ಕುಲ ಕುಲ ಕುಲವೆಂದು ಹೊಡೆದಾಡದಿರಿ

WhatsApp Image 2024-03-21 at 14.57.32ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ | ಎಂದು 15ನೇ ಶತಮಾನದಲ್ಲೇ ಈ ನಾಡು ಕಂಡ ಶ್ರೇಷ್ಠ ಹರಿದಾಸ ಸಂತರು ಮತ್ತು ದ್ವೈತ ವೇದಾಂತದ ದಾರ್ಶನಿಕರು ಆಗಿದ್ದ ದಾಸಶ್ರೇಷ್ಠ ಕನಕದಾಸರು ಎಚ್ಚರಿಸಿದ್ದರೂ ಸಹಾ,  ಈ 21ನೇ ಶತಮಾನದಲ್ಲಿಯೂ ಜನರು ಧರ್ಮ, ಜಾತಿ, ಭಾಷೆಯ ಹೆಸರಿನಲ್ಲಿ ಬಡಿದಾಡುತ್ತಿರುವುದು ನಿಜಕ್ಕೂ  ದೌರ್ಭಾಗ್ಯವೇ ಆಗಿದೆ.

IPL_winಭಾರತೀಯ ಕ್ರಿಕೆಟ್ಟಿನಲ್ಲಿ IPL ಆರಂಭವಾದಾಗಿನಿಂದಲೂ, ಮೂರು ಬಾರಿ ಫೈನಲ್ ತಲುಪಿಯೂ ಪ್ರಶಸ್ತಿಯನ್ನು ಗೆಲ್ಲಲಾಗದ RCB ಪುರುಷರ ತಂಡವನ್ನು  ಹಿಂದಿಕ್ಕಿ 2024ರ ಮಾರ್ಚ್ 17ರಂದು RCB ಮಹಿಳೆಯರ ತಂಡ ಪ್ರಶಸ್ತಿಯನ್ನು ಗಳಿಸಿದ ಸಂಗತಿ ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಕ್ರಿಕೆಟ್  ಆಟವು 11 ಜನರ ತಂಡದ ಸಾಂಘೀಕ ಆಟವಾಗಿದ್ದರೂ,  ತಂಡದ ಗೆಲುವಿಗೆ ಒಂದಿಬ್ಬರ ವಯಕ್ತಿಕ ಸಾಧನೆಗಳೂ ಸಹಾ ಸಹಕಾರಿಯಾಗುವ ಕಾರಣ, ಅವರುಗಳನ್ನು ಎತ್ತಿ ಮೆರೆಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಅದೇ ರೀತಿ  ಹೆಸರಿಗೆ ರಾಯಲ್ಸ್ ಚಾಲೆಂಜರ್ ಬೆಂಗಳೂರು ಎಂದಿದ್ದರೂ, ಕನ್ನಡಿಗರೇ ವಿರಳವಾಗಿರುವ RCB ತಂಡದಲ್ಲಿ ಅಪರೂಪ ಎನ್ನುವಂತೆ ಕಳೆದ ವರ್ಷದಿಂದಲೇ ಶ್ರೇಯಾಂಕ ರಾಜೇಶ್ ಪಾಟೀಲ್ ಸಹಾ ಅವಕಾಶ ಪಡೆದು ಅಷ್ಟೇನೂ ಸಾಧನೆ ಮಾಡದೇ  ಇದ್ದಾಗ ಯಾವುದೇ ಸಮಸ್ಯೆ ಇರಲಿಲ್ಲ.

shreyanka5ಈ ಋತುವಿನಲ್ಲಿಯೂ ಆರಂಭಿಕ ಮೂರು ಪಂದ್ಯಗಳಲ್ಲಿ ಆಕೆಯ ಸಾಧನೆ ಹೆಚ್ಚಿನದ್ದೇನೂ ಇಲ್ಲದೇ ಇದ್ದಾಗಲೂ  ಛೇ, ಕನ್ನಡದ ಹುಡುಗಿ ಸಿಕ್ಕ ಅವಕಾಶವನ್ನು ಹಾಳು ಮಾಡಿಕೊಂಡಳಲ್ಲಾ ಎಂದು ಮರುಗಿದರೇ ವಿನಃ ಆಕೆಯ ಜಾತಿ ಯಾವುದು? ಎಂಬ ಸಮಸ್ಯೆ ಕಾಡಲೇ ಇಲ್ಲಾ.  ಗಾಯದಿಂದ ಎರಡು  ಪಂದ್ಯಗಳಿಂದ ಹೊರಗುಳಿದ್ದ ಶ್ರೇಯಾಂಕ ನಂತರದ ಪಂದ್ಯಗಳಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಲ್ಲದೇ, ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ಬೌಲಿಂಗ್ ಮಾಡುವ ಮೂಲಕ, ಟೂರ್ನಿಯಲ್ಲಿ ಅತ್ಯಂತ ಹೆಚ್ಚಿನ(13) ವಿಕೆಟ್ ಪಡೆದು ನೇರಳೇ ಬಣ್ಣದ ಟೋಪಿಯ ಪ್ರಶಸ್ತಿಯ ಜೊತೆಗೆ ಪಂದ್ಯಾವಳಿಯ ಉದಯೋನ್ಮುಖ ಆಟಗಾರ್ತಿ ಎಂಬ ಪ್ರಶಸ್ತಿಗೂ ಪಾತ್ರಳಾಗುತ್ತಿದ್ದಂತೆಯೇ 22ರ ಹರೆಯದ ಮುಗ್ಧ ಹುಡುಗಿಯ ಜಾತಿಯ ಹುಡುಕಾಟ ಆರಂಭವಾಗಿ ಈಕೆ ನಮ್ಮ ಜಾತಿ ಈಕೆ ನಮ್ಮ ಜಾತಿ ಎಂದು ಪರಸ್ಪರ ಕಚ್ಚಾಡುತ್ತಿರುವ ವಿಷಯ ನಿಜಕ್ಕೂ ಬೇಸರ ಸಂಗತಿಯಾಗಿದೆ.

WhatsApp Image 2024-03-21 at 15.03.59ಪಂದ್ಯ ಮುಗಿದು ಇನ್ನೂ 24ಗಂಟೆ ಕಳೆಯುವದರೊಳಗೇ, ಯಾರೋ ಪುಣ್ಯಾತ್ಮರು ಮೂಲತಃ ಕಲ್ಬುರ್ಗಿ ಜಿಲ್ಲೆಯ ಲಿಂಗಾಯಿತ ಹುಡುಗಿ ಶ್ರೇಯಾಂಕ ಪಾಟೀಲ್ ಅಂತರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಸಾಧನೆ ಮಾಡುತ್ತಿದ್ದಾಳೆ ಎಂದರೆ, ಮತ್ತೊಬ್ಬ ಮಹಾತ್ಮರು ಇನ್ನು ಒಂದು ಹೆಜ್ಜೆ ಮುಂದು ಹೋಗಿ, ಆದಿ ಬಣಜಿಗ ಜಾತಿಯ ಹೆಮ್ಮೆಯ ಆಟಗಾರ್ತಿ ಎಂದು  ಆಕೆಯನ್ನು ಮತ್ತು ಆಕೆಯ ಸಾಧನೆಯನ್ನು ಒಂದು ಜಾತಿಗೆ ಸೀಮಿತಗೊಳಿಸುವಂತಹ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದು ನಿಜಕ್ಕೂ ದುಃಖದ ಸಂಗತಿಯಾಗಿದೆ.

ಸನಾತನ ಧರ್ಮದಲ್ಲಿ  ಅವರವರು ಮಾಡುವ ಕೆಲಸಕ್ಕೆ ಅನುಗುಣವಾಗಿ ಜಾರಿಯಲ್ಲಿದ್ದ ವರ್ಣಾಶ್ರಮದ ಪದ್ದತಿ ಕ್ರಮೇಣ ಜಾತಿಗಳಾಗಿ ಪರಿವರ್ತನೆಗೊಂಡು ಅವರು ಮೇಲ್ಜಾತಿಯವರು ಇವರು ಕೀಳ್ಚಾತಿಯವರು ಎಂದು ಪರಸ್ಪರ ಕಿಚ್ಚಾಡುತ್ತಿದ್ದದ್ದನ್ನು ಗಮನಿಸಿಯೇ ಈ ಜಾತಿ ಎಂಬ ಆನಿಷ್ಠ ಪದ್ದತಿಯನ್ನೇ  ಬುಡ ಸಮೇತ ಕಿತ್ತು ಹಾಕಬೇಕು ಎಂದೇ ಬಸವಣ್ಣನವರು ವೀರಶೈವ ಲಿಂಗಾಯಿತ ಧರ್ಮವನ್ನು ಮನ್ನಲೆಗೆ ತರಲು ಬಹಳಷ್ಟು ಶ್ರಮವಹಿಸಿದ್ದರೆ, ಈಗ ಅವರ ಅನುಯಾಯಿಗಳು  ವೀರಶೈವರೇ ಬೇರೆ, ಲಿಂಗಾಯಿತರೇ ಬೇಕೆ ಎಂದು ಪರಸ್ಪರ ಬಡಿದಾಡುತ್ತಿರುವುದಲ್ಲದೇ, ಅದರಲ್ಲೂ ಉಪಜಾತಿ ಒಳ ಪಂಗಡಗಳನ್ನು ಮುಂದಿಟ್ಟುಕೊಂಡು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರೂ, ಸರ್ಕಾರಿ ಮೀಸಲಾತಿಯ ಸೌಲಭ್ಯವನ್ನು ಪಡೆಯುವ ಸಲುವಾಗಿ ಅರಿಷಡ್ವರ್ಗಗಳನ್ನು ತೊರೆದು ಮಠಾಧೀಶರಾಗಿರುವ  ತಮ್ಮ ಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ದಿನಬೆಳಗಾದರೇ, ಬೀದಿಯಲ್ಲಿ ಮೀಸಲಾತಿ ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ.

WhatsApp Image 2024-03-21 at 14.06.12ಇನ್ನು ಬೆಂಗಳೂರಿನ ಅತ್ಯಂತ ಜನಭರಿತ ಪ್ರದೇಶವಾದ ನಗರ್ತಪೇಟೆಯ ಸಿದ್ಧಣ್ಣ ಗಲ್ಲಿಯ ಮಸೀದಿ ರಸ್ತೆಯಲ್ಲಿ 2024ರ ಮಾರ್ಚ್ 19ರಂದು ಮುಖೇಶ್ (26) ಎಂಬ ಉತ್ತರ ಭಾರತೀಯ ಹಿಂದೂ ಯುವಕನ ಕೃಷ್ಣ ಟೆಲಿಕಾಂ ಎಂಬ ಮೊಬೈಲ್ ಬಿಡಿ ಭಾಗಗಳ ಅಂಗಡಿಯೊಂದರಲ್ಲಿ ತನ್ನ ಪಾಡಿಗೆ ತಾನು  ಹನುಮಾನ್ ಚಾಲೀಸಾ ಆಡಿಯೋ (ಮಂತ್ರಿಗಳಾದ ದಿನೇಶ್ ಗುಂಡೂರಾವ್ ಅವರ ಪ್ರಕಾರ ದೇವರ ನಾಮ) ಹಾಕಿಕೊಂಡಿದ್ದನ್ನೇ ಮುಂದು ಮಾಡಿಕೊಂಡು ಬಂದ ಕೆಲ ಮುಸ್ಲಿಮ್ ಯುವಕರ ಗುಂಪು, ಮಸೀದಿಯಲ್ಲಿ ಅಜಾನ್ ಕೂಗುತ್ತಿರುವ ವೇಳೆಯಲ್ಲಿ ನಿನ್ನ ಅಂಗಡಿಯಲ್ಲಿ ಹನುಮಾನ್ ಚಾಲೀಸ್ ಹಾಕುವಷ್ಟು ಸೊಕ್ಕೇ ? ಎಂದು ಹೇಳುತ್ತಾ,  ಅಂಗಡಿ ಮಾಲಿಕರಾದ ಶ್ರೀ ಮುಖೇಶ್ ಅವರ ಮೇಲೆ ಏಕಾಏಕಿ ಹಲ್ಲೆ ಮಾಡಿ ಅತನನ್ನು ಅಂಗಡಿಯಿಂದ ಹೊರೆಗೆಳೆದು ಮನಸೋ ಇಚ್ಚೆ ಥಳಿಸಿರುವುದಲ್ಲದೇ, ಉಗುರುಗಳಿಂದ ಮುಖ ಪರಚಿ, ಕಾಲಿನಲ್ಲಿ ಆತನನ್ನು ಒದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

WhatsApp Image 2024-03-21 at 14.06.40ಪ್ರಸ್ತುತ ಈ ಘಟನೆ ಹಲಸೂರು ಪೋಲೀಸ್ ಠಾಣೆಯ ಮೆಟ್ಟಿಲು ಹತ್ತಿ, ಪೋಲೀಸರು ಕೆಲವು  ಆರೋಪಿಗಳನ್ನು ಬಂಧಿಸಿದ್ದಾರೆ ಎಂಬ ಮಾಹಿತಿಯು ತಿಳಿದು ಬಂದಿದೆ. ಚುನಾವಣೆಯ ಸಂಧರ್ಭದಲ್ಲಿ  ಈ ಪ್ರಕರಣ ರಾಜಕೀಯಕ್ಕೆ ತಿರುಗಿ, ಬಿಜೆಪಿಯ ಮೂವರು ಸಂಸದರು ಅಂಗಡಿ ಮಾಲೀಕನನ್ನು ಭೇಟಿ ಮಾಡಿ ಸಾಂತ್ವನ ತಿಳಿಸಿದ್ದಲ್ಲದೇ, ಘಟನೆ ನಡೆದ ಮಾರನೆಯ ದಿನ ಅವನ ಅಂಗಡಿಯ ಮುಂಭಾಗದಲ್ಲೇ ಸಾವಿರಾರು ಜನರು  ಹನುಮಾನ್ ಚಾಲೀಸ್ ಪಠಣ ಮಾಡುವ ಮೂಲಕ ಪುಂಡರಿಗೆ ಸಡ್ಡು ಹೊಡೆದಿದ್ದಾರೆ.

ಸ್ವಾತ್ರಂತ್ರ್ಯಾನಂತರ ಈ ದೇಶ ಧರ್ಮಾಧಾರಿತವಾಗಿ ವಿಭಜನೆ ಹೊಂದಿದ್ದರೂ,  ಭಾರತದ ಸಂವಿಧಾನದ ಕರ್ತೃ ಶ್ರೀ ಅಂಬೇಡ್ಕರ್ ಅವರ ಎಚ್ಚರಿಕೆಯ ನಂತರವೂ ಕೆಲವು ಪ್ರಭಾವೀ ರಾಷ್ಟ್ರೀಯ ನಾಯಕರುಗಳ ಅಧಿಕಾರ ದಾಹ ಮತ್ತು ದೂರದೃಷ್ಟಿ ತನದ ಕೊರತೆಯಿಂದಾಗಿ  ಅಲ್ಪ ಸಂಖ್ಯಾತರ ವಿಪರೀತ ತುಷ್ಟೀಕರಣದಿಂದಲೇ ಈ ರೀತಿಯ ಅಹಿತಕರ ಘಟನೆಗಳು ಮತ್ತು ಕೋಮು ಘರ್ಷಣೆಗಳು ನಡೆಯುತ್ತಿವೆ. ಸಂವಿಧಾನದ ಅನುಚ್ಛೇದ 25ನೇ ವಿಧಿಯು ದೇಶದ ಎಲ್ಲಾ ನಾಗರಿಕರಿಗೂ ಅವರವರ ಧರ್ಮವನ್ನು ಪ್ರತಿಪಾದಿಸುವ, ಅಭ್ಯಾಸ ಮಾಡುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆಯಾದರೂ, ಅವುಗಳೆಲ್ಲವೂ ವಯಕ್ತಿಯ ಮಟ್ಟದಲ್ಲಿದ್ದು, ಆ ಧಾರ್ಮಿಕ ಸ್ವಾತ್ರಂತ್ರವು ಮತ್ತೊಬ್ಬ ವ್ಯಕ್ತಿಯ ಸ್ವಾತಂತ್ರ್ಯಗಳು ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಮತ್ತು ನೈತಿಕತೆಗೆ ಒಳಪಟ್ಟಿರುತ್ತವೆ. ಹೇಗೆ ಮುಸಲ್ಮಾನರಿಗೆ ಅಜಾನ್ ಕೂಗುವುದು ತಮ್ಮ ಧಾರ್ಮಿಕ ಸ್ವಾತ್ರಂತ್ರ್ಯವೋ ಹಾಗೆಯೇ ಹಿಂದೂಗಳಿಗೆ ತಮ್ಮ ಧರ್ಮದ ಭಕ್ತಿಗೀತೆಗಳು ಅಥವಾ ಶ್ಲೋಕಗಳನ್ನು ಕೇಳುವ ಹಕ್ಕಿದೆ  ಎನ್ನುವುದು ಹಿಂದೂ ಪರ ಸಂಘಟನೆಗಳ ವಾದವಾಗಿದ್ದು, ಸಂವಿಧಾನಾತ್ಮಕವಾಗಿ ಅದು ಅವರ ಹಕ್ಕಾಗಿದೆ.

ನಿಜ ಹೇಳಬೇಕೆಂದರೆ, ಈ ದೇಶದ ಸಾಮಾನ್ಯ ಜನರಿಗೆ ಮಾಡಲು ಕೆಲಸ, ತಿನ್ನಲು ಮೂರು ಹೊತ್ತು ಊಟ/ತಿಂಡಿ, ಮಾನ ಮುಚ್ಚಿಕೊಳ್ಳಲು ಸೂಕ್ತವಾದ ಬಟ್ಟೆ ಮತ್ತು ನೆಮ್ಮದಿಯಾಗಿ ನಿದ್ದೆ ಮಾಡಲು ಒಂದು ಸೂರು ಸಿಕ್ಕರೆ ಸಾಕು ಎನ್ನುವಂತಹ ಪರಿಸ್ಥಿತಿ ಇದ್ದು, ಜಾತಿ, ಧರ್ಮ, ಭಾಷೆ ಎನ್ನುವುದು ನಂತರದ ಯೋಜನೆಯಾಗಿದೆ. ಸಾವಿರಾರು ವರ್ಷಗಳ ಹಿಂದಿದ್ದ ವರ್ಣಾಶ್ರಮದ ಪದ್ದತಿಯೇ ಮುಂದೆ ಜಾತಿ ಪದ್ದತಿಗಳಾಗಿದ್ದನ್ನೇ  ಮುಂದಿಟ್ಟುಕೊಂಡ ಬ್ರಿಟೀಷರು ಭಾರತೀಯರ ಒಗ್ಗಟ್ಟನ್ನು ಒಡೆಯುವ ಸಲುವಾಗಿ,  ಬಿತ್ತಿದ  ಜಾತಿ ಎಂಬ ವಿಷ ಬೀಜವನ್ನು ಸ್ವಾತ್ರಂತ್ರ್ಯ ಬಂದು ೭೫ಕ್ಕೂ ಹೆಚ್ಚು ವರ್ಷಗಳು ಕಳೆದರೂ, ಕೆಲವು ಪಟ್ಟ ಭಧ್ರ ಹಿತಾಸಕ್ತಿಯ ಜನರು ತಮ್ಮ ರಾಜಕೀಯ ಲಾಭಗಳಿಗೆ ಜನರನ್ನು ಎತ್ತಿ ಕಟ್ಟಿ ಅವರಿಗೆ ಪತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಪರಿಣಾಮವೇ, ಪ್ರತಿಯೊಂದರಲ್ಲೂ ಜಾತಿಯನ್ನು ಮುಂದಿಟ್ಟುಕೊಂಡು ಹೋಗುವಂತಹ ದುಸ್ಥಿತಿ ನಮ್ಮ ದೇಶದಲ್ಲಿದೆ.

ಇದೆಲ್ಲವನ್ನೂ ಸಂಪೂರ್ಣವಾಗಿ ಅರಿತಿದ್ದ ಅಂಬೇಡ್ಕರ್ ಅವರು, ಭಾರತದಲ್ಲಿರುವ ಸಂಪೂರ್ಣ ಮುಸಲ್ಮಾನರು ಪಾಕೀಸ್ಥಾನಕ್ಕೆ ತೆರಳಲಿ ಮತ್ತು ಅಂದಿನ ಪೂರ್ವ ಮತ್ತು ಪಶ್ಚಿಮ ಪಾಕೀಸ್ಥಾನದಲ್ಲಿರುವ ಎಲ್ಲಾ ಹಿಂದೂಗಳೂ ಭಾರತಕ್ಕೆ ಹಿಂದಿರುಗಲಿ, ಅದೇ ರೀತಿ  ಸಾವಿರಾರು ವರ್ಷಗಳಿಂದ ತುಳಿತಕ್ಕೆ ಒಳಗಾದವರನ್ನು ಸಮಾಜದ ಮುನ್ನಲೆಗೆ ತರುವಂತಾಗಲು  ಕೇವಲ 10 ವರ್ಷಗಳ ಕಾಲ ವಿಶೇಷ ಮೀಸಲಾತಿ ಪದ್ದತಿಯನ್ನು ಜಾರಿಗೆ ತಂದರು. ಆದರೆ ಅಧಿಕಾರದಾಹಿ ಭಾರತೀಯ ರಾಜಕಾರಣಿಗಳು, ಅವರ  ಓಟ್ ಬ್ಯಾಂಕಿಗಾಗಿ ಅಂಬೇಡ್ಕರ್ ಅವರ ಅಭಿಲಾಷೆಯನ್ನೇ ಧಿಕ್ಕರಿಸಿ ಮುಸಲ್ಮಾನರನ್ನು ಈ ದೇಶದಲ್ಲೇ ಉಳಿಸಿಕೊಂಡು ಅವರಿಗೆ ಅಲ್ಪಸಂಖ್ಯಾತರು ಎಂದು  ವಿಶೇಷ ಸೌಲಭ್ಯಗಳನ್ನು ಕೊಟ್ಟಿದ್ದಲ್ಲದೇ, ಮೀಸಲಾತಿ ಪದ್ದತಿಯನ್ನು ಇಂದಿಗೂ ಸಹಾ ಮುಂದುವರಿಸಿಕೊಂಡು ಹೋಗಿದ್ದಲ್ಲದೇ, ಶಿಕ್ಷಣ, ಉದ್ಯೋಗ,  ಉದ್ಯೋಗದಲ್ಲಿ ಭಡ್ತಿ, ಕಡೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡುವುದಕ್ಕೂ ಜಾತಿಯನ್ನೇ ಮಾನ ದಂಡವನ್ನಾಗಿಸಿಕೊಂಡಿರುವ ಪರಿಣಾಮ ಸಂವಿಧಾನದಲ್ಲಿ ಅನಗತ್ಯವಾಗಿ ಹೇರಿದ ಜಾತ್ಯಾತೀತ ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗಿ ಹೋಗಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

WhatsApp Image 2024-03-21 at 06.30.39ಇನ್ನು ಮದ್ರಾಸ್ ಮ್ಯೂಸಿಕ್ ಅಕಾಡೆಮಿಯು ಪ್ರತೀ  ವರ್ಷ ನಡೆಸುವ ತನ್ನ ವಾರ್ಷಿಕೋತ್ಸವದಲ್ಲಿ ಈ ಬಾರಿ 2024ರ ಡಿಸೆಂಬರ್ ನಲ್ಲಿ ನಡೆಯುತ್ತಿದ್ದು ಆ ಸಮ್ಮೇಳನದ ಅಧ್ಯಕ್ಷರನ್ನಾಗಿ ಪೆರಿಯಾರ್ ಚಿಂತನೆಯಿಂದ ಪ್ರೇರೇಪಿತವಾಗಿ ಸಹಾಕಾಲವೂ  ಸನಾತನ ಧರ್ಮ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದ ಬಗ್ಗೆ ಅನಗತ್ಯವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿರುವ ಸಂಗೀತಕಾರ ಟಿ ಎನ್ ಕೃಷ್ಣ ಅವರನ್ನು  ಆಯ್ಕೆ ಮಾಡಿರುವುದಕ್ಕೆ ಈಗಾಗಲೇ ಹಲವಾರು ವಿರೋಧಗಳು ಮತ್ತು ಆಕ್ಷೇಪಣೆ ಬರುತ್ತಿದ್ದು. ಕರ್ನಾಟಕ ಸಂಗೀತದ ಪ್ರಸಿದ್ಧ ಸಂಗೀತಗಾರ್ತಿಯರಾದ ಶ್ರೀಮತಿ ರಂಜನಿ ಮತ್ತು ಗಾಯತ್ರಿಯವರು, ಕೃಷ್ಣಾರವರ ಅಧ್ಯಕ್ಷತೆಯಲ್ಲಿ ತಾವುಗಳು ಭಾಗವಹಿಸುವುದಿಲ್ಲ ಎಂದು ಬಹಿರಂಗ ಹೇಳಿಕೆಯನ್ನು ನೀಡಿರುವುದಲ್ಲದೇ, ಆ ಸಮ್ಮೇಳನದಲ್ಲಿ ಈಗಾಗಲೇ  ಡಿಸೆಂಬರ್ 25ರಂದು ನಿಗದಿಯಾಗಿದ್ದ ತಮ್ಮ ಸಂಗೀತ ಕಾರ್ಯಕ್ರಮವನ್ನು ತಿರಸ್ಕರಿಸಿದ್ದಾರೆ.

ಶತಶತಮಾನಗಳಿಂದಲೂ ಇರುವ ಸನಾತನ ಧರ್ಮವನ್ನು ಆವಹೇಳನ ಮಾಡಲು ಬ್ರಿಟೀಷರು  ಆರ್ಯರು ಮತ್ತು ದ್ರಾವಿಡರು ಎಂದು ಕಟ್ಟಿದ ಕಾಗಕ್ಕಾ ಗುಬ್ಬಕ್ಕ ಕಥೆಯನ್ನೇ ನಂಬಿಕೊಂಡ ಹಲವು ತಮಿಳುನಾಡಿನ ಸ್ವಯಂಘೋಷಿತ ಬುದ್ದಿ ಜೀವಿಗಳು ಮತ್ತು ಕುಟುಂಬ ರಾಜಕಾರಣಿಗಳು ಸನಾತನ ಧರ್ಮ,  ಅದರ ಆಚಾರ ವಿಚಾರಗಳಷ್ಟೇ ಅಲ್ಲದೇ, ಯಾರನ್ನೋ ಮೆಚ್ಚಿಸುವ ಸಲುವಾಗಿ ಶತಮಾನಗಳಿಂದಲೂ ಪ್ರಚಲಿತದಲ್ಲಿರುವ  ಕರ್ನಾಟಕ ಸಂಗೀತದ ದಿವ್ಯ ಪರಂಪರೆಯ ಕುರಿತಾಗಿ ಅತ್ಯಂತ ಕೆಟ್ಟದಾಗಿ ಮಾತನಾಡುತ್ತಾ  ಟಿ ಎನ್ ಕೃಷ್ಣ ಅವರು ಹಲವು ವರ್ಷಗಳಿಂದ  ವಿವಾದಾತ್ಮಕ ವ್ಯಕ್ತಿಯಾಗಿದ್ದು, ಅಂತಹವರಿಗೇ ಸಮ್ಮೇಳದ ಅಧ್ಯಕ್ಷ ಪದವಿಯನ್ನು ನೀಡುವ ಮೂಲಕ ತಮಿಳುನಾಡಿನ ಧರ್ಮ/ದೇಶವಿರೋಧಿ ಸರ್ಕಾರ, ಸಂಗೀತ ಪ್ರಿಯರಲ್ಲಿ ಅನಗತ್ಯವಾಗಿ ಅಸಮಾಧಾನ ಮತ್ತು ಉದ್ವಿಘ್ನತೆಯನ್ನು ಉಂಟು ಮಾಡುವ ಮೂಲಕ ಬೇಲಿಯೇ ಎದ್ದು ಹೊಲ ಮೇಯ್ಡಂತಾಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.

WhatsApp Image 2024-03-21 at 12.43.19ಧರ್ಮ ಮತ್ತು ಜಾತಿ ಎನ್ನುವುದು ನಮ್ಮ ನಮ್ಮ ಮನೆಗಳ ನಾಲ್ಕು ಗೋಡೆಗಳ ಮಧ್ಯೆ ಮಾತ್ರವೇ ಸೀಮಿತವಾಗಿದ್ದು, ಮನೆಯಿಂದ ಹೊರಗೆ ಬಂದ ತಕ್ಷಣ, ನಮ್ಮ ರಾಜ್ಯ, ನಮ್ಮ ದೇಶ ಮತ್ತು ನಮ್ಮ ಸಂವಿಧಾನಕ್ಕೆ ಬದ್ಧರಾಗಿರಬೇಕು.  ವಯಕ್ತಿಯವಾಗಿ ಹೇಳಬೇಕೆಂದರೆ ನಾನೊಬ್ಬ ಕನ್ನಡಿಗ ಮಾತ್ತು ಭಾರತೀಯ ಎಂದಾಗಬೇಕಷ್ಟೇ.  IPL ನಲ್ಲಿ ಸಾಧನೆ ಮಾಡುವ ಮುನ್ನಾ ಮತ್ತು ಮಾಡಿದ ನಂತರವೂ ಸಮಾಜದ ಮುಂದೆ ಶ್ರೇಯಾಂಕ ಪಾಟೀಲ್ ಕನ್ನಡತಿ ಮತ್ತು ಭಾರತೀಯಳೇ ಆಗಿರುತ್ತಾಳೆ ಮತ್ತು ಆಕೆಯ ಕುಟುಂಬದ ವಿಷಯ ಬಂದಾಗ, ಆಕೆಯ ವಯಕ್ತಿಯ ನಿಲುವುಗಳಿಗೆ ಬದ್ಧಳಾಗಿರುತ್ತಾಳೆ, ಅಕೆ ಗೆದ್ದಾಗ ಜಾತಿಯನ್ನು ನೋಡುವವರು, ಆಕೆ ಸೋತಾಗ ಅದನ್ನೇಕೆ ನೋಡುವುದಿಲ್ಲಾ? ಎನ್ನುವುದನ್ನೂ ಸಹಾ ಪ್ರಶ್ನಿಸಲೇ ಬೇಕಿದೆ.

ಅದೇ ರೀತಿ, ಬಹುಸಂಖ್ಯಾತ ಹಿಂದೂಗಳ ಆಶೋತ್ತರಗಳ ವಿರುದ್ಧವಾಗಿ ಸಾರ್ವಜನಿಕವಾಗಿ ದೊಡ್ಡ ದೊಡ್ಡ ಮೈಕ್ ಗಳ ಮೂಲಕ ಪ್ರತಿದಿನ 5 ಬಾರಿ ಮುಸಲ್ಮಾನರು ಕೂಗುವ ಆಜಾನ್ ಶಬ್ಧ ಕಡಿಮೆ ಮಾಡಿಕೊಳ್ಳಿ ಎಂದು ಸಾಂವಿಧಾನಿಕವಾಗಿ ವಿನಂತಿ ಮಾಡಿಕೊಂಡಿರುವ ಉದಾಹರಣೆಗಳು ಉಂಟೇ ವಿನಃ ಈ ಪರಿಯಾಗಿ, ಅವರ ಅಂಗಡಿಗಳಲ್ಲಿ ಪೂಜೆ ಪುನಸ್ಕಾರ ಮಾಡಿಕೊಂಡು ಅಂಗಡಿ ಮುಗ್ಗಟ್ಟುಗಳಲ್ಲಿ ದೇವರ ಭಜನೆ ಹಾಕಿಕೊಂಡಿದ್ದಕ್ಕೆ ಬಡಿದ ಉದಾಹರಣೆ ಇಲ್ಲಾ.

ಸನಾತನ ಧರ್ಮದ ಆಚಾರ ವಿಚಾರಗಳ ಬಗ್ಗೆ ಆಡಿಕೊಳ್ಳುವಂತಹ ಅಂದಿನ ಚಾರ್ವಕರೇ ಇಂದಿನ ಜಗತ್ತಿನಲ್ಲಿ  ಪೆರಿಯಾರ್, ಕಮ್ಯೂನಿಷ್ಟರು ಮತ್ತು ನವ ಬೌದ್ಧರ ರೂಪದಲ್ಲಿ ಜನ್ಮ ಎತ್ತಿದ್ದಾರೆ ಎಂದು ಸುಮ್ಮನಾಗಿದ್ದರೇ ಹೊರತು, ಅವರ ವಿರುದ್ಧ ಬೀದಿ ಬೀದಿಗಳಲ್ಲಿ ದೇವಾಲಯಗಳ ಗೋಡೆಗಳ ಮೇಲೆ ಅವಹೇಳನಕಾರಿಯಾಗಿ ಬರೆದ ಉದಾರಣೆಯೇ ಇಲ್ಲಾ.

WhatsApp Image 2024-03-21 at 14.59.01ಯಾವುದೇ ಧರ್ಮ,ಜಾತಿ, ಭಾಷೆ ಬಣ್ಣ ರಾಜ್ಯದವರೇ ಆಗಲಿ  ಅವರು ಮೊದಲು ಭಾರತೀಯರು ಎಂಬುದನ್ನು  ಅರಿತು ಸೌಹಾರ್ಧತೆಯಿಂದ ನಮ್ಮ ದೇಶದಲ್ಲಿ ಬಾಳದೇ ಹೋದಲ್ಲಿ, ಮತ್ತೆ ಈ ದೇಶ ಗುಲಾಮೀತನಕ್ಕೆ ಹೋಗುವ ಸಮಯ ದೂರವಿಲ್ಲ. ದೇಶ ಉಳಿದರೆ ಧರ್ಮ ಉಳಿದೀತು ಎಂಬ ಪ್ರಜ್ಞೆ ಮತ್ತು ಮನಸ್ಥಿತಿ ಇದ್ದಲ್ಲಿ ಎಲ್ಲವೂ ಸರಿ ಹೋದೀತು ಮತ್ತು ಇಡೀ ಜಗತ್ತಿಗೇ ಶಾಂತಿಯನ್ನು ಸಾರಿದ ನಮ್ಮ ಭಾರತ ಮತ್ತೆ ವಿಶ್ವಗುರುವಾದೀತು ಅಲ್ವೇ?

ಏನಂತೀರೀ?

ಸೃಷ್ಟಿಕರ್ತ ಉಮಾಸುತ

2 thoughts on “ಕುಲ ಕುಲ ಕುಲವೆಂದು ಹೊಡೆದಾಡದಿರಿ

  1. ಸತ್ಯವಾದ ಮಾತುಗಳನ್ನು ಅಳೆದು ತೂಗಿ ಹೇಳಿದ್ದೀರಿ. ಧನ್ಯವಾದಗಳು ಹಾಗೂ ನಮಸ್ಕಾರಗಳು

    Liked by 1 person

Leave a reply to ಶ್ರೀಕಂಠ ಬಾಳಗಂಚಿ Cancel reply