ಶರ್ಮಿಷ್ಠೆ, ಉಮಾಶ್ರೀಯವರ ಏಕವ್ಯಕ್ತಿ ನಾಟಕ

ರಂಗಭೂಮಿಯ ನಾಟಕ ಮತ್ತು ಚಲನಚಿತ್ರಗಳು ಎರಡೂ ಸಹಾ ಕಥೆ ಹೇಳುವ ಪ್ರಬಲ ಮಾಧ್ಯಮಗಳಾದ್ದರೂ, ಪಾತ್ರಧಾರಿಗಳು ಮತ್ತು  ಪ್ರೇಕ್ಷಕರ ಅನುಭವದಲ್ಲಿ ಅವೆರಡೂ ಸಹಾ ಭಿನ್ನವಾಗಿವೆ. ಚಲನಚಿತ್ರದಲ್ಲಿ ಕ್ಯಾಮೆರಾ ಮುಂದೆ  ಅದೊಂದೋ ಮಾಡಿದ ಅಭಿನಯಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಸಿಗುವುದು ಮತ್ತೆಂದೋ ಆಗಿದ್ದು, ಇಲ್ಲಿ ತಪ್ಪಾದಲ್ಲಿ ಮತ್ತೆ ಮತ್ತೆ ಅಭಿನಯಿಸಿ ಮುದ್ರಿಸಬಹುದಾದ ಅವಕಾಶವಿದೆ.. ಆದರೆ  ರಂಗಭೂಮಿಯಲ್ಲಿ ನಟ ನಟಿಯರು ಪ್ರೇಕ್ಷಕರ ಮುಂದೆ ನೇರ ಮತ್ತು ನಿರಂತರವಾದ ಭಾವನಾತ್ಮಕ ಸಂಪರ್ಕವನ್ನು ಕಾಯ್ದಿಟ್ಟು ಕೊಳ್ಳಬೇಕಾದ ಅನಿವಾರ್ಯವಿದ್ದು ಇಲ್ಲಿ ನಟ ನಟಿಯರು ಸಂಭಾಷಣೆ, ಅಭಿನಯ ಎಲ್ಲವನ್ನೂ ನೆನಪಿಟ್ಟುಕೊಂಡು ತಪ್ಪಿಲ್ಲದೇ ಅಭಿನಯಿಸಬೇಕಾಗುತ್ತದೆ. ಇನ್ನು ಪೌರಾಣಿಕ ಹಿನ್ನೆಲೆಯುಳ್ಳ ನಾಟಕವಾದರಂತೂ ಸುಧೀರ್ಘವಾದ ಸಂಭಾಷಣೆ, ಭಾಷಾ ಶುದ್ದತೆ,  ಶರೀರ ಮತ್ತು ಶಾರೀರದೊಂದಿಗೆ ನವರಸಗಳನ್ನು ಅಭಿನಯದ ಮೂಲಕವೇ ಆಭಿವ್ಯಕ್ತಗೊಳಿಸುತ್ತಲೇ  ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅಭಿನಯಿಸಬೇಕಾಗುತ್ತದೆ.

ಇಷ್ಟೆಲ್ಲಾ ಪೀಠಿಕೆ ಏಕೆಂದರೆ, 2026ರ ಏಪ್ರಿಲ್ 15, ಬುಧವಾರದಂದು ಬೆಂಗಳೂರಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ರೇವಾ ವಿಶ್ವವಿದ್ಯಾಲಯದಲ್ಲಿ  ಬೆಂಗಳೂರಿನ ರಂಗಸಂಪದ ತಂಡದವರ ಬೇಲೂರು ರಘುನಂದನ್‌ ಅವರು ಬರೆದಿರುವ ಮತ್ತು ಚಿದಂಬರ ರಾವ್‌ ಜಂಬೆ ನಿರ್ದೇಶನ ಮಾಡಿದ  ಏಕವ್ಯಕ್ತಿ ನಾಟಕ ಶರ್ಮಿಷ್ಠೆಯನ್ನು  ವಿದ್ಯಾರ್ಥಿಗಳು ಮತ್ತು ಸಿಬ್ಬಂಧಿ ವರ್ಗದವರಿಂದಲೇ ಕಿಕ್ಕಿರಿದು ತುಂಬಿದ್ದ ಕುವೆಂಪು ರಂಗಮಂಟಪದಲ್ಲಿ ಹಿರಿಯ ರಂಗಕರ್ಮಿ, ಚಲನಚಿತ್ರ ಮತ್ತು ಕಿರುತೆಯೆಯ ಜನಪ್ರಿಯ ನಟಿ, ಮಾಜೀ ಮಂತ್ರಿಯೂ ಆಗಿ ಸಕ್ರೀಯ ರಾಜಕಾರಣಿಯೂ ಆಗಿರುವ ಉಮಾಶ್ರೀ ಅಭಿನಯಿಸಿ,  ಸುಮಾರು 70-75 ನಿಮಿಷಗಳ ಕಾಲ ಮತ್ತೊಂದು ಲೋಕಕ್ಕೆ ಕರೆದೊಯ್ಯಿತು ಎಂದರೂ ತಪ್ಪಾಗದು.  ಸುಮಾರು ವರ್ಷಗಳ ನಂತರ ರಂಗಸಂಪದ ಹೊರತಂದಿರುವ ಶರ್ಮಿಷ್ಠೆಯಲ್ಲಿ ಹಿರಿಯ ನಟಿ ಉಮಾಶ್ರೀ ಅಭಿನಯಿಸಿದ್ದಾರೆ ಎನ್ನುವುದಕ್ಕಿಂತಲೂ ಪರಕಾಯ ಪ್ರವೇಶ ಮಾಡಿದ್ದರು ಎಂದರೂ ಅತಿಶಯವಾಗದು.

ಮಹಾಭಾರತದ ಚಂದ್ರವಂಶದ ಯಯಾತಿ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಮರಾಠಿಯ ವಿ.ಸ ಖಾಂಡೇಕರ ಅವರ ಯಯಾತಿ ಕಾದಂಬರಿಯನ್ನು ಕನ್ನಡಕ್ಕೆ ವಿ.ಎಮ್.ಇನಾಮದಾರ ಅವರು ಅನುವಾದಿದ್ದರೆ, ಇದೇ  ಕಾದಂಬರಿ ಆಧಾರಿತವಾಗಿ  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಗಿರೀಶ ಕಾರ್ನಾಡರೂ ಸಹಾ ಯಯಾತಿ ನಾಟಕವನ್ನು ಬರೆದಿದ್ದಾರೆ. ಅದೇ ರೀತಿಯಲ್ಲಿ ಹಿರಿಯ ಸಾಹಿತಿಗಳಾದ ಶ್ರೀರಂಗರೂ ಸಹಾ ಇದೇ ವಿಷಯದ ಕುರಿತಾಗಿ ಬರೆದಿದ್ದರೂ, ಸುಮಾರು 8 ವರ್ಷಗಳ ಕಾಲ ಅಧ್ಯಯನ ನಡೆಸಿ ಬೇಲೂರು ರಘುನಂದನ ಅವರು ಉಮಾಶ್ರೀಗೆಂದೇ ಬರೆದಿರುವ ಈ ನಾಟಕದಲ್ಲಿ ಸಮಾಜದಲ್ಲಿನ ವರ್ಣಬೇಧ, ರಾಕ್ಷಸ-ದೇವಮಾನವ, ಹೀನಕುಲ-ಉತ್ತಮ ಕುಲ ಇವೆಲ್ಲವನ್ನೂ ದಾಟಿ ಮಾನವೀಯತೆಯ ಅಂತಿಮ ರೂಪವನ್ನು ಶರ್ಮಿಷ್ಠೆಯ ರೂಪದಲ್ಲಿ ತೋರಿಸುವ ಪ್ರಯತ್ನವಾಗಿದ್ದು, ಇದರಲ್ಲಿ ರಾಜಕೀಯ, ವಯಸ್ಸಿಗೆ ಬಂದ ಹೆಣ್ಣಿನ ತುಮಲತೆ, ದಾಸಿಯ ರೂಪದ ಹೆಣ್ಣಿನ ಮೇಲಿನ ಶೋಷಣೆ ಜೀವಶಾಸ್ತ್ರ, ಎಲ್ಲದಕ್ಕೂ ವಿಭಿನ್ನವಾಗಿ ವಸ್ತ್ರದ ರೂಪದಲ್ಲಿ ಸಂಘರ್ಷವನ್ನು ರೂಪಕವಾಗಿ ಕಟ್ಟಿಕೊಡಲಾಗಿದೆ.

ಕ್ಷಣಿಕ ಸುಖ ಹಾಗೂ ದೀರ್ಘಕಾಲದ ಸಂತೋಷಗಳ ನಡುವಿನ ವ್ಯತ್ಯಾಸಗಳನ್ನೇ ಅರಿಯದ ಯಯಾತಿಯ ಸುತ್ತಲೇ ಸಾಗುವ ಈ ನಾಟಕದಲ್ಲಿ  ಹಟಮಾರಿತನ ಮತ್ತು ಲಂಪಟತನ ಯಯಾತಿಯಾಗಿ, ದೈತ್ಯರ ಅರಸು ವೃಷಪರ್ವನ ಮಗಳಾಗಿ, ರಾಜಕುಮಾರಿಯಾಗಿ, ಪಟ್ಟದರಸಿಯಾಗಿ ಮೆರೆಯಬೇಕಿದ್ದರೂ ವಿಧಿಯಾಟದಿಂದಾಗಿ ರಾಕ್ಷಸರ ಗುರು ಶುಕ್ರಾಚಾರ್ಯರ ಮಗಳು ದೇವಯಾನಿಯ ದಾಸಿಯಾಗಿ ನರಳುವ ಶರ್ಮಿಷ್ಠೆಯಾಗಿ, ತನ್ನ ಬಾಲ್ಯದ ಗೆಳೆತಿಯಾಗಿದ್ದರೂ, ಅಧಿಕಾರ ಸಿಕ್ಕ ತಕ್ಷಣ, ಈಕೆ ತನ್ನ ಗೆಳತಿಯಲ್ಲಾ, ತನ್ನ ಜೀವಮಾನವೀಡಿ ಸೇವೆ ಸಲ್ಲಿಸುವ ದಾಸಿ ಎಂದು ಯಜಮಾನಿಕೆಯ ರೂಪದಲ್ಲಿ ಅಬ್ಬರಿಸುವ  ದೇವಯಾನಿಯಾಗಿ,  ಯಯಾತಿ ಮತ್ತು ಶರ್ಮಿಷ್ಠೆಯ ಗಾಂಧರ್ವ ವಿವಾಹದ ಕುರುಹಾಗಿ ಜನಿಸಿದ, ಶುಕ್ರಾಚಾರ್ಯರ ಶಾಪಕ್ಕೆ ಒಳಗಾಗಿ ವೃದ್ಧಾಪ್ಯವನ್ನು ಅಪ್ಪುವ ಯಯಾತಿಗೆ ತನ್ನ ಯೌವನವನ್ನೇ ಧಾರೆ ಎರೆವ ಆದರ್ಶದ ಅಮಲಿಗೆ ಒಳಗಾಗುವ ಪುರುವಿನಂಥ ಧೀರ ಮಗನಾಗಿ,  ತನ್ನೆಲ್ಲ ಕನಸುಗಳನ್ನು ಚೆಲ್ಲಿಕೊಂಡು, ಭಾವಕೋಶಗಳನ್ನೇ ಹೊಸಕಿ ಹಾಕಿಕೊಳ್ಳುವ ಸೊಸೆ ಚಿತ್ರಲೇಖೆಯಾಗಿ ಹೀಗೆ ಏಳೆಂಟು ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವ ಉಮಾಶ್ರೀ ಅವರಿಗೆ  ಉಮಾಶ್ರೀಯೇ ಸಾಟಿ ಎಂದರೂ ತಪ್ಪಾಗದು.

ಸುಮಾರು 68 ವರ್ಷ ವಯಸ್ಸಿನ ಉಮಾಶ್ರೀ ಅವರ ಎಡಗಾಲಿಗೆ ಪೆಟ್ಟು ಬಿದ್ದು  ಕ್ರೇಪ್ ಬ್ಯಾಂಡೇಜ್ ಕಟ್ಟಿಕೊಂಡಿದ್ದರೂ, ಬಾಲ್ಯದಲ್ಲಿ ದೇವಯಾನಿಯೊಂದಿಗೆ ಆಡುವ ಆಟ ಪಾಟಗಳು, ನದಿಯಲ್ಲಿ ಈಜುವುದು, ಪಟಪಟನೆ ಮರ ಹತ್ತಿ ಇಳಿಯುವಂತೆ ನಟಿಸುವುದನ್ನು ನೋಡಿದಾಗ ಈ ಕಲಾವಿದೆಗೆ ವಯಸ್ಸೇ ಆಗಿಲ್ಲವೇನೋ ಎನಿಸುತ್ತದೆ. ಅದೇ ರೀತಿಯಲ್ಲಿ ದೇವಯಾನಿಗೆ ಮಗ ಹುಟ್ಟಿದಾಗ, ರಂಗದಿಂದ ಕೆಳಗೆ ಇಳಿದು ಎಲ್ಲರಿಗೂ ಸಿಹಿ ಹಂಚುತ್ತಲೇ ತನ್ನ ಹೊಟ್ಟೆಯಲ್ಲಿಯೂ ಯಯಾತಿಯ ಮಗು ಬೆಳೆಯುತ್ತಿರುವುದನ್ನು  ತೋರಿಸುವ ಅಭಿನಯ, ತನ್ನ ಮಗ ಪುರುವಿನೊಂದಿಗೆ ನಡೆಸುವ ಸಂಭಾಷಣೆಯಲ್ಲಿಪ್ರಪಂಚದಲ್ಲಿ  ಕೇವಲ ಇಬ್ಬರು ಮಹಿಳೆಯರು ಮಾತ್ರಾ  ಗಂಡಸನ್ನು ಯಶಸ್ಸನ್ನು ಹೊಗುಳುವುದು ಒಂದು ತಾಯಿ ಮತ್ತು ಮಡದಿ ಎಂದು ಹೇಳುವಾಗ ಒಂದು  ತಾಯಿಯಾಗಿ ತನ್ನ ಮಗನ ಬಗ್ಗೆ ತೋರುವ ಕರುಣೆ ಎಂತಹದ್ದು ಎನ್ನುವುದನ್ನು ಇಲ್ಲಿ ಹೇಳುವಿದಕ್ಕಿಂತಲೂ ಶರ್ಮಿಷ್ಠೆಯಾಗಿ ಉಮಾಶ್ರೀ  ಅವರ ಬಾಯಿಯಿಂದಲೇ ಕೇಳಬೇಕು.

ನಾಟಕ ಅರಂಭದಲ್ಲಿ ಬರುವ ಪ್ರಸ್ತುತ ರಾಜಕೀಯದೊಂದಿಗೆ ಹೋಲಿಕೆಯಾಗುವ  ಸಂಹಿತೆಯ ಕುರಿತಾದ ಈ ಸಂಭಾಷಣೆ ಒಂದು ಕ್ಷಣ ಪ್ರೇಕ್ಷರರನ್ನು ಚಿಂತೆನೆಗೆ ಹಚ್ಚುತ್ತದೆ.

ಮಾನಕ್ಕೊಂದು ಅಸ್ತ್ರ. ಆ ಅಸ್ತ್ರಕ್ಕೊಂದು ವಸ್ತ್ರ ವಸ್ತ್ರಕ್ಕೊಂದು ಸಂಹಿತೆ. ಸಂಹಿತೆಗೊಂದು ರಾಜಕಾರಣ ಕೊನೆಗೆ ವಸ್ತ್ರ ರಾಜಕಾರಣ. ಎಂದು ಒಂದು ಸಣ್ಣ ವಿರಾಮ ಕೊಟ್ಟು ಸಂಹಿತೆ ಎಂದರೆ ಗೊತ್ತಲ್ಲ? ಹಾಕಿಕೊಟ್ಟ ನಿಯಮಗಳನ್ನು ಮೀರುವಂತಿಲ್ಲ. ಇಷ್ಟಪಟ್ಟಿದ್ದು ಯಾವುದೂ ಸಂಹಿತೆಗಳ ಮುಂದೆ ನಡೆಯಲ್ಲ. ಮರ್ಯಾದೆ, ಘನತೆ, ಪ್ರತಿಷ್ಠೆ ಕೊನೆಗೆ ಜಾತಿ, ಧರ್ಮ ಎಲ್ಲವನ್ನೂ ಬಟ್ಟೆಯೆನ್ನುವ ನೂಲಿಗೆ ತಗಲಿ ಹಾಕಿಬಿಟ್ಟ ಮೂರ್ಖ ಮನುಷ್ಯ ರಕ್ತ, ಮಾಂಸಗಳಿಗೆ ತೊಡಿಸಿದ ಚರ್ಮ ಎಂಬ ಬಟ್ಟೆ ಪ್ರತೀ ಜೀವಿಗೂ ಇರುವಾಗ ತೊಟ್ಟ ಬಟ್ಟೆಗಳಿಂದ ಮನುಷ್ಯನ ಘನತೆ ಹೆಚ್ಚುವುದೆಂದು ಹಟ ಹಿಡಿಯುವುದಾದರೂ ಏತಕ್ಕೆ? ನೂಲು ನೂಲು ಒಂದಾದ ಬಟ್ಟೆಗೆ ಮೇಲು-ಕೀಳೆಂಬ, ಶ್ರೇಷ್ಠ-ಕನಿಷ್ಠ ಎಂಬ ಬಣ್ಣ ಹಚ್ಚುವ ವ್ಯಸನವಾದರೂ ಏಕೆ? ಎನ್ನುವ  ಶರ್ಮಿಷ್ಠೆಯ ಮಾತುಗಳು  ಪ್ರೇಕ್ಷಕರ ಮನಸ್ಸೆಳೆಯುತ್ತವೆ.

ಅದೇ ರೀತಿ  ಆಟವಾಡಲು ಹೋಗಿ ಎಷ್ಟು ಹೊತ್ತಾದರೂ ಮನೆಗೆ ಬಾರದ ಮಗಳು ಶರ್ಮಿಷ್ಟೆಯನ್ನು ಹುಡುಕಿಕೊಂಡು ಹೋದ ತಾಯಿಗೆ  ಹೂದೋಟದಲ್ಲಿ ಮಗಳನ್ನು ಕಂಡು ಆಕೆಯೊಡನೆ ಮಾತಾನಾಡುವಾಗ. ಅಮ್ಮಾ, ಗಿಡ ಮೊಗ್ಗು ಬಿಡುವುದು ಹೇಗೆಂದು ಶರ್ಮಿಷ್ಠೆಯು ತನ್ನ ತಾಯಿಯ ಬಳಿ ಕೇಳಿದಾಗ ನೀನು ಮದುವೆಯಾಗು, ಗೊತ್ತಾಗುವುದು. ಎಂದಾಗ ಯಾವಾಗ ಮದುವೆ ಮಾಡ್ತಿ?’ ಎಂದು ಮುಗ್ಧವಾಗಿ ಕೇಳುವಾಗ, ಸಿನಿಮಾಗಳಲ್ಲಿ  ಹಾಸ್ಯಪಾತ್ರದಲ್ಲಿ ಕಾಣುವ ಉಮಾಶ್ರೀ ಕಾಣಸಿಗುತ್ತಾರೆ.

ರಾಜಕುವರಿಯಾದ ಬಾಲ್ಯದ ಗೆಳತಿ ಶರ್ಮಿಷ್ಠೆ ತಪ್ಪಾಗಿ ದೇವಯಾನಿಯ ಕುಪ್ಪುಸವನ್ನು ಧರಿಸಿದ್ದಾಗಲೇ ಸಹಿಸಿಕೊಳ್ಳಲಾಗದ ದೇವಯಾನಿ ಬದಲಾದ ಪರಿಸ್ಥಿತಿಯಲ್ಲಿ ತನ್ನ ದಾಸಿಯಾದಾಗಲಂತೂ ಶರ್ಮಿಷ್ಠೆಯ ಪ್ರೀತಿ, ಸುಖ, ವಾತ್ಸಲ್ಯದ ಕನಸುಗಳನ್ನು ಹೊಸಕಿ ಹಾಕುತ್ತಾಳಲ್ಲದೇ, ಯಯಾತಿಯೊಂದಿಗಿನ ಗಾಂಧರ್ವ ವಿವಾಹದಿಂದಾಗಿ ಆತನ ಕಂದ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಎಂದಾಗಲೂ ಜಗತ್ ಜಾರಿಣಿ ಎಂದು ನಿಂದಿಸಿದ್ದ ದೇವಯಾನಿ, ತನ್ನ ಮಗನಿದ್ದರೂ,  ಅಂತಿಮವಾಗಿ ತನ್ನ ಸವತಿಯಾದ ಅದೇ ದೇವಯಾನಿಯ ಮಗ  ವೀರ ಮತ್ತು  ಧೀರ ಪುರುನಿಗೆ ಪಟ್ಟ ಕಟ್ಟಲು ಮುಂದಾಗುವಾಗ, ತನ್ನ ಮಗನಿಗೆ ಪಟ್ಟ ಕಟ್ಟಿ ನೀನು ರಾಜಮಾತೆ ಆಗಲು ಮುಂದಾಗುವೆಯೇ ಎಂಬ ಶರ್ಮಿಷ್ಟೆಯ ವ್ಯಂಗ್ಯ ನಿಜಕ್ಕೂ ಕರಳು ಕಿತ್ತು ಬರುವಂತೆ ಮಾಡುತ್ತದೆ. ಶುಕ್ರಾಚಾರ್ಯರ ಶಾಪದಿಂದಾಗಿ  ಅಕಾಲವಾಗಿ ವೃದ್ಧಾಪ್ಯಕ್ಕೆ ಒಳಗಾದಾಗ, ಈ ವೃದ್ಧ ಗಂಡನೊಂದಿಗೆ ಹೇಗೆ ಬಾಳುವುದೆಂದು ಯೋಚಿಸಿ, ಕೊಟ್ಟ ಶಾಪವನ್ನು ಹಿಂಪಡೆಯಬೇಕೆಂದು ಶುಕ್ರಾಚಾರ್ಯರನ್ನು ದೇವಯಾನಿ  ಕೇಳಿಕೊಂಡಾಗ, ಕೊಟ್ಟ ಶಾಪವನ್ನು ಹಿಂಪಡೆಯಲಾಗದು ಆದರೆ ಅದಕ್ಕೆ ಪರಿಹಾರವಾಗಿ,  ಯಯಾತಿಯ ವೃದ್ಧಾಪ್ಯ ಯಾರು ತೆಗೆದುಕೊಳ್ಳಲು ಯಾರಾದರೂ ಮುಂದಾದಲ್ಲಿ ಯಯಾಗಿ ಮತ್ತೆ ಯೌವನ ಪಡೆಯಬಹುದು ಎಂದಾಗ,  ಶರ್ಮಿಷ್ಠೆಯ ಮಗ ಪುರುವಿನಿಂದ ಮತ್ತು ತನ್ನ ತಾರುಣ್ಯವನ್ನು ಪಡೆದ ಯಯಾತಿ, ಮತ್ತೆ ಕಾಮಿಷ್ಟನಾಗಿ ಮತ್ತೆ  ಆಗೋಣ ಬಾ ಎಂದು ಶರ್ಮಿಷ್ಠೆಯನ್ನು ಕೇಳಿದಾಗ,  ತನ್ನ ಮಗನಿಂದ ಮತ್ತೆ ತಾರುಣ್ಯವನ್ನು ಪಡೆದ ಯಯಾತಿಯನ್ನು ಮಗನೆಂದು ಸ್ವೀಕರಿಸಬೇಕೆ? ಅಥವಾ ಗಂಡನೆಂದು ಭೋಗಿಸಬೇಕೆ? ಎಂಬು ನೋವಿನ ಜಿಜ್ಞಾಸೆಗೆ ಒಳಗಾಗಿದ್ದಾಗ, ತನ್ನ ತಪ್ಪನ್ನೆಲ್ಲಾ ಅರಿತುಕೊಂಡ ದೇವಯಾತಿ ಮತ್ತೆ ಶರ್ಮಿಷ್ಠೆಯನ್ನು ಶಮಾ ಎಂದು ತನ್ನ ಬಾಲ್ಯದ ಗೆಳತಿಯಂತೆಯೇ ಕರೆದು, ಆಕೆ ಮತ್ತು  ಯಯಾತಿಯ ಕೈ ಹಿಡಿದುಕೊಂಡು  ವಾನಪ್ರಸ್ಥಕ್ಕೆ ಕರೆದುಕೊಂಡು ಹೋಗುವ ಮೂಲಕ ಯಯಾತಿಯನ್ನು ಮನುಷ್ಯನನಾಗಿ ಮಾಡುವುದರಲ್ಲಿ ನಾಟಕ ಕೊನೆ ಗೊಳ್ಳುತ್ತದೆ.

ಸುಮಾರು ಒಂದು ಗಂಟೆ ಹತ್ತು ನಿಮಿಷಗಳ ಕಾಲದ ಇಡೀ ನಾಟಕದಲ್ಲಿ ಬರುವ ಆರೇಳು ಪಾತ್ರಗಳ ಅಷ್ಟೂ  ಸಂಭಾಷಣೆಯನ್ನು ಒಂದು ಚೂರು ತಪ್ಪಿಲ್ಲದೇ, ಎಲ್ಲಿಯೂ ತಡವರಿಸದೇ, ಇದು ಏಕವ್ಯಕ್ತಿ ಅಭಿನಯದ ನಾಟಕ ಎಂಬುವುದನ್ನೂ ಮರೆಸುವುದರಲ್ಲಿ  ಉಮಾಶ್ರೀ ಅವರು ಸಫಲರಾಗಿರುವುದರ ಹಿಂದೆ ಬಹುಶಃ ಒಬ್ಬ ಹೆಣ್ಣಾಗಿ ಆವರು ತಮ್ಮ ಜೀವನದಲ್ಲಿ  ಅನುಭವಿಸಿರಬಹುದಾದ, ಅನುಮಾನ, ಅವಮಾನ ಆನಂತರದ ಸನ್ಮಾನದ ಜೊತೆಗೆ ಈ ನಾಟಕ್ಕಾಗಿ ಆಕೆ ಬಹಳ ದಿನಗಳ ಕಾಲ ನಡೆಸಿರಬಹುದಾದ ಸತತ ಅಭ್ಯಾಸ ಎದ್ದು ಕಾಣಿಸುತದೆ.  ಏಕ ವ್ಯಕ್ತಿ ನಾಟಕವಾದರೂ  ಪ್ರತಿಯೊಂದು ಪಾತ್ರ ಬಂದಾಗಲೂ ಅದಕ್ಕೆ ಪೂರಕವಾಗಿ ಲೈಟಿಂಗ್, ಪ್ರಸಾಧನ, ರಂಗವಿನ್ಯಾಸ ಬಹಳ ಸುಂದರವಾಗಿದ್ದು. ಅದರಲ್ಲೂ ವಿಶೇಷವಾಗಿ ಬೆಳಕು ಬಹಳ ಪ್ರಮುಖಪಾತ್ರ ವಹಿಸಿದ್ದು, ಬೆಳಕಿನ ಮೂಲಕವೇ ಪಾತ್ರಗಳನ್ನು ತೋರಿಸಿರುವುದು ಬಲು ಅಪ್ಯಾಯಮಾನ ಎನಿಸುತ್ತದೆ. ನಾಟಕ ಹಿನ್ನಲೆ ಸಂಗೀತವೂ ನಾಟಕದ ಓಘಕ್ಕೆ ಸಹಕಾರಿಯಾಗಿದೆ.

ಏಕವ್ಯಕ್ತಿ ನಾಟಕವಾದರೂ ಅದರ ಹಿಂದೆ ಬಹಳ ಜನರ ಪರಿಶ್ರಮವಿದ್ದು ಅಂತಿಮವಾಗಿ ನಾಟಕ ಮುಗಿದಾಗ, ನಾಟಕದ ಕರ್ತೃ ಬೇಲೂರು ರಘುನಂದನ್ ನಿರ್ದೇಶಕ: ಚಿದಂಬರರಾವ್ ಜಂಬೆ ಇರದೇ ಇದ್ದ ಕಾರಣ, ರಂಗದ ಮೇಲೆ ಬಾರದೇ ಹೋದರೂ, ರಂಗ ಸಂಪದ ತಂಡದ  ರಂಗಸಜ್ಜಿಕೆ/ವಸ್ತ್ರವಿನ್ಯಾಸ/ಪರಿಕರ ಪ್ರಮೋದ್ ಶಿಗ್ಗಾಂವ್, ಬೆಳಕಿನ ವಿನ್ಯಾಸ ಮಾಡಿದ ಅರುಣ್ ಮೂರ್ತಿ, ಅರುಣ್, ಅಪ್ಪಯ್ಯ ಸಂಗೀತ ವಿನ್ಯಾಸ: ಅನೂಶ್ ಶೆಟ್ಟಿ ಸಂಗೀತ ನಿರ್ವಹಣೆ: ಶಿವಲಿಂಗ ಪ್ರಸಾದ್, ರವಿಕುಮಾರ್ ಪ್ರಸಾಧನ ಮುಂತಾದವರನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದೂ ಸಹಾ ಬಹಳ ಅಚ್ಚುಕಟ್ಟಾಗಿತ್ತು.

ಒಟ್ಟಿನಲ್ಲಿ ರೇವಾ ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ಆರಂಭವಾಗಿರುವ ಸ್ಕೂಲ್ ಆಫ್ ಕಮ್ಯೂನಿಕೇಷನ್ ಮತ್ತು ಮೀಡೀಯಾ ಎಂಟರ್ಪೈರ್ಸ್ ಅವರು ಲಿಬರಲ್ ಸ್ಟಡೀಸ್ ವಿಭಾಗ ಪ್ರತೀ ವರ್ಷವೂ ವಿದ್ಯಾರ್ಥಿಗಳಿಗಾಗಿ ನಡೆಸುವ ಚಲನಚಿತ್ರೋತ್ಸವ ಲೈ & ಲೀಯ ಉದ್ಘಾಟನೆಯ ಭಾಗವಾಗಿ  ಈ ಮೊದಲೇ ತಿಳಿಸಿದಂತೆ ರಂಗಭೂಮಿಯೇ ಸಿನಿಮಾದ ಮೂಲ ತಳಹದಿ ಎಂದು  ಎತ್ತಿ ತೋರಿಸಲು ಹಿರಿಯ ನಟಿ ಉಮಾಶ್ರೀ ಅವರ ಶರ್ಮಿಷ್ಟೆ ನಾಟಕವನ್ನು ಆಯೋಜಿಸಿ,  ಫ್ಯಾಂಟಸೀ ಬದುಕಿನಲ್ಲೇ ಕಾಲಕಳೆವ ನಮ್ಮ ಮುಂದಿನ ಪೀಳಿಗೆಯವರಿಗೂ ನಾಟಕದ ಬಗ್ಗೆ ಒಲವು ಮೂಡಿಸಿದ್ದು ಅನುಕರಣೀಯ ಮತ್ತು ಅಭಿನಂದನಾರ್ಹವಾಗಿದೆ.

ಉಮಾಶ್ರೀ ಅವರ ಏಕವ್ಯಕ್ತಿ ಪ್ರದರ್ಶನದ ಶರ್ಮಿಷ್ಠೆ ನಾಟಕದ ಬಗ್ಗೆ ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ, ಮುಂದೇದಾದರೂ ಆ ನಾಟಕದ ಪ್ರದರ್ಶನ ಇದ್ದಲ್ಲಿ ತಪ್ಪದೇ ಸಮಾನ ಮನಸ್ಕರೊಂದಿಗೆ ಹೋಗಿ ಆ ಕಾಲದೊಂದಿಗೆ ಕೆಲ ಹೊತ್ತು ಜೀವಿಸಿ  ಉಮಾಶ್ರೀ ಅವರ ಅಭಿನಯದ ಬಗ್ಗೆ ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

 

 

Leave a comment