ರಾಜಕಾರಣ ಎನ್ನುವುದೇ ಒಂದು ರೀತಿಯ Big Bossನಲ್ಲಿ ಆಡುವ ಆಟ. ನೋಡುವುದಕ್ಕೆ ಎರಡೂ ಕಡೆ, ಹತ್ತಾರು ಜನರು ಒಟ್ಟಿಗೆ ಇರ್ತಾರಾದ್ರೂ ಆಟ/ರಾಜಕಾರಣ ಎಂದು ಬಂದಾಗ, ಅಲ್ಲಿ ಎಲ್ಲರೂ ಸ್ವಾರ್ಥಿಗಳೇ. ಪರಿಸ್ಥಿತಿಗೆ ತಕ್ಕಂತೆ ಸಮಯಕ್ಕೊಂದು ಸುಳ್ಳನ್ನು ಹೇಳುತ್ತಾ, ಆಟ/ಅಧಿಕಾರಕ್ಕಾಗಿ ಸದಕಾಲವೂ ಹಪಾಹಪಿಸುತ್ತಾರೆ ಎನ್ನುವುದಕ್ಕೆ ಅಕ್ಟೋಬರ್ 5, 2025ರ ಭಾನುವಾರ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ 2025ರ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಆಡಿದ ಮಾತುಗಳೇ ಸಾಕ್ಷಿಯಾಗಿದೆ.
ಕಾಂಗ್ರೇಸ್ ಎಂದರೆ ಜಾತ್ಯಾತೀತ ಪಕ್ಷ. ಇಲ್ಲಿ ಎಲ್ಲರಿಗೂ ಸಮ ಬಾಳು ಮತ್ತು ಸಮಪಾಲು ಎಂದು ಹೋದ ಬಂದ ಕಡೆ ಹೇಳುತ್ತಲೇ, ಹಿಂದೂಗಳನ್ನು ಒಡೆಯುವ ಸಲುವಾಗಿ ಜಾತಿ ಜಾತಿಯಲ್ಲಿ ಒಡಕು ತರುವಂತಹ ಜಾತಿ ಸಮೀಕ್ಷೆ ನಡೆಸುವ ಮೂಲಕ ಅಧಿಕಾರದಲ್ಲಿ ಶಾಶ್ವತವಾಗಿ ಇರಲು ಬಯಸುವ ಸಿದ್ದರಾಮಯ್ಯನವರು ಈಗ ಅದೇ ರೀತಿಯ ಮತ್ತೊಂದು ವಿಚಾರವನ್ನು ಹರಿಬಿಡುವ ಮೂಲಕ ಕೇಂದ್ರ ಸರ್ಕಾರ ಮತ್ತು ವೀರಶೈವ ಲಿಂಗಾಯಿತರ ನಡುವೆ ಕಂದಕವನ್ನುಂಟು ಮಾಡುವ ಹುನ್ನಾರಕ್ಕೆ ಕೈ ಹಾಕಿರುವುದು ಜನಕ್ಕೆ ತಿಳಿಯುವುದಿಲ್ಲಾ ಎಂದು ಭಾವಿಸಿದರೆ ಅದು ಶುದ್ಧ ಮೂರ್ಖತನ ಎನ್ನುವುದನ್ನು ಅವರು ತಿಳಿಯಬೇಕಾಗಿದೆ.
ದೇಶದ ಎಲ್ಲೆಡೆಯಲ್ಲಿಯೂ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಅಕ್ಟೋಬರ್ 24, 1984ರಲ್ಲಿ ಸದಾ ಕಾಲವೂ ಗಿಜಿ ಗಿಜಿ ನಗರ ಎಂದೇ ಪ್ರ(ಕು)ಖ್ಯಾತವಾಗಿರುವ ಕೋಲ್ಕತ್ತಾದಲ್ಲಿ ಸುಮಾರು 3.4 ಕಿಲೋಮೀಟರ್ ದೂರದ ಮೆಟ್ರೋ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಕೋಲ್ಕತ್ತಾ ನಗರದಲ್ಲಿ ಮೆಟ್ರೋ ಸೇವೆ ಯಶಸ್ವಿ ಆಗುತ್ತಿದ್ದಂತೆಯೇ ಆ ಮೆಟ್ರೋ ರೈಲು ಸೇವೆಗಳನ್ನು ಭಾರತದ ಇತರೇ ದೊಡ್ಡ ದೊಡ್ಡ ಪಟ್ಟಣಗಳಾದ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಜೈಪುರ, ಅಹಮದಾಬಾದ್, ಲಕ್ನೋ, ಕೊಚ್ಚಿ, ನಾಗ್ಪುರ ಮತ್ತು ಪುಣೆ ಅಲ್ಲದೇ, ಕಾನ್ಪುರ ಮತ್ತು ಗುರುಗ್ರಾಮ್ ನಗರಗಳಲ್ಲಿಯೂ ಮೆಟ್ರೋ ಮಾರ್ಗಗಳನ್ನು ಹಂತವಾಗಿ ವಿಸ್ತರಿಸಲಾಗುತ್ತಿದೆ.
ಈ ರೀತಿಯಾಗಿ ಮೆಟ್ರೋ ಎನ್ನುವುದು ಸಂಪೂರ್ಣವಾಗಿ ಜನೋಪಕಾರಿ ಯೋಜನೆಯಾಗಿದ್ದರೆ,ಸಿದ್ದರಾಮಯ್ಯ ಅವರಂತಹ ಅಧಿಕಾರಶಾಹಿ ರಾಜಕಾರಣಿಗಳು ಇಂತಹ ಜನೋಪಕಾರಿ ಯೋಜನೆಗಳ ಜೊತೆ ಧರ್ಮದವನ್ನು ಬೆರೆಸಿ, ಹೇಗೆ ತಮ್ಮ ಸ್ವಾರ್ಥಕ್ಕೆ ಪ್ರತ್ಯಕ್ಷವಾಗಿಯೋ ಇಲ್ಲವೇ ಧರ್ಮ ಪರೋಕ್ಷವಾಗಿ ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದೇ ಇಲ್ಲಿ ಕುತೂಹಲಕಾರಿಯಾಗಿದೆ.
2025ರ ಸೆಪ್ಟೆಂಬರ್ 08ರಂದು ಬೆಂಗಳೂರಿನ ಶಿವಾಜಿನಗರದಲ್ಲಿರುವ ಸೆಂಟ್ ಮೇರೀಸ್ ಚರ್ಚ್ ನಲ್ಲಿನ ಸೆಂಟ್ ಮೇರೀಸ್ ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಭಾಗವಹಿಸಿದ್ದಂತಹ ಸಂಧರ್ಭದಲ್ಲಿ, ಕ್ರಿಶ್ಚಿಯನ್ ಮಹಾಧರ್ಮಾಧ್ಯಕ್ಷರಾದ ಪೀಟರ್ ಮಚಾದೋ ಅವರು ಬೆಂಗಳೂರಿನ ಹೃದಯಭಾಗವಾದ ಎಂ.ಜಿ. ರಸ್ತೆಯಲ್ಲಿ ನೂತವಾಗಿ ನಿರ್ಮಾಣವಾಗುತ್ತಿರುವ ಮೆಟ್ರೋ ನಿಲ್ದಾಣಕ್ಕೆ ಸೈಂಟ್ ಮೇರಿ ಹೆಸರಿಡಬೇಕೆಂದು ಸಲ್ಲಿಸಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಸ್ಥಳದಲ್ಲೇ ಅವರ ಪ್ರಸ್ತಾವನೆಯನ್ನು ಸ್ವೀಕರಿಸುವ ಮೂಲಕ ತಮ್ಮ ಒಪ್ಪಿಗೆ ನೀಡಿದ್ದಲ್ಲದೇ, ಈ ಸಂಬಂಧವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಕೇಂದ್ರ ಸರ್ಕಾರದ ಅನುಮೋದನೆ ದೊರೆತ ಕೂಡಲೇ ಸೈಂಟ್ ಮೇರಿ ನಿಲ್ದಾಣದ ನಾಮಕರಣ ದಿನಾಂಕ ಘೋಷಣೆ ಮಾಡಲಾಗುವುದು ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಆ ಹೊಣೆಗಾರಿಕೆಯನ್ನು ಹಾಕಿ, ಕೇಂದ್ರ ಸಕಾರ ಅಂಗೀಕರಿಸಿದರೆ, ತಮ್ಮ ಪ್ರಸ್ತಾವನೆಯಿಂದ ಇದು ಸಾಧ್ಯವಾಯಿತೆಂದೂ, ಅಕಸ್ಮಾತ್ ಕೇಂದ್ರ ಸರ್ಕಾರ ಪ್ರಸ್ತಾಪನೆಯನ್ನು ತಿರಸ್ಕರಿಸಿದರೆ, ಕೇಂದ್ರ ಬಿಜೆಪಿ ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ಕಾಳಜಿಯೇ ಇಲ್ಲಾ ಎಂದು ಜನರ ಮುಂದೆ ಆಕ್ರೋಶ ವ್ಯಕ್ತಪಡಿಸುವ ಹುನ್ನಾರ ಹಾಕಿರುವ ವಿಚಾರವನ್ನು ನಮ್ಮ ಹಿಂದಿನ ಲೇಖನದಲ್ಲಿಯೂ ತಿಳಿಸಿದ್ದೆವು.
ಮೊದಲ ಬಾರಿ ಮುಖ್ಯಮಂತ್ರಿಗಳಾಗಿದ್ದಾಗ, ಮತ್ತೆಯೂ ಅಧಿಕಾರಕ್ಕೆ ಬರುವ ಸಲುವಾಗಿ, ಕರ್ನಾಟಕದಲ್ಲಿ ಬಿಜೆಪಿಯ ಬೆನ್ನೆಲುಬಾಗಿದ್ದ ಲಿಂಗಾಯಿತರ ಮತಗಳನ್ನು ತಮ್ಮ ಪರವಾಗಿ ಓಲೈಸಿಕೊಳ್ಳುವ ಸಲುವಾಗಿ ಲಿಂಗಾಯಿತ ಮತ್ತು ವೀರಶೈವರ ನಡುವೆ ಕಂದಕವನ್ನು ತಂದು ಆವರಿಬ್ಬರನ್ನೂ ಒಡೆಯುವ ವ್ಯರ್ಥ ಪ್ರಯತ್ನ ಮಾಡಿ, ಅಧಿಕಾರ ಬಿಡಿ ತಮ್ಮ ಸ್ವಕ್ಷೇತ್ರದಲ್ಲೇ ಸೋತು ಸುಣ್ಣವಾಗಿ ಬದಾಮಿಯಲ್ಲೂ ಕೂದಲೆಳೆ ಅಂತರದಿಂದ ಗೆಲ್ಲುವ ಮೂಲಕ ಅಲ್ಪ ಸ್ವಲ್ಪ ಮಾನವನ್ನು ಉಳಿಸಿಕೊಂಡಿದ್ದರು.
ಈಗ ಅದೇ ಲಿಂಗಾಯಿತ ಎನ್ನುವ ಜೇನುಗೂಡಿಗೆ ಕೈ ಹಾಕುವಂತಹ ಕೆಲಸಕ್ಕೆ ಮುಂದಾಗಿದ್ದಾರೆ. 2025ರ ಅಕ್ಟೋಬರ್ 05ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಆಯೋಜಿಸಲಾಗಿದ್ದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಮಾತನಾಡುತ್ತಾ, ಬೆಂಗಳೂರು ಜನರ ಜೀವನಾಡಿಯಾಗಿರುವ ನಮ್ಮ ಮೆಟ್ರೋ (Namma Metro)ಗೆ ಹಾಗೂ ಕೆಲವು ಮೆಟ್ರೋ ನಿಲ್ದಾಣಗಳಿಗೆ ಇಂಥವರ ಹೆಸರನ್ನೇ ಇಡಿ ಎಂಬ ಆಗ್ರಹ ಆಗಾಗ ಕೇಳಿ ಬರುತ್ತಿವೆ. ಇನ್ನು ವಯಕ್ತಿಕವಾಗಿ ಹೇಳಬೇಕೆಂದರೆ ನನಗೆ “ನಮ್ಮ ಮೆಟ್ರೋ” ಎನ್ನುವ ಬದಲಾಗಿ “ಬಸವ ಮೆಟ್ರೋ” ಎಂದು ನಾಮಕರಣ ಮಾಡುವ ಬಗ್ಗೆ ಅತೀವ ಒಲವಿದ್ದು, ಈ ಕೂಡಲೇ ಇದರ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ ನಾನು “ಬಸವ ಮೆಟ್ರೋ” ಎಂದು ಘೋಷಿಸಿ ಬಿಡುತ್ತಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳುವ ಮೂಲಕ ವೀರಶೈವರು ಮತ್ತು ಲಿಂಗಾಯಿತರ ಬೆಂಬಲ ಮುಂದಿನ ಬಾರಿಯೂ ತಮಗೆ ಇಲ್ಲವೇ ತಮ್ಮ ಪಕ್ಷಕ್ಕೆ ಮುಂದುವರೆಸುವಂತಹ ಯೋಜನೆಗೆ ಕೈ ಹಾಕಿರುವುದು ಸ್ಪಷ್ಟವಾಗಿದೆ.
ಹಾಗೆಯೇ ತಮ್ಮ ಮಾತನ್ನು ಮುಂದುವರೆಸುತ್ತಾ, ನಮ್ಮಲ್ಲಿ ಅನೇಕ ಜಾತಿ, ಅನೇಕ ಧರ್ಮಗಳಿವೆ. ಚಾತುವರ್ಣ ವ್ಯವಸ್ಥೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವವರು ನಾವು. ಶೂದ್ರರು ಜಾತಿ ಯಾವುದೇ ಆದರೂ ನಾವೆಲ್ಲರೂ ಒಂದೇ ಎನ್ನುವುದನ್ನು ಅರಿಯಬೇಕು. ನಾನು ಬಸವಣ್ಣನವರ ಅಭಿಮಾನಿ. ಬಸವ ತತ್ವದಲ್ಲಿ ನಂಬಿಕೆ – ಬದ್ಧತೆ ಇಟ್ಟುಕೊಂಡಿದ್ದೇನೆ. ಅಂದಿಗಲ್ಲ-ಇಂದಿಗಲ್ಲ-ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ ಮತ್ತು ಪ್ರಸ್ತುತ ಎನ್ನುವುದು ನನ್ನ ನಂಬಿಕೆ. ಸಹಬಾಳ್ವೆ ಮತ್ತು ಸಹಿಷ್ಣತೆಯನ್ನು ಬಸವಣ್ಣನವರು ಬದುಕಿನುದ್ದಕ್ಕೂ ಸಾರಿದರು. ನಾನೂ ಸಹಾ ಇದನ್ನು ಪಾಲಿಸುತ್ತೇನೆ ಎಂದಿದ್ದಲ್ಲದೇ, ಬಸವ ಜಯಂತಿಯ ದಿನವೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ, ನಾನು ಅದೇ ದಿನ ಎಲ್ಲರಿಗೂ ಬದುಕುವ ಸಮಾನ ಅವಕಾಶಗಳನ್ನು ಕಲ್ಪಿಸುವ ಬಸವಣ್ಣನವರ ಆಶಯಗಳನ್ನು ಈಡೇರಿಸುವ ತೀರ್ಮಾನ ಮಾಡಿದೆ. ಸರ್ಕಾರ ಬಸವಣ್ಣನವರಿಗೆ ಗೌರವ ಸೂಚಿಸುವ ಸಲುವಾಗಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಲ್ಲದೇ, ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಇಡುವುದನ್ನು ಕಡ್ಡಾಯ ಮಾಡಿದ್ದು ಸಹಾ ನಾನೇ ಎಂದು ಹೇಳಿಕೊಂಡಿದ್ದಾರೆ.
ಅಂಬೇಡ್ಕರ್ ಅವರ ಸಂವಿಧಾನದಲ್ಲಿಯೂ ಸಹಾ ಬಸವಣ್ಣನವರ ಆಶಯಗಳೇ ಇದ್ದು, ಅದನ್ನು ಸಾಕಾರಗೊಳಿಸುವುದಕ್ಕಾಗಿಯೇ ನಮ್ಮ ಸರ್ಕಾರ ನೀಡುವ ಹತ್ತು ಹಲವು ಭಾಗ್ಯಗಳ, ಗ್ಯಾರಂಟಿಗಳ ಮೂಲಕ ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ಬದುಕಿಗೆ ಅವಕಾಶಗಳನ್ನು ಕಲ್ಪಿಸುವ ಮೂಲಕ ಹೇಳಿದ್ದಾರೆ. ಸಂವಿಧಾನ ಮತ್ತು ಶರಣ ಸಂಸ್ಕೃತಿ ಒಂದೇ ಆಗಿದೆ ಎಂದು ಹೇಳಿದ್ದಷ್ಟೇ ಅಲ್ಲದೇ, ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಸಂವಿಧಾನದ ಆಶಯವಾದರೆ ಬಸವಣ್ಣನವರೂ ಜಾತಿ ರಹಿತ, ವರ್ಗ ರಹಿತ ಬ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ಹೀಗಾಗಿ ಬಸವಣ್ಣನವರು ಯಾವತ್ತಿಗೂ ಪ್ರಸ್ತುತ. ಬಸವಣ್ಣನವರು ನುಡಿದಂತೆ ನಡೆದರು. ನಾವು ಬಸವ ಅನುಯಾಯಿಗಳೂ ನುಡಿದಂತೆ ನಡೆದಾಗ ಮಾತ್ರ ನಿಜವಾದ ಬಸವ ಅನುಯಾಯಿ ಆಗುತ್ತೇವೆ. ಒಬ್ಬ ಬಸವ ಅನುಯಾಯಿಯಾಗಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವ ಬೇಡಿಕೆ ಬಗ್ಗೆ ಸರ್ಕಾರದ ಒಪ್ಪಿಗೆ ಇದೆ. ಮುಂದಿನ ವರ್ಷ ವಚನ ವಿವಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂಬ ಆಶ್ವಾಸನೆ ನೀಡುವ ಮೂಲಕ ವೀರಶೈವ & ಲಿಂಗಾಯಿತರು ತಮ್ಮ ರಾಜಕೀಯ ಹುನ್ನಾರವನ್ನು ಅರಿಯದ ಮುಗ್ಧರು ಎಂದು ಭಾವಿಸಿದ್ದಾರೆ ಎಂದೆನಿಸುತ್ತದೆ.
ಏಕೆಂದರೆ 2025ರ ಸೆಪ್ಟೆಂಬರ್ 06 ರಂದು ಇದೇ ಅರಮನೆ ಮೈದಾನದಲ್ಲಿ ಮುಸ್ಲಿಂ ಸಮುದಾಯದ ಮಿಲಾದ್ ಸಮಿತಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಿಲಾದುನ್ನಬೀ ಸಮಾವೇಶದಲ್ಲಿ ತಲೆಯ ಮೇಲೆ ಮುಸಲ್ಮಾನರ ತುಪ್ಪಳದ ಟೋಪಿ ಹಾಕಿಕೊಂಡು ಹೆಗಲ ಮೇಲೆ ಮುಸ್ಲಿಮ್ಮರ ಶಾಲು ಧರಿಸಿದ್ದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇಸ್ಲಾಂ ಎಂದರೆ ಶಾಂತಿ, ಮೊಹಮದ್ ಪ್ರವಾದಿ ಎಂದರೆ ಶಾಂತಿಯ ದೂತ. ಪ್ರವಾದಿ ಅವರು, ಪ್ರವಾದಿಯವರ ಬೋಧನೆಗಳು ಮಾನವ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವು. ಅವರು ಸಮಸ್ತ ಮಾನವಕೋಟಿಗೆ ನ್ಯಾಯ, ಸಮಾನತೆ ಮತ್ತು ಧಾರ್ಮಿಕ ಸೌಹಾರ್ದದ ಮಾರ್ಗಗಳನ್ನು ತೋರಿಸಿದರು. ಪರಧರ್ಮ ಸಹಿಷ್ಣುತೆಯೇ ನಮ್ಮ ಸಂವಿಧಾನದ ಮೂಲ ಆಶಯವಾಗಿದ್ದು ಸಂವಿಧಾನದ ಪಾಲನೆಯೇ ನಮ್ಮೆಲ್ಲರ ಗುರಿಯಾಗಲಿ ಎಂದು ಹೇಳುವ ಮೂಲಕ ಹೋದ ಬಂದ ಕಡೆ ಅಲ್ಲಿಯವರನ್ನು ಹೇಗೆ ತಮ್ಮ ಕಡೆಗೆ ಸೆಳೆದು ಕೊಳ್ಳಬೇಕು ಎಂದು ಮುಖ ನೋಡಿ ಮೊಳ ಹಾಕುವುದನ್ನು ಚೆನ್ನಾಗಿ ಕಲಿತು ಕೊಂಡಿದ್ಡಾರೆ.
ಅದು ಮೆಟ್ರೋ ಆಗಲೀ, ವಿಶ್ವವಿದ್ಯಾಲಯವೇ ಆಗಲಿ ಅದು ಸಮಾಜಮುಖಿಯಾಗಿ ಸಾರ್ವಜನಿಕರಿಗೆ ಅನುಕೂಲ ಆಗುವಂತಹದ್ದಾಗಿರ ಬೇಕೇ ಹೊರತು ತಮ್ಮ ಸ್ವಾರ್ಥಕ್ಕಾಗಿ ಇಲ್ಲವೇ ಯಾರನ್ನೋ ಓಲೈಸಿಕೊಳ್ಳುವುದಕ್ಕಾಗಿ ಇರಬಾರದು. ನಮ್ಮ ಮೆಟ್ರೋ ಎಂಬ ಹೆಸರಿನಲ್ಲಿ ನಮ್ಮ ಎನ್ನುವುದರಲ್ಲೇ ಎಲ್ಲರೂ ಸೇರಿಕೊಂಡಿರುವಾಗ ಈಗ ಬಸವ ಮೆಟ್ರೋ ಎಂದೋ ಇಲ್ಲವೇ ಸೈಂಟ್ ಮೇರಿ ನಿಲ್ದಾಣ ಎಂಬ ಹೆಸರನ್ನು ಇಡುವ ಮೂಲಕ ಒಂದು ಸಮುದಾಯಕ್ಕಷ್ಟೇ ಸೀಮಿತಗೊಳಿಸಿದರೆ, ಸಂವಿಧಾನದ ಮೂಲ ಆಶಯವಾದ ಸರ್ವಧರ್ಮ ಸಮನ್ವಯ ಹೇಗಾಗುತ್ತದೆ ಎಂದು ಸಿದ್ದರಾಮಯ್ಯನವರೇ ಹೇಳ ಬೇಕಷ್ಟೇ…
ತಮ್ಮ ಅಧಿಕಾರದ ತೆವಲಿಗಾಗಿ ಬಿಟ್ಟಿ ಭಾಗ್ಯಗಳನ್ನು ನೀಡಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹದಗೆಡೆಸಿರುವ ಈ ಸರ್ಕಾರ, ಈಗ ಕಂತೆಗೆ ತಕ್ಕಂತೆ ಬಂತೆ ಎಂದು ಸಮಯಕ್ಕೊಂದು ಸುಳ್ಳುಗಳನ್ನು ಆಡುತ್ತಾ, ಒಳ್ಳೆಯದಾದ್ರೇ ತಮ್ಮದು ಕೆಟ್ಟದಾದ್ರೇ ಕೇಂದ್ರದ್ದು ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಾ, ಒಂದು ಕಡೆ ಹಿಂದೂಗಳನ್ನು ಜಾತಿ, ಧರ್ಮ ಆಧಾರಿತವಾಗಿ ವಿಭಜನೆ ಮಾಡುತ್ತಾ, ಮತ್ತೊಂದು ಕಡೆ ಬಜೆಟ್ಟಿನಲ್ಲಿ ಸರ್ಕಾರದ ಬಹುತೇಕ ಅನುದಾನಗಳನ್ನು ಅಲ್ಪಸಂಖ್ಯಾತರಿಗಷ್ಟೇ ಮೀಸಲಾಗಿಸಿ ಎಲ್ಲರನ್ನೂ ಮಂಗ ಮಾಡುತ್ತಿರುವುದು ಸ್ಪಷ್ಟವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ