ರಂಗಕರ್ಮಿ ಆರ್. ಎಸ್. ರಾಜಾರಾಂ

raj2

ಅರೇ ಈ ರಾಜಾರಾಂ ಅಂದ್ರೇ ಯಾರು ಅಂತಾ ಗೊತ್ತಗ್ಲಿಲ್ವಾ? ಅದೇ ರೀ, ರಮೇಶ್ ಭಟ್ ಮತ್ತು ಕ್ರೇಜೀ ಕರ್ನಲ್ ಸೀರಿಯಲ್ಲಿನಲ್ಲಿ ರಮೇಶ್ ಭಟ್ ಜೊತೆ ಇರ್ತಾ ಇದ್ರಲ್ಲಾ ಗೊತ್ತಾಯ್ತಾ? ಅರೇ ಇನ್ನೂ ಗೊತ್ತಾಗ್ಲಿಲ್ವಾ ಅದೇ ರೀ ಗಾಳಿಪಟದ ಸಿನಿಮಾದಲ್ಲಿ ನಮ್ಮ ದೂದ್ ಪೇಡ ದಿಗಂತ್ ಆವರ ತಾತನ ಪಾತ್ರದಲ್ಲಿ ಅನಂತ್ ನಾಗ್ ಹಂದಿ ಹೊಡೆಯಲು ಪ್ರಚೋದಿಸಿದ್ರಲ್ಲಾ ಅವರೇ ಅಂದಕ್ಷಣಾ ಓ.. ಅವ್ರಾ.. ಆ ಬಿಳೀ ತಾತ ಗೊತ್ತು ಬಿಡಿ ಬಹಳ ಚೆನ್ನಾಗಿ ಅಭಿನಯಿಸ್ತಾರೆ. ಸಂಜೆ ಹೊತ್ತು ಮಲ್ಲೇಶ್ವರದ 15-18 ನೇ ಕ್ರಾಸಿನ ಕಡೆ ವಾಕಿಂಗ್ ಮಾಡ್ತಾ ಇರ್ತಾರೆ. ಅವರದ್ದು ಮತ್ತು ಭಾರ್ಗವೀ ನಾರಾಯಣ್ ಅವರ ಜೋಡಿ ಬಹಳಾನೇ ಪ್ರಸಿದ್ಧ ಅಲ್ವೇ? ಅಂತ ಆವ್ರೇ ಹೇಳುವಷ್ಶು ಪ್ರಖ್ಯಾತರು.

ನೋಡಿದಾಕ್ಷಣ ಅರೇ ಇವರು ಯಾರೋ ನಮ್ಮ ತಾತನ ತರಹಾನೇ ಇದ್ದಾರಲ್ಲಾ! ಎನ್ನುವಷ್ಟು ಅಪ್ಯಾಯಮಾನತೆ,‌ ಇಳೀ ವಯಸ್ಸಿನಲ್ಲಿಯೂ ತುಂಟತನ ತೋರುವ ತಾತ, ಹೀಗೆ ತಮ್ಮ ಸಹಜ ಅಭಿನಯದ‌ ಮೂಲಕ ರಂಗಭೂಮಿ, ಹಿರಿತೆರೆ, ಕಿರಿತೆರೆಯಲ್ಲಿ ಸುಮಾರು ಆರು ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿದ ರಂಗಕರ್ಮಿ ರಾಜಾರಾಂ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ.

rajam3

ಆರ್. ಎಸ್. ರಾಜಾರಾಂ ಅವರು ಮೂಲತಃ ಅಪ್ಪಟ ಬೆಂಗಳೂರಿನ ಮಲ್ಲೇಶ್ವರದವರು. ಅವರ ತಂದೆ ಶ್ರೀ ಜಿ.ಎಸ್‌. ರಘುನಾಥರಾವ್‌ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕೆಲಸ ನಿಮಿತ್ತ ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ ಗೆ ವರ್ಗವಣೆಯಾಗಿದ್ದಾಗ 1938ರ ಜುಲೈ 10ರಂದು ಶಾರದಾಬಾಯಿಯವರ ಗರ್ಭದಲ್ಲಿ ಜನಿಸಿದ ಕೆಲವೇ ತಿಂಗಳಲ್ಲಿ ಮತ್ತೆ ಮಲ್ಲೇಶ್ವರದ ಮನೆಗೆ ಹಿಂದಿರುಗುತ್ತಾರೆ ಮಲ್ಲೇಶ್ವರದ ಸರ್ಕರಿ ಶಾಲೆಯಲ್ಲಿಯೇ ತಮ್ಮ ಹತ್ತನೇ ತರಗತಿಯವರೆಗೂ ವಿದ್ಯಾಭ್ಯಾಸವನ್ನು ಮುಗಿಸಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪಿ.ಯೂ.ಸಿಯನ್ನು ಮುಗಿಸುವ ಜೊತೆ ಜೊತೆಯಲ್ಲಿಯೇ ಗೆಳೆಯರೊಡನೆ ಮನೆಯ ಹತ್ತಿರವೇ ಇದ್ದ ಟೈಪಿಂಗ್ ಇನಿಸ್ತಿಟ್ಯೂಟ್ ಒಂದಕ್ಕೆ ಸೇರಿ ತಮ್ಮ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆ ಮುಗಿಸಿಕೊಳ್ಳುತ್ತಾರೆ. ನಂತರ ತಮ್ಮ ಪದವಿಗಾಗಿ ನರಸಿಂಹರಾಜಾ ಕಾಲೋನಿಯಲ್ಲಿರುವ ಆಚಾರ್ಯ ಪಾಠಶಾಲೆಯಲ್ಲಿ ಬಿ.ಎ ಪದವಿಗೆ ಸೇರಿದ ಸಮಯದಲ್ಲಿಯೇ ಯು.ಪಿ.ಎಸ್.ಸಿ ಮುಖೇನ ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನಸೌಧದಲ್ಲಿ ಬೆರಳಚ್ಚುಗಾರರಾಗಿ ಉದ್ಯೋಗಕ್ಕೆ ಸೇರಿ 37 ವರ್ಷಗಳ ಸುದೀರ್ಘವಾದ ಸೇವೆ ಸಲ್ಲಿಸಿ ಹಂತ ಹಂತವಾಗಿ ಭಢ್ತಿಯನ್ನು ಪಡೆದು ಕಡೆಗೆ ಅಧೀನ ಕಾರ್ಯದರ್ಶಿ ಹುದ್ದೆಗೇರಿ ನಿವೃತ್ತಿ ಹೊಂದಿದರು.

ಶಾಲಾ ದಿನಗಳಿಂದಲೇ ನಾಟಕ, ಏಕಪಾತ್ರಾಭಿನಯ, ವೇಷಭೂಷಣ ಸ್ಪರ್ಧೆಗಳಲ್ಲಿ ಭಾಗವಹಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಕಾರಣ ಸಹಜವಾಗಿ ಚಿಕ್ಕವಯಸ್ಸಿನಲ್ಲಿಯೇ ರಂಗಭೂಮಿಯತ್ತ ಆಕರ್ಷಿತರಾಗಿ ತಮ್ಮ ಮನೆಯ ಅಕ್ಕ ಪಕ್ಕದಲ್ಲೇ ಇದ್ದ ಸ್ನೇಹಿತರೊಂದಿಗೆ ರಸಿಕ ರಂಜನಿ ಕಲಾವಿದರು ಎಂಬ ತಂಡವನ್ನು ಸ್ಥಾಪಿಸಿಕೊಂಡು ಅಂದಿನ ಕಾಲದ ಪ್ರಸಿದ್ಧ ನಾಟಕಕಾರಾದ ಪರ್ವತವಾಣಿ, ಕೈಲಾಸಂ, ದಾಶರಥಿದೀಕ್ಷಿತ್‌, ಕೆ. ಗುಂಡಣ್ಣ ಮುಂತಾದವರ ನಾಟಕಗಳನ್ನು ಮಾಡುತ್ತಾರೆ. ತಮ್ಮ ಮನೆಗಳಿಂದ ತಂದಿದ್ದ ಪಂಚೆಗಳನ್ನೇ ಪರದಯನ್ನಾಗಿಸಿಕೊಂಡು ಹತ್ತು ಪೈಸಾ, ನಾಲ್ಕಾಣೆ ಎಂಟಾಣೆಯ ಪ್ರವೇಶ ದರದ ಟಿಕೆಟ್ ನೊಂದಿಗೆ ತಮ್ಮ ನಾಟಕಗಳನ್ನು ಅಲ್ಲಿಯೇ ಇದ್ದ ಸೇವಾ ಸದನದಲ್ಲಿ ಪ್ರದರ್ಶನ ಮಾಡುತ್ತಿರುತ್ತಾರೆ.

ಬಿಎ ಪದವಿ ಕಲಿಯಲೆಂದು ಸೇರಿದ್ದ ಆಚಾರ್ಯ ಪಾಠಶಾಲೆ ಅವರಲ್ಲಿದ್ದ ಕಲಾವಿದನಿಗೆ ಅತ್ಯತ್ತಮ ವೇದಿಕೆಯಾಗುವುದಲ್ಲದೇ ಅಲ್ಲಿಯೇ ಅವರಿಗೆ ಅನೇಕ ಹವ್ಯಾಸೀ ನಾಟಕ ತಂಡಗಳ ಪರಿಚಯವಾಗುತ್ತದೆ. ಬೆಳ್ಳಂ ಬೆಳಿಗ್ಗೆ ಚುಮು ಚುಮು ಚಳಿಯಲ್ಲಿ 6 ಗಂಟೆಗೆ ಮಲ್ಲೇಶ್ವರಂ ನಿಂದ ಸೈಕಲ್ಲಿನಲ್ಲಿ ಕಾಲೇಜಿಗೆ ಹೋಗಿ ಬೆಳಗಿನ ತರಗತಿಗಳನ್ನು ಮುಗಿಸಿಕೊಂಡು 10:30ಕ್ಕೆ ಅಲ್ಲಿಂದ ಹೊರಟು 11:00 ಕ್ಕೆ ಸರಿಯಾಗಿ ವಿಧಾನ ಸೌಧದಲ್ಲಿ ಕೆಲಸಕ್ಕೆ ಹಾಜರಾಗಿ ಸಂಜೆ 5:30ಕ್ಕೆ ಮೆಜೆಸ್ಟಿಕ್ ಭಾಗದಲ್ಲಿ ನಡೆಯುತ್ತಿದ್ದ ನಾಟಕಗಳ ತಾಲೀಮು ಮುಗಿಸಿಕೊಂಡು ಮತ್ತೆ ಮನೆಗೆ ಸೇರುವಷ್ಟರಲ್ಲಿ ಗಂಟೆ ಹತ್ತು ಇಲ್ಲವೇ ಹನ್ನೊಂದಾಗುತ್ತಿತ್ತು. ಅದೆಷ್ಟೋ ಬಾರಿ ಕೋಪಗೊಂಡ ಅವರ ತಂದೆ ಮನೆಯ ಮುಂದಿನ ಬಾಗಿಲನ್ನು ಹಾಕಿಕೊಂಡಾಗ, ಅವರ ಪ್ರೀತಿಯ ಅಜ್ಜಿ ಹಿತ್ತಲಿನ ಬಾಗಿಲಿನಿಂದ ಮೊಮ್ಮಗನನ್ನು ಮನೆಯೊಳಗೆ ಕರೆದುಕೊಂಡು ಅಷ್ಟು ತಡರಾತ್ರಿಯಲ್ಲಿಯೂ ಅನ್ನ ಕಲಸಿ ಹಾಕುವ ಮೂಲಕ ರಾಜಾರಾಂ ಅವರ ಕಲೆಗೆ ಪ್ರೋತ್ಸಾಹ ಕೊಟ್ಟಿದ್ದರು.

ನೋಡ ನೋಡುತ್ತಿದ್ದಂತೆಯೇ ರಾಜಾರಾಂ ಅವರು ಸರಸ್ವತಿ ಕಲಾ ನಿಕೇತನ, ಪ್ರಧಾನ ಮಿತ್ರ ಮಂಡಲಿ, ಸುಪ್ರಭಾತ ಕಲಾವಿದರು, ಕಮಲ ಕಲಾ ಮಂದಿರ ಹರಿಕಥಾ ವಿದ್ವಾಂಸರಾಗಿದ ಶ್ರೀ ಗುರುರಾಜಲು ನಾಯ್ಡು ರವರ ಜೈ ಭಾರತ್ ನಾಟಕ ಮಂಡಳಿಯೊಂದಿಗೆ ಸಂಪರ್ಕ ಪಡೆಯುವ ಮೂಲಕ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದರು. ಹಣ ಹದ್ದು, ಮಗು ಮದ್ವೆ, ಪಂಚಭೂತ, ಹೋಂರೂಲು, ‘ಅವರೇ ಇವರು- ಇವರೇ ಅವರು’ ಮೊದಲಾದವು ಇವರ ಕೆಲವು ಪ್ರಸಿದ್ಧ ನಾಟಕಗಳಾಗಿದ್ದವು.

ರಾಜಾರಾಂ 1964ರಲ್ಲಿ ತಮ್ಮ ಸಚಿವಾಲಯ ಉದ್ಯೋಗಿಗಳೊಡನೆ ಸೇರಿಕೊಂಡು ಸಚಿವಾಲಯ ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿಕೊಂಡು ಅದರ ಮೂಲಕ ದೇಶಾದ್ಯಂತ ಅನೇಕ ನಾಟಕ ಸ್ಪರ್ಥೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಪುಸ್ಕಾರಗಳಿಗೆ ಭಾಗಿಯಾದರೂ, ಇಲ್ಲಿ ಹೆಚ್ಚಿನ ನಾಟಕದ ಚಟುವಟಿಕೆಗಳು ನಡೆಯುತ್ತಿರಲಿಲ್ಲವಾದ್ದರಿಂದ, ವಿಧಾನ ಸೌಧದಲ್ಲೇ ಇದ್ದ ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಅತಿಥಿ ಕಲಾವಿದರಾಗಿ ಪಾಲ್ಗೊಂಡು ಸರ್ವೇಜನಾಃ ಸುಖಿನೊ ಭವಂತು ಎಂಬ ನಾಟಕವಲ್ಲದೇ ಕುಟುಂಬ‌ ಕಲ್ಯಾಣ ಯೋಜನೆಯ ಅನೇಕ ನಾಟಕಗಳಲ್ಲಿ ಅಭಿನಯಿಸುತ್ತಾರೆ. ಇದೇ ಸಮಯದಲ್ಲಿಯೇ ಅಲ್ಲಿಗೆ ಅತಿಥಿ ಕಲಾವಿದರಾಗಿ ನಟಿಸುತ್ತಿದ್ದ ಸಿ. ಆರ್. ಸಿಂಹ, ಕಪ್ಪಣ್ಣ, ಲೋಕೇಶ್, ಗುಬ್ಬಿ ವೀರಣ್ಣನವ್ವರ ಮಗ ದೇವಾನಂದ್. ಮುಂದೆ ಹೆಸರಾಂತ ನಿರ್ಮಾಪಕರಾಗಿ ಖ್ಯಾತ ಗಳಿಸಿದ ಕೃಷ್ಣಂರಾಜು ಮತ್ತು ಶಂಕರ್ ರಾವ್ ಅವರುಗಳ ಪರಿಚಯವಾಗಿ ಇಂದಿಗೂ ಹವ್ಯಾಸಿ ರಂಗದಲ್ಲಿ ಪ್ರಖ್ಯಾತವಾಗಿರುವ ನಟರಂಗ ತಂಡವನ್ನು 1972ರಲ್ಲಿ ಸ್ಥಾಪನೆ ಮಾಡಿ ಅದರ ಮೂಲಕ ಎಚ್ಚೆಮನಾಯಕ, ಟಿಪ್ಪುಸುಲ್ತಾನ್‌, ಕಿತ್ತೂರು ಚೆನ್ನಮ್ಮ, ರಕ್ತಾಕ್ಷಿ, ಸದಾರಮೆ, ಕಾಕನ ಕೋಟೆ, ತುಘಲಕ್, ಮೃಚ್ಛಕಟಿಕ, ಸಂಕ್ರಾಂತಿ, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದರು.

rajram1

ಹೀಗೆ ಒಂದಾದ ಮೇಲೆ ಒಂದು ನಾಟಕಗಳಲ್ಲಿ ಆಭಿನಯಿಸುತ್ತಿರುವಾಗಲೇ ಸಿ. ಆರ್ ಸಿಂಹ ಅವರ ಮೂಲಕ ನಾಟಕಗಳಲ್ಲಿ ಸಂಗೀತ ಸಂಯೋಜನೆ ಮಾಡುತ್ತಿದ್ದ ಮತ್ತೊಬ್ಬ ದಿಗ್ಗಜ ಸಿ. ಅಶ್ವಥ್ ಅವರ ಪರಿಚಯವಾಗಿ ಮುಂದೆ ರಾಜಾರಾಂ ಮತ್ತು ಅಶ್ವಥ್ ಅವರ ಜೋಡಿ ಹಾಲು ಜೇನಿನಂತಾಗುತ್ತದೆ. ಹಾರ್ಮೋನಿಯಂ ಹಿಡಿದು ತಾರಕ ಸ್ವರದಲ್ಲಿ ಅಶ್ವಥ್ ಹಾಡಲು ಆರಂಭಿಸಿದರೆ ಅವರಿಗೆ ಡೋಲಕ್ ಮೂಲಕ ರಾಜಾರಾಂ ಸಾಥ್ ನೀಡುತ್ತಿದ್ದರು. ನಾಟಕಗಳಿಗಾಗಿ ರೈಲಿನಲ್ಲಿ ದೂರ ಪ್ರಯಾಣ ಮಾಡುತ್ತಿರುವಾಗ ಅನೇಕ ಸ್ಥಳಗಳಲ್ಲಿ ಕೆಲವು ಗಂಟೆಗಳ ಕಾಲ ರೈಲು ನಿಂತರೆ ಇವರಿಬ್ಬರೂ ರೈಲಿನಿಂದ ಇಳಿದು ಪ್ಲಾಟ್ಫಾರ್ಮಿನ ಮೇಲೆ ಕುಳಿತು ಹಾಡುತ್ತಿದ್ದರೆ ಸುತ್ತಲೂ ಇರುವವರಿಗೆ ರಸದೌತಣ ಎಂದು ಬೇರೆ ಹೇಳಬೇಕಿಲ್ಲ.

ಹೀಗೆ ನಾನಾ ನಾಟಕಗಳಲ್ಲಿ ಆಭಿನಯಿಸುತ್ತಿರುವಾಗಲೇ 1971ರಲ್ಲಿ ತಮ್ಮ ಬಾಲ್ಯಸ್ನೇಹಿತರೊಬ್ಬರ ಸಹಾಯದಿಂದ ಪಾಪಾ ಪುಣ್ಯ ಚಿತ್ರದಲ್ಲಿ ಪ್ರಪ್ತಥಮವಾಗಿ ಬಣ್ಣ ಹಚ್ಚುವ ಅವಕಾಶ ಲಭಿಸಿ, ಪಂಡರೀ ಬಾಯಿ ಮತ್ತು ಕಲ್ಯಾಣ್ ಕುಮಾರ್ ಅವರೊಂದಿಗೆ ಶ್ರೀ ಶೈಲದಲ್ಲಿ ಚಿತ್ರೀಕರಣದಲ್ಲಿ ಭಾಗಿಗಳಾಗುತ್ತಾರೆ. ನಂತರ 1972ರಲ್ಲಿಯೇ ಭಲೇ ಹುಚ್ಚಾ ಚಿತ್ರದಲ್ಲಿ ಜೋಕರ್ ಶ್ಯಾಮ್ , ಕೆಮಡಿಯನ್ ಗುಗ್ಗು ಅವರೊಟ್ಟಿಗೆ ನಟ ಸಾರ್ವಭೌಮ ರಾಜಕುಮಾರ್ ಅವರೊಂದಿಗೆ ನಟಿಸುವ ಅವಕಾಶ ಲಭಿಸುತ್ತದೆ. ದುರಾದೃಷ್ಟವೆಂದರೆ ಅದೇ ಸಿನಿಮಾ ಅಣ್ಣಾವ್ರ ಜೊತೆ ಅಭಿನಯಿಸಿದ ಮೊದಲ ಮತ್ತು ಕಡೆಯ ಸಿನಿಮಾ ಆಗುತ್ತದೆ. ನಂತರ ಕನ್ನಡದ ಬಹುತೇಕ ಎಲ್ಲಾ ನಾಯಕ ನಟರೊಂದಿಗೆ ಅಭಿನಯಿಸಿದ ಹೆಗ್ಗಳಿಕೆ ರಾಜಾರಾಂ ಅವರದ್ದಾಗಿದೆ.

ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಲು ಸಾಧ್ಯವಾಗಲಿಲ್ಲ. ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯನವರು ರಾಜಾರಾಂ ಅವರು ಬಾಲು ಮಹೇಂದ್ರ ಅವರ ನಿರ್ದೇಶನದಲ್ಲಿ ಕಮಲಹಾಸನ್ ಅವರೊಂದಿಗೆ ನಟಿಸಿದ ಚಿತ್ರವನ್ನು ನೋಡಿ ಪ್ರಥಮಬಾರಿಗೆ ತಮ್ಮ ಚಿತ್ರದಲ್ಲಿ ರಾಜಾರಾಂ ಅವರಿಗೊಂದು ಅವಕಾಶ ನೀಡುತ್ತಾರೆ. ಅಲ್ಲಿಂದ ಮುಂದೆ ಅವರಿಬ್ಬರದ್ದೂ ರಾಮ ಲಕ್ಷ್ಮಣ ಜೋಡಿಯಂತಾಗಿ ಅವರ ಪ್ರತಿಯೊಂದು ಚಿತ್ರದಲ್ಲಿಯೂ ಒಂದಲ್ಲಾ ಒಂದು ಪ್ರಮುಖ ಪಾತ್ರ ರಾಜಾರಾಂ ಅವರಿಗೆ ಕಟ್ಟಿಟ್ಟ ಬುತ್ತಿಯಾಗಿರುತ್ತದೆ ಅದೇ ಸಂಪ್ರದಾಯವನ್ನು ಸಿದ್ದಲಿಂಗಯ್ಯ ಅವರ ಶಿಷ್ಯ ಕೆ.ವಿ. ರಾಜು ಅವರು ಸಹಾ ಮುಂದುವರೆಸಿ ತಮ್ಮ ಬಹುತೇಕ ಚಿತ್ರಗಳಲ್ಲಿ ರಾಜಾರಾಂ ಅವರಿಗೆ ಅವಕಾಶ ಕೊಟ್ಟಿದ್ದರು.

raj4

1971 ರಿಂದ ಪಾಪ ಪುಣ್ಯದ ಮುಖಾಂತರ ಆರಂಭವಾಗಿ ಕೆಲವರ್ಷಗಳ ಹಿಂದೆ ಬಿಡುಗಡೆಯಾದ ಜೈಲಲಿತಾ ಸಿನಿಮಾ ಅವರ ಕೊನೆಯ ಸಿನಿಮಾವಾಗಿದ್ದು ಒಟ್ಟು 62 ಚಿತ್ರಗಳಲ್ಲಿ ನಟಿಸಿದ್ದಾರೆ. ಯೋಗರಾಜ್ ಭಟ್ಟರ ನಿರ್ದೇಶನದ, ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣನ್ ಅಭಿನಯಿಸಿದ್ದ ಗಾಳಿಪಟದಲ್ಲಿ ದೂಡ್ ಪೇಡಾ ದಿಂಗತ್ ತಾತಾನಾಗಿ ಅಭಿನಯಿಸಿದ್ದು ಮತ್ತು ಲೋಕೇಶ್ ಅವರ ನಿರ್ದೇಶನದ ಭುಜಂಗಯಯನ ದಶಾವತಾರ ಚಿತ್ರದ ಅವರಿಗೆ ಅತ್ಯಂತ ಖ್ಯಾತಿಯನ್ನು ತಂದುಕೊಟ್ಟಿತ್ತು.

ಕನ್ನಡಲ್ಲಿ ಖಾಸಗೀ ಛಾನೆಲ್ಗಳು ಆರಂಭವಾದ ಮೇಲಂತೂ ರಾಜಾರಾಂ ಅವರಿಗೆ ಭರಪೂರ ಕೆಲಸ ಸಿಕ್ಕಿತ್ತು. ರಮೇಶ್ ಭಟ್ ಮತ್ತು ಗಿರಿಜಾ ಲೋಕೇಶ್ ರೊಂದಿಗೆ ಅಭಿನಯಿಸಿದ ಕ್ರೇಜಿ ಕರ್ನಲ್ ಎಂಬ ಧಾರಾವಾಹಿಯಲ್ಲಿ ಅವರಿಬ್ಬರ ಸರಿಸಮನಾಗಿ ರಾಜಾರಾಂ ಅವರ ಪಾತ್ರಾಭಿನಯವೂ ಬಹಳ ಮೆಚ್ಚಿಗೆಗಳಿಸಿತ್ತಲ್ಲದೇ, ಸಿಹಿ ಕಹಿ ಚಂದ್ರು ಅವರ ಅನೇಕ ಧಾರವಾಹಿಗಳದೇ ಇನ್ನೂ ಹತ್ತು ಹಲವರು ನಿರ್ದೇಶಕರ ಜೊತೆ ನೂರಾರು ಸಂಚಿಕೆಗಳಲ್ಲಿ ತಮ್ಮ ಸಹಜ ಅಭಿನಯದ ಮುಖಾಂತರ ಕನ್ನಡಿಗರ ಹೃನ್ಮನಗಳನ್ನು ಗೆದ್ದಿದ್ದರು.

ತಮ್ಮ ಪಾತ್ರಗಳ ಮುಖಾಂತರ ಜನರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದರೂ ಬದುಕಿನಲ್ಲಿ ಬಹಳವಾಗಿ ನೊಂದಿದ್ದರು. ಆರ್ಥಿಕವಾಗಿ ಸಧೃಢರಾಗಿದ್ದದೂ ಅವರ ಇಬ್ಬರು ಮಕ್ಕಳು ಹುಟ್ಟು ಕುರುಡರಾಗಿದ್ದು ಅವರಿಗೆ ಬಹಳ ನೋವನ್ನುಂಟು ಮಾಡಿತ್ತು. ಇಬ್ಬರಿಗೂ ಉತ್ತಮವಾದ ಶಿಕ್ಷಣವನ್ನು ಕೊಡಿಸಿ ಹಿರಿಯ ಮಗ ತನ್ನದೇ ಆದ ಅಂಧ ಹೆಣ್ಣು ಮಕ್ಕಳ ಶಾಲೆಯನ್ನು ನಡೆಸುತ್ತಿದ್ದರೆ, ಇನ್ನು ಎರಡನೆಯ ಮಗ ಕಾರ್ಪರೇಷನ್ ಬ್ಯಾಂಕಿನಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಕಾಲ ಮೇಲೇ ತಾವು ನಿಂತು ಸಂಸಾರವನ್ನು ನಿಭಾಯಿಸುತ್ತಿದ್ದಾರೆ.

ರಾಜಾರಾಂ ಅವರಿಗೆ ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಮಯೂರ ಕಲಾರಂಗ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಮತ್ತು ಪ್ರತಿಷ್ಠಾನಗಳ ಗೌರವಗಳು ಸಂದಿವೆ.

ಇತ್ತೀಚಿನ ದಿನಗಳಲ್ಲಿ ಚಲನಚಿತ್ರ, ಧಾರವಾಹಿ ಮತ್ತು ನಾಟಕಗಳಿಂದ ಸ್ವಲ್ಪ ದೂರವಿದ್ದು ವಿಶ್ರಾಂತ ಜೀವನ ನಡೆಸುತ್ತಿದ್ದ ಹಿರಿಯ ರಂಗಕರ್ಮಿ ಆರ್‌.ಎಸ್‌.ರಾಜಾರಾಂ ಅವರು ಕೋವಿಡ್‌ ಸೋಂಕಿನಿಂದಾಗಿ ಏಪ್ರಿಲ್ 10, 2021ರಂದು ನಮ್ಮಲ್ಲರನ್ನೂ ಅಗಲಿದ್ದಾರೆ. ದೈಹಿಕವಾಗಿ ರಾಜಾರಾಂ ಅವರು ನಮ್ಮನ್ನಗಲಿದ್ದರೂ ಅವರ ತುಂಟಾಟಿಕೆಯ ಅಭಿನಯದ ಮೂಲಕ ಕನ್ನಡಿಗರ ಮನ ಮನೆಗಳಲ್ಲಿ ಶಾಶ್ವತವಾಗಿ ಮನೆಮಾಡಿದ್ದಾರೆ ಎಂದರೂ ಅತಿಶಯೋಕ್ತಿಯಾಗದು ಅಲ್ವೇ?

ಕೆಲವೊಮ್ಮೆ ಜನರು ಬದುಕಿರುವಾಗ ಅವರ ಬಗ್ಗೆ ಹೊಗಳುವುದಕ್ಕೆ ಕಂಜೂಸ್ ತನ‌‌ ತೋರಿಸುವವರೇ ಸತ್ತ ನಂತರ ವಾಚಾಮಗೋಚರವಾಗಿ ಹೋಗಳುವಾಗ,‌ ಅರೇ ಇದೇ ಮಾತುಗಳನ್ನು ಅವರು ಬದುಕಿದ್ದಾಗ ಮಾಡಿದ್ದರೆ ಇನ್ನೂ ಒಂದೆರಡು ದಿನ ಹೆಚ್ಚಿಗೆ ಬದುಕುತ್ತಿದ್ದರೇನೋ ಅನಿಸುತ್ತದೆ ಎನ್ನುವುದು ಸತ್ಯವಾದರೂ,‌ ಹೇಗಾದರೂ ಇರುತ್ತಾರಲ್ಲಾ, ಅವರನ್ನು ಹೊಗಳಿದರೆ ಎಲ್ಲಿ ಅಟ್ಟಕ್ಕೇರಿ ಕುಳಿತು ಬಿಡುತ್ತಾರೋ ಎನ್ನುವ ಸಂಶಯವೂ ಇರಬಹುದೇನೋ? ಇಲ್ಲವೇ ಅವರು ಇಷ್ಟು ಬೇಗ ಅಗಲುತ್ತಾರೆ ಎನ್ನುವ ಮನೋಭಾವವೂ ಮತ್ತೊಂದು ಕಾರಣ ಇರಬಹುದು.

ಹಾಗಾಗಿ ದಯವಿಟ್ಟು ಯಾರನ್ನಾದರೂ ಹೊಗಳ ಬೇಕು ಇಲ್ಲವೇ ಏನಾದರೂ ಕೊಡಬೇಕು ಎನಿಸಿದಲ್ಲಿ‌ ನಾಳೆಯ ಕೆಲಸವ ಇಂದೇ ಮಾಡು, ಇಂದಿನ ಕೆಲಸವ‌ ಇಂದೇ ಮಾಡು ಎಂದು ಥಟ್ ಅಂತ ಮಾಡಿಬಿಡಿ. ಯಾರಿಗೆ‌ ಗೊತ್ತು ನಾಳೆ ನಾವಿರ್ತಿವೋ ಇಲ್ಲಾ ಅವರು ಇರ್ತಾರೋ ಎಂದು.

ಏನಂತೀರೀ?

ನಿಮ್ಮವನೇ ಉಮಾಸುತ

ಸ್ವರಾಂಜಲಿ

ರಘೋತ್ತಮ ಧನ್ವಂತ್ರಿ ಎಲ್ಲರ ಪ್ರೀತಿಯ ರಘು, ಬೆಂಗಳೂರಿನ ಪ್ರತಿಷ್ಟಿತ ಶೇಷಾದ್ರಿಪುರದಲ್ಲಿ ಹುಟ್ಟಿ ಬೆಳೆದ ಹುಡುಗ. ಬಾಲ್ಯದಿಂದಲೂ ಬಹಳ ಬುದ್ದಿವಂತ ಮತ್ತು ಚುರುಕಿನ ಹುಡುಗನಾಗಿದ್ದ. ಬಾಲ್ಯದಲ್ಲಿರುವಾಗಲೇ ಮನೆಯ ಪಕ್ಕದಲ್ಲಿಯೇ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಡೆಗೆ ಆಕರ್ಷಿತನಾಗಿ, ಅಣ್ಣನ ಜೊತೆ ನಿತ್ಯ ಶಾಖೆಗೆ ಹೋಗುತ್ತಿದ್ದ. ಅನೇಕರಿಗೆ ಈಗಾಗಲೇ ತಿಳಿದಿರುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಿಗೆ ಬರುವ ಹುಡುಗರಿಗೆ ಆಟಗಳು ಮತ್ತು ಅನುಶಾಸನಗಳ ಮುಖಾಂತರ ಶಾರೀರಿಕ ಮತ್ತು ದೈಹಿಕ ಬೆಳವಣಿಗೆಯಲ್ಲದೇ, ಆ ಹುಡುಗರಿಗೇ ಗೊತ್ತಿಲ್ಲದಂತೆಯೇ ಹಾಡು, ಶ್ಲೋಕ, ಅಮೃತವಚನ ಮತ್ತು ಕಥೆಗಳ ಮೂಲಕ ಅವರ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ. ಸಂಘದ ಮೂಲಕ ಈ ರೀತಿಯಾಗಿ ವ್ಯಕ್ತಿತ್ವ ವಿಕಸನಗೊಂಡ ಕೋಟ್ಯಾಂತರ ಸ್ವಯಂಸೇವಕರಿಲ್ಲಿ ನಮ್ಮ ರಘು ಕೂಡಾ ಒಬ್ಬ.

ಸಂಘದ ಎಂಥ ಸುಮಧುರ ಬಂಧನ ಸಂಘಕಿಂದು ಬಂದೆನಾ ಎಂಬ ಹಾಡಿನ ಚರಣವೊಂದರಲ್ಲಿ ಬರುವಂತೆ

ಗುರಿಯ ಅರಿಯದೆ ತಿರುಗುತ್ತಿದ್ದೆನು ಮರೆತು ತನುವಿನ ಪರಿವೆಯ

ಗುರುವು ದೊರೆಯದೆ ಮರುಗುತಿದ್ದೆನು ಪಡೆದೆ ಸದ್ಗುರು ಭಗವೆಯ ಎನ್ನುವಂತೆ,

ಸಂಘದಲ್ಲಿ ಆತನಿಗೆ ಒಳ್ಳೆಯ ಗುರುಗಳು, ಮಾರ್ಗದರ್ಶಕರು ದೊರೆತು ಬೌಧ್ದಿಕವಾಗಿ ಬೆಳೆಯ ತೊಡಗಿದ. ಸಂಗೀತದ ಅರಿವಿಲ್ಲದಿದ್ದರೂ, ಶಾಖೆಯಲ್ಲಿ ಕಲಿತ ಹಾಡುಗಳನ್ನು ಸುಶ್ರಾವ್ಯವಾಗಿ ಹೇಳುತ್ತಲೇ, ಹಾಗೆಯೇ ಸಂಘದ ಘೋಶ್ ಟೋಳಿಯತ್ತ ಚಿತ್ತವನ್ನು ಹರಿಸಿ, ಘೋಶ್ ತಂಡದೊಂದಿಗೆ ಅಭ್ಯಾಸ ಮಾಡುತ್ತಲೇ, ವಂಶಿ, ಶಂಖ, ಆನಕ ಹೀಗೆ ವಿವಿಧ ಪ್ರಕಾರದ ಸಂಗೀತ ವಾದ್ಯಗಳನ್ನು ಸುಲಲಿತವಾಗಿ ನುಡಿಸುವುದನ್ನು ಕಲಿತೇ ಬಿಟ್ಟ.

ತನ್ನ ಪ್ರೌಢ ಶಿಕ್ಷಣವನ್ನು ಮುಗಿಸಿದ ನಂತರ ಮನೆಯಲ್ಲಿದ್ದ ಆರ್ಥಿಕ ಪರಿಸ್ಥಿತಿಯಿಂದಾಗಿ ಓದನ್ನು ಹೇಗಪ್ಪಾ ಮುಂದುವರೆಸುವುದು ಎಂಬ ಯೋಚನೆಯಲ್ಲಿದ್ದಾಗಲೇ ರಘುವಿಗೆ ಸಂಗೀತದಲ್ಲಿ ಇದ್ದ ಆಸಕ್ತಿಯನ್ನು ಅವನಿಗೆ ಅರಿವಿಲ್ಲದಂತೆಯೇ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿದ್ದಂತಹ ಶ್ರೀಯುತ ಪ. ರಾ. ಕೃಷ್ಣಮೂರ್ತಿಗಳು ಗಮನಿಸಿದ್ದರು. ಹಾಗಾಗಿ ಪರಾಕೃ ಸಂಗೀತದಲ್ಲಿ ಉನ್ನತ ಅಧ್ಯಯನಕ್ಕಾಗಿ ತಮ್ಮ ಆತ್ಮೀಯರು ಮತ್ತು ಕನ್ನಡ ಚಲನಚಿತ್ರರಂಗದಲ್ಲಿ ಸಂಗೀತ ದಿಗ್ಗಜರೆಂದೇ ಅದಾಗಲೇ ಖ್ಯಾತರಾಗಿದ್ದ ಶ್ರೀಯುತ ಹಂಸಲೇಖರವರ ಬಳಿ ರಘುನನ್ನು ಕರೆದುಕೊಂಡು ಹೋಗಿ, ಒಂದು ರೀತಿಯ ಘರಾನ ಪದ್ದತಿಯಂತೆ ಸೇರಿಸಿಯೇ ಬಿಟ್ಟರು.

ನಮ್ಮ ಶಿಷ್ಯನನ್ನು ನಿಮ್ಮ ಬಳಿ ಕರೆತಂದು ಬಿಟ್ಟಿದ್ದೇನೆ. ಹಾಲಲ್ಲಾದರೂ ಹಾಕೀ ನೀರಲ್ಲಾದರೂ ಹಾಕಿ ಒಟ್ಟಿನಲ್ಲಿ ಆತನನ್ನು ನಿಮ್ಮ ಸಂಗೀತ ಗರುಡಿ ಮನೆಯಲ್ಲಿ ಪಳಗಿಸಿ ಒಬ್ಬ ಉತ್ತಮ ಸಂಗೀತಗಾರನಾಗಿ ಮತ್ತು ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯನ್ನಾಗಿಸಿ ಎಂದು ಹೇಳಿದರು. ಆಗಷ್ಟೇ ಹಂಸಲೇಖಾರವರು ತಮ್ಮ ದೇಸೀ ಸಂಗೀತ ಶಾಲೆಯ ಕನಸನ್ನು ಕಾಣುತ್ತಿದ್ದ ಸಮಯಕ್ಕೆ ಸರಿಯಾಗಿ ರಘು ಹಂಸಲೇಖರ ಬಳಿ ಶಿಷ್ಯವೃತ್ತಿಯನ್ನು ಸ್ವೀಕರಿಸಿದ್ದ. ಅಲ್ಲಿಂದಲೇ ರಘು ಶಾಸ್ತ್ರೀಯವಾಗಿ ಸಂಗೀತ ಪಾಠವನ್ನು ಆರಂಭಿಸಿ, ಬೆರಳು ಕೊಟ್ಟರೇ ಹಸ್ತವನ್ನು ನುಂಗಿವಷ್ಟು ಚುರುಕಾಗಿದ್ದವ, ನೋಡ ನೋಡುತ್ತಿದ್ದಂತೆಯೇ ಹಂಸಲೇಖಾರ ಸಂಗೀತ ಗರುಡಿಯಲ್ಲಿ ಪಳಗಿ ಹಾಡುಗಾರಿಕೆ, ಕೀಬೋರ್ಡ್, ಮೆಲೋಡಿಕಾ, ಗಿಟಾರ್ ಹೀಗೆ ಹತ್ತು ಹಲವಾರು ವಿಧಗಳ ಸಂಗೀತ ಪ್ರಾಕಾರಗಳಲ್ಲಿ ತಕ್ಕಮಟ್ಟಿಗೆ ಸಿದ್ಧ ಹಸ್ತನಾಗಿ ಹೋದ. ಹಂಸಲೇಖಾರವರ ತಂಡದ ಟ್ರಾಕ್ ಸಿಂಗರ್ ಆಗಿ, ಕೀಬೋರ್ಡ್ ಪ್ಲೇಯರ್ ಆಗಿ ಖಾಯಂ ಸದಸ್ಯನಾಗುವಷ್ಟರಲ್ಲಿ ಎಂಟು ವರ್ಷಗಳಷ್ಟು ಸುದೀರ್ಘವಾದ ಕಾಲ ಕಳೆದು ಹೋದದ್ದೇ ಗೊತ್ತಾಗಲೇ ಇಲ್ಲ.

ಹಂಸಲೇಖರವರ ದೇಸೀ ಸಂಗೀತ ಶಿಕ್ಷಣ ಪದ್ದತಿಯನ್ನು ಚೆನ್ನಾಗಿ ಅಭ್ಯಸಿದ್ದರಿಂದ ಅದನ್ನೇ ಹತ್ತಾರು ವಿದ್ಯಾರ್ಥಿಗಳಿಗೆ ಕಲಿಸುತ್ತಲೇ ತನ್ನ ಜೀವನನ್ನೇಕೆ ರೂಪಿಸಿಕೊಳ್ಳಬಾರದು ಎಂದು ತೀರ್ಮಾನಿಸಿ, ಗುರುವಿನ ಆಶೀರ್ವಾದ ಪಡೆದು ಮೊದಲ ನಾಲ್ಕೈದು ವರ್ಷಗಳ ಕಾಲ ನಗರದ ಅನೇಕ ಪ್ರಖ್ಯಾತ ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠವನ್ನು ಹೇಳಿಕೊಡುತ್ತಲೇ ದೂರ ಶಿಕ್ಷಣದಡಿಯಲ್ಲಿ ತನ್ನ ಪದವಿಯನ್ನೂ ಪೂರೈಸಿದ ರಘುವಿಗೆ ಕ್ರಮೇಣ ಒಂದೊಂದೇ ಸಣ್ಣ ಸಣ್ಣ ಕೆಲಸಗಳು ಲಭಿಸುತ್ತಾ, ತನ್ನ ಸಂಗೀತ ಸಂಯೋಜನೆಯಲ್ಲಿನ ಅನುಭವವನ್ನು ವೃದ್ಧಿಸಿಕೊಂಡು ಹತ್ತಾರು ಸಂಗೀತದ ಆಲ್ಬಂಗಳಿಗೆ ಸಂಗೀತ ಸಂಯೋಜನೆ ಮಾಡಿ ನಂತರ ಕನ್ನಡ ಮತ್ತು ತುಳು ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡುವುದರಲ್ಲಿಯೂ ಯಶಸ್ವಿಯಾದ. ಸಂಗೀತದಲ್ಲಿ ಇಷ್ಟೆಲ್ಲಾ ಪ್ರಗತಿಗಳನ್ನು ಸಾಧಿಸಿದ್ದರೂ ಸಹಾ ಹಂಸಲೇಖರವರೊಂದಿಗಿನ ಗುರು ಶಿಷ್ಯ ಅನುಬಂಧವಂತೂ ಹಾಗೆಯೇ ಅವಿನಾಭಾವವಾಗಿ ಮುಂದುವೆರೆದುಕೊಂಡು ಹೋಗುತ್ತಲೇ ಇತ್ತು.

ತನ್ನ ಸಂಗೀತ ಸಂಯೋಜನೆಗಾಗಿ, ಹಾಡುಗಳ ಧ್ವನಿಮುದ್ರಣಕ್ಕೆ, ಸಂಕಲನ ಮಾಡುವುದಕ್ಕೆ ಹೀಗೆ ಒಂದು ಹಾಡು ಸುಂದರವಾಗಿ ತನ್ನ ಮನದಲ್ಲಿರುವಂತೆಯೇ ಮೂಡಿ ಬರಲು ಹತ್ತಾರು ಸ್ಟುಡಿಯೋಗಳನ್ನು ಸುತ್ತಿ ಬರುವುದರಲ್ಲಿಯೇ ತನ್ನ ಅಮೂಲ್ಯ ಸಮಯ ಕಳೆದುಹೋಗುತ್ತಿದ್ದದ್ದನ್ನು ಮನಗಂಡ ರಘು ಎಲ್ಲಾ ಸಂಗೀತಗಾರರ ಅಪೇಕ್ಷೆಯಂತೆಯೇ ತನ್ನದೇ ಆದ ಸ್ವಂತದ್ದೊಂದು ಸ್ಟುಡಿಯೋವೊಂದನ್ನು ಏಕೆ ಆರಂಭಿಸಬಾರದು? ಎಂದು ಯೋಚನೆ ಮಾಡುತ್ತಿದ್ದಂತೆಯೇ ಅದಕ್ಕೆ ರಾಯರ ಅನುಗ್ರಹವೂ ದೊರೆತು ಹತ್ತಾರು ಹಿತೈಷಿಗಳ ಪ್ರತ್ಯಕ್ಷ ಮತ್ತು ಪರೋಕ್ಷ ಸಹಕಾರಗಳಿಂದಾಗಿ ಚಿಕ್ಕದಾದರೂ, ಚೊಕ್ಕದಾದ ರಘುವಿನ ಕನಸಿನ ಕೂಸಾದ ಸ್ವರಾಂಜಲಿ ಸ್ಟುಡಿಯೋ ಸಿದ್ಧವಾಯಿತು.

ಕೈಯ್ಯಲ್ಲಿ ಹತ್ತಾರು ಕೆಲಸವಿದೆ. ಸ್ಟುಡಿಯೋ ಕೂಡಾ ಸಿದ್ಧವಾಗಿದೆ. ಅದರ ಅಧಿಕೃತ ಉದ್ಘಾಟನೆಯನ್ನು ತನಗೆ ಸಂಗೀತದ ಓಂಕಾರವನ್ನು ಕಲಿಸಿದ ಗುರುಗಳಾದ ಹಂಸಲೇಖಾರವರ ಅಮೃತ ಹಸ್ತದಿಂದಲೇ ಆಗಬೇಕು ಎಂಬುದು ರಘುವಿನ ಧೃಢ ಸಂಕಲ್ಪವಾಗಿತ್ತು. ಹೇಳೀ ಕೇಳೀ ಹಂಸಲೇಖರವರು ಹತ್ತಾರು ಕೆಲಸಗಳಲ್ಲಿ ಸದಾಕಾಲವೂ ನಿರತರಾಗಿರುವ ಕಾರಣ, ಅವರ ಸಮಯ ಸಿಗುವುದೇ ಸ್ವಲ್ಪ ಕಷ್ಟವಾದರೂ, ಏನೇ ಆಗಲೀ, ಎಷ್ಟೇ ದಿನವಾಗಲೀ ಗುರುಗಳಿಂದಲೇ ತನ್ನ ಸ್ಟುಡಿಯೋ ಆರಂಭ ಮಾಡಿಸಲೇಬೇಕು ಎನ್ನುವುದು ರಘುವಿನ ಆಸೆಯಾಗಿತ್ತು.

ಛಲ ಬಿಡದ ತ್ರಿವಿಕ್ರಮನಂತೆ, ಗುರುವಿನ ಬೆನ್ನು ಹತ್ತಿದ. ಗುರುಗಳೂ ಸಹಾ ಬರಲು ಒಪ್ಪಿಗೆ ಸೂಚಿಸುತ್ತಿದ್ದಂತೆಯೇ ರಘುವಿಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗಿತ್ತು ಕೂಡಲೇ ತನ್ನ ಸ್ಟುಡಿಯೋ ಉದ್ಘಾಟನೆಗಾಗಿ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿರುವಾಗ, ತನ್ನ ಸ್ಟುಡಿಯೋ ಇತರೇ ಸ್ಟುಡಿಯೋಗಳಿಗಿಂತಲೂ ವಿಭಿನ್ನವಾಗಿರಬೇಕು. ತನ್ನ ಸ್ಟುಡಿಯೋ ಒಳಗೆ ಬರುತ್ತಿದ್ದಂತೆಯೇ ಸಂಗೀತ ವಾತಾವರಣ ತಂತಾನೇ ಬರಬೇಕು ಎಂಬ ಕಲ್ಪನೆ ಮನದಲ್ಲಿ ಮೂಡಿತು.

ಸಾಧಾರಣವಾಗಿ ಎಲ್ಲರ ಮನೆಗಳಲ್ಲಿನ ದೇವರ ಮನೆಗಳಲ್ಲಿ ದೇವರ ಪ್ರತಿಮೆಗಳು ಮತ್ತು ಫೋಟೋಗಳನ್ನು ಇಟ್ಟು ಪೂಜಿಸುತ್ತೇವೆ. ಅದೇ ರೀತಿ ಮನೆಗಳಲ್ಲಿ ಗುರು ಹಿರಿಯರ ಮತ್ತು ನಮ್ಮ ನೆಚ್ಚಿನ ನಾಯಕರುಗಳ ಫೋಟೋವನ್ನು ಇಟ್ಟು ಆದನ್ನು ಪ್ರತಿ ದಿನವೂ ನೋಡುವ ಮುಖಾಂತರ ಅವರ ಪ್ರಭಾವ ನೆಮ್ಮೆಲ್ಲರ ಮೇಲೂ ಆಗಲಿ ಎನ್ನುವುದು ಇದರ ಉದ್ದೇಶವಾಗಿದೆ. ಅಂದು ಏಕಲವ್ಯ ಗುರು ದ್ರೋಣಾಚಾರ್ಯರ ಮಣ್ಣಿನ ಪ್ರತಿಮೆ ಮಾಡಿಟ್ಟುಕೊಂಡು ವಿದ್ಯಾಭ್ಯಾಸ ಮಾಡಿದರೆ, ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ತಮ್ಮ ಗುರುಗಳಾದ ಶ್ರೀ ಹಂಸಲೇಖರವರ ತೈಲವರ್ಣಚಿತ್ರವನ್ನು ತಮ್ಮ ಈ ಸ್ಟುಡಿಯೋವಿನ ಮುಂದೆ ಮೂಡಿಸಿದ್ದಾರೆ ರಘು. ಈ ಮೂಲಕ ಸ್ವರಾಂಜಲೀ ಸ್ಟುಡಿಯೋ ಪ್ರವೇಶ ಮಾಡುವ ಪ್ರತಿಯೊಬ್ಬರಿಗೂ ಹಸನ್ಮುಖಿ ಹಂಸಲೇಖಾರವರ ಮುಖಾರವಿಂದವನ್ನು ನೋಡುತ್ತಿದ್ದಂತೆಯೇ ಮನಸ್ಸಿಗೆ ಆಹ್ಲಾದಕರ ಅನುಭವವಾಗಿ ಹಂಸಲೇಖರಂತೆಯೇ ಸ್ಪೂರ್ತಿ ಹೊಮ್ಮಿ ಅನನ್ಯವಾದ ಮಾಧುರ್ಯಗಳು ಮೂಡಿ ಬರುತ್ತದೆ ಎಂದರೂ ತಪ್ಪಾಗಲಾರದು.

ಶಾರ್ವರೀ ಸಂವತ್ಸರದ ಮಾಘ ಬಹುಳ ಚೌತಿ ಅಂದರೆ 3.3.2021 ಬುಧವಾರದಂದು ನಾದಬ್ರಹ್ಮ ಹಂಸಲೇಖರವರು ನಿಗಧಿತ ಸಮಯಕ್ಕೆ ಸರಿಯಾಗಿ ಆಗಮಿಸಿ ಚಿಕ್ಕದಾದರೂ ಶಿಷ್ಯನಿಗೆ ಅತ್ಯಂತ ಹೃದಯಸ್ಪರ್ಶಿ ಮತ್ತು ಉತ್ತೇಜಕರೀತಿಯಲ್ಲಿ ಹಿತವಚನಗಳನ್ನು ನುಡಿದು, ಗುರುಡಿ (ಗುರು+ಗರುಡಿ) ಎಂಬ ಹೊಸಾ ಪದವನ್ನು ಪರಿಚಯಿಸಿ, ಸ್ಟುಡಿಯೋವನ್ನು ಉಧ್ಘಾಟನೆ ಮಾಡಿ, ತಮ್ಮ ನೆಚ್ಚಿನ ಹಾರ್ಮೋನಿಯಂ ನುಡಿಸುವ ಮೂಲಕ ಸಾಂಕೇತಿಕವಾಗಿ ಮುದ್ರಣವನ್ನೂ ಮಾಡುವ ಮೂಲಕ ಸ್ವರಾಂಜಲಿಗೆ ಅಧಿಕೃತವಾಗಿ ಚಾಲನೆ ನೀಡಿದರು.

ಪ್ರತಿಯೊಂದು ಕಾರ್ಯವೂ ಯಶಸ್ವಿಯಾಗಬೇಕಿದ್ದರೆ, ಮುಂದೆ ಒಂದು ಸ್ಪಷ್ಟವಾದ ಗುರಿ ಇರಬೇಕು ಮತ್ತು ಹಿಂದೆ ದಿಟ್ಟತನದ ನಿಸ್ವಾರ್ಥ ಗುರು ಇರಬೇಕು ಎನ್ನುವಂತೆ ತಮ್ಮ ಶಿಷ್ಯನ ಗುರಿಯು ಯಶಸ್ವಿಯಾಗಲೆಂದು ಅತನೊಂದಿಗೆ ಸದಾಕಾಲವೂ ಇದ್ದು ಆತನ ಯಶಸ್ವಿಗೆ ಕಾರಣೀಭೂತರಾಗುತ್ತಿರುವ ಹಂಸಲೇಖಾರವರು ನಿಜಕ್ಕೂ ಅಭಿನಂದನಾರ್ಹರು ಮತ್ತು ಶ್ಲಾಘನೀಯರು ಎಂದರೂ ಅತಿಶಯೋಕ್ತಿಯೇನಲ್ಲ.

ನಮ್ಮ ಮಕ್ಕಳು ಕೇವಲ ಡಾಕ್ಟರ್, ಇಂಜಿನಿಯರ್ ಇಲ್ಲವೇ ಚಾರ್ಟಡ್ ಅಕೌಂಟೆಂಟ್ ಆಗಿ ಲಕ್ಷ ಲಕ್ಷ ಹಣ ಸಂಪಾದನೆ ಮಾಡಬೇಕು ಎಂದು ಯೋಚಿಸುವವರಿಗೆ ಕೇವಲ ಈ ವೃತ್ತಿಯಿಂದಲ್ಲದೇ, ಸಂಗೀತದ ಪ್ರವೃತ್ತಿಯಿಂದಲೂ ನೆಮ್ಮದಿಯ ಜೀವನ ನಡೆಸ ಬಹುದು ಎನ್ನುವುದಕ್ಕೆ ರಘು ಧನ್ವಂತ್ರಿಯ ಈ ಸ್ವರಾಂಜಲೀ ಸ್ಟುಡಿಯೋ ಮಾಸರಿಯಾಗಿದೆ ಮತ್ತು ಪ್ರೇರಣೆಯಾಗಿದೆ.

ತಮ್ಮ ಜೀವನದಲ್ಲಿ ,ತನ್ನ ಸಾಧನೆಗೆ ಗುರುವಾಗಿ ಮಾರ್ಗದರ್ಶಕರಾಗಿ, ನಿಂತು ಸಹಾಯ ಮಾಡಿದ ಹಂಸಲೇಖರನ್ನು ಮರೆಯದೇ ಅವರಿಂದಲೇ ತನ್ನ ಹೊಸಾ ಕನಸಿಗೆ ಓಂಕಾರವನ್ನು ಹಾಡಿಸಿದ ರಘು ಧನ್ವಂತ್ರಿಯ ಸ್ವರಾಂಜಲೀ ಸ್ಟುಡಿಯೋ ಅತ್ಯಂತ ಯಶಸ್ವಿಯಾಗಲಿ ಮತ್ತು ಈ ಸ್ಟುಡಿಯೋವಿನ ಮೂಲಕ ಸಾವಿರಾರು ಸಂಗೀತ ಕಲಾವಿದರುಗಳು ಈ ನಾಡಿಗೆ ಪರಿಚಯವಾಗಲಿ, ತನ್ಮೂಲಕ ನಮ್ಮೆಲ್ಲರ ಮನಸ್ಸಿಗೆ ಮುದ ನೀಡುವ ಸಂಗೀತ ಮೂಡಿಬರಲಿ ಎಂದು ಹಾರೈಸೋಣ.

ಏನಂತೀರೀ?

ನಿಮ್ಮವನೇ ಉಮಾಸುತ

ಗಾನ ಗಾರುಡಿಗ, ಎಸ್ ಪಿ ಬಾಲಸುಬ್ರಹ್ಮಣ್ಯಂ

ಶ್ರೀಪತಿ ಪಂಡಿತರಾದ್ಯುಲು ಬಾಲಸುಬ್ರಹ್ಮಣ್ಯಂ  ಎಲ್ಲರ ಪ್ರೀತಿಯ ಎಸ್ಪಿಬಿ, ಇನ್ನೂ ಅನೇಕರಿಗೆ ಬಾಲೂ  ಅವರನ್ನು ಹೇಗೆ ಪರಿಚಯಿಸ ಬೇಕು ಎಂಬುದೇ ಬಹಳ ಕಷ್ಟಕರವಾದ ವಿಷಯ. ಗಾಯಕ, ನಟ, ಸಂಗೀತ ನಿರ್ದೇಶಕ, ಕಂಠದಾನ ಕಲಾವಿದ, ಮಿಮಿಕ್ರಿ ಕಲಾವಿದ, ಸೃಜನಶೀಲವ್ಯಕ್ತಿ, ಅನೇಕ ಹೊಸಾ ಪ್ರತಿಭೆಗಳಿಗೆ ಮಾರ್ಗದರ್ಶಿ ಹೀಗೆ ಹತ್ತು ಹಲವಾರು ವ್ಯಕ್ತಿತ್ವವನ್ನು ಹೊಂದಿದ್ದರು ಎಂದರೂ ತಪ್ಪಾಗಲಾರದು.

ಸ್ವಾತಂತ್ರ್ಯ ಪೂರ್ವ ಮದ್ರಾಸ್ ರೆಸೆಡೆನ್ಸಿ ಪ್ರಾಂತ್ಯಕ್ಕೆ ಸೇರಿದ್ದ ಇಂದಿನ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಖ್ಯಾತ ಹರಿಕಥಾ ವಿದ್ವಾಸಂರಾಗಿದ್ದ ಶ್ರೀ  ಸಾಂಬಮೂರ್ತಿಗಳು ಮತ್ತು ಶಕುಂತಲಮ್ಮ ದಂಪತಿಗಳ ಪುತ್ರನಾಗಿ 1946ರ ಜೂನ್ 4ರಂದು ಜನಿಸಿದರು.  ಬಾಲ್ಯದಿಂದಲೂ ಬುದ್ಧಿವಂತ ಅದರೇ ಅಷ್ಟೇ ತುಂಟತನದವರಾಗಿದ್ದ ಬಾಲೂ ಕುಟುಂಬದವರೆಲ್ಲರ ಅಕ್ಕರೆ ಮತ್ತು ಪ್ರೀತಿಯನ್ನು ಗಳಿಸಿದ್ದರು.

ಓದಿನಲ್ಲಿ ಅತ್ಯಂತ ಚುರುಕಾಗಿದ್ದರಿಂದ ಇಂಜಿನೀಯರ್ ಆಗಬೇಕೆಂಬ ಉದ್ದೇಶದಿಂದ ಅನಂತಪುರದ ಜೆಎನ್‌ಟಿಯು ಕಾಲೇಜ್ ಆಫ್ ಎಂಜಿನಿಯರಿಂಗ್‌ಗೆ ಸೇರಿಕೊಂಡರಾದರೂ ಅನಾರೋಗ್ಯದ ಕಾರಣ ತಮ್ಮ ಇಂಜೀನಿಯರಿಂಗ್ ವಿದ್ಯಾಭ್ಯಾಸವನ್ನು ಅಲ್ಲಿಗೇ ಮೊಟುಕುಗಳಿಸಬೇಕಾಯಿತು. ನಂತರ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುವ ಸಲುವಾಗಿ ಮದ್ರಾಸಿಗೆ ಬಂದು ಅಲ್ಲಿನ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್‌ನಲ್ಲಿ ಸಹಾಯಕ ಸದಸ್ಯರಾಗಿ ಸೇರಿಕೊಂಡರು. ಶಾಸ್ತ್ರೀಯವಾಗಿ  ಸಂಗೀತವನ್ನು ಕಲಿಯದಿದ್ದರೂ ಮನೆಯಲ್ಲಿದ್ದ ಸಂಗೀತಮಯ ವಾತಾವರಣ ಮತ್ತು ತಂದೆಯಿಂದ ಬಂದಿದ್ದ ಬಳುವಳಿಯ ಕಾರಣ ಕಾಲೇಜಿನ ಸ್ಪರ್ಥೆಗಳು ಮತ್ತು ಕಾರ್ಯಕ್ರಮಗಳಲ್ಲಿ ತಮ್ಮ ಕಂಠ ಸಿರಿಯಿಂದ ಅನೇಕ ಪ್ರಶಸ್ತಿಗಳನ್ನು ಮತ್ತು ಎಲ್ಲರ ಹೃನ್ಮಗಳನ್ನು ಗೆದ್ದಿದ್ದರು.

1964 ರಲ್ಲಿ, ಮದ್ರಾಸ್ ಮೂಲದ ತೆಲುಗು ಸಾಂಸ್ಕೃತಿಕ ಸಂಸ್ಥೆ ಹವ್ಯಾಸೀ ಗಾಯಕರಿಗಾಗಿ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಗೆಳೆಯರ ಒತ್ತಾದ  ಮೇರೆಗೆ ಬಾಲೂ ಆ ಸ್ಪರ್ಥೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಗಳಿಸಿದರು. ಅದೃಷ್ಟವೆಂದರೆ, ಆ ಸ್ಪರ್ಥೆಯ ತೀರ್ಪುಗಾರರಾಗಿ ಖ್ಯಾತ ಸಂಗೀತ ನಿರ್ದೇಶಕರರಾದ ಶ್ರೀ ಎಸ್. ಪಿ. ಕೋದಂಡಪಾಣಿ ಮತ್ತು ಖ್ಯಾತ ಗಾಯಕರಾದ ಶ್ರೀ ಘಂಟಸಾಲ ಅವರು ಬಾಲೂ ಅವರ ಗಾಯನಕ್ಕೆ ಮನಸೋತು, ನೀವೇಕೆ ಚಲನಚಿತ್ರದಲ್ಲಿ ಹಿನ್ನಲೆ ಗಾಯಕರಾಗಬಾರದು ಎಂದು ಕೇಳುತ್ತಾರೆ. ನಾನು  ಶಾಸ್ತ್ರೀಯವಾಗಿ ಯಾವುದೇ ಸಂಗೀತವನ್ನು  ಅಭ್ಯಾಸ ಮಾಡಿಲ್ಲ.  ಭಗವಂತಹ ಅನುಗ್ರಹದಿಂದ ಏನೋ ಅಲ್ಪ ಸ್ವಲ್ಪ ಹಾಡುತ್ತೇನೆ ಎಂದು ವಿನಮ್ರನಾಗಿ ಕೋದಂಡಪಾಣಿಯವರ ಸಲಹೆಯನ್ನು ತಿರಸ್ಕರಿದರೂ, ನಂತರ ಬಹಳ ಒತ್ತಾಯದ ಮೇರೆಗೆ ಒಮ್ಮೆ ಪ್ರಯತ್ನಿಸಿ ನೋಡೋಣ ಎಂದು ತೀರ್ಮಾನಿಸಿ, ಅದೇ ಕೋದಂಡಪಾಣಿಯವರ ನಿರ್ದೇಶನದಲ್ಲಿ ಡಿಸೆಂಬರ್ 15, 1966 ರಂದು ಶ್ರೀ ಶ್ರೀ ಶ್ರೀ ಮರ್ಯದಾ ರಾಮಣ್ಣ ಎಂಬ  ತೆಲುಗು ಚಿತ್ರದಲ್ಲಿ ಹಾಡುತ್ತಾರೆ. ಅಚ್ಚರಿ ಎಂಬಂತೆ, ಕೇವಲ ಒಂದು ವಾರದಲ್ಲೇ  ಕನ್ನಡ ಪ್ರಖ್ಯಾತ ಹಾಸ್ಯ ನಟ  ನರಸಿಂಹರಾಜು ಅವರ ಚಿತ್ರ ಕನ್ನಡದಲ್ಲಿ ನಕ್ಕರೆ ಅದೇ ಸ್ವರ್ಗ ಚಿತ್ರಕ್ಕಾಗಿ ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಗಾಯಕರಾಗಿ ಪ್ರವೇಶ ಮಾಡುತ್ತಾರೆ.

ಬಾಲೂ  ಅವರು ಹಿನ್ನಲೆ ಗಾಯಕರಾಗುವುದಕ್ಕೂ ಮೊದಲು ಕನ್ನಡ, ತೆಲುಗು, ತಮಿಳು, ಮಲಯಾಳಂ,  ಸಂಸ್ಕೃತ, ಇಂಗ್ಲಿಷ್ ಮತ್ತು ಉರ್ದು  ಭಾಷೆಗಳನ್ನು ಸುಲಲಿತವಾಗಿ ಬಲ್ಲ ಅದ್ಭುತ ಶಾರೀರದ ಶ್ರೀ  ಪಿ.ಬಿ.ಶ್ರೀನಿವಾಸ್,  ಘಂಟಸಾಲ, ಸೀರ್ಕಾಳೀ ಗೋವಿಂದರಾಜನ್, ಬಾಲಮುರಳಿ ಕೃಷ್ಣ, ಏಸುದಾಸ್ ಮುಂತಾದವರು ದಕ್ಷಿಣ ಭಾರತದ ಚಲನಚಿತ್ರರಂಗದಲ್ಲಿ ದಿಗ್ಗಜರೆನಿಸಿಕೊಂಡಿರುತ್ತಾರೆ. ಈ ಎಲ್ಲಾ ಗಾಯಕರ  ಅವರವರ ಶೈಲಿಗೆ ಬದ್ಧರಾಗಿದ್ದು ಅದು ನಾಯಕ ನಟರಿಗೆ ಒಗ್ಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ  ಅಷ್ಟಾಗಿ ಯಾರೂ ಗಮನ ಹರಿಸುತ್ತಿರಲಿಲ್ಲ. ಆದರೆ ಒಮ್ಮೆ ಬಾಲೂ  ಅವರು ದಕ್ಷಿಣ ಭಾರತದ ಚಿತ್ರರಂಗಕ್ಕೆ ಪರಿಚಿತರಾದ ಕೂಡಲೇ ಬಾಲೂರವರು ತಾವು ಹಾಡಿದ ಗೀತೆಗೆ ಯಾವ ನಟ  ಅಭಿನಯಿಸುತ್ತಿದ್ದಾರೆ ಎಂಬುದನ್ನು ಮೊದಲು ವಿಚಾರಿಸಿ ಆ ನಟನ ಹಾವ ಭಾವ ಮತ್ತು ಧ್ವನಿಯನ್ನು ಒಮ್ಮೆ ಅಧ್ಯಯನ ಮಾಡಿ ನಂತರ ಆತನೇ ಹಾಡುತ್ತಿದ್ದಾನೆನೋ ಎನ್ನುವಂತೆ ಭಾಸವಾಗುವ ಹಾಗಿ ಧ್ವನಿಯನ್ನು ಅನುಕರಣೆ ಮಾಡುವ ಕಲೆಯನ್ನು ಸಿದ್ಧ ಪಡಿಸಿಕೊಂಡಿದ್ದರು.

ಈ ವಿಶಿಷ್ಟ ಕಲೆಯಿಂದಾಗಿಯೇ ಬಾಲೂ ಬಹುಬೇಗ ಪ್ರಖ್ಯಾತರಾಗಿ ಅಂದಿನ ಖ್ಯಾತ ನಟರುಗಳಾಗಿದ್ದ  ಎಂ.ಜಿ.ಆರ್, ಎನ್.ಟಿ.ಆರ್. ಶಿವಾಜಿ ಗಣೇಶನ್, ನಾಗೇಶ್ವರ್ ರಾವ್, ಜೆಮಿನಿ ಗಣೇಶನ್ ಮುಂತಾದವರುಗಳಿಂದ ಹಿಡಿದು  ಇತ್ತೀಚಿನ ನಟರುಗಳಿಗೂ ಹಾಡುಲಾರಂಭಿಸಿದರು. ಬಾಲೂ ಮತ್ತು  ಕನ್ನಡ ಖ್ಯಾತ ನಟರುಗಳಾದ ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರ ನಡುವಿನ ಗೆಳೆತನ ವೃತ್ತಿ ಜೀವನಕ್ಕೂ  ಮಿಗಿಲಾಗಿ, ಏಕವಚನದಲ್ಲಿ ಮಾತನಾಡುವ ಸಹೋದರರಂತಿತ್ತು. ಅದರಲ್ಲೂ ವಿಷ್ಣುವರ್ಧನ್ ಅವರು ತಮ್ಮ ಹಾಡುಗಳನ್ನು ಕಡ್ಡಾಯವಾಗಿ ಬಾಲೂ ಅವರಿಂದಲೇ ಹಾಡಿಸಲೇ ಬೇಕೆಂಬ ಪೂರ್ವ ಷರತ್ತನ್ನು ಹಾಕಿಯೇ ಚಿತ್ರಗಳಿಗೆ ಸಹಿ ಮಾಡುತ್ತಿದ್ದರೆಂದರೆ ಅವರಿಬ್ಬರ ನಡುವಿನ ಸಂಬಂಧ ಹೇಗೆ ಇತ್ತು ಎಂಬುದರ ಅರಿವಾಗುತ್ತದೆ. ಉಳಿದ ಗಾಯಕರ ಹಾಡುಗಳಿಗಿಂತ ಬಾಲೂ ಹಾಡುಗಳಲ್ಲಿ ಹೆಚ್ಚಿನ ಮಾರ್ಧನಿ ಇರುವ ಕಾರಣ, ಆ ಹಾಡುಗಳಿಗೆ ಸುಲಭವಾಗಿ  ಆಭಿನಯಿಸಬಹುದು ಎಂಬುದು ವಿಷ್ಣು ಅವರ  ಅಭಿಪ್ರಾಯವಾಗಿತ್ತು. ಅದೇ ಕಾರಣದಿಂದಾಗಿಯೇ  ನಾಗರ ಹಾವು, ಬಂಧನ, ಕರ್ಣ, ಆಪ್ತಮಿತ್ರ, ಮತ್ತು ವಿಷ್ಣು ರವರ ಕಡೆಯ ಚಿತ್ರವಾದ ಆಪ್ತರಕ್ಷಕದ ವರೆಗೂ ಇತ್ತು.

ಎಂಭತ್ತರ ದಶಕ ನಿಜಕ್ಕೂ ಬಾಲೂ  ಅವರ ವೃತ್ತಿ ಬದುಕಿನಲ್ಲಿ ಮಹತ್ತರ ತಿರುವನ್ನು ಪಡೆಯಿತು. 1981ರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗದ ಹೆಸರಿನಲ್ಲಿಯೇ ಶಾಸ್ತ್ರೀಯ ಸಂಗೀತಗಾರ ಚಿತ್ರಕಥೆಯನ್ನು ಹೊಂದಿದ್ದ ಕೆ.ವಿಶ್ವನಾಥ್ ನಿರ್ದೇಶನದ,  ಕೆ.ವಿ. ಮಹಾದೇವನ್ ಅವರ ರಾಗ ಸಂಯೋಜನೆಯಲ್ಲಿ ತಯಾರಾದ ಶಂಕರಾಭರಣಂ ಚಿತ್ರದ ಅಷ್ಟೂ ಹಾಡುಗಳನ್ನು ಬಾಲೂ ರವರು ಹಾಡುವ ಮೂಲಕ ಎಲ್ಲಾ ಶಾಸ್ತ್ರೀಯ ಸಂಗೀತಗಾರರೂ ಮೂಗಿನಮೇಲೆ ಬೆರೆಳಿಡುವಂತೆ ಮಾಡಿದರು. ಶಂಕರಾಭರಣಂ ಹಾಡುಗಳನ್ನು ಕೇಳಿದವರು, ಬಾಲೂರವರು ಶಾಸ್ತ್ರೀಯ ಸಂಗೀತವನ್ನು ಕಲಿತಿಲ್ಲ ಎಂದು ಹೇಳಿದರೆ ಖಂಡಿತವಾಗಿಯೂ ನಂಬಲಾರರು. ಈ ಚಿತ್ರದ ಹಾಡುಗಾರಿಕೆಯ ಮೂಲಕ  ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದದ್ದಲ್ಲದೇ,  ಮೊದಲ ಬಾರಿಗೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.

1981ರಲ್ಲಿಯೇ ತಮಿಳು ಮೂಲದನೊಬ್ಬ ಉತ್ತರ ಭಾರತದ ಹೆಣ್ಣು  ಮಗಳನ್ನು ಪ್ರೀತಿಸುವ ಕಥಾಹಂದರದ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರು ನಿರ್ದೇಶಿಸಿದ ಕಮಲಹಾಸನ್ ಮತ್ತು ರತಿ ಅಗ್ನಿಹೋತ್ರಿ ನಟಿಸಿದ ಹಿಂದಿ ಚಲನಚಿತ್ರ ಏಕ್ ದುಜೆ ಕೆ‌ ಲಿಯೇ ಮೂಲಕ ಬಾಲೂ  ಹಿಂದಿ ಸಿನಿಮಾರಂಗಕ್ಕೂ ಪದಾರ್ಪಣೆ ಮಾಡಿದ್ದರು. ಆ ಸಿನಿಮಾದ ತೆರೇ ಮೇರೇ ಬೀಚ್ ಮೇ… ಹಾಡು ಎಲ್ಲರ ಮನಸೂರೆಗೊಂಡಿತಲ್ಲದೇ, ಆ ಹಾಡಿಗಾಗಿ  ಮತ್ತೊಮ್ಮೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.

ಒಂದೇ ದಿನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಧ್ವನಿಮುದ್ರಣ ಮಾಡಿದ ಸಾರ್ವಕಾಲಿಕ ದಾಖಲೆ ಎಸ್ಪಿಬಿ ಆವರ ಹೆಸರಿನಲ್ಲಿದೆ. 1981ರಲ್ಲಿ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಪಿ. ಉಪೇಂದ್ರ ಕುಮಾರ್  ಅವರ ನಿರ್ದೇಶನದಲ್ಲಿ ಬೆಳಿಗ್ಗೆ 9:00 ರಿಂದ ರಾತ್ರಿ 9:00 ವರೆಗೆ 12 ಗಂಟೆಗಳಲ್ಲಿ 21 ಕನ್ನಡ ಹಾಡುಗಳನ್ನು ಹಾಡುವ ಮೂಲಕ ಅದುವರೆಗೂ ಇದ್ದ ಎಲ್ಲಾ ದಾಖಲೆಯನ್ನು ಧೂಳಿಪಟ ಮಾಡಿದ್ದರು.  ಅದೇ ರೀತಿ ಒಂದೇ ದಿನದಲ್ಲಿ ತಮಿಳು ಹಾಗೂ ತೆಲುಗಿನಲ್ಲಿ 19 ಹಾಡುಗಳನ್ನೂ ಹಿಂದಿಯಲ್ಲಿ 16 ಹಾಡುಗಳನ್ನು ಹಾಡಿದ್ದರು

ದಕ್ಷಿಣಭಾರತ ಖ್ಯಾತ ಸಂಗೀತ ನಿರ್ದೇಶಕರಾದ  ಇಳೆಯರಾಜ ಮತ್ತು ಬಾಲೂ ಅವರ ಒಡನಾಟ, ಅವರಿಬ್ಬರೂ ಸಿನಿಮಾರಂಗಕ್ಕೆ ಬರುವ ಮುಂಚಿನಿಂದಲೂ ಇತ್ತು. ಅನಿರುಧ್ ಹಾರ್ಮೋನಿಯಂನಲ್ಲಿ, ಇಳೆಯರಾಜಾ ಗಿಟಾರ್ ಮತ್ತು  ಹಾರ್ಮೋನಿಯಂ, ಬಾಸ್ಕರ್ ತಾಳವಾದ್ಯ ಮತ್ತು ಗಂಗೈ ಅಮರನ್ ಅವರ ಗಿಟಾರ್‌ ವಾದನದ ತಂಡವೊಂದನ್ನು ರಚಿಸಿಕೊಂಡು ದಕ್ಷಿಣ ಭಾರತದಾದ್ಯಂತದ ಅನೇಕ  ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ನಾನಾ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಈ ಸಂಬಂಧ ಮತ್ತು ಅನುಬಂಧ ಹಾಗೆಯೇ ಮುಂದು ವರೆದು ಇಳೆಯರಾಜಾ ಅವರ ಬಹುತೇಕ ಹಾಡುಗಳಿಗೆ ಬಾಲುರವರೇ ಗಾಯಕರಾಗಿರುವುದು ಗಮನಾರ್ಹ ವಿಷಯವಾಗಿದೆ. ಅದರಲ್ಲೂ ಸಾಗರ ಸಂಗಮಂ, ರುದ್ರವೀಣಾದಂತಹ ಶಾಸ್ತ್ರೀಯ ಸಂಗೀತಾಧಾರಿತ ಎಲ್ಲರ ಮನಸೂರೆಗೊಂಡಿದ್ದಲ್ಲದೆ ಇಬ್ಬರಿಗೂ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ತಂದು ಕೊಟ್ಟಿತು.

ಬಾಲುರವರು ಹಾಡುವಾಗ ತಮ್ಮ ಸೃಜನಶೀಲ ಪ್ರತಿಭೆಯಿಂದಾಗಿ ಸಂಗೀತ ನಿರ್ದೇಶಕರು ಬಯಸಿದ್ದಕ್ಕಿಂತಲೂ ಹೆಚ್ಚಿನ ಮಾಧುರ್ಯತೆಯನ್ನು ತುಂಬುತ್ತಿದ್ದ ಕಾರಣ ಬಹುತೇಕ ಎಲ್ಲಾ ಸಂಗೀತ ನಿರ್ದೇಶಕರ ಅಚ್ಚು ಮೆಚ್ಚಿನ ಗಾಯಕರಾಗಿದ್ದರು. ಅದೂ ಅಲ್ಲದೇ ಅವರೊಂದಿಗೆ ಹಾಡುತ್ತಿದ್ದ ಸಹಗಾಯಕಿಯರುಗಳಾಗಿದ್ದ ಎಲ್. ಆರ್. ಈಶ್ವರಿ, ಎಸ್.ಜಾನಕಿ, ಪಿ. ಸುಶೀಲ, ಕಸ್ತೂರಿ ಶಂಕರ್, ಬಿ.ಕೆ. ಸುಮಿತ್ರ, ಚಿತ್ರಾ ಅಲ್ಲದೇ ಇತ್ತೀಚಿನ ಗಾಯಕಿಯರ ವರೆಗೂ ಅವರು ಸ್ಪೂರ್ತಿ ತುಂಬುತ್ತಿದ್ದರು. ಹಾಗಾಗಿಯೇ ಇವರೆಲ್ಲರ ಯುಗಳ ಗಾಯನ ಅದ್ಭುತವಾಗಿ ಮೂಡಿ ಬರಲು ಸಾಧ್ಯವಾಗಿದೆ.

ತಮ್ಮ ಮೊದಲ ಹಿಂದಿ ಚಿತ್ರದ ಹಾಡಿಗೇ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರೂ ಅದೆಕೋ ಏನೋ  ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿದ್ದಂತೆ ಹಿಂದೀ ಚಿತ್ರರಂಗದಲ್ಲಿ ವಿಜೃಂಭಿಸಲು ಬಾಲುರವರಿಗೆ ಸಾಧ್ಯವಾಗಲಿಲ್ಲ. 1989 ರಲ್ಲಿ ಸೂರಜ್ ಆರ್. ಬರ್ಜತ್ಯ ನಿರ್ದೇಶನದದ ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಅಭಿನಯದ  ಮೈನೆ ಪ್ಯಾರ್ ಕಿಯಾ ಚಿತ್ರದಲ್ಲಿ ಮತ್ತೊಮ್ಮೆ ಬಾಲೂರವರಿಗೆ ಹಾಡಲು ಅವಕಾಶ ಸಿಕ್ಕಿ ಆ ಚಿತ್ರದ ಎಲ್ಲಾ ಹಾಡುಗಳೂ ಅತ್ಯಂತ ಯಶಸ್ವಿಯಾಯಿತಲ್ಲದೇ,  ದಿಲ್ ದಿವಾನಾ ಹಾಡಿನ  ಅತ್ಯುತ್ತಮ  ಹಿನ್ನೆಲೆ ಗಾಯಕರಾಗಿ ಎಂಬ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗಳಿಸಿದರು. ಅಲ್ಲಿಂದ ಮುಂದೆ ಸಲ್ಮಾನ್ ಖಾನ್ ಅವರ ಬಹುತೇಕ ಚಿತ್ರಗಳಿಗೆ ಧ್ವನಿಯಾದರು. ಹಮ್ ಆಪ್ಕೆ ಹೈ ಕೌನ್ ಚಿತ್ರದಲ್ಲಿ ಲತಾ ಮಂಗೇಶ್ಕರ್ ಅವರೊಂದಿಗೆ ಬಾಲೂ ರವರು ಹಾಡಿದ ದೀದಿ ತೇರಾ ದೇವರ್ ದಿವಾನಾ.. ಇಂದಿಗೂ ಬಹಳ ಜನಪ್ರಿಯವಾಗಿದೆ.

ಇಷ್ಟೆಲ್ಲಾ ಗಾಯನದ ಸಾಧನೆಯ ಮಧ್ಯೆಯೂ ಬಾಲೂ ರವರು ಕಂಠದಾನ ಕಲಾವಿದರಾಗಿಯೂ  ಪ್ರಖ್ಯಾತರಾಗಿ ಅದರಲ್ಲಿನ ಸಾಧನೆಗಾಗಿಯೂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು ಎಂದರೆ ಆಶ್ಚರ್ಯವಾಗಹುದು. ಕೆ.ಬಾಲಚಂದರ್ ಅವರ ತಮಿಳು ಚಿತ್ರ ಮನ್ಮಧ ಲೀಲಾದ ತೆಲುಗು ಆವೃತ್ತಿ ಮನ್ಮಧಾ ಲೀಲೈ ಚಿತ್ರಕ್ಕೆ ಕಮಲಹಾಸನ್ ಅವರಿಗೆ  ಡಬ್ಬಿಂಗ್ ಮಾಡುವ ಮೂಲಕ ಕಂಠದಾನ ಕಲಾವಿದರಾದರು. ತಮಿಳು ಮತ್ತು ತೆಲುಗು ಭಾಷೆಯ ಮೇಲೆ ಹಿಡಿತ ಹೊಂದಿದ್ದ ಕಾರಣ ಬಹುತೇಕ ಖ್ಯಾತ ತಮಿಳು ನಟರುಗಳು ತೆಲುಗು ಅವತರಣಿಕೆಗೆ ಮತ್ತು ತೆಲುಗು ನಟರುಗಳ ತಮಿಳು ಅವತರಣಿಕೆಗೆ ಬಾಲೂರವರು ಕಂಠದಾನ ಮಾಡುತ್ತಿದ್ದರು. ಕಮಲಹಾಸನ್ ಅವರ  ದಶಾವತಾರಂನ ತೆಲುಗು ಆವೃತ್ತಿಯ, ಕಮಲ್ ಹಾಸನ್ ನಿರ್ವಹಿಸಿದ ಹತ್ತು ಪಾತ್ರಗಳಲ್ಲಿ ಏಳು ಪಾತ್ರಗಳಿಗೆ ಅದರಲ್ಲೂ ಸ್ತ್ರೀ ಪಾತ್ರವನ್ನು ಒಳಗೊಂಡಂತೆ) ಧ್ವನಿ ನೀಡಿರುವುದು ವಿಶೇಷ,  ಅಣ್ಣಮಯ್ಯ ಮತ್ತು ಶ್ರೀ ಸಾಯಿ ಮಹೀಮಾ ಚಿತ್ರಗಳಿಗಾಗಿ ಅತ್ಯುತ್ತಮ  ಡಬ್ಬಿಂಗ್ ಕಲಾವಿದ ಎಂದು  ನಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಗಾಂಧಿ ಚಿತ್ರದ ತೆಲುಗು-ಡಬ್ ಆವೃತ್ತಿಯಲ್ಲಿ ಗಾಂಧಿ ಪಾತ್ರಧಾರಿ ಬೆನ್ ಕಿಂಗ್ಸ್ಲೆ ಅವರಿಗೂ ಡಬ್ ಮಾಡಿದ್ದರು.

ಭಾರತೀಯ ಭಾಷೆಯ ಬೇರಾವ ಭಾಷೆಯಲ್ಲಿಯೂ ಹೆಚ್ಚಾಗಿ ಕಾಣಸಿಗದ ಮತ್ತು ಕನ್ನಡ  ಸಾಹಿತ್ಯ ಸಾರಸ್ವತಲೋಕದಲ್ಲಿ ಮಾತ್ರವೇ ಕಾಣ ಬಹುದಾದಂತಹ  ಭಾವಗೀತೆಗಳು ಬಾಲೂ ರವರಿಗೆ ಅಚ್ಚುಮೆಚ್ಚಾಗಿತ್ತು, ಹಾಗಾಗಿಯೇ ಕನ್ನಡ ಅನೇಕ ಕವಿಗಳ ಭಾವಕ್ಕೆ ತಮ್ಮ ಗಾಯನ ಮೂಲಕ ಭಾವತುಂಬಿದ ಕೀರ್ತಿಯೂ ಬಾಲುರವರದ್ದಾಗಿದೆ.

ಇವೆಲ್ಲದರ ನಡುವೆಯೂ ಅಲ್ಲೊಂದು ಇಲ್ಲೊಂದು ಚಿತ್ರಗಳ ಹಾಡುಗಳಲ್ಲಿ ಅಭಿನಯಿಸುತ್ತಿದ್ದದ್ದೂ ಉಂಟು ಅದರಲ್ಲೂ ತಿರುಗು ಬಾಣ ಚಿತ್ರದ ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ, ಮಿಥಿಲೆಯ ಸೀತೆಯರು  ಚಿತ್ರದ ಜೀವನ ಉಲ್ಲಾಸ ಪಯಣ.. ಹಾಡುಗಳು ಅತ್ಯಂತ ಜನ ಪ್ರಿಯವಾಗಿದ್ದ ಕಾರಣ ತೊಂಭತ್ತರ ದಶಕದಲ್ಲಿ ಶಶಿಕುಮಾರ್ ನಾಯಕರಾಗಿದ್ದ ಕನ್ನಡ ಚಿತ್ರವಾದ ಮುದ್ದಿನ ಮಾವದಲ್ಲಿ ಅಭಿನಯಿಸಿದ್ದರು. ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ಖ್ಯಾತ ಗಾಯಕ ಬಾಲುರವರ ಶರೀರಕ್ಕೆ ಮತ್ತೊಬ್ಬ ಪ್ರಖ್ಯಾತ ವರನಟ ರಾಜಕುಮಾರ್ ಅವರು ಶಾರೀರವಿದೆ.

ಪ್ರೇಮಲೋಕ ಚಿತ್ರದ ಮೂಲಕ ಬಾಲೂ ಮತ್ತು ಹಂಸಲೇಖರವರ ನಡುವಿನ ಗಳಸ್ಯ ಗಂಠಸ್ಯ ಆರಂಭವಾಗಿ ಹಂಸಲೇಖರವರು ಸಂಗೀತ ನೀಡಿದ ಬಹುತೇಕ ಚಿತ್ರಗಳಲ್ಲಿ ಬಾಲುರವರೇ ಹಾಡಿದ್ದಾರೆ, ಹಿಂದೂಸ್ಥಾನೀ ಸಂಗೀತಾಧಾರಿತ 1995ರಲ್ಲಿ ಬಿಡುಗಡೆಯಾದ ಶ್ರೀ ಗಾನಯೋಗಿ ಪಂಚಕ್ಷರಿ ಗವಾಯಿ ಚಿತ್ರದ ಉಮಂಡು ಘುಮಂಡು ಹಾಡಿಗೆ ಮತ್ತೊಮ್ಮೆ ರಾಷ್ಟ್ರೀಯ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಗೆ ಬಾಲಸುಬ್ರಹ್ಮಣ್ಯಂ ಪಾತ್ರರಾದರು.

2000ದಿಂದ ಈಚೆಗೆ ಚಿತ್ರಗಳಿಗೆ ಹಾಡುವುದನ್ನು ಕಡಿಮೆ ಗೊಳಿಸಿದ ಬಾಲೂ ಈ-ಟೀವಿಯವರಿಗಾಗಿ ಸಂಗೀತಾಧಾರಿತ ರಿಯಾಲಿಟೀ ಶೋ ಎದೆತುಂಬಿ ಹಾಡುವೆನು, ಪಾಡುತಾ ತೀಯಗ ಎಂಬುದನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಡೆಸಿಕೊಡಲಾರಂಭಿಸಿದರು.  ಈ ಕಾರ್ಯಕ್ರಮದ ಮೂಲಕ ವಿವಿಧ ನಗರಗಳಲ್ಲಿ ಹುದುಗಿದ್ದ  ಎಲೆಮರೆಕಾಯಿಯಂತಹ ಅನೇಕ ಉದೋಯೋನ್ಮುಖ ಪ್ರತಿಭೆಗಳಿಗೆ ತಮ್ಮ ಅನುಭವವನ್ನು ಧಾರೆ ಎರೆದು ಅವರಿಗೆ ಪ್ರೋತ್ಸಾಹವನ್ನು ತುಂಬುಬ ಮುಖಾಂತರ ನೂರಾರು ಗಾಯಕ/ಗಾಯಕಿಯರನ್ನು ಪ್ರವರ್ಧಮಾನಕ್ಕೆ ತಂದರು. ಇದೇ ಕಾರ್ಯಕ್ರಮದ ಮೂಲಕ ನಾಡಿನ ಖ್ಯಾತ ವಿದೂಷಿಗಳು, ವಿದ್ವಾಂಸರುಗಳು, ಕೀರ್ತಿವಂತರನ್ನು ಪರಿಚಯಿಸಿದ ಗರಿಮೆಯೂ ಬಾಲಸುಬ್ರಹ್ಮಣ್ಯಂ ಅವರದ್ದಾಗಿದೆ.

ಇತ್ತೀಚಿನ ದಿನಗಳಲ್ಲಿ  ಅನೇಕ ಸಮಾಜಮುಖೀ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕ್ಕೊಳ್ಳುತ್ತಿದ್ದರು, 2020 ರಲ್ಲಿ  ಇಡೀ ಪ್ರಪಂಚವನ್ನೇ ಕಾಡಿದ ಮಹಾಮಾರಿ ಕರೋನ ಕುರಿತಾಗಿ ಮೇ ತಿಂಗಳಿನಲ್ಲಿ ಇಳೆಯರಾಜಾ ಅವರು ಸಂಯೋಗಿಸಿದ್ದ ಮಾನವೀಯತೆಯ ಕುರಿತಾದ ಭಾರತ್ ಭೂಮಿ ಎಂಬ ಹಾಡನ್ನು ಹಾಡುವ ಮೂಲಕ  ಪೋಲಿಸರು, ವೈದ್ಯರು, ದಾದಿಯರು ಮುಂತಾದ ಕೋವಿಡ್ ಯೋಧರಿಗೆ ಸ್ಪೂರ್ತಿಯನ್ನು ತುಂಬಿದ್ದರು.  ಇದೇ ರೀತಿಯ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಲೇ, ಅವರಿಗೆ ಆಗಸ್ಟ್ 5, 2020 ರಂದು, ಕೋವಿಡ್ ಸೋಂಕಿತರೆಂದು ಧೃಢಪಟ್ಟು ಅವರನ್ನು ಚೆನ್ನೈನ ಎಂಜಿಎಂ ಹೆಲ್ತ್‌ಕೇರ್‌ಗೆ ಸೇರಿಸಲಾಯಿತು.  ಆರಂಭದಲ್ಲಿ ನಾನು ಶೀಘ್ರವಾಗಿ ಗುಣಮುಖನಾಗಿ ನಿಮ್ಮಮುಂದೆ ಹಾಡಲು ಬರುತ್ತೇನೆ ಎಂಬ ವೀಡಿಯೋ ಸಂದೇಶವನ್ನು ಆಸ್ಪತ್ರೆಯಿಂದಲೇ ಕಳುಹಿಸಿದರಾದರೂ, ದಿನೇ ದಿನೇ ಅವರ ಆರೋಗ್ಯ ಕ್ಷೀಣಿಸುತ್ತಲೇ ಹೋಯಿತು.

ಬಾಲೂ ರವರು ಶೀಘ್ರವಾಗಿ ಗುಣಮುಖರಾಗಲೆಂದು  ಅವರ  ಅಭಿಮಾನಿಗಳು ಬೇಡಿಕೊಳ್ಳದ ದೇವರಿಲ್ಲ ಮಾಡಿಸದ ಪೂಜೆಯಿಲ್ಲ.  ಡೇ ಬಾಲೂ.. ಸೀಗ್ರಮಾ ಎಳೆಂದು ವಾಡಾ.. ಎಂದು ಕೇಳಿಕೊಂಡ  ಅವರ ಆತ್ಮೀಯ ಗೆಳೆಯರಾದ ಗಂಗೈ ಅರಮರನ್ ಮತ್ತು ಇಳೆಯರಾಜಾ ಅವರ ವೀಡಿಯೋ ಎಲ್ಲರ ಮನವನ್ನು ಕಲುಕುವಂತೆ ಮಾಡಿತ್ತು. ಎಷ್ಟೇ ಆತ್ಯುತ್ತಮವಾದ ಚಿಕಿತ್ಸೆಯನ್ನು ಕೊಡಿಸಿದರೂ ಅವಾವುದೂ ಫಲಕರಿಯಾಗದೇ, ಸೆಪ್ಟೆಂಬರ್ 25, 2020 ರಂದು ಮಧ್ಯಾಹ್ನ 1:04 ಗಂಟೆಗೆ ಗಾನ ಗಾರುಡಿಗ ಶ್ರೀ ಎಸ್. ಪಿ.  ಬಾಲಸುಬ್ರಹ್ಮಣ್ಯಂ  ನಮ್ಮನ್ನೆಲ್ಲಾ ಬಿಟ್ಟು ಅಗಲಿಹೋಗುವ ಮೂಲಕ ಇಡೀ ಸಂಗೀತ ಪ್ರಿಯರನ್ನು ಶೋಕತಪ್ತರನ್ನಾಗಿ ಮಾಡಿದರು.  ಸೆಪ್ಟೆಂಬರ್ 26, 2020 ರಂದು  ಸಕಲ ಸರ್ಕಾರೀ ಗೌರವಗಳೊಂದಿಗೆ ತಿರುವಳ್ಳೂರು ಜಿಲ್ಲೆಯ ತಾಮರೈಪಕಂನಲ್ಲಿರುವ ಅವರ ತೋಟದ ಮನೆಯಲ್ಲಿ ಅವರನ್ನು ಸಮಾಧಿ ಮಾಡಲಾಯಿತು.

ಎಸ್.ಪಿ.ಬಿಯವರು ಗಳಿಸಿದ ಪ್ರಶಸ್ತಿಗಳು ಲೆಖ್ಕವೇ ಇಲ್ಲ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, 1990 ರಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ, 2007 ರಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ – 2007 ರಲ್ಲಿ ತೆಲುಗು, ಫಿಲ್ಮ್‌ಫೇರ್ ಪ್ರಶಸ್ತಿ – 2008 ರಲ್ಲಿ ತಮಿಳು, ಫಿಲ್ಮ್‌ಫೇರ್ ಪ್ರಶಸ್ತಿ – 2011 ರಲ್ಲಿ ಕನ್ನಡ, 1996 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1995 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1988 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ 1983 ರಲ್ಲಿ, 1981 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1979 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1987 ರಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ ದಕ್ಷಿಣ ಮತ್ತು 1984 ರಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ ದಕ್ಷಿಣ.

ತಮ್ಮ ಮಧುರವಾದ ಕಂಠದಿಂದ ಹಾಡುಗಳಿಗೆ ಜೀವ ತುಂಬುತ್ತಿದ್ದ ಖ್ಯಾತ ಗಾಯಕ ಬಾಲಸುಬ್ರಹ್ಮಣ್ಯಂ ಅವರಿಗೆ ದೇಶದ ಅತ್ಯುತ್ತಮ ನಾಗರೀಕ ಪ್ರಶಸ್ತಿಗಳಾದ ಪದ್ಮಶ್ರೀ (2001), ಪದ್ಮಭೂಷಣ(2011) ಪ್ರಶಸ್ತಿಗಳು ಅದಾಗಲೇ ಲಭಿಸಿದ್ದು ಈ ಬಾರಿ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ಭಾರತ ಸರ್ಕಾರ ಬಾಲ ಸುಬ್ರಹ್ಮಣ್ಯರವಗೆ ನೀಡುವ ಮೂಲಕ ಅವರ ಸಂಗೀತ ಸಾಧನೆಯನ್ನು ಪುರಸ್ಕರಿಸಿದೆ.

ಕಳೆದ 50 ವರ್ಷಗಳಲ್ಲಿ ಭಾರತದ ಅಷ್ಟೂ ಭಾಷೆಗಳಲ್ಲದೇ ವಿದೇಶೀ ಭಾಷೆಗಳೂ ಸೇರಿದಂತೆ ಸುಮಾರು 45 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ  ಗಿನ್ನೆಸ್ ರೆಕಾರ್ಡ್ ಪುಸ್ತಕದ ದಾಖಲೆಗೂ ಬಾಲೂರವರು ಪಾತ್ರರಾಗಿದ್ದಾರೆ. ಅಂಕಿ ಸಂಖ್ಯೆಯಲ್ಲಿ ಲೆಖ್ಖಾಚಾರ ಹಾಕಿ ನೋಡಿದರೆ ಅವರು ವಿವಿಧ ಭಾಷೆಗಳಲ್ಲಿ ವರ್ಷಕ್ಕೆ ಸುಮಾರು 930 ಹಾಡುಗಳು ಅಂದರೆ, ಪ್ರತೀ ದಿನಕ್ಕೆ ಅಂದಾಜು 3 ಹಾಡುಗಳನ್ನು ಹಾಡುವ ಮೂಲಕ ಕೋಟ್ಯಂತರ ಜನರ ಮನದಲ್ಲಿ ವಿರಾಜಮಾನರಾಗಿದ್ದಾರೆ. ಈ ಹಾಡುಗಳಲ್ಲದೇ ಅವರು ಹಾಡಿದ ಖಾಸಗೀ ಆಲ್ಬಂ, ಭಕ್ತಿಗೀತೆಗಳು, ಭಾವಗೀತೆಗಳು ಕಿರುತೆರೆಯ ಸೀರಿಯಲ್ಗಳ ಶೀರ್ಷಿಕೆ ಗೀತೆಗಳಿಗೆ ಲೆಖ್ಖವೇ ಇಲ್ಲ.

ಭೌತಿಕವಾಗಿ ಎಸ್. ಪಿ.ಬಿ ಯವರು ಇಂದು ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರ ಅನುಪಮ ಹಾಡುಗಳ ಮೂಲಕ ಆಚಂದ್ರಾರ್ಕವಾಗಿ ಬಾಲೂ ರವರು ನಮ್ಮೊಂದಿಗೆ ಇದ್ದೇ ಇರುತ್ತಾರೆ. ಭಗವಂತ ಆವರಿಗೆ ಮುಂದಿನ ಜನ್ಮ ಕರುಣಿಸಿದರೆ ಅದು ಬಾಲು ಅವರ ಇಚ್ಛೆಯಂತೆ ಕನ್ನಡ ನಾಡಿನಲ್ಲೇ ಆಗಲಿ ಎಂದು ಕೇಳಿಕೊಳ್ಳೋಣ. ಕನ್ನಡಿಗರೆಂದರೆ ಬಾಲುರವರಿಗೆ ಅಪಾರವಾದ ಮಮಕಾರ ಅದೇ ರೀತಿ ಬಾಲು ಅವರನ್ನು ಕಂಡರೆ ಕನ್ನಡಿಗರಿಗೂ ಮಮತೆಯೇ.

ಏನಂತೀರೀ?

ನಿಮ್ಮವನೇ ಉಮಾಸುತ

ತಬಲಾ ವಾದಕಿ ರಿಂಪಾ ಶಿವಾ

ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಬಲಾ ವಾದನ ಅಥವಾ ತಬಲಾ ಸಾಥಿ ಎಂದಾಕ್ಷಣ ಎಲ್ಲರ ಕಣ್ಣ ಮುಂದೆಯೂ ಪುರುಷರೇ ಕಣ್ಣ ಮುಂದಿಗೆ ಬರುತ್ತಾರೆ. ಆದರೆ ಈ ಸಂಪ್ರದಾಯವನ್ನು ಮೀರಿ ಪುರುಷ ಪ್ರಧಾನದ ಏಕತಾನತೆಯನ್ನು ಮುರಿದು ಪಕ್ಕವಾದ್ಯದಲ್ಲಿ ಮಿಂಚಿ ಮೆರೆಯುತ್ತಿರುವ ತಬಲಾ ಮಾಂತ್ರಿಕ ಜಾಕೀರ್‌ ಹುಸೇನ್‌ ಅವರಿಂದ ಸರಸ್ವತಿಯ ಪ್ರತಿರೂಪ ಎಂದು ಹೊಗಳಿಸಿಕೊಂಡಿರುವ ಅಧ್ಬುತವಾದ ಪ್ರತಿಭೆಯಾದ, ಸಂಗೀತ ಲೋಕದ ಅತಿ ಅಪರೂಪದ ಸಾಧಕಿ, ಕೋಲ್ಕತ್ತದ ಕುಮಾರಿ ರಿಂಪಾ ಶಿವ ನಮ್ಮ ಈ ದಿನದ ಕಥಾವಸ್ತು.

ಫರೂಕಾಬಾದ್‌ ಘರಾನಾಕ್ಕೆ ಹೆಸರಾದ ತಬಲಾ ವಾದಕ ಪ್ರೊ. ಸ್ವಪನ್‌ ಶಿವ ದಂಪತಿಗಳಿಗೆ ಜನವರಿ 1, 1986ರಲ್ಲಿ ಜನಿಸಿದ ರಿಂಪಾ, ಬಾಲ್ಯದಿಂದಲೂ ಆಟಿಕೆಯೊಂದಿಗೆ ಆಡುವುದರ ಬದಲು ಅಪ್ಪನ ತಬಲಾದೊಂದಿದೇ ಕಾಲ ಕಳೆದದ್ದೇ ಹೆಚ್ಚು. ತಂದೆಯಿಂದಲೇ ತನ್ನ ತಬಲಾದ ಬಾಲ ಪಾಠಗಳನ್ನು ಕಲಿಯಲಾರಂಭಿಸಿದಾಗ ಆಕೆಯ ವಯಸ್ಸು ಕೇವಲ ಮೂರು ವರ್ಷಗಳು. ತನ್ನ ವಯಸ್ಸಿನ ಬಹುಪಾಲು ಬಾಲಕಿಯರು ಗೊಂಬೆಗಳೊಂದಿಗೆ ಆಟವಾಡುವುದರಲ್ಲಿ ಮಗ್ನರಾಗಿದ್ದರೇ, ರಿಂಪಾ ಶಿವ ಮಾತ್ರಾ ತಾನಾಯಿತು ತನ್ನ ತಬಲವಾಯಿತು ಎನ್ನುವಂತೆ ಗಂಟೆಗಟ್ಟಲೆ ತಬಲಾದೊಂದಿಗೆ ಕಾಲ ಕಳೆಯುತ್ತಿದ್ದಳು. ತಬಲಾ ಮೇಲಿನ ಮಗಳ ಉತ್ಸಾಹಕ್ಕೆ ಆಕೆಯ ತಂದೆಯೂ ತಣ್ಣೀರೆರಚದೇ, ಪ್ರೋತ್ಸಾಹ ನೀಡುತ್ತಾ ಆಕೆಗೆ ತಬಲಾದ ಎಲ್ಲಾ ಪಾಠಗಳನ್ನು ಒಂದೊಂದಾಗಿ ಕಲಿಸಿಕೊಡತೊಡಗಿದರು.

ಮಗಳಿಗೆ ಸ್ವಲ್ಪ ಬುದ್ಧಿ ಬಂದ ನಂತರ ತಬಲಾ ಬದಲು ಸಿತಾರ್‌ ಕಲಿ ಮಗಳೇ ಎಂದು ಹೇಳಿದರೂ, ರಿಂಪಾಳಿಗೆ ತಬಲಾ ಮೇಲೆಯೇ ಪ್ರಾಣ. ಅವರ ತಂದೆಯವರು ತಮ್ಮಇತರೇ ಶಿಷ್ಯರಿಗೆ ತಬಲಾ ನುಡಿಸುವ ತಂತ್ರಗಳನ್ನು ಹೇಳಿಕೊಡುವುದನ್ನೇ ಗಮನಿಸುತ್ತಾ, ಏಕಲವ್ಯಳಂತೆಯೇ ಆಕೆಯೂ ತನಗೇ ಅರಿವಿಲ್ಲದಂತೆಯೇ ತಬಲಾ ನುಡಿಸುವುದರಲ್ಲಿ ನಿಷ್ಣಾತಳಾಗಿ ಹೋದಳು. ಕೇವಲ ಎಂಟೇ ವಯಸ್ಸಿಗೇ ಕೋಲ್ಕೋತ್ತಾದಲ್ಲಿ ತನ್ನ ಮೊದಲ ಕಛೇರಿ ನೀಡುವಷ್ಟು ಪ್ರಬುದ್ಧಳಾಗಿ ಬಿಟ್ಟಳು ರಿಂಪಾ.

ಚಿಕ್ಕವಳಿದ್ದಾಗ ಎಲ್ಲರೊಂದಿಗೆ ಎಲ್ಲಿಗಾದರೂ ಆಡ್ಡಾಡಿಕೊಂಡು ಬಾ ಎಂದು ಪೋಷಕರು ಬಲವಂತ ಮಾಡಿದರೂ ರಿಂಪಾ ಮಾತ್ರಾ ಅದಕ್ಕೆ ಜಪ್ಪಯ್ಯಾ ಎಂದರೂ ಒಪ್ಪದೇ, ಏ ತಬ್ಲಾ ಮೇರಾ ಸಬ್ ಕುಚ್ ಹೈ ಅಂದರೆ ಇದು ನನ್ನ ಜೀವನವೆಲ್ಲವೂ ತಬಲಾದಲ್ಲಿಯೇ ಇದೆ ಎನ್ನುತ್ತಾ ತನ್ನ ಎಲ್ಲಾ ಸಾಧನೆಗಳನ್ನೂತಬಲಾ ವಾದನದಲ್ಲಿ ಅಪೂರ್ವವಾದ ತಂತ್ರಗಾರಿಕೆ, ಮಟ್ಟುಗಳನ್ನು ನುಡಿಸಿ ತೋರಿಸುವ ಮುಖಾಂತರ ತಾಳವಾದ್ಯ ಲೋಕದಲ್ಲಿ ಅಪ್ರತಿಮೆಯಾಗಿ ಬಿಟ್ಟಳು. ಆಕೆಯ ಖ್ಯಾತಿ ದೇಶ ವಿದೇಶಗಳಲ್ಲಿ ಹಬ್ಬುತ್ತಿದ್ದಂತೆಯೇ, ಫ್ರಾನ್ಸ್‌ ಸರ್ಕಾರ Rimpa Siva Princess of Tabla ಎಂಬ ಫ್ರೆಂಚ್ ನಿರೂಪಣೆಯೊಂದಿಗೆ 98 ರಲ್ಲಿ ಸಾಕ್ಷ್ಯಚಿತ್ರವೊಂದನ್ನೂ ನಿರ್ಮಿಸಿದೆ. ಫ್ರೆಂಚ್ ಚಿತ್ರ ತಂಡವು ಸುಮಾರು 26 ದಿನಗಳ ಕಾಲ ಕೋಲ್ಕತ್ತಾದಲ್ಲಿಯೇ ಬೀಡು ಬಿಟ್ಟು ಆಕೆಯ ಕುರಿತಾದ ಅದ್ಭುತ ಸಾಕ್ಷ ಚಿತ್ರ ತಯಾರಿಸುವ ಮೂಲಕ ಆಕೆಯ ಖ್ಯಾತಿ ಮತ್ತಷ್ಟೂ ಜಗತ್ಪ್ರಸಿದ್ಧವಾಗಲು ಸಹಕಾರಿ ಆಯಿತು ಎಂದರೂ ತಪ್ಪಾಗಲಾರದು. ಆ ಚಿತ್ರದಲ್ಲಿ ಆಕೆ ತನ್ನ ತಂದೆಯೊಡನೆ ತರಬೇತಿ ಮತ್ತು ಬೋಧನಾ ಶೈಲಿ, ಆಕೆಯ ಅಭ್ಯಾಸ, ಆಕೆಯ ಸಾಧನೆ ಹೀಗೆ ಆಕೆಯ ವಿವಿಧ ಮಜಲುಗಳನ್ನು ಜಗತ್ತಿಗೆ ಪರಿಚಯಿಸಿತು.

ತನ್ನ ರಿಯಾಜ್ ಬಗ್ಗೆ ಮಾತನಾಡುತ್ತಾ ರಿಂಪಾ, ತಾನೆಂದೂ ಆಭ್ಯಾಸಕ್ಕೆ ಇಂತಿಷ್ಟೇ ಸಮಯವನ್ನು ಮೀಸಲಾಗಿಡಬೇಕು ಎಂದು ನಿರ್ಧರಿಸುವುದಿಲ್ಲ. ಸಮಯ ಸಿಕ್ಕಾಗಲೆಲ್ಲಾ ಒಂದೊಂದು ಆಭ್ಯಾಸವನ್ನು ಮಾಡುತ್ತಲೇ ಇರುತ್ತೇನೆ. ದೇಹಕ್ಕೆ ಉಸಿರಾಟ ಹೇಗೆ ಸಹಜ ಪ್ರಕ್ರಿಯೆಯೋ ಹಾಗೆಯೇ ನನ್ನ ಜೀವನದಲ್ಲಿ ತಬಲಾ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ತಬಲಾ ಅಭ್ಯಾಸ ಮಾಡುವಾಗ ನನ್ನನ್ನೇ ನಾನು ಮರೆತು ಹೋಗುವ ಕಾರಣ, ನಾನು ತಬಲಾ ಜೊತೆ ಎಷ್ಟು ಸಮಯ ಕಳೆದಿದ್ದೇನೆ ಎಂಬ ಲೆಕ್ಕವಿಡುವುದಿಲ್ಲ ಎಂದು ಮುಗ್ಧಳಾಗಿ ಹೇಳುತ್ತಾಳೆ.

ಸಣ್ಣ ವಯಸ್ಸಿನಿಂದಲೂ ತನ್ನ ಅಧ್ಭುತವಾದ ಪ್ರತಿಭೆಯಿಂದಾಗಿ ಜಗತ್ತಿನೆಲ್ಲೆಡೆ ತಬಲಾ ರಾಜಕುಮಾರಿ ಎಂದೇ ಗುರುತಿಸಿಕೊಳ್ಳುವ ರಿಂಪಾ ಬೆಂಗಳೂರಿನಲ್ಲಿಯೂ ಸಾಕಷ್ಟು ಬಾರಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅದರಲ್ಲೂ ಆಕೆಯ ಸೋಲೊ ವಾದನ ಅವರ ವಿಶೇಷವಾಗಿರುತ್ತದೆ. ಅದಲ್ಲದೇ ಪಂಡಿತ್‌ ಜಸ್‌ರಾಜ್‌ ಮತ್ತು ಪಂಡಿತ್‌ ಹರಿಪ್ರಸಾದ್‌ ಚೌರಾಸಿಯಾರಂತಹ ಸಂಗೀತ ದಿಗ್ಗಜರಿಗೂ ಆಕೆ ತಬಲಾದಲ್ಲಿ ಸಾಥ್ ನೀಡಿರುವುದು ರಿಂಪಾಳ ಹೆಗ್ಗಳಿಕೆ.

ಒಂದು ಹೆಣ್ಣಾಗಿ ತಬಲಾ ನುಡಿಸುವುದು ಕಷ್ಟವಾಗುವುದಿಲ್ಲವೇ ಎಂದು ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಂಪಾ, ಹೆಣ್ಣಾಗಿ ತಬ್ಲಾ ಕಲಿಯುವುದು ಕಷ್ಟವೇನಲ್ಲ ಆದರೆ ಹೆಣ್ಣಾಗಿ ತಬಲಾ ನುಡಿಸುವ ಸಾಮರ್ಥ್ಯ ಮತ್ತು ಸ್ಥಿರೀಕರಣದ ಅಗತ್ಯವಂತೂ ಖಂಡಿತವಾಗಿಯೂ ಇರುತ್ತದೆ. ಹೆಣ್ಣು ಮಕ್ಕಳು ಹಾಡುವಾಗ ಮತ್ತು ಇತರೇ ಪಕ್ಕವಾದ್ಯಗಳನ್ನು ನುಡಿಸುವಾಗ ದೀರ್ಘಾವಧಿಯವರೆಗೆ ಹೇಗೆ ಕುಳಿತುಕೊಳ್ಳುತ್ತಾರೋ ಹಾಗೆಯೇ ನಮಗೂ ಸಹಾ ದೀರ್ಘಕಾಲ ಕೂರುವುದು ಸಮಸ್ಯೆಯಲ್ಲವದರೂ ಮಹಿಳೆಯರ ಬೆರಳುಗಳು ಸ್ವಲ್ಪ ಮೃದುವಾಗಿರುವ ಕಾರಣ ಸ್ವಲ್ಪ ಶ್ರಮ ಪಡಬೇಕಾಗುತ್ತದೆ. ಆದರೆ ತನ್ನ ತಬಲಾ ಪ್ರದರ್ಶನಗಳಿಗೆ ಪ್ರೇಕ್ಷಕರೂ ಸಹಾ ಅಷ್ಟೇ ಉತ್ಸಾಹದಿಂದ ತನ್ನನ್ನು ಹುರಿದುಂಬಿಸುವ ಕಾರಣ ತಾನು ಹೆಚ್ಚಿನ ರೀತಿಯಲ್ಲಿ ಪ್ರದರ್ಶನ ನೀಡಲು ಸಹಕಾರಿಯಾಗಿದೆ ಎನ್ನುತಾರೆ ರಿಂಪಾ.

ರಿಂಪಾಳಿಗೆ ಫರುಖಾಬಾದ್ ಘರಾನಾದೊಂದಿಗೆ ನಂಟಿರುವುದಲ್ಲದೇ, ಕೈದಾ, ಪೇಶ್ಕರ್ ಮತ್ತು ಗ್ಯಾಟ್ ನುಡಿಸುವುದರಲ್ಲಿಯೂ ಆಕೆಗೆ ಸಂತಸ ನೀಡುತ್ತದೆ. ಆಕೆಯ ಪ್ರಸ್ತುತ ಎಲ್ಲಾ ಸಾಧನೆಯ ಹಿಂದೆಯೇ ಆಕೆಯ ತಂದೆಯ ಪ್ರೇರಣೆಯೇ ಸಹಕಾರವಾಗಿದೆ. ಎಲ್ಲರೂ  ಸ್ವಂತಿಕೆಯಿಂದ ಅಸಾಧಾರಣರಾಗಿರಲು ಪ್ರಯತ್ನಿಸಬೇಕೇ ಹೊರತು ಮತ್ತೊಬ್ಬರನ್ನು ನಕಲು ಮಾಡುವ ಮೂಲಕ ಪ್ರಖ್ಯಾತರಾಗಲು ಪ್ರಯತ್ನಿಸಬಾರದು ಎಂಬ ಆಕೆಯ ತಂದೆಯ ಮಾತನ್ನು ಸದಾಕಾಲವೂ ಮನಸ್ಸಿನಲ್ಲಿಯೇ ಇಟ್ಟು ಕೊಂಡಿರುವ ರಿಂಪಾ, ತನ್ನೀ ಸಾಧನೆಯಲ್ಲಿ ಯಾರನ್ನೂ ಅನುಕರಿಸದೇ, ಯಾರನ್ನೂ ಅನುಸರಿಸದೇ ತನ್ನದೇ ಆದ ವೈವಿಧ್ಯತೆಯನ್ನೇ ಇದುವರೆವಿಗೂ ಕಾಪಾಡಿಕೊಂಡು ಮುನ್ನೆಡೆಯುತ್ತಿರುವುದು ಆಕೆಯ ಸಾಮರ್ಥ್ಯದ ಕುರುಹಾಗಿದೆ.

ಕೆಲ ವರ್ಷದ ಹಿಂದೆ ಸಮಕಾಲೀನ ಮಹಿಳ ಸಂಗೀತ ಸಾಧಕರುಗಳನ್ನು ಒಟ್ಟು ಗೂಡಿಸಿ ತನ್ನದೇ ಆದ ನಾರಿ ಶಕ್ತಿ, ಆಲ್-ಲೇಡಿಸ್ ಬ್ಯಾಂಡ್ ಎಂಬುದನ್ನು ಪ್ರಾರಂಭಿಸಿ, ಸಹ ಕಲಾವಿದೆಯರು ಸಿತಾರ್ ಮತ್ತು ಇತರೇ ಪಕ್ಕವಾದ್ಯಗಳನ್ನು ನುಡಿಸುತ್ತಿದ್ದರೆ, ರಿಂಪಾ ಲೀಲಾಜಾಲವಾಗಿ ತನ್ನ ತಬಲಾದ ಮೂಲಕ ಎಲ್ಲರನ್ನೂ ಮುನ್ನಡೆಸುವುದನ್ನು ನೋಡುವುದಕ್ಕೇ ಮಹದಾನಂದವಾಗುತ್ತದೆ.

ಈ ರೀತಿಯಲ್ಲಿ ಸಂಗೀತ ಕ್ಷೇತ್ರದಲ್ಲಿ ಅದರಲ್ಲೂ ಪುರುಷ ಪ್ರಧಾನ ತಾಳವಾದ್ಯ ಕಲಾವಿದರುಗಳ ಮಧ್ಯೆ ಒಬ್ಬ ಮಹಿಳಾ ತಬಲಾವಾದಕಿಯಾಗಿ ರಿಂಪಾ ತನಗಾಗಿಯೇ ಒಂದು ವಿಶಿಷ್ಟವಾದ ಸ್ಥಾನಮಾನಗಳನ್ನು ತನ್ನ ಸ್ವಸಾಮರ್ಥ್ಯದಿಂದ ಗಳಿಸಿಕೊಂಡಿರುವ ಮೂಲಕ ಇತರೇ ಹೆಣ್ಣು ಮಕ್ಕಳಿಗೆ ಪ್ರೇರಣೆಯಾಗಿದ್ದಾಳೆ ಎಂದರೂ ತಪ್ಪಾಗಲಾರದು. ಹೆಂಗಸರು, ಗಂಡಸರಿಗಿಂತ ಯಾವುದೇ ಕ್ಷೇತ್ರದಲ್ಲೂ ಕಡಿಮೆ ಇಲ್ಲ ಎನ್ನುವುದಕ್ಕೆ ಜ್ವಲಂತ ಸಾಕ್ಷಿಯಾಗಿದ್ದಾಳೆ ರಿಂಪಾ. ಅದಕ್ಕೇ ಅಲ್ವೇ ಹೇಳೋದು ಹೆಣ್ಮಕ್ಳೇ ಸ್ಟ್ರಾಂಗ್  ಗುರು ಎಂದು

ಏನಂತೀರೀ?