ಫ್ರೇಸರ್ ಟೌನ್ (ಪುಲಕೇಶಿ ನಗರ)

ಕರ್ನಾಟಕದ ರಾಜಧಾನಿ, ಬೆಂಗಳೂರಿನ ಅನೇಕ ರಸ್ತೆಗಳ ಹೆಸರುಗಳನ್ನು ನಗರಪಾಲಿಕೆ ಮರುನಾಮಕರಣ ಮಾಡಿದ್ದರೂ, ಇಂದಿಗೂ ಸಾರ್ವಜನಿಕರು ವಿದೇಶಿಗರ ಹೆಸರಿನಲ್ಲೇ ಪ್ರದೇಶಗಳನ್ನು ಗುರುತಿಸುತ್ತಾರೆ ಎಂದರೆ ಖಂಡಿತವಾಗಿಯೂ ಆ ವ್ಯಕ್ತಿ ವಿಶೇಷವಾಗಿರಲೇ ಬೇಕು ಎಂದರು ಅತಿಶಯವಾಗದು. ಅದೇ ರೀತಿಯಲ್ಲೇ, ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶಕ್ಕೆ ಸೇರಿರುವ ಫ್ರೇಸರ್ ಟೌನ್ ಕೂಡಾ ಒಂದಾಗಿದ್ದು, ಆ ಪ್ರದೇಶಕ್ಕೆ ಫ್ರೇಸರ್ ಟೌನ್ ಎಂಬ ಹೆಸರನ್ನು ಇಡಲು ಕಾರಣಗಳೇನು? ಫ್ರೇಸರ್ ಎಂದರೆ ಯಾರು? ನಮ್ಮ ರಾಜ್ಯಕ್ಕೆ ಆವರ ಕೊಡುಗೆಗಳೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ಇಂದಿನ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ .  ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

fraser_Town2ಸರ್ ಸ್ಟುವರ್ಟ್ ಮಿಲ್ಫೋರ್ಡ್ ಫ್ರೇಸರ್, ಜೂನ್ 2 1864 ರಂದು ಇಂಗ್ಲೇಂಡಿನಲ್ಲಿ ಜನಿಸಿ, ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಬ್ಲುಂಡೆಲ್ಸ್ ಸ್ಕೂಲ್ ನಲ್ಲಿ ಮುಗಿಸಿದ ನಂತರ ಬಲ್ಲಿಯೋಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದು, 1882 ರಲ್ಲಿ ಭಾರತೀಯ ನಾಗರಿಕ ಸೇವೆಗಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಅಂದಿನ ಬ್ರಿಟೀಷ್ ಸರ್ಕಾರದ ವಿದೇಶಿ ಮತ್ತು ರಾಜಕೀಯ ಇಲಾಖೆಯ ಪ್ರತಿಷ್ಠಿತ ಅಧಿಕಾರಿಯಾಗಿ ನಿಯೋಜಿತರಾಗುತ್ತಾರೆ. ಇದಾದ 5 ವರ್ಷಗಳ ನಂತರ ರಾಜ್‌ಕೋಟ್‌ನ ರಾಜ್‌ಕುಮಾರ್ ಕಾಲೇಜಿನಲ್ಲಿ ಶಿಕ್ಷಕರಾಗಿ ನೇಮಕಗೊಂಡು ತಮ್ಮ ಉತ್ತಮ ಗುಣಗಳಿಂದಾಗಿ ಅತ್ಯಂತ ಜನಪ್ರಿಯರಾದಾಗ, ಕೊಲ್ಲಾಪುರದ ರಾಜರು ಫ್ರೇಸರ್ ಅವರನ್ನು ತಮ್ಮ ರಕ್ಷಕರಾಗಿ ಮತ್ತು ತಮ್ಮ ಮಕ್ಕಳ ಬೋಧಕರಾಗಿ ನೇಮಿಸಿಕೊಳ್ಳುತ್ತಾರೆ. ಫ್ರೇಸರ್ ಅವರಿಂದ ಶಿಕ್ಷಣ ಪಡೆದು ನಂತರ ರಾಜ್‌ಕೋಟ್‌ನ ರಾಜ್‌ಕುಮಾರ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ ನಂತರ ಛತ್ರಪತಿ ಶಾಹು ಮಹಾರಾಜ ಎಂದು ಪ್ರಖ್ಯಾತರಾಗುತ್ತಾರೆ.

mirzaಆದಾದ ನಂತರ ಭಾವನಗರದ ಮಹಾರಾಜರಾದ ಶ್ರೀ ಭಾವಸಿಂಹಜಿ II ತಮ್ಮ ಮಗ, ಮತ್ತು ಭಾವನಗರದ ಕಡೆಯ ಮಹಾರಾಜರಾಗಿದ್ದ ಶ್ರೀ ಕೃಷ್ಣ ಕುಮಾರಸಿಂಗ್ ಭಾವಸಿಂಗ್ ಅವರಿಗೂ ಸಹಾ ವಿದ್ಯೆಯನ್ನು ಕಲಿಸಿದ್ದನ್ನು ಗಮನಿಸಿದ ಮೈಸೂರಿನ ಮಹಾರಾಣಿಯಾಗಿದ್ದ ಅಮ್ಮಣ್ಣಿಯವರು ತಮ್ಮ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್ ಸಹಾ ಮಾತೃಭಾಷೆಯೊಂದಿಗೆ ಆಂಗ್ಲಭಾಷೆ ಮತ್ತು ವಿದೇಶೀ ರಾಜಕೀಯದ ಬಗ್ಗೆ ಕಲಿಸಿಕೊಡಬೇಕೆಂದು ಫ್ರೇಸರ್ ಅವರನ್ನು 1896 ರಲ್ಲಿ ಮೈಸೂರಿನ ಸಂಸ್ಥಾನಕ್ಕೆ ಕರೆತಂದು ಅರಮನೆಯ ಸಮೀಪದಲ್ಲೇ ಇದ್ದ ಖಾಸ್ ಬಂಗಲೆಯಲ್ಲಿ (ಇಂದಿನ ಪ್ರಾಣಿ ಸಂಗ್ರಹಾಲಯ) ಶಿಕ್ಷಣ ಆರಂಭವಾಗುತ್ತದೆ. ಈ ಹಿಂದಿನ ಸಂಚಿಕೆಯಲ್ಲಿ ತಿಳಿದಿದ್ದ ಅಲಿ ಅಸ್ಗರ್ ಅವರ ಮೊಮ್ಮಗ ಮಿರ್ಜಾ ಇಸ್ಮಾಯಿಲ್ ಅವರೂ ಸಹಾ ಒಡೆಯರ್ ಅವರ ಸಹಪಾಠಿಯಾಗಿದ್ದು ಮುಂದೆ ಅವರು ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದ್ದದ್ದು ಈಗ ಇತಿಹಾಸ. ಮಹಾರಾಜರಿಗೆ ಕೇವಲ ಇಂಗ್ಲೀಷ್ ಭಾಷೆ ಮಾತ್ರವಲ್ಲದೇ, ಕಾನೂನು, ರಾಜ್ಯಾಡಳಿತ, ಆಡಳಿತ ನಿರ್ವಹಣೆ ಮುಂತಾದ ವಿಷಯಗಳನೂ ಸಹಾ ಫ್ರೇಸರ್ ಕಲಿಸಿಕೊಟ್ಟಿದ್ದರು.

ಮೈಸೂರು ಮಹಾರಾಜರಿಗೆ ಕಾನೂನಾತ್ಮಕವಾದ ಪಾಠವನ್ನು ಪ್ರಾಯೋಗಿಕವಾಗಿಯೇ ಕಲಿಸುವ ಸಲುವಾಗಿ ಮಹಾರಾಜರನ್ನು ಮೈಸೂರಿನ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಕರೆದುಕೊಂಡು ಹೋಗಿ ಅಲ್ಲಿ ನಡೆಯುವ ವಿಚಾರಣೆಗಳ ಟಿಪ್ಪಣಿಯನ್ನು ಬರೆದುಕೊಂಡು ವಿಚಾರಣೆ ಸಂಪೂರ್ಣವಾಗಿ ಮುಗಿದ ನಂತರ ಅದರ ಕುರಿತಾಗಿ ಮಹಾರಾಜರಿಂದ ತೀರ್ಪನ್ನು ಬರೆಯಿಸಿ ನಂತರ ನ್ಯಾಯಾಧೀಶರು ಕೊಡುವ ತೀರ್ಪಿನೊಂದಿಗೆ ಅದನ್ನು ಸಮೀಕರಿಸಿ ಪ್ರತಿಯೊಂದು ಪ್ರಕರಣಕ್ಕೂ ವಿವಿಧ ಆಯಾಮಗಳಿದ್ದು, ಕೇವಲ ಏಕಮುಖವಾದ ನಿರ್ಣಯದಿಂದ ತೀರ್ಪನ್ನು ಕೊಡಬಾರದು ಎಂದು ಕಲಿಸಿಕೊಟ್ಟಿದ್ದರಂತೆ.

ಹೀಗೆ ಶಿಕ್ಷಣವನ್ನು ಕೊಡುತ್ತಿದ್ದ ಸಮಯದಲ್ಲೇ, ಅರಮನೆಯಲ್ಲಿ ನಡೆಯುತ್ತಿದ್ದ ಸಮಾರಂಭವೊಂದರಲ್ಲಿ, ಮಹಾರಾಜರ ಸಂಬಂಧೀಕರೊಬ್ಬರ ಲಂಗಕ್ಕೆ ಉರಿಯುತ್ತಿದ್ದ ದೀಪತಾಗಿ ಬೆಂಕಿ ಹತ್ತಿಕೊಂಡ ಪರಿಣಾಮವಾಗಿ ಮರೆದಿಂದ ಕಟ್ಟಿದ್ದ ಇಡೀ ಅರಮನೆ ಹೊತ್ತಿ ಉರಿದಾಗ, ಫ್ರೇಜರ್ ಅವರು ಮಹಾರಾಜರಿಗೆ ಅಗ್ನಿಶಾಮಕ ದಳ ಇದ್ದಿದ್ದಲ್ಲಿ ಈ ರೀತಿಯ ಅಚಾತುರ್ಯವನ್ನು ಸ್ವಲ್ಪ ಮಟ್ಟಿ ಕಡಿಮೆ ಮಾಡಬಹುದಿತ್ತು ಎಂದು ತಿಳಿಸಿದ ಪರಿಣಾಮ ಮೈಸೂರು ಸಂಸ್ಥಾನದಲ್ಲಿ ಮೊತ್ತ ಮೊದಲಿಗೆ ಅಗ್ನಿಶಾಮಕ ದಳದ ಆರಂಭಕ್ಕೆ ಫ್ರೇಸರ್ ಕಾರಣೀಭೂತರಾಗಿದ್ದಲ್ಲದೇ, ಮಹಾರಾಜರಿಗೆ ಗವರ್ನರ್ ಮತ್ತು ಬೋಧಕರಾಗಿ ನಂತರ ಮೈಸೂರ ಒಂದು ಮಾದರಿ ರಾಜ್ಯ ಎಂಬ ಖ್ಯಾತಿಯನ್ನು ಪಡೆಯಲು ಸಹಕರಿಸಿದ ಒಬ್ಬ ಪರೋಪಕಾರಿ ಸಮರ್ಥ ಆಡಳಿತಗಾರ ಎಂದು ಹೆಸರಾಗಿದ್ದರು. 1905 ರಲ್ಲಿ ಕೊಡಗು ಮತ್ತು 1911 ರಲ್ಲಿ ಕಾಶ್ಮೀರದ ಮುಖ್ಯ ಆಯುಕ್ತರಾಗಿದ್ದರು. 1914ರಲ್ಲಿ ಹೈದರಾಬಾದ್‌ನಲ್ಲಿ ರೆಸಿಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾಗಲೇ, ಮೊದಲನೆಯ ಮಹಾಯುದ್ಧದ ಪ್ರಾರಂಭವಾದಾಗ, ಇದೇ ಫ್ರೇಸರ್ ಅವರ ದೃಢವಾದ ಮತ್ತು ಆತ್ಮವಿಶ್ವಾಸದ ಮಾತುಗಳಿಂದಲೇ, ಹೈದರಾಬಾದಿನ ನಿಜಾಮ್ ಬ್ರಿಟಿಷರಿಗೆ ಬೆಂಬಲವನ್ನು ಸೂ‍ಚಿಸಲು ಸಹಕಾರಿಯಾಗಿತ್ತು. ತಮ್ಮ ನಿವೃತ್ತಿಯ ನಂತರ ತಾಯ್ನಾಡಿಗೆ ಮರಳಿದ ಪ್ರೇಸರ್ ಡಿಸೆಂಬರ್ 1, 1963ರಲ್ಲಿ ವಯೋಸಹಜವಾಗಿ ಮರಣ ಹೊಂದಿದರು.

fraser_Town11806ರ ಸಮಯದಲ್ಲಿ ಬ್ರಿಟೀಷರು ಶ್ರೀರಂಗಪಟ್ಟಣದಿಂದ ಬೆಂಗಳೂರಿನ ಹೊರವಯದಲ್ಲಿ ತಮ್ಮದೇ ಆದ ಕಂಟೋನ್ಮೆಂಟ್ ಪ್ರದೇಶವನ್ನು ಕಟ್ಟಲು ಮುಂದಾದಾಗ, ಆಗಸ್ಟ್ 1910 ರಲ್ಲಿ ಶ್ರೀಮತಿ ಎಫ್ ಜೆ ರಿಚರ್ಡ್ಸ್ ಅವರು ಕೋಲ್ಸ್ ರಸ್ತೆ ಮತ್ತು ಮಸೀದಿ ರಸ್ತೆಯ ಮೂಲೆಯಲ್ಲಿ ಫ್ರೇಸರ್ ಅವರ ನೆನಪಿರ್ಥದ ಫಲಕದೊಂದಿಗೆ ಅಡಿಪಾಯ ಹಾಕುವ ಮೂಲಕ ವಸತಿ ಮತ್ತು ವಾಣಿಜ್ಯ ಬಡಾವಣೆಯಾಗಿ ಫ್ರೇಸರ್ ಟೌನ್ ಅಧಿಕೃತವಾಗಿ ಉದ್ಘಾಟಿಸಲ್ಪಟ್ಟಿತು. ಫ್ರೇಸರ್ ಟೌನಿನ ಪ್ರಮುಖ ರಸ್ತೆಗಳೆಂದರೆ ಪ್ರೊಮೆನೇಡ್ ರಸ್ತೆ, ನೇತಾಜಿ ರಸ್ತೆ, ಮಾಧವರಾಯ ಮುದಲಿಯಾರ್ ರಸ್ತೆ, ಹೈನ್ಸ್ ರಸ್ತೆ, ಸ್ಪೆನ್ಸರ್ ರಸ್ತೆ, ವೀಲರ್ ರಸ್ತೆ, ಮಸೀದಿ ರಸ್ತೆ ಮುಂತಾದವುಗಳಿದ್ದು, ಕ್ರಿಶ್ಛಿಯನ್ನರ ಜೊತೆಗೆ ಬ್ರಿಟೀಷರಿಗೆ ಸೇವೆ ಸಲ್ಲಿಸುವ ಸಲುವಾಗಿ ನಿಯುಕ್ತರಾದ, ಹಿಂದೂಗಳು ಮತ್ತು ಮುಸ್ಲಿಮರು ಆಲ್ಲಿ ನೆಲೆಗೊಂಡು ಅವರೆಲ್ಲರೂ ಪರಸ್ಪರ ಶಾಂತಿ ಸೌಹಾರ್ಧತೆಯಿಂದ ಬದುಕುವಂತಾಗಿದೆ. ಶ್ರೀರಂಗ ಪಟ್ಟಣದಲ್ಲಿ ಟಿಪ್ಪು ಸುಲ್ತಾನನ ಪತನದ ನಂತರ ಬ್ರಿಟಿಷ್ ಸೈನ್ಯದಿಂದ ಬೆಂಗಳೂರು ಸಿವಿಲ್ ಮತ್ತು ಮಿಲಿಟರಿ ಸ್ಟೇಷನ್ ಆರಂಭವಾದಾಗ, ಮದ್ರಾಸಿನಿಂದ ಕರೆತಂದ ತಮಿಳು ಸೈನಿಕರು, ಪೂರೈಕೆದಾರರು ಮತ್ತು ಕಾರ್ಮಿಕರು ಕಂಟೋನ್ಮೆಟ್ ರೈಲ್ವೇ ನಿಲ್ಡಾಣದ ಪಕ್ಕದಲ್ಲೇ ಇರುವ ಇದೇ ಪ್ರದೇಶದ ನಿವಾಸಿಗಳಾಗಿ ಹೋಗಿರುವುದು ಈಗ ಇತಿಹಾಸ.

ಬೆಂಗಳೂರು ಕಂಟೋನ್ಮೆಂಟ್‌ನಲ್ಲಿರುವ ಹೆಚ್ಚಿನ ಬೀದಿಗಳಂತೆ ಫ್ರೇಸರ್ ಟೌನಿನ ಬೀದಿಗಳಿಗೂ ಬ್ರಿಟೀಷ್ ಅಧಿಕಾರಿಗಳು, ಮಿಲಿಟರಿ ಅಧಿಕಾರಿಗಳು ಮತ್ತು ಮಿಷನರಿಗಳ ಹೆಸರನ್ನೇ ಇಡಲಾಗಿದ್ದು, ಮೈಸೂರಿನ ನಿವಾಸಿ ಆರ್ಥರ್ ಹೆನ್ರಿ ಕೋಲ್ (1780-1844) ನೆನಪಿನಾರ್ಥವಾಗಿ ಕೋಲ್ಸ್ ಪಾರ್ಕ್ ಮತ್ತು ಕೋಲ್ಸ್ ರಸ್ತೆ ಇದೆ. ಸರ್ ಮಾರ್ಕ್ ಕಬ್ಬನ್ ಜೊತೆಯಲ್ಲಿ ಬೆಂಗಳೂರು ವಿಭಾಗದ ಅಧೀಕ್ಷಕರಾಗಿದ್ದ ಲೆಫ್ಟಿನೆಂಟ್ ಕರ್ನಲ್ ಗ್ರೆಗೊರಿ ಹೈನ್ಸ್ ಅವರ ಹೆಸರಿನಲ್ಲಿ ಹೈನ್ಸ್ ರಸ್ತೆಗೆ ಹೆಸರಿಸಲಾಯಿತು. ಕರ್ನಲ್ ಡೊನಾಲ್ಡ್ ರಾಬರ್ಟ್ಸನ್ ಅವರ ನೆನಪಿನಾರ್ಥ ರಾಬರ್ಟ್ಸನ್ ರಸ್ತೆ, ಜನರಲ್ ಜಾನ್ ವೀಲರ್ ಕ್ಲೀವ್‌ಲ್ಯಾಂಡ್ ಅವರ ನೆನಪಿನಾರ್ಥವಾಗಿ ಕ್ಲೀವ್‌ಲ್ಯಾಂಡ್ ಟೌನ್‌, ವೀಲರ್ ರಸ್ತೆ ಮತ್ತು ಕ್ಲೀವ್‌ಲ್ಯಾಂಡ್ ರಸ್ತೆ ಎಂದು ಹೆಸರಿಸಲಾಗಿದೆ

ಬ್ರಿಟೀಷ್ ಅಧಿಕಾರಿಗಳ ಕುಟುಂಗಳ ಸೇವೆಗಾಗಿ ಮದ್ರಾಸಿನಿಂದ ಬಂದಂತಹ ತಮಿಳರು ಕ್ರಮೇಣವಾಗಿ ಕ್ರಿ‌ಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಅವರದ್ದೇ ದೊಡ್ಡ ಸಂಖ್ಯೆ ಯಾದಾಗ, 1821ರ ಏಪ್ರಿಲ್ ತಿಂಗಳಿನಲ್ಲಿ ವೆಸ್ಲಿಯನ್ ತಮಿಳು ಮಿಷನ್ ನನ್ನು ರೆವರೆಂಡ್. ಎಲಿಜಾ ಹೂಲ್ ಮತ್ತು ಜೇಮ್ಸ್ ಮೊವಾಟ್ ಈ ಪ್ರದೇಶದಲ್ಲಿ ಸ್ಥಾಪಿಸಿದರು. ಅಲ್ಲಿನ ಮಕ್ಕಳ ಶಿಕ್ಷಣಕ್ಕಾಗಿ, ಕೋಲ್ಸ್ ಪಾರ್ಕಿನ ಹತ್ತಿರದಲ್ಲೇ ಇರುವ ವೆಸ್ಲಿ ಇಂಗ್ಲಿಷ್ ಚರ್ಚಿನಲ್ಲೇ ಗುಡ್‌ವಿಲ್ಸ್ ಗರ್ಲ್ಸ್ ಸ್ಕೂಲ್ ಆರಂಭಿಸಲಾಗುತ್ತದೆ. ನಂತರದ ದಿನಗಳಲ್ಲಿ ವ್ಯಾಪಾರಕ್ಕೆಂದು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಮುಸ್ಲಿಮರು ಕಂಟೋನ್ಮೆಟ್ ಪ್ರದೇಶದಲ್ಲಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಆರಂಭಿಸಿ ವಸತಿತಾಗಿ ಇದೇ ಪ್ರೇಶರ್ ಟೌನ್ ಆಶ್ರಯಿಸಿದ ಕಾರಣವಾಗಿ ತಮಿಳರಷ್ಟೇ ಮುಸ್ಲಿಮ್ಮರೂ ಆ ಪ್ರದೇಶದಲ್ಲಿ ಬಹುಸಂಖ್ಯಾತರಾಗಿರುವ ಕಾರಣ, ಮುಸ್ಲಿಮರ ರಂಜಾನ್‌ ಸಮಯದಲ್ಲಿ ಸಂಜೆ ರೋಜಾ (ಉಪವಾಸ) ಮುಗಿಸುವ ಸಮಯದಲ್ಲಿ ಅಲ್ಲಿ ಅಳಿದುಳಿದಿರುವ ಹಿಂದೂ ದೇವಾಲಯಗಳಲ್ಲಿಮತ್ತು ಕ್ರಿಶ್ಚಿಯನ್ನರ ಚರ್ಚುಗಳಲ್ಲಿ ಜೋರಾಗಿ ಗಂಟೆ ಬಾರಿಸುವುದಿಲ್ಲ. ಇದಕ್ಕೆ ಪ್ರತಿಯಾಗಿ, ಆ ಪ್ರದೇಶದಲ್ಲಿ ಕ್ರಿ‌ಶ್ಚಿಯನ್ನರು ವರ್ಷಕ್ಕೊಮ್ಮೆ ಅಚರಿಸುವ ಸೇಂಟ್ ಮೇರಿಸ್ ಹಬ್ಬ ಮತ್ತು ಕ್ರಿಸ್ಮಸ್ ಆಚರಣೆಗಳ ಸಂದರ್ಭದಲ್ಲಿ ಮುಸ್ಲಿಮರು ಸಹ ಸಹಕರಿಸುವ ಸಂಪ್ರದಾಯ ರೂಢಿಯಲ್ಲಿದೆ.

coles_Parkಫ್ರೇಸರ್ ಟೌನಿನಲ್ಲಿ 1914 ರಲ್ಲಿ ಸುಮಾರು 27,280 ಮೀವಿಸ್ತೀರ್ಣದಲ್ಲಿ ಒಂದು ಬ್ಯಾಂಡ್‌ಸ್ಟ್ಯಾಂಡ್ ಮತ್ತು 3 ಟೆನಿಸ್ ಕೋರ್ಟ್‌ಗಳೊಂದಿಗೆ ಕೋಲ್ಸ್ ಪಾರ್ಕನ್ನು ಆರಂಭಿಸಲಾಗಿತ್ತು. ಅಂದಿನ ಕಾಲದಲ್ಲಿ ಬೆಂಗಳೂರು ರೈಫಲ್ ಸ್ವಯಂಸೇವಕರ ಬ್ಯಾಂಡ್, ಪ್ರತಿ ತಿಂಗಳ ಮೊದಲ ಶನಿವಾರ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರೆ, YWCA ತನ್ನ ಟೆನ್ನಿಸ್ ಟೂರ್ನಿಗಳಳನ್ನು ಇದೇ ಅಂಕಣದಲ್ಲಿ ನಡೆಸುತ್ತಿತ್ತು. ಸದ್ಯ ಬಿಬಿಎಂಪಿ ಉಸ್ತುವಾರಿಯಲ್ಲಿ ತಕ್ಕಮಟ್ಟಿಗಿನ ನಿರ್ವಹಣೆಯೊಂದಿಗೆ ಕೋಲ್ಸ್ ಪಾರ್ಕ್ ಇನ್ನೂ ಅಸ್ತಿತ್ವದಲ್ಲಿದ್ದು, ಅದನ್ನು ಅಧಿಕೃತವಾಗಿ ಫ್ರೀಡಂ ಫೈಟರ್ಸ್ ಪಾರ್ಕ್ ಎಂದೂ ಸಹಾ ಕರೆಯಲಾಗುತ್ತದೆ.

ismail_maszid1870 ರಲ್ಲಿ ಗುಜರಾತ್‌ನ ಕಚ್‌ ಪ್ರದೇಶದಿಂದ ವ್ಯಾಪಾರಕ್ಕೆಂದು ತಮ್ಮ ಪೋಷಕರಿಂದಿಗೆ ಬಂದ ಹಾಜಿ ಇಸ್ಮಾಯಿಲ್ ಸೇಟ್ ತಮ್ಮ ತಂದೆಯ ನಿಧನದ ನಂತರ, 1874 ರಲ್ಲಿ ಸ್ವಂತವಾಗಿ ಸರಕು ಮತ್ತು ಸೀಮೆಎಣ್ಣೆಯ ವ್ಯಾಪಾರ ಆರಂಭಿಸಿ, ನಂತರದ ದಿನಗಳಲ್ಲಿ ಬೆಂಗಳೂರು ಮತ್ತು ಮದ್ರಾಸ್ ಸುತ್ತಮುತ್ತಲೂ ವಿಸ್ತಾರಮಾಡುವ ಮೂಲಕ ದೊಡ್ಡ ವ್ಯಾಪಾರಿಗಳು ಎನಿಸಿಕೊಂಡರು. ಅದರ ಜೊತೆಯಲ್ಲೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದನ್ನು ಗಮನಿಸಿ ಅಂದಿನ ಮೈಸೂರು ಸರ್ಕಾರ ಹಾಜಿ ಇಸ್ಮಾಯಿಲ್ ಸೇಟ್ ಅವರಿಗೆ ಫಕ್ರುತ್-ತುಜ್ಜರ್ ಎಂಬ ಬಿರುದು ನೀಡಿ ಗೌರವಿಸಿದರೆ, ಬ್ರಿಟಿಷ್ ಸರ್ಕಾರವು ಅವರಿಗೆ ಬಕಿಂಗ್ಹ್ಯಾಮ್ ಅರಮನೆಯಲ್ಲಿ ನೈಟ್ ಪ್ರಶಸ್ತಿ ನೀಡುವ ಮೂಲಕ ಹಾಜಿ ಸರ್ ಇಸ್ಮಾಯಿಲ್ ಸೇಟ್ ಎಂದು ಪ್ರಸಿದ್ದಿ ಪದೆದರು. 1911 ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ನೆನಪಿನಾರ್ಥವಾಗಿ ಅಲ್ಲಿದ್ದ ಮಸೀದಿಗೆ ಹಾಜಿ ಸರ್ ಇಸ್ಮಾಯಿಲ್ ಸೇಟ್ ಮಸೀದಿ ಎಂದು ಹೆಸರಿಸಲಾಯಿತು. ಅವರೇ ಮುಂದೆ ಅದೇ ಮಸೀದಿ ರಸ್ತೆಯಲ್ಲಿ ಮುಸ್ಲಿಂ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಸರ್ಕಾರಿ ಉರ್ದು ಮಾದರಿ ಪ್ರಾಥಮಿಕ ಬಾಲಕರ ಮತ್ತು ಬಾಲಕಿಯರ ಶಾಲೆ ಆರಂಭಿಸಿದ್ದಲ್ಲದೇ, ನಂತರದ ದಿನದಲ್ಲಿ ಶಿವಾಜಿನಗರದಲ್ಲಿ ಗೋಶಾ ಆಸ್ಪತ್ರೆಯನ್ನು ಸ್ಥಾಪಿಸಿದರು.

alber_bakeryಇನ್ನು ಇದೇ ಮಸೀದಿ ರಸ್ತೆಯಲ್ಲಿ ಸ್ಥಳೀಯ ಮುಸಲ್ಮಾನರಿಂದ ಕ್ರಿಶ್ಛಿಯನ್ (ಬ್ರಿಟೀಷ್) ಗ್ರಾಹಕರನ್ನು ಸೆಳೆಯುವ ಸಲುವಾಗಿ ಅಲ್ಬರ್ಟ್ ಬೇಕರಿ ಎಂಬ ಹೆಸರಿನಲ್ಲಿ ಆರಂಭವಾಗಿದ್ದು, ಅಂದಿನಿಂದ ಇಂದಿನವರೆವಿಗೂ ಜನಪ್ರಿಯ ಬೇಕರಿಯಾಗಿದ್ದು, ಅಲ್ಲಿನ ತಿಂಡಿಗಳು, ಪೇಸ್ಟ್ರಿಗಳು ಮತ್ತು ಮಾಂಸಾಹಾರಿ ಆಹಾರಗಳಿಗಾಗಿ ಜನರು ಮುಗಿಬೀಳುತ್ತಾರೆ. ರಂಜಾನ್ ಸಮಯದಲ್ಲಂತೂ ಆಲ್ಬರ್ಟ್ ಬೇಕರಿಯ ಮೇಕೆ ಮೆದುಳಿನ ಪಫ್ (ಭೇಜಾ) ಗಾಗಿ ಬಹಳ ಪಸಿದ್ದಿಯಾಗಿದೆ.

ಇನ್ನು ಪ್ರೇಸರ್ ಟೊನ್ ನಲ್ಲಿರುವ ಬೆಂಗಳೂರು ಪೂರ್ವ ರೈಲು ನಿಲ್ದಾಣದ ಪಕ್ಕದಲ್ಲೇ ಇರುವ ಪಾಟ್ರಿ ರೋಟ್ (ಕುಂಬಾರಿಕೆ ರಸ್ತೆ) ಇಂದಿಗೂ ಜೇಡಿ ಮಣ್ಣು ಮತ್ತು ಕುಂಬಾರಿಕೆಯ ವಸ್ತುಗಳು ದೊರೆಯುವ ನೆಚ್ಚಿನ ಸ್ಥಳವಾಗಿದೆ. ಇದೇ ರೈಲ್ವೇ ನಿಲ್ದಾಣದ ಪಕ್ಕದಲ್ಲೇ ಇರುವ ಬೆಂಗಳೂರು ಪೂರ್ವ ಫುಟ್‌ಬಾಲ್ ಮೈದಾನವಿದ್ದು ಈ ಮೈದಾನದಲ್ಲಿ ಆಡಿ ತರಭೇತುಗೊಂಡ ಅನೇಕ ಫುಟ್ಬಾಲ್ ಆಟಗಾರರು ಮುಂದೆಮೈಸೂರು ಸಂಸ್ಥಾನ ಮತ್ತು ಭಾರತ ತಂಡವನ್ನು ಪ್ರತಿನಿದಿಸಿದ್ದರು, ಇಂದು ಫುಟ್ಬಾಲ್ ಆಟ ನೇಪತ್ಯಕ್ಕೆ ಸರಿದ ಕಾರಣ, ಆ ಮೈದಾನದಲ್ಲಿ ಪಡ್ಡೇ ಹುಡುಗರು ಕ್ರಿಕೆಟ್ ಆಡಲು ಬಳಸುತ್ತಿರುವುದು ಗಮನಾರ್ಹವಾಗಿದೆ.

ಫ್ರೇಸರ್ ಟೌನ್ ಎಂದು ನಾಮಕರಣ ಮಾಡುವ ಮುನ್ನಾ ಈ ಪ್ರದೇಶವನ್ನು ಸ್ಥಳೀಯರು ಮೂಟೋಚೆರಿ ಎಂದು ಕರೆಯುತ್ತಿದ್ದರು. 1988 ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು ಕನ್ನಡ ಪರ ಹೋರಾಟಗಾರರ ಒತ್ತಾಯದ ಮೇರೆಗೆ ಫ್ರೇಸರ್ ಟೌನ್ ಪ್ರದೇಶಕ್ಕೆ 7 ನೇ ಶತಮಾನದ ಕರ್ನಾಟಕದವನ್ನಾಳಿದ ಪ್ರಸಿದ್ಧ ಮಹಾರಾಜ ಪುಲಕೇಶಿಯ ನೆನಪಿನಾರ್ಥ, ಪುಲಕೇಶಿ ನಗರ ಎಂದು ಮರುನಾಮಕರಣ ಮಾಡಿತು. ಹೆಸರಿಗಷ್ಟೇ ಕನ್ನಡದ ಹೆಮ್ಮೆಯ ರಾಜ ಪುಲಕೇಶಿ ನಗರ ಎಂದು ಹೆಸರಾಗಿದ್ದರೂ,ಪ್ರಸ್ತುತವಾಗಿ ಅದು ತಮಿಳು ಭಾಷಿಗರ ಬಾಹುಳ್ಯ ಪ್ರದೇಶವಾಗಿ ಕನ್ನಡ ಎಂದರೆ ಎನ್ನಡ ಎನ್ನುವಂತಹ ಪರಿಸ್ಥಿತಿ ಇಂದು ಅಲ್ಲಿ ಮೂಡಿರುವುದು ಸೋಜಿಗವೇ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

5 thoughts on “ಫ್ರೇಸರ್ ಟೌನ್ (ಪುಲಕೇಶಿ ನಗರ)

    1. ಅಯ್ಯೋ ದೊಡ್ಮಾತು. ಅಲ್ಲಿ ಇಲ್ಲೀ ಮಾಹಿತಿಗಳನ್ನು ಹೆಕ್ಕಿ ಅದನ್ನು ಒಟ್ಟು ಮಾಡಿ ಎಲ್ಲರೊಂದಿಗೆ ಹಂಚಿಕೊಳ್ಳುವುದರಲ್ಲೇ ನನಗೊಂದು ರೀತಿಯ ಖುಷಿ. ಕಣಜ ಬಿಡಿ, ನಾನಿನ್ನೂ ಆ ಕಣಜದ ಒಂದು ಸಣ್ಣ ಧಾನ್ಯ ಎಂದರು ತಪ್ಪಾಗದು. ಕಲಿಯೋದಿಕ್ಕೆ ಇನ್ನು ತುಂಬಾ ಇದೆ.

      Like

Leave a reply to ಏನಂತೀರೀ? enantheeri Cancel reply