ಸಾಮನ್ಯವಾಗಿ ಒಂದು ದೊಡ್ಡ ಮರದ ಕೆಳಗೆ ಚಿಗುರುವ ಸಣ್ಣ ಗಿಡಗಳಿಗೆ ಅಷ್ಟೊಂದು ಪ್ರಾಮುಖ್ಯತೆ ಸಿಗುವುದಿಲ್ಲ. ಬಹಳಷ್ಟು ಸಮಯದಲ್ಲಿ ಆಂತಹ ಗಿಡಗಳನ್ನು ಕಳೆ ಎಂದು ಭಾವಿಸಿ ಕಿತ್ತು ಹಾಕುವುದೇ ರೂಢಿಯಲ್ಲಿದೆ. ಆದರೆ ಕೆಲವೊಂದು ಬಾರಿ ಅಂತಹ ಎಲ್ಲಾ ಅಡೆತಡೆಗಳನ್ನೂ ಮೀರಿ ಗಿನ್ನಿಸ್ ದಾಖಲೆ ಮಾಡುವಷ್ಟು ಎತ್ತರಕ್ಕೆ ಬೆಳೆದರೂ ಎಲೆಮರೆ ಕಾಯಿಯಂತೆಯೇ ಜೀವಿಸಿದ ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಶ್ರೀಮತಿ ಆಶಾ ಭೋಸ್ಲೆ 2026ರ ಏಪ್ರಿಲ್ 12ರ ಮಧ್ಯಾಹ್ನ ತಮ್ಮ 92 ವರ್ಷ ವಯಸ್ಸಿನಲ್ಲಿ ವಯೋ ಸಜಹ ಖಾಯಿಲೆಗಳಿದಾಗಿ ನಿಧನ ಹೊಂದುವ ಮೂಲಕ ಭಾರತೀಯ ಸಂಗೀತಲೋಕದ ಧೃವತಾರೆಯೊಂದು ಮರೆಯಾಗಿ ಹೋಗಿದೆ.
ಸೆಪ್ಟೆಂಬರ್ 8, 1993ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿನ ಗೋರ್ ಎಂಬ ಒಂದು ಚಿಕ್ಕ ಹಳ್ಳಿಯಲ್ಲಿ, ಖ್ಯಾತ ಸಂಗೀತಗಾರು ಮತ್ತು ರಂಗಭೂಮಿ ಕಲಾವಿದರಾಗಿದ್ದ ಶ್ರೀ ದೀನಾನಾಥ್ ಮಂಗೇಶ್ಕರ್ ಕುಟುಂಬದ ಐದು ಜನ ಮಕ್ಕಳಲ್ಲಿ ಎರಡನೇ ಮಗಳಾಗಿ ಆಶಾ ಅವರ ಜನನವಾಗುತ್ತದೆ. ಆಕೆಗೆ ಕೇವಲ ಒಂಬತ್ತು ವರ್ಷ ವಯಸ್ಸಿನಲ್ಲೇ ಅವರ ತಂದೆಯವರ ಅಕಾಲಿಕ ಮರಣಹೊಂದಿದಾಗ, ಪೂನಾ ದಿಂದ ಕೊಲ್ಹಾಪೂರ್‌ಗೆ ಮತ್ತು ಅಲ್ಲಿಂದ ಮುಂಬಯಿಗೆ ವಲಸೆ ಬರುತ್ತದೆ. ಕುಟುಂಬದ ನಿರ್ವಹಣೆಗಾಗಿ ಆಶಾ ಅವರ ಸಹೋದರಿ ಲತಾ ಮಂಗೇಶ್ಕರ್ ಸಣ್ಣ ವಯಸ್ಸಿನಲ್ಲಿಯೇ ಚಲನ ಚಿತ್ರಗಳಲ್ಲಿ ಹಾಡುವುದು ಮತ್ತು ನಟಿಸುವುದನ್ನು ಪ್ರಾರಂಭಿಸಿದಾಗ, ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎನ್ನುವಂತೆ ಆಶಾ ಆವರೂ ಸಹಾ ತನ್ನ ಅಕ್ಕನಂತೆಯೇ ದೈವದತ್ತವಾಗಿ ಬಂದಿದ್ದ ಕಂಠಸಿರಿ ಮತ್ತು ಸಂಗೀತ ಜ್ಞಾನದಿಂದ ಹಂಸರಾಜ್ ಅವರ ಬೆಲ್ಹ್‌ರ ಚುನಾರಿಯಾ (1948) ಚಿತ್ರಕ್ಕಾಗಿ ಸಾವನ್ ಆಯಾ ಗೀತೆಯ ಮೂಲಕ ಹಿಂದಿ ಚಲನ ಚಿತ್ರಗೀತೆಗಳನ್ನು ಹಾಡಲು ಪ್ರಾರಂಭಿಸಿ ರಾತ್ ಕಿ ರಾಣಿ (1949) ಚಿತ್ರದಲ್ಲಿ ಸ್ವತ್ರಂತ್ರ ಗಾಯಕಿಯಾಗುತ್ತಾರೆ.
ಅಕ್ಕ ತಂಗಿಯರ ಗಾಯನ ಮತ್ತು ನಟನೆಯಿಂದಾಗಿ ಅವರ ಕೌಟುಂಬಿಕೆ ಜೀವನ ಎಲ್ಲವೂ ಒಂದು ಹಂತಕ್ಕೆ ಚೆನ್ನಾಗಿ ನಡೆಯುತ್ತಿದೆ ಎನ್ನುವಾಗಲೇ, ಹುಚ್ಚು ಕೋಡಿ ಮನಸ್ಸು ಹದಿರಾರರ ವಯಸ್ಸು ಎನ್ನುವಂತೆ ಸಂಪ್ರದಾಯಸ್ಥ ಮನತನದ ಕೇವಲ 16 ವರ್ಷ ವಯಸ್ಸಿನ ಆಶಾ, ತನ್ನ ಆಕ್ಕ ಲತಾ ಮಂಗೇಶ್ಕರ್ ಅವರ ಮ್ಯಾನೇಜರ್ ಆಗಿದ್ದ ಮತ್ತು ತಮಗಿಂತ 15 ವರ್ಷ ದೊಡ್ಡವರಾಗಿದ್ದ ಗಣಪತ್‌ರಾವ್ ಭೋಸ್ಲೆ ಅವರನ್ನು ಪ್ರೀತಿಸಿ ಮದುವೆಯಾಗಿದ್ದು ಅವರ ಮನೆಯಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸುತ್ತದೆ. ತಂಗಿಯ ಈ ವರ್ತನೆಯಿಂದ ಬೇಸರಗೊಂಡ ಅಕ್ಕ ಲತಾ ಮಂಗೇಶ್ಕರ್ ಅವರು ಬಹಳ ವರ್ಷಗಳ ಕಾಲ ತನ್ನ ತಂಗಿಯೊಂದಿಗೆ ಸಂಬಂಧ ಬಿಡಿ ಮಾತನಾಡುವುದನ್ನೂ ನಿಲ್ಲಿಸಿರುತ್ತಾರೆ.
ಹೀಗೆ ಕೇವಲ 16 ವರ್ಷದಲ್ಲೇ ಆಶಾ ಮಂಗೇಶ್ಕರ್ ಆಶಾ ಭೋಸ್ಲೆಯಾಗಿ ಗಣಪತ್‌ರಾವ್ ಅವರ ಮನೆಗೆ ಬಂದಾಗ ಆ ಮನೆಯವರೂ ಸಹಾ ಸಂಪ್ರದಾಯವಾದಿಗಳಾಗಿದ್ದರಿಂದ, ಸಿನಿಮಾ ಕ್ಷೇತ್ರದಲ್ಲಿ ಬೆಳೆಯುತ್ತಿದ್ದ ಒಬ್ಬ ಗಾಯಕಿಯನ್ನು ಸೊಸೆಯಾಗಿ ಸ್ವೀಕರಿಸಲು ನಿರಾಕರಿಸಿದಾಗ, ದಾಂಪತ್ಯದ ಕಹಿ ಅನುಭವ ಅವರಿಗೆ ಅನುಭವಕ್ಕೆ ಬರುತ್ತದೆ. ಅವರ ಪತಿ ಗಣಪತ್‌ರಾವ್ ಅವರಿಗೆ ಆಶಾ ತನ್ನ ತವರು ಮನೆಯವರೊಂದಿಗೆ ಅಥವಾ ಲತಾ ಮಂಗೇಶ್ಕರ್ ಅವರೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದನ್ನು ಇಷ್ಟಪಡುತ್ತಿರಲಿಲ್ಲವಾದ್ದರಿಂದ ತನ್ನ ಅತ್ತೆಯ ಮನೆಯಲ್ಲಿ ಆಗುತ್ತಿದ್ದ ದೌರ್ಜನ್ಯವನ್ನು ಸಹಾ ತನ್ನ ತವರು ಕುಟುಂಬದೊಂದಿಗೆ ಹೇಳಿಕೊಳ್ಳಲಾಗದಂತಹ ಕೆಟ್ಟ ಪರಿಸ್ಥಿತಿಯನ್ನು ಆಶಾ ಅವರು ಅನುಭವಿಸಬೇಕಾಗುತ್ತದೆ. ಇಷ್ಟರ ಮಧ್ಯದಲ್ಲೇ ಮಗ ಹೇಮಂತ್ ಮತ್ತು ಮಗಳು ವರ್ಷಾ ಅವರ ಜನನವಾಗಿ ಮೂರನೇ ಮಗು ಆನಂದ್ ನೀರೀಕ್ಷೆಯಲ್ಲಿದ್ದ ಗರ್ಭಿಣಿ ಆಶಾ ಅವರನ್ನು ಆಕೆಯ ಪತಿಯ ಮನೆಯವರು ಮನೆಯಿಂದ ಹೊರಹಾಕಿದಾಗ, ಮತ್ತೆ ತಮ್ಮ ತವರಿನ ಆಶ್ರಯಕ್ಕೆ ಬರುತ್ತಾರೆ. ಹೀಗೆ ತನ್ನ ಮೊದಲ ಪತಿಯ ಮನೆಯಿಂದ ಅವಮಾನಕ್ಕೆ ಒಳಗಾದರೂ ಅದನ್ನು ಎಂದಿಗೂ ಯಾರೊಂದಿಗೂ ಎತ್ತಿ ತೋರಿಸಿಕೊಳ್ಳದೇ ಜೀವನ ಪೂರ್ತಿ ತಮ್ಮ ಮೊದಲ ಗಂಡನ ಹೆಸರಿನೊಂದಿಗೆಯೇ ಆಶಾ ಭೋಸ್ಲೆಯಾಗಿಯೇ ಜೀವಿಸಿದ್ದು ಆಕೆಯ ಹೆಗ್ಗಳಿಕೆ.
ತವರು ಮನೆಗೆ ಸೇರಿಕೊಂಡ ನಂತರ ಮೂರು ಮಕ್ಕಳ ನಿರ್ವಹಣೆಗಾಗಿ ಮತ್ತೆ ಚಲನಚಿತ್ರಗಳಲ್ಲಿ ಹಾಡುವುದಕ್ಕೆ ಆರಂಭಿಸುವಷ್ಟರಲ್ಲಿ ಅದಾಗಲೇ ಹಿಂದೀ ಚಲನಚಿತ್ರರಂಗದಲ್ಲಿ ಖ್ಯಾತ ನಾಮರಾಗಿದ್ದಂತಹ ಗೀತಾ ದತ್, ಶಂಷಾದ್ ಬೇಗಮ್ ಮತ್ತು ತನ್ನ ಸಹೋದರಿ ಲತಾ ಮಂಗೇಶ್ಕರ್ ಆವರುಗಳನ್ನು ಅನೇಕ ದೊಡ್ಡ ದೊಡ್ಡ ಸಂಗೀತ ನಿರ್ದೇಶಕರುಗಳು ದೊಡ್ಡ ಮಟ್ಟದ ಚಿತ್ರಗಳಿಗೆ ಗುತ್ತಿಗೆಯನ್ನು ಮಾಡಿಕೊಂಡಿದ್ದರಿಂದ, ಅವರುಗಳು ಬಿಟ್ಟ ಚಿತ್ರಗಳಿಗೆ ಹಾಡುವ ಅವಕಾಶವನ್ನು ಆಶಾ ಭೋಂಸ್ಲೆ ಪಡೆದರೂ ಕೊಂಚವೂ ಬೇಸರಿಸಿಕೊಳ್ಳದೇ ತಮ್ಮ ವೃತ್ತಿ ಧರ್ಮವನ್ನು ಮೆರೆಯುತ್ತಾರೆ. ಸಾಮಾನ್ಯವಾಗಿ ಖ್ಯಾತ ಗಾಯಕಿಯರು ಮಾಧುರ್ಯ ಪ್ರಧಾನ ಗೀತೆಗಳು ಮತ್ತು ಯುಗಳ ಗೀತೆಗಳಿಗೆ ಪ್ರಾಧಾನ್ಯತೆ ನೀಡುವಾಗ, ಆಶಾ ಅವರು ಇತರರಿಗಿಂತಲೂ ವಿಭಿನ್ನವಾಗಿ ಸ್ವಲ್ಪ ವೇಗಕ್ಕೆ ಒತ್ತು ನೀಡಿ, ಕ್ಯಾಬರೆ, ವ್ಯಾಂಪ್ಸ್‌ಹಾಡುಗಳನ್ನು ಹಾಡುವುದರಲ್ಲಿ ಪ್ರಖ್ಯಾತಿ ಹೊಂದುತ್ತಿದ್ದಂತೆಯೇ 1950ರ ದಶಕದಲ್ಲಿ, ಇತರೇ ಬಾಲಿವುಡ್‌ನ ಗಾಯಕರಿಗಿಂತಲೂ ಹೆಚ್ಚಿನ ಹಾಡುಗಳನ್ನು ಹಾಡುವಷ್ಟರ ಮಟ್ಟಿಗೆ ಪ್ರಖ್ಯಾತರಾದರು.
ಒ. ಪಿ. ನಾಯರ್ ಸಿ.ಐ.ಡಿ. (1956) ಚಿತ್ರದಲ್ಲಿ ಹಾಡುವ ಅವಕಾಶ ನೀಡುವುದರ ಮೂಲಕ ಆಶಾ ಭೋಂಸ್ಲೆಯ ಜೀವನದಲ್ಲಿ ಮಹತ್ತರವಾದ ತಿರುವನ್ನು ನೀಡಿದರೆ, ನಯಾ ದೌರ್ ಚಿತ್ರದ ನಿರ್ಮಾಪಕ ಬಿ ಆರ್ ಚೋಪ್ರ, ಆಶಾ ಅವರ ಪ್ರತಿಭೆಯನ್ನು ಗುರುತಿಸಿ ತಮ್ಮ ಮುಂದಿನ ಚಿತ್ರಗಳಾದ ವಕ್ತ್, ಗುಮ್ರಾಹ್, ಹಮ್ರಾಝ್, ಆದ್ಮಿ ಔರ್ ಇನ್ಸಾನ್, ಡೂಂಡ್ ಮುಂತಾದವುಗಳಲ್ಲಿ ಹಾಡಿಸುವ ಮೂಲಕ ಮತ್ತಷ್ಟು ಪ್ರವರ್ಧಮಾನಕ್ಕೆ ಬಂದರು. ಮುಂದೆ ಸಚಿನ್ ದೇವ್ ಬರ್ಮನ್ (ಎಸ್. ಡಿ ಬರ್ಮನ್) ಮತ್ತು ಆರ್ ಡಿ ಬರ್ಮನ್‌ರ (ಪಂಚಮ್ ದಾ) ಅವರೊಂದಿಗೆ ಕೆಲಸ ಮಾಡಲು ಅವಕಾಶ ದೊರೆತ ನಂತರ ತಮ್ಮ ವೃತ್ತಿ ಜೀವನದ ಉತ್ತಂಗ ಶಿಖರವನ್ನು ತಲುಪಿದರು ಎಂದರೂ ತಪ್ಪಾಗದು. ಆರ್ ಡಿ ಬರ್ಮನ್ ಸಂಗೀತದಲ್ಲಿ ಆಶಾ ಅವರಿಗೆ ಮೊದಲ ಭಾರಿಗೆ ಆಜಾ ಆಜಾ ಹಾಡಿನ ರಾಗವನ್ನು ತಿಳಿಸಿದಾಗ, ಪಾಶ್ಚಿಮಾತ್ಯ ನೃತ್ಯದ ಶೈಲಿಯನ್ನು ಹಾಡಲು ತಮ್ಮಿಂದ ಸಾಧ್ಯವಿಲ್ಲ ಎಂದು ನಿರಾಕರಿಸಿದಾಗ, ಬರ್ಮನ್ ಅವರಿಗೆ ಸ್ವಲ್ಪ ನಿರಾಸೆಯಾಗಿ ಮನಸ್ಸಿಲ್ಲದೇ ಆ ಹಾಡಿನ ಸಂಗೀತವನ್ನು ಬದಲಿಸಲು ಮುಂದಾದದ್ದನ್ನು ಕಂಡು ಕಸಿವಿಸಿಗೊಂಡ ಆಶಾರವರು ಅದನ್ನೇ ಸವಾಲಾಗಿ ಸ್ವೀಕರಿಸಿ ಸತತವಾಗಿ ಸುಮಾರು 210 ದಿನಗಳ ನಿರಂತರ ಅಭ್ಯಾಸ ಮಾಡಿ ಬಹಳ ಸುಂದರವಾಗಿ ಹಾಡನ್ನು ಹಾಡಿದ್ದಕ್ಕಾಗಿ ಸಂತೋಷಗೊಂಡ ಆರ್ ಡಿ ಬರ್ಮನ್ ಆ ಕಾಲದಲ್ಲಿ 100/- ರೂಪಾಯಿಯನ್ನು ಮೆಚ್ಚುಗೆಯಾಗಿ ನೀಡಿದ್ದರಂತೆ.
ಇದಾದ ನಂತರ ಓ ಹಸೀನಾ ಝುಲ್ಫೋನ್‌ವಾಲಿ ಮತ್ತು ಓ ಮೇರ ಸೋನಾ ರೆ (ಈ ಮೂರು ಹಾಡುಗಳು ಪ್ರಸಿದ್ಧ ಗಾಯಕ, ರಫಿ ಅವರೊಂದಿಗಿನ ಯುಗಳ ಗೀತೆಗಳು) ಬಹಳ ಪ್ರಖ್ಯಾತವಾದಾಗ, ಅಂದಿನ ಖ್ಯಾತ ನಟ, ಶಮ್ಮಿ ಕಪೂರ್, ಒಂದು ವೇಳೆ ನನಗಾಗಿ ಹಾಡಲು ಮಹಮದ್ ರಫಿ ಇಲ್ಲದಿದ್ದರೆ, ನಾನು ಆಶಾ ಭೋಸ್ಲೆರಿಂದ ಹಾಡಿಸುತ್ತಿದ್ದೆ ಎಂದು ಹೇಳಿದ್ದರೆಂದರೆ, ಆಶಾ ಅವರ ಖ್ಯಾತಿ ಯಾವ ರೀತಿ ಇತ್ತು ಎಂಬುದು ಅರಿವಾಗುತ್ತದೆ. ನಂತರದ ದಿನಗಳಲ್ಲಿ ಆರ್ ಡಿ ಬರ್ಮನ್ ಸಹಭಾಗಿತ್ವದೊಂದಿಗಿನ ಆಶಾರವರು ಅನೇಕ ಸೂಪರ್ ಡ್ಯೂಪರ್ ಹಿಟ್ ಹಾಡುಗಳನ್ನು ನೀಡುವ ಮೂಲಕ ಮುಂದೆ 1980ರಲ್ಲಿ ಆರ್ ಡಿ ಬರ್ಮನ್ ಅವರ ಒತ್ತಾಸೆಯ ಮೇರೆಗೆ ಆಶಾರವರು ಪಂಚಮ್ ದಾ ಅವರನ್ನು ವಿವಾಹವಾದರೂ ಅವರು ಅಶಾ ಭೋಸ್ಲೆಯಾಗಿಯೇ ಉಳಿದರು. 1960-70 ದಶಕಗಳಲ್ಲಿ, ಬಾಲಿವುಡ್‌ನ ಪ್ರಸಿದ್ಧ ನರ್ತಕಿ, ಹೆಲೆನ್ ಅವರ ಬಹುತೇಕ ಹಾಡುಗಳಿಗೆ ಆಶಾರವರು ಧ್ವನಿಯಾದರು.
1940 ಮತ್ತು 1950 ರ ದಶಕದಲ್ಲಿ ಅವರ ಆರಂಭಿಕ ದಿನಗಳಲ್ಲಿ ಕಡಿಮೆ-ಬಜೆಟ್ ಚಲನಚಿತ್ರಗಳಿಗೆ ಹಾಡುವಾಗ, ಗುಲಾಮ್ ಮೊಹಮ್ಮದ್, ಸಜ್ಜದ್ ಹುಸೇನ್, ಸರ್ದಾರ್ ಮಲಿಕ್, ಎಸ್. ಮೊಹಿಂದರ್, ಹಂಸರಾಜ್ ಬೆಹ್ಲ್: . ನೌಶಾದ್ ಅಲಿ, ರವೀಂದ್ರ ಜೈನ್, ಎನ್. ದತ್ತಾ, ಹೇಮಂತ್ ಕುಮಾರ್, ರೋಷನ್, ಚಿತ್ರಗುಪ್ತ್, ಉಷಾ ಖನ್ನಾ ನೌಶಾದ್ ಅಲಿ, ರವೀಂದ್ರ ಜೈನ್, ಎನ್. ದತ್ತಾ, ಹೇಮಂತ್ ಕುಮಾರ್, ರೋಷನ್, ಚಿತ್ರಗುಪ್ತ್, ಉಷಾ ಖನ್ನಾ ಮುಂತಾದ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದ ಆಶಾ ನಂತರ ದಿನಗಳಲ್ಲಿ O.P. ನಯ್ಯರ್, ರವಿ (ರವಿ ಶಂಕರ್ ಶರ್ಮಾ), S.D. ಬರ್ಮನ್, R.D. ಬರ್ಮನ್, ಲಕ್ಷ್ಮೀಕಾಂತ್-ಪ್ಯಾರೇಲಾಲ್, ಕಲ್ಯಾಣ್‌ಜಿ-ಆನಂದಜಿ, ಖಯ್ಯಾಮ್, ಶಂಕರ್-ಜೈಕಿಶನ್, ಮದನ್ ಮೋಹನ್, ಅನು ಮಲಿಕ್, ಬಪ್ಪಿ ಲಹರಿ, ನದೀಮ್-ಶ್ರವಣ್, ಜತಿನ್-ಲಲಿತ್ ಮುಂತಾದ ಸಂಗೀತ ದಿಗ್ಗಜರ ಸಂಗೀತಕ್ಕೆ ತಮ್ಮ ಮಾಧುರ್ಯತೆಯನ್ನು ತುಂಬಿದರು.
1980-90ರ ದಶಕದಲ್ಲಿ ಬಪ್ಪಿ ಲಾಹಿರಿ ಅವರ ಬಹುತೇಕ ಡಿಸ್ಕೋ ಹಾಡುಗಳಿಗೆ ಆಶಾ ಧ್ವನಿಯಾದರೆ, ಜೈದೇವ್ ಅವರ ಹಮ್ ದೋನೋ ಮತ್ತು ದೋ ಬೂಂದ್ ಪಾನಿ, ಸಿ.ರಾಮಚಂದ್ರ ಅವರ ಈನಾ ಮೀನ ದೀಕಾ, ಸಲೀಲ್ ಚೌಧರಿ ಅವರ ಜಾನೆಮಾನ್ ಜಾನೆಮನ್ ಹಾಡುಗಳು ಸೂಪರ್ ಹಿಟ್ ಆದವು ಇದೇ ಸಮಯದಲ್ಲಿಯೇ ದಕ್ಷಿಣ ಭಾರತದ ಧೀಮಂತ ಸಂಗೀತಕಾರ ಇಳಯರಾಜ ಅವರೊಂದಿಗೆ ಮೂಂಡ್ರು ಪಿರೈ ಚಿತ್ರದ ಹಾಡಿನ ಮೂಲಕ ಜೊತೆಯಾಗಿ ಆದಾದ ನಂತರ ಶ್ರೀದೇವಿ ಮತ್ತು ಜಯಪ್ರದ ಅವರ ಸದ್ಮ ನಂತರ ಬಂದ ಬಹುತೇಕ ತಮಿಳು/ತೆಲುಗು ಚಿತ್ರಗಳ ಹಿಂದಿ ರೀಮೇಕ್ ನಲ್ಲಿ ಆಶಾರವರು ಗಾಯಕಿಯಾದರು.
1994ರಲ್ಲಿ 18ರ ಹರೆಯದ ಊರ್ಮಿಳಾ ಮಾತೊಂಡ್ಕರ್ ಹಸಿಬಿಸಿ ಅಭಿನಯದ ಎ.ಆರ್. ರೆಹಮಾನ್ ಸಂಗೀತ ನಿರ್ದೇಶನದ ರಂಗೀಲಾ ಚಿತ್ರದ ಹಾಡುಗಳಾದ ತನ್ಹಾ ತನ್ಹಾ ಹಾಗೂ ರಂಗೀಲಾ ರೆ ಹಾಡುಗಳನ್ನು ಹಾಡಿದಾಗ ಆಶಾರವರ ವಯಸ್ಸು 60+ ಆಗಿದ್ದರೂ 18ರ ವಯಸ್ಸಿನ ಹುಡುಗಿಯಂತಿದ್ದ ಆಕೆಯ ಕಂಠಸಿರಿ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿತು. ನಂತರ ದಿನಗಳಲ್ಲಿ ಆಶಾ ಮತ್ತು ರೆಹಮಾನರ ಜೋಡಿಯಲ್ಲಿ ತಾಲ್ ಚಿತ್ರದ ಹಾಡುಗಳು ಲಗಾನ್ ಚಿತ್ರದಲ್ಲಿ ಉದಿತ್ ನಾರಾಯಣ್ ಅವರೊಂದಿಗೆ ರಾಧಾ ಕೈಸೆ ನ ಜಲೆ, ತಕ್ಷಕ್ ಚಿತ್ರದ ಮುಝೆ ರಂಗ್ ದೇ ಮುಂತಾದವು ಅವರ ವೃತ್ತಿ ಜೀವನದ ಮೈಲಿಗಲ್ಲುಗಳಾದವು.
ತಮ್ಮ ಕಂಠಸಿರಿಯನ್ನು ಕೇವಲ ಚಲನಚಿತ್ರಗೀತೆಗಳಿಗಷ್ಟೇ ಮೀಸಲಾಗಿರಿಸದೇ, ಸಾವಿರಾರು ಭಕ್ತಿ ಗೀತೆಗಳು ಮತ್ತು ಘಝಲ್ ಗಳ ನೂರಾರು ಕ್ಯಾಸೆಟ್ ಮತ್ತು ಸಿಡಿಗಳ ಆಲ್ಬಂ ಮೂಲಕ ದೇಶಾದ್ಯಂತ ಮನೆ ಮಾತಾದರು. ಇದಲ್ಲದೇ ಆಶಾ ಆಂಡ್ ಫ್ರೆಂಡ್ಸ್ ಹೆಸರಿನ ಆಲ್ಬಂನ ಧ್ವನಿ ಮುದ್ರಣದಲ್ಲಿ ಪ್ರಸಿದ್ಧ ಚಲನಚಿತ್ರ ನಟರೊಂದಿಗೆ ಹಾಡಿದ ಯುಗಳ ಗೀತೆಗಳಲ್ಲಿ ಸಂಜಯ್ ದತ್, ಊರ್ಮಿಳಾ ಮಾತೋಂಡ್ಕರ್ ಮತ್ತು ಪ್ರಸಿದ್ಧ ಕ್ರಿಕೆಟಿಗ ಬ್ರೆಟ್ ಲೀ ಯೊಂದಿಗೆ ಅವರು ಯು ಆರ್ ದಿ ಒನ್ ಫರ್ ಮಿ (ಹಾನ್ ಮೆ ತುಮ್ಹಾರಾ ಹೂ )ಬಹಳ ಪ್ರಸಿದ್ದಿಯಾಗಿತ್ತು. ಇದಲ್ಲದೇ, 1980-90ರ ದಶಕದ ನಂತರ ಕೆನಡ, ದುಬೈ, ಯುಕೆ, ಯು.ಎಸ್ ಇನ್ನಿತರ ದೇಶಗಳಲ್ಲಿ ಗಾನಗೋಷ್ಠಿಗಳನ್ನು ನಡೆಸಿದ್ದರು, 1989ರಲ್ಲಿ ಕೈಗೊಂಡ ಪ್ರವಾಸದಲ್ಲಿ ಕೇವಲ 20 ದಿನಗಳಲ್ಲಿ ಅಮೇರಿಕಾದ 13 ನಗರಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಲ್ಲದೇ ಇತ್ತೀಚಿನ ದಿನಗಳ ವರೆಗೂ ತಮ್ಮ 90+ ವಯಸ್ಸಿನಲ್ಲೂ ಅತ್ಯಂತ ಉತ್ಸಾಹದಿಂದ ವಿದೇಶಗಳಲ್ಲಿ ಸಂಗೀತ ಗೋಷ್ಠಿಗಳನ್ನು ನಡೆಸಿಕೊಡುತ್ತಿದ್ದರು. ಕೇವಲ ತಮ್ಮ ವಯಕ್ತಿಕ ಲಾಭಕ್ಕಾಗಿ ಮಾತ್ರವಲ್ಲದೇ ಅನೇಕ ಸಂಘ ಸಂಸ್ಥೆಗಳಿಗೆ ದೇಣಿಗೆ ಸಂಗ್ರಹಿಸಲೂ ಸಹಾ ದೇಶ ವಿದೇಶಗಳಲ್ಲಿ ತಮ್ಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟ ಹೆಗ್ಗಳಿಗೆ ಆಶಾರವರದ್ದಾಗಿದೆ.
ಹೀಗೆ ಕೇವಲ ಚಲನಚಿತ್ರ ಹಾಡುಗಳಷ್ಟೇ ಅಲ್ಲದೇ, ಪಾಪ್, ಘಝಲ್‌ಗಳು, ಭಜನೆಗಳು, ಸಾಂಪ್ರದಾಯಕ ಭಾರತೀಯ ಶಾಸ್ತ್ರೀಯ ಸಂಗೀತ, ಅದರಲ್ಲೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಛೇರಿಗಳು, ಜಾನಪದ ಹಾಡುಗಳು, ಕವ್ವಾಲಿಗಳು, ರವೀಂದ್ರನಾಥ್ ಟಾಗೋರರ ಸಂಗೀತಗಳು ನಝ್ರುಲ್ ಗೀತೆಗಳು ಸೇರಿ, ಅಸ್ಸಾಮೀ, ಹಿಂದಿ, ಉರ್ದು, ತೆಲುಗು, ಕನ್ನಡ, ಮರಾಠಿ, ಬೆಂಗಾಲಿ, ಗುಜರಾತಿ, ಪಂಜಾಬಿ, ತಮಿಳು, ಇಂಗ್ಲಿಷ್, ರಷ್ಯನ್, ಛೆಕ್, ನೇಪಾಳಿ, ಮಲೈ ಮತ್ತು ಮಲಯಾಳಂ ಸೇರಿದಂತೆ ಸುಮಾರು ೧೮ಕ್ಕೂ ಹೆಚ್ಚಿನ ಭಾಷೆಗಳಲ್ಲಿ 1000ಕ್ಕೂ ಹೆಚ್ಚಿನ ಚಿತ್ರಗಳಿಗಿಗೆ 2006ರಲ್ಲಿಯೇ ಆಶಾ ಭೋಂಸ್ಲೆ ತಾವು ಸುಮಾರು 12,000 ಹಾಡುಗಳನ್ನು ಹಾಡಿದ್ದಕ್ಕಾಗಿ ಪ್ರಪಂಚದಲ್ಲೇ ಅತ್ಯಂತ ಹೆಚ್ಚಿನ ಹಾಡುಗಳನ್ನು ರೆಕಾರ್ಡಿಂಗ್ ಮಾಡಿದ ಕಲಾವಿದೆ ಎಂದು ಗಿನ್ನಿಸ್ ಬುಕ್ ವರ್ಲ್ಡ್ ರೆಕಾರ್ಡ್ಸ್ ಅಕಾಡೆಮಿಯು ಗುರುತಿಸಿದೆ.
1967ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರಕ್ಕಾಗಿ ಯಾಕೋ ಏನೋ ಸೆರಗು ಎಂಬ ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಆಶಾ, ನಂತರ ವೈಜಯಂತಿಮಾಲಾ ಅವರ ಮೊದಲ ಕನ್ನಡ ಚಿತ್ರವಾಗಿದ್ದ ಆಶಾ ನಿರಾಶಾ ಚಿತ್ರಕ್ಕೂ ಹಾಡಿದ್ದರೂ ಕೆಲವು ಕಾರಣಾಂತರಗಳಿಂದ ಆ ಚಿತ್ರ ಬಿಡುಗಡೆ ಆಗಲಿಲ್ಲ. ನಂತರ ದೂರದ ಬೆಟ್ಟ ಚಿತ್ರದಲ್ಲಿ ಜಿ.ಕೆ.ವೆಂಕಟೇಶ್ ಅವರು ಸವಾಲು ಹಾಕಿ ಸೋಲಿಸಿ ಎಲ್ಲರ.. ಎಂಬ ಹಾಡನ್ನು ಹಾಡಿಸಿದ್ದರೆ, ಸುಮಾರು ಮೂರು ದಶಕಗಳ ನಂತರ ಆಶಾ ಮತ್ತೆ 2010ರ ಮತ್ತೆ ಮುಂಗಾರು ಚಿತ್ರದ ಹೇಳದೆ ಕಾರಣ ಹೋದೆಯಾ ಎಂಬ, ದುಃಖ ತುಂಬಿದ ಹಾಡನ್ನು ಹಾಡಿ, ಹೀಗೆ ಒಟ್ಟು ಮೂರು ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದಾರೆ.
ಗಾಯಕಿಯಾಗಿಯಷ್ಟೇ ಅಲ್ಲದೇ, ಆಶಾ ಅವರು ಒಳ್ಳೆಯ ಪಾಕಶಾಸ್ತ್ರಜ್ಞೆ ಆಗಿಯೂ ಪ್ರಸಿದ್ಧಿ ಪಡೆದಿದ್ದು, ತಮ್ಮ ಮನೆಯಲ್ಲಿ ಸ್ವತಃ ತಾವೇ ಅಡುಗೆ ಮಾಡಿ ತಮ್ಮ ಕುಟುಂಬಕ್ಕೆ ಬಡಿಸುತ್ತಿದ್ದರು. ಅವರು ಮಾಡುತ್ತಿದ್ದ ಕಡಾಯಿ ಘೋಸ್ಟ್ ಮತ್ತು ಬಿರಿಯಾನಿಗಳು ಬಾಲಿವುಡ್ಡಿನ ಅನೇಕ ನಟನಟಿಯರಿಗೆ ಅಚ್ಚು ಮೆಚ್ಚಾಗಿತ್ತು. ಅವರು ತಯಾರಿಸುತ್ತಿದ್ದ ಪಾಯಾ ಕರಿ, ಗೋವಾದ ಫಿಶ್ ಕರಿ ಹಾಗೂ ದಾಲ್ ಗಳು ಬಾಲಿವುಡ್‌ನ ಕಪೂರ್ ಕುಟುಂಬಕ್ಕೆ ಪ್ರೀತಿ ಪಾತ್ರವಾಗಿತ್ತು. ಅದೊಮ್ಮೆ ಟೈಮ್ಸ್ ಆಫ್ ಇಂಡಿಯಾ ದ ಒಂದು ಸಂದರ್ಶನದಲ್ಲಿ, ತಾವು ಸಂಗೀತಗಾರ್ತಿಯಾಗದೇ ಹೋಗಿದ್ದಲ್ಲಿ ಯಾವ ವೃತ್ತಿಯನ್ನು ಮಾಡುತ್ತಿದಿರಿ ಎಂದು ಕೇಳಿತ ತಕ್ಷಣವೇ, ನಾನು ಅಡುಗೆಯವಳಾಗಿ, ನಾಲ್ಕಾರು ಮನೆಗಳಲ್ಲಿ ಅಡುಗೆ ಕೆಲಸ ಮಾಡಿ ಹಣ ಸಂಪಾದಿಸುತ್ತಿದ್ದೆ ಎಂದಿದ್ದರಂತೆ. ಅದೇ ರೀತಿ ತಮ್ಮ ಬಿಡುವಿಲ್ಲದ ಸಮಯದಲ್ಲಿಯೂ ಆಶಾ ಅವರು ಆಶಾಸ್ ಎಂಬ ಹೆಸರಿನ ಸಾಂಪ್ರದಾಯಿಕ ವಾಯುವ್ಯ ಭಾರತೀಯ ಅಡುಗೆಗಳ ಹೋಟೆಲುಗಳನ್ನು ದುಬೈ ಹಾಗೂ ಕುವೈತ್‌ಗಳಲ್ಲಿ ನಡೆಸುವ ಮೂಲಕ ಯಶಸ್ವೀ ಹೋಟೆಲ್ ಉದ್ಯಮಿಯಾಗಿಯೂ ಪ್ರಸಿದ್ದಿ ಹೊಂದಿದ್ದರು.
ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅಷ್ಟೆಲ್ಲಾ ಖ್ಯಾತಿಯನ್ನು ಪಡೆದಿದ್ದರೂ, ವಯಕ್ತಿಕವಾಗಿ ಚಿಕ್ಕವಯಸ್ಸಿನಿಂದಲೂ ಸಾಯುವವರೆಗೂ ಸಹಾ ಬಹಳ ನೋವನ್ನು ಅನುಭವಿಸಿದ ವ್ಯಕ್ತಿಯಾಗಿದ್ದರು. ದಕ್ಷಿಣ ಮುಂಬಯಿ ಪೆದ್ದರ್ ರಸ್ತೆಯ ಪ್ರಭುಕುಂಜ್ ಅಪಾರ್ಟ್‌ಮೆಂಟ್ ನಲ್ಲಿದ್ದ ಅವರ ಮನೆಯಲ್ಲಿ ಮೂವರು ಮಕ್ಕಳನ್ನು ಮತ್ತು ಐದು ಜನ ಮೊಮ್ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಆಶಾ ಅವರ ಹಿರಿಯ ಮಗ ಹೇಮಂತ್ ಭೋಂಸ್ಲೆ ಪೈಲೆಟ್ ಆಗಿ ಬಹಳ ಕಾಲ ಕೆಲಸ ಮಾಡಿ ನಂತರ ಸಂಗೀತ ನಿರ್ದೇಶಕನಾಗುವುದಕ್ಕಾಗಿ ತನ್ನ ವೃತ್ತಿಯನ್ನು ಬದಲಿಸಿದ್ದರೆ, ಮಗಳು ವರ್ಷ ಭೋಂಸ್ಲೆ, ಸಂಡೇ ಅಬ್‌ಸೆರ್ವೆರ್ ಮತ್ತು ರೆಡಿಫ್ ನಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಇನ್ನು ಕಿರಿಯ ಮಗ ಆನಂದ್ ಭೋಂಸ್ಲೆ ಆಶಾರ ವೃತ್ತಿ ಜೀವನದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೊಮ್ಮಕ್ಕಳಾದ, ಚೈತನ್ಯ (ಚಿಂಟು) ಭೋಂಸ್ಲೆ (ಹೇಮಂತ್ ಅವರ ಮಗ) ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ ಎನ್ನುವಷ್ಟರಲ್ಲಿಯೇ 1980ರಲ್ಲಿ ರಲ್ಲಿ ಎರಡನೇ ಮದುವೆಯಾಗಿದ್ದ ಆರ್.ಡಿ. ಬರ್ಮನ್ ಅವರು 1994ರಲ್ಲಿ ಹೃದಯಾಘಾತದಿಂದ ನಿಧನರಾದರು. ಹೀಗೆ ಪ್ರೀತಿಯ ಪತಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ಆಶಾಗೆ ಅವರಿಗೆ 2012ರಲ್ಲಿ ಮಗಳು ವರ್ಷಾ ಭೋಸ್ಲೆ ತಮ್ಮದೇ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿ, ಮಗಳ ಸಾವಿನ ಭೀಕರ ನೋವಿನಿಂದ ಹೊರಬರುವ ಮುನ್ನವೇ, 2015ರಲ್ಲಿ ಕ್ಯಾನ್ಸರ್‌ನಿಂದಾಗಿ ಅವರ ಹಿರಿಯ ಮಗ ಹೇಮಂತ್ ಭೋಸ್ಲೆ ಕೂಡ ಸಾವನ್ನಪ್ಪಿದರು. ಹೀಗೆ ತಮ್ಮ ಕಣ್ಣೆದುರೇ ತಮ್ಮ ಪತಿ, ಮಗಳು ಮತ್ತು ಮಗನನ್ನು ಕಳೆದುಕೊಂಡು ಜೀವನದಲ್ಲಿ ಬಹಳ ಬೆಂದು ಹೋಗಿ, ಅಂತಿಮವಾಗಿ ಕಿರಿಯ ಮಗ ಆನಂದ್ ಭೋಸ್ಲೆ ಮತ್ತು ಮೊಮ್ಮಕ್ಕಳೊಂದಿಗೆ ಜೀವನ ನಡೆಸುತಿದ್ದರು.
ಸಂಗೀತ ಕ್ಷೇತ್ರದಲ್ಲಿನ ತಮ್ಮ ಎಂಟು ದಶಕಗಳ ವೃತ್ತಿಜೀವನದಲ್ಲಿ, ಪದ್ಮಶ್ರೀ (1997), ಭಾರತದ ಅತ್ಯುನ್ನತ ಸಿನಿಮಾ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2000) ಪದ್ಮವಿಭೂಷಣ (2008), ಮಹಾರಾಷ್ಟ್ರ ಭೂಷಣ (2021) ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಆಶಾ ಅವರಿಗೆ 18 ನಾಮನಿರ್ದೇಶನಗಳಲ್ಲಿ ಏಳು ಫಿಲ್ಮ್‌ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು, ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು 2011 ರಲ್ಲಿ ಗಿನ್ನೆಸ್ ವಿಶ್ವ ದಾಖಲೆಗಳಿಂದ ಸಂಗೀತ ಇತಿಹಾಸದಲ್ಲಿ ಹೆಚ್ಚು ರೆಕಾರ್ಡ್ ಮಾಡಲಾದ ಕಲಾವಿದೆ ಎಂದು ಗೌರವಿಸಲ್ಪಟ್ಟರು.
ತಮ್ಮ ಜೀವನದುದ್ದಕ್ಕೂ ಹೋದ ಬಂದ ಕಡೆಯಲ್ಲೆಲ್ಲಾ ತಮ್ಮ ಸಹೋದರಿ ಲತಾ ಮಂಗೇಶ್ಕರ್ ಅವರೊಂದಿಗೆ ಸ್ಪರ್ಧೆ ಇತ್ತೇ, ಅವರು ನಿಮ್ಮನ್ನು ವೃತ್ತಿ ಜೀವನಕ್ಕೆ ಮುಳ್ಳಾದರೆ ಎಂದು ಕೇಳುತ್ತಿದ್ದ ಪ್ರಶ್ನೆಗೆ ಬಹಳ ತೀಕ್ಷ್ಣವಾಗಿ ಉತ್ತರಿಸಿದ್ದ ಆಶಾ ರವರು ತನ್ನ ಒಡಹುಟ್ಟಿದ ಸಹೋದರಿ ಲತಾ ಮಂಗೇಶ್ಕರ್ ಅವರೊಂದಿಗಿನ ಸ್ಪರ್ಧೆಯ ಕುರಿತಾದ ಹೇಳಿಕೆಗಳೆಲ್ಲವೂ ಬರೀ ಕಟ್ಟು ಕಥೆಗಳು. ಚಿಕ್ಕಂದಿನಿಂದಲೂ ಲತಾ ಮತ್ತು ಆಶಾ ಒಟ್ಟೊಟ್ಟಿಗೆ ಬೆಳೆದಿದ್ದೇವೆ. ಆಕೆ ನನ್ನನ್ನು ಮಗುವಿನಂತೆ ಎತ್ತಿಕೊಂಡು ಓಡಾಡಿಸಿದ್ದಾಳೆ. ಲತಾಳ ಜೊತೆ ಆಶಾಳೂ ಶಾಲೆಗೆ ಒಟ್ಟಾಗಿ ಹೋಗುತ್ತಿದ್ದಾಗ, ಒಂದೇ ಶುಲ್ಕದಲ್ಲಿ ಇಬ್ಬರು ಮಕ್ಕಳು ಶಾಲೆಗೆ ಬರಲು ಸಾಧ್ಯವಿಲ್ಲ ಎಂದು ಶಿಕ್ಷಕಿಯು ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ, ತನ್ನ ತಂಗಿ ಆಶಾ ಇಲ್ಲದೇ ತಾನೂ ಸಹಾ ಶಾಲೆಗೆ ಹೋಗುವುದಿಲ್ಲಾ ಎಂದು ಓದುವುದಕ್ಕೇ ಅರ್ಧಕ್ಕೆ ಲತಾ ನಿಲ್ಲಿಸಿದ್ದನ್ನು ಹೇಳುತ್ತಿದ್ದರು. ಕೇವಲ 16ನೇ ವಯಸ್ಸಿಗೆ ಮನೆಯವರ ಆಸೆಗೆ ವಿರುದ್ಧವಾಗಿ ಬೇಜವಾಬ್ದಾರಿಯಿಂದ ಪ್ರೇಮಿಯ ಜೊತೆ ಮನೆ ಬಿಟ್ಟು ಹೋದಾಗ, ಇಡೀ ಸಂಸಾರದ ಹೊರೆ ತನ್ನ ಮೇಲೆ ಬಿದ್ದದ್ದಕ್ಕಾಗಿ ಕೆಲವರ್ಷಗಳ ಕಾಲ ಬೇಸರಿಸಿಕೊಂಡು ಮಾತನಾಡುವುದನ್ನು ನಿಲ್ಲಿಸಿದ್ದ ಲತಾ ಆನಂತರದ ದಿನಗಳಲ್ಲಿ ಎಲ್ಲವನ್ನೂ ಮರೆತು ಅನ್ಯೋನ್ಯವಾಗಿದ್ದ ಕುರುಹಾಗಿ ಅಕ್ಕ ತಂಗಿಯರಿಬ್ಬರೂ ಒಟ್ಟಾಗಿಯೇ ನೂರಾರು ಹಾಡುಗಳನ್ನು ಹಾಡಿದ್ದನ್ನು ನೆನಪಿಸುತಿದ್ದರು.
ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಅವರಿಗೆ 92ನೇ ವಯಸ್ಸಿನಲ್ಲಿ ಎದೆ ನೋವು ಮತ್ತು ಉಸಿರಾಟದ ಸಮಸ್ಯೆಯಿಂದಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಆ ಇಳೀ ವಯಸ್ಸಿನ ದೇಹ ವೈದ್ಯರ ಚಿಕಿತ್ಸೆಗೆ ಸ್ಪಂದಿಸದೇ, 2026 ಏಪ್ರಿಲ್ 12ರ ಮಧ್ಯಾಹ್ನ ನಿಧನರಾದರು. ಎರಡು ರಾಷ್ಟ್ರಪ್ರಶಸ್ತಿ ಸೇರಿದಂತೆ, ಏಷ್ಯಾ ನೈಟಿಂಗೇಲ್, ಲತಾ ಮಂಗೇಶ್ಕರ್ ಪ್ರಶಸ್ತಿ ಭಾಜನರಾಗಿದ್ದ ಆಶಾ ಅವರು ಭೌತಿಕವಾಗಿ ಇನ್ನು ಮುಂದೆ ನಮ್ಮೊಂದಿಗೆ ಇರದೇ ಹೋದರೂ, ಕಲಾವಿದರುಗಳಿಗೆ ಸಾವಿಲ್ಲಾ ಎನ್ನುವಂತೆ ಅವರ ಹಾಡುಗಳ ಮೂಲಕ ಆಚಂದ್ರಾರ್ಕವಾಗಿ ನಮ್ಮೊಂದಿಗೆ ಇದ್ದೇ ಇರುತ್ತಾರೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ