ಕಿರುತೆರೆಯ ಅನಭಿಷಕ್ತ ರಾಣಿ, ಶೈಲಜಾ ಸಂತೋಷ್ 

ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿಯರೇ ಮೊದಲ ಗುರು ಎಂಬ ಸುಂದರವಾದ ಗಾದೆ ಮಾತೊಂದು ನಮ್ಮ ಕನ್ನಡದಲ್ಲಿದೆ ಅದಕ್ಕೆ ಪೂರಕವಾಗಿ ಕನ್ನಡ ಮಾಧ್ಯಮದಲ್ಲಿ ಓದಿಯೂ ಸಹಾ ಕರ್ತವ್ಯ ನಿಷ್ಠೆ ಮತ್ತು ಪರಿಶ್ರಮದಿಂದ  ವಿಶ್ವವಿಖ್ಯಾತರಾಗಬಹುದು ಎನ್ನುವುದಕ್ಕೆ ಜ್ವಲಂತ  ಉದಾಹರಣೆಯಾಗಿ  ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ದೂರದರ್ಶನ ಮತ್ತು ಖಾಸಗೀ ಕಿರುತೆರೆ ಖಾನೆಲ್ಲುಗಳಲ್ಲಿ ಅನಭಿಷಕ್ತ ರಾಣಿಯಾಗಿ ಮೆರೆದಿದ್ದಂತಹ ಶ್ರೀಮತಿ ಶೈಲಜಾ ಸಂತೋಷ್ ಆವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಕುಂದಾಪುರ ಬಳಿಯ ಹಾಲಾಡಿ ಹತ್ತಿರದ ಹೈಕಾಡಿಯ ನಾಗೇರಿ ಊರಿನ ಹೆಸರಾಂತ ವೈದ್ಯರಾದ ಡಾ. ಸೂರ್ಯನಾರಾಯಣ ಆಚಾರ್ಯರು ಮತ್ತು ಕನ್ನಡದಲ್ಲಿ ಡಾಕ್ಟರೇಟ್ ಮಾಡಿ ಅಧ್ಯಾಪಕಿಯಾಗಿರುವ ಮತ್ತು ದಾಸ ಸಾಹಿತ್ಯದಲ್ಲಿ. ಅಪಾರವಾದ ಸೇವೆ ಸಲ್ಲಿಸಿರುವ ಡಾ. ಅನಸೂಯಾ ದೇವಿ ದಂಪತಿಗಳ ಹಿರಿಯ ಮಗಳಾಗಿ ಶೈಲಜಾ  ಆವರ ಜನನವಾಗುತ್ತದೆ.  b ಶೈಲಜಾ ಆವರಿಗೆ ಬಂದಿರುತ್ತದೆ. ಬಾಲ್ಯದಿಂದಲೂ ಬಹಳ ಮುದ್ದು ಮುದ್ದಾಗಿದ್ದ ಶೈಲಜಾ  ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲೇ ಕನ್ನಡಮಾಧ್ಯಮದಲ್ಲೇ ಮುಗಿಸಿ ಆದರಲ್ಲೂ ಬುಡ್ಡಿ ದೀಪದಲ್ಲೇ ಓದಿದ್ದ ಶೈಲಜಾ ಅವರು ವಿದ್ಯುತ್ ದೀಪವನ್ನು ಮೊಟ್ಟಮೊದಲದಾಗಿ ಕಂಡಿದ್ದೇ ಅವರ ಐದನೇ ತರಗತಿಯಲ್ಲಂತೇ. ನಂತರ ಪ್ರೌಢ ಶಿಕ್ಷಣಕ್ಕಾಗಿ ಕುಂದಾಪುರಕ್ಕೆ ಬರುತ್ತಾರೆ. ಇದುವರೆಗೂ 25ಕ್ಕೂ ಹೆಚ್ಚಿನ ಕನ್ನಡ ಪುಸ್ತಕಗಳನ್ನು ಬರೆದಿರುವ ಮತ್ತು ಸ್ವತಃ ಸಂಗೀತಗಾರ್ತಿಯಾಗಿರುವ ಅವರ ತಾಯಿ ಅದಲ್ಲದೇ ತಮ್ಮ ಮೂವರು ತಮ್ಮಂದಿರ ಜೊತೆ ಹುಟ್ಟೂರಿನಲ್ಲಿ ಮಳೆ ನಿಲ್ಲುತ್ತಿದ್ದಂತೆಯೇ ಪ್ರತೀ ವಾರಾಂತ್ಯದಲ್ಲಿ ನೋಡುತ್ತಿದ್ದ ಯಕ್ಷಗಾನದ ಪ್ರಸಂಗಗಳ ಮೂಲಕ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ಕನ್ನದ ಭಾಷೆಯ ಮೇಲೆ ಅಭಿಮಾನ ಮೂಡಿದ್ದರೆ ನಂತರದ ತಮ್ಮ ಪ್ರೌಢ ಶಾಲೆಯಲ್ಲಿ ಅವರ ಕನ್ನಡ ಶಿಕ್ಷಕರಾದ ಶ್ರೀ ರಂಗಪ್ಪಯ್ಯ ಹೊಳ್ಳ ಮತ್ತು ಭಾಸ್ಕರ್ ಹೊಳ್ಳ ಅವರು ಅವರಿಗೆ ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿಸಿದ ಪರಿಣಾಮ ಅವರಿಗೆ ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಹಿಡಿತ ದೊರೆಯಿತು ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ ಒಂದು ಕಡೆ ವಿದ್ಯಾಭೂಷಣರ ಸಂಗೀತದ ಆಲಿಕೆ ಮತ್ತು ಮತ್ತೊಂದು ಕಡೆ ತಾಯಿಯ  ಒತ್ತಾಸೆಯಿಂದ ಕನ್ನಡ ಸಾಹಿತ್ಯಗಳ ಓದು ಹೀಗೆ ಓದಿನ ಜೊತೆ ಜೊತೆಯಲ್ಲಿಯೇ ಪಠ್ಯೇತರ ಚಟುವಟಿಕೆಗಳೂ ಮುಂದುವರೆಯುತ್ತದೆ.

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯದಲ್ಲಿ ಓದಿ, ವಿಶ್ವವಿದ್ಯಾಲಯಕ್ಕೆ, ಆರ್ಟ್ಸ್ ವಿಭಾಗದಲ್ಲಿ ತೃತೀಯ ರ್ಯಾಂಕ್ ನೊಂದಿಗೆ   ಪದವಿ ಪಡೆದ ನಂತರ  ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಗಳಿಸುವಾಗಲೇ  ತಮ್ಮದೇ ಕಾಲೇಕಿನ ಹಿರಿಯ ವಿದ್ಯಾರ್ಥಿಯಾಗಿದ್ದ ಸಂತೋಷ್ ಅವರ ಪರಿಚಯವಾಗಿ, ಯಾವ ವಿದ್ಯಾಭೂಷಣ ಸ್ವಾಮಿಗಳ ಸಂಗೀತವನ್ನು  ಕೇಳಿ ಬೆಳೆದಿದ್ದರೋ ಅದೇ ವಿದ್ಯಾಭೂಷಣರು ಕುಕ್ಕೆ  ಸುಬ್ರಹ್ಮಣ್ಯದಲ್ಲಿ ಮಠಾಧಿಪತಿಗಳಗಿದ್ದಂತಹ ಸಂಧರ್ಭದಲ್ಲಿ ಅವರದ್ದೇ ಪೌರೋಹಿತ್ಯದಲ್ಲಿ ಅಂತರ್ಜಾತಿ ವಿವಾಹವಾಗುವ ಮೂಲಕ  ಅವರ ಬದುಕಿನ ಮತ್ತೊಂದು ಮಜಲು ಆರಂಭವಾಗಿ, ಕರಾವಳಿ ಪ್ರದೇಶದಿಂದ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಬರುವಂತಾಗುತ್ತದೆ.

ಶೈಲಜಾ ಅವರ ಪತಿ ಸಂತೋಷ್ ಮತ್ತು ಅವರ ಕುಟುಂಬದವರೊಬ್ಬರು ಅದಾಗಲೇ ಮಾಧ್ಯಮದಲ್ಲಿ ಉನ್ನತ ಹುದ್ದೆಯಲ್ಲಿದ್ದದ್ದರಿಂದ ಅವರೆಲ್ಲರ ಉತ್ತೇಜನ ಮತ್ತು ಒತ್ತಾಸೆಯಿಂದ ಶೈಲಜಾ ಅವರು 1990ರಲ್ಲಿ ಬೆಂಗಳೂರು ದೂರದರ್ಶನಕ್ಕೆ ವಾರ್ತಾ ವಾಚನಕ್ಕಾಗಿ ಸಂದರ್ಶನಕ್ಕೆ ಹೋದಾಗ, ಅಲ್ಲಿಯವರು ವಾರ್ತಾವಾಚಕಿಯ ಬದಲಾಗಿ ಕಾರ್ಯಕ್ರಮಗಳ ಉದ್ಭೋಷಕಿಯಾಗಿ ಆಯ್ಕೆ ಆಗುವ ಮೂಲಕ  ಅವರ ಕಿರುತೆರೆಯ ವೃತ್ತಿ ಜೀವನ ಆರಂಭವಾಗುತ್ತದೆ. ಆರಂಭದ ಮೂರ್ನಾಲ್ಕು ತಿಂಗಳುಗಳ ಕಾಲ  ವೃತ್ತಿ ನಿರತ ತರಭೇತಿಯನ್ನು ಪಡೆದು  ಉತ್ತಮ ಶರೀರ, ಶಾರೀರದ ಜೊತೆಗೆ ಕನ್ನಡ ಭಾಷೆಯ ಮೇಲಿನ ಹಿಡಿತದ ಜೊತೆ ಉಚ್ಚಾರಣೆಯಲ್ಲಿಯೂ ಬಹಳ ಸ್ಪಷ್ಟತೆ ಇದ್ದ ಕಾರಣ ಕೆಲವೇ ದಿನಗಳಲ್ಲಿ ಕನ್ನಡಿಗರ ಮನಸೂರೆಗೊಳ್ಳುತ್ತಾರೆ.

ಇದೇ ಸಮಯದಲ್ಲೇ, ತಮಿಳುನಾಡಿನ ಸನ್ ಟಿವಿ ಅವರ ಒಡೆತನದಲ್ಲಿ ಉದಯ ಟಿವಿ ಎಂಬ ಹೆಸರಿನಲ್ಲಿ ಕನ್ನಡದ ಪ್ರಪಥಮ ಖಾಸಗೀ ಛಾನೆಲ್ ಆರಂಭವಾದಾಗ, ಅದಾಗಲೇ ದೂರದರ್ಶನದಿಂದ ಪ್ರಖ್ಯಾತಿಯನ್ನು ಪಡೆದಿದ್ದ ಶೈಲಜಾ ಅವರು 1994ರಲ್ಲಿ ಉದಯ ಟಿವಿಗೆ ಸೇರಿಕೊಳ್ಳುತ್ತಾರೆ. ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದರಿಂದ  ಅಲ್ಲಿ ಎಲ್ಲರೂ ಎಲ್ಲಾ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಇದ್ದದ್ದರಿಂದ ಶೈಲಜ ಅವರು ಕೇವಲ ಕಿರುತೆರೆಯ ಮೇಲೆ ಕಾಣಿಸಿಕೊಳ್ಳುವುದಷ್ಟೇ ಅಲ್ಲದೇ, ಕಾರ್ಯಕ್ರಮಗಳ ನಿರ್ಮಾಣ, ನಿರ್ವಹಣೆ ಮತ್ತು ನಿರೂಪಣೆ ಈ ವಿಭಾಗಗಳಲ್ಲಿ, ಕಾರ್ಯನಿರ್ವಹಿಸಿ ಸೈ ಎನಿಸಿಕೊಳ್ಳುತ್ತಾರೆ.  ಅದರಲ್ಲೂ ಕನ್ನಡದ ಹೆಸರಾಂತ ನಟ ಪ್ರಣಯರಾಜ ಶ್ರೀನಾಥ್ ಅವರೊಂದಿಗೆ ನಡೆಸಿಕೊಡುತ್ತಿದ ಆದರ್ಶ ದಂಪತಿಗಳು ಕಾರ್ಯಕ್ರಮವಂತೂ ರಾಜ್ಯಾದ್ಯಂತ ಅತ್ಯಂತ ಹೆಸರುವಾಸಿಯಾಗುತ್ತದೆ.

ಇನ್ನು ವಯಕ್ತಿಕವಾಗಿ ಕನ್ನಡಿಗರಿಗೆ ಆವರು ಬಹಳಷ್ಟು ಹತ್ತಿರವಾದದ್ದು ಪ್ರತೀ ದಿನ ಬೆಳಿಗ್ಗೆ ಅವರು ಉದಯ ಟಿವಿಯಲ್ಲಿ ನಡೆಸಿಕೊಡುತ್ತಿದ್ದ ಪರಿಚಯ ಕಾರ್ಯಕ್ರಮದ ಮೂಲಕ ಎಂದರೂ ತಪ್ಪಾಗದು. ಪರಿಚಯ ಕಾರ್ಯಕ್ರಮದ ಮೂಲಕ  ಸಂಗೀತ, ಸಾಹಿತ್ಯ, ಸಂಸ್ಕೃತಿ, ಕಲೆ, ಕ್ರೀಡೆ, ವಿಜ್ಞಾನ, ಅಧ್ಯಾತ್ಮ, ಉದ್ಯಮ, ಸಾರ್ವಜನಿಕ ಸೇವೆ, ರಾಜಕಾರಣ ಮುಂತಾದ ಕ್ಷೇತ್ರಗಳಲ್ಲಿ ಅದಾಗಲೇ ಖ್ಯಾತನಾಮರಾಗಿದ್ದವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಅವರ ಸಾಧನೆಗಳನ್ನು ಕನ್ನಡ ನಾಡಿಗೆ ಪರಿಚಯಿಸಿದ ಪರಿ ನಿಜಕ್ಕೂ ಅದ್ಭುತ. ಸುಮಾರು 1200 ಹೆಚ್ಚಿನ ಜನರ ಸಂದರ್ಶನ ಮಾಡುವುದರ ಹಿಂದಿನ  ಅವರ ಪರಿಶ್ರಮ ನಿಜಕ್ಕೂ ಅದ್ಭುತ ಮತ್ತು ಅನನ್ಯವೇ ಸರಿ. ಈಗಿನಂತೆ  ಪ್ರತ್ಯೇಕ ಸಂಶೋಧನಾ ತಂಡ, ನಿರ್ಮಾಣ ತಂಡ, ನಿರ್ದೇಶನ ತಂಡ  ಇಲ್ಲದೇ ಇರುವಂತಹ ಸಂಧರ್ಭದಲ್ಲಿ ಈ ಕಾರ್ಯಕ್ರಮಕ್ಕಾಗಿ ಶೈಲಜಾ ಸಂತೋಷ್ ಅವರ ನಡೆಸಿರಬಹುದಾದ ಸಿದ್ಧತೆ ಎಷ್ಟಿರಬಹುದು ಎಂಬುದೇ ಅಚ್ಚರಿಯನ್ನು ಮೂಡಿಸುತ್ತದೆ.

ಇನ್ನು ತಮ್ಮ ಮುಂದೆ ಕುಳಿತಿರುವಂತಹ ವ್ಯಕ್ತಿ ತಮ್ಮ ಕಾರ್ಯಕ್ಷೇತ್ರದಲ್ಲಿ ಅದಾಗಲೇ ಮಹಾನ್ ಸಾಧನೆ ಮಾಡಿದ್ದು ಸಹಜವಾಗಿಯೇ ಅವರಿಗೊಂದು ಹಮ್ಮು ಬಿಮ್ಮು ಇದ್ದಾಗ, ಅದೆಲ್ಲವನ್ನೂ ಅರಿತು ಬಹಳ ಸಂಯಮ ಮತ್ತು ಸಮಚಿತ್ತದ ಮನಃಸ್ಥಿತಿಯಿಂದ ಒಂದೊಂದೇ ಪ್ರಶ್ನೆಗಳ ಮೂಲಕ ಅವರ ವ್ಯಕ್ತಿತ್ವವನ್ನು ನಾಡಿನ ಜನರಿಗೆ ಪರಿಚಯಿಸುತ್ತಿದ್ದ ಪರಿ ನಿಜಕ್ಕೂ ಅದ್ಭುತವೇ ಸರಿ. ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುವಂತೆ ತಾವು ಮಾತನಾಡುವುದಕ್ಕಿಂತಲೂ ಗಣ್ಯರನ್ನು ಮಾತಿಗೆ ಹಚ್ಚಿ ಅವರ ಬಾಯಿ ಇಂದಲೇ ಒಂದೊಂದೇ ಅಚ್ಚರಿ ಮತ್ತು  ಅಷ್ಟೇ ಕುತೂಹಲಕಾರಿ ವಿಷಯಗಳನ್ನು  ಹೊರಗತೆಗೆಯುತ್ತಿದ್ದದ್ದು ಪ್ರಸಂಶಾರ್ಹವೇ ಸರಿಪರಿಚಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ  ಗಣ್ಯರಿಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡನೆಂಬ ಧನ್ಯತಾಭಾವ ಮತ್ತು   ಕಾರ್ಯಕ್ರಮದ ವೀಕ್ಷಕರಿಗೆ ಅಬ್ಬಾ ಎಂತಹ ಅದ್ಭುತವಾದ ವ್ಯಕ್ತಿತ್ವದ  ಪರಿಚಯವಾಗಿದ್ದು ತಾವೂ ಅವರಂತೆಯೇ ಆಗಬೇಕೆಂಬ ಪ್ರೇರಣೆ ದೊರೆಯುವಂತೆ ಅತ್ಯಂತ ಮನೋಜ್ಞವಾಗಿ ತೆರೆದಿಡುತ್ತಿದ್ದ ಶೈಲಜಾ ಸಂತೋಷ್ ಅವರ ಕಾರ್ಯ ನಿಜಕ್ಕೂ ಇಂದಿಗೂ ಕಣ್ಮುಂದೆ ಕಟ್ಟಿದಂತಿದೆ.

ಗಣ್ಯರಿಂದ  ಅವರ ವಯಕ್ತಿಯ ವಿಚಾರಗಳನ್ನು ಹೇಗೆ ಹೆಕ್ಕಿ ತೆಗೆಸುತ್ತಿದ್ದರು ಎಂಬುದಕ್ಕೆ ಈ ಕೆಳಕಂಡ ಉದಾಹರಣೆಗಳು ಸೂಕ್ತ ಎನಿಸುತ್ತದೆ. 80-90ರ ದಶಕದಲ್ಲಿ ರೈತ ಚಳುವಳಿಯ ಪ್ರಭಲ ಹೋರಾಟಗಾರರಾಗಿದ್ದಂತಹ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರಿಗೆ, ನೇರವಾಗಿ, ತಾವು ತಮ್ಮ ಹೋರಾಟದಲ್ಲಿ ಎಲ್ಲೋ ಸೋಲನ್ನು ಅನುಭವಿಸಿದ ಭಾವ ಏನಾದರೂ ಬಂದಿದೆಯೆ? ಎಂದು ಕೇಳಿದ್ದರೆ, ಇನ್ನು ಇತ್ತೀಚೆಗಷ್ಟೇ ನಮ್ಮೆಲ್ಲರನ್ನೂ ಅಗಲಿದ ಬಹಳ ಗಂಭೀರ ಸ್ವರೂಪರೂ ಎಂದೇ ಭಾವಿಸುವ ಡಾ. ಎಸ್. ಎಲ್. ಭೈರಪ್ಪನವರಿಗೆ ತಮಗೆ ಸ್ನೇಹಿತರು ಎಂಬುವರು ಕಡಿಮೆ, ಹಾಸ್ಯ ಪ್ರವೃತ್ತಿ ಇಲ್ಲ ಎಂಬ ಮಾತಿದೆಯಲ್ಲ? ಎಂದು ಕೇಳಿದರೆ, ಸುಗಮ ಸಂಗೀತ ಕ್ಷೇತ್ರದ ಹಲವು ಪ್ರಪ್ರಥಮಗಳಿಗೆ ಕಾರಣೀಭೂತರಾದ ಸಿ. ಅಶ್ವಥ್ ಅವರಿಗೆ ನಿಮ್ಮ  ಆತ್ಮೀಯರು ನೀವು ದೂರ್ವಾಸ ಮುನಿಗಳ  ಅಪರಾವತಾರ ಎನ್ನುತ್ತಾರಂತಲ್ಲಾ? ಎಂದು  ಹೇಳುವ ಮೂಲಕ ಅಶ್ವಥ್ ಅವರಿಗೆ ಸ್ವಲ್ಪ ಕೋಪ ಜಾಸ್ತಿ ಎಂಬುದನ್ನು ಪರೋಕ್ಷವಾಗಿ ವೀಕ್ಷಕರಿಗೆ ಪರಿಚಯಿಸುವ ಮೂಲಕ ಪ್ರತಿಯೊಬ್ಬ ಸಾಧಕರಿಗೂ ಅವರದ್ದೇ ಆದ ವಯಕ್ತಿಕ ಭಾವನೆಗಳು ಮತ್ತು ಅಭಿಪ್ರಾಯಗಳಿದ್ದರೂ ಅವೆಲ್ಲವನ್ನೂ ಮೆಟ್ಟಿ ಅವರು ಸಾಧಕರಾಗಿದ್ದಾರೆ ಎಂಬುದನ್ನು ತೋರಿಸುವುದಕ್ಕಷ್ಟೇ ಸೀಮಿತವಾಗಿರುತ್ತಿತ್ತೇ ಹೊರತು ಯಾರನ್ನೇ ಅವಹೇಳನ ಮಾಡುವಂತಾಗಿರುತ್ತಿರಲಿಲ್ಲ. ಹಾಗಾಗಿಯೇ ಪರಿಚಯ ಕಾರ್ಯಕ್ರಮ ಮತ್ತು ಶೈಲಜಾ ಸಂತೋಷ್ ಅವರು ಈ ಪರಿಯ ಪ್ರಖ್ಯಾತಿ ಪಡೆದರು.

ಉದಯ ಟಿವಿಗಾಗಿ ಕೇವಲ ಆದರ್ಶ ದಂಪತಿಗಳು ಮತ್ತು ಪರಿಚಯ ಕಾರ್ಯಕ್ರಮವಲ್ಲದೇ,  ಅತ್ತೆ ಸೊಸೆಯಷ್ಟೇ ಅಲ್ಲದೇ, ಶೈಲಜಾ ಅವರ ನಿರ್ವಹಣೆ ಮತ್ತು ನಿರ್ದೇಶನದಲ್ಲಿ ಡಾನ್ಸ್ ಡಾನ್ಸ್, ಕುಹೂ ಕುಹೂ, ಹರಟೆ, ನಾದ, ನಾಟ್ಯಾಂಜಲಿ, ಗೀತಾಂಜಲಿ ಮುಂತಾದ ಕಾರ್ಯಕ್ರಮಗಳು ಜೀ ಟಿವಿಗಾಗಿ ನಡೆಸಿಕೊಟ್ಟ ವೈದ್ಯರೊಂದಿಗೆ, ಕಾರ್ಯಕ್ರಮಗಳ ಮೂಲಕ ಇನ್ನೂ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅದೇ ಸಮಯದಲ್ಲಿ  ಉದಯಾ ಟಿವಿ  ಅವರೇ ಆರಂಭಿಸಿದ ಉಷೆ, ಉದಯ ನ್ಯೂಸ್, ಉದಯ ಮ್ಯೂಸಿಕ್, ಉದಯ ಕಾಮಿಡಿ ಮೊದಲಾದ ವಾಹಿನಿಗಳ ಕಾರ್ಯಕ್ರಮಗಳ ಮೂಲಕ ಆಡು ಮುಟ್ಟದ ಸೊಪ್ಪಿಲ್ಲಾ, ಕಿರು ತೆರೆಯಲ್ಲಿ ಶೈಲಜಾ ಸಂತೋಷ್  ಅವರು ಮಾಡದ ಕೆಲಸವಿಲ್ಲಾ! ಎನ್ನುವಂತೆ ಕನ್ನಡ ಸಾರಸ್ವತ ಲೋಕಕ್ಕೆ ಕಿರು ತೆರೆಯ ಮೂಲಕ ಅವರ ಕೊಡುಗೆ ನಿಜಕ್ಕೂ ಅನನ್ಯ. ಆನಂತರ ದಿನಗಳಲ್ಲಿ ಉದಯ ಟಿವಿಯಲ್ಲಿ ಆದ ಕೆಲವು ಅಹಿತಕರ ಘಟನೆಗಳಿಂದ ಮನನೊಂದು ಅಲ್ಲಿಂದ. 2007ರಲ್ಲಿ ಹೊರಬಂದು ಕೆಲವು ಕಾಲ  ಕನ್ನಡದ ಇತರ ಖಾಸಗೀ ವಾಹಿನಿಗಳಾದ, ಕಸ್ತೂರಿ, ಸುವರ್ಣ, ಝೀ ಕನ್ನಡ ಮುಂತಾದವುಗಳಲ್ಲಿ ಕೆಲಸ ಮಾಡಿದರು.

ಕಿರುತೆರೆಯಲ್ಲಿ ಈ ರೀತಿಯಾಗಿ ಅನಭಿಷಕ್ತರಾಣಿಯಂತೆ ಮೆರೆಯುತ್ತಿರುವಾಗಲೇ ತಮ್ಮ ಪತಿ ಸಂತೋಷ್ ಅವರ ಸಹಕಾರದಿಂದಾಗಿ ಶೈಲಜಾ ಅವರು ಅನೇಕ ಸಾಕ್ಷ್ಯ ಚಿತ್ರಗಳ ನಿರ್ಮಾಣ, ನಿರ್ವಹಣೆ, ನಿರ್ದೇಶನಗಳನ್ನು ಮಾಡಿದ್ದಲ್ಲದೇ, ರಾಜ್ಯ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ, ಮೈಸೂರಿನ, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜ್ಸ್ ಸಂಸ್ಥೆಯಲ್ಲಿ ಅಧ್ಯಯನಕ್ಕಾಗಿ ಸಾಕ್ಷಚಿತ್ರಗಳನ್ನು ಸಿದ್ಧ ಪಡಿಸಿಕೊಟ್ಟಿದ್ದು ಮತ್ತು ಹಿನ್ನಲೆ ಧ್ವನಿ ನೀಡಿದ್ದೂ ಸಹ ಸೇರಿವೆ.

ಕಿರುತೆರೆಯ ಕೆಲಸಗಳು ಒಂದು ರೀತಿಯ ಯಾಂತ್ರೀಕೃತವಾಗುತ್ತಿದೆ ಎಂಬುದನ್ನು ಮನಗಂಡ ಶೈಲಜಾರವರು  ಕಿರುತೆರೆಯಿಂದ ಸಂಪೂರ್ಣವಾಗಿ ಹೊರಬಂದು  ಓದುವುದಕ್ಕೆ ವಯೋಮಿತಿ ಇಲ್ಲ ಎಂದು ನಿರೂಪಿಸುವಂತೆ 2008ರಲ್ಲಿ, ಹ್ಯೂಮನ್ ರೈಟ್ಸ್ ವಿಷಯದಲ್ಲಿ ಮತ್ತೊಂದು ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ಉನ್ನತ ಅಧ್ಯಯನಕ್ಕಾಗಿ ಶಿಷ್ಯವೇತನದೊಂದಿಗೆ  ಸ್ವಿಟ್ಜರ್ಲ್ಯಾಂಡ್ ನಲ್ಲಿ  ಒಂದು ವರ್ಷ ಅಧ್ಯಯನ ನಡೆಸಿದ ನಂತರ ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಎಂಬ ದಾಸವಾಣಿಯಂತೆ ತಾವು  ಓದಿದ್ದ ರೋಶನಿ ನಿಲಯ ಕಾಲೇಜಿನಲ್ಲಿಯೇ  ಟ್ರೈನ್ ದ ಟ್ರೈನರ್ ಇನ್ ಹ್ಯೂಮನ್ ರೈಟ್ಸ್-ಪಿಜಿ diploma ಆರಂಭಿಸಿ, ಹಲವು ವರ್ಷ ಕಾರ್ಯ ನಿರ್ವಹಿಸಿ, ಐವತ್ತಕ್ಕೂ ಹೆಚ್ಚು ಕಾರ್ಯಾಗಾರ ನಡೆಸಿದ್ದಾರೆ. ಈ ದಂಪತಿಗಳಿಗೆ ವೃತ್ತಿಯಲ್ಲಿ ವೈದ್ಯಳಾಗಿರುವ ಅನನ್ಯ ಎಂಬ ಮಗಳಿದ್ದು ಆಕೆ ಸ್ಕಾಟ್ ಲ್ಯಾಂಡ್ ಹೈಲಾಂಡ್ ಎಂಬ ಪ್ರದೇಶದಲ್ಲಿ ವೈದ್ಯೆಯಾಗಿದ್ದಾರೆ.

ಇವಿಷ್ಟೇ ಅಲ್ಲದೇ, ಅಮೇರಿಕಾದ ಅಕ್ಕಾ ಸಮ್ಮೇಳನದಲ್ಲಿ ಮನೋರಂಜನೆ ಎನ್ನುವ ವಿನೂತನ ಕಾರ್ಯಕ್ರಮದ ನಿರೂಪಣೆಗಾಗಿ ಅಮೆರಿಕಾದ  13ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಅದರಿಂದ ಬಂದ ಹಣವನ್ನು ನಮ್ಮ ರಾಜ್ಯದ ಸರ್ಕಾರೀ ಶಾಲೆಗಳ ಅಭಿವೃದ್ದಿಗಾಗಿ ಬಳಸುವ ಮೂಲಕ ಸಾಮಾಜಿಕ ಕಾಳಜಿಯನ್ನೂ ಎತ್ತಿ ಹಿಡಿದ್ದಾರೆ. ವಿದೇಶ ಪ್ರವಾಸ ಮಾಡುವಾಗ ಅಲ್ಲಿನ ಸ್ಥಳೀಯ ವ್ಯವಸ್ಥೆಗಳು ಅದರಲ್ಲೂ ಅಂಗಡಿ ಮುಗ್ಗಟ್ಟುಗಳು ಅಲ್ಲಿನ ಜನರ ಮನೋಭಾವನೆ ಕಾನೂನುಗಳನ್ನು ಅನುಸರಿಸುವ ಪರಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಅಲ್ಲಿನ ವ್ಯವಸ್ಥೆಗಳನ್ನು ನಮ್ಮ ದೇಶದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬೆಲ್ಲಾ ವಿಚಾರಗಳ ಕುರಿತಾಗಿ ಅವಲೋಕನ ನಡೆಸುತ್ತಾರೆ. ಇಷ್ಟೆಲ್ಲಾ ಕಾರ್ಯ ಚಟುವಟಿಗಳ ನಂತರ  ಇತ್ತೀಚಿನ ದಿನಗಳಲ್ಲಿ ತಮ್ಮ ವಾಸ್ತವ್ಯವನ್ನು ತಮ್ಮ ಹುಟ್ಟೂರಾದ ಕುಂದಾಪುರಕ್ಕೆ ಬದಲಿಸಿ ತಮ್ಮ ಮನೆಯಲ್ಲಿ ತಮ್ಮ ನೆಚ್ಚಿನ ಸಂಗೀತ ಕೇಳುವುದ್ರ ಜೊತೆಗ ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯವನ್ನು ಓದುವ ಮೂಲಕ ತಮ್ಮ ಬೌದ್ಧಿಕ ಮಟ್ಟವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಶೈಲಜಾ ಅವರ ಕಾರ್ಯವನ್ನು ಗುರುತಿಸಿದ ಅನೇಕ ಪ್ರತಿಷ್ಠಿತ ಸಂಘಸಂಸ್ಥೆಗಳು ಅವರಿಗೆ ಹತ್ತು ಹಲವಾರು ಪ್ರಶಸ್ತಿಗಳನ್ನು ನೀಡಿದ್ದು ಅವುಗಳಲ್ಲಿ ಪ್ರಮುಖವಾಗಿ

  • ಇಂದಿರಾ ಪ್ರಿಯದರ್ಶಿನಿ ರಾಷ್ಟ್ರೀಯ ಪ್ರಶಸ್ತಿ,
  • ಲಯನ್ಸ್, ಪ್ರಸಿದ್ಧಿ ಫೌಂಡೇಷನ್,
  • ರೋಟರಿ ಇಂಟರ್‍ ನ್ಯಾಶನಲ್
  • ಹಲವು ಬಾರಿ ವಿಶಿಷ್ಟ ಮಹಿಳಾ ಸಾಧಕಿ (Woman Achiever)

ದೇಶ ಸುತ್ತಿ ನೋಡು ಕೋಶ ಓದಿ ನೋಡು  ಎನ್ನುವ ಗಾದೆ ಮಾತಿನಂತೆ ಹೀಗೆ ನಿರಂತರವಾಗಿ ಪ್ರವಾಸ, ಅಲ್ಲಿನ ಜನರ ಭೇಟಿ, ಅಲ್ಲಿನ ಸಂಸ್ಕೃತಿಗಳ ಪರಿಚಯದ ಜೊತೆಗೆ ಪರಿಚಯ ಕಾರ್ಯಕ್ರಮದಲ್ಲಿ ಸಂದರ್ಶನ ಮಾಡಿದ ಗಣ್ಯರಿಂದ ಗಳಿಸಿದ ಜ್ಞಾನವೇ ತಮ್ಮ ಜೀವನದಲ್ಲಿ ಒಂದೊಳ್ಳೆ ಕಲಿಕೆಯ ಅನುಭವ ಎನ್ನುವ ಶ್ರೀಮತಿ ಶೈಲಜಾ ಸಂತೋಷ್ ಆವರು ಪಂಜೆ ಮಂಗೇಶರಾವ್ ಅವರ  ಉದಯರಾಗ ಕವಿತೆಯಲ್ಲಿ ಹೇಳಿರುವಂತೆ ಏರುವನು ರವಿ ಏರುವನು, ಬಾನೊಳು ಸಣ್ಣಗೆ ತೋರುವನು. ಏರಿದವರು ಚಿಕ್ಕವನಿರಬೇಕೆಲೆ ಎಂಬಾ ಮಾತನು ಸಾರುವನು ರವಿ ಸಾರುವನು ಎನ್ನುವಂತೆ, ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಏರಿದ್ದರೂ ತದೇಕವಾದ ಶಾಂತ ಚಿತ್ತದಿಂದ ಕನ್ನಡ ಭಾಷೆ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಎಲ್ಲೆಡೆಯಲ್ಲಿ ಪಸರಿಸುತ್ತಿರುವ ಕಾರಣ  ಅವರು ನಿಸ್ಸಂದೇಹವಾಗಿ ನಮ್ಮ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a comment