ನಾವು ಸಣ್ಣವರು ಇರುವಾಗ ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವಾಗ ಒಬ್ಬರು ಹೆಚ್ಚು ಇಲ್ಲವೇ ಕಡಿಮೆ ಊಟವಾಡುವುದನ್ನು ಕಂಡು ಯಾರಾದರೂ ಆಡಿಕೊಂಡಲ್ಲಿ ಕೂಡಲೇ ನಮ್ಮ ಅಮ್ಮ, ಏಯ್ ಊಟ ತನ್ನಿಚ್ಛೆ. ನೋಟ ಪರರ ಇಚ್ಛೆ ಹಾಗಾಗಿ ಅವರವರ ಹಸಿವೆ ತಕ್ಕಂತೆ ಊಟ/ತಿಂಡಿ ಮಾಡ್ತಾರೆ ಅದರ ಬಗ್ಗೆ ಮತ್ತೊಬ್ಬರು ಆಡಿಕೊಳ್ಳಬಾರದು ಎನ್ನುತ್ತಿದ್ದರು. ಊಟವನ್ನು ನಮ್ಮ ಇಷ್ಟದಂತೆ ಮಾಡಬೇಕು ಆದರೆ ನಾವು ತೊಡುವ ಬಟ್ಟೆ ಮಾತ್ರಾ ನಾಲ್ಕು ಜನರ ಇಚ್ಚೆಗೆ ಅರ್ಥಾತ್ ನಾಲ್ಕು ಜನರಿಗೆ ಇಷ್ಟವಾಗುವಂತೆ/ಮುಜುಗೊರ (ಇತ್ತೀಚೆಗೆ ಹರಿದು ಹೋದ ಬಟ್ಟೆಗಳೇ ಫ್ಯಾಶನ್ ಆಗಿ, ಅದರ ಕುರಿತು ಮಾತನಾಡುವುದು ಅಪರಾಧ ಎನ್ನುವಂತಾಗಿರುವುದು ವಿಪರ್ಯಾಸ) ಆಗದಂತೆ ತೊಡಬೇಕು ಎನ್ನುವುದು ಈ ಆಡು ಮಾತಿನ ಗೂಢಾರ್ಥ.
ಹಾಗಾಗಿ ಆಹಾರ ವಿಚಾರ, ಉಡುಪು-ತೊಡಪು, ಆಚರಣೆ, ಪೂಜೆ ಪುನಸ್ಕಾರ ಇವೆಲ್ಲವೂ ಶುದ್ದವಾಗಿ ವಯಕ್ತಿಕವಾಗಿದ್ದು ಸುಖಾ ಸುಮ್ಮನೆ ಹಾದಿಯಲ್ಲಿ ಬೀದಿಯಲ್ಲಿ ಹೋಗುವವರೆಲ್ಲರೂ ಅದರ ಕುರಿತು ಮಾತನಾಡುವ ಹಕ್ಕಿಲ್ಲ. ಇನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಸಂವಿಧಾನಾತ್ಮಕವಾಗಿ ಪ್ರತಿಯೊಬ್ಬ ಭಾರತೀಯನಿಗೆ ಇದೆ ಎಂದು ಹೇಗೆ ಬೇಕಾದರೂ, ಯಾರಿಗೆ ಬೇಕಾದರೂ, ಏನು ಬೇಕಾದರೂ ಹೇಳಬಹುದು ಎಂದಲ್ಲ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತಾಗಿ ಸಂವಿಧಾನದಲ್ಲಿ, ಈ ರೀತಿಯಾಗಿ ಹೇಳಲಾಗಿದೆ. ಪ್ರತಿಯೊಬ್ಬ ನಾಗರಿಕನು ತನ್ನ ಆಲೋಚನೆಗಳನ್ನು ಪದಗಳು ಅಥವಾ ಬರಹಗಳ ಮೂಲಕ ವ್ಯಕ್ತಪಡಿಸಬಹುದು ಮತ್ತು ಅವುಗಳನ್ನು ಯಾವುದೇ ಮುದ್ರಣವಿಲ್ಲದೆ ಪ್ರಕಟಿಸಬಹುದು. ಖಂಡಿಸುವ ಹೊಣೆಗಾರಿಕೆ, ಆದರೆ ಅವರು ದುರುಪಯೋಗಗಳಿಗೆ ಜವಾಬ್ದಾರರಾಗಿರುತ್ತಾರೆ, ಈ ಹಕ್ಕನ್ನು ಚಲಾಯಿಸುವಾಗ, ಪ್ರಕರಣಗಳಲ್ಲಿ ಮತ್ತು ಸಂಸತ್ತು ನಿರ್ಧರಿಸುವ ವಿಧಾನದಲ್ಲಿ ಅವರು ಮಾಡಬಹುದಾದ ದುರುಪಯೋಗಗಳಿಗೆ ಅವರು ಜವಾಬ್ದಾರರಾಗಿರುತ್ತಾರೆ ಎಂದಿರುವ ಕಾರಣ, ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವಂತೆ ಎಚ್ಚರಿಕೆಯಿಂದ ಮಾತನಾಡುವುದು ಅತ್ಯಾವಶ್ಯಕವಾಗಿದೆ.
ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಎಂದರೆ, ಕಳೆದ ಎರಡು ದಿನಗಳಿಂದ ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀ ನಾರಾಯಣ ಮುರ್ತಿಗಳ ಧರ್ಮಪತ್ನಿಯವರಾದ ಸುಧಾ ಮೂರ್ತಿಯವರು ಖಾಸಗಿ ಸಂದರ್ಶನವೊಂದರೆಲ್ಲಿ ತಮ್ಮ ಆಹಾರ ಪದ್ಧತಿಯ ಬಗ್ಗೆ ಹೇಳಿದ್ದರೆ ಕುರಿತಾಗಿ ಕೆಲವು ಕೆಲಸವಿಲ್ಲದ ಅಂಡುಪಿರ್ಕೆ ಮಂದಿಯವರು ಅವರ ಕುರಿತಾಗಿ ಕೆಟ್ಟ ರೀತಿಯಲ್ಲಿ ಟ್ರೋಲ್ ಮಾಡುತ್ತಾ, ಆಹಾರ ಕುರಿತಾಗಿ ಸಮಾಜದಲ್ಲಿ ಭಿನ್ನಾಭಿಪ್ರಾಯವನ್ನು ತರುತ್ತಿರುವುದಲ್ಲದೇ ಅದು ನಿಧಾನವಾಗಿ ಒಂದು ನಿರ್ಧಿಷ್ಟ ಜಾತಿಯನ್ನು ತುಳಿಯುವ ಹುನ್ನಾರ ಸ್ಪಷ್ಟವಾಗಿ ಕಾಣುತ್ತಿದೆ.
ಈ ರೀತಿಯ ಟ್ರೋಲ್ ಆದ ಕೂಡಲೇ, ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಎನ್ನುವಂತೆ ಸುಧಾಮೂರ್ತಿಯವರು ಮತ್ತು ಕುನಾಲ್ ವಿಜಯ್ಕರ್ ಅವರಿಬ್ಬರೂ ಬೆಂಗಳೂರಿನ ಪಡುಕೋಣೆಯವರ ಬೈಟುಕಾಫೀ ಎಂಬ ಹೋಟೇಲ್ ಒಂದರಲ್ಲಿ ಕುಳಿತು ಕಾನೇ ಮೇ ಕ್ಯಾ ಹೈ ( Khane Mein kya hai) ಎಂಬ ಕಾರ್ಯಕ್ರಮಕ್ಕಾಗಿ ಬಾಳೆ ಎಲೆಯ ಮೇಲೆ ದಕ್ಷಿಣ ಭಾರತದ ಸಾಂಪ್ರದಾಯಕ ಊಟವನ್ನು ಮಾಡುತ್ತಾ ಜೊತೆಯಲ್ಲೇ ಹರಟೆ ಹೊಡೆಯುವ ಕಾರ್ಯಕ್ರಮವನ್ನು ಸಂಪೂರ್ಣವಾಗಿ ನೋಡಿದಾಗ, ಸಾವಿರಾರು ಕೋಟಿ ಆಸ್ತಿಯ ಒಡತಿ, ಲೇಖಕಿ, ಶಿಕ್ಷಕಿ, ಪ್ರಖರ ವಾಗ್ಮಿ ಒಂದು ಚೂರೂ ಹಮ್ಮು ಬಿಮ್ಮು ಇಲ್ಲದೇ ಸರ್ವೇ ಸಾಧಾರಣ ಮಧ್ಯಮವರ್ಗದ ಹೆಂಗಸಿನಂತೆ ತನ್ನನ್ನೇ ತಾನು ತಿಂಡಿಪೋತಿ, ತನಗೆ ಅಡುಗೆ ಚನ್ನಾಗಿ ಮಾಡಲು ಬರುವುದಿಲ್ಲಾ, ಆದರೂ ಕೆಲವೊಂದು ಅಡುಗೆಗಳನ್ನು ಮಾಡುತ್ತೀನಿ. ನನ್ನಂತಹ ಹೆಂಡತಿ ಮಾಡುವ ಅಡುಗೆಯನ್ನು ತಿಂದು ನಾರಾಯಣ ಮೂರ್ತಿಗಳು ಮದುವೆ ಆದಾಗ ಹೇಗಿದ್ದರೂ ಹಾಗೆಯೇ ಇದ್ದಾರೆ ಎಂದು ತಮ್ಮನ್ನೇ ತಾವೇ ಹಾಸ್ಯ ಮಾಡಿಕೊಳ್ಳುತ್ತಾ, ಎಲೆಯ ಮೇಲೆ ಬಡಿಸಿದ ಒಂದೊಂದೇ ಪದಾರ್ಥಗಳನ್ನು ವಿವರಿಸುತ್ತಾ ಊಟವನ್ನು ಸವಿದದ್ದು ನಿಜಕ್ಕೂ ಉತ್ತಮವಾಗಿತ್ತು.
ಹಾಗೆಯೇ ಮಾತಿನ ಮಧ್ಯದಲ್ಲಿ ಸಂದರ್ಶಕರು ನೀವು ವಿದೇಶಗಳಿಗೆ ಹೋದಾಗ ಹೇಗೆ ಸಂಭಾಳಿಸುತ್ತೀರಿ? ಎಂಬ ಪ್ರಶ್ನೆಯನ್ನು ಕೇಳಿದಾಗ ಸಹಜವಾಗಿಯೇ ಸುಧಾಮೂರ್ತಿಯವರು ನಾನು ಶುದ್ಧ ಸಸ್ಯಾಹಾರಿ. ಮೊಟ್ಟೆ ಬಿಡಿ, ಬೆಳ್ಳುಳ್ಳಿ ಕೂಡ ತಿನ್ನೋಲ್ಲ. ಅದಕ್ಕಿಂತಲೂ ಹೆಚ್ಚಾಗಿ ಮಾಂಸಹಾರ ಮತ್ತು ಸಸ್ಯಾಹಾರ ಒಂದೇ ಕಡೆ ಮಾಡೋ ಹೋಟೆಲ್ ನಲ್ಲಿ ಕೂಡ ತಿನ್ನಲು ಇಚ್ಚಿಸುವುದಿಲ್ಲ. ಅಕಸ್ಮಾತ್ ಮಾಂಸಾಹಾರ ಮಾಡಲು ಬಳಸಿದ ಪಾತ್ರೆ ಪಗಾರಗಳಲ್ಲೇ ಸಸ್ಯಾಹಾರ ಮಾಡಿದರೆ ಏನು ಎಂಬ ಆತಂಕದಿಂದಾಗಿ ವಿದೇಶಗಳಿಗೆ ಹೋದಾಗ ನನ್ನ ಅಡುಗೆಯನ್ನು ನಾನೇ ಮಾಡಿಕೊಳ್ಳುವೇ ಅಲ್ಲದೇ ನನ್ನ ಚಮಚಗಳನ್ನು ನಾನೇ ಕೊಂಡೊಯ್ಯುವೆ ಎಂದು ಹೇಳಿದರು.
ಸಹಜ ಮನಸ್ಥಿತಿಯ ಕೇಳುಗನಿಗೆ ಸುಧಾಮೂರ್ತಿಯವರ ಮೇಲಿನ ಹೇಳಿಕೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಆದರೆ ಒಲ್ಲದ ಗಂಡನಿಗೆ ಮೊಸರಿನಲ್ಲೂ ಕಲ್ಲು ಹುಡುಕುವ ಮಂದಿಗೆ, ಈ ಮಾತನ್ನು ಕೇಳಿದ ಕೂಡಲೇ ಸುಧಾಮೂರ್ತಿಯವರ ಜಾತಿ ನೆನಪಾಗಿ, ಇದು ಬ್ರಾಹ್ಮಣರು, ದಲಿತರ ಮೇಲೆ ಮಾಡುವ ದಬ್ಬಾಳಿಕೆ. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಂತೆ ಪ್ರತಿಯೊಬ್ಬರಿಗೂ ಅವರವರ ಆಹಾರದ ಬಗ್ಗೆ ಅವರೇ ನಿರ್ಧರಿಸಬಹುದಾಗಿದ್ದು, ಮಾಂಸಾಹಾರ ತಿನ್ನುವುದು ನಮ್ಮ ಹಕ್ಕು ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲಾ ಎಂದು ಓತಪ್ರೋತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿರುವುದನ್ನು ನೋಡಿದಾಗ ಅವರ ಬೌದ್ಧಿಕ ದೀವಾಳಿತನದ ಬಗ್ಗೆ ಮರುಕುವುಂತಾಗಿ ಸುಖಾಸುಸುಮ್ಮನೇ ಹಾಸ್ಯಾಸ್ಪದಕ್ಕೆ ಒಳಗಾಗುತ್ತಿದ್ದಾರಲ್ಲಾ ಎಂದೆನಿಸುತ್ತಿದೆ
ಸುಧಾಮೂರ್ತಿಯವರು ಹೇಳಿದ ವಿಷಯ ನನ್ನ ವಯಕ್ತಿಕ ಜೀವನದಲ್ಲಿಯೂ ಅನೇಕ ಬಾರಿ ಆಗಿದೆ. ಸುಮಾರು ವರ್ಷಗಳ ಹಿಂದೆ ಕಛೇರಿಯ ಕೆಲಸದ ನಿಮಿತ್ತ ಜಪಾನ್ ದೇಶದ ಟೋಕೀಯೋ ಹೋಗುವ ಸಲುವಾಗಿ ಬಹಳ ಉತ್ಸುಹದಿಂದ ಎಲ್ಲಾ ರೀತಿಯ ತಯಾರುಗಳನ್ನು ಮಾಡಿಕೊಂಡಿದ್ದೆ. ಅದರಲ್ಲೂ ವಿಶೇಷವಾಗಿ ಸಸ್ಯಹಾರೀ ಊಟದ ಬಗ್ಗೆಯೇ ಬಹಳ ತಲೆ ಕೆಡಿಸಿಕೊಂಡು ಲಗೇಜಿನಲ್ಲಿ ನನ್ನ ಆರ್ಧದಷ್ಟು ಎಂಟಿಆರ್ ರೆಡಿ ಟು ಈಟ್ ಪದಾರ್ಥಗಳನ್ನೇ ತುಂಬಿಕೊಂಡು ಹೋಗಿದ್ದೆ. ತಡ ರಾತ್ರಿ ಬೆಂಗಳೂರಿನಿಂದ ಹೊರಟು ಮುಂಜಾನೆ ಮಲೇಷಿಯಾದ ಕೌಲಾಲಾಂಪುರ್ ತಲುಪಿ ಮೂರ್ನಾಲ್ಕು ಗಂಟೆಗಳ ನಂತರ ಅಲ್ಲಿಂದ ಟೋಕಿಯೋದ ನರೀತಾ ವಿಮಾನ ನಿಲ್ದಾಣ ತಲುಪುವ ವಿಮಾನವೇರಿದ್ದೆ. ಬೆಳ್ಳಂಬೆಳಿಗ್ಗೆ ಹಸಿವೂ ಆಗಿತ್ತು. ಗಗನ ಸಖಿ ಯಾವಾಗ ತಿನ್ನಲು ಏನಾದರೂ ಕೊಡುವರೋ ಎಂದು ಜಾತಕ ಪಕ್ಷಿಯಂತೆ ಕುಳಿತಿದ್ದಾಗ ಹುರಿದ ಕಡಲೇಕಾಯಿ ಮತ್ತು ಹಣ್ಣಿನ ರಸವನ್ನು ತಂದು ಕೊಟ್ಟಾಗ, ಪಕ್ಕದವರು ಏನೆಂದು ಕೊಳ್ಳುತ್ತಾರೋ ಎಂದು ಆಲೋಚಿಸದೇ ಎಷ್ಟೋ ದಿನಗಳ ನಂತರ ತಿನ್ನಲು ಆಹಾರ ಸಿಕ್ಕವನಂತೆ ಗಬ ಗಬ ಎಂದು ತಿಂದು ಮುಗಿಸಿದೆ. ರಾವಣ ಹೊಟ್ಟೆಗೆ ಅರಕಾಸಿನ ಮಜ್ಜಿಗೆ ಎನ್ನುವಂತೆ ತಿಂದ್ದದ್ದು ಸಾಲದೇ ಮತ್ತೇನಾದರೂ ಕೊಡತ್ತಾರೋ ಎಂದು ಬಕಪಕ್ಷಿಯಂತೆ ಕಾಯುತ್ತಿದ್ದಾಗ, ಆ ಗನನಸಖಿ ಎಲ್ಲರಿಗೂ ಒಂದೊಂದು ಬರ್ಗರ್ ಕೊಡುತ್ತಾ ನನ್ನ ಕೈಗೂ ಬನ್ನಿನ ಮಧ್ಯೆ ಹೂ ಕೋಸಿನ ಎಲೆಗಳು ಅದರ ಮಧ್ಯೆ ಇದ್ದ ಒಂದು ತುಂಡು ಇರುವ ಬರ್ಗರ್ ಒಂದನ್ನು ಕೊಟ್ಟರು. ಅದೇಕೋ ಅನುಮಾನ ಬಂದು ಇದು ಸಸ್ಯಾಹಾರ ತಾನೇ? ಎಂದು ಕುತೂಹಲದಿಂದ ಕೇಳಿದಾಗ, ಓಹೋ, ದಯವಿಟ್ಟು ಕ್ಷಮಿಸಿ, ಇದು ಗೋಮಾಂಸದಿಂದ ಕೂಡಿದೆ ಎಂದು ಹೇಳಿ ಮದ್ಯದಲ್ಲಿದ್ದ ಗೋಮಾಂಸದ ತುಂಡನ್ನು ತೆಗೆದು, ಈಗ ಇದು ಸಸ್ಯಾಹಾರವಾಗಿದೆ. ನೀವು ನಿಶ್ವಿಂತೆಯಿಂದ ತಿನ್ನಬಹುದು ಎಂದಾಗ ನನ್ನ ಮುಖ ಇಂಗು ತಿಂದ ಮಂಗನಂತಾಗಿತ್ತು. ಕೂಡಲೇ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಆ ಗಗನ ಸಖಿ ದಯವಿಟ್ಟು ಕ್ಷಮಿಸಿ ನಮ್ಮಿಂದ ತಪ್ಪಾಗಿದೆ. ಸ್ವಲ್ಪ ಸಮಯ ಕೊಡಿ ನಿಮಗೆ ತಿನ್ನಲು ಸಸ್ಯಾಹಾರ ಪದಾರ್ಥದ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿ ಮತ್ತೆರಡು ಕಡಲೇ ಕಾಯಿ ಬೀಜದ ಪೊಟ್ಟಣ, ಸ್ವಲ್ಪ ಚಾಕ್ಲೇಟ್, ಚಿಸ್ಕೆಟ್ ಮತ್ತು ಹಣ್ಣಿನ ರಸವನ್ನು ತಂದು ಕೊಟ್ಟರು. ಗೋಮಾಂಸ ತಿಂದು ಧರ್ಮಭ್ರಷ್ಟನಾಗುವುದಕ್ಕಿಂತ ಈ ಕುರುಕಲು ತಿಂದು ಜೀವ ಉಳಿಸಿಕೊಳ್ಳುವುದೇ ಲೇಸು ಎಂದು ಪಾಲಿಗೆ ಬಂದದ್ದು ಪಂಚಾಮೃತ ಎಂದು ಕೊಟ್ಟದ್ದನ್ನೇ ತಿಂದು ಹಾಗೂ ಹೀಗೂ ಟೋಕಿಯೋ ತಲುಪಿ ಅಲ್ಲಿಂದ ನೇರವಾಗಿ ಹೋಟೆಲ್ಗೆ ಹೋಗಿ ಬಿಸಿ ಬಿಸಿಯಾದ ಎಂಟಿಆರ್ ಪೊಂಗಲ್ ಬಿಸಿ ಮಾಡಿಕೊಂಡು ತಿಂದಾಗ ನೆಮ್ಮದಿಯಾಗಿತ್ತು.
ಅದೇ ರೀತಿ ನನ್ನ ಕ್ರಿಶ್ಚಿಯನ್ ಬಾಸ್ ಒಬ್ಬರ ಮದುವೆಗೆಂದು ಫ್ರೇಜರ್ ಟೌನಿನಲ್ಲಿರುವ ಚರ್ಚ್ ಒಂದಕ್ಕೆ ಹೋಗಿದ್ದಾಗ, ಸಸ್ಯಾಹಾರ ಮತ್ತು ಮಾಂಸಾಹಾರ ಬಡಿಸುತ್ತಿದ್ದ ಟೇಬಲ್ ಅಕ್ಕ ಪಕ್ಕದಲ್ಲೇ ಇದ್ದು, ಸಸ್ಯಾಹಾರ ಬಡಿಸುತ್ತಿದ್ದ ಸೌಟು ಕೆಳಗೆ ಬಿದ್ದ ಕೂಡಲೇ, ಜನ ಜಾಸ್ತಿ ಇದ್ದ ಕಾರಣ, ಅಡುಗೆ ಬಡಿಸುತ್ತಿದ್ದವ ಮತ್ತೊಂದು ಟೇಬಲ್ಲಿನಲ್ಲಿ ಮಾಂಸಾಹಾರದಲ್ಲಿದ್ದ ಸೌಟನ್ನು ತೆಗೆದುಕೊಂಡು ಬಡಿಸಲು ಆರಂಭಿಸಿದ್ದನ್ನು ಗಮನಿಸಿ ಸದ್ದಿಲ್ಲದೇ ಊಟ ಮಾಡದೇ ಬಂದಂದ್ದೂ ಇದೆ. ಆನಂತರ ವಿಷಯ ತಿಳಿದ ನಮ್ಮ ಬಾಸ್ ಬಹಳ ಬೇಸರ ಪಟ್ಟುಕೊಂಡಿದ್ದಲ್ಲದೇ ಮುಂದೆ ಮಂಗಳೂರಿನಲ್ಲಿ ಮತ್ತೊಬ್ಬ ಬಾಸ್ ಮದುವೆಯಾದಾಗ, ಸಸ್ಯಾಹಾರ ಮತ್ತು ಮಾಂಸಾಹಾರಕ್ಕೆ ಪ್ರತ್ಯೇಕ ಅಡುಗೆಯವರಿಂದ ಮಾಡಿಸಿದ್ದಲ್ಲದೇ ಪ್ರತ್ಯೇಕ ಕೋಣೆಗಳಲ್ಲಿ ಬಡಿಸಿದ ಉದಾಹರಣೆಯೂ ನನಗಾಗಿದೆ.
ಆದೇ ರೀತಿಯಲ್ಲಿ ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಬಿಇಎಲ್ ನ ಹೊಸಾ ರಸ್ತೆಯಲ್ಲಿದ್ದ ಪಾರಡೈಸ್ ಹೋಟಿಲ್ಲಿನಿಂದ ಬಿರ್ಯಾನಿಯನ್ನು ಪಾರ್ಸಲ್ ತಂದು ಮನೆಯಲ್ಲಿ ಆದ ಮುಜುಗರವನ್ನು ಈ Linkನ್ನು ಒತ್ತುವ ಮೂಲಕ ಓದಬಹುದಾಗಿದೆ.
ಈ ರೀತಿಯ ಆಭಾಸಗಳು ಆಗ ಬಾರದೆಂದು ಸುಧಾಮೂರ್ತಿಗಳು ವಿದೇಶಕ್ಕೆ ಹೊದಾಗ ತಮ್ಮ ಚಮಚಗಳನ್ನು ತೆಗೆದುಕೊಂಡು ಹೋಗುವುದಲ್ಲದೇ, ತಮ್ಮ ಅಡುಗೆ ತಾವೇ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದರಲ್ಲಿ ತಪ್ಪೇನಿಲ್ಲಾ ಅಲ್ಲವೇ? ಹೇಗೆ ಸಸ್ಯಾಹಾರಿಗಳು ಮಾಂಸಾಹಾರದ ಬಗ್ಗೆ ಕೆಟ್ಟದಾಗಿ ಮಾತನಾಡೋದು ತಪ್ಪು ಎಂದು ವಾದಿಸುತ್ತಾರೋ ಹಾಗೆಯೇ ಮಾಂಸಾಹಾರಿಗಳೂ ಸಹಾ ಸಸ್ಯಾಹಾರಿಗಳ ಬಗ್ಗೆ ಅಪಹಾಸ್ಯ ಮಾಡುವುದು ತಪ್ಪಲ್ಲವೇ? ಅದೇ ರೀತಿಯಲ್ಲಿ ಸಸ್ಯಾಹಾರಿಗಳು ಎಂದ ತಕ್ಷಣ ಪುಳ್ಚಾರಾ? ಎಂದು ಎಲ್ಲರ ಮುಂದೆ ಆಡಿಕೊಳ್ಳುವವರಿಗೆ ಹಿಂದಿರುಗಿಸಿ ಕೊಡುತ್ತಿದ್ದಂತೆಯೇ ಅದು ಜಾತಿ ನಿಂದನೆಯ ರೂಪ ತಾಳಿ, ದಲಿತರ ಮೇಲೆ ಬಲಿತರ ದರ್ಪ, ದೌರ್ಜನ್ಯ ಹೀಗೆ ಹತ್ತು ಹಲವು ರೀತಿಗೆ ತಿರುಗಿ, ಕಡೆಗೆ ಟೌನ್ ಹಾಲ್ ಮುಂದೇ ಸಾರ್ವಜನಿಕವಾಗಿ ದನದ ಮಾಂಸ ತಿನ್ನುವವರಿಗೂ ಬೆಳೆಸುವ ಮಂದಿಯನ್ನು ಏನನ್ನಬೇಕು?
ಕೇವಲ ಕೆಲವೇ ಕೆಲವು ವರ್ಷಗಳ ಹಿಂದಿನ ವರೆಗೆ ಬೆಂಗಳೂರಿನ ನನ್ನ ಅನೇಕ ಮಾಂಸಾಹಾರಿಗಳ ಮನೆಗಳಲ್ಲಿ ಅಡುಗೆ ಮನೆಯಲ್ಲಿ ಮಾಂಸಾಹಾರ ಮಾಡುತ್ತಿರಲಿಲ್ಲ. ಅದೇ ರೀತಿ ಮಾಂಸಾಹಾರ ತಯಾರಿಸಲೆಂದೇ ಮಡಿಕೆ ಇಲ್ಲವೇ ಪ್ರತ್ಯೇಕ ಪಾತ್ರೆ ಪಗಾರಗಳು ಮನೆಯ ಹಿತ್ತಲಿನಲ್ಲಿಯೋ ಇಲ್ಲವೇ ದನದ ಕೊಟ್ಟಿಗೆಯಲ್ಲಿಯೂ ಇಟ್ಟು ಅಲ್ಲಿಯೇ ಆಹಾರ ಮಾಡಿ ತಿನ್ನುತ್ತಿದ್ದದ್ದನ್ನು ನಾನೇ ನೋಡಿದ್ದೇನೆ. ಅವರು ಮಾಂಸಾಹಾರ ಸೇವಿಸಿದ್ದ ದಿನ ಅಪ್ಪಿ ತಪ್ಪಿಯೂ ನಮ್ಮ ಮನೆಗೆ ಬರುತ್ತಿರಲಿಲ್ಲ ಮತ್ತು ನಾವು ಅವರುಗಳ ಮನೆಗೆ ಹೋದಾಗ, ಶ್ರೀ ಇವತ್ತು ಬರಬೇಡ ನಾಳೇ ಬಾ ಎಂದು ಹೇಳಿದಾಕ್ಷಣ ನಮಗೂ ಅರ್ಥವಾಗುತ್ತಿತ್ತು. ಇನ್ನು ಮಂಗಳವಾರ, ಶುಕ್ರವಾರ,ಶನಿವಾರ, ಕಾರ್ತೀಕ ಮಾಸ, ಶ್ರಾವಣ ಮಾಸ, ಹಬ್ಬ ಹರಿದಿನಗಳು ಮತ್ತು ಶುಭಸಮಾರಂಭಗಳಲ್ಲಿ ಮಾಂಸಾಹಾರವನ್ನು ಮಾಡುತ್ತಿರಲಿಲ್ಲ.
ಹೀಗೆ ಮಾಂಸಾಹಾರಿಗಳೇ ಅನೇಕ ನಿರ್ಭಂಧಗಳನ್ನು ರೂಡಿಸಿಕೊಂಡು ಬಂದಿರುವಾಗ, ಮಾತಿಗೆ ಮುಂಚೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಂದು ಸಂವಿಧಾನ ಗುರಾಣಿ ಹಿಡಿಯುವ ಇಂದಹ ಸಂಕುಚಿತ ಮನೋಭಾದ ಜನರಿಗಷ್ಟೇ ಅಭಿವ್ಯಕ್ತಿ ಸ್ವಾತಂತ್ರ ಇರುವುದಾ? ಆಭಿವ್ಯಕ್ತಿ ಸ್ವಾತ್ರಂತ್ಯ್ರದಲ್ಲೂ ಮೀಸಲಾತಿ ಇರುತ್ತದೆಯಾ? ಅದೇ ಯಾರೋ ಒಬ್ಬ celebrity, hey i have become a vegan ಅಂದ್ರೆ ಸಾಕು. ಅವನನ್ನೇ ಇಂದ್ರ ದೇವೇಂದ್ರ, you are an inspiration ಅಂತ ಹೊಗಳಿ ಅಟ್ಟಕ್ಕೇ ಏರಿಸೋ ಈ ಗಂಜೀ ಗಿರಾಕಿಗಳು ಅದೇ ಒಬ್ಬ ಬ್ರಾಹ್ಮಣ ನಾನು ಸಸ್ಯಾಹಾರಿ ಎಂದು ಹೇಳಿದ ಕೂಡಲೇ? ಯಾಕೆ ಹೀಗೆ ಆತನ ಮೇಲೆ ಮುಗಿ ಬೀಳ ಬೇಕು? ಇಷ್ಟಕ್ಕೂ ಸುಧಾ ಮೂರ್ತಿಯವರು ಅವರ ದುಡ್ಡಿನಲ್ಲಿ ಅವರು ಏನು ತಿನ್ನಬೇಕು, ಹೇಗೆ ತಿನ್ನಬೇಕು ಅಂತ ಹೇಳೋಕೆ ಅವ್ಯಾರು? ಕಂಡೋರ ಮುಂದೆ ಕೈ ಚಾಚಿಯೋ ಇಲ್ಲವೇ ಬಿಟ್ಟಿ ಭಾಗ್ಯಗಳಿಂದ ತಿಂದು ಕೊಬ್ಬಿರಿವರಿಗೆ ತಮ್ಮ ಬುದ್ದಿವಂತ ತನದಿಂದ ಕಷ್ಟ ಪಟ್ಟು ಓದಿ ಸಂಪಾದಿಸಿ ದುಡಿದು ತಿನ್ನುವವರ ಬವಣೆ ಹೇಗೆ ತಾನೇ ಅರ್ಥಾ ಆಗುತ್ತದೆ ಅಲ್ವೇ?
ಏನಂತೀರಿ?
ಸೃಷ್ಟಿಕರ್ತ, ಉಮಾಸುತ
ನನ್ನ ಮಗಳು ನೋಕಿಯಾದಲ್ಲಿದ್ದಾಗ ತರಬೇತಿಗೆ ಫಿನ್ ಲ್ಯಾಂಡ್ ಗೆ ಹೋದಾಗ 15 ದಿನಗಳಿಗಾಗುವಷ್ಟು mtr ರೆಡಿ ಟು eat ಕೊಟ್ಟು ಕಳಿಸಿದ್ದೆ. ಒಂದು ದಿನ ಮೊದಲೇ ಅವು ಮುಗಿದಾಗ ಜೊತೆಯಲ್ಲಿದ್ದ ತೆಲುಗು ಸ್ನೇಹಿತೆ ” ನನಗೆ ಇಲ್ಲಿನ ಆಹಾರ ok ” ಎಂದು ಅವಳಲ್ಲಿದ್ದ mtr ಪೊಟ್ಟಣಗಳನ್ನು ಕೊಟ್ಟಿದ್ದಳಂತೆ. Dr ಎಚ್ಛೆನ್ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋದಾಗ ಮೂರು ವರ್ಷ ಮೂರು ಹೊತ್ತೂ ಬರೀ ಉಪ್ಪಿಟ್ಟು ತಿಂದು ದಿನ ಸವೆಸಿದ್ದರಂತೆ.
ಕೆಲ ಜನರಿಗೆ ಎಲ್ಲದಕ್ಕೂ ಟೀಕೆ, ಟಿಪ್ಪಣಿ ಮಾಡುವುದೇ ಹವ್ಯಾಸ. ಹಿಂದಿಯಲ್ಲಿ ಹೇಳಿರುವಂತೆ ದಾರಿಯಲ್ಲಿ ಆನೆ ಸಾಗಿದಾಗ ಸಾವಿರ ನಾಯಿ ಬೊಗಳುತ್ತವೆಯಂತೆ, ಆನೆ ಚಿಂತಿಸುವುದಿಲ್ಲ,.
ನನ್ನ ತಮಿಳು ಸಹೋದ್ಯೋಗಿ ಯುವ ಇಂಜಿನಿಯರ್ ಪ್ರತಿದಿನ ಎರಡೂ ಹೊತ್ತು ಬಿರಿಯಾನಿ ತಿಂತಾನಂತೆ, ಅದನ್ನೇ ದಿನಾ ಹೇಗೆ ತಿಂತಿಯೋ ಮಾರಾಯ ಅಂದ್ರೆ ನಗ್ತಾನೆ.
ಕೆಲವರು ಸಸ್ಯಾಹಾರಿಗಳನ್ನು ತಮ್ಮ ನಾಲಿಗೆ ತೀಟೆಗಳನ್ನು ತೀರಿಸಿಕೊಳ್ಳಲು ಉಪಯೋಗಿಸಿಕೊಳ್ಳುತ್ತಾರೆ, ಆದರೆ ಸಾತ್ವಿಕ ಆಹಾರದ ಪರಿಪೂರ್ಣತೆ ಅವರಿಗೇನು ಗೊತ್ತು! ಕತ್ತೆಯೇನು ಬಲ್ಲದು ಅತ್ತೀಕಾಳು ರುಚಿ ಗಾದೆ ಅದಕ್ಕೇ ಹುಟ್ಟಿರಬಹುದೇ? 😄
LikeLiked by 1 person
ಸರಿಯಾಗಿ ಹೇಳಿದ್ರೀ
LikeLike