ನಮ್ಮ ಸನಾತನ ಧರ್ಮ ಆರಂಭಿಸಿದ್ದು ಯಾರು ಮತ್ತು ಎಂದು ಯಾರಿಗೂ ತಿಳಿದಿಲ್ಲ. ಹಾಗಾಗಿ ನಮ್ಮ ಧರ್ಮಶಾಸ್ತ್ರದಲ್ಲಿ ಅವರವರು ಮಾಡುತ್ತಿದ್ದ ಕಾಯಕದ ಅನುಸಾರವಾಗಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯ ಮತ್ತು ಶೂದ್ರರು ಎಂಬ ನಾಲ್ಕು ವಿಧದ ವರ್ಣಾಶ್ರಮವನ್ನು ಆನುಸುರಿಸುತ್ತಿದ್ದರೇ ಹೊರತು ಯಾವುದೇ ಜಾತಿಯ ಪದ್ದತಿಗಳು ಇರಲಿಲ್ಲ. ವರ್ಣಾಶ್ರಮ ಎಂದರೆ ಅದು ವೃತ್ತಿ ಆಧಾರಿತ ಗುಂಪಾಗಿದ್ದು ಅದೆಷ್ಟೋ ಬಾರಿ ಒಂದೇ ಕುಟುಂಬದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಲ್ಲರೂ ಇರುವ ಅವಕಾಶವಿತ್ತು.
ಯಾವ ವ್ಯಕ್ತಿ, ಬ್ರಹ್ಮತ್ವ ಅರ್ಥಾತ್ ಜ್ಞಾನವನ್ನು ಹೊಂದಿದ್ದು ಪುರೋಹಿತರಾಗಿ, ಪಂಡಿತರಾಗಿ, ವಿದ್ವಾಂಸರಾಗಿ ಸಮಾಜದ ಹಿತಕ್ಕಾಗಿ ಪುರದ ಹಿತವನ್ನು ಕಾಯುವ ಪುರೋಹಿತರಾಗಿ ನಿಷ್ಠೆ, ನೇಮಗಳನ್ನು ಅನುಸರಿಸುತ್ತಿದ್ದರು ಬ್ರಾಹ್ಮಣ ಎನಿಸಿಕೊಂಡರೆ,. ಇನ್ನು ದೈಹಿಕವಾಗಿ ಗಟ್ಟಿ ಮುಟ್ಟಾಗಿದ್ದಲ್ಲದೇ, ಬುದ್ದಿವಂತರಾಗಿ ಮತ್ತು ಧೈರ್ಯದಿಂದ ಸಮಾಜವನ್ನು ಶತ್ರುಗಳಿಂದ ಕಾಪಾಡುತ್ತಿದ್ದರೋ ಅಂತಹವರು ಕ್ಷತ್ರಿಯರೆನಿಸಿಕೊಳ್ಳುತ್ತಿದ್ದರು. ಇನ್ನು ರೈತರು ಬೆಳೆಯುವ ಪದಾರ್ಥಗಳನ್ನು ಕೊಂಡು ಕೊಂಡು ಅದನ್ನು ವ್ಯಾಪಾರ ಮಾಡಿ ವರ್ತಕರಾಗಿ ಜೀವನ ನಡೆಸುತ್ತಿದ್ದವರನ್ನು ವೈಶ್ಯ ಎಂದು ಕರೆದರೆ, ಇದ್ದು ದೈಹಿಕವಾಗಿ ಬಲಶಾಲಿಯಾಗಿದ್ದು, ಒಕ್ಕಲುತನವೂ ಸೇರಿದಂತೆ ಸಮಾಜದ ಉಳಿದ ಕೆಲಸಗಳನ್ನು ಮಾಡುತ್ತಿದ್ದವರು ಶೂದ್ರರು ಎನಿಸಿಕೊಳ್ಳುತ್ತಿದ್ದರು. ವರ್ಣಾಶ್ರಮವನ್ನು ಸರಳವಾಗಿ ಹೇಳಬೇಕೆಂದರೆ, ಬುದ್ಧಿ, ಪರಾಕ್ರಮ, ಸಂಪತ್ತು ಮತ್ತು ಪರಿಶ್ರಮಗಳ ಆಧಾರದ ಮೇಲಿದ್ದ ಸಮಾಜದ ಜೀವನ ಪದ್ದತಿಯಾಗಿತ್ತು.
ದುರಾದೃಷ್ಟವಷಾತ್ ನಂತರದ ದಿನಗಳಲ್ಲಿ ಈ ವರ್ಣಾಶ್ರಮವೇ ಜನ್ಮತಃ ಜಾತಿ ಪದ್ಧತಿಗಳಾಗಿ ಮಾರ್ಪಾಟಾದರೂ, ಈಗಾಗಲೇ ಹೇಳಿದಂತೆ ಒಂದೇ ಕುಟುಂಬದಲ್ಲಿ ಎಲ್ಲಾ ವರ್ಣಾಶ್ರಮದವರೂ ಇರಬಹುದಾಗಿತ್ತು ಎನ್ನುವುದಕ್ಕೆ ರಾಮಾಯಣದ ರಾವಣನೇ ಸಾಕ್ಷಿ. ರಾವಣ ಹುಟ್ಟಿನಿಂದ ಬ್ರಾಹ್ಮಣನಾಗಿ ಚತುರ್ವೇದ ಪಂಡಿತನಾಗಿದ್ದರೂ ಆತ ಪ್ರವೃತ್ತಿಯಿಂದ ರಾಕ್ಷಸನಾಗಿದ್ದ ಕಾರನ, ಅತನನ್ನು ರಾಕ್ಷಸನೆಂದೇ ಇಂದಿಗೂ ಕರೆಯಲಾಗುತ್ತದೆ. ಆದರೆ ಆತನ ಪತ್ನಿ ಮಂಡೋದರಿ ಪರಮ ಸ್ವಾದ್ವಿಯಾಗಿದ್ದು ಪತಿಯ ರಾಕ್ಷಸೀಯ ಗುಣಗಳನ್ನು ಕಠು ಶಬ್ಧಗಳಿಂದ ಟೀಕಿಸುತ್ತಾ, ಆತನನ್ನು ಸರಿ ದಾರಿಗೆ ತರಲು ಪ್ರಯತ್ನಿಸಿದ ಕಾರಣ ಆಕೆ ಪ್ರತಿನಿತ್ಯವೂ ನೆನೆಯುವ ಪಂಚಕನ್ಯೆಯರಲ್ಲಿ ಒಬ್ಬಳಾದಳು. ಅದೇ ರೀತಿ ರಾಕ್ಷಸ ರಾವಣನ ತಮ್ಮ ವಿಭೀಷಣ, ರಾಜನಾಗಿ ಕ್ಷತೀಯ ಎನಿಸಿಕೊಂಡನು.
ಅದೇ ರೀತಿ ಸೂರ್ಯವಂಶದ ಕ್ಷತ್ರಿಯ ರಾಜ ಕೌಶಿಕ, ವಸಿಷ್ಠರೊಡನೆ ಇದ್ದ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ಕಠಿಣ ತಪ್ಪಸನ್ನು ಮಾಡಿ ಬ್ರಹ್ಮತ್ವವನ್ನು ಪಡೆದು ತನ್ನ ಅಧ್ಯಯನ ಮತ್ತು ಅಧ್ಯಾಪನದ ಮೂಲಕ ವಿಶ್ವಾಮಿತ್ರ ಎಂಬ ಬ್ರಹ್ಮರ್ಷಿಯಾದರೆ, ಪರಶುರಾಮ ಜನ್ಮ್ತತಃ ಬ್ರಾಹ್ಮಣನಾಗಿ ಋಷಿಯಾಗಿದ್ದವರು, ನಂತರದ ದಿನಗಳಲ್ಲಿ ಕ್ಷತ್ರಿಯರ ಬಗ್ಗೆ ದ್ವೇಷದಿಂದ ಕೊಡಲಿ ಹಿಡಿದು ಭಾರ್ಗವ ರಾಮನಾಗಿ ಕ್ಷತ್ರಿಯನಾಗಿ ತನ್ನ ಕೆಲಸ ಸಂಪನ್ನಗೊಂಡ ನಂತರ ತಪಸ್ವಿಯಾದ, ಇನ್ನು ರಾಮಾಯಣ ಬರೆದ ವಾಲ್ಮಿಕಿಗಳ ಮೂಲ ಹೆಸರು ರತ್ನಾಕರ ಎಂಬುದಾಗಿದ್ದು ಅವರು ಬ್ರಹ್ಮನ ಮಾನಸ ಪುತ್ರರಾಗಿದ್ದ ಪ್ರಚೇತ ಎಂಬುವರ ಮಗ. ಆದರೆ ಬಾಲ್ಯದಲ್ಲಿ ಬೇಡ ವೃತ್ತಿಯ ಭೇಲ್ ಕುಟುಂಬದವರಿಂದ ಅಪಹರಿಸಲ್ಪಟ್ಟ ಕಾರಣದಿಂದಾಗಿ ಬೇಡರಾಗಿಯೇ ಬೆಳಿದು ಕಾಡಿನಲ್ಲಿ ಪ್ರಯಾಣಿಕರನ್ನು ಲೂಟಿ ಮಾಡುವ ದರೋಡೆಕಾರರಾಗಿದ್ದು ನಂತರ ಋಷಿಗಳಾಗಿ ಮಾರ್ಪಟ್ಟಿದ್ದರು. ಇನ್ನು ಮಹಾಭಾರತದ ಕಾರಣೀಭೂತರಾದ ವ್ಯಾಸರು ಸಹಾ ಬೆಸ್ತರ ಮಗನಾಗಿ ಜನಿಸಿದರೂ, ನಂತರ ವೇದಾಧ್ಯಯಿನಿಯಾಗಿ ಅಪೌರುಷೀಯ ವೇದಗಳನ್ನು ಋಗ್, ಯಜುರ್, ಸಾಮ ಮತ್ತು ಅರ್ಥವಣ ವೇದಗಳೆಂದು ವಿಭಜಿಸಿ ವೇದವ್ಯಾಸರಾಗಿ ಜಗದ್ವಿಖ್ಯಾತರಾದರು. ಇನ್ನು ಹಿಂದೂ ಧರ್ಮದಲ್ಲಿ ಬಹಳ ಭಕ್ತಿಯಿಂದ ಆರಾಧಿಸುವ ರಾಮ ಕ್ಷತ್ರಿಯನಾದರೆ, ಕೃಷ್ಣ ಜನ್ಮತಃ ಕ್ಷತ್ರಿಯನಾದರೂ, ಪ್ರವೃತ್ತಿಯಿಂದ ರಾಕ್ಷಸನಾಗಿದ್ದ ಕಂಸನ ಅಳಿಯ ಮತ್ತು ಗೋಕುಲದಲ್ಲಿ ಬೆಳೆದ ಕಾರಣ ಗೊಲ್ಲನಾಗಿ ಜಗದ್ರಕ್ಷಕ ಎಂದೇ ಪ್ರಸಿದ್ಧ ಪಡೆದರು.
ಇನ್ನು 1608ರ ಸಮಯದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಮೂಲಕ ವ್ಯಾಪಾರಕ್ಕೆಂದು ಭಾರತದ ಸೂರತ್‌ನಲ್ಲಿ ಮೊದಲ ಬಾರಿಗೆ ಬಂದಿಳಿದವರು, ನಂತರದ ದಿನಗಳಲ್ಲಿ ನಮ್ಮಲ್ಲಿದ್ದ ಒಳಜಗಳವನ್ನೇ ಎತ್ತಿ ಆಡುತ್ತಾ, ನಮ್ಮಲ್ಲಿದ್ದ ಜಾತಿಗಳಲ್ಲಿ ಒಡಕು ಮೂಡಿಸ್ತುತ್ತಾ ನಮ್ಮ ರಾಜರುಗಳ ಮಧ್ಯೆ ಕಿತ್ತಾಟವನ್ನು ತಂದು ರಾಜ್ಯವನ್ನು ಕಬಳಿಸುತ್ತಿದದ್ದನ್ನು ಗಮನಿಸಿ, ಅವರ ವಿರುದ್ಧ ಸಮಾಜವನ್ನು ಎತ್ತಿಕಟ್ಟಲು ಪ್ರಯತ್ನಿಸಿದ ಬ್ರಾಹ್ನಣರ ವಿರುದ್ಧವೇ ಇಲ್ಲ ಸಲ್ಲದ ಆರೋಪ ಮಾಡುತ್ತಾ, ಬ್ರಾಹ್ಮಣರೇ ಶತ ಶತಮಾನಗಳಿಂದಲೂ ಶ್ರೂದ್ರರನ್ನು ಶೋಷಣೆ ಮಾಡಿದರು ಎಂಬ ಕಾಗಕ್ಕಾ ಗುಬ್ಬಕ್ಕಾ ಕಥೆಯನ್ನು ಕಟ್ಟಿ ನಮ್ಮ ಊರುಗಳ ದೇವಾಲಯಗಳಲ್ಲಿ ನಡೆಯುತ್ತಿದ್ದ ಲಕ್ಷಾಂತರ ಗುರುಕುಲಗಳು ಮತ್ತು ಗೋಶಾಲೆಗಳನ್ನು ಮುಚ್ಚಿ ಹಾಕಿ ಆಧುನಿಕ ಶಿಕ್ಷಣ ಎಂಬ ಹೆಸರಿನಲ್ಲಿ ಮೆಕಾಲೆ ಎಂಬವನ ಶಿಕ್ಷಣ ಪದ್ದತಿಯನ್ನು ಜಾರಿಗೆ ತರುವ ಮೂಲಕ ದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಸುಮಾರು 350 ವರ್ಷಗಳ ಕಾಲ ನಮ್ಮನ್ನು ದಾಸ್ಯದಲ್ಲಿ ಇಟ್ಟುಕೊಂಡಿದ್ದು ಈಗ ಇತಿಹಾಸ.
ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 4000 ಜಾತಿಗಳು ಮತ್ತು ಉಪಜಾತಿಗಳು ಇದ್ದು, ಕರ್ನಾಟಕದಲ್ಲಿಯೇ ಸುಮಾರು 1800 ಜಾತಿ ಮತ್ತು ಉಪಜಾತಿಗಳಿವೆ. ಇನ್ನು ಸ್ವಾತಂತ್ರ್ಯ ಬಂದ ನಂತರ ಈ ದೇಶದಲ್ಲಿದ್ದ ಸಾಮಾಜಿಕ ಅಸಮಾನತೆಗಳನ್ನು ಸರಿಪಡಿಸುವ ಸಲುವಾಗಿ ಸಾಮಾಜಿಕವಾಗಿ ಹಿಂದುಳಿದ ಕೆಲವು ಜಾತಿಗಳಿಗೆ ಕೇವಲ 10 ವರ್ಷಗಳ ಕಾಲ ಮೀಸಲಾತಿಯ ಹೆಸರಿನಲ್ಲಿ ವಿಶೇಷ ಸವಲತ್ತು, ಅನುದಾನಗಳನ್ನು ಕೊಡಲು ನಿರ್ಧರಿಸಿದರು. ಅಷ್ಟೇ ಅಲ್ಲದೇ, 1891 ರಿಂದ 1931 ವರೆಗೆ ಬ್ರಿಟೀಷರು ಪ್ರತಿ 10 ವರ್ಷಕ್ಕೊಮ್ಮೆ ನಡೆಸುತ್ತಿದ್ದ ಜಾತಿವಾರು ಸಮೀಕ್ಷೆಗಳು ನಂತರದ ದಿನಗಳಲ್ಲಿ ನಿಂತು ಹೋಗಿದ್ದದ್ದನ್ನು ಗಮನಿಸಿ, ನಮ್ಮ ಸಂವಿಧಾನದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ಜಾತಿ ಸಮೀಕ್ಷೆ ಮಾಡಬೇಕು ಎಂಬ ಅಂಶವನ್ನು ಸೇರಿಸಲಾಯಿತು. ಹೀಗೆ ಜಾತಿ ಸಮೀಕ್ಷೆಯು ಕೇವಲ ಸಮಾಜದಲ್ಲಿದ್ದ ಅಸಮಾನತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಇತ್ತೇ ಹೊರತು ಅದರ ಹಿಂದೆ ಯಾವುದೇ ಸ್ವಾರ್ಥ ಅಥವಾ ರಾಜಕೀಯ ಲಾಭಗಳ ಆಸೆ ಇರಲಿಲ್ಲ.
13ನೇ ಶತಮಾತದ ವರಿಗೂ ಗಾಂಧಾರದಿಂದ ಇಂಡೋನೇಷ್ಯಾದವರೆಗೂ ಹಿಂದೂಗಳೇ ಇದ್ದು ಹಿಂದೂಸ್ಥಾನ ಎಂದೇ ಹೆಸರಾಗಿದ್ದ ನಮ್ಮ ದೇಶದಲ್ಲಿ ಮೊಘಲರು ಆಕ್ರಮಣ ಮಾಡಿದ ನಂತರ ಬಲವಂತದಿಂದಾಗಿಯೋ ಇಲ್ಲವೇ ಆಮಿಷಗಳಿಂದಗಿಯೋ ಇಲ್ಲಿನ ಹಿಂದೂಗಳೇ ಮುಸಲ್ಮಾನರಾಗಿ ಮತಾಂತರವಾದರೆ, ಇನ್ನು ವಿವಿಧ ಯೂರೋಪಿಯನ್ನರು ಮತ್ತು ಬ್ರಿಟೀಷರು ಈ ದೇಶಕ್ಕೆ ಧಾಳಿ ನಡೆದ ನಂತರ ಅನೇಕ ಹಿಂದೂಗಳು ಕ್ರಿಶ್ಚಿಯನ್ನರಾಗಿ ಮತಾಂತರವಾಗಿ ಇಂದಿಗೂ ವಿವಿಧ ಜೆಹಾದ್ ಗಳ ರೂಪದಲ್ಲಿ ಈ ಎರಡೂ ಧರ್ಮಗಳು ಹಿಂದೂಗಳನ್ನು ಆಮಿಷ/ಬಲವಂತದಿಂದ ಮತಾಂತಾರ ಮಾದುತ್ತಿರುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಹಾಗಾಗಿ ಈ ಜಾತಿ ಪದ್ದತಿ ಇರುವುದು ಕೇವಲ ಹಿಂದೂಗಳಲ್ಲಿ ಮಾತ್ರವಷ್ಟೇ ಅಲ್ಲದೇ, ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರಲ್ಲೂ ನೂರಾರು ಜಾತಿ ಉಪಜಾತಿಗಳಿದ್ದು ಅವರಲ್ಲಿಯೂ ಉಚ್ಚ ಮತ್ತು ನೀಚ ಎಂಬ ಬೇಧಭಾವಗಳಿದ್ದು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದೇ ಸದಾಕಾಲವೂ ಬಡಿದಾಡಿಕೊಳ್ಳುವ ಪರಿಸ್ಥಿತಿ ಇರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.
ಇಸ್ಲಾಂನಲ್ಲಿನಲ್ಲಿ ಸುನ್ನಿ ಮತ್ತು ಶಿಯಾ ಎಂಬ ಎರಡು ಮುಖ್ಯ ಪಂಥಗಳಿದ್ದು, .
ಸುನ್ನಿ ಪಂಥದಲ್ಲಿ ಪ್ರಮುಖ್ಯವಾಗಿ
- ಹನಫಿ: ಇಮಾಮ್ ಅಬು ಹನೀಫಾ ಅವರ ಅನುಯಾಯಿಗಳು.
- ಮಾಲಿಕಿ: ಇಮಾಮ್ ಮಲಿಕ್ ಅವರ ಅನುಯಾಯಿಗಳು.
- ಶಾಫಿ: ಇಮಾಮ್ ಶಾಫಿಯ ಅನುಯಾಯಿಗಳು.
- ಹನ್ಬಲಿ: ಇಮಾಮ್ ಅಹ್ಮದ್ ಬಿನ್ ಹನ್ಬಲ್ ಅವರ ಅನುಯಾಯಿಗಳು.
- ಸಲಾಫಿ/ವಹಾಬಿ: ಹಂಬಲಿ ಶಾಲೆಯಿಂದ ಬಂದ ಕಟ್ಟುನಿಟ್ಟಾದ ಸಂಪ್ರದಾಯವಾದಿ ಪಂಥ.
- ದೇವಬಂದಿ: ಭಾರತದ ದೇವಬಂದ್‌ನಲ್ಲಿ ಹುಟ್ಟಿಕೊಂಡ ಸುನ್ನಿ ಜಿಹಾದಿ ಚಳುವಳಿ.
- ಬರೇಲ್ವಿ: ಸೂಫಿ ನಂಬಿಕೆಗಳು ಮತ್ತು ಆಚರಣೆಗಳನ್ನು ಆಧರಿಸಿದ ಸುನ್ನಿ ಇಸ್ಲಾಂನ ಮತ್ತೊಂದು ಶಾಖೆ.
ಇನ್ನು ಶಿಯಾ ಪಂಗಡದಲ್ಲಿ ಪ್ರಮುಖವಾಗಿ
- ಇಮಾಮಿ/ಇತ್ನಾ ಅಶಾರಿ (ಟ್ವೆಲ್ವರ್ಸ್): ಮುಖ್ಯ ಶಿಯಾ ಪಂಥ, ಇದು ಹನ್ನೆರಡು ಇಮಾಮ್‌ಗಳನ್ನು ನಂಬುತ್ತದೆ.
- ಇಸ್ಮಾಯಿಲಿ: ಇಸ್ಮಾಯಿಲ್ ಬಿನ್ ಜಾಫರ್ ಅವರನ್ನು ಇಮಾಮ್ ಎಂದು ಗುರುತಿಸುವ ಪ್ರಮುಖ ಶಿಯಾ ಪಂಥ.
- ಜೈದಿ: ಐದನೇ ಇಮಾಮ್, ಜೈದ್ ಬಿನ್ ಅಲಿಯನ್ನು ಅನುಸರಿಸುವ ಶಿಯಾ ಪಂಥ.
- ದಾವೂದಿ ಬೊಹ್ರಾ: ಇಸ್ಮಾಯಿಲಿ ಸಮುದಾಯದ ಉಪ ಶಾಖೆಗಳಿದ್ದರೆ,
ಈ ಎರಡೂ ಸಂಘಟನೆಗಳಲ್ಲದೇ,
- ಖವಾರಿಜ್: ಆರಂಭಿಕ ಇಸ್ಲಾಮಿಕ್ ಇತಿಹಾಸದಲ್ಲಿ ಹೊರಹೊಮ್ಮಿದ ಐತಿಹಾಸಿಕ ಇಸ್ಲಾಮಿಕ್ ಗುಂಪು.
- ಅಹ್ಲ್-ಎ-ಹದೀಸ್: ಕೇವಲ ಹದೀಸ್ ಅನ್ನು ಆಧರಿಸಿದ ಸುನ್ನಿ ಸಂಪ್ರದಾಯವಾದಿ ಚಳುವಳಿ.
- ಖಾದಿಯಾನಿ/ಅಹ್ಮದಿಯಾ: ಆಧುನಿಕ ಇಸ್ಲಾಮಿಕ್ ಚಳವಳಿಯು ಅನೇಕ ಮುಸ್ಲಿಂ ಸಮುದಾಯಗಳಿಂದ ವ್ಯಾಪಕವಾಗಿ ಗುರುತಿಸಲ್ಪಟ್ಟಿಲ್ಲ.
- ಸೂಫಿ: ಸೂಫಿ ಇಸ್ಲಾಂನ ಅನುಯಾಯಿಗಳು, ಆಂತರಿಕ ಆಧ್ಯಾತ್ಮಿಕತೆ ಮತ್ತು ಅಲ್-ತಕಿಯಾ ರೀತಿಯ ಅಭ್ಯಾಸಗಳನ್ನು ಒತ್ತಿಹೇಳುತ್ತಾರೆ.
ಈ ಎಲ್ಲಾ ಜಾತಿ ಉಪಜಾತಿಗಳಲ್ಲಿ ಸಂಬಂಧ ಕೊಟ್ಟು ತರುವುದು ಬಿಡಿ ಇವರ್ಯಾರೂ ಒಂದೇ ಮಸೀದಿಯಲ್ಲಿ ಪ್ರಾರ್ಥನೆಯನ್ನೂ ಮಾಡುವುದಿಲ್ಲ ಮತ್ತು ಒಂದೇ ಸ್ಮಶಾನದಲ್ಲೂ ಸಮಾಧಿ ಮಾಡದಿರುವಷ್ಟು ವೈರುಧ್ಯಗಳಿವೆ. ಆದರೆ ಧರ್ಮ ಮತ್ತು ಚುನಾವಣೆ ಎಂಬ ವಿಷಯ ಬಂದರೆ ಅವರೆಲ್ಲರೂ ತಮ್ಮ ಜಾತಿ ಮತ್ತು ಧರ್ಮಗಳನ್ನು ಬದಿಗೊತ್ತಿ ಮುಸಲ್ಮಾನರು ಎಂದೇ ಒಗ್ಗಟ್ಟಾಗುವುದು ಗಮನಾರ್ಹವಾಗಿದೆ.
ಇನ್ನು ಕ್ರಿಶ್ಚಿಯನ್ನರಲ್ಲೂ ಮುಖ್ಯವಾಗಿ ರೋಮನ್ನರು, ಕ್ಯಾಥೋಲಿಕ್, ಪ್ರೊಟೆಸ್ಟೆಂಟ್‌ಗಳಲ್ಲದೇ, ಪೆಂತಕೋಸ್ಟ್, ಬ್ಯಾಪ್ಟಿಸ್ಟ್ ಅಲ್ಲದೇ ಇನ್ನೂ ನೂರಾರು ಉಪಜಾತಿಗಳಿದ್ದು, ಇನ್ನು ಹಿಂದೂ ದಲಿತರು ಸಮಾನತೆಯ ಹೆಸರಿನಲ್ಲಿ ಕ್ರಿಶ್ಚಿಯನ್ನರಾಗಿ ಮತಾಂತವಾದರೂ ಮೀಸಲಾತಿಯ ಆಸೆಗಾಗಿ ಇನ್ನೂ ತಮ್ಮ ಮೂಲ ಜಾತಿಯನ್ನೇ ದಾಖಲೆಗಳಲ್ಲಿ ತೋರಿಸಿಕೊಳ್ಳುತ್ತಾ ಅಕ್ರಮವಾಗಿ ಮೀಸಲಾತಿಯ ಸೌಲಭ್ಯಗಳನ್ನು ಪಡೆಯುತ್ತಿರುವುದು ವಿಷಾಧನೀಯವಾಗಿದೆ.
ಅಂಕಿ ಅಂಶಗಳ ಪ್ರಕಾರ ಮೀಸಲಾತಿಯ ಕ್ಯಾಟಗರಿ 1 ನಲ್ಲಿ 97 ಸಮುದಾಯಗಳಿದ್ದರೂ ಮೀಸಲಾತಿ ಅನುಕೂಲ ಪಡೆದು ಉದ್ದಾರ ಆಗಿರುವುದು ಕೇವಲ 4 ಸಮುದಾಯಗಳಷ್ಟೇ. ಇನ್ನು ಕ್ಯಾಟಗರಿ 2ಎ ನಲ್ಲಿ 102 ಸಮುದಾಯಗಳು ಇವೆಯಾದರೂ, ಅದರಲ್ಲಿ 7 ಸಮುದಾಯಗಳಿಗೆ ಮಾತ್ರಾ ಅನುಕೂಲ ಸಿಕ್ಕಿದೆ. ಹಿಂದುಳಿದ ವರ್ಗದಡಿಯಲ್ಲಿ 101 ಸಮುದಾಯಗಳು ಇದ್ದು ಅವುಗಳ ಪೈಕಿ 10 ಸಮುದಾಯಗಳಿಗೆ ಅನುಕೂಲ ಸಿಕ್ಕಿದ್ದರೆ ಉಳಿದವರಿಗೆ ಯಾವುದೇ ಸೌಲಭ್ಯಗಳ್ಲು ಸಿಕ್ಕಿಲ್ಲ. ಇನ್ನು ಪರಿಶಿಷ್ಠ ವರ್ಗದಡಿಯಲ್ಲಿ ಇರುವ 51 ಸಮುದಾಯಗಳಲ್ಲಿ ಕೇವಲ ಒಂಡೆರಡು ಸಮುದಾಯಗಳಿಗೆ ಅನುಕೂಲ ಸಿಕ್ಕಿದ್ದು ಉಳಿದ ಜಾರಿಗಳಿಗೆ ಮಾನ್ಯತೆ ಸಿಕ್ಕಿಲ್ಲ ಎಂಬುದೇ ಬಹುತೇಕ ಜಾತಿಗಳ ಆಗ್ರಹವಾಗಿದ್ದು ಹಾಗಾಗಿಯೇ ಆ ಎಲ್ಲಾ ಸಮುದಾಯದವರು ಜಾತಿವಾರು ಸಮೀಕ್ಷೆಗಾಗಿ ಒತ್ತಾಯ ಮಾಡುತ್ತಿದ್ದಾರೆ.
2024ರ ನಂತರ ಕೇವಲ ಕೇಂದ್ರದಲ್ಲಿ ಮಾತ್ರವಷ್ಟೇ ಅಲ್ಲದೇ, ಅನೇಕ ರಾಜ್ಯಗಳಲ್ಲಿಯೂ ಕಾಂಗ್ರೇಸ್ ಅಧಿಕಾರ ಕಳೆದುಕೊಂಡ ನಂತರ ಹೇಗಾದರೂ ಮಾಡಿ ಮತ್ತೆ ಅಧಿಕಾರಕ್ಕೆ ಬರಲೇ ಬೇಕೆಂಬ ಹಪಾಹಪಿಯಲ್ಲಿ ಕಂಡು ಕೊಂಡಿರುವ ಪರಿಹಾರಗಳಲ್ಲಿ ಒಂದು ಬಿಟ್ಟಿ ಭಾಗ್ಯಗಳಾದರೆ ಮತ್ತು ಮತ್ತೊಂದು ಹಿಂದೂಗಳ ಜಾತಿ ಗಣನೆ. 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೇಸ್ ಚಿರಯೌವನಿಗ ನಾಯಕ ರಾಹುಲ್ ಗಾಂಧಿ ಪದೇ ಪದೇ ಜಾತಿ ಸಮೀಕ್ಷೆಗೆ ಆಗ್ರಹಿಸಿದ್ದಲ್ಲದೇ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಾತಿ ಸಮೀಕ್ಷೆ ನಡೆಸಿ x-rayಯಂತೆ ಉಳ್ಳವರಿಂದ ಹಣವನ್ನು ವಶಪಡಿಸಿಕೊಂಡು ಇಲ್ಲದವರಿಗೆ ಹಂಚುತ್ತೇವೆ ಎಂಬ ಆಮಿಷವನ್ನು ತೋರಿಸಿದ್ದಲ್ಲದೇ ಖಟಾ ಖಟ್, ಟಕಾ ಟಕ್ ಎಂದು ದೇಶದಲ್ಲಿರುವ ಎಲ್ಲಾ ಮಹಿಳೆಯರಿಗೂ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಹಣವನ್ನು ಕೊಡುತ್ತೇವೆ ಎಂದು ಹೇಳಿದ್ದದ್ದು,
ರಾಹುಲ್ ಗಾಂಧಿಯವರ ಜಾತಿ ಸಮೀಕ್ಷೇ ಮೇಲ್ನೋಟಕ್ಕೆ ಸರಿ ಎಂಬಂತೆ ಕಂಡು, ಈ ದೇಶದಲ್ಲಿ ಜಾತಿಯ ಅಸಮಾನತೆ ತೊಡೆದು ಹೋಗಿ, ಪ್ರತಿಯೊಂದು ಸಮುದಾಯದಾಯವೂ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮುನ್ನಲೆಗೆ ಬರಬಹುದು ಎಂದು ತೋರುತ್ತದಾದರೂ, ಸ್ವಾತ್ರಂತ್ಯ್ರ ಬಂದು ಮೊದಲ 5-6 ದಶಕಗಳ ವರೆಗೂ ಆಳ್ವಿಕೆ ನಡೆಸಿದ ಕಾಂಗ್ರೇಸ್ ಪಕ್ಷ ಇಂತಹ ಕಾರ್ಯಕ್ರಮಗಳನ್ನೇಕೆ ತರಲಿಲ್ಲ ಎಂದು ಕೇಳಿದರೆ ಜಾಣ ಮೌನ ವಹಿಸುತ್ತಾರೆ. ಇನ್ನು ರಾಹುಲನ ಅಜ್ಜಿ 70ರ ದಶಕದಲ್ಲಿ ತಂದ ಗರೀಭೀ ಹಟಾವೋ 2024 ಅರ್ಥಾತ್ 50 ವರ್ಷಗಳು ಕಳೆದರೂ ಕಾರ್ಯಸಾಧುವಾಗಿಲ್ಲ.
ಈಗಾಗಲೇ ಕಾಂಗ್ರೇಸ್ ಅಹಿಂದ ಹೆಸರಿನಲ್ಲಿ ಅಲ್ಪಸಂಖ್ಯಾತರ ಹೊರತಾಗಿ ಹಿಂದುಳಿದವರು ಮತ್ತು ದಲಿತರು ಎಂಬ ಬೇಧ ಭಾವವನ್ನು ಮಾಡಿ ತನ್ನ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಅದೇ ರೀತಿ ಕಳೆದ ಬಾರಿ ಇದೇ ಸಿದ್ದರಾಮಯ್ಯನವರ ಅಧಿಕಾರದಲ್ಲಿ ವೀರಶೈವರು ಮತ್ತು ಲಿಂಗಾಯಿತರು ಹಿಂದೂಗಳಿಂದ ಹೊರೆತಾದ ಪ್ರತ್ಯೇಕ ಧರ್ಮ ಎಂದು ಇಬ್ಬಾಗ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದರೂ ಬುದ್ದಿ ಬಾರದೇ ಈಗ ಮತ್ತೊಮ್ಮೆ ಬ್ರಿಟೀಷರಂತೆ ತಮ್ಮ ಅಧಿಕಾರದ ತೆವಲಿಗಾಗಿ ಜಾತಿ ಸಮೀಕ್ಷೆಯ ಹೆಸರಿನಲ್ಲಿ ಮತ್ತೊಮ್ಮೆ ಭಾರತವನ್ನು ವಿಭಜನೆ ಮಾಡಲು ಮುಂದಾಗಿರುವುದು ಸ್ಪಷ್ಟವಾಗಿದೆ.
ಕಾಂಗ್ರೇಸ್ಸಿನ ಈ ಕುಟಿಲತೆಯನ್ನು ಚನ್ನಾಗಿಯೇ ಅರಿತ ಪ್ರಧಾನಿಗಳು ಕಾಂಗ್ರೇಸ್ ಪಕ್ಷದ ಈ ಜಾತಿ ಸಮೀಕ್ಷೆಯ ಆಗ್ರಹ ಕೇವಲ ಹಿಂದೂಗಳಿಗೆ ಮಾತ್ರವೇ ಏಕೆ ಸೀಮಿತವಾಗಿದೆ? ಮುಸ್ಲಿಂ ಮತ್ತು ಕ್ರಿಶ್ಚಿಯನ್ ಜಾತಿ ಗಣತಿಗೆ ಏಕೆ ಕೇಳುತ್ತಿಲ್ಲಾ? ಎಂದಿರುವುದಕ್ಕೆ ಕಾಂಗ್ರೇಸ್ ಪಕ್ಷದ ಯಾವುದೇ ನಾಯಕರೂ ಉತ್ತರ ನೀಡದೇ ಇರುವುದು, ಜಾತಿಯ ಹೆಸರಿನಲ್ಲಿ ಮತ್ತೊಮ್ಮೆ ಈ ಇಂಡಿ ಒಕ್ಕೂಟದವರು ಭಾರತವನ್ನು ವಿಭಜಿಸುವ ಕುಕೃತ್ಯಕ್ಕೆ ಮುಂದಾಗಿರುವುದು ಸ್ಪಷ್ಟವಾಗಿದ್ದು. ಧರ್ಮೋ ರಕ್ಷತಿ ರಕ್ಷಿತಃ ಎನ್ನುವಂತೆ, ಹಿಂದೂಗಳು ಒಗ್ಗಟ್ಟಾಗಿ ಇದ್ದಲ್ಲಿ ಮಾತ್ರವೇ ಈ ದೇಶ ಸುರಕ್ಷಿತವಾಗಿರುತ್ತದೆ, ಇಲ್ಲದೇ ಹೋದಲ್ಲಿ ರಷ್ಯಾ ತುಂಡಾದಂತೆ ಹತ್ತಾರು ಸಣ್ಣ ಸಣ್ಣ ಮತಾಂಧ ದೇಶವಾಗಿ ಹರಿದು ಹಂಚಿಹೋಗುತ್ತದೆ. ಹಾಗಾಗಿ ನಾವೆಲ್ಲ ಹಿಂದು, ನಾವೆಲ್ಲಾ ಒಂದು ಎನ್ನುವುದು ಕೇವಲ ಬಾಯಿ ಮಾತಾಗಿರದೇ ಅದನ್ನು ಕೃತಿ ರೂಪದಲ್ಲೂ ರೂಡಿಗೆ ತರುವ ಮೂಲಕ ನಮ್ಮ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡೋಣ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ