ವಿದ್ಯಾರ್ಥಿ ಸಂಘಟನೆಗಳ ಚುನಾವಣೆ

2026ರ ಫೆಬ್ರವರಿ 6ರಂದು ತಮ್ಮ ವಂದಿಮಾಗದರಿಂದ ಆರ್ಥಿಕ ರಾಮಯ್ಯ ಎಂದು ವಾಚಾಮಗೋಚರವಾಗಿ ಹೊಗಳಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಒಟ್ಟು ಆಡಳಿತಾವಧಿಯ 17ನೇ ಬಡ್ಜೆಟ್ ಮಂಡಿಸಿದ್ದಾರೆ. ಯಥಾ ಪ್ರಕಾರ ಆಡಳಿತ ಪಕ್ಷದವರು ಆಭಿವೃದ್ಧಿಪರ ದಿಕ್ಸೂಚಿ ಬಡ್ಜೆಟ್ ಎಂದರೆ, ವಿರೋಧ ಪಕ್ಷದವರು ಇದೊಂದು ನೀರಸ ಒಂದು ಕೋಮಿನ ಪರವಾದ ಬಡ್ಜೆಟ್ ಎಂದು ಹೇಳಿದ್ದಾರೆ. ಇನ್ನು ಜನಸಾಮಾನ್ಯರಾದ ನಮಗೆ ಇದಾವುದೂ ಅರ್ಥವಾಗದೇ ಇರುವ ಕಾರಣ ಸುಮ್ಮನಿರುವುದು ಒಳ್ಳೆಯದು ಎಂದು ಕುಳಿತರೂ, ಸಿದ್ದರಾಮಯ್ಯನವರು ಪ್ರಜಾಸತ್ತಾತ್ಮಕ ನಾಯಕತ್ವವನ್ನು ಪ್ರೋತ್ಸಾಹಿಸುವ ಸಲುವಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸುವುದಾಗಿ ಹೇಳಿಕೆ ನೀಡಿರುವುದು ರಾಜ್ಯದ ಹಿತದೃಷ್ಟಿಯಿಂದ ಆಘಾತಕಾರಿಯಾಗಿದೆ.

ಒಂದು ಒಳ್ಳೆಯ ಕೆಲಸವನ್ನು ಮಾಡಲಾಗದೇ ಹೊದರೂ, ಕೆಟ್ಟ ಕೆಲಸವನ್ನು ಎಂದೂ ಮಾಡ ಬಾರದು ಎನ್ನುತ್ತಾರೆ ನಮ್ಮ ಹಿರಿಯರು. ದುರಾದೃಷ್ಟವಷಾತ್ ಒಳ್ಳೆಯ ಕೆಲಸವನ್ನು ಮಾಡಲು ಗೊತ್ತೇ ಇರದ ಕಾಂಗ್ರೇಸ್ಸಿಗರು ಎಲ್ಲಾ ಬಿಟ್ಟ ಮಗ ಭಂಗಿ ನೆಟ್ಟ ಎನ್ನುವಂತೆ ಸುಮಾರು ಮೂರು ದಶಕಗಳಿಂದ ಸ್ತಬ್ಧವಾಗಿದ್ದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ಪುನರಾರಂಭಿಸುವ ಮೂಲಕ ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ಅಕ್ಷರಶಃ ರಾಜಕೀಯ ರಣಾಂಗಣವನ್ನಾಗಿಸಿ ಅಲ್ಲಿಯೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ.

ಇದ್ದಕ್ಕಿದ್ದಂತೆಯೇ ಸರ್ಕಾರದ ಈ ರೀತಿಯ ಅದೇಶಕ್ಕೆ ಹಿನ್ನಲೆ ಏನಿರಬಹುದು ಎಂದು ಹುಡುಕಿ ನೋಡಿದಾಗ, ಕಾಂಗ್ರೆಸ್ ಪಕ್ಷದ ಚಿರಯೌವ್ವನಿಗ ಅಧಿನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿ, ಕಾಲೇಜು ಕ್ಯಾಂಪಸ್ ಗಳಲ್ಲಿ ಚುನಾವಣೆಗಳನ್ನು ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರಂತೆ. ಅಧಿಕಾರವನ್ನು ಉಳಿಸಿಕೊಳ್ಳಲು ಶತಾಯಗತಾಯ ಪರದಾಡುತ್ತಿರುವ ಸಿದ್ದರಾಮಯ್ಯನವರೂ ಸಹಾ, ವಿಧಿ ಇಲ್ಲದೇ ತಮ್ಮ ನಾಯಕನನ್ನು ಓಲೈಸಿಕೊಳ್ಳಲು ಶರಣಾಗತಿಯ ರೂಪದಲ್ಲಿ, ರಾಹುಲ್ ಅವರ ಕೋರಿಕೆ ಮತ್ತು ವಿದ್ಯಾರ್ಥಿ ಸಂಘಟನೆಗಳು ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಚುನಾವಣೆ ನಡೆಸುವ ಚಿಂತನೆಗೆ ಮುಂದಾಗಿದೆ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡುವ ಮೂಲಕ ಚುನಾವಣೆ ನಡೆಯುವುದು ಅಧಿಕೃತವಾಗಿದೆ.

ಸಿದ್ದರಾಮಯ್ಯನವರು ಹೇಳಿದಂತೆ ಮೇಲ್ನೋಟಕ್ಕೆ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಮೂಲಕ ಕ್ಯಾಂಪಸ್‌ಗಳಲ್ಲಿ ಮತ್ತೆ ರಾಜಕೀಯ ಚರ್ಚೆಗಳ ಸದ್ದು ಕೇಳಿಬರಲಿದೆ ಎಂದು ಹೇಳಿರುವುದಾದರೂ, ನೆರೆಯ ಬಾಂಗ್ಲಾದೇಶ ಮತ್ತು ನೇಪಾಳಗಳಲ್ಲಿ ಜೆನ್ ಜೀ ಗಳು ನಡೆಸಿದ ಕ್ಷಿಪ್ರಕ್ರಾಂತಿಯಂತೆ ನಮ್ಮ ದೇಶದಲ್ಲೂ ಯುವಕರುಗಳು ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಬರಬೇಕು ಎಂದು ಪದೇ ಪದೇ ರಾಹುಲ್ ಗಾಂಧಿ ಪ್ರಚೋದನಾತ್ಮಕವಾಗಿ ಮಾತನಾಡುತ್ತಿದ್ದರೂ, ಅವರ ಮಾತುಗಳನ್ನು ಭಾರತೀಯ ಯುವಕರುಗಳು ಗಂಭೀರವಾಗಿ ತೆಗೆದುಕೊಳ್ಳದೇ ಹೋದದ್ದನ್ನು ಗಮನಿಸಿ ಈಗ ಕಾಲೇಜು ಹಂತದಲ್ಲೇ ಚುನಾವಣೆ ನಡೆಸುವ ಮೂಲಕ ಅಲ್ಲಿನ ಮಕ್ಕಳನ್ನು ಎತ್ತಿಕಟ್ಟಿ ದಂಗೆಯನ್ನು ಎಬ್ಬಿಸಿಯಾದರೂ ಅಧಿಕಾರಕ್ಕೆ ಬರುವ ಹುನ್ನಾರ ಸ್ಪಷ್ಟವಾಗಿದೆ.

ಕಾಲೇಜು ಮಟ್ಟದಲ್ಲಿ ಚುನಾವಣೆ ನಡೆಸಲು ಆರಂಭಿಸುತ್ತಿದ್ದಂತೆಯೇ ಪ್ರಪಂಚಾದ್ಯಂತ ಹೇಳ ಹೆಸರಿಲ್ಲದೇ ಹೋಗಿರುವ ಕಮ್ಯೂನಿಷ್ಟರಿಗಂತೂ ರೊಟ್ಟಿ ಜಾರೀ ತುಪ್ಪಕ್ಕೆ ಬಿದ್ದಂತಾಗಿ ದೆಹಲಿಯ ಜೆ.ಎನ್.ಯು. ವಿಶ್ವವಿದ್ಯಾಲಯದ ಚುನಾವಣೆಗಳು ಹೇಗೆ ನಡೆಯುತ್ತವೆಯೋ ಅದೇ ರೀತಿ ನಮ್ಮ ರಾಜ್ಯದಲ್ಲೂ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಚುನಾವಣೆಗಳು ನಡೆಯುವ ಮೂಲಕ ಓದಿಗಿಂತಲೂ ರಾಜಕೀಯವೇ ಪ್ರಾಮುಖ್ಯವಾಗಿ ವಿದ್ಯೆ ನಿರ್ವಿದ್ಯೆಯಾಗಿ, ದೇಶದಲ್ಲಿ ಈಗಾಗಲೇ ಇರುವ ತುಕ್ಡೇ ಗ್ಯಾಂಗಿಗೆ ಕರ್ನಾಟಕದಿಂದಲೂ ಮತ್ತಷ್ಟು ವಿದ್ಯಾರ್ಥಿಗಳು ಸೇರಿಕೊಂಡು ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಗಳಾಗುವ ಅಪಾಯವಿದೆ.

1988ರ ರಾಜೀವ್ ಗಾಂಧಿ ಅವರ ಕಾಲದಲ್ಲಿ 61 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯ ಮೂಲಕ ಮತದಾನದ ವಯಸ್ಸನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಲಾಗಿದ್ದು, ಕಳೆದ 38ವರ್ಷಗಳಿಂದಲೂ 18 ವರ್ಷದ ಯುವಕ ಯುವತಿಯರು ಗ್ರಾಮಪಂಚಾಯಿತಿ, ನಗರಸಭೆ, ವಿಧಾನ ಸಭೆ ಮತ್ತು ಲೋಕಸಭೆಯಲ್ಲಿ ಮತದಾನ ಮಾಡುವ ಮೂಲಕ ತಮ್ಮ ನಾಯಕರುಗಳನ್ನು ಆಯ್ಕೆಯಾಡುವ ಪ್ರಬುದ್ಧತೆಯನ್ನು ಬೆಳೆಸಿಕೊಂಡಿರುವಾಗ ಈಗ ಇಂದಿನ ವಿದ್ಯಾರ್ಥಿಗಳೇ ನಾಳೆಯ ದೇಶದ ನಾಯಕರು. ಯುವ ಪೀಳಿಗೆಯಲ್ಲಿಯೇ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಆಶಯದಲ್ಲಿ ಕ್ಯಾಂಪಸ್ ಹಂತದಲ್ಲಿಯೇ ಚುನಾವಣೆ ನಡೆಸುವುದರಿಂದ, ವಿದ್ಯಾರ್ಥಿಗಳಲ್ಲಿ ಸಾರ್ವಜನಿಕ ಜೀವನದ ಸವಾಲುಗಳು ಮತ್ತು ಜವಾಬ್ದಾರಿಗಳ ಅರಿವಾಗುತ್ತದೆ. ವಿದ್ಯಾರ್ಥಿ ಸಂಘಗಳು ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಸಂವಾದ ನಡೆಸಲು ಮತ್ತು ಹಕ್ಕುಗಳಿಗಾಗಿ ಹೋರಾಡಲು ಒಂದು ವೇದಿಕೆಯನ್ನು ಒದಗಿಸುವುವಂತಾಗುತ್ತದೆ. ಇದರ ಜೊತೆಗೆ ಮತದಾನದ ಮಹತ್ವ, ಆಯ್ಕೆಯ ಪ್ರಕ್ರಿಯೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಯುವಜನತೆಗೆ ಪ್ರಾಯೋಗಿಕವಾಗಿ ಕಲಿಸುವುದು ಸರ್ಕಾರದ ಗುರಿಯಾಗಿದೆ ಎಂದು ಸಿದ್ದರಾಮಯ್ಯನವರು ಹೇಳಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಸಂಪಂಗಿ, ತುಮಕೂರು ಗ್ರಾಮಾಂತರ ಶಾಸಕ ಸುರೇಶ್, ಜನತಾದಳದ ನಾಯಕ ಆರ್. ವಿ. ಹರೀಶ್ ಸೇರಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ಇಂದಿನ ಅನೇಕ ಪ್ರಮುಖರು ವಿದ್ಯಾರ್ಥಿ ರಾಜಕಾರಣದಿಂದ ಬಂದವರು ಎಂಬುದು ಸತ್ಯವಾಗಿದ್ದರೂ, ವಿದ್ಯಾರ್ಥಿ ನಾಯಕರುಗಳಾಗಿದ್ದಂತಹ ಸಂಧರ್ಭದಲ್ಲಿ ಅವರುಗಳು ಮಾಡಿದ ಕುಕೃತ್ಯಗಳಿಂದಾಗಿಯೇ ಅವರು ಈ ಮಟ್ಟಕ್ಕೆ ಏರಿದ್ದಾರೆ ಎಂಬುದೂ ಸಹಾ ಈಗ ಎಲ್ಲರಿಗೂ ತಿಳಿದ ವಿಷಯವಾಗಿದೆ. ವಿದ್ಯಾರ್ಥಿ ಸಂಘಗಳ ಚುನಾವಣೆ ನಿಷೇಧದಿಂದಾಗಿ ಕಳೆದ 30 ವರ್ಷಗಳಿಂದಲೂ ರಾಜ್ಯ ರಾಜಕಾರಣಕ್ಕೆ ಹೊಸ ರಕ್ತದ ಹರಿವು ಕಡಿಮೆಯಾಗಿತ್ತು. ಈಗ ಮತ್ತೆ ಸಮರ್ಥ ಯುವ ನಾಯಕರು ಉದಯಿಸಲು ಅವಕಾಶ ಸಿಗಲಿದೆ ಎಂದು ಮುಖ್ಯಮಂತ್ರಿಗಳು ಹೇಳಿರುವುದು ತನ್ನ ಕೋಳಿ ಕೂಗದೇ ಹೊದರೆ ಬೆಳಕಾಗದು ಎಂಬ ಅಡುಗೂಲಜ್ಜಿಯ ಕಥೆಯಂತಿದೆ. ಕಳೆದ 30 ವರ್ಷಗಳಲ್ಲಿ ಮೇಲೆ ತಿಳಿಸಿದ ರಾಜಕಾರಣಿಗಳಲ್ಲದೇ, ನೂರಾರು ಯುವಕರುಗಳು ಅವರದ್ದೇ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಮಿಂಚುತ್ತಿರುವುದು ಮುಖ್ಯಮಂತ್ರಿಗಳ ಗಮನಕ್ಕೆ ಬಾರದಿರುವುದು ಅಚ್ಚರಿಯ ಸಂಗತಿಯಾಗಿದೆ.

ಹೇಳೀ ಕೇಳಿ ಕನ್ನಡಿಗರು ಬಹಳ ಸರಳ ಸಜ್ಜನದವರು ಎಂಬ ಖ್ಯಾತಿ ಇದ್ದು, ಮೂರ್ನಾಲ್ಕು ದಶಕಗಳ ಹಿಂದಿನ ಕರ್ನಾಟಕದ ರಾಜಕೀಯ ಪರಿಸ್ಥಿತಿ ತಿಳಿದಿದ್ದವರು ಯಾರೂ ಸಹಾ ಮತ್ತೆ ರಾಜ್ಯದಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ನಡೆಸುವ ಮೂಲಕ ಕರ್ನಾಟಕದ ಖ್ಯಾತಿಯನ್ನು ಕುಖ್ಯಾತಿಗೆ ತರಲು ಮುಂದಾಗುವುದಿಲ್ಲ. 80ರ ದಶಕದಲ್ಲಿ ಕರ್ನಾಟಕದ ಕಾಲೇಜು ರಾಜಕೀಯ ಬಹಳ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ಅದರಲ್ಲೂ ಸರ್ಕಾರೀ ಕಾಲೇಜುಗಳಾದ GAS RC, ಮಲ್ಲೇಶ್ವರಂ 18th cross ಕಾಲೇಜುಗಳಲ್ಲದೇ ರಾಜಾಜಿನಗರದಲ್ಲಿದ್ದ KLE ಮತ್ತು ಬಸವೇಶ್ವರ ಕಾಲೇಜಿಗೆ ವಿದ್ಯಾರ್ಥಿಗಳನ್ನು ಸೇರಿಸಲು ಪೋಷಕರು ಹೆದರುವಂತಹ ಪರಿಸ್ಥಿತಿ ಇತ್ತು. ಆ ಸಮಯದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಮತ್ತು ನಂತರ ಅಧಿಕಾರಕ್ಕೆ ಬಂದ ವೀರೇಂದ್ರ ಪಾಟೀಲ್ ಅವರಿಗೂ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಯ ಕಾವು ತಟ್ಟಿತ್ತು.

ಆ ಕಾಲಘಟ್ಟದಲ್ಲಿ ಕ್ಯಾಂಪಸ್‌ಗಳಲ್ಲಿ ಹೆಚ್ಚುತ್ತಿದ್ದ ಹಿಂಸಾಚಾರ, ಗುಂಪು ಘರ್ಷಣೆಗಳು ಮತ್ತು ರಾಜಕೀಯ ಪಕ್ಷಗಳ ಅತಿಯಾದ ಹಸ್ತಕ್ಷೇಪದ ಜೊತೆಗೆ ಭೂಗತ ಲೋಕದ ವ್ಯಕ್ತಿಗಳೊಂದಿಗೂ ವಿದ್ಯಾರ್ಥಿ ಸಂಘಟನೆಗಳ ಸಂಪರ್ಕರಿಂದಾಗಿ ಶೈಕ್ಷಣಿಕ ವಾತಾವರಣ ಹದಗೆಟ್ಟಿದ್ದಲ್ಲದೇ, ಮುಂದೇ ಅನೇಕ ವಿದ್ಯಾರ್ಥಿಗಳೇ ನಗರದ ಕುಖ್ಯಾತ ರೌಡಿಗಳಾಗಿ ಮಾರ್ಪಟ್ಟಿದ್ದು ಈಗ ಇತಿಹಾಸ. ವಿದ್ಯಾರ್ಥಿ ಸಂಘಟನೆಗಳ ನಡುವಿನ ಸಂಘರ್ಷಗಳು ಕೆಲವೊಂದು ಸಂಧರ್ಭದಲ್ಲಿ ಹತ್ಯೆಯಲ್ಲಿಯೂ ಅಂತ್ಯವಾಗಿತ್ತು ಎನ್ನುವುದಕ್ಕೆ ಆರ್.ಸಿ. ಕಾಲೇಜಿನ ವಿದ್ಯಾರ್ಥಿ ನಾಯಕನಾಗಿದ್ದ ದಿವಾಕರ್ ಹೆಗಡೆಯೊಂದಿಗಿನ ವೈಮನಸ್ಯದಿಂದಾಗಿ, ರಾಜಾಜಿನಗರದ ಕೆ.ಎಲ್.ಇ ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಮತ್ತು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಮತ್ತು ತಹಶೀಲ್ದಾರ್ ಬಿ.ವಿ. ಮುತ್ತಣ್ಣ ಅವರ ಮೊಮ್ಮಗ ಸುರೇಶ್ ರೌಡಿಯಾಗಿ ಮಾರ್ಪಟ್ಟು ವಿದ್ಯಾರ್ಥಿ ನಾಯಕ ದಿವಾಕರ್ ಹೆಗಡೆಯನ್ನು ಕೊಲೆಯನ್ನು ಮಾಡಿದ್ದ ಸುದ್ದಿ ಅಂದಿನ ಕಾಲದಲ್ಲಿ ಅತ್ಯಂತ ಸುದ್ದಿಯಾಗಿತ್ತು.

ರಾಜ್ಯದ ಹಲವು ಕಾಲೇಜುಗಳಲ್ಲಿ ಅದರಲ್ಲೂ ಬೆಂಗಳೂರಿನ ಕಾಲೇಜುಗಳಲ್ಲಿ ನಡೆಯುತ್ತಿದ್ದ ಚುನಾವಣೆಗಳು ವಿಧಾನಸಭೆಗಳಿಗೆ ನಡೆಯುವ ಚುನಾವಣೆಗಳಿಂತಲೂ ತೀವ್ರ ತರನಾದ ಪೈಪೋಟಿಯಿಂದ ಕೂಡಿದ್ದು, ವಿದ್ಯಾರ್ಥಿ ಸಂಘಟನೆಗಳು ಮತ್ತು ಆದರ ನಾಯಕರುಗಳ ಪ್ರತಿಷ್ಠೆಯ ಕಣವಾಗಿದ್ದದಿಂದ ಸಹಜವಾಗಿಯೇ ಹಿಂಸಾಚಾರ ಮತ್ತು ಕುಕೃತ್ಯಗಳು ಸಹಜ ಎನ್ನುವಂತಾಗಿತ್ತು. 1980ರ ಉತ್ತರಾರ್ಧದಲ್ಲಿ ವಿದ್ಯಾರ್ಥಿ ಸಂಘದ ಕೆಲವು ಸದಸ್ಯರು ಇನ್ನೂ ಮುಂದೆ ಹೋಗಿ ಪ್ರಾಂಶುಪಾಲರೊಂದಿಗೆ ಜಗಳವಾಡಿದ್ದದಲ್ಲದೇ, ಕೆಲವರ ಮೇಲೆ ಕೈ ಮಾಡಿದ್ದ ಪ್ರಕರಣಗಳು ನಡೆದ ನಂತರ ಅಂದಿನ ಶಿಕ್ಷಣ ಸಚಿವರಾಗಿದ್ದಂತಹ ಕೆ.ಎಚ್. ರಂಗನಾಥ್ ಅವರಿಗೆ ಆಪ್ತರಾಗಿದ್ದ ಪ್ರಾಂಶುಪಾಲರರೊಬ್ಬರು ವಿದ್ಯಾರ್ಥಿ ಸಂಘಟನೆಗಳ ಚುನಾವಣೆಗಳನ್ನು ನಿಷೇಧಿಸುವಂತೆ ಕೋರಿದ್ದನ್ನು ಮನ್ನಿಸಿ, ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರೊಂದಿಗೆ ಗಂಭೀರವಾಗಿ ಚರ್ಚೆ ನಡೆಸಿದ ನಂತರ, ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಅಂದಿನ ಸರ್ಕಾರ ಚುನಾವಣೆಗಳನ್ನು 1989-90ರ ಅವಧಿಯಲ್ಲಿ ಕಡಿವಾಣ ಹಾಕಿದ ನಂತರ ರಾಜ್ಯದಲ್ಲಿ ರೌಡಿಗಳ ಸಂಖ್ಯೆಯೂ ಕಡಿಮೆಯಾಗಿದ್ದಲ್ಲದೇ, ಶಾಂತಿಯ ಪರಿಸ್ಥಿತಿ ನೆಲೆಗೊಂಡಿತು. ಹಾಗಾಗಿಯೇ 80-90ರ ದಶಕದಲ್ಲಿ ಬೆಂಗಳೂರಿನಲ್ಲಿ ಸಾವಿರಾರು ಶಿಕ್ಷಣ ಸಂಸ್ಥೆಗಳು ಆರಂಭವಾಗಿ ಬೆಂಗಳೂರು ಇಡೀ ದೇಶದ ಶಿಕ್ಷಣದ ಕಾಶಿ ಆದ ಪರಿಣಾಮವೇ ದೇಶ ವಿದೇಶಗಳ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನದ ಲಕ್ಷಾಂತರ ಸಂಸ್ಥೆಗಳು ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಆರಂಭವಾಗಿ ಭಾರತದ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಇಷ್ಟೆಲ್ಲಾ ಇತಿಹಾಸದ ಅರಿವಿದ್ದರೂ, ಮಂದ ಬುದ್ದಿಯ ರಾಹುಲ್ ಗಾಂಧಿ ಜೆನ್ ಜೀಗಳನ್ನು ಪ್ರಚೋದಿಸಿ ಮೋದಿಯವರ ವಿರುದ್ಧ ಎತ್ತಿ ಕಟ್ಟಿ ದೇಶಾದ್ಯಂತ ದಂಗೆ ನಡೆಸುವ ಸಲುವಾಗಿ ಮತ್ತೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ಪ್ರಾರಂಭಿಸಲು ಮುಂದಾಗಿರುವುದು ಆಘಾತಕಾರಿ ವಿಷಯವಾಗಿದೆ. ರಾಜ್ಯದಲ್ಲಿ ಪ್ರತೀ ಬಾರಿ ಕಾಂಗ್ರೇಸ್ ಸರ್ಕಾರ ಬಂದಾಗಲೆಲ್ಲಾ ಕೋಮು ಗಲಭೆಗಳು ಹೆಚ್ಚಾಗುವ ಇತಿಹಾಸವಿದ್ದು. ಈಗ ಮೂರು ದಶಕಗಳ ನಂತರ ವಿದ್ಯಾರ್ಥಿ ಮಟ್ಟದಲ್ಲಿ ಚುನಾವಣೆಯನ್ನು ನಡೆಸುವ ಮೂಲಕ ಮತ್ತೆ ರೌಡಿಸಂ ಮತ್ತು ಹಿಂಸಾಚಾರಗಳು ತಲೆ ಎತ್ತುವುದಕ್ಕೆ ಕಾರಣೀಭೂತವಾಗಿದೆ. ಬಹುತೇಕ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳಲ್ಲಿಯೂ ಎನ್ಎಸ್ಎಯುಐ, ಎಬಿವಿಪಿ, ಎಸ್ಎಫ್‌ಐ ಮುಂತಾದ ವಿದ್ಯಾರ್ಥಿ ಸಂಘಟನೆಗಳಿದ್ದು ಅವುಗಳ ನಾಯಕರುಗಳು ಭಾವೀ ರಾಜಕಾರಣಿಗಳಾಗುವ ಸಲುವಾಗಿ ತಮ್ಮ ತಮ್ಮ ಕ್ಯಾಂಪಸ್‌ಗಳನ್ನು ರಾಜಕೀಯ ಅಖಾಡಗಳನ್ನಾಗಿ ಮಾಡುವ ಸಾಧ್ಯತೆ ಬಹಳವಾಗಿದೆ. ಅಷ್ಟೇ ಅಲ್ಲದೇ, ರಾಜಕೀಯ ಪಕ್ಷಗಳ ಪ್ರಭಾವದಿಂದಾಗಿ ಕಾಲೇಜು ಚುನಾವಣೆಗಳಲ್ಲೂ ಹಣದ ಪ್ರಭಾವ ಮತ್ತು ಜಾತಿ ರಾಜಕಾರಣ ನುಸುಳುವ ಅಪಾಯವಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಶಿಸ್ತನ್ನು ಹಾಳು ಮಾಡುವುದರಲ್ಲಿ ಸಂದೇಹವೇ ಇಲ್ಲವಾಗಿದೆ. ಇಂತಹ ಪರಿಸ್ಥಿತಿಯಿಂದಾಗಿ, ಪರೀಕ್ಷೆಗಳು ಸತತವಾಗಿ ಮುಂದೂಡುತ್ತಾ ಹೋಗಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆಯೂ ಆಗುವುದಲ್ಲದೇ, ಅಧಿಕಾರ ಎನ್ನುವುದು ಹಣ ಮತ್ತು ಜಾತಿಯ ಪ್ರಭಾವಕ್ಕೆ ಒಳಗಾಗಿ ತಳ ಮಟ್ಟದಿಂದ ಬಂದ ವಿದ್ಯಾರ್ಧಿಗಳ ನಾಯಕತ್ವದ ಅವಕಾಶ ತಪ್ಪಿ ಹೋಗಬಹುದಾದ ಸಂಧರ್ಭವೇ ಹೆಚ್ಚಾಗಿದೆ.

ಪ್ರಸ್ತುತ ಕೇಂದ್ರ ಸರ್ಕಾರಕ್ಕೆ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ತರಲು ಹಗಲೂ ಇರುಳು ಪ್ರಯತ್ನಿಸುತ್ತಿರುವ ಅಪ್ರಬುದ್ಧ ರಾಜಕಾರಣಿ ರಾಹುಲ್ ಗಾಂಧಿಯನ್ನು ಅಧಿಕಾರಕ್ಕೆ ತರುವುದ್ದಕ್ಕಾಗಿ ಆತನ ಮಾತು ಕೇಳಿ ಮತ್ತು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಿ, ರಾಜ್ಯದ ಶಾಂತಿ ಮತ್ತು ಸುಸ್ಥಿತಿಯನ್ನು ಹಾಳುಗೆಡವಲು ಮುಂದಾಗಿರುವ ಮುಖ್ಯಮಂತ್ರಿಗಳಿಗೆ ತಾಯಿ ಭುವನೇಶ್ವರಿ ಮತ್ತು ಭಾರತಮಾತೆಯೇ ಸದ್ಭುದ್ದಿ ನೀಡಿ, ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯನ್ನು ನಿಲ್ಲಿಸಲಿ ಎಂದು ಪ್ರಾರ್ಥಿಸೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment