ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯರೇ ಮೊದಲ ಗುರುಗಳು

ನಾವೆಲ್ಲರೂ ಚಿಕ್ಕವಯಸ್ಸಿನಿಂದಲೂ ಕುಲವಧು ಚಿತ್ರದಲ್ಲಿ, ಪ್ರಬುದ್ಧ ನಟಿ ಲೀಲಾವತಿಯವರ ಅಭಿನಯಿಸಿರುವ ದ. ರಾ. ಬೇಂದ್ರೆಯವರ ಈ ಕವನವನ್ನು ಕೇಳಿಯೇ ದೊಡ್ಡವರಾಗಿದ್ದೇವೆ.
ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ |
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ||

ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ, ಒಂದೇ ಹರೆಯ ನಮಗದಷ್ಟೇ ಏತಕೋ. ||

ಈ ಕವನದಲ್ಲಿ ಕವಿಗಳು ಪ್ರತೀ ಫಾಲ್ಗುಣ ಮಾಸದಲ್ಲಿ ಪ್ರಕೃತಿಯಲ್ಲಿ ಗಿಡಮರಗಳ ಎಲೆಗಳೆಲ್ಲಾ ಉದುರಿ ಹೋಗಿ, ಮತ್ತೆ ಚೈತ್ರ ಮಾಸದಲ್ಲಿ ಚಿಗುರುವ ಮೂಲಕ ನಿರಂತರವಾಗಿ ಹೊಸಾ ಜನ್ಮವನ್ನು ಪಡೆಯುತ್ತಲೇ ಇರುತ್ತದೆ. ಆದರೆ ಮನುಷ್ಯರಿಗೆ ಮಾತ್ರ ಒಂದೇ ಜನ್ಮ, ಒಂದೇ ಬಾಲ್ಯ, ಒಂದೇ ಹರೆಯ ಎಂದು ಬೇಸರ ವ್ಯಕ್ತ ಪಡಿಸುತ್ತಾರೆ. ಹಾಗಾಗಿ ನಮ್ಮ ಜೀವನದಲ್ಲಿ ಗತಿಸಿ ಹೋದ ಪ್ರತೀ ಕ್ಷಣಗಳೂ ಅಮೂಲ್ಯವೇ ಆಗಿರುವ ಕಾರಣ ಪ್ರತಿಯೊಂದು ಸುಂದರ ಕ್ಷಣಗಳನ್ನೂ ಆಹ್ವಾದಿಸಬೇಕು ಎನ್ನುವುದೇ ಕವಿಗಳ ಆಶಯವಾಗಿದೆ.

kids6ಅದರಲ್ಲೂ ನಮ್ಮ ಬಾಲ್ಯದ ದಿನಗಳಂತೂ ನಮ್ಮ ಜೀವನದಲ್ಲಿ ಅತ್ಯಮೂಲ್ಯವೇ ಹೌದು. ಒಮ್ಮೆ ಬಾಲ್ಯ ಕಳೆದು ಪ್ರೌಢಾವಸ್ಥೆಗೆ ಬರುತ್ತಿದ್ದಂತೆಯೇ ಆ ಬಾಲ್ಯದ ಮುಗ್ಧ ಮನಸ್ಸು, ಭಾವನೆಗಳು ಎಲ್ಲವೂ ಬದಲಾಗಿ ಎಲ್ಲವೂ ವ್ಯಾವಹಾರಿಕವಾಗಿ ಬಿಡುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಹಾಗಾಗಿ ಬಾಲ್ಯದಲ್ಲಿ ಆದಷ್ಟೂ ಮನೆಯಲ್ಲಿಯೇ ಇದ್ದು ಅಪ್ಪಾ, ಅಮ್ಮಾ, ಅಣ್ಣಾ, ತಂಗಿ, ಅಜ್ಜ, ಅಜ್ಜಿ ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ ಮಾವ, ನೆರೆ ಹೊರೆಯವರೊಂದಿಗೆ ಆಟವಾಡುತ್ತಾ, ನೋಡಿದ್ದನ್ನು ಕೇಳಿದ್ದನ್ನು ಅನುಕರಿಸುತ್ತಾ, ಮುದ್ದು ಮುದ್ದಾಗಿ ಮಾತನಾಡುತ್ತಾ, ಲೋಕ ಜ್ಞಾನವನ್ನು ಗ್ರಹಿಸುತ್ತಾ ಹೋಗುವುದು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ.

kids5ಚಿಕ್ಕಮಕ್ಕಳ ಗ್ರಹಿಕೆ ಬಹಳ ಚೆನ್ನಾಗಿ ಇರುತ್ತದೆ ಮತ್ತು ಚಿಕ್ಕವಯಸ್ಸಿನಲ್ಲಿ ಕಲಿತದ್ದು ಎಷ್ಟು ವರ್ಷಗಳ ಕಾಲವೂ ಮರೆಯುವುದಿಲ್ಲ. ಅದೇ ರೀತಿ ಸಣ್ಣ ವಯಸ್ಸಿನಲ್ಲಿ ಮಕ್ಕಳು ಹೆಚ್ಚು ಹೆಚ್ಚು ವಿಷಯಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಕಲಿಯುತ್ತಾರೆ ಎನ್ನುವುದಕ್ಕಾಗಿಯೇ ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಸಣ್ಣ ಸಣ್ಣ ಮಕ್ಕಳಿಗೆ ಶ್ಲೋಕಗಳು, ದೇವರ ನಾಮಗಳು, ಭಗವದ್ಗೀತೆ, ವಿವಿಧ ದೇವರುಗಳ ಸುಪ್ರಭಾತಗಳ ಜೊತೆಗೆ ರಾಮಾಯಣ ಮಹಾಭಾರತ, ಶ್ರೀ ಕೃಷ್ಣ, ಬಾಲ ಹನುಮಾನ್, ಗಣೇಶನ ಕತೆಗಳನ್ನು ಮಕ್ಕಳಿಗೆ ತಿಳಿಸಿ ಕೊಡುವುದು ರೂಢಿಯಲ್ಲಿದೆ. . ಆಷ್ಟು ಸಣ್ಣ ವಯಸ್ಸಿನಲ್ಲಿ ತೊದಲು ನುಡಿಗಳಲ್ಲಿ ಅ ಪುಟ್ಟ ಪುಟ್ಟ ಮಕ್ಕಳು ಹಾಡು, ಸಂಗೀತ, ಶ್ಲೋಕಗಳನ್ನು ಹೇಳುವುದನ್ನು ಅದಕ್ಕೆ ಸರಿಯಾಗಿ ನೃತ್ಯ ಇಲ್ಲವೇ ಅಭಿನಯಿಸುವುದನ್ನು ವರ್ಣಿಸುವುದಕ್ಕಿಂತಲೂ ನೋಡುವುದಕ್ಕೇ ಮಹದಾನಂದ. ಹಾಗಾಗಿಯೇ ಹಿಂದಿನ ಕಾಲದಲ್ಲಿ ಮಕ್ಕಳು ಏಳೆಂಟು ವರ್ಷಗಳ ಕಾಲ ಅಮ್ಮನ ಎದೆ ಹಾಲನ್ನೇ ಕುಡಿಯುತ್ತಾ ಅಮ್ಮನ ಸೆರಗನ್ನು ಹಿಡಿದುಕೊಂಡು ಅಮ್ಮನ ಸುತ್ತಮುತ್ತಲೇ ಗಿರಕಿ ಹೊಡೆಯುತ್ತಲೇ ಬಹಳಷ್ಟು ವಿಷಯಗಳನ್ನು ಕಲಿಯುತ್ತಿದ್ದರಿಂದಲೇ, ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯರೇ ಮೊದಲ ಗುರುಗಳು ಎಂಬ ಗಾದೆ ಮಾತು ರೂಢಿಗೆ ಬಂದಿತು.

ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಇಂದಿನ ದುಬಾರಿ ಜೀವನವನ್ನು ಸರಿದೂಗಿಸಲು ತಂದೆ ಮತ್ತು ತಾಯಿ ಇಬ್ಬರೂ ಕೆಲಸಕ್ಕೆ ಹೋಗುವ ಕಾರಣ, ಮಕ್ಕಳಿಗೆ 2 ವರ್ಷ ತುಂಬುತ್ತಿದ್ದಂತೆಯೇ ಹತ್ತಿರದ ಪ್ಲೇಹೋಮ್ ಇಲ್ಲವೇ ಶಿಶುವಿಹಾರ (ನರ್ಸರಿ)ಕ್ಕೆ ಸೇರಿಸಿ ಮಕ್ಕಳ ಕಲಿಕೆಯ ಜವಾಬ್ಧಾರಿಯೆಲ್ಲಾ ಆ ಶಾಲೆಯ ಶಿಕ್ಷಕ/ಶಿಕ್ಷಕಿಯರದ್ದೇ ಆಗಿದೆ ಎಂದು ಭಾವಿಸಿರುವವರೇ ಹೆಚ್ಚಾಗಿದ್ದಾರೆ. ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ತಾಯಿಯ ಆಶ್ರಯದಿಂದ ವಂಚಿತವಾದ ಆ ಮಕ್ಕಳು ಸರಿಯಾದ ರೀತಿಯಲ್ಲಿ ಬಾಲ್ಯವನ್ನು ಸವಿಯಲಾಗದೇ 2-3 ವಯಸ್ಸಿನಲ್ಲೇ ಕನ್ನಡ, ಇಂಗ್ಲೀಷ್ ಹಿಂದಿ ಹೀಗೆ ಹತ್ತು ಹಲವಾರು ಭಾಷೆಗಳನ್ನು ಓದಲು ಬರೆಯಲು ಕಲಿಯುವುದರ ಜೊತೆಗೆ ಗಣಿತ, ವಿಜ್ಞಾನ ಮತ್ತು ಸಮಾಜ ಶಾಸ್ತ್ರಗಳ ಪರಿಚಯವನ್ನು ಮಾಡಿಕೊಳ್ಳುವ ಮೂಲಕ ಅನಗತ್ಯವಾಗಿ ತಮ್ಮ ಬಾಲ್ಯದ ಸವಿಯನ್ನೇ ಅನುಭವಿಸದೇ ಹೋಗುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇನ್ನು ಮೊಬೈಲ್ ಮತ್ತು ಕಂಪ್ಯೂಟರ್ ಗೇಮ್ ಗಳಿಂದಾಗಿ ಮಕ್ಕಳು ಸ್ವಚ್ಚಂದವಾಗಿ ಆಟದ ಮೈದಾನಗಳಲ್ಲಿ ಆಡುವುದೇ ಇಲ್ಲದ ಕಾರಣ ಸಣ್ಣ ಸಣ್ಣ ವಯಸ್ಸಿಗೇ ನಾನಾ ಮಕ್ಕಳು ಸ್ಥೂಲಕಾಯರಾಗಿ ಕಣ್ಣಿನ ವಿವಿಧ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

kid2ಅಷ್ಟು ಸಣ್ಣ ವಯಸ್ಸಿನಲ್ಲೇ ತಮ್ಮ ವಯಸ್ಸಿಗೂ ಮೀರಿದ ಶಾಲಾ ಪಠ್ಯಪುಸ್ತಕಗಳ ಹೊರೆಯನ್ನು ಹೊತ್ತು ಕೊಂಡು ಹೋಗುವ ಮಕ್ಕಳ ಯಾತನೆಯನ್ನೇ ಮನಗಂಡ ಸುಪ್ರಿಂ ಕೋರ್ಟ್ ಇತ್ತೀಚೆಗೆ ಮಕ್ಕಳ ಶಾಲಾ ಪ್ರವೇಶ ಕುರಿತಂತೆ ಅತ್ಯಂತ ಮಹತ್ವದ ಅಭಿಪ್ರಾಯವೊಂದನ್ನು ದಾಖಲಿಸಿದೆ. ಸದ್ಯಕ್ಕೆ ಕೇಂದ್ರೀಯ ವಿದ್ಯಾಲಯಗಳಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ 6 ವರ್ಷ ವಯಸ್ಸಿನ ಮಾನದಂಡ ರೂಪಿಸಿರುವುದನ್ನೇ ಪ್ರಶ್ನಿಸಿ ಪೋಷಕರೊಬ್ಬರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ, ಪಾಲಕರು ತಮ್ಮ ಮಕ್ಕಳಿಗೆ 2 ವರ್ಷ ತುಂಬಿದ ಕೂಡಲೇ ಶಾಲೆಗೆ ಕಳಿಸಬೇಕೆಂದು ಬಯಸುವುದು ನಿಜಕ್ಕೂ ಅವೈಜ್ಞಾನಿಕ. ಈ ರೀತಿ ಮಾಡುವುದರಿಂದ ಅದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನ್ಯಾಯಮೂರ್ತಿಗಳಾದ ಶ್ರೀ ಸಂಜಯ್ ಕಿಶನ್ ಕೌಲ್ ಮತ್ತು ಶ್ರೀ ಎಂ.ಎಂ. ಸುಂದರೇಶ್ ಅವರಿದ್ದ ಪೀಠ ಪ್ರತಿಕ್ರಿಯಿಸಿರುವುದು ಅತ್ಯಂತ ಸಮಂಜಸವಾಗಿದೆ.

ಈ ಹಿಂದಿನಿಂದಲೂ ರೂಢಿಯ ಪ್ರಕಾರ 1ನೇ ತರಗತಿ ಪ್ರವೇಶಕ್ಕೆ ವಯೋಮಿತಿ 5 ವರ್ಷವಾಗಿದ್ದರೂ, ಮಕ್ಕಳನ್ನು ಶಾಲೆಗೆ ಕಳುಹಿಸಲು ಸರಿಯಾದ ವಯಸ್ಸು ಯಾವುದು ಎಂಬ ಬಗ್ಗೆ ಜಿಜ್ಞಾಸೆ ಇದ್ದ ಕಾರಣ, ವಿಚಾರಣೆಯ ವೇಳೆಯಲ್ಲಿ ನ್ಯಾಯಾಧೀಶರು ಸುಧೀರ್ಘವಾದ ಅಧ್ಯಯನ ನಡೆಸಿ ಮಕ್ಕಳನ್ನು 6 ವರ್ಷಕ್ಕಿಂಗಲೂ ಕಡಿಮೆ ವಯಸ್ಸಿನಲ್ಲಿ ಶಾಲೆಗೆ ಕಳುಹಿಸುವುದರಿಂದ ಮಕ್ಕಳ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರಬಹುದು ಎಂಬ ಸಲಹೆಯನ್ನು ನೀಡಿದೆ.

kid1ಅತ್ಯಂತ ವೇಗದಲ್ಲಿ ಹೋಗುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಅನೇಕ ಪೋಷಕರಿಗೆ ತಮ್ಮ ಮಕ್ಕಳು ಅತ್ಯಂತ ಬೇಗ ದೊಡ್ಡವರಾಗ ಬೇಕು ಅದರ ಜೊತೆಗೆ ತಾವು ಏನೇನು ಕಲಿತಿಲ್ಲವೋ ಅವೆಲ್ಲವನ್ನೂ ತಮ್ಮ ಮಕ್ಕಳು ಕಲಿತು ಕೊಳ್ಳಲೇ ಬೇಕು ಎಂಬ ಧಾವಂತದಿಂದಾಗಿ ಅನೇಕ ಪಾಲಕರು ತಮ್ಮ ಮಕ್ಕಳನ್ನು ಕೇವಲ 2 ವರ್ಷ ತುಂಬಿದಾಗಲೇ ನಾನಾ ಬಗೆಯ ಶಾಲೆಗೆ ಕಳುಹಿಸಿ ಆ ಮಕ್ಕಳ ಮೇಲೆ ಬಲವಂತದ ಮಾಘಸ್ನಾನ ಮಾಡಿಸುತ್ತಿರುವುದು ನಿಜಕ್ಕೂ ಆಘಾತಕಾರಿಯಾದ ವಿಷಯವಾಗಿದೆ.

kids8ಇತ್ತೀಚೆಗೆ ಹತ್ತು ಹಲವಾರು ಟಿವಿ ಛಾನೆಲ್ಲುಗಳಲ್ಲಿ ಮಕ್ಕಳ ನೃತ್ಯ, ಸಂಗೀತ ಮತ್ತು ನಾಟಕಗಳ ರಿಯಾಲಿಟಿ ಶೋಗಳು ಬಂದ ನಂತರವಂತೂ ಬಹುತೇಕ ಪಾಲಕರು ತಮ್ಮ ಮಕ್ಕಳು ಆ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕೆಂದು ಬಯಸುತ್ತಾರೆ. ಹಾಗಾಗಿ ಸಣ್ಣ ಸಣ್ಣ ವಯಸ್ಸಿನ ಮಕ್ಕಳ ಬಾಯಲ್ಲಿ ದೊಡ್ಡ ದೊಡ್ಡ ಮಾತುಗಳನ್ನು ಆಡಿಸುತ್ತಾ ವಿಕೃತ ಸಂತೋಷ ಪಡುತ್ತಾರೆ. ಆದರೆ ಪೋಷಕರ ಈ ರೀತಿಯ ಪ್ರಯತ್ನ ನಿಜಕ್ಕೂ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಗಮನನಿಸದೇ ಇರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ.

kids4ಇಂದಿನ ಬಹುತೇಕ ಪಾಲಕರು ಅಯ್ಯೋ ಕಾಲ ಕೆಟ್ಟು ಹೋಯ್ತು ರೀ.. ಈಗಿನ ಮಕ್ಕಳು ನಮ್ಮ ರೀತಿ ಇಲ್ಲಾ ಎಂಬ ಮಾತನ್ನು ಪದೇ ಪದೇ ಹೇಳುವುದನ್ನು ಕೇಳುತ್ತಲೇ ಇರುತ್ತೇವೆ. ಆದರೆ ಸೂಕ್ಷ್ಮವಾಗಿ ಯೋಚಿಸಿದಲ್ಲಿ ಇಲ್ಲಿ ಕಾಲವೂ ಕೆಟ್ಟಿಲ್ಲ ಮಕ್ಕಳದ್ದು ತಪ್ಪಿಲ್ಲ. ತಪ್ಪೆಲ್ಲವೂ ನಮ್ಮದೇ ಆಗಿದೆ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಹೀಗಾಗಿ ತಂದೆ-ತಾಯಿಯರೇ ಮೊದಲ ಗುರು. ಸಣ್ಣ ಮಕ್ಕಳು ತಮ್ಮ ತಂದೆ ತಾಯಿಯರನ್ಣೇ ನೋಡಿ ಅನುಸರಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಮನೆಯಲ್ಲಿ ಏನೇನು ಹೇಳಿಕೊಡಬೇಕು? ಯಾವ ರೀತಿಯ ಸಂಸ್ಕಾರ ನೀಡಬೇಕು? ಅವರನ್ನು ಹೇಗೆ ಬೆಳೆಸಬೇಕು? ಎಂಬುದನ್ನು ಮೊದಲು ಹೆತ್ತವರು ಯೋಚಿಸಿ, ಮಕ್ಕಳ ತಪ್ಪುಗಳನ್ನು ಸಣ್ಣ ವಯಸ್ಸಿನಲ್ಲೇ ಸೂಕ್ಷ್ಮವಾಗಿ ತಿದ್ದಿ ಉತ್ತಮ ನಡತೆ ಕಲಿಸಿಕೊಟ್ಟರೆ ಮುಂದೆ ಅವರು ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಿದೆ. ನಮ್ಮ ಪೋಷಕರು ಆ ರೀತಿ ಕಲಿಸಿದ್ದರಿಂದಲೇ ನಾವು ರೀತಿಯಾಗಿದ್ದೇವೆ. ಆದರೆ ನಾವೇ ನಮ್ಮ ಮಕ್ಕಳಿಗೆ ಆ ರೀತಿಯಲ್ಲಿ ಕಲಿಸದ ಕಾರಣ ನಮ್ಮ ಮಕ್ಕಳಿಗೆ ನಮ್ಮ ಆಚಾರ, ವಿಚಾರ, ಸಂಪ್ರದಾಯಗಳ ಪರಿಚಯವೇ ಇಲ್ಲವಾಗಿದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.

kids7ವಿದ್ಯಾ ದದಾತಿ ವಿನಯಂ, ವಿನಯಾದ್ಯಾತಿ ಪಾತ್ರತಾಂ।
ಪಾತ್ರತ್ವಾದ್ಧನ ಮಾಪ್ನೋತಿ, ಧನಾದ್ಧರ್ಮಂ ತತಃ ಸುಖಂ।। ಎಂಬ ಶ್ಲೋಕವನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ನಾವು ಕಲಿಯುವ ವಿದ್ಯೆಯಿಂದ ನಮಗೆ ವಿನಯ ದೊರೆಯುತ್ತದೆ, ಆ ರೀತಿಯಾದ ವಿನಯದಿಂದ ಯೋಗ್ಯತೆ ದೊರೆತು, ಆ ಯೋಗ್ಯತೆಯಿಂದ ವೃತ್ತಿಪರನಾಗಿ ಹಣ ಸಂಪಾದನೆ ಮಾಡಿ, ಆ ರೀತಿ ಗಳಿಸಿದ ಹಣದಿಂದ ಧರ್ಮಕಾರ್ಯಗಳನ್ನು ಮಾಡುವುದೇ ನಿಜವಾದ ಸುಖ ಎಂಬುದಾಗಿದೆ. ನಿಜವಾದ ಸುಖಕ್ಕೆ ವಿದ್ಯೆಯೇ ಮೂಲ ಕಾರಣ ಎಂದು ಈ ಶ್ಲೋಕ ಹೇಳುತ್ತದಾದರೂ, ಪ್ರಸಕ್ತ ಸಂದರ್ಭದಲ್ಲಿ ವಿದ್ಯೆಗಿಂತಲೂ ವಿವೇಕವಿದ್ದಲ್ಲಿ ಎಲ್ಲವನ್ನೂ ಸಾಧ್ಯಗೊಳಿಸಬಹುದಾಗಿದೆ ಎನ್ನುವುದೇ ಅತ್ಯಂತ ಸೂಕ್ತವಾಗಿದೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಶಾಲೆಗೆ ಸೇರಿಸಿ ವಿದ್ಯೆಯನ್ನು ಬಲವಂತವಾಗಿ ಅವರ ಮೇಲೆ ಹೇರುವ ಬದಲು ಮನೆಯಲ್ಲಿಯೇ ಮಕ್ಕಳನ್ನು ವಿವೇಕವಂತರಾಗಿ ಮಾಡುವ ಮೂಲಕ ಮನೆಗೂ ಮತ್ತು ನಾಡಿಗೂ ಉತ್ತಮ ನಾಗರೀಕರನ್ನಾಗಿ ಮಾಡಬಹುದಾಗಿದೆ. ಏಕೆಂದರೆ, ಇಂದಿನ ಮಕ್ಕಳೇ, ದೇಶದ ನಾಳಿನ  ಪ್ರಭುದ್ಧ ಪ್ರಜೆಗಳು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಉಕ್ರೇನಿನ ನೈಜ ಮುಖ

ಕಾಲು ಕೆರೆದುಕೊಂಡು ರಷ್ಯಾದ ವಿರುದ್ಧ ಯುದ್ದ ಮಾಡಲು ಹೋಗಿ ತಪರಾಕಿ ಹಾಕಿಸಿಕೊಳ್ಳುತ್ತಿರುವ ಉಕ್ರೇನಿನ ನೆರೆ ರಾಷ್ಟ್ರಗಳಿಂದ ಉಕ್ರೇನಿನಲ್ಲಿ ಸಿಲಿಕಿಕೊಂಡಿರುವ ಭಾರತೀಯರು ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಭಾರತ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ ಆಪರೇಷನ್ ಗಂಗಾ ಮೂಲಕ ಭಾರತಕ್ಕೆ ಕರೆತರುವ ಪ್ರಯಾಸದಲ್ಲಿದ್ದರೆ, ಕಮ್ಯೂನಿಷ್ಟ್ ಮನಸ್ಥಿತಿಯ ಬಹುತೇಕ ಮಾಧ್ಯಮಗಳು ಹುಡುಕಿ ಹುಡುಕೀ ಭಾರತ ಸರ್ಕಾರದ ಉಚಿತ ವಿಮಾನದಲ್ಲೇ ಬಂದು ಅದೇ ಭಾರತ ಸರ್ಕಾರ ವಿರುದ್ಧ ಮಾತನಾಡುವವರ ಸಂದರ್ಶನವನ್ನು ಪ್ರಸರಿಸಿ ಪರೋಕ್ಷವಾಗಿ ಆಪರೇಷನ್ ಗಂಗಾ ಎನ್ನುವುದು ವಿಫಲ ಪ್ರಯತ್ನ ಎಂಬುದನ್ನೇ ತೋರಿಸಲು ಪ್ರಯತ್ನಿಸಿತ್ತಿದ್ದಾಗ ಸುಮಾರು 30 ವರ್ಷಗಳ ಕಾಲ ಉಕ್ರೇನ್‌ನಲ್ಲಿ ತಮ್ಮ ಕಾರ್ಯದ ನಿಮಿತ್ತ ನೆಲೆಸಿರುವ ಶ್ರೀಮತಿ ರುಚಿ ಶುಕ್ಲಾ ಅವರು ಉಕ್ರೇನ್‌ನಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಬರೆದಿದ್ದ ಲೇಖನದ ಭಾವಾನುವಾದ ಹೀಗಿದೆ.

ಶ್ರೀಮತಿ ರುಚಿ ಶುಕ್ಲಾರವರು ಉಕ್ರೇನಿನ ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ತಮ್ಮ ಕಂಪನಿಯಲ್ಲಿ ಕೆಲಸಕ್ಕಾಗಿ ನೂರಾರು ಉಕ್ರೇನಿಯನ್ ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ. 90ರ ದಶಕದಲ್ಲಿ ರಷ್ಯಾದಿಂದ ವಿಭಜನೆಗೊಂಡ ನಂತರ ಉಕ್ರೇನಿಯನ್ನರು ರಾಷ್ಟ್ರವನ್ನು ಪಡೆದರೇ ವಿನಃ ಅವರ ರಾಷ್ಟ್ರೀಯತೆಯಲ್ಲಿ ಕೊಂಚವೂ ಬದಲಾಗಲಿಲ್ಲ.

ಮೂಲತಃ ರಷ್ಯನ್ನರು ಕಷ್ಟ ಪಟ್ಟು ಡುಡಿಯುವ ಶ್ರಮಜೀವಿಗಳಾದರೆ, ಉಕ್ರೇನಿಯನ್ನರು ಹೆಚ್ಚು ಸಿನಿಕತನದ ಮನಸ್ಥಿತಿಯುಳ್ಳವರಾಗಿದ್ದು ಕಷ್ಟ ಪಡದೇ ಐಶಾರಾಮ್ಯವಾಗಿ ಇರಲು ಬಹಸುತ್ತಾರ. ಹಾಗಾಗಿ, ಒಬ್ಬ ಸಾಮಾನ್ಯ ಉಕ್ರೇನಿಯನ್ ಸಹ ಕೇವಲ 10 ಡಾಲರ್ಗಳಿಗಾಗಿ ಮತ್ತೊಬ್ಬ ಉಕ್ರೇನಿಯನ್ನನನ್ನು ಹೊಡೆದು ಕೊಲ್ಲಲೂ ಹೇಸುವುದಿಲ್ಲ ಎನ್ನುವುದು ವಿಪರ್ಯಾಸವಾಗಿದೆ.

ಉಕ್ರೇನ್ ಮತ್ತು ಟರ್ಕಿ ದೇಶದ ಬಹುತೇಕ ನಾಗರೀಕರ ಚರ್ಮದ ಬಣ್ಣ ಬಿಳಿಯದ್ದಾಗಿರುವುದರಿಂದ, ತಮ್ಮನ್ನು ತಾವು ಯುರೋಪಿಯನ್ ಯೂನಿಯನ್ನಿನವರು ಎಂಬ ಭ್ರಮಾಲೋಕದಲ್ಲಿ ಸದಾ ತೇಲುತ್ತಿರುವುದಲ್ಲದೇ ಅದೇ ಗುಂಗಿನಲ್ಲಿ ಸಾಲ ಮಾಡಿಯಾದರೂ ತುಪ್ಪಾ ತಿನ್ನು ಎನ್ನುವಂತೆ ಸಮಯಕ್ಕೊಂದು ಸುಳ್ಳನ್ನು ಹೇಳುತ್ತಾ ಮದಿರೆ ಮತ್ತು ಮಾನನಿಯರ ನಶೆಯಲ್ಲಿ ತೇಲಾಡುತ್ತಿರುತ್ತಾರೆ. ಉಕ್ರೇನಿನ ವಿಮಾನ ನಿಲ್ದಾಣದಲ್ಲಿ ವಿದೇಶಿಗರು ಇಳಿಯುತ್ತಿದ್ದಂತೆಯೇ, ಅಲ್ಲಿಂದಲೇ ಅವರ ಲೂಟಿ ಆರಂಭವಾಗುತ್ತದೆ. ಅಲ್ಲಿನ ಪ್ರತಿಯೊಬ್ಬರಿಗೂ ಅಮೇರಿಕನ್ ಡಾಲರ್ ಇಲ್ಲವೇ ಯೂರೋ ಕೊಡಿ ಎಂದು ದಂಬಾಲು ಬೀಳುತ್ತಾರೆ. ಅವರ ಗೋಳನ್ನು ತಡೆಯಲಾರದೇ ಕನಿಕರದಿಂದ ಅಕಸ್ಮಾತ್ ಉಕ್ರೇನ್ ಕರೆನ್ಸಿ ಕೊಡುತ್ತಿದ್ದಂತೆಯೇ ಮಾನ ಮಾರ್ಯಾದೆ ಇಲ್ಲದೇ ಮುಖದ ಮೇಲೆ ಹೊಡೆದಂತೆ ಅವರ ಭಾಷೆಯಲ್ಲಿ ನಿಂದಿಸಲಾರಂಭಿಸುತ್ತಾರೆ.

ಭಾರತದಲ್ಲಿ ಪೆಟ್ರೋಲ್ ಬೆಲೆ 100ಕ್ಕೆ ಬಂದ ತಕ್ಷಣವೇ ಬೊಬ್ಬಿರಿಯುವ ಮಂದಿಯೇ ಹೆಚ್ಚಾಗಿರುವಾಗ ಇಲ್ಲಿನ ಪರಿಸ್ಥಿತಿ ಅದಕ್ಕಿಂತಲು ಭಿನ್ನವಾಗಿದ್ದು. ತೈಲದ ಬೆಲೆ ವಿಪರೀತವಾಗಿರುವ ಕಾರಣ, ಹೆಚ್ಚಿಗಾಗಿ ತೈಲವನ್ನು ಕುಡಿಯುವ ಅಲ್ಲಿ ದೊಡ್ಡ ದೊಡ್ಡ ಕಾರುಗಳನ್ನು ಕಾಣುವುದು ಅಪರೂಪವಾಗಿದ್ದು ಸಣ್ಣ ಸಣ್ಣ ಕಾರುಗಳು ಅದರಲ್ಲೂ ಯುರೋಪಿನಲ್ಲಿ ಉಪಯೋಗಿಸಿ ಬಿಟ್ಟ ಸೆಕೆಂಡ್ ಹ್ಯಾಂಡ್ ಕಾರುಗಳದ್ದೇ ಪಾರುಪತ್ಯವಾಗಿದೆ. ಹಾಗಾಗಿ ಇಲ್ಲಿ ಸಂತೃಪ್ತನಾಗಿ ನಗುತ್ತಿರುವ ವ್ಯಕ್ತಿಯನ್ನು ಕಾಣುವುದು ಬಲು ಅಪರೂಪವಾಗಿದ್ದು, ಸದಾ ಕಾಲವೂ ಖೂಳ ಮನಸ್ಥಿತಿಯ ಮೋಸ, ವಂಚನೆ ಮತ್ತು ಕಳ್ಳತನದ ಮನಸ್ಥಿತಿಯವರೇ ಹೆಚ್ಚಾಗಿರುವ ಕಾರಣ ಕಳ್ಳತನ ಇಲ್ಲಿ ಸರ್ವೇಸಾಮಾನ್ಯವಾಗಿದೆ. ಅಪ್ಪೀ ತಪ್ಪೀ ವಿದೇಶಿಗರು ಉಕ್ರೇನ್ ಹುಡುಗಿಯೊಂದಿಗೆ ಗೆಳೆತನ ಬೆಳಸಿಕೊಂಡು ಅವಳೊಂದಿಗೆ ಬಿಯರ್ ಕುಡಿಯಲು ಹೋರಟರೆಂದರೆ ಅವರು ಬರ್ಬಾದ್ ಆಗುವುದು ನಿಶ್ಚಿತವಾಗಿದೆ. ಹಾಗೆ ವಿದೇಶಿಗರೊಂದಿಗೆ ಹೋಗುವ ಹುಡುಗಿ ಅವಳೊಂದಿಗೆ ತನ್ನ ಸ್ನೇಹಿತರನ್ನೂ ಕರೆದುಕೊಂಡು ಬಂದು ವಿದೇಶಿಗರ ಮೈ ಮೇಲೆ ಬಟ್ಟೆಯೂ ಉಳಿಯದಂತೆ ದೋಚಿ ಅವರನ್ನು ಬೀದಿಗೆ ಬೀಳಿಸುವ ಅನೇಕ ಘಟನೆಗಳು ಇಲ್ಲಿ ಕಾಣಬಹುದಾಗಿದೆ. ಉಕ್ರೇನ್‌ನಲ್ಲಿ ನಿರುದ್ಯೋಗದ ಸಮಸ್ಯೆ ಅತಿಯಾಗಿದ್ದು ಕೇವಲ $500 ಉದ್ಯೋಗವನ್ನು ಪಡೆಯುವುದೇ ಒಂದು ಅದೃಷ್ಟವೆಂದು ಪರಿಗಣಿಸಲಾಗಿದೆ.

ಇವೆಲ್ಲದರ ಅರಿವಿಲ್ಲದ ಭಾರತೀಯರು ಸಾಮಾಜಿಕ ಅಂತರ್ಜಾಲದಲ್ಲಿ ಕಣ್ಣು ಕೋರೈಸುವಂತೆ ಕಾಣುವ ವೈದ್ಯಕೀಯ ಕಾಲೇಜುಗಳನ್ನು ನೋಡಿ ತಮ್ಮ ಮಕ್ಕಳಿಗೆ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಅರ್ಹತೆ ಪಡೆದಿಲ್ಲವಾದ ಕಾರಣ, ಏಜೆಂಟರುಗಳ ಮೂಲಕ 30-40 ಲಕ್ಷಕ್ಕೆ ವ್ಯವಹಾರವನ್ನು ಕುದುರಿಸಿ ತಮ್ಮ ಮಕ್ಕಳನ್ನು ಉಕ್ರೇನಿನ ವೈದ್ಯಕೀಯ ಕಾಲೇಜಿಗಳಿಗೆ ಸೇರಿಸಿ ತಮ್ಮ ಮಕ್ಕಳು ವಿದೇಶದಲ್ಲಿ ಓದುತ್ತಿದ್ದಾರೆ ಎಂದು ಹೆಮ್ಮೆ ಪಡುತ್ತಾರೆಯೇ ಹೊರತು ಅಲ್ಲಿ ತಮ್ಮ ಮಕ್ಕಳು ಹೇಗೆ ಓದುತ್ತಿದ್ದಾರೆ ಅಲ್ಲಿಯ ಶಿಕ್ಷಣದ ಗುಣಮಟ್ಟ ಹೇಗಿದೆ ಎಂಬುದರ ಪರಿಚಯ ಮಾಡಿಕೊಳ್ಳಲು ಮುಂದಾಗದೇ ಹೋಗುವುದು ನಿಜಕ್ಕೂ ಅಚ್ಚರಿ ಎನಿಸುತ್ತದೆ. ಭಾರತದಿಂದ ಇಲ್ಲಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಬರುವ ಹೆಚ್ಚಿನ ಮಕ್ಕಳು ಹರಿಯಾಣ, ಪಂಜಾಬ್‌, ಆಂಧ್ರ ಪ್ರದೇಶದ ಭೂಮಾಲೀಕರ ಮಕ್ಕಳೋ ಇಲ್ಲವೇ ಲಂಚದಿಂದ ಕೊಬ್ಬಿರುವ ಸರ್ಕಾರಿ ಅಧಿಕಾರಿಗಳ ಮಕ್ಕಳೇ ಹೆಚ್ಚಾಗಿದ್ದು ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ನಿಜವಾದ ಶಿಕ್ಷಣಕ್ಕಾಗಿ ಬಂದಿರುತ್ತಾರೆ ಎನ್ನುವುದು ಕಠು ಸತ್ಯವಾಗಿದೆ. ಹೀಗೆ ಅಪ್ಪನ ದುಡ್ಡಿನಲ್ಲಿ ಬರುವ ಮಕ್ಕಳು ಇಲ್ಲಿ ಓದುವುದಕ್ಕಿಂತಲು ಮೋಜು ಮಸ್ತಿಯಲ್ಲೇ ಕಳೆದು ಹೋಗಿ ಅಂತಿಮವಾಗಿ ಅಲ್ಲಿನ ಪ್ರಾಧ್ಯಾಪಕರ ಕೈ ಬಿಸಿ ಮಾಡಿ ತಮಗೆ ಬೇಕಾದಷ್ಟು ಅಂಕಗಳನ್ನು ಪಡೆದುಕೊಂಡು ಹೆಮ್ಮೆಯಿಂದ ತಾವೂ ಸಹಾ ವೈದ್ಯರಾದೆವೆಂದು ಭಾರತಕ್ಕೆ ಬರುತ್ತಾರೆ. ಇನ್ನು ಅಂಕಕ್ಕಾಗಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಅದನ್ನು ತೋರಿಸಿಕೊಳ್ಳದೇ ಭಾರತಕ್ಕೆ ಹಿಂದಿರುಗುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ. ಹೀಗೆ ಅಲ್ಲಿಂದ ಭಾರತಕ್ಕೆ ಬಂದವರು ಇಲ್ಲಿ ವೈದ್ಯಕೀಯ ವೃತ್ತಿಯನ್ನು ಮಾಡುವ ಸಲುವಾಗಿ ನಡೆಸಲಾಗುವ ಪರೀಕ್ಷೆಯಲ್ಲಿ ಏಕೆ ಉತ್ತೀರ್ಣರಾಗುವುದಿಲ್ಲ ಎಂಬುದು ಈಗ ನಿಮಗೆ ಅರ್ಥವಾಗಿರಬೇಕು.

ನಿಜ ಹೇಳ ಬೇಕೆಂದರೆ ಉಕ್ರೇನಿನ ಆ ವೈದ್ಯಕೀಯ ಕಾಲೇಜುಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಷ್ಟೇನೂ ಹೆಸರಿಲ್ಲದಿದ್ದರೂ ಭಾರತದ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಇಲ್ಲವೇ ಮೀಸಲಾತಿಯಿಂದಾ ಪ್ರತಿಭೆ ಇದ್ದರೂ ಇಲ್ಲಿ ಅವಕಾಶ ಪಡೆಯದೇ ಹಣ ಕೊಟ್ಟು ಓದಲು ದುಬಾರಿಯಾದ ಕಾರಣ 10-15 ಲಕ್ಷಗಳನ್ನು ಉಳಿಸುವ ಸಲುವಾಗಿ ಇಲ್ಲಿಗೆ ಓದಲು ಬರುವ ವಿದೇಶಿಗರಿಗೆ ಅವರ ಕಾಲೇಜಿನಲ್ಲಿಯೂ ದ್ವಿತೀಯ ದರ್ಜೆಯವರಂತೆಯೇ ಪರಿಗಣಿಸಲಾಗುತ್ತದೆಯಲ್ಲದೇ, ಉಕ್ರೀನಿನವರೊಂದಿಗೆ ಅವರಿಗೆ ಶಿಕ್ಷಣ ಕೊಡದೇ ವಿದೇಶಿಗರಿಗಾಗಿಯೇ ಪ್ರತ್ಯೇಕ ವಿಭಾಗವಿದ್ದು ಅದನ್ನು ಸ್ಥಳೀಯ ವಿದ್ಯಾರ್ಥಿಗಳು ಕಸದ ವಿಭಾಗ ಎಂದೇ ಮೂದಲಿಸಲಾಗುತ್ತದೆ.

ಬಹುತೇಕ ಅಮೇರಿಕಾದ ಕೃಪಾಶೀರ್ವಾದದಿಂದಲೇ ನಡೆಯುತ್ತಿರುವ ಕಾರಣ ಆ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವುದ ಕಾರಣ, ಪ್ರತಿಯೊಬ್ಬ ಉಕ್ರೇನಿಯನ್ ಪ್ರಜೆಯ ಮೇಲೂ ಸಾವಿರಾರು ರೂಪಾಯಿಯ ಸಾಲವಿದ್ದು ಇಡೀ ದೇಶ ಸಾಲಗಾರ ದೇಶವಾಗಿದೆ. ಇನ್ನು ಅಲ್ಲಿನ ಪ್ರಧಾನಿಯ ಬಗ್ಗೆ ಹೇಳುವುದಕ್ಕಿಂತಲೂ ಹೇಳದೇ ಇರುವುದೇ ಲೇಸು. ರಂಗದ ಮೇಲೆ ಚೆನ್ನಾಗಿ ನಟಿಸುತ್ತಾನೆಂದೂ ಹಾಸ್ಯ ಕಲಾವಿದ ಎಂದು ಅಲ್ಲಿನ ಜನರು ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದರೆ ಆತ ನಿಶ್ಪ್ರಯೋಜನಕನಾಗಿ ಕೋಡಂಗಿ ಕಾಣಿಸುಕೊಳ್ಳುತ್ತಿದ್ದಾನೆ. ತನ್ನ ಲಿಮೋಸಿನ್‌ ನಲ್ಲಿ ಕುಳಿತು ಜನರತ್ತ ಕೈ ಬೀಸುವುದೇ ಘನಕಾರ್ಯ ಎಂದು ನಂಬಿದ್ದಾನೆ. ಅಮೇರಿಕಾ ಮತ್ತು ನ್ಯಾಟೋ ಸದಾಕಾಲವೂ ತನ್ನ ರಕ್ಷಣೆಗಾಗಿ ನಿಲ್ಲುತ್ತಾರೆ ಎಂದು ನಂಬಿ ಕಾಲು ಕೆರೆದುಕೊಂಡು ರಷ್ಯಾದ ಮೇಲೆ ಯುದ್ಧಕ್ಕೆ ಹೋಗಿ ರಷ್ಯಾದ ಸೈನಿಕರ ಧಾಳಿಯನ್ನು ತಡೆಯಲಾರದೇ ಸೋತು ಸುಣ್ಣವಾಗಿ ತನ್ನ ಪ್ರಜೆಗಳ ಕೈಯ್ಯಲ್ಲಿ ಶಸ್ತ್ರಾಸ್ತ್ರಗಳನ್ನು ಕೊಟ್ಟು ದೇಶದ ರಕ್ಷಣೆ ಮಾಡಿ ಎಂದು ಗೋಗರೆಯುತ್ತಿರುವುದು ಕೊಟ್ಟೋನು ಕೊಂಡಂಗಿ ಈಸ್ಕೊಂಡೋನು ಈರಭಧ್ರ ಎಂಬ ಗಾದೆಯನ್ನು ನೆನಪಿಸುತ್ತಿದೆ.

ರೀಲ್ ಮೇಲೆ ಹೀರೋಗಳಾಗಿ ಮೆರೆದವರನ್ನು ತಪ್ಪಾಗಿ ಆಡಳಿತಗಾರರನ್ನಾಗಿ ಆಯ್ಕೆ ಮಾಡಿದ ಪರಿಣಾಮವನ್ನು ರಿಯಲ್ಲಾಗಿ ಅನುಭವಿಸ ಬೇಕಾಗುತ್ತಿದೆ. ಸ್ವಾತಂತ್ರ್ಯ ಎಂದರೆ ಸ್ವೇಚ್ಚಾಛಾರವಲ್ಲ ಮತ್ತು ಅವ್ಯವಸ್ಥೆಯ ಅಗರವಂತೂ ಅಲ್ಲವೇ ಅಲ್ಲ. ಸ್ವಾತಂತ್ರ್ಯ ಎಂದರೆ ಸ್ಥಿರ ಮತ್ತು ಸರಿಯಾದ ಆಯ್ಕೆಗಳು ಎಂಬುದು ಅಲ್ಲಿನ ಜನರಿಗೆ ಈಗ ಅರ್ಥವಾಗುತ್ತಿದೆ. ಇಂತಹ ಪರಿಸ್ಥಿತಿ ಕೇವಲ ಉಕ್ರೇನಿಗೆ ಮಾತ್ರವೇ ಸೀಮಿತವಾಗಿರದೇ, ಪೂರ್ವ ಯುರೋಪಿನ ಬಹುತೇಕ ಎಲ್ಲಾ ದೇಶಗಳ ಸ್ಥಿತಿ ಇದೇ ರೀತಿಯಾಗಿದೆ. ಜನರು ಸ್ವಾತಂತ್ರ್ಯವನ್ನು ಅಪಹಾಸ್ಯ ಮಾಡಿದಾಗ, ಅವರ ಭವಿಷ್ಯವು ಅಫ್ಘಾನಿಸ್ತಾನ, ವೆನೆಜುವೆಲಾ ಮತ್ತು ಉಕ್ರೇನ್‌ನಂತೆಯೇ ಆಗುತ್ತದೆ.

ಅದೃಷ್ಠವಷಾತ್ ಸದ್ಯದಲ್ಲಿ ನಮ್ಮ ದೇಶದಲ್ಲಿ ದಕ್ಷ ಆಡಳಿತಗಾರನಿದ್ದ ಪರಿಣಾಮ ದೇಶ ಆರ್ಥಿಕವಾಗಿ ಸಧೃಢವಾಗಿರುವುದಲ್ಲದೇ, ದಕ್ಶವಾಗಿದ್ದು ಅಮೇರಿಕಾ, ಚೀನಾ, ಯುರೋಪಿನ ಹತ್ತು ಹಲವಾರು ದೇಶಗಳು ಉಕ್ರೇನಿನಲ್ಲಿದ್ದ ತಮ್ಮವರನ್ನು ತಮ್ಮ ದೇಶಕ್ಕೆ ಕರೆದುಕೊಂಡು ಹೋಗಲು ಪರದಾಡುತ್ತಿದ್ದಾಗ ನಮ್ಮ ಹೆಮ್ಮೆ ಭಾರತ ದೇಶದ ಮಂತ್ರಿಗಳು ಉಕ್ರೇನಿನ ಗಡಿಯಲ್ಲಿನಿಂತು ಅಪರೇಷನ್ ಗಂಗಾ ಹೆಸರಿನಲ್ಲಿ ಉಕ್ರೇನಿನಲ್ಲಿ ಸಿಲಿಕಿಕೊಂಡ ಭಾರತೀಯರನ್ನು ಸುರಕ್ಷಿತವಾಗಿ ಅದೂ ಉಚಿತವಾಗಿ ಕರೆತರುತ್ತಿರುವುದು ಶ್ಲಾಘನೀಯವಾದ ಅಂಶವಾಗಿದೆ.

ಉಪಕಾರ ಮಾಡಿದವರಿಗೆ ಕೃತಜ್ಞತೆಯನ್ನು ಹೇಳದೇ ಹೋದರೂ ಪರವಾಗಿಲ್ಲ. ಆದರೆ ದಾನಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಹೋಗಿ ಮೊಳ ಹಾಕಿ ನೋಡಿದರು ಎನುವಂತೆ ಅದರೆ ಉಪಕಾರ ಮಾಡಿದವರನ್ನೇ ಸಾರ್ವಜನಿಕವಾಗಿ ದೂಷಿಸುವನು ಕೃತಘ್ನರೇ ಸರಿ. ಇಂತಹ ದೇಶದ್ರೋಹಿಗಳಿಗೆ ನಮ್ಮ ತೆರಿಗೆ ಹಣವನ್ನು ಖರ್ಚು ಮಾಡಬೇಕಾಯಿತಲ್ಲಾ ಎನ್ನುವುದೇ ಬಹುತೇಕ ಭಾರತೀಯರ ಅಳಲಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಕಾಲೇಜಿಗೆ ಹೋಗುವುದು ಕಲಿಯುವುದಕ್ಕೋ? ಇಲ್ಲಾ…

ಅವಿಭಜಿತ ದಕ್ಷಿಣ ಕನ್ನಡ ಶಿಕ್ಷಣ ಕ್ಷೇತ್ರದಲ್ಲಿ ಸದಾಕಾಲವು ಮುಂದಿದ್ದು ಉಡುಪಿಯಲ್ಲಿ 2003-04 ನೇ ಸಾಲಿನಲ್ಲಿ 93 ರ ಬಾಲಕಿಯರೊಂದಿಗೆ  ಪ್ರಾರಂಭವಾದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ  2020-21 ರಲ್ಲಿ 2300 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಸದ್ದಿಲ್ಲದೆ ಎಲೆಮರೆ ಕಾಯಿಯಂತೆ ಎಲ್ಲವೂ ನಡೆದುಕೊಂಡು ಹೋಗುತ್ತಿತ್ತು. ಆದರೆ ಇದ್ದಕ್ಕಿದ್ದಂತೆಯೇ ಕಳೆದ ಮೂರು ವಾರಗಳಿಂದಲೂ ಈ ಕಾಲೇಜು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಇದು ಶೈಕ್ಷಣಿಕ ಸಾಧನೆಗಾಗಿ ಈ ರೀತಿಯ ಪ್ರಚಾರ ಪಡೆದಿದ್ದರೆ ಸಂತೋಷವಾಗುತ್ತಿತ್ತು. ಆದರೆ ಈಗ ಪ್ರವರ್ಧಮಾನಕ್ಕೆ ಬಂದಿರುವುದು ಯಾವುದೋ ಷಡ್ಯಂತ್ರದಿಂದ ಎನ್ನುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

hijab2ಈ ವಿಷಯದ ಕುರಿತಂತೆ ಸುಧೀರ್ಘವಾದ  ಲೇಖನ ಬರೆಯುವುದು ಅನಾವಶ್ಯಕ ಮತ್ತು ಸಮಯ ವ್ಯರ್ಥ ಎಂದು ನಿರ್ಧರಿಸಿ,  ಕಾಲೇಜಿನಲ್ಲಿ ನೂರಾರು ಮುಸ್ಲಿಂ ಹುಡುಗಿಯರು ಕಲಿಯುತ್ತಿದ್ದರೂ  ಅವರಲ್ಲಿ‌ ಕೇವಲ 6 ಹುಡುಗಿಯರಿಗೆ ಮಾತ್ರಾ ಸಮಸ್ಯೆ ಎಂದರೆ ಇದರ ಹಿಂದೆ ಏನೋ ಷಡ್ಯಂತ್ರ ಇದೇ ಅಲ್ವೇ?

ಧರ್ಮ ಮನೆಯ ನಾಲ್ಕು ಗೋಡೆಗಳ ಮಧ್ಯೆ ಇರಬೇಕೇ ಹೊರತು ಸಾರ್ವಜನಿಕವಾಗಿ ಅಲ್ಲಾ.. ಎಂದು ಹೇಳಿಕೆಯೊಂದನ್ನು  ಮುಖಪುಟದಲ್ಲಿ ಹಾಕಿ ಸುಮ್ಮನಾಗಿದ್ದೆ.

WhatsApp Image 2022-01-23 at 10.16.56 PMಇಷ್ಟೇ ಆಗಿದ್ದರೆ ಇದು ಪಾಪ್ಯುಲರ್ ಫ್ರಂಟ್ ಇಂಡಿಯಾ ಮತ್ತು ಎಸ್.ಡಿ.ಪಿ.ಐ. ಮತಾಂಧರ ಮನಸ್ಥಿತಿ ಎಂದು ಸುಮ್ಮನಾಗಿರ ಬಹುದಿತ್ತೇನೋ? ಆದರೆ ಈ ಪ್ರಕರಣದ ಪರವಾಗಿ NSUI ಮಧ್ಯಪ್ರವೇಶಿಸಿದಾಗ ಇದರ ಹಿಂದೆ ರಾಜಕೀಯ ಷಡ್ಯಂತರದ ವಾಸನೆ ಮೂಗಿಗೆ ಬಡಿದರೆ, ಈಗ ಮಾಜೀ ಮುಖ್ಯಮಂತ್ರಿ ಸಿದ್ರಾಮಯ್ಯನೂ ಈ ಪ್ರಕರಣದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಫೀಲ್ಡಿಗೆ ಇಳಿದಾಗ, ಮಕ್ಕಳನ್ನು ಮುಂದಿಟ್ಟುಕೊಂಡು ಚೆಲ್ಲಾಟ ಆಡುತ್ತಿರುವವರ ನಿಜವಾದ ಬಣ್ಣ ಬಯಲಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಶಾದೀ ಭಾಗ್ಯ ಆ ಭಾಗ್ಯ ಎಂದು ಘೋಷಿಸಿ ಜನರಿಂದ ಸಿದ್ರಾಮುಲ್ಲಾಖಾನ್ ಎಂದೇ ಕರೆಸಿಕೊಳ್ಳುತ್ತಿದ್ದವರು ಈಗ  ಹಿಜಬ್  ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ, ಶಾಲೆಯಲ್ಲಿ ಹಿಜಬ್ ಧರಿಸುವುದು ಅಶಿಸ್ತು, ಶಾಲಾ ಧರ್ಮವನ್ನು ಆಚರಿಸುವ ಸ್ಥಳವಲ್ಲ ಎಂದಾದಲ್ಲಿ, ಶಾಲೆಯಲ್ಲಿ ದೇವರ ಹೆಸರಿನಲ್ಲಿ ಪ್ರಾರ್ಥನೆ ಮಾಡುವುದು, ಶಾರದಾಪೂಜೆ ಮಾಡುವುದು  (ಜಾತ್ಯಾತೀತತೆ ಹೆಸರಿನಲ್ಲಿ ನಿಲ್ಲಿಸಿ ಎಷ್ಟೋ ಕಾಲವಾಗಿದೆ)  ಹಿಂದೂ ಹೆಣ್ಣುಮಕ್ಕಳು/ಶಿಕ್ಷಕಿಯರು ಹಣೆಗೆ ಕುಂಕುಮ ಧರಿಸುವುದು, ಕುತ್ತಿಗೆಯಲ್ಲಿ ತಾಳಿ ಧರಿಸುವುದು, ಕಾಲಲ್ಲಿ ಕಾಲುಂಗುರ ಧರಿಸುವುದನ್ನು ಪ್ರಶ್ನಿಸುವ ಮೂಲಕ ಹಿಂದೂಗಳ  ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಮೂಲಕ ಇಂತಹ ಮೂಲಭೂತವಾದಿ, ಕೋಮುವಾದಿ ಹಿಂದೂ ವಿರೋಧಿಯನ್ನು ಜನನಾಯಕ ಎಂದು ಇಷ್ಟು ವರ್ಷಗಳ ಕಾಲ ಆರಿಸಿ, ಮೆರೆಸಿ, ಮುಖ್ಯ ಮಂತ್ರಿಯನ್ನಾಗಿ ಮಾಡಿದೆವಲ್ಲಾ ಎಂದು ಜನರು ಪರಿತಪಿಸುತವಂತಾಗಿದೆ.

ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ 2300 ವಿಧ್ಯಾರ್ಥಿನಿಯರೂ ಒಂದೇ ರೀತಿಯ ಸಮವಸ್ತ್ರಗಳನ್ನು ಧರಿಸಿಕೊಂಡು ಯಾವುದೇ ಜಾತಿ ಧರ್ಮದ ಹಂಗಿಲ್ಲದೆ  ಸುಲಲಿತವಾಗಿ ವಿದ್ಯಾಭ್ಯಾಸವನ್ನು ಮಾಡಿಕೊಂಡು ಹೋಗುತ್ತಿದ್ದರು. ಆದರೆ ಇದ್ದಕ್ಕಿಂದ್ದಂತೆಯೇ 3 ವಾರಗಳ ಹಿಂದೆ ಎರಡನೇ ವರ್ಷದ  6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ತರಗತಿಯೊಳಗೆ ಬಂದಾಗ ಸಹಜವಾಗಿ ಕಾಲೇಜು ಆಡಳಿತ ಮಂಡಳಿ ಇದು ಸಮವಸ್ತ್ರ ಸಂಹಿತೆಗೆ ವಿರುದ್ಧವಾಗಿರುವ ಕಾರನ ಹಿಜಬ್ ತೆಗೆದು ತರಗತಿಗೆ ಬನ್ನಿ ಎಂದು ಹೇಳಿರುವುದು ಸರಿಯಾದ ಕ್ರಮವಾಗಿತ್ತು. ಇದಕ್ಕೆ ಆ ವಿಧ್ಯಾರ್ಥಿನಿಯರು ಹಿಜಬ್ ಧರಿಸುವುದು  ನಮ್ಮ ಧಾರ್ಮಿಕ ಹಕ್ಕು ಆದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲಾ ಎಂದು ಪ್ರತಿಭಟಿಸಿದಾಗ, ಮೊದಲ 3 ಸೆಮಿಸ್ಟರ್‌ಗಳಲ್ಲಿ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು  ಇಲ್ಲದೇ  ಎಲ್ಲರಂತೆ ಸಮವಸ್ತ್ರ ಧರಿಸಿ ಬರುತ್ತಿದ್ದವರು,  ಈಗ ಇದ್ದಕ್ಕಿದ್ದಂತೆ  140 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ ಕೇವಲ 6 ವಿಧ್ಯಾರ್ಥಿನಿಯರು ಮಾತ್ರ ಹಿಜಾಬ್ ಗಾಗಿ ಬೇಡಿಕೆ ಇಟ್ಟದ್ದು ವಿಚಿತ್ರವಾಗಿ ಕಾಣುಸುತ್ತಿದ್ದ ಕಾರಣ, ಈ ರೀತಿ ಒಬ್ಬರಿಗೆ ಅನುಮತಿ ಕೊಟ್ಟಲ್ಲಿ ಮುಂದೆ ವಿವಿಧ ರೀತಿಯ ಬೇಡಿಕೆಗಳು ಎದುರಾಗಬಹುದು ಎಂಬುದನ್ನು ಅರಿತ ಕಾಲೇಜಿನ ಮುಖ್ಯೋಪಾಧ್ಯಾಯರು ಆ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶಿಸಲು ಅನುಮತಿ ನೀಡಿರಲಿಲ್ಲ.

hijab1ಪರೀಕ್ಷೆಯ ಸಮಯದಲ್ಲಿ ಹಿಜಾಬ್‌ ನಮ್ಮ ಮೂಲಭೂತ ಹಕ್ಕು, ಅದನ್ನು ಪಡೆದೆ ತೀರುತ್ತೇವೆ, ನಮಗೆ ನ್ಯಾಯ ಬೇಕು ನಾವು ಹಿಜಾಬ್‌ ಧರಿಸಿರುವ ಕಾರಣಕ್ಕಾಗಿ ತರಗತಿಯಿಂದ ಹೊರಗೆ ಕುಳಿತುಕೊಂಡಿದ್ದೇವೆ ಎಂಬ ಭಿತ್ತಿಪತ್ರವನ್ನು ವಿದ್ಯಾರ್ಥಿನಿಯರು ಪ್ರದರ್ಶಿಸುವ ಮೂಲಕ ಅವರಿಗೇ ಅರಿವಿಲ್ಲದಂತೆ ಮತಾಂಧರು ಮತ್ತು ರಾಜಕೀಯ ನಾಯಕರ ಕುಮ್ಮಕ್ಕಿನಿಂದಾಗಿ ಅವರ ಭವಿಷ್ಯಕ್ಕೆ ಅವರೇ ಕಲ್ಲನ್ನು ಹಾಕಿಕೊಳ್ಳಲು ಮುಂದಾಗಿರುವುದು ಬೇಸರದ ಸಂಗತಿಯಾಗಿದೆ.

varthaಇದೇ ಪ್ರಕರಣಕ್ಕೆ ತುಪ್ಪ ಸುರಿಯುವಂತೆ, ಹುಡುಗಿಯರು ಕ್ಲಾಸಿನ ಅವಧಿಯಲ್ಲಿ ಕೊಠಡಿಯ ಹೊರಗೆ ನಿಂತಿರುವ ದೃಶ್ಯವು ಒಂದು ಕಾಲದಲ್ಲಿ ಅದೇ ಉಡುಪಿಯಲ್ಲಿ ಕೃಷ್ಣದರ್ಶನಕ್ಕೆ ಮಠ ಪ್ರವೇಶ ನಿರಾಕರಿಸಲ್ಪಟ್ಟು ಮಠದ ಹೊರಗೆ ನಿಂತಿದ್ದ ಕನಕ ದಾಸರ ಕಥೆಯನ್ನು ನೆನಪಿಸುತ್ತಿದೆ. ಕ್ರಿ.ಶ. 16ನೇ ಶತಮಾನದಲ್ಲಿ ಮಠದ ಹೊರಗೆ ನಿಲ್ಲಲು ನಿರ್ಬಂಧಿತರಾಗಿದ್ದ ಕನಕದಾಸರು ಪಾಪ ಈಗಲೂ ಅಲ್ಲಿ ಹೊರಗೆಯೇ ನಿಂತಿದ್ದಾರೆ. ಸ್ಕಾರ್ಫ್‌ಧಾರಿ ಹುಡುಗಿಯರನ್ನು ಕ್ಲಾಸಿನೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವವರು, ತರಗತಿಯ ಹಿಂಭಾಗದಲ್ಲಿ ಆ ಹುಡುಗಿಯರಿಗಾಗಿ ಒಂದು ಕಿಟಕಿ ತೆರೆದು ಕೊಡುವ ಪ್ರಸ್ತಾವ ಮಂಡಿಸುವರೇ? ಎಂಬ ಕುತೂಹಲ ಕೆರಳಿದೆ. ಎಂದು ಕರಾವಳಿ ಪ್ರದೇಶದಲ್ಲಿ ಕೋಮು ಸಾಮರಸ್ಯವನ್ನು ಹಾಳು ಮಾಡಲೆಂದೇ ವಾರ್ತಾಭಾರತಿ ಎಂಬ ಪತ್ರಿಕೆಯನ್ನು ನಡೆಸುತ್ತಿರುವ ಬಶೀರ ಎಂಬ ಮತಾಂಧ ಪತ್ರಕರ್ತ ತನ್ನ ಪತ್ರಿಕೆಯಲ್ಲಿ ಬರೆಯುವ ಮೂಲಕ ಈ ಪ್ರಕರಣವನ್ನು ಸೂಕ್ತವಾಗಿ ಪರಿಹರಿಸುವುದಕ್ಕಿಂತಲೂ ಹಿಂದೂ ಮುಸ್ಲಿಂ ನಡುವೆ ಮತ್ತಷ್ಟೂ ಕಂದಕವನ್ನು ಸೃಷ್ಟಿಸುತ್ತಾ ಸಣ್ಣದಾದ ಗಾಯವನ್ನು ಕೆರೆದು ಕೆರೆದು ವ್ರಣ ಮಾಡುತ್ತಿದ್ದಾರೆ ಎಂದರೆ ಅತಿಶಯವಲ್ಲ.

ನಮ್ಮ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರು ಯಾವುದೇ ಧರ್ಮವನ್ನು ಆಚರಿಸುವ ಹಕ್ಕಿದ್ದರೂ ಅದು  ತಮ್ಮ ಮನೆ ಅಥವಾ ಧಾರ್ಮಿಕ ಕೇಂದ್ರಗಳ ನಾಲ್ಕು ಗೋಡೆಗಳ ಮಧ್ಯೆ ಇದ್ದು ಸಾರ್ವಜನಿಕವಾಗಿ ಇರುವ ನೀತಿ ಸಂಹಿತೆಯನ್ನು ಪಾಲಿಸಬೇಕೆಂಬುದು ಇದೇ ಎನ್ನುವುದನ್ನು ಜಾಣ ಮೌನವನ್ನಾಗಿಸುತ್ತಾರೆ.

namazಈ ಪ್ರಕರಣ  ಇನ್ನೂ ಹಸಿಯಾಗಿರುವಾಗಲೇ, ಕೋಲಾರ ಜಿಲ್ಲೆಯ ಮುಳುಬಾಗಿಲಿನ ಸರ್ಕಾರೀ ಶಾಲೆಯಲ್ಲಿ ಕಳೆದ ಶುಕ್ರವಾರ ಶಾಲೆಯ ಕೊಠಡಿಯೊಂದರಲ್ಲೇ ಸಾಮೂಹಿಕವಾಗಿ ನಮಾಜ್ ಮಾಡುವ ಮೂಲಕ ಉರಿಯುತ್ತಿರುವ ಬೆಂಕಿಗೆ ತುಪ್ಪವನ್ನು ಸುರಿದಿದ್ದಾರೆ.  ಕ್ರಿಶ್ಚಿಯನ್ ಶಾಲೆಯಲ್ಲಿ ಅಭ್ಯಾಸ ಮಾಡುವ ಹಿಂದೂ ವಿಧ್ಯಾರ್ಥಿನಿಯರು ಬಳೆ ಧರಿಕೊಂಡು, ಬರುವುದು ತಲೆಗೆ ಹೂವು ಮುಡಿಯುವುದು ನಮ್ಮ ಅಮ್ಮನ ಕಾಲದಿಂದ  ಇಂದಿಗೂ ನಿಷಿದ್ಧವಾಗಿದೆಯಾದರೂ  ಇದರ ಬಗ್ಗೆ ಯಾವುದೇ ಆಕ್ಷೇಪವಿಲ್ಲದೇ ಹಿಂದೂಗಳು ಸಹಿತ ಯಾವುದೇ ವಿಧ್ಯಾರ್ಥಿನಿಯರೂ ವಿದ್ಯಾಭ್ಯಾಸ ಮಾಡುತ್ತಿರುವುದು ಇಲ್ಲಿ ಗಮನಾರ್ಹವಾಗಿದೆ. ಶಿಕ್ಷಣದ ವಿಚಾರಕ್ಕೆ ಬಂದಾಗ ಹಿಂದೂವಾಗಿರಲಿ, ಮುಸ್ಲಿಂ ಆಗಿರಲಿ ಕ್ರೈಸ್ತರಾಗಿರಲಿ ಶಾಲೆಯ ಶಿಸ್ತು ಮತ್ತು ನಿಯಮಗಳನ್ನು ಪಾಲನೆ ಮಾಡುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡಬೇಕೇ ಹೊರತು ಈ ರೀತಿಯ ಕ್ಷುಲ್ಲಕ ವಿಷಯದ ಗಮನ ಹರಿಸಿಕೊಂಡು ದಾರಿ ತಪ್ಪಬಾರದು.

ಈಗಾಗಲೇ ಖಾಸಗಿ ಕಂಪನಿಗಳ ಕಚೇರಿಯಲ್ಲಿ ನಮಾಜ್ ಗೆ ಎಂದು ಒಂದು ಕೊಠಡಿಯನ್ನು ಮೀಸಲಿಡುವ ಅಲಿಖಿತ ನಿಯಮವಿದ್ದು ರಂಜಾನ್ ಸಮಯದಲ್ಲಿೆ ಎಲ್ಲರೂ ಮುಖ ತೊಳೆದು ಕೊಳ್ಳುವ ಸಿಂಕ್ ನಲ್ಲಿ ತಮ್ಮ ಕಾಲನ್ನು ಇಟ್ಟು ತೊಳೆಯುವ ಅಸಹ್ಯಕರವನ್ನು ಹಿಂದೂಗಳು ಸಹಿಸಿಕೊಂಡು ಹೋಗುತ್ತಿರುವುದು ಸುಳ್ಳೇನಲ್ಲ. ಇಂದು ಹಿಜಾಬ್ ಹೆಸರಲ್ಲಿ ಶಾಲೆಯ ನಿಯಮಕ್ಕೆ ಸೆಡ್ಡು ಹೊಡೆದವರು, ಮುಂದೆ ಸರ್ಕಾರಿ ಕಚೇರಿ, ಕಾಲೇಜು, ಆಸ್ಪತ್ರೆ ಹೀಗೆ ಎಲ್ಲೆಂದರಲ್ಲಿ ತಮ್ಮ ಧರ್ಮದ ಆಚರಣೆಗೆ ಅವಕಾಶ ಬೇಕೆನ್ನುವುದಲ್ಲದೇ,  ಆಕಸ್ಮಾತ್ ಮುಸ್ಲಿಂ ಮಹಿಳೆ ಪೋಲೀಸ್ ಇಲಾಖೆಯಲ್ಲಿಯೂ ಸಮವಸ್ತ್ರದ ಬದಲು ಹಿಜಬ್/ಬುರ್ಕಾ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಲೂ ಬಹುದು.

1947ರಲ್ಲಿ ಈ ದೇಶ ಧರ್ಮಾಧಾರಿತವಾಗಿ ಇಬ್ಭಾಗವಾದರೂ ಈ ದೇಶದ ಮಹಾತ್ಮ ಎನಿಸಿಕೊಂಡವರ ದೂರದೃಷ್ಟಿಯ ಕೊರತೆಯಿಂದಾಗಿ ರಾಷ್ಟ್ರ ಗೀತೆಯಾಗಿ ವಂದೇಮಾತರಂ ಬದಲಾಗಿ ಜನಗಣಮನ, ಕೇಸರಿ ಧ್ವಜದ ಬದಲಾಗಿ ಮೂರು ಧರ್ಮದವರನ್ನು ಸಂತೃಷ್ಟಿ ಗೊಳಿಸುವ ಸಲುವಾಗಿ ತ್ರಿವರ್ಣ ಧ್ವಜ ತಂದಿದ್ದಲ್ಲದೇ, ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತರಿಗಿಂಗಲೂ ಅಧಿಕ ಹಕ್ಕನ್ನು ನೀಡಿದ್ದರ ಫಲವನ್ನು ಇಂದು ಅನುಭವಿಸುವಂತಾಗಿದೆ. . ಇತ್ತೀಚೆಗೆ ಓದಿದಂತೆ,  ಬಹುಸಂಖ್ಯಾತರ ಮೇಲೆ ಅಲ್ಪ ಸಂಖ್ಯಾತರು ಸವಾರಿ ಮಾಡುವಂತಹ ಏಕೈಕ ದೇಶವಿದ್ದರೆ ಅದು ಭಾರತ ದೇಶ ಎಂಬುದಕ್ಕೆ ಈ ಪ್ರಕರಣ ಜ್ಚಲಂತ ಉದಾಹರಣೆಯಾಗಿದೆ.

ಸರ್ಕಾರೀ ಶಾಲೆಯಲ್ಲಿ ಎಲ್ಲಾ ಧರ್ಮದ ಮಕ್ಕಳೂ ಓದುತ್ತಾರೆ ಹಾಗಾಗಿ ಸಮಾನತೆ ಮುಖ್ಯವೆಂದು, ಶಾಲೆಗಳಲ್ಲಿ ತಲತಲಾಂತರಗಳಿಂದ  ರೂಢಿಯಲ್ಲಿದ್ದ ಸರಸ್ವತಿ ಪೂಜೆಯನ್ನು ನಿಲ್ಲಿಸಲಾಯಿತು. ಶಾಲಾ ಪಠ್ಯದಲ್ಲಿದ್ದ ಅದೆಷ್ಟೋ ಭಾರತದ ಇತಿಹಾಸಗಳನ್ನು ಅವು ಹಿಂದೂ ಧರ್ಮದ ಭಾಗ ಎನ್ನುವ ಕಾರಣಕ್ಕಾಗಿ ತೆಗೆದು  ಹಾಕಲಾಯಿತು. ಹಿಂದೂ ಗುರುಕುಲ, ಸಂಸ್ಕೃತ ವಿಶ್ವವಿದ್ಯಾನಿಲಯಗಳ ಬಗ್ಗೆ ಆಕ್ಷೇಪ  ವ್ಯಕ್ತಪಡಿಸಲಾಯಿತು. ಅದರೆ ಅದೇ ಸರ್ಕಾರೀ ಖರ್ಚಿನಲ್ಲೇ ಮುಸಲ್ಮಾನರ ಧಾರ್ಮಿಕ ಶಿಕ್ಷಣಕ್ಕಾಗಿಯೇ ಮದರಸ ನಿರ್ಮಿಸಲು  ಅವಕಾಶ ಕಲ್ಪಿಸಿಕೊಡಲಾಗಿರುವ  ಕಾರಣ, ಈ ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಶಿಕ್ಷಣಕ್ಕಿಂತ ಹಿಜಬ್ ಪ್ರಮುಖವಾದಲ್ಲಿ ಅದೇ ಮದರಸಾ ಶಾಲೆಗಳಲ್ಲಿ ಕಲಿಯುವುದು ಸೂಕ್ತವೆನಿಸುತ್ತದೆ.

ಇಂದಿನ ಮಕ್ಕಳೇ ನಾಳಿನ ದೇಶದ ಸತ್ಪ್ರಜೆಗಳು ಎಂಬುದನ್ನು ಮರೆತು  ಕೆಲವು ಪಟ್ಟ ಭಧ್ರ ಹಿತಾಸಕ್ತಿ ಜನರ  ರಾಜಕೀಯ ತೆವಲುಗಳಿಗೆ ಈ ಅಮಾಯಕ ಮಕ್ಕಳಿಗೆ ಧರ್ಮದ ಅಫೀಮನ್ನು ತಿನ್ನಿಸಿ ಈ ರೀತಿಯಾಗಿ ದೇಶ ವಿರೋಧಿಗಳನ್ನಾಗಿ ಮಾಡುತ್ತಿರುವವರನ್ನು ಧಿಕ್ಕರಿಸಲೇ ಬೇಕಾಗಿದೆ. ರಾಷ್ಟ್ರದ ಐಕ್ಯತೆಗೆ ಧಕ್ಕೆ ತರುತ್ತಿರುವ ಇಂತಹ ಷಡ್ಯಂತ್ರವನ್ನು ಚಿಗುರಿನಲ್ಲಿಯೇ ಚಿವುಟಿ ಹಾಕುವ ಮೂಲಕ ದೇಶ ಮತ್ತು ಧರ್ಮವನ್ನು ಎಲ್ಲೆಲ್ಲಿಎಷ್ಟರ ಮಟ್ಟಿಗೆ ಸರಿದೂಗಿಸಿಕೊಂಡು ಹೋಗಬೇಕೆನ್ನುವುದನ್ನು ಇಂದಿನ ಮಕ್ಕಳಿಗೆ ತಿಳಿಸಿಕೊಡಬೇಕಾಗಿರುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವಾಗಿದೆ.

ಏನಂತೀರಿ?

ನಿಮ್ಮವನೇ ಉಮಾಸುತ

ಟೀ.. ಚಾಯ್… ಕಾಪೀ.. ಕಾಪೀ…

co2

ರಾಜಮಂಡ್ರಿಯಲ್ಲಿ ನಡೆಯಲ್ಲಿದ್ದ ತಮ್ಮ ಸ್ನೇಹಿತರ ಮಗಳ ಮದುವೆಯಲ್ಲಿ ಭಾಗವಹಿಸಲು ರಾಯರು ತಮ್ಮ ಪತ್ನಿಯ ಜೊತೆ ವಿಶಾಖಪಟ್ಟಣಂನಿಂದ ಜನ್ಮಭೂಮಿ ರೈಲನ್ನು ಬೆಳ್ಳಂಬೆಳಗ್ಗೆ ಹತ್ತುತ್ತಾರೆ. ಬೆಳ್ಳಬೆಳಿಗ್ಗೆ ಎದ್ದಿದ್ದು ಮತ್ತು ಮುಂಜಾನೆಯ ತಂಗಾಳಿಯು ಬೀಸುತಿದ್ದರಿಂದ ಹಾಗೇ ಜೊಂಪು ಹತ್ತಿದ್ದೇ ಗೊತ್ತಾಗದೇ ರೈಲು ಟುನಿ ನಿಲ್ದಾಣದಲ್ಲಿ ಟೀ.. ಚಾಯ್… ಕಾಪೀ.. ಕಾಪೀ… ಎಂದು ಕಾಫೀ ಮಾರಿಕೊಂಡು ಬಂದ ವ್ಯಾಪಾರಿಯ ಶಬ್ಧದಿಂದಾಗಿ ಎಚ್ಚರವಾಗಿ ಎರಡು ಕಪ್ ಕಾಫಿ ಕೊಡಪ್ಪಾ ಎಂದು ಕೇಳಿ ಪಡೆಯುತ್ತಾರೆ.

ಒಂದು ಕಪ್ಪನ್ನು ತಮ್ಮ ಮಡದಿಗೆ ಕೊಟ್ಟು ಮತ್ತೊಂದು ಕಪ್ಪಿನ‌ ಕಾಫಿಯ ಒಂದು ಗುಟುಕನ್ನು ಸವಿದು ಕಾಫಿಯ ಘಮಲು ಬಹಳ ಚೆನ್ನಾಗಿದ್ದರಿಂದ ಅವನನ್ನು ಹಾಗೆಯೇ ಅಭಿನಂದಿಸಿ ಎಷ್ಟಪ್ಪಾ ಕೊಡಬೇಕು? ಎಂದು ಕೇಳುತ್ತಾರೆ. ಆಗ ಆ ಕಾಫೀ ಮಾರುವವನು ಸರ್ 20 ರೂಪಾಯಿಗಳನ್ನು ಕೊಡಿ ಎಂದಾಗ, ತಮ್ಮ ಪರ್ಸಿನಿಂದ 200 ರೂಪಾಯಿಯ ನೋಟೊಂದನ್ನು ಆತನಿಗೆ ಕೊಡುತ್ತಾರೆ.

cof4

ಸರ್ ಚಿಲ್ಲರೇ ಇಲ್ಲವೇ? ಎಂದು ಕೇಳಿ, ತನ್ನ ಕೈನಿಂದ ಕಾಫಿಯ ಕೆಟಲನ್ನು ಇಳಿಸಿ ಚಿಲ್ಲರೆಗಾಗಿ ಶರ್ಟಿನ ಜೇಬನ್ನೆಲ್ಲಾ ತಡಗಾಡುವ ಸಮಯದಲ್ಲಿ ರೈಲು ಹೊರಡಲು ಅನುವಾದಾಗ, ಲಗುಬಗನೇ ಚಿಲ್ಲರೆಯನ್ನು ಕೊಡದೆಯೇ ಚಲಿಸುತ್ತಿದ್ದ ರೈಲನಿಂದ ಇಳಿದು ಕಿಟಕಿಯಿಂದ ಚಿಲ್ಲರೆ ಕೊಡಲು ಪ್ರಯತ್ನಿಸಿದನಾದರೂ, ಇವರ ಬೋಗಿ ಇಂಜಿನ್ನಿನ ಪಕ್ಕದಲ್ಲೇ ಇದ್ದ ಕಾರಣ ಚಿಲ್ಲರೆಯನ್ನು ಪಡೆದುಕೊಳ್ಳಲು ರಾಯರಿಗೆ ಸಾಧ್ಯವಾಗಲಿಲ್ಲ. ಕಾಫೀ ಚಟದ ನೆಪದಲ್ಲಿ ಚಿಲ್ಲರೆ ಇದೆಯೋ ಎನ್ನುವುದನ್ನೂ ಗಮನಿಸದೇ ಅನ್ಯಾಯವಾಗಿ ಬೆಳ್ಳಂಬೆಳಿಗ್ಗೆಯೇ 180 ರೂಪಾಯಿಗಳನ್ನು ಕಳೆದುಕೊಂಡನಲ್ಲಾ ಎಂದು ತಮ್ಮನ್ನೇ ತಾವು ಹಳಿದುಕೊಳ್ಳುತ್ತಾರೆ.

ಕಾಫೀ ಕುಡಿಯುತ್ತಲೇ ಇದನ್ನೆಲ್ಲಾ ಗಮನಿಸುತ್ತಿದ್ದ ರಾಯರ ಮಡದಿ, ಇಷ್ಟು ವಯಸ್ಸಾಗಿ ಅನುಭವ ಪಡೆದಿದ್ದರೂ, ಈ ರೀತಿಯಾಗಿ ದುಡ್ಡನ್ನು ಕಳೆದುಕೊಂಡಿರಲ್ಲಾ. ಕಾಫಿ ಕುಡಿಯುವ ಮೊದಲೇ ಹಣವನ್ನೇಕೆ ಕೊಡಬೇಕಿತ್ತು ಎಂದು ಮೂದಲಿಸಿದಾಗ, ಹೇ ಇದರಲ್ಲಿ ನನ್ನದು ಮತ್ತು ಅವನದ್ದೇನೂ ತಪ್ಪಿಲ್ಲ. ಆತ ಬೇಕೇಂದೇನೂ ಚಿಲ್ಲರೇ ಕೊಡದೇ ಓಡಿ ಹೋಗಲಿಲ್ಲ. ರೈಲು ವೇಗವಾಗಿ ಚಲಿಸಿದ ಕಾರಣ ಹೀಗಾಯಿತು. 180 ರೂಪಾಯಿಗಳೇನು ಹೆಚ್ಚಿನ ನಷ್ಟವೇನಿಲ್ಲ ಎಂದು ಸಮಜಾಯಿಸಿ ಕೊಡಲು ಪ್ರಯತ್ನಿಸುತ್ತಾರೆ.

ಆದರೆ ಗಂಡನ ತಪ್ಪನ್ನು ಸದಾಕಾಲವು ಎತ್ತಿ ಆಡಲು ಸಿದ್ಧವಿರುವ ಪತ್ನಿಯರಂತೆ ರಾಯರ ಪತ್ನಿಯೂ ನಮ್ಮ ಹತ್ತಿರ ಪೈಸೆ ಪೈಸೆಗೂ ಲೆಖ್ಖಾ ಕೇಳುತ್ತೀರಿ. ಹೀಗೆ ಹೊರಗೆಲ್ಲೋ ಕಳೆದುಕೊಳ್ಳುತ್ತೀರಿ. ಬೆಳಗಿನಿಂದ ಹತ್ತಾರು ರೈಲುಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ವ್ಯಾಪಾರಂ ದ್ರೋಹ ಚಿಂತನಂ ಎನ್ನುವಂತೆ ಪ್ರತಿಯೊಂದು ರೈಲಿನಲ್ಲಿಯೂ ನಿಮ್ಮಂತಹ ಹತ್ತಾರು ಬಕರಾಗಳು ಸಿಕ್ಕರೂ ಸಾಕು ಅವನಿಗೆ ಕಾಫೀ ಮಾರಿದ ಹಣಕ್ಕಿಂತಲೂ ಹೆಚಿನ ಹಣವನ್ನು ಸಂಪಾದಿಸಿಬಿಡುತ್ತಾನೆ ಎಂದು ಕುಹಕವಾಡುತ್ತಾರೆ.

ನೋಡಮ್ಮಾ ನಾವು ಜನರನ್ನು ನಂಬಬೇಕು, ರೈಲು ಇದ್ದಕ್ಕಿದ್ದಂತೆಯೇ ಆರಂಭವಾದರೆ ಅವನು ತಾನೇ ಏನು ಮಾಡಬಲ್ಲ? ಅವನು ನಮ್ಮ ಹಣದಲ್ಲಿ ಎಷ್ಟು ದಿನ ತಾನೇ ಬದುಕುತ್ತಾನೆ? ಎಂದು ಶಾಂತ ಚಿತ್ತದಲ್ಲಿ ರಾಯರು ಹೇಳುತ್ತಿದ್ದರೆ, ಅವರ ಪತ್ನಿ ದಿನಕ್ಕೆ ನಿಮ್ಮಂತಹ ನಾಲ್ಕು ಜನರು ಸಿಕ್ಕರೆ ಸಾಕು ಅವರು ಚೆನ್ನಾಗಿಯೇ ಬದುಕುತ್ತಾನೆ ಎಂದು ದುರುಗುಟ್ಟಿ ನೋಡುತ್ತಾರೆ.

ಅಲ್ಲಿಂದ ಮುಂದೆ ರೈಲು ವೇಗವಾಗಿ ಹೋಗುತ್ತಾ ನೋಡ ನೋಡುತ್ತಿದ್ದಂತೆಯೇ, ಮುಂದಿನ ನಿಲ್ದಾಣವಾದ ಅಣ್ಣಾವರಂ ದಾಟಿದರೂ ರಾಯರ ಮಡದಿಯ ಬುಸುಗುಟ್ಟುವಿಕೆ ಕಡಿಮೆ ಯಾಗಿರಲಿಲ್ಲ. ಎಲ್ಲಿಯವರೆಗೂ ನಿಮ್ಮಂತಹ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೂ ಮೋಸ ಮಾಡುವವರು ಇರುತ್ತಲೇ ಇರುತ್ತಾರೆ. ನೀವು ಸುಖಾ ಸುಮ್ಮನೇ ಎಲ್ಲರನ್ನೂ ನಂಬಿ ಮೋಸಹೋಗುತ್ತೀರಿ ಎಂದು ಹೇಳುತ್ತಲೇ ಹೋದರೂ ರಾಯರು ಬಿಡು ಮಾರಾಯ್ತೀ, ಅವರು ಬಡವರು! ನಮ್ಮ ಹಣದಿಂದ ಅರಮನೆಯನ್ನೇನು ಕಟ್ಟಲು ಸಾಧ್ಯವೇ? ಎಂದು ಸಮಾಧಾನಪಡಿಸಲು ಪ್ರಯತ್ನಿಸುತ್ನಿಸಿದರಾದರು ಆಕೆಯ ಕೋಪ ಇನ್ನೂ ಇಳಿದಿರಲಿಲ್ಲ. ಅಷ್ಟರಲ್ಲಿ ಇಡೀ ಬೋಗಿ ತುಂಬಿಕೊಂಡು ಅನೇಕರು ನಿಂತು ಕೊಂಡು ಪ್ರಯಾಣಿಸುವಷ್ಟು ಭರ್ತಿಯಾಗಿತ್ತು.

ರಾಯರು ಕಿಟಕಿಯಿಂದ ರೈಲಿನೊಂದಿಗೆ ಓಡುತ್ತಿರುವಂತೆ ಭಾಸವಾಗುತ್ತಿದ್ದ ಗಿಡಮರಗಳನ್ನೂ ಮತ್ತು ಹೊಲ ಗದ್ದೆಗಳನ್ನು ನೋಡುತ್ತಾ ದುಃಖವನ್ನು ಮರೆಯಲು ಪ್ರಯತ್ನಿಸುತ್ತಿದ್ದರೆ, ಅಕ್ಕ ಪಕ್ಕದ ಸಹ ಪ್ರಯಾಣಿಕರು ಇವರನ್ನು ಕಂಡು ಅವರವರ ಭಾವಕ್ಕೆ ತಕ್ಕಂತೆ ಊಹಿಸಿಕೊಂಡು ರಾಯರನು ಮೌಲ್ಯಮಾಪನ ಮಾಡುತ್ತಿದ್ದರು. ಕೆಲವರು ರಾಯರನ್ನು ಮೂರ್ಖರೆಂದು ಭಾವಿಸುತ್ತಿದ್ದರೆ ಇನ್ನೂ ಕೆಲವರು ಸಹಾನುಭೂತಿ ಮತ್ತು ಕರುಣೆಯಿಂದ ನೋಡುತ್ತಿದ್ದರು. ಇನ್ನೂ ಕೆಲವರು ಗಂಡ ಹೆಂಡತಿಯ ಮುನಿಸನ್ನು ಕಂಡು ಉಚಿತ ಮನರಂಜನೆಯನ್ನು ಪಡೆದುಕೊಳ್ಳುತ್ತಿದ್ದರು.

cof5

ರೈಲು ಪೀತಾಪುರದ ಹೊರವಲಯವನ್ನು ತಲುಪುವ ಹೊತ್ತಿಗೆ, ಎಲ್ಲರೂ ಆ ಘಟನೆಯನ್ನು ಮರೆತು ತಮ್ಮ ತಮ್ಮ ಪಾಡಿಗೆ ಇರುವಾಗಲೇ, ಅಷ್ಟು ಜನರ ಮಧ್ಯೆ ಒಬ್ಬ ಚಿಗುರು ಮೀಸೆಯ ಹದಿ ಹರೆಯದ ಹುಡುಗ ಟೀ.. ಚಾಯ್… ಕಾಪೀ.. ಕಾಪೀ… ಎನ್ನುತ್ತಲೇ, ರಾಯರ ಬಳಿ ಬಂದು “ಸರ್, ಎರಡು ಕಾಫಿ ಖರೀದಿಸಿ 200 ರೂಪಾಯಿ ನೋಟು ಕೊಟ್ಟಿದ್ದು ನೀವೇನಾ? ಎಂದಾಗ, ರಾಯರು ಒಂದು ಕ್ಷಣ ಆನಂದಿತರಾದರೂ, ಅರೇ ನನಗೆ ಕಾಫಿ ಕೊಟ್ಟಿದ್ದು ವಯಸ್ಸಾದ ವ್ಯಕ್ತಿಯಲ್ಲವೇ? ಈತನಲ್ಲ ಎಂದೆನಿಸಿದರೂ, ಹೌದಪ್ಪಾ, ನಾನೇ 200 ರೂಪಾಯಿ ನೋಟೊಂದನ್ನು ಕಾಫಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ನೀಡಿ ಚಿಲ್ಲರೆ ಸ್ವೀಕರಿಸುವ ಮುನ್ನವೇ ರೈಲು ಹೊರಟು ಹೋಯಿತು ಎಂದು ಹೇಳುತ್ತಾರೆ.

ಅದು ಸರೀ, ಸ್ವಾಮೀ, ಟುನಿ ನಿಲ್ದಾಣದಲ್ಲಿ ಕಾಫಿ ಕುಡಿದ ವ್ಯಕ್ತಿನೀವೇನಾ? ಎಂದು ಮತ್ತೊಮ್ಮೆ ಆ ಹುಡುಗ ಕೇಳಿದಾಗ, ನಾನು ಯಾಕೆ ಸುಳ್ಳು ಹೇಳಲೀ? ಬೇಕಾದರೆ ಇವರೆಲ್ಲರನ್ನೂ ಕೇಳು ಎಂದು ಅಕ್ಕ ಪಕ್ಕದವರತ್ತ ಕೈ ತೋರಿಸುತ್ತಾರೆ.

ಇಲ್ಲ! ಇಲ್ಲ ಸ್ವಾಮೀ! ನಾನು ನಿನ್ನನ್ನು ಅನುಮಾನಿಸುತ್ತಿಲ್ಲ ಆದರೆ ನಾನು ಚಿಲ್ಲರೆ ಕೊಡ ಬೇಕಾದ ವ್ಯಕ್ತಿ ನೀವೇನಾ? ಎಂದು ಖಚಿತ ಪಡಿಸಿಕೊಳ್ಳಲು ನಿಮ್ಮನ್ನು ಪದೇ ಪದೇ ಕೇಳಿದೆ ಕ್ಷಮಿಸಿ ಎಂದು ಹೇಳುತ್ತಾ ತನ್ನ ಜೇಬಿನಿಂದ 180 ರೂಪಾಯಿಗಳ ಚಿಲ್ಲರೆಯನ್ನು ತೆಗೆದು ರಾಯರ ಕೈಗಿಡುತ್ತಾನೆ

ರಾಯರಿಗೆ ಒಂದು ಕಡೇ ಸಂತೋಷ ಮತ್ತೊಂದು ಕಡೆ ಆಶ್ಚರ್ಯದಿಂದ ನೀನು ಯಾರಪ್ಪಾ? ಎಂದು ಕೇಳಿದರು. ಸ್ವಾಮೀ ನಾನು ಅವರ ಮಗ. ಟುನಿ ನಿಲ್ಡಾಣದಲ್ಲಿ ರೈಲು ಹೆಚ್ಚಿನ ಹೊತ್ತು ನಿಲ್ಲದ ಕಾರಣ, ಪ್ರತಿ ದಿನವೂ ಈ ರೀತಿಯ ಒಂದು ಅಥವಾ ಎರಡು ಘಟನೆಗಳು ಟುನಿ ನಿಲ್ದಾಣದಲ್ಲಿ ನಡೆಯುತ್ತವೆ. ಚಿಲ್ಲರೆ ಕೊಡುವಾಗ ಇಲ್ಲವೇ ಪಡೆಯುವಾಗ ರೈಲು ಪ್ರಾರಂಭವಾಗುತ್ತದೆ. ಎಷ್ಟೋ ಬಾರಿ ನಾವು ಸಹಾ ಹಣವನ್ನೂ ಕಳೆದುಕೊಳ್ಳುತ್ತೇವೆ.

ಅದಕ್ಕಾಗಿಯೇ, ನಾನು ಸಹಾ ಅದೇ ರೈಲಿನಲ್ಲಿ ಕಾಫೀ ಟೀ ಮಾರುತ್ತಾ ಇರುತ್ತೇನೆ. ನಮ್ಮ ತಂದೆ ರೈಲಿನಿಂದ ಇಳಿದ ನಂತರ ನನಗೆ ಕರೆ ಮಾಡಿ ಚಿಲ್ಲರೆ ಕೊಡಬೇಕಾದ ವಿವರ ವ್ಯಕ್ತಿಯ ವಿವರದ ಜೊತೆಗೆ ಭೋಗಿ ಮತ್ತು ಸೀಟ್ ವಿವರಗಳನ್ನು ತಿಳಿಸುತ್ತಾರೆ. ನಾನು ಹಾಗೆಯೇ ಕಾಫೀ, ಟೀ ಮಾರುತ್ತಲೇ ಬೋಗಿಯಿಂದ ಬೋಗಿಯಾನ್ನು ದಾಟುತ್ತಾ. ಚಿಲ್ಲರೆಯನ್ನು ಕೊಟ್ಟು ಮುಂದಿನ ನಿಲ್ದಾಣದಲ್ಲಿ ಇಳಿದು ಮತ್ತೊಂದು ರೈಲಿನಲ್ಲಿ ಪುನಃ ಟುನಿಗೆ ಮರಳುತ್ತೇನೆ. ನಮಗೆ ಬೇರೆಯವರು ದುಡ್ಡು ಕೊಡದಿದ್ದರೂ ಪರವಾಗಿಲ್ಲ. ಆದರೆ ನಾವು ಬೇರೆಯವರ ಹಣದ ಋಣದಲ್ಲಿ ಇರಬಾರದು ಎಂದು ನಮ್ಮ ತಂದೆ ನಂಬಿರುವ ಕಾರಣ, ನಾವಿಬ್ಬರೂ ಈ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ ಎನ್ನುತ್ತಾ, ಸರಿ ಸಾರ್ ನಾನು ಬರುತ್ತೇನೆ ಎನ್ನುತ್ತಾನೆ.

ಅವನ ಉತ್ತರಿಂದ ಆಶ್ಚರ್ಯಚಕಿತರಾದ ರಾಯರು ಏನಪ್ಪಾ ನೀನು ಓದುತ್ತಿಲ್ಲವೇ? ಎಂದಾಗ, ಹೌದು ಸಾರ್, ನಾನು ಹತ್ತನೇ ತರಗತಿಯನ್ನು ಓದುತ್ತಿದ್ದೇನೆ, ನಾನು ಬೆಳಿಗ್ಗೆ ಅಪ್ಪನೊಂದಿಗೆ ಈ ರೀತಿಯಾಗಿ ಸಹಾಯ ಮಾಡಿದರೆ, ನನ್ನ ಅಣ್ಣ ಮಧ್ಯಾಹ್ನ ತಂದೆಗೆ ಸಹಾಯ ಮಾಡುತ್ತಾನೆ ಎಂದು ಹೇಳಿದಾಗ, ಇಂತಹ ಸಂಸ್ಕಾರವನ್ನು ಕಲಿಸಿರುವ ನಿಮ್ಮ ತಂದೆಯೊಂದಿಗೆ ಮಾತನಾಡ ಬೇಕು ಎನಿಸಿದೆ, ದಯವಿಟ್ಟು ಕರೆ ಮಾಡಿಕೊಡುವೆಯಾ? ಎಂದು ಹೇಳಿದಾಗ ಆ ಹುಡುಗ ಬಹಳ ಮುಜುಗರದಿಂದಲೇ ತನ್ನ ತಂದೆಗೆ ಕರೆ ಮಾಡಿ ಮೊದಲು ಚಿಲ್ಲರೆ ಕೊಟ್ಟ ವಿಷಯವನ್ನು ತಿಳಿಸಿ, ನಂತರ ರಾಯರು ಅವರೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ಹೇಳಿ ಫೋನನ್ನು ರಾಯರ ಕೈಗಿಡುತ್ತಾನೆ.

ಸ್ವಾಮೀ, ನಿಮ್ಮ ಮಗ 200 ರೂ.ಗಳ ನೋಟಿಗೆ ಚಿಲ್ಲರೆ ಕೊಟ್ಟಿದ್ದಾನೆ. ನಿಮ್ಮೀ ಪ್ರಾಮಾಣಿಕತೆಗೆ ನಾನು ಮೆಚ್ಚುಗೆಯನ್ನು ವ್ಯಕ್ತಪಡಿಸುವ ಸಲುವಾಗಿ ನಾನು ನಿಮ್ಮೊಂದಿಗೆ ಮಾತನಾಡಲು ಇಚ್ಚಿಸಿದೆ. ನೀವು ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ಅವರಲ್ಲಿ ಪ್ರಾಮಾಣಿಕತೆ ಮತ್ತು ಜೀವನದ ಮೌಲ್ಯಗಳನ್ನು ಕಲಿಸಿಕೊಟ್ಟಿರುವುದು ನನಗೆ ನನಗೆ ತುಂಬಾ ಸಂತೋಷವಾಗಿದೆ. ಹಾಗಾಗಿ ನಾನು ನಿಮ್ಮ ಇಡೀ ಕುಟುಂಬವನ್ನು ಅಭಿನಂದಿಸುತ್ತೇನೆ ಎನ್ನುತ್ತಾರೆ.

ಸರ್ ನಿಮ್ಮೀ ಅಭಿಮಾನಕ್ಕೆ ತುಂಬಾ ಸಂತೋಷವಾಗುತ್ತದೆ. ನಾನು ಕೇವಲ ಐದನೇ ತರಗತಿಯವರೆಗೆ ಮಾತ್ರ ಓದಿರಬಹುದು ಆದರೆ ಆ ದಿನಗಳಲ್ಲಿ ಶಿಕ್ಷಣದ ಜೊತೆಗೆ ನೈತಿಕತೆ ಮತ್ತು ಜೀವನದ ಮೌಲ್ಯಗಳನ್ನು ಪಂಚತಂತ್ರ ಸಣ್ಣ ಸಣ್ಣ ಕಥೆಗಳ ಮೂಲಕ ನಮಗೆ ಕಲಿಸಿಕೊಡಲಾಗುತ್ತಿತ್ತು. ಪಠ್ಯಪುಸ್ತಕಗಳಲ್ಲಿಯೂ ಸಹ ಪ್ರಾಮಾಣಿಕತೆ ಮತ್ತು ಸಮಗ್ರತೆಯಂತಹ ಮೌಲ್ಯಗಳನ್ನು ಬಲಪಡಿಸುವಂತಹ ವಿಷಯಗಳನ್ನು ಹೊಂದಿದ್ದವು ಆದರಿಂದಗಿಯೇ ನಮಗೆ ಒಳ್ಳೆಯದು ಮತ್ತು ಕೆಟ್ಟದ್ದು, ಸರಿ ಮತ್ತು ತಪ್ಪುಗಳ ವ್ಯತ್ಯಾಸ ತಿಳಿಯುವುದರಲ್ಲಿ ಸಹಕಾರಿಯಾಗಿದೆ. ಆ ತತ್ವಗಳೇ ಇಂದಿಗೂ ನಮಗೆ ಪ್ರಾಮಾಣಿಕ ಜೀವನ ನಡೆಸಲು ಮಾರ್ಗದರ್ಶನ ನೀಡುತ್ತಿದೆ. ದುರಾದೃಷ್ಟವಶಾತ್ ಇಂದಿನ ಶಾಲೆಗಳ ಶಿಕ್ಷಣದಲ್ಲಿ ಅಂತಹ ಮೌಲ್ಯಗಳನ್ನು ಕಲಿಸಿಕೊಡುತ್ತಿಲ್ಲ. ಜೀವನದ ಮೌಲ್ಯಕ್ಕಿಂತಲು ಅಂಕಗಳ ಬೆನ್ನೆತ್ತಿ ಹೋಗುತ್ತಿರುವುದು ನಿಜಕ್ಕೂ ಬೇಸವಾಗುತ್ತಿದೆ.

ನನ್ನ ಮಕ್ಕಳು ಮನೆಯಲ್ಲಿ ಓದುತ್ತಿದ್ದಾಗ, ಅದನ್ನು ಕೇಳಿಸಿಕೊಂಡಿದ್ದೇನೆ. ಅವರ ಪಠ್ಯಕ್ರಮದಲ್ಲಿ ನೈತಿಕ ಕಥೆಗಳು, ಸ್ಫೂರ್ತಿದಾಯಕ ಕವನಗಳು, ಪಂಚತಂತ್ರ, ರಾಜರತ್ನಂ ಅವರ ಮಕ್ಕಳ ಕಥೆಗಳ ಬದಲಾಗಿ, ಮೌಲ್ಯವಿಲ್ಲದ ಗೊಡ್ಡು ವಿಷಯಗಳನ್ನು ಕಲಿಯುತ್ತಿರುವುದನ್ನು ಗಮನಿಸಿದ್ದೇನೆ. ಅದಕ್ಕಾಗಿಯೇ ನನಗೆ ತಿಳಿದಿರುವ ಕೆಲವು ಮೌಲ್ಯಗಳನ್ನು ಕಲಿಸಿಕೊಡುವ ಸಲುವಾಗಿ ನಾನು ಈ ರೀತಿಯ ಸರಳ ಕಾರ್ಯಗಳನ್ನು ಅವರಿಂದ ಮಾಡಿಸುತ್ತೇನೆ.

ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಆ ಕಾಫೀ ಮಾರಾಟಗಾರನ ದೂರದೃಷ್ಟಿ ಮತ್ತು ಅದನ್ನು ಅನೂಚಾನಾಗಿ ಪಾಲಿಸುತ್ತಿರುವ ಅವರ ಮಕ್ಕಳ ಕುರಿತಾಗಿ ಆಶ್ಚರ್ಯಚಕಿತರಾಗಿ ಅಭಿನಂದನಾಪೂರ್ವಕವಾಗಿ ಆ ಹುಡುಗನ ಬೆನ್ನನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೆಲ್ಲಾ ಗಮನಿಸುತ್ತಿದ್ದ ರಾಯರ ಮಡದಿ ಒಂದು ಕ್ಷಣ ಇಂಗು ತಿಂದ ಮಂಗನಂತಾದರೂ ನಂತರ ಸಾವರಿಸಿಕೊಂಡು ರಾಯರತ್ತ ಕ್ಷಮೆಯಾಚಿಸುವ ರೀತಿಯಲ್ಲಿ ದೇಶಾವರಿ ನಗೆ ಬೀರಿ ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ.

ಬಂದ ಕೆಲಸವನ್ನು ಮುಗಿಸಿಕೊಂಡ ಹುಡುಗ ಇದಾವುದಕ್ಕೂ ತಲೆ ಕೆಡಸಿಕೊಳ್ಳದೇ ತನ್ನ ಪಾಡಿಗೆ ತಾನು ರೈಲಿನಿಂದ ಇಳಿದು ಹೋಗುತ್ತಿದ್ದಂತೆಯೇ, ಮನಸ್ಸಿನಲ್ಲಿಯೇ ಆ ಹುಡುಗನ ಸಂಸ್ಕಾರಕ್ಕೆ ವಂದಿಸುತ್ತಾ, ಇಂತಹ ಕಲಿಯುಗದಲ್ಲೂ ಈ ರೀತಿಯ ಪ್ರಾಮಾಣಿಕರು ಸದಾಚಾರವನ್ನು ಪಾಲಿಸುತ್ತಿರುವುದರಿಂದಲೇ ಧರ್ಮವು ಇನ್ನೂ ಪ್ರವರ್ಧಮಾನಕ್ಕೆ ಬರುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಕೊಂಡು ನಿಟ್ಟುಸಿರು ಬಿಟ್ಟರೆ, ಅದುವರೆವಿಗೂ ಈ ಘಟನೆಯ ಬಗ್ಗೆ ತಲಾ ತಟ್ಟಿ ಮಾತನಾಡುತ್ತಿದ್ದ ಸಹಪ್ರಯಾಣಿಕರೂ ಮೂಗಿನ ಮೇಲೆ ಬೆರಳಿಟ್ಟುಕೊಂಡು ಗರ ಬಡಿದವರಂತೆ, ಈಗಲೂ ಇಂತಹ ಸಹೃದಯದವರು ಇದ್ದಾರೆಯೇ? ಎಂದು ಮಾತನಾಡಿಕೊಂಡರು.

ಇದೇ ಅಲ್ಲವೇ ನಮ್ಮ ಧರ್ಮ, ಇದನ್ನೇ ಅಲ್ಲವೇ ನಮ್ಮ ಹಿರಿಯರು ನಮಗೆ ಹೇಳಿ ಕೊಟ್ಟಿದ್ದು ಮತ್ತು ಇದನ್ನೇ ಅಲ್ಲವೇ ನಾವು ನಮ್ಮ ಮುಂದಿನ ಪೀಳಿಗೆಗೆ ಕಲಿಸಿ ಕೊಡಬೇಕಾಗಿರುವುದು.

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿ ಮತ್ತು ತೆಲುಗಿನ ಖ್ಯಾತ ಬರಹಗಾರಾದ ಶ್ರೀ ಜೆ.ಪಿ.ಶರ್ಮಾ ಅವರ ಲೇಖನವೊಂದರ ಭಾವಾನುವಾದವಾಗಿದೆ.

ಶಿಕ್ಷಣ

whatsapp-image-2019-10-22-at-7.25.46-am.jpegಇವತ್ತು ಬೆಳೆಗ್ಗೆ ಜಿಟಿ ಜಿಟಿ ಮಳೆ ಬೀಳ್ತಾ ಇದ್ದದ್ದರಿಂದ ಮುಂಜಾನೆಯ ವೃತ್ತ ಪತ್ರಿಕೆ ಎಲ್ಲಾ ಒದ್ದೆ ಮುದ್ದೆಯಾಗಿತ್ತು. ನನಗೆ ಒಂದು ಪಕ್ಷ ತಿಂಡಿ ತಿನ್ನೋದನ್ನ ಬಿಟ್ರೂ ಬೇಜಾರಿಲ್ಲ. ಆದರೆ ಬೆಳಗಿನ ಪೇಪರ್ ಓದದೇ ಹೋದ್ರೆ ಏನೋ ಕಳೆದು ಕೊಂಡ ಅನುಭವ. ಆಷ್ಟೆಲ್ಲ ಟಿವಿಯಲ್ಲಿ ವಾರ್ತೆಗಳನ್ನು ನೋಡಿದ್ರೂ, ಇಂಟರ್ನೆಟ್ಟಲ್ಲಿ ಸುದ್ದಿಗಳನ್ನು ಓದಿದ್ರೂ, ಪೇಪರ್ ಓದೋ ಮಜಾನೇ ಬೇರೆ. ಹಾಗೆ ಒದ್ದೆ ಆದ ಪೇಪರನ್ನು ಇಸ್ತ್ರಿಪೆಟ್ಟಿಗೆಯಲ್ಲಿ ಇಸ್ತ್ರಿ ಮಾಡಿಕೊಂಡು ಓದಲು ಪುಟ ತಿರುವು ಹಾಕುತ್ತಿದ್ದಂತೆಯೇ ಗಕ್ಕನೆ ಕಾಲೇಜಿನ ಏಳನೇ ಮಹಡಿಯಿಂದ ಜಿಗಿದು ಎಂಜಿನೆಯರಿಂಗ್ ವಿಧ್ಯಾರ್ಥಿ ಆತ್ಮಹತ್ಯೆ ಎನ್ನುವ ಸುದ್ದಿ ನೋಡಿ ಒಂದು ಕ್ಷಣ ಮನಸ್ಸಿಗೆ ದುಃಖವಾಗಿದ್ದಲ್ಲದೇ ಖೇದವೂ ಆಯಿತು. ಹಿಂದಿನ ದಿನ ನಮ್ಮ ಅಕ್ಕ ಒಬ್ಬ ಹಾಸ್ಟೆಲ್ನಲ್ಲಿ ಓದುತ್ತಿರುವ ಹುಡುಗನ ಹುಡುಗಾಟಿಕೆ ಇಲ್ಲವೇ ಧಾರ್ಮಿಕ ವಿಷಯದ ಪರಿಜ್ಞಾನ ಇಲ್ಲದೇ ಅಭಾಸಕ್ಕೊಳಗಾದ ವ್ಯಾಟ್ಯಾಪ್ ಸಂದೇಶ ಕಳುಹಿಸಿ, ಇದರ ಬಗ್ಗೆ ಹೆಚ್ಚಿಗೆ ಏನಾದರೂ ಬರೆಯಬಹುದಾ ಎಂದೂ ಹೇಳಿದ್ದೂ ನೆನಪಿಗೆ ಬಂದಾಗ ನನ್ನ ಮನಸ್ಸಿನಲ್ಲಾದ ತುಮುಲವೇ ಈ ಲೇಖನ.

ಅಕ್ಕ ಕಳುಹಿಸಿದ ಸಂದೇಶದ ಸಾರಾಂಶ ಹೀಗಿದೆ. ಅಪ್ಪಾ ಮತ್ತು ಅಮ್ಮಾ ಇಬ್ಬರೂ ಕೆಲಸಕ್ಕೆ ಹೋಗುವಂತಹ ಸ್ಥಿತಿವಂತರ ಕುಟುಂಬದ ಹಾಸ್ಟೆಲ್ಲಿನಲ್ಲಿ ಓದುತ್ತಿರುವ ಹೆಚ್ಚಿನ ಅಂಕ ಗಳಿಸುವ ಜಾಣ ಹುಡುಗ ತನ್ನ ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವ ಎಂದು ತನ್ನ ಊರಿಗೆ ಬಂದಿದ್ದ. ಯಥಾ ಪ್ರಕಾರ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವಷ್ಟೂ ಪುರುಸೊತ್ತಿಲ್ಲದ ಅಪ್ಪಾ ಅಮ್ಮ, ಮಗನಿಗೆ 501 ರೂಪಾಯಿಗಳನ್ನು ಕೊಟ್ಟು ಅವರ ಮನೆಯ ಹತ್ತಿರದಲ್ಲೇ ಇರುವ ರಾಯರ ಮಠದಲ್ಲಿ ಯಾವುದಾದರೂ ಸೇವೆ ಮಾಡಿಸಿಕೊಂಡು ಬರಲು ಹೇಳಿ ಕಳುಹಿಸಿದರು.

ಪೋಷಕರ ಆಜ್ಞೆಯ ಮೇರೆಗೆ ರಾಯರ ಮಠಕ್ಕೆ ಬಂದ ಹುಡುಗ ಮಠದ ಸೇವಾ ಶುಲ್ಕ ಪಟ್ಟಿ ಅವಲೋಕಿಸಿದ. ಅದು ಅವನಿಗೆ ಹೋಟೆಲ್ನಲ್ಲಿರುವ ಮೆನು ಕಾರ್ಡಿನಂತಯೇ ಭಾಸವಾಗಿ, ಎಡಗಡೆಯ ಪೂಜೆಗಳಿಗಿಂತ ಬಲಗಡೆಯಲ್ಲಿ ನಮೂದಿಸಿದ್ದ ಬೆಲೆಯ ಕಡೆಯೇ ಹರಿದಿತ್ತು ಅವನ ಚಿತ್ತ.

ರಥೋತ್ಸವ,1000 ರೂ.
ಕನಕಾಭೀಶೇಕ 5000ರೂ ಹೀಗೇ ನೋಡುತ್ತಾ ಹೋದಾಗ,
ಚಟಕ ಶ್ರಾದ್ಧ 501 ರೂ ಎಂದು ನಮೂದಿಸಿದ್ದು ಕಂಡು ತನ್ನ ಬಳಿ ಇದ್ದ 501 ರೂಪಾಯಿಗಳಿಗೆ ಇದೇ ಸರಿಯಾದ ಸೇವೆ ಎಂದು ಭಾವಿಸಿ, ಕೌಂಟರ್ಗೆ ಹೋಗಿ ಚಟಕ ಶ್ರಾದ್ಧ ಎಂದು ಹೇಳಿ receipt ಪಡೆದು , ಪುರೋಹಿತರ ಕರೆಗಾಗಿ ಕಾಯುತ್ತಾ ಕುಳಿತ.

ಸ್ವಲ್ಪ ಹೊತ್ತಿಗೆ ಆಚಾರ್ ಅವರು ಆತನನ್ನು ಕರೆದು ಅವನ ತಂದೆಯ ಶ್ರಾದ್ದ ಮಾಡಿಸಿ, ಭೂರಿ ಭೋಜನ ಮಾಡಿಸಿ, ಇವತ್ತು ರಾತ್ರಿ ಊಟ ಮಾಡಕೂಡದು ಎಂದು ತಿಳಿಸಿದರು.ಆವರ ಮಾತಿಗೆ ತಬ್ಬಿಬ್ಬದ ಹುಡುಗ , ಆಚಾರ್ರೇ ಇವೊತ್ತು ನನ್ ತಂದೆ ತಾಯಿಯ ವೆಡ್ಡಿಂಗ್ ಆನಿವರ್ಸರಿ, ರಾತ್ರಿ ಪಾರ್ಟಿಗೆ ಹೋಗ್ತಾ ಇದ್ದೀವಿ. ಬೇಗನೆ ಪ್ರಸಾದ ಕೊಡಿ ನಾನು ಮನೆಗೆ ಹೋಗ್ವೇಕು ಎಂದ.

ಹುಡುಗನ ಮಾತಿಗೆ ಆಚಾರ್ ಅವರು ಕಕ್ಕಾಬಿಕ್ಕಿಯಾಗಿ, ಏನಪ್ಪಾ ಹಾಸ್ಟೆಲ್ಲ್ಲಿ ಕಲಿತಾ ಇದ್ಯಾ ಎಂದು ಕೇಳಿ, ಹುಡುಗ ಹೂಂ ಎಂದ ಮೇಲೆ, ಪುಸ್ತಕದಿಂದ ಯಾವ ಜ್ಞಾನ ಪಡೀತೀಯೋ, ಅದಕ್ಕೂ ಹೆಚ್ಚು ಮುಖ್ಯ ಸಾಮಾನ್ಯ ಜ್ಞಾನ. ಇವತ್ತು ನಾನು ಮಾಡಿಸಿದ್ದು ನಿನ್ನ ತಂದೆ ತೀರಿದ ಮೇಲೇ ಮಾಡುವ ತಿಥಿ, ಇರಲಿ, ತಿಳಿಯದೆ ಆದ ಪ್ರಮಾದ, ಗುರುರಾಯರಿಗೆ ತಂದೆ ತಾಯಿಗಳಿಗೆ ಮನಸ್ಸಲ್ಲಿ ವಂದಿಸಿ ಕ್ಷಮಿಸಿ ಅಂತ ಕೇಳು ಎಂದು ತಿಳಿ ಹೇಳಿ, ಇನ್ನು ಮುಂದೆ ನಿಮ್ಮ ಹಿರಿಯರಲ್ಲಿ ಕೇಳಿ ಮನೆಯ ಆಚಾರ ವಿಚಾರ ಮತ್ತು ಸಂಪ್ರದಾಯಗಳನ್ನು ತಿಳಿದುಕೋ ಎಂದು ತಿಳಿಸಿ, ಈ ರೀತಿಯಾದ ಪ್ರಮಾದ ಆಗಿರುವುದನ್ನು ತಂದೆ ತಾಯಿಗೆ ಹೇಳಬೇಡ ಎಂದು ತಿಳಿಸಿ, ಅವನಿಗೆ ರಾಯರ ಪ್ರಸಾದ ಕೊಟ್ಟು ದೇವರು ನಿಮಗೆ ಒಳ್ಳೇದು ಮಾಡಲಿ ಎಂದು ಹಾರೈಸಿದರು ಎನ್ನುವುದು ಸಾರಾಂಶ.

ಹಿಂದೆಲ್ಲಾ ಈ ರೀತಿಯ ಅಭಾಸಗಳು ಆಗುವುದಕ್ಕೆ ಅವಕಾಶವೇ ಇರದಂತೆ ಮನೆಯೇ ಮೊದಲ ಪಾಠ ಶಾಲೆ, ತಂದೆ ತಾಯಿಯೇ ಮೊದಲ ಗುರುವಾಗುತ್ತಿದ್ದರು, ಇಲ್ಲವೇ ಬಹುತೇಕವಾಗಿ ಇರುತ್ತಿದ್ದ ಅವಿಭಕ್ತ ಕುಟುಂಬಳಲ್ಲಿ ಮನೆಯಲ್ಲಿರುವ ಹಿರಿಯರಾದ ಅಜ್ಜಿ ತಮ್ಮ ಮೊಮ್ಮಕ್ಕಳನ್ನು ತೊಡೆಯ ಮೇಲೆ ಕುಳ್ಳಸಿಕೊಂಡು ಅವರಿಗೆ ನಮ್ಮ ಪುರಾಣ ಪುರುಷರ ಕಥೆಗಳನ್ನು ಹೇಳುತ್ತಾ ಹಾಡು ಹಸೆಗಳನ್ನು ಹೇಳಿಕೊಡುತ್ತಿದ್ದರೆ , ತಾತ ಅವರ ಮೊಮ್ಮಕ್ಕಳಿಗೆ ಬಾಲ ಪಾಠಗಳನ್ನೂ, ಶ್ಲೋಕಗಳನ್ನು ಶಾಸ್ತ್ರ ಸಂಪ್ರದಾಯಗಳನ್ನೂ ವೀರ ಯೋಧರ, ಸ್ವಾತಂತ್ಯ್ರ ಹೋರಾಟಗಾರರ ಯಶೋಗಾಥೆಯನ್ನು ಮಕ್ಕಳಿಗೆ ಅರ್ಥವಾಗುವಂತೆ ಮನನಮಾಡಿಸುತ್ತಿದ್ದರು.

ಇಂದಿನ ಕಾಲದಲ್ಲಿ ಹಾಸ್ಟೆಲ್ ವಿದ್ಯಾಭ್ಯಾಸ ಇರುವಂತೆಯೇ ಅಂದಿನ ಕಾಲದಲ್ಲೂ ಮಕ್ಕಳು ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅಲ್ಲಿ ಬಡವ ಬಲ್ಲದ, ಅರಸ ಆಳು ಎನ್ನುವ ಬೇಧ ಭಾವವಿಲ್ಲದೇ ಎಲ್ಲರಿಗೂ ಸಮಾನರೀತಿಯಾಗಿ 64 ವಿದ್ಯೆಗಳನ್ನೂ ಕಲಿಸಿ ನಂತರ ಆತ ಯಾವ ವಿದ್ಯೆಯಲ್ಲಿ ಹೆಚ್ಚಿನ ಪ್ರಾವೀಣ್ಯತೆ ಗಳಿಸುತ್ತಾನೋ ಅದಕ್ಕೆ ಸೂಕ್ತ ರೀತಿಯ ಕೆಲಸಗಳನ್ನು ಮಾಡುತ್ತಿದ್ದನು. ಆಗೆಲ್ಲಾ ಜಾತಿ ಪದ್ದತಿ ಇಲ್ಲದೇ ಕಲಿತ ವಿದ್ಯೆ ಮತ್ತು ಮಾಡುವ ಕೆಲಸಗಳ ಮೇಲೆ ವರ್ಣಾಶ್ರಮದ ರೀತಿ ಜಾರಿಗೆಯಲ್ಲಿತ್ತು. ಸಕಲಕಲಾ ವಲ್ಲಭರಾಗಿದ್ದ ಅವರು ಯಾವುದೇ ಕೆಲಸಗಳನ್ನೂ ಸುಲಲಿತವಾಗಿ ಮಾಡುವಂತಿದ್ದರು. ಊರಿನ ಪುರೋಹಿತರು (ಪುರದ ಹಿತವನ್ನು ಬಯಸುವವರು) ಅರಳಿಕಟ್ಟೆಯ ಮೇಲೆ ಕುಳಿತು ಎಲ್ಲರಿಗೂ ಅರ್ಥವಾಗುವಂತೆ ಪಾಠ ಪ್ರವಚನಗಳನ್ನು ಮಾಡತ್ತಾ , ಆ ಜನರುಗಳು ಅನಕ್ಷರಸ್ಥರಾಗಿದ್ದರೂ, ದೈನಂದಿನ ವ್ಯವಹಾರಕ್ಕೆ ತಕ್ಕಷ್ಟು ಲೆಕ್ಕಾಚಾರ ಬಲ್ಲವರಾಗಿರುತ್ತಿದ್ದರು. ನಂತರ ಕಾಲ ಕ್ರಮೇಣ ಅದೇ ವರ್ಣಾಶ್ರಮಗಳು ಜಾತಿಗಳಾಗಿ ಪರಿವರ್ತಿತವಾಗಿ ಎಲ್ಲರ ಹೆಸರಿನೊಂದಿಗೆ ಅವರವರ ಜಾತಿಗಳೇ ಉಪನಾಮಗಳಾಗಿ ಹೋಗಿದ್ದದ್ದು ವಿಷಾಧನೀಯ.

ತುಂಬಾ ಹಿಂದೆ ಹೋಗುವುದು ಬೇಡ. ಸಾವಿರ ವರ್ಷಗಳ ಹಿಂದೆ ಮುಸಲ್ಮಾನರು ಭಾರತಕ್ಕೆ ಧಾಳಿ ಮಾಡುವುದಕ್ಕಿಂತ ಮುಂಚೆ ನಮ್ಮ ದೇಶ ಅತ್ಯಂತ ಸುಭಿಕ್ಷವಾಗಿ ಜಗತ್ತಿನಲ್ಲಿಯೇ ಅತ್ಯಂತ ಒಳ್ಳೆಯ ನಾಗರೀಕತೆ ಹೊಂದಿರುವಂತಹ ರಾಷ್ಟ್ರವಾಗಿತ್ತು. ಎಲ್ಲರೂ ಸುಖಃ ಶಾಂತಿಯಿಂದ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದರು. ನಮ್ಮ ನಳಂದ ವಿಶ್ವವಿದ್ಯಾನಿಯಕ್ಕೆ ಅಭ್ಯಾಸಕ್ಕೆಂದು ಬಂದ ಹುಯ್ಯನ್ ಸ್ಯಾಂಗ್ ಮತ್ತು ಪಾಹಿಯಾನ್ ಅಂತಹ ವಿದೇಶಿಗರೇ ಬರೆದಿರುವಂತೆ ಇಡೀ ದೇಶದಲ್ಲಿ ಹುಡುಕಿದರೂ ಒಬ್ಬನೇ ಒಬ್ಬ ಭಿಕ್ಷುಕನನ್ನು ನೋಡಿರಲಿಲ್ಲವಂತೆ. ವಿಜಯನಗರದ ಕಾಲದಲ್ಲಿ ಮುತ್ತು ರತ್ನಗಳನ್ನು ಬಳ್ಳ ಬಳ್ಳಗಳಲ್ಲಿ ಈಗ ರಸ್ತೆಗಳ ಬದಿಯಲ್ಲಿ ತರಕಾರಿ ಮಾರುವಂತೆ ಮಾರುತ್ತಿದ್ದರಂತೆ. ಆದರೆ ನಳಂದ ವಿಶ್ವವಿದ್ಯಾನಿಲಯ ಧಾಳಿಕೋರರ ಬೆಂಕಿಗೆ ಆಹುತಿಯಾಗಿ ಆರು ತಿಂಗಳುಗಳ ಕಾಲ ಸುಟ್ಟುಹೋದ ನಂತರ ಶಿಕ್ಷಣದಲ್ಲಿಯೂ ಕುಂಠಿತವಾಗ ತೊಡಗಿತು. ನಂತರ ವ್ಯಾಪಾರಕ್ಕೆಂದು ಬಂದು ನಮ್ಮ ನಮ್ಮ ಒಳಜಗಳಗಳನ್ನೇ ಆಧಾರವಾಗಿಟ್ಟು ಕೊಂಡು ನಮ್ಮ ನಮ್ಮಲಿಯೇ ಜಗಳತಂದು ದೇಶವನ್ನು ದಾಸ್ಯಕ್ಕೆ ತಳ್ಳಿದ ಬ್ರಿಟೀಷರಿಗೆ ತಮ್ಮ ಆಳ್ವಿಕೆಯನ್ನು ಜಾರಿಗೊಳಿಸಲು ಪ್ರತೀಬಾರಿಯೂ ಇಂಗ್ಲೇಂಡಿನಿಂದ ಜನರನ್ನು ಕರೆತರುವುದು ದುಬಾರಿ ಎನಿಸಿದಾಗಲೇ ಲಾರ್ಡ್ ಮೆಕಾಲೆ ಸರಿಯಾಗಿ ಯೋಚಿಸಿ, ಬಣ್ಣದಲ್ಲಿ ಭಾರತೀಯರು ಬುದ್ಧಿ ಮತ್ತು ಆಲೋಚನೆಯಲ್ಲಿ ಬ್ರಿಟಿಷರಂತೆ ಇರುವಂತೆ ಸ್ಥಳೀಯರನ್ನು ತಯಾರು ಮಾಡಲೆಂದೇ ನಮ್ಮ ಸಂಸ್ಕೃತಿಯ ತಳಹಳಿಯಾದ ಭಧ್ರ ಬುನಾದಿಯಾದ ಗುರುಕುಲದ ವಿದ್ಯಾಭ್ಯಾಸ ಪದ್ದತಿಗೆ ಕೊಡಲಿ ಹಾಕಿ ಪಾಶ್ವ್ಯಾತ್ಯ ರೀತಿಯ ಶಿಕ್ಷಣ ಪದ್ದತಿ ಬಲವಂತವಾಗಿ ಹೇರಿದ ಪರಿಣಾಮವೇ ಇಂದಿನ ಎಲ್ಲಾ ಅದ್ವಾನಗಳಿಗೆ ಮತ್ತು ಅಭಾಸಗಳಿಗೆ ಕಾರಣ ಎಂದರೆ ತಪ್ಪಾಗಲಾರದು.

education1

ನಾವೆಲ್ಲಾ ಚಿಕ್ಕವರಿದ್ದಾಗಲೂ ನಮ್ಮ ಪೋಷಕರು ನಮ್ಮ ಶಾಲೆಯ ವಿದ್ಯೆಯ ಜೊತೆಗೆ, ಮನೆಯಲ್ಲಿಯೇ ಸಂಗೀತ, ನಾಟಕ, ನೃತ್ಯ ಪಕ್ಕವಾದ್ಯ, ಸಂಸ್ಕೃತ, ವೇದ, ಪುರಾಣ, ಯೋಗ, ಅಡುಗೆ ಮುಂತಾದ ವಿಷಯಗಳಲ್ಲಿ ನಮ್ಮೆಲ್ಲರನ್ನೂ ತಯಾರು ಮಾಡುತ್ತಿದ್ದರು. ಸುಮ್ಮನೆ ಜಂಬ ಕೊಚ್ಛಿಕೊಳ್ಳುತ್ತಿದ್ದೇನೆ ಎಂದಲ್ಲಾ , ಆರ್ಥಿಕವಾಗಿ ಸದೃಢವಾಗಿದ್ದರೂ ನಾನು ಚಿಕ್ಕವನಿದ್ದಾಗ ಬೆಳ್ಳಂಬೆಳಿಗ್ಗೆ ಚುಮು ಚುಮು ಚಳಿಗಾಳಿ ಮಳೆಯನ್ನೂ ಲೆಕ್ಕಿಸದೇ ಮನೆ ಮನೆಗಳಿಗೆ ಹಾಲು (ನನ್ನ ಮೊದಲ ಸಂಪಾದನೆ ಮತ್ತು  ದುಡ್ಡಿನ ಮಹತ್ವ ಕುರಿತಾದ  ಲೇಖನ   https://wp.me/paLWvR-48ಮತ್ತು ವೃತ್ತಪತ್ರಿಕೆಗಳನ್ನು ಹಾಕಿದ್ದೆ. ನಮ್ಮ ತಂದೆಯವರೂ ವಾರಾನ್ನದ  (ವಾರನ್ನ ಕುರಿತಾದ ಲೇಖನ https://wp.me/paLWvR-37ಜೊತೆ ಜೊತೆಗೆ ಪೇಪರ್ ಮಾರಿ ಗಳಿಸಿದ ಹಣದಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದ್ದರಿಂದ ನಮಗೂ ಅದರ ಅನುಭವ ಇರಲಿ ಎಂದು ಸಣ್ಣ ಪುಟ್ಟ ಕೆಲಸಕ್ಕೆ ಅನುವು ಮಾಡಿಕೊಟ್ಟಿದ್ದರು. ಬೇಸಿಗೆ ರಜಾ ಇಲ್ಲವೇ ದಸರಾ ರಜೆ ಬಂದಾಗ ಅಡುಗೆ ಕೆಲಸಕ್ಕೂ ಹೋಗಿರುವ ಅನುಭವವಿದೆ. ಮುಂದೆ ಕಾಲೇಜಿಗೆ ಹೋಗುವಾಗ ವಿದ್ಯಾಭ್ಯಾಸದ ಖರ್ಚಿಗೆ ತಂದೆಯವರನ್ನೇ ಅವಲಂಬಿಸದೇ ಇತರೇ ಮಕ್ಕಳ ಬುಕ್ ಬೈಡಿಂಗ್ ಜೊತೆ ಜೊತೆಗೆ ಸ್ಕ್ರೀನ್ ಪ್ರಿಂಟಿಂಗ್ ಮಾಡಿ ವಿದ್ಯಾಭ್ಯಾಸ ಮಾಡಿ, ನಂತರ ನನ್ನ ಸ್ನೇಹಿರೊಂದಿಗೆ ಸ್ವಲ್ಪ ವರ್ಷ ನನ್ನದೇ ಕಂಪನಿಯೊಂದನ್ನು ಯಶಸ್ವಿಯಾಗಿ ನಡೆಸಿ, ಕಾರಣಾಂತರಗಳಿಂದ ಅಲ್ಲಿಂದ ಹೊರಬಂದು ಈಗ ಬಹುರಾಷ್ಟ್ರೀಯ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದೇನೆ.

ನನ್ನ ಇಡೀ ವಿದ್ಯಾಭ್ಯಾಸದ ಸಮಯದಲ್ಲಿ ನಮ್ಮ ಪೋಷಕರೆಂದೂ ನನ್ನ ಅಂಕಗಳ ಹಿಂದೆ ಬಿದ್ದಿರಲಿಲ್ಲ. ಅವರಿಗೆ ನನ್ನ ಅಂಕಗಳಿಗಿಂತ ಪ್ರತಿಯೊಂದು ವಿಷಯದ ಆಳಕ್ಕಿಳಿದು ಜ್ಣಾನಾರ್ಜನೆ ಮಾಡುವುದಷ್ಟೇ ಮುಖ್ಯವಾಗಿತ್ತು. ಪ್ರತಿಬಾರಿಯೂ ಫಲಿತಾಂಶ ಬಂದಾಗ ಅಣ್ಣಾ ಫಸ್ಟ್ ಕ್ಲಾಸಿನಲ್ಲಿ ಪಾಸ್ ಎಂದರೆ ಸಾಕಾಗಿತ್ತು. ಅವರೆಂದೂ ನಾನೂ ಕಂಪ್ಯೂಟರ್ ಇಂಜಿನಿಯರೇ ಆಗಬೇಕೆಂದು ಬಯಸಿರಲಿಲ್ಲ. ನನಗೆ ಕಂಪ್ಯೂಟರ್ ಹೊರತಾಗಿಯೂ ಜೀವನ ಮಾಡುವಷ್ಟರ ಮಟ್ಟಿನ ವಿದ್ಯೆಯನ್ನು ಮತ್ತು ಧೈರ್ಯವನ್ನು ಕಲಿಸಿಕೊಟ್ಟಿದ್ದಾರೆ. ನಾನೇಕೆ ನನ್ನ ಅತ್ತೆಯ ಮಗಳೂ, ವಿಜ್ಞಾನದ ಮಾಸ್ಟರ್ ಪದವಿಯ ಜೊತೆ ಜೊತೆಗೇ ಕಲಿತ ಭರತನಾಟ್ಯದಿಂದ ಈಗ ದೂರದ ಅಮೇರೀಕಾದಲ್ಲಿ ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಅಲ್ಲಿಯ ಮಕ್ಕಳಿಗೆ ಹೇಳಿಕೊಡುವ ಜೊತೆ ಜೊತೆಗೆ ತನ್ನ ಮನೆಯವರಷ್ಟೇ ಸಂಪಾದನೆ ಮಾಡುತ್ತಿದ್ದಾಳೆ. ಈಗ ಅದನ್ನೇ ನನ್ನ ತಂಗಿಯ ಮಕ್ಕಳುಗಳೂ ಮುಂದುವರೆಸಿ ನೃತ್ಯದಲ್ಲೇ ಮಾಸ್ಟರ್ಸ್ ಮುಗಿಸಿ ನೂರಾರು ವಿದ್ಯಾರ್ಥಿಗಳಿಗೆ ತಾವು ಕಲಿತದ್ದನ್ನು ಹೇಳಿಕೊಡುತ್ತಾ ಸ್ವಾಮಿ ಕಾರ್ಯದ ಜೊತೆಗೆ ಸ್ವಕಾರ್ಯವನ್ನೂ ನೋಡಿಕೊಳ್ಳುತ್ತಿದ್ದಾರೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಎಲ್ಲರೂ ಬಹಳಷ್ಟು ಬದಲಾಗಿದ್ದಾರೆ. ಎಲ್ಲರೂ ಅಂಕಗಳ ಹಿಂದೆ ಬಿದ್ದಿದ್ದಾರೆ. ಅರವತ್ತು ವರ್ಷಗಳ ಹಿಂದೆ ಪಾಸ್ ಆಗಿದ್ದರೆ ಸಾಕಿತ್ತು. ಮೂವತ್ತು ವರ್ಷಗಳ ಹಿಂದೆ ಫಸ್ಟ್ ಕ್ಲಾಸ್ ಬಂದರೆ ಸಾಕಿತ್ತು. ಹತ್ತು ವರ್ಷಗಳ ಹಿಂದೆ ಡಿಸ್ಟಿಂಗ್ಷನ್ ತೆಗೆದುಕೊಂಡರೆ ಗೌವವಿಸುತ್ತಿದ್ದರು. ಈಗೆಲ್ಲಾ ತಮ್ಮ ಮಕ್ಕಳು ಪ್ರತೀ ವಿಷಯದಲ್ಲೂ ನೂರಕ್ಕೆ ನೂರು ಅಂಕವನ್ನೇ ಪಡೆಯಬೇಕು. ಡಾಕ್ಟರ್ ಇಲವೇ ಇಂಜೀನಿಯರ್ ಆಗಲೇ ಬೇಕು. ಡಿಗ್ರಿ ಮುಗಿದ ನಂತರ ವಿದೇಶಕ್ಕೆ ಫಲಾಯನ ಮಾಡಿ ಹೆತ್ತ ಅಪ್ಪಾ ಅಮ್ಮನನ್ನು ಮರೆತು ಲಕ್ಷ ಲಕ್ಷ ಸಂಪಾದಿಸ ಬೇಕು ಎಂಬುದನ್ನೇ ಬಯಸುವುದರಿಂದ ವಿದ್ಯಾರ್ಥ್ದಿಗಳ ಮೇಲೆ ಅನಗತ್ಯ ಹೇರಿಕೆಯಾಗುತ್ತಿದೆ. ಬಾಲ್ಯದಿಂದಲೇ ಅವರ ಆಟ, ಸಾಂಸ್ಕೃತಿಯ ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧ ಹೇರಲ್ಪಟ್ಟಿರುತ್ತದೆ. ಸದಾಕಾಲವೂ ಪುಸ್ತಕದ ಹುಳುವಾಗಿ, ವಿಷಯವನ್ನು ಅರ್ಥಮಾಡಿಕೊಳ್ಳದೇ, ಉರು ಹೊಡೆದು ಮಕ್ಕೀ ಕಾ ಮಕ್ಕಿಯಾಗಿ ಓದಿದ್ದನ್ನು ಕಕ್ಕಿ ಅಂಕ ಗಳಿಸುವ ಭರದಲ್ಲಿರುತ್ತಾರೆ. ಕೇವಲ ಅಂಕಗಳನ್ನು ಗಳಿಸುವ ಭರದಲ್ಲಿ ಲೋಕ ಜ್ಞಾನ, ವ್ಯಾವಹಾರಿಕ ಜ್ಞಾನ, ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳ ಬಗ್ಗೆ ಕಲಿಯುವ ಆಸಕ್ತಿಯೇ ಇರುವುದಿಲ್ಲವಾದ ಕಾರಣದಿಂದಾಗಿಯೇ ಅಪ್ಪಾ ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೂ ಶ್ರಾಧ್ದಕ್ಕೂ ವೆತ್ಯಾಸವೇ ತಿಳಿಯದವರಾಗರುತ್ತಾರೆ. ಅಂತಯೇ ಆ ರೀತಿಯಾಗಿ ಅಂಕಗಳಿಸುವುದರಲ್ಲಿ ಒಂದಿಷ್ಟು ಆಚೀಚೆಯಾದರೂ ಅತ್ಯಂತ ದುರ್ಬಲ ಮನಸ್ಸಿನವರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಮಕ್ಕಳಿಗೆ ಜನ್ಮ ನೀಡಿ ಅವರಿಗೆ ಹೊತ್ತು ಹೊತ್ತಿಗೆ ತಿನ್ನಿಸಿ, ಕಾಲ ಕಾಲಕ್ಕೆ ಕೇಳಿದ್ದನ್ನು ಕೊಡಿಸಿ, ಒಳ್ಳೋಳ್ಳೆ ಶಾಲಾ ಕಾಲೇಜುಗಳಲ್ಲಿ ವಿದ್ಯೆ ಕೊಡಿಸಿ ಐಶಾರಾಮ್ಯ ಗಾಡಿಗಳಲ್ಲಿ ಓಡಾಡಿಸಿ, ತಮ್ಮ ಪಾಡಿಗೆ ತಮ್ಮ ಕೆಲಸಗಳಲ್ಲಿ ಮಗ್ನರಾಗಿ ಹೋದರೆ ತಂದೆ ಮತ್ತು ತಾಯಿಯರ ಕರ್ತವ್ಯ ಮುಗಿದು ಹೋಗುತ್ತದೆ ಎಂದು ಭಾವಿಸಬಾರದು. ಮಕ್ಕಳ ಜೊತೆ ಒಳ್ಳೆಯ ಸಮಯವನ್ನು ಕಳೆಯಬೇಕು. ಮಕ್ಕಳಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು, ನಾಲ್ಕಾರು ಜನರನ್ನು ಏಕಕಾಲಕ್ಕೆ ಹೇಗೆ ಸಂಭಾಳಿಸುವುದು, ಎಲ್ಲರ ಜೊತೆಗೆ ಹೇಗೆ ಕಳೆಯುವುದು ಎನ್ನುವುದನ್ನೂ ಕಲಿಸಬೇಕು. ಇಲ್ಲದಿದ್ದಲ್ಲಿ ಪಡೆದ ಶಿಕ್ಷಣವು, ಶಿಕ್ಷಣವಾಗದೆ ಶಿಕ್ಷೆಯಾಗುತ್ತದೆ.

ನಾಲ್ಕಾರು ಪದವಿ ಪಡೆದಿದ್ದರೇನು? ವಿದೇಶದಲ್ಲಿ ಓದಿದ್ದರೇನು?
ವಿನಯ ಮತ್ತು ವಿವೇಚನೆ ಇಲ್ಲದಿದ್ದರೆ, ಪಡೆದ ವಿದ್ಯೆಯೆಲ್ಲವೂ ತೃಣಕ್ಕೆ ಸಮಾನ
ವಿದ್ಯೆಯ ಜೊತೆಗೆ ವಿನಯ ಮತ್ತು ವಿವೇಚನೆ ಹೆಚ್ಚಿಸುವತ್ತ ಚಿತ್ತ ಹರಿಸೋಣ

ನಾವು ಕಲಿಯುತ್ತಿರುವ ವಿದ್ಯೆ , ಕೇವಲ ಡಿಗ್ರಿ ಪಡೆದು
ನೌಕರಿ ಗಿಟ್ಟಿಸಿ ಐದಂಕಿಯ ಸಂಬಳ ಪಡೆಯುವುದಕ್ಕಲ್ಲ
ಕಲಿತ ಡಿಗ್ರಿಗಳು ಕೆಲ ಸಮಯ ಉಪಯೋಗಕ್ಕೆ ಬಾರದಿದ್ದರೂ,
ಸಾಮಾನ್ಯ ಜ್ಞಾನ ಜೀವನದಲ್ಲಿ ಖಂಡಿತಾ ಉಪಯೋಗಕ್ಕೆ ಬಂದೇ ಬರುತ್ತದೆ.
ಆದ ಕಾರಣ, ವಿದ್ಯೆಯ ಜೊತೆ ಸಾಮಾನ್ಯ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳೋಣ
ಸಮಾಜದಲ್ಲಿ ವಿವೇಕವಂತರಾಗಿ, ಸತ್ಪ್ರಜೆಯಾಗಿ, ನೆಮ್ಮದಿಯ ಜೀವನ ನಡೆಸೋಣ.

ದುಡ್ಡಿನಿಂದ ಏನು ಬೇಕಾದರೂ ಕೊಂಡು ಕೊಳ್ಳಬಹುದು
ಏಂದು ಎಣಿಸಿದ್ದರೆ ಅದು ಖಂಡಿತವಾಗಿಯೂ ತಪ್ಪು.
ದುಡ್ದಿನಿಂದ ಆಸ್ತಿ ಪಾಸ್ತಿ ಕೊಳ್ಳಬಹುದೇ ಹೊರತು ಮನ ಶಾಂತಿಯನ್ನಲ್ಲಾ
ಆತ್ಮ ಸಂತೃಪ್ತಿಯ ಮುಂದೆ ಕೋಟ್ಯಾಂತರ ರೂಪಾಯಿಯೂ ನಗಣ್ಯ

ಏನಂತೀರೀ?