ಬಿನ್ನಿ ಪೇಟೆ

ಸಾಮಾನ್ಯವಾಗಿ ಬಹಳಷ್ಟು ಪ್ರದೇಶಗಳ ಹೆಸರಿನ ಹಿಂದೆ ಸಾವಿರಾರು ವರ್ಷಗಳ ಹಿಂದಿನ ಐತಿಹಾಸಿಕ, ಇಲ್ಲವೇ ಪೌರಾಣಿಕ ಹಿನ್ನಲೆ ಇರುತ್ತದೆ. ಆದರೆ ಪ್ರಸ್ತುತವಾಗಿ ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಪ್ರದೇಶ ಎನಿಸಿಕೊಂಡಿರುವ ಬಿನ್ನಿಪೇಟೆಯ ಹೆಸರಿನ ಹಿಂದೆ ಒಂದು ವಿದೇಶಿ ಕಂಪನಿಯ ಇತಿಹಾಸವಿದ್ದು, ಅದರ ಕುರಿತಾದ ರೋಚಕ ವಿವರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.   ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

binny3ಬಸ್ಸು ರೈಲುಗಳ ಮುಖಾಂತರ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಬರುವವವರಿಗೆ ಮೆಜೆಸ್ಟಿಕ್ ಪ್ರದೇಶ ಒಂದು ರೀತಿಯ ಮುಖ್ಯವಾದ ಪ್ರದೇಶ ಎಂದರೂ ತಪ್ಪಾಗದು. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣಕ್ಕೆ ತಾಗಿಕೊಂಡತೇ ಇರುವ ಚಿಕ್ಕಪೇಟೆ, ಚಾಮರಾಜಪೇಟೆ, ಓಕಳಿಪುರಂ, ಮಾಗಡಿ ರಸ್ತೆಯಂತಹ ವಾಣಿಜ್ಯ ಪ್ರದೇಶಗಳಿಂದ ಸುತ್ತುವರೆದಿದ್ದಂತಹ ಬಹುತೇಕ ಮಧ್ಯಮ ಅದರಲ್ಲೂ ಕೆಳ ಮಧ್ಯಮದವರೇ ಹೆಚ್ಚಾಗಿದ್ದಂತಹ ಈ ಪ್ರದೇಶದ ಮಧ್ಯದಲ್ಲಿ 1884ರ ಆಸುಪಾಸಿನಲ್ಲಿ ಬಿನ್ನಿ ಮಿಲ್ಸ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಬೆಂಗಳೂರು ಉಣ್ಣೆ, ಹತ್ತಿ ಮತ್ತು ರೇಷ್ಮೆ ಬಟ್ಟೆಗಳನ್ನು ತಯಾರಿಸುವ ಜವಳಿಯ ಗಿರಣಿ ಆರಂಭವಾದದ್ದೇ ತಡಾ ಅ ಗಿರಣಿ ಸುತ್ತಮುತ್ತಲಿನ ಪ್ರದೇಶದ ಚಿತ್ರಣವೇ ಬದಲಾಗಿ, ಅಲ್ಲಿನ ಸುತ್ತಮುತ್ತಲಿನ ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿ, ಹೈನುಗಾರಿಗೆ, ವ್ಯಾಪಾರ ವಹಿವಾಟುಗಳನ್ನು ಮಾಡುತ್ತಿದ್ದ ಬಹುತೇಕ ಜನರು ತಮ್ಮ ಕುಲಕಸುಬಿನ ಬದಲಾಗೆ ತಮ್ಮ ಭೂಭಾಗದಲ್ಲಿ ಆರಂಭವಾದ ಬಿನ್ನಿ ಮಿಲ್ಲಿನಲ್ಲಿ ತಮ್ಮ ತಮ್ಮ ಅನುಕೂಲ ಮತ್ತು ಅನುಭವವಕ್ಕೆ ತಕ್ಕಂತೆ ಸಿಕ್ಕ ಕೆಲಸಗಳಲ್ಲಿ ತೊಡಗಿಸಿಕೊಂಡ ನಂತರ ನೋಡ ನೋಡುತ್ತಿದ್ದಂತೆಯೇ, ಅಲ್ಲಿನ ಆ ಪ್ರದೇಶದ ನಿಜವಾದ ಹೆಸರೇ ಮಾಯವಾಗಿ ಇಡೀ ಪ್ರದೇಶವೇ ಬಿನ್ನಿ ಪೇಟೆ ಎಂದು ಬದಲಾಗಿ ಹೋದದ್ದೇ ತಿಳಿಯದಂತಾಗಿ ಹೋದದ್ದು ನಿಜಕ್ಕೂ ಅಚ್ಚರಿಯ ಸಂಗತಿಯೇ ಸರಿ.

ವಿಶ್ವವಿಖ್ಯಾತ ಮತ್ತು ವಿಶ್ವಾದ್ಯಂತ ಭಾರೀ ಬೇಡಿಕೆಯಿದ್ದ ಸಾಂಬಾರು ಪದಾರ್ಥಗಳ ವ್ಯಾಪಾರಕ್ಕೆಂದು ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಭಾರತಕ್ಕೆ ಬಂದ ಬ್ರಿಟೀಷರು ವಿಶಾಲವಾದ ಭಾರತವನ್ನು ಒಂದೊಂದಾಗಿ ಆಕ್ರಮಣ ಮಾಡಿಕೊಂಡಿದ್ದಲ್ಲದೇ, ತಮ್ಮ ದೇಶದಲ್ಲಿ ಉತ್ಪನ್ನವಾಗುತ್ತಿದ್ದಂತಹ ವಸ್ತುಗಳನ್ನು ನಮ್ಮ ಮೇಲೆ ಹೇರತೊಡಗಿದರು. ಅದರಲ್ಲೂ ವಿಶೇಷವಾಗಿ ಕೈಕಾರಿಕಾ ಕ್ರಾಂತಿಯ ಪರಿಣಾಮವಾಗಿ ಸಾಂಪ್ರದಾಯಿಕ ಮಗ್ಗಗಳ ಜಾಗದಲ್ಲಿ ಯಂತ್ರೀಕೃತ ಗಿರಣಿಗಳು ಇಂಗ್ಲೇಂಡಿನ ಮ್ಯಾಂಚೆಸ್ಟೆರಿನಲ್ಲಿ ಆರಂಭವಾಗಿ ಹೇರಳವಾದ ಉತ್ಪನ್ನಗೊಂಡ ಬಟ್ಟೆಗಳು ಭಾರತದ ಮೇಲೆ ಹೇರಲ್ಪಟ್ಟ ಕಾರಣ, ನಮ್ಮ ಗುಡಿಕೈಗಾರಿಗೆಗಳು ನಾಶವಾಗಿ ಹೋದವು ಎಂದರೂ ತಪ್ಪಾಗದು.

ಈ ರೀತಿಯಾಗಿ ಅಲ್ಲಿನ ಉತ್ಪನ್ನಗಳನ್ನು ಭಾರತಕ್ಕೆ ತರುವ ಸಲುವಾಗಿ ಜಾನ್ ಬಿನ್ನಿ ಮತ್ತು ಡೆನಿಸನ್ ಎಂಬ ಇಬ್ಬರು ಬ್ರಿಟೀಷ್ ವ್ಯಾಪಾರಿಗಳು ಪಾಲುಗಾರಿಕೆಯಲ್ಲಿ ಬಿನ್ನಿ ಅಂಡ್ ಕೋ ಎಂಬ ಹೆಸರಿನಲ್ಲಿ 1797 ರಲ್ಲಿ ಜನರಲ್, ಕ್ಲಿಯರಿಂಗ್ ಮತ್ತು ಫಾರ್ವರ್ಡ್ ಮಾಡುವ ಏಜೆನ್ಸಿಯೊಂದನ್ನು ಮದ್ರಾಸಿನ ಮೌಂಟ್ ರಸ್ತೆಯಲ್ಲಿದ್ದ ಅಮೀರ್ ಬಾಗ್ ಎಂಬ ಕಟ್ಟಡದಲ್ಲಿ ಆರಂಭಿಸಿದ ನಂತರದ ದಿನಗಳಲ್ಲಿ ಬಿನ್ನಿ ಮತ್ತು ಕೋ ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರಗಳಿಗೂ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿಕೊಂಡಿದ್ದಲ್ಲದೇ, ಹಡಗಿನ ಮೂಲಕ ಇಂಗ್ಲೇಂಡಿನ ಜವಳಿ ಉತ್ಪನ್ನಗಳನ್ನು ತರಿಸಿಕೊಂಡು ಭಾರತದಲ್ಲಿ ವ್ಯಾಪಾರ ಮಾಡಲು ಆರಂಭಿಸಿದರು. ತಮ್ಮ ವ್ಯಾಪಾರಕ್ಕೆ ಅನುಕೂಲವಾಗಲೆಂದೇ ಬ್ರಿಟನ್ನಿನಿಂದಲೇ ಸಿಬ್ಬಂಧಿಗಳನ್ನು ಕರೆಸಿಕೊಂಡಿದ್ದಲ್ಲದೇ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವ ಸಲ್ಲುವಾಗಿ ಸ್ಥಳೀಯವಾಗಿ ಸಾರಿಗೆ ಸಂಸ್ಥೆಯನ್ನೂ ಸ್ಥಾಪಿಸಿಕೊಂಡಿದ್ದಲ್ಲದೇ, 1800 ರಲ್ಲಿ ಕಂಪನಿಯನ್ನು ಬಿನ್ನಿ ಮತ್ತು ಡೆನಿಸನ್ ಎಂದು ಮರುನಾಮಕರಣ ಮಾಡಿಕೊಂಡಿದ್ದರು.

ಜವಳಿ ಉದ್ಯಮಕ್ಕೆ ಅವಶ್ಯವಿದ್ದ ಉತ್ಕೃಷ್ಟ ಮಟ್ಟದ ಕಚ್ಚಾವಸ್ತುಗಳು ಸ್ಥಳೀಯವಾಗಿಯೇ ಅತ್ಯಂತ ಕಡಿಮೆ ಬೆಲೆಯಲ್ಲೇ ಸಿಗುತ್ತಿದ್ದದ್ದನ್ನು ಮನಗಂಡು, 1876 ರಲ್ಲಿ ಬಕಿಂಗ್ಹ್ಯಾಮ್ ಮಿಲ್ಸ್ ಅನ್ನು ಸ್ಥಾಪಿಸಿ ಸ್ಥಳೀಯವಾಗಿ ಜವಳಿ ಉದ್ಯಮವನ್ನು ಆರಂಭಿಸಿದ್ದರು. ಸುಮಾರು 50 ವರ್ಷಗಳ ಕಾಲ ಅಧಿಕಾರದಿಂದ ವಂಚಿತವಾಗಿದ್ದ ಮೈಸೂರು ಸಂಸ್ಥಾನವು 1881ರಲ್ಲಿ ರೆಂಡಿಶನ್ ಆಕ್ಟ್ ನಂತರ ಮತ್ತೊಮ್ಮೆ ಅಧಿಕಾರವನ್ನು ಮರಳಿ ಪಡೆದ ನಂತರ ರಾಜ್ಯದ ಅಭಿವೃದ್ಧಿಗಾಗಿ ಅನೇಕ , ಉದ್ಯಮಗಳಿಗೆ ಆದ್ಯತೆ ನೀಡಲು ಮುಂದಾಗಿ ಅನೇಕ ಉದ್ಯಮಿಗಳಿಗೆ ಕೆಂಪುಹಾಸನ್ನು ಹಾಕಿ ಸ್ವಾಗತಿಸಿದ ಪರಿಣಾಮ, ಬಿನ್ನಿ ಮತ್ತು ಡೆನಿಸನ್ ಕಂಪನಿ 1881 ರಲ್ಲಿ ಕಾರ್ನಾಟಿಕ್ ಮಿಲ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಬೆಂಗಳೂರಿನ ಸುತ್ತಮತ್ತಲೂ ವಿಶ್ವದರ್ಜೆಯ ಕಚ್ಚಾವಸ್ತುಗಳು ದೊರೆಯುತ್ತಿದ್ದ ಕಾರಣ, ರೈಲ್ವೇ ನಿಲ್ದಾಣದ ಸಮೀಪದಲ್ಲೇ, ಮಾಗಡಿ ರಸ್ತೆ ಆರಂಭದಲ್ಲಿ ಸುಮಾರು 16 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ 1884ರಲ್ಲಿ ಅಧಿಕೃತವಾಗಿ ಬೆಂಗಳೂರು ಹತ್ತಿ, ರೇಷ್ಮೆ ಮತ್ತು ಉಣ್ಣೆಯ ಗಿರಣಿಗಳನ್ನು ಅಧಿಕೃತವಾಗಿ ಆರಂಭಿಸಲಾಯಿತು.

binny4ಹೀಗೆ ಆರಂಭಗೊಂಡ ಬಿನ್ನಿ ಮಿಲ್ಲಿನ ಯಶಸ್ಸು 1880 ಮತ್ತು 1890 ರ ದಶಕದ ಆರಂಭದಲ್ಲಿ ಸುಮಾರು 7200 ಕ್ಕೂ ಹೆಚ್ಚು ಕೆಲಸಗಾರರನ್ನು ನೇಮಿಸಿಕೊಂಡು ನಿರೀಕ್ಷೇಗೂ ಮೀರಿ ಹತ್ತು ಹಲವಾರು ಪಟ್ಟು ಬೆಳೆಯಿತು. ಅಂದಿನ ಕಾಲದಲ್ಲೇ ಸುಮಾರು 800 ಯಾಂತ್ರೀಕೃತ ಮಗ್ಗಗಳಿದ್ದ ಕಾರಣ, ಈ ಪರಿಯ ಅಗಾಧವಾದ ಸೌಲಭ್ಯದಲ್ಲಿ ತಯಾರಿಸಲಾದ ಉತ್ತಮ ಗುಣಮಟ್ಟದಲ್ಲಿ ತಯಾರಾದ ಉನ್ನತ ದರ್ಜೆಯ ಹತ್ತಿ ವಸ್ತುಗಳಿಗೆ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಬೇಡಿಕೆ ಇತ್ತು. ನಂತರದ ದಿನಗಳಲ್ಲಿ ಅಂದಿನ ಬ್ರಿಟೀಷ್ ಸೇನೆಯ ಸೈನಿಕರಿಗೆ ಬೆಚ್ಚನೆಯ ಉಣ್ಣೆಯ ಸ್ವೆಟರ್‌ಗಳು, ಪುಲ್‌ಓವರ್‌ಗಳು ಮತ್ತು ಹೊದಿಕೆಗಳನ್ನು ಪೂರೈಸಲು ಆರಂಭಿಸಿದ ನಂತರ ಬಿನ್ನಿ ಮಿಲ್ಲಿನ ಸುತ್ತಮುತ್ತಲಿನ ಪಪ್ದದೇಶ ಬಿನ್ನಿ ಪೇಟೆ ಎಂಬ ಹೆಸರಾಗಿದಲ್ಲದೇ, ಬಿನ್ನಿ ಗಿರಣಿಗೆ ಕೇಂದ್ರೀಕೃತವಾಗಿ ಅದರ ಪ್ರತ್ಯಕ್ಷ ಮತ್ತು ಪರೋಕ್ಶ ಸಿಬ್ಬಂದ್ದಿಗಳ ಅನುಕೂಅಕ್ಕಾಗಿಯೇ ವಸತಿಗಳು ಮತ್ತು ವ್ಯಾಪಾರ ಮಳಿಗೆಗೆಳು ಆರಂಭವಾಗಿ, ಒಂದು ಉಚ್ಛ್ರಾಯ ಸ್ಥಿತಿಯಲ್ಲಿ, ಬಿನ್ನಿ ಮಿಲ್ಸ್ ಪ್ರದೇಶವು TCN ರಾಯನ್ ವೃತ್ತದಿಂದ ಟ್ಯಾಂಕ್ ಬಂಡ್ ರಸ್ತೆಯವರೆಗೆ ವಿಸ್ತರಿಸಿತು. ಗಿರಣಿಯ ಆವರಣದಲ್ಲಿರುವ ಬಿನ್ನಿಸ್ಟನ್ ಗಾರ್ಡನ್ ಹಚ್ಚಹಸಿರಿನ ಹಸಿರುಗಳು, ಎತ್ತರದ ಮರಗಳು ಮತ್ತು ಪ್ರಾಚೀನ ಸರೋವರದ ಕಿರೀಟದ ಆಭರಣವಾಗಿತ್ತು.

22 ಅಕ್ಟೋಬರ್ 1906 ರಲ್ಲಿ ಬಿನ್ನಿ ಕಂಪನಿಯ ಬ್ಯಾಂಕ್ ಬ್ಯಾಂಕ್ ಅರ್ಬುತ್‌ನಾಟ್ ತೀವ್ರದಾದ ನಷ್ಟವನ್ನು ಅನುಭವಿಸಿದ ನಂತರ ಸಂಸ್ಥೆಯು ಆರ್ಥಿಕವಾಗಿ ದುರ್ಬಲತೆಯ ಕಡೆ ವಾಲಿದರೆ, ನಂತರ 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಕಂಪನಿಯ ಮತ್ತು ದುರ್ಬಲಗೊಂಡು. 1960 ರ ದಶಕದಲ್ಲಿ ಮತ್ತೆ ಅವನತಿ ಹೊಂದಲು ಆರಂಭಿಸಿತ್ತಾದರೂ, 1969 ರಲ್ಲಿ ದಿ ಬಕಿಂಗ್ಹ್ಯಾಮ್ ಮತ್ತು ಕರ್ನಾಟಿಕ್ ಕಂಪನಿ ಲಿಮಿಟೆಡ್, ಮದ್ರಾಸ್, ದಿ ಬೆಂಗಳೂರು ವೂಲೆನ್, ಕಾಟನ್ ಮತ್ತು ಸಿಲ್ಕ್ ಮಿಲ್ಸ್ ಕಂಪನಿ ಲಿಮಿಟೆಡ್, ಬೆಂಗಳೂರು, ಮಧುರಾ ಕಂಪನಿ ಪ್ರೈವೇಟ್ ಲಿಮಿಟೆಡ್, ಕೊಚ್ಚಿನ್, ದಿ ಗಂಗಾ ಟ್ರಾನ್ಸ್‌ಪೋರ್ಟ್ ಮತ್ತು ಟ್ರೇಡಿಂಗ್ ಕಂಪನಿ ಲಿಮಿಟೆಡ್‌ ಮುಂತಾದ ಹತ್ತು ಹಲವಾರು ಉಪ ಕಂಪನಿಗಳ ಹೆಸರಿನಲ್ಲಿ ತನ್ನ ಕಾರ್ಯಚಟುಕೆಗಳನ್ನು ವಿಸ್ತರಿಸಿಕೊಳ್ಲಲು ಮುಂದಾಗಿತ್ತಾದರೂ, ಆ ಎಲ್ಲಾ ಪ್ರಯತ್ನಗಲೂ ವಿಫಲವಾದ ಕಾರಣ, 1996 ರಲ್ಲಿ ಬಿನ್ನಿ ಮಿಲ್ ತನ್ನ ಉತ್ಪನ್ನದ ಕಾರ್ಯಾಚರಣೆಯನ್ನು ಶಾಶ್ವತವಾಗಿ ನಿಲ್ಲಿಸಿ, 2001 ರಲ್ಲಿ ಆ ಗಿರಣಿಯ ಭೂಭಾಗ ಖಾಸಗೀ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಮಾರಾಟವಾಗುವ ಮೂಲಕ ಸುಮಾರು ಒಂದು ಶತಮಾನಕ್ಕೂ ಅಧಿಕವಾಗಿ ಉಚ್ಚ್ರಾಯ ಸ್ಥಿತಿಯಲ್ಲಿ ಇಡೀ ಪ್ರದೇಶವನ್ನು ಕಟ್ಟಿ ಬೆಳೆಸಿದ್ದಂತಹ ಸಂಸ್ಥೆ ಅಧಿಕೃತವಾಗಿ ಮುಚ್ಚಿ ಹೋದದ್ದು ನಿಜಕ್ಕೂ ಬೇಸರ ಸಂಗತಿಯಾಗಿದೆ.

binny3ಇತ್ತೀಚಿನ ಕೆಲವು ದಶಕಗಳಿಂದ ಜಾಗತೀಕರಣಕ್ಕೆ ನಮ್ಮ ದೇಶ ತೆರೆದುಕೊಂಡ ಪರಿಣಾಮ ದೇಶಾದ್ಯಂತ ಬದಲಾದ ಆರ್ಥಿಕ ನೀತಿಯ ಪರಿಣಾಮ ಸಾಮಾನ್ಯ ಜನರೂ ಹೆಚ್ಚಿನ ಹಣವನ್ನು ಕಾಣುವಂತಾದಾಗ, ಇದೇ ಬಿನ್ನಿ ಮಿಲ್ಸ್ ಭೂಪ್ರದೇಶದಲ್ಲೇ ರಿಯಲ್ ಎಸ್ಟೇಟ್ ಕಂಪನಿಗಳು ಗಗನ ಚುಂಬಿ ಕಟ್ಟಡಗಳ ವಸತಿ ಸಂಕೀರ್ಣಗಳನ್ನು ನಿರ್ಮಿಸಿದ ನಂತರ ಬಿನ್ನಿ ಪೇಟೆಯ ಸುತ್ತಮುತ್ತಲಿನ ಪ್ರದೇಶದ ರಂಗೇ ಬದಲಾಗಿ ಹೋಗಿದೆ.

eta_mallಅದುವರೆವಿಗೂ ಕೇವಲ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಪ್ರದೇಶವಾಗಿ ಹಲವಾರು ಹೆಸರಾಂತ ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆಗಳನ್ನು ಹೊಂದಿದ್ದಂತಹ ಬಿನ್ನಿಪೇಟೆಯ ಸುತ್ತಮುತ್ತಲ ಪ್ರದೇಶಗಳು ಸದ್ದಿಲ್ಲದೇ ಐಶಾರಾಮಿ ಪ್ರದೇಶವಾಗಿ ಮಾರ್ಪಟ್ಟಿರುವುದಲ್ಲದೇ, ಮೆಟ್ರೋ ನಿಲ್ದಾಣ, ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ಸಿಟಿ ರೈಲ್ವೇ ನಿಲ್ದಾಣಕ್ಕೆ ಅತ್ಯಂತ ಸಮೀಪವಾಗಿರುವ ಕಾರಣ ಅಲ್ಲಿನ ಇಂಚಿಚ್ಚು ಭೂಮಿಗೂ ಚಿನ್ನದಷ್ಟು ಬೆಲೆ ಬಂದಿದೆ. ಅದ್ದಕ್ಕೆ ಪೂರಕವಾಗಿ ಬಿನ್ನಿಪೇಟೆಯ ಹೊಸಕೆರೆ ರಸ್ತೆಯಲ್ಲಿರುವ ಪ್ರಸಿದ್ಧ ಬಾಳೆಹಣ್ಣು ಮಾರುಕಟ್ಟೆಯ ಎದುರಿಗೆ ಕೆಲವರ್ಷಗಳ ಹಿಂದೆ ಮೆಟ್ರೋ ಕ್ಯಾಷ್ & ಕ್ಯಾರಿ, ಇಟಿಎ ಮಾಲ್ ಆರಂಭವಾಗಿ ಆ ಮಾಲಿನಲ್ಲಿರುವ ಸಿನಿಪೋಲೀಸ್ ಮಾಲ್ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರ, ಹತ್ತು ಹಲವಾರು ಮಲ್ಟೀ ಸ್ಪೆಷಾಲಿಟಿ ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು, ರೆಸ್ಟೋರೆಂಟ್‌ಗಳು, ಮನರಂಜನಾ ಕೇಂದ್ರಗಳು ಆರಂಭವಾದ ನಂತರ ಇಡೀ ಬಿನ್ನಿ ಪೇಟೆಯ ಚಿತ್ರಣವೇ ಬದಲಾಗಿ ಹೋಗಿ ಆ ಪ್ರದೇಶವೆಲ್ಲವೂ ಒಂದು ರೀತಿಯ ವಾಣಿಜ್ಯಪ್ರದೇಶವಾಗಿ ಮಾರ್ಪಟ್ಟಿದ್ದು ಅಲ್ಲಿನ ಮಧ್ಯಮವರ್ಗದ ಜನರೆಲ್ಲರೂ ಮಾಯವಾಗಿ ಆಧುನಿಕ ಜೀವನಶೈಲಿಯ ನೂರಾರು ಐಶಾರಾಮೀ ಗಗನ ಚುಂಬಿ ಕಟ್ಟಡಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡಿದ್ದರೂ ಸಹಾ, ಹತ್ತಾರು ದಶಕಗಳಿಂದಲೂ ಅಲ್ಲಿರುವ ಅನೇಕ ಉದ್ಯಾನವನಗಳಿಂದಾಗಿ ಬಿನ್ನಿಪೇಟೆಯ ಹಳೆಯ ಆಕರ್ಷಣೆಯನ್ನು ಇನ್ನೂ ಉಳಿಸಿಕೊಂಡಿರುವುದು ಶ್ಲಾಘನೀಯವಾಗಿದೆ.

somannaಇನ್ನು ಕರ್ನಾಟಕದ ರಾಜಕೀಯದಲ್ಲೂ ಬಿನ್ನಿ ಪೇಟೆ ಬಹಳ ಪ್ರಾಮುಖ್ಯತೆಯನ್ನು ಪಡೆದಿತ್ತು. 1978ರಲ್ಲಿ ಕರ್ನಾಟಕ ವಿಧಾನ ಸಭೆಯ 224 ಕ್ಷೇತ್ರಗಳಲ್ಲಿ ಬಿನ್ನಿಪೇಟೆಯು ಒಂದಾಗಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿತ್ತು. 1978ರಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ I. P. D ಸಾಲಪ್ಪನವರು ಮೊದಲ ಬಾರಿಗೆ ಶಾಸಕರಾಗಿ ವಿಧಾನ ಸಭೆಯನ್ನು ಪ್ರವೇಶಿದರೆ, 1983 ಮತ್ತು 1985ರಲ್ಲಿ ಜನತಾ ಪಕ್ಷದಿಂದ ಜಿ. ನಾರಾಯಣ ಕುಮಾರ್ ಶಾಸಕರಾಗಿ ಆಯ್ಕೆಯಾಗಿದ್ದರು. 1989ರಲ್ಲಿ ನಾಸೀರ್ ಅಹಮದ್ ಕಾಂಗ್ರೇಸ್ ಶಾಸಕರಾಗಿ ಆಯ್ಕೆಯಾಗಿದ್ದು ಬಿಟ್ಟರೆ, 1994,1999 & 2004ರಲ್ಲಿ ಸತತವಾಗಿ ಮೂರು ಬಾರಿ ಸ್ವತ್ರಂತ್ರ ಅಭ್ಯರ್ಥಿ, ಜನತಾದಳ ಮತ್ತು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಶಾಸಕರಾಗಿ ಆಯ್ಕೆಯಾದ ವಿ. ಸೋಮಣ್ಣ, ಬಿನ್ನಿ ಪೇಟೆ ಅಂದರೆ ಸೋಮಣ್ಣ. ಸೋಮಣ್ಣ ಎಂದರೆ ಬಿನ್ನಿಪೇಟೆ ಎಂದು ಅನ್ವರ್ಥವಾಗುವಷ್ಟರ ಮಟ್ಟಿಗೆ ಜನಪ್ರಿಯರಾಗಿ ಹೋಗಿದ್ದರು. 2008ರಲ್ಲಿ ವಿಧಾನ ಸಭಾ ಕ್ಷೇತ್ರಗಳ ಮರುವಿಂಡಣೆ ಆದ ಸಂದರ್ಭದಲ್ಲಿ ಬಿನ್ನಿ ಪೇಟೆ ವಿಧಾನ ಸಭೆಯ ಅಸ್ತಿತ್ವ ಮಾಯವಾಗಿ ಆ ಕ್ಷೇತ್ರ ಗೋವಿಂದರಾಜ ನಗರ ಮತ್ತು ವಿಜಯ ನಗರಕ್ಕೆ ಹಂಚಿ ಹೋದ್ದದ್ದು ಈಗ ಇತಿಹಾಸ.

binny2ಹೀಗೆ ಬಿನ್ನಿ ಮಿಲ್ ಕಟ್ಟಡ 2005ರಲ್ಲಿ ನೆಲಸಮಗೊಂಡರೂ, ಬಿನ್ನಿ ಪೇಟೆ ವಿಧಾನ ಸಭಾ ಕ್ಷೇತ್ರ 2008ರಲ್ಲಿ ಅಕ್ಕ ಪಕ್ಕದ ಕ್ಷೆತ್ರಗಳೊಂದಿಗೆ ಹಂಚಿಹೋದರೂ, ಇಂದಿಗೂ ಹಳೆಯ ತಲೆಮಾರಿನ ಜನರಲ್ಲಿ ಬಿನ್ನಿ ಮಿಲ್ಸ್ ಹತ್ತಿಯ ಬಟ್ಟೆ ಉಣ್ಣೆಯ ಬಟ್ಟೆಗಳು ಅಚ್ಚಳಿಯದೇ ಇದೆ. ಅದೇ ರೀತಿ ರಾಜಾಜಿ ನಗರದಿಂದ  ಮಾಗಡಿ ರಸ್ತೆಯ ಮೆಟ್ರೋ ಸ್ಟೇಷನ್, ಅಂಗಾಳ ಪರಮೇಶ್ವರಿ ದೇವಾಲಯ ದಾಟಿಕೊಂಡು ಇಟಿಎ ಮಾಲ್ ಮುಖಾಂತರ ಚಾಮರಾಜಪೇಟೆಯ ಕಡೆಗೆ ಹೋಗುವಾಗ ಬಿನ್ನಿ ಮಿಲ್ಲಿನ ಪಳಿಯುಳಿಕೆಯ ಕಟ್ಟಡ, ಅದರ ಮುಂದೆಯೇ ಇರುವ ಕಿರಿದಾದ ರೈಲ್ವೇ ಅಂಡರ್ ಪಾಸ್ ಇನ್ನೂ ಹಳೆಯ ಬಿನ್ನಿ ಪೇಟೆಯ ಸೊಗಡನ್ನು ನೆನಪಿಸುವ ಮೂಲಕ ಬಿನ್ನಿ ಪೇಟೆಯ ಗತವೈಭವಕ್ಕೆ ಮನಸ್ಸನ್ನು ಜಾರಿಸುತ್ತದೆ ಎಂದರೂ ಅತಿಶಯವಲ್ಲಾ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment