ರಂಗೋಲಿಗೂ ರಾಂಗ್ ಆಗುವ ಭಾರತೀಯರು

ಬ್ರಿಟೀಷರು ಭಾರತಕ್ಕೆ ವ್ಯಾಪಾರಕ್ಕೆಂದು ಬಂದಾಗ, ಇಡೀ ಭಾರತದ ಭೂಭಾಗ ಸಣ್ಣ ಸಣ್ಣ ರಾಜರುಗಳ ಆಳ್ವಿಕೆಯಲ್ಲಿ ಇದ್ದು  ಅತ್ಯಂತ ಸಂಪದ್ಭರಿತವಾಗಿತ್ತು. ಅದರಲ್ಲೂ ಸಾಂಬಾರು ಪದಾರ್ಥಗಳಿಗಿ ಇಡೀ ವಿಶ್ವಕ್ಕೇ ರಾಜನಾಗಿತ್ತು. ಇದಲ್ಲದೇ ಭಾರತದ ಬಹುತೇಕ ರಾಜ್ಯಗಳಲ್ಲಿ ಹೇರಳವಾದ ಖನಿಜ ಸಂಪತ್ತು ಮತ್ತು ಕೃಷಿಭೂಮಿಗಳನ್ನು ಹೊಂದಿದ್ದ ಇಲ್ಲಿನ ಮತ್ತೊಬ್ಬರ ತಲೆ ಒಡೆದಾಗಲೀ ಭಿಕ್ಷೆ ಬೇಡಾಗಲೀ ಜೀವನವನ್ನು ಸಾಗಿಸದೇ, ಸ್ವಾವಲಂಭಿಗಳಾಗಿದ್ದನ್ನು ಕಂಡ ಬ್ರಿಟೀಷರು, ಒಡೆದು ಆಳು ಎಂಬ ನೀತಿಯನ್ನು ಅಳವಡಿಸಿಕೊಂಡು ಉತ್ತರ ಭಾರತ ಮತ್ತು ದಕ್ಷಿಣ ಭಾರತೀಯರ ನಡುವೆ ಕಂದಕವನ್ನು ಸೃಷ್ಟಿ ತರುವ ಸಲುವಾಗಿ ಆರ್ಯರು ಮತ್ತು ದ್ರಾವಿಡರು ಎಂಬ ಸುಳ್ಳು ಸಿದ್ದಾಂತವನ್ನು ತೇಲಿಬಿಟ್ಟು ಈ ದೇಶ ಸಂಪೂರ್ಣವಾಗಿ ದ್ರಾವಿಡರದ್ದಾಗಿತ್ತು. ಬಹಳ ಹಿಂದೆ ಆರ್ಯರು ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದವರು ದ್ರಾವಿಡರ ಮೇಲೆ ದಬ್ಬಾಳಿಕೆ ಮಾಡಿ ಅವರನ್ನು ದಕ್ಷಿಣ ಭಾರತಕ್ಕೆ ಸೀಮಿತಗೊಳಿಸಿ ಇಡೀ ಉತ್ತರ ಭಾರತವನ್ನು ಕೈವಶ ಪಡಿಸಿಕೊಂಡರು, ಹಾಗಾಗಿಯೇ ದಕ್ಷಿಣ ಭಾರತೀಯ ದ್ರಾವಿಡರು ಕಪ್ಪುಬಣ್ಣ ಮತ್ತು ಉತ್ತರ ಭಾರತೀಯರು ಬಿಳಿ ಬಣ್ಣ. ಹಾಗಾಗಿ ಉತ್ತರ ಭಾರತೀಯರು ಸಹಾ ನಮ್ಮಂತೆಯೆ ಪರಕೀಯರೇ ಎಂಬ ವಿಷ ಬೀಜವನ್ನು ಬಿತ್ತಿ ನಂತರದ ದಿನಗಳಲ್ಲಿ ಅಂತಿಮವಾಗಿ ಧರ್ಮಾಧಾರಿತವಾಗಿ ದೇಶವನ್ನು ಒಡೆದು ಮೂರು ಭಾಗಗಳನ್ನಾಗಿ ಮಾಡಿ ಹೋದರು.

ಬ್ರಿಟೀಷರು ಭಾರತವನ್ನು ಬಿಟ್ಟು ಹೋದರೂ ಅಂದು ಅವರು ಹಾಕಿ ಹೋದ ಆರ್ಯ ಮತ್ತು ದ್ರಾವಿಡ ಎಂಬ ವಿಷವನ್ನು ಸ್ವಾತಂತ್ರ್ಯಾನಂತರದ ರಾಜಕಾರಣಿಗಳು ತಮ್ಮ ಅಧಿಕಾರದ ತೆವಲಿಗೆ ಅದನ್ನೇ ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಿ ಉತ್ತರ ಮತ್ತು ದಕ್ಷಿಣ ಭಾರತದ ಮಧ್ಯೆ ಭಾರೀ ಕಂದಕವನ್ನು ತಂದಿಟ್ಟಿರುವುದು ನಿಜಕ್ಕೂ ಕಳವಳಕಾರಿಯಾದ ವಿಷವಾಗಿದೆ. ಇಂತಹ ಸೂಕ್ಷ್ಮ ವಿಚಾರಕ್ಕೆ ಸ್ವಲ್ಪ ಮಟ್ಟಿಗಿನ ತುಪ್ಪವನ್ನು ಸುರಿದು ಅದು ಇನ್ನೂ ಹೆಚ್ಚಿನ ರೀತಿಯಲ್ಲಿ ಉರಿಯುವಂತೆ ಮಾಡುವುದರಲ್ಲಿ ಮಾಧ್ಯಮ ಮತ್ತು ಚಿತ್ರರಂಗದವರ ಕೈವಾಡವೂ ಇದೆ ಎನ್ನುವುದೇ ವಿಪರ್ಯಾಸ.

ಇಷ್ಟೇಲ್ಲಾ ಪೀಠಿಕೆ ಏಕಪ್ಪಾ ಎಂದರೆ, ಬೆಂಗಳೂರಿನ ಬೊಮ್ಮನಹಳ್ಳಿಯ ಬಹುಮಹಡಿ ಕಟ್ಟಡವೊಂದರಲ್ಲಿ ವಾಸವಾಗಿರುವ ಉತ್ತರ ಭಾರತದ ಯುವತಿ ನೇಹಾ ಎನ್ನುವವರು, ಉತ್ತರ ಭಾರತೀಯರಿಗೆ ಬೆಂಗಳೂರಲ್ಲಿ ಸುರಕ್ಷಿತವಾಗಿ, ನೆಮ್ಮದಿಯಾಗಿ ಬದುಕುವ ಹಕ್ಕಿಲ್ಲವೇ..? ಎಂದು ಪ್ರಶ್ನಿಸಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅದರ ಪರ ಮತ್ತು ವಿರೋಧದ ಭಾರೀ ಚರ್ಚೆಗಳು ನಡೆಯುತ್ತಿವೆ. ಹೇಳೀ ಕೇಳೀ ಕನ್ನಡಿಗರು ಶಾಂತಿ ಪ್ರಿಯರು. ಕುಡಿಯಲು ನೀರು ಕೇಳಿದರೆ, ನೀರಿನ ಜೊತೆಗೆ ಬೆಲ್ಲವನ್ನು ಕೊಡುವಂತಹ ಸಹೃದಯಿಗಳು. ಹೊರಗಿನಿಂದ ಬಂದವರಿಗೆ ಕನ್ನಡ ಕಲಿಯಲು ಎಲ್ಲಿ ಕಷ್ಟವಾಗುತ್ತದೆಯೋ? ಎನ್ನುವಂತೆ ತಾವೇ ಅವರ ಭಾಷೆಗಳನ್ನು ಕಲಿತು ಸುಲಲಿತವಾಗಿ ಯಾರನ್ನೂ ಏಕವಚನದಲ್ಲಿ ಮಾತನಾಡಿಸದೇ ಎಲ್ಲರಿಗೂ ಸರಿಸಮನಾಗಿ ಗೌರವವನ್ನು ನೀಡುವವರು ಎಂಬ ವಿಷಯ ಎಲ್ಲರಿಗೂ ತಿಳಿದಿದೆಯಷ್ಟೇ.

WhatsApp Image 2024-04-02 at 21.37.38 (1)ಬೆಂಗಳೂರಿನ ಬೊಮ್ಮನಹಳ್ಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಅಕ್ಕ-ಪಕ್ಕದ ಮನೆಯವರ ಜಗಳ ಈಗ ಬೀದಿ ರಂಪವಾಗಿದ್ದೂ ಅಲ್ಲದೇ, ಪೊಲೀಸ್‌ ಠಾಣೆಯ ಮೆಟ್ಟಿಲನ್ನೂ ಏರಿ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ವೈರಲ್ ಆಗುತ್ತಿದೆ. ಆ ಆಪರ್ಟ್ಮೆಂಡಿನ ಮೂರನೇ ಮಹಡಿಯಲ್ಲಿ ಕನ್ನಡಿಗರಾದ ಮಂಜುನಾಥ್ ಮತ್ತು ಸರಿತಾ ದಂಪತಿಗಳು ಬಹಳ ವರ್ಷಗಳಿಂದಲೂ ವಾಸವಾಗಿದ್ದು, 2019ರಲ್ಲಿ ನೇಹಾ ಪ್ರಣಬ್ ಎಂಬಾಕಿ ಜ್ಯೋತಿ ಸಿಂಗ್ ಅವರನ್ನು ವಿವಾಹವಾಗಿ ಮಂಜುನಾಥ್ ಮತ್ತು ಸರಿತಾ ದಂಪತಿಗಳ ಪಕ್ಕದ ಮನೆಗೆ ಬಂದಿದ್ದಾರೆ. ಸುಮಾರು 5 ಮೀಟರ್ ಪ್ಯಾಸೇಜ್ ಇರುವ ಜಾಗದಲ್ಲಿ, ಮಂಜುನಾಥ್ ದಂಪತಿಗಳು ತಮ್ಮ ಮನೆಯ ಮುಂದೆ ಹಿಂದೂ ಸಂಪ್ರದಾಯದ ಪ್ರಕಾರ, ತುಳಸಿ ಗಿಡದ ಕುಂಡವನ್ನು ಇಟ್ಟು ಕೊಂಡು ಅದರ ಮುಂದೆಯೇ ರಂಗೋಲಿಯನ್ನು ಹಾಕುವುದಲ್ಲದೇ, ಅದರ ಪಕ್ಕದಲ್ಲೇ ಚಪ್ಪಲಿ ಸ್ಟ್ಯಾಂಡ್ ಸಹಾ ಇಟ್ಟುಕೊಂಡಿದ್ದಾರೆ.

WhatsApp Image 2024-04-02 at 21.59.31ಹೀಗೆ ತುಳಸಿ ಗಿಡ ಮತ್ತು ಚಪ್ಪಲಿ ಸ್ಟಾಂಡ್ ಇಟ್ಟುಕೊಂಡಿದ್ದಲ್ಲದೇ ಅದರ ಮುಂದೆ ರಂಗೋಲಿ ಇಟ್ಟಿರುವ ಕಾರಣ ನೇಹಾ ಅವರಿಗೆ ಆ ಪ್ಯಾಸೇಜಿನಲ್ಲಿ ಓಡಾಡಲು ಕಷ್ಟವಾಗುತ್ತಿದೆಯಂತೆ. ಅನೇಕ ಬಾರಿ ರಂಗೋಲಿಯನ್ನು ತುಳಿದುಕೊಂಡೇ ಓಡಾಡುತ್ತಿದ್ದ ಕಾರಣ, ಆ ಎರಡೂ ಮನೆಗಳವರ ಮಧ್ಯೆ ಅಗ್ಗಾಗ್ಗೆ ಸನ್ಣ ಪುಟ್ಟ ಗಲಾಟೆಗಳು ನಡೆಯುತ್ತಲೇ ಇದ್ದು,     ಸರಿತಾ ಹಿಂದೂ ಸಂಪ್ರದಾಯದಂತೆ ತಮ್ಮ ಮನೆಯ ಮುಂದೆ ರಂಗೋಲಿ ಹಾಕಿ, ಊದು ಕಡ್ಡಿ ಹಚ್ಚಿ ತುಳಸೀ ಪೂಜೆ ಮಾಡಿ ಬಾಗಿಲು ಹಾಕುತ್ತಿದ್ದಂತೆಯೇ ಎದುರು ಮನೆಯ ನೇಹಾ ಆ ರಂಗೋಲಿಯನ್ನು ಕೆಡಿಸಿ, ಸರಿತಾ ಅವರ ಮನೆಯ ಮುಂದಿರುವ ಶೂ ರ್‍ಯಾಕ್ ಅನ್ನು ಬೀಳಿಸಿ ಚೆಲ್ಲಾಪಿಲ್ಲಿ ಮಾಡಿ ಹೋಗಿ ಬಿಡುವ ವಿಡಿಯೋ ಸಿಸಿ ಟಿವಿಯಲ್ಲಿ  ರೆಕಾರ್ಡ್ ಆಗಿರುವ ಕುರಿತಂತೆ, ಆ ಎರಡೂ ಕುಟುಂಬಗಳ ನಡುವೆ ಮಾರಾಮಾರಿ ಜಗಳ ನಡೆದು ಅದು ಅಂತಿಮವಾಗಿ ಆರಕ್ಷಕ ಠಾಣೆಯನ್ನು ತಲುಪಿ ಪರಸ್ಪರ ದೋಷಾರೋಪಣೆಯ ಕೇಸುಗಳನ್ನು ಹಾಕಿಕೊಂಡಿದ್ದು, ಈ ಕುರಿತಂತೆ ಪೋಲೀಸರು ಹೆಚ್ಚಿನ ಮಟ್ಟದ ತನಿಖೆಯನ್ನು ನಡೆಸುತ್ತಿದ್ದಾರೆ.

WhatsApp Image 2024-04-02 at 21.40.34ಏಟಿಗೆ ಎದಿರೇಟು ಎನ್ನುವಂತೆ ಉತ್ತರ ಭಾರತೀಯ ನೇಹಾ ಸಹಾ ತನ್ನ ವಕೀಲರ ಮೂಲಕ ಸರಿತಾ ದಂಪತಿಗಳ ವಿರುದ್ಧ ದೂರನ್ನು ನೀಡಿದ್ದು, ನಾವು ಓಡಾಡುವ ಪ್ಯಾಸೇಜ್ ಸಂಪೂರ್ಣವಾಗಿ ಅವರುಗಳು ಆಕ್ರಮಿಸಿಕೊಂಡಿರುವುದಲ್ಲದೇ, ನಮ್ಮ ಮನೆಗೆ ಬರುವ ಡೆಲಿವರಿಗಳನ್ನು ಕೂಡ ತೆಗೆದುಕೊಳ್ಳಲು ಆಗದಂತಾಗಿತ್ತು. ಇನ್ನು ಊರಿನಿಂದ ನಮ್ಮ ಅಪ್ಪ, ಅಮ್ಮ ಅಥವಾ ಯಾವುದೇ ಸಂಬಂಧಿಗಳು ಬಂದರೂ ಅವರೂ ಸಹಾ ಓಡಾಡಲೂ ಆಗದ ಹಾಗೆ ಆವರ ಚಪ್ಪಲಿ ಸ್ಟಾಂಡ್, ತುಳಸಿ ಮತ್ತು ಹೂವಿನ ಕುಂಡಗಳು ಆದರ ಮುಂದೆ ಹಾಕುವ ರಂಗೋಲಿಗಳು ಅಡ್ಡಪಡಿಸುತ್ತಿದ್ದಲ್ಲದೇ, ನಮ್ಮ ಮನೆಯಲ್ಲಿರುವ ಎರಡು ನಾಯಿಗಳನ್ನು ಹೊರಗೆ ಕರೆದುಕೊಂಡು ಹೋಗಲೂ ಸಹಾ ತೊಂದರೆ ಕೊಡುತ್ತಿದ್ದರು ಇಷ್ಟೇ ಅಲ್ಲದೇ, ತಮ್ಮ ಮನೆಯ ಬಾಗಿಲ ಬಳಿ ಹಾಕಿಸಿದ್ದ ಸೇಫ್ಟಿ ಗ್ರಿಲ್ಲನ್ನು ಸಹಾ ಅಪಾರ್ಟ್ಮೆಂಟ್ ಅಸೋಸಿಯೇಷನ್‌ ಅವರಿಗೆ ದೂರನ್ನು ನೀಡಿ ತೆಗೆಸಿ ಹಾಕಿರುವುದಲ್ಲದೇ, ಅವರ ಮನೆಯ ಸಿಸಿ ಟಿವಿ ಕ್ಯಾಮೆರಾವನ್ನು ತಮ್ಮ ಮನೆಯ ಬೆಡ್ ರೂಮಿಗೆ ಇವರ ಎದುರಾಗಿ ಕಾಣುವಂತೆ ಹಾಕಿಸುವ ಪರಿಣಾಮ ತಮ್ಮ ಖಾಸಗಿ ಬದುಕಿಗೆ ತೊಂದರೆ ಆಗುತ್ತಿದೆ ಎಂದು ಕಳೆದ ಡಿಸಂಬರ್‌ನಲ್ಲಿಯೇ ಮಂಜುನಾಥ್ ಆವರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ‌ 354A ಎಫ್ಐಆರ್ ದಾಖಲಿಸಿದ್ದಲ್ಲದೇ, ಇತ್ತೀಚೆಗೆ ಕೋಪದಿಂದ ಆಕೆಯೆ ಮಂಜುನಾಥ್ ಅವರ ಮನೆಯ ಮುಂದಿನ ರಂಗೋಲಿಯನ್ನು ಅಳಿಸಿ ಹಾಕಿದ್ದಲ್ಲದೇ, ಉತ್ತರ ಭಾರತೀಯರಿಗೆ ಬೆಂಗಳೂರಲ್ಲಿ ಸುರಕ್ಷಿತವಾಗಿ, ನೆಮ್ಮದಿಯಾಗಿ ಬದುಕುವ ಹಕ್ಕಿಲ್ಲವೇ..? ಎಂದು ಪೋಲೀಸರನ್ನೇ ಪ್ರಶ್ನಿಸಿದ್ದಾಳೆ.

WhatsApp Image 2024-04-02 at 21.55.20ಇದೇ ರೀತಿಯಲ್ಲೇ 2022ರ ಅಕ್ಟೋಬರ್ 24ರ ದೀಪಾವಳಿಯ ಸಂದರ್ಭದಲ್ಲಿ ಹೈದರಾಬಾದ್‌ನ ಚಿಕಪಲ್ಲಿ ಪ್ರದೇಶದ ಗೋಲ್ಕೊಂಡ ಕ್ರಾಸ್ ರಸ್ತೆಯಲ್ಲಿರುವ ಅರ್ಚನಾ ಅಪಾರ್ಟ್‌ಮೆಂಟ್‌ನಲ್ಲಿ ಹಿಂದೂಗಳು ಅಪಾರ್ಟ್ಮೆಂಟಿನ ಸಾಮಾನ್ಯ ಪ್ರದೇಶದಲ್ಲಿ ರಂಗೋಲಿ ಹಾಕಿದ್ದರೆ ವಿರುದ್ಧ ಕ್ರಿಶ್ಚಿಯನ್ ಕುಟುಂಬವೊಂದು ಬಹಿರಂಗವಾಗಿ ನಿಂದಿಸಿ, ಬೆದರಿಸಿ, ವಿರೋಧಿಸಿದದ್ದು ಸಹಾ ಬಾರೀ ವೈರಲ್ ಆಗಿ ನಂತರ ಅ ಅಪಾರ್ಟ್‌ಮೆಂಟ್‌ನ ಹೊರಗೆ ಭಾರೀ ಪ್ರತಿಭಟನೆಗಳು ನಡೆದದ್ದನ್ನೂ ಸಹಾ ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಹಾಗೆ ನೋಡಿದರೆ ಉತ್ತರ ಭಾರತೀಯರು ಈ ರೀತಿಯಾಗಿ ನಮ್ಮ ಮೇಲೆ ದಬ್ಬಾಳಿಕೆ ಮಾಡುವುದಕ್ಕೆ ನಾವು ಇತರರನ್ನು ಹಳಿಯದೇ ನಮ್ಮನ್ನು ನಾವೇ ಹಳಿದುಕೊಳ್ಳ ಬೇಕಾಗಿದೆ. 20-30 ವರ್ಷಗಳ ಹಿಂದೆ ಹೆಚ್ಚಿನ ಬಾಡಿಗೆ ಕೊಡ್ತಾರೇ ಅಥವಾ ಹೆಚ್ಚಿನ ಬೆಲೆಗೆ ನಮ್ಮೆ ಆಸ್ತಿಗೆ ಕೊಂಡು ಕೊಳ್ತಾರೆ ಅಂತ, ಕನ್ನಡಿಗರೇ ಕನ್ನಡ/ಕನ್ನಡತನವನ್ನು ಮರೆತು, ಬೆಂಗಳೂರಿನ ಹೃದಯಭಾಗವಾಗಿದ್ದ, ಪ್ರಮುಖ ವ್ಯಾಪಾರೀ ತಾಣವಾಗಿದ್ದ ಚಿಕ್ಕಪೇಟೆ, ಬಳೇ ಪೇಟೆ, ತಿಗಳ ಪೇಟೆ, ಅಕ್ಕೀ ಪೇಟೆಯಲ್ಲಿ ಮಾರ್ವಾಡಿಗಳಿಗೆ ಮಾರಿದ್ದಲ್ಲದೇ, ಪ್ರತಿಯೊಂದು ಬಡಾವಣೆಗಳಲ್ಲಿಯೂ ಅನ್ಯಭಾಷಿಕರಿಗೆ/ಅನ್ಯಧರ್ಮೀಯರಿಗೆ ಅಂಗಡಿಗಳನ್ನು ತೆರೆಯಲು ಅನುವು ಮಾಡಿಕೊಟ್ಟಾಗಲೇ ಈ ರೀತಿಯ ದಬ್ಬಾಳಿಕೆ ಆರಂಭವಾಯಿತು ಎಂದರೂ ತಪ್ಪಾಗದು.

panwalaಅದೇ ರೀತಿ, ಏ ಬಾಯ್, ಚಾರ್ ಸೌ ಬೀಸ್ ಪಾನ್ ದೇನಾ, ತೋಡಾ ಸುಪಾರೀ ಔರ್ ಚುನ್ನಾ, ದೇಖ್ ಕೇ ಡಾಲ್ನಾ ಎಂದು ಬೀಡಾ ಹಾಕಿಸಿಕೊಂಡು ಬಾಯ್ತುಂಬಾ ತಿಂದು ಎಲ್ಲೆಂದರಲ್ಲಿ ಉಗಿಯುವ ನೂರಾರು ಉ(ಹು)ಟ್ಟು ಓಲಾಟ(ಹೋರಾಟ)ಗಾರರೇ ಮುಂದೆ ನಿಂತು ಜಾಸ್ತಿ ಕಮೀಶನ್ ಆಸೆಗಾಗಿ ಅನ್ಯ ಭಾಷಿಕರಿಗೆ ಆಸ್ತಿ ಖರೀದಿ,ಅಂಗಡಿ,ಮನೆ ಬಾಡಿಗೆ ಪಡೆಯಲು ದಲ್ಲಾಳಿ ಕೆಲಸ ಮಾಡಿದ ನಂತರ ಇನ್ನೂ ಕೆಟ್ಟದಾಗಿ ಹೋಯ್ತು. ಇನ್ನು ದುಡ್ಡು ಇಸ್ಕೋಂಡು ಬಟ್ಟೆ ಬಿಚ್ಚಿಕೊಂಡು ಕುಣಿಯೋ ಸನ್ನೀ ಲಿಯೋನ್ ಬೆತ್ತಲೆ ನೃತ್ಯದ ಮುಂದಾಳತ್ವವನ್ನು ಇದೇ ಖನ್ನಡ ಓರಾಟಗಾರನೊಬ್ಬ ವಹಿಸಿಕೊಂಡನೋ ಅಲ್ಲಿಗೆ ನಮ್ಮ ಜುಟ್ಟನ್ನೇ ಅವರ ಕೈಗೆ ಕೊಟ್ಟು ಈಗ ಅಯ್ಯೋ ಕನ್ನಡಿಗರ ಮೇಲೆ ಅನ್ಯಭಾಷಿಕರ ದಬ್ಬಾಳಿಕೆ ಅಂತಾ ಬಾಯಿ ಬಡ್ಕೊಂಡ್ರೆ ಏನು ಪ್ರಯೋಜನ ಅಲ್ಚೇ?

panipuriಅದೇ ರೀತಿ ಬಳೆ ಅಂಗಡಿಗಳಿಗೆ ಹೋಗಿ, ಅಂಗಡಿಯವರಿಗೆ ಕನ್ನಡ ಬರುತ್ತಾ ಇಲ್ವಾ ಅಂತಾನೂ ಯೋ‍ಚಿಸದೇ, ಬಯ್ಯಾ ಏ ಕಿತ್ನಾ? ಓ ಕಿತ್ನಾ ಎಂದೋ, ಇಲ್ಲವೆ ಸಂಜೆ ಹೊತ್ತು ಪಾನಿ ಪುರಿ ಮಾರುವ ಹುಡುಗನ ಬಳಿ ಬಂದು ಭಯ್ಯಾ ಏಕ್ ಪ್ಲೇಟ್ ಪಾನಿ ಪುರಿ ದೇನಾ, ಜ್ಯಾದಾ ಮೀಠಾ ಡಾಲ್ನಾ! ಎಂದು ಅವರನ್ನು ತಲೇ ಮೇಲೆ ಕೂರಿಸಿಕೊಂಡ ಪರಿಣಾಮವೇ ಈಗ ಅನುಭವಿಸ ಬೇಕಾಗಿದೆ. ಇನ್ನು ಅದೇ ರೀತಿ ಸಾಫ್ಟ್ವೇರ್ ಕಂಪನಿಗಳಲ್ಲಿಯೂ ಕನ್ನಡಿಗರೇ ಕನ್ನಡಿಗರನ್ನು ನೇಮಕ ಮಾಡಿಕೊಳ್ಳದೇ, ಅನ್ಯ ಭಾಷಿಕರಿಗೇ ಮಣೆ ಹಾಕಿದ್ದೂ ಸಹಾ ಇಂತಹ ತೊಂದರೆಗಳಿಗೆ ಅನುವು ಮಾಡಿಕೊಟ್ಟಿದೆ.

ಇಲ್ಲಿ ಯಾವುದೇ ಭಾಷಿಕರನ್ನೂ ಕನ್ನಡಿಗರ ವಿರುದ್ಧ ಎತ್ತಿ ಕಟ್ಟುವ ಉಮೇದಿರದೇ, ಭಾರತವೊಂದು ಒಕ್ಕೂಟ ದೇಶ. ಭಾರತದಲ್ಲಿ ಭಾರತೀಯರು ಎಲ್ಲಿ ಬೇಕಾದರೂ ಬಾಳಿ ಬದುಕುವುದಕ್ಕೆ ಯಾರದ್ದೇ, ಯಾವುದೇ ಆಕ್ಷೇಪಣೆ ಸಲ್ಲದು. ಆದರೆ ನಮ್ಮ ಸನಾತನ ಧರ್ಮದ ಪ್ರಕಾರ ವಸುದೈವ ಕುಟುಂಬಕಂ ಅರ್ಥಾತ್ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು When you are in a rom, be like a roman ಎನ್ನುವ ಆಂಗ್ಲ ಗಾದೆಯಂತೆ ಹೋದ ಬಂದ ಕಡೆ, ಹಮ್ಮು ಬಿಮ್ಮು ಬಿಟ್ಟು ಸ್ಥಳೀಯರೊಂದಿಗೆ ಸೌಹಾರ್ಧಯುತವಾಗಿ ಬಾಳುವುದನ್ನು ಕಲಿತು ಅನುಸರಿಸಿಕೊಂಡು ಬಾಳಬೇಕಾದದ್ದು ಸಹಾ ಎಲ್ಲಾ ಭಾರತೀಯರ ಕರ್ತವ್ಯವಾಗಿದೆ ಅಲ್ವೇ?

ಇದೇ ರೀತಿಯ ಆಂತರಿಕ ಕಚ್ಚಾಟಗಳಿಂದಲೇ ಸುಮಾರು ಸಾವಿರ ವರ್ಷಗಳ ಕಾಲ ದಾಸ್ಯಕ್ಕೆ ಒಳಗಾಗಿದ್ದರೂ ಇನ್ನೂ ಬುದ್ಧಿ ಕಲಿಯದೇ, ದೇಶಕ್ಕೆ ಸ್ವಾತ್ರಂತ್ರ ಬಂದು ಇಷ್ಟು ವರ್ಷವಾದರೂ ಇನ್ನೂ ಅದೇ ರೀತಿಯಲ್ಲಿ ಕಚ್ಚಾಡುತ್ತಲೇ ಹೋದಲ್ಲಿ, ಸ್ವಾತ್ರಂತ್ಯ ಬಂದು 100 ವರ್ಷ ಕಳೆಯುದರೊಳಗೆ ಅರ್ಥಾತ್ 2047ರಷ್ಟರಲ್ಲಿ ಈ ಭೂಪಟದಲ್ಲಿ ಭಾರತ ಎಂಬ ದೇಶ ಒಂದಿತ್ತು ಎಂಬುದನ್ನೇ ಅಳಿಸಿ ಹಾಕಲು ಹೊಂಚು ಹಾಕುತ್ತಿರುವ ಹುನ್ನಾರಕ್ಕೆ ನಾವೇ ತುಪ್ಪ ಸುರಿದಂತಾಗುತ್ತದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment