ಮಿರ್ಜಾ ಇಸ್ಮಾಯಿಲ್ ನಗರ

ಮೈಸೂರು ಸಂಸ್ಥಾನದ 22ನೇ ದಿವಾನರಾಗಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಮೇ 1926 – ಆಗಸ್ಟ್ 1940 ಮತ್ತು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಆಳ್ವಿಕೆಯಲ್ಲಿ ಆಗಸ್ಟ್ 1940 – 1941ರ ವರೆಗೆ ಆಳ್ವಿಕೆ ನಡೆಸಿ ಮೈಸೂರು ಸಂಸ್ಥಾನ ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಹೆಸರಿನಲ್ಲಿ ನಗರವೊಂದಿದ್ದು, ಅದರ ಕುರಿತಾಗಿ ಹೆಚ್ಚಿನ ವಿವರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.  ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಅನೇಕ ವರ್ಷಗಳಿಂದಲೂ ಬೆಂಗಳೂರಿನಲ್ಲಿ ವಾಸಿಸುವವರಿಗೆ ಮಿರ್ಜಾ ಇಸ್ಮಾಯಿಲ್ ನಗರ ಎಂದರೆ, ಅರೇ ಬೆಂಗಳೂರಿನಲ್ಲಿ ಅಂತಹ ಒಂದು ಪ್ರದೇಶವಿದೆಯೇ? ಎಂದು ಹುಬ್ಬೇರಿಸುತ್ತಾರೆ. ಮೈಸೂರು ಸಂಸ್ಥಾನದ ಇಬ್ಬರು ಅರಸರ ಆಳ್ವಿಕೆಯಲ್ಲಿ ದಿವಾನರಾಗಿದ್ದಲ್ಲದೇ, ನಂತರ ಜೈಪುರ ಮತ್ತು ಹೈದರಾಬಾದ್ ಸಂಸ್ಥಾನಕ್ಕೂ ಕೆಲ ಕಾಲ ದಿವಾನರಾಗಿ ಕೆಲಸ ಮಾಡಿದ ಸರ್ ಮಿರ್ಜಾ ಇಸ್ಮಾಯಿಲ್ ನಗರವನ್ನು ಈ ಹಿಂದೆ ರಿಚ್ಮಂಡ್ ಟೌನ್ ಎಂದು ಕರೆಯಲಾಗುತ್ತಿದ್ದು, ಇಂದಿಗೂ ಸಹಾ ಅದೇ ಹೆಸರಿನಿಂದಲೇ ಜನರಿಗೆ ಚಿರಪರಿಚಿತವಾಗಿದೆ. ಬ್ರಿಟೀಷರು ಟಿಪ್ಪುವಿನನ್ನು ಶ್ರೀರಂಗಪಟ್ಟಣದಲ್ಲಿ ಸೋಲಿದ ನಂತರ ತಮ್ಮ ಆಡಳಿತ ಕಛೇರಿಯನ್ನು ಬೆಂಗಳೂರಿಗೆ ವರ್ಗಾಯಿಸಿ ಬೆಂಗಳೂರಿನ ದಂಡು ಪ್ರದೇಶವನ್ನು (ಕಂಟೋನ್ಮೆಂಟ್) ಕಟ್ಟಿದ ನಂತರ ಬ್ರಿಗೇಡ್ ರಸ್ತೆಯ ಕೂಗಳತೆಯ ದೂರದಲ್ಲೇ 1883 ರಲ್ಲಿ ರಿಚ್ಮಂಡ್ ಟೌನ್ ನನ್ನು ಸ್ಥಾಪಿಸಲಾಯಿತು. ಈ ಪ್ರದೇಶದಲ್ಲಿ ಹೆಚ್ಚಾಗಿ ಆಂಗ್ಲೋ ಇಂಡಿಯನ್ಸ್, ಪಾರ್ಸಿಗಳು ಮತ್ತು ಪರ್ಷಿಯಾದ ಮುಸ್ಲಿಂ ವ್ಯಾಪಾರಿಗಳೇ ವಾಸಿಸತೊಡಗಿದರು.

mirza1ಮಿರ್ಜಾ ಇಸ್ಮಾಯಿಲ್ ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಸುಕೊಳ್ಳುವ ಮುನ್ನಾ ದೂರದ ಇರಾನಿನ ಶಿರಾಜ್‌ ಎಂಬ ಪಟ್ಟಣದ ಶ್ರೀಮಂತ ವ್ಯಾಪಾರೀ ಕುಟಂಬದಲ್ಲಿ 1808 ರಲ್ಲಿ ಜನಿಸಿ ತಮ್ಮ 16ನೇ ವಯಸ್ಸಿನಲ್ಲಿಯೇ ತಮ್ಮ ಸಹೋದರರೊಂದಿಗೆ ಪರ್ಷಿಯನ್ ಕುದುರೆಗಳ ವ್ಯಾಪರಕ್ಕೆಂದು ಭಾರತಕ್ಕೆ ಬಂದು ಬ್ರಿಟೀಷ್ ಅಧಿಕಾರಿಗಳು ಮತ್ತು ಮೈಸೂರಿನ ಅಂದಿನ ಒಡೆಯರ್ ಅವರೊಡನೆ ಉತ್ತಮ ಸ್ನೇಹವನ್ನು ಗಳಿಸಿ ಸ್ಥಳೀಯರನ್ನೇ ಮದುವೆಯಾಗಿ ಇಲ್ಲಿಯವರೇ ಆದ ಅವರ ತಾತ ಅಗಾ ಅಲಿ ಆಸ್ಕರ್ ಅವರನ್ನು ನೆನಪಿಸಿಕೊಳ್ಳಬೇಕು. ಅಲಿ ಅಸ್ಗರ್ ಅವರ ಹೆಚ್ಚಿನ ಮಾಹಿತಿಗಳನ್ನು ಈ ಲಿಂಕ್ ಮೂಲಕ ತಿಳಿಯಬಹುದಾಗಿದೆ. ಆಲಿ ಅಸ್ಗರ್ ಅವರ ಮಗನಾಗಿ ಮೈಸೂರು ಸಂಸ್ಥಾನದ ಅಡಿಯಲ್ಲಿ ಬೆಂಗಳೂರಿನ ಸಹಾಯಕ ಜಿಲ್ಲಾಧಿಕಾರಿ (ADC) ಯಾಗಿ ಸುದೀರ್ಘವಾಗಿ ಸೇವೆ ಸಲ್ಲಿಸಿದ್ದ ಶ್ರೀ ಆಗಾ ಜಾನ್ ಮೊಹಮ್ಮದ್ ಖಾಜಿಮ್ ಶಿರಾಜಿ ಅವರ ಮಗನಾಗಿ ಅಕ್ಟೋಬರ್ 24 1883 ರಲ್ಲಿ ಬೆಂಗಳೂರಿನಲ್ಲಿ ಶ್ರೀ ಮಿರ್ಜಾ ಇಸ್ಮಾಯಿಲ್ ಅವರ ಜನನವಾಗುತ್ತದೆ. ಮಿರ್ಜಾ ಮುಹಮ್ಮದ್ ಇಸ್ಮಾಯಿಲ್ ಅಮಿನ್-ಉಲ್-ಮುಲ್ಕ್ ಎಂಬುದು ಅವರ ಪೂರ್ಣ ಹೆಸರಾಗಿರುತ್ತದೆ.

mirza5ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಸೇಂಟ್ ಪ್ಯಾಟ್ರಿಕ್ ಮತ್ತು ವೆಸ್ಲಿಯನ್ ಶಾಲೆಗಳಲ್ಲಿ ನಡೆಸಿದ ನಂತರ ತಮ್ಮ ತಾತನ ಕಾಲದಿಂದಲೂ ಮೈಸೂರು ಸಂಸ್ಥಾನದೊಂದಿಗೆ ಅತ್ಯಂತ ಉತ್ತಮವಾದ ಸಂಪರ್ಕವನ್ನು ಹೊಂದಿದ್ದ ಕಾರಣ 1901 ರಿಂದ ಮಿರ್ಜಾ ಇಸ್ಮಾಯಿಲ್ ಅವರ ಶಿಕ್ಷಣ, ನಾಲ್ವಡಿ ಕೃಷ್ಣರಾಜ ಒಡೆಯರ್ ಆವರೊಂದಿಗೆ ಬ್ರಿಟಿಷ್ ಅಧಿಕಾರಿ ಸರ್ ಸ್ಟುವರ್ಟ್ ಫ್ರೇಸರ್ ಅವರ ಶಿಷ್ಯಂದಿರಾಗಿ ನಡೆಯುತ್ತದೆ. ಮಹಾಭಾರತದಲ್ಲಿ ಶ್ರೀ ಕೃಷ್ಣ ಕುಚೇಲರಂತಹ ಗೆಳೆಯರಂತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮಿರ್ಜಾ ಇಸ್ಮಾಯಿಲ್ ಅವರ ಗೆಳೆತನ ಇತ್ತು ಎಂದರು ಅತಿಶಯವಾಗದು. ಅವರಿಬ್ಬರೂ ಒಟ್ಟೊಟ್ಟಿಗೆ ಮೈಸೂರಿನ ಖಾಸ್ ಬಂಗಲೆಯಲ್ಲಿ (ಈಗಿನ ಮೃಗಾಲಯ), ಇಂಗ್ಲೀಷ್, ಕಾನೂನು ಮತ್ತು ಆಡಳಿತಾತ್ಮಕ ವಿಷಯಗಳಲ್ಲದೇ, ಕುದುರೆ ಸವಾರಿಯನ್ನೂ ಸಹಾ ಕಲಿತ ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಪಡೆದು 1904 ರಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಸರ್ಕಾರಿ ಸೇವೆಗೆ ಸೇರಿದರಾದರೂ, 1905 ರಲ್ಲಿ ಅವರನ್ನು ಮಹಾರಾಜರು ತಮ್ಮ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳುತ್ತಾರೆ. 1926 ರಲ್ಲಿ ಮಿರ್ಜಾ ಇಸ್ಮಾಯಿಲ್ ಮೈಸೂರಿನ ೨೨ನೇ ದಿವಾನರಾಗಿ ಅಧಿಕಾರ ವಹಿಸಿಕೊಂಡು ಮುಂದಿನ 15 ವರ್ಷಗಳ ಸುದೀರ್ಘವಾಗಿ ಮೈಸೂರು ಸಂಸ್ಥಾನದ ವಿವಿಧ ಯೋಜನೆಗಳಿಗೆ ಕಾರಣೀಭೂತರಾಗುತ್ತಾರೆ.

ಮೈಸೂರು ಸಂಸ್ಥಾನದ 19ನೇ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರು ಬೆಂಗಳೂರನ್ನು ಕೈಗಾರಿಕಾ ನಗರವನ್ನಾಗಿ ಮಾಡಿದರೆ, ಸರ್ ಮಿರ್ಜಾ ಇಸ್ಮಾಯಿಲ್ ಅವರು ಬೆಂಗಳೂರು ನಗರವನ್ನು ಅತ್ಯಂತ ಸುಂದರವನ್ನಾಗಿಸುವುದರಲ್ಲಿ ಹೆಚ್ಚಿನ ಪಾತ್ರವಹಿಸಿದ್ದರು ಎಂದರೂ ತಪ್ಪಾಗದು. ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದ ವಿನ್ಯಾಸದ ಜೊತೆಗೆ ಭಾರತದಲ್ಲಿ ಮೊದಲ ಗ್ರಾಮೀಣ ವಿದ್ಯುದ್ದೀಕರಣ ಕಾರ್ಯಕ್ರಮವದಲ್ಲಿಯೂ ಮಿರ್ಜಾ ಇಸ್ಮಾಯಿಲ್ ಅವರ ಪಾತ್ರ ಬಹಳವಾಗಿತ್ತು. ಉತ್ತಮ ಆಡಳಿತಗಾರರಾಗಿ, ರಾಜ್ಯಾದ್ಯಂತ ವ್ಯಾಪಕ ಪ್ರವಾಸಗಳನ್ನುಮಾಡುತ್ತಾ ಜನರ ಕುಂದುಕೊರತೆಗಳನ್ನು ವೈಯಕ್ತಿಕವಾಗಿ ಗಮನಹರಿಸುವ ಮೂಲಕ ಅಧಿಕಾರಿಗಳಿಗೆ ಸ್ಫೂರ್ತಿದಾಯಕ ಮಾದರಿಯನ್ನು ರೂಪಿಸಿದ ಹೆಗ್ಗಳಿಕೆಯೂ ಮಿರ್ಜಾ ಇಸ್ಮಾಯಿಲ್ಲರಿಗೆ ಸಲ್ಲುತ್ತದೆ.

ಇವರ ಆಡಳಿತಾವಧಿಯಲ್ಲಿಯೇ ಮೈಸೂರು ಸಾಮ್ರಾಜ್ಯವು ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಶಿವಮೊಗ್ಗದ ಸಕ್ಕರೆ ಕಾರ್ಖಾನೆ ಮತ್ತು ಬದನವಾಳುವಿನ ಖಾದಿ ಉತ್ಪಾದನಾ ಕೇಂದ್ರ, ಬೆಂಗಳೂರಿನಲ್ಲಿ ಪಿಂಗಾಣಿ ಕಾರ್ಖಾನೆ ಮತ್ತು ಗಾಜಿನ ಕಾರ್ಖಾನೆ, ಕಾಗದ, ಸಿಮೆಂಟ್, ಉಕ್ಕು, ರಸಗೊಬ್ಬರಗಳು, ಸಕ್ಕರೆ ಮತ್ತು ವಿದ್ಯುತ್ ಬಲ್ಬ್‌ಗಳ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಕೈಗಾರಿಕೆಗಳ ಕ್ಷೇತ್ರದಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿತು. ವೈಶ್ಯ ಬ್ಯಾಂಕ್, ಸಿಮೆಂಟ್ ಕಾರ್ಖಾನೆ, ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ, ಮತ್ತು ಸಕ್ಕರೆ ಕಾರ್ಖಾನೆಗಳೂ ಸಹಾ ಇವರ ಪ್ರಧಾನತ್ವದಲ್ಲಿ ಸ್ಥಾಪಿಸಲ್ಪಟ್ಟವು.

WhatsApp Image 2023-09-11 at 01.27.39ಅತ್ಯಂತ ಸೌಂದರ್ಯ ಪ್ರಜ್ಞೆವರಾಗಿದ್ದ ಮಿರ್ಜಾ ಅವರು ಬೆಂಗಳೂರು ಮತ್ತು ಮೈಸೂರು ಎರಡೂ ನಗರವನ್ನು ಅತ್ಯಂತ ಸುಂದರವನ್ನಾಗಿ ಅಲಂಕರಿಸಲು ಕಾರಣೀಕರ್ತರಾಗಿದ್ದರು. 1902 ರಲ್ಲಿ ರಾಜ್ಯ ಆಡಳಿತವನ್ನು ವಹಿಸಿಕೊಂಡ ಮಹಾರಾಜ ಕೃಷ್ಣ ರಾಜ ಒಡೆಯರ್ ಅವರು 1927 ರಲ್ಲಿ 25 ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಮಹಾರಾಜರ ಆಳ್ವಿಕೆಯ ಬೆಳ್ಳಿಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಬೆಂಗಳೂರು ಮತ್ತು ರಾಜ್ಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳೊಂದಿಗೆ ಆಚರಿಸಿದರು. ಇದರ ಸವಿನೆನಪಿಗಾಗಿಯೇ ಬೆಂಗಳೂರಿನ ಕೃರಾ ಮಾರುಕಟ್ಟೆಯ ಸಮೀಪದಲ್ಲಿ ಸ್ಥಾಪಿಸಿದ ಸಿಲ್ವರ್ ಜ್ಯೂಬಿಲಿ ಪಾರ್ಕ್ ಮತ್ತು ಆಯ್ದ ನೂರು ಹಳ್ಳಿಗಳಲ್ಲಿ ಎಂಟು ಸ್ತಂಭಗಳಿಂದ ಕೂಡಿದ ವೃತ್ತ ಮತ್ತು ಭಜನೆ ಮನೆಗಳ ನಿರ್ಮಾಣದ ವಿನ್ಯಾಸವನ್ನು ಶ್ರೀ ಕೃಂಬಿಗಲ್ ಅವರಿಮ್ದ ಮಾಡಿಸಿದ್ದನ್ನು ಇಂದಿಗೂ ಸಹಾ ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಕಾಣಬಹುದಾಗಿದೆ.

ವಯಕ್ತಿಕವಾಗಿ ಮುಸಲ್ಮಾನರಾಗಿದ್ದರೂ, ಹಿಂದೂ ಮತ್ತು ಕ್ರಿಶ್ಚಿಯನ್ನರೊಂದಿಗೆ ಉತ್ತಮ ಬಾಂಧವ್ಯತೆಯನ್ನು ಹೊಂದುವ ಮೂಲಕ ಯಾವುದೇ ರೀತಿಯ ಧಾರ್ಮಿಕ ಪಕ್ಷಪಾತಗಳನ್ನು ಹೊಂದಿರಲಿಲ್ಲ. ಕನ್ನಡ ಮತು ಸಂಸ್ಕೃತ ಭಾಷೆಯ ಬಗ್ಗೆ ಅಪಾರವಾದ ಒಲವನ್ನು ಹೊಂದಿದ್ದ ಕಾರಣ, ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರೂ ಸಹಾ, 1928 ರಲ್ಲಿ ಬೆಂಗಳೂರಿನ ಸುಲ್ತಾನಪೇಟೆಯಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದ್ದ ಗಣಪತಿ ಉತ್ಸವದ ಮೇಲೆ ಏಕಾಏಕಿ ಎದುರಿಗಿನ ಕಟ್ಟಡಗಳಿಂದ ಕಲ್ಲು, ಪಾದರಕ್ಷೆಗಳ ಸುರಿಮಳೆ ಯಾಗಿದ್ದಲ್ಲದೇ, ಇದರ ಮಧ್ಯೆ ಬಂದೂಕಿನ ಸದ್ದು ನೆರೆದಿದ್ದ ಭಕ್ತಾದಿಗಳನ್ನು ಬೆಚ್ಚಿ ಬೀಳಿಸಿದ್ದಲ್ಲದೇ, ಕೆಲವೇ ನಿಮಿಷಗಳಲ್ಲಿ, ಕೋಲುಗಳು, ಕತ್ತಿಗಳು ಮತ್ತು ಇತರೇ ಮಾರಕ ಆಯುಧಗಳೊಂದಿಗೆ ಶಸ್ತ್ರಸಜ್ಜಿತವಾದ ಮುಸ್ಲಿಮರ ಧಾಳಿಕೋರರು ಹಿಂದೂಗಳ ಆರಾಧಕರ ಮೇಲೆ ಧಾಳಿ ನಡಸಿದ ಪರಿಣಾಮ ನೂರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಈ ಸಮಯದಲ್ಲಿ ಮಿರ್ಜಾ ಇಸ್ಮಾಯಿಲ್ ಅವರು ಧಾಳಿ ಕೋರರ ವಿರುದ್ಧ ಸರಿಯಾದ ಕಠಿಣ ಕ್ರಮ ಕೈಗೊಳ್ಳದೇ ಹೋದದ್ದು ಮತ್ತು 1940 ರಲ್ಲಿ, ಭಾರತದಲ್ಲಿ ಧಾರ್ಮಿಕ ಕಲಹಗಳು ಉತ್ತುಂಗದಲ್ಲಿದ್ದಾಗಲೇ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಬಳಿ ಜಾಮಿಯಾ ಮಸೀದಿಗೆ ಅಡಿಪಾಯವನ್ನು ಹಾಕಿದ್ದು ಅವರ ಆಡಳಿತದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದು ಹೋದದ್ದು ಈಗ ಇತಿಹಾಸ.

mirza_road1940 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಿಧನಾನಂತರ ಅಧಿಕಾರವನ್ನು ವಹಿಸಿಕೊಂಡ ಶ್ರೀ ಜಯಚಾಮರಾಜ ಒಡೆಯರ್ ಅವರ ಆಳ್ವಿಕೆಯಲ್ಲಿಯೂ ದಿವಾನರಾಗಿಯೇ ಮುಂದುವರೆದರೂ, ಆಡಳಿತಾತ್ಮಕವಾದ ಭಿನ್ನಾಭಿಪ್ರಾಯಗಳಿಂದ 1941 ರಲ್ಲಿ ರಾಜೀನಾಮೆ ನೀಡಿದ ನಂತರ ಜೈಪುರ ಸಂಸ್ಥಾನದ ದಿವಾನರಾಗಿ ಅಧಿಕಾರವನ್ನು ವಹಿಸಿಕೊಂಡ ನಂತರ ಜೈಪುರದ ಕೈಗಾರಿಕಾ ಯುಗದ ಆರಂಭಕ್ಕೆ ಕಾರಣೀಭೂತರಾದರು. ಜೈಪುರಕ್ಕೆ ಬಂದ ಕೂಡಲೇ ಸಾಂವಿಧಾನಿಕ ಸುಧಾರಣೆಗಳ ಸಮಿತಿಯನ್ನು ರಚಿಸಿದರು. ಈ ಪ್ರಯತ್ನಗಳು ಮಹಾರಾಜ ಸವಾಯಿ ಮಾನ್ ಸಿಂಗ್ II ರ ಖ್ಯಾತಿಯನ್ನುಗಣನೀಯವಾಗಿ ಹೆಚ್ಚಿಸಿದ್ದರ ನೆನಪಿಗಾಗಿ ಜೈಪುರದ ಸಂಗನೇರಿ ಗೇಟ್‌ನಿಂದ ಸರ್ಕಾರಿ ಹಾಸ್ಟೆಲ್‌ವರೆಗೆ ರಸ್ತೆ ಸಾಗುವ ಮತ್ತು ರಾಜ್ಯದ ಎಲ್ಲಾ ರಸ್ತೆಗಳನ್ನೂ ಸಂಪರ್ಕಿಸುವ ಜೈಪುರದ ಹೃದಯ ಭಾಗದ ಮುಖ್ಯ ಮಾರ್ಗವನ್ನು ಮಿರ್ಜಾ ಇಸ್ಮಾಯಿಲ್ ರಸ್ತೆ ಎಂದು ಹೆಸರಿಸಲಾಗಿದ್ದು ಇಂದಿಗೂ ಅದು M.I. ರಸ್ತೆ ಎಂದೇ ಪ್ರಸಿದ್ಧಿ ಪಡೆದಿದೆ. 1945ರಲ್ಲಿ ಭಾರತವನ್ನು ವಿಭಜಿಸಿ ಮುಸ್ಲಿಂ ಧರ್ಮಾಧಾರಿತ ಪಾಕೀಸ್ಥಾನ್ ದೇಶವನ್ನು ಸ್ಥಾಪಿಸಲು ಮಿರ್ಜಾ ಇಸ್ಮಾಯಿಲ್ ಅವರ ಸಹಾಯವನ್ನು ಮಹಮ್ಮದ್ ಅಲಿ ಜಿನ್ನಾ ಕೋರಿದಾಗ, ಇಸ್ಮಾಯಿಲ್ ಅವರು ಭಾರತದ ವಿಭಜನೆಯನ್ನು ಸಂಪೂರ್ಣವಾಗಿ ವಿರೋಧಿಸಿದ ಕಾರಣ ಜಿನ್ನಾರೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿದ್ದರು.

ಮಿರ್ಜಾ ಇಸ್ಮಾಯಿಲ್ 1946 ರಲ್ಲಿ ಹೈದರಾಬಾದಿನ ನಿಜಾಮ ಒಸ್ಮಾನ್ ಅಲಿ ಖಾನ್ ನ ಸಂಸ್ಥಾನದಲ್ಲಿ ದಿವಾನರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಜೀವನ ಅತ್ಯಂತ ಕಷ್ಟಕರವಾಗ ತೊಡಗಿತು. ಜಿನ್ನಾರೊಂದಿಗೆ ಭಾರತದ ವಿಭಜನೆಯನ್ನು ವಿರೋಧಿಸಿದ್ದರೆ, ಆಗ ಅದೇ ಹೈದರಾಬಾದಿನ ನಿಜಾಮ ತನ್ನ ಸಂಸ್ಥಾನವನ್ನು ಪಾಕೀಸ್ಥಾನದೊಂದಿಗೆ ಸೇರಿಸಲು ಮುಂದಾದಾಗ, ಇಸ್ಮಾಯಿಲ್ ಹೈದರಾಬಾದ್ ಅನ್ನು ಭಾರತಕ್ಕೆ ಸೇರಿಸುವ ವಿಷಯದ ಬಗ್ಗೆ ತಮ್ಮ ಅತ್ಯುತ್ತಮ ಕೌಶಲ್ಯಗಳನ್ನು ಮುಂದಿಟ್ಟದ್ದಲ್ಲದೇ, ಭಾರತದ ಒಕ್ಕೂಟದೊಂದಿಗೆ ಸ್ಥಗಿತ ಒಪ್ಪಂದದ ಮಾತುಕತೆಯನ್ನು ಆರಂಭಿಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಒಂದು ವರ್ಷದ ಕಾಲಾವಧಿಯನ್ನು ಕೋರಿ ನಿಜಾಮನ ವರ್ತನೆಯನ್ನು ಮುಖಾಮುಖಿಯಿಂದ ಸಮನ್ವಯಕ್ಕೆ ಬದಲಾಯಿಸಲು ಪ್ರಯತ್ನಿಸುತ್ತಿದ್ದಾಗಲೇ, ಮಹಾತ್ಮಾ ಗಾಂಧಿಯವರ ಹತ್ಯೆಯಾದಾಗ, ನಿಜಾಮನ ವರ್ತನೆ ಬದಲಾಗಿ ಭಾರತ ವಿರುದ್ಧ ಉಗ್ರಗಾಮಿ ನಿಲುವನ್ನು ತೆಗೆದುಕೊಂಡ ಪರಿಣಾಮ ಇಸ್ಮಾಯಿಲ್ ತಮ್ಮ ದಿವಾನಗಿರಿಗೆ ರಾಜೀನಾಮೆ ನೀಡಿ ಬೆಂಗಳೂರಿಗೆ ಹಿಂದಿರುಗಿದ್ದರು. ನಂತರದ ದಿನಗಳಲ್ಲಿ ಪಟೇಲರ ದಿಟ್ಟ ನಾಯಕತ್ವ ಮತ್ತು ಕೆ.ಎಂ.ಮುನ್ಷಿಯವರ ಸಾರಥ್ಯದಲ್ಲಿ ಆಪರೇಷನ್ ಪೋಲೋ ಎಂಬ ಗೆರಿಲ್ಲಾ ಮಾದರಿಯ ಕ್ಷಿಪ್ರ ಕ್ರಾಂತಿ ನಡೆದ ಪರಿಣಾಮ ಹೈದರಾಬಾದ್ 1948 ರಲ್ಲಿ ಭಾರತೀಯ ಒಕ್ಕೂಟದ ಭಾಗವಾಯಿತು.

mirza4ಹೈದರಾಬಾದಿನಿಂದ ಬೆಂಗಳೂರಿನ ರಿಚ್ಮಂಡ್ ಟೌನಿನ ಅರಬ್ ಲೇನ್ ನ ಅಗಾ ಅಬ್ದುಲ್ಲಾ ರಸ್ತೆಯಲ್ಲಿದ್ದ ತಮ್ಮ ಪೂರ್ವಜರು ಕಟ್ಟಿಸಿದ್ದ ನೆಚ್ಚಿನ ಮನೆಯಲ್ಲೇ ಜೀವನವನ್ನು ಕಳೆಯಲು ಆರಂಭಿಸಿದ ಮಿರ್ಜಾ ಇಸ್ಮಾಯಿಲ್ ತಮ್ಮ ಇಳೀ ವಯಸ್ಸಿನಲ್ಲಿಯೂ ಅತ್ಯಂತ ಕ್ರಿಯಾಶೀಲರಾಗಿದ್ದರು. ಅಧಿಕಾರದಲ್ಲಿ ಇಲ್ಲದೇ ಹೋದರೂ ಅವರಿಗೆ ಮೈಸೂರು ಸಂಸ್ಥಾನದ ಮೇಲಿನ ಉತ್ಕಟವಾದ ಪ್ರೀತಿ ಎಷ್ಟಿತ್ತು ಎಂದರೆ, ಅದೊಮ್ಮೆ ಆಕಾಶವಾಣಿಗೆ ಮಾಡಿದ ಭಾಷಣವೊಂದರಲ್ಲಿ, ಮೈಸೂರಿಗರು ಮೈಸೂರು ಸೋಪಿನಿಂದ ಮೈ ತೊಳೆದುಕೊಂಡು, ಮೈಸೂರು ಟವೆಲ್‌ನಿಂದ ಮೈ ಒಣಗಿಸಿಕೊಂಡು, ಮೈಸೂರು ರೇಷ್ಮೆಯನ್ನು ಧರಿಸಿ, ಮೈಸೂರು ಅಗರ ಭತ್ತಿಯಿಂದ ದೇವರನ್ನು ಪೂಜಿಸಿ, ಮೈಸೂರು ಕುದುರೆ ಸವಾರಿ ಮಾಡಿ, ಹೇರಳವಾಗಿ ಮೈಸೂರು ಆಹಾರವನ್ನು ಸೇವಿಸಿ, ಮೈಸೂರು ಕಾಫಿಗೆ ಮೈಸೂರು ಸಕ್ಕರೆಯನ್ನೇ ಬಳಸುವ ಮೂಲಕ ಮತ್ತಷ್ಟೂ ಸಿಹಿಗೊಳಿಸಿ, ತಮ್ಮ ಮನೆಯನ್ನು ಮೈಸೂರು ಪೀಠೋಪಕರಣಗಳಿಂದಲೇ ಸಜ್ಜುಗೊಳಿಸಿ, ಮೈಸೂರು ಲ್ಯಾಂಪ್ಸ್ ದೀಪಗಳಿಂದಲೇ ಬೆಳಗಿಸಿ ಅದರ ಅನುಭವವನ್ನು ಮೈಸೂರು ಪೇಪರ್ ಮಿಲ್ಸಿನ ಕಾಗದದ ಮೇಲೆಯೇ ಮೇಲೆ ಬರೆಯಿರಿ ಎಂದಿದ್ದರಂತೆ.

ಇಷ್ಟೆಲ್ಲಾ ಲವವಿಕೆಯಿಂದ ಇದ್ದಾಗಲೇ, ಜನವರಿ 5 ರಲ್ಲಿ 1959 ತಮ್ಮ ಎಪ್ಪತ್ತೈದನೇ ವಯಸ್ಸಿನಲ್ಲಿ ವಯೋಸಜವಾಗಿ ಬೆಂಗಳೂರಿನಲ್ಲಿ ನಿಧನರಾಗುವ ಮೂಲಕ ಸರ್ ಮಿರ್ಜಾ ಇಸ್ಮಾಯಿಲ್ ಅವರು ಇಹ ಲೋಕವನ್ನು ತ್ಯಜಿಸಿದರಾದರೂ, ಅವರ ದೂರದೃಷ್ಟಿ ತನದಿಂದ ಮಾಡಿದ ನೂರಾರು ಕಾರ್ಯಗಳ ಮೂಲಕ ಇಂದಿಗೂ ಸಮಸ್ಥ ಕನ್ನಡಿಗರ ಅದರಲ್ಲೂ ವಿಶೇಷವಾಗಿ ಬೆಂಗಳೂರಿಗರ ಹೃದಯಲ್ಲಿ ಆಚಂದ್ರಾರ್ಕವಾಗಿ ಜೀವಂತವಾಗಿದ್ದಾರೆ ಎಂದರೂ ತಪ್ಪಾಗದು.

mirza3ಮಿರ್ಜಾ ಇಸ್ಮಾಯಿಲ್ ಅವರು ವಾಸಿಸುತ್ತಿದ್ದ ರಿಜ್ಮಂಡ್ ಟೌನ್ ಪ್ರದೇಶವನ್ನೇ ಅವರ ನೆನಪಿನಾರ್ಥ ಸರ್ ಮಿರ್ಜಾ ಇಸ್ಮಾಯಿಲ್ ನಗರ ಎಂದು ಹೆಸರಿಸಲಾಗಿದೆ. ಮಿರ್ಜಾ ಇಸ್ಮಾಯಿಲ್ ಅವರ ಮಗನಾದ ಖ್ಯಾತ ಪಶುವೈದ್ಯರಾದ ಡಾ. ಹಸ್ನೇನ್ ಮಿರ್ಜಾ ಅವರೂ ಸಹಾ ತಮ್ಮ ಮುತ್ತಾನನಂತೆಯೇ ಕುದುರೆಯ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದು ಅವರೂ ಸಹಾ ಉತ್ತಮ ಕುದುರೆ ಸವಾರರಾಗಿದ್ದಲ್ಲದೇ, ಬೆಂಗಳೂರಿನ ಜಕ್ಕೂರಿನ ಬಳಿ ತಮ್ಮದೇ ಆದ ಕುದುರೆ ಲಾಯವನ್ನೂ ಹೊಂದಿದ್ದಾರೆ. ಇನ್ನು ಅವರ ಮಕ್ಕಳಾದ ಫೌದ್ ಮಿರ್ಜಾ ಮತ್ತು ಅಲಿ ಆಸ್ಕರ್‌ ಮಿರ್ಜಾ ಅವರಿಗೂ ಬಾಲ್ಯದಿಂದಲೂ ಕುದುರೆ ಸವಾರಿಯನ್ನು ಕಲಿಸಿದ ಕಾರಣ,ಹಿರಿಯ ಮಗ ಫೌದ್ ಮಿರ್ಜಾ ಇಂದು ಭಾರತದ ಪರ ಓಲಂಪಿಕ್ಸಿನಲ್ಲಿ ಕುದುರೆ ಸವಾರಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಮೂಲಕ ಆಗಾ ಅಲಿ ಅಸ್ಕರ್ ಮತ್ತು ಮಿರ್ಜಾ ಇಸ್ಮಾಯಿಲ್ ಅವರ ಆರನೇ ತಲೆಮಾರನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಭಾರತ ಮತ್ತು ಪರ್ಷಿಯಾ ದೇಶದ ನಡುವೆ ಸುಮಧುರ ಬಾಂಧ್ಯವ್ಯವನ್ನು ವೃಧ್ಧಿಗೊಳಿಸಿದೇ ಎಂದರೂ ತಪ್ಪಾಗದು ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

2 thoughts on “ಮಿರ್ಜಾ ಇಸ್ಮಾಯಿಲ್ ನಗರ

  1. Sir, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ blog ಇದ್ದರೆ link ಕಳುಹಿಸಿ.

    Like

Leave a comment