ಮುಂದಿನ ಪೀಳಿಗೆಗೆ ಉಳಿಸಬೇಕಿದೆ ತಿಪ್ಪಗೊಂಡನಹಳ್ಳಿ ಜಲಾಶಯ

ಸ್ವಾತಂತ್ರ್ಯ ಪೂರ್ವದ 1930ರ ಸಮಯದಲ್ಲಿ ಬೆಂಗಳೂರಿನಲ್ಲಿ ಬಹಳ ಕಾಲ ಮಳೆಯಿಲ್ಲದೇ ಬೀಕರ ಬರಗಾಲ ಉಂಟಾಗಿ ಜನರಿಗೆ ಮತ್ತು ದನಕರುಗಳಿಗೆ ಕುಡಿಯುವ ನೀರಿಗೂ ತೊಂದರೆಯುಂಟಾದಾಗ ನೀರಿನ  ಅಗತ್ಯವನ್ನು ಅರಿತ ಅಂದಿನ ಮೈಸೂರು ಸಂಸ್ಥಾನದ ಒಡೆಯರಾಗಿದ್ದ ಶ್ರೀ ನಾಲ್ಮಡಿ ಚಾಮರಾಜ ಒಡೆಯರ್ ಅವರು ಮುಖ್ಯ ಇಂಜೀನಿಯರ್ ಆಗಿದ್ದ ಶ್ರೀ ಸರ್.ಎಂ.ವಿಶ್ವೇಶ್ವರಯ್ಯನವರಿಗೆ ಇದಕ್ಕೊಂದು ಪರಿಹಾರವನ್ನು ನೀಡಲು ಸೂಚಿಸಿದ ಪರಿಣಾಮವೇ, ಬೆಂಗಳೂರಿನಿಂದ ಪಶ್ಚಿಮಕ್ಕೆ 35 ಕಿ.ಮೀ ದೂರದಲ್ಲಿರುವ ಮಾಗಡಿ ಬಳಿಯ ಅರ್ಕಾವತಿ ನದಿ ಮತ್ತು ಕುಮುದಾವತಿ ನದಿಯ ಸಂಗಮದಲ್ಲಿ ಈ ಬೃಹತ್ತಾದ ತಿಪ್ಪಗೊಂಡನಹಳ್ಳಿ ಅಣೆಕಟ್ಟು ಅಥವಾ ಚಾಮರಾಜಸಾಗರ ಎಂದೂ ಕರೆಯಲ್ಪಡುವ ತಿಪ್ಪಗೊಂಡನಹಳ್ಳಿ ಜಲಾಶಯ ಅಥವಾ ಕೆರೆಯ ನಿರ್ಮಾಣ 1933ರಲ್ಲಿ ಪೂರ್ಣಗೊಳ್ಳುತ್ತದೆ.

ಸುಮಾರು 1453 ಚದರ ಕಿ.ಮೀ ವಿಸ್ತೀರ್ಣದ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಮಾಗಡಿ ಮತ್ತು ಬೆಂಗಳೂರು ತಾಲ್ಲೂಕುಗಳ ಕೆಲವು ಭಾಗಗಳನ್ನು ಒಳಗೊಂಡಿರುವ ಈ ಕೆರೆಯಿಂದ ಬೆಂಗಳೂರಿನ ಪಶ್ಚಿಮ ಭಾಗಕ್ಕೆ ಸುಮಾರು 125 ಎಂಎಲ್‌ಡಿ ವರೆಗೆ ಸರಬರಾಜು ಮಾಡುವ ಸಾಮರ್ಥ್ಯವನ್ನು ಹೊಂದಿತ್ತು. ಕೆ ಆರ್ ಎಸ್ ನಿಂದ ಕಾವೇರಿ ನೀರು ಬೆಂಗಳೂರಿಗೆ ವಿವಿಧ ಹಂತಗಳಲ್ಲಿ  ಸರಬರಾಜು ಆಗುವವರೆಗೂ ಬೆಂಗಳೂರಿನ ಜನಕ್ಕೆ ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಹೆಸರಘಟ್ಟ ಕೆರೆಯ  ನೀರೇ  ಮೂಲವಾಗಿತ್ತು.

ನಂದಿಬೆಟ್ಟದ ತಪ್ಪಲಲ್ಲಿ ಹುಟ್ಟುವ  ಅರ್ಕಾವತಿ ನದಿ, ಅಲ್ಲಿಂದ ಮಧುರೆ ಕೆರೆ ಹೆಸರಘಟ್ಟ ಕೆರೆ ಮುಖಾಂತರ ಹರಿದು ನೆಲಮಂಗಲದ ತೊರೆಛತ್ರ ಮುಖಾಂತರ ತಿಪ್ಪಗೊಂಡನಹಳ್ಳಿ ಜಲಾಶಯ ಸೇರುತ್ತದೆ.  ಅದೇ ರೀತಿ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ಶಿವಗಂಗೆಯಲ್ಲಿ ಹುಟ್ಟುವ ಕುಮದ್ವತಿ ನದಿಯೂ ಸಹಾ ತಿಪ್ಪಗೊಂಡನಹಳ್ಳಿ ಜಲಾಶಯ ಸೇರುತ್ತದೆ. ಹೀಗೆ ಈ ಎರಡೂ ನದಿಗಳ ಸಂಗದಲ್ಲಿ ಪುರಾಣ ಪ್ರಸಿದ್ಧವಾದ ಮತ್ತು ಪ್ರಾಚೀನ ಸಂಗಮೇಶ್ವರ ದೇವಾಲಯದವಿದ್ದು ಅದು ಕೆ.ಆರ್.ಎಸ್ ಕಟ್ಟುವಾಗ ಮುಳುಗಿ ಹೋಗಿದ್ದ ಗೋಪಾಲಸ್ವಾಮಿ ದೇವಸ್ಥಾನದಂತೆಯೇ ಮುಳುಗಿಹೋಗಿದ್ದು ವರ್ಷದ ಬಹುಪಾಲು, ಈ ದೇವಾಲಯವು ಗೋಚರಿಸದೇ, ಬೇಸಿಗೆಯಲ್ಲಿ ನೀರಿನ ಮಟ್ಟವು ಕಡಿಮೆಯಾದಂತೆಲ್ಲಾ ತನ್ನ ಅಸ್ಥಿತ್ವವನ್ನು ಸಾಭೀತುಪಡಿಸುತ್ತದೆ.

ತಿಪ್ಪಗಂಡನಹಳ್ಳಿ ಜಲಾಶಯವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿದ್ದು, ಇಲ್ಲಿಗೆ ಪ್ರವೇಶಿಸಲು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ  ಮುಖ್ಯ ಕಚೇರಿಯಿಂದ ಪಾಸ್ ಪಡೆಯಬಹುದಾಗಿದೆ. ಸುತ್ತಲೂ ಬೆಟ್ಟಗಳಿಂದ ಆವೃತವಾದ ನೈಸರ್ಗಿಕವಾದ ನೀರಿನ ಸೆಲೆಯಿಂದ ಆವೃತವಾಗಿರುವ ಈ ಜಾಗವು ನೋಡಲು ರಮಣೀಯವಾಗಿರುವ ಕಾರಣ ವಾರಾಂತ್ಯದಲ್ಲಿ ಬೆಂಗಳೂರಿನಿಂದ ಅನೇಕ ಪ್ರವಾಸಿಗರು ಮಾಗಡಿ, ಸಾವನದುರ್ಗ ಮತ್ತು ತಿಪ್ಪಗೊಂಡನಹಳ್ಳಿ ಕೆರೆಯನ್ನು ನೋಡಲು ತಂಡೋಪ ತಂಡವಾಗಿ ಬರುತ್ತಾರೆ.

ಕನ್ನಡದ ಅನೇಕ ಚಲನಚಿತ್ರಗಳೂ ಇಲ್ಲಿ ಚಿತ್ರೀಕರಣವಾಗಿರುವುದಲ್ಲದೇ,  ಮೂರ್ನಾಲ್ಕು ವರ್ಷದ ಹಿಂದೆ ನಟ ದುನಿಯಾ ವಿಜಯ್ ಅವರ ಮಾಸ್ತಿ ಗುಡಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ದುರ್ಘಟನೆಯಲ್ಲಿ ಉದಯೋನ್ಮುಖ ಕಲಾವಿದರುಗಳಾದ ಉದಯ್ ರಾಘವ್, ಮತ್ತು ಅನಿಲ್ ಕುಮಾರ್ ಹೆಲಿಕ್ಯಾಪ್ಟರ್ ನಿಂದ ನೀರಿಗೆ ಜಿಗಿಯುವ ಸಾಹಸ ಪ್ರದರ್ಶನದ ಸಮಯದಲ್ಲಿ ಈ ಜಲಾನಯನ ಪ್ರದೇಶದಲ್ಲಿಯೇ ಸಾವನ್ನಪಿದ ದುರ್ಘಟನೆಯ ನಂತರ ಚಿತ್ರೀಕರಣಕ್ಕೆ ಅನುಮತಿಯನ್ನು ನಿರಾಕರಿಸುತ್ತಿದ್ದಾರೆ.

ಈ ಜಲಾಶಯ ಸುಮಾರು  74 ಅಡಿಗಳಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು ಅಂದರೆ ಸುಮಾರು 3.34 ಟಿಎಂಸಿಗಳವರೆಗೆ ನೀರನ್ನು ಸಂಗ್ರಹಿಸಬಲ್ಲದಾಗಿದೆ. 1974 ರಲ್ಲಿ ಕಾವೇರಿ ಮೊದಲನೇ ಹಂತದ ಯೋಜನೆ ಅನುಷ್ಠಾನವಾಗುವವರೆಗೂ ಈ ಜಲಾಶಯದಿಂದಲೇ ಬೆಂಗಳೂರಿನ ರಾಜಾಜಿನಗರ, ಸುಂಕದಕಟ್ಟೆ ಪಶ್ಚಿಮ ಕಾರ್ಡ್ ರಸ್ತೆ, ವಿಜಯನಗರ, ಮಹಾಲಕ್ಷ್ಮಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕುಟುಂಬಗಳಿಗೆ ಇಲ್ಲಿಂದಲೇ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಮಳೆಯ ಪ್ರಭಾವ ಕಡಿಮೆ ಆದ ಪರಿಣಾಮ 1992ರಲ್ಲಿ ಒಮ್ಮೆ ಜಲಾಶಯ ತುಂಬಿತ್ತಾದರೂ ಅದಾದ ನಂತರ ನೀರಿನ ಗರಿಷ್ಠ ಮಟ್ಟ 50 ಅಡಿ ಮೇಲೆ ದಾಟಲಿಲ್ಲವಾದ್ದರಿಂದ ಸ್ಥಳೀಯ ಅಂತರ್ಜಲದ ಮಟ್ಟವನ್ನು ಕಾಪಾಡಿಕೊಂಡು ಹೋಗುವ ದೃಷ್ಟಿಯಿಂದ 2012ರ ನಂತರ ಇಲ್ಲಿಂದ ಇಲ್ಲಿಂದ ಬೆಂಗಳೂರಿಗೆ ನೀರು ಪೂರೈಸುವುದನ್ನು ಸ್ಥಗಿತಗೊಳಿಸಲಾಗಿದ್ದು, ಕಡು ಬೇಸಿಗೆ ಸಮಯದಲ್ಲಿ ಕೆ.ಆರ್.ಎಸ್ ನಿಂದ ನೀರು ತರಲು ಆಗದಿದ್ದ ಸಂದರ್ಭದಲ್ಲಿ ಮಾತ್ರವೇ ಉಪಯೋಗಿಸಿಕೊಳ್ಳುವ ಯೋಜನೆಯನ್ನು ಮಾಡಿಕೊಳ್ಳಲಾಗಿದೆ.

ಒಮ್ಮೆ ಜಲಾಶಯ ಭರ್ತಿಯಾದರೆ ನಗರಕ್ಕೆ ಪ್ರತಿನಿತ್ಯ 13 ಕೋಟಿ ಲೀಟರ್ ನೀರು ಪಂಪ್ ಮಾಡಬಹುದಾಗಿದೆ. ಇಂದಿಗೂ ಸಹಾ ಇಲ್ಲಿನ ನೀರನ್ನು ಶುದ್ಧಗೊಳಿಸಿ ತಾವರೆಕೆರೆಗೆ ಪಂಪ್ ಮಾಡಿ, ಅಲ್ಲಿನ ಪಂಪಿಂಗ್ ಘಟಕದಲ್ಲಿ ಮತ್ತೊಮ್ಮೆ ಶುದ್ದೀಕರಿಸಿ ಸುತ್ತ ಮುತ್ತಲಿನ ಹಳ್ಳಿಗಳಿಗೆ ನೀರನ್ನು ಪೂರೈಕೆ ಮಾಡಲಾಗುತ್ತದೆ.

ದಿನ ಕಳೆದಂತೆ ಅರ್ಕಾವತಿ ಜಲಾನಯನ ಪ್ರದೇಶದಲ್ಲಿ ತಲೆ ಎತ್ತಿದ ಕೈಗಾರಿಕೆಗಳು ಮತ್ತು ಅನಧಿಕೃತ ಲೇಔಟ್​ಗಳ ಪರಿಣಾಮದಿಂದಾಗಿ ನದಿಪಾತ್ರದ ಜಮೀನುಗಳು ಒತ್ತುವರಿಯಾದ ಪರಿಣಾಮ ನದಿಯ ನೀರು  ಸಂಪೂರ್ಣ ಕಲುಷಿತಗೊಂಡಿತಲ್ಲದೇ ಆ ಕೈಗಾರಿಕೆಗಳ ತ್ರಾಜ್ಯವೂ ಸಹಾ ನದಿಯ ನೀರನ್ನೇ ಸೇರಿದ ಪರಿಣಾಮ, ಬೆಂಗಳೂರಿನ ಜನತೆಗೆ ಶುದ್ಧ ನೀರನ್ನು ಒದಗಿಸುತ್ತಿದ್ದದ್ದು ಇದೇ ಮೂಲವಾ ಎನ್ನುವಷ್ಟರ ಮಟ್ಟಿಗೆ ತಿಪ್ಪಗೊಂಡನ ಹಳ್ಳಿಯ ನೀರಿನ ಗುಣಮಟ್ಟ ಕೆಟ್ಟ ಪರಿಸ್ಥಿತಿಯಲ್ಲಿದೆ. ಸಾರ್ವಜನಿಕರು ಮತ್ತು ಜಲಮಂಡಳಿ ಎಚ್ಚೆತ್ತುಕೊಂಡು ನದಿಗೆ ಸೇರುತ್ತಿರುವ ತ್ಯಾಜ್ಯವನ್ನು ತಡೆಯದಿದ್ದಲ್ಲಿ, ಈ  ಅರ್ಕಾವತಿನದಿಯೂ ಕಲವೇ ವರ್ಷಗಳಲ್ಲಿ ಮತ್ತೊಂದು ವೃಷಭಾವತಿಯಾಗುವುದರಲ್ಲಿ ಸಂದೇಹವೇ ಇಲ್ಲವಾಗಿದೆ.

ಸಾರ್ವಜನಿಕರ ಮನವಿಯಿಂದ ಎಚ್ಚೆತ್ತುಕೊಂಡ ಸರ್ಕಾರ, ಅಕ್ರಮ ಮರಳುಗಾರಿಕೆ ದಂಧೆಗೆ ಕಡಿವಾಣ ಹಾಕಿದ್ದಲ್ಲದೇ, ಯುವಾಬ್ರಿಗೇಡ್ ಮತ್ತು ಜಗ್ಗೀ ವಾಸುದೇವ ಅವರ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳು ಅರ್ಕಾವತಿ ನದಿ ಉಳಿಸಲು ನಡೆಸಿದ ಆಂದೋಲನ ಮತ್ತು ಪುನಶ್ಚೇತನಗಳ ಕಾರ್ಯಕ್ರಮಗಳ ಮೂಲಕ ಈ ನದಿ ಇನ್ನೂ  ಜೀವಂತವಾಗಿರುವಂತೆ ನೋಡಿಕೊಳ್ಳುವ ಮೂಲಕ ತಿಪ್ಪಗೊಂಡನಹಳ್ಳಿ ಕೆರೆಗೆ ಮರುಜೀವವನ್ನು ಕೊಡುವ ಕಾಯಕಲ್ಪ ಮುಂದುವರೆದಿದೆ.

ನದಿಯ ಪಾತ್ರದ ಸುತ್ತಮುತ್ತಲಿನ 2 ಕಿ.ಮೀ.ದೂರ ಯಾವುದೇ ಕಟ್ಟಡ ನಿರ್ವಣ ಮಾಡುವಂತಿಲ್ಲ ಎಂಬ ಆದೇಶವಿದ್ದರೂ ಪಟ್ಟ ಭದ್ರ ಹಿತಾಸಕ್ತಿಗಳ ಕೈವಾಡದಿಂದಾಗಿ ಮರಳುಗಾರಿಕೆಯ ಬದಲಾಗಿ, ನದಿಪಾತ್ರದ ಜಮೀನಿನಲ್ಲಿ ಕೈಗಾರಿಕೆಳನ್ನು ಆರಂಭಿಸಿ, ಅದರಲ್ಲೂ ಪ್ರಮುಖವಾಗಿ ಔಷಧ ತಯಾರಿಕಾ ಕಂಪನಿಗಳು, ಜವಳಿ ಉದ್ದಿಮೆಗಳ ಜೊತೆ, ಇಟ್ಟಿಗೆ ಕಾರ್ಖಾನೆ, ಜಲ್ಲಿಕಲ್ಲುಗಳ ಕ್ರಷರ್​ಗಳು ಆರಂಭವಾಗಿ ಅವುಗಳ ತ್ಯಾಜ್ಯವು ನೇರವಾಗಿ ನದಿ ಸೇರಿ , ದೂರದ ಬೆಟ್ಟ ನುಣ್ಣಗೆ ಎನ್ನುವಂತೆ, ದೂರದಿಂದ ಅತೀ  ಸುಂದರವಾಗಿ ಕಾಣುವ  ಜಲಾನಯನ ಪ್ರದೇಶ  ಹತ್ತಿರ ಹೋಗುತ್ತಿದ್ದಂತೆ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತಿದೆ. ಇದರ ಜೊತೆಯಲ್ಲಿಯೇ ಬೆಂಗಳೂರಿನ ಕಸವನ್ನು ಅಕ್ರಮವಾಗಿ  ತಂದು ಈ ನದಿ ಪಾತ್ರದಲ್ಲೇ ಸುರಿಯುವ ಮುಖಾಂತರ, ತಿಪ್ಪಗೊಂಡನಹಳ್ಳಿ ಕೆರೆಯನ್ನು ತ್ಯಾಜ್ಯವನ್ನಾಗಿ ಮಾಡುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಿಪ್ಪಗೊಂಡನಹಳ್ಳಿ ಜಲಾಶಯ ಇಂದು ಈ ಸ್ಥಿತಿ ತಲುಪಿದೆ ಎಂದರೂ ತಪ್ಪಾಗಲಾರದು.  ಈ ಎರಡು ಇಲಾಖೆಗಳ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ಮಾಡಿದರೆ ಮುಂದಿನ ಪೀಳಿಗೆಯವರಿಗೆ ಜಲಾಶಯವನ್ನು ಶುದ್ಧವಾಗಿಡಬಹುದಾಗಿದೆ.

ಹಲವು ವರ್ಷಗಳ ಕಾಲ ಶುದ್ಧ ನೀರಿನಿಂದ ತುಂಬಿ ತುಳುಕುತ್ತಿದ್ದ ಜಲಾಶಯ ಈಗ ತ್ಯಾಜ್ಯ ನೀರು ತುಂಬಿಕೊಂಡು, ಹೂಳು ತುಂಬಿಕೊಂಡು ಬತ್ತಿ ಹೋಗುವ ದುಸ್ಥಿತಿಯಲ್ಲಿರುವುದು ನಿಜಕ್ಕೂ ಮನಸ್ಸಿಗೆ ಛೇದವನ್ನುಂಟು ಮಾಡುತ್ತಿದೆ. ಇನ್ನಾದರೂ  ಸರ್ಕಾರ ಮತ್ತು ಸಂಬಂಧ ಪಟ್ಟ ಇಲಾಖೆಗಳು ಮನಸ್ಸು ಮಾಡಿ, ಸಾರ್ವಜನಿಕರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಈ  ಜಲಾಶಯದ ನೀರನ್ನು ಶುದ್ಧೀಕರಿಸಿ ನಮ್ಮ ಜಲಚರಗಳಿಗೆ, ಪಕ್ಷಿ ಸಂಕುಲಗಳಿಗೆ ಎಲ್ಲದ್ದಕ್ಕೂ ಮುಖ್ಯವಾಗಿ ಶುದ್ಧವಾದ ಅಂತರ್ಜಲವನ್ನು ನಮ್ಮ  ಮುಂದಿನ ಪೀಳಿಗೆಯವರಿಗೂ ಸಹಾ ಉಳಿಸಿಡಬೇಕಾದಂತಹ ಗುರುತರವಾದ ಜವಾಬ್ಧಾರಿ ನಮ್ಮ ನಿಮ್ಮೆಲ್ಲರ ಮೇಲೆಯೇ ಇದೆ.

ಏನಂತೀರೀ?

ನಿಮ್ಮವನೇ ಉಮಾಸುತ

ಕೆರೆ ತೊಣ್ಣೂರು/ತೊಂಡನೂರು ಕೆರೆ

ಮಂಡ್ಯಾ ಜಿಲ್ಲೆಯ ಸಕ್ಕರೆನಾಡು ಪಾಂಡವಪುರದಿಂದ ನಾಗಮಂಗಲದ ಕಡೆಗೆ ಸುಮಾರು 10 ಕಿ.ಮೀ ಗಳಷ್ಟು ದೂರ ಕ್ರಮಿಸಿದರೆ ಎಡಭಾಗದಲ್ಲಿ ತೊಂಡನೂರು ಎಂಬು ನಾಮಫಲಕ ಕಾಣಿಸುತ್ತದೆ. ನೋಡಲು ಅಷ್ಟೇನೂ ದೊಡ್ಡ ಊರಲ್ಲದಿದ್ದರೂ ಐತಿಹ್ಯವಾಗಿ ಬಹಳ ಪ್ರಮಾಖ್ಯತೆ ಪಡೆದಂತಹ ಊರಾಗಿದೆ. ಕೃಷಿ ಮತ್ತು ಹೈನು ಉದ್ಯಮ ಪ್ರಮುಖ ಉದ್ಯೋಗವಾಗಿದ್ದು ಊರಿಗೆ ಹೋಗುತ್ತಿದಂತೆಯೇ ಹಸುಗಳು ದಾರಿಗೆ ಅಡ್ಡಸಿಗುವುದಲ್ಲದೇ, ಹಾಲಿನ ಸಂಗ್ರಹದ ಕೇಂದ್ರವೂ ಧುತ್ತೆಂದು ಕಣ್ಣಿಗೆ ಬೀಳುತ್ತದೆ.

ಆಚಾರ್ಯತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುಜಾಚಾರ್ಯರು, 11ನೇ ಶತಮಾನದಲ್ಲಿ ತಮಿಳು ನಾಡಿನ ಕ್ರಿಮಿಕಾಂತ ನೆಂಬ ಕ್ರೂರ ರಾಜ ಅದ್ವೈತ ಪ್ರಚಾರಕರಿಗೆ ಬಹಳವಾಗಿ ತೊಂದರೆ ಕೊಡುತ್ತಿದ್ದರಿಂದ ಮನನೊಂದು ಶಾಂತಿಧಾಮವನ್ನು ಅರಸುತ್ತಿದ್ದಾಗ, ಮತ್ತೊಬ್ಬ ಆಚಾರ್ಯರ ಆಹ್ವಾನದ ಮೇರೆಗೆ ತೊಂಡನೂರಿಗೆ ಬಂದು ಬಂದು ನೆಲಸಿದರೆಂಬ ಪ್ರತೀತಿ ಇದೆ. ಬಂದ ಕೆಲವೇ ದಿನಗಳಲ್ಲಿ ಅಲ್ಲಿನ ಜನ ಮಾನಸದ ಹೃನ್ಮನಗಳನ್ನು ಗೆದ್ದ ರಾಮಾನುಜಾಚಾರ್ಯರು, ಆ ಊರಿನಲ್ಲಿ ಅತ್ಯಂತ ಮಹೋಹರವಾದ ಮತ್ತು ವಿಶಾಲವಾದ ನಂಬಿ ನಾರಾಯಣ, ವೆಂಕಟರಮಣ, ಪಾರ್ಥಸಾರಥಿ, ವೇಣುಗೋಪಾಲ ಸ್ವಾಮಿಯ ದೇವಸ್ಥಾನವನ್ನು ಕಟ್ಟಿಸಿದ ನಂತರ ಮೇಲುಕೋಟೆಯಲ್ಲಿ ಯೋಗನರಸಿಂಹ ಸ್ವಾಮಿ ದೇವಸ್ಥಾನವನ್ನು ಕಟ್ಟಿಸುತ್ತಾರೆ.


ಅನೇಕ ಕಂಬಗಳಿಂದ ಕೂಡಿದ ವಿಶಾಲವಾದ ಪ್ರಾಂಗಣ ಮತ್ತು ಶುಕನಾಸಿಗಳಿಂದ ಕಂಗೊಳಿಸುವ ನಂಬೀ ನಾರಾಯಣಸ್ವಾಮಿ ದೇವಸ್ಥಾನ ಬಹಳವೇ ಆಕರ್ಷಣಿಯವಾಗಿದೆ. ಲಕ್ಷ್ಮೀ ಸಮೇತನಾದ ಶ್ರೀಮನ್ನಾರಯಣನನ್ನು ನಂಬಿ ನಂಬಿ ಕೆಟ್ಟವರಿಲ್ಲ ಎಂಬ ನಂಬಿಕೆಯ ಕಾರಣ ನಂಬಿನಾರಾಯಣ ದೇವಾಲಯ ಬಂದಿತು ಎಂದು ಹೇಳುತ್ತಾರೆ ಅಲ್ಲಿಯ ಅರ್ಚಕರು. ಸರಿಯಾದ ಉಸ್ತುವಾರಿ ಮತ್ತು ಮೇಲ್ಚಿಚಾರಣೆ ಇಲ್ಲದ ಕಾರಣ ಬಾವಲಿಗಳ ತಾಣವಾಗಿ ಮುಗ್ಗಲು ವಾಸನೆ ಬಡಿಯುತ್ತದೆ.

ಅದೇ ದೇವಸ್ಥಾನದ ಎದುರಿನಲ್ಲೇ ಇರುವ ಗೋಪಾಲಸ್ವಾಮಿಯ ದೇವಸ್ಥಾನವೂ ಇನ್ನೂ ಅದ್ವಾನವಾಗಿದ್ದು ದೇವಸ್ಥಾನವು ಪಾಳು ಬೀಳುವ ದುಸ್ಥಿತಿಯಲ್ಲಿರುವುದು ನಿಜಕ್ಕೂ ಶೋಚನೀಯವಾಗಿದೆ. ದೇವಸ್ಥಾನದ ಅವರಣದಲ್ಲಿ ತುಲಾಭಾರ ಮಂಟಪ ಮತ್ತು ಪಾಕಶಾಲೆಯಂತಹ ಇಂದು ಸ್ಥಳವಿದೆ. ಇಲ್ಲಿ 8 ಅಡಿ ಎತ್ತರ ಮತ್ತು 5 ಅಡಿ ಅಗಲವುಳ್ಳ ಭೂದೇವೀ ಸಮೇತನಾದ ಶ್ರೀ ಕೃಷ್ಣ ವಿಶ್ವರೂಪದರ್ಶನದಲ್ಲಿದ್ದಾನೆ ಎಂದೂ ಹೇಳುತ್ತಾರೆ. ದೇವಸ್ತಾನದ ಸುತ್ತಲಿನ ಪ್ರಾಂಗಣದ ಮೇಲೆ ಹೋಗಲು ಮೆಟ್ಟಿಲುಗಳು ಇದ್ದು ಅಲ್ಲಿಂದ ರಮಣೀಯವಾದ ದೃಶ್ಯವನ್ನು ನೋಡಬಹುದಾಗಿದೆ. ಈ ದೇವಸ್ಥಾನದಲ್ಲಿ ಅನೇಕ ಕನ್ನಡ ಚಲನಚಿತ್ರಗಳ ಚಿತ್ರೀಕರಣವಾಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.

ನಂಬಿ ನಾರಾಯಣ ಸ್ವಾಮಿ ದೇವಸ್ಥಾನದಿಂದ ಸುಮಾರು ಅರ್ಧ ಮುಕ್ಕಾಲು ಕಿಮೀ ದೂರದಲ್ಲಿ ಲೋಕಕಲ್ಯಾಣಕ್ಕಾಗಿ ರಾಮಾನುಜಾಚಾರ್ಯರ ಶಿಷ್ಯರಾದ ಶ್ರೀ ನಂಬಿ ಎಂಬುವವರು ಯದುಗಿರಿ ಬೆಟ್ಟದ ಬುಡದಲ್ಲಿ ನೈಸರ್ಗಿಕವಾದ ಸುಮಾರು 2150 ಎಕರೆಗಳಷ್ಟು ವಿಸ್ತೀರ್ಣದ ವಿಶಾಲವಾದ ತೊಣ್ಣೂರು ಕೆರೆಯನ್ನು ಶ್ರೀ ರಾಮಾನುಜಚಾರ್ಯ ಅವರ ಆಶಯದಂತೆ ನಿರ್ಮಿಸುತ್ತಾರೆ.


ಕರೆಯ ಏರಿಯವರೆಗೂ ವಾಹನ ಹೋಗುವಂತಹ ಚೆಂದದ ರಸ್ತೆ ಇದ್ದು ಅಲ್ಲಿಗೆ ಹೋಗಿ ನೋಡುವವರೆಗೂ ಅಲ್ಲೊಂದು ಬೃಹತ್ತಾದ ಕೆರೆ, ಕೆರೆ ಎನ್ನುವುದಕ್ಕಿಂತಲೂ ಸಾಗರವಿದೆ ಎನ್ನುವ ಕಲ್ಪನೆಯೂ ಬಾರದಂತಿದೆ. ಎರಡು ಗುಡ್ಡಗಳ ಮಧ್ಯೆ ಕಟ್ಟೆ ಕಟ್ಟಿ ನೀರನ್ನು ಕಟ್ಟಿಹಾಕಿರುವ ಪರಿ ಇಂದಿನ ವಾಸ್ತು ಶಿಲ್ಲಿಗಳಿಗೆ ಅಚ್ಚರಿ ಮೂಡಿಸುವಂತಿದೆ. ಕೆರೆಯ ಮುಂದೆ ನಿಂತು ಕಣ್ಣು ಹಾಯಿಸಿದಷ್ಟು ದೂರವೂ ಬರೀ ನೀರನ್ನೇ ಕಾಣಬಹುದಾದ ಕಾರಣ ಇದನ್ನು ಕೆರೆ ಎನ್ನುಉವುದಕ್ಕಿಂತಲೂ ಸಾಗರ ಎಂದು ಕರೆದರೇ ಸೂಕ್ತ ಎನಿಸೀತು.ಇದೇ ಕಾರಣಕ್ಕಾಗಿಯೇ ರಾಮಾನುಜಾರ್ಯರು ಇದಕ್ಕೆ ತಿರುಮಲ ಸಾಗರ ಎಂದು ನಾಮಕರಣ ಮಾಡುತ್ತಾರೆ.1746 ನಾಸಿರ್ ಜಂಗ್ ಎಂಬ ದಖ್ಖನದ ದೊರೆ ಬೆಟ್ಟ-ಗುಡ್ಡಗಳಿಂದ ಆವರಿಸಿರುವ ಈ ಕೆರೆಯನ್ನು ಸೌಂದರ್ಯಕ್ಕೆ ಮಾರು ಹೋಗಿ ಇದನ್ನು ಮೋತಿ ತಲಾಬ್ ಅಂದರೆ ಮುತ್ತಿನ ಕೆರೆ ಎಂದು ಉದ್ಗರಿಸಿದ್ದನಂತೆ.

ಹನ್ನೊಂದನೇ ಶತಮಾನದಲ್ಲಿ ಈ ಪ್ರಾಂತ್ಯವನ್ನು ಆಳುತ್ತಿದ್ದ ಬಿಟ್ಟಿರಾಜನ ಮಗಳಿಗೆ ವಿಚಿತ್ರ ಖಾಯಿಲೆಯೊಂದು ಭಾದಿಸುತ್ತಿತ್ತು, ಎಲ್ಲಾ ವೈದ್ಯರೂ ಹಾಗು ಜೈನ ಪಂಡಿತರ ಬಳಿ ಇದಕ್ಕೆ ಪರಿಹಾರ ಸಿಗದಿದ್ದಾಗ ತೊಂಡನೂರಿನಲ್ಲಿದ್ದ ಶ್ರೀ ರಾಮಾನುಜಾಚಾರ್ಯರ ಪವಾಡಗಳ ಬಗ್ಗೆ ತಿಳಿದು, ತಮ್ಮ ಮಗಳನ್ನು ಖಾಯಿಲೆಯಿಂದ ಮುಕ್ತಗೊಳಿಸಬೇಕೆಂದು ಕೋರಿಕೊಳ್ಳುತ್ತಾನೆ. ಆಚಾರ್ಯರು ರಾಜನ ಮಗಳನ್ನು ತೊಂಡನೂರಿನ ಕೆರೆಯಲ್ಲಿ ಸ್ನಾನ ಮಾಡಿಕೊಂಡು ಮಡಿಯಲ್ಲಿ ಬರಲು ಹೇಳಿ, ಕೆರೆಯಲ್ಲಿ ಮಿಂದೆದ್ದು ಬಂದ ಕನ್ಯೆಗೆ ತಮ್ಮ ಮಂತ್ರ ದಂಡವನ್ನು ತಾಕಿಸಿದೊಡನೆಯೇ ಆಕೆಗೆ ಕ್ಷಣರ್ದದಲ್ಲೇ ಆಕೆಯನ್ನು ಭಾದಿಸುತ್ತಿದ್ದ ರೋಗ ಮಂಗಮಾಯವಾಗಿತು. ಇದರಿಂದ ಸಂತೋಷಗೊಂಡ ಬಿಟ್ಟಿರಾಜನು ಜೈನ ಮತದಿಂದ ಶ್ರೀ ವೈಷ್ಣವ ಮತ್ತಕ್ಕೆ ಮತಾಂತರವಾಗಿ ವಿಷ್ಣುವರ್ಧನನೆಂದು ಪ್ರಸಿದ್ದಿಯಾಗಿದ್ದಲ್ಲದೇ ರಾಮಾನುಜಾಚಾರ್ಯರ ಪರಮ ಭಕ್ತನಾಗುತ್ತಾನೆ. ಹೀಗೆ ತೊಂಡನೂರಿನ ಕೆರೆಯ ನೀರು ಔಷಧೀಯ ಗುಣವನ್ನು ಹೊಂದಿದೆ ಎಂದು ಜನರ ನಂಬಿಕೆಯಾಗಿದೆ.

ಸ್ಥಳೀಯರು ಹೇಳುವ ಪ್ರಕಾರ ಇದುವರೆವಿಗೂ ಈ ಕೆರೆ ಸದಾಕಾಲವೂ ತುಂಬಿ ತುಳುಕುತ್ತಾ ಸುತ್ತ ಮುತ್ತಲಿನ ಹತ್ತಾರು ಊರಿನ ಕೃಷಿಕರಿಗೆ ವರದಾನವಾಗಿದ್ದು ಇತಿಹಾಸದಲ್ಲಿ ಅದು ಎಂದೂ ಬತ್ತಿದ್ದಿಲ್ಲವಂತೆ. ಕೆಲವು ವರ್ಷಗಳ ಹಿಂದೆ ಈ ಕೆರೆಗೆ ಹೇಮಾವತಿಯ ಹಿನ್ನೀರಿನ ಸಂಪರ್ಕವನ್ನೂ ಕಲ್ಪಿಸಿದ್ದ ಮೇಲಂತೂ ನೀರಿಗೆ ಬರವೇ ಇಲ್ಲದೇ ಆ ಕೆರೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ. ಕೆರೆಯ ಏರಿಯ ಮೇಲೆ ಒಂದು ಸಣ್ಣ ಕುಟೀರವನ್ನು ಪ್ರವಾಸೋದ್ಯಮ ಇಲಾಖೆ ಕಟ್ಟಿಸಿದ್ದು ಅಲ್ಲಿಂದ ವಿಶಾಲವಾದ ಸಾಗರವನ್ನು ನೋಡಲು ಮನೋಹರವಾಗಿದೆ. ಪ್ರಧಾನಿಗಳು ಎಷ್ಟೇ ಸ್ವಚ್ಚ ಭಾರತದ ಬಗ್ಗೆ ಮಾತಾನಾಡಿದರೂ, ನಮ್ಮ ಜನರು ವಿವೇಚನೆ ಇಲ್ಲದೇ ಸಿಕ್ಕಿದ್ದು ಪಕ್ಕಿದ್ದನ್ನು ತಿಂದು, ಕುಡಿದು ಎಲ್ಲೆಂದರಲ್ಲಿ ಬಿಸಾಕಿ ಸ್ವಲ್ಪ ಮಟ್ಟಿಗಿನ ಪರಿಸರವನ್ನೂ ಹಾಳು ಮಾಡಿರುವುದು ನಿಜಕ್ಕೂ ಬೇಸರವಾದ ಸಂಗತಿಯಾಗಿದೆ ಕೆರೆಯ ನೀರು ಹೊರಬರುವ ತೂಬಿನ ಬಳಿ ಸಣ್ಣ ಸಣ್ಣ ಮಕ್ಕಳು ನೀರಿನಲ್ಲಿ ಆಟವಾಡಲು ಪ್ರಶಸ್ತವಾಗಿದೆ.

ಕೆರೆಯು ಬಹಳ ಆಳವಾಗಿರುವ ಕಾರಣ ಈಜುಗಾರಿಕೆಯನ್ನು ನಿಷೇಧಿಸಿದ್ದರೂ ಸೂಕ್ತವಾದ ರಕ್ಷಣಾ ಸಿಬ್ಬಂಧಿಇಲ್ಲದ ಕಾರಣ ಕೆಲವರು ನೀರಿನಲ್ಲಿ ಆಟವಾಡುವುದನ್ನು ಕಾಣಬಹುದಲ್ಲದೇ ಕೆಲವರು ಸಣ್ಣದಾಗಿ ಮೀನುಗಾರಿಕೆಯನ್ನೂ ಮಾಡುವುದನ್ನು ನೋಡಬಹುದಾಗಿದೆ. ಕೆಲ ವರ್ಷಗಳ ಹಿಂದೆ ಕೆರೆಯ ಕೆಳ ಭಾಗದಲ್ಲಿ ಶ್ರೀ ರಾಮಾನುಜರ ಭವ್ಯವಾದ ಮೂರ್ತಿಯನ್ನು ಸ್ಥಾಪಿಸಿದ್ದು ನೋಡಲು ನಯನ ಮನೋಹರವಾಗಿದೆ.

ಪ್ರವಾಸೋದ್ಯಮ ಇಲಾಖೆಯೂ ಜನರನ್ನು ಆಕರ್ಷಿಸುವಂತ ಪ್ರವಾಸಿ ತಾಣವನ್ನಾಗಿಸುವ ದೃಷ್ಟಿಯಿಂದ ಎರಡು ವರ್ಷದ ಹಿಂದೆ ಕಾರ್ತೀಕ ಮಾಸದ ಸಮಯದಲ್ಲಿ ಮೂರು ದಿನಗಳ ಕಾಲ ತೊಣ್ಣೂರು ಕೆರೆ ಉತ್ಸವ ನಡೆಸಿ ಕೆರೆಯ ಮಧ್ಯದಲ್ಲಿ ಉತ್ಸವದ ಸಮಯದಲ್ಲಿ ಏಕಕಾಲಕ್ಕೆ ಸುಮಾರು ಐನೂರು ಜನರು ಕುಳಿತುಕೊಳ್ಳಬಹುದಾದ ಬೃಹತ್ ವೇದಿಕೆ ಸಿದ್ಧಪಡಿಸಿ ಕೆರೆಯ ಸಮೀಪವೇ ಇರುವ ಬೆಟ್ಟಗುಡ್ಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿ ಕೆರೆಗೆ ಗಂಗಾಪೂಜೆ ಮಾಡಿತ್ತು.

ಈ ಮೂರು ದಿನಗಳ ಕಾಲ ಕನ್ನಡದ ಪ್ರಖ್ಯಾತ ಗಾಯಕರು, ಸಿನೆಮಾ ನಟ, ನಟಿಯರು, ಜಾನಪದ ಕಲಾವಿದರು ಕೆರೆಯ ನಡುವೆ ನಿರ್ಮಿಸಿರುವ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವುದರ ಮೂಲಕ, ಕಲಾ ರಸಿಕರ ಮನ ತಣಿಸಿದ್ದನ್ನು ಸ್ಥಳಿಯರೂ ಇನ್ನೂ ಮೆಲುಕು ಹಾಕುತ್ತಾರೆ. ಆ ಸಮಯದಲ್ಲಿ ಮಾತ್ರವೇ ಸ್ಪೀಡ್ ಬೋಟ್ ಮತ್ತು ಇತರೇ ಸಾಹಸ ಮಯ ಜಲಕ್ರೀಡೆಗಳನ್ನು ಆಯೋಜಿಸಿದ್ದನ್ನು ಹಾಗೆಯೇ ಮುಂದುವರೆಸಿದ್ದರೆ ಉತ್ತಮ ಪ್ರವಾಸೀ ತಾಣವಾಗಿ ಮತ್ತಷ್ಟು ಜನರನ್ನು ಆಕರ್ಷಿಸುತ್ತಿತ್ತು.

ಬೆಂಗಳೂರಿನಿಂದ ಸುಮಾರು 130 ಕಿಮೀ ದೂರದಲ್ಲಿರುವ ಈ ಪ್ರದೇಶ ವಾರಾಂತ್ಯದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದ್ದು ಬೆಳ್ಳಬೆಳಿಗ್ಗೆ ಬೆಂಗಳೂರಿನಿಂದ ಹೊರಟು ಮೇಲುಕೋಟೆಯ ಚೆಲುವ ನಾರಾಯಣನನ್ನು ದರ್ಶನ ಮಾಡಿಕೊಂಡು ಅಲ್ಲಿಯ ಪ್ರಸಿದ್ಧ ಪುಳಿಯೋಗರೇ ಮತ್ತು ಸಕ್ಕರೇ ಪೊಂಗಲ್ ತಿಂದು ಅಲ್ಲಿಂದ ಸುಮಾರು 25 ಕಿಮೀ ದೂರದ ಕೆರೆ ತೊಂಡನೂರಿಗೆ ದೇವಸ್ಥಾನಗಳನ್ನೂ ಕೆರೆಯನ್ನೂ ನೋಡಿ ಇಲ್ಲಿನ ಸೌಂದರ್ಯವನ್ನು ಆಹ್ಲಾದಿಸಿ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿನ ಕಡೆಗೆ ಮರಳಬಹುದಾಗಿದೆ.

ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ತೊಂಡನೂರಿನ ಕೆರೆಯ ಸೊಬಗನ್ನು ಸವಿದು ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರಿ ಅಲ್ವೇ?

ಏನಂತೀರೀ?

ಶೆಟ್ಟೀಕೆರೆ

ಭೌಗೋಳಿಕವಾಗಿ ಕಲ್ಪತರುನಾಡು ತುಮಕೂರಿನ ಭಾಗವಾಗಿ, ಆ ಜಿಲ್ಲೆಯ ತುತ್ತ ತುದಿಯಲ್ಲಿ , ತುಮಕೂರಿನಿಂದ ಸುಮಾರು 70 ಕಿಮೀ ದೂರದಲ್ಲಿರುವ, ಚಿಕ್ಕನಾಯಕನ ಹಳ್ಳಿಯಿಂದ ತಿಪಟೂರಿಗೆ ಹೋಗುವ ಮಾರ್ಗದ ಮಧ್ಯದಲ್ಲಿರುವ ಹೋಬಳಿಯೇ ಶೆಟ್ಟೀಕೆರೆ. ಹತ್ತಿರ ಹತ್ತಿರ ಸಾವಿರ ಮನೆಗಳು ಇರಬಹುದಾದ ಒಂದು ರೀತಿಯ ಸ್ಥಳೀಯ ವಾಣಿಜ್ಯ ನಗರಿ. ಸಾಂಪ್ರದಾಯಿಕವಾಗಿ ಹಾಸನ ಜಿಲ್ಲೆಯ ಸೊಗಡನ್ನು ಮೈದಳೆದಿರುವ ವಾಣಿಜ್ಯವಾಗಿ ಚಿತ್ರದುರ್ಗ ಜಿಲ್ಲೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಪಟ್ಟಣವೆಂದರೂ ತಪ್ಪಾಗಲಾರದು.

ಬೆಂಗಳೂರಿನ ಕೃಷ್ಣರಾಜ ಪುರದಲ್ಲಿ ಎಲೆ ಮರಿಮಲ್ಲಪ್ಪ ಶೆಟ್ಟರು ಲೋಕ ಕಲ್ಯಾಣಕ್ಕಾಗಿ ವಿಶಾಲವಾದ ಕೆರೆಯನ್ನು ಕಟ್ಟಿಸಿದಂತೆ ಕೆಲವು ಶತಮಾನಗಳ ಹಿಂದೆ ಆ ಊರಿಗೆ ವ್ಯಾಪಾರಕ್ಕೆಂದು ಬಂದಿದ್ದ ಶೆಟ್ಟರೊಬ್ಬರು ಜನ ಹಿತಕ್ಕಾಗಿ ಕೆರೆಯನ್ನು ಕಟ್ಟಿಸಿದ ಕಾರಣ ಭರಿತ ಪ್ರಕಾಶ ಪುರಿ ಎಂಬ ಊರು ಶೆಟ್ಟೀಕೆರೆಯಾಗಿ ಬದಲಾಯಿತೆಂಬ ಪ್ರತೀತಿಯಿದೆ. ವ್ಯಾಪಾರಕ್ಕೆಂದು ಬಂದಿದ್ದ ಶೆಟ್ಟರು ಈ ರೀತಿಯಾಗಿ ಕೆರೆಯನ್ನು ಕಟ್ಟಿಸುವ ಹಿಂದೆಯೂ ಒಂದು ಸ್ವಾರಸ್ಯಕರವಾದ ಕಥೆಯಿದೆ. ಪರ ಊರಿನಿಂದ ವ್ಯಾಪಾರಕ್ಕೆಂದು ಬಂದಿದ್ದ ಶೆಟ್ಟರು, ದಿನದ ವ್ಯಾಪಾರ ಮುಗಿಸಿ ಸಂಜೆ ಅಡುಗೆ ಮಾಡುವ ಸಲುವಾಗಿ ಊರಿನ ಉತ್ತರಭಾಗದಲ್ಲಿ ಕಂಡ ಕರೀ ಕಲ್ಲೊಂದರ ಅಕ್ಕ ಪಕ್ಕ ಮತ್ತೆರಡು ಕಲ್ಲುಗಳನ್ನು ಇಟ್ಟು ಅನ್ನವನ್ನು ಮಾಡಿ, ಅನ್ನವನ್ನು ಬಡಿಸಿಕೊಳ್ಳಲು ಪಾತ್ರೆಗೆ ಕೈಹಾಕಿದಾಗ ಅನ್ನದ ಬದಲಾಗಿ ಹುಳುಗಳನ್ನು ಕಂಡು ಭಯ ಭೀತರಾಗಿ ಸ್ಥಳೀಯ ಪುರೋಹಿತರಲ್ಲಿ ವಿಚಾರಿಸಿದಾಗ, ಅವರು ಅಡುಗೆ ಮಾಡಲು ಬಳಸಿದ್ದ ಕರೀ ಕಲ್ಲು ಈಶ್ವರ ಲಿಂಗವಾಗಿದ್ದ ಕಾರಣ ಈ ರೀತಿಯ ಅಪಚಾರವಾಗಿರೆ. ಇದರ ಪಾಪ ಪರಿಹಾರಾರ್ಥವಾಗಿ ಅಲ್ಲಿ ಕೆರೆಯೊಂದನ್ನು ಕಟ್ಟಿಸುವ ಮುಖಾಂತರ ಶಾಪ ವಿಮೋಚನೆ ಗೊಳ್ಳಬಹುದು ಎಂದು ಸೂಚಿಸಿದ ಪರಿಣಾಮ ಆ ಶೆಟ್ಟರು ತಮ್ಮ ಸ್ವಂತ ಖರ್ಚಿನಲ್ಲಿ ಕೆರೆಯನ್ನು ಕಟ್ಟಿಸಲು ಮುಂದಾಗುತ್ತಾರೆ. ಇತ್ತ ವ್ಯಾಪಾರಕ್ಕೆಂದು ಹೋಗಿ ಎಷ್ಟು ದಿನಗಳಾದರೂ ಊರಿಗೆ ಮರಳಿ ಬಾರದ ಮೊಮ್ಮಗನನ್ನು ಹುಡುಕಿಕೊಂಡು ಬಂದು ಮೊಮ್ಮಗ ಕಟ್ಟಿಸುತ್ತಿದ್ದ ಕೆರೆಯಿಂದ ಪ್ರೇರೇಪಿತರಾಗಿ ಅವರೂ ಸಹಾ ಮತ್ತೊಂದು ಕೆರೆಯನ್ನು ಕಟ್ಟಿಸಿದ ಕಾರಣ ಜನಾ ಪ್ರೀತಿಯಿಂದ ಅದನ್ನು ಅಜ್ಜನ ಕೆರೆ ಎಂದು ಕರೆದರು ಹೀಗೆ ಎರಡೆರಡು ಭರ್ಜರಿ ಕರೆಗಳಿಂದಾಗಿ ಭರಿತ ಪ್ರಕಾಶ ಪುರಿ ಶೆಟ್ಟೀಕೆರೆಯಾಗಿ ಪ್ರಸಿದ್ಧವಾಯಿತು.

ಸುಮಾರು 71.83 ಎಂಸಿಎಫ್ಟಿ ನೀರನ್ನು ಸಂಗ್ರಹಿಸಬಹುದಾಗಿರುವ ಈ ಕೆರೆಯು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಕೃಷಿ ಚಟುವಟಿಕೆಗಳಿಗೆ ಆಶ್ರಯತಾಣವಾಗಿತ್ತು. ಕಾಲಾ ಕಾಲಕ್ಕೆ ಮಳೆಯೇ ಸರಿಯಾಗಿ ಬೀಳದ ಕಾರಣ ಶಾಶ್ವತ ಬರ ಪೀಡಿತ ಪ್ರದೇಶವಾಗಿ ಮಾರ್ಪಟ್ಟು ತುಂಬಿ ತುಳುಕಿ ಸಹಸ್ರಾರು ಹಕ್ಕಿಗಳಿಗೆ ಆಶ್ರಯತಾಣವಾಗಿದ್ದ ಕರೆಯಲ್ಲಿ ಹೂಳು ತೆಗೆಯದ ಕಾರಣ, ಗಿಡ ಗಂಟೆಗಳು ಬೆಳೆದು ಕ್ರಮೇಣ ಪಾಳು ಬಿದ್ದು ಹೋಗಿತ್ತು.

ಇದೇ ಮಾರ್ಜ್ ತಿಂಗಳಿನಲ್ಲಿ ಕರೋನಾ ಮಹಾಮಾರಿಯ ಅರ್ಭಟದ ಪರಿಣಾಮವಾಗಿ ಇಡೀ ವಿಶ್ವವೇ, ಲಾಕ್ಡೌನ್ ಆದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ ಶೆಟ್ಟೀಕೆರೆಯ ಸಂಪ್ರದಾಯಸ್ಥರ ಮನೆಯ ಉತ್ಸಾಹೀ ತರುಣ ಪ್ರಶಾಂತ್ ತನ್ನ ಹುಟ್ಟೂರಿಗೆ ಮರಳಿ ಅಲ್ಲಿಂದಲೇ work from home ಮಾಡಲು ನಿರ್ಧರಿಸಿದ. ಊರಿನಲ್ಲಿ ಪುರಾಣ ಪ್ರಸಿದ್ಧವಾದ ಮತ್ತು ಯುಗಾದಿಯ ಮುಂಚಿನ ಫಾಲ್ಗುಣ ಮಾಸದಲ್ಲಿ ಜಾತ್ರೆ ನಡೆಯುವ ಕಾಲಭೈರವೇಶ್ವರ ಮತ್ತು ಯುಗಾದಿ ಹಬ್ಬದ ಹದಿನೈದು ದಿನಗಳ ನಂತರ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯುವ ಕೆಂಪಮ್ಮ ದೇವಿಯ ಜಾತ್ರೆಯ ದೇವಾಲಯಗಳ ಸುತ್ತ ಮುತ್ತಲು ಬೆಳೆದಿದ್ದ ಗಿಡ ಗಂಟೆಗಳನ್ನು ತನ್ನ ಸಮವಯಸ್ಕ ಮತ್ತು ಸಮಾನ ಮನಸ್ಸಿನ ಯುವಕರ ನೆರೆವಿನೊಂದಿಗೆ ಸ್ವಚ್ಚಗೊಳಿಸಿ ಸ್ಥಳೀಯ ಮನಸ್ಸನ್ನು ಸೂರೆಗೊಂಡ.

ಅದೇ ಸಮಯದಲ್ಲಿ ಶೆಟ್ಟೀಕೆರೆಯ ಪಕ್ಕದ ಊರಿನ ಸಾಸಲುಕೆರೆಗೆ ಹೇಮಾವತಿ ನದಿಯ ಕಾಲುವೆಯಿಂದ ನೀರು ಸರಾಗವಾಗಿ ಹರಿದು ಅಲ್ಲಿಂದ ಸುಮಾರು ಎರಡು ಮೂರು ವಾರಗಳಲ್ಲಿ ಶೆಟ್ಟೀಕೆರೆಗೆ ಹೇಮಾವತಿಯ ನೀರು ಬರುತ್ತದೆ ಎಂಬ ಮಾಹಿತಿ ತಿಳಿದೊಡನೆಯೇ ಮತ್ತದೇ ಗೆಳೆಯರ ಗುಂಪನ್ನು ಸೇರಿಸಿಕೊಂಡು ಹೆಗಲಿಗೊಂದು ಜೋಳಿಗೆ ತಗುಲಿಸಿಕೊಂಡು ಕೆರೆಯ ಶುದ್ದೀಕರಣಕ್ಕೆ ಇಳಿದ. ದೇವಸ್ಥಾನದ ಶುಚೀಕರಣದ ಸಮಯದಲ್ಲಿಯೇ ಆತನ ಸಂಘಟನಾ ಚತುರತೆಯನ್ನು ಅರಿತಿದ್ದ ಊರಿನ ಜನ ಸ್ವಯಂ ಪ್ರೇರಿತರಾಗಿ ಹಣವನ್ನು ದಾನ ಮಾಡಿದ ಫಲವಾಗಿ ಊರಿನ ಜನರ ಹಣದಿಂದಲೇ, ಸುಮಾರು ಹತ್ತು ಹದಿನೈದು ಜೆಸಿಬಿ, ಟಿಪ್ಪರ್ಗಳ ಸಹಾಯದಿಂದ ನೋಡ ನೋಡುತ್ತಿದ್ದಂತೆಯೇ ಗಿಡಗಂಟೆಗಳಿಂದ ಪಾಳು ಬಿದ್ದಿದ್ದ ಕೆರೆ ಸ್ವಚ್ಚವಾಗಿ ಹೇಮಾವತಿಯ ನೀರನಿಂದ ಮೈತುಂಬಿಕೊಳ್ಳಲು ಸಜ್ಜಾಗಿದೆ. ಹೇಮಾವತಿಯ ನೀರು ಶೆಟ್ಟೀಕೆರೆಯನ್ನು ತುಂಬಿದಲ್ಲಿ ಈಗಾಗಲೇ ಬರಿದಾಗಿರುವ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವುದಲ್ಲದೇ ಸತತವಾದ ಬರಗಾಲದಿಂದ ತತ್ತರಿಸಿರುವ ಸ್ಥಳೀಯರ ಕೃಷಿ ಚಟುವಟಿಕೆಗಳಿಗೆ ಗರಿ ತುಂಬುವುದಲ್ಲದೇ ಇಲ್ಲಿಂದ ಮುಂದೆ ಚಿತ್ರದುರ್ಗದ ಅನೇಕ ಕೆರೆಗಳಿಗೂ ನೀರುಣಿಸಬಲ್ಲದಾಗಿದೆ.

ಉತ್ಸಾಹೀ ತರುಣ ಪ್ರಶಾಂತನ ಕೆಲಸದ ಬಗ್ಗೆ ವೃತ್ತಪತ್ರಿಕೆಯಲ್ಲಿ ಓದಿ ತಿಳಿದಾಗ ಸುಮಾರು 30-35 ವರ್ಷಗಳ ಹಿಂದೆ ಜಮಖಂಡಿ ತಾಲ್ಲೂಕಿನ ಗ್ರಾಮಗಳ ಪಕ್ಕದಲ್ಲೇ ಕೃಷ್ಣಾ ನದಿಯ ನೀರು ಮಳೆಗಾಲದಲ್ಲಿ ಹರಿದು ವ್ಯರ್ಥವಾಗಿ ಹರಿದು ಹೋಗುತ್ತಿದ್ದದ್ದನ್ನು ಗಮನಿಸಿ, ಇಲ್ಲೊಂದು ಬ್ಯಾರೇಜ್ ನಿರ್ಮಿಸಿ ನೀರನ್ನು ತಡೆಹಿಡಿದಲ್ಲಿ ಕೃಷಿಗೆ ನಿರಂತರವಾಗಿ ನೀರನ್ನು ಬಳಸಬಹುದು ಎಂದು ನಿರ್ಧರಿಸಿ, ಸರ್ಕಾರದ ನೆರವನ್ನು ಪಡೆಯದೇ ಸ್ಥಳೀಯ ರೈತರ ಸಹಕಾರದಿಂದ ಸಂಪನ್ಮೂಲಗಳನ್ನು ಕ್ರೋಡೀಕರಿಸಿ, ರೈತರ ಶ್ರಮದಾನದ ಫಲವಾಗಿ ಚಿಕ್ಕಪಡಸಲಗಿ ಬ್ಯಾರೇಜ್ ಕಟ್ಟಿಸಿದ ಕೇಂದ್ರದ ಮಾಜಿ ಸಚಿವ ದಿ. ಸಿದ್ದು ನ್ಯಾಮಗೌಡರು ನೆನಪಿಗೆ ಬಂದರು ಎಂದರೆ ಸುಳ್ಳಲ್ಲ. ಚಿಕ್ಕಪಡಸಲಗಿಯಲ್ಲಿ ಸ್ವಂತ ಶ್ರಮದಿಂದ ಬ್ಯಾರೇಜ್ ನಿರ್ಮಿಸಿ ಆಧುನಿಕ ಭಗೀರಥ ಎಂದು ಕರೆಸಿಕೊಂಡಿದ್ದ ಸಿದ್ದು ನ್ಯಾಮಗೌಡಂತೆಯೇ ಶೆಟ್ಟೀಗೆರೆಯ ಸಂಘಟನಾ ಚತುರ ಪ್ರಶಾಂತರನ್ನೂ ಆಧುನಿಕ ಭಗೀರಥ ಎಂದರೂ ಅತಿಶಯೋಕ್ತಿಯಾಗಲಾರದು.

ಎಲ್ಲಾ ಕೆಲಸವನ್ನೂ ಸರ್ಕಾರವೇ ಮಾಡಬೇಕು ಎಂದು ಜನಪ್ರತಿನಿಧಿಯನ್ನು ತೆಗಳುತ್ತಾ ಕಾಲ ವ್ಯರ್ಥ ಮಾಡುವ ಬದಲು ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತಹ ಶ್ಲಾಘನೀಯ ಸಮಾಜಮುಖೀ ಕೆಲಸದಲ್ಲಿ ಭಾಗಿಯಾದ ಸಮಸ್ಥ ಶೆಟ್ಟೀಗೆರೆಯ ನಾಗರೀಕರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಬೇಕು. ಡಾಕ್ಟರ್ ಮಗ ಡಾಕ್ಟರ್ ಆಗಬೇಕು, ಇಂಜಿನೀಯರ್ ಮಗ ಇಂಜೀನಿಯರ್ ಆಗಬೇಕು ಆದರೆ ರೈತನ ಮಗ ಮಾತ್ರ ರೈತನಾಗಬಾರದು ಎಂಬ ಮನೋಭಾವನೆಯನ್ನು ಹೊಂದಿರುವ ಈ ಸಮಾಜದಲ್ಲಿ ಪ್ರಶಾಂತ್ ಮತ್ತವರ ಸಂಗಡಿಗರಂತಹ ಉತ್ಸಾಹೀ ಯುವಕರುಗಳು ನಾಡಿನ ಎಲ್ಲಾ ಹಳ್ಳಿ ಹಳ್ಳಿಗಳಲ್ಲಿಯೂ ಹುಟ್ಟಿಕೊಂಡಲ್ಲಿ ಭಾರತ ಮತ್ತೊಮ್ಮೆ ಕೃಷಿ ಪ್ರಧಾನವಾದ ದೇಶವಾಗುವುದರಲ್ಲಿ ಸಂದೇಹವೇ ಇಲ್ಲ. ಭೂಮಿ ತಾಯಿಯಿ ತನ್ನನ್ನು ನಂಬಿ ಆರಾಧಿಸುವವರಿಗೆ ಎಂದೂ ಕೈ ಕೊಟ್ಟ ಉದಾಹರಣೆ ಇಡೀ ವಿಶ್ವದಲ್ಲಿಯೇ ಇಲ್ಲಾ. ಜಗತ್ತೇ ಲಾಕ್ಡೌನ್ ಆಗಿ ಬಹುತೇಕ ವ್ಯವಹಾರಗಳು ನಿಶ್ಕ್ರಿಯವಾಗಿರುವಾಗ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಮುನ್ನೆಡೆಯುತ್ತಿರುವುದೇ ಕೃಷಿ ಚಟುವಟಿಕೆ ಎನ್ನುವುದನ್ನು ಮರೆಯಲಾಗದು ಅಲ್ವೇ? ಸಾಫ್ಟ್ವೇರ್ ಕೆಲಸ ಕೈತುಂಬ ಹಣವನ್ನು ಕೊಡಬಹುದಾದರೂ, ರೈತ ಶ್ರಮ ವಹಿಸಿ ಕೃಷಿ ಮಾಡಿದಲ್ಲಿ ಮಾತ್ರವೇ ಆ ಹಣದಿಂದ ಹೊಟ್ಟೆ ತುಂಬಿಸಿಕೊಳ್ಳಬಹುದು ಅಲ್ಲವೇ?

ಏನಂತೀರೀ?

ಸೂಳೆ ಕೆರೆ (ಶಾಂತಿ ಸಾಗರ)

ಅರೇ ಇದೇನಿದು? ಈ ಕೆರೆಯ ಹೆಸರು ಹೀಗಿದೆಯಲ್ಲಾ? ಇಂತಹ ವಿಲಕ್ಷಣ ಹೆಸರಿನ ಕೆರೆ ಎಲ್ಲಿದೆ ಅಂತಾ ಯೋಚಿಸುತ್ತಿದ್ದೀರಾ? ಇದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು 18 ಕಿ.ಮೀ ದೂರದಲ್ಲಿದೆ. ಈ ಕೆರೆ ನೊಡುವುದಕ್ಕೆ ಅಗಾಧವಾದ ಸಾಗರದಂತೆಯೇ ಕಾಣುತ್ತದೆ. ಸರಿ ಸುಮಾರು 4416 ಎಕರೆ ವಿಸ್ತೀರ್ಣದ ಈ ಕೆರೆ, ಚಿತ್ರದುರ್ಗ ಪಟ್ಟಣವೂ ಸೇರಿದಂತೆ ಸುಮಾರು 15 ರಿಂದ 20 ಹಳ್ಳಿಗಳ 2000 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ನಿಜ ಹೇಳಬೇಕೆಂದರ, ನೈಸರ್ಗಿಕವಾಗಿ ಈ ಪ್ರದೇಶ ಕೆರೆಯ ನಿರ್ಮಾಣಕ್ಕೆ ಸೂಕ್ತವಲ್ಲ ಎಂದು ಈಗಿನ ನೀರಾವರಿ ತಜ್ಞರು ಹೇಳುತ್ತಾರಾದರೂ, ನಮ್ಮ ಪೂರ್ವಜರು ಅತ್ಯಂತ ಚಾಣಾಕ್ಷ ತನದಿಂದ ಅಂಥ ಬೃಹತ್ ಕೆರೆಯನ್ನು ಎರಡು ಬೆಟ್ಟಗಳ ನಡುವೆ ಸುಮಾರು 950 ಅಡಿ ಉದ್ದಕ್ಕೆ ಬದುವನ್ನು ಕಟ್ಟಿ ನಡುವೆ ನೀರು ತಡೆದು ನಿಲ್ಲಿಸಲಾಗಿದೆ. ಬದುವಿನ ಒಂದು ಪಾರ್ಶ್ವ 60 ಅಡಿ, ಇನ್ನೊಂದೆಡೆ 80 ಅಡಿ ಅಗಲವಿದ್ದು ಬೆಟ್ಟಗಳ ನಡುವಿರುವ ಕೆರೆಗೆ ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಬೀಳುವ ಮಳೆ ನೀರು ಹರಿದು ಬರುವ ವ್ಯವಸ್ಥೆಯನ್ನು ಮಾಡಲಾಗಿದೆ. ಕೆರೆಯ ಉತ್ತರದಲ್ಲಿ ಸಿದ್ಧ ನಾಲೆ ಹಾಗೂ ದಕ್ಷಿಣದಲ್ಲಿ ಬಸವ ನಾಲೆ ಎಂಬ ಎರಡು ನಾಲೆಗಳಿದ್ದು ಈ ಕೆರೆಯಿಂದ ಮೂರು ತೂಬುಗಳ ಮೂಲಕ ನೀರು ಹೊರಗೆ ಹರಿದು ಹೋಗುವ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಅಗಾಧವಾದ ಕೆರೆ ತನ್ನ ಸುತ್ತಲಿನ ರುದ್ರ ರಮಣೀಯ ಪರಿಸರ, ನೀರಿನ ಸಮೃದ್ಧಿ ಮತ್ತು ತಾಂತ್ರಿಕ ನಿರ್ಮಾಣಗಳ ಮೂಲಕ ಗಮನ ಸೆಳೆಯುವುದಲ್ಲದೇ, ಏಷ್ಯಾ ಖಂಡದಲ್ಲೇ ಎರಡನೆ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಇಂತಹ ಕೆರೆಗೆ ಸೂಳೆ ಕೆರೆ ಎಂಬ ಹೆಸರು ಬರಲು ಒಂದು ಐತಿಹ್ಯ ಕಾರಣವಿದೆ.

ಈಗಿನ ಕಗತೂರು ಎಂಬ ಗ್ರಾಮ, 12ನೇ ಶತಮಾನದಲ್ಲಿ ಸ್ವರ್ಗಾವತಿ ಎಂಬ ಪಟ್ಟಣವಾಗಿದ್ದು ಅಲ್ಲಿಯ ದೊರೆ ವಿಕ್ರಮರಾಜನ ಮಗಳು ಶಾಂತವ್ವ, ಸಿದ್ದೇಶ್ವರ ಎಂಬ ಯುವಕನೊಂದಿಗೆ ಗಾಂಧರ್ವ ವಿವಾಹವಾಗುತ್ತಾಳೆ. ಆದರೆ ಸಮಾಜ ಈ ಮದುವೆಯನ್ನು ಒಪ್ಪಿಕೊಳ್ಳದೇ, ಆಕೆಯನ್ನು ವೇಶ್ಯೆ ಅಥವಾ ಸೂಳೆ ಎಂದು ಜರಿಯುತ್ತಾರೆ. ತನಗೆ ಬಂದಿರುವ ಈ ಕಳಂಕದಿಂದ ಮುಕ್ತಿಹೊಂದುವ ಸಲುವಾಗಿ ತನನ್ನು ಜರಿದ ಜನರ ಅನುಕೂಲಕ್ಕಾಗಿಯೇ, ತನ್ನ ಪತಿ ಯ ಜೊತೆ ಸೇರಿ ಈ ವಿಶಾಲವಾದ ಕೆರೆಯನ್ನು ನಿರ್ಮಿಸಿ ಅದೇ ಕೆರೆಗೆ ಹಾರವಾಗುತ್ತಾಳೆ. ತನ್ನ ಪತ್ನಿಯ ಅಗಲಿಕೆಯನ್ನು ತಾಳಲಾರದೇ, ಆಕೆಯ ಪತಿ ಸಿದ್ದೇಶ್ವರನೂ ಸಹಾ ಕೆರೆಯ ಪಕ್ಕದಲ್ಲೇ ಇರುವ ಬೆಟ್ಟದಿಂದ ಹಾರಿ ತನ್ನ ಪ್ರಾಣವನ್ನು ತ್ಯಜಿಸುತ್ತಾನೆ ಎಂಬ ಕಥೆ ಇದೆ. ಇದಕ್ಕೆ ಪುರಾವೆಯಾಗಿ ಇಂದಿಗೂ ಆ ಗುಡ್ದದ ಮೇಲೆ ಸಿದ್ದೇಶ್ವರ ದೇವಾಲಯವಿದೆ. ಪ್ರತಿ ವರ್ಷವೂ ಅಲ್ಲಿ ಅದ್ದೂರಿಯ ಸಿದ್ದೇಶ್ವರ ಜಾತ್ರೆ ನಡೆಯುತ್ತಿದ್ದು, ಶಾಂತವ್ವಳ ತವರು ಮನೆ ಕಗತೂರು ಗ್ರಾಮದವರ ಮನೆಯಿಂದಲೇ ಮಡ್ಲಕ್ಕಿ ತೆಗೆದುಕೊಂಡು ಹೋದ ನಂತರವೇ ರಥ ಯಾತ್ರೆಗೆ ಚಾಲನೆ ನೀಡಲಾಗುತ್ತದೆ.

ಇದೇ ಕಥೆಗೆ ಮತ್ತೊಂದು ಆಯಾಮವೂ ಇದ್ದು, ಊರ ಜನರ ತಿರಸ್ಕಾರದಿಂದ ನೊಂದ ಶಾಂತವ್ವ, ತನ್ನ ಮೇಲಿನ ಆರೋಪದಿಂದ ಮುಕ್ತಳಾಗಲು ಜನೋಪಕಾರಕ್ಕಾಗಿ ಒಂದು ಕೆರೆಯನ್ನು ನಿರ್ಮಿಸಲು ನಿರ್ಧರಿಸಿ ಅದಕ್ಕೆ ಪ್ರಶಸ್ತವಾದ ಜಾಗವನ್ನು ಹುಡುಕುತ್ತಿದ್ದಾಗ ಆ ಸ್ವರ್ಗಾವತಿಯಲ್ಲಿ ವೇಶ್ಯೆಯರು ವಾಸಿಸುತ್ತಿದ್ದ ಈ ಪ್ರದೇಶವ ಕೆರೆಗೆ ಸೂಕ್ತ ಎಂದು ತಿಳಿದು ಬಂದು, ಈ ಪ್ರದೇಶವನ್ನು ಬಿಟ್ಟು ಕೊಡಲು ಅಲ್ಲಿ ಬೀಡು ಬಿಟ್ಟಿದ್ದ ವೇಶ್ಯೆಯರ ಬಳಿ ಕೇಳಿಕೊಳ್ಳುತ್ತಾಳೆ. ಅದಕ್ಕೆ ಪ್ರತಿಯಾಗಿ ಈ ಕೆರೆಗೆ ಸೂಳೆಕೆರೆ ಎಂದು ನಾಮಕರಣ ಮಾಡುವುದಾದರೆ ಆ ಪ್ರದೇಶವನ್ನು ಬಿಟ್ಟುಕೊಡುವುದಾಗಿ ಅವರು ಬೇಡಿಕೆ ಇಟ್ಟಾಗ ಅದಕ್ಕೊಪ್ಪಿದ ಶಾಂತವ್ವ ಅಲ್ಲಿ ಈ ಕೆರೆಯನ್ನು ನಿರ್ಮಿಸಿ, ಒಪ್ಪಂದಂತೆ ಸೂಳೆಕೆರೆ ಎಂದು ಹೆಸರು ಇಡುತ್ತಾಳೆ ಎಂದೂ ಹೇಳಲಾಗುತ್ತದೆ.

ಕೆಲ ದಶಕಗಳ ಹಿಂದೆ ಈ ಹೆಸರು ಸಮಂಜಸವಾಗಿಲ್ಲದೇ ಜನರಲ್ಲಿ ತಪ್ಪು ಭಾವನೆ ಕಲ್ಪಿಸುತ್ತದೆ ಎಂಬ ಕಾರಣ ನೀಡಿ ಈ ಕೆರೆಯನ್ನು ಶಾಂತಿ ಸಾಗರ ಎಂದು ಪುರರ್ನಾಮಕರಣ ಮಾಡಬೇಕೆಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಚೆನ್ನಗಿರಿಯವರೇ ಆಗಿದ್ದ ಶ್ರೀ ಜೆ.ಹೆಚ್ ಪಟೇಲ್ ಅವರ ಬಳಿ ಪ್ರಸ್ತಾಪನೆ ಇಡುತ್ತಾರೆ.

ಅವರ ಪ್ರಸ್ತಾವನೆಗೆ ಒಪ್ಪದ ಪಟೇಲರು, ಇರಲಿ ಬಿಡ್ರಿ. ಸೂಳೆ ಕೆರೆ ಅನ್ನೋ ಹೆಸರೇ ಇತಿಹಾಸ ಪ್ರಸಿದ್ಧವಾಗಿದೆ. ಈಗ ಅದರ ಹೆಸರನ್ನು ಶಾಂತಿ ಸಾಗರ ಎಂದು ಬದಲಿಸಿ ಇತಿಹಾಸವನ್ನು ತಿದ್ದಲಾಗದು ಎಂದಿದ್ದರು. ಹಾಗೆಯೇ, ಮಾತನ್ನು ಮುಂದುವರೆಸಿ, ಒಬ್ಬ ಹೆಣ್ಣು ಮಗಳನ್ನು ಸೂಳೆಯ ಪಟ್ಟಕ್ಕೇರಿಸುವುದು ಯಾರು? ಈ ಸಮಾಜದ ದುರುಳ ಗಂಡಸರು ಮತ್ತು ಬಾಯಿ ಚಪಲ ಅತಿಯಾಗಿರುವ ಹೆಂಗಸರಲ್ಲವೇ? ಒಬ್ಬ ಹೆಣ್ಣಿಗೆ ಮೈ ಮಾರಿಕೊಳ್ಳುವುದನ್ನು ಅನಿವಾರ್ಯವಾಗುವಂತೆ ಮಾಡಿದ್ದು ಇದೇ ಸಮಾಜವಲ್ಲವೇ? ಈ ಸಮಾಜದ ಕಣ್ಣಲ್ಲಿ ಸೂಳೆ ಎನ್ನಿಸಿಕೊಂಡ ಆ ಹೆಣ್ಣು ಮಗಳು ಕೆರೆ ಕಟ್ಟಿಸುವ ಮೂಲಕ ಇಂದಿಗೂ ಸಹಾ ಲಕ್ಷಾಂತರ ಜನರ ನೆಮ್ಮದಿಗೆ ದಾರಿ ಮಾಡಿಕೊಟ್ಟಳು ಎಂದ್ದಲ್ಲಿ ಅದನ್ನೇಕೆ ತಪ್ಪೆಂದು ಭಾವಿಸಿ ಬದಲಿಸ ಬೇಕು? ಎಂದು ಕೇಳಿದ್ದರಂತೆ.

ಆಕೆಯ ಮಾನವೀಯತೆಯ ನಿಲುವಿಗೆ ಸರಿ ಸಮವಾಗಿ ಖಂಡಿತವಾಗಿಯೂ ಈ ಸಮಾಜ ಇಲ್ಲ. ಹೀಗಾಗಿ ಆಕೆಯನ್ನು ಸೂಳೆ ಎಂದು ಕರೆದ ಸಮಾಜದ ಮನಸ್ಸಿನಲ್ಲಿ ನಾಚಿಕೆ ಎಂಬುದು ಶಾಶ್ವತವಾಗಿ ಉಳಿಯಬೇಕು. ಸೂಳೆ ಎಂದು ಕರೆಸಿಕೊಂಡ ಆ ಹೆಣ್ಣಿನಲ್ಲಿ ಇರುವ ಮಾತೃತ್ವ ಗುಣವನ್ನು ನಾವು ಸದಾ ಕಾಲ ನೆನಪಿಸಿಕೊಳ್ಳ ಬೇಕು ಎಂಬ ಕಾರಣಕ್ಕಾಗಿ ಅದೇ ಹೆಸರು ಇರಲಿ ಎಂದಿದ್ದಲ್ಲದೇ, ಒಂದು ಪಕ್ಷ ಇಂದು ಆ ಕೆರೆಯ ಹೆಸರನ್ನು ಶಾಂತಿ ಸಾಗರ ಎಂದು ಬದಲಿಸಿದಲ್ಲಿ, ಮುಂದಿನ ಪೀಳಿಗೆಗೆ ಅದರ ಹಿನ್ನೆಲೆಯೇ ಅರ್ಥವಾಗುವುದಿಲ್ಲ ಅಲ್ಲವೇ ಎಂದು ಹೇಳಿ ಸೂಳೆಕೆರೆ ಹೆಸರನ್ನು ಬದಲಿಸಬೇಕು ಎಂಬ ಪ್ರಸ್ತಾಪನೆ ಇಟ್ಟಿದ್ದವರ ಬಾಯಿ ಮುಚ್ಚಿಸಿದ್ದರಂತೆ.

ಯಾರು ಏನೇ ಹೇಳಿದರೂ ಸೂಳೆಕೆರೆಯಂತೆ ಸಮಾಜದಲ್ಲಿ ವೇಶ್ಯೆಯರಿಗೂ ಕೆರೆಗಳಿಗೂ ಅವಿನಾಭಾವ ಸಂಬಂಧವಿರುವುದು ಇತಿಹಾಸದಲ್ಲಿ ಅನೇಕ ಉದಾಹರಣೆಗಳಿಗೆ. ಮುಸಲ್ಮಾನ ಲೂಟಿಕೋರರು ಹಳೇಬೀಡನ್ನು ನಾಶ ಪಡಿಸಿ, ಬೇಲೂರಿನತ್ತ ಕಣ್ಣು ಹಾಯಿಸಿರುವ ಸುದ್ದಿಯನ್ನು ಕೇಳಿದ ಬೇಲೂರಿನ ಕುಪ್ರಸಿದ್ಧ ವೇಶ್ಯೆಯೊಬ್ಬಳು ತನ್ನ ಸ್ವಂತ ಖರ್ಚಿನಲ್ಲಿ ಯಗಚೀ ನದಿಯ ಮರಳಿನಿಂದ ಬೇಲೂರು ಚೆನ್ನಕೇಶವ ದೇವಾಲಯವನ್ನು ಸಂಪೂರ್ಣವಾಗಿ ಮುಚ್ಚಿದ್ದ ಕಾರಣ ನಾವಿನ್ನೂ ಸುಪ್ರಸಿದ್ದ ಬೇಲೂರಿನ ಶಿಲ್ಪಕಲೆಯನ್ನು ಕಣ್ತುಂಬಿಸಿಕೊಳ್ಳುವಂತಾಗಿದೆ.

ಒಂದು ನೊಂದ ಜೀವಕ್ಕೇ ಮತ್ತೊಂದು ನೊಂದ ಜೀವದ ಕಷ್ಟದ ಅರಿವಾಗುತ್ತದೆ. ಸಮಾಜದಲ್ಲಿ ದೌರ್ಜನ್ಯಕ್ಕೊಳಗಾದ ಮತ್ತು ಎಲ್ಲರಿಂದಲೂ ಕೀಳಾಗಿ ನೋಡಲ್ಪಟ್ಟ ವೇಶ್ಯೆಯರು ತಮ್ಮ ಪಾಪ ಪ್ರಜ್ಞೆಯಿಂದ ಮುಕ್ತರಾಗಲು ತಮ್ಮನ್ನು ತಾವು ಈ ರೀತಿಯಾಗಿ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವ ಅನೇಕ ಉದಾಹರಣೆಗಳನ್ನು ಇಂದಿಗೂ ನೋಡ ಬಹುದಾಗಿದೆ. ಪರಿಸ್ಥಿತಿಯ ವಿಕೋಪದಿಂದಾಗಿ ಜಾರಿಣಿಯಾಗಿದ್ದರೂ, ನಿಜ ಜೀವನದಲ್ಲಿ ಆಕೆಯೂ ಒಂದು ಹೆಣ್ಣಲ್ಲವೇ? ಅಕೆಗೂ ಹೆಣ್ಣಿನ ಅಂತಃಕರಣ ಇರುತ್ತದಲ್ಲವೇ? ಏಕೆಂದರೆ ಎಷ್ಟಾದರೂ ಹೆಣ್ಣು ಕ್ಷಮಯಾಧರಿತ್ರಿಯಲ್ಲವೇ? ಮಾನವತೆಯ ಚರಿತ್ರೆಯಲ್ಲಿ ಕೊನೆಗೂ ಉಳಿಯುವುದು ಇಂಥವರೇ. ಆ ಕೆರೆ ಕಟ್ಟಿಸಿದ ರಾಜ ಯಾರೆಂದು ಜನರಿಗೆ ಮರೆತು ಹೋಗಬಹುದು, ಆದರೆ ಕೆರೆಯ ಹಿಂದಿರುವ ವೇಶ್ಯೆಯ ಕತೆ ಮರೆತುಹೋಗದು. ಊರಿನ ಕೊಳೆಯನ್ನು ಒಡಲಲ್ಲಿ ತುಂಬಿಕೊಂಡು ಮೇಲೆ ತಿಳಿನೀರನ್ನು ಜನರಿಗೆ ಉಣಿಸುವ ಕೆರೆಯಂತೆಯೇ, ನೋವು ದೂಷಣೆಗಳನ್ನು ನುಂಗಿಕೊಂಡು ಜನತೆಗೆ ಸುಖ ನೀಡುವ ವೇಶ್ಯೆಯರು ಜನತೆಯ ಸ್ವಾಸ್ಥ್ಯವನ್ನು ರಕ್ಷಿಸುತ್ತಿದ್ದರು ಎಂಬುದು ನಿಜವಲ್ಲವೆ

ಸದ್ಯದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ 27 ಅಡಿ ಆಳವಿರುವ ಕೆರೆ ತುಂಬಿ ತುಳುಕುತ್ತಿದ್ದರೂ ಸುಮಾರು 8-10 ಅಡಿಗಳಷ್ಟು ಹೂಳು ತುಂಬಿಕೊಂಡಿರುವ ಕಾರಣ ಕೇವಲ 12 ಅಡಿಗಳಷ್ಟು ನೀರು ಮಾತ್ರವೇ ಲಭ್ಯವಿದ್ದು ಚಿತ್ರದುರ್ಗ, ಜಗಳೂರು ಸೇರಿದಂತೆ ಚೆನ್ನಗಿರಿ ತಾಲ್ಲೂಕಿನ ಸುಮಾರು 80 ಹಳ್ಳಿಗರಿಗೆ ಇನ್ನು ಆರೆಂಟು ತಿಂಗಳುಗಳ ಕಾಲ ನೀರನ್ನು ಉಣಿಸುವುದಲ್ಲದೇ, ಮೀನುಗಾರರಿಗೂ ಜೀವನಾಧಾರವಾಗಿದೆ. ಸ್ಥಳೀಯರು ಅಲ್ಲಿಯ ಪಂಚಾಯಿತಿಯವರ ಮೇಲೆ ಒತ್ತಡ ತಂದು ಹೂಳನ್ನು ತೆಗಿಸುವ ಮೂಲಕ ಕೆರೆಯಲ್ಲಿ ವರ್ಷಪೂರ್ತಿ ಹೆಚ್ಚಿನ ನೀರನ್ನು ಸಂಗ್ರಹಿಸಿಟ್ಟು ಕೊಳ್ಳಬಹುದಾಗಿದೆ.

ಪಟೇಲರ ನಂತರ ಬಂದ ಸರ್ಕಾರ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಯಕ್ಕೆ ಮಣಿದು ಸೂಳೆಕೆರೆಯನ್ನು ಸರ್ಕಾರಿ ದಾಖಲೆಗಳಲ್ಲಿ ಶಾಂತಿಸಾಗರ ಎಂದು ಬದಲಾಯಿಸಿದರೂ, ಜನ ಸಾಮಾನ್ಯರ ಮನಸ್ಸಿನಲ್ಲಿ ಮತ್ತು ಆಡು ಭಾಷೆಯಲ್ಲಿ ಇಂದಿಗೂ ಮತ್ತು ಎಂದೆಂದಿಗೂ ಆ ಕೆರೆ ಸೂಳೆಕೆರೆ ಆಗಿಯೇ ಉಳಿದಿದೆ ಮತ್ತು ಉಳಿಯಲಿದೆ.

ನೀರಿನ ಕೊಳೆಯನ್ನು ಒಡಲಲ್ಲಿ ತುಂಬಿಕೊಂಡು ಮೇಲೆ ಮಾತ್ರ ತಿಳಿ ನೀರನ್ನು ಜನರಿಗೆ ಕೊಡುವ ಕೆರೆಗಳಂತೆ, ಜನರಿಂದ ದೂಷಣೆ ಮತ್ತು ಕೀಳರಿಮೆಗಳನ್ನು ನುಂಗಿಕೊಂಡು ಇಂದಿನ ಜನರಿಗೂ ಅನುಕೂಲವಾಗುವಂತಹ ಸಾಧನೆಗಳನ್ನು ಮಾಡಿಟ್ಟು ಹೋದಾ ಆ ಎಲ್ಲಾ ವೇಶ್ಯೆಯರೂ ಪ್ರಾರ್ಥಸ್ಮರಣೀಯರಾಗುತ್ತಾರೆ ಅಲ್ಲವೇ?

ಏನಂತೀರೀ?