ಇಂದಿನ ಕಾಲದ ಯುವಕರಿಗೆ ನಿಮ್ಮ ಧ್ಯೇಯೋದ್ದೇಶಗಳೇನು? ಎಂದು ಕೇಳಿದಾರೆ ಸಾಕು. ಪದವಿ ವಡೆದುಕೊಳ್ಳುವವರೆಗೂ ಈ ದೇಶದಲ್ಲಿ ಓದುವುದು ನಂತರ ವಿದೇಶದಲ್ಲಿ ಹೆಚ್ಚಿನ ವ್ಯಾಸಂಗ ಮಾಡಿ ಅಲ್ಲಿಯೇ ಯಾವುದಾದರೂ ಉತ್ತಮವಾದ ಕೆಲಸ ಗಿಟ್ಟಿಸಿಕೊಂಡು ನಂತರ ಮದುವೆಯಾಗಿ ಅಲ್ಲಿಯೇ ಮಕ್ಕಳನ್ನು ಮಾಡಿಕೊಂಡು ಆ ದೇಶದ ನಾಗರೀಕರಾಗಿ ನೆಮ್ಮದಿಯಾಗಿ ಜೀವನ ನಡೆಸುವುದು ಎನ್ನುತ್ತಾರೆ. ನಿಮಗೆ ಜನ್ಮ ಕೊಟ್ಟ ಈ ಭಾರತದಲ್ಲೇ ನಿಮ್ಮ ಕನಸನ್ನು ಏಕೆ ಸಾಕಾರಗೊಳಿಸುವುದಿಲ್ಲ ಎಂದು ಕೇಳುತ್ತಿದ್ದಂತೆಯೇ, ಬಹಳ ತಾತ್ಸಾರ ಭಾವನೆಯಿಂದ, ಈ ದೇಶದಲ್ಲಿ ಯಾವುದೂ ಸರಿ ಇಲ್ಲ. ನಮ್ಮ ಬೌಧ್ಹಿಕ ಮಟ್ಟಕ್ಕೆ ವಿದೇಶವೇ ಸರಿ ಎಂದು ಹೇಳುವುದನ್ನು ಕೇಳಿದಾಗ, ಒಂದು ಕಾಲದಲ್ಲಿ ಮುತ್ತು ರತ್ನ ಪಚ್ಚೆ ಹವಳಗಳನ್ನು ರಸ್ತೆಯ ಬದಿಯಲ್ಲಿ ಬಳ್ಳ ಬಳ್ಳಗಳಲ್ಲಿ ಮಾರುತ್ತಿದ್ದಂತಹ ಸುವರ್ಣ ಯುಗದವನ್ನು ಹೊಂದ್ದಿದ್ದಂತಹದ್ದು ಈ ದೇಶ. ಇನ್ನು ದೇಶ ವಿದೇಶಗಳಿಂದ ವಿಧ್ಯಾರ್ಥಿಗಳು ನಮ್ಮ ನಳಂದ ತಕ್ಷಶಿಲಾದಂತಹ ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸಕ್ಕೆ ಬರುತ್ತಿದ್ದಂತಹ ಕಾಲವೊಂದಿತ್ತು. ಯಥೇಚ್ಚವಾದ ಸಾಂಬಾರು ಪದಾರ್ಥಗಳನ್ನು ಹೊಂದಿರುವ ಮೂಲಕ ವಿಶ್ವದ ಜಾಗತೀಕ ಆರ್ಥಿಕವಲಯದಲ್ಲಿ ಅತ್ಯಂತ ಶ್ರೀಮಂತವಾಗಿದ್ದರಿಂದಲೇ ಪದೇ ಪದೇ ವಿದೇಶಿಗರು ಧಾಳಿ ನಡೆಸಿ ಲೂಟಿ ಗೈದ ಪರಿಣಾಮವಾಗಿಯೇ ಆರ್ಥಿಕವಾಗಿ ಹಿಂದುಳಿದಿದ್ದರೂ, ಬೌದ್ಧಿಕವಾಗಿ ಇಂದಿಗೂ ನಮ್ಮ ದೇಶವನ್ನು ಮೀರಿಸುವವರು ಯಾರೂ ಇಲ್ಲ ಎಂದು ಹೇಳದೇ ಹೋದ ಪರಿಣಾಮವಾಗಿಯೇ ಇಂದಿನ ಯುವಕರು ಈ ದೇಶವನ್ನು ಈ ರೀತಿಯಾಗಿ ತುಚ್ಚವಾಗಿ ಕಾಣುವಂತಗಿದೆ. ನಮ್ಮ ದೇಶದ ಹಿರಿಮೆ ಮತ್ತು ಗರಿಮೆಯ ಬಗ್ಗೆಯೂ ಇಂದಿನ ಯುವಕರಿಗೆ ಅರಿವಿಲ್ಲದೇ ಇರುವುದೇ ಮತ್ತೊಂದು ಕಾರಣ ಎಂದರೂ ತಪ್ಪಾಗದು.
ಯಾವುದೇ ಒಂದು ದೇಶ ಜಾಗತಿಕವಾಗಿ ಮುಂದುವರೆಯ ಬೇಕಾದಲ್ಲಿ ಆ ದೇಶದ ಜನರಿಗೆ ಮೊದಲು ತಮ್ಮ ದೇಶದ ಇತಿಹಾಸದ ಅರಿವಿರಬೇಕು ಮತ್ತು ತಮ್ಮ ದೇಶದ ಬಗ್ಗೆ ಸ್ವಾಭಿಮಾನ ಇರಬೇಕು. ತಮ್ಮ ದೇಶದ ಇತಿಹಾಸ ಅರಿವಿದ್ದಲ್ಲಿ ಮಾತ್ರವೇ ತಮ್ಮ ದೇಶವನ್ನು ಕಟ್ಟಲು ಮತ್ತು ತಮ್ಮ ಸಂಸ್ಕೃತಿಯನ್ನು ಉಳಿಸಲು ತಮ್ಮ ಪೂರ್ವಜರು ಎಂತಹ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ ಎಂಬುದರ ಅರಿವಾದಲ್ಲಿ ಮಾತ್ರವೇ ಅವರಲ್ಲಿ ದೇಶದ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ.
ನಮ್ಮ ದೇಶದಲ್ಲಿ ಹಿಂದೂಗಳು ಇನ್ನೂ ಅಸ್ತಿತ್ವದಲ್ಲಿ ಇದ್ದಾರೆಂದರೆ ಅದಕ್ಕೆ ಮೂಲ ಕಾರಣವೇ ವಿಜಯನಗರದ ಹೈಂದವೀ ಸಾಮ್ರಾಜ್ಯ ಎಂದರೂ ಅತಿಶಯವಲ್ಲ. ಸುಮಾರು ಮುನ್ನೂರಕ್ಕೂ ಅಧಿಕ ವರ್ಷಗಳ ಕಾಲ ಬಿಜಾಪುರ ಸುಲ್ತಾನರು, ಬಹಮನಿ ಸುಲ್ತಾನರನ್ನು ಬಗ್ಗು ಬಡಿದಿದ್ದಲ್ಲದೇ, ಉತ್ತರದ ಮೊಘಲರ ಅಧಿಪತಿ ಬಾಬರನಿಗೂ ನಡುಕ ಹುಟ್ಟಿಸಿದ ಕರ್ನಾಟಕದ ಕೆಚ್ಚೆದೆಯ ಹೈಂದವೀ ಸಾಮ್ರಾಜ್ಯ. ಕೇವಲ ಸ್ದದೇಶಿಗರೊಂದಿಗೆ ಆಷ್ಟೇ ಅಲ್ಲದೇ, ವಿದೇಶಿಗರೊಂದಿಗೆಯೂ ಉತ್ತಮವಾದ ವ್ಯಾಪಾರ ಮತ್ತು ರಾಜಕೀಯ ಸಂಬಂಧಗಳನ್ನು ಬೆಳಸಿಕೊಂಡು ಯುರೋಪ್ ಮತ್ತು ಏಷ್ಯಾದ ಶ್ರೇಷ್ಠ ಚಕ್ರವರ್ತಿಗಳೊಂದಿಗೆ ಸರಿ ಸಾಟಿಯಾಗಿ ಸ್ಥಾನ ಪಡೆದು ಕೊಂಡಿದ್ದಂತಹ ಕ್ಷಾತ್ರ ತೇಜದ ಈ ರಾಜವಂಶ, ಸಮರ್ಥವಾಗಿ ಆಳ್ವಿಕೆಯನ್ನು ನಡೆಸಿದ್ದಲ್ಲದೇ, ಸಾವಿರಾರು ಧಾರ್ಮಿಕ ಕ್ಷೇತ್ರಗಳ ಪುನರುಜ್ಜೀವನಗೊಳಿಸಿದಂತಹ ಹೆಮ್ಮೆಯ ಮಹಾನ್ ನಾಯಕರುಗಳು ಇದ್ದಂತಹ ಸಾಮ್ರಾಜ್ಯ. ವಿದೇಶೀ ಇತಿಹಾಸಕಾರರೇ ಹೇಳಿರುವಂತೆ ಮುತ್ತು ರತ್ನ ಪಚ್ಚೆ ಹವಳಗಳನ್ನು ರಸ್ತೆಯ ಬದಿಯಲ್ಲಿ ಬಳ್ಳ ಬಳ್ಳಗಳಲ್ಲಿ ಮಾರುತ್ತಿದ್ದಂತಹ ಸುವರ್ಣಯುಗದವನ್ನು ಸೃಷ್ಟಿಸಿದ್ದಂತಹ ವಿಜಯ ನಗರ ಸಾಮ್ರಾಜ್ಯದ ಬಗ್ಗೆ ತಿಳಿಯೋಣ ಬನ್ನಿ.
ಸುಮಾರು ಏಳನೇ ಶತಮಾನಗಳಿಂದಲೂ ಅರಬ್ ದೇಶದ ಕಡೆಯ ಮುಸಲ್ಮಾನರು ನಮ್ಮ ದೇಶದ ಮೇಲೆ ಪದೇ ಪದೇ ದಂಡೆತ್ತಿ ಬಂದು ನಮ್ಮ ದೇವಾಲಯಗಳಲ್ಲಿ ಇದ್ದ ಸಂಪತ್ತುಗಳನ್ನು ಸೂರೆ ಗೈಯ್ಯುತ್ತಿದ್ದಂತಹವರನ್ನು ಇಂದಿನ ಕಂದಹಾರ್ (ಗಾಂಧಾರ ದೇಶ) ದಿಂದ ಥೈಲ್ಯಾಂಡ್ ವರೆಗೂ ವಿಶಾಲವಾಗಿ ಹರಡಿದ್ದಂತಹ ಭಾರತ ದೇಶದ ವಿವಿಧ ರಾಜ ಮನೆತನದವರು ಸಮರ್ಥವಾಗಿ ಎದುರಿಸಿ ಹೊಡೆದೊಡಿಸುತ್ತಿದ್ದಾಗ, ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು ಪ್ರಾಣ ಉಳಿಸಿಕೊಳ್ಳಲು ಧಾಳಿಕೋರರು ಓಡಿ ಹೋಗುತ್ತಿದ್ದರು. ಹೀಗೆ ಸುಮಾರು 12 ಮತ್ತು 13ನೇ ಶತಮಾನದವರೆಗೂ ನಡೆದು ನಂತರ ನಮ್ಮ ನಮ್ಮಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಮತ್ತು ವೈಮನಸ್ಸುಗಳನ್ನೇ ಮುಂದು ಮಾಡಿಕೊಂಡು ಉತ್ತರ ಭಾಗದ ಒಂದೊಂದೇ ರಾಜ್ಯಗಳನ್ನು ಅಕ್ರಮಣಮಾಡಿಕೊಂಡಿದ್ದಲ್ಲದೇ, ನಂತರ ತಮ್ಮ ದಬ್ಬಾಳಿಕೆ ಮತ್ತು ಲೂಟಿಕೋರ ತನದಿಂದ ಬಹುತೇಕ ಉತ್ತರ ಭಾರತವನ್ನು ಆಕ್ರಮಿಸಿ ದಕ್ಷಿಣ ಭಾರತದೆಡೆ ಭರದಿಂದ ನುಗ್ಗುತ್ತಿದ್ದ ಪರಿಯನ್ನು ನೋಡಿ ಇವರು ಹೀಗೆ ದಕ್ಷಿಣ ಭಾರತದ ಕಡೆಗೆ ಬಂದಲ್ಲಿ ಹಿಂದೂಗಳಿಗೆ ಉಳಿವಿಲ್ಲ. ಹಾಗಾಗಿ ಹಿಂದೂಗಳನ್ನು ರಕ್ಷಿಸಲು ಒಂದು ಸಮರ್ಥವಾದ ದೇಶವನ್ನು ಕಟ್ಟಲೇ ಬೇಕು ಎಂದು ಅಂದಿನ ಶೃಂಗೇರೀ ಶಾರದಾ ಪೀಠದ ಜಗದ್ಗುರುಗಳಾಗಿದ್ದ ಶ್ರೀ ವಿದ್ಯಾರಣ್ಯರು ಯೋಚಿಸಿ ಅದನ್ನು ಕಾರ್ಯರೂಪಕ್ಕೆ ತರಲು ಸಮರ್ಥವಾದ ವ್ಯಕ್ತಿಗಳನ್ನು ತಲಾಷೆಯಲ್ಲಿದ್ದಗಲೇ, ಆವರ ಕಣ್ಣಿಗೆ ಹಕ್ಕರಾಯ ಮತ್ತು ಬುಕ್ಕರಾಯರೆಂಬ ಎಂಬ ಇಬ್ಬರು ಕ್ಷಾತ್ರ ತೇಜದ ಯುವಕರುಗಳು ಕಾಣಿಸಿಕೊಳ್ಳುತ್ತಾರೆ.
ಹರಿಹರರಾಯ ಮತ್ತು ಅವರ ಸಹೋದರ ಬುಕ್ಕ ರಾಯ ಈ ಸಹೋದರರು ಪ್ರಸ್ತುತ ತೆಲಂಗಾಣ ಪ್ರದೇಶದ ವಾರಂಗಲ್ ಪ್ರದೇಶವನ್ನು ಆಳಿದ ಕಾಕತೀಯ ಸಾಮ್ರಾಜ್ಯದ ಕೊನೆಯ ರಾಜ ಪ್ರತಾಪರುದ್ರ ದೇವ II ರ ಸೈನ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುತ್ತಾರೆ. ಬಹಳ ಕ್ಷಾತ್ರತೇಜದ ಆ ಅಣ್ಣ ತಮ್ಮಂದಿರು ಜನಾನುರಾಗಿಗಳಾಗಿ ಹಕ್ಕ ಬಕ್ಕ ಎಂದೇ ಜನಸಾಮಾನ್ಯರ ನಡುವೆ ಪ್ರಸಿದ್ಧರಾಗಿರುತ್ತಾರೆ. 1324 ರಲ್ಲಿ ದೆಹಲಿ ಸುಲ್ತಾನನಾದ ಮೊಹಮ್ಮದ್ ಬಿನ್ ತುಘಲಕ್ ಆಕ್ರಮಣದಿಂದ ಕಾಕತೀಯ ಸಾಮ್ರಾಜ್ಯದ ಪತನಗೊಂಡ ನಂತರ, ಈ ಸಹೋದರರು ವಿಜಯನಗರದ ಸಮೀಪದಲ್ಲಿರುವ ಆನೆಗೊಂದಿಯಲ್ಲಿರುವ ಜಂಬುಕೇಶ್ವರ (ಕಂಪಿಲಿ ದೇವಾ) ಸಂಸ್ಥಾನಕ್ಕೆ ಸೇರಿಕೊಳ್ಳುತ್ತಾರೆ. ಕಂಪಿಲೆದೇವನು ಗುಲ್ಬರ್ಗಾ ಸುಲ್ತಾನನ ವಿರುದ್ಧ ಬಂಡಾಯವೆದ್ದ ಆತನ ಆಪ್ತ ಸಂಬಂಧಿಯಾಗಿದ್ದ ಬಹದ್ದೀನ್ ಮಲಿಕ್ ಅವರಿಗೆ ಆಶ್ರಯ ನೀಡಿದ್ದನ್ನೇ ನೆಪಮಾಡಿಕೊಂಡು ಆನೆಗೊಂದಿಯ ಮೇಲೆ ಆಕ್ರಮಣ ಮಾಡಿ ಆನೆಗೊಂದಿಯನ್ನು ವಶಪಡಿಸಿಕೊಂಡಿದ್ದಲ್ಲದೇ, ಹಕ್ಕ ಮತ್ತು ಬುಕ್ಕ ರಾಯರನ್ನು ಬಂಧಿಸಿ ದೆಹಲಿಗೆ ಕೊಂಡೊಯ್ಯುತ್ತಾನೆ. ಅಲ್ಲಿ ಅವರಿಬ್ಬರಿಗೂ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಅಲ್ಲಿಯೇ ಸೆರೆಮನೆಯಲ್ಲಿ ಇರಿಸಲಾಗಿರುತ್ತದೆ. ಇದಾದ ಕೆಲ ದಿನಗಳಲ್ಲೇ ದಕ್ಷಿಣದಲ್ಲಿ ಮಲಿಕ್ ನಯೀಬ್ ರ ಕ್ರೂರ ಆಡಳಿತಕ್ಕೆ ನಲುಗಿದ ಸ್ಥಳೀಯರು ದಂಗೆಯನ್ನು ಎದ್ದ ಪರಿಣಾಮ, ಈ ದಂಗೆಯನ್ನು ಹತ್ತಿಕ್ಕಲು ದಕ್ಷಿಣ ಭಾರತೀಯರೇ ಆಗಿದ್ದ ಹಕ್ಕ ಮತ್ತು ಬುಕ್ಕರನ್ನ್ನು ಸುಲ್ತಾನನ ಪ್ರತಿನಿಧಿಗಳಾಗಿ ಆಡಳಿತ ನಡೆಸಲು ಮತ್ತೆ ಆನೆಗೊಂಡಿಗೆ ಕಳುಹಿಸಿ ಕೊಡಲಾಗುತ್ತದೆ.
ಹೀಗೆ ಹಕ್ಕ-ಬುಕ್ಕರು ಪುನಃ ಆನೆಗೊಂದಿಗೆ ಮರಳುವಷ್ಟರಲ್ಲಿ ಮುಸ್ಲೀಂ ಆಡಳಿತಾಧಿಕಾರಿಗಳು ಆ ಸುತ್ತಮುತ್ತಲಿನ ಸಾವಿರಾರು ಹಿಂದೂ ದೇವಾಲಯಗಳನ್ನು ನಾಶಪಡಿಸಿದ್ದಲ್ಲದೇ, ಹಿಂದೂಗಳ ಮನೆಗಳನ್ನು ಲೂಟಿ ಮಾಡುತ್ತಾ, ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚರ ನಡೆಸಿ, ಚಿಕ್ಕ ಪುಟ್ಟ ಮಕ್ಕಳು ಎಂದೂ ನೋಡದೇ ಆವರನ್ನು ಕೊಂದು ಪುರುಷರನ್ನು ಗುಲಾಮರಂತೆ ತಮ್ಮ ಪ್ರಾಂತ್ರ್ಯಕ್ಕೆ ಸಾಗಿಸುತ್ತಿರುತ್ತಾರೆ. ಬಹಳ ಕ್ರೂರಿಯಾಗಿದ್ದ ಅಲ್ಲಾವುದ್ದೀನ್ ಖಿಲ್ಜಿ, ಮಲಿಕಾಫರ್, ಗಯಾಸುದ್ದೀನ್ ಮತ್ತು ಮೊಹಮ್ಮದ್ ಬಿನ್ ತುಘಲಕ್ ಅವರುಗಳ ಸತತ ಆಕ್ರಮಣಗಳಿಂದಾಗಿ ಇಡೀ ದಕ್ಷಿಣ ಭಾರತದಲ್ಲಿ ಸಾಂಸ್ಕೃತಿಕ ಪ್ರಕ್ಷುಬ್ಧತೆ ಮತ್ತು ನರಮೇಧವನ್ನು ಕಾಣುವಂತಾಗಿರುತ್ತದೆ. ಹಕ್ಕ ಬುಕ್ಕರು ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದರೂ, ಆವರ ಹೃದಯಾಂತರಾಳದಲ್ಲಿ ಇನ್ನೂ ಹಿಂದೂ ಜಾಗೃತನಾಗಿಯೇ ಇದ್ದ ಕಾರಣ, ಈ ರೀತಿಯ ಅಮಾನವೀಯ ಕೃತ್ಯಗಳಿಗೆ ಇತಿಶ್ರೀ ಹಾಡಲೇ ಬೇಕು ಎಂದು ಯೊಚಿಸುತ್ತಿದ್ದಂತಹ ಸಂದರ್ಭದಲ್ಲಿಯೇ, ಮುಸಲ್ಮಾನರ ದುರಾಕ್ರಮಣವನ್ನು ತಪ್ಪಿಸುವ ಸಲುವಾಗಿ ಹೈಂದವೀರಾಜ್ಯವನ್ನು ಕಟ್ಟಲು ಫಣ ತೊಟ್ಟಿದ್ದಂತಹ ಗುರುಗಳಾದ ಶ್ರೀ ವಿದ್ಯಾರಣ್ಯರ ಸಂಪರ್ಕಕ್ಕೆ ಈ ಅಣ್ಣ ತಮ್ಮಂದಿರಾದ ಹಕ್ಕ ಬುಕ್ಕರು ಬರುತ್ತಾರೆ. ಮುಂದೆ ಸ್ಪಷ್ಟ ಗುರಿ ಮತ್ತು ಹಿಂದೆ ಸಮರ್ಥವಾದ ಗುರು ಇದ್ದಲ್ಲಿ ಎಂತಹ ಕಾರ್ಯವನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಜ್ವಲಂತ ಉದಾಹರಣೆ ಎನ್ನುವಂತೆ ಈ ನಾಯಕ ಜನಾಂಗದ ಕ್ಷೇತ್ರ ತೇಜದ ಯುವಕರುಗಳು ವಿದ್ಯಾರಣ್ಯರ ಆಶ್ರಯ ಸೇರಿದ ನಂತರ, ಇಡೀ ದಕ್ಷಿಣ ಭಾರತದ ಇತಿಹಾಸದ ಪುಟಗಳು ಸಂಪೂರ್ಣವಾಗಿ ಬದಲಾವಣೆಯ ಹಾದಿಯನ್ನು ಹಿಡಿಯುತ್ತದೆ. ಹಕ್ಕ-ಬುಕ್ಕ ಸಹೋದರರನ್ನು ಮತ್ತೆ ಮಾತೃ ಧರ್ಮ ಹಿಂದು ಧರ್ಮಕ್ಕೆ ಕರೆ ತಂದ ಗುರು ವಿದ್ಯಾರಣ್ಯರು ಅವರನ್ನು ದೆಹಲಿ ಸುಲ್ತಾನರ ವಿರುದ್ಧ ಎತ್ತಿಕಟ್ಟುತ್ತಾರೆ.
ಹಕ್ಕ ಬುಕ್ಕರು ಆನೆಗೊಂದಿಗೆ ಬಂದ ನಂತರ ಪ್ರೋಲಾಯ ನಾಯ್ಕ, ಕಪಯ್ಯ ನಾಯ್ಕ ಮತ್ತು ಅವರ ಅನುಯಾಯಿಗಳಾದ ಪ್ರಾಲಯಾ ವೇಮಾ ರೆಡ್ಡಿ, ಸಿಂಗಮಾ ನಾಯ್ಕ ಮತ್ತು ಕರ್ನಾಟಕದ ವೀರ ಬಲ್ಲಾಳ ಮುಂತಾದ ವೀರಾದಿ ವೀರರೆಲ್ಲರೂ ಹೊರಗಿನ ಪ್ರಪಂಚಕ್ಕೆ ಬಹುಮನಿ ಸುಲ್ತಾನನ ಆಡಳಿತಾಧಿಕಾರಿಗಳಾಗಿದ್ದರೂ ಪರೋಕ್ಷವಾಗಿ ಅವರೆಲ್ಲರೂ ಹಿಂದೂ ಹೋರಾಟಗಾರರಿಗೆ ಬೆಂಬಲವನ್ನು ನೀಡುತ್ತಲೇ, ಸುಮಾರು ಹತ್ತು ವರ್ಷಗಳ ಕಾಲ ಸುದೀರ್ಘವಾಗಿ ಗೆರಿಲ್ಲಾ ಮಾದರಿಯ ಹೋರಾಟದ ನಂತರ ಮುಸ್ಲಿಂ ದಂಡಾಧಿಕಾರಿಯಾಗಿದ್ದ ಮಲಿಕ್ ಮಕ್ಬೂಲ್ ಅವರನ್ನು 1335-36ರ ಅವಧಿಯಲ್ಲಿ ಸೆದೆ ಬಡಿದು ವಾರಂಗಲ್ಲಿನಿಂದ ಓಡಿಸುವ ಮುಖಾಂತರ ಹಿಂದೂಗಳು, ಅವರ ಸಂಸ್ಕೃತಿ, ಪರಂಪರೆ, ದೇವಾಲಯಗಳು, ಹಿಂದೂ ಹೆಣ್ಣುಮಕ್ಕಳು ಮತ್ತು ಅವರ ನಂಬಿಕೆಯನ್ನು ರಕ್ಷಿಸುವ ಸಲುವಾಗಿ ಸಮಾನ ಮನಸ್ಕರೆಲ್ಲರೂ ಒಂದಾಗುವ ಮೂಲಕ, ವಿಜಯನಗರ ಸಾಮ್ರಾಜ್ಯದ ಕನಸನ್ನು ಬಿತ್ತುತ್ತಾರೆ.
ಹೀಗೆ ಕಟ್ಟುವ ಸಾಮ್ರಾಜ್ಯ ಸುಮಾರು ಮೂರು ಸಾವಿರ ವರ್ಷಗಳಿಗೂ ಅಧಿಕ ಕಾಲ ಸಂವೃದ್ಧರಾಗಿರಬೇಕು ಎಂಬ ಆಶಯದಿಂದ ಗುರು ವಿದ್ಯಾರಣ್ಯರು, ತಮ್ಮ ಜ್ಞಾನ ಮತ್ತು ಅನುಭವದಿಂದ 1336 ರ ಏಪ್ರಿಲ್ 18 ರಂದು ಹಿಂದೂ ಪಂಚಾಗದಂತೆ, ಶಾಲೀವಾಹನ ಶಕೆ 1127 ಪ್ರಭವ ಚೈತ್ರ ಪೌರ್ಣಮಿಯಂದು ಒಂದು ಅಮೃತಘಳಿಗೆಯಲ್ಲಿ ಆರಂಭಿಸಲು ನಿರ್ಧರಿಸುತ್ತಾರೆ. ಇದಕ್ಕಾಗಿಯೇ ಪ್ರಭವ ನಾಮ ಸಂವತ್ಸರದ ಬಹುಳ ಅಮಾವಾಸ್ಯೆಯ ಶಿತೀರವರಂ ರಾತ್ರಿಯ ಹೊತ್ತಿಗೆ ವಿಜಯನಗರ ಸಾಮ್ರಾಜ್ಯದ ಅಡಿಪಾಯಕ್ಕೆ ಪ್ರಥಮ ಕಲ್ಲನ್ನು ಹಾಕುವ ಮಹಾಸಂಕಲ್ಪವನ್ನು ಮಾಡಿರುತ್ತಾರೆ. ಇದಕ್ಕಾಗಿಯೇ ಗುರು ವಿದ್ಯಾರಣ್ಯರು ತಾವೇ ಖುದ್ದಾಗಿ ಸಕಲ ವಾಸ್ತು ದೇವತೆಗಳನ್ನು ತಮ್ಮ ತಪಶಕ್ತಿಯಿಂದ ಆಹ್ವಾನಿಸಿ, ಧ್ರುವ ನಕ್ಷತ್ರದ ಸಹಾಯದಿಂದ ಉತ್ತರ ಮತ್ತು ದಕ್ಷಿಣದ ದಿಕ್ಕುಗಳನ್ನು ನಿರ್ಧರಿಸಿ,ತ್ರಿಶಂಕುವನ್ನು ಸ್ಥಾಪಿಸುತ್ತಾರೆ. ಪೂರ್ವ ಮತ್ತು ಪಶ್ಚಿಮ ತ್ಯ ದಿಕ್ಕುಗಳಲ್ಲಿ ಶಂಖಗಳು ಜೋಡಿಸಲ್ಪಟ್ಟವು ಮತ್ತು ಹದಿನಾರು ದಿಕ್ಕುಗಳಲ್ಲಿ ಕಂಬಗಳ ಅಡಿಪಾಯ ಕಟ್ಟುವ ಸಲುವಾಗಿ ದೊಡ್ಡ ದೊಡ್ಡ ಹಳ್ಳವನ್ನು ತೋಡಿಸಿ ಅದರೊಳಗೆ ದೊಡ್ಡ ಪ್ರಮಾಣದಲ್ಲಿ ಚಿನ್ನ, ವಜ್ರ ವೈಢೂರ್ಯಗಳನ್ನು ಸುರಿಯಲಾಗುತ್ತದೆ. ನಂತರ ಶ್ರೀ ಸಾಮ್ರಾಜ್ಯ ಲಕ್ಷ್ಮಿ ಯಂತ್ರವನ್ನು ನದಿಯ ತಟದಲ್ಲಿ ಸ್ಥಾಪಿಸಲಾಗುತ್ತದೆ. ವಾಸ್ತು ಯಂತ್ರ, ವಜ್ರ ಮತ್ತು ಪಾದರಸದ ಜೊತೆಗೆ ತೆಳುವಾದ ದಾರದ ಕೊನೆಯಲ್ಲಿ ಒಂದು ಇಟ್ಟಿಗೆಯನ್ನು ಕಟ್ಟಿದ ನಂತರ. ತಾವು ಹೇಳುವ ಶುಭ ಸಮಯದಲ್ಲಿ ಆ ದಾರವನ್ನು ಕತ್ತರಿಸುವ ಮೂಲಕ, ಆ ಶುಭ ಗಳಿಗೆಯಲ್ಲಿ ಈ ಇಟ್ಟಿಗೆ ಅಡಿಪಾಯದ ಹಳ್ಳಕ್ಕೆ ಬೀಳುವಂತಹ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಈ ರೀತಿಯಾಗಿ ಶಾಸ್ತ್ರೋಕ್ತವಾಗಿ ಶುಭಗಳಿಗೆಯಲ್ಲಿ ವಿಜಯನಗರದ ಸಾಮ್ರ್ಯಾಜ್ಯಕ್ಕೆ ಅಡಿಪಾಯವನ್ನು ಹಾಕಿದಲ್ಲಿ ವಿಜಯನಗರ ಸಾಮ್ರಾಜ್ಯ ಸುಮಾರು 3600 ವರ್ಷಗಳವರೆಗೆ ಅಭಿವೃದ್ಧಿ ಹೊಂದುತ್ತದೆ ಎನ್ನುವುದು ವಿದ್ಯಾರಣ್ಯರ ಲೆಖ್ಖಾಚಾರವಾರುತ್ತದೆ. ಈ ರೀತಿಯ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿದ ನಂತರ ಗುರು ವಿದ್ಯಾರಣ್ಯರು ಅಲ್ಲಿಯೇ ಇದ್ದ ಬೆಟ್ಟದ ಮೇಲೆ ಹೋಗಿ ಅದಕ್ಕೆ ಬೇಕಾದ ಎಲ್ಲಾ ವಿಧಿವಿಧಾನಗಳನ್ನೂ ಪೂರೈಸಿದ ನಂತರ ನಿಖರವಾದ ಲಗ್ನದ ಸಮಯದಲ್ಲಿ ಶಂಖ ಮತ್ತು ಜಾಗಟೆಗನ್ನು ಭಾರಿಸುವ ಮೂಲಕ ಸೂಚನೆ ನೀಡಿದ ತರುವಾಯ ಹಕ್ಕ ಬುಕ್ಕರು ಆ ದಾರವನ್ನು ಕತ್ತರಿಸುವ ಮುಖಾಂತರ ಆಡಿಪಾಯದ ಮೊದಲ ಕಲ್ಲನ್ನು ಹಾಕಬೇಕೆಂದು ಸೂಚಿಸಲಾಗಿರುತ್ತದೆ.
ಈ ರೀತಿಯೇ ಎಲ್ಲಾ ಪೂರ್ವನಿಯೋಜಿತ ವ್ಯವಸ್ಥೆಗಳನ್ನು ಮಾಡಿದ ನಂತರ ಗುರುಗಳು ಬೆಟ್ಟದ ಮೇಲಿನ ಪೂಜೆಗೆ ಹೊರಟು ಹೊಗುತ್ತಾರೆ. ಬೆಟ್ಟದ ಕೆಳಗೆ ಹಕ್ಕ ಬುಕ್ಕರು ಮತ್ತು ಆವರ ಸಹಚರರು ಗುರುಗಳ ಆಜ್ಞೆಗಾಗಿ ಕಾಯುತ್ತಿರುತ್ತಾರೆ. ತಾವೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಹಿಂದೂಗಳ ದೌರ್ಭಾಗ್ಯವೋ ಏನೋ, ಗುರುಗಳು ಹೇಳಿದ ಸಮಯಕ್ಕೂ ಮುನ್ನವೇ, ಬೆಟ್ಟದಿಂದ ಜೋರಾಗಿ ಶಂಖ ಮತ್ತು ಜಾಗಟೆಗಳ ಶಬ್ಧ ಕೇಳಿಬರುತ್ತದೆ. ಆರಂಭದಲ್ಲಿ ಈ ಜಾಗಟೆ ಮತ್ತು ಶಂಖದ ಸದ್ದು ಗುರುಗಳು ಹೇಳಿದ್ದದ್ದು ಇರಲಾರದು ಎಂದು ಭಾವಿಸಿದರೂ, ನಂತರ ಗುರುಗಳು ಇಟ್ಟ ಮಹೂರ್ತವನ್ನು ಮೀರಬಾರದು ಎಂದು ನಿರ್ಧರಿಸಿದ ಹಕ್ಕ ಬುಕ್ಕರು ಅದು ತಮ್ಮ ಗುರುಗಳಾದ ವಿದ್ಯಾರಣ್ಯರ ಸಂಜ್ಞೆ ಎಂದೇ ಭಾವಿಸಿ, ದಾರವನ್ನು ಕತ್ತರಿಸಿಯೇ ಬಿಡುವ ಮೂಲಕ ನಿಗಧಿತ ಶುಭ ಕ್ಷಣ ಬರುವ ಮುನ್ನವೇ, ಇಟ್ಟಿಗೆ ಅಡಿಪಾಯದ ಹಳ್ಳಕ್ಕೆ ಬಿದ್ದಿರುತ್ತದೆ. ಇದನ್ನು ಅರಿಯದ ಹಕ್ಕ ಬಕ್ಕರು ಅಡಿಪಾಯ ಹಾಕಿದ ಸಂತೋಷದಲ್ಲೇ ಗುರುಗಳ ಆಗಮನಕ್ಕಾಗಿ ಕಾಯುತ್ತಿರುವಾಗಲೇ, ಬೆಟ್ಟದ ಮೇಲಿಂದ ಮತ್ತೊಮ್ಮೆ ಶಂಖ ಮತ್ತು ಜಾಗಟೆಯ ಸದ್ದನ್ನು ಕೇಳಿದ ಕೂಡಲೇ ಇಲ್ಲೇನೋ ಅಪಚಾರವಾಗಿದೆ ಎಂದು ಗ್ರಹಿಸಿದ ಹಕ್ಕ ಬುಕ್ಕರು ಕೂಡಲೇ ಬೆಟ್ಟದ ತುದಿಗೆ ಓಡಿ ಹೋಗಿ ಗುರುಗಳಿಗೆ ನಡೆದದ್ದಲ್ಲವನ್ನೂ ತಿಳಿಸಿದಾಗ, ಶುಭ ಲಗ್ನಕ್ಕೆ ಮುಂಚೆಯೇ ಅಡಿಪಾಯ ಹಾಕಲಾಗಿದೆ ಎಂಬ ವಿಚಾರವನ್ನು ತಿಳಿದ ವಿದ್ಯಾರಣ್ಯರು ಬಹಳವಾಗಿ ನೊಂದು ಕೊಳುತ್ತಾರೆ. ಅತ್ತ ಹಕ್ಕ ಬುಕ್ಕರ ಭಂಟರು ಬೆಟ್ಟದಿಂದ ಮತ್ತೊಂದು ತುದಿಯಿಂದ ಜಾಗಟೆ ಮತ್ತು ಶಂಖದ ಸದ್ದು ಹೇಗೆ ಬಂದಿತು ಎಂದು ಹುಡುಕಿದಾಗ, ಆ ಬೆಟ್ಟದ ಗುಹೆಯೊಂದರಲ್ಲಿ ವಾಸವಾಗಿದ್ದ ಸನ್ಯಾಸಿಯೊಬ್ಬರು ತಮ್ಮ ಶಿವಪೂಜೆ ಮುಗಿಸಿ ಮಂಗಳಾರತಿಯ ಸಮಯದಲ್ಲಿ ಬಾರಿಸಿದ ಶಂಖ ಮತ್ತು ಜಾಗಟೆಯ ಸದ್ದು ಇಷ್ಟೆಲ್ಲಾ ಅನರ್ಥಕ್ಕೆ ಕಾರಣವಾಗಿರುತ್ತದೆ. ಇತ್ತ ವಿದ್ಯಾರಣ್ಯರು ಅಡಿಪಾಯ ಹಾಕಿದ ಸಮಯ ಮತ್ತು ಗ್ರಹಗಳ ಸ್ಥಾನವನ್ನು ಪರಿಶೀಲಿಸಿದ ನಂತರ, ಈ ಸಾಮ್ರಾಜ್ಯವು ಪೂರ್ವಯೋಜಿತದಂತೆ 3600 ವರ್ಷಗಳ ಬದಲಾಗಿ ಕೇವಲ 260 – 300 ವರ್ಷಗಳ ಕಾಲ ಬಾಳುತ್ತದೆ. ನಂತರ ಶತ್ರುಗಳಿಂದ ನಾಶವಾಗಲಿದೆ ಎಂಬ ಭವಿಷ್ಯವನ್ನು ಬಹಳ ವಿಷಾಧನಿಯವಾಗಿ ತಿಳಿಸುತ್ತಾರೆ. ವಿದ್ಯಾರಣ್ಯರು ನುಡಿದ ಭವಿಷ್ಯದಂತೆಯೇ, ಅಂದು ಸ್ಥಾಪಿತವಾದ ವಿಜಯನಗರ ನಗರ ಸಾಮ್ರಾಜ್ಯ 1336 ರಿಂದ 1646 ರವರೆಗೆ ಸುಮಾರು ಮೂರು ಶತಮಾನಗಳವರೆಗೆ ಮಾತ್ರವೇ ಪ್ರವರ್ಧಮಾನದಲ್ಲಿ ಆಳ್ವಿಕೆ ನಡೆಸಿ ನಂತರದ ದಿನಗಳಲ್ಲಿ ಸಮರ್ಥರಾದ ರಾಜರುಗಳಿಲ್ಲದೇ, ತಮ್ಮ ಸಾಮಂತ ರಾಜರುಗಳ ಬಂಡಾಯದಿಂದಲೇ ಅವಸಾನವಾಗಿ ಹೋದದ್ದು ಈಗ ಇತಿಹಾಸವಾಗಿದೆ.
ಹೀಗೆ ಗುರು ವಿದ್ಯಾರಣ್ಯರ ಕೃಪಾಶೀರ್ವಾದಿಂದ ಹಕ್ಕ ಬುಕ್ಕರ ಸಾರಥ್ಯದಲ್ಲಿ ಆರಂಭವಾದ ಹೈಂದವೀ ವಿಜಯನಗರ ಸಾಮ್ರಾಜ್ಯವನ್ನು ಸಂಗಮ, ಸಲುವ, ತುಳುವ ಮತ್ತು ಅರ್ವೀಡು ರಾಜವಂಶಗಳು ಆಳ್ವಿಕೆ ನಡೆಸುತ್ತಾರೆ. ಹೀಗೆ ಆಳಿದ ಎಲ್ಲಾ ರಾಜರುಗಳೂ ಸಹಾ ಬಲಶಾಲಿಗಳಾಗಿದ್ದು ಬಹಮನಿ ಸುಲ್ತಾನರು, ಅವರ ನಂತರ ಗೋಲ್ಕೊಂಡ, ಬಿಜಾಪುರ, ಅಹ್ಮದ್‌ನಗರ, ಬೀದರ್ ಮತ್ತು ಬೆರಾರ್‌ನ ಡೆಕ್ಕಾನಿ ಸುಲ್ತಾನರು, ಬಹಮನಿ ಸಾಮ್ರಾಜ್ಯ ದಂತಹ ಮುಸ್ಲೀಂ ರಾಜರುಗಳು ದಕ್ಷಿಣ ಭಾರತದತ್ತ ತಲೆ ಹಾಕದಂತೆ ಯಶಸ್ವಿಯಾಗಿ ತಡೆಯುವದಲ್ಲಿ ಸಫಲರಾದರು. ತಮ್ಮ ಶ್ರೇಷ್ಠ ಆಡಳಿತದಿಂದಾಗಿ ಇಡೀ ದಕ್ಷಿಣ ಭಾರತದ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸಿದರು ಮತ್ತು ಹಿಂದೂ ಸಂಸ್ಕೃತಿ, ಕಲೆ, ಶಿಲ್ಪಕಲೆ, ಸಂಗೀತ ಮತ್ತು ಸಾಹಿತ್ಯವು ಪ್ರವರ್ಧಮಾನಕ್ಕೆ ತರುವುದರಲ್ಲಿ ತಮ್ಮ ಅಮೋಘ ಕಾಣಿಯನ್ನು ನೀಡಿದರು. ಮೊಘಲ್ ರಾಜವಂಶದ ಚಕ್ರವರ್ತಿ ಬಾಬರ್‌ನ ಸಮಕಾಲೀನರಾಗಿದ್ದ 1509 ರಿಂದ 1529 ರವರೆಗೆ ಆಳ್ವಿಕೆ ನಡೆಸಿದ ಶ್ರೀ ಕೃಷ್ಣದೇವರಾಯರ ಸಮಯದಲ್ಲಿ ಈ ಸಾಮ್ರಾಜ್ಯವು ಉತ್ತುಂಗಕ್ಕೇರಿತು. ಇದೇ ಸಮಯದಲ್ಲಿಯೇ ಮುತ್ತು ರತ್ನಗಳನ್ನು ಬೀದಿ ಬೀದಿಗಳಲ್ಲಿ ಬಳ್ಳ ಬಳ್ಳಗಳಲ್ಲಿ ಮಾರುತ್ತಿದ್ದರು ಮತ್ತು ಇಡೀ ಸಾಮ್ರಾಜ್ಯದಲ್ಲಿ ಒಬ್ಬನೇ ಒಬ್ಬ ಭಿಕ್ಷುಕರನ್ನೂ ಕಾಣಲಿಲ್ಲವೆಂದೇ ಇತಿಹಾಸಕಾರು ದಾಖಲಿಸುತ್ತಾರೆ ಎಂದರೆ ವಿಜಯನಗರ ಸಾಮ್ರಾಜ್ಯದ ವೈಭೋಗದ ಅರಿವಾಗುತ್ತದೆ.
ಈ ರೀತಿಯಾದ ಭವ್ಯವಾದ ಆಳ್ವಿಯನ್ನು ನೀಡಲು ಕಾರಣೀಭೂತವಾದ ಗುರುವಿದ್ಯಾರಣ್ಯರ ಬಗ್ಗೆಯೂ ಸ್ವಲ್ಪ ತಿಳಿದುಕೊಳ್ಳಲೇ ಬೇಕು.
ಭಗವಾನ್ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವಂತೆ
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ| ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ| ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ…
ಯಾವಾಗ ಧರ್ಮದ ಅವನತಿಯತ್ತ ಸಾಗಿ, ಅಧರ್ಮದ ಉನ್ನತಿಯಾಗುವುದೋ, ಆಗ ನಾನು ಅವತಾರ ಎತ್ತುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ ಎನ್ನುವುದು ಈ ಶ್ಲೋಕದ ಅರ್ಥವಾಗಿದೆ.
12 ಮತ್ತು 13 ನೇ ಶತಮಾನಗಳಲ್ಲಿ, ಆಕ್ರಮಣಕಾರಿ ಮತಾಂಧ ಮುಸ್ಲಿಮರು ಇಡೀ ಭಾರತದಲ್ಲಿ ಹಿಂದೂ ಧರ್ಮದ ಪರಂಪರೆ ಮತ್ತು ಸಂಸ್ಕೃತಿಯೊಂದಿಗೆ ಹಾನಿ ಮಾಡುತ್ತಿರುವಾಗ ಭಗವಾನ್ ಶ್ರೀಕೃಷ್ಣನು ಹೇಳಿದ ಹಾಗೆಯೇ, ಸಕಲ ವೇದ ಶಾಸ್ತ್ರ ಪಾರಂಗತರಾದ , ಅದ್ವೈತ ಪಂಥದ ಶೃಂಗೇರಿ ಶಾರದಾ ಪೀಠದ 12ನೇಯ ಜಗದ್ಗುರುಗಳ ರೂಪದಲ್ಲಿ ಅವತಾರ ಎತ್ತಿದರೂ ಎಂದರೂ ತಪ್ಪಾಗದು. ಸ್ವಾಮಿಗಳು ಮತ್ತು ಸನ್ಯಾಸಿಗಳು ಎಂದರೆ, ಕಾಮ ಕ್ರೋಧ, ಮೋಹ, ಲೋಭ ಮಧ ಮತ್ತು ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳಿಂದ ಹೊರ ಬಂದು ಸಾತ್ವಿಕ ಬದುಕನ್ನು ನಡೆಸುತ್ತಾ ಧರ್ಮ ರಕ್ಷಣೆಗಾಗಿ ಜನ ಸಾಮಾನ್ಯರಿಗೆ ಧಾರ್ಮಿಕವಾಗಿ ಮತ್ತು ರಾಜರಿಗೆ ಆಡಳಿತಾತ್ಮಕವಾಗಿ ಕಾಲ ಕಾಲಕ್ಕೆ ಸೂಕ್ತವಾದ ಸಲಹೆಗಳನ್ನು ನೀಡುತ್ತಾ ಇಡೀ ದೇಶವನ್ನು ಸನ್ಮಾರ್ಗದಲ್ಲಿ ನಡೆಸಿಕೊಂಡು ಹೋಗುವ ಗುರುತರ ಜವಾಬ್ಧಾರಿ ಹೊಂದಿರುವಂತಹ ಆಚಾರ್ಯರು ಎನ್ನುವುದೇ ಎಲ್ಲರ ಭಾವನೆಯಾಗಿದೆ. ಆದರೆ ಇವೆಲ್ಲವನ್ನೂ ಮೀರಿ ಕ್ಷಾತ್ರ ಗುಣವನ್ನು ಪ್ರಚೋದಿಸಿದ ಯತಿಗಳು ಯಾರಾದರೂ ಇದ್ದಲ್ಲಿ ಅದು ಗುರು ವಿದ್ಯಾರಣ್ಯರು ಮಾತ್ರವೇ. ಆವರ ಆ ಗುಣದಿಂದಲೇ ಮೈದೆಳೆದ ವಿಜಯನಗರ ಸಾಮ್ರಾಜ್ಯವು ಸರ್ವಶಕ್ತನ ಕೊಡುಗೆಯಾಗಿದೇ ಎಂದು ನಂಬಬಹುದು. ಅವರು ಹಾಕಿ ಕೊಟ್ಟ ಮಾರ್ಗದಲ್ಲೇ ಆ ಸಾಮ್ರಾಜ್ಯದ ಪ್ರತಿಯೊಬ್ಬ ರಾಜರೂ ಅದ್ಭುತವಾಗಿ ಆಡಳಿತ ನಡೆಸುತ್ತಾ ಹಿಂದೂ ಧರ್ಮವನ್ನು ಎತ್ತಿ ಹಿಡಿದಿದ್ದಲ್ಲದೇ, ಮುಸ್ಲಿಮರ ದಾಳಿಯ ವಿರುದ್ಧ ಸೆಟೆದೆದ್ದು ನಿಂತ ನಿಜವಾದ ಕ್ಷಾತ್ರ ತೇಜದವರು. ಭಾರತದ ಇತಿಹಾಸದಲ್ಲಿ ಪ್ರಪಥಮ ಬಾರಿಗೆ ಅಷ್ಟು ದೊಡ್ಡ ಹಿಂದೂ ಸಾಮಾಜ್ಯದ ಪರಿಕಲ್ಪನೆ ಮಾಡಿಕೊಂಡು ವಿಜಯನಗರದ ಉದಯಕ್ಕೆ ಪ್ರಮುಖ ಪಾತ್ರ ವಹಿಸಿದ ಗುರು ವಿದ್ಯಾರಣ್ಯರು ದೇವತಾ ಮನುಷ್ಯ ಎಂದರೂ ಅತಿಶಯೋಕ್ತಿಯಾಗದು.
ಶ್ರೀ ಶಂಕರಾಚಾರ್ಯರಿಂದ ಪ್ರತಿಷ್ಟಾಪಿಸಲ್ಪಟ್ಟ ನಾಲ್ಕು ಶಕ್ತಿಪೀಠಗಳಲ್ಲಿ ಅತ್ಯಂತ ಪ್ರಭಾವಶಾಲಿಯಾದ ದಕ್ಷಿಣಾಮ್ನೇಯ ಶೃಂಗೇರೀ ಪೀಠದ 12ನೇಯ ಜಗದ್ಗುರುಗಳಾಗಿದ್ದ ಶ್ರೀ ಶ್ರೀ ಶ್ರೀ ವಿದ್ಯಾರಣ್ಯರು ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಆಡಳಿತ ನಡೆಸುತ್ತಿದ್ದ ಬಹುತೇಕ ರಾಜ ಮನೆತನಗಳು ಸಂಪೂರ್ಣವಾಗಿ ನಿಸ್ತೇಜವಾಗಿದ್ದಲ್ಲದೇ, ಅವರ ಮುಂದಿನ ತಲೆಮಾರಿನ ರಾಜರುಗಳಲ್ಲಿ ಕ್ಷಾತ್ರಗುಣ ಸಂಪೂರ್ಣವಾಗಿ ಕುಗ್ಗಿ ಹೋಗಿತ್ತು. ಪದೇ ಪದೇ ಉತ್ತರದ ಕಡೆಯಿಂದ ಮುಸಲ್ಮಾನರ ಆಕ್ರಮಣ ನಡೆಯುತ್ತಿದ್ದರೆ, ಇನ್ನು ಉತ್ತರ ಕರ್ನಾಟಕದ ಬಿಜಾಪುರದ ಬಹುಮನಿ ಸುಲ್ತಾನ ಮತ್ತು ಗೊಲ್ಕೊಂಡಾದ ರಾಜರುಗಳೂ ಸಹಾ ದಕ್ಷ್ಣಿಣ ಭಾರತದ ಮೇಲೆ ಸಾಲು ಸಾಲು ದಂಡ ಯಾತ್ರೆ ಮಾಡಿ ಲೂಟಿ ಮಾಡಿದ್ದಲ್ಲದೇ ಅನೇಕ ದೇವಾಲಯಗಳನ್ನು ನಾಶ ಪಡಿಸಿ ನಮ್ಮ ಮಾತಾ ಭಗಿನಿಯರ ಮಾನಹಾನಿ ಮಾಡಿದ್ದಲ್ಲದೇ ಬಲವಂತದಿಂದ ಮತಾಂತರ ಮಾಡುವ ದುಸ್ಸಾಹಸಕ್ಕೆ ಇಳಿದಿರುತ್ತಾರೆ. ಮತಾಂತರಕ್ಕೆ ಒಪ್ಪದವರನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಹಾಕುವುದಕ್ಕೂ ಹಿಂದು ಮುಂದೂ ನೋಡದಂತಹ ರಾಕ್ಷಸ ಪ್ರವೃತ್ತಿಯಲ್ಲಿ ಆಟ್ಟ ಹಾಸದಲ್ಲಿ ಮೆರೆಯುತ್ತಾ, ಸಿಕ್ಕ ಸಿಕ್ಕ ಸಾರ್ವಜನಿಕ ಆಸಿಪಾಸ್ತಿಗಳನ್ನು ದೋಚುತ್ತಾ , ಸಾಮ್ರಾಜ್ಯವನ್ನು ಅಕ್ಷರಶಃ ಹಾಳು ಮಾಡುತ್ತಿರುತ್ತಾರೆ. ಇಂತಹ ಮತಾಂಧರ ವಿರುದ್ದ ಕ್ಷಾತ್ರತೇಜದಿಂದ ಹೋರಾಡುವ ಬದಲು ಅವರಿಗೆ ಕಪ್ಪ ಕೊಟ್ಟು ಅವರ ಸಾಮಂತರಾಗಿ ಪ್ರಾಣ ಉಳಿಸಿಕೊಂಡರೆ ಸಾಕು ಎನ್ನುವಂತ ಮನಸ್ಥಿತಿಗೆ ಅಂದಿನ ಅನೇಕ ರಾಜಮನೆತನಗಳು ಬಂದು ಬಿಟ್ಟಿರುತ್ತವೆ. ಇಂತಹವರ ವಿರುದ್ಧ ಸಿಡಿದೆದ್ದು ಸಾಮ್ರಾಜ್ಯವನ್ನು ಮತ್ತೆ ಸ್ಥಾಪಿಸಿ, ಸಿಂಹಾಸನವನ್ನೇರಿ ಸಮರ್ಥವಾಗಿ ಮುನ್ನಡೆಸುವ ಛಾತಿ ಇರುವ ರಾಜರುಗಳೇ ಇರಲಿಲ್ಲ. ರಾಜರುಗಳು ಬಿಡಿ ಅಂತಹ ರಾಜರುಗಳಿಗೆ ಸಮರ್ಥವಾಗಿ ಮಾರ್ಗದರ್ಶನ ಮಾಡುವ ಗುರುಗಳೂ ಇಲ್ಲದಿದ್ದನ್ನು ಮನಗಂಡ ಗುರು ವಿದ್ಯಾರಣ್ಯರು ತಾವು ಕಾವಿಧಾರಿಗಳಿಗಿದ್ದರೆ ಈ ದೇಶ ಮತ್ತು ಧರ್ಮ ಉಳಿಯುವುದಿಲ್ಲ ಎಂದು ಒಬ್ಬ ಸಮರ್ಥ ಶಕ್ತಿಶಾಲಿಯಾದ ನಾಯಕನನ್ನು ಹುಡುಕಿ ಅವನ ಶಕ್ತಿ ಸಾಮರ್ಥ್ಯಗಳ ಅರಿವು ಮೂಡಿಸಿ, ಧೈರ್ಯ ತುಂಬಿ ಸೂಕ್ತ ಮಾರ್ಗದರ್ಶನವನ್ನು ನೀಡಿ, ಅವನೊಂದಿಗೆ ಒಂದು ಬಲಶಾಲಿಯಾದ ಸೈನ್ಯವನ್ನು ಕಟ್ಟಿ ಮತ್ತೆ ಮುಸಲ್ಮಾನ ಧಾಳಿಕೋರರನ್ನು ಮಟ್ಟ ಹಾಕಿ ಹೊಸ ಸಾಮ್ರಾಜ್ಯವನ್ನು ಸ್ಥಾಪಿಸುವ ಗುರಿಯನ್ನು ಹಾಕಿಕೊಂಡಿದ್ದ ಶ್ರೀ ವಿದ್ಯಾರಣ್ಯರ ಕಣ್ಣಿಗೆ ಹಕ್ಕ ಬುಕ್ಕರೆಂಬ ಇಬ್ಬರು ಉತ್ಸಾಹೀ ತರುಣರು ಕಣ್ಣಿಗೆ ಬಿದ್ದನಂತರ ನಡೆದದ್ದೆಲ್ಲವೂ ಇತಿಹಾಸ.
ಗುರು ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಹಕ್ಕ-ಬುಕ್ಕರು ತುಂಗಾ ಭದ್ರ ನದಿಯ ತಟದಲ್ಲಿರುವ ಆನೆಗೊಂದಿಯ ಮತ್ತೊಂದು ಬದಿಯಲ್ಲಿ ವಿದ್ಯಾನಗರವೆಂಬ ನೂತನ ನಗರಕ್ಕೆ ಶಂಕು ಸ್ಥಾಪನೆ ಮಾಡಿದ ವಿಷಯವನ್ನು ಈಗಾಗಲೇ ತಿಳಿದಿದಿದ್ದೇವೆ. ಅಲ್ಲಿ, ವಿರೂಪಾಕ್ಷ ಮತ್ತು ಭುವನೇಶ್ವರಿಯರ ಸುಂದರವಾದ ಮತ್ತು ಬೃಹತ್ತಾದ ದೇವಾಲಯವನ್ನು ಕಟ್ಟುತ್ತಾರೆ. ನಂತರ ಮೊಘಲರ ವಿರುದ್ಧದ ಪ್ರಪ್ರಥಮ ವಿಜಯದ ಸಂಕೇತವಾಗಿ ನಿರ್ಮಿಸಿದ ಈ ನಗರವನ್ನು ವಿದ್ಯಾನಗರ ಎಂದು ಕರೆಯುವುದಕ್ಕಿಂತಲೂ, ವಿಜಯನಗರ ಎಂದು ಕರೆಯುವುದೇ ಸೂಕ್ತ ಎಂದು ನಿರ್ಧರಿಸಿದ ವಿದ್ಯಾರಣ್ಯರು ವಿಜಯನಗರ ಎಂದು ಕರೆದದ್ದಲ್ಲದೇ, ಅದು ಕೇವಲ ಒಂದು ಸಾಧಾರಣ ನಗರವಾಗಿರದೇ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆಗೆ ಕಾರಣೀಭೂತರಾಗುತ್ತಾರೆ. ಹೀಗೆ ವಿದ್ಯಾರಣ್ಯರ ಕೃಪಾಶೀರ್ವಾದದಿಂದ ಸ್ಥಾಪಿಸಲ್ಪಟ್ಟ ವಿಜಯನಗರ ಸಂಸ್ಥಾನ, ಪರಕೀಯರ ಆಕ್ರಮಣವನ್ನು ಮೆಟ್ಟಿ, ಮುಂದೆ ಸುಮಾರು 310ವರ್ಷಗಳ ಕಾಲದಲ್ಲಿ ದಕ್ಷಿಣಾದ್ಯಂತ ತಮ್ಮ ರಾಜ್ಯವನ್ನು ವಿಸ್ತರಿಸಿಕೊಂಡು ಮುಂದೆ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಅತ್ಯಂತ ವೈಭವೋಪೇತವಾಗಿ ಸುವರ್ಣಯುಗವಾಗಿ ವಿಜೃಂಭಿಸಿತು ಎಂಬುದನ್ನು ಇತಿಹಾಸಕಾರು ಬಣ್ಣಿಸುತ್ತಾರೆ.
ಹೇಗೆ ನಂದರ ದುರಾಕ್ರಮಣದಿಂದ ಬೇಸಿತ್ತಿದ್ದ ಜನರಿಗೆ ಚಾಣಕ್ಯರೆಂಬ ಗುರುಗಳು ಚಂದ್ರಗುಪ್ತ ಎಂಬ ಯುವಕನ ಹಿಂದೆ ಮಾರ್ಗದರ್ಶನ ಮಾಡಿ ನಂದರನ್ನು ಮಟ್ಟಹಾಕಿ ಚಂದ್ರಗುಪ್ತನ ನಾಯಕತ್ವದಲ್ಲಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದರೋ ಅಡೇ ರೀತಿಯಲ್ಲಿಯೇ, ಗುರು ವಿದ್ಯಾರಣ್ಯರು ಹಕ್ಕ-ಬುಕ್ಕರ ಹಿಂದೆ ಬಲವಾದ ಶಕ್ತಿಯಾಗಿ ನಿಂತು ಅವರ ನೇತೃತ್ವದಲ್ಲಿಯೇ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಹಿಂದೂ ಸಾಮ್ರಾಜ್ಯದ ಸ್ಥಾಪನೆಗೆ ಕಾರಣೀಭೂತರಾದರೂ, ಹೈಂದವೀ ಸಾಮ್ರಾಜ್ಯ ಕಟ್ಟಿದ ನಂತರ ವಿದ್ಯಾರಣ್ಯರು ಎಂದೂ ಸಹಾ ಹಕ್ಕ ಬುಕ್ಕರ ಆಡಳಿತದಲ್ಲಿ ಹಸ್ತಕ್ಷೇಪ ಮಾಡದೇ ಶೃಂಗೇರಿ ಶಾರದಾ ಪೀಠದ ಮಠಾಧೀಶರಾಗಿ, ವೈದಿಕ ಧರ್ಮವನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅವರ ಹೆಗ್ಗಳಿಕೆಯಾಗಿದೆ. ಅದ್ವೈತ ವೇದಾಂತ ಸಾರವನ್ನು ನಿರೂಪಿಸುವ ಪಂಚದಶೀ, ಜೀವನ್ಮುಕ್ತಿ ವಿವೇಕ, ಅನುಭೂತಿ ಪ್ರಕಾಶ ಎಂಬ ಗ್ರಂಥಗಳನ್ನೂ ರಚಿಸಿದ್ದಲ್ಲದೇ, ಭಾರತೀಯ ತತ್ತ್ವಶಾಸ್ತ್ರ ಪ್ರಕಾರಗಳನ್ನು ಸುಲಭವಾಗಿ ಪರಿಚಯ ಮಾಡಿಕೊಡುವ ಸರ್ವದರ್ಶನ ಸಂಗ್ರಹ ಜ್ಯೋತಿಷಕ ಕೃತಿ ಕಾಲನಿರ್ಣಯ, ಶಂಕರವಿಜಯ ಮುಂತಾದ ಗ್ರಂಥಕರ್ತರು ವಿದ್ಯಾರಣ್ಯರೇ ಎಂದು ನಂಬಲಾಗಿದೆ.
ಸಾಹಿತ್ಯದ ಜೊತೆಗೆ ಸಂಗೀತದಲ್ಲೂ ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದ ವಿದ್ಯಾರಣ್ಯರು ಸಂಗೀತಸಾರವೆಂಬ ಸಂಗೀತ ಗ್ರಂಥವನ್ನು ರಚಿಸಿ ಇದರಲ್ಲಿ ರಾಗಗಳ ಜನ್ಯ ಜನಕ ರೀತಿಗಳ ಮೊದಲನೇ ನಿರೂಪಣೆ ಕಂಡು ಬರುತ್ತದೆ. ಅವರು ನಿರೂಪಿಸಿದ ದಕ್ಷಿಣಾದಿ ಸಂಗೀತ ರೀತಿಯು ಮುಂದೆ ಕರ್ನಾಟಕ ಸಂಗೀತವೆಂದೇ ಜಗತ್ಪ್ರಸಿದ್ಧವಾಗಿದೆ. ವಿದ್ಯಾರಣ್ಯರೇ ರಚಿಸಿದ ವಿವರಣಾ ಪ್ರಮೇಯ ಸಂಗ್ರಹ ಕೃತಿಯೂ ಕೂಡಾ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರಣ್ಯರು ಶೃಂಗೇರಿಯ ಪೀಠಾಧಿಪತಿಗಳಾಗಿದ್ದದ್ದು ಕೇವಲ 6 ವರ್ಷಗಳು ಮಾತ್ರ ಉಳಿದಂತೆ ಅವರ ಜೀವಿತವಧಿ ಹಿಂದೂಧರ್ಮ ಸಾಮ್ರಾಜ್ಯ ಸ್ಥಾಪನೆಗಾಗಿಯೇ ಮೀಸಲಾಗಿದ್ದಿತ್ತು. ಆದರೆ, ಪೀಠಾಧಿಪತಿಗಳಾಗಿದ್ದ ಅಲ್ಪಾವಧಿಯಲ್ಲಿ ಶೃಂಗೇರಿ ಮಠವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ದರು. ಕಾಶ್ಮೀರದ ಮೂಲ ಶಾರದಾ ಪೀಠದಿಂದ ಆದಿ ಶಂಕರರು ತಂದ ಮೂಲ ಶ್ರೀಗಂಧದ ವಿಗ್ರಹದ ಬದಲಿಗೆ ಶ್ರೀ ಶಾರದಾ ದೇವಿಯ ಚಿನ್ನದ ವಿಗ್ರಹವನ್ನು ಸ್ಥಾಪಿಸಿದವರೂ ವಿದ್ಯಾರಣ್ಯರೇ. ಮುಂದೇ 1386ರಲ್ಲಿ ಹಂಪೆಯಲ್ಲಿ ವಿದ್ಯಾರಣ್ಯರು ಕಾಲವಾದಾಗ, ಅವರ ಕಳೇಬರವನ್ನು ಹಂಪೆಯ ವಿರೂಪಾಕ್ಷ ದೇವಾಲಯದ ಹಿಂಭಾಗದಲ್ಲಿ ಸಮಾಧಿಮಾಡಲಾಗಿದ್ದು, ಅದನ್ನು ಇಂದಿಗೂ ಕಾಣ ಬಹುದಾಗಿದೆ.
ತಮ್ಮ ಅಪಾರವಾದ ಪಾಂಡಿತ್ಯದಿಂದ ಕೇವಲ ಮಠಾಧಿಪತಿಗಳಾಗಿಯೇ ಕೂರದೇ, ಪರಕೀಯರ ಧಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ಹಿಂದು ರಾಜ್ಯ ಸ್ಥಾಪನೆಗೆ ಕಾರಣರಗಿದ್ದಲ್ಲದೇ, ಅನೇಕ ಧಾರ್ಮಿಕ ಗ್ರಂಥಗಳು, ಸಂಗೀತದ ಕುರಿತಾದ ಮೂಲ ಗ್ರಂಥಗಳನ್ನು ರವಿಸುವ ಮೂಲಕ ಬಹುಮುಖ ಪ್ರತಿಭೆಯ ಗುರುಗಳು ಎನಿಸಿಕೊಳ್ಳುತ್ತಾರೆ ವಿದ್ಯಾರಣ್ಯರು. ಸಾಮ್ರಾಜ್ಯ, ಸಂಗೀತ ಸಾಹಿತ್ಯ ಮತ್ತು ಕಲೆಗಳಲ್ಲಿ ಕರ್ನಾಟಕದ ಕೀರ್ತಿಯನ್ನು ಇತಿಹಾಸದ ಪುಟಗಳಲ್ಲಿ ಆಜರಾಮರವಾಗಿಸಿದ ವಿದ್ಯಾರಣ್ಯರ ಕಾರ್ಯಕ್ಕೆ ಮಾರುಹೋದ ಕನ್ನಡಿಗರು ಹೆಮ್ಮೆಯಿಂದ ಅವರನ್ನು ಕರ್ನಾಟಕ ರಾಜ್ಯ ಸಂಸ್ಥಾಪನಾಚಾರ್ಯ ಎಂದು ಕರೆದದ್ದರಲ್ಲಿ ಅತಿಶಯೋಕ್ತಿಯೇನಿಲ್ಲ ಎಂದರೂ ತಪ್ಪಾಗದು.
ಹಿಂದೂ ಸಾಮ್ರಾಜ್ಯ ಮತ್ತು ಕರ್ನಾಟಕ ರಾಜ್ಯ ಸ್ಥಾಪನೆಗೆ ಕಾರಣಿಭೂತರಾದ ಆಚಾರ್ಯ ವಿದ್ಯಾರಣ್ಯರ ಸಾಧನೆಯ ಕುರಿತಂತೆ ಹೆಚ್ಚಿನವರಿಗೆ ಮಾಹಿತಿಯೇ ಇಲ್ಲವಾಗಿದುದ್ದು, ಎಲ್ಲೋ ಮೈಸೂರು ಮತ್ತು ಬೆಂಗಳೂರಿನ ಬಡಾವಣೆಗೆ ಅವರ ಹೆಸರನ್ನು ಇಟ್ಟು ವೈಶಾಖ ಶುದ್ಧ ಸಪ್ತಮಿಯಂದು ಅವರ ಜಯಂತಿಯನ್ನು ಶಂಕರ ಮಠಗಳಲ್ಲಿ ಕೇವಲ ಮಂಗಳಾರತಿ, ಕೋಸಂಬರಿ ಮತ್ತು ಪಾನಕಗಳಿಗಷ್ಟೇ ಸೀಮಿತ ಮಾಡಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ.
ಇನ್ನು ನವರಾತ್ರಿ ನಮ್ಮ ದೇಶದ ರಾಷ್ಟ್ರೀಯ ಹಬ್ಬವಾಗಿದ್ದು ಆದನ್ನು ದೇಶಾದ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲಾಗುತ್ತದೆ. ಇನ್ನೂ ನಮ್ಮ ಕರ್ನಾಟಕದಲ್ಲಂತೂ ದಸರಾ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುವುವ ವಿಷಯ ಎಲ್ಲರಿಗೂ ತಿಳಿದಿರುವಂತಹದ್ದೇ ಆಗಿದೆ. ಮೈಸೂರಿನಲ್ಲಿ ನಡೆಯುವ ದಸರಾ ವಿಶ್ವವಿಖ್ಯಾತವಾಗಿದ್ದು ಅದರ ವೀಕ್ಷಣೆಗೆ ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಆಗಮಿಸುಸುತ್ತಾರೆ. ಮೈಸೂರಿನಲ್ಲಿ ಈ ರೀತಿಯ ದಸರಾ ಆಚರಣೆಗೆ ಮೂಲ ಪ್ರೇರಣೆಯೇ ವಿದ್ಯಾರಣ್ಯರು ಮತ್ತು ಅಂದು ಅವರು ಶೃಂಗೇರಿಯ ಶಾರದಾ ಪೀಠದಲ್ಲಿ ಆರಂಭಿಸಿದ ವೈಭವೋಪೇತ ದಸರಾ ದರ್ಬಾರ್ ಆಚರಣೆಯನ್ನೇ ವಿಜಯನಗರ ಸಾಮ್ರಾಜ್ಯದ ಅರಸರು ತಮ್ಮ ರಾಜಧಾನಿ ಹಂಪೆಯಲ್ಲೂ ಆಚರಿಸಲು ಆರಂಭಿಸಿ ನಂತರದ ದಿನಗಳಲ್ಲಿ ವಿಜಯನಗರದ ಸಾಮಂತರಾಗಿದ್ದ ಮೈಸೂರು ಸಂಸ್ಥಾನದವರು ಸ್ವತ್ರಂತ್ರರಾದಾಗ, ಕೇವಲ ವಿಜಯನಗರದ ಸಿಂಹಾಸನವನ್ನು ಮಾತ್ರಾ ಮೈಸೂರಿಗೆ ಕೊಂಡೊಯ್ಯದೇ, ಅಲ್ಲಿನ ದಸರಾ ಆಚರಣೆಯನ್ನೂ ತೆಗೆದುಕೊಂಡು ಹೋಗಿ ನಂತರ ಅದು ವಿಶ್ವವಿಖ್ಯಾತವಾಗಿದ್ದು ಈಗ ಇತಿಹಾಸ.
ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗುರುಗಳಾದ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳಿಗೆ ಗುರು ಕಾಣಿಕೆಯಾಗಿ ಹರಿಹರ ರಾಯ ಮತ್ತು ಬುಕ್ಕ ರಾಯರು ಕೃತಜ್ಞತಾ ಪೂರ್ವಕವಾಗಿ ಮತ್ತು ಭಕ್ತಿಯ ಸಂಕೇತವಾಗಿ, ತಮ್ಮ ಇಡೀ ರಾಜ್ಯ, ಚಿನ್ನದ ಸಿಂಹಾಸನ, ಬಗೆ ಬಗೆಯ ಮುತ್ತು ಮಾಣಿಕ್ಯಗಳಿಂದ ಮಾಡಿದ ಕಿರೀಟ, ಚಿನ್ನದ ಪಲಕ್ಕಿ, ಛತ್ರಿ ಚಾಮರಗಳು ಮತ್ತು ರಾಜ್ಯದ ರಾಜಮುದ್ರೆಗಳನ್ನು ಆಚಾರ್ಯರ-ಪಾದಕಮಲಗಳಲ್ಲಿ ಅರ್ಪಿಸಿದ್ದಲ್ಲದೇ, ತಮ್ಮ ಪರಮ ಪೂಜ್ಯ ಗುರುಗಳಾದ ಶ್ರೀ ವಿದ್ಯಾರಣ್ಯರನ್ನು ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ, ಶ್ರೀಮದ್ರಜಾಧಿರಾಜಗುರು, ಭೂಮಂಡಲಾಚಾರ್ಯ ಇನ್ನು ಮುಂತಾದ ಶ್ರೇಷ್ಠ ಬಿರುದುಗಳಿಂದ ಗೌರವಿಸಿದರು. ತಮ್ಮ ಶಿಷ್ಯರ ವಿನಮ್ರ ವಿನಂತಿ ಮತ್ತು ಭಕ್ತಿಯನ್ನು ಆರಂಭದಲ್ಲಿ ನಿರಾಕರಿಸಿದರೂ, ನಂತರ ಹಕ್ಕ ಬುಕ್ಕರ ಬಲವಂತದಿಂದಾಗಿ ಅದನ್ನು ಒಪ್ಪಿಕೊಂಡ ಗುರುಗಳು ಪ್ರತೀ ನವರಾತ್ರಿಯಂದು ಶೃಂಗೇರಿಯಲ್ಲಿ ವಿಶಿಷ್ಟವಾದ ರೀತಿಯಲ್ಲಿ ಶಾರದಾ ದೇವಿಗೆ ವಿವಿಧ ರೀತಿಯ ಅಲಂಕಾರಗಳ ನವರಾತ್ರಿಯ ಆಚರಣೆಯನ್ನು ಆರಂಭಿಸಿದ್ದಲ್ಲದೇ, ಆದೇ ಕಾಲದಲ್ಲಿ ಈ ರತ್ನ ಖಚಿತ ಸಿಂಸಾಸದನದ ಮೇಲೆ ಕುಳಿತು ವಿಶೇಷ ದರ್ಬಾರ್ ನಡೆಸುವ ಸತ್ ಸಂಪ್ರದಾಯವನ್ನು ರೂಡಿಗೆ ತಂದರು.
ಅಂದು ಗುರು ವಿದ್ಯಾರಣ್ಯರಿಂದ ಆರಂಭವಾದ ನವರಾತ್ರಿಯ ಸತ್ ಸಂಪ್ರದಾಯವನ್ನು ಶೃಂಗೇರಿಯ ಶ್ರೀಮಠದಲ್ಲಿ ನವರಾತ್ರಿ ಉತ್ಸವ ಮತ್ತು ದರ್ಬಾರ್ ಗಳನ್ನು ಇಂದಿಗೂ ಬಹಳ ಅದ್ದೂರಿಯಿಂದ ಮುಂದುವರೆಸಿಕೊಂಡು ಹೊಗುತ್ತಿರುವುದು ಗಮನಾರ್ಹವಾಗಿದೆ. ನವರಾತ್ರಿಯ ಸಮಯದಲ್ಲಿ ಶೃಂಗೇರಿಯ ಜಗದ್ಗುರುಗಳು ಅಹ್ನಿಕ ಮತ್ತು ಅನುಷ್ಠಾನದ ನಂತರ, ಪರಮ ಪೂಜ್ಯ ಆಚಾರ್ಯರು ಗುರು ಪಾದುಕೆಗಳಿಗೆ ಮತ್ತು ಶ್ರೀ ಚಕ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬೆಳಿಗ್ಗೆ 9.30 ಕ್ಕೆ ಆಚಾರ್ಯರು ಶ್ರೀ ಮಠದ ಆವರಣದಲ್ಲಿರುವ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿ ಎಲ್ಲಾ ದೇವತೆಗಳ ದರ್ಶನ ಪಡೆಯುತ್ತಾರೆ. ನಿಯಮಿತ ಬೆಳಿಗ್ಗೆ ಮತ್ತು ಮಧ್ಯಾಹ್ನದ ಪೂಜೆಯ ನಂತರ, ಶ್ರೀ ಜಗದ್ಗುರು ಮಹಾಸ್ವಾಮಿಗಳು ಮಧ್ಯಾಹ್ನ 12 ರಿಂದ 2.30 ರ ನಡುವೆ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆಚಾರ್ಯರು ಸಂಜೆ 5.30 ರಿಂದ 6.30 ರವರೆಗೆ ಭಕ್ತರಿಗೆ ದರ್ಶನ ನೀಡಿ, ಸಂಜೆ 6.30 ಕ್ಕೆ ಶ್ರೀ ಶಾರದಾಂಬಾ ರಥೋತ್ಸವದಲ್ಲಿ ಪಾಲ್ಗೊಂಡ ನಂತರ ಪುನಃ ಶುಚಿರ್ಭೂತರಾಗಿ ಸಂಜೆ 7.30 ಕ್ಕೆ ಅಹನಿಕ ಮುಗಿಸಿದ ನಂತರ ರಾತ್ರಿ 8 – 9.30 ರವರೆಗೂ ಪ್ರತಿನಿತ್ಯವೂ ನಡೆಯುವ ಶ್ರೀ ಚಂದ್ರಮೌಳೀಶ್ವರ ಪೂಜೆಯಲ್ಲಿ ಪಾಲ್ಗೊಂಡ ನಂತರ ಆಚಾರ್ಯ ದರ್ಬಾರ್ ಅಧ್ಯಕ್ಷತೆ ವಹಿಸುವರು.
ಈ ದರ್ಬಾರ್ ವಿಶೇಷ ಕಾರ್ಯಕ್ರಮದಲ್ಲಿ ಶ್ರೀ ಮಠದ ಸಂಪ್ರದಾಯದಂತೆ ಕಿರೀಟ ಮತ್ತು ಆಭರಣಗಳನ್ನು ಧರಿಸಿದ ಶ್ರೀ ಜಗದ್ಗುರುಗಳು ಚಂದ್ರಮೌಳೀಶ್ವರ ಸಭಾಂಗಣದ ಮೂಲಕ ಮೆರವಣಿಗೆಯಲ್ಲಿ ಶಾರದ ದೇವಸ್ಥಾನದ ದರ್ಬಾರ್ ಪ್ರವೇಶಿಸಿ ರತ್ನ ಖಚಿತ ಸಿಂಹಾಸನದಲ್ಲಿ ಇರಿಸಲಾಗಿರುವ ಶಾರದಾಂಬೆಯ ಮೂರ್ತಿಯನ್ನು ಚಿನ್ನದ ರಥದಲ್ಲಿ ಕುಳ್ಳರಿಸಿ ಅದನ್ನು ದೇವಾಲಯದ ಪ್ರಾಂಗಣದ ಒಳಗೆ ಮೂರು ಬಾರಿ ವೇದಘೋಷ, ವಾದ್ಯ ಘೋಷ ಮತ್ತು ಚತ್ರ-ಚಾಮರಗಳೊಂದಿಗೆ ರಥೋತ್ಸವ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಗುರುಗಳು, ತಾಯಿಯ ಕಡೆಗೆ ಮುಖ ಮಾಡುತ್ತಾ ಹಿಮ್ಮುಖವಾಗಿ ನಡೆಯುವುದು ವಿಶೇಷವಾಗಿದೆ. ರಥೋತ್ಸವದ ನಂತರ, ಆಚಾರ್ಯರು ಶಾರದಾಂಬೆಯ ಕಡೆಗೆ ಮುಖಮಾಡಿರುವ ಚಿನ್ನದ ಸಿಂಹಾಸನದ ಮೇಲೆ ಕುಳಿತ ನಂತರ ಸಪ್ತಶತಿಯ ಒಂದು ಅಥವಾ ಎರಡು ಅಧ್ಯಾಯಗಳ ಪಠಣ ಮಾಡಲಾಗುತ್ತದೆ.ದುರ್ಗಾ ಸಪ್ತಶತಿಯನ್ನು ಹತ್ತೂ ದಿನವೂ .ದಿನಕ್ಕೆ ಎರಡು ಅಧ್ಯಾಯಗಳ ಹಾಗೆ ಪಾರಾಯಣ ಮಾಡಲಾಗುತ್ತದೆ. ಈ ಪಾರಾಯಣದ ನಂತರ ಗುರುಗಳು ಆಶೀರ್ವಚನ ನೀಡುವ ಸಂಪ್ರದಾಯ ರೂಢಿಯಲ್ಲಿದೆ.
ನವರಾತ್ರಿಯ 7ನೆ ದಿನದ ಗುರುಗಳ ಧರ್ಭಾರ್ ಮುಗಿದು, ದುರ್ಗಾ ಸಪ್ತಶತಿ ಪಾರಾಯಣ, ಮಂಗಳಾರತಿ ನಂತರ, ಅಷ್ಟಾವದಾನ ಸೇವೆ ಮುಗಿದಾದ ಮೇಲೆ ಗುರುಗಳು ಅಲ್ಲಿಂದ ವಿರಮಿಸಿದ ನಂತರ ಗುರುಗಳು ಆಸೀನರಾಗಿದ್ದ ಸಿಂಹಾಸನಕ್ಕೆ ಪೂಜೆ ಮಾಡಲಾಗುತ್ತದೆ.ಈ ರೀತಿಯ ಸಿಂಹಾಸನದ ಪೂಜೆ 7 ನೇ ದಿನದಿಂದ 10ನೆ ದಿನದವರೆಗೆ ಮುಂದುವರೆಯುತ್ತದೆ.
ಇನ್ನು ಶರನ್ನವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯಲ್ಲಿ ಅನೇಕ ವೈವಿದ್ಯಮಯ ಕಾರ್ಯಕ್ರಮಗಳನ್ನು ಬಹಳ ಅದ್ಧೂರಿಯಾಗಿ ಇಂದಿಗೂ ಆಚರಿಸಲಾಗುತ್ತದೆ. ತಾಯಿ ಶಾರದಾಂಬೆಯನ್ನು ಅಮೂಲ್ಯವಾದ ಮತ್ತು ಆಕರ್ಷಕವಾದ ಮುತ್ತು, ರತ್ರ್ನ ವಜ್ರ ವೈಢೂರ್ಯಗಳ ಖಚಿತವಾದ ಸುಂದರ ಆಭರಣಗಳಿಂದ ಅಲಂಕರಿಸಲಾಗುತ್ತದೆ.
ನವರಾತ್ರಿಯ ಸಂದರ್ಭದಲ್ಲೇ ಕ್ರೂರ ರಾಕ್ಷಸರಾದ ಮಧು-ಕೈಟಭ, ಶುಂಭ-ನಿಶುಂಭ, ಮಹಿಷಾಸುರ ಇತ್ಯಾದಿಗಳನ್ನು ಸಂಹರಿಸಿದ ನೆನಪಿಗಾಗಿಯೇ ಒಂಬತ್ತು ರಾತ್ರಿಗಳಲ್ಲಿ ಜಗನ್ಮಾತೆಗೆ ವಿವಿಧ ರೀತಿಯಲ್ಲಿ ಅಲಂಕರಿಸಿ ಪೂಜಿಸಲಾಗುತ್ತದೆ. ಈ ರೀತಿಯಾಗಿ ಜಗನ್ಮಾತೆಯ ವಿಶೇಷ ಪೂಜೆಯ ಮೂಲಕ ಮತ್ತು ಶರತ್ಕಾಲದಲ್ಲಿ (ಶರಧೃತು) ದೇವಿ ಮಹಾತ್ಮ್ಯವನ್ನು ಪಠಿಸುವುದರಿಂದ ದೇವಿ ಸಂತೃಷ್ಟಳಾಗಿ ತನ್ನ ಭಕ್ತರಿಗೆ ಎಲ್ಲಾ ರೀತಿಯ ಸಮೃದ್ಧಿಯನ್ನು ನೀಡುತ್ತಾಳೆ ಎನ್ನುವುದು ಎಲ್ಲರ ನಂಬಿಕೆಯಾಗಿದೆ.
ನವರಾತ್ರಿಯ ಹಿಂದಿನ ದಿನ ಮಹಾಲಯ ಅಮಾವಾಸ್ಯೆಯಂದು ಶಾರದಾಂಬೆಗೆ ಮಹಾಭಿಷೇಕ ಮಾಡಿ ನಾನಾ ರೀತಿಯ ಫಲ-ಪಂಚಾಮೃತ ಅಭಿಷೇಕದ ನಂತರ ಶತಾಯ ರುದ್ರಾಭಿಷೇಕ ಮತ್ತು ಮಹಾನ್ಯಾಸ ಮತ್ತು 108 ಅಭಿಷೇಕದೊಂದಿಗೆ ಶ್ರೀ ಸೂಕ್ತವನ್ನು ಪಠಿಸುತ್ತಾರೆ.
ಮುಂದಿನ ಒಂಭತ್ತು ದಿನಗಳು ಶಾರದಾಂಬೆಗೆ ವಿವಿಧ ರೀತಿಯ ಅಲಂಕಾರಗಳನ್ನು ಮಾಡಿ ಪೂಜಿಸುವುದರ ಹಿಂದೆಯೂ ಮಹತ್ವವಿದೆ. ಶ್ರೀ ದೇವಿ ಮಹಾತ್ಮದಲ್ಲಿ ಉಲ್ಲೇಖಿಸಿರುವಂತೆ, ಏಕೈವಾಹಂ ಜಗತ್ಯಾತ್ರ ದ್ವಿತೀಯಾ ಕಾ ಮಾಮಾಪರ (ನಾನು ಪ್ರಪಂಚದ ಏಕೈಕ ಶಾಶ್ವತ ಶಕ್ತಿ ಮತ್ತು ಅದರ ಹೊರತಾಗಿ ಬೇರೇನೂ ಅಲ್ಲ). ಆದ್ದರಿಂದ ಈ ಎಲ್ಲಾ ವಿಭಿನ್ನ ಅಲಂಕಾರಗಳು ಮತ್ತು ಅವತಾರಗಳು ಜಗನ್ಮಾತೆಯ ಮಾತ್ರ. ಆ ಜಗನ್ಮಾತೆಯು ಸರಸ್ವತಿಯ ರೂಪವನ್ನು ಪಡೆಯುತ್ತದೆ ಮತ್ತು ಶಿಕ್ಷಣ ಮತ್ತು ಜ್ಞಾನವನ್ನು ನೀಡುತ್ತದೆ, ಮಹಾಲಕ್ಷ್ಮಿಯ ರೂಪವನ್ನು ಪಡೆಯುತ್ತದೆ ಮತ್ತು ಸಂಪತ್ತು, ಆಹಾರ ಇತ್ಯಾದಿಗಳನ್ನು ನೀಡುತ್ತದೆ ಮತ್ತು ದುಷ್ಟ ಮನಸ್ಸಿನ ಜನರ ನಾಶದ ಸಮಯದಲ್ಲಿ ಮಹಾಕಾಳಿಯ (ಚಾಮುಂಡಿ) ರೂಪವನ್ನು ಪಡೆಯುತ್ತದೆ, ದುರ್ಗಾ ಪರಮೇಶ್ವರಿ ತನ್ನ ಭಕ್ತರನ್ನು ಎಲ್ಲಾ ಭಯವನ್ನು ಹೋಗಲಾಡಿಸುವಂತೆ ಮಾಡಲು. ಅವಳು ತನ್ನ ಭಕ್ತರನ್ನು ವಿವಿಧ ಹೆಸರುಗಳು ಮತ್ತು ರೂಪಗಳ ಮೂಲಕ ರಕ್ಷಿಸುತ್ತಾಳೆ. ಜಗದಂಬೆಯ ರೂಪಗಳು ಮತ್ತು ಹೆಸರುಗಳು ಹಲವಾರು ಇದ್ದರೂ, ಚೈತನ್ಯವು ಒಂದೇ ಆಗಿರುತ್ತದೆ. ದೇವರಿಗೆ ವಿಭಿನ್ನ ಅಲಂಕಾರಗಳನ್ನು ಮಾಡುವ ಪ್ರಕ್ರಿಯೆಯಲ್ಲಿ ಅಂತಹ ದೊಡ್ಡ ತಾತ್ವಿಕ ಸತ್ಯವಿದೆ. ದೇವನೊಬ್ಬ ನಾಮ ಹಲವು ಎಂಬುದರ ಜ್ವಲಂತ ಉದಾಹರಣೆಯಾಗಿದೆ.
ಪ್ರತೀ ವರ್ಷದ ನವರಾತ್ರಿಯ ಒಂಬತ್ತು ದಿನಗಳಲ್ಲಿ ಮಾಡಲಾಗುವ ಅಲಂಕಾರಗಳು ಈ ಪ್ರಕಾರವಾಗಿರುತ್ತದೆ.
ಬಾಣಂತೀ ಅಲಂಕಾರ : ಮುಖದಲ್ಲಿ ಮುಗುಳ್ನಗೆಯೊಂದಿಗೆ ತಾಯಿ ಶಾರದೆಯು ತನ್ನ ಮಡಿಲಲ್ಲಿ ಮುದ್ದಾದ ಮಗುವನ್ನು ಮುದ್ದಾಡುತ್ತಾ ತನ್ನ ಭಕ್ತರಿಗೆ ನಾನು ಇಡೀ ಸೃಷ್ಟಿಯ ತಾಯಿ ಮತ್ತು ನೀವೆಲ್ಲರೂ ನನ್ನ ಮಕ್ಕಳು ಎನ್ನುವ ರೀತಿಯಲ್ಲಿ ಆರಂಭವಾಗುವ ಅಲಂಕಾರ ಮುಂದೇ, ಪ್ರತಿದಿನ ವಿಧ ವಿಧವಾದವಾಗಿ ಮಾಡುವ ಅಲಂಕಾರವವೈಭವವನ್ನು ನೋಡಲು ಎರಡು ಕಣ್ಣುಗಳು ಕೂಡ ಸಾಲದು ಎಂದು ಹೇಳಿದರೆ ಉತ್ಪ್ರೇಕ್ಷೆಎನಿಸದು.
ಹಂಸವಾಹನ ಅಲಂಕಾರ : ಬ್ರಾಹ್ಮಿ : ಬ್ರಹ್ಮ ದೇವರ ರಾಣಿಯಾದ ತಾಯಿ ಶಾರದೆಯು ಹಂಸವಾಹನದ ಮೇಲೆ ಕುಳಿತು ತನ್ನ ಕೈಯಲ್ಲಿ ಕಮಂಡಲ, ಅಕ್ಷ ಮಳೆ, ಪುಸ್ತಕ, ಪಾಶಾ ಮತ್ತು ಚಿನ್ಮುದ್ರೆಯಿಂದ ಭಕ್ತರನ್ನು ಆಶೀರ್ವದಿಸುತ್ತಾಳೆ.
ವೃಷಭ ವಾಹನ ಅಲಂಕಾರ :ಮಹೇಶ್ವರಿ: ಆದಿ ಶಕ್ತಿ, ಮಹೇಶ್ವರನ ಸಂಗೀತ ಕಚೇರಿ. ವೃಷಭ ವಾಹನದ ಮೇಲೆ ಕುಳಿತು, ತ್ರಿಶೂಲವನ್ನು ಹಿಡಿದಿರುವ ಅಲಂಕಾರ ಮಾಡಲಾಗುತ್ತದೆ.
ಮಯೂರ ವಾಹನ ಅಲಂಕಾರ : ತಾಯಿ ಶಾರದೆಯನ್ನು ನವಿಲಿನ ಮೇಲೆ ಆಯುಧ ಹಿಡಿದು ಕುಳಿತು, ಕುಮಾರಸ್ವಾಮಿಯ (ಸುಬ್ರಹ್ಮಣ್ಯ) ಶಕ್ತಿಯ ರೂಪದಲ್ಲಿ, ತನ್ನ ಕೃಪೆಯಿಂದ ಜಗತ್ತನ್ನು ರಕ್ಷಿಸುತ್ತಾಳೆ.
ಗರುಡವಾಹನ ಅಲಂಕಾರ : ವೈಷ್ಣವಿ: ಶ್ರೀ ಮಹಾವಿಷ್ಣುವಿನ ಶಕ್ತಿಯಾಗಿ ದೇವಿ, ಗರುಡನ ಮೇಲೆ ಕುಳಿತು, ಶಂಖ, ಚಕ್ರ ಮತ್ತು ಗಧಾಧಾರಿಯಾಗಿ ತನ್ನ ಭಕ್ತ್ರರನ್ನು ಆಶೀರ್ವದಿಸುತ್ತಾಳೆ.
ಇಂದ್ರಾಣಿ ಅಲಂಕಾರ : ದೇವಿ ವಜ್ರಾಯುಧವನ್ನು ಹಿಡಿದು ಐರಾವತದಲ್ಲಿ ಕುಳಿತು, ವೃತ್ರಾಸುರನಂತಹ ರಾಕ್ಷಸರನ್ನು ನಾಶಮಾಡಿ ಭಕ್ತರನ್ನು ಕಾಪಾಡುತ್ತಾಳೆ.
ವೀಣಾ ಶಾರದ ಅಲಂಕಾರ: ತಾಯಿ ಶಾರದೆಯು ವೀಣೆಪಾಣಿಯಾಗಿ ಮತ್ತೊಮ್ದು ಕೈಗಳಲ್ಲಿ ಪುಸ್ತ್ಕವನ್ನು ಹಿದಿದು ಮಂದಮತಿಗಳಾದ ತನ್ನ ಭಕ್ತರಿಗೆ ಜ್ಞಾನದ ದೀಕ್ಷೆಯನ್ನು ನೀಡುತ್ತಾಳೆ.
ಮೋಹಿನಿ ಅಲಂಕಾರ : ಸಮುದ್ರ ಮಂಥನದಲ್ಲಿ ಮೋಹಿನಿ ರೂಪದಲ್ಲಿ ಬಂದು ಕೂರ ರಾಕ್ಷಸರನ್ನು ತನ್ನ ಸೌಂದರ್ಯದಿಂದ ಭ್ರಮಾಲೋಕಕ್ಕೆ ತಳ್ಳಿ ಅದೇ ಸಮಯದಲ್ಲಿ ಸಿಕ್ಕಿದ ಅಮೃತದ ಕಳಸದಿಂದ ದೇವತೆಗಳಿಗೆ ಹಂಚುವ ಜಗನ್ಮಾತೆಯ ಈ ಅಲಂಕಾರವನ್ನು ನಿಜಕ್ಕೂ ನಯನ ಮನೋಹರವಾಗಿರುತ್ತದೆ.
ರಾಜರಾಜೇಶ್ವರಿ ಅಲಂಕಾರ : ತಾಯಿ ರಾಜರಾಜೇಶ್ವರಿ, ಪಾಶಾಂಕುಶಧಾರಿಯಾಗಿ ನಾನಾ ವಿಧದ ಆಭರಣಗಳಿಂದ ಅಲಂಕರಿಸಲ್ಪಟ್ಟು ತನ್ನ ಕರುಣೆಯ ಕಣ್ಣುಗಳಿಂದ ಮತ್ತು ದೈವಿಕ ಅನುಗ್ರಹದಿಂದ ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ.
ಸಿಂಹವಾಹನ ಅಲಂಕಾರ : ಚಾಮುಂಡಿ: ದುಷ್ಟ ಮತ್ತು ಕ್ರೂರ ರಾಕ್ಷಸರಾದ ಚಂಡ, ಮುಂಡರನ್ನು ನಾಶಮಾಡಿ ಭಕ್ತರನ್ನು ಅನುಗ್ರಹಿಸಲು ಜಗನ್ಮಾತೆಯ ಚಾಮುಂಡಿ ರೂಪ ನಿಜಕ್ಕೂ ಅನನ್ಯವೇ ಸರಿ.
ಗಜಲಕ್ಷ್ಮಿ ಅಲಂಕಾರ : ಅಕ್ಕ ಪಕ್ಕದಲ್ಲಿ ಆನೆಗಳ ಮಧ್ಯದಲ್ಲಿ ಕಮಲದ ಮೇಲೆ ಕುಳಿತ ಹಸನ್ಮುಖಿಯಾದ ಶ್ರೀ ಗಜಲಕ್ಷ್ಮಿ ತನ್ನ ಭಕ್ತರಿಗೆ ಸುಖಃ, ಸಂಪತ್ತು ಸಂತೋಷ ಮತ್ತು ನೆಮ್ಮದಿಗಳನ್ನು ಕರುಣಿಸುತ್ತಾಳೆ.
ಈ ರೀತಿಯ ಅಲಂಕಾರ ಮತ್ತು ದರ್ಬಾರ್ ಗಳ ಹೊರತಾಗಿಯೂ ನವರಾತ್ರಿಯ ಸಮಯದಲ್ಲಿ ಶೃಂಗೇರಿ ಮಠದಲ್ಲಿ ಅನೇಕ ಪಾರಾಯಣಗಳನ್ನು ಮಾಡಲಾಗುತ್ತದೆ. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ ಪಾರಾಯಣಗಳು, ವಾಲ್ಮೀಕಿ ರಾಮಾಯಣ, ದೇವಿ ಭಾಗವತ, ಶ್ರೀಮದ್ ಭಾಗವತಂ, ಮಾಧವೀಯ ಶಂಕರ ದಿಗ್ವಿಜಯ, ಸೂತ ಸಂಹಿತೆ, ಲಲಿತೋಪಾಖ್ಯಾನ, ಪ್ರಸ್ಥಾನತ್ರಯ ಭಾಷ್ಯ ಪಾರಾಯಣಗಳು, ಮಹಾವಿದ್ಯ, ಲಕ್ಷ್ಮೀನಾರಾಯಣ ಹೃದಯ, ದುರ್ಗಾ ಪಾರಾಯಣಗಳು ಮತ್ತು ಇತರವುಗಳು. ಸೂರ್ಯ ನಮಸ್ಕಾರ, ಶ್ರೀಸೂಕ್ತ ಜಪ, ಭುವನೇಶ್ವರಿ ಜಪ, ದುರ್ಗಾ ಜಪ ಮತ್ತು ಇತರ ಜಪಗಳನ್ನು ಮಾಡಲಾಗುವುದು. ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಶತ ರುದ್ರಾಭಿಷೇಕ, ಶ್ರೀ ಚಕ್ರಕ್ಕೆ ನವಾವರಣ ಪೂಜೆ, ಇದನ್ನು ಶಾಸ್ತ್ರಗಳ ಪ್ರಕಾರ ಜಗನ್ಮಾತೆಯ ವಾಸಸ್ಥಾನ ಎಂದು ಕರೆಯಲಾಗುತ್ತದೆ, ಸುವಾಸಿನಿ ಪೂಜೆ ಮತ್ತು 12 ಗಂಟೆಗೆ ಕುಮಾರಿ ಪೂಜೆಯನ್ನು ಪ್ರತಿದಿನ ನಡೆಸಲಾಗುತ್ತದೆ. ಪೂಜೆಯ ನಂತರ ಅತ್ಯಂತ ಶುಚಿ ಮತ್ತು ರುಚಿಯಾದ ಪ್ರಸಾದವನ್ನು ಭಕ್ತರಿಗೆ ವಿನಿಯೋಗ ಮಾಡಲಾಗುತ್ತದೆ. ಇಂತಹ ವಿಶೇಷ ಸಂಧರ್ಭಗಳಲ್ಲಿ ಸಾವಿರಾರು ಭಕ್ತರುಗಳು ಶ್ರೀಕ್ಷೇತ್ರಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.
ನವರಾತ್ರಿಯ ಪ್ರತಿದಿನ ಸಂಜೆ 6.30 ಕ್ಕೆ ಶಾರದಾಂಬೆಗೆ ರಥೋತ್ಸವ ನಡೆಯತ್ತದೆ. ಆ ಸಮಯದಲ್ಲಿ ಪರಮ ಪೂಜ್ಯ ಆಚಾರ್ಯರ ಸಾನ್ನಿಧ್ಯದಲ್ಲಿ ಮಂಗಳಾರತಿ ನಡೆದ ನಂತರ ವಿವಿಧ ಅಲಂಕಾರ ಭೂಷಿತವಾದ ಉತ್ಸವ ಮೂರ್ತಿಯನ್ನು ರಥದ ಮೇಲೆ ಆಸೀನರಾಗಿಸಿ ರಥಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಇದೇ ಸಮಯದಲ್ಲಿ ನಾಡಿನ ಹೆಸರಾಂತ ಕಲಾವಿದರುಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಶಾಸ್ತ್ರೀಯ ಸಂಗಿತದ ಗಾಯನ, ವೀಣಾವಧಾನ, ಕೊಳಲು, ಪಿಟೀಲು, ಸ್ಯಾಕ್ಸೋಫೋನ್, ಕ್ಲಾರಿಯೋನೆಟ್, ನಾನಾ ಪ್ರಕಾರದ ನೃತ್ಯಗಳ ಮೂಲಕ ದೇಶ ವಿದೇಶಗಳ ಸುಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀಕ್ಷೇತ್ರಕ್ಕೆ ಆಗಮಿಸಿರುವ ಆಸ್ತಿಕ ಮಹಾಶಯರ ಹೃನ್ಮನಗಳಿಗೆ ರಸದೌತಣ ನೀಡುತ್ತದೆ.
ಈ ರೀತಿಯಾಗಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಯಕ ಚಟುವಟಿಗೆಗಳಿಂದ ಶೃಂಗೇರಿಯಲ್ಲಿ ಆರಂಭವಾದ ದಸರಾ ಅಚಾರಣೆ, ಕಾಲ ಕ್ರಮೇಣ, ಕಾಲಕ್ಕೆ ತಕ್ಕಂತೆ ರಾಜ್ಯದ ವಿವಿಧ ಕಡೆಗಳಿಗೂ ವಿಸ್ತಾರಗೊಂಡು ಅಲ್ಲಿಯ ಸ್ಥಲೀಯ ದೇವರುಗಳ ಪಲ್ಲಕ್ಕಿಗಳು ಮತ್ತು ಅಲ್ಲಿಯ ಸ್ಥಳೀಯ ರೀತಿ ರಿವಾಜುಗಳಂತೆ ನಡೆದುಕೊಂಡು ಬರುತ್ತಿದ್ದು ಅವುಗಳಲ್ಲಿ ಬೆಂಗಳೂರಿನ ಮುನಿರೆಡ್ಡಿಪಾಳ್ಯದಲ್ಲಿ ನಡೆಯುವ ದಸರಾ ಉತ್ಸವ, ಕೊಡಗಿನಲ್ಲಿ ನಡೆಯುವ ದಸರಾ, ಮಂಗಳೂರಿನ ಶಾರದಾ ಉತ್ಸವಗಳು ಪ್ರಮುಖವಾಗಿವೆ.
ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯಾದ ಮೊದಲ ಎರಡು ದಶಕಗಳಲ್ಲಿ, ಹಕ್ಕ ಬುಕ್ಕರಿಬ್ಬರೂ ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಸಾಕಷ್ಟು ಸಮಯವನ್ನು ಮೀಸಲಾಗಿರಿಸಿದರು. ಹಕ್ಕರಾಯನು ತುಂಗಭದ್ರಾ ನದಿಯ ದಕ್ಷಿಣದ ಹೆಚ್ಚಿನ ಪ್ರದೇಶದ ಮೇಲೆ ಹಿಡಿತ ಸಾಧಿಸಿಸುವ ಮೂಲಕ ಪೂರ್ವಪಶ್ಚಿಮ ಸಮುದ್ರಾಧೀಶವರ ಎಂಬ ಬಿರುದನ್ನು ಗಳಿಸಿದರೆ, 1374ರ ಬುಕ್ಕರಾಯನು ಆರ್ಕಾಟ್‌ನ ಮುಖ್ಯಸ್ಥರು, ಕೊಂಡವೀಡು ರೆಡ್ಡಿಗಳು ಮತ್ತು ಮಧುರೈನ ಸುಲ್ತಾನರನ್ನು ಸೋಲಿಸಿದಲ್ಲದೇ, ಪಶ್ಚಿಮದಲ್ಲಿ ಗೋವಾ ಮತ್ತು ಉತ್ತರದಲ್ಲಿ ತುಂಗಭದ್ರಾ -ಕೃಷ್ಣಾ ನದಿ ದೋವಾಬ್ ಮೇಲೆ ಹಿಡಿತ ಸಾಧಿಸಸುವ ಮೂಲಕ ಉತ್ತರದ ಕಡೆಯಿಂದ ನಿರಂತರವಾಗಿ ಆಕ್ರಮಣ ಮಾಡುತ್ತಿದ್ದ ಮುಸಲ್ಮಾನರನ್ನು ಸಮರ್ಥವಾಗಿ ಎದುರಿಸಿ ಅವರನ್ನು ದಕ್ಷಿಣದ ಕಡೆಗೆ ಬಾರದಂತೆ ತಡೆಗಟ್ಟುವುದ್ರಲ್ಲಿ ಸಾಕಷ್ಟು ಸಫಲರಾದರು ಹಕ್ಕ ಬಕ್ಕುರ ನಂತರ ಬುಕ್ಕರಾಯನ ಎರಡನೆಯ ಮಗ ಹರಿಹರ II, ಕೃಷ್ಣಾ ನದಿಯ ಆಚೆಗಿನ ರಾಜ್ಯವನ್ನು ಮತ್ತಷ್ಟು ಬಲಪಡಿಸಿದರೆ, ನಂತರ ಬಂದ ದೊರೆ, ದೇವರಾಯ I , ಒಡಿಶಾದ ಗಜಪತಿಗಳ ವಿರುದ್ಧ ಯಶಸ್ವಿಯಾದರು.
ಸುಮಾರು ೩೦೦ಕ್ಕೂ ವರ್ಷಗಳೂ ಅಧಿಕಕಾಲ ವಿಜಯನಗರ ಸಾಮ್ರಾಜ್ಯವನ್ನು ಸಂಗಮ ರಾಜವಂಶ, ಸಾಳುವ ರಾಜವಂಶ, ತುಳುವ ರಾಜವಂಶ, ಅರವೀಡು ವಂಶ ಮುಂತಾದ ರಾಜವಂಶಗಳು ಆಳಿದರೂ ಆ ಎಲ್ಲ ರಾಜರುಗಳಲ್ಲಿ ಅತ್ಯಂತ ಪ್ರಖ್ಯಾತಿಯನ್ನು ಪಡೆದವರು ತುಳುವ ರಾಜವಂಶದ ಶ್ರೀ ಕೃಷ್ಣದೇವರಾಯ ಎನ್ನುವುದು ಗಮನಾರ್ಹವಾಗಿದ್ದು, ಅತನ ಕಾಲ ವಿಜಯನಗರ ಸಾಮ್ರಾಜ್ಯದ ಸುವರ್ಣಯುಗ ಎಂದೇ ಕರೆಯಲಾಗುತ್ತದೆ. ಆತನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯ ಉತ್ತುಂಗದ ಸ್ಥಿತಿಯನ್ನು ತಲುಪಿದ್ದಲ್ಲದೇ ಮುತ್ತು ರತ್ನ ವಜ್ರ ವೈಢೂರ್ಯಗಳಂತಹ ಬೆಲೆ ಬಾಳುವ ವಸ್ತುಗಳನ್ನು ಹಂಪೆಯ ರಸ್ತೆಗಳಲ್ಲಿ ಬಳ್ಳ ಬಳ್ಳಗಳಲ್ಲಿ ಮಾರುತ್ತಿದ್ದಂರು ಎಂದು ವಿಡೇಶೀ ಇತಿಹಾಸರಾಗರೇ ಬಣ್ಣಿಸಿದ್ದಾರೆ.
ಇಂತಹ ಕೃಷ್ಣದೇವಾರಾಯರು ಜನವರಿ 17, 1471ರಲ್ಲಿ ಹಂಪೆಯ ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕ ಮತ್ತು ನಾಗಲಾಂಬಿಕೆ ದಂಪತಿಗಳ ಮಗನಾಗಿ ಜನಿಸುತ್ತಾರೆ. ನಾಯಕ ಜನಾಂಗಕ್ಕೆ ಸೇರಿದ ತುಳುವ ನರಸ ನಾಯಕರು ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದ ನಂತರ 1509ರ ಕೃಷ್ಣಜನ್ಮಾಷ್ಟಮಿಯಂದು ಶ್ರೀ ಕೃಷ್ಣದೇವರಾಯರು ಪಟ್ಟಕ್ಕೇರುತ್ತಾರೆ. ಆತ ವಿಜಯನಗರ ಸಾಮ್ರಾಜ್ಯದ ಪಟ್ಟಕ್ಕೇರಿದಾಗ ಅಂದಿನ ರಾಜಕೀಯ ಸ್ಥಿತಿಯು ಬಹಳ ದುಸ್ತಿತಿಯಲ್ಲಿತ್ತು.
ಒರಿಸ್ಸಾದ ದೊರೆಗಳು ನೆಲ್ಲೂರಿನವರೆಗೆ ವಶಪಡಿಸಿಕೊಂಡಿದ್ದರೆ, ಬಿಜಾಪುರದ ಸುಲ್ತಾನರೂ ಸಹಾ ತನ್ನ ರಾಜ್ಯದ ಗಡಿಯನ್ನು ವಿಸ್ತರಿಸಲು ಹೊಂಚು ಹಾಕುತ್ತಿದ್ದರು. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಶ್ರೀ ಕೃಷ್ಣದೇವರಾಯರಿಗೆ ತಂದೆಯ ಸ್ಥಾನದಲ್ಲಿ ನಿಂತು ರಾಯರಿಗೆ ಸಕಲ ರೀತಿಯಲ್ಲೂ ಬೆಳೆಯಲು ಬೆಂಗಾವಲಿನಂತೆ ನಿಂತು ಬೆಳಸಿದ ಕೀರ್ತಿ ಶ್ರೀ ತಿಮ್ಮರಸು ಅವರಿಗೆ ಸಲ್ಲುತ್ತದೆ. ರಾಯರು ಪಟ್ಟವೇರಲು ಕಾರಣೀಭೂತನಾಗಿದ್ದಷ್ಟೇ ಅಲ್ಲದೇ ನಂತರ ಅವರ ಬೆಂಗಾವಲಾಗಿ ರಾಜ್ಯದ ಪ್ರಧಾನಮಂತ್ರಿಯಾಗಿ ಸಮರ್ಥವಾಗಿ ತಿಮ್ಮರಸು ಅವರು ಕಾರ್ಯ ನಿರ್ವಹಿಸಿದ್ದು ಅತ್ಯಂತ ಶ್ಲಾಘನಿಯವಾಗಿದೆ.
ಶ್ರೀಕೃಷ್ಣದೇವರಾಯ ಮೊದಲಿಗೆ ವಿಜಯನಗರದ ವಿರುದ್ಧ ಹೊಂಚುಹಾಕುತ್ತಿದ್ದ ಡೆಕ್ಕನ್ನ ಮುಸ್ಲಿಂ ಆಡಳಿತಗಾರರ ಕಡೆಗೆ ಗಮನ ಹರಿಸಿ, ತನ್ನ ಯೋಜಿತ ಧಾಳಿಯ ಮೂಲಕ, 1512 ರಾಯಚೂರನ್ನು ವಶಪಡಿಸಿಕೊಂಡ ನಂತರ ಭುವನಗಿರಿಯ ವೇಲಮನ ಮೇಲೆ ಆಕ್ರಮಣ ಮಾಡಿ ಗೆದ್ದು, ತನ್ನ ರಾಜ್ಯವನ್ನು ಕೃಷ್ಣಾ ನದಿಯವರೆಗೂ ವಿಸ್ತರಿಸಿ ಕೃಷ್ಣ ಮತ್ತು ತುಂಗಭದ್ರೆಯ ಸಂಪೂರ್ಣ ಪ್ರದೇಶವು ಶ್ರೀ ಕೃಷ್ಣದೇವರಾಯನ ನಿಯಂತ್ರಣಕ್ಕೆ ಒಳಪಟ್ಟಿತು. ತದನಂತರ ಗುಲ್ಬರ್ಗದ ಬಹಮನಿ ಸಾಮ್ರಾಜ್ಯವನ್ನೂ ವಶಪಡಿಸಿಕೊಂಡು ಅಲ್ಲಿಯೇ ಕಾನೂನು ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಮುಹಮ್ಮದ್ ಶಾನನ್ನು ತನ್ನ ಸಾಮಂತನಾಗಿಸಿದ. ನಂತರ ಕಾವೇರಿ ದಡದಲ್ಲಿ ನಡೆದ ಯುದ್ಧದಲ್ಲಿ ಉಮ್ಮತ್ತೂರಿನ ದೊರೆ ವೀರನಂಜರಾಜೇ ಒಡೆಯರ್ (ಗಂಗರಾಜ)ರನ್ನು ಸೋಲಿಸಿದಾಗ, 1512ರಲ್ಲಿ ಗಂಗರಾಜರು ಕಾವೇರಿನದಿಯಲ್ಲಿ ಮುಳುಗಿ ಅಸುನೀಗಿದರು ಹೀಗೆ ಶಿವಸಮುದ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅದನ್ನು ಶ್ರೀರಂಗಪಟ್ಟಣ ಪ್ರಾಂತ್ಯದ ಒಂದು ಭಾಗವನ್ನಾಗಿಸಿದ. 1516-17ಲ್ಲಿ ಶ್ರೀ ಕೃಷ್ಣದೇವರಾಯನ ರಾಜ್ಯದ ಗಡಿಯು ಗೋದಾವರಿ ನದಿಯನ್ನು ದಾಟಿತ್ತು ಎಂದರೆ ಅತನ ವೀರ ಪರಾಕ್ರಮದ ಅರಿವಾಗುತ್ತದೆ.
1512-1518ರ ಮಧ್ಯೆ ಶ್ರೀಕೃಷ್ಣದೇವರಾಯರು ಒಡಿಸ್ಸಾ ದೊರೆಗಳ ವಿರುದ್ಧ ಐದು ಅಭಿಯಾನಗಳ ಕಳಿಂಗ ಯುದ್ಧವನ್ನು ಆರಂಭಿಸಿದರು. ಆ ಸಮಯದಲ್ಲಿ ಸೂರ್ಯ ವಂಶದ ಒಡೆಯರಾಜು ಕ್ಷತ್ರಿಯ ಮನೆತನದ ಗಜಪತಿಗಳ ರಾಜ್ಯ ವಿಶಾಲವಾಗಿದ್ದು ಇಂದಿನ ಆಂಧ್ರ ಮತ್ತು ತೆಲಂಗಾಣ ಪ್ರದೇಶದ ಜೊತೆಗೆ ಸಂಪೂರ್ಣ ಒರಿಸ್ಸಾವನ್ನು ಒಳಗೊಂಡಿತ್ತು. ಕ್ಷತ್ರಿಯ ಗಜಪತಿ ಪ್ರತಾಪ ರುದ್ರದೇವನ ಸ್ವಾಧೀನದಲ್ಲಿದ್ದ ತೆಲಂಗಾಣ ಪ್ರದೇಶದತ್ತ ತನ್ನ ದೃಷ್ಟಿಯನ್ನು ಆ ದೊರೆಗಳು ಆಕ್ರಮಿಸಿಕೊಂಡಿದ್ದ ನೆಲ್ಲೂರು ಜಿಲ್ಲೆಯ ಅಜೇಯ ಕೋಟೆ ಎಂದೇ ಪರಿಗಣಿಸಲಾಗಿದ್ದ ಉದಯಗಿರಿ ಕೋಟೆಯ ಮೇಲೆ 1512ರಲ್ಲಿ ಆಕ್ರಮಣ ಮಾಡಿ ಕೋಟೆಯನ್ನು ಸುಮಾರು ಒಂದು ವರ್ಷದವರೆಗೂ ಮುತ್ತಿಗೆಯನ್ನು ಹಾಕಿದರು. ಕೋಟೆಯಿಂದ ಹೊರಬರಲಾರದೇ, ಗಜಪತಿಯ ಸೈನ್ಯ ಹಸಿವಿನಿಂದ ಶಿಥಿಲವಾಗ ತೊಡಗಿತು. ಒಂದು ವರ್ಷಗಳ ಕಾಲ ಕೋಟೆಗೆ ಲಗ್ಗೆ ಹಾಕಿ ಸುಮ್ಮನೆ ಕೂರಬೇಕಾಗಿ ಬಂದ ವಿಜಯನಗರ ಸೈನ್ಯವೂ ಯುದ್ದದಿಂದ ವಿಮುಖರಾಗ ತೊಡಗಿದಾಗ, ಮಂತ್ರಿ ತಿಮ್ಮರಸು ಕಾವಲಿಲ್ಲದ ಪೂರ್ವದ ದ್ವಾರದ ರಹಸ್ಯ ಒಳದಾರಿಯನ್ನು ಕಂಡು ಹಿಡಿದು ಅದರ ಮೂಲಕ ವಿಜಯನಗರದ ಸೇನೆಯನ್ನು ಕೋಟೆ ಒಳಗೆ ಒಳನುಗ್ಗಿಸಿ ಆ ಕಾಲದ ಅತಿ ಸಮರ್ಥ ಕತ್ತಿ ವರಸೆಗಾರ ಎಂದು ಹೆಸರಾಗಿದ್ದ ಪ್ರತಾಪರುದ್ರದೇವನ ಮಗ, ಯುವರಾಜ ವೀರಭದ್ರನನ್ನು ಸೆರೆಹಿಡಿಯುವ ಮೂಲಕ 1513ರಲ್ಲಿ ಕೋಟೆಯನ್ನು ವಶಪಡಿಸಿಕೊಂಡ ನಂತರ ಮಂತ್ರಿ ತಿಮ್ಮರಸು ಅವರೇ ಕೊಂಡವೀಡು ಪ್ರಾಂತದ ಮಾಂಡಲೀಕನಾಗಿ ನೇಮಕಗೊಳ್ಳುತ್ತಾರೆ.
ಈ ಜಯದಿಂದ ಉತ್ಸುಕನಾಗಿ ಉತ್ಕಲ-ಕಳಿಂಗದ ಮೇಲೆ ನೇರ ಧಾಳಿ ಮಾಡಿ ವಶಪಡಿಸಿಕೊಳ್ಳ ಬೇಕೆಂದು ಹವಣಿಸುತ್ತಿದ್ದ ಕೃಷ್ಣದೇವರಾಯನ ರಣತಂತ್ರಕ್ಕೆ ಪ್ರತಿಯಾಗಿ ಪ್ರತಾಪರುದ್ರ ದೇವನು ಸಹಾ ವಿಜಯನಗರದ ಸೇನೆಯನ್ನು ಹೀನಾಯವಾಗಿ ಸೋಲಿಸುವ ಪ್ರತಿ ಯೋಜನೆ ಹಾಕಿಕೊಂಡ ಪರಿಣಾಮ ಆ ಎರಡೂ ಸೇನೆಗಳು ಕಳಿಂಗಾ ನಗರದಲ್ಲಿ ಪರಸ್ಪರ ಯುದ್ಧ ಮಾಡಬೇಕಾದ ಸಂದರ್ಭ ಎದುರಾಗಿತ್ತು. ಆದರೆ ಈ ಮಾಹಿತಿಯನ್ನು ಪ್ರತಾಪರುದ್ರದೇವನ ಪಕ್ಷ ತ್ಯಜಿಸಿದ ತೆಲುಗು ಭಾಷಿಕನೊಬ್ಬನಿಗೆ ಲಂಚ ಕೊಟ್ಟು ಚಾಣಾಕ್ಷತನದಿಂದ ತಿಮ್ಮರಸು ತಿಳಿದುಕೊಂಡ ಕಾರಣ, ಪ್ರತಾಪರುದ್ರನ ಯೋಜನೆ ಎಲ್ಲವೂ ತಲೆಕೆಳಗಾಗಿ ಕೊನೆಗೂ ಆತ ವಿಜಯನಗರ ಸೇನೆಗೆ ಶರಣಾಗಿ, ತನ್ನ ಮಗಳನ್ನು ಕೃಷ್ಣದೇವರಾಯನಿಗೆ ಮದುವೆ ಮಾಡಿ ಕೊಡುವ ಮೂಲಕ ಸ್ನೇಹ ಸಂಬಂಧವನ್ನು ಬೆಳಸಿ ಕೊಂಡು ಭಾರತದ ಎರಡು ಪ್ರಬಲ ಹಿಂದೂ ಸಾಮ್ರಾಜ್ಯಗಳ ನಡುವೆ ಶಾಂತಿ ಸಾಮರಸ್ಯ ನೆಲೆಸಿ ಸನಾತನ ಧರ್ಮ ಸುರಕ್ಷಿತವಾಗಿದ್ದಲ್ಲದೇ ಮತ್ತಷ್ಟೂ ಪ್ರಜ್ವಲಿಸುವಂತಾಗಿತ್ತದೆ.
ಇವಿಷ್ಟೂ ಕೃಷ್ಣದೇವರಾಯರ ಸಾಮ್ರಾಜ್ಯ ವಿಸ್ತರಣೆಯ ವಿಷಯವಾದರೆ, ತನ್ನ ರಾಜ್ಯದ ಒಳಿತಿಗಾಗಿ ಮತ್ತು ರಕ್ಷಣೆಗಾಗಿ ವಿದೇಶಿಗರೊಂದಿಗೆ ಸ್ನೇಹ ಸಂಬಂಧಗಳನ್ನು ಬೆಳೆಸಿ, 1510 ರಲ್ಲಿ ಗೋವಾದಲ್ಲಿ ಪ್ರಾಭಲ್ಕಯಕ್ಕೆ ಬಂದಿದ್ದ ಪೋರ್ಚುಗೀಸ್ ವ್ಯಾಪಾರಿಗಳಿಂದ ಬಂದೂಕು ಮತ್ತು ಅರಬ್ಬೀ ಕುದುರೆಗಳನ್ನು ಕೊಂಡು ತನ್ನ ಸೇನೆಯನ್ನು ಬಲ ಪಡಿಸಿದ್ದಲ್ಲದೇ, ಪೋರ್ಚುಗೀಸರ ಪರಿಣತಿಯನ್ನು ಉಪಯೋಗಿಸಿಕೊಂಡು ವಿಜಯನಗರ ನಗರಕ್ಕೆ ನೀರು ಸರಬರಾಜು ಯೋಜನೆಯ ಸುಧಾರಣೆನ್ನೂ ತಂದರು.
ಇಷ್ಟೆಲ್ಲಾ ಹೋರಾಟದ ಬದುಕಿನಲ್ಲಿಯೂ ಕೃಷ್ಣದೇವರಾಯರು ಧರ್ಮೋರಕ್ಷತಿ ರಕ್ಷಿತ್ರಃ ಎಂಬ ನಾಣ್ಣುಡಿಯಂತೆ, ತಮ್ಮ ರಾಜ್ಯದಲ್ಲಿ ಹಿಂದೂ ಧರ್ಮ ಉಳಿಬೇಕು ಎಂದಾದರೆ, ಎಲ್ಲಾ ಗ್ರಾಮಗಳಲ್ಲಿಯೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಾದ ದೇವಾಲಯಳಲ್ಲಿ ನಿತ್ಯ ಪೂಜೆ ಪುನಸ್ಕಾರಗಳು ನಡೆಯಬೇಕು, ಜನರು ಆ ದೇವಾಲಗಳಿಗೆ ಹೋಗಿ ಮನಃ ಶಾಂತಿಯನ್ನು ಪಡೆದುಕೊಂಡರೆ, ಮಕ್ಕಳಿಗೆ ಅದು ಕಲಿಕಾಕೇಂದ್ರ ಆಗಬೇಕು ಎಂಬ ಉದ್ದೇಶದಿಂದ, ರಾಯರು ತಮ್ಮ ರಾಜ್ಯ ವಿಸ್ತರಣೆ ಆದ ಕಡೆಗಳಲೆಲ್ಲಾ ಪಾಳು ಬಿದ್ದಿದ್ದ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದ್ದಲ್ಲದೇ, ಲಕ್ಷಾಂತರ ದೇವಾಲಯಗಳಲ್ಲಿ ನಿತ್ಯ ಪೂಜೆ ಪುನಸ್ಕಾರಗಳು ಯಥಾವತ್ತಾಗಿ ನಡೆಯುವಂತಾಗಲು ಧಾರ್ಮಿಕ ದತ್ತಿ ಮತ್ತು ಉಂಬಳಿಗಳನ್ನು ನೀಡಿದ್ದದ್ದು ಅತ್ಯಂತ ಗಮನಾರ್ಹವಾಗಿದೆ.
ಇದೇ ಸಮಯದಲ್ಲಿ ಕೃಷ್ಣದೇವರಾಯನು ಪತ್ನಿಯರಾದ ತಿರುಮಲಾ ದೇವಿ ಮತ್ತು ಚಿನ್ನಮ್ಮ ದೇವಿಯರೊಂದಿಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿದ್ದಲ್ಲದೇ ಸ್ವಾಮಿಗೆ ವಜ್ರಖಚಿತ ಕಿರೀಟಗಳಿಂದ ಹಿಡಿದು ಚಿನ್ನದ ಖಡ್ಗಗಳವರೆಗೆ ಬೆಲೆಬಾಳುವ ಮೌಲ್ಯದ ಹಲವಾರು ವಸ್ತುಗಳನ್ನು ನೀಡಿ ವಿಜೃಂಭಿಸಿದರು. ಇದರ ಕುರುಹಾಗಿಯೇ ಇಂದಿಗೂ ಸಹಾ ತಿಮ್ಮಪ್ಪನ ದೇವಾಲಯದ ಸಂಕೀರ್ಣದಲ್ಲಿ ಕೃಷ್ಣದೇವರಾಯ ಮತ್ತು ಅವರ ಇಬ್ಬರು ಪತ್ನಿಯರೊಂದಿಗೆ ತಿರುವ ಪ್ರತಿಮೆಯನ್ನು ಸ್ಥಾಪಿಸಿ ಗೌರವ ಸಲ್ಲಿಸುತ್ತಿರುವುದು ಗಮನಾರ್ಹ. ಅದೇ ರೀತಿಯಲ್ಲಿ ರಾಜಮಂಡ್ರಿಯನ್ನು ವಶಪಡಿಸಿಕೊಂಡಾಗ, ಶ್ರೀಕೃಷ್ಣದೇವರಾಯರು ಸಿಂಹಾಚಲಕ್ಕೆ ತೆರಳಿ ನರಸಿಂಹ ಸ್ವಾಮಿಗೆ ನಮನ ಸಲ್ಲಿಸಿ ಅಲ್ಲಿಯೂ ದಾನ ಧರ್ಮಗಳನ್ನು ಮಾಡಿದ ನಂತರ ಪೊಟ್ನೂರಿನಲ್ಲಿ ತಮ್ಮ ವಿಜಯಗಳ ಸ್ಮರಣಾರ್ಥ ವಿಜಯದ ಸ್ತಂಭವನ್ನು ಸ್ಥಾಪಿಸಿದರು.
ಶ್ರೀ ಕೃಷ್ಣದೇವರಾಯರು ತಮ್ಮ ಅಗಾಧವಾದ ಶಕ್ತಿ ಸಾಮರ್ಥ್ಯದೊಂದಿಗೆ, ಬಹುಮುಖ ಪ್ರತಿಭೆ, ಸಮರ್ಥ ಆಡಳಿತಗಾರ ಮತ್ತು ಕಲೆ ಮತ್ತು ಸಾಹಿತ್ಯದ ಉದಾರವಾದಿ ಪೋಷಕರಾಗಿ ದಕ್ಷಿಣ ಭಾರತದಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯ ಛಾಪು ಮೂಡಿಸುವ ಮೂಲಕ ದಂತಕಥೆಯಾಗಿದ್ದರು. ಕೃಷ್ನದೇವರಾಯರರ ಕುರಿತು ಇಂದಿಗೂ ಸಹಾ ಮಕ್ಕಳು ಮತ್ತು ಅನಕ್ಷರಸ್ಥ ಗ್ರಾಮಸ್ಥರು ಸಹ ಅವರ ಸಾಹಸಗಳನ್ನು ಲಾವಣಿಗಳ ಮೂಲಕ ನೆನಪಿಸಿಕೊಳ್ಳುವುದಲ್ಲದೇ, ಕರ್ನಾಟಕದ ವಿಜಯನಗರದ ರಾಜನಾಗಿದ್ದರೂ, ಆಂಧ್ರಪ್ರದೇಶದ ನೈಋತ್ಯ ಭಾಗದಲ್ಲಿರುವ ಐದು ಜಿಲ್ಲೆಗಳಾದ ರಾಯಲಸೀಮಾ ಭಾಗವನ್ನು ಇಂದಿಗೂ ಶ್ರೀ ಕೃಷ್ಣದೇವರಾಯನ ಭೂಮಿ ಎಂದೇ ಕರೆಯಲಾಗುತ್ತದೆ.
ಕಲೆ ಮತ್ತು ತೆಲುಗು ಸಾಹಿತ್ಯದ ಪೋಷಕರಾಗಿ ಶ್ರೀಕೃಷ್ಣದೇವರಾಯರು ಅಪ್ರತಿಮರಾಗಿದ್ದರು. ಅವರ ಕಾಲದಲ್ಲಿ ತೆಲುಗು ಸಾಹಿತ್ಯದ ಸುವರ್ಣಯುಗ ಎಂದೇ ನೆನೆಯಲಾಗುತ್ತದೆ. ಅಷ್ಟದಿಗ್ಗಜರೆಂದು ಹೆಸರಾದ ಎಂಟು ಜನ ಸಾಹಿತ್ಯದ ದಿಗ್ಗಜರು ಇವರ ಆಸ್ಥಾನವನ್ನು ಅಲಂಕರಿಸಿದರು. ಅವರಲ್ಲಿ ಮನು ಚರಿತ್ರಮು ಗ್ರಂಥದ ಕರ್ತೃ ಅಲ್ಲಸಾನಿ ಪೆದ್ದಣ ಶ್ರೇಷ್ಠರು. ಅವರನ್ನು ಆಂಧ್ರ ಕವಿತಾ ಪಿತಾಮಹ ಎಂದು ಕರೆಯಲಾಗುತ್ತಿತ್ತು. ವಿಕಟಕವಿ ಮತ್ತು ಅತ್ಯಂತ ಚಾಣಾಕ್ಷ ಮಂತ್ರಿ ಎಂದೇ ಖ್ಯಾತರಾಗಿದ್ದ ತೆನಾಲಿ ರಾಮಕೃಷ್ಣರಿಗೂ ಆಶ್ರಯವನ್ನು ನೀಡಿದ್ದು ಇದೇ ಕೃಷ್ಣದೇವರಾಯರು. ಸ್ವತಃ ಉತ್ತಮ ಕವಿ ಎನಿಸಿಕೊಂಡಿದ್ದ ಕೃಷ್ಣದೇವರಾಯರು ತೆಲುಗು ಭಾಷೆಯಲ್ಲಿ ಕೆಲವು ಕೃತಿಗಳನ್ನು ರಚಿಸಿರುವುದು ಗಮನಾರ್ಹವಾಗಿದೆ.
ಶ್ರೀ ಕೃಷ್ಣದೇವರಾಯರೊಬ್ಬರು ದೂರದೃಷ್ಣಿಯ ಮಹಾನ್ ವ್ಯಕ್ತಿಯಾಗಿದ್ದಲ್ಲದೇ, ಹಿಂದೂ ಧರ್ಮದ ಪರಮ ಸಹಿಷ್ಣುವಾಗಿದ್ದಕ್ಕೆ ಕುರುಹಾಗಿ ಹಜಾರ ರಾಮ ದೇವಸ್ಥಾನ ಅಲ್ಲದೇ, ಹಂಪೆಯ ವಿಠ್ಥಲಸ್ವಾಮಿಯ ದೇವಸ್ಥಾನದ ನಿರ್ಮಾಣದ ಸಂಪೂರ್ಣ ಶ್ರೇಯ ಇವರಿಗೆ ಸಲ್ಲುತ್ತದೆ. ತನ್ನ ತಾಯಿಯ ಗೌರವಾರ್ಥವಾಗಿ ಅವರು ನಾಗಲಾಪುರಂ ಎಂಬ ಹೊಸ ನಗರವನ್ನು ನಿರ್ಮಿಸಿದ್ದರು.
ಇಷ್ಟೆಲ್ಲಾ ಬಲಿಷ್ಠನಾಗಿದ್ದ ಚಕ್ರವರ್ತಿಯ ಕೊನೆಯ ದಿನಗಳು ಸಂತೋಷವಾಗಿರಲಿಲ್ಲ. ತನ್ನ ಉತ್ತರಾಧಿಕಾರಿಯಾಗಿ ತನ್ನ ಚಿಕ್ಕ ಮಗ ತಿರುಮಲದೇವನನ್ನು ನೇಮಿಸಿದ್ದರೆ ಆತ ಅನುಮಾನಾಸ್ಪದವಾಗಿ ನಿಧನರಾದಾಗ. ತನ್ನ ಮಗನ ಸಾವಿಗೆ ತನ್ನ ಪರಮಾಪ್ತರು ಮತ್ತು ತಂದೆಯ ಸಮಾನರದಂತಹ ಮಂತ್ರಿಗಳಾದ ತಿಮ್ಮರಸುವಿನ ಮಗನೇ ಕಾರಣ ಎಂದು ಯಾರೋ ತಿಳಿಸಿದ್ದನ್ನು ಕೇಳಿ ತಿಮ್ಮರಸು ಮತ್ತು ಅವರ ಮಗನನ್ನು ಬಂಧಿಸಿ ಸೆರೆಮನೆಯಲ್ಲಿ ಕೂಡಿ ಹಾಕಿ ಅವರಿಬ್ಬರ ಕಣ್ಣುಗಳನ್ನು ತೆಗೆಸಿದ ನಂತರ ಕೃಷ್ಣದೇವರಾಯನ ಮನಸ್ಸು ವಿಲವಿಲ ಒದ್ದಾಡಿತ್ತು. ಈ ಎಲ್ಲಾ ಘಟನೆಗಳ ನಂತರ ಬಹಳವಾಗಿ ನೊಂದಿದ್ದ ರಾಯರು, ತನ್ನ ಮಲಸಹೋದರ ಅಚ್ಯುತ ದೇವರಾಯನನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸಿ 1529 ರಲ್ಲಿ ಹಂಪೆಯಲ್ಲಿ ನಿಧನರಾಗುವ ಮೂಲಕ ವಿಜಯ ನಗರದ ಅತ್ಯಂತ ಪ್ರಭಲ ದೊರೆಯ ಅಂತ್ಯವಾಯಿತು.
ಶ್ರೀ ಕೃಷ್ಣದೇವರಾಯರು ಗತಿಸಿ ಇಂದಿಗೆ ಐದಾರು ಶತಮಾನಗಳು ಕಳೆದು ಹೋಗಿದ್ದರೂ, ಬಸವಣ್ಣನವರ ವಚನದಲ್ಲಿ ಹೇಳಿರುವಂತೆ ಇವನಾರವ ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ ಎಂದು ಕನ್ನಡಿಗರು, ತೆಲುಗರು, ತುಳುವರು, ತಮಿಳರು, ಒರಿಸ್ಸಾದವರು ಹೀಗೆ ದೇಶದ ಬಹುತೇಕರು ಈತ ನಮ್ಮ ಹೆಮ್ಮೆಯ ರಾಜ ಎಂದು ಹೇಳಿಕೊಂಡು ಸಂಭ್ರಮ ಪಡುತ್ತಿದ್ದಾರೆ ಎಂದರೆ, ಒಬ್ಬನ ಉಪಸ್ಥಿತಿಗಿಂತ ಆತನ ಅನುಪಸ್ಥಿತಿಯಲ್ಲಿಯೂ ಅತನನ್ನು ನೆನಸಿಕೊಳ್ಳುತ್ತಿದ್ದಾರೆ ಆತ ನಿಸ್ಸಂದೇಹವಾಗಿ ಶ್ರೇಷ್ಠನಾಗಿರಲೇ ಬೇಕು, ಶ್ರೀಕೃಷ್ಣದೇವರಾಯರು ಕೇವಲ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಚಕ್ರವರ್ತಿಯಲ್ಲದೇ ಬಹುಶಃ ಈ ಜಗತ್ತು ಕಂಡ ಮಹಾನ್ ಚಕ್ರವರ್ತಿಗಳಲ್ಲಿ ಒಬ್ಬರು ಎಂದರೂ ಅತಿಶಯವಾಗದು.
23 ಜನವರಿ 1565 ರಂದು ನಡೆದ ತಾಳೀಕೋಟೇ ಕದನದಲ್ಲಿ ವಿಜಯನಗರದ ಸಾಮ್ರಾಜ್ಯಕ್ಕೆ ತೀವ್ರ ಹಿನ್ನಡೆ ಪಡೆಯಿತು. ಶ್ರೀ ಕೃಷ್ಣ ದೇವರಾಯರ ಮರಣದ ನಂತರ ಸುಮಾರು 25 ವರ್ಷಗಳ ಕಾಲ ವೈಭವಯುತವಾಗಿ ಆಳಿದ ವಿಜಯ ನಗರದ ಚಕ್ರವರ್ತಿ ಆರವೀಡು (ಅಳಿಯ ಸಂಪ್ರದಾಯ ) ರಾಮರಾಯನ ವಿರುದ್ಧ ದೊಡ್ಡ ಶಕ್ತಿಯೊಂದಿಗೆ ಡೆಕ್ಕನ್ನಿನ ಸುಲ್ತಾನರ ಮುಸ್ಲಿಂ ಒಕ್ಕೂಟದ ಸೈನ್ಯ ಆಕ್ರಂಮಣ ನಡೆಸಿತು. ರಾಮರಾಯನೂ ಅವರ ವಿರುದ್ಧ ಕ್ಷಾತ್ರ ತೇಜದಿಂದಲೇ ಎದುರಿಸಿದರಾದರೂ, ದುರದೃಷ್ಟವಶಾತ್, ಅವನ ಸೇನೆಯಲ್ಲಿದ್ದ ಮುಸ್ಲಿಂ ಸೈನಿಕರು ಮತಾಂಧತೆಯಿಂದ ರಾಜದ್ರೋಹ ಬಗೆದು ಹಿತಶತ್ರುಗಳಾಗಿ ಶತ್ರುಪಾಳ್ಯವನ್ನು ಸೇರಿದ ಪರಿಣಾಮ ಯುದ್ದದಲ್ಲಿ ಸೋತು ಸೆರೆಹಿಡಿಯಲ್ಪಟ್ಟರು. ರಾಮರಾಯವರ ವಿರುದ್ಧ ವಯಕ್ತಿಕ ದ್ವೇಷವನ್ನು ಹೊಂದಿದ್ದ ಅಹ್ಮದ್‌ನಗರದ ಸುಲ್ತಾನನಾದ ಹುಸೇನ್ ನಿಜಾಮ್ ಷಾ, ತನ್ನ ಕತ್ತಿಯಿಂದ ರಾಮರಾಯರ ತಲೆ ಕತ್ತರಿಸಿ ಕೊಲ್ಲುವ ಮೂಲಕ ವಿಜಯನಗರದ ಸಾಮ್ರಾಜ್ಯ ಅವಸಾನದ ಹಾದಿ ಹಿಡಿಯಿತು. ಯುದ್ಧ ಗೆದ್ದ ರಣೋತ್ಸಾಹದಲ್ಲಿ ವಿಜಯನಗರ ಪ್ರವೇಶಿಸಿದ ಮುಸ್ಲಿಂ ಸೈನ್ಯವು ಸುಮಾರು ಐದು ದೀರ್ಘ ತಿಂಗಳುಗಳ ಕಾಲ ಅಲ್ಲಿಯೇ ಉಳಿದಿದ್ದಲ್ಲದೇ. ಆ ಸಮಯದಲ್ಕಿಯೇ ಅಲ್ಲಿದ್ದ ಪ್ರತೀ ಸ್ಮಾರಕ, ಶಿಲ್ಪಗಳು, ಪ್ರತಿಯೊಂದು ಕಟ್ಟಡ, ಪ್ರತಿ ವಿಗ್ರಹವನ್ನು ನಾಶಪಡಿಸಿದರು ಮತ್ತು ಪಟ್ಟಣವನ್ನು ಸುಟ್ಟುಹಾಕುವ ಮೂಲಕ ಕೆಲವೇ ಕೆಲವು ತಿಂಗಳುಗಳ ಹಿಂದೆ ಪರಮ ವೈಭವದಿಂದ ಮೆರೆಯುತ್ತಿದ್ದ ಹಂಪೆ ಹಾಳು ಹಂಪೆಯಾಗಿ ಮಾರ್ಪಾಟಾಯಿತು.
ಈ ರೀತಿಯಾಗಿ ವಿಜಯನಗರದ ಹಿಂದೂ ಸಾಮ್ರಾಜ್ಯದ ವಿರುದ್ಧ ಮುಸ್ಲಿಂ ಸೈನ್ಯದ ಕೋಪ ಮತ್ತು ದ್ವೇಷದಿಂದಾಗಿ ಹಾಳಾದರೂ, ಸಾಮ್ರಾಜ್ಯವು ಸಂಪೂರ್ಣವಾಗಿ ನಾಶವಾಗಲಿಲ್ಲ. ರಾಮರಾಯರ ಸಹೋದರ ತಿರುಮಲ ರಾಯ ಅವರು ಪೆನುಕೊಂಡಕ್ಕೆ ತಪ್ಪಿಸಿಕೊಂಡು ಅಲ್ಲಿ ಅವರು ಸಾಮ್ರಾಜ್ಯವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರು. ಚಕ್ರವರ್ತಿ ಸದಾಶಿವರಾಯಲು ಅವರು ವಿವಾದಾಸ್ಪದವಾಗಿ ಕೊಲೆಯಾಗುವ ಮೂಲಕ ತುಳುವ ರಾಜವಂಶದ ಆಡಳಿತವು ನಿಂತುಹೋಯಿತು ಮತ್ತು ರಾಮರಾಯನ ಆರವೀಡು ರಾಜವಂಶವು ಸಾಮ್ರಾಜ್ಯವನ್ನು ಆಳಿತಾದಾದರೂ, ವಿಜಯನಗರ ಸಾಮ್ರಾಜ್ಯವು ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ, ಚದ್ರಗಿರಿಯಲ್ಲಿನ ವೆಂಕಟಪತಿರಾಯಲು II ಅಂತಹ ಆಡಳಿತಗಾರರು ಸಾಮ್ರಾಜ್ಯವನ್ನು ಬಹಳ ಮಟ್ಟಿಗೆ ಪುನರುಜ್ಜೀವನಗೊಳಿಸಿ.ಅಂತಿಮವಾಗಿ ಸ್ಥಳೀಯ ಅಧೀನ ಆಡಳಿತಗಾರರು ಮಾಡಿದ ದ್ರೋಹದಿಂದಾಗಿ ನಿಧಾನವಾಗಿ ದುರ್ಬಲಗೊಂಡಿತು ಮತ್ತು ಅಂತಿಮವಾಗಿ ಸಾಮ್ರಾಜ್ಯವು 1646 ರಲ್ಲಿ ಇತಿಹಾಸದ ಪುಟಗಳಲ್ಲಿ ಕಣ್ಮರೆಯಾಯಿತು. ವಿಜಯನಗರದ ಕೊನೆಯ ಆಡಳಿತಗಾರ ಶ್ರೀ ರಂಗ III 1659 ರವರೆಗೆ ಬದುಕುಳಿದ್ದರು ಎಂದು ಇತಿಹಾಸಕರರು ತಿಳಿಸುತ್ತಾರೆ.
1336 ರಲ್ಲಿ ಸಂತ ವಿದ್ಯಾರಣ್ಯರ ಆಶೀರ್ವಾದದೊಂದಿಗೆ ಸ್ಥಾಪಿಸಲಾದ ಅದ್ಭುತ ಸಾಮ್ರಾಜ್ಯವು 310 ವರ್ಷಗಳ ಕಾಲ ನಡೆದು ಅಂತಿಮವಾಗಿ 1565 ರಲ್ಲಿ ತಾಳೀಕೋಟಾ ಯುದ್ಧದ ನಂತರ ತನ್ನ ಗತ ವೈಭವವನ್ನು ಕಳೆದುಕೊಂಡಿತು. ವಿದ್ಯಾರಣ್ಯರು ತಮ್ಮ ಎಲ್ಲಾ ವಿದ್ಯೆಯನ್ನೂ ಧಾರೆ ಎರೆದು ಮತ್ತು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು 3600 ವರ್ಷಗಳ ಕಾಲ ಸಾಮ್ರಾಜ್ಯ ಇರಬೇಕೆಂದು ಯೋಜಿಸಿದ್ದರೂ, ವಿಧಿಯಾಟದ ಮುಂದೆ ಅವರ ಯೋಜನೆಗಳು ತಲೆಕೆಳಗಾಗುವ ಮುಖಾಂತರ ಅಡಿಪಾಯದ ನಿಗಧಿತ ಸಮಯಕ್ಕಿಂತಲೂ ಮುಂಚೆಯೇ ನಡೆದು ಹೋಗಿ ಅವರ ಇಚ್ಚೆ ಪೂರ್ಣಗೊಳ್ಳದಾಯಿತು. ಇದರಿಂದ ತಿಳಿದು ಬರುವ ಸತ್ಯವೇನೆಂದರೆ, ಯಾರೇ ಆಗಿರಲಿ ಮತ್ತು ಅವರು ಎಷ್ಟೇ ದೊಡ್ಡವರಗಿದ್ದರೂ, ವಿಧಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಿಶ್ವದಲ್ಲಿ ಶಾಂತಿಧೂತರೆಂದು ತಮ್ಮನ್ನು ತಾವು ಕರೆದುಕೊಳ್ಳುವ ಮುಸಲ್ಮಾನರ ಧಾಳಿಯಿಂದಾಗಿ ವಿಜಯನಗರ ಮತ್ತು ಹಂಪಿ ಈಗ ಹಾಳಾಗಿ ಹೋಗಿದೆ. ಇಡೀ ನಗರದಲ್ಲಿನ, ಸ್ಮಾರಕಗಳು, ದೇವಾಲಯಗಳು ಮತ್ತು ಶಿಲ್ಪಗಳನ್ನು ಹಾಳು ಮಾಡಿರುವುದನ್ನು ನೋಡಿದರೆ ರಕ್ತ ಕುದಿಯುತ್ತದೆ. ತಮ್ಮ ಸಾಮ್ರಾಜ್ಯದ ವಿಸ್ತಾರ ಮತ್ತು ಹಿಂದೂಗಳ ನಂಬಿಕೆ ಮತ್ತು ಅದರ ಪರಂಪರೆಯನ್ನು ನಾಶಪಡಿಸುವುದನ್ನೇ ಏಕೈಕ ಗುರಿಯಾಗಿಟ್ಟು ಕೊಂಡಿದ್ದ ಮತಾಂಧ ಮುಸ್ಲಿಂ ಆಕ್ರಮಣಕಾರರ ಪ್ರತೀಕಾರಕ್ಕೆ ಸ್ಪಷ್ಟ ಪುರಾವೆಯಾಗಿ ಉಳಿದು ಹೋಗಿದೆ. . ಈ ಭೂಮಿಯಿಂದ ಹಿಂದೂ ಧರ್ಮವನ್ನು ನಾಶಮಾಡಲು ಹೊರಟಿದ್ದ ಮುಸ್ಲಿಂ ಆಕ್ರಮಣಕಾರರ ದಬ್ಬಾಳಿಕೆಯ ವಿರುದ್ಧ ಹೋರಾಡಲು ರಾಜಕುಮಾರರನ್ನು ಒಗ್ಗಟ್ಟಿನಿಂದ ನಿಂತು ವಿದ್ಯಾರಣ್ಯರು ಪ್ರೇರೇಪಿಸಿದೇ ಹೋಗದಿದ್ದರೇ, ಸುಮಾರು 300 ವರ್ಷಗಳ ಕಾಲ ಆ ಆಕ್ರಮಣಕಾರರ ವಿರುದ್ಧ ಹೋರಾಟ ನಡಸದೇ ಹೋಗದಿದ್ದರೆ, ಭಾರತವನ್ನು ದಾರ್-ಉಲ್-ಇಸ್ಲಾಂ (ಇಸ್ಲಾಂ ಧರ್ಮದ ಅನುಯಾಯಿಗಳ ಭೂಮಿ) ಆಗಿ ಪರಿವರ್ತಿಸುವ ಮುಸ್ಲಿಂ ಆಡಳಿತಗಾರರ ಉದ್ದೇಶವು ಎಂದೋ ಸಾಕಾರವಾಗಿತ್ತಿತ್ತು ಗುರು ವಿದ್ಯಾರಣ್ಯರು ಹಕ್ಕ ಬುಕ್ಕರ ನೇತೃತ್ವದಲ್ಲಿ ವಿಜಯನಗರ ಸಾಮ್ರಾಜ್ಯ ಕಟ್ಟದಿದ್ದರೇ, ಇಡೀ ದಕ್ಷಿಣ ಭಾರತ ಹಿಂದೂಗಳನ್ನು ನಿಸ್ಸಂದೇಹವಾಗಿ ಬಲವಂತದಿಂದ ಇಸ್ಲಾಂಗೆ ಮತಾಂತರಗೊಳಿಸಿ ಬಿಡುತ್ತಿದ್ದರಲ್ಲಿ ಅನುಮಾನವೇ ಇರಲಿಲ್ಲ.
ಸರಿ ಸುಮಾರು ಕ್ರಿ.ಶ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎನ್ನುವವರು ಮಹಾಬಲೇಶ್ವರ ತಪ್ಪಲಿನಲ್ಲಿ (ಈಗಿನ ಚಾಮುಂಡೀ ಬೆಟ್ಟ) ಸುಮಾರು 30 ಗ್ರಾಮಗಳ ಅಂದಿನ ವಿಜಯನಗರದ ಅಧೀನದಲ್ಲಿರುವ ಒಂದು ರಾಜ್ಯವನ್ನು ಕಟ್ಟಿದರು ಅಲ್ಲಿಂದ ಆಳಿದ ಸುಮಾರು 7 ರಾಜರುಗಳು ಅದನ್ನೇ ಮುಂದುವರಿಸಿಕೊಂಡು ಹೋದರು. 1529ರಲ್ಲಿ ಶ್ರೀ ಕೃಷ್ಣದೇವರಾಯರ ಕಾಲಾವಾದ ನಂತರ ಅವರ ಮುಂದಿನ ಪೀಳಿಗೆಯವರು ಅದೇ ಗತ್ತನ್ನು ಮುಂದುವರಿಸಿ ಕೊಳ್ಳಲಾಗದೇ, ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು ಸ್ವತಂತ್ರ್ಯ ಮೈಸೂರು ಸಂಸ್ಥಾನವನ್ನು ಕಟ್ಟಿದ್ದಲ್ಲದೇ, ವಿಜಯನಗರದಿಂದ ರತ್ನ ಖಚಿತ ಸಿಂಹಾಸವನ್ನೂ ಉಡುಗೊರೆಯ ರೂಪದಲ್ಲಿ ಪಡೆದು ವಿಜಯನಗರದಿಂದ ಮೈಸೂರಿಗೆ ತೆಗೆದುಕೊಂಡು ಹೋಗಿದ್ದಲ್ಲದೇ, ಮುಂದೆ 1610 ರಲ್ಲಿ ಆಳ್ವಿಕೆಯಲ್ಲಿದ್ದ ಒಡೆಯರ್ ಅವರು ಮತ್ತೆ 30 ಗ್ರಾಮಗಳನ್ನು ಗೆದ್ದು ಮೈಸೂರು ಸಂಸ್ಥಾನವನ್ನು 60 ಗ್ರಾಮಗಳ ವರೆಗೆ ವಿಸ್ತರಿಸಿದ್ದರು. ಆಗ ಮೈಸೂರು ಎಂದರೆ ಈಗಿನ ಅರಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವಾಗಿದ್ದು ಉಳಿದ ಕನ್ನೇಗೌಡನ ಕೊಪ್ಪಲು, ಒಂಟೀಕೊಪ್ಪಲು ಮುಂತಾದ ಊರುಗಳಿಂದ ಸುತ್ತುವರಿದಿತ್ತು. ವಿಜಯನಗರಲ್ಲಿ ಬನ್ನಿ ಮಂಟಪಕ್ಕೆ ಮಾತ್ರ ಸೀಮಿತವಾಗಿದ್ದ ದಸರಾ ಹಬ್ಬವನ್ನು 1612ರಲ್ಲಿ ಹತ್ತು ದಿನಗಳ ಕಾಲದ ವೈಭವೋಪೇತ ಆಚರಣೆಗೆ ಈ ಕಾಲದಲ್ಲಿಯೇ ರೂಢಿಗೆ ತರುವ ಮೂಲಕ ವೈಭವೋಪೇತವಾದ ದಸರ ಹಬ್ಬಕ್ಕೆ ಕಾರಣಿಭೂತರಾಗುತ್ತಾರೆ.
ಅದೇ ರೀತಿಯಲ್ಲೇ ವಿಜಯನಗರದ ಸಾಮ್ರಾಜ್ಯದ ಸಾಮಂತರಾಗಿ ಯಲಹಂಕದ ನಾಡಪ್ರಭುಗಳಾಗಿ ಆಡಳಿತ ನಡೆಸುತ್ತಿದ್ದ ಶ್ರೀ ಕೆಂಪನಂಜೇಗೌಡರ ಮಗನಾಗಿದ್ದ ಬಾಲಕ ಕೆಂಪೇಗೌಡರು ಸಣ್ಣ ವಯಸ್ಸಿನಿಂದಲೂ ತಮ್ಮ ತಂದೆಯವರೊಡನೆ ಹಂಪೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದ ದಸರಾ ಸಮಾರಂಭವನ್ನು ನೋಡಲು ಹೋಗುತ್ತಿದ್ದಾಗ ಅಲ್ಲಿ ಮುತ್ತು ಹವಳ ಪಚ್ಚೆ ಗಳನ್ನು ಬಳ್ಳ ಬಳ್ಳಗಳಲ್ಲಿ ರಸ್ತೆಗಳಲ್ಲಿ ಮಾರುತ್ತಿದ್ದ ಪರಿ, ಅಲ್ಲಿನ ಸಂಪ್ರದಾಯ ಶ್ರೀಮಂತಿಕೆ ವೈಭವದ ದಸರಾ, ಆ ಊರಿನ ಅಚ್ಚುಕಟ್ಟುತನ ಎಲ್ಲದರಿಂದ ಆಕರ್ಷಿತರಾಗಿ ತಾನು ಸಹಾ ದೊಡ್ಡವನಾಗಿ ಇಂತಹದ್ದೇ ಒಂದು ಭವ್ಯ ನಗರವೊಂದನ್ನು ಕಟ್ಟುವ ಕನಸನ್ನು ಕಂಡ ಪರಿಣಾಮವಾಗಿಯೇ, ಸುಮಾರು 500 ವರ್ಷಗಳ ಹಿಂದೆ ಅವರು ಕಟ್ಟಿದ ಬೆಂಗಳೂರು ನಗರ ಇಂದು ಆವರ ನಿರೀಕ್ಷೆಗಿಂತಲೂ ಅದೆಷ್ಟೋ ಪಾಲ ಬೆಳೆದು, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು ಎನಿಸಿದೆಯಲ್ಲದೇ, ಭಾರತದ ಸ್ಲಿಲಿಕಾನ್ ವ್ಯಾಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದ್ದು ಹೀಗೆ ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಆರಂಭಕ್ಕೆ ನಾಂದಿ ಹಾಡಿದ ಕೀರ್ತಿ ಪರೋಕ್ಷವಾಗಿ ವಿಜಯನಗರ ಸಾಮ್ರಾಜ್ಯಕ್ಕೇ ಸೇರಿರುವುದು ಗಮನಾರ್ಹವಾದ ಸಂಗತಿಯಾಗಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ




ಅದ್ಭುತವಾದ, ವಿಶೇಷ ಮಾಹಿತಿಯ ಸುಧೀರ್ಘ ಐತಿಹಾಸಿಕ ಪ್ರಜ್ಞೆಯುಳ್ಳ ಲೇಖನ. ಕೃಷ್ಣ ದೇವರಾಯ ಪ್ರಭುವಿನ ಆಳ್ವಿಕೆಯ ವೈಭೋಗದ ವರ್ಣನೆ ವಿಸ್ತಾರ ರೂಪದಲ್ಲಿ ಇರುವುದು ವಿಶೇಷ ಹಾಗು ಅಪರೂಪ. ನನ್ನ ವಿನಯಪೂರ್ವಕ ಆಕ್ಷೇಪವಿಷ್ಟೇ, ಕೃಷ್ಣ ದೇವರಾಯನ ಕಾಲದ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರ, ಕಲಾ ಹಾಗೂ ಸಾಂಸ್ಕೃತಿಕ ಸಾಧನೆಗೈದ ವ್ಯಕ್ತಿಗಳನ್ನು ಉಲ್ಲೇಖಿಸಿದ್ದೀರಿ ಆದರೆ ಕೃಷ್ಣ ದೇವರಾಯ ರಾಜನಾಗುವ ಮೊದಲು ಆಂತರಿಕ ಶತ್ರುಗಳಿಂದ ಜೀವರಕ್ಷಣೆಗೆ ತಿಮ್ಮರಸುವಿನ ಸೂಚನೆಯಂತೆ ರಾಯನಿಗೆ ಆಶ್ರಯ ನೀಡಿದ ಶ್ರೀ ಶ್ರೀ ವ್ಯಾಸರಾಜ ಯತಿಗಳ ಬಗ್ಗೆ ತಿಳಿಸಿಲ್ಲ ಮತ್ತು ರಾಜನಾದ ನಂತರ ಅವನಿಗೊದಗಿದ್ದ ಕ್ರೂರ ಕುಹ ಯೋಗದ ಆಪತ್ತನ್ನು ನಿವಾರಿಸಿದ್ದು ವ್ಯಾಸರಾಜ ಯತಿಗಳೇ. ಇನ್ನು ತತ್ವಜ್ಞಾನ ಸಾರವನ್ನು ಕನ್ನಡಕ್ಕೆ ಭಟ್ಟಿ ಇಳಿಸಿ ನಾಲ್ಕೂ ಮುಕ್ಕಾಲು ಲಕ್ಷಕ್ಕೂ ಅಧಿಕ ದೇವರನಾಮಗಳನ್ನು ರಚಿಸಿ ಕರ್ನಾಟಕ ಸಂಗೀತ ಪಿತಾಮಹ ಎಂದು ಖ್ಯಾತರಾದ ಶ್ರೀ ಪುರಂದರ ದಾಸರ ಪರಿಚಯವಿಲ್ಲ, ಅವರ ಸಮಕಾಲೀನರಾದ ಮತ್ತೊಬ್ಬ ದಾಸಶ್ರೇಷ್ಠ ಕನಕದಾಸರ ಉಲ್ಲೇಖವೂ ಇಲ್ಲ. ಮುಸಲ್ಮಾನರ ದಾಳಿಗಳಲ್ಲಿ ಅತಿ ಹೆಚ್ಚು ನಾಶವಾಗಿರುವುದು ವೈಷ್ಣವ ದೇವಾಲಯಗಳು, ಬಹುತೇಕ ಶೈವ ದೇವಾಲಯಗಳು ಈಗಲೂ ಸುಸ್ಥಿತಿಯಲ್ಲಿ ಇರುವುದು ಕಾಣುತ್ತದೆ. ಇದು ಚರ್ಚೆಗೆ ಗ್ರಾಸವಾದ ವಿಷಯ ಮತ್ತು ವಸ್ತುನಿಷ್ಠವಾಗಿ ವಿಷಯ ತಿಳಿಸುವಾಗ ಔಚಿತ್ಯದ ದೃಷ್ಟಿಯಿಂದ ಹೊರಗಿಡಲು ಕಷ್ಟ. ಇದು ನನ್ನ ಪ್ರಾಮಾಣಿಕ ಅನಿಸಿಕೆ.🙏
LikeLike