಾರವಾಯಿತಂತೆ. ತನ್ನ ಸೊಸೆಯ ತ್ಯಾಗ ಮತ್ತು ಬಲಿದಾನದ ಗೌರವಾರ್ಥವಾಗಿ ಆ ಮಹಾತಾಯಿ ಲಕ್ಷಮ್ಮನ ಸಮಾಧಿ ಮಾಡಿ ಅದಕ್ಕೊಂದು ಚಂದನೆಯ ಸ್ಮಾರಕವೊಂದನ್ನು ಕಟ್ಟಿದ್ದಲ್ಲದೇ ಅದೇ ಆವರಣದಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನವನ್ನೂ ನಿರ್ಮಿಸಿದರು. ಹಾಗೆ ಶ್ರೀಮತಿ ಲಕ್ಷಮ್ಮ ತನ್ನನ್ನು ತಾನು ಅರ್ಪಿಸಿಕೊಂಡ ಪ್ರದೇಶವೇ ಇಂದಿನ ಕೊರಮಂಗಲ ಪ್ರದೇಶವಾಗಿದ್ದು, ಈ ಘಟನೆಗೆ ಸಾಕ್ಷಿ ಎನ್ನುವಂತೆ ಇರುವ, ಆ ಸಮಾದಿ ಮತ್ತು ದೇವಸ್ಥಾನವು ಇಂದಿಗೂ ಕೋರಮಂಗಲದ 8 ನೇ ಬ್ಲಾಕ್ ಬಳಿ BBMP ನಿಯಂತ್ರಿತ ಉದ್ಯಾನವನದಿಂದ ಕೂಗಳತೆಯ ದೂರದಲ್ಲಿ ಕಾಣಬಹುದಾಗಿದೆ.
ಉತ್ತಮ ಆಡಳಿತದ ಜೊತೆಗೆ ಧರ್ಮಭೀರುವೂ ಆಗಿದ್ದ ಕೆಂಪೇಗೌಡರು ಹೊಸದಾಗಿ ಕಟ್ಟಿದ ನಗರದಲ್ಲಿ ಹತ್ತಾರು ದೇವಾಲಯಗಳನ್ನು ನಿರ್ವಿುಸಿದ್ದಾರೆ. ಬಸವನಗುಡಿಯ ಏಕಶಿಲಾ ದೊಡ್ಡ ಬಸವಣ್ಣನ ದೇವಸ್ಥಾನ ಅದರ ಪಕ್ಕದ್ಲೇ ದೊಡ್ಡ ಗಣೇಶನ ದೇವಸ್ಥಾನ, ರಂಗನಾಥಸ್ವಾಮಿ ದೇವಾಲಯ, ಆಂಜನೇಯಸ್ವಾಮಿ ದೇವಾಲಯ, ಗವಿಗಂಗಾಧರೇಶ್ವರ ದೇವಾಲಯದ ಆವರಣದಲ್ಲಿ ಬೃಹತ್ ಏಕಶಿಲಾ ಸೂರ್ಯಪಾನ, ಚಂದ್ರಪಾನ ಫಲಕಗಳು, ಶಿವನ ಡಮರು, ತ್ರಿಶೂಲ, ಹರಿಹರ ಬೆಟ್ಟದ ಮೇಲೆ ಬೃಹತ್ ಏಕಶಿಲಾ ಛತ್ರಿ ಇವುಗಳು ಕೆಂಪೇಗೌಡರ ಕಾಲದ ಶಿಲ್ಪಕಲಾ ವೈಭವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕಗಳಾಗಿವೆ ಎಂದರೂ ಅತಿಶಯವಲ್ಲ. ಹಲಸೂರಿನ ಸೋಮೇಶ್ವರ ದೇವಾಲಯ ಮತ್ತು ವಸಂತಪುರದ ದೇವಾಲಯಗಳ ವಿಸ್ತರಣೆ ಮತ್ತು ಜೀರ್ಣೋದ್ಧಾರವೂ ಸಹಾ ಅವರ ಕಾಲದಲ್ಲಿ ಆಗಿದೆ.
ಕೃಷ್ಣದೇವರಾಯರ ನಂತರ ವಿಜಯನಗರದ ಆಡಳಿತ ಚುಕ್ಕಾಣಿ ಹಿಡಿದವರು ದಕ್ಷರಾಗಿಲ್ಲದಿದ್ದ ಕಾರಣ ಬಹುತೇಕ ಸಾಮಂತರು ವಿಜಯನಗರ ಸಾಮ್ರಾಜಯದ ವಿರುದ್ಧ ಸಿಡಿದೆದ್ದು ಸ್ವತಂತ್ರರದರೂ, ಕೆಂಪೇಗೌಡರ ನಿಯತ್ತು ವಿಜಯನಗರದ ಪರವಾಗಿಯೇ ಇತ್ತು. ಇಷ್ಟೆಲ್ಲಾ ಆದರೂ, ಚನ್ನಪಟ್ಟಣದ ಪಾಳೇಗಾರ ಜಗದೇವರಾಯ ಬೆಂಗಳೂರಿನ ನಾಡಪ್ರಭು ಕೆಂಪೇಗೌಡರು ವಿಜಯನಗರದ ಸಾಮಂತಿಕೆಯಿಂದ ದೂರಸರಿಯುವ ಸಲುವಾಗಿ ತಮ್ಮದೇ ಭೈರವ ಎಂಬ ಹೆಸರಿನಲ್ಲಿ ಪ್ರತ್ಯೇಕವಾಗಿ ನಾಣ್ಯಗಳ ಚಲಾವಣೆ ಮಾಡುತ್ತಿದ್ದಾರೆ ಎಂಬ ದೂರನ್ನು ವಿಜಯನಗರದ ಸಾಮ್ರಾಜ್ಯರ ಬಳಿ ಇಟ್ಟಾಗ ಅದನ್ನು ಕೂಲಂಕುಶವಾಗಿ ಪರೀಕ್ಷಿಸದೇ, ರಾಜದ್ರೋಹದ ಆರೋಪದಡಿ ಕೆಂಪೇಗೌಡರನ್ನು ಬಂಧಿಸಿ ಅನೇಗುಂದಿಯ ಸೆರೆಮನೆಗೆ ತಳ್ಳಲಾಗುತ್ತದೆ. ಸುಮಾರು ಐದು ವರ್ಷಗಳ ನಂತರ ಹಿರಿಯ ಕೆಂಪೇಗೌಡರನ್ನು ಬಂಧಿಸಿದ್ದು ತಪ್ಪೆಂದು ಅರಿವಾಗಿ ಅವರನ್ನು ಸಕಲ ಮರ್ಯಾದೆಯೊಂದಿಗೆ ಯಲಹಂಕಕ್ಕೆ ಕಳುಹಿಸಲಾಗುತ್ತದೆ.
ಕೆಂಪೇಗೌಡರು ಬಂಧಿಯಾಗಿದ್ದಾಗ ಅವರ ರಾಜ್ಯವನ್ನು ಮಕ್ಕಳು ಮತ್ತು ಮೊಮ್ಮಕ್ಕಳೇ ಸಂಭಾಳಿಸಿದ್ದನ್ನು ಗಮನಿಸಿ ಇನ್ನು ಮುಂದೆ ರಾಮಕೃಷ್ಣಾ ಗೋವಿಂದಾ ಎಂದು ಭಗವಂತನ ಧಾನ್ಯದಲ್ಲಿ ಕಳೆಯುತ್ತೇನೆ ಎಂದು ನಿರ್ಧರಿಸಿ, ಹೊಸಾ ದೇವಸ್ಥಾನಗಳ ನಿರ್ಮಾಣ, ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ತಮ್ಮ ಸಮಯವನ್ನು ಮೀಸಲಿಟ್ಟರು. ಸುಮಾರು ವರ್ಷಗಳ ಕಾಲ ಪ್ರಜೆಗಳಿಂದ ದೂರವಿದ್ದರೂ ಪ್ರಜೆಗಳಿಗೆ ಅವರ ಮೇಲೆ ಎಂತಹ ಪೂಜ್ಯಭಾವನೆ ಇತ್ತು ಎನ್ನುವುದಕ್ಕೆ ಈ ಪ್ರಸಂಗ ಸೂಕ್ತವೆನಿಸುತ್ತದೆ.
ಅದೊಮ್ಮೆ ಯಲಹಂಕದಿಂದ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ಸ್ವಾಮಿಯ ದರ್ಶನಕ್ಕೆ ಬರುವುದಾಗಿ ತಮ್ಮ ಭಟರ ಮೂಲಕ ಅಲ್ಲಿನ ಅರ್ಚಕರಿಗೆ ಹೇಳಿ ಕಳುಹಿಸಿದ್ದರು. ನಾಡ ಪ್ರಭುಗಳು ತಮ್ಮ ದೇವಾಲಯಕ್ಕೆ ಬರುವ ವಿಷಯವನ್ನು ಅರ್ಚಕರು ತಮ್ಮ ಆಪ್ತ್ರ ಬಳಿ ಸಂತೋಷದಿಂದ ಹಂಚಿಕೊಂಡಿದ್ದು ಬಾಯಿಂದ ಬಾಯಿಗೆ ಹರಡಿ. ಬೆಳಿಗ್ಗೆ ಯಲಹಂಕದಿಂದ ಹೊರಟು ಮಧ್ಯಾಹ್ನದ ಹೊತ್ತಿಗೆ ಕಾಡುಮಲ್ಲೇಶ್ವರ ದೇವಾಲಯಕ್ಕೆ ಒಂದು ಮೈಲಿಗಳ ದೂರ ಬರುವಷ್ಟರಲ್ಲಿ ಪ್ರಭುಗಳನ್ನು ನೋಡಲು ಭಾರೀ ಜನಸಾಗರವೇ ಅಲ್ಲಿ ನೆರೆದಿದ್ದಲ್ಲದೇ, ಕೆಂಪೇಗೌಡರಿಗೆ ಜೈಕಾರ ಹಾಕುತ್ತಾ ಅವರಿಗೆ ಸಕಲ ರಾಜ ಮರ್ಯಾದೆಗಳಿಂದ ಬೆಳ್ಳಿ ಫಲಕದ ಉಯ್ಯಾಲೆಯ ಮೇಲೆ ಕೂರಿಸಿ ಹಾಲಿನ ಅಭಿಷೇಕ ಮಾಡಿಸಿ ನಂತರ ಆ ಇಡೀ ಜನಸ್ತೋಮದೊಂದಿಗೇ ಕೆಂಪೇಗೌಡರು ಕಾಡುಮಲ್ಲೇಶ್ವರನ ದರ್ಶನ ಪಡೆದದ್ದು ಈಗ ಇತಿಹಾಸವಾಗಿದೆ. ಅಂದು ಕೆಂಪೇಗೌಡರನ್ನು ಉಯ್ಯಾಲೆ ಮೇಲೆ ಸಮ್ಮಾನಿಸಿದ ಸ್ಥಳವೇ ಉಯ್ಯಾಲೆ ಕಾವಲು ಎಂದು ಪ್ರಸಿದ್ಧಿಯಾಗಿ ನಂತರದ ದಿನಗಳಲ್ಲಿ ಆಡು ಭಾಷೆಯಲ್ಲಿ ವೈಯ್ಯಾಳೀ ಕಾವಲ್ ಎಂದು ಅಪಭ್ರಂಶವಾಗಿರುವುದು ಗಮನಾರ್ಹವಾಗಿದೆ. 1569 ಇಸವಿಯಲ್ಲಿ ಹಿರಿಯ ಕೆಂಪೇಗೌಡರು ಕುಣಿಗಲ್ಲಿನಿಂದ ಮಾಗಡಿಯ ಮಾರ್ಗವಾಗಿ ಹಿಂದಿರುಗುವಾಗ ಮಾಗಡಿಯ ಸಮೀಪದ ಕೆಂಪಾಪುರದಲ್ಲಿ ವಯೋಸಜವಾಗಿ ಅಕಾಲಿಕವಾಗಿ ಮರಣಹೊಂದುವ ಮೂಲಕ ಒಬ್ಬ ನಿಜವಾದ ನಾಡಪ್ರಭುವನ್ನು ಈ ನಾಡು ಕಳೆದುಕೊಳ್ಳುವಂತಾಗುತ್ತದೆ.
ವಿಜಯನಗರದ ಸಾಮಂತ ರಾಜನಾಗಿ ಯಲಹಂಕ ನಾಡಿನ ವ್ಯಾಪ್ತಿಯು ಹಿರಿಯ ಕೆಂಪೇಗೌಡರ ಕಾಲದಲ್ಲಿ ಈಗಿನ ಬೆಂಗಳೂರಿನ ಹೊರವಲಯದಲ್ಲಿರುವ ಆವತಿಯಿಂದ ಹಿಡಿದು ಕೋಲಾರ, ಶಿವಗಂಗೆ, ಹುಲಿಕಲ್, ಕುಣಿಗಲ್, ಹುಲಿಯೂರುದುರ್ಗ, ಹುತ್ರಿದುರ್ಗ, ಮಾಗಡಿ, ರಾಮನಗರ ಸಾವನದುರ್ಗದವರೆಗೂ ವಿಸ್ತರಿಸಲ್ಪಟ್ಟು ಜನಾನುರಾಗಿಯಾಗಿ ನಿರ್ಮಿಸಿದ ಕೆರೆಗಳು, ದೇವಾಲಯಗಳು, ಕೋಟೆ-ಕೊತ್ತಲಗಳು ಇಂದಿಗೂ ನಮ್ಮ ಕಣ್ಣ ಮುಂದಿದ್ದು ಅವರ ಪೀಳಿಗೆಯವರು ಇಂದಿಗೂ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿರುವ ಅರಮನೆಯಲ್ಲಿ ವಾಸಿಸುತ್ತಿದ್ದಾರೆ.
ಕೆಂಪೇಗೌಡ ವಂಶಜರ ಆಳ್ವಿಕೆಯ ನಂತರ ಬೆಂಗಳೂರು ನಗರ ಬಿಜಾಪುರದ ಸುಲ್ತಾನರ ಕೈವಶವಾಗಿ, ಬೆಂಗಳೂರು ಪ್ರದೇಶದ ಉಸ್ತುವಾರಿಯನ್ನು ಛತ್ರಪತಿ ಶಿವಾಜಿಯ ತಂದೆ ಷಹಾಜೀ ಬೋಂಸ್ಲೆ ಅವರಿಗೆ ವಹಿಸಿದ ಕಾರಣ ಸರಿ ಸುಮಾರು 1632ರಲ್ಲಿ ಷಹಾಜೀ ಬೋಂಸ್ಲೆ ಬೆಂಗಳೂರಿಗೆ ವರ್ಗವಾಗಿ ಬಂದು ಸುಮಾರು 25 ವರ್ಷಗಳಷ್ಟು ಕಾಲ ಬೆಂಗಳೂರು ಮತ್ತು ಸುತ್ತಮುತ್ತಲಿನ ಪದೇಶದ ಆಳ್ವಿಕೆ ನಡೆಸಿದ ಸಂಧರ್ಭದಲ್ಲಿ, ಬಾಲಕ ಶಿವಾಜಿಯೂ ಬೆಂಗಳೂರಿಗೆ ಅನೇಕ ಬಾರಿ ಬಂದು ಹೋಗಿರುತ್ತಾರೆ, ಶಿವಾಜಿಯವರ ಬಾಲ್ಯದ ಶಸ್ತ್ರಾಭ್ಯಾಸವೂ ಇಲ್ಲಿಯೇ ನೆಡೆದಿದ್ದಲ್ಲದೇ, ಸಹೀಬಾಯಿ ಎಂಬುವರೊಂದಿಗೆ ಶ್ರಿವಾಜಿಯವರ ಮದುವೆ ಬೆಂಗಳೂರಿನ ಇಂದಿನ ಚಿಕ್ಕಪೇಟೆ ಪ್ರದೇಶದ ಗೌರಿ ಮಹಲ್ ಅರಮನೆಯಲ್ಲಿಯೇ ನಡೆಯಿತು. ಇಂದಿನ ಚಿಕ್ಕಪೇಟೆಯ ವಿಜಯಲಕ್ಷ್ಮೀ ಚಿತ್ರಮಂದಿರವೇ ಆ ಗೌರಿ ಅರಮನೆಯಾಗಿತ್ತು ಎನ್ನುತ್ತಾರೆ ಇತಿಹಾಸಕಾರರು.
ಹೀಗೆ ಶಿವಾಜಿ ಮಹಾರಾಜರು ಹಲವು ವರ್ಷಗಳ ಕಾಲ ಬೆಂಗಳೂರಿನಲ್ಲಿ ಇದ್ದ ಪರಿಣಾಮ ಅವರಿಗೆ ಕನ್ನಡ ಭಾಷೆಯ ಪ್ರಭಾವಕ್ಕೆ ಒಳಗಾಗಿ, ಮುಂದೆ ಅವರು ಮಹಾರಾಜನಾಗಿ ಪಟ್ಟಾಭಿಷೇಕ ಮಾಡಿಕೊಂಡ ನಂತರ ಇಂದಿನ ಕರ್ನಾಟಕದಲ್ಲಿನ ಕೆಲವು ಪ್ರದೇಶವನ್ನು ತಮ್ಮ ರಾಜ್ಯಕ್ಕೆ ಸೇರಿಸಿಕೊಂಡ ನಂತರ ತಮ್ಮ ರಾಜ್ಯದಲ್ಲಿ ಚಲಾವಣೆಗೆ ತಂದ ನಾಣ್ಯಕ್ಕೆ ಹೊನ್ನ ಮತ್ತು ಕೃಷಿಕರನ್ನು ರಯತ್ ಎಂದೇ ಕರೆಯುತ್ತಿದ್ದದ್ದು ವಿಶೇಷವಾಗಿದೆ. ಶಿವಾಜಿಯವರ ಕಾಲದಲ್ಲೇ ಬೆಂಗಳೂರಿನಲ್ಲಿ ಗೌರಿಮಹಲ್, ಗವಿಗಂಗಾಧರೇಶ್ವರ ದೇವಸ್ಥಾನ ಸಮೀಪದ ಗೋಸಾಯಿ ಮಠ ಮತ್ತು ಕಾಡುಮಲ್ಲೇಶ್ವರ ದೇವಸ್ಥಾನ ಇವೆಲ್ಲದರ ನಿರ್ಮಾಣಕ್ಕೆ ಶಿವಾಜಿ ಮಹಾರಾಜರ ಸಹಾಯವಿದ್ದು ಅದರ ಕುರಿತಾದ ಶಾಸನವನ್ನು ಇಂದಿಗೂ ಸಹಾ ಕಾಡುಮಲ್ಲೇಶ್ವರ ದೇವಾಲಯದ ಪಕ್ಕದಲ್ಲಿ ಕಾಣಬಹುದಾಗಿದೆ.
ಬೆಂಗಳೂರಿನಲ್ಲಿ ಶಿವಾಜಿ ಮಹಾರಾಜರು ನೆಲೆಸಿದ್ದ ಕಾರಣ, ಮರಾಠಿ ದರ್ಜಿಗಳೇ ಹೆಚ್ಚಾಗಿ ವಾಸಿಸುತ್ತಿದ್ದಂತಹ ಪ್ರದೇಶಕ್ಕೆ ಶಿವಾಜಿ ನಗರ ಎಂದು ಹೆಸರಿಟ್ಟಿದ್ದು, ಇಂದಿಗೂ ಸಹಾ ಆ ಪ್ರದೇಶ ಅತ್ಯಂತ ಜನನಿಭಿಡ ಪ್ರದೇಶವಾಗಿದ್ದು, ವಾಣಿಜ್ಯ ವಹಿವಾಟುಗಳಿಗೆ ಪ್ರಸಿದ್ಧಿಯಾಗಿದೆ. ಸುಮಾರು 25 ವರ್ಷಗಳ ಹಿಂದೆ ಜೆ.ಸಿ ರಸ್ತೆಯಲ್ಲಿ ಆರಂಭದಲ್ಲಿಯೇ ಶಿವಾಜಿ ಚಿತ್ರಮಂದಿರವಿತ್ತು ಮತ್ತು ಅದರ ಮುಂದೆ ಖಡ್ಗವನ್ನು ಹಿಡಿದು ಕುದುರೆಯನ್ನೇರಿದ ಶಿವಾಜಿಯ ವಿಗ್ರಹವಿದ್ದದ್ದು ಈಗ ಇತಿಹಾಸ. ಪ್ರಸ್ತುತ ಬೆಂಗಳೂರು ಮಹಾನಗರ ಪಾಲಿಕೆಯು, ಸದಾಶಿವ ನಗರದ ಈಜುಕೊಳದ ಮುಂದೆ ಶಿವಾಜಿಯ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಬೆಂಗಳೂರಿಗೂ ಶಿವಾಜಿಗೂ ಇರುವ ಸಂಬಂಧವನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ
ಶಿವಾಜಿಯ ತಂದೆಯ ಮರಣಾನಂತರ ನಡೆದ ಯುದ್ದದಲ್ಲಿ ಬಿಜಾಪುರದ ಸುಲ್ತಾನರನ್ನು ದೆಹಲಿಯ ಔರಂಗಜೇಬನು ಸೋಲಿಸಿದ ನಂತರ ಬೆಂಗಳೂರು ದೆಹಲಿಯ ಸುಲ್ತಾನನ ಕೈವಶವಾಗಿ ಬೆಂಗಳೂರಿನ ಉಸ್ತುವಾರಿ ಆತನ ಭಂಟ ಖಾಸಿಮ್ ಖಾನ್ ಪಾಲಾಗುತ್ತದೆ. ಆಗ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ಚಿಕ್ಕ ದೇವರಾಜ ಒಡೆಯರ್ ಮಹಾಪ್ರಭುಗಳು ಬೆಂಗಳೂರಿನ ಮೇಲೆ ದಂಡೆತ್ತಿ ಬಂದು ಖಾಸಿಮ್ ಖಾನ್ ನನ್ನು ಸೋಲಿಸಿದರೂ, ಔರಂಗಜೇಬನ ಜೊತೆಯಲ್ಲಿ ಉತ್ತಮವಾದ ಸಂಬಂಧವನ್ನು ಹೊಂದಿದ್ದ ಕಾರಣ, ಅಂದಿನ ಕಾಲಕ್ಕೇ ಸುಮಾರು ಮೂರು ಲಕ್ಷ ರೂಪಾಯಿಗಳನ್ನು ಕೊಟ್ಟು ದೆಹಲಿಯ ಸುಲ್ತಾನರಿಂದ ಬೆಂಗಳೂರನ್ನು ಕೊಂಡು ಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕುತ್ತಾರೆ.
ಹಾಗೆ ಒಪ್ಪಂದ ಮಾಡಿಕೊಂಡರೂ ಕೂಡಲೇ ಬೆಂಗಳೂರನ್ನು ಬಿಟ್ಟು ಕೊಡದ ಖಾಸೀಂ ಸುಮಾರು ಎರಡು ಮೂರು ವರ್ಷಗಳ ಕಾಲ ಬೆಂಗಳೂರಿನಲ್ಲಿ ಇದ್ದದ್ದು ಬದ್ದದ್ದನ್ನು ದೋಚಿಕೊಂಡು ಬಿಟ್ಟು ಹೋಗುತ್ತಾನೆ. ಹೀಗೆ ಚಿಕ್ಕ ದೇವರಾಜರ ವಶಕ್ಕೆ ಬೆಂಗಳೂರು ಬಂದ ನಂತರದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿಯನ್ನು ಹೊಂದುತ್ತದೆ. ಆಡಳಿತಾತ್ಮಕವಾಗಿ ಎಲ್ಲಾ ಸಂದರ್ಭಗಳಲ್ಲಿಯೂ ಸ್ಥಳೀಯರು ಮೈಸೂರಿಗೆ ಬರಲು ಸಾಧ್ಯವಾಗದು ಎಂಬುದನ್ನು ಅರಿತು ಅವರ ಕಾಲದಲ್ಲೇ ಆಡಳಿತದ ಅನುಕೂಲಕ್ಕಾಗಿ ಹದಿನೆಂಟು ಕಛೇರಿಗಳನ್ನು ಒಂದೇ ಕಡೆ ಇರುವಂತಹ ಕಛೇರಿಯನ್ನು ಕಟ್ಟಿಸಿ ಅದಕ್ಕೆ ಆಠಾರ ಕಛೇರಿ(18) ಎಂದು ಹೆಸರಿಸುತ್ತಾರೆ, ಅಂದಿನ ಅಠಾರ ಕಚೇರಿಯೇ ಇಂದು ಉಚ್ಚನ್ಯಾಯಾಲಯವಾಗಿ ಪರಿವರ್ತಿತವಾಗಿದೆ. ಇವರ ಕಾಲದಲ್ಲಿಯೇ ವ್ಯವಸ್ಥಿತವಾದ ಅಂಚೆ ಇಲಾಖೆ ಸ್ಥಾಪಿಸಲ್ಪಡುತ್ತದೆ. ಇವರ ಕಾಲದಲ್ಲಿ ಸಾಲಕ್ಕೆ ಶಿಕ್ಷೇ ಎಂಬ ವಿಭಿನ್ನವಾದ ಶಿಕ್ಷೆ ಜಾರಿಗೆಯಲ್ಲಿತ್ತು. ಅದರ ವಿಶಿಷ್ಟ್ಯತೆ ಏನೆಂದರೆ ಸಂಸ್ಥಾನದ ಅಧಿನದಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಯೊಬ್ಬ ನೌಕರನು ಅವನ ಅದಾಯ ತಕ್ಕಂತೆ ಖರ್ಚು ಮಾಡಬೇಕಿತ್ತು. ಅದಕ್ಕಿಂತ ಹೆಚ್ಚಿನ ಕರ್ಚು ವೆಚ್ಚ ಮಾಡಿದ್ದು ಕಂಡು ಬಂದಿದ್ದಲ್ಲಿ ಅವರನ್ನು ಕರೆಸಿ ವಿಚಾರಣೆ ಮಾಡುತ್ತಿದ್ದರು. ಉದಾ. ಒಬ್ಬ ಸೈನಿಕ ತನ್ನ ಆದಯಕ್ಕಿಂತ ಹೆಚ್ಚಿನ ಹಣ ವ್ಯಯಿಸಿದಲ್ಲಿ ಆತನನ್ನು ಕರೆಸಿ ಕೇಳಿದಾಗ, ಆತ ಸೇನಾಧಿಪತಿಗಳ ಬಳಿ ಸಾಲ ಮಾಡಿದೆ ಎಂದರೆ, ಆಗ ಸೇನಾಧಿಪತಿಯನ್ನು ಕರೆಸಿ ಆವರಿಗೆ ಬರುವ ಆದಾಯದಲ್ಲಿ ಅದು ಹೇಗೆ ಸಾಲ ಕೊಟ್ಟಿರಿ ಎಂದು ವಿಚಾರಿಸಿ ಅನುಮಾನ ಬಂದಲ್ಲಿ ಆ ಸೈನಿಕ ಮತ್ತು ಅವನ ಸೇನಧಿಪತಿಗಳಿಗೆ ಶಿಕ್ಷೆಯನ್ನು ಕೊಡುವ ಪದ್ದತಿಯಿತ್ತು . ಹಾಗಾಗಿ ಸರ್ಕಾರಿ ವೃತ್ತಿಯಲ್ಲಿದ್ದವರು ಅತ್ಯಂತ ಪ್ರಾಮಾಣಿಕರಾಗಿ ಆದಕ್ಕಿಂತ ಹೆಚ್ಚಿನ ಹಣವನ್ನು ಸಂಪಾದಿಸುವ ದುರ್ಮಾರ್ಗವನ್ನು ಅನುಸರಿಸುತ್ತಿರಲಿಲ್ಲ. ಇವರ ಕಾಲದಲ್ಲೇ 9 ಕೋಟಿ ಚಿನ್ನದ ವರಹಗಳನ್ನು ಖಜಾನೆಯಲ್ಲಿಟ್ಟಿದ್ದರಂತೆ. ಕೇವಲ ಭಾರತ ದೇಶದ ಉಳಿದ ಸಂಸ್ಥಾನವಷ್ಟೇ ಅಲ್ಲದೇ ದೇಶ ವಿದೇಶಗಳೊಂದಿಗೆ ಉತ್ತಮವಾದ ರಾಜಕೀಯ ಸಂಬಂಧವನ್ನು ಬೆಳೆಸಿದ್ದ ಚಿಕ್ಕ ದೇವರಾಜರು ಬೆಂಗಳೂರನ್ನು ಪ್ರಮುಖ ವಾಣಿಜ್ಯ ನಗರವನ್ನಾಗಿ ಬೆಳೆಸಿದ್ದಲ್ಲದೇ, ಅಂದಿನ ಕಾಲದಲ್ಲಿಯೇ ಇಡೀ ಭಾರತದ ಅಷ್ಟೂ ಸಂಸ್ಥಾನಗಳ ಹಣ ಬೆಂಗಳೂರಿನಲ್ಲಿ ಚಲಾವಣೆಯಾಗುವಂತಹ ಸುಸ್ಥಿತಿಯಲ್ಲಿಟ್ಟಿದ್ದರು ಎನ್ನುವುದು ಗಮನಾರ್ಹವಾದ ಸಂಗತಿಯಾಗಿದೆ.
ಆದರೆ 1700-1800ರ ವರೆಗೆ ದೇಶಾದ್ಯಂತ ಯುದ್ಧಗಳೇ ನಡೆಯುತ್ತಿದ್ದಂತಹ ಸಮಯದಲ್ಲಿ ಮೈಸೂರು ಸಂಸ್ಥಾನವನ್ನು ಮೂವರು ರಾಜರು ಆಳಿದರು. ಆದರೆ ಅವರಾರು ಬಲಶಾಲಿಗಳಾಗಿರದ ಕಾರಣ, ನಂಜನಗೂಡಿನ ಬಳಿಯ ಕಳಲೆಯ ದಳವಾಯಿಗಳು ಕೊಟ್ಟ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಕೋಶದಲ್ಲಿದ್ದ 9 ಕೋಟಿ ಚಿನ್ನದ ವರಹಗಳನ್ನು ಬರಿದು ಮಾಡಿ ಮೈಸೂರು ಸಂಸ್ಥಾನವನ್ನು ಅಕ್ಷರಶಃ ನಿರ್ಗತಿಕರನ್ನಾಗಿ ಮಾಡಿರುತ್ತಾರೆ. 1759 ರಲ್ಲಿ ಮೈಸೂರಿನ ಮಹಾರಾಜರಾಗಿದ್ದ ಇಮ್ಮಡಿ ಕೃಷ್ಣರಾಜ ಒಡೆಯರ್ ಅವರ ಬಳಿ ದೇವನಹಳ್ಳಿ ಕೋಟೆಯನ್ನು ವಶಪಡಿಸಿಕೊಳ್ಳುವ ಸಂಧರ್ಭದಲ್ಲಿಯೇ ಪೈಲ್ವಾನ್ ಮತ್ತು ಕುದುರೆಯನ್ನು ನೋಡಿಕೊಳ್ಳುವ ಸಹಾಯಕನಾಗಿ ಮೈಸೂರಿನ ಸೇನೆಯನ್ನು ಸೇರಿಕೊಂಡ ಹೈದರ್ ಅಲಿ ತನ್ನ ಶೌರ್ಯ ಮತ್ತು ಪರಾಕ್ರಮದಿಂದ ದೇವನಹಳ್ಳಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಹಕರಿಸಿದ ನಂತರ ಆತ ರಾಜರ ಮೆಚ್ಚುಗೆ ಗಳಿಸಿ ನೇರವಾಗಿ ಸೇನಾಧಿಪತಿಯ ಪಟ್ಟವನ್ನು ಪಡೆಯುತ್ತಾನೆ. ನಂತರ ನಡೆದ ಕ್ಷಿಪ್ರಕ್ರಾಂತಿ ಮತ್ತು ಕೆಲವು ಕುಂತಂತ್ರಗಳಿಂದಾಗಿ ಸಾಮನ್ಯ ಸೇನಾಧಿಪತಿಯಾಗಿದ್ದ ಹೈದರ್ ಅಲಿ ಇಡೀ ಮೈಸೂರನ್ನೇ ತಮ್ಮ ಸುಪರ್ಧಿಗೆ ತೆಗೆದುಕೊಂಡು ಕೆಲ ಕಾಲ ಆಳ್ವಿಕೆ ನಡೆಸಿ, ಆತನ ಮರಣಾನಂತರ ಮೈಸೂರಿನ ಸಂಸ್ಥಾನ ಹೈದರ್ ಮಗ ಟಿಪ್ಪು ಸುಲ್ತಾನನ ಕೈವಶವಾಗಿ ಹೋದಾಗ ಸಹಜವಾಗಿಯೇ ಬೆಂಗಳೂರು ಸಹಾ ಆತನ ಕೈವಶವಾಗುತ್ತದೆ.
ಬೆಂಗಳೂರಿನ ನಿರ್ಮಾತರಾದ ಶ್ರೀ ಕೆಂಪೇಗೌಡರು ಬೆಂಗಳೂರಿನ ಸುತ್ತ ಮುತ್ತಲೂ ನದಿಗಳು ಇಲ್ಲದಿದ್ದ ಕಾರಣ, ನಗರದ ನೀರಿನ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಬೆಂಗಳೂರಿನ ತಗ್ಗು ಪ್ರದೇಶ ಮತ್ತು ಜಲಾನಯನಗಳನ್ನು ಗುರುತಿಸಿ, ಎತ್ತರ ಪ್ರದೇಶಗಳಲ್ಲಿ ಮಳೆಯಿಂದ ಬೀಳುವ ನೀರೆಲ್ಲವೂ ಸರಾಗವಾಗಿ ಹರಿಯುವಂತೆ ರಾಜಕಾಲುವೆಗಳನ್ನು ನಿರ್ಮಿಸಿ ಅವೆಲ್ಲವೂ ಆ ನೀರಿನ ಸೆಲೆಯ ಪ್ರದೇಶಕ್ಕೆ ಹರಿದು ಅಲ್ಲೊಂದು ಸುಂದರವಾದ ಕೆರೆ ಕಟ್ಟೆಗಳಾಗುವಂತೆ ಸುಮಾರು 500 ಕೆರೆಗಳನ್ನು ನಿರ್ಮಾಣ ಮಾಡಿದ್ದ ವಿಷಯವನ್ನು ಈಗಾಗಲೇ ತಿಳಿದಿದ್ದೇವೆ. ಅಂತಹ 500 ಕೆರೆ ಕಟ್ಟೆಗಳು ಮತ್ತು ಕಲ್ಯಾಣಿಗಳಲ್ಲಿ ಈಗಿನ ಮಾರುಕಟ್ಟೆ ಇರುವ ದೊಡ್ಡ ಪೇಟೆಯ ಬಳಿಯಲ್ಲಿಯೇ ಕಲ್ಯಾಣಿಯೂ ಇತ್ತು. ಸಿದ್ದಿ ಎಂಬುವರು ಕೆಂಪೇಗೌಡರ ಸಂಬಂಧಿಯಾಗಿದ್ದು, ಅವರು ನಿಧನರಾದಾಗ ಅವರ ನೆನಪಿನಲ್ಲೇ ಆ ಕಲ್ಯಾಣಿಗೆ ಸಿದ್ದಿ ಕಟ್ಟೆ ಎಂಬ ಹೆಸರನ್ನು ಇಟ್ಟಿದ್ದಲ್ಲದೇ. ಕ್ರಮೇಣವಾಗಿ ಆ ಕಲ್ಯಾಣಿಯ ಸುತ್ತಲೂ, ಪ್ರತೀ ವಾರವೂ ಸುತ್ತಮುತ್ತಲಿನ ರೈತರುಗಳು ತಾವು ಬೆಳೆದ ಹೂವು ತರಕಾರಿ, ಹಣ್ಣುಗಳು ದವಸ ಧಾನ್ಯಗಳನ್ನು ತಂದು ಮಾರುವಂತಹ ಗದ್ದಲ ಸಂತೆಯಾಗಿ ಮಾರ್ಪಾಟಾಯಿತು.
ಮೈಸೂರು ಸಂಸ್ಥಾನವನ್ನು ವಶಪಡಿಸಿಕೊಂಡ ಟಿಪ್ಪು ಬೆಂಗಳೂರನ್ನು ಬಹಳ ಇಷ್ಟ ಪಡುತ್ತಿದ್ದ ಕಾರಣ, 1790ರ ಸಮಯದಲ್ಲಿ ಅದೇ ಸಿದ್ದಿಕಟ್ಟೆಯ ಕೂಗಳತೇ ದೂರದಲ್ಲಿದ್ದ ಕೋಟೆಯಿಂದ (ಸದ್ಯದ ವಿಕ್ಟೋರಿಯಾ ಆಸ್ಪತ್ರೆಯ ಪಕ್ಕ) ತನ್ನ ರಾಜ್ಯಭಾರವನ್ನು ಮಾಡುತ್ತಿದ್ದಂತಹ ಸಮಯದಲ್ಲಿ, ಬ್ರಿಟಿಷ್ ಸೈನ್ಯವು ತಮಿಳುನಾಡಿನ ಹಲವಾರು ಕೋಟೆಗಳನ್ನು ವಶಪಡಿಸಿಕೊಂಡ ಉತ್ಸಾಹದಲ್ಲಿ ಕರ್ನಾಟಕದ ಕಡೆ ತಮ್ಮ ಥಾಳಿಯನ್ನು ಪ್ರಾರಂಭಿಸಿ, ಮಾರ್ಚ್ 1791 ರಲ್ಲಿ ಬೆಂಗಳೂರನ್ನು ತಲುಪಿ ಹಲಸೂರು ಗೇಟ್ ಅನ್ನು ವಶಪಡಿಸಿಕೊಂಡು ಈ ಕೋಟೆಯ ಪ್ರದೇಶಕ್ಕೆ ಮುತ್ತಿಗೆ ಹಾಕುವ ಮೂಲಕ ಮೂರನೇ ಆಂಗ್ಲೋ-ಮೈಸೂರು ಯುದ್ದ ಆರಂಭವಾಗುತ್ತದೆ. ಅಂದಿನ ಕಾಲಕ್ಕೆ ತಕ್ಕ ಹಾಗೆ ಅಧುನಿಕ ಶಸ್ತಾಸ್ತ್ರಗಳನ್ನು ಹೊಂದಿದ್ದ ಬ್ರಿಟೀಷ್ ಸೇನೆಯನ್ನು ಟಿಪ್ಪುವಿನ ಬೆಂಗಳೂರು ಕೋಟೆಯ ಕೊತ್ವಾಲ್ ಬಹದ್ದೂರ್ ಖಾನ್ ತನ್ನ 2,000 ಸೈನಿಕರೊಂದಿಗೆ ಆಕ್ರಮಣಕಾರಿಯಾಗಿ ಪ್ರತಿ ಧಾಳಿಯನ್ನು ನಡೆಸುವ ಮೂಲಕ ಬ್ರಿಟೀಷರಿಗೆ ಸವಾಲನ್ನು ಒಡ್ಡಿದ್ದನು.
ಹೇಗಾದರೂ ಮಾಡೀ ಆ ಕೋಟೆಯನ್ನು ಪ್ರವೇಶಿಸಲು ಹೊಂಚು ಹಾಕುತ್ತಿದ್ದ ಬ್ರಿಟಿಷ್ ಸೈನ್ಯ ಸುಮಾರು ಎರಡು ವಾರಗಳ ಹಗಲು ಹೊತ್ತಿನಲ್ಲಿ ಕೋಟೆಯನ್ನು ಪ್ರವೇಶಿಸಲು ಸಾಧ್ಯವಾಗದೇ ಹೋದಾಗ, ಆ ಬ್ರಿಟಿಷ್ ಸೇನೆಯ ಮುಖ್ಯಸ್ಥನಾಗಿದ್ದ ಲಾರ್ಡ್ ಕಾರ್ನ್ವಾಲಿಸ್, ಯುದ್ಧದ ನಿಯಮಗಳಿಗೆ ವಿರುದ್ಧವಾಗಿ ರಾತ್ರೋರಾತ್ರಿಯಲ್ಲಿ ಕೋಟೆಯ ಮೇಲೆ ದಾಳಿ ಮಾಡಿದಾಗ, ಅದಕ್ಕೆ ಸಿದ್ಧವಾಗಿರದ ಟಿಪ್ಪುವಿನ ಸೈನ್ಯವು ಬ್ರಿಟೀಷರ ವಿರುದ್ಧ ಸೋಲನ್ನು ಅನುಭವಿಸಿ, ಮಾರ್ಚ್ 20, 1791 ಆ ಬೆಂಗಳೂರು ಕೋಟೆಯು ಬ್ರಿಟೀಷರ ಕೈವಶವಾಯಿತು. ಬ್ರಿಟಿಷರು ಬೆಂಗಳೂರು ಪೇಟೆಯನ್ನು ವಶಪಡಿಸಿಕೊಂಡ ನಂತರ ಬೆಂಗಳೂರು ಸಂಪೂರ್ಣವಾಗಿ ಬ್ರಿಟೀಷರ ಪಾಲಾಯಿತು.
ಸಿದ್ದಿಕಟ್ಟೆಯ ಪಕ್ಕದ ಕೋಟೆಯು ಬ್ರಿಟೀಷರ ಕೈವಶವಾಗುತ್ತಿದ್ದಂತೆಯೇ ಅದರ ಕೂಗಳತೆಯ ದೂರದಲ್ಲೇ ತಮ್ಮ ಪ್ರಾರ್ಥನೆಗೆ ಅನುಕೂಲವಾಗುವಂತೆ ಇಂದಿನ ಚಾಮರಾಜ ಪೇಟೆಯ ರಾಯಲ್ ವೃತ್ತದ ದಕ್ಷಿಣದಲ್ಲಿ ಸೇಂಟ್ ಜೋಸೆಫ್ ಚರ್ಚ್ ಪ್ರಾರಂಭಿಸಿದ್ದಲ್ಲದೇ, ಅದರ ಜೊತೆಯಲ್ಲೇ ಶಾಲೆಯೊಂದನ್ನು ಆರಂಭಿಸಿದ್ದರು. ಇಂದಿಗೂ ಸಹಾ ಆ ಸೇಂಟ್ ಜೋಸೆಫ್ ಚರ್ಚ್ ಬೆಂಗಳೂರಿನಲ್ಲಿರುವ ಒಂದು ಸುಂದರವಾದ ಚರ್ಚ್ ಎಂದು ಪ್ರಖ್ಯಾತವಾಗಿರುವುದಲ್ಲದೇ ಪ್ರತಿದಿನವೂ 500 ಕ್ಕೂ ಹೆಚ್ಚು ಜನರು ಈ ಚರ್ಚ್‌ಗೆ ಭೇಟಿ ನೀಡಿದರೆ, ಭಾನುವಾರದ ಪ್ರಾರ್ಥನೆಗೆ ಸಾವಿರಾರು ಜನರು ಸೇರುತ್ತಾರೆ. ಅದೇ ಚರ್ಚಿನ ಆವರಣದಲ್ಲೇ ಇರುವ ಶಾಲೆಯೂ ಸಹಾ ೈಂದಿಗೂ ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ.
ಹೀಗೆ ಬೆಂಗಳೂರನ್ನು ಸೋತ ನಂತರ ಶ್ರೀರಂಗಪಟ್ಟನದಲ್ಲಿಯೇ ವಾಸ್ತವ ಹೂಡಿದ್ದ ಟಿಪ್ಪುವಿನ ಮೇಲೆ ಮತ್ತೆ 1799ರಲ್ಲಿ ಶ್ರೀರಂಗಪಟ್ಟಣದಲ್ಲೇ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ ನಡೆದು ಆ ಯುದ್ದದಲ್ಲಿ ಟ್ಟಿಪ್ಪುವಿನನ್ನು ಕೊಲ್ಲುವ ಮೂಲಕ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡು ಮೈಸೂರು ರಾಜ್ಯದ ರೆಸಿಡೆನ್ಸಿಯನ್ನು ಅಲ್ಲೇ ಸ್ಥಾಪನೆ ಮಾಡಿಕೊಂ ಡು ಮುಂದೆ ಸುಮಾರು ಐದಾರು ವರ್ಷಗಳ ಕಾಲ ಅಲ್ಳೇ ಸೈನ್ಯದ ಜೊತೆಯಲ್ಲೇ ಮೋಜು ಮಸ್ತಿಗಳಲ್ಲಿ ನಿರತವಾಗಿದ್ದಲ್ಲದೇ, ಅಲ್ಲಿನ ಕೋಟೆಗಳನ್ನು ನಾಶಪಡಿಸಿ ಅಲ್ಲಿನ ಮರ ಮುಟ್ಟುಗಳನ್ನು ಊಟಿಯ ತಮ್ಮ ಐಶಾರಾಮಿ ಬಂಗಲೆಗಳಿಗೆ ಮತ್ತು ಅಲ್ಲಿನ ಚರ್ಚುಗಳ ನಿರ್ಮಾಣಕ್ಕೆ ಬಳಸಿಕೊಂಡಿದ್ದರು.
ಹೀಗೆ ಟಿಪ್ಪುವಿನನ್ನು ಕೊಂದು ಕೋಟೆಯನ್ನು ವಶಪಡಿಸಿ ಕೊಳ್ಳಲು ವೀರಾವೇಶದಿಂದ ಹೋರಾಡಿದ್ದ ಬ್ರಿಟೀಷ್ ಸೈನಿಕರಿಗೆ ಯುದ್ದ ಭತ್ಯೆಯನ್ನು (War allowance) ಕೊಡಲು ಆರಂಭಿಸಿದ ಬ್ರಿಟಿಷ್ ಸರ್ಕಾರ ಅದನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಿರುತ್ತಾರೆ. ಅದೊಮ್ಮೆ ಇಂಗ್ಲೇಂಡಿನಿಂದ ಬಂದ ಲೆಕ್ಕ ಪರಿಶೋಧಕರು ಯುದ್ಧ ಮುಗಿದು ಏಳು ವರ್ಷಗಳು ಕಳೆದರೂ ಇನ್ನೂ ಏಕೆ ಭತ್ಯೆ ಕೊಡುತ್ತಿದ್ದೀರೀ? ಎಂದು ಆಕ್ಷೇಪಣೆ ಎತ್ತಿದಾಗ ಎಚ್ಚೆತ್ತು ಕೊಂಡ ಲಾರ್ಡ್ ವೆಲ್ಲೆಸ್ಲಿ ಯಾವುದೇ ಮುನ್ಸೂಚನೆಯನ್ನೂ ಕೊಡದೇ ಸೈನಿಕರ ಯುದ್ದ ಭತ್ಯೆಯನ್ನು ನಿಲ್ಲಿಸುತ್ತಾನೆ. ಹೀಗೆ ಇದ್ದಕ್ಕಿದ್ದಂತೆಯೇ ತಮ್ಮ ಹೆಚ್ಚುವರಿ ಆದಾಯ ಕಡಿತಗೊಂಡ ಪರಿಣಾಮ ಸೈನಿಕರು ಬಂಡೆದ್ದು ಶ್ರೀರಂಗ ಪಟ್ಟಣಕ್ಕೇ ಸುಮಾರು ದಿನಗಳ ಕಾಲ ಮುತ್ತಿಗೆ ಹಾಕುತ್ತಾರೆ. ಆಗ ಪರಿಸ್ಥಿಯನ್ನು ತಹಬದಿಗೆ ತರಲು ಮಹಾರಾಣಿ ಅಮ್ಮಣ್ಣಿಯವರು ಮೈಸೂರಿನಿಂದ 1000 ಯೋಧರನ್ನು ಕಳುಹಿಸಿ ಸೈನಿಕರನ್ನು ಹತ್ತಿಕ್ಕೆ ಶಾಂತಿ ಸುವ್ಯವಸ್ಥೆಯನ್ನು ತಂದು ಬ್ರಿಟಿಷರನ್ನು ರಕ್ಷಿಸುತ್ತಾರೆ. ಈ ರೀತಿಯಾದ ಸಿಪಾಯಿ ದಂಗೆ ಎದ್ದದ್ದರಿಂದ ಎಚ್ಚೆತ್ತುಕೊಂಡ ಬ್ರಿಟೀಷರು ತಮ್ಮ ರೆಸಿಡೆಸ್ನಿ ನಡೆಸಲು ಶ್ರೀರಂಗ ಪಟ್ಟಣ ತಮಗೆ ಸುರಕ್ಷಿತ ಸ್ಥಳವಲ್ಲವೆಂದು ಭಾವಿಸಿ 1805-06ರ ಸಮಯದಲ್ಲಿ, ತಮ್ಮ ಮದ್ರಾಸ್ ರೆಸಿಡೆನ್ಸಿಗೆ ಹತ್ತಿರವಾಗುತ್ತದೆ ಎಂಬ ನೆಪವೊಡ್ಡಿ ಬೆಂಗಳೂರಿಗೆ ತಮ್ಮ ವಾಸ್ತವ್ಯವನ್ನು ಬದಲಿಸುವ ನಿರ್ಧಾರಕ್ಕೆ ಬರುವ ಮೂಲಕ ಬೆಂಗಳೂರಿನ ಮತ್ತೊಂದು ಇತಿಹಾಸ ಆರಂಭವಾಗುತ್ತದೆ.
ಸಿದ್ದಿಕಟ್ಟೆ, ಸಂಪಂಗಿರಾಮ ನಗರದ ವರೆವಿಗೂ ಕೆಂಪೇಗೌಡರು ನಿರ್ಮಿಸಿದ್ದ ಹಳೆಯ ಬೆಂಗಳೂರು ಇದ್ದು ಅಲ್ಲಿಂದ ಸುಮಾರು ಐದಾದು ಕಿಮೀ ದೂರದಲ್ಲಿದ್ದ ಹಲಸೂರು ಪ್ರದೇಶದ ವೆರೆವಿಗೂ ಹರಡಿಕೊಂಡಿದ್ದ ಭೂಭಾಗ ಸುತ್ತಮುತ್ತಲೂ ಮತ್ತು ಮತ್ತು ಹಲಸೂರು ಕೆರೆಯ ಹತ್ತಿರ (ಇಂದಿನ ಎಂ.ಇ.ಜಿ) ತಮ್ಮ ಕಂಟೋನ್‌ಮೆಂಟ್ ಕಟ್ಟಿಕೊಂಡು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿಯೇ ಬೆನ್ಸನ್ ಟೌನ್, ಕಾಕ್ಸ್ ಟೌನ್, ಮರ್ಫಿ ಟೌನ್, ಕುಕ್ಸ್ ಟೌನ್, ಫ್ರೇಸರ್ ಟೌನ್ ಮುಂತಾದ ಬಡಾವಣೆಗಳಲ್ಲಿ ಮೆನೆಗಳನ್ನು ಕಟ್ಟಿಕೊಂಡು ಅವರ ಆಳು ಕಾಳುಗಳಿಗೆ ಉಳಿದುಕೊಳ್ಳಲು ಆಸ್ಟಿನ್ ಟೌನ್ ಪ್ರದೇಶದಲ್ಲಿ ಜಾಗಗಳನ್ನು ಕೊಟ್ಟು ಅಧಿಕೃತವಾಗಿ 1809ರಲ್ಲಿ ಬೆಂಗಳೂರಿನಲ್ಲಿ ತನ್ನ ರೆಸಿಡೆನ್ಸಿ ಮತ್ತು ಮಿಲಿಟರಿ ಕೇಂದ್ರವನ್ನು ಸ್ಥಳಾಂತರಿಸಲಾಗುತ್ತದೆ.
ಬೆಂಗಳೂರಿನ ಹಿತಕರವಾದ ವಾತಾವರಣವು ಆಡಳಿತ ವರ್ಗವನ್ನು ಆಕರ್ಷಿಸಿತು ಮತ್ತು ಪ್ರಸಿದ್ಧ ಮಿಲಿಟರಿ ಕಂಟೋನ್ಮೆಂಟ್ ಸ್ಥಾಪನೆಗೆ ಕಾರಣವಾಯಿತು . ಈ ಪ್ರದೇಶವು ಬ್ರಿಟಿಷರಿಗೆ ಮಿಲಿಟರಿ ನೆಲೆಯಾಗಿ ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯ ಯುರೋಪಿಯನ್, ಆಂಗ್ಲೋ-ಇಂಡಿಯನ್ಸ್ ಮತ್ತು ಮಿಷನರಿಗಳಿಗೆ ವಸಾಹತು ಪ್ರದೇಶವಗಿದ್ದಲ್ಲದೇ ಇಂದಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ಗಳು ಆವರ ವಾಣಿಜ್ಯ ಪ್ರದೇಶಗಳಾಗಿ ಬೆಳವಣಿಗೆ ಹೊಂದಿದ್ದಲ್ಲದೇ, ಸಂಜೆಯ ಹೊತ್ತಿನಲ್ಲಿ ಆವರ ಮೋಜು ಮಸ್ತಿಯ ಕ್ಲಬ್ಬುಗಳು, ಬಾರ್ ಮತ್ತು ವಿವಿಧ ರೀತಿಯ ರೆಸ್ಟೋರೆಂಟುಗಳು ಆರಂಭಗೊಂಡವು.
ಬ್ರಿಗೇಡ್ ರಸ್ತೆಯಲ್ಲಿಯೇ ಸೇಂಟ್ ಪ್ಯಾಟ್ರಿಕ್ ಚರ್ಚ್ ಮತ್ತು ಅದಕ್ಕೆ ಹೊಂದಿಕೊಂಡ ಕ್ಲಬ್ ಆರಂಭವಾದರೇ ಬ್ರಿಗೇಡ್ ರಸ್ತೆಯ ಒಂದು ಮೂಲೆಯಲ್ಲಿ ಬೆಂಗಳೂರು ಒಪೇರಾ ಹೌಸ್ ಆರಂಭವಾಗಿ ಅಲ್ಲಿ ಪ್ರತಿನಿತ್ಯವೂ ಬಾಕ್ಸಿಂಗ್ ಪಂದ್ಯಾವಳಿಗಳು ನಡೆಯುತ್ತಲಿದ್ದು, ದೇಶ ವಿದೇಶದ ಸುಪ್ರಸಿದ್ಧ ಬಾಕ್ಸಿಂಗ್ ಪಟುಗಳು ಇಲ್ಲಿ ಸೆಣಸಾಡುವುದನ್ನು ನೋಡಲು ಜನರು ಕಿಕ್ಕಿರಿದು ತುಂಬಿಕೊಂಡಿರುತ್ತಿದ್ದರು. ಅದರ ಮತ್ತೊಂದು ತುದಿಯಲ್ಲಿ ಬ್ರಿಟೀಷ್ ಅಧಿಕಾರಿಗಳಿಗೆ ಅಗತ್ಯವಿದ್ದ ಮದ್ಯಗಳನ್ನುತಯಾರಿಸುವ ಡಿಸ್ಟಿಲರಿಗಳು ಆರಂಭವಾದವು. ಹೀಗೆ ಆ ರಸ್ತೆಯಲ್ಲಿ ನೀಲಗಿರಿ ಡೈರಿ ಫಾರ್ಮ್, ಫಾತಿಮ ಬೇಕರಿ ಗಳಲ್ಲದೇ ಬಗೆ ಬಗೆಯ ಕೆಫೆಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು ಮತ್ತು ಇತರ ಮನೋರಂಜನಾ ಕೇಂದ್ರಗಳು ಬ್ರಿಟಿಷ್ ಅಧಿಕಾರಿಗಳು ಮತ್ತು ಅವರ ಕುಟುಂಬಗಳ ಅಗತ್ಯಗಳನ್ನು ಪೂರೈಸಲು ಸಿದ್ಧವಾದವು. ಇದಷ್ಟೇ ಅಲ್ಲದೇ, ಪ್ರತೀವರ್ಷವೂ ಹೊಸ ವರ್ಷದವನ್ನು ಸ್ವಾಗತಿಸುವ ಸಂಭ್ರಮಾಚರಣೆಯ ಕೇಂದ್ರವಾಗಿಯೂ ಅದೇ ರಸ್ತೆ ಮಾರ್ಪಟ್ಟು ಕ್ರಿಸ್ಮಸ್ ಹಬ್ಬಕ್ಕೂ ಕೆಲವು ದಿನಗಳ ಮುಂಚೆ ಇಡೀ ಬೀದಿಯುದ್ದಕ್ಕೂ ಬಣ್ಣಬಣ್ಣದ ದೀಪಗಳಿಂದ ಸಿಂಗರಿಸಿ ಅದು ಹೊಸ ವರ್ಷದ ಆಚರಣೆಯವರೆಗೂ ಇಡೀ ರಸ್ತೆಯನ್ನು ಝಗಮಗಿಸುವಂತೆ ಮಾಡುತ್ತಿದ್ದ ರೂಢಿ ಇಂದಿಗೂ ಸಹಾ ಮುಂದುವರೆದುಕೊಂಡು ಹೋಗಿರುವುದು ಗಮನಾರ್ಹವೇ ಸರಿ.
ಮೊದಲನೇ ಯುದ್ದದ ಸಮಯದಲ್ಲಿ ಬ್ರಿಟೀಷ್ ಸೈನ್ಯದ ಜೊತೆ ಶತ್ರುಗಳೊಂದಿಗೆ ಹೋರಾಡಿ ವೀರ ಮರಣ ಹೊಂದಿದ ಮದ್ರಾಸ್ ಸಪ್ಪರ್ಸ್ ಮತ್ತು ಮೈನರ್ಸ್ (ಮದ್ರಾಸ್ ಇಂಜಿನಿಯರ್ ಗ್ರೂಪ್) ನ ಸೈನಿಕರ ನೆನಪಿನಾರ್ಥವಾಗಿ ಬ್ರಿಗೇಡ್ ರಸ್ತೆಯ ವೃತ್ತದ ಮತ್ತೊಂದು ಬದಿಯಲ್ಲಿ ಸಪ್ಪರ್ ವಾರ್ ಮೆಮೋರಿಯಲ್ ಸೈನಿಕರಿಗಾಗಿಯೇ ಸಮರ್ಪಿತವಾದ ಮೊದಲ ವಿಶ್ವಯುದ್ಧದ ಸ್ಮಾರಕವನ್ನು ಅಲ್ಲಿ ಸ್ಥಾಪಿಸಿರುವುದು ಮೆಚ್ಚುಗೆಯ ವಿಷಯವಾಗಿದೆ.
ಸ್ವಾತಂತ್ಯಾನಂತರ ಬೆಂಗಳೂರು ಅತ್ಯಂತ ವೇಗವಾಗಿ ಬೆಳೆದಿದ್ದಲ್ಲದೇ ಇಲ್ಲಿನ ಹವಾಗುಣ ಮತ್ತು ಇಲ್ಲಿ ವಿವಿಧತೆಯಲ್ಲೂ ಏಕತೆಯನ್ನು ಬೆಳಸಿಕೊಂಡು ಹೋಗುವಂತಹ ವಿಶಾಲ ಹೃದಯ ಕನ್ನಡಿಗರು ಎಲ್ಲರೊಂದಿಗೂ ಬೆರೆತುಕೊಂಡು ಹೋಗುತ್ತಿದ್ದ ಕಾರಣ, ಸರ್ಕಾರಿ ಸ್ವಾಮ್ಯದ ಐಟಿಐ, ಹೆಚ್.ಎಂ.ಟಿ. ಬಿಇಎಲ್, ಹೆಚ್. ಎ.ಎಲ್, ಬಿ.ಹೆಚ್.ಇ.ಎಲ್, ಬಿ.ಇ.ಎಂ.ಎಲ್ ಅಲ್ಲದೇ ರಕ್ಷಣ ಇಲಾಖೆಗಳಿಗೆ ಸಂಬಂಧಿಸಿದ ವಿವಿಧ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಗಳು ಆರಂಭಿಸಿದ ಕಾರಣ ಅಲ್ಲಿ ಕೆಲಸ ಮಾಡಲು ದೇಶ ವಿದೇಶಗಳಿಂದ ಲಕ್ಷಾಂತರ ಜನರು ಬೆಂಗಳೂರಿಗೆ ವಲಸೆ ಬಂದ ಕಾರಣ ಕೆಂಪೇಗೌಡರು ಬೆಂಗಳೂರು ಕಟ್ಟುವಾಗ ಹಾಕಿದ್ದ ನಾಲ್ಕು ಗಡಿ ಗೋಪುರಗಳನ್ನೂ ಮೀರಿ ಬೆಳೆದು ಇಡೀ ಪ್ರಪಂಚದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂದು ಪ್ರಸಿದ್ಧವಾಯಿತು.
ಹೀಗೆ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಬೆಂಗಳೂರಿನ ಬಡಾವಣೆಗಳು ಸಾಲುತ್ತಿರಲಿಲ್ಲವಾದ್ದರಿಂದ 1948ರಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಪಟ್ಟಕ್ಕೇರಿದ 8ನೇ ವರ್ಷದ ಸವಿನೆನಪಿಗಾಗಿ, ಸುಂದರವಾದ ಯೋಜಿತವಾದ ಬಡಾವಣೆಯನ್ನು ನಿರ್ಮಾಣ ಮಾಡಲು ಯೋಜಿಸಿ ಅಂದಿನ ಮಾವಳ್ಳಿ ಮತ್ತು ಸಿದ್ದಾಪುರಕ್ಕೆ ಸೇರಿದ್ದ ಲಾಲ್ಬಾಗ್ ನಂತರ ಇದ್ದ, ಅರೇ ಕೆಂಪನಹಳ್ಳಿ (ಇಂದಿನ ಸೋಮೇಶ್ವರ ನಗರ), ಸಿದ್ಧಾಪುರದ ಕೆಲವು ಭಾಗ. ಕನಕನಪಾಳ್ಯ, ಬೈರಸಂದ್ರ (ಇಂದಿನ ತಿಲಕ್ ನಗರ), ಗುರಪ್ಪನಪಾಳ್ಯ (ಶಿವಬಾಲ ಯೋಗಿ ಆಶ್ರಮ), ತಾಯಪ್ಪನ ಪಾಳ್ಯ (ಇಂದಿನ ಜಯನಗರ ಟಿ ಬ್ಲಾಕ್), ಟಾಟ ಸಿಲ್ಕ್ ಫಾರ್ಮ್, ಶ್ರೀ ಪಟ್ಟಾಭಿರಾಮ ನಗರ, ಸಾಕಮ್ಮಾ ಗಾರ್ಡನ್, ಯಡಿಯೂರು ಕೆರೆ ಸೇರಿದಂತೆ ಹತ್ತು ಹಲವಾರು ಪ್ರದೇಶಗಳನ್ನು ಒಳಗೊಂಡಂತೆ, ಅಂದಿನ ಕಾಲದಲ್ಲೇ ಏಷ್ಯಾದಲ್ಲೇ ಅತ್ಯಂತ ದೊಡ್ಡದಾದ ಯೋಜಿತ ಬಡಾವಣೆಯನ್ನು ನಿರ್ಮಾಣ ಮಾಡುವ ನೀಲ ನಕ್ಷೆಯನ್ನು ತಯಾರಿಸಲಾಯಿತು. ಇಂತಹ ಸುಂದರ ಕಲ್ಪನೆಯ ಬಡಾವಣೆಗೆ ಜಯನಗರ ಎಂದು ಹೆಸರಿಸಿ, ಸಿದ್ದಾಪುರ ಮತ್ತು ಲಾಲ್ ಬಾಗ್ ಹಿಂದೆ ಇದ್ದ ಕನಕನಪಾಳ್ಯದಿಂದ ಆರಂಭಿಸಲು ನಿರ್ಧರಿಸಿ ಆ ಯೋಜನೆಗೆ ಅಡಿಗಲ್ಲನ್ನು 20 ಆಗಸ್ಟ್ 1948 ರಂದು ಭಾರತದ ಕೊನೆಯ ಗವರ್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯವರ ಅಮೃತಹಸ್ತದಿಂದ ನೆರವೇರಿಸಲ್ಪಟ್ಟಿತು
ಈ ಜಯನಗರ ಎಂಬ ಬಡಾವಣೆಯ ಹೆಸರನ್ನು ಜಯ+ನಗರ ಎಂದು ವಿಭಜಿಸಿದರೆ ಅದು ಜಯ ಅಥವಾ ವಿಜಯದ ಸಂಕೇತ ಎಂದಾಗುತ್ತದಾದರೂ ಅದು ನಿಸ್ಸಂದೇಹವಾಗಿಯೂ ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ನೆನಪಿನಾರ್ಥವಾಗಿ ಜಯನಗರ ಎಂದು ಹೆಸರಿಸಲಾಯಿತು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಅಂದಿನ ಕಾಲದಲ್ಲಿ ಆ ಅಶೋಕಸ್ಥಂಭದ ಸ್ಥಾಪನೆಗೆ ಸುಮಾರು 3,000 ರೂಗಳನ್ನು ವೆಚ್ಚ ಮಾಡಲಾಗಿತ್ತು. 20 ಅಡಿ ಎತ್ತರದ ಗ್ರಾನೈಟ್ ಕಲ್ಲಿನಿಂದ ಮಾಡಲಾಗಿರುವ ಅಶೋಕ ಸ್ತಂಭದ ಮೇಲ್ತುದಿಯಲ್ಲಿ ನಮ್ಮ ರಾಷ್ಟ್ರೀಯ ಲಾಂಛನದಂತೆಯೇ ನಾಲ್ಕು ಸಿಂಹಗಳನ್ನು ಹೊಂದಿದ್ದು ಅದರ ಜೊತೆಯಲ್ಲಿಯೇ ಮೈಸೂರಿನ ರಾಜ ಲಾಂಛನವಾದ ಎರಡು ತಲೆಯ ಗಂಡಭೇರುಂಡವನ್ನು ಸಹ ಹೊಂದಿರುವುದು ವಿಶೇಷವಾಗಿದೆ. ಇಂದು ಈ ಸ್ಥಳ ಆಶೋಕ ಪಿಲ್ಲರ್ ಎಂದೇ ಪ್ರಸಿದ್ಧವಾಗಿದೆ.
ಜಯನಗರ ಬಡಾವಣೆ ಉದ್ಘಾಟನೆಗೊಂಡು ಯಶಸ್ವಿಯಾದ ಮರುವರ್ಷವೇ ಜಯಚಾಮರಾಜೇಂದ್ರ ಒಡೆಯರ್ ಅವರು ತಮ್ಮ ಒಂಭತ್ತನೇ ಪಟ್ಟಾಭಿಷೇಕದ ಅಂಗವಾಗಿ ಬೆಂಗಳೂರಿನ ಉತ್ತರದ ಭಾಗದಲ್ಲಿ ಮತ್ತೊಂದು ಕೈಗಾರಿಕೆ ಮತ್ತು ಮಧ್ಯಮ ವರ್ಗದ ಜನರು ವಾಸಿಸುವಂತಹ ಸುಂದರವಾದ ಯೋಜಿತವಾದ ಬಡಾವಣೆಯನ್ನು ನಿರ್ಮಾಣ ಮಾಡಲು ಯೋಜಿಸಿ, ಅಂದಿನ ಕೇತಮಾರನಹಳ್ಳಿ, ಜೂನಹಳ್ಳಿ, ನಾಗಪುರ, ಶಿವನಹಳ್ಳಿ, ಸಾಣೇಗುರವನಹಳ್ಳಿಯ ಒಂದು ಭಾಗ, ಲಕ್ಷ್ಮೀನಾರಾಯಣ ಪುರ, ಸುಬ್ರಹ್ಮಣ್ಯನಗರ, ಮರಿಯಪ್ಪನ ಪಾಳ್ಯ ಸೇರಿದಂತೆ ಸುಮಾರು 1,000 ಎಕರೆ ಭೂಮಿಯನ್ನು ಕೈಗಾರಿಕಾ ಮತ್ತು ವಸತಿ ಪ್ರದೇಶಗಳಾಗಿ ವಿಂಗಡಿಸಲಾಯಿತು. ಮೊದಲನೆಯದು ಜವಳಿಗಾಗಿ 140 ಎಕರೆ, ಯಂತ್ರೋಪಕರಣಗಳಿಗೆ 220 ಎಕರೆ, ರಾಸಾಯನಿಕ ಸಸ್ಯಗಳಿಗೆ 100 ಎಕರೆ ಮತ್ತು ಆಹಾರ ಕ್ಷೇತ್ರಕ್ಕೆ 40 ಎಕರೆಗಳನ್ನು ಒಳಗೊಂಡಿತ್ತು. ಉಳಿದ 500 ಎಕರೆಯಲ್ಲಿ 1 ರಿಂದ 6ಬ್ಲಾಕ್ ಗಳನ್ನು ಒಳಗೊಂಡ ಸುಮಾರು 4,000 ವಸತಿ ಪ್ಲಾಟ್‌ಗಳನ್ನು ಅಂದಿನ ಕಾಲಕ್ಕೆ ಸುಮಾರು 50 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಿದ್ದ ಆ ಬಡಾವಣೆಯ ಅಡಿಗಲ್ಲನ್ನು ಕೇತಮಾರನಹಳ್ಳಿಯ ಆರಂಭದಲ್ಲಿ (ಕರ್ನಾಟಕ ಸೋಪ್ ಕಾರ್ಖಾನೆ ಮತ್ತು ಓರಿಯನ್ ಮಾಲ್ ಬಳಿ) 03/07/1949 ರಂದು ಮೈಸೂರಿನ ಮಹಾರಾಜರಾಗಿದ್ದ ಶ್ರಿ ಜಯಚಾಮರಾಜ ಒಡೆಯರ್ ಅವರು ಉಧ್ಘಾಟಿಸಿದರೆ, ಈ ಬಾರಿ ಆ ಹೊಸಾ ಬಡಾವಣೆಗೆ ಜಯನಗರವನ್ನು ಉದ್ಘಾಟನೆ ಮಾಡಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಗಳ(ಜನರು ಪ್ರೀತಿಯಿಂದ ರಾಜಾಜಿ ಎಂದು ಕರೆಯುತ್ತಿದ್ದರು) 70ನೇ ವರ್ಷದ ಹುಟ್ಟುಹಬ್ಬದ ಸವಿನೆನಪಿನಲ್ಲಿ ರಾಜಾಜಿ ನಗರ ಎಂದು ನಾಮಕರಣ ಮಾಡಿದ್ದರು.
ಈ ರೀತಿಯಾಗಿ ಯೋಚಿತವಾಗಿ ಬಡಾವಣೆಗಳು ನಿರ್ಮಾಣವಾದ ನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಡಿಯಲ್ಲಿ ಹತ್ತು ಹಲವಾರು ಅಧಿಕೃತ ಬಡಾವಣೆಗಳು ಆರಂಭವಾದರೂ ಅಲ್ಲಿನ ನಿವೇಶನಗಳನ್ನು ಪಡೆಯಲು ಬಹಳಷ್ಟು ವರ್ಷಗಳು ಕಾಯಬೇಕಾಗಿದ್ದ ಕಾರಣ ಮತ್ತು ಆ ನಿವೇಶನಗಳ ಬೆಲೆ ಜನಸಾಮಾನ್ಯರ ಕೈಗೆ ಸಿಗದೇ ಹೋದ ಕಾರಣ ಅನೇಕ ಅನಧಿಕೃತ ಬಡಾವಣೆಗಳು ತಲೆ ಎತ್ತತೊಡಗಿದರೆ, ಇನ್ನೂ ಕೆಲವು ಸರ್ಕಾರಿ ಕಛೇರಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ನೀರಿಲ್ಲದ ಬತ್ತಿ ಹೋದ ಅಥವಾ ಉಪಯೋಗಿಸದೇ ಇದ್ದ ಅನೇಕ ಕೆರೆಗಳನ್ನು ಮುಚ್ಚಿಹಾಕಿದ್ದದ್ದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಬೆಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ ಕಛೇರಿಗಳು ಆರಂಭವಾಗಿ ಲಕ್ಷಾಂತರ ಜನರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶವನ್ನು ಕಲ್ಪಿಸಿದ ಕಾರಣ, ಉದ್ಯೋಗವನ್ನು ಅರಸುತ್ತಾ, ಲಕ್ಷಾಂತರ ವಲಸಿಗರು ಬೆಂಗಳೂರಿಗೆ ಬರುವುದು ಹೆಚ್ಚಾದಂತೆಲ್ಲಾ ಅವರೆಲ್ಲರಿಗೂ ವಸತಿಯನ್ನು ಕಲ್ಪಿಸಿಕೊಡುವ ಸಲುವಾಗಿ ಬೆಂಗಳೂರಿನ ಹೊರವಲಯದಲ್ಲಿದ್ದ ಅರಣ್ಯಗಳು ಒಂದೊಂದೇ ಸಮತಟ್ಟಾಗಿ ಬಡಾವಣೆಗಳಾಗಿ ಹೋದಾಗ ಸಹಜವಾಗಿ ಮಳೆಯ ಪ್ರಮಾಣವೂ ಕಡಿಮೆಯಾಗಿ ಅಲ್ಲಿದ್ದ ಕೆರೆಗಳು ಬತ್ತಿಹೋದದ್ದನ್ನೇ ನೆಪ ಮಾಡಿಕೊಂಡು ಅಭಿವೃದ್ಧಿಯ ಹೆಸರಿನಲ್ಲಿ ಒಂದೊಂದೇ ಕೆರೆಗಳನ್ನು ಮುಚ್ಚುತ್ತಾ, ರಾಜ ಕಾಲುವೆಗಳನ್ನು ಒತ್ತರಿಸಿಕೊಳ್ಳುತ್ತಾ, ನೋಡ ನೋಡುತ್ತಲೇ ನೂರಾರು ಕಟ್ಟಡಗಳು ತಲೆ ಎತ್ತಲಾರಂಭಿಸಿದವು.
ಅಂದು ಕೆಂಪೇಗೌಡರು ಯೋಜಿತ ನಗರವನ್ನು ನಿರ್ಮಾಣ ಮಾಡುವಾಗ, ಯಾವುದೇ ರೀತಿಯ ನದಿಗಳು ಇಲ್ಲದೇ ಇದ್ದ ಕಾರಣ, ಅಂದಿನ ಬೆಂಗಳೂರಗರ ಕೃಷಿ ಚಟುವಟಿಕೆಗಳು ಮತ್ತು ಜನರ ಅವಶ್ಯಕತೆಗಾಗಿ ೫೦೦ಕ್ಕೂ ಹೆಚ್ಚಿನ ಕೆರೆಗಳನ್ನು ನಿರ್ಮಿಸಿ ಅವುಗಳಲ್ಲಿ ಪ್ರಮುಖವಾದುವುಗಳೆಂದರೆ, ಧರ್ಮಾಂಬುಧಿ ಕೆರೆ, ಸಂಪಂಗೀ ಕೆರೆ,, ಕೆಂಪಾಂಬುಧಿ ಕೆರೆ, ಕಾರಂಜಿ ಕೆರೆ, ಚೆನ್ನಮ್ಮ ಕೆರೆ,ಶೂಲೆ ಕೆರೆ, ಅಕ್ಕಿ ತಿಮ್ಮನ ಹಳ್ಳಿ ಕೆರೆ,ಚಲ್ಲಘಟ್ಟ ಕೆರೆ, ಹಲಸೂರು ಕೆರೆ, ಗಂಧದಕೋಟಿ ಕೆರೆ,ಕೋರಮಂಗಲದ ಕೆರೆ, ಯಡೆಯೂರು ಕೆರೆ, ಲಾಲ್ಭಾಗ್ ಕೆರೆ, ನಾಗಶೆಟ್ಟಿಹಳ್ಳಿ ಕೆರೆ, ಹೆಬ್ಬಾಳ ಕೆರೆ, ಬೆಳ್ಳೆಂದೂರು ಕೆರೆ, ವರ್ತೂರು ಕೆರೆ ಹೀಗೆ ಹೇಳುತ್ತಾ ಹೋದರೆ ನೂರಾರು ಕೆರೆಗಳನ್ನು ಕಟ್ಟಿಸಿ ಅವುಗಳ ಮಧ್ಯೆ ಅತ್ಯಂತ ರಚನಾತ್ಮಕವಾಗಿ ಮತ್ತು ಉತ್ತಮವಾಗಿ ಯೋಜಿಸಲಾದ ಪಟ್ಟಣವನ್ನು ನಿರ್ಮಿಸಲಾಗಿದ್ದಲ್ಲದೇ, ಆ ಪ್ರದೇಶಗಳಲ್ಲಿ ಸುರಿವ ಮಳೆಗಳು ಭೂಮಿಯಲ್ಲಿ ಇಂಗಿದ ನಂತರ ಹೆಚ್ಚಿನ ನೀರು ರಾಜಕಾಲುವೆಗಳ ಮೂಲಕ ನೇರವಾಗಿ ಹತ್ತಿರದ ಕೆರೆಗಳನ್ನು ತುಂಬುವಂತಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಲ್ಲದೇ, ಒಳಚರಂಡಿಯ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿದ್ದ ಕಾರಣ, ಇಂದಿಗೂ ಸಹಾ ಎಂತಹ ಕುಂಭದ್ರೋಣ ಮಳೆ ಸುರಿದರೂ ಕೆಂಪೇಗೌಡರು ಕಟ್ಟಿಸಿದ್ದ ಹಳೆಯ ಬೆಂಗಳೂರಿನ ಈ ಪ್ರದೇಶಗಳು ಇಂದಿಗೂ ಸಹಾ ಜಲಾವೃತವಾಗುವುದಿಲ್ಲ ಎನ್ನುವುದು ಗಮನಾರ್ಹ.
ಹೀಗೆ ಮುಚ್ಚಲ್ಪಟ್ಟ ಕೆಲವು ಕೆರೆಗಳಲ್ಲಿ ಪ್ರಮುಖವಾದವುಗಳೆಂದರೆ, ಧರ್ಮಾಂಬುಧಿ ಕೆರೆ ಈಗ ಬೆಂಗಳೂರಿನ KSRTC & BTS ಬಸ್ ಸ್ಟ್ಯಾಂಡ್ ಆಗಿದ್ದರೆ, ಅದರ ಸಮೀಪವೇ ಇದ್ದ ಜಕ್ಕರಾಯನ ಕೆರೆ ಈಗ ಆಟದ ಮೈದಾನವಾಗಿದೆ. ಇನ್ನು ಸಂಪಂಗೀ ಕೆರೆ’ಪ್ರಸಕ್ತ ಕಂಠೀರವ ಕ್ರೀಡಾಂಗಣವಾಗಿದ್ದು ಅಲ್ಲಿ ಕೆರೆಯ ಕುರುಹಿಗಾಗಿ ಮತ್ತು ಧರ್ಮರಾಯನ ದೇವಾಸ್ಥಾನದ ಪೂಜಾ ಕೈಂಕರ್ಯಕ್ಕಾಗಿ ಒಂದು ಸಣ್ಣ ಕಲ್ಯಾಣಿಯನ್ನು ಉಳಿಸಿಕೊಳ್ಳಲಾಗಿದೆ. ಶೂಲೆ ಕೆರೆ ಈಗ ಫುಟ್ಬಾಲ್ ಕ್ರೀಂಡಾಂಗಣವಾದರೆ, ಅಕ್ಕಿ ತಿಮ್ಮನ ಹಳ್ಳಿ ಕೆರೆಯಲ್ಲೇ ಅಂತರಾಷ್ಟ್ರೀಯ ಹಾಕಿ ಆಟದ ಮೈದಾನ ಮತ್ತು ಸಾಘ್ಟ್ವೇರ್ ಕಂಪನಿಯ ಕಟ್ಟಡಗಳಿವೆ. ಚಲ್ಲಘಟ್ಟ ಕೆರೆಯನ್ನು ಮುಚ್ಚಿ ಗಾಲ್ಫ್ ಆಟದ ಮೈದಾನವನ್ನು ಮಾಡಿಕೊಂಡರೆ, ಈಜೀಪುರ ಮತ್ತು ಕೋರಮಂಗಲದ ಕೆರೆಯ ಮೇಲೆಯೇ ನ್ಯಾಷಿನಲ್ ಗೇಮ್ಸ್ ಕ್ರೀಡಾ ಸಂಕೀರ್ಣ ತಲೆ ಎತ್ತಿದೆ. ಸಿದ್ಧಿಕಟ್ಟೆ ಕೆರೆಯನ್ನು ಮುಚ್ಚಿಯೇ ಕೃಷ್ಣರಾಜಾ ಮಾರುಕಟ್ಟೆಯನ್ನು ಕಟ್ಟಿದ್ದರೆ, ಬಹುತೇಕರಿಗೆ ಮರತೇ ಹೋಗಿರುವ ಕಾರಂಜಿ ಕೆರೆಯೇ ಈಗ ಗಾಂಧಿ ಬಜಾರ್ ಎಂಬ ಬಡಾವಣೆಯಾಗಿದೆ. ಕೆಂಪಾಬುಧಿ ಕೆರೆಯ ನೀರು ಈಗ ಬೆಂಗಳೂರಿನ ಕಲುಶಿತ ನೀರಿನ ಸಂಸ್ಕರಣಾ ಕೇಂದ್ರವಾಗಿ ಮಾರ್ಪಟ್ಟ ಕಾರಣ, ಆ ನೀರು ಕುಡಿಯಲು ಅನುಪಯೋಗವಾಗಿದೆ. ನಾಗಶೆಟ್ಟಿಹಳ್ಳಿ ಕೆರೆಯ ಮೇಲೆಯೇ ಬಾಹ್ಯಾಕಾಶ ಇಲಾಖೆಯ ಇಸ್ರೋ ಇದ್ದರೆ, ಕಾಡುಗೊಂಡನ ಹಳ್ಳಿ ಕೆರೆಯನ್ನು ಮುಚ್ಚಿ ಅಂಬೇಡ್ಕರ್ ಮೆಡಿಕಲ್ ಕಾಲೇಜು ಕಟ್ಟಲಾಗಿದೆ. ದೊಮ್ಮಲೂರು ಕೆರೆಯನ್ನು ಮುಚ್ಚಿದ BDA ಅಲ್ಲಿ ಅಲ್ಲಿ ವಾಸಿಸಲು ಯೋಗ್ಯವಾದ ಬಡಾವಣೆ ನಿರ್ಮಿಸಿದರೆ, ಮಿಲ್ಲರ್ಸ್ ಕೆರೆಯೇ ಗುರುನಾನಕ್ ಭವನ ಮತ್ತು ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣವಾಗಿದೆ. ಸುಭಾಷ್ ನಗರ ಕೆರೆ, ಕುರುಬರ ಹಳ್ಳಿ ಕೆರೆ, ಕೋಡಿ ಹಳ್ಳಿ ಕೆರೆ, ಮಾರೇನ ಹಳ್ಳಿ ಕೆರೆ, ಸಿನಿವೈಗಳು ಕೆರೆ ಇವೆಲ್ಲವುಗಳನ್ನು ಮುಚ್ಚಿಯೇ ಬಡಾವಣೆಗಳನ್ನು ನಿರ್ಮಾಣ ಮಾಡಿದ್ದಾರೆ. ಶಿವನ ಹಳ್ಳಿ ಕೆರೆ ಮುಚ್ಚಿ ಆಟದ ಮೈದಾನ ಮತ್ತು ಬಸ್ ನಿಲ್ಡಾಣ ಕಟ್ಟಿದ್ದರೆ, ಪುಟ್ಟೇನ ಹಳ್ಳಿ ಕೆರೆ ಜೆ.ಪಿ.ನಗರದ 6ನೇ ಹಂತದ ಬಡಾವಣೆಯಾಗಿದೆ. ಇನ್ನು ಚೆನ್ನಮ್ಮನ ಕೆರೆಯ ಒಂದು ಭಾಗ ಬನಶಂಕರಿ 2 ನೇ ಹಂತದ ಬಡಾವಣೆ ಆದರೆ, ಮತ್ತೊಂದು ಭಾಗ ರುಧ್ರಭೂಮಿಯಾಗಿ ಮಾರ್ಪಾಟಾಗಿ ಹೋಗಿದೆ.
ಹೀಗೆ ದಿನೇ ದಿನೇ ಬೃಹದಾಕಾರವಾಗಿ ಬೆಳೆಯುತ್ತಲೇ ಹೋದ ಬೆಂಗಳೂರಿನ ಮೂಲ ಒಳಚರಂಡಿ ವ್ಯವಸ್ಥೆಯನ್ನು 1922 ರಲ್ಲಿ ಅಂದು ಇದ್ದ ನಗರ ಮತ್ತು ಜನಸಂದಣಿಯ ಅಗತ್ಯಕ್ಕೆ ತಕ್ಕಂತೆ ಹಳೆಯ ಬೆಂಗಳೂರಿನ ಹೃದಯ ಭಾಗಕ್ಕೆ ಆಗುವಂತೆ ನಿರ್ಮಿಸಲಾಯಿತು. ಮತ್ತೆ 1950 ರಲ್ಲಿ ಅದನ್ನು ಮತ್ತಷ್ಟು ವಿಸ್ತರಿಸಿದರೆ, 1960ರ ದಶಕದಲ್ಲಿ BWSSB ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೂಲಕ ಸುವ್ಯವಸ್ಥೆಯ ಒಳಚರಂಡಿ ನಿರ್ಮಾಣಕ್ಕೆ ಒತ್ತು ನೀಡಿದ್ದಲ್ಲದೇ, ಬೆಂಗಳೂರಿನ ಸಮಸ್ತ ತ್ರಾಜ್ಯದ ನೀರನ್ನು ಅಂದು ಬೆಂಗಳೂರಿನ ಹೊರವಲಯದಲ್ಲಿ ಹರಿಯುತ್ತಿದ್ದ ವೃಷಭಾವತಿ ನದಿಗೆ ಬಿಟ್ಟರೆ ಇನ್ನು ಕೋರಮಂಗಲ ಕೆರೆ, ಚೆಲ್ಲಘಟ್ಟ ಕೆರೆ, ಮಡಿವಾಳ ಕೆರೆ, ಕೆಂಪಾಂಬುದಿ ಕೆರೆ ಮತ್ತು ಹೆಬ್ಬಾಳದ ಕೆರೆಗಳಲ್ಲಿ ಚರಂಡಿಯ ನೀರನ್ನು ಸಂಸ್ಕರಿಸಿ ಬಿಡುವ ಮೂಲಕ ಬೆಂಗಳೂರಿನ ಅವನತಿಗೆ ಮೊತ್ತ ಮೊದಲ ಷರಾ ಬರೆದರು.
ಇನ್ನು 90ರ ದಶಕದಲ್ಲಿ ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಕಾಲದಲ್ಲಿ ಜಾಗತೀಕರಣದ ಫಲವಾಗಿ ನೂರಾರು ಬಹುರಾಷ್ಟ್ರೀಯ ಕಂಪನಿಗಳನ್ನು ಕೆಂಪುಹಾಸುಗಳ ಮೂಲಕ ಕರೆತಂದ ಪರಿಣಾಮ, ಬೆಂಗಳೂರಿನ ಉತ್ತಮ ಶಿಕ್ಷಣ ಸಂಸ್ಥೆಗಳ ಮೂಲಕ ಅತ್ಯಂತ ಬುದ್ಧಿವಂತ ಇಂಜಿನಿಯರ್ಗಳು ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ಸಿಗುತ್ತಾರೆ ಎಂಬ ನೆಪದಿಂದ ಒಂದೊಂದೇ ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಲ್ಲಿ ನಿಧಾನವಾಗಿ ಕಛೇರಿಗಳನ್ನು ಆರಂಭಿಸಿ 2000 ಇಸ್ವಿಯ ಹೊತ್ತಿಗೆ ಅವುಗಳ ಸಂಖ್ಯೆ 1000 ಮುಟ್ಟಿತ್ತು. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಯನ್ನಾಗಿ ಮಾಡಬೇಕೆಂದು ವೈಕುಂಠ ಬಾಳಿಗಾರವರು ಕಂಡಿದ್ದ ಕನಸನ್ನು ನನಸು ಮಾಡುವ ಸಲುವಾಗಿ 1990ರ ದಶಕದಲ್ಲಿ ಬೆಂಗಳೂರು ಮತ್ತು ಹೊಸೂರು ಮಧ್ಯದಲ್ಲಿ ಕರ್ನಾಟಕ ಸರ್ಕಾರ ಎಲೆಕ್ಟ್ರಾನಿಕ್ಸ್ ಸಿಟಿ ಆರಂಭಿಸಿ ಅಲ್ಲಿ ಎಲೆಕ್ಟ್ರಾನಿಕ್ಸ್ ಕಂಪನಿಗಳು ಮತ್ತು ಐಟಿ ಟೆಕ್ ಪಾರ್ಕ್‌ಗಳನ್ನು ಆರಂಭಿಸಿದರೆ, ಜನವರಿ 1994 ರಲ್ಲಿ ಭಾರತ ಮತ್ತು ಸಿಂಗಾಪುರದ ನಡುವಿನ ಜಂಟಿ ಉದ್ಯಮದ ಪರಿಣಾಮವಾಗಿ ಬೆಂಗಳೂರಿನ ಮತ್ತೊಂದು ಹೊರವಲಯದ ವೈಟ್‌ಫೀಲ್ಡ್ ನಲ್ಲಿ ITPL ಎಂಬ ಟೆಕ್ ಪಾರ್ಕ್ ಆರಂಭಿಸವ ಮೂಲಕ ಬೆಂದಕಾಳುರು ಎಂಬ ಬೆಂಗಳೂರು ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆಯಿತು. ರಾಜ್ಯದ 16 ನೇ ಮುಖ್ಯಮಂತ್ರಿ ಯಾಗಿ ಅಧಿಕಾರಕ್ಕೆ ಬಂದ ಶ್ರೀ ಎಸ್. ಎಂ. ಕೃಷ್ಣರವರು ತಮ್ಮ ಅಧಿಕಾರಾವಧಿಯಾದ 1999 ರಿಂದ 2004ರಲ್ಲಿ ಐಟಿ ಮತ್ತು ಬಿಟಿ ಕಂಪನಿಗಳಿಗೆ ಮತ್ತಷ್ಟು ಒತ್ತು ನೀಡಿದ ಪರಿಣಾಮವಾಗಿ ಕೋರಮಂಗಲ, ಇಂದಿರಾನಗರ, ನಾಗಾವಾರ, ಜಕ್ಕೂರು, ಸರ್ಜಾಪುರ, ಮಾರತ್ತಹಳ್ಳಿ, ವೈಟ್‌ಫೀಲ್ಡ್ ಸುತ್ತಮುತ್ತಲೂ ಲಕ್ಷಾಂತರ ಐಟಿ ಕಂಪನಿಗಳು ನಾಯಿ ಕೊಡೆಯಂತೆ ತಲೆ ಎತ್ತಿದ್ದಲ್ಲದೇ ಉಳಿದ ಪ್ರದೇಶಗಳಲ್ಲಿಯೂ ಸಣ್ಣ ಸಣ್ಣ ಪ್ರಮಾಣದಲ್ಲಿ ಸ್ಟಾರ್ಟಪ್ ಕಂಪನಿಗಳು ಆರಂಭವಾಗಿ ಬೆಂಗಳೂರು ಸ್ಟಾರ್ಟಪ್ ಸಿಟಿ ಎಂದೂ ಹೆಸರಾಯಿತು.
ಹೀಗೆ ಆರಂಭಗೊಂಡ ಐಟಿ ಬಿಟಿ ಕಂಪನಿಗಳಲ್ಲಿ ಕೆಲಸ ಮಾಡಲು ನೆರರಾಜ್ಯಗಳಿಂದ ಮತ್ತಷ್ಟು ಟಿಕ್ಕಿಗಳು ಬೆಂಗಳೂರಿಗೆ ವಲಸೆ ಬಂದಾಗ ಅವರಿಗೆ ಅನುಕೂಲವಾಗಲೆಂದೇ ಅವರ ಕಛೇರಿಯ ಪಕ್ಕದಲ್ಲೇ ವಸತಿ ಸಂಕೀರ್ಣಗಳನ್ನು ಕಟ್ಟಲು ಆರಂಭಿಸಿದ್ದೇ ತಡಾ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಧಿಗ್ಗನೇ ತಲೆ ಎತ್ತಿತು. ನೋಡ ನೋಡುತ್ತಿದ್ದಂತೆಯೇ ಈ ಪ್ರದೇಶದಲ್ಲಿ ಇದ್ದ ಕೃಷಿ ಚಟುವಟಿಕೆಯ ಭೂಮಿಯೆಲ್ಲಾ ಬಡಾವಣೆಗಳಾಗಿ, ವಾಣಿಜ್ಯ ಸಂಕೀರ್ಣಗಳನ್ನಾಗಿ ಮಾಡಿಸಲು ನೂರಾರು ರಿಯಲ್ ಎಸ್ಟೇಟ್ ಏಜೆಂಟ್ ಅರ್ಥಾತ್ ಬ್ರೋಕರ್ಗಳು ಹುಟ್ಟಿಕೊಂಡಿದ್ದಲ್ಲದೇ ಕೆಲವೇ ಕೆಲವು ದಿನಗಳಲ್ಲಿ ಅವರೆಲ್ಲರೂ ಕೋಟ್ಯಾಧಿಪತಿಗಳಾಗಿ ನಂತರದ ದಿನಗಳಲ್ಲಿ ಅವರಲ್ಲನೇಕರು ಕರ್ನಾಟಕ ರಾಜ್ಯದ ಶಾಸಕ, ಸಾಂಸದರಾಗಿ ಆಯ್ಕೆಗೊಂಡರೆ, ಇನ್ನೂ ಕೆಲವರು ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲೂ ಮಂತ್ರಿಗಳಾಗಿರುವುದು ವಿಪರ್ಯಾಸವೇ ಸರಿ.
ಹೀಗೆ ರಿಯಲ್ ಎಸ್ಟೇಟ್ ಏಜಂಟರುಗಳೇ ರಾಜಕಾರಣಿಗಳಾಗಿ, ಮಂತ್ರಿಗಳಾಗಿ ಮಾರ್ಪಟ್ಟ ಕಾರಣ, ಕಂದಾಯ ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಇದ್ದ ಬದ್ದ ಒಣಗಿದ್ದ ಕೆರೆಗಳನ್ನೆಲ್ಲಾ ಮುಚ್ಚಿ ಅಥವಾ ಪರೋಕ್ಷವಾಗಿ ಮುಚ್ಚಿಸಿ ರಾಜ ಕಾಲುವೆಗಳನ್ನು ಒತ್ತವರಿ ಮಾಡಿ ನೋಡ ನೋಡುತ್ತಿದ್ದಂತೆಯೇ ಗಗನಚುಂಬಿ ಕಟ್ಟಡಗಳನ್ನು ಕಟ್ಟಿ ಅವುಗಳನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಬಾಡಿಗೆಗೆ ನೀಡುವ ಮೂಲಕ ಕೋಟ್ಯಾಧಿಪತಿಗಳಾಗಿ ಹೋದದ್ದೇ, ಬೆಂಗಳೂರಿನ ಇಂದಿನ ಪರಿಸ್ಥಿತಿಗೆ ಕಾರಣವಾಯಿತು.
ಕೆಲವು ವರ್ಷಗಳ ಹಿಂದೆ ಒಂದು ಶತಮಾನದಲ್ಲಿ ಕಂಡೂ ಕೇಳರಿಯಷ್ಟು ಮಳೆ ಬೆಂಗಳೂರಿನಲ್ಲಿ ಏಕಾಏಕಿ ಸುರಿದಾಗ, ನೈಸರ್ಗಿಕವಾಗಿ ನಿರ್ಮಾಣಗೊಂಡಿದ್ದ ನಗರದ ಪ್ರಕಾರ ಮಳೆಯ ನೀರು ಕೆರೆಗಳತ್ತ ಹರಿಯತೊಡಗಿದಾಗ ಸಹಜವಾಗಿ ಕೆರೆ ಮುಚ್ಚಿ ಹೋಗಿಯೋ ಇಲ್ಲವೇ ರಾಜಕಾಲುವೆ ಒತ್ತರಿಸಲ್ಪಟ್ಟ ಕಾರಣ ಅವುಗಳ ಮೇಲೆಯೇ ಕಟ್ಟಿದ್ದ ನೂರಾರು ಬಹುಮಹಡಿಯ ಕಛೇರಿಗಳು ಮತ್ತು ಗೃಹೋಪಯೋಗಿ ಕಟ್ಟಡಗಳಿಗೆ ಮಳೆಯ ನೀರು ನುಗ್ಗಿದ್ದದ್ದು ಪ್ರಕೃತ ಸಹಜ ಎಂದರೂ ತಪ್ಪಾಗದು. ಈ ಕುರಿತಂತೆ ನೋದಬೇಕೆಂದರೆ, ಕೆಂಪೇಗೌಡರ ಕಾಲದಲ್ಲಿ, ಮಹದೇವಪುರ ಮತ್ತು ಸುತ್ತಮುತ್ತಲೂ ಈ ಹಿಂದೆ 63 ಕೆರೆಗಳಿದ್ದು ಈಗ ಬಹುತೇಕ ಕೆರೆಗಳು ಮತ್ತು ರಾಜಕಾಲುವೆಗಳು ಮುಚ್ಚಿ ಅಲ್ಲಿ ಗಗನಚುಂಬಿ ಕಟ್ಟಡಗಳು ಎದ್ದಿರುವ ಕಾರಣ ಆಲ್ಲಿ ಸುರಿದ ಮಳೆಯ ನೀರು ಹೊರಗೆ ಹೋಗಲು ಯಾವುದೇ ಮಾರ್ಗವಿಲ್ಲದೇ ಎಲ್ಲೆಂದರಲ್ಲಿ ಹರಿದ ಪರಿಣಾಮ ಅಲ್ಲಿನ ತಗ್ಗು ಪ್ರದೇಶಗಳಲ್ಲಿದ ಕಟ್ಟಡಗಳು ಜಲಾವೃತವಾಗುವುದು ಸಹಜವಾಗಿದೆ.
ಸುಮಾರು 70 ಹೆಕ್ಟೇರ್ ವಿಸ್ತೀರ್ಣದ ಪಾಲನಾಯಕನ ಹಳ್ಳಿಯ ಕೆರೆ ಸುಮಾರು 40 ವರ್ಷಗಳ ನಂತರ ತುಂಬಿ ತುಳುಕಿ ಕೋಡಿ ಬಿದ್ದಿದ್ದು, ಅಲ್ಲಿನ ಹೆಚ್ಚಿನ ನೀರು ಈ ಮುಂಚಿನ ಪ್ರಕಾರ ರಾಜಾಕಲುವೆಗಳ ಮೂಲಕ ಸೋಲ್ ಸರೋವರಕ್ಕೆ ತಲುಪಬೇಕಿತ್ತು. ಆದರೆ ರೇನ್‌ಬೋ ಡ್ರೈವ್ ಲೇಔಟ್ ಅದೇ ರಾಜಾಕಾಲುವೆಯ ಮೇಲೆ ಇರುವ ಕಾರಣ ಇಡೀ ರೈನ್ ಬೋ ಲೇಔಟ್ ಜಲಾವೃತವಾಗಿತ್ತು. ಇನ್ನು ಸೋಲ್ ಕೆರೆ ತುಂಬಿ ಹರಿಯುತ್ತಿರುವುದರಿಂದ ಅಲ್ಲಿನ ನೀರು ಸ್ವಾಭಾವಿಕವಾಗಿ ಬೆಳ್ಳಂದೂರು ಕೆರೆ ತಲುಪಬೇಕಿತ್ತು ಆದರೆ ಅವರೆಡರ ನಡುವಿನ ಸಂಪರ್ಕವಾಗಿದ್ದ ರಾಜಾಕಾಲುವೆಯ ಮೇಲೆಯೇ ಇಕೋಸ್ಪೇಸ್ ಮತ್ತು ಇಕೋ ವರ್ಲ್ಡ್ ಐಟಿ ಪಾರ್ಕ್ ಇರುವ ಕಾರಣ, ಆ ಎಲ್ಲಾ ಪ್ರದೇಶಗಳೂ ಜಲಾವೃತಗೊಂಡಿದ್ದಲ್ಲದೇ, ಹೊರವರ್ತುಲ ರಸ್ತೆಯ ಭರ್ತಿ ಮೊಣಕಾಲು ಎತ್ತರದಷ್ಟು ನೀರು ಹರಿಯುವಂತಾಗಿದೆ. ಅದೇ ರೀತಿಯಲ್ಲೇ 98 ಎಕರೆಯಷ್ಟು ವಿಸ್ತೀರ್ಣದ ಮತ್ತು ಸದ್ಯದಲ್ಲಿ ಬೆಂಗಳೂರಿನ ಅತ್ಯಂತ ಉತ್ತಮವಾಗಿ ನಿರ್ವಹಿಸಲಾದ ಕೆರೆಗಳಲ್ಲಿ ಒಂದಾಗಿರುವ ಅಗರ ಕೆರೆಯೂ ತುಂಬಿ ಹೋದಲ್ಲಿ ಅಲ್ಲಿನ ಹೆಚ್ಚುವರಿ ನೀರು ಈ ಹಿಂದೆ ಕೋರಮಂಗಲದಲ್ಲಿದ್ದ ಕೆರೆ ಮುಚ್ಚಿ ಅದರ ಮೇಲೆ ಟೆಲಿಫೋನ್ ಎಕ್ಸ್ಛೇಂಚ್ ನಿರ್ಮಾನವಾಗಿರುವ ಕಾರಣ, ವಿಧಿ ಇಲ್ಲದೇ ಹೆಚ್.ಎಸ್.ಆರ್ ಮತ್ತು ಕೋರಮಂಗಲದ ಸುತ್ತಮುತ್ತಲಿನ ತಗ್ಗಿನ ಪ್ರದೇಶಗಳು ಜಲಾವೃತವಾಗುತ್ತದೆ. ಇನ್ನು ಸರ್ಜಾಪುರದ ಕೆರೆಗಿಂತಲೂ ತಗ್ಗಿನಲ್ಲಿರುವ ಬೆಂಗಳೂರಿನ ವಿಪ್ರೋ ಕಚೇರಿಯೂ ಸಹಾ ಸಣ್ಣ ಮಳೆ ಬಿದ್ದರೂ, ಅದರ ನೆಲ ಮಹಡಿಯೂ ಸಹಾ ಸಹಜವಾಗಿ ಜಲಾವೃತಗೊಳ್ಳುತ್ತದೆ. ಇನ್ನು ಕೆ.ಆರ್. ಪುರದಲ್ಲಿರುವ ವಿಭೂತಿಪುರ ಕೆರೆ ತುಂಬಿದರೆ, ಅಲ್ಲಿನ ನೀರು ಹೊರ ಹೋಗಲಾಗದೇ ತಗ್ಗಿನ ಪ್ರದೇಶವಾದ ಸಾಯಿ ಲೇಔಟ್ ಸಂಪೂರ್ಣ ಜಲಾವೃತಗೊಳ್ಳುವಂತಾಗುತ್ತದೆ. ಹೀಗೆ ಕೆರೆಗಳನ್ನು ಮತ್ತು ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವ ಕಾರಣ ಮಳೆಯ ನೀರು ಸುಗಮವಾಗಿ ಹರಿದು ಹೋಗಲು ಸಾಧ್ಯವಾಗದೇ, ಬೆಂಗಳೂರಿನ ಹೊಸಾ ಬಡಾವಣೆಗಳು ಜಲಾವೃತ್ತವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಕೆಟ್ಟ ಹೆಸರು ಬರಲು ಕಾರಣವಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಇಂದು ಬೆಂಗಳೂರು ನಗರ ಎಲ್ಲಾ ಆಯಾಮಗಳಲ್ಲಿ ವ್ಯಾಪಕವಾಗಿ ಅಭಿವೃದ್ಧಿ ಹೊಂದಿ, ಬೆಂಗಳೂರನ್ನು ಸಿಲಿಕಾನ್ ಸಿಟಿ ಅಥವಾ ಐಟಿ ಹಬ್ ಎಂದು ಕರೆದರೆ, ಅದರ ಜೊತೆಯಲ್ಲೇ ಅದಕ್ಕೆ ಪೂರಕವಾಗಿ ರಾಜ್ಯಸರ್ಕಾರದ ನೆರವಿನಿಂದ ಕೈಗಾರಿಕಾ ಪ್ರದೇಶಗಳು ಅಭಿವೃದ್ಧಿ ಹೊಂದುವ ಮೂಲಕ ಬೆಂಗಳೂರು ಕರ್ನಾಟಕ ರಾಜ್ಯದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದ್ದು ಕೇವಲ ಸಾಫ್ಟ್ವೇರ್ ಅಲ್ಲದೇ, ಇಂದು ಆಟೋಮೊಬೈಲ್ಸ್, ಫಾರ್ಮಾಸ್ಯುಟಿಕಲ್ ಹಬ್ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇನ್ನು ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಗಳು ಕೇವಲ ಬೆಂಗಳೂರಿನ ಚಲುವನ್ನು ಹೆಚ್ಚಿಸಿದ್ದಲ್ಲದೇ ವರ್ಷವಿಡೀ ಹಚ್ಚ ಹಸಿರಾಗಿದ್ದು ಉತ್ತಮ ವಾತಾವರಣವನ್ನು ಕಾಯ್ದಿಟ್ಟುಕೊಂಡ ಕಾರಣ, ಬೆಂಗಳೂರನ್ನು ಉದ್ಯಾನನಗರೀ ಎಂದೂ ಸಹಾ ಕರೆಯಲಾಗುತ್ತಿತ್ತು. ಬೆಂಗಳೂರಿನ ನಗರ ಪಾಲಿಕೆಯು ಮತ್ತಷ್ಟು ಆಸ್ಥೆವಹಿಸಿ, ನಗರದ ನೂರಾರು ಕಡೆ ಸಾವಿರಾರು ಉದ್ಯಾನವನಗಳನ್ನು ನಿರ್ಮಿಸಿದ ಕಾರಣ, ನಗರದಲ್ಲಿ ಮತ್ತಷ್ಟು ನಿತ್ಯ ಹರಿದ್ವರ್ಣವಾಗುವ ಮೂಲಕ ತನ್ನ ಉದ್ಯಾನನಗರಿ ಎಂಬ ಹೆಸರನ್ನು ಇಂದಿಗೂ ಅನ್ವರ್ಥವನ್ನಾಗಿಸಿಕೊಂಡು ಮುಂದುವರೆಸಿ ಕೊಂಡು ಹೋಗುವಂತಾಗಿರುವುದು ಉತ್ತಮ ಬೆಳವಣಿಯಾಗಿದೆ.
ಇಂದು ಬೆಂಗಳೂರು ಎಷ್ಟೇ ಆಧುನಿಕವಾಗಿ ಬೆಳೆದಿದ್ದರೂ ನಗರದಲ್ಲಿ ಇಂದಿಗೂ ಇರುವ ನೂರಾರು ದೇವಾಲಯಗಳು ಮತ್ತು ಧಾರ್ಮಿಕ ಕೇಂದ್ರಗಳ ಮೂಲಕ ವರ್ಷಕ್ಕೊಮ್ಮೆಯಾದರೂ ವಿವಿಧ ಬಡಾವಣೆಗಳಲ್ಲಿ ಹಿಂದೆ ಇದ್ದ ಊರುಗಳ ದೇವತೆಗಳ ಜಾತ್ರೆ ಮತ್ತು ನಗರದ ದೇವತೆ ಅಣ್ಣಮ್ಮನ ಅದ್ಧೂರಿಯ ಜಾತ್ರೆಯ ಜೊತೆಗೆ ರಾಮನವಮಿ, ಗೌರಿ ಗಣೇಶ, ದಸರಾ ಮತ್ತು ಕನ್ನಡ ರಾಜೋತ್ಸವದಂತಹ ಹಬ್ಬಗಳ ಅದ್ದೂರಿಯ ಆಚರಣೆಗಳು ಇಂದಿಗೂ ರೂಢಿಯಲ್ಲಿದ್ದು, ತನ್ಮೂಲಕ ತನ್ನ ಗತವೈಭವದ ತನ್ನ ಸಾಂಸ್ಕೃತಿಕ ಸೊಗಡು ಮತ್ತು ಜಾನಪದ ಕಲೆಗಳನ್ನು ಇಂದಿಗೂ ಮುಂದುವರೆಸಿಕೊಂಡು ಹೋಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಇನ್ನು ಬೆಂಗಳೂರಿನ ಹೃದಯಭಾಗವಾದ ಕೃಷ್ಣರಾಜ ಮಾರುಕಟ್ಟೆಯ ಬಳಿಯ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಪ್ರತೀ ವರ್ಷದ ಚೈತ್ರ ಮಾಸದ ಹುಣ್ಣಿಮೆಯಂದು ಬಹಳ ಸಡಗರ ಸಂಭ್ರಮಗಳಿಂದ ಮತ್ತು ಅದ್ದೂರಿಯಾಗಿ ಅಚರಿಸಲ್ಪಡುವ ಬೆಂಗಳೂರು ಹಸಿ ಕರಗದ ಆಚರಣೆಗೆ ಬಹಳ ವೈಶಿಷ್ಟ್ಯಗಳಿದ್ದು ಅ ಸಂಭ್ರಮದಲ್ಲಿ ಭಾಗಿಯಾಗಲು ದೇಶವಿದೇಶಗಳಿಂದ ಲಕ್ಷಾಂತರ ಜನರು ಬೆಂಗಳೂರಿಗೆ ಬರುವುದು ವಿಶೇಷವಾಗಿದೆ.
ಬೆಂಗಳೂರು ನಗರದದಲ್ಲಿರುವ ನೂರಾರು ವಿದ್ಯಾಕೇಂದ್ರಗಳಿಂದಾಗಿ ವಿದ್ಯಾ ಕ್ಷೇತ್ರ ಎಂದೂ ಹೆಸರಾಗಿದೆ. 1858ರಲ್ಲಿ ಬೆಂಗಳೂರಿನ ಹೃದಯ ಭಾಗವಾದ ಗಾಂಧಿನಗರದಲ್ಲಿ ಸ್ಥಾಪಿತವಾದ ಸೆಂಟ್ರಲ್ ಕಾಲೇಜು ಕೇವಲ ಬೆಂಗಳೂರಿಗಷ್ಟೇ ಅಲ್ಲದೇ, ಭಾರತದ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಒಂದಾಗಿದೆ. ಈ ಕಾಲೇಜು ಪ್ರಸ್ತುತವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಭಾಗವಾಗಿದ್ದು, ಅಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆ, ಶಿಕ್ಷಣ, ಕಾನೂನು ಮತ್ತು ಎಂಜಿನಿಯರಿಂಗ್ ಅಲ್ಲದೇ, ಸುಮಾರು 43ಕ್ಕೂ ಹೆಚ್ಚಿನ ಸ್ನಾತಕೋತ್ತರ ವಿಭಾಗಗಳನ್ನು ಹೊಂದಿರುವ ಮೂಲಕ ಪ್ರತಿ ವರ್ಷವೂ ಸಾವಿರಾರು ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಾರ್ಜನೆಯನ್ನು ನೀಡುತ್ತಿದೆ.
ವಿಶ್ವೇಶ್ವರ ಇಂಜಿನಿಯರಿಂಗ್ ಕಾಲೇಜ್ ಅಲ್ಲದೇ, RV ಕಾಲೇಜ್ ಆಫ್ ಇಂಜಿನಿಯರಿಂಗ್, MS ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ PES ವಿಶ್ವವಿದ್ಯಾನಿಲಯ, ರೇವಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಮುಂತಾದ 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು 138 ಖಾಸಗಿ ಕಾಲೇಜು ಹೀಗೆ 150 ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳು ಬೆಂಗಳೂರಿನಲ್ಲಿಯೇ ಇದ್ದು ಭಾರತದಲ್ಲಿಯೇ ಅತ್ಯಂತ ಹೆಚ್ಚಿನ ಮತ್ತು ಉನ್ನತ ಮಟ್ಟದ ಇಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿರುವ ನಗರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಅದೇ ರೀತಿಯಲ್ಲಿಯೇ ಬೆಂಗಳೂರಿನಲ್ಲಿ ಸರ್ಕಾರಿ ಮತ್ತು ಖಾಸಗೀ ಸೇರಿದಂತೆ ಸುಮಾರು 25 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳ ಮೂಲಕ ಪ್ರತೀವರ್ಷವೂ ಶಸ್ತ್ರಚಿಕಿತ್ಸೆ, ರೋಗಶಾಸ್ತ್ರ, ಪೀಡಿಯಾಟ್ರಿಕ್ಸ್, ಆಯುರ್ವೇದ, ಮುಂತಾದ ವಿಭಾಗಗಳಲ್ಲಿ ಸಾವಿರಾರು ವೈದ್ಯರುಗಳನ್ನು ವೈದ್ಯಕೀಯ ಜಗತ್ತಿಗೆ ನೀಡುವಲ್ಲಿ ಅಪಾರವಾದ ಪಾತ್ರವನ್ನು ವಹಿಸಿಕೊಂಡಿದೆ.
ಇಂದಿನ ಆಧುನಿಕ ಯುಗದಲ್ಲಿ ಯಾವುದೇ ಒಂದು ದೇಶ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಧೃಢತೆಯನ್ನು ಹೊಂದಿರಬೇಕಾದಲ್ಲಿ ಶಿಕ್ಷಣ ಮತ್ತು ರಕ್ಷಣಾ ವಿಭಾಗದಲ್ಲಿ ಸ್ವಾವಲಂಭಿ ಆಗಿರಬೇಕು ಎಂದು ಸುಮಾರು 130 ವರ್ಷಗಳ ಹಿಂದೆ ಜಪಾನ್ ದೇಶದ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಭಾರತದ ಹಿರಿಯ ಕೈಗಾರಿಕೋದ್ಯಮಿಗಳಾದ ಜೆಮ್ ಶೆಡ್ಜೀ ಟಾಟ ಮತ್ತು ಈ ನಾಡು ಕಂಡ ಶ್ರೇಷ್ಥ ಸನ್ಯಾಸಿಗಳಲ್ಲಿ ಒಬ್ಬರಾದ ಸ್ವಾಮೀ ವಿವೇಕಾನಂದರು ಲೋಕಾಭಿರಾಮವಾಗಿ ನಮ್ಮ ದೇಶದ ಬಗ್ಗೆ ಮಾತನಾಡುವಾಗ ಕಂಡ ಕನಸು ನಂತದ ದಿನಗಳಲ್ಲಿ ಮೈಸೂರು ಒಡೆಯರ ರಾಜಾಶ್ರಯ ದೊರೆತು ಮೇ 27, 1909ರಂದು ಬೆಂಗಳೂರಿನ ಯಶವಂತ ಪುರದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (IISc)ಯನ್ನು ಆರಂಭವಾಗಿ ಡೀಮ್ಡ್, ಸಂಶೋಧನಾ ವಿಶ್ವವಿದ್ಯಾಲಯದ ಮೂಲಕ ವಿಜ್ಞಾನ, ಎಂಜಿನಿಯರಿಂಗ್, ವಿನ್ಯಾಸ ಮತ್ತು ನಿರ್ವಹಣೆಯಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆ ಕೇಂದ್ರವಾಗಿ ರೂಪಿತವಾಗಿ ಅದರ ಮೂಲಕ ಪ್ರತಿವರ್ಷವೂ ಸಾವಿರಾರು ಹೊಸಾ ಹೊಸಾ ವಿಜ್ಞಾನಿಗಳು ದೇಶದ ಸೇವೆಗೆ ಸಿಗುವಂತಾಗಿದೆ.
ಆಗಸ್ಟ್ 15 1969 ರಂದು ಆರಂಭವಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ISRO ಇಂದು ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಾಗಿದ್ದು, ಈ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮೂಲಕ ಬಾಹ್ಯಾಕಾಶ-ಆಧಾರಿತ ಕಾರ್ಯಾಚರಣೆಗಳು, ಬಾಹ್ಯಾಕಾಶ ಪರಿಶೋಧನೆ, ಅಂತರಾಷ್ಟ್ರೀಯ ಬಾಹ್ಯಾಕಾಶ ಸಹಕಾರ ಮತ್ತು ಸಂಬಂಧಿತ ತಂತ್ರಜ್ಞಾನಗಳ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಕೊಂಡು ಬಂದಿರುವ ವಿಷಯ ಎಲ್ಲರಿಗೂ ತಿಳಿದೇ ಇದ್ದು, 1975 ರಲ್ಲಿ ಭಾರತದ ಮೊದಲ ಉಪಗ್ರಹ ಆರ್ಯಭಟವನ್ನು ನಿರ್ಮಿಸಿ ಅದನ್ನು ದೂರದ ಸೋವಿಯತ್ ಬಾಹ್ಯಾಕಾಶ ಸಂಸ್ಥೆ ಇಂಟರ್ಕೊಸ್ಮಾಸ್ ಮೂಲಕ ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶದಲ್ಲಿ ಭಾರತದ ಛಾಪನ್ನು ಪ್ರಪ್ರಥಮಬಾರಿಗೆ ಮೂಡಿಸಿದ ನಂತರ 1980 ರಲ್ಲಿ, ISRO ಉಪಗ್ರಹ RS-1 ಅನ್ನು SLV-3 ಆನ್‌ಬೋರ್ಡ್‌ನಲ್ಲಿ ಉಡಾವಣೆ ಮಾಡುವ ಮೂಲಕ ಕಕ್ಷೆಯ ಉಡಾವಣೆಗಳನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಏಳನೇ ರಾಷ್ಟ್ರವಾಗಿ ಭಾರತ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ, ಕ್ರಯೋಜೆನಿಕ್ ಎಂಜಿನ್ನಿನ ರಾಕೆಟ್‌ನ ಅಭಿವೃದ್ಧಿ ಪಡಿಸುವ ತಂತ್ರಜ್ಞಾನವನ್ನು ಅಮೇರಿಕಾ ದೇಶದ ನಿರ್ಭಂಧದಿಂದಾಗಿ ರಷ್ಯಾ ದೇಶ ಕೊಡಲು ಹಿಂದೇಟು ಹಾಕಿದಾಗ ಇಸ್ರೋ ತನ್ನದೇ ವಿಜ್ಞಾನಿಗಳ ಸ್ವಾವಲಂಭನೆಯಿಂದಾಗಿ ಳೀಯವಾಗಿ ನಮ್ಮದೇ ಆದ ಅತ್ಯಂತ ಕಡಿವೆ ವೆಚ್ಚದ ಮತ್ತು ಶಕ್ತಿಶಾಲಿಯಾದ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮೂಲಕ ಇಂದು ದೇಶ ವಿದೇಶಗಳ ನೂರಾರು ಉಪಗ್ರಹಗಳನ್ನು ಬಾಹ್ಯಾಕಾಶದ ಕಕ್ಷೆಗೆ ಏರಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಹೀಗೆ ಒಂದರ ಹಿಂದೆ ಒಂದು ಯಶಸ್ವಿಯಾಗಿ ಚಂದ್ರಯಾನ ಮುಗಿಸಿ, ಮಂಗಳಯಾನಕ್ಕೂ ಕೈಹಾಕಿ ಈಗ ಸೂರ್ಯಯಾನ ಯೋಜನೆಯನ್ನು ಕೈಗೆತ್ತಿಕೊಂಡು ಮುಂದೆ ಉಳಿದ ಗ್ರಹಗಳತ್ತವೂ ತನ್ನ ಚಿತ್ತವನ್ನು ಹರಿಸಿರುವ ಇಸ್ರೋದ ಪ್ರಧಾನ ಕಛೇರಿಯೂ ಸಹಾ ಬೆಂಗಳೂರಿನಲ್ಲಿಯೇ ಇರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.
ಇವುಗಳಲ್ಲದೇ ಕೆಂಪೇಗೌಡರ ಕಾಲದಲ್ಲಿ ನಿರ್ಮಾಣಗೊಂಡು ಇಂದಿಗೂ ಅಷ್ಟಿಷ್ಟರ ಮಟ್ಟಿಗೆ ಸುಸ್ಥಿತಿಲ್ಲಿರುವ ಹತ್ತಾರು ಕೋಟೆಗಳಿದ್ದರೆ, ಬೆಂಗಳೂರಿನ ಹತ್ತಿರದಲ್ಲೇ ಸಾವನದುರ್ಗ, ನಂದಿದುರ್ಗ ಮಾಕಳಿದುರ್ಗ ಮತ್ತು ದೇವರಾಯನದುರ್ಗ ಮುಂತಾದ ಹಲವು ಜನಪ್ರಿಯ ಕೋಟೆಗಳಲ್ಲದೇ, ಹುತ್ರಿದುರ್ಗ, ಹುಲಿಯೂರುದುರ್ಗ, ಚನ್ನರಾಯನ ದುರ್ಗ, ಕಬ್ಬಲದುರ್ಗ, ಮತ್ತು ಬೈರವದುರ್ಗಗಳು ಸಹಾ ಇತ್ತೀಚೆಗೆ ಪ್ರಸಿದ್ಧಿಯನ್ನು ಹೊಂದುವ ಮೂಲಕ ಚಾರಣಿಗರ ನೆಚ್ಚಿನ ತಾಣವಾಗಿದೆ.
ಹೀಗೆ ಗಂಗರು, ಚೋಳರ ಕಾಲದಿಂದಲೂ ಸಣ್ಣ ಪ್ರಮಾಣದ ಊರಾಗಿ ಅಸ್ಥಿತ್ವದಲ್ಲಿರುವ ಈ ಬೆಂಗಳೂರು, ನಾಡ ಪ್ರಭು ಕೆಂಪೇಗೌಡರು ಆಶಯದಂತೆ ಸುಸ್ಸಜ್ಜಿತ ನಗರವಾಗಿ ಮಾರ್ಪಟ್ಟು ನಂತರ ಸುಲ್ತಾನರು, ಮರಾಠರು, ಮೈಸೂರು ಅರಸರು, ಟಿಪ್ಪು ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ಹಂತಹಂತವಾಗಿ ಬೆಳೆಯುತ್ತಲೇ ಹೋಗಿ ಸ್ವಾತಂತ್ರ್ಯಾ ನಂತರ ಮತ್ತಷ್ಟು ಅಭಿವೃದ್ಧಿಯನ್ನು ಹೊಂದಿ ಈ ಪರಿಯಾಗಿ ಅಗಾಧವಾಗಿ ಬೆಳೆದು ನಿಂತಿದೆ.
ಬೆಂಗಳೂರಿನ ಬೆಳವಣಿಗೆಗೆ ಸಾವಿರಾರು ಜನರುಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣೀಭೂತರಾಗಿದ್ದು, ಬಹುತೇಕ ಅಂತಹ ಪ್ರಥಃಸ್ಮರಣೀಯರ ಹೆಸರುಗಳನ್ನು ನೆನಪಿಸಿಕೊಳ್ಳುವ ಸಲುವಾಗಿ ನಗರದ ವಿವಿಧ ಬಡಾವಣೆಗಳು, ವೃತ್ತಗಳು ಮತ್ತು ಕಟ್ಟಡಗಳಿಗೆ ಅವರುಗಳ ಹೆಸರುಗಳನ್ನು ಇಡುವ ಸತ್ ಸಂಪ್ರದಾಯವನ್ನು ರೂಡಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ನಮ್ಮ ಬೆಂಗಳೂರು ಇತಿಹಾಸ ಎಂಬ ಮಾಲಿಕೆಯ ಮೂಲಕ ಆವೆಲ್ಲದರ ಬಗ್ಗೆ ಸವಿವರವಾಗಿ ತಿಳಿಸುವಂತಹ ಪ್ರಯತ್ನವನ್ನು ಮಾಡುವ ಉದ್ದೇಶವನ್ನು ಹೊಂದಿದ್ದು ಅದಕ್ಕೆ ನಿಮ್ಮೆಲ್ಲರ ಸಹಕಾರ ಇರುತ್ತದೆ ಎಂಬುದು ನಮ್ಮೆಲ್ಲರ ಆಶಾಭಾವನೆಯಾಗಿದೆ.
ಏನಂತೀರೀ?
ಸೃಷ್ಟಿಕರ್ತ, ಉಮಾಸುತ


