ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಶಭಾವಾಗಲಿ

ಅರೇ ಇದೇನು ಶೀರ್ಷಿಕೆಯಲ್ಲೇ ಈ ಪರಿಯ ತಪ್ಪೇ? ಎಂದು ಯೋಚಿಸುತ್ತಿದ್ದರೆ, ನೀವಿನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿಲ್ಲ ಎಂದು ಸುಲಭವಾಗಿ ಹೇಳಿ ಬಿಡಬಹುದು.  ಅದೇಕೋ ಏನೋ ಈ ಸಿದ್ದರಾಮಯ್ಯನವರ ಕಾಂಗ್ರೇಸ್ ಸರ್ಕಾರಕ್ಕೂ ಮತ್ತು ವಿವಾದಗಳಿಗೂ ಅವಿನಾಭಾವ ಸಂಬಂಧ. ಪ್ರತಿ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದಾಗಲೂ ಹಿಂದೂ ವಿರೋಧಿ ಮತ್ತು ಕನ್ನಡ ವಿರೋಧಿ ಧೋರಣೆಗಳನ್ನು ಹೊರ ಹಾಕುತ್ತಲೇ ಇರುತ್ತದೆ. ಆದರು ಸಹಾ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಹುಂಬತನದಿಂದಲೇ, ಸಿದ್ದರಾಮಯ್ಯನವರು ಸಮಯ ಸಿಕ್ಕಾಗಲೆಲ್ಲಾ ತಾವೊಬ್ಬ ಅಸಮಾನ್ಯ  ಕನ್ನಡದ ಪಂಡಿತ ಎಂಬ ಭ್ರಮೆಯಲ್ಲಿ ಕನ್ನಡ ಪಾಠವನ್ನೇ ಹೇಳಿಕೊಡಲು ಮುಂದಾಗುತ್ತಾರೆ. ವಿಧಾನ ಸಭೆಯಲ್ಲೂ ಕನ್ನಡದ ವ್ಯಾಕರಣ, ಸಂಧಿ ಸಮಾಸಗಳ ಬಗ್ಗೆ ಪುಂಖಾನು ಪುಂಖವಾಗಿ ಮಾತನಾಡಿರುವ ಉದಾಹರಣೆಯೂ ಇದೆ. ಆದರೆ ಅಂಗೈಯಲ್ಲಿರುವ ಹುಣ್ಣಿಗೆ ಕನ್ನಡಿ ಬೇಕೆ? ಎನ್ನುವಂತೆ ಅವರ ಸಚಿವ ಸಂಪುಟದಲ್ಲಿರುವ ಅನೇಕರಿಗೆ  ಸರಿಯಾಗಿ ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಬಾರದು  ಎನ್ನುವ ವಿಷಯ ನಿಜಕ್ಕೂ ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ.

ಉನ್ನತ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವೆರಡೂ ಸಹಾ ಅತ್ಯಂತ ಪ್ರಮುಖವಾದ ಖಾತೆಗಳಾಗಿದ್ದು, ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಸೂಕ್ತವಾದ ಶಿಕ್ಷಣವನ್ನು ಕೊಡುವಂತಹ ಉನ್ನತವಾದ ಜವಾಬ್ಧಾರಿಯನ್ನು ಹೊಂದಿರುವಂತಹ ಸಚಿವರು, ಶಿಕ್ಷಣ ಇಲಾಖೆಯ ಅಧಿಕಾರವನ್ನು  ವಹಿಸಿಕೊಂಡಾಗ,  ತಮ್ಮ ಪಕ್ಷದ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ, ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಪಠ್ಯಪುಸ್ತಕಗಳನ್ನು ಕಿತ್ತು ಬಿಸಾಕಿದ್ದೇವೆ ಎಂದು  ಅಬ್ಬರಿಸಿ ಬೊಬ್ಬಿರಿದವರು, ಸದನದಲ್ಲಿ ತಮ್ಮ ಇಲಾಖೆಗೆ ಸಂಬಂಧ ಪಟ್ಟ ಪ್ರಶ್ನೆಗಳಿಗೆ ಅಧಿಕಾರಿಗಳು ಬರೆದುಕೊಟ್ಟ ಉತ್ತರವನ್ನು ಸರಿಯಾಗಿ ಓದಲು ತಡಬಡಾಯಿಸಿದ್ದಾಗ ಅರೇ,  ಶಿಕ್ಷಣ ಸಚಿವರಿಗೆ ಸರಿಯಾಗಿ ಕನ್ನಡ ಓದಲು ಬರುವುದಿಲ್ಲವೇ? ಎಂದು ಎಲ್ಲರೂ ಆಡಿಕೊಂಡಾಗ, ಎಲ್ಲರ ಮೇಲೆ ಹರಿ ಹಾಯ್ದಿದ್ದ ಅದೇ ಸಚಿವರು, ಮುಂದೆ ನಾಯಿಯ ಬಾಲ ಡೊಂಕು ಎನ್ನುವಂತೆ 2024ರ ಕನ್ನಡ ರಾಜ್ಯೋತ್ಸವದಂದು  ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ, ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಅದೇ  ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಯಾರೋ ಬರೆದು ಕೊಟ್ಟಿದ್ದ ಭಾಷಣವನ್ನು ಓದಲು ಶುರು ಮಾಡುತ್ತಿದ್ದಂತೆಯೇ, ಅವರ ತಪ್ಪು ತಪ್ಪು ಉಚ್ಛಾರಣೆಗಳ ಮೂಲಕ ಮೂಲ ಭಾಷಣದ ಆಶಯವನ್ನೇ ದಿಕ್ಕು ತಪ್ಪಿಸಿದ್ದನ್ನು ಕಂಡು ಅಯ್ಯೋ ದೇವರೇ, ಈ ಕಿವಿಗಳಲ್ಲಿ ಇನ್ನೂ ಏನೇನು ಕೇಳಬೇಕಪ್ಪಾ! ಎಂದು ನೆರೆದಿದ್ದವರು ಅಂದುಕೊಂಡಿದ್ದು ಇನ್ನೂ ಹಚ್ಚ ಹಸಿರಾಗಿಯೇ ಇರುವಾಗ ಘನವೆತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಕನ್ನಡ ಬರವಣಿಗೆ ಅಚ್ಚರಿಯ ಜೊತೆ ಬೇಸರವನ್ನು ತರಿಸಿದೆ.

ಪಕ್ಷದಿಂದ ಪಕ್ಷಕ್ಕೆ ಹಾರುವ ಪಕ್ಷಾಂತರಿಯಾಗಿದ್ದರೂ ಸತತವಾಗಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಜನರು  ಶಿವರಾಜ್ ತಂಗಡಗಿಯವರನ್ನು  ಶಾಸಕರಾಗಿ ಆಯ್ಕೆ ಮಾಡುತ್ತಲೇ ಬಂದಿದ್ದಾರೆ. ಪದವಿಯನ್ನು ಪಡೆದು ಶಿಕ್ಷಿತರು ಎಂಬ ಹೆಗ್ಗಳಿಗೆ ಪಾತ್ರರಾಗಿರುವುದಲಲ್ದೇ, ಮರಿ ಖರ್ಗೆಯಂತೆ ಇವರೂ ಸಹಾ ಅನಾವಶ್ಯಕವಾಗಿ  ಎಲ್ಲಾ ಇಲಾಖೆಯಲ್ಲೂ ಮೂಗು ತೂರಿಸುವ ಚಾಳಿಯ ಮೂಲಕ ತಾವೊಬ್ಬ ಮಹಾನ್ ಪ್ರಭೂತಿ ಎಂದು ತೋರಿಸಿಕೊಳ್ಳುತ್ತಿದ್ದರು. ಮೊನ್ನೆ ಕೊಪ್ಪಳ ಜಿಲ್ಲೆಯ ಕಾರಟಗಿ ಜೆಪಿ ನಗರದ ಅಂಗವಾಡಿಗೆ ಭೇಟಿ ನೀಡಿದ್ದ  ಇದೇ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಶಿವರಾಜ್ ತಂಗಡಗಿ ಅವರು ಶಾಲೆಯಲ್ಲಿದ್ದ ಪುಟ್ಟ ಪುಟ್ಟ ಮಕ್ಕಳು ಮತ್ತು ಅವರ ಸುತ್ತ ನೆರೆದಿದ್ದ ತಮ್ಮ ಪಟಾಲಂ ಸಮ್ಮುಖದಲ್ಲಿ ಕಪ್ಪು ಹಲಗೆಯ ಮೇಲೆ  ಕನ್ನಡದಲ್ಲಿ ಎಂದು ಬರೆಯಲು ಪರದಾಡಿದ ವೀಡೀಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಆರಂಭದಲ್ಲಿ ಶಭವಾಗಲಿ ಎಂದು ಬರೆದಾಗ   ಅಕ್ಕ ಪಕ್ಕದಲ್ಲಿದ್ದ ಅವರ ಬೆಂಬಲಿಗರು ಸರ್ ಶಗೊಂದು ಕೊಂಬು ಕೊಡಿ ಸಾರ್ ಎಂದು ಹೇಳುತ್ತಿದ್ದರೆ, ಆದಾಗಲೇ ಸಚಿವನಾಗಿದ್ದೇನೆ ಎಂದು  ತಲೆಯ ಮೇಲೆ ಕೊಂಬನ್ನು ಬೆಳೆಸಿಕೊಂಡಿರುವ ಸಚಿವರಿಗೆ ಶಕಾರಕ್ಕೆ ಕೊಂಬು ಕೊಟ್ಟರೆ ಶು ಆಗುತ್ತದೆ ಎಂಬುದರ ಅರಿವಿಲ್ಲದೇ ಪರದಾಡಿ ಕಡೆಗೂ ಅವರ ಸಹಾಯಕರ ಸಹಾಯದೊಂದಿಗೆ ಶುಭವಾಗಲಿ ಎಂದು ಸರಿಯಾಗಿ ಬರೆದ ಕೂಡಲೇ ಸಚಿವರು ಐ.ಎ.ಎಸ್. ಪರೀಕ್ಷೆಯನ್ನು ಬರೆದು ಮೊದಲ ರ್ಯಾಂಕ್ ಗಳಿಸಿದರೇನೋ ಎನ್ನುವಂತೆ ಅವರ ಪಟಾಲಂ ಚಪ್ಪಾಳೆ ತಟ್ಟಿದ್ದು ಅವರ ಬೌದ್ಧಿಕ ದೀವಾಳಿತನಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಮೀಸಲು ಕ್ಷೇತ್ರದಿಂದ ಜಯಗಳಿಸಿ,  ಅಪ್ಪನ ಹೆಸರಿನಲ್ಲಿ ಅಧಿಕಾರವನ್ನು ಪಡೆದು, ಸದಾಕಾಲವೂ ತನ್ನ ಇಲಾಖೆಯ ಹೊರತಾಗಿ ಉಳಿದೆಲ್ಲಾ ಇಲಾಖೆಯ ವಿಚಾರದಲ್ಲಿ ಮೂಗು ತೂರಿಸುತ್ತಾ ದ್ವಿತೀಯ ಪಿಯೂಸಿ ಪಾಸಾಗದೇ ಹೋದರೂ,  ಸಿದ್ದರಾಮಯ್ಯನವರ  ಸರ್ಕಾರದಲ್ಲಿ ಸೂಪರ್ ಸಿ.ಎಂ. ಆಗಿರುವ ಪ್ರಿಯಾಂಕ್ ಖರ್ಗೆ, ಅವರ  ಅಧಿನಾಯಕ ರಾಹುಲ್ ಗಾಂಧಿಯಂತೆ ಆಗ್ಗಿಂದ್ದಾಗೆ ಟ್ರೋಲಿಗರಿಗೆ ರಸದೌತಣ ನೀಡದೇ ಹೋದಲ್ಲಿ ತಿಂದ ಅನ್ನ  ಪಚನವಾಗುವುದಿಲ್ಲ ಮತ್ತು ರಾತ್ರಿ ಸರಿಯಾಗಿ ನಿದ್ದೇ ಬರುವುದಿಲ್ಲ ಎಂದರೂ ತಪ್ಪಾಗದು.

ಸದಾಕಾಲವೂ ಹಲ್ಲುಗಳನ್ನು ಕಡಿಯುತ್ತಾ, ಹೇಳಿದ್ದನ್ನೇ ಪುನರಾವರ್ತಿಸುತ್ತಾ, ಕೈ ಕಾಲುಗಳನ್ನು ವಿಚಿತ್ರವಾಗಿ ಅಲ್ಲಾಡಿಸುತ್ತಾ ಮಾತನಾಡುವ ಸಚಿವ ಝಮೀರ್ ಅಹಮದ್  ಮಾತನಾಡುವ ಭಾಷೆ, ಕನ್ನಡವೋ ಇಲ್ಲವೇ ಉರ್ದುವೋ ಎನ್ನುವುದು ಸಾಕ್ಷಾತ್ ತಾಯಿ ಭುವನೇಶ್ವರಿ ಇಲ್ಲವೇ ಅಲ್ಲಾನಿಗೂ ಅರ್ಥವಾಗದು.

ಇನ್ನು ಕಲಘಟಕಿ ಕ್ಷೇತ್ರದಿಂದ ಆರಿಸಿ ಬಂದಿರುವ ಮತ್ತು ಪ್ರಸ್ತುತ ಕಾರ್ಮಿಕ ಮಾಹಿತಿ ಮತ್ತು ಮೂಲಸೌಕರ್ಯ ಇಲಾಖೆಯ ಸಚಿವರಾಗಿರುವ ಸನ್ಮಾನ್ಯ ಸಂತೋಷ್ ಎಸ್ ಲಾಡ್ ಅವರು ಬಾಯಿಯಿಂದ ಉದುರುವ ನುಡಿಮತ್ತುಗಳಲ್ಲಿ ಕನ್ನಡ ಪದಗಳನ್ನು ಹುಡುಕುವುದೇ ಬಹಳ ಕಷ್ಟಕರ ಎಂದರೂ ತಪ್ಪಾಗದು. ವಾಕ್ಯಗಳ ಅಂತ್ಯದಲ್ಲಿ ಬಳಸುವ  ಕ್ರಿಯಾಪದಗಳ ಹೊರತಾಗಿ ಉಳಿದೆಲ್ಲಾ ಪದಗಳು ಸಂಪೂರ್ಣವಾಗಿ ಆಂಗ್ಲಮಯವಾಗಿದ್ದು, ಇವರು ಕರ್ನಾಟಕ ರಾಜ್ಯದ ಸಚಿವರೋ ಇಲ್ಲವೇ ಬ್ರಿಟನ್ ದೇಶದ ಸಚಿವರೋ ಎನ್ನುವಂತಹ ಪ್ರಶ್ನೆ ಅನೇಕರಲ್ಲಿ ಮೂಡಿದೆ.

ಮಂತ್ರಿಗಳನ್ನು ಬಿಡಿ, ನಾಗರೀಕ ಸೇವಾ ಇಲಾಖೆಯ ವತಿಯಿಂದ ನಡೆಸಲಾಗುವ  ಕೆ.ಪಿ.ಎ.ಸ್ಸಿ ಪ್ರಶ್ನೆ ಪತ್ರಿಕೆಗಳಲ್ಲೂ ಪದೇ ಪದೆ ಕನ್ನಡ ವ್ಯಾಕರಣ ತಪ್ಪಾಗಿ ಮುದ್ರಿಸುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.  ಪ್ರಶ್ನೆ ಪತ್ರಿಕೆಗಳಲ್ಲಿ ಭಾರೀ ಪ್ರಮಾಣದ ತಪ್ಪುಗಳು ಕಂಡ ಕಾರಣ, ಮೊದಲ ಬಾರಿಗೆ ನಡೆಸಿದ ಪರೀಕ್ಷೆಯನ್ನು ರದ್ದು ಗೊಳಿಸಿ ಮತ್ತೆ ಎರಡನೇ ಸಲಾ ನಡೆಸಿದ ಪ್ರಶ್ನೆ ಪತ್ರಿಕೆಗಳಲ್ಲಿಯೂ ವ್ಯಾಕರಣ ದೋಷ ಕಂಡು ಬಂದಿದ್ದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.

ಬಿಟ್ಟಿ ಭಾಗ್ಯಗಳನ್ನು ಕೊಟ್ಟರೆ ಸಾಕು ಹಾಕಿದ ಬಿಸ್ಕತ್ತನ್ನು ತಿಂದು ಬಿದ್ದುಕೊಳ್ಳುವ ಹಾಗೆ ಕನ್ನಡಿಗರು ಬಿದ್ದುಕೊಳ್ಳುತ್ತಾರೆ. ತಾವು  ಏನು ಮಾಡಿದರೂ ಸಹಿಸಿಕೊಳ್ಳುತ್ತಾರೆ ಎಂಬು ಧೋರಣೆಯನ್ನು ಈ ಸಿದ್ದರಾಮಯ್ಯನವರ ಸರ್ಕಾರ ತಳೆದಿದೆ ಎಂದರೂ ಅತಿಶಯವಾಗದು. ಇದಕ್ಕೆ ಪೂರಕ ಎನ್ನುವಂತೆ ಶಾಲೆಗಳ ನವೀಕರಣ ಮತ್ತು ಉನ್ನತೀಕರಣದ ಹೆಸರಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಿ ಆ ಜಾಗದಲ್ಲಿ ಖಾಸಗಿ ಒಡೆತನದ ಹೈಟೆಕ್ ಶಾಲೆಗಳನ್ನು ತೆರೆಯಲು ಮುಂದಾಗಿರುವ ಈ ಸರ್ಕಾರ ಕರ್ನಾತಕದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಗುಡಿಸಿ ಸಾರಿಸಿ ರಂಗೋಲಿ ಇಡಲು ಹೊರಟಿದೆ ಎಂದು ಜನರು ಆಡಿಕೊಳ್ಳುತ್ತಿರುವುದರಲ್ಲಿ ಸತ್ಯವಿದೆ ಎಂದೆನಿಸುತ್ತಿದೆ.

ಅನಕ್ಷರಸ್ಥರ ದೊಡ್ಡಿಯಾಗಿರುವ ಈ  ಕಾಂಗ್ರೆಸ್ ಸರ್ಕಾರದ ಸಚಿವರಿಂದಾಗಿ ಕನ್ನಡದ ಅಸ್ಮಿತೆಗೆ ಧಕ್ಕೆ ಬಂದಿದ್ದು, ಇಂತಹ ಮಹಾನ್‌ ಮೇಧಾವಿಗಳಾದ ಶಿಕ್ಷಣ ಸಚಿವರು ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಪಡೆದ ಕರುನಾಡು ಪಾವನವಾಗಿದೆ. ಹೋದ ಬಂದ ಕಡೆಯಲೆಲ್ಲಾ, ಕನ್ನಡ ಬಳಸಿ ಕನ್ನಡ ಉಳಿಸಿ,  ಅನ್ಯ ಭಾಷೀಯರಿಗೆ ಕನ್ನಡ ಕಲಿಸಿ ಎಂದು ಹೇಳುವ ಮುಖ್ಯಮಂತ್ರಿಗಳು ಅನ್ಯರಿಗೆ ಕನ್ನಡ ಕಲಿಸುವುದು ಬಿಡಿ, ಮೊದಲು ವಿಧಾನ ಸೌಧದಲ್ಲಿ ರಾತ್ರಿ ಶಾಲೆಯನ್ನು ತೆರೆದು, ತಮ್ಮದೇ ಮಂತ್ರಿ ಮಂಡಲದ ಈ ಘನವೆತ್ತ ಮಂತ್ರಿಗಳಿಗೆ  ಸರಿಯಾಗಿ ಕನ್ನಡವನ್ನು ಓದಲು, ಬರೆಯಲು ಮತ್ತು ಮಾತನಾಡಲು ಕಲಿಸಿದರೆ ಸಾಕು, ಕರ್ನಾಟಕದಲ್ಲಿ ಕನ್ನಡ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಮಂಜುಶ್ರೀ

Leave a comment