ನಾವೆಲ್ಲಾ ಚಿಕ್ಕವರಿದ್ದಾಗಿ ರೇಡಿಯೋ ಕೇಳಿಕೊಂಡೇ ಬೆಳೆದವರು. ಪ್ರತಿದಿನ ಬೆಳಿಗ್ಗೆ 5:55 ಕ್ಕೆ ವಂದೇ ಮಾತರಂನಿಂದ ಆರಂಭವಾಡರೆ 8 ಗಂಟೆಯ ಆಂಗ್ಲ ವಾರ್ತಾ ಪ್ರಸಾರದ ವರೆಗೂ ನಿರಂತರವಾಗಿ ನಮಗೆ ಸಮಯ ಗೊತ್ತಾಗುತ್ತಿದ್ದದ್ದೇ ಪ್ರತೀದಿನವೂ ಸಮಯಕ್ಕೆ ಸರಿಯಾಗಿ ಪ್ರಸಾರವಾಗುತ್ತಿದ್ದ ವಿವಿಧ ರೇಡಿಯೋ ಕಾರ್ಯಕ್ರಮಗಳಿಂದಲೇ. ಬೆಳಿಗ್ಗೆ 7:20 ರಿಂದ 7:35ರವರೆಗೂ ಪ್ರಸಾರವಾಗುತ್ತಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಮಕ್ಕಳ ದೇಶಭಕ್ತಿ ಗೀತ ಗಾಯನದ ಅಭ್ಯಾಸ ನಮಗೆ ಬಹಳ ನೆಚ್ಚಿನ ಕಾರ್ಯಕ್ರಮವಾಗಿದ್ದು, ಆ ಕಾರ್ಯಕ್ರಮದ ಮೂಲಕ ತಕ್ಕ ಮಟ್ಟಿಗೆ ಕರ್ನಾಟಕ ಸಂಗೀತ ಮತ್ತು ಚೆನ್ನಾಗಿಯೇ ಶಿಶುಗೀತೆ, ಭಾವಗೀತೆ ಮತ್ತು ದೇಶಭಕ್ತಿ ಗೀತೆಗಳ ಪರಿಚಯ ಮಾಡಿಕೊಟ್ಟ ನಾಡಿನ ಹೆಸರಾಂತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು ಮತ್ತು ಸಂಯೋಜಕರಾದ ಶ್ರೀ ಎಚ್ ಕೆ ನಾರಾಯಣ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.
ಕನ್ನಡದಲ್ಲಿ ಸುಗಮ ಸಂಗೀತ ಮತ್ತು ಭಾವಗೀತೆಗಳು ಎಂದಾಕ್ಷಣ ನಮಗೆ ಥಟ್ ಅಂತಾ ನೆನಪಾಗೋದೇ ದಿಗ್ಗಜರಾದ ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ ಮತ್ತು ಸಿ ಅಶ್ವಥ್. ಅಚ್ಚರಿಯ ವಿಷಯವೆಂದರೆ, ಇವರೆಲ್ಲರಿಗೂ ಮುಂಚೆ ಮತ್ತು ಇವರೆಲ್ಲರಿಗಿಂತಲೂ ಹೆಚ್ಚಾಗಿ ಕನ್ನಡ ನಾಡಿನ ಅತಿ ಹೆಚ್ಚು ಸಂಖ್ಯೆಯ ಕವಿಗಳ ಗೀತೆಗಳಿಗೆ, ರಾಗಸಂಯೋಜನೆಮಾಡಿ, ಕವಿತೆಗಳನ್ನು ಗೀತೆಗಳ ರೂಪದಲ್ಲಿ ಕ್ಯಾಸೆಟ್ ರೂಪದಲ್ಲಿ ಪ್ರಚಾರಕ್ಕೆ ಹೊರತಂದ ಖ್ಯಾತಿಯ ಪಡೆದವರೇ ಶ್ರೀ ಎಚ್ ಕೆ ನಾರಾಯಣ ಎಂದರೂ ತಪ್ಪಾಗದು.
ಸಂಗೀತ, ಸಾಹಿತ್ಯ, ನೃತ್ಯ ಮತ್ತು ಶಿಲ್ಪಕಲೆಗಳ ಬೀಡಾದ ಹಾಸನದ ಹೊಳೆನರಸಿಪುರದ ಬಳಿಯ ಸಣ್ಣ ಗ್ರಾಮದಲ್ಲಿ. ಸಂಗೀತಗಾರರಾಗಿದ್ದಂತಹ ಶ್ರೀ ಕೇಶವಯ್ಯ ಮತ್ತು ಸಣ್ಣಮ್ಮ ದಂಪತಿಗಳ ಮಗನಾಗಿ ಮೇ 14, 1934 ಜನಿಸಿದರು. ಅದರ ಜೊತೆ ಅವರ ಸೋದರ ಮಾವ ಶ್ರೀ ಎಮ್. ಪಿ. ನಾಗಮುತ್ತು ಅದಾಗಲೇ ಖ್ಯಾತ ಸಂಗೀತಕಾರರಾಗಿ ಆಕಾಶವಾಣಿಯ ಸಂಗೀತ ವಿಭಾಗದಲ್ಲಿ ಕೆಲಸಮಾಡುತ್ತಿದ್ದರು. ಮನೆಯಲ್ಲೇ ಇಂತಹ ಸಂಗಿತದ ವಾತಾವರಣವಿದ್ದ ಕಾರಣ, ಅವರಿಗೆ ಆರು ವರ್ಷವಿದ್ದಾಗಲೇ ನಾರಾಯಣರು ಮತ್ತು ಅವರ ತಮ್ಮ ಕೇಶವ ಮೂರ್ತಿ ಇಬ್ಬರೂ ಸಹಾ ತಮ್ಮ ತಂದೆಯವರಿಂದಲೇ ಪಿಟೀಲು ವಾದನದ ಮೂಲಕ ಸಂಗೀತಾಭ್ಯಾಸವನ್ನು ಆರಂಭಿಸಿ, ಮುಂದೇ ನಾರಾಯಣರು ಗಾಯನದಲ್ಲೇ ಪ್ರಾವೀಣ್ಯತೆಯನ್ನು ಪಡೆದರೆ, ಅವರ ತಮ್ಮ ಶ್ರೀ ಎಚ್. ಕೆ. ಕೇಶವ ಮೂರ್ತಿಗಳು ಕರ್ನಾಟಕ ಸಂಗೀತದ ಪ್ರಸಿದ್ಧ ಪಿಟೀಲು ವಾದಕರಾಗಿ ಹೆಸರು ಗಳಿಸಿದರು.
ಸಂಗೀತದಲ್ಲೇ ಹೆಚ್ಚಿನ ಅಭ್ಯಾಸ ನಡೆಸುವ ಸಲುವಾಗಿ ನಾರಾಯಣರು ಮೈಸೂರಿನ ಹಿರಿಯ ಸಂಗೀತಗಾರರಾದ ಶ್ರೀ ಆರ್. ಕೆ. ಶ್ರೀಕಂಠನ್ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಗಾಯನ ಸಂಗೀತ ಪಾಠಗಳನ್ನು ಪಡೆದು ನಂತರದ ದಿನಗಳಲ್ಲಿ ನಾರಾಯಣ ಅವರು ಶ್ರೀ ಆರ್. ಕೆ. ಶ್ರೀಕಂಠನ್ ಅವರ ನೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಹೋದದ್ದು ಇತಿಹಾಸ. ಹೀಗೆ ಶಾಸ್ತ್ರೀಯವಾಗಿ ಸಂಗೀತ ಕಲಿತು ಬಹಳ ಸಣ್ಣ ವಯಸ್ಸಿನಲ್ಲಿಯೇ ತಮ್ಮ ಮಾವನಂತೆ ನಾರಾಯಣರೂ ಸಹಾ ಆಕಾಶವಾಣಿಗೆ ಪಾದಾರ್ಪಣೆ ಮಾಡಿದರು. ಆ ಸಮಯದಲ್ಲಿ ಗೀತೆಯೊಂದಕ್ಕೆ ಅವರು ಹಾಕಿದ ಸ್ವರಪ್ರಸ್ತಾವನೆ ಸ್ವತಃ ಅವರ ಗುರುಗಳಾದ, ವಿದ್ವಾನ್ ಶ್ರೀ ಅರ್. ಕೆ. ಶ್ರೀಕಂಠನ್ ಅಲ್ಲದೆ, ಎಲ್ಲರಿಂದಲೂ ಪ್ರಶಂಸೆಯನ್ನು ಗಿಟ್ಟಿಸಿಕೊಂಡ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬಾರದೇ, ಆಕಾಶವಾಣಿಯಲ್ಲಿ ಸಂಗೀತ ಸಂಯೋಜಕರಾಗಿ ನೇಮಕಗೊಂಡು ಎಲ್ಲರಿಂದಲೂ ಎಚ್.ಕೆ.ಎನ್ ಎಂದೆ ಪ್ರಖ್ಯಾತರಾದರು.
ವಿದ್ಯಾರ್ಥಿ ದಸೆಯಿಂದಲೇ ಆಕಾಶವಾಣಿಯಲ್ಲಿ ಸಿಬ್ಬಂದಿ ಕಲಾವಿದರಾಗಿ ಸೇರಿದ ಎಚ್‌ಕೆಎನ್ ಸುಮಾರು ನಾಲ್ಕು ದಶಕಗಳ ಕಾಲ ಆಕಾಶವಾಣಿಯಲ್ಲಿ ಜೂನಿಯರ್ ಸಂಯೋಜಕ, ಹಿರಿಯ ಸಂಯೋಜಕ, ಸಂಗೀತ ನಿರ್ಮಾಪಕ, ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತದ ಎ ಗ್ರೇಡ್ ಕಲಾವಿದರಾಗಿ ಅನೇಕ ಪ್ರಮುಖ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿದರು. ಎಚ್‌ಕೆಎನ್ ಅವರು ಸುಮಧುರವಾಗಿ ಹಿನ್ನೆಲೆ ಸಂಗೀತವನ್ನು ಸಂಯೋಜಿಸುವ ಕಲೆಯ ಹಿಂದೆ ಬೆಂಗಳೂರಿನ ಆಕಾಶವಾಣಿಯಲ್ಲಿ ಲಘು ಸಂಗೀತದ ಸಹಾಯಕ ನಿರ್ಮಾಪಕರಾಗಿ ಕೆಲಸ ಮಾಡಿದ ಶ್ರೀ ಎಂ.ಡಿ. ಪಾರ್ಥಸಾರಥಿ ಅವರ ಪಾತ್ರವೂ ಪ್ರಮುಖವಾಗಿತ್ತು. ಸಂಗೀತಕಾರರಾದ, ವಸಂತಕವಲಿ, ಪದ್ಮಚರಣ್, ವಿದ್ವಾನ್, ಆರ್. ಕೆ. ಶ್ರೀಕಂಠನ್, ವೀಣಾ ದೊರೈಸ್ವಾಮಿ ಅಯ್ಯಂಗಾರ್, ಎಸ್. ಕೃಷ್ಣಮೂರ್ತಿ, ಎಚ್. ಆರ್. ಲೀಲಾವತಿ ಮುಂತಾದವರಿಗೆ, ಸಹಾಯಕರಾಗಿ, ಸಹೋದ್ಯೋಗಿಯಾಗಿ, ಎಲ್ಲರ ಮೆಚ್ಚುಗೆ ಗಳಿಸಿದ್ದ ಎಚ್‌ಕೆಎನ್ ಅವರನ್ನು ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ಅವರಿಗೆ ವರ್ಗ ಮಾಡಿದ್ದನ್ನು ವಿರೋಧಿಸಿ, 1989ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಆಕಾಶವಾಣಿಯಿಂದ ನಿವೃತ್ತರಾದರು.
ಕರ್ನಾಟಕದ ಶಾಸ್ತ್ರೀಯ ಸಂಗೀತದ ಜೊತೆ ಜೊತೆಯಲ್ಲೇ ಅವರು ಸುಗಮ ಸಂಗೀತ ಮತ್ತು ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳಲ್ಲಿ ಸಹಗಾನ ಕಲಾವಿದರಾಗಿ ಕರಾರುವಾಕ್ಕಾಗಿ ಮತ್ತು ಭಾವಪೂರ್ಣವಾಗಿ, ನಟುವಾಂಗದೊಡನೆ ತಾಸುಗಟ್ಟಲೆ ನೃತ್ಯದ ಸಹಗಾಯನವನ್ನು ಅತ್ಯದ್ಭುತವಾಗಿ ನಿರ್ವಹಿಸುತ್ತಿದ್ದದ್ದು ನಿಜಕ್ಕೂ ಅದ್ಭುತ ಮತ್ತು ಅನನ್ಯವೇ ಸರಿ. ಭಾವಗೀತೆಗಳ ರಾಗಸಂಯೋಜನೆಗೆ ಅಗತ್ಯವಾಗಿದ್ದ ಹಿಂದೂಸ್ತಾನಿ ಸಂಗೀತ ಪ್ರಾಕಾರದಲ್ಲೂ ಸಾಕಷ್ಟು ಪರಿಶ್ರಮವನ್ನು ಸಾಧಿಸಿದ್ದರು. ನೃತ್ಯಗಳಿಗೆ ಹಾಡಲು ಪ್ರಾರಂಭಿಸಿದ ಎರಡು ವರ್ಷಗಳಲ್ಲೇ ತಮ್ಮ ಶಿಷ್ಯೆ, ನೃತ್ಯಾಂಗನೆ ಶಾಂತ ಅವರನ್ನು ಮದುವೆಯಾಗುವ ಮೂಲಕ ಚತುರ್ಭುಜರಾದ ಎಚ್‌ಕೆಎನ್, ಅವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ ಒಬ್ಬ ಮಗ ಮತ್ತು ಇಬ್ಬರ ಹೆಣ್ಣು ಮಕ್ಕಳ ತಂದೆಯಾದರು.
ಮಗ ಇನ್ನೂ ಚಿಕ್ಕವನಿರುವಾಗಲೇ. ದುರಾದೃಷ್ಟವಷಾತ್ ಅವರ ಮನೆಯಲ್ಲಾದ ಸಣ್ಣ ಗ್ಯಾಸ್ ಸಿಲಿಂಡರ್ ಸ್ಫೋಟ ದಿಂದ ಮೃತನಾದ ನಂತರ, ಪುತ್ರ ಶೋಕ ನಿರಂತರಂ ಎನ್ನುವಂತೆ ಆ ಅಪ್ರಿಯ ಘಟನೆಯನ್ನು ಮರೆಯಲು, ನಾರಾಯಣ್ ಅವರು ಇನ್ನೂ ಹೆಚ್ಚಿನ ಸಂಗೀತಾರಾಧನೆ ಮತ್ತು ಧ್ಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಜೊತೆಗೆ ಗಿಟಾರ್ ಮತ್ತು ಬಾಲ್ಯದಿಂದಲೇ ಕಲಿತ ಪಿಟೀಲುಗಳ ಮೀಲಕ ಪಾಶ್ಚ್ಯಾತ್ಯ ಸಂಗೀತದಲ್ಲೂ ಪ್ರಾವೀಣ್ಯತೆ ಪಡೆದರು. ನಾರಾಯಣರು ಸಂಗೀತ ಮತ್ತು ಮಡದಿ ಕಾಂತ ಕಥಕ್ ನೃತ್ಯಗಾರ್ತಿ ಯಾಗಿದ್ದರಿಂದ ಅವರ ಪುತ್ರಿಯರಾದ ಚಂದು ಮತ್ತು ಮಂಜು ಅವರೂ ಸಹಾ ಕಲಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಚಂದು ಭರತನಾಟ್ಯ ನೃತ್ಯಗಾರ್ತಿ ಮತ್ತು ತಂಜಾವೂರು ಶೈಲಿಯ ವರ್ಣಚಿತ್ರಗಾರ್ತಿಯಾದರೆ, ಮಂಜು ವಾದ್ಯದಲ್ಲಿ ಆಸಕ್ತಿ ಹೊಂದುವ ಮೂಲಕ ಸಂಗೀತದ ತಮ್ಮ ವಂಶಪಾರಂಪರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಸಂಯೋಜನೆಯಷ್ಟೇ ಅಲ್ಲದೇ, ನೃತ್ಯ ರೂಪಕಗಳಿಗೂ ಸಂಗೀತ ನೀಡುವುದನ್ನು ಪ್ರಾರಂಭಿಸಿದ ಎಚ್‌ಕೆಎನ್ ಜಯದೇವರ ಶೃಂಗಾರನಾಯಕ, ಕುವೆಂಪು ಅವರ ಚಿತ್ರಾಂಗದ, ರವೀಂದ್ರನಾಥ ಟ್ಯಾಗೋರ್ ಅವರ ಗೀತಾಭಾರತ ಸೇರಿದಂತೆ ಹಲವಾರು ಸಂಗೀತ ಆಧಾರಿತ ನಾಟಕಗಳಿಗೆ ಸಂಗೀತ ಸಂಯೋಜಿಸಿದ್ದಲ್ಲದೇ ವಿದೇಶಗಳಲ್ಲಿ ಸುಮಾರು 25 ಕ್ಕೂ ಹೆಚ್ಚು ನೃತ್ಯ ನಾಟಕಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. ಕೇವಲ ಭಾರತದ ವಿವಿಧ ಭಾಗಗಳಷ್ಟೇ ಅಲ್ಲದೇ ಅಮೇರಿಕಾ, ಇಂಗ್ಲೆಂಡ್, ಸಿಂಗಾಪುರ, ಹಾಂಗ್‌ಕಾಂಗ್, ಶ್ರೀಲಂಕಾ, ರಷ್ಯಾ, ಮನಿಲಾ ಮತ್ತಿತದ ವಿದೇಶಗಳಲ್ಲಿ ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಗಾಯಕರಾಗಿ ಅವರು ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ. ಕೇವಲ ಕನ್ನಡದ ಗೀತೆಗಳಿಗಷ್ಟೇ ಸಂಯೋಜನೆ ಮಾಡುವುದಷ್ಟೇ ಅಲ್ಲದೇ, ಆಕಾಶವಾಣಿಯ ಇತರೇ ಪ್ರಾದೇಶಿಕ ಭಾಷೆಗಳಲ್ಲೂ ಎಚ್‌ಕೆಎನ್‌ರ ಸಂಗೀತ ಸಂಯೋಜನೆಗಳನ್ನು ಮಾಡಿದ್ದಾರೆ. ಕ್ಯಾಲಿಕಟ್‌ನಲ್ಲಿ ಆಕಾಶವಾಣಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮೂರು ಮಲಯಾಳಂ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದರು.
ಈಗಾಗಲೇ ತಿಳಿಸಿದಂತೆ ಸಂಗೀತ ಕ್ಷೇತ್ರದಲ್ಲಿ ಹಲವಾರು ಜನಪ್ರಿಯ ಕವಿಗಳ ಕೃತಿಗಳಿಗೆ ಸುಮಧುರವಾದ ರಾಗ ಸಂಯೋಜಿಸಿ ನೂರಾರು ಗೀತೆಗಳು ಕನ್ನಡಿಗರ ಮನೆ ಮತ್ತು ಮನಮುಟ್ಟುವಂತೆ ಮಾಡಿರುವುದು ಎಚ್‌ಕೆಎನ್ ಅವರ ಮತ್ತೊಂದು ಸಾಧನೆ. ನಿವೃತ್ತಿಯ ನಂತರ ರಮಣಾಂಜಲಿ ತಂಡದ ಸದಸ್ಯರಾಗಿ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರ ರಾಜ್‌ಕುಮಾರ್ ಭಾರತಿ ಅವರೊಂದಿಗೆ ರಮಣ ಮಹರ್ಷಿ ಗೀತಗಾಯನಕ್ಕಾಗಿ ಸುಮಾರು 150 ಕ್ಕೂ ಹೆಚ್ಚಿನ ಆಡಿಯೊ ಕ್ಯಾಸೆಟ್‌ಗಳಿಗೆ ಹಾಡಿದ್ದಾರೆ. ಆರಂಭದಲ್ಲಿ ಕುಕ್ಕೇ ಸುಬ್ರಹ್ಮಣ್ಯದ ಪೀಠಾಧಿಪತಿಗಳಾಗಿ ನಂತರ ಕನ್ನಡ ನಾಡಿನ ಪ್ರಸಿದ್ಧ ಗಾಯಕರಾಗಿ ಮನೆಮಾತಾದ ಶ್ರೀ ವಿದ್ಯಾಭೂಷಣ ಸ್ವಾಮಿಗಳ ಆರಂಭದಿಂದ ಸುಮಾರು 35 ಕ್ಕೂ ಹೆಚ್ಚು ಆಡಿಯೊ ಕ್ಯಾಸೆಟ್‌ಗಳಿಗೆ ಸರಳವಾದ ಆದರೇ ಆಷ್ಟೇ ಸುಮಧುರವಾದ ಸಂಗೀತ ಸಂಯೋಜಿಸಿ ವಿದ್ಯಾಭೂಷಣರ ಕೀರ್ತಿಯಲ್ಲಿ ಎಚ್‌ಕೆಎನ್ ಅವರ ಪಾಲೂ ಸಹಾ ಇದೆ. ವಿಶ್ವವಿನೂತನ, ವಿದ್ಯಾಚೇತನ,…ಸರ್ವಹೃದಯ ಸಂಸ್ಕಾರಿ….ಜಯಭಾರತೀ ಎಂಬ ಗೀತೆಯ ಸಮೂಹ ಗಾಯನಕ್ಕಾಗಿ ಸಂಗೀತ ನೀಡಿರುವ ಅತ್ಯಂತ ಪ್ರಮುಖ ಗೀತೆಗಳಲ್ಲೊಂದು. ಮಕ್ಕಳಿಗಾಗಿ ಆಕಾಶವಾಣಿಯಲ್ಲಿ ಅವರು ಹೇಳಿಕೊಟ್ಟ ನೋಡಮ್ಮ ಮುಗಿಲ ತುಂಬ ಬೆಳ್ ಬೆಳಗಿನ ಮಲ್ಲಿಗೆ ಹಾಡು ಇನ್ನೂ ನಮ್ಮ ಕಿವಿಗಳಲ್ಲಿ ಗುಂಯ್ ಗುಟ್ಟುತ್ತಿದೆ

ಕರ್ನಾಟಕದ ಪ್ರಸಿದ್ಧ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ಕನ್ನಡದಲ್ಲಿ ಸುಗಮ ಸಂಗೀತ ಪ್ರಕಾರವನ್ನು ಜನಪ್ರಿಯಗೊಳಿಸುವಲ್ಲಿ ಎಚ್‌ಕೆಎನ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಖ್ಯಾತ ಕವಿಗಳಾದ ನಿಸ್ಸಾರ್ ಅಹ್ಮದ್ ಅವರ ನಾದವಿರದ ಬದುಕುಕೆ, ಕುವೆಂಪು ಅವರ ಬೃಂದಾವನಕೆ ಹಾಲನು ಮಾರಲು, ಬೇಂದ್ರೆ ಅವರ ಶುಭ ನುಡಿಯೇ ಶಕುನಾದ ಹಕ್ಕಿ ಮುಂತಾದ ಪ್ರಸಿದ್ಧ ಹಾಡುಗಳಿಗೆ ಸಂಗೀತ ಸಂಯೋಜಿಸಿ ಆ ಹಾಡುಗಳು ಸುಪ್ರಸಿದ್ಧವಾಗಲು ಕಾರಣೀಭೂತರಾಗಿದ್ದಲ್ಲದೇ ರೇಡಿಯೋದಲ್ಲಿ ನವಸುಮ ಮತ್ತು ಗೀತಾರಾಧನೆಯ ಮೂಲಕ ಜನಪ್ರಿಯರಾಗಿದ್ದರು.
ಕುವೆಂಪು ವಿರಚಿತ ಕರ್ನಾಟಕದ ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಹಾಡಿಗೆ ಮೈಸೂರು ಅನಂತ ಸ್ವಾಮಿ ಮತ್ತು ಸಿ ಅಶ್ವಥ್ ಇಬ್ಬರೂ ಸಹಾ ರಾಗ ಸಂಯೋಜಿಸಿ ಎರಡೂ ಪ್ರಕಾರಗಳು ಬಹಳಷ್ಟು ಜನಪ್ರಿಯವಾಗಿರುವಾಗ ಅಧಿಕೃತವಾಗಿ ಕನ್ನಡದ ನಾಡಗೀತೆಗೆ ಯಾವ ರಾಗ ಸಂಯೋಜನೆಯಲ್ಲಿ ಹಾಡಿಸಬೇಕು? ಎಂಬ ಜಿಜ್ಞಾಸೆಯನ್ನು ಪರಿಹರಿಸುವ ಸಲುವಾಗಿ 2004ರಲ್ಲಿ ಅಂದಿನ ಮುಖ್ಯಮಂತ್ರಿ ಎನ್. ಧರಂಸಿಂಗ್ ಅವರು ರಚಿಸಿದ್ದ ಕರ್ನಾಟಕ ನಾಡಗೀತೆಯ ಹಾಡುವಿಕೆಗೆ ಸೂಕ್ತವಾದ ರಾಗವನ್ನು ಆಯ್ಕೆ ಮಾಡಲು ಮತ್ತು ಸೂಚಿಸಲು ಕರ್ನಾಟಕ ಸರ್ಕಾರದ ಸಮಿತಿಯಲ್ಲಿ ಎಚ್‌ಕೆಎನ್ ಸಹಾ ಭಾಗವಾಗಿದ್ದರು. ಜಿ.ಎಸ್. ಶಿವರುದ್ರಪ್ಪ, ಸಿದ್ದಲಿಂಗಯ್ಯ, ದೊಡ್ಡರಂಗೇಗೌಡ ಮತ್ತು ರಾಜಶೇಖರ್ ಮನ್ಸೂರ್ ಅವರನ್ನೊಳಗೊಂಡ ಸಮಿತಿಯು ಅಧಿಕೃತವಾಗಿ ಕವಿತೆಯ ಹಾಡಿನ ಗುಣಮಟ್ಟ ಮತ್ತು ಘನತೆಯ ಬಗ್ಗೆ ಚರ್ಚಿಸಿ, ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಸಂಗೀತ ಸೂಕ್ತವಾಗಿದೆ ಎಂದು ಶಿಫಾರಸು ಮಾಡಿತ್ತು.
ಹಾಡಿನ ಭಾವಗೀತಾತ್ಮಕ ಸೌಂದರ್ಯಕ್ಕೆ ಧಕ್ಕೆಯಾಗದಂತೆ ರಾಗವನ್ನು ಎಚ್ಚರಿಕೆಯಿಂದ ರೂಪಿಸುವುದಕ್ಕೆ ಹೆಸರುವಾಸಿಯಾಗಿದ್ದ ಎಚ್‌ಕೆಎನ್ ಕೇಳುಗರು ಅವರ ಸಂಗೀತ ಸಂಯೋಜನೆಯಲ್ಲಿ ಕವಿತೆಯ ಭಾವನಾತ್ಮಕ ತಿರುಳನ್ನು ಆನಂದಿಸಬಹುದಿತ್ತು. ಅವರ ಸಂಗೀತದಂತೆಯೇ ಅವರ ಕೈಬರಹದ ಲಿಪಿಗಳು ಸಹಾ ಮುತ್ತನ್ನು ಜೋಡಿಸಿದಂತೆ ಬಹಳ ಸೊಗಸಾಗಿತುತ್ತಿತ್ತು ಎಂದು ಹೇಳಲಾಗುತ್ತದೆ, ವಿವಿಧ ಬಣ್ಣದ ಶಾಯಿಗಳಲ್ಲಿ ಅವರು ಬರೆಯುತ್ತಿದ್ದ ಟಿಪ್ಪಣಿಗಳ ಕೈಬರಹ ಹೈಲೈಟ್ ಆಗಿದ್ದವು ಎನ್ನಲಾಗುತ್ತದೆ
ಇಷ್ಟೆಲ್ಲಾ ಸಾಧನೆಗಳ ಮಧ್ಯೆ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ವಹಿಸದಿದ್ದ ಕಾರಣ, ಸುದೀರ್ಘಕಾಲದ ಅನಾರೋಗ್ಯದಿಂದಾಗಿ ಫೆಬ್ರವರಿ 8, 2008 ರಂದು ಬೆಂಗಳೂರಿನಲ್ಲಿ ತಮ್ಮ 73ನೇ ವಯಸ್ಸಿನಲ್ಲಿ ಎಚ್.ಕೆ.ನಾರಾಯಣ ಅವರು ನಿಧನರಾದರು. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ಥಾನಿ ಸಂಗೀತದಲ್ಲಿ ಖ್ಯಾತ ಗಾಯಕ, ಸಂಗೀತ ಸಂಯೋಜಕ, ಸಂಗೀತ ನಿರ್ದೇಶಕ ಮತ್ತು ಕರ್ನಾಟಕದ ಸುಗಮ ಸಂಗೀತ, ಭಕ್ತಿಗೀತೆ, ಸಮೂಹಗಾಯನ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದ್ದ ಶ್ರೀ ಎಚ್. ಕೆ. ನಾರಾಯಣ ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಹೋದರೂ, ಅವರ ಸಂಗೀತ ಸಾಧನೆ ಮತ್ತು ರಾಗ ಸಂಯೋಜನೆಗಳ ಮೂಲಕ ಆಚಂದ್ರಾರ್ಕವಾಗಿ ನಮ್ಮೊಂದಿಗೆ ಇರುವ ಕಾರಣ ಶ್ರೀ ಎಚ್ ಕೆ ನಾರಾಯಣ ಆವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ