ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ನೋಡಿ ಆಡಿಕೊಂಡ ಎಂಬ ವ್ಯಂಗವಾದರೂ ಅರ್ಥಭರಿತವಾದ ಗಾದೆ ಮಾತೊಂದು ಕನ್ನಡದಲ್ಲಿದೆ. ಕೇಂದ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ಈಗಾಗಲೇ ಮೂರು ಬಾರಿ ಜನರು ತಿರಸ್ಕರಿಸಿದ್ದಾರೆ. ಬಿಟ್ಟಿ ಭಾಗ್ಯಗಳಿಂದಾಗಿ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದು ಆ ಮೂರು ರಾಜ್ಯಗಳಲ್ಲಿಯೂ ಜನಾ ಥೂ! ಛೀ! ಎಂದು ಉಗಿಯುತ್ತಿದ್ದಾರೆ. ಅಧಿಕಾರಕ್ಕಾಗಿ ರಾಜ್ಯದಲ್ಲಿ ಕಾಂಗ್ರೇಸ್ ನಾಯಕರುಗಳೇ ಒಬ್ಬರ ಮೇಲೊಬ್ಬರು ಕೆಸರೆರಚಾಟ ಮಾಡುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ಹಿಯ್ಯಾಳಿಸಿ ಅಧಿಕಾರಕ್ಕೆ ಬಂದ ಈಗಿನ ಸರ್ಕಾರ, ಕಮಿಷನ್ ಪಡೆಯುವುದರಲ್ಲಿ ಎಲ್ಲಾ ಧಾಖಲೆಗಳನ್ನು ಧೂಳಿಪಟ ಮಾಡಿದೆ. ಪ್ರತೀ ದಿನವೂ ಆಡಳಿತ ಪಕ್ಷದ ನಾಯಕರುಗಳಿಂದಲೇ ಒಂದಲ್ಲಾ ಒಂದು ಭ್ರಷ್ಟಾಚಾರ ಬಯಲಿಗೆ ಬಂದಿರುವ ಸಂಧರ್ಭದಲ್ಲಿ ಪ್ರಸ್ತುತ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಮತ್ತು ಒಂದು ಕಾಲದ ರಾಮಕೃಷ್ಣ ಹೆಗಡೆಯವರ ಶಿಷ್ಯರಾಗಿದ್ದ ಬಸವರಾಜ ರಾಯರೆಡ್ಡಿ ಅವರು ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಬದಲಾವಣೆಯಾಗಲಿದ್ದು, ಮೋದಿ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಆಗ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಮಂತ್ರಿ ಆಗುವ ಯೋಗವಿದೆ ಎನ್ನುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿರುವುದಲ್ಲದೇ, ತಮ್ಮ ನಾಯಕರನ್ನು ಓಲೈಸುವ ಭಟ್ಟಂಗಿ ಮನಸ್ಥಿತಿಯ ಕಾಂಗ್ರೇಸ್ ಪಕ್ಷದ ಗುಲಾಮಿ ಪದ್ದತಿಯನ್ನು ಸಾರ್ವಜನಿಕವಾಗಿ ಮುಂದುವರೆಸಿಕೊಂಡು ಹೋಗಿರುವುದು ನಿಜಕ್ಕೂ ಹಾಸ್ಯಾಸ್ಪದ ಎನಿಸುತ್ತಿದೆ.
ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ, ಮುಂಬರುವ ದಿನಗಳಲ್ಲಿ ಕೇವಲ ಕಾಂಗ್ರೇಸ್ ಮುಕ್ತ ಕರ್ನಾಟಕವಷ್ಟೇ ಅಲ್ಲದೇ, ಕಾಂಗ್ರೇಸ್ ಮುಕ್ತ ಭಾರತ ಆಗುವ ಎಲ್ಲಾ ಸಂಧರ್ಭಗಳೇ ಹೆಚ್ಚಾಗಿದ್ದು, ರಾಜಕೀಯವಾಗಿ ಮೋದಿಯವರನ್ನು ಮಣಿಸಿ ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿಸುವುದು ಮರೀಚಿಕೆ ಎಂಬುದು ಗೊತ್ತಿದ್ದರೂ, ಇನ್ನೇನು 75 ವರ್ಷ ತುಂಬಲಿರುವ ಮೋದಿಯವರನ್ನು ವಯಸ್ಸಿನ ಆಧಾರದ ಮೇಲೆ ಅಧಿಕಾರದಿಂದ ಕೆಳಗಿಳಿಸಿ ನೆನ್ನೆಯಷ್ಟೇ ಬಹಳ ಅದ್ದೂರಿಯಿಂದ ತಮ್ಮ 83 ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಕಾಂಗ್ರೇಸ್ ಪಕ್ಷದ ರಬ್ಬರ್ ಸ್ಟಾಂಪ್ ರಾಷ್ಟ್ರೀಯ ಅಧ್ಯಕ್ಷರಾದ (ಮಕ್ಕಳ ಹೆಸರಿಡುವಾಗಲೂ ಪ್ರಿಯಾಂಕ್, ರಾಹುಲ್, ಪ್ರಿಯದರ್ಶಿನಿ ಗುಲಾಮೀತನದ ಪರಮಾವಧಿ) ಶ್ರೀ ಮಲ್ಲಿಕಾರ್ಜುನ ಖರ್ಗೆಯವನ್ನು ದಲಿತರು ಎಂಬ ಜಾತಿಯ ಆಧಾರದಲ್ಲಿ ಅವಕಾಶವೇ ಇಲ್ಲದೇ ಇದ್ದರೂ, ಪ್ರಧಾನ ಮಂತ್ರಿಯ ಹುದ್ದೆಗೆ ಅವರನ್ನು ಸೂಚಿಸುವ ಮೂಲಕ ಖರ್ಗೆಯವರಿಗೆ ಅವಮಾನ ಮಾಡುತ್ತಿರುವುದು ನಿಜಕ್ಕೂ ಅಸಹನೀಯವಾಗಿದೆ.
ಸರಿಯಾಗಿ ನಡೆಯಲು, ಮಾತನಾಡಲು ಆಗದ 83 ವರ್ಷದ ಖರ್ಗೆ(21 July 1942), ಗಂಭೀರವಾದ ಆರೋಗ್ಯ ಸಮಸ್ಯೆಯಿಂದಾಗಿ ಆಗ್ಗಾಗೆ ಗುಟ್ಟಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯುವ 78 ವರ್ಷದ ಸೋನಿಯಾ (9 December 1946) ಇವರುಗಳು ಮಾತ್ರಾ ಆಯಕಟ್ಟಿನ ಜಾಗಗಳಲ್ಲಿ ಅಧಿಕಾವನ್ನು ಅನುಭವಿಸುತ್ತಾ ರಾಜಕೀಯದಲ್ಲಿ ಸಕ್ರೀಯರಾಗಿರಬೇಕು ಆದರೆ, ಇಡೀ ವಿಶ್ವವೇ ಮೆಚ್ಚುವ ಮತ್ತು ಅತ್ಯಂತ ಸಧೃಢರಾಗಿರುವ ಮೋದಿಯವರು 75 ವರ್ಷ ತುಂಬುತ್ತಿದ್ದಂತೆಯೇ ಸಕ್ರೀಯ ರಾಜಕೀಯದಿಂದ ನಿವೃತ್ತಿ ಹೊಂದಬೇಕು. ವಾರೇ ವಾಹ್! ಕಾಂಗ್ರೇಸ್ಸಿಗರ ಈ ತರ್ಕವೇ ಅವರಿಗೆ ಮುಂದಿನ ದಿನಗಳಲ್ಲಿ ಮುಳುವಾಗುವುದರಲ್ಲಿ ಸಂದೇಹವೇ ಇಲ್ಲಾ.
ಬಿಜೆಪಿಯಲ್ಲಿ ಸಧೃಢರಾಗಿರದ ಮತ್ತು ಗಂಭೀರವಾಗಿ ಕೆಲಸಮಾಡಲು ಅಶಕ್ಯರಾದ 75 ವರ್ಷ ಮೇಲ್ಪಟ್ಟ ರಾಜಕೀಯ ನಾಯಕರಿಗೆ ಹೆಚ್ಚಿನ ಅಧಿಕಾರ ಕೊಡದೇ ಇರುವ ಅಲಿಖಿತ ನಿಯಮವಿದೆ. ಆದರೆ ಜುಲೈ 9 ರಂದು ನಾಗ್ಪುರದಲ್ಲಿ ನಡೆದ ಹಿರಿಯ ಆರ್‌ಎಸ್‌ಎಸ್ ನಾಯಕ ಮೊರೋಪಂತ್ ಪಿಂಗಳೆ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುವಾಗ, ಸಂಘದ ಸರಸಂಘಚಾಲಕರಾದ ಭಾಗವತ್ ಆವರು ಮೊರೋಪಂತ್ ಪಿಂಗಳೆ ಅವರಿಗೆ 75 ವರ್ಷ ತುಂಬಿದಾಗ ಸನ್ಮಾನಿಸಲಾದ ಸಂಧರ್ಭದಲ್ಲಿ ನಡೆದ ಒಂದು ನಿದರ್ಶನವನ್ನು ಪ್ರಸ್ಥಾಪಿಸಿದ್ದಾರೆ.
ಸನ್ಮಾನ ಸಭೆಯಲ್ಲಿ ಪಿಂಗಳೆಯವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ ನಂತರ ತಮ್ಮ ಭಾಷಣದಲ್ಲಿ, ನೀವು ನನ್ನ 75ನೇ ವರ್ಷದ ಸಂಧರ್ಭದಲ್ಲಿ ಶಾಲನ್ನು ಹೊದಿಸಿ ಸನ್ಮಾನ ಮಾಡುತ್ತಿದ್ದೀರೆಂದರೆ, ನಿಮಗೆ ವಯಸ್ಸಾಗಿದೆ. ನಿಮ್ಮಿಂದ ಇನ್ನು ಹೆಚ್ಚಿನ ಕೆಲಸವನ್ನು ಮಾಡಲಾಗದು ಹಾಗಾಗಿ ನಾವು ನಿಮ್ಮನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲಾ ಎಂದು ನನಗೆ ಅರ್ಥವಾಗಿದ್ದು ನಾನು ಅದಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಲ್ಲದೇ, ಅದೇ ರೀತಿ ಅವರು ತಮ್ಮ ಎಲ್ಲಾ ರೀತಿಯ ಅಧಿಕಾರದಿಂದಲೂ ನಿವೃತ್ತಿ ಹೊಂದಿ ವಿಶ್ರಾಂತ ಜೀವನಕ್ಕೆ ಕಾಲಿರಿಸಿದರು ಎಂಬ ವಿಷಯವನ್ನು ಭಾಗವತ್ ಅವರು ಪ್ರಸ್ಥಾಪಿಸಿ, ಹೀಗೆ ಪಿಂಗಳಿಯವರು ಸಂಘದ ಇತರೇ ನಾಯಕರುಗಳಿಗೆ ಪ್ರೇರಣಾದಾಯಿಯಾಗಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.
ಮೋಹನ್ ಭಾಗವತರು ಈ ರೀತಿಯಾಗಿ ಹೇಳುತ್ತಿದ್ದಂತೆಯೇ ಅದಾಗಲೇ 70+ ದಾಟಿ ಅರುಳು ಮರಳಾಗಿರುವಂತಹ ಇಂಡೀ ಒಕ್ಕೂಟದ ನಾಯಕರುಗಳಿಗೆ ಮರುಭೂಮಿಯಲ್ಲಿಯೂ ಓಯಸಿಸ್ ನಂತೆ ನೀರು ಸಿಕ್ಕ ಅನುಭವುಂಟಾಗಿ ಎಲ್ಲರೂ ಈಗ ಮೋದಿಯವರಿಗೆ 75 ವರ್ಷ ತುಂಬುತ್ತಿದ್ದಂತೆಯೇ ಅವರು ಅಧಿಕಾರದಿಂದ ಕೆಳಗಿ ಇಳಿಯುತ್ತಿದ್ದಂತೆಯೇ ಆಂಧ್ರದ ಚಂದ್ರಬಾಬು ನಾಯ್ಡು ಮತ್ತು ಬಿಹಾರದ ನಿತೀಶ್ ಕುಮಾರ್ ಸರ್ಕಾರಕ್ಕೆ ನೀಡಿರುವ ಸಮರ್ಥನೆಯನ್ನು ಹಿಂದಕ್ಕೆ ಪಡೆಯುತ್ತಾರೆ. ಆಗ ಬಿಜೆಪಿ ಸರ್ಕಾರ ಉರುಳಿ ಹೋಗಿ ಇಂಡೀ ಒಕ್ಕೂಟದ ಖಿಚಡಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ಹಗಲು ಕನಸು ಕಾಣುತ್ತಿದ್ದಾರೆ.
ಕರ್ನಾಟಕದಲ್ಲಿ 135+1 ಒಟ್ಟು 136 ಶಾಸಕರನ್ನು ಗೆಲ್ಲಿಸಿ ಕೊಟ್ಟಿದ್ದರೂ, ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಮುಖ್ಯಮಂತ್ರಿ ಗಾದಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದ್ದು ಕಳೆದ ಐದಾರು ತಿಂಗಳಿನಿಂದಲೂ ಅದು ತಾರಕ್ಕೆ ಏರಿದ್ದು ಅದನ್ನು ನಿಭಾಸಲು ಆಗದೇ ಎಲ್ಲರ ಮುಂದೆ ನಗಪಾಟಲಾಗಿರುವ ಕೇವಲ 99 ಸಂಸದರನ್ನು ಹೊಂದಿರುವ ಈ ಕಾಂಗ್ರೇಸ್ಸಿಗೆ ಉಳಿದ ಪಕ್ಷಗಳು ಬೆಂಬಲ ನೀಡುತ್ತಾರೆ ಎಂಬುದನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ.
ಮುಂದಿನ ಬಾರಿ ರಾಜ್ಯ ಮತ್ತು ಕೇಂದ್ರದಲ್ಲಿ ತಾವೇ ಅಧಿಕಾರಕ್ಕೆ ಬರುತ್ತೇವೆ ಮತ್ತು ಅಧಿಕಾರಕ್ಕೆ ಬಂದ ತಕ್ಷಣವೇ ಬಿಜೆಪಿಯವರನ್ನು ಜೈಲಿಗೆ ಹಾಕುತ್ತೇವೆ ಎಂದು ಆಗ್ಗಾಗ್ಗೇ ಉತ್ತರ ಕುಮಾರರಂತೆ ಜಂಬ ಕೊಚ್ಚಿಕೊಳ್ಳುವ PUC ವರೆಗೂ ಓದಿರುವ ಮರಿ ಖರ್ಗೆ ಅರ್ಥಾತ್ ಪ್ರಿಯಾಂಕ್ ಖರ್ಗೆ ಮತ್ತು ಚಿಕ್ಕಬಳ್ಳಾಪುರದ ಲಾಟರಿ ಶಾಸಕ ಪ್ರದೀಪ್ ಈಶ್ವರ್ ಜೋಕರ್ ಗಳಂತೆ ಕಾಣಿಸುತ್ತಾರೆ.
ಜೆಡಿಯು ಮತ್ತು ಟಿಡಿಪಿ ಎರಡೂ ಈ ಹಿಂದೆ ಬಿಜೆಪಿ ಪರ ಇದ್ದ ಪಕ್ಷಗಳೇ ಆಗಿದ್ದು ನಂತರದ ದಿನಗಳಲ್ಲಿ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ಬಿಜೆಪಿಯಿಂದ ಹೊರಗೆ ಹೋಗಿ ಹೇಳ ಹೆಸರಿಲ್ಲದಂತಾಗಿ ಮತ್ತೆ ಹಳೆಯ ಗಂಡನ ಪಾದವೇ ಗತಿ ಎಂದು ಬಿಜೆಪಿ ಪಕ್ಷದ ಅಂಗಪಕ್ಷವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಅಧಿಕಾರಕ್ಕೆ ಬಂದಿರುವುದಲ್ಲದೇ, ಕಳೆದ ಒಂದು ವರ್ಷಗಳಲ್ಲಿ ಇದು ಸಮ್ಮಿಶ್ರ ಸರ್ಕಾರ ಎಂಬ ಯಾವುದೇ ರೀತಿಯ ಕುರುಹಿಲ್ಲದೇ, ಬಹುಮತ ಹೊಂದಿರುವ ಬಿಜೆಪಿಯ ಸರ್ಕಾರವೇ ಆಡಳಿತ ನಡೆಸುತ್ತಿದೆಯೇನೋ ಎನಿಸುವಷ್ಟರ ಮಟ್ಟಿಗೆ ಬಿಜೆಪಿಯೊಂದಿಗೆ ಭದ್ರವಾಗಿದೆ. ಇತ್ತೀಚೆಗೆ ಆಪರೇಷನ್ ಸಿಂದೂರ್ ನಡೆದ ನಂತರ ನಮ್ಮ ದೇಶದ ವಿಜಯವನ್ನು ಇಡೀ ವಿಶ್ವಕ್ಕೆ ತಿಳಿಸಲು ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳನ್ನೊಳಗೊಂಡ ನಿಯೋಗವನ್ನು ಕಳಿಸಿದ ಮೇಲಂತೂ NDA ಬಲ ಮತ್ತಷ್ಟು ಹೆಚ್ಚಾಗಿದ್ದು ಅಕಸ್ಮಾತ್ ಜೆಡಿಯು ಮತ್ತು ಟಿಡಿಪಿ ಪಕ್ಷಗಳು ತಮ್ಮ ಬೆಂಬಲವನ್ನು ಹಿಂದಕ್ಕೆ ಪಡೆದುಕೊಡರೂ, 240 ಸದಸ್ಯರ ಬಲ ಹೊಂದಿರುವ ಬಿಜೆಪಿಗೆ ಬೆಂಬಲ ನೀಡಲು ಸಣ್ಣ ಪುಟ್ಟ ಪಕ್ಷಗಳು ಸಿದ್ಧವಾಗಿರುವ ಕಾರಣ ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವೇ ಮುಂದುವರೆಯಲಿದೆ.
ವಿರೋಧ ಪಕ್ಷಗಳ ಆಶಯದಂತೆ ಅಕಸ್ಮಾತ್ ಪ್ರಧಾನಿ ಮೋದಿಯವರು ಏನಾದರು ವಯೋಕಾರಣದಿಂದ ಅಧಿಕಾರದಿಂದ ಕೆಳಗಿಳಿದರೂ ಖಂಡಿತವಾಗಿಯೂ ಜೆಡಿಯು ಮತ್ತು ಟಿಡಿಪಿ ಪಕ್ಷಗಳು ಬಿಜೆಪಿಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುವುದಿಲ್ಲ ಏಕೆಂದರೆ ಬಿಜೆಪಿಯಲ್ಲಿ ಪ್ರಧಾನ ಮಂತ್ರಿಗಳಾಗಲು ಸಮರ್ಥವಾಗಿರುವ ಯೋಗಿ, ಶಾ, ರಾಜನಾಥ್ ಸಿಂಗ್, ಗಡ್ಕರಿ ಅಂತಹ ನೂರಾರು ನಾಯಕರುಗಳು ಈಗಾಗಾಲೇ ಸಿದ್ಧವಾಗಿದ್ದು, ಅವರೆಲ್ಲರೂ ಮೋದಿಯವರಷ್ಟೇ ಸಧೃಢವಾಗಿ ಸರ್ಕಾರವನ್ನು ನಿಭಾಯಿಸಬಲ್ಲರು ಎನ್ನುವುದನ್ನು ಈಗಾಗಲೇ ಕಳೆದ ಹತ್ತು ವರ್ಷಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಅವರೇನೂ ರಾಹುಲ್ ಗಾಂಧಿಯಂತೆ ಚಿನ್ನದ ಚಮಚವನ್ನು ಹಿಡಿದು ಹುಟ್ಟಿಲ್ಲದೇ, ಸಾಮಾನ್ಯ ಕುಟುಂಬದರಾಗಿದ್ದು, ದೇಶ ಮತ್ತು ಧರ್ಮದ ಬಗ್ಗೆ ಗೌರವವನ್ನು ಹೊಂದಿದ್ದು, ಸ್ವಾಭಿಮಾನದಿಂದ ಮತ್ತು ದಕ್ಷವಾಗಿ ತಮ್ಮ ಮಂತ್ರಿಗಿರಿಯನ್ನು ಯಶ್ವಸಿಯಾಗಿ ನಿಭಾಯಿಸುವ ಮೂಲಕ ಎಂತಹ ಜವಾಬ್ಧಾರಿ ಕೊಟ್ಟರೂ ಅದನ್ನು ಸಮರ್ಥವಾಗಿನಿಭಾಯಿಸುವರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ
ಇನ್ನೂ ಸುಮಾರು ವರ್ಷಗಳಷ್ಟು ಕಾಲ ಈ ದೇಶವನ್ನು ಸಮರ್ಥವಾಗಿ ಮತ್ತು ಸಧೃಢವಾಗಿ ಮುನ್ನಡೆಸುವಷ್ಟರ ಮಟ್ಟಿಗೆ ಆರೋಗ್ಯಕರವಾಗಿರುವ ಮೋದಿಯವರು ಇದ್ದು ಅವರ ಬದಲಾವಣೆಯ ಬಗ್ಗೆ ಬಿಜೆಪಿ ಪಕ್ಷ ಮತ್ತು ದೇಶದ ಜನರಲ್ಲಿ ಯಾವುದೇ ರೀತಿಯ ಆಕ್ಷೇಪ ಅಥವಾ ಸಂದೇಹವೇ ಇಲ್ಲದಿರುವಾಗ, ಬಿಟ್ಟಿ ಭಾಗ್ಯಾಳಿಂದ, ಆಂತರಿಕ ಕಚ್ಚಾಟಗಳಿಂದ ಮೇಲೆಲ್ಲಾ ಥಳುಕು, ಒಳಗೆಲ್ಲಾ ಹುಳುಕು ಎನ್ನುವಂತೆ ಈಗಾಗಲೇ ದಿವಾಳಿಯಂಚಿನಲ್ಲಿರುವ ರಾಜ್ಯ ಕಾಂಗ್ರೇಸ್ ಸರ್ಕಾರನ್ನು ಉಳಿಸಿಕೊಳ್ಳಲು ರಾಯರೆಡ್ಡಿ ಮತ್ತು ಕಾಂಗ್ರೇಸ್ಸಿಗರು ಪ್ರಯತ್ನಿಸಿದರೆ ಒಳಿತು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಚೆನ್ನಾಗ್ ಹೇಳಿದ್ರಿ!!
LikeLike