ನಟ, ನಿರ್ದೇಶಕ, ಶಿಕ್ಷಕ ಶ್ರೀ ನಂದಕುಮಾರ ಅನ್ನಕ್ಕನವರ್

ಇಂದಿನ ಕಾಲದ ಶಾಲಾ ಕಾಲೇಜುಗಳಿಗೆ ಹೋಗುವ ಹುಡುಗ/ಹುಡುಗಿಯರಿಗೆ ನಿಮ್ಮ ಜೀವನದ ಗುರಿ ಏನು? ಎಂದು ಕೇಳಿದರೆ,  ಥಟ್ ಅಂತಾ!  ಇಂಜೀನಿಯರ್ ಇಲ್ಲವೇ  ಡಾಕ್ಟರ್  ಆಗಬೇಕು. ಇಲ್ಲಿ ಚೆನ್ನಾಗಿ ಓದಿದ ನಂತರ ವಿದೇಶಕ್ಕೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ನಂತರ ಅಲ್ಲಿಯೇ ಐಶಾರಾಮಿ ಜೀವನ ನಡೆಸ ಬೇಕು. ತಿಂಗಳು ತಿಂಗಳು ಅಪ್ಪಾ ಅಮ್ಮಾರ ಜೀವನಕ್ಕೆ  ಅಲ್ವ ಸ್ವಲ್ಪ ಹಣನ್ನು ಕಳುಹಿಸುತ್ತಾ, ವಾರಕ್ಕೋ ಇಲ್ಲವೇ ಎರಡು ವಾರಕ್ಕೊಮ್ಮೆ ವಾಟ್ಸಾಪ್ ಕಾಲ್ ಮಾಡಿ ಅಪ್ಪಾ ಅಮ್ಮಾ ತಮ್ಮ ತಂಗಿಯರೊಂದಿಗೆ ಮಾತನಾಡಿಸುತ್ತಾ, ವರ್ಷಕ್ಕೋ ಇಲ್ಲವೇ  ಎರಡು ವರ್ಷಕ್ಕೂಮ್ಮೆ 15-20 ದಿನಗಳ ಕಾಲ ಭಾರತಕ್ಕೆ ಬಂದು ಇಲ್ಲಿನ ತೀರ್ಥಕ್ಷೇತ್ರಗಳೆಲ್ಲಾ ಸುತ್ತಾಡಿ,  ಸುಗ್ರಾಸ ಭೋಜನ ಸವಿದು ಮತ್ತೆ ವಿದೇಶಕ್ಕೆ ಮರಳ ಬೇಕು ಎನ್ನುವವರೇ ಹೆಚ್ಚಾಗಿರುವಾಗ, ಇದಕ್ಕೆಲ್ಲಾ ಅಪರೂಪ ಎನ್ನುವಂತೆ ಇಲ್ಲೊಬ್ಬ ತರುಣ,  ನಾನು ಡಾಕ್ಟರ್ ಬದಲು ಆಕ್ಟರ್ ಆಗುತ್ತೇನೆ. ತನ್ನ ನಟನೆ/ನಿರ್ದೇಶನದ ಮೂಲಕ ಸನಾತನ ಧರ್ಮದ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ತನ್ನ ನಾಟಕಗಳ ಪಾತ್ರಗಳ ಮೂಲಕ ಇಂದಿನ ಯುವ ಜನತೆಗೆ ಪರಿಚಯಿಸುತ್ತಾ, ತಾಯಿ ಭಾರತಿಯ ಪಾದ ಪದ್ಮಗಳಿಗೆ ತನ್ನ ಜೀವನವನ್ನೇ ಮೀಸಲಿಟ್ಟಿರುವ  ನಟ, ನಿರ್ದೇಶಕ, ಗಾಯಕ, ರಂಗ ಕರ್ಮಿ, ಕವಿ, ಸಂಭಾಷಣಾಕಾರ ಹೀಗೆ ಸಾರಸ್ವತ  ಲೋಕ ಮತ್ತು ಕಲಾ ಜಗತ್ತಿನಲ್ಲಿರುವ ಬಹುತೇಕ ಎಲ್ಲಾ ಪ್ರಾಕಾರಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಎಲೆ ಮರೆ ಕಾಯಿಯಂತೆಯೇ ಪ್ರಸ್ತುತ ರೇವಾ ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ಕಲಾ ವಿಭಾಗದಲ್ಲಿ ಕಿರಿಯ ಉಪನ್ಯಾಸಕರಾಗಿ ನೂರಾರು ವಿದ್ಯಾರ್ಥಿಗಳಿಗೆ ರಂಗಕಲೆಯನ್ನು ಕಲಿಸುತ್ತಿರುವ  ಶ್ರೀ ನಂದಕುಮಾರ ಅನ್ನಕ್ಕನವರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು  ಸೆಪ್ಟೆಂಬರ್-5 ಶಿಕ್ಷಕರ ದಿನಾಚರಣೆಯಂದು ತಿಳಿಯೋಣ ಬನ್ನಿ.

ನಂದಕುಮಾರ್ ಮೂಲತಃ ಅಂದಿನ ಬಳ್ಳಾರಿ ಜಿಲ್ಲೆ ಇಂದಿನ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ಸಂಪ್ರದಾಯಸ್ಥ ಕುಟುಂಬದವರಾಗಿದ್ದು, ಹಾವೇರಿಯಲ್ಲಿ ಜನಿಸಿದರು. ಅವರ ತಂದೆಯ ಕಡೆಯಲ್ಲಿ ಬಹುತೇಕರು ದೇಶ ಸೇವೆಯೇ ಈಶ ಸೇವೆ ಎಂದು ನಂಬಿ ಸೇನೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದ ಪರಿಣಾಮ ನಂದ ಕುಮಾರರಿಗೆ ದೇಶ ಭಕ್ತಿ ಎನ್ನುವುದು ರಕ್ತಗತವಾಗಿ ಬಂದಿತ್ತು. ಇನ್ನು ತಾಯಿ  ಹೆಸರಿಗೆ ತಕ್ಕಂತೆಯೇ ಅನ್ನಪೂರ್ಣಳೇ ಆದರೂ ಎಲ್ಲರ ಪ್ರೀತಿಯ ಅನ್ನಕ್ಕರಿಗೆ ಲಲಿತಕಲೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ.  ಹಾಗಾಗಿ ಹೇಗೆ ಶಿವಾಜಿ ಮಹಾರಾಜರಿಗೆ ಬಾಲ್ಯಂದಿದಲೇ ಆಕೆ ತಾಯಿ ಜೀಜಾಬಾಯಿ ನಮ್ಮ ದೇಶದ ವೀರಕಲಿಗಳ ಸಾಹಸಗಳನ್ನು ಹೇಳಿ ಶಿವಾಜಿಯನ್ನು ಸಮರ್ಥ ನಾಯಕನ್ನಾಗಿಸಿದಳೋ ಹಾಗೆಯೇ ಅನ್ನಕ್ಕಳೂ ಸಹಾ ತನ್ನ ನಂದ ಕುಮಾರನಿಗೆ ಬಾಲ್ಯದಿಂದಲೇ ದೇಶ ಭಕ್ತರ ಸಾಹಸಗಾಥೆಗಳ ಜೊತೆಯಲ್ಲೇ ಕುಮಾರವ್ಯಾಸ, ಪಂಪ, ರನ್ನರಷ್ಟೇ ಅಲ್ಲದೇ ಆಧುನಿಕ ಕನ್ನಡದ ಸಾಹಿತ್ಯರತ್ನಗಳನ್ನು ಪರಿಚಯಿಸುವ ಮೂಲಕ ನಂದ ಕುಮಾರನಿಗೆ ಲಲಿತಕಲೆ ಮತ್ತು ಸಾಹಿತ್ಯದಲ್ಲಿ  ಬಾಲ್ಯದಿಂದಲೇ ಆಸಕ್ತಿ ಮೂಡಿಸುವಂತೆ ಮಾಡಿದಳು.

ಮುಂದೆ  ರೋಗಿ ಬಯಸಿದ್ದೂ ಹಾಲೂ ಅನ್ನಾ, ವೈದ್ಯರು ಹೇಳಿದ್ದೂ ಹಾಲೂ ಅನ್ನಾ ಎನ್ನುವಂತೆ, ಅವರ ರಂಗಭೂಮಿಯ ಆಸಕ್ತಿಗೆ ನೀರು ಗೊಬ್ಬರವನ್ನು ಹಾಕಿ ಬೆಳೆಸಿದವರೇ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಂಗಭೂಮಿ ಕಲಾವಿದರಾದ ಅಜ್ಜನವರಾದ (ಅಮ್ಮನ ಅಪ್ಪ) ದಿವಂಗತ ಶ್ರಿ ಹಣ್ಣೀ ವೀರಭದ್ರಪ್ಪನವರು. ಅವರ ಗರಡಿಯಲ್ಲಿ ಪಳಗುತ್ತಲೇ, ರಾಣೇಬೆನ್ನೂರಿನ ಕುರುಬಗೇರಿಯ ಈಶ್ವರ ದೇವಸ್ಥಾನದ ಅಂಗಳ, ಹಡಗಲಿಯ ಗವಿಸಿದ್ದೇಶ್ವರ ಮಠದ ಸಾಂಗತ್ಯ, ಅಕ್ಕೀಪೇಟೆಯ ಕೊಟ್ಟೂರೇಶ್ವರ ದೇವಸ್ಥಾನದ ಕಟ್ಟೆ, ತುಂಗಭದ್ರೆ ತಟದಲ್ಲಿರುವ ಮದಲಗಟ್ಟಿಯ ಆಂಜನೇಯ ಸ್ವಾಮಿ ದೇವಸ್ಥಾನ ಮತ್ತು ಶೃಂಗೇರಿಯ ಶಾರದಾ ಪೀಠಗಳ ಸಂಪರ್ಕಕ್ಕೆ ಬಂದು ಲೌಕಿಕದ ಜೊತೆ ಆಧ್ಯಾತ್ಮದ ಬಗ್ಗೆಯೂ  ಒಲವನ್ನು ಬೆಳಸಿಕೊಂಡು ಲೌಕಿಕ ಮತ್ತು ಆಧ್ಯಾತ್ಮದ ನಡುವಿನ ತೌಲನಾತ್ಮಕ ಶಕ್ತಿಯನ್ನು ಬೆಳಸಿಕೊಂಡಾತ ನಂದಕುಮಾರ.

ಇನ್ನು ಬಳ್ಳಾರಿ ಜಿಲ್ಲೆಯ ಅಕ್ಕ ಪಕ್ಕದಲ್ಲೇ ಹಂಪೆ, ಕಿಷ್ಕಿಂದೆ,  ಅಂಜನಾದ್ರಿ ಪರ್ವತಗಳ ಪ್ರಭಾವದಿಂದಲೋ ಏನೋ ನಂದ ಕುಮಾರನಿಗೆ ಬಾಲ್ಯದಿಂದಲೂ ಆಂಜನೇಯನೇ ನೆಚ್ಚಿನ ದೇವರು. ಹನುಮಂತನ ಪ್ರಭಾವದಿಂದಾಗಿಯೇ ಚಿಕ್ಕವಯಸ್ಸಿನಿಂದಲೂ ಎಂತಹ ಸಂಧರ್ಭದಲ್ಲೂ ಯಾವುದೇ ಸಮಸ್ಯೆಗಳಿಗೆ ಹೆದರದೇ ಮುನ್ನುಗ್ಗಿ ಛಲದಂಕ ಮಲ್ಲನಂತೆ ಹಿಡಿದ ಕಾರ್ಯವನ್ನು ಯಶಸ್ವಿಗೊಳಿಸಬಲ್ಲಂತಹ ಧೈರ್ಯವಂತ. ಹಾಗಾಗಿಯೇ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರೂ, ತಾಯಿಯ ಆಸರೆಯಲ್ಲಿಯೇ ಅದ್ಬುತವಾಗಿ ತನ್ನ ಜೀವನವನ್ನು ರೂಪಿಸಿ ಕೊಂಡಾತ ನಂದಕುಮಾರ.

ಚಿಕ್ಕವಯಸ್ಸಿನಿಂದಲೂ ಕಲೆ  ಮತ್ತು ಸಾಹಿತ್ಯಾಸಕ್ತಿ  ಇದ್ದ ಪರಿಣಾಮ ಶಾಲಾ ದಿನಗಳಿಂದಲೂ ಸಣ್ಣ ಸಣ್ಣ ಕಥೆ ಕವನಗಳನ್ನು ರಚಿಸಿ ತಮ್ಮ ಶಿಕ್ಷಕರಿಗೆ ತೋರಿಸಿ ಅವರಿಂದ ಶಭಾಶ್ ಗಿರಿಯನ್ನು ಪಡೆಯುತ್ತಿದ್ದದ್ದಲ್ಲದೇ, ಯಾವುದೇ ಚರ್ಚಾ ಸ್ಪರ್ಧೆ, ಪ್ರಭಂಧ, ಏಕ ಪಾತ್ರಾಭಿನಯ, ನಾಟಕಗಳಲ್ಲಿ  ನಂದ ಕುಮಾರ್ ಭಾಗವಹಿಸಿದನೆಂದರೆ ಮೊದಲ ಬಹುಮಾನ ಕಟ್ಟಿಟ್ಟ ಬುತ್ತಿ. ಇನ್ನು ಶಾಲಾ ವಾರ್ಷಿಕೋತ್ಸವ ಮತ್ತು ಅಂತರ್ ಶಾಲಾ/ಕಾಲೇಜು ನಾಟಕ ಸ್ಪರ್ಧೆಗಳಲ್ಲಿ ನಂದಕುಮಾರನೇ ಅಗ್ರೇಸರ. ಹೀಗೆ ರಂಗಭೂಮಿಯ ಚಟುವಟಿಕೆಗಳ ಜೊತೆ ಜೊತೆಯಲ್ಲಿಯೇ ಆಂಜನೇಯನಂತೆ ದೇಹ ದಂಡಿಸುವುದನ್ನು ರೂಡಿಸಿಕೊಂಡು ವಿವಿಧ ಸಮರ ಕಲೆಗಳನ್ನೂ ಅಭ್ಯಾಸ ಮಾಡಿ  ಅದರಲ್ಲೂ ತಕ್ಕ ಮಟ್ಟಿಗೆ ಸಾಧನೆ ಗೈದಾತ ನಂದಕುಮಾರ.

ಜಿ ಬಿ ಆರ್ ಕಾಲೇಜಿನಲ್ಲಿ ಕಲಿಯುತ್ತಲೇ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಲ್ಲದೇ ಅಲ್ಲೇ ಎನ್ ಎಸ್ ಎಸ್ ಮತ್ತು ಎನ್ ಸಿ ಸಿಗೆ ಸೇರಿದ್ದು ಅವರ ಜೀವನದಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದಿತು.. ಹೇಳೀ ಕೇಳಿ ಸೈನ್ಯದ ಹಿನ್ನಲೆಯಿಂದ ಬೆಳೆದು ಬಂದಿದ್ದ ಕಾರಣ, ಶಾಲಾ ದಿನಗಳಿಂದಲೂ NCCಗೆ ಸೇರಿಕೊಂಡು ಶಿಸ್ತನ್ನು ರೂಢಿಸಿಕೊಂಡಿದ್ದ ನಂದ ಕುಮಾರ,  ಪ್ರತಿಯೊಬ್ಬ NCC cadetನ ಅಂತಿಮ ಗುರಿಯಾದ ದೆಹಲಿಯ ಕೆಂಪುಕೊಟೆಯ ಎದುರಿಗಿರುವ ಕರ್ತವ್ಯ ಪಥದಲ್ಲಿ ಜನವರಿ ೨೬ರ ಗಣರಾಜ್ಯೋತ್ಸವದ   RD Parade ನಲ್ಲಿಯೂ ಸಹಾ ಕರ್ನಾಟಕದ ರಾಜ್ಯವನ್ನು ಪ್ರತಿನಿಧಿಸಿ ಅದರಲ್ಲೂ ಸೈ ಎನಿಸಿಕೊಂಡಾತ ನಂದಕುಮಾರ.

ಹೂವಿನ ಹಡಗಲಿಯ ದೇಸಿ ಕನ್ನಡವನ್ನೇ ತಮ್ಮ ಆತ್ಮದ ಭಾಷೆಯನ್ನಾಗಿಸಿಕೊಂಡು ಚಿಕ್ಕವಯಸ್ಸಿನಲ್ಲಿಯೇ ಹೂವಿನ ಹಡಗಲಿಯ ಹೆಸರಾಂತ ರಂಗಸಂಸ್ಥೆಯಾದ ರಂಗಭಾರತಿಯ ಶಿಬಿರಗಳಲ್ಲಿ ಕುಣಿಯುತ್ತ ರಂಗಪ್ರಯೋಗಳಲ್ಲಿ ನಟಿಸುತ್ತಿದ್ದ ನಂದ ಕುಮಾರ ಕೇವಲ ಇಂಜೀನಿಯರ್/ ಡಾಕ್ಟರ್ ಆದರೆ ತನ್ನ ಜೀವನ ಬರೀ ನಿಂತ ನೀರಾಗುತ್ತದೆ. ಅದೇ ಆಕ್ಟರ್ ಆದಲ್ಲಿ  ಡಾಕ್ಟರ್, ಇಂಜೀನಿಯರ್, ಲಾಯರ್, ಇನ್ಸ್ಪೆಕ್ಟರ್, ಕಂಡಕ್ಟರ್, ಅಷ್ಟೇ ಏಕೆ? ವೀರ ಸೇನಾನಿ, ಮಂತ್ರಿ, ರಾಜ, ಮಹಾರಾಜನಾಗಿ ಸದಾ ಕಾಲವೂ ಮಿಂಚುವಂತಹ ರಂಗಕರ್ಮಿ ಆಗಬೇಕು ಎಂದು ನಿರ್ಧರಿಸಿ  2017ರ ಸಾಲಿನಲ್ಲಿ ನೀನಾಸಂ ರಂಗ ಶಿಕ್ಷಣಕ್ಕೆ ಆಯ್ಕೆಯಾಗಿರುವಾಗಲೇ ಅವರ ತಾಯಿಯವರು ಅಕಾಲಿಕವಾಗಿ ಮರಣ ಹೊಂದಿದರೂ, ಆ ದುಃಖವನ್ನು ಸಹಿಸಿಕೊಂಡು ನಿನಾಸಂಗೆ ಸೇರಿಕೊಂಡು ಅಲ್ಲಿ ಉನ್ನತ ಶ್ರೇಣೀಯಲ್ಲಿ ಪದವಿಯನ್ನು ಪಡೆದುಕೊಂಡ ನಂತರ ಸುಮಾರು ಎರಡು ವರ್ಷಗಳ ಕಾಲ ನೀನಾಸಂ ತಿರುಗಾಟದಲ್ಲಿ ನಟಿಸಿ, ರಂಗಭೂಮಿಯ ಉನ್ನತ ಅಭ್ಯಾಸಕ್ಕಾಗಿ ದೂರದ ಮುಂಬೈನಲ್ಲಿನ ಡ್ರಾಮಾ ಸ್ಕೂಲ್ ಮುಂಬೈಗೆ ಆಯ್ಕೆಯಾದರೂ ಅದೇ ಸಮಯದಲ್ಲಿ ಅವರ ಆರ್ಥಿಕ ಪರಿಸ್ಥಿತಿಯಿಂದಾಗಿ  ವಿದ್ಯಾಭ್ಯಾಸ ಮುಂದುವರೆಸಲಾಗದೇ ಚಿಂತಿಸುತ್ತಿರುವಾಗ ,ಚಿಂತ್ಯಾಕೆ ಮಾಡುತಿದ್ದಿ ಚಿನ್ಮಯನಿದ್ದಾನೆ, ಚಿಂತಾರತ್ನವೆಂಬೊ ಅನಂತನಿದ್ದಾನೇ. ಎನ್ನುವಂತೆ ಸಕಾಲಿಕವಾಗಿ ನೀನಾಸಂ ಪ್ರತಿಷ್ಠಾನದ  ಬಿ.ಸಿ.ಎಸ್ ಐಯ್ಯಂಗಾರ್ ಫೆಲೋಶಿಪ್, ಟಾಟಾ ಟ್ರಸ್ಟ್, ಇನ್ಲ್ಯಾಕ್ಸ್ ಶಿವದೇಶೀನಿ ಮತ್ತು ಡಾ ಶಂಕರ್ ಶೇಷ್ ಫೌಂಡೇಶನ್ ನಿಂದ ಸ್ಕಾಲರ್ಶಿಪ್ ಗಳು ದೊರೆತು ಅವುಗಳ ಸಹಾಯದಿಂದ ಥಿಯೇಟರ್ ಮೇಕಿಂಗ್ ಅಂಡ್ ಆಕ್ಟಿಂಗ್ ಕುರಿತ  ಸ್ನಾತಕೋತ್ತರ ಡಿಪ್ಲೊಮಾ ಪದವಿಯನ್ನು ಪಡೆಯಲು ಯಶಸ್ವಿಯಾದಾತ ನಂದಕುಮಾರ.

ಇನ್ನು ನಟನಾಗಿ ಶಕ್ತಿಭದ್ರ ವಿರಚಿತ ಆಶ್ಚರ್ಯ ಚೂಡಾಮಣಿಯ ರಾವಣ ಪಾತ್ರ, ಭಾಸ ವಿರಚಿತ ಮಧ್ಯಮ ವ್ಯಾಯೋಗದ ಮಧ್ಯಮ ಪಾಂಡವ ಭಿಮಸೇನ ಪಾತ್ರ, ನೀನಾಸಂ ಅಭ್ಯಾಸ ಮಾಲಿಕೆಯಲ್ಲಿ  ಹಿಡಿಂಬಾ ವಿವಾಹ ಮತ್ತು ಅಂಗಾರಪರ್ಣ ಕಾಳಗ ಯಕ್ಷಗಾನ ಪ್ರಸಂಗದಲ್ಲಿ ಧರ್ಮರಾಯನಾಗಿ ಅಭಿನಯಿಸಿದ್ದಲ್ಲದೇ,  ಮೈಸೂರು ರಂಗಾಯಣ ಪ್ರಸ್ತುತ ಪಡಿಸಿದ ಎಸ್. ಎಲ್. ಭೈರಪ್ಪನವರ ಜನಪ್ರಿಯ ನಾಟಕವಾದ ಪರ್ವ ಮಹಾ ರಂಗಪ್ರಯೋಗದಲ್ಲಿ ಸಂಜಯ ಮತ್ತು ದುರ್ಯೋಧನನಾಗಿ ನಟಿಸಿದ್ದಾರೆ, ಕೇವಲ ಪೌರಾಣಿಕ ಪಾತ್ರಗಳಷ್ಟೇ ಅಲ್ಲದೇ,  ನೀನಾಸಂ ಅಭ್ಯಾಸ ಮಾಲಿಕೆಯಲ್ಲಿ ನಟಿಸಿದ ಸಂಸ ವಿರಚಿತ ವಿಜಯನಾರಸಿಂಹ ನಾಟಕದಲ್ಲಿ ಶ್ರೀ ರಣಧೀರ ಕಂಠೀರವ ನರಸರಾಜ ಒಡೆಯರ್ ಪಾತ್ರ, ನೀನಾಸಂ ತಿರುಗಾಟದ ಸೂ ಬಿಟ್ರೆ ಬಣ್ಣ ಬ ಬಿಟ್ರೆ ಸುಣ್ಣ ನಾಟಕದ ಸುಬ್ಬಣ್ಣನ ಪಾತ್ರ, ಅಕ್ಷರ ಕೆ ವಿ ಅವರು ರಚಿಸಿದ ಸೇತುಬಂಧನ ನಾಟಕದಲ್ಲಿ ಮಲೆನಾಡ ರೈತ ಕೃಷ್ಣಮೂರ್ತಿ ಶರ್ಮನಾಗಿ ನಟಿಸಿದ್ದಾರೆ ನಂದಕುಮಾರ.

ಇನ್ನು ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಒಲವಿದ್ದ ಕಾರಣದಿಂದ ಮುಂದೆ ಲೇಖಕರಾದ  ಶ್ರೀ ಗೋಪಾಲಕೃಷ್ಣ ಕುಂಟಿನಿ ಹಾಗೂ ಶ್ರೀ ಗಿರೀಶ್ (ಜೋಗಿ) ಅವರು ಕಟ್ಟಿರುವ ಕಥೆಕೂಟದ ಸದಸ್ಯರಾಗಿರುವುದಲ್ಲದೇ, ಜೋಗಿಯವರ ಸಂಪಾದಕತ್ವದಲ್ಲಿ ಪ್ರಕಾಶ್ ಕಂಬತ್ತಳ್ಳಿಯವರ  ಅಂಕಿತ ಪ್ರತಿಭೆ ಮಾಲಿಕೆಯಲ್ಲಿ  ಅವರ ಮೊದಲ ಕಥಾಸಂಕಲನ ಜಾಲಿಮುಳ್ಳು ಕೃತಿ ಪ್ರಕಟವಾಗಿದೆ. ಇನ್ನು ಸ್ವಪ್ನ ಬುಕ್ ಹೌಸ್ನಿಂದ 67 ನೇ ಕನ್ನಡ ರಾಜ್ಯೋತ್ಸವದಲ್ಲಿ ಎರಡನೇ ಕಥಾಸಂಕಲನ ಬಿಳೆ ದಾಸ್ವಾಳ ಕೃತಿಯೂ ಸಹಾ ಪ್ರಕಟವಾಗಿದೆ.

ಆಡು ಮುಟ್ಟದ ಸೊಪ್ಪಿಲ್ಲಾ ನಂದ ಕುಮಾರ ಕೈಯ್ಯಾಡಿಸದ ಕ್ಷೇತ್ರವಿಲ್ಲಾ! ಎನ್ನುವಂತೆ ಕೇವಲ ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸದೇ, ಜಾಹಿರಾತು ಕ್ಷೇತ್ರದಲ್ಲಿ ಸಕ್ರೀಯರಾಗಿ ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದು ಅದರಲ್ಲಿ  ಜಾರ್ ಕಂಪನಿಯ ಜಾಹಿರಾತು ಅವರಿಗೆ ಹೆಚ್ಚಿನ ಮನ್ನಣೆ ದೊರೆತಿದೆ. ಪ್ರಸ್ತುತ ಶಿವರಾಜ್ ಕುಮಾರ್  ಅವರ ಪತ್ನಿ ಗೀತಾ ಪಿಕ್ಚರ್ಸ್ ಅವರು ನಿರ್ಮಿಸುತ್ತಿರುವ, ಸಂದೀಪ್ ಸುಂಕದ್ ನಿರ್ದೇಶಿಸುತ್ತಿರುವ ಪಬ್ಬಾರ್ ಸಿನಿಮಾದಲ್ಲಿ ಸಬ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಕನ್ನಡ ಸಿನಿಮಾ ರಂಗಕ್ಕೂ ಪಾದಾರ್ಪಣೆ ಮಾಡುತ್ತಿದ್ದಾರೆ ನಂದಕುಮಾರ.

ಸಾಮಾನ್ಯವಾಗಿ ರಂಗಭೂಮಿಯಲ್ಲಿ ತೊಡಗಿಸಿ ಕೊಂಡಿರುವವರು, ಒಂದೋ ಕನ್ನಡ ಇಲ್ಲವೇ ಆಂಗ್ಲ ಭಾಷೆಯಲ್ಲಿ ಪ್ರಾಭಲ್ಯವನ್ನು ಪಡೆದು ಅದರಲ್ಲಿಯೇ ತಮ್ಮ ಸಾಧನೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಅದರೆ ಇದಕ್ಕೆ ಅಪರೂಪ ಎನ್ನುವಂತೆ ನಂದ ಕುಮಾರರಿಗೆ ಕನ್ನಡ, ಇಂಗ್ಲೀಷ್ ಮತ್ತು ಹಿಂದಿಯ ಭಾಷೆಯ ಮೇಲೆ  ಉತ್ತಮ ಹಿಡಿತವಿದ್ದು, ಸಂಸ್ಕೃತ ಭಾಷೆಯಲ್ಲಿಯೂ ತಕ್ಕ ಮಟ್ಟಿನ ಅಭ್ಯಾಸ ನಡೆಸಿರುವ ಕಾರಣ  ಈ ಎಲ್ಲಾ ಭಾಷೆಗಳ ನಾಟಕಗಳನ್ನೂ ಬಾಳೆ ಹಣ್ಣು ಸುಲಿಯುವಷ್ಟು ಸುಲಲಿತವಾಗಿ  ಹಾವ ಭಾವ ಪ್ರದರ್ಶಿಸುತ್ತಾ, ಪಾತ್ರ ಮತ್ತು ಸನ್ನಿವೇಶಕ್ಕೆ ತಕ್ಕಂತೆ ತಮ್ಮ ತಮ್ಮ ಧ್ವನಿಯ ಏರಿಳಿತ ಮಾಡುತ್ತಾ ಸಹಜ ಮತ್ತು ಅಷ್ಟೇ ಸುಂದರವಾಗಿ ನಟಿಸುವ ಮತ್ತು ನಿರ್ದೇಶಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ನಂದಕುಮಾರ.

ಚಿಕ್ಕಮಗಳೂರು ಮೂಲದ, ನಿನಾಸಂ ಕಲಾವಿದೆಯಾಗಿ ಚಿಕ್ಕಮಗಳೂರಿನಲ್ಲಿಯೇ ತೆರೆಯ ಸಿರಿ ಕಲಾ ಪ್ರತಿಷ್ಠಾನ ಅಂತ ರಂಗ ತಂಡ ಕಟ್ಟಿ ರಂಗಭೂಮಿಯಲ್ಲಿ ಅದರಲ್ಲೂ ಮಕ್ಕಳ ರಂಗಭೂಮಿಯಲ್ಲಿ ಮತ್ತು ವಿಶೇಷವಾಗಿ ಯಕ್ಷಗಾನದಲ್ಲಿ ಸಕ್ರಿಯರಾಗಿರುವ ಶ್ರೀಮತಿ ಪ್ರತಿಭಾ ಬಿ.ಜಿ ಅವರನ್ನು ವರಸಿ  ಚಿಕ್ಕಮಗಳೂರಿಗೆ ತಮ್ಮ ವಾಸ್ತವ್ಯವನ್ನು ಬದಲಿಸಿ ಅವರಿಬ್ಬರ ಸುಂದರವಾದ ದಾಂಪತ್ಯದ ಕುರುಹಾಗಿ ಮುದ್ದಾದ ಮಗಳು ಸನಾತನಿಗೆ ತಂದೆಯಾಗಿರುವ ನಂದಕುಮಾರ್, ಜಾಹೀರಾತುಗಳು, ಸಿನಿಮಾ, ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಲೇ ರಂಗಾಯಣದ ಭಾರತೀಯ ರಂಗವಿದ್ಯಾಲಯದಲ್ಲಿ ಕೆಲ ಕಾಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿ, ಪ್ರಸ್ತುತ ರೇವಾ ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಲ್ಲಿ ಕಿರಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

.

ಇತ್ತೀಚೆಗಷ್ಟೇ ಅವರ ನಿರ್ದೇಶನದ ರೇವಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಭಿನಯಿಸಿರುವ ಕುವೆಂಪು ರಾಮಾಯಣ ದರ್ಶನಂ  ಆಧಾರಿತ ಸೀತಾಪಹರಣ ದರ್ಶನಂ ನಾಟಕವು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಲ್ಲದೇ, ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಥಮ ಪ್ರಯತ್ನದಲ್ಲಿಯೇ,  ಉತ್ತಮ ನಾಟಕ, ಸಂಭಾಷಣೆ, ರಂಗಸಜ್ಜಿಕೆ, ಸಂಗೀತ, ನಿರ್ದೇಶನ ಹೀಗೆ ಹತ್ತು ಹಲವಾರು ವಿಭಾಗಗಳಲ್ಲಿ  ಪ್ರಥಮ ಸ್ಥಾನ ಗಳಿಸುವ ಎಲ್ಲರೂ ಮೂಗಿನ ಮೇಲೆ ಬೆರೆಳಿಡುವಂತೆ ಮಾಡಿದ್ದಲ್ಲದೇ, ಇದೇ ನಾಟಕ ತಂಡವು ರಂಗ ಸೌರಭ 25ರ ನಾಟಕ ಸ್ಪರ್ಧೆಯಲ್ಲಿ ರೇವಾ ರಂಗ ಅಧ್ಯಯನ ಕೇಂದ್ರದ ದರ್ಶನಂಲ ನಾಟಕಕ್ಕೆ ಪ್ರಥಮ ಬಹುಮಾನ ದೊರೆತಿದ್ದಲ್ಲದೇ, ಮಾರೀಚ ಪಾತ್ರಾಧಾರಿಗೆ ರಿಷಭ್ ಶೆಟ್ಟಿ ಪ್ರಶಸ್ತಿಯೂ ದೊರೆತರೆ, ಆರ್. ವಿ ಕಾಲೇಜಿನ ರಂಗ ತರಂಗ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಷ್ಟೇ ಅಲ್ಲದೇ ಉತ್ತಮ ರಂಗ ವಿನ್ಯಾಸ, ಸಂಗೀತ, ನಿರ್ದೇಶನ ಮತ್ತು ಶಬರಿ ಪಾತ್ರಾಧಾರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯೂ ದೊರೆತಿರುವುದು ನಂದಕುಮಾರ್ ಅವರ ಸಾರಥ್ಯ ಮತ್ತು ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.  ನಾಟಕಗಳನ್ನು  ಅದರಲ್ಲೂ ಪೌರಾಣಿಕ ನಾಟಕಗಳನ್ನು ನೋಡುವವರೇ ಕಡಿಮೆಯಾಗಿದ್ದಾರೆ ಎನ್ನುವವರ ಮಧ್ಯೆ ದುಡ್ಡು ಕೊಟ್ಟು ಹೌಸ್ ಫುಲ್ ಪ್ರದರ್ಶನದಲ್ಲಿ  ಈ ನಾಟಕ  ನಿರಂತರವಾಗಿ ಪ್ರದರ್ಶನ ಮಾಡುವುದರಲ್ಲಿ ಸೈ  ಎನಿಸಿಕೊಂಡಿದ್ದಾರೆ ನಂದ ಕುಮಾರ.

ಹೀಗೆ ತಮ್ಮ ನಟನೆ, ನಿರ್ದೇಶನಗಳ ಮೂಲಕ ತಮ್ಮ ವಿದ್ಯಾರ್ಥಿಗಳೊಂದಿಗೆ ನಮ್ಮ ಭಾರತದ ದೇಶದ ಅಸ್ತಿತ್ವ ಮತ್ತು ಅಸ್ಮಿತೆಗಳಾದ ಶ್ರೀ ರಾಮಾಯಣ, ಮಹಾಭಾರತ, ಭಾಗವತ, ಶಿವ ಪುರಾಣ, ದೇವಿ ಭಾಗವತ ಮತ್ತು ಈ ನೆಲದ ನೂರಾರು ಜನಪದ ಪುರಾಣಗಳ ಪ್ರಯೋಗಗಳನ್ನು ಮಾಡುತ್ತಾ ರಂಗಭೂಮಿಯ ಮುಖಾಂತರ ಸನಾತನ ಪರಂಪರೆಗೆ ತಮ್ಮ ಅಳಿಲು  ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ನಮ್ಮ ನೆಚ್ಚಿನ ಶಿಕ್ಷಕರಾದ ಶ್ರೀ ನಂದಕುಮಾರ್ ಅವರಿಗೆ  ಆ ಕಲಾ ಸರಸ್ವತಿ ಇನ್ನೂ ಹೆಚ್ಚಿನ ಆಯುರಾರೋಗ್ಯದ ಜೊತೆಗೆ ಐಶ್ವರ್ಯವನ್ನೂ ನೀಡಿ,  ಇನ್ನೂ ಹತ್ತಾರು ವರ್ಷಗಳ ಕಲಾ ಸೇವೆಯನ್ನು ಮುಂದುವರೆಸುತ್ತಾ, ಸಾವಿರಾರು  ಅತ್ಯುತ್ತಮ ಕಲಾವಿದರುಗಳನ್ನು  ಈ ಕಲಾಪ್ರಪಂಚಕ್ಕೆ ನೀಡುವಂತಾಗಲಿ ಎಂದು ಹಾರೈಸೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment