ಶ್ರಾವಣ ಮಾಸ ಮುಗಿದು ಭಾದ್ರಪದ ಮಾಸ ಆರಂಭವಾಗುತ್ತಿದ್ದಂತೆಯೇ, ಭಾರತದ ಬಹುತೇಕ ಮನೆಗಳಲ್ಲಿ ವಿನಾಯಕ ಚತುರ್ಥಿಯ ಸಂಭ್ರಮ. ಗೌರಿ ಗಣೇಶನ ಹಬ್ಬ ಎಂದರೆ ಹೆಣ್ಣು ಗಂಡು ಎಂಬ ಬೇಧಭಾವವಿಲ್ಲದೇ, ಆಬಾಲವೃದ್ಧರಾದಿಯಾಗಿ ಎಲ್ಲರೂ ಸಡಗರ ಸಂಭ್ರಮಗಳಿಂದ ಆಚರಿಸುವ ಹಬ್ಬ ಎಂದರೂ ತಪ್ಪಾಗದು. ಗಣೇಶನ ಹಬ್ಬ ಕೇವಲ ಮನೆ ಮನೆಗಳಿಗಷ್ಟೇ ಸೀಮಿತವಾಗಿರದೇ, ಸಣ್ಣ ಸಣ್ಣ ಗಲ್ಲಿಗಳಿಂದ ಹಿಡಿದು, ಬಡಾವಣೆ, ಊರ ಮಟ್ಟಿಗೆ ಸಾರ್ವಜನಿಕವಾಗಿ ಒಂದು ದಿನ, ವಾರ ಮತ್ತು ತಿಂಗಳು ಗಟ್ಟಲೇ ನಡೆದರೆ, ಇನ್ನೂ ಕೆಲವೆಡೆ ಗಣೇಶ ಹಬ್ಬ ಮುಗಿದ ತಿಂಗಳ ನಂತರವೂ ಅದ್ದೂರಿಯಿಂದ ಗಣೇಶನ ಹಬ್ಬವನ್ನು ಆಚರಿಸುವ ರೂಡಿಯಲ್ಲಿದೆ.
ಶ್ರೀ ಗಣೇಶನ ಜನನ
ನಮಗೆಲ್ಲರಿಗೂ ತಿಳಿದಿರುವಂತೆ ಪರಶಿವನ ಪತ್ನಿಯಾದ ಪಾರ್ವತಿ ದೇವಿಯು ಸ್ನಾನಕ್ಕೆ ಹೋಗುವ ಸಂಧರ್ಭದಲ್ಲಿ ಯಾರೂ ಸಹಾ ತನ್ನ ಅಂತಃಪುರದೊಳಗೆ ಬಾರದಿರಲೆಂದು ತಾನು ಸ್ನಾನಕ್ಕೆ ಬಳಸುವ ಅರಿಶಿನ, ಚಂದನ ಮತ್ತು ಕಡಲೇ ಹಿಟ್ಟಿನಿಂದ (ಪಾರ್ವತಿಯ ಮೈ ಮೇಲಿನ ಕೊಳೆ ಎಂದೇ ಬಹುತೇಕರು ನಂಬಿಸಿರುವುದು ಹುನ್ನಾರ) ಒಂದು ಸುಂದರ ಬಾಲಕನ ಪ್ರತಿಮೆಯನ್ನು ತಯಾರಿಸಿ ಆದಕ್ಕೆ ಜೀವ ತುಂಬಿ, ತಾನು ಸ್ನಾನ ಬರುವವರೆಗೂ ಯಾರನ್ನೂ ಒಳಗೆ ಬಿಡದಿರು ಎಂದು ಆಜ್ಞಾಪಿಸುತ್ತಾಳೆ. ಇದಾದ ಸ್ವಲ್ಪ ಸಮಯದ ನಂತರ ಅಲ್ಲಿಗೆ ತನ್ನ ಗಣದೊಂದಿಗೆ ಬಂದ ಶಿವನು ಯಾರೆಂದು ಆರಿಯದ ಆ ಬಾಲಕ ಶಿವನನ್ನು ತಡೆದು, ತನ್ನ ತಾಯಿ ಪಾರ್ವತಿ ದೇವಿಯು ಸ್ನಾನಕ್ಕೆ ಹೋಗಿದ್ದು ಆಕೆಯ ಆಜ್ಞೆಯಿಲ್ಲದೇ ತಾನು ಯಾರನ್ನೂ ಒಳಗೆ ಬಿಡೆನು ಎಂದು ಹೇಳಿದಾಗ, ಮಾತಿಗೆ ಮಾತು ಬೆಳೆದು ಕೋಪಗೊಂಡ ಶಿವನು ತನ್ನ ತ್ರಿಶೂಲದಿಂದ ಆ ಬಾಲಕನ ಶಿರವನ್ನು ಕಡಿದಾಗ, ನೋವಿನಿಂದ ಆಮ್ಮಾ.. ಎಂದು ಚೀರಿದ ಸದ್ದನ್ನು ಕೇಳಿ ಅಲ್ಲಿಗೆ ಬಂದ ಪಾರ್ವತಿ ದೇವಿಯು ಆತ ತನ್ನ ಮಗನೆಂದು ಆತನನ್ನು ಬದುಕಿಕೊಡಬೇಕೆಂದು ಶಿವನಲ್ಲಿ ಕೋರಿದಾಗ, ಉತ್ತರ ದಿಕ್ಕಿಗೆ ಯಾರು ತಲೆ ಹಾಕಿಮಲಗಿರುತ್ತಾರೋ ಅಂತಹವರ ತಲೆಯನ್ನು ತರಲು ತನ್ನ ಗಣಕ್ಕೆ ಹೇಳಿದಾಗ, ಮೂರು ಲೋಕವನ್ನು ಹುಡುಕಿದರೂ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದವರು ಯಾರೂ ಸಹಾ ಸಿಗದೇ ಅಂತಿಮವಾಗಿ ಉತ್ತರ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಿದ್ದ ಆನೆಯೊಂದರ ತಲೆಯನ್ನು ಕಡಿದು ತಂದು ಆದನ್ನೇ ಮೃತ ಬಾಲಕನ ತಲೆಗೆ ಜೋಡಿಸಿ ಆ ಬಾಲಕನಿಗೆ ಜೀವ ತುಂಬಿದ್ದಲ್ಲದೇ, ಆತನನ್ನು ತನ್ನ ಇಡೀ ಗಣಕ್ಕೆ ಅಧಿಪತಿಯನ್ನಾಗಿಸಿ ಅತನನ್ನು ಗಣಪತಿ, ಗಣೇಶ ಎಂದು ನಾಮಕರಣ ಮಾಡಿದ್ದಲ್ಲದೇ, ಯಾವುದೇ ಪೂಜೆ ಪುನಸ್ಕಾರಗಳನ್ನು ಮಾಡುವ ಮೊದಲು ವಿಘ್ನನಿವಾರಕ್ಕಾಗಿ ಈ ವಿಷ್ನೇಶ್ವರ ಅರ್ಥಾತ್ ವಿನಾಕನನ ಪೂಜೆ ಮಾಡಬೇಕು ಎಂದು ಆಜ್ಞಾಪಿಸಿದ ಕಥೆ ಎಲ್ಲರಿಗೂ ತಿಳಿದ ವಿಷಯವಾಗಿದೆ.
ಅಂದು ಶಿವನು ಕತ್ತರಿಸಿದ ತಲೆ ಈಗ ಎಲ್ಲಿದೇ?
ಅಂದು ಶಿವನಿಂದ ಕತ್ತರಿಸಲ್ಪಟ್ಟ ಬಾಲಕನ ಶಿರವನ್ನು ಇಂದಿಗೂ ಸಹಾ ದೇವಭೂಮಿಯಾದ ಉತ್ತರಾಖಂಡ್ನ ಪಿಥೋರ್ಗಢ ಜಿಲ್ಲೆಯ ಪಾತಾಳ ಭುವನೇಶ್ವರಿ ಎಂಬ ಭೂಮಿಯ ಒಳಗಡೆ ಇರುವ ಗುಹೆಯಲ್ಲಿ ಲಿಂಗಾಕಾರದಲ್ಲಿ ಕಾಣ ಬಹುದಾಗಿದೆ. ಸ್ಕಂದ ಪುರಾಣದಲ್ಲಿ ಈ ಪಾತಾಳ ಭುವನೇಶ್ವರದ ಬಗ್ಗೆ ಉಲ್ಲೇಖವಿದ್ದು, ಬಹುಕಾಲದವರೆಗೂ ಈ ಗುಹೆಗೆ ಯಾರೂ ಸಹಾ ಭೇಟಿ ನೀಡದ ಕಾರಣ ಅದು ಅಗೋಚರವಾಗಿಯೇ ಇತ್ತು. 8ನೇ ಶತಮಾನದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರು ಮೊದಲ ಬಾರಿ ಈ ಗುಹೆಯನ್ನು ಪತ್ತೆಹಚ್ಚಿದ್ದಲ್ಲದೇ ಅದಕ್ಕೊಂದು ಹೊಸ ಕಾಯಕಲ್ಪ ನೀಡಿದ ನಂತರ ಭಕ್ತಾದಿಗಳು ಅಲ್ಲಿಗೆ ಭೇಟಿ ನೀಡತೊಡಗಿದರು. ಈ ಗುಹೆಯಲ್ಲಿ ಕೇವಲ ಗಣೇಶನ ಮೂರ್ತಿಯಷ್ಟೇ ಅಲ್ಲದೇ ಹಿಂದೂಗಳು ನಂಬುವ 33 ಕೋಟಿ ದೇವರುಗಳೂ ಸಹಾ ಇಲ್ಲಿಯೇ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಈ ಪಾತಾಳಭುವನೇಶ್ವರಿಯನ್ನು ತಲುಪಲು ಅತ್ಯಂತ ಕಡಿದಾದ ಮತ್ತು ಅಷ್ಟೇ ದುರ್ಗಮವಾದ ಹಾದಿಯಲ್ಲಿ ಹೋಗಿ ಒಂದು ಬಾರಿ ಒಬ್ಬರು ಮಾತ್ರ ಇಳಿದು ಹೋಗುವಷ್ಟು ಜಾಗವಿರುವ, ಭೂಮಿಯಿಂದ ಸುಮಾರು 90 ಆಡಿ ಆಳದಲ್ಲಿರುವ ಗುಹೆಯೊಳಗೆ ಇಳಿದದಲ್ಲಿ ಲಿಂಗರೂಪದಲ್ಲಿರುವ ಗಣೇಶನ ಶಿರದ ದರ್ಶನವನ್ನು ಪಡೆಯಬಹುದಾಗಿದೆ.
ಸಾರ್ವಜನಿಕವಾಗಿ ಗಣೇಶನ ಹಬ್ಬದ ಆಚರಣೆ
ಅಂದಿನಿಂದಲೂ ಅನೂಚಾನವಾಗಿ ಸಕಲ ಸನಾತನಿಗಳ ಮನೆಯಲ್ಲಿ ಭಾದ್ರಪದಮಾಸದ ಚೌತಿಯಂದು ಗಣೇಶನ ಹಬ್ಬವನ್ನು ಮಾಡುವ ಸಂಪ್ರದಾಯ ರೂಢಿಗೆ ಬಂದಿದ್ದಲ್ಲದೇ, ಪ್ರತಿಯೊಂದು ಶುಭಕಾರ್ಯಗಳನ್ನು ಮಾಡುವ ಮುನ್ನಾ ಗಣೇಶನ ಪೂಜೆಯನ್ನು ಮಾಡುವ ಮೂಲಕ ಗಣೇಶ ಒಂದು ರೀತಿಯಲ್ಲಿ ಯಾವುದೇ ಜಾತಿಯ ಹಂಗಿಲ್ಲದೇ ಸಾರ್ವತ್ರಿಕವಾಗಿ ಒಪ್ಪಿಕೊಂಡ ದೇವರಾಗಿ ಎಲ್ಲರ ಮನೆ ಮತ್ತು ಮನಗಳಲ್ಲಿ ಮೂಡಿದ್ದ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ವಿರುದ್ಧ ಯಾವುದೇ ಧರ್ಮ, ಜಾತಿಯ ಹಂಗಿಲ್ಲದ್ದೇ ಸಕಲ ಭಾರತೀಯರನ್ನೂ ಒಗ್ಗೂಡಿಸುವ ಸಲುವಾಗಿ 1893ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು, ಸಂಪ್ರದಾಯಸ್ಥರ ಮನೆಗಳಲ್ಲಿ ಮಾತ್ರವೇ ಹಬ್ಬವಾಗಿ ಅಚರಿಸಲ್ಪಡುತ್ತಿದ್ದ ಗಣೇಶನ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲು ಕರೆ ನೀಡಿದ್ದಲ್ಲದೇ, ಅಂದಿನಿಂದ ಅನಂತ ಚತುರ್ದಶಿಯವರೆಗೂ ಸುಮಾರು 11 ದಿನಗಳ ಕಾಲ ಅದ್ದೂರಿಯಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಅನ್ನದಾನವನ್ನೂ ಸಹಾ ಮಾಡುವ ಮೂಲಕ ಹಿಂದೂಗಳಲ್ಲಿ ಏಕತೆಯ ಮಂತ್ರವನ್ನು ಬಿತ್ತಿದ್ದಲ್ಲದೇ ಗಣೇಶನ ಮೂರ್ತಿಯನ್ನು ಹತ್ತಿರದ ಕೆರೆ, ನದಿ ಸಮುದ್ರಗಳಲ್ಲಿ ವಿಸರ್ಜನಾ ವಿಧಿಯನ್ನು ಜಾರಿಗೆ ತಂದರು. ಈ ಗಣೇಶೋತ್ಸವದಲ್ಲಿ ತಿಲಕರು ಮಾಡಿದ ದಿಕ್ಸೂಚಿ ಭಾಷಣದಿಂದ ಸ್ವಾತಂತ್ರ್ಯದ ಕಿಡಿ ಹಬ್ಬಿದ್ದಲ್ಲದೇ, ಗಣೇಶನ ಹಬ್ಬಕ್ಕೆ ಜನರಿಂದ ಬಂದ ಅಮಿತೋತ್ಸಾಹವನ್ನು ಗಮನಿಸಿ ಇದರಿಂದಲೇ ಪ್ರೇರಿತರಾಗಿ ತಿಲಕರು 1896ರಲ್ಲಿ ಸಾರ್ವಜನಿಕವಾಗಿ ಶಿವಾಜಿ ಉತ್ಸವ ಸಹ ಆರಂಭಿಸಿದರು. ಹೀಗೆ ಮಹಾರಾಷ್ಟ್ರದಲ್ಲಿ ಅರಂಭವಾದ ಸಾರ್ವಜನಿಕ ಗಣೇಶೋತ್ಸವ ವರ್ಷದಿಂದ ವರ್ಷಕ್ಕೆ ದೇಶಾದ್ಯಂತ ಗಲ್ಲಿ ಗಲ್ಲಿಗಳಿಗೂ ಹರಡಿ ತನ್ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಪರೋಕ್ಷವಾಗಿ ಜನರನ್ನು ಅಣಿ ಮಾಡಿದ್ದು ಈಗ ಇತಿಹಾಸ.
ಗಣೇಶನ ಮೂರ್ತಿಯನ್ನು ಭಾವಿ, ಕೆರೆ ಕಟ್ಟೆ, ನದಿಯಲ್ಲೇಕೆ ವಿಸರ್ಜಿಸಲಾಗುತ್ತದೆ?
ಗಣೇಶನ ಮೂರ್ತಿಗಳನ್ನು ಭಾವಿ, ಕೆರೆ ಕಟ್ಟೆ, ನದಿಗಳಲ್ಲಿ ವಿಸರ್ಜನೆ ಮಾಡುವದರಿಂದ ಪರಿಸರದ ಮೇಲೇ ಭಾರಿ ಪರಿಣಾಮವಾಗುತ್ತದೆ ಎಂದು ಬಾಯಿ ಬಡಿದು ಕೊಳ್ಳುವವರನ್ನೂ ನೋಡುತ್ತೇವೆ. ನಿಜ ಹೇಳಬೇಕೆಂದರೆ ಗಣೇಶನ ಮೂರ್ತಿಯನ್ನು ಹತ್ತಿರದ ಕೆರೆಗಳಿಂದ ತರುವ ಜೇಡಿ ಮಣ್ಣಿನಿಂದ ಮಾಡುವುದರ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆ. ಬೇಸಿಗೆಯಲ್ಲಿ ಬಹುತೇಕ ಕೆರೆಕಟ್ಟೆಗಳು ಒಣಗಿ ಹೋಗಿರುವ ಸಂಧರ್ಭದಲ್ಲಿ ಆ ಮೆಕ್ಕಲು ಮಣ್ಣನ್ನು ತೆಗೆದು ಕೃಷಿ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವ ಮೂಲಕ ಆ ಕೆರೆ ಕಟ್ಟೆಗಳನ್ನು ಆಳವನ್ನು ಮಾಡಿ ಹೆಚ್ಚು ಹೆಚ್ಚು ನೀರು ಸಂಗ್ರಹವಾಗುವಂತೆ ಮಾಡಲಾಗುತ್ತದೆ ಮತ್ತು ಅದೇ ಜೇಡಿ ಮಣ್ಣಿನಿಂದ ವಿವಿಧ ಆಕೃತಿಯ ಗಣೇಶನ ವಿಗ್ರಹಗಳನ್ನು ಮಾಡಿ ಪೂಜಿಸಲಾಗುತ್ತದೆ. ಇನ್ನೂ ಜೇಷ್ಟ, ಆಶಾಢ ಮತ್ತು ಶ್ರಾವಣಮಾಸಗಳಲ್ಲಿ ಸುರಿಯುವ ಮುಂಗಾರು ಮಳೆಯಿಂದಾಗಿ ಬಹುತೇಕ ಕೆರೆ ಕಟ್ಟೆಗಳು ತುಂಬಿ ತುಳುಕಿ ಕಟ್ಟೆಗಳು ಒಡೆಯುವಂತಹ ಪರಿಸ್ಥಿತಿ ನಿರ್ಮಾಣವಾದಾಗ, ಅದೇ ಮಣ್ಣಿನಿಂದ ಮಾಡಿರುವ ಗಣೇಶನ ಮೂರ್ತಿಗಳನ್ನು ಕೆರೆಕಟ್ಟೆಗಳಲ್ಲಿ ವಿಸರ್ಜಿಸುವ ಮೂಲಕ ಕೆರೆಕಟ್ಟೆಗಳು ಒಡೆಯುವುದನ್ನು ತಪ್ಪಿಸಬಹುದಾಗಿದೆ.
ಇನ್ನು ಪೌರಾಣಿಕವಾಗಿ ನೋಡುವುದಾದರೇ, ಮಹಾಭಾರತದ ಕರ್ತೃ ವ್ಯಾಸ ಮಹರ್ಷಿಗಳಾದರೇ, ಅಂತಹ ಮಹಾನ್ ಕಾವ್ಯವನ್ನು ಲಿಪ್ಯಂತರಗೊಳಿಸಿದ್ದು ನಮ್ಮ ಇದೇ ಗಣೇಶನೇ, ಹಾಗಾಗಿ ಗಣೇಶನನ್ನು ವಿಶ್ವದ ಮೊತ್ತ ಮೊದಲ Stenographer ಎಂದೇ ಕರೆಯಲಾಗುತ್ತದೆ. ತಮ್ಮ ಸುಧೀರ್ಘವಾದ ಮಹಾಭಾರತವನ್ನು ಬರೆಯುವದಕ್ಕಾಗಿ ಗಣೇಶನನ್ನು ಪ್ರಾರ್ಥಿಸಿ ಕೈಲಾಸದಿಂದ ಭೂಲೋಕಕ್ಕೆ ಗಣೇಶನನ್ನು ಕರೆತಂದ ದಿನವೇ ಭಾದ್ರಪದ ಮಾಸದ ಚೌತಿಯಾಗಿರುತ್ತದೆ.
ಭೂಮಿಗೆ ಬಂದ ಗಣೇಶನಿಗಾಗಿ ಒಂದು ಸುಂದರ ಮಂಟಪವನ್ನು ನಿರ್ಮಿಸಿ ಅದರೊಳಗೆ ಮೆತ್ತಗೆ ಇರುವಂತೆ ಗರಿಕೆಯನ್ನು ಹರಡಿ ಅದರ ಮೇಲೊಂದು ಸುಂದರ ಪೀಠ, ಪೀಠದ ಮೇಲೊಂದು ಸುಂದರವಾದ ರಂಗೋಲಿಯನ್ನು ಬಿಡಿಸಿ, ಮಂಟಪದ ಸುತ್ತಲೂ ವಿವಿಧ ಹೂವು, ಬಾಳೆ ಕಂದು ಮತ್ತು ಮಾವಿನ ಎಲೆಗಳಿಂದ ತಳಿರು ತೋರಣವನ್ನು ಕಟ್ಟಿ ಒಂದು ಮಹಾಭಾರತವನ್ನು ನಿರ್ವಿಘ್ನವಾಗಿ ಬರೆಯುವಂತಹ ಪ್ರಶಾಂತ ವಾತಾವರಣವನ್ನು ವ್ಯಾಸರು ನಿರ್ಮಿಸಿರುತ್ತಾರೆ. ಇವಿಷ್ಟೇ ಅಲ್ಲದೇ ಭೋಜನ ಪ್ರಿಯನಾದ ಗಣೇಶನಿಗೆ ಪ್ರಿಯವಾದ ಕಡುಬು ಪಾಯಸವಲ್ಲದೇ ವಿವಿಧ ಭಕ್ಷಭೋಜನಗಳನ್ನೂ ತಯಾರಿಸಿ ಅವೆಲ್ಲವನ್ನೂ ಭಕ್ತಿಯಿಂದ ಗಣೇಶನಿಗೆ ಸಮರ್ಪಿಸಿ ಮಹಾಭಾರತವನ್ನು ಬರೆಯಲು ಕೋರಿಕೊಳ್ಳುತ್ತಾರೆ.
ಇದೇ ಸಂಧರ್ಭದಲ್ಲಿ ಗಣೇಶ ಮತ್ತು ವ್ಯಾಸರ ನಡುವೆ ಒಂದು ಆರೋಗ್ಯಕರ ಪೈಪೋಟಿ ಏರ್ಪಟ್ಟು, ಕಥೆ ಹೇಳುವಾಗ ವ್ಯಾಸರು ಯಾವುದೇ ವಿರಾಮವಿಲ್ಲದೇ ಸಂಪೂರ್ಣ ಕಥೆಯನ್ನು ಹೇಳಿದರೆ ಮಾತ್ರ ತಾನು ಈ ಮಹಾಕಾವ್ಯವನ್ನು ಬರೆಯುತ್ತೇನೆ ಎಂದು ಗಣೇಶ ಹೇಳಿದ್ದಕ್ಕೆ ಒಪ್ಪಿಕೊಂಡ ವ್ಯಾಸರು ಅದಕ್ಕೆ ಪ್ರತಿಯಾಗಿ ತಾವು ಹೇಳುವ ಕಥಾವಸ್ತು ಅಥವಾ ವಾಕ್ಯವನ್ನು ಸಂಪೂರ್ಣವಾಗಿ ಅರ್ಥಕೊಂಡೇ ಗಣೇಶನು ಬರೆಯಬೇಕೆಂಬ ಷರತ್ತನ್ನು ಒಡ್ಡಿ, ಪರಸ್ಪರ ಇಬ್ಬರೂ ಹಾಕಿದ್ದ ಷರತ್ತುಗಳನ್ನು ಒಪ್ಪಿಕೊಂಡ ನಂತರವೇ, ವ್ಯಾಸರು ಮಹಾಭಾರತವನ್ನು ಒಂದು ಚೂರೂ ನಿಲ್ಲಿಸದೇ, ನಿರ್ಗಳವಾಗಿ ಹೇಳುತ್ತಾ ಹೋದಂತೆ, ಗಣೇಶನು ಒಂದು ಅಕ್ಷರವೂ ತಪ್ಪಿಲ್ಲದೇ ವ್ಯಾಸರು ಹೇಳುವ ವೇಗದಲ್ಲೇ ಬರೆಯುತ್ತಾ ಸಾಗುತ್ತಾನೆ. ವ್ಯಾಸರು ಹೇಳುತ್ತಿದ್ದ ಪ್ರಸಂಗಗಳನ್ನು ಮನಸ್ಸಿನಲ್ಲೇ ಮೂಡಿಸಿಕೊಂಡು ಅದನ್ನು ಸರಿಯಾಗಿ ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ಬಾಲ ಗಣೇಶನ ಮುಖದಲ್ಲಿ ಮೂಡುತ್ತಿದ್ದ ಭಾವಗಳ ಬದಲಾವಣೆಯನ್ನು ವ್ಯಾಸರು ಗಮನಿಸುತ್ತಲೇ ಕಥೆಯನ್ನು ಮುಂದುವರೆಸುತ್ತಾ ಹೋಗುತ್ತಾರೆ, ಗಣೇಶನೂ ಸಹಾ ಕಥೆಯನ್ನು ಬರೆಯುವುದರಲ್ಲಿ ಎಷ್ಟೋಂದು ತಲ್ಲೀನನಾಗಿದ್ದನೆಂದರೆ, ಬರೆಯುವ ಸಂಧರ್ಭದಲ್ಲಿ ಲೇಖನಿ ಮುರಿದು ಹೋದಾಗ, ಕಥೆಯ ಓಘಕ್ಕೆ ಭಂಗವಾಗಬಾರದೆಂದು ತನ್ನ ದಂತವೊಂದನ್ನೇ ಮುರಿದುಕೊಂಡು ಅದನ್ನೇ ಲೇಖನಿಯನ್ನಾಗಿ ಮಾಡಿಕೊಂಡು ಬರೆದ ಕಾರಣದಿಂದಲೇ ಆತ ಏಕದಂತನಾಗುತ್ತಾನೆ. ಹೀಗೆ ಚೌತಿಯಿಂದ ಆರಂಭವಾದ ಕಥೆ ಸಂಪೂರರ್ಣವಾಗಿ ಮುಗಿಯುವಷ್ಟರಲ್ಲಿ ಹತ್ತು ದಿನಗಳು ಕಳೆದು 11ನೇ ದಿನವಾಗಿ ಅನಂತ ಚತುರ್ದಶಿಯ ದಿನವಾಗಿರುತ್ತದೆ.
ಹೀಗೆ ನಿರಂತರವಾಗಿ ಮತ್ತು ಅಷ್ಟೇ ಸುಧೀರ್ಘವಾಗಿ ಮಹಾ ಕಾವ್ಯವನ್ನು ಬರೆದು ಬರೆದೂ ಗಣೇಶನ ದೇಹದ ತಾಪಮಾನವೆಲ್ಲಾ ಹೆಚ್ಚಾಗಿ ಹಬೆಯಾಡುತ್ತಿದ್ದದ್ದನ್ನು ಗಮನಿಸಿದ ವ್ಯಾಸರು ಆ ಬಾಲ ಗಣೇಶನನ್ನು ಆ ಕುಟೀರದ ಹತ್ತಿರಲ್ಲೇ ಗುಪ್ತಗಾಮಿಯಾಗಿ ಹರಿಯುತ್ತದ್ದ ಸರಸ್ವತಿ ನದಿಗೆ ಕರೆದುಕೊಂಡು ಹೋಗಿ, ಕೈ ಹಿಡಿದು ಎರಡು ಬಾರಿ ಮುಳುಗಿಸಿ, ಮೂರನೇ ಬಾರಿ ಮುಳುಗಿಸಿದಾಗ, ತಾನು ಬಂದ ಕೆಲಸ ನಿರ್ವಿಘ್ನವಾಗಿ ಸುಸಂಪನ್ನವಾಗಿದ್ದ ಕಾರಣ, ವ್ಯಾಸರ ಕೈ ಬಿಡಿಸಿಕೊಂಡ ಗಣೇಶನು ಸರಸ್ವತಿ ನದಿ ಮುಖಾಂತರ ¸ಕ್ಕೆ ಸೇರಿಕೊಂಡ ಎಂದು ಪುರಾಣದಲ್ಲಿ ಹೇಳುವ ಕಾರಣ ಭಾದ್ರಪದ ಚೌತಿಯಂದು ಪ್ರತಿಷ್ಠಾಪಿಸುವ ಗಣೇಶನ ಮೂರ್ತಿಯನ್ನು ಚತುರ್ದಶಿಯಂದ ಕೆರೆ ಕಟ್ಟೆಗಳಲ್ಲಿ ವಿಸರ್ಜಿಸುವ ಪದ್ದತಿ ರೂಢಿಯಲ್ಲಿ ಬಂದಿದೆ.
ಹಿಂದೂಗಳ ದೈನಂದಿನ ಪ್ರತಿಯೊಂದು ಆಚರಣೆಗಳು ಮತ್ತು ಹಬ್ಬ ಹರಿದಿನಗಳ ಹಿಂದೆ ಪೌರಾಣಿಕವಲ್ಲದೇ, ವೈಜ್ಞಾನಿಕ ಕಾರಣಗಳೂ ಇದ್ದು, ಅವುಗಳನ್ನು ಇಂದಿನ ಯುವಜನತೆಗೆ ತಿಳಿಸಿಕೊಟ್ಟು ಅವರೆಲ್ಲರಿಗೂ ನಮ್ಮ ಧರ್ಮದ ಬಗ್ಗೆ ಅಭಿಮಾನ ಮತ್ತು ಹೆಮ್ಮೆ ಮೂಡುವಂತೆ ಮಾಡುವ ಮೂಲಕ ನಮ್ಮ ಪುರಾಣಗಳು ಮತ್ತು ಪೌರಾಣಿಕ ಪ್ರದೇಶಗಳನ್ನು ಮತ್ತಷ್ಟು ಮಗದಷ್ಟು ಅನ್ವೇಷಣೆ ಮಾಡುವ ಅಗಾಧವಾಗಿರುವ ನಮ್ಮ ಜ್ಞಾನ ಸಂಪತ್ತನ್ನು ಎಲ್ಲರಿಗೂ ಹಂಚುವಂತಾಗಲು ನಮ್ಮೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ