ನೆಮ್ಮದಿಯ ಆರೋಗ್ಯಕರ ಜೀವನ ಶೈಲಿ

ನಾವಿಂದು ದೈಹಿಕ, ಮಾನಸಿಕ ಒತ್ತಡದಿಂದ ಜೀವನಶೈಲಿ ಸಂಬಂಧ ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಕೇವಲ ಆಸ್ಪತ್ರೆ, ಔಷಧ, ವೈದ್ಯರಿಂದಲೇ ಆರೋಗ್ಯ ಸುಧಾರಣೆಯಾಗುತ್ತದೆಂದು ನಂಬಿದರೆ ಅದು ತಪ್ಪು ಕಲ್ಪನೆ. ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಲು ಈ ಕೆಳಗಿನ ಸೂತ್ರಗಳನ್ಸಾಹಿತರೋಗ್ಯ ನಿಮ್ಮದಾಗುವುದೆಂದು ಆಶಿಸುತ್ತೇನೆ.

ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳಿ
ರಾತ್ರಿ ಕನಿಷ್ಟ 6 ಗಂಟೆ ನಿದ್ರೆ ಅವಶ್ಯ. ಹಗಲು ನಿದ್ರೆಬೇಡ, ಅತಿ ಅಗತ್ಯವಿದ್ದಲ್ಲಿ ಮದ್ಯಾಹ್ನ 15 ನಿಮಿಷ ವಿಶ್ರಾಂತಿ ಸಾಕು.
ಬ್ರಾಹ್ಮಿಮುಹೂರ್ತದಲ್ಲೆದ್ದು (5-5.45ರೊಳಗೆ) ಕನಿಷ್ಠ 650 ಮಿ.ಲೀಟರ್ ನಿಂದ 1.2 ಲೀಟರ್ ಉಗುರು ಬೆಚ್ಚಗಿನ ನೀರನ್ನು ನಿಧಾನವಾಗಿ ಕುಡಿಯಿರಿ.
ಎದ್ದ ತಕ್ಷಣ ಬೆಡ್ ಕಾಫಿ ಅಥವಾ ಟೀ ಬೇಡ. ಎದ್ದು 2 ಘಂಟೆಯೊಳಗೆ ಯಾವುದಾದರೂ ಹಣ್ಣನ್ನು ಅಥವಾ ಬ್ರೇಕ್ ಫಾಸ್‌ಟ್ ಸೇವಿಸಿ.
ಊಟಕ್ಕೆ ಅಥವಾ ತಿಂಡಿಗೆ ಕನಿಷ್ಟ ಅರ್ಧ ಗಂಟೆ ಮೊದಲು ನೀರು ಕುಡಿಯುವುದನ್ನು ನಿಲ್ಲಿಸಿ. ನಂತರ 2 ತಾಸು ಬಿಟ್ಟು ಕುಡಿಯಿರಿ. ಆಹಾರದ ಜೊತೆಗೆ ನೀರು ಕುಡಿಯಲೇಬೇಡಿ. ಮಾತನ್ನು ಆಡಬೇಡಿ.
ಯಾವುದೇ ಕಾರಣಕ್ಕೂ ಬೆಳಗಿನ ಉಪಾಹಾರವನ್ನು ತಪ್ಪಿಸಬೇಡಿ. ಕಾಫಿ, ಟೀ ಕುಡಿಯಲೇಬೇಕಿದ್ದರೆ ತಿಂಡಿ ನಂತರ ಕನಿಷ್ಟ ಒಂದುವರೆ ಗಂಟೆ ಬಿಟ್ಟು ಕುಡಿಯಿರಿ.
ಬೆಳಗಿನ ಉಪಹಾರದಲ್ಲಿ ಮಾಮೂಲಿ ಇಡ್ಲಿ, ದೋಸೆ, ಉಪ್ಪಿಟ್ಟು ಇತ್ಯಾದಿಗಳ ಜೊತೆಗೆ ಯಾವುದಾದರೊಂದು ಋತುವಿಗನುಗುಣವಾದ ತಾಜಾಹಣ್ಣು, ತರಕಾರಿ ಸಲಾಡ್, ಸ್ವಲ್ಪ ಒಣಹಣ್ಣುಗಳಿರಲಿ. ಜೊತೆಗೆ ಮೊಳಕೆ ಕಾಳುಗಳಿರಲಿ. ಅಂದರೆ 8 ಘಂಟೆಯೊಳಗೆ ಬೆಳಗಿನ ತಿಂಡಿ, ರಾತ್ರಿ 8 ಘಂಟೆಯೊಳಗೆ ರಾತ್ರಿಯ ಲಘುಬೋಜನ, ಮಧ್ಯಾಹ್ನ 1-2 ಗಂಟೆಯೊಳಗೆ ಮಾಡಿ. ಇದರಲ್ಲಿ ಮುದ್ದೆ/ರೊಟ್ಟಿ/ಚಪಾತಿ, ಅನ್ನಾ, ಸಾರು, ಪಲ್ಯ, ಕೋಸಂಬರಿ, ಇತ್ಯಾದಿ ಒಳಗೊಂಡಿರಲಿ. 3 ದೊಡ್ಡ ಆಹಾರಕ್ಕಿಂತ 5 ಬಾರಿ ಮಧ್ಯಮ ಅಥವಾ ಸಣ್ಣ ಆಹಾರ ಸೇವಿಸಬೇಕು. ಅಂದರೆ ಬೆಳಗ್ಗೆ 11 ಗಂಟೆಗೆ ಮತ್ತು ಸಂಜೆ 5 ಗಂಟೆಗೆ ಲಘು ತಿಂಡಿ ಅಥವಾ ಹಣ್ಣುಗಳನ್ನು ಸೇವಿಸಿ. ಜ್ಯೂಸ್ ಬದಲು ಹಲ್ಲಿರುವವರಿಗೆ ಹಣ್ಣುಸೇವನೆಲೇಸು. ಕರಿದ-ಹುರಿದ, ಕುರುಕಲು ಜಂಕ್ ಫುಡ್ ಸೇವನೆ ಸಾಧ್ಯವಾದಷ್ಟು ಕಡಿಮೆಮಾಡಿ.
ಸೇವಿಸುವ ಆಹಾರವನ್ನು ನಿಧಾನವಾಗಿ ಅಗಿದು ಅಗಿದು (ಕನಿಷ್ಠ 20-25 ಬಾರಿ) ಸೇವಿಸಿ. ನಿಮ್ಮ ಬಾಯಲ್ಲೇ ಹಲ್ಲುಗಳಿರುವುದೇ ಹೊರತು, ಹೊಟ್ಟೆಯಲ್ಲಲ್ಲ. ಇದರಿಂದ ಜೀರ್ಣಕ್ರಿಯೆ ಸುಲಲಿತವಾಗಿ ಆಗಿ ಮಲಬದ್ಧತೆಯಾಗುವುದಿಲ್ಲ, ಜೊತೆಗೆ ಬೊಜ್ಜು ಬರುವುದಿಲ್ಲ.
ರಾತ್ರಿ ಊಟವಾಗಿ 2 ಗಂಟೆಯ ನಂತರ ನಿದ್ದೆ ಮಾಡಿ. ಅಂದರೆ 8 ಗಂಟೆಗೆ ಊಟ ಮಾಡಿ 10 ಗಂಟೆಗೆ ನಿದ್ದೆ ಮಾಡಿ. ಮಧ್ಯೆ ಸ್ವಲ್ಪ ದೈಹಿಕ ಚಟುವಟಿಕೆ ಇರಲಿ.
ನಿಮ್ಮ ಆಹಾರದಲ್ಲಿ 5 ಬಿಳಿ ವಿಷಗಳು ಅಂದರೆ, ಸಕ್ಕರೆ, ಮೈದಾ, ಬಿಳಿಅಕ್ಕಿ, ಉಪ್ಪು, ಸಂಸ್ಕರಿಸದೇ ಇರುವ ಹಾಲು (ಹಾಲಿನ ಬದಲು ಕಡೆದ ಮಜ್ಜಿಗೆ ಸೇವನೆ ಅತ್ಯುತ್ತಮ) ಇವುಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ. ಈಗಾಗಲೇ ನೀವು ಬಳಸುತ್ತಿರುವ ಆಹಾರಗಳಿಂದ ಹಲವು ರಾಸಾಯನಿಕಗಳು ನಿಮ್ಮ ಶರೀರವನ್ನು ಸೇರುತ್ತಿವೆ. ಅದರ ಜೊತೆಗೆ ನೀವು ಕೃತಕ ಬಣ್ಣ, ಪ್ರಿಸರ್ವೇಟಿವ್‌ಸ್ ಇನ್ನಿತರ ರಾಸಾಯನಿಕಗಳನ್ನು ಸೇವಿಸದಿರಿ. ಆದಷ್ಟು ಕಡಿಮೆ ಫ್ರಿಡ್‌ಜ್ ಬಳಕೆ ಮಾಡಿ. ತಂಪು ಪಾನಿಯಗಳು, ಇನ್ನಿತರ ರೆಡಿಮೇಡ್ ಪಾನಿಯಗಳು ಬೇಡ. ನಿಮ್ಮ ಆಹಾರದಲ್ಲಿ ಧನಾತ್ಮಕ ಆಹಾರ ಅಂದರೆ ಹೆಚ್ಚು ಹೆಚ್ಚು ಪ್ರಕೃತಿದತ್ತ ಹಣ್ಣು, ತರಕಾರಿ ಸೇವನೆ ಇರಲಿ.
ದಿನದಲ್ಲಿ ಕನಿಷ್ಟ 3-4 ಲೀಟರ್ ನೀರು ಸೇವನೆ ಅಗತ್ಯ. ಯಾಕೆಂದರೆ 7 ಮೀಟರ್ ಉದ್ದದ ಜೀರ್ಣಾಂಗ ವ್ಯೂಹದ ಶುದ್ಧತೆಗಾಗಿ ಕನಿಷ್ಠ 4 ಲೀಟರ್ ನೀರು ಅಗತ್ಯ. ರಾತ್ರಿ 7 ಗಂಟೆಗೆ ನೀರು ಕುಡಿಯುವುದನ್ನು ನಿಲ್ಲಿಸಿ, ಇಲ್ಲವಾದಲ್ಲಿ ಪದೇ-ಪದೇ ನಿದ್ರಾ ಭಂಗವಾಗುತ್ತದೆ.
ನೀರು ಆಹಾರಕ್ಕಿಂತ ನಮಗೆ ಹೆಚ್ಚು ಶಕ್ತಿ ಸಿಗುವುದು ಉಸಿರಾಡುವ ಗಾಳಿಯಿಂದ (ಶೇ.54ರಷ್ಟು). ಆದ್ದರಿಂದ ದೀರ್ಘವಾಗಿ ಉಸಿರಾಡಲು ಪ್ರಯತ್ನಿಸಿ.
ಸುಮ್ಮನೆ ಕುಳಿತಾಗ ಜಪತಪಾದಿಗಳನ್ನು ಮಾಡುವಾಗ ದೀರ್ಘ ಉಸಿರಾಡುವುದನ್ನು ರೂಡಿಸಿಕೊಳ್ಳಿ. ಮನಸ್ಸು ತಹಬದಿಗೆ ಬಂದು ಆರೋಗ್ಯವು ಸುಧಾರಿಸುತ್ತದೆ.
ಕಷ್ಟಪಟ್ಟು ಬೆವರು ಸುರುಸುವಿಕೆ ಇಂದು ಮಾಯವಾಗಿದೆ. ಎಲ್ಲವೂ ಕೇವಲ ಎರಡು ಬೆರಳಿನಿಂದ ನಿಯಂತ್ರಿಸಲ್ಪಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ನಿಮ್ಮ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಪ್ರಯತ್ನಿಸಬೇಕು. ಇಲ್ಲದಿದ್ದಲ್ಲಿ ಕನಿಷ್ಟ 1 ಗಂಟೆಗಳ ಕಾಲ ವಾಕಿಂಗ್, ಸ್ವಿಮ್ಮಿಂಗ್, ಜಾಗಿಂಗ್, ಯೋಗ, ಡ್ಯಾನ್ಸಿಂಗ್ ಇತ್ಯಾದಿಗಳನ್ನು ಮಾಡಬೇಕು. ಎಲ್ಲರೂ ಒಟ್ಟಿಗೆ ಸೇರಿ ಸ್ನೇಹಿತರೊಂದಿಗೆ ಮಾಡುವ ವ್ಯಾಯಾಮ ಅಥವಾ ಯೋಗಾಭ್ಯಾಸಗಳನ್ನು ಹೆಚ್ಚು ದಿನ ಮುಂದುವರೆಸಬಹುದು.
ಇಂದು ಮಲವಿಸರ್ಜನೆ ಸರಿಯಾಗಿ ಆಗದೆ ಹೆಚ್ಚಿನ ಜನರು ಅಜೀರ್ಣದಿಂದ ಹಿಡಿದು ಕ್ಯಾನ್ಸರ್ ವರೆಗಿನ ಹಲವು ರೋಗಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ದಿನಾಲು ಕನಿಷ್ಟ ಒಂದರಿಂದ ಎರಡು ಬಾರಿಯಾದರು ಮಲವಿಸರ್ಜನೆ ಮಾಡಿದರೆ ಶರೀರ ಹಗುರವಾಗಿ ರೋಗಮುಕ್ತವಾಗುವುದು. ಇದಕ್ಕೆ ಸರಿಯಾದ ನಾರು-ನೀರಿನ ಸೇವನೆ ಅತಿಮುಖ್ಯ.
ನಿದ್ರಾಹೀನತೆಯಿಂದ ಇಂದು ಹಲವು ರೋಗಗಳು ಬರುತ್ತಿರುವುದರಿಂದ ದಿನಾಲು ಕನಿಷ್ಠ 6-8 ತಾಸು ನಿದ್ರೆ ಅಗತ್ಯ. ನಿದ್ರಾಭಂಗ ಉಂಟುಮಾಡುವ, ನಕಾರಾತ್ಮಕ ಆಹಾರವಾದ ಕಾಫಿ, ಟೀ ಸೇವನೆ ಕಡಿಮೆಮಾಡಿ.
ಮಧ್ಯಪಾನ, ಧೂಮಪಾನ ಇನ್ನಿತರ ದುಶ್ಚಟಗಳಿಂದ ದೂರವಿರಿ.
ಧನಾತ್ಮಕ ಚಿಂತನೆಯಿಂದ, ಪರೋಪಕಾರದಿಂದ, ಅಧ್ಯಾತ್ಮಿಕ ಚಿಂತನೆಗಳಿಂದ, ಸಜ್ಜನರ ಸಂಗದಿಂದ, ಮನಸ್ಸು ಸಂತುಲತೆಯಿಂದಿದ್ದಾಗ ಆರೋಗ್ಯ ಸುಧಾರಿಸುವುದು.
ನಾವು ಆಯ್ದುಕೊಂಡ ಜೀವನ ಅಪೇಕ್ಷಿಸುವುದನ್ನು ನಾವು ಕೈಗೊಳ್ಳಬಹುದಾದರೆ ಅದೇ ಆರೋಗ್ಯ. ಆದರೆ ಇಂದಿನ ಕಲಿಯುಗದಲ್ಲಿ ನಾವು ಮನುಷ್ಯರು ಮಾತ್ರ ಬೇರೆ ಜೀವಿಗಳಿಗಿಂತ ಭಿನ್ನವಾಗಿ ಪ್ರಕೃತಿಗೆ ವಿರುದ್ಧವಾಗಿ ಜೀವಿಸುತ್ತಿದ್ದೇವೆ. ಇದೇ ನಮ್ಮ ಅನಾರೋಗ್ಯದ ಗುಟ್ಟು. ಆದ್ದರಿಂದ ನಾವು ಪರಿಸರವನ್ನು ಪೋಷಿಸಿ ಪ್ರಕೃತಿನಿಯಮಗಳಿಗನುಗುಣವಾಗಿ ಜೀವನ ನಡೆಸಿ ಒಳ್ಳೆಯ ಗಾಳಿ, ಒಳ್ಳೆಯ ನೀರು, ಒಳ್ಳೆಯ ಆಹಾರ ಇವುಗಳನ್ನು ಪಡೆದು ಉತ್ತಮ ದೈಹಿಕ ಚಟುವಟಿಕೆಯೊಂದಿಗೆ ಧನಾತ್ಮಕ ಚಿಂತನೆಯನ್ನು ರೂಢಿಸಿಕೊಂಡು ಉತ್ತಮ ಆರೋಗ್ಯ ಪಡೆಯೋಣ.

ರಾಮ ರಾವಣ -2

ನಾವೆಲ್ಲಾ ಓದಿದಂತೆ‌ ಇಲ್ಲವೇ ಕೇಳಿ ತಿಳಿದಂತೆ ರಾಮ‌ ಒಳ್ಳೆಯವನು‌ ಮತ್ತು ರಾವಣ ಕೆಟ್ಟವನು ಅದ ಕಾರಣ ರಾವಣ ‌ಮಾಡಿದ ಎಲ್ಲ ಕೆಲಸಗಳನ್ನೂ ದ್ವೇಷಿಸ‌ಬೇಕು ಮತ್ತು ರಾಮ ಏನನ್ನೇ ಮಾಡಿದರು ಸಹಿಸಿಕೊಳ್ಳಬೇಕು ಎಂದು ನಮ್ಮ ಮನಃಪಠದಲ್ಲಿ ಅಚ್ಚೊತ್ತಿದೆ.

ಆದರೆ ಪ್ರತಿಯೊಬ್ಬರಲ್ಲೂ ಒಳ್ಳೆಯ ‌ಹಾಗೂ‌‌ ಕೆಟ್ಟ ಗುಣಗಳಿದ್ದು ಅದು ಸಂದರ್ಭಕ್ಕನುಗುಣವಾಗಿ ‌ಪ್ರಕಟಿತಗೊಳ್ಳುತ್ತವೆ. ಒಳ್ಳೆಯ ಕೆಲಸ‌‌‌ ಮಾಡಿದಾಗ ಪ್ರೋತ್ಸಾಹಿಸಿ, ಕೆಟ್ಟ‌ ಕೆಲಸಗಳನ್ನು ಮಾಡಿದಾಗ ದಾಕ್ಷಿಣ್ಯವಿಲ್ಲದೆ ಖಂಡಿಸೋಣ.

ನಾನು ವಿವರಿಸಿದ ಎರಡೂ ಸಂದರ್ಭಗಳಲ್ಲಿ ಶಕ್ತಿಶಾಲಿ ರಾಮ, ವಿವೇಕವಂತ ರಾಮ, ಪತ್ನಿಯನ್ನು ಅತ್ಯಂತ ಗೌರವಾದರದಿಂದ ಕಾಣುತ್ತಿದ್ದ ರಾಮ, ಯುದ್ದಾನಂತರ, ಸೀತೆಮಾತೆಯು‌ ಪರಿ ಪರಿಯಾಗಿ ಕೇಳಿಕೊಂಡರೂ ಆಕೆಯ ಪಾತಿವ್ರತ್ಯವನ್ನು ಅಗ್ನಿ‌‌ಪ್ರವೇಶದ ಮೂಲಕ ಪರೀಕ್ಷಿಸಿದ್ದದ್ದು ಸುಳ್ಳಂತೂ ಅಲ್ಲ. ಅದೇ ರೀತಿ ತುಂಬು ಬಸುರಿಯನ್ನು ಕಾಡಿಗೆ ಕಳುಹಿಸುವಾಗಲೂ ಆಕೆಗೆ ಏನನ್ನೂ ಹೇಳದೆ ಅಕೆಯ ಪ್ರತಿಕ್ರಿಯೆಯನ್ನೂ ಕೇಳದೆ ಲಕ್ಷ್ಮಣ ಮೂಲಕ ಕಾಡಿಗೆ ಕಳುಹಿದ್ದದ್ದು‌ ಸುಳ್ಳಲ್ಲ.

 ನಾನು ರಾಮನ ಮತ್ತೊಂದು ‌ಮುಖವನ್ನು ಪರಿಚಯಿಸಿದ ಮಾತ್ರಕ್ಕೆ, ನನ್ನನ್ನು ಹಿಂದೂ ವಿರೋಧಿ, ಕಮ್ಯುನಿಸ್ಟ್ ಅಥವಾ  ಅನ್ಯಮತದ ಪರವಾಗಿ ಹಿಂದೂ‌ ಧರ್ಮವನ್ನು ಅವಹೇಳನ ಮಾಡುವ ವ್ಯಕ್ತಿ ಎಂದು ಜರಿಯುವುದು ಸರಿಯಲ್ಲ.

ಉಳಿದ‌ ಎಲ್ಲಾ ಸಂದರ್ಭಗಳಲ್ಲಿ ‌ರಾವಣ ಎಂತೆಂತಹಾ ತಪ್ಪಗಳನ್ನು ‌ಮಾಡಿದ್ದರೂ ರಾಮನ ಗೆಲುವಿಗೆ ಪೌರೋಹಿತ್ಯವಹಿಸಿ ವಿಜಯದ‌ ಕಂಕಣ ಕಟ್ಟಿದ್ದಂತೂ ಸುಳ್ಳಲ್ಲ.

ಸೀತಾಮಾತೆಯನ್ನು ಮೋಹಿಸಿ ಅಪಹರಿಸಿದರೂ, ಏನೇ ಶಾಪವಿದ್ದರೂ ಆತ ಒಂದು‌ ದಿನವೂ ಅಶೋಕವನದಲ್ಲಿ ಸೀತಾಮಾತೆಯ ಬಲಾತ್ಕಾರಕ್ಕೆ ಪ್ರಯತ್ನಿಸಲಿಲ್ಲಾ ಎನ್ನುವುದೂ‌ ಸುಳ್ಳಲ್ಲ.

ಇಲ್ಲಿ ರಾಮನ ‌ಅವೇಳನ‌ ರಾವಣನ ಗುಣಗಾನ ಮಾಡುತ್ತಿದ್ದೇನೆ ಎಂದು ನೋಡದೆ ಆ ಸಾಂಧರ್ಭಿಕ ಸತ್ಯವನ್ನು ಪರಾಮರ್ಶಿಸಿ‌‌ ನೋಡೋಣ.

ಅಂದು ರಾವಣನಂತಹ‌ ರಾಕ್ಷಸೀ ಪ್ರವೃತ್ತಿಯ ‌ವ್ಯಕ್ತಿಯೇ ಸೀತಾಮಾತೆಯನ್ನು ಬಲಾತ್ಕಾರಿಸದಿದ್ದಾಗ, ಇಂದು ರಾಮನ ಅನುರೂಪ‌, ರಾಮನೇ ನಮ್ಮ‌ ಆದರ್ಶ ಎಂದು‌ಃ ಹೇಳುವ ನಾವುಗಳು ಏನೂ ಅರಿಯದ ಕಂದಮ್ಮಗಳ‌‌‌ ಮೇಲೆ ಅತ್ಯಾಚಾರ ನಡೆಸಿದ‌ ವ್ಯಕ್ತಿಗಳನ್ನು ಧರ್ಮದ ‌ಹೆಸರಿನಲ್ಲಿ ಸಂರಕ್ಷಿಸುತ್ತಿರುವಾಗ ರಾಮನಂತೆ ಮರ್ಯಾದೆಗೆ ಅಂಜಿ ಕೂರದೆ ರಾವಣನಂತೆ ಹೋರಾಡಿ ಅಂತಹವರಿಗೆ ಗಲ್ಲು ಶಿಕ್ಷೆ ಕೊಡಿಸೋಣ ಎಂದಷ್ಟೇ ನನ್ನ  ಬರಹದ ಅಭಿಪ್ರಾಯ.

ಸತ್ಯ ಸದಾ ಕಹಿ. ಆ ಕಹಿಯನ್ನು ಮೀರಿ ಸವಿಯುವ ಪ್ರಯತ್ನ ಮಾಡಿದರೆ ಖಂಡಿತ‌ ಸಿಹಿ.

ಅತ್ಯಾಚಾರಿಗಳಿಗೆ ಧರ್ಮವಿಲ್ಲಾ. ಅಂತಹವರನ್ನು ಈ ಕೂಡಲೇ ಗಲ್ಲಿಗೆ ಏರಿಸಿರಲ್ಲಾ

ಏನಂತೀರಿ?

ರಾಮ ರಾವಣ-1

ರಾಕ್ಷಸೀ ಗುಣವುಳ್ಳ‌ ರಾವಣ ಸೀತಾಮಾತೆಯನ್ನು ಅಪಹರಿಸಿದ ಅಂದಾ ಮಾತ್ರಕ್ಕೆ ಆತ ಕೆಟ್ಟವನೆನಿಸ‌ ಬಹುದಾದರೂ, ಆತಾ ಸ್ವಭಾವತಃ ಮಹಾ ಜ್ಞಾನಿ. ಪರಮ ಶಿವ ಭಕ್ತ, ನಾಲ್ಕೂ ವೇದಗಳನ್ನು ಬಲ್ಲವನಾಗಿದ್ದ. ಅತ್ಯುತ್ತಮ ‌ಸಂಗೀತಗಾರ, ಶಿವನನ್ನು ‌ಒಲಿಸಿಕೊಳ್ಳುವ ಸಲುವಾಗಿ‌ ತನ್ನ‌ ಕರಳುಗಳನ್ನೇ ಹೊರ‌ತೆಗೆದು‌ ರುದ್ರ ವೀಣೆಯನ್ನಾಗಿಸಿ‌‌ ನುಡಿಸಿ‌ ಶಿವನನ್ನು ಒಲಿಸಿಕೊಂಡು‌ ಪರಶಿವನ ಆತ್ಮಲಿಂಗವನ್ನೇ ಪಡೆದಂತಹವನು.

ರಾಮ‌‌ ಮತ್ತು ಲಕ್ಷ್ಮಣರು ಯುಧ್ದಕ್ಕೆ ಶತ್ರು ವಿನಾಶಕಾರೀ ಪೂಜೆಮಾಡಿಸಲು‌‌ ಲಂಕೆಯಲ್ಲಿ ಪುರೋಹಿತರು ‌ಯಾರೂ‌ ಸಿಗದಿದ್ದಾಗ, ಸ್ವತಃ ರಾವಣನೇ ಬಂದು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ‌ ರಾಮ‌ ಲಕ್ಷ್ಮಣರಿಗೆ ಕಂಕಣ ಕಟ್ಟಿ ವಿಜಯೀಭವ ಎಂದು ಹರಸಿ ತನ್ನ ಬ್ರಾಹ್ಮಣ್ಯತ್ವವನ್ನೇ ಮೆರೆದವನು. ತಂಗಿಗಾದ ಅವಮಾನಕ್ಕೆ ಪ್ರತೀಕಾರ ತೀರಿಸಲು  ಸೀತಾಮಾತೆಯನ್ನು ಅಪರಣದನೇ ಹೊರದ ಕಪ್ಪು ಚುಕ್ಕೆಯ ಹೊರತಾಗಿ ಬೇರಾವ ಗಹನವಾದ ಆರೋಪಗಳು ರಾವಣನ ಮೇಲೆ ಕಾಣಸಿಗುವುದಿಲ್ಲ.

ಹಾಗೆಯೇ ರಾಮನ ಯುಧ್ಧದಲ್ಲಿ ರಾವಣನ್ನು‌ ಸೋಲಿಸಿ ಸೀತೆಯನ್ನು ಅಯೋಧ್ಯೆಗೆ ಕರೆದುಕೊಂಡು ಹೋಗುವ ಮುನ್ನ, ಸೀತಾ‌ಮಾತೆಯ ಪಾತಿವ್ರತ್ಯವನ್ನು ಪರೀಕ್ಷಿಸುವ ಸಲುವಾಗಿ ಅಗ್ನಿಪರೀಕ್ಷೆಗೆ ಒಡ್ಡಿದ್ದು ಸುಳ್ಳಲ್ಲ. ನಂತರ ಕೆಲವು ವರ್ಷಗಳು‌ ಸುಖಃ ಸಂಸಾರ ನಡೆಸಿದ ಫಲವಾಗಿ ಸೀತಾ ಮಾತೆಯು ಗರ್ಭಿಣಿಯಾಗಿದ್ದಾಗ, ಅರಮನೆಯ ಅಗಸರ ದಾಂಪತ್ಯದಲ್ಲಿ ಬಿರುಕಿನ ಸಮಸ್ಯೆ ‌ಪರಿಹರಿಸುತ್ತಿದ್ದಾಗ, ಅಚಾನಕ್ಕಾಗಿ ಅಗಸ  ಬಾಯಿ ತಪ್ಪಿ‌ ಆಡಿದ‌ ಮಾತು‌ ಕಂಡವರ‌ ಮನೆಯಲ್ಲಿದ್ದ ಹೆಂಡತಿಯನ್ನು ಮರಳಿ‌ ಸ್ವೀಕರಿಸಲು ನಾನೇನೂ ಪ್ರಭು ಶ್ರೀರಾಮನಲ್ಲಾ ಎಂಬ ಮಾತಿನ ಕಟ್ಡು ಪಾಡಿಗೆ ಬಿದ್ದು ಸೀತೆಗೆ ಏನನ್ನೂ ತಿಳಿಸದೆ ನಟ್ಟ ನಡು ರಾತ್ರಿಯಲ್ಲಿ ಲಕ್ಷ್ಮಣನ ಮೂಲಕ ಕಾಡಿನಲ್ಲಿ  ಬಿಟ್ಟದ್ದೂ‌ ಸುಳ್ಳಲ್ಲ.

ಒಟ್ಡಿನಲ್ಲಿ ನನ್ನ ಬರಹದ ಹಿಂದೆ ರಾಮನನ್ನು ‌ತೆಗಳಿ‌ ರಾವಣನನ್ನು ‌ವೈಭವೀಕರಿಸುವ ಉದ್ದೇಶವಿರದೆ. ರಾಕ್ಷಸೀ‌ ಗುಣವುಳ್ಳ ರಾವಣನಂತಹ ಮನುಷ್ಯನೇ ಸೀತಾಮಾತೆಯ ಇಚ್ಛೆಗೆ ವಿರುದ್ಧವಾಗಿ ಬಲಾತ್ಕಾರ ಮಾಡದಿದ್ದಾಗ,

ರಾಮನಂತಹ ಮರ್ಯಾದೆಗೆ ಆಂಜುವ ನರ ಮನುಷ್ಯರು‌ ಮುಗ್ಧ ಹಸು ಕಂದಮ್ಮಗಳ  ‌ಅತ್ಯಾಚಾರ ಮಾಡುತ್ತಿರುವುದು ಎಷ್ಟು‌ ಸರಿ?

ಅಂತಹ ಅತ್ಯಾಚಾರಿಗಳನ್ನು ಧರ್ಮದ ‌ಹೆಸರಿನಲ್ಲಿ ರಕ್ಷಿಸುತ್ತಿರುವುದು ಎಷ್ಟು ಸರಿ?

ಇಂತಹ ಕೆಲವು ಅತ್ಯಾಚಾರಿಗಳಿಗೆ ಯಾವುದೇ ವಿಚಾರಣೆಯಿಲ್ಲದೆ ಗಲ್ಲು ಶಿಕ್ಷೆಯನ್ನು ‌ನೀಡಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸದ‌ ಹೊರತಾಗಿ ಇಂತಹ‌ ಪಿಡುಗನ್ನು ತಪ್ಪಿಸಲಾಗದು ಎನ್ನುವ ಭಾವನೆಯಿಂದ ಬರೆದದ್ದಷ್ಟೆ.

ನಾನು ಮಂಡಿಸಿದ ವಿಚಾರಗಳಿಗೆ ಬದ್ದ. ಆರೋಗ್ಯಕರ ಚರ್ಚೆಗೆ ಸಿದ್ಧ.

ಏನಂತೀರೀ?

ದುಡ್ಡಿನ ಮಹತ್ವ

ಸುಮಾರು ಸಾವಿರದ ಒಂಬೈನೊರ ಎಂಬತ್ತಾರು, ಎಂಬತ್ತೇಳರ ಸಮಯ, ನಾನಿನ್ನೂ ಆಗಷ್ಟೇ ಕಾಲೇಜಿಗೆ ಸೇರಿದ್ದನಷ್ಟೆ. ಕಾಲೇಜಿಗೆ ಹೋಗುವ ಹುಡುಗನಾದರೂ ನೋಡಲು ಏಳು ಅಥವಾ ಎಂಟನೇ ತರಗತಿಯ ‌ವಿದ್ಯಾರ್ಥಿ ಅನ್ನುವ ಹಾಗೆ ಕಾಣುತ್ತಿದೆ. ಕುಳ್ಳಗೆ ಸಣ್ಣಗಿದ್ದ ನನ್ನನ್ನು ನನ್ನ ತಾಯಿ ವೈದ್ಯರ ಬಳಿ‌ ಕರೆದುಕೊಂಡು ಹೋಗಿ‌ ಡಾಕ್ಟ್ರೇ ನನ್ನ ‌ಮಗನಿಗೆ ಯಾವುದಾದರು ವಿಟಮಿನ್ ಟಾನಿಕ್‌ ಕೊಡಿ‌ ಸ್ವಲ್ಪ ಉದ್ದ ಮತ್ತು ಗಾತ್ರವಾಗಲಿ‌ ಎಂದು‌‌ ಕೋರಿದ್ದೂ ಉಂಟು. ಆದರೆ ನನ್ನ ತಂದೆ ‌ನಮ್ಮ ವಂಶದಲ್ಲಿ ಗಂಡುಮಕ್ಕಳೆಲ್ಲರೂ ಹದಿನೆಂಟರ ನಂತರವೇ ಬೆಳಯುವುದು ಎಂದು‌ ನಮ್ಮ ತಾಯಿಯವರನ್ನು  ಸಮಾಧಾನ ಪಡಿಸುತ್ತಿದ್ದದ್ದು ನಮ್ಮ ಕುಟುಂಬದಲ್ಲಿ ಸಹಜ‌ ಪ್ರಕ್ರಿಯೆಯಾಗಿತ್ತು.

ಅದೊಂದು‌ ದಿನ‌‌ ಸಂಜೆ ಸುಮಾರು ಆರು ಗಂಟೆಯ ಸಮಯ, ನಮ್ಮ ಅಮ್ಮ ಅಂಗಡಿಯಿಂದ ಮನೆಗೆ ದಿನಸಿ‌ ತರಲು ಕೈಚೀಲ ಮತ್ತು ನೂರು ರೂಗಳನ್ನು ಕೊಟ್ಟು ಕಳಿಸಿದರು. ನಾನು ನನ್ನ ‌ಚೆಡ್ಡಿ ಜೋಬಿನೊಳಗೆ ದುಡ್ಡನ್ನು ಇಟ್ಟುಕೊಂಡು ಸೈಕಲ್ಲನ್ನೇರಿ ಅಂಗಡಿಗೆ ಹೋಗಿ ಸಾಮನುಗಳನ್ನು ಕೊಂಡು ಕೊಂಡು ಅಂಗಡಿಯವರಿಗೆ ಹಣ ಕೊಡಲು ಜೋಬಿಗೆ ಕೈಹಾಕಿದರೆ, ಹಣವೇ ನಾಪತ್ತೆ!! ಚೆಡ್ಡಿ‌ ಮತ್ತು ಅಂಗಿಗಳ ಎಲ್ಲಾ ಜೋಬುಗಳನ್ನು ತಡೆಕಾಡಿದ್ದಾಯ್ತು. ಕೈಚೀಲದಲ್ಲೂ ಹುಡುಕಾಡಿದರೆ ಹಣದ ಪತ್ತೆಯೇ ಇಲ್ಲಾ. ಅಂಗಡಿಯವರಿಗೆ ಸಾಮಾನುಗಳನ್ನು ಹಾಗೆಯೇ‌ ಇಡಲು‌ ಹೇಳಿ, ಮನೆಯ‌ ಕಡೆ ಹಣ ಹುಡುಕುತ್ತಾ, ಹಣ ಕಳೆದು‌‌ ಹೋಗಿರುವುದನ್ನು ಮನೆಯವರಿಗೆ ಹೇಗೆ  ಹೇಳುವುದೆಂದು ಯೋಚಿಸಿತ್ತಾ ಬಂದು, ಸಮ್ಮನೆ ಮನೆಯಲ್ಲಿ ತಡಕಾಡುತ್ತಿದ್ದನ್ನು ನೋಡಿ ಏನಾಯ್ತೆಂದು ಅಮ್ಮಾ ಕೇಳಲು, ವಿಧಿಯಿಲ್ಲದೆ ಬಾಯಿ ಬಿಟ್ಟಾಗ ಅಲ್ಲಿಯೇ ಇದ್ದ ನಮ್ಮ‌ ತಂದೆಯವರು ಏನನ್ನೂ ಹೇಳದೆ ನೂರರ‌ ಮತ್ತೊಂದು ನೋಟೋಂದನ್ನು ಕೈಗಿತ್ತು ಸಾಮನುಗಳನ್ನು ತರಲು ಹೇಳಿದರು. ಅಬ್ಬಾ, ಬೀಸೋ‌ ದೊಣ್ಣೆ ತಪ್ಪಿದರೆ ‌ಸಾವಿರ ವರ್ಷ ಆಯಸ್ಸು ಎಂದುಕೊಂಡು ಒಂದೇ‌ ಉಸಿರಿನಲ್ಲಿ ಅಂಗಡಿಯವರಿಗೆ ಕೊಡಬೇಕಾದ ದುಡ್ಡು‌ ಕೊಟ್ಟು ನಿರಾಳವಾಗಿ ದಿನಸಿಯನ್ನು ತಂದಿಟ್ಟೆ.

ಆಗ ಶುರುವಾಯಿತು ನಮ್ಮ ಅಮ್ಮನ ಸಹಸ್ರ ನಾಮಾರ್ಚನೆ. ಮೈಮೇಲೆ ಜ್ಞಾನ ಇಲ್ಲ, ಪ್ರತಿಯೊಂದಕ್ಕೂ ಉಡಾಫೆ‌ ಹಾಗೆ ಹೀಗೆ ಎನ್ನುತ್ತಿದ್ದಾಗ ರೂಮಿನಿಂದ ಬಂದ ನಮ್ಮ ತಂದೆಯವರು ಸುಮ್ಮನೆ ಬೈಯ್ಯುವದರಿಂದ ಏನೂ ಪ್ರಯೋಜನವಿಲ್ಲ‌, ಏಕೆಂದರೆ ಅವನಿಗೆ ದುಡ್ಡಿನ ಬೆಲೆ ಗೊತ್ತಿಲ್ಲ. ಅವನು ದುಡಿದು ಸಂಪಾದಿಸಿದ್ದರೆ ಅವನಿಗೆ ಗೊತ್ತಾಗುತ್ತಿತ್ತು ಎಂದು  ಭಜನೆ ಮಾಡಲು‌ ದೇವಸ್ಥಾನಕ್ಕೆ ಹೊರಟೇ ಬಿಟ್ಟರು. ಒಂದೇಟು ಹೊಡೆದು ಬಿಟ್ಟಿದ್ದರೆ ಕೆಲ‌ಕಾಲ‌ ನೋವಿನಿಂದ ನರಳಿ‌ ನಂತರ ಸುಮ್ಮನಾಗಬಹುದಿತ್ತೇನೋ? ಅದರೆ ಅವರಾಡಿದ  ಮಾತು ನನ್ನ‌ ಮನಸ್ಸನ್ನು ‌ಬಹಳವಾಗಿ‌‌ ನಾಟಿತು. ಅಂದು‌‌ ಇಡೀ ರಾತ್ರಿ ನಿದ್ರೆಯೇ ಬರಲಿಲ್ಲ. ಬೆಳಗ್ಗೆ ಯಾವಗ ಆಗುವುದೋ, ಹೇಗಾದರೂ ಮಾಡಿ ಆ ಕಳೆದು‌ಕೊಂಡ ನೂರ ರೂಪಾಯಿಯನ್ನು  ನನ್ನ‌ ತಂದೆಯವರಿಗೆ ಹಿಂದುರಿಗಿಸಿ ಋಣ ಮುಕ್ತನಾಗುವ ಸಂಕಲ್ಪ ‌ತೊಟ್ಟೇ‌ ಬಿಟ್ಟೆ. ಕನಸು ಕಾಣುವುದು ‌ಸುಲಭ ಆದರೆ‌ ಅದನ್ನು  ಕಾರ್ಯಸಾಧಿಸುವುದು ಬಹಳ ಕಷ್ಟ‌ ಎಂಬುದನ್ನು ಅರಿಯಲು ಬಹಳ‌ ಸಮಯ ಬೇಕಾಗಲಿಲ್ಲ. ಆದರೂ‌ ತೊಟ್ಟ ಫಣ ಬಿಡುವ ಮನಸ್ಸಾಗದೆ ಏನು ಮಾಡುವುದೆಂದು ಯೋಚಿಸುತ್ತಿರುವಾಗಲೇ‌, ಪೋಂ ಪೋಂ ಎಂದು‌ ಹಾಲಿನ‌ ಹುಡುಗನ ಶಬ್ದ ‌ಕಿವಿಗೆ ಕೇಳಿಸಿತು. ಆಹಾ ಮರುಭೂಮಿಯಲ್ಲಿ‌ ನೀರು ಸಿಕ್ಕ‌ ಅನುಭವ ನನಗೆ. ಕೂಡಲೇ‌ ಹಾಲಿನ ಹುಡುಗನ ಬಳಿಯೋಡಿ,‌ ರಾಜಾ‌ ನಿಮ್ಮ ಹಾಲು‌ ಹಾಕೋದಕ್ಕೆ ಯಾರಾದರೂ ಹುಡುಗರು‌‌ ಬೇಕಾ ಎಂದು‌‌ ಕೇಳಿದೆ.‌‌ಅದಕ್ಕವನು ಹೌದು ಒಂದೆರಡು‌ ಹೊಸಾ ರೂಟಿಗೆ ಹುಡುಗರನ್ನು ಹುಡುಕುತ್ತಿದ್ದಾರೆ‌‌ ಎಂದಾಗ. ರೊಟ್ಟಿ ಜಾರಿ‌‌ ತುಪ್ಪಕ್ಕೆ‌ ಬಿದ್ದ ಅನುಭವ ನನಗೆ. ಆ ಕೂಡಲೇ‌ ಸೈಕಲ್ ‌ಹತ್ತಿ‌ ಒಂದೇ‌ ಉಸಿರಿನಲ್ಲಿ‌ ಹಾಲಂಗಡಿಯ ಮುಂದಿದ್ದೆ. ಹಾಲಿನವನು  ಮೊದ‌ಮೊದಲು‌ ನನ್ನನ್ನು ‌ಕೆಲಸಕ್ಕೆ ಸೇರಿಸಿಕೊಳ್ಳಲು‌‌ ನಿರಾಕರಿಸಿದರೂ ಮೂರ್ನಾಲ್ಕು ‌ದಿನಗಳ ನನ್ನ‌ ಸತತ ಕಾಟ ತಡೆಯಲಾರದೆ ಮಾರನೇ‌ ದಿನದಿಂದ‌‌‌ ಹಾಲು ಹಾಕಲು ಬರಲು ಹೇಳಿದಾಗ ಸ್ವರ್ಗಕ್ಕೆ ಮೂರೇ ಮೆಟ್ಟಲಿನ ಹತ್ತಿರವಿರುವ ಅನುಭವ ನನಗೆ.

ಅಂದಿನ ರಾತ್ರಿಯೂ ಸರಿಯಾಗಿ ನಿದ್ದೆ ಬಾರದೆ. ಅಲರಾಂ ಬೆಳಗ್ಗೆ ನಾಲ್ಕು ಮುಕ್ಕಾಲಿಗೆ  ಇಟ್ಟಿದ್ದರೂ ನಾಲ್ಕಕ್ಕೇ ಎಚ್ಚರವಾಗಿ ಹಾಸಿಗೆಯ ಮೇಲೆ‌‌‌ ಅತ್ತಿಂದಿತ್ತ ಹೊರಳಾಡಿ‌ ಎದ್ದು ಪ್ರಾತರ್ವಿಧಿಯನ್ನು ಮುಗಿಸಿ  ಮನೆಯವರಿಗೆ ಗೊತ್ತಾಗದಂತೆ ಬಾಗಿಲು ತೆಗೆದು ಚುಮು ಚುಮು ಚಳಿಯನ್ನೂ‌ ಲೆಕ್ಕಿಸದೆ ಸೈಕಲ್ಲನ್ನು ಏರಿ‌ ಸರಿಯಾಗಿ ಐದಕ್ಕೆ ಹಾಲಿನಂಗಡಿಯ ಮುಂದಿದ್ದೆ.  ಮೊದಲ‌ ಐದಾರು ದಿನ ಕಷ್ಟವೆನಿಸಿದರೂ ನಂತರ ‌ಅಭ್ಯಾಸವಾಗ ತೊಡಗಿತು. ಇದೆಲ್ಲವನ್ನೂ ಸುಮ್ಮನೆ ಗಮನಿಸುತ್ತಿದ್ದ ನನ್ನ‌ ತಂದೆಯವರು ಯಾವುದೇ‌‌ ಪ್ರತಿಕ್ರಿಯೆ ‌ತೋರದಿದ್ದದ್ದು ನನಗೆ ಆಶ್ಚರ್ಯ ಎನಿಸಿದರೂ ಅವರ‌ ಕೈಗೆ ನಾನು ಕಷ್ಟ ಪಟ್ಟು ಸಂಪಾದಿಸಿ ನೂರು ರೂಗಳನ್ನು ಕೊಟ್ಟು ಮಾತಾಡೋಣವೆಂಬ ಹುಂಬತನ ನನ್ನದು.

ಹಾಗೂ‌ ಹೀಗೂ‌ ಒಂದು‌ ತಿಂಗಳು ಕಳೆದು ಹೋದದ್ದೇ ಗೊತ್ತಾಗಲಿಲ್ಲ. ನಾನು‌‌ ಕಾಯುತ್ತಿದ್ದ ಸಮಯ‌ ಬಂದೇ ಬಿಟ್ಟಿತು. ನನ್ನ ಹಾಲಿನಂಗಡಿಯ‌ ಯಜಮಾನ ಕರೆದು‌ ನನ್ನ‌ ಒಂದು ತಿಂಗಳ ಪರಿಶ್ರಮಕ್ಕೆ ತೊಂಬ್ಬಂತ್ತು‌ ರೂಪಾಯಿಗಳನ್ನು ನನ್ನ ಕೈಗಿತ್ತಾಗ ಆದ ಅನುಭವ ವರ್ಣಿಸಲಸದಳ. ಅದಕ್ಕಿಂತ ಮುಂಚೆ ಅಪ್ಪಾ ಕೊಟ್ಟ ಎಷ್ಟೋ ದುಡ್ಡನ್ನು ಜೋಬಿನಲ್ಲಿ‌ ಇಟ್ಟುಕೊಂಡು ಓಡಾಡಿದ್ದರೂ ಅಂದು ಸ್ವಂತ ಪರಿಶ್ರಮದಿಂದ ದುಡಿದ ದುಡ್ಡನ್ನು ಜೋಬಿನಲ್ಲಿ‌ ಇಟ್ಟಿಕೊಂಡಿದ್ದರ‌ ಅನುಭವವೇ ಬೇರಾಗಿತ್ತು. ಹಾಲಿನಂಗಡಿಯಿಂದ ಮನೆಗೆ ಬರುವವರೆಗೂ ಕ್ಷಣ ಕ್ಷಣಕ್ಕೂ‌ ‌ಜೋಬನ್ನು ಮುಟ್ಟಿ‌‌ಕೊಂಡು  ಹಣ ಭದ್ರವಾಗಿರುವುದನ್ನು ಮುಟ್ಟಿ ಮುಟ್ಟಿ ನೋಡಿ ಕೊಳ್ಳುತ್ತಾ‌ ಮನೆಗೆ‌‌ ಬಂದು ಅಪ್ಪಾ ಅಮ್ಮಂದಿರ‌‌ ಮುಂದೆ ‌ನಿಂತಾಗ ಇಡೀ ಜಗತ್ತನ್ನೇ ಗೆದ್ದ ಅನುಭವ.

ಜೋಬಿನಿಂದ‌ ತೊಂಬತ್ತು ರೂಪಾಯಿಗಳನ್ನು ಅಪ್ಪಾನ ಕೈಗಿತ್ತು‌ ಮಿಕ್ಕ‌ ಹತ್ತು ರೂಪಯಿಗಳನ್ನು ಮುಂದಿನ ತಿಂಗಳು ಕೊಡುತ್ತೇನೆ‌ ಎಂದು ದರ್ಪದಿಂದ ಹೇಳಿದಾಗ, ಅಷ್ಟೇ ಸಮಚಿತ್ತದಿಂದ ಹಸನ್ಮುಖರಾಗಿ ನಮ್ಮ‌‌ ತಂದೆಯವರು ಆ ದುಡ್ಡನ್ನು ನಮ್ಮ ತಾಯಿಯವರ ಕೈಗಿತ್ತು ನಂಜನಗೂಡಿನ ಶ್ರೀಕಂಠೇಶ್ವರನ ಜಾತ್ರೆಗೆ ಸಂಗ್ರಹ ಮಾಡುತ್ತಿದ್ದ ಹುಂಡಿಗೆ‌ ಹಾಕಲು‌ ಹೇಳಿದಾಗ ನನ್ನ ಪಿತ್ತ ನೆತ್ತಿಗೇರಿತ್ತು. ನಾನು ಅಷ್ಟು ಕಷ್ಟ ಪಟ್ಟು ದುಡಿದು ತಂದ ಹಣವನ್ನು ಅಪ್ಪಾ ತಿರಸ್ಕರಿಸಿ, ದೇವರ ಹುಂಡಿಗೆ ಹಾಕಿ ನನ್ನನ್ನು ಮತ್ತು ನನ್ನ ಪರಿಶ್ರಮವನ್ನೂ ಅವಮಾನ ಪಡಿಸಿದಕ್ಕೆ ಕೋಪ ಬೇರೆ.  ನನ್ನ‌ ಆ ಪರಿಸ್ಥಿತಿಯನ್ನು‌‌ ಸೂಕ್ಷ್ಮವಾಗಿ ಗಮನಿಸಿದ ನನ್ನ ತಂದೆಯವರು  ಮಗೂ ಇಂದು‌ ನನಗೆ ಹೆಮ್ಮೆಯ ದಿನ. ನನ್ನ ಮಗನಿಗೆ ದುಡ್ಡಿನ ಮಹತ್ವ ಅರಿವಾಗಿದೆ. ನಾವು ಎಷ್ಟೇ ಪರಿಶ್ರಮ ಪಟ್ಟು ದುಡಿದರೂ ಅದಕ್ಕೆ ಭಗವಂತ ಪ್ರೇರಣೆ ಇಲ್ಲದೆ ಅಸಾಧ್ಯ  ತೇನ ವಿನಾ ತೃಣಮಪಿ ನಚಲತಿ‌.

ಮೂಕಂ ಕರೋತಿ ವಾಚಾಲಂ! ಫಗುಂ ಲಂಘಯತೇ ಗಿರಿಂ! ಯತ್ಕೃಪಾ ತಮಹಂ ವಂದೇ! ಪರಮಾನಂದ ಮಾಧವಂ!! ಎಂಬ ಶ್ಲೋಕವನ್ನು ಹೇಳಿ.  ಆ ಭಗವಂತನ ಅನುಗ್ರಹವಿದ್ದಲ್ಲಿ ಮಾತನ್ನೇ ಆಡದ ಮೂಕನೂ ವಾಚಾಳಿಯಾಗುತ್ತಾನೆ. ನಡೆಯಲು ಸಾಧ್ಯವಾಗದ ಹೆಳವನೂ ಕೂಡ ಬೆಟ್ಟವನ್ನೇ ಜಿಗಿಯುವ ಮಟ್ಟಕ್ಕೇರುತ್ತಾನೆ. ಹಾಗಾಗಿ ಆ ಭಗವಂತನ ಪ್ರೇರಣೆಯಿಂದಲೇ  ನೀನೀ ಹಣ ಸಂಪಾದಿಸಿರುವ ಕಾರಣದಿಂದ ಅದರ ಮೊದಲ ಪಾಲು ಅವನಿಗೇ ಸಲ್ಲಬೇಕು ಎಂದು ತಿಳಿ ಹೇಳಿದಾಗ ನೆತ್ತಿಗೇರಿದ್ದ ಪಿತ್ತ ಜರ್ ಎಂದು ಕೆಳಗಿಳಿದು ನನ್ನ ಅರಿವಿಗೇ ಬಾರದೆ ಅಪ್ಪನ‌‌ ಕಾಲಿಗೆರಗಿದ್ದೆ.

ಅಕ್ಕರೆಯಿಂದ ಮೈದಡವುತ್ತಾ ಮಗು ಕಳ್ಳತನ‌ ಮಾಡದೆ, ಸುಳ್ಳನ್ನಾಡದೆ ಕಷ್ಟ ಪಟ್ಟು ಸಂಪಾದಿಸಲು ನಿನಗಿನ್ನೂ ಸಮಯವಿದೆ. ಈಗ ವಿದ್ಯಾಭ್ಯಾದ ಕಡೆ ಚಿತ್ತ ಹರಿಸು‌ ಎಂದು ಆಶೀರ್ವದಿಸಿದರು. ಪರೀಕ್ಷೆಗೆ ಇನ್ನೂ‌ ಬಹಳ ಸಮಯವಿದ್ದುದರಿಂದ ಇನ್ನೂ‌ ಎಂಟು ಹತ್ತು ‌ತಿಂಗಳು‌ ನನ್ನ‌ ಕಾಯಕವನ್ನು ಮುಂದುವರಿಸಿ ‌ಪರೀಕ್ಷೆಯ ನೆಪವೊಡ್ಡಿ ಹಾಲಂಗಡಿ‌ ಮಾಲಿಕನಿಗೆ ಬೇಸರ‌ ತಾರದೆ ಕೆಲಸವನ್ನು ಬಿಟ್ಟು ವಿದ್ಯಾಭ್ಯಾಸದ ಕಡೆ ಆಸಕ್ತಿವಹಿಸಿ‌ ತಕ್ಕ‌ ಮಟ್ಟಗಿನ ವಿದ್ಯೆ ಪಡೆದು‌ ಇಂದು‌‌ ಜಗದ್ವಿಖ್ಯಾತ  ಕಂಪನಿಯಲ್ಲಿ ಉನ್ನತ ‌ಪದವಿ ಪಡೆದು, ಕೈ‌ ತುಂಬಾ ಸಂಬಳ ಪಡೆಯುತ್ತಿದ್ದರೂ ಮೊಟ್ಟ ‌ಮೊದಲು‌ ಪಡೆದ ಎರಡಂಕಿಯ ಸಂಬಳವೇ ಹೆಚ್ಚೆನಿಸುತ್ತಿದೆ.

ನನ್ನ  ಇಂದಿನ ಈ ಸ್ಥಿತಿಗೆ ತಲುಪಲು‌

ನನ್ನ ಜನ್ಮದಾತರಾಗಿ,

ನನ್ನ‌ ಆಶ್ರಯದಾತರಾಗಿ,

ನನ್ನ ಮಾರ್ಗದರ್ಶಕರಾಗಿ,

ನನ್ನ ಹಿತಚಿಂತಕರಾಗಿ, ಕಡೆಗೆ ನನ್ನ ಅತ್ಯುತ್ತಮ ಸ್ನೇಹಿತರಾಗಿದ್ದ

ನನ್ನ ‌ತಂದೆ ಶ್ರೀ ಶಿವಮೂರ್ತಿಯವರಿಗೆ ತಂದೆಯಂದಿರ ದಿನದಂದು ನನ್ನ  ಹೃದಯಪೂರ್ವಕ ಸಾಷ್ಟಾಂಗ ನಮನಗಳು.

ನಿಮ್ಮ ಅಗಲಿಕೆ ನಮ್ಮನ್ನು ಸದಾ ಕಾಡುತ್ತದೆಯಾದರೂ, ನಿಮ್ಮ ಆಶೀರ್ವಾದ ನಮ್ಮನ್ನು ಸದಾ ಕಾಪಾಡುತ್ತದೆ

ಭಗವಂತಾ ನನಗೆ ಮುಂದಿನ‌ ಜನ್ಮ ಕೊಡವ ಮನಸ್ಸು ನಿನಗಿದ್ದರೆ, ದಯವಿಟ್ಟು‌ ಇದೇ‌ ತಂದೆ ತಾಯಂದಿರ ಮಗನಾಗುವ ಭಾಗ್ಯ‌ ಕರುಣಿಸಿಸು 🙏🙏🙏🙏

ವೀಡಿಯೋ : https://youtu.be/WA__9v2PBYs

 

ಬುದ್ಧಿವಂತ ರೈತ

ಅದೊ೦ದು ಪುಟ್ಟ ಹಳ್ಳಿ, ಅಲ್ಲೊಬ್ಬ ರೈತ ತನ್ನ ಪಾಲಿಗೆ ಬಂದಿದ್ದ ಜಮೀನಿನಲ್ಲಿ ಬೇಸಾಯ ಮಾಡುತ್ತಾ ಜೊತೆ ಜೊತೆಗೆ ಹೈನುಗಾರಿಕೆ ಮಾಡುತ್ತಾ ತನ್ನ ಸಂಸಾರದೊಂದಿಗೆ ಸುಖ:ದಿಂದಿದ್ದನು. ಅವನ ಬಳಿ ಇದ್ದ ಒಂದು ದೇಸೀ ಹಸು ದಷ್ಟ ಪುಷ್ಟವಾಗಿದ್ದು ಪ್ರತಿದಿನ ಬೆಳಿಗ್ಗೆ‍ ಸಂಜೆ ಸುಮಾರು ಎಂಟರಿಂದ ಹತ್ತು ಲೀಟರ್ ಹಾಲನ್ನು ಕೊಡುತ್ತಿದ್ದರಿಂದ ಆ ಹಸು ಆ ರೈತನ ಅಚ್ಚುಮೆಚ್ಚಾಗಿತ್ತು. ಒಂದು ದಿನ ಅಚಾನಕ್ಕಾಗಿ ಆ ಹಸುವಿಗೆ ಕಾಯಿಲೆ ಬಂದು, ಇದ್ದಕ್ಕಿದ್ದಂತೆ ಹಾಲಿನ ಪ್ರಮಾಣದಲ್ಲಿ ಕಡಿಮೆಯಾಗಿ, ಬರಬರುತ್ತಾ ಹಸು ಬಡಕಲಾಗ ತೊಡಗಿತು. ಇದರಿಂದ ಚಿಂತಿತನಾದ ರೈತನು ತನಗೆ ತಿಳಿದಿದ್ದ ಎಲ್ಲಾ ರೀತಿಯ ನಾಟಿ  ಔಷಧಿಗಳನ್ನು  ಹಸುವಿಗೆ ಕೊಟ್ಟರೂ ಹಸುವಿನ ಆರೋಗ್ಯ ಸುಧಾರಿಸಲೇ ಇಲ್ಗ. ಹತ್ತಿರದ ಪಶು ವೈದ್ಯರ ಚಿಕಿತ್ಸೆಗಳು ಫಲಕಾರಿಯಾಗದಿದ್ದಾಗ  ತನ್ನ  ಮೆನೆಯವರ ಒತ್ತಾಯದ ಮೇರೆಗೆ ದೇವಸ್ಠಾನಕ್ಕೆ ಹೋಗಿ ಭಕ್ತಿಯಂದ ತನ್ನ ಹಸುವಿನ ಕಾಯಿಲೆಯನ್ನು ಶೀಘ್ರವಾಗಿ ಗುಣಪಡಿಸ ಬೇಕೆಂದು ಕೋರಿದ.  ಅಲ್ಲಿಯೇ ಇದ್ದ ದೇವಾಲಯದ ಅರ್ಚಕರು, ಬರೀ ಬಾಯಿ ಮಾತಿನಿಂದ ಕೇಳಿದರೆ ಸಾಲದು. ಏನಾದರೂ ಕಾಣಿಕೆ ಕಟ್ಟಿ ಹರಕೆ ಕೋರಿಕೊಳ್ಳಲು ಸೂಚಿಸಿದಾಗ, ಎಲ್ಲ ರೀತಿಯ ಭರವಸೆಗಳೂ ಕೈಗೂಡದೆ ಹತಾಶನಾಗಿದ್ದ  ರೈತ ಕೊನೆಯ ಆಸೆಯಂತೆ, ಹೇ ದೇವಾ, ಈವರೆಗೆ ನಾನು ಮಾಡಿದ ಎಲ್ಲ ರೀತಿಯ ಪ್ರಯತ್ನಗಳೂ ಫಲಕಾರಿಯಾಗದೆ ನಾನು ಬಹಳ ನೊಂದು ಕಟ್ಟಕಡೆಯ ಆಸೆಯಂದಿಗೆ ನಿನ್ನ  ಮೊರೆ ಹೋಗುತ್ತಿದ್ದೇನೆ.  ನೀನೇನಾದರೂ ಈ ಹಸುವಿನ ಕಾಯಿಲೆ ಗುಣಪಡಿಸಿದಲ್ಲಿ, ಆ ಹಸುವನ್ನು ಆ ಕೂಡಲೇ ಮಾರಿ ಅದರಿಂದ ಬಂದ ಲಾಭದ ಅರ್ಧ ಪಾಲನ್ನು  ನಿನಗೇ ಸಮರ್ಪಿಸುತ್ತೇನೆ ಎಂದು ಅರ್ಚಕರ ಸಮ್ಮುಖದಲ್ಲಿ ಹರಕೆ ಕೈಗೊಳ್ಳುತ್ತಾನೆ.  ಅರ್ಚಕರು ದೇವರಿಗೆ ರೈತನ ಹೆಸರಿನಲ್ಲಿ ಅರ್ಚನೆ ಮಾಡಿ, ದೇವರ ತೀರ್ಥವನ್ನು ಹಸುವಿಗೆ ಪ್ರೋಕ್ಷಿಸಿ, ಹಸುವಿನ ಕೊರಳಿಗೆ ತಾಯಿತವೊಂದನ್ನು ಕಟ್ಟಿ, ಹೇ ಭಗವಂತಾ  ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿ ಕಡೆಗೆ ನಿನ್ನ ಮೊರೆ ಹೊಕ್ಕಿರುವ ಈ ಬಡ ರೈತನ ಕೋರಿಕೆಯನ್ನು ಮನ್ನಿಸಿ ಹಸುವಿನ ಆರೋಗ್ಯವನ್ನು ಆದಷ್ಟು ಬೇಗನೆ ಸರಿಪಡಿಸು ಎಂದು ಭಕ್ತಿಯಿಂದ ಕೇಳಿಕೊಳ್ಳುತ್ತಾರೆ.

ಕಾಕತಾಳೀಯವೋ, ಭಗವಂತನ ಅನುಗ್ರಹವೂ ಅಥವ ರೈತನ ಅದೃಫ್ಹ್ಟವೋ ಏನೋ, ಹಸುವಿನ ಆರೋಗ್ಯ ದಿನೇ ದಿನೇ ಚೇತರಿಸಿಕೊಂಡು ಮುಂಚಿನಷ್ಟಲ್ಲದಿದ್ದರೂ, ದಿನಕ್ಕೆ ನಾಲ್ಕೈದು ಲೀಟರ್ ಹಾಲನ್ನು ಕೊಡಲು ಶುರುವಾದಾಗ ರೈತನ ಮುಖದಲ್ಲಿ ಸ್ವಲ್ಪ ನಗು ಕಾಣಬರುತ್ತದೆ. ಇದನ್ನೆಲ್ಲಾ ಗಮನಿಸುತ್ತಿದ್ದ ಅರ್ಚಕರು ರೈತನಿಗೆ ಆತನು ದೇವರ ಸಮ್ಮುಖದಲ್ಲಿ ಹೊತ್ತಿದ್ದ ಹರಕೆಯನ್ನು ನೆನೆಪಿಸಿದಾಗ, ಉಡಾಫೆಯಿಂದ ನನ್ನ ಹಸು ಸಂಪೂರ್ಣವಾಗಿ ಚೇತರಿಕೊಂಡು ಮುಂಚಿನಂತೆಯೇ ಹಾಲನ್ನು ಕೊಟ್ಟಾಗ ಮಾತ್ರ ಮಾರುತ್ತೇನೆ ಎಂದಾಗ, ಅರ್ಚಕರು ಆತನ ವಚನ ಭ್ರಷ್ಟತೆಗೆ ಮನನೊಂದು  ಸಮಯಕ್ಕೆ ಸಹಾಯ ಮಾಡಿದವರನ್ನೂ, ಹತ್ತಲು ಉಪಯೋಗಿಸಿದ ಏಣಿಯನ್ನು ಒದೆಯುವುದು ಒಳ್ಳೆಯ ಗುಣವಲ್ಲಾ ಎಂದು ಹೇಳಿ ನಿನಗೆ ತಿಳಿದ ಹಾಗೆ ಮಾಡಪ್ಪಾ ಎಂದು ಹೊರಟು ಬಿಡುತ್ತಾರೆ. ಹಾಗೆಯೇ ಸ್ವಲ್ಪ ದಿನಗಳು ಕಳೆದು ಹಸುವಿನ ಆರೋಗ್ಯ ಮತ್ತಷ್ಟೂ ಚೇತರಿಕೆಯಾಗಿ ಕೊಡುವ ಹಾಲಿನ ಪ್ರಮಾಣ ಹೆಚ್ಚಾಗಿ ಮೊದಲಿನಂತೆಯೇ ಆದಾಗ ಆ ರೈತನ ಮಡದಿಯೂ ಹಾಗೂ ಅವನ ತಾಯಿಯು, ದೇವರ ಹರಕೆಯ ಬಗ್ಗೆ ಮತ್ತೊಮ್ಮೆ ನೆನಪಿಸುತ್ತಾರೆ. ಒಲ್ಲದ ಮನಸ್ಸಿನಿಂದ ಮನೆಯವರ ಒತ್ತಾಯಕ್ಕೂ ಹಾಗೂ ದೈವನಿಂದನೆಯ ಶಾಪ ತಟ್ಟಿ ತನ್ನ ಮಕ್ಕಳಿಗೆ ಮುಂದಾಗ ಬಹುದಾದ  ವಿಪತ್ತುಗಳಿಗೆ ಹೆದರಿದರೂ ಈ ಸಮಸ್ಯೆಯನ್ನು ಬೇರಾವ ರೀತಿಯಿಂದ ಬಗೆ ಹರಿಸಬಹುದೆಂದು ಯೋಚಿಸುತ್ತಿರುವಾಲೇ ಅವನ ತಲೆಯಲ್ಲಿ ಒಂದು ಉಪಾಯ ಹೊಳೆದು ಮುಖದಲ್ಲಿ ಸಣ್ಣ ಮಂದಹಾಸ ಮೂಡುತ್ತದೆ.

ಮಾರನೇ ದಿನ ಬೆಳಗಿನ ಜಾವವೇ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಭಗವಂತನಿಗೆ ಕೈ ಮುಗಿದು ಹತ್ತಿರದ ಸಂತೆಗೆ ತನ್ನ ಹಸುವನ್ನು ಮಾರಲು ಹೊರಡುತ್ತಾನೆ.  ಸಂತೆಯಲ್ಲಿ , ರೈತನು ಎತ್ತರದ ಧನಿಯಲ್ಲಿ  ಈ ಹಸುವಿನ ಬೆಲೆ ಕೇವಲ ಸಾವಿರ ರೂಪಾಯಿಗಳು, ಕೊಳ್ಳಲು ಆಸಕ್ತಿಯಿದ್ದವರು ಈ ಕೂಡಲೇ ಬನ್ನಿ ಎಂದಾಗ, ನೆರೆದಿದ್ದವರೆಲ್ಲರೂ ಆಶ್ಛರ್ಯಚಕಿತರಾಗುತ್ತಾರೆ. ಈತನ ಹಸವಿನ ಹಾಲು ಕೊಡುವ ಸಾಮರ್ಥ್ಯ ಹಾಗೂ ಅವನು ಹಸುವನ್ನು ಮಾರಲು ಬಂದಿರುವ ಹಿನ್ನಲೆ ತಿಳಿದಿದ್ದ ಹಲವು ಹಸುವನ್ನು ಇಷ್ಟು ಕಡಿಮೆ ಬೆಲೆಯಲ್ಲಿ ಮಾರಲು ಏನು ಕಾರಣ ಎಂದು ಯೋಚಿಸುತ್ತಿದ್ದಂತೆಯೇ ಅವರುಗಳ ಪೈಕಿ ಒಬ್ಬ ರೈತನು ಓಡೋಡಿ ಬಂದು, ರೈತನ ಕೈಯಲ್ಲಿ ಸಾವಿರದ ಒಂದು ರೂಗಳನ್ನಿಟ್ಟು, ಹಸುವಿನ ಹಗ್ಗವನ್ನು ಹಿಡಿದು ಎಳೆದೊಯ್ಯಲು ಪ್ರಯತ್ನಿಸುತ್ತಿದ್ದಂತೆಯೇ, ಹಸುವಿನ ಮಾಲಿಕ ಆ ರೈತನ ಕೈ ಹಿಡಿದು ಈ ಹಸುವನ್ನು ಒಂದು ಸಾವಿರಕ್ಕೆ ಕೊಳ್ಳಬಯಸುವವರು, ಈ ಹಸುವಿನ ಜೊತೆಗೆ ಅದರ ಜೊತೆಗಿರುವ ಎತ್ತನ್ನೂ ಕೊಳ್ಳಬೇಕು ಎಂದಾಗ ಇಂತಹ ದಷ್ಟ ಪುಷ್ಟ ಹಸುವಿಗೇ ಸಾವಿರ ರೂಪಾಯಿಗಳಾದರೆ ಈ ಬಡಕಲು ಎತ್ತಿಗೆ ಇನ್ನೆಷ್ಟಿರಬಹುದೆಂದು ಮರು ಯೋಚಿಸದೆ ಹಸುವಿನ ಜೊತೆಗೆ ಎತ್ತನ್ನೂ ಕೊಳ್ಳುತ್ತೇನೆ ಎಂದು ಗಟ್ಟಿಯಾಗಿ ನೆರೆದಿದ್ದವರೆಲ್ಲರಿಗೂ ಕೇಳುವಂತೆ ಹೇಳೀ ಎತ್ತಿನ ಬೆಲೆ ಎಷ್ಟೆಂದು ಕೇಳುತ್ತಾನೆ. ಇತಂಹ ಅವಕಾಶಕ್ಕೇ ಕಾಯುತ್ತಿದ್ದ ಆ ಕೃತ್ರಿಮ  ರೈತ, ಹಸುವಿನ ಬೆಲೆ ಕೇವಲ ಒಂದು ಸಾವಿರ  ರೂಪಾಯಿಗಳು ಆದರೆ, ಈ ಎತ್ತಿನ ಬೆಲೆ ಐವತ್ತು ಸಾವಿರವೆಂದಾಗ ಕೊಳ್ಳಲು ಬಂದ ರೈತನ ಮುಖ ಇಂಗು ತಿಂದ ಮಂಗನಂತಾದರೂ ಕೊಟ್ಟಮಾತಿಗೆ ತಪ್ಪಲಾರದೆ, ರೈತನ ಮೋಸವನ್ನು ಮನಸ್ಸಿನಲ್ಲೇ ಶಪಿಸುತ್ತಾ ಐವತ್ತೊಂದು ಸಾವಿರಗಳನ್ನು ರೈತನ ಕೈಗಿತ್ತು ಹಸುವನ್ನೂ , ಬಡಕಲು ಎತ್ತನ್ನು ಹೊಡೆದು ಕೊಂಡು ಅವನ ಮನೆಯ ಕಡೆ ಹೊರಟರೆ, ಈ ರೈತ ಊರಿಗೆ ಮರಳಿ, ಮನೆಗೂ ಹೋಗದೇ ನೇರವಾಗಿ ದೇವರ ಗುಡಿಗೇ ಹೋಗಿ ಅರ್ಚಕರ ಮತ್ತು  ಅಲ್ಲಿದ್ದ   ಭಕ್ತಾದಿಗಳ ಸಮ್ಮುಖದಲ್ಲಿ ಭಗವಂತನ ಹುಂಡಿಗೆ ಹಸುವನ್ನು ಮಾರಿದ  ಬೆಲೆಯಾದ ಸಾವಿರರೂಗಳಲ್ಲಿ ಐದು ನೂರುರೂಗಳನ್ನು ಹಾಕಿ ಜೋರು ಧನಿಯಲ್ಲಿ ಭಗವಂತಾ, ನನ್ನಂತಹ ಆಡಿದ ಮಾತನ್ನು ಸರಿಯಾಗಿ ಉಳಿಸಿ ಕೊಳ್ಳುವ  ಭಕ್ತರನ್ನು ಪಡೆದ ನೀನೇ ಪುಣ್ಯವಂತ. ನನ್ನ ಹಾಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಭಕ್ತರು ನಿನಗೆ ಸಿಗುವುದು ಅಪರೂಪ. ಸದಾ ನಿನ್ನ ಕರುಣೆ ನನ್ನ ಮೇಲಿರಲಿ ಎಂದು ಕೈ ಮುಗಿದು. ಭಗವಂತನಿಗೇ ಮೂರು ಪಂಗನಾಮ ಹಾಕಿ, ಎತ್ತು ಮಾರಿದ ದುಡ್ಡನ್ನು ಭದ್ರವಾಗಿಟ್ಟುಕೊಂಡು, ಭಗವಂತನಿಗೆ ಬೇಸ್ತು ಬೀಳಿಸಿದ ತನ್ನ ಬುದ್ದಿವಂತಿಕೆಯನ್ನು ತಾನೇ ಮೆಚ್ಚಿಕೊಳ್ಳುತ್ತಾ ಮನೆ ಕಡೆಗೆ ನಡೆದ.

ಯಾಕೋ ಏನೋ, ಅಡಿಕಾರಕ್ಕೇರಿದ ಇಪ್ಪನ್ಕಾಲ್ಕು ಗಂಟೆಯೊಳಗೆ ಎಲ್ಗ್ಲ ರೀತಿಯ ಸಾಲ ಮನ್ನಾ ಮಾಡುವೆನೆಂದು ಹೇಳೀ,  ಸಾಂದರ್ಭಿಕ ಶಿಶುವಿನಂತೆ ಪುಣ್ಯಾತ್ಮನ ಕೃಪೆಯಿಂದ ಅಧಿಕಾರಕ್ಕೆ ಬಂದು, ಪೂರ್ಣಬಹುಮತ ಬಾರದ ಕಾರಣ ಸಾಲ ಮನ್ನ ಮಾಡಲಾಗದೆಂದು ವರಾತೆ ತೆಗೆದು, ಕೊನೆಗೆ ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದು, ದಿನ, ವಾರ, ಪಕ್ಷ ಎಂದು ಕಾಲಮಿತಿ ಕೋರಿ, ಅತ್ತೂ ಕರೆದು, ಸಾರ್ವಜನಿಕರ ಅತ್ಯಗತ್ಯ  ವಸ್ತುಗಳಾದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ, ವಿದ್ಯುತ್ಛಕ್ತಿ ಬೆಲೆ ಏರಿಸಿ, ರೈತರ ಮೂಗಿಗೆ ತುಪ್ಪ ಸವರಿದಂತೆ ಭಾಗಶಃ ಸಾಲ ಮನ್ನಾ ಮಾಡಿ,  ತನ್ನನ್ನೇ ತಾನು ಆತ್ಮರತಿಯಂತೆ ರೈತರ ಬಂಧು, ಕಲಿಯುಗ ಕರ್ಣ ಎಂದು ಹೊಗಳಿ  ಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿಯನ್ನು  ನೋಡಿ ಈ ಮೇಲಿನ ಪ್ರಸಂಗ ನೆನಪಿಗೆ ಬಂದಿತು.

ಜನರ ಸೇವೆ ಜನಾರ್ಧನರ ಸೇವೆ ಎನ್ನುತ್ತಾ ಕೇವಲ ಮೂರೇ ಮೂರು ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಡುತ್ತಿರುವ ಇವರನ್ನು ಮೂರುಕಾಸಿನ ಮುಖ್ಯಮಂತ್ರಿ ಎನ್ನಲು ಅಡ್ಡಿ ಇಲ್ಲ ಅಲ್ಲವೇ?

ಏನಂತೀರೀ?

ಮೊಬೈಲ್ ಫೋನ್ ಅನಾಹುತ

ಎಂದಿನಂತೆಯೇ  ಇಂದು ಬೆಳ್ಳಂಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ದೈನಂದಿನ ವ್ಯಾಯಮವನ್ನು ಮುಗಿಸಿ ಮನೆಗೆ ಬಂದು ವಾಟ್ಸಾಪ್ ಸಂದೇಶಗಳನ್ನು ಓದುತ್ತಿದ್ದಾಗ,15 ವರ್ಷಗಳ ನನ್ನ ಮಗನಷ್ಟೇ ವಯಸ್ಸಿನ   ಪರಿಚಯಸ್ಠ ಬಾಲಕನ ಅಕಾಲಿಕ ಮರಣ ಸುದ್ದಿ ಓದಿ  ಕರಳು ಚುರುಕ್ ಎಂದಿತು. ಆಟ ಪಾಠಗಳಲ್ಲಿ ಚುರುಕಾಗಿದ್ದ ಹುಡುಗ, ಹಾಡು, ಅಮೃತವಚನ, ಶ್ಲೋಕಗಳನ್ನು ನಿರ್ಗಳವಾಗಿ ಹೇಳುತ್ತಿದ್ದದ್ದು ಕಣ್ಣುಮುಂದೆ ಬಂದು ಕಣ್ಣಂಚಿನಲ್ಲಿ ನೀರೂರಿ, ಅಭ್ಯಾಸದ ಬಲದಂತೆ  ಭಗವಂತನು ಮೃತನ ಆತ್ಮಕ್ಕೆ  ಶಾಂತಿ ಕೊಡಲಿ ಹಾಗು ಮಗನನ್ನು ಕಳೆದು ಕೊಂಡ ಕುಟುಂಬವರ್ಗದವರಿಗೆ   ದುಖಃ  ಭರಿಸುವ ಶಕ್ತಿಯನ್ನು ನೀಡಲಿ ಎಂದು ವಾಟ್ಸಾಪ್ ಸಂದೇಶ ಕಳುಹಿಸಿ , ದಿನ ಪತ್ರಿಕೆಯನ್ನು  ಓದಲು ಶುರುಮಾಡುತ್ತಿದ್ದಂತೆಯೇ, ಮೊಬೈಲ್ ಕೊಡಿಸದಿದ್ದಕ್ಕೆ  ಎಸ್ಸೆಸ್ಸೆಲ್ಸಿ ವಿಧ್ಯಾರ್ಥಿ ಆತ್ಮಹತ್ಯೆ ಎಂಬ ಸುದ್ದಿ ನೋಡಿ ಕುತೂಹಲದಿಂದ ಓದಿದರೆ, ನಾನು ಮೇಲೆ ತಿಳಿಸಿದ ಹುಡುಗನದ್ದೇ ಸುದ್ದಿ ಅದಾಗಿತ್ತು.

ತನ್ನ  ಎಲ್ಲ ಸಹಪಾಠಿಗಳ ಬಳಿ ಮೊಬೈಲ್ ಇದೆ ತನಗೂ ಒಂದು ಕೊಡಿಸಿರೆಂದು ಕೃಷಿಕ ಕುಟುಂಬದ ಪೋಷಕರಲ್ಲಿ ಹಿಂದಿನ ದಿನ ಆಗ್ರಹಿಸಿ, ಪೋಷಕರು ನಿರಾಕರಿಸಿದ್ದ ಕಾರಣ ಮನ ನೊಂದು ಮಾರನೇ ದಿನ ಬೆಳಗ್ಗಿನ ಜಾವ ಮನೆಯ ಸಮೀಪ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಒಂದರಲ್ಲಿ ನೇಣಿಗೆ ಶರಣಾಗಿದ್ದ ಸುದ್ದಿ ಓದಿ ಒಂದು ಕ್ಷಣ ಧಿಗ್ಬ್ರಮೆಗೊಳಗಾದೆ.

ಒಂದು ಮೊಬೈಲ್ ಕೊಡಿಸದಿದ್ದಕ್ಕೆ ಆತ್ಮಹತ್ಯೆಗೊಳಗಾಗುವಂತಹ ದುರ್ಬಲ ಯುವ ಜನತೆಯನ್ನು ಬೆಳೆಸುತ್ತಿದ್ದೇವೆಯಾ, ಪರೀಕ್ಷೆಗಳ ಫಲಿತಾಂಶಗಳು ಬಂದಾಗಲೂ ಇದೇ ಪುನರಾವರ್ತನೆ ಆಗುತ್ತಿರುವುದು ಖೇದಕರ. ನನಗೆ ಉಕ್ಕಿನ ದೇಹದ ತರುಣರನ್ನು ಕೊಡಿ ನಾನೀಗಲೇ ಸ್ವಾತಂತ್ಯ್ರವನ್ನು ಕೊಡಿಸುತ್ತೇನೆ ಎಂದ ವಿವೇಕಾನಂದರು ಖಂಡಿತವಾಗಿಯೂ ಬಯಸಿದ್ದು ಇಂತಹ ದುರ್ಬಲ ಮನಸ್ಸಿನ ಯುವ ಜನತೆಯನ್ನಲ್ಲಾ. ಆಟೋಟಗಳೊಂದಿಗೆ ಪರಿಸರದ ಮಧ್ಯದಲ್ಲಿ ನೈಸರ್ಗಿಕವಾಗಿ ಗುರುಕುಲ ಪದ್ದತಿಯಲ್ಲಿ ಪ್ರಾಯೋಗಿಕವಾಗಿ ಕಲಿತು  ವಿದ್ಯೆಯ ಜೊತೆಗೆ  ಯೋಗ, ದೈಹಿಕ ಪರಿಶ್ರಮದ ಮೂಲಕ ಮಾನಸಿಕವಾಗಿಯೂ ದೈಹಿಕವಾಗಿಯೂ ಸಧೃಡರಾಗುತ್ತಿದ್ದ   ಪದ್ದತಿ ನಶಿಸಿ ಬ್ರಿಟಿಷ್ ಅಧಿಕಾರಿ  ಮೆಕಾಲೆಯ ದುರಾಲೋಚನೆಯಿಂದ ಆರಂಭಗೊಂಡ ಆಧುನಿಕತೆಯ ಹೆಸರಿನಲ್ಲಿ ಶಿಕ್ಷಣ ನಾಲ್ಕು ಗೋಡೆಗಳ ಮಧ್ಯದಲ್ಲಿ , ವಿಷಯದ ಆಳವಾದ ಜ್ಣಾನವಿಲ್ಲದೆ   ಕೇವಲ ಅಂಕಗಳಿಗಷ್ಟೇ ಮಹತ್ವ ನೀಡುವ,  ಉರು ಹೊಡೆಯುವ ಪದ್ದತಿಯಿಂದಾಗಿ ಮತ್ತು  ಬಹುತೇಕ ಪೋಷಕರು ತಮ್ಮ ಮಕ್ಕಳು ಡಾಕ್ಟರ್ ಇಲ್ಲವೇ ಇಂಜೀನೀಯರ್ಗಳೇ ಆಗಬೇಕೆನ್ನುವ ಒತ್ತಾಯದಿಂದ ಮಕ್ಕಳನ್ಣ್ನು ಮನೆಯೊಳಗೇ ಕೂಡಿಹಾಕಿರುವ ಪರಿಣಾಮವೋ,  ಮನೆಯ ಹೊರಗೆ ಆಡಲು ಕಳುಹಿಸಿದರೆ ಎಲ್ಲಿ ಮಕ್ಕಳಿಗೆ ನೋವಾಗುವುದೋ ಇಲ್ಲವೇ, ಮಕ್ಕಳು ಆಟದಲ್ಲೇ ಮಗ್ನರಾಗಿ ಸಮಯ ಹಾಳು ಮಾಡಿ ಓದಿನ ಕಡೆ ಗಮನ ಹರಿಸುವುದೆಲ್ಲವೆಂದು ತಿಳಿದ ಪೋಷಕರು ಮಕ್ಕಳ ಕೈಗೆ ವಿಡಿಯೋ ಆಟಿಕೆಗಳನ್ನು ಕೊಟ್ಟ ಪರಿಣಾಮವೋ,  ಮನೆಯಲ್ಲಿಯೇ ಕುಳಿತು ಇಡೀ ಪ್ರಪಂಚವನ್ನೇ ನೋಡಬಲ್ಲ ಟಿವಿ ಮತ್ತು ಚಲನ ಚಿತ್ರಗಳ ಪ್ರಭಾವವೋ. ದುಬಾರಿಯಾಗಿದ್ದ ಮೊಬೈಲ್ ಇಂಟರ್ ನೆಟ್ ವೆಚ್ಚ ಅಗ್ಗವಾದ ಮೇಲಂತೂ ಬೇಕೋ ಬೇಡವೂ ಎರೆಡೆರಡು ಸಿಮ್ ಕಾರ್ಡ್ಗಳ ಮೂಲಕ ಮಕ್ಕಳು ನೋಡಬಾರದ್ದನ್ನೆಲ್ಲಾ ನೋಡುವ ಅನಗತ್ಯವಾಗಿ ತಮ್ಮ ಸ್ನೇಹಿತರೊಂದಿಗೆ ಚಾಟ್ ಮಾಡುವ, ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಹೆಚ್ಚಿನ ಸಮಯವನ್ನು ಪೋಲು ಮಾಡುವ  ಚಟ ಬೆಳೆಸಿಕೊಂಡ ಪರಿಣಾಮವೋ,  ಈ ದುರಂತಮಯ ಸಾವಿನ ಹಿಂದಿನ ಕಾರಣವಿರಬಹುದು.

ನರ್ಸರಿಯಲ್ಲಿ  ಸಣ್ಣ ಮಕ್ಕಳಿಗೆ   A for Apple, B for Ball, C for Cat, D for Dog  ಎಂದು ಹೇಳಿಕೊಡುತ್ತಿದ್ದವರು ಈಗ  A-Android, B for Blue tooth, C for Chat, D for Download ಎಂದು ಹೇಳಿಕೊಡುವ ಸಂಧರ್ಭವೂ  ಬಂದೊದಗಿದರೂ ಅತಿಶಯೋಕ್ತಿಯೇನಲ್ಲ. ಒಂದರಿಂದ   ಇಪ್ಪತ್ತರ ವರಗಿನ ಮಗ್ಗಿಯನ್ನು ಕಂಠಪಾಠ ಮಾಡಿಸುತ್ತಿದ್ದದ್ದು  ಮಾಯವಾಗಿ ಸಣ್ಣ ಸಣ್ಣ ಸಂಕಲನ, ವ್ಯವಕಲನಕ್ಕೂ  ಮೋಬೈಲ್ ಕ್ಯಾಲುಕ್ಲೇಟರ್ ಬಳೆಸಿ ಮಕ್ಕಳ ಸಾಮಾನ್ಯ ಗಣಿತದ ಪರಿಣಿತಿಯನ್ನೂ ಹಾಳು ಮಾಡುವ ಕೆಟ್ಟ ಸಂಪ್ರದಾಯ ಆತಂಕಕಾರಿಯಾಗಿದೆ.

ಮಲಗಲು ಹಠ ಮಾಡುವ ಇಲ್ಲವೇ, ಊಟ ಮಾಡಲು ತಾಯಿಯರಿಗೆ ತೊಂದರೆ ಕೊಡುವ ಸಣ್ಣ ಮಕ್ಕಳನ್ನು ಸಮಾಧಾನ ಪಡಿಸುವ  ಗೋಜಿಗೇ ಹೋಗದೆ ಅವರ ಕೈಗೆ ಮೊಬೈಲ್ ಫೋನ್ ಕೊಟ್ಟು ಸುಮ್ಮನಾಗಿಸುವ ಪರಿಪಾಠವನ್ನು ನಮ್ಮ ಇಂದಿನ ತಾಯಂದಿರು ಬೆಳೆಸಿ ಕೊಂಡಿರುವುದು ಮತ್ತೂ   ಕಳವಳಕಾರಿಯಾದ ವಿಷಯವೇ ಆಗಿದೆ.

ನಿಜ ಇಂದಿನ ಆಧುನಿಕ ಜಗತ್ತಿನಲ್ಲಿ   ಜನರ ನಡುವಿನ ಸಂಪರ್ಕಕ್ಕೆ ಮೊಬೈಲ್ ಅತ್ಯವಶ್ಯಕವಾದರೂ  ಅತೀಯಾದರೆ ಅಮೃತವೂ ವಿಷ ಎನ್ನುವ ಹಾಗೆ  ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗಿದೆ.  ಮನೆಯಲ್ಲಿ ಒಂದು ಕೋಣೆಯಿಂದ ಮತ್ತೊಂದು ಕೋಣೆಗಳಲ್ಲಿರುವವರನ್ನು ಕರೆಯಲು ಮೋಬೈಲ್ ಬಳೆಸುತ್ತಿರುವುದು ಸರ್ವೇಸಾಮನ್ಯವಾಗಿದೆ. ಸಭೆ ಸಮಾರಂಭಗಳಿಗೆ ಅಂದದ ಚೆಂದದ ಆಮಂತ್ರಣ ಪತ್ರ ಮಾಡಿಸಿ ಓಂದು ತಿಂಗಳಿಗೆ ಮುಂಚೆಯೇ ಎಲ್ಲ ಬಂಧು ಮಿತ್ರರ ಮನೆಗಳಿಗೆ ಹೋಗಿ ಮುಖತಃ ಆಮಂತ್ರಿಸುತ್ತಿದ್ದ ಪದ್ದತಿ ಎಂದೋ ಮಾಯವಾಗಿ ಬರೀ ಮೊಬೈಲ್ ಸಂದೇಶಗಳಲ್ಲೇ ಆಮಂತಿಸುವುದು ಸಹಜವಾಗಿದೆ. ಆ ಸಭೆ ಸಮಾರಂಭಗಳಲ್ಲಿ ಬಂಧು ಮಿತ್ರರೆಲ್ಲಾ ಒಳಗೂಡಿ ಆತ್ಮೀಯತೆಯಿಂದ ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳುವುದು ಕಾಣೆಯಾಗಿ ಒಂದೇ ಜಾಗದಲ್ಲಿ  ಕುಳಿತಿದ್ದರೂ  ಎಲ್ಲರೂ ತಮ್ಮ ತಮ್ಮ ಮೊಬೈಲ್ಗಳಲ್ಲಿಯೇ ಮಳುಗಿ ಹೋಗುತ್ತಿರುವುದು ಯೋಚಿಸಬೇಕಾದ ವಿಷಯವಾಗಿದೆ.

ಬಡವ ಬಲ್ಲಿದ, ಹಿರಿಯ ಕಿರಿಯ ಎಂದು ಬೇಧವಿಲ್ಲದೆ ಎಲ್ಲರನ್ನೂ ಭೌಗೋಳಿಗವಾಗಿ  ಒಂದುಗೂಡಿಸುತ್ತಾದರೂ ಮಾನಸಿಕವಾಗಿ ದೂರ ಮಾಡುತ್ತಿರುವುದು ಸುಳ್ಳಲ್ಲ.  ಅಷ್ಟೇ  ಏಕೆ ನನ್ನ ಮತ್ತು ನನ್ನ ಪತ್ನಿಯ ನಡುವಿನ ಇಪ್ಪತ್ತು ವರ್ಷಗಳ ಸುಮಧುರ ದಾಂಪತ್ಯಕ್ಕೆ ಮಗ್ಗಲ ಮುಳ್ಳಾಗಿರುವುದೂ ಇದೇ ಮೋಬೈಲ್ ಆಗಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್, ಕಛೇರಿಗೆ  ಹೋಗುತ್ತಿರುವಾಗಲೂ ರಸ್ತೆಗಳ ಸಿಗ್ನಲ್ಸ್, ಸಿಗ್ನಲ್  ನಡುವೆಯೇ ಮೊಬೈಲ್, ರಾತ್ರಿ ಮನೆಗೆ ಬಂದು ಊಟ ಮಾಡಿದ ಕೂಡಲೇ ಸದ್ದಿಲ್ಲದೆ ಮೊಬೈಲ್, ಮಲಗುವಾಗ ತಲೆದಿಂಬಿನ ಪಕ್ಕದಲ್ಲೇ ಮೊಬೈಲ್ ಇಟ್ಟಿಕೊಂಡರೆ ಯಾವ ಹೆಂಡತಿಯಾದರೂ ಎಷ್ಟು ದಿನ ಸಹಿಸಿಯಾಳು?

ಇಷ್ಟೆಲ್ಲಾ ರಂಪ ರಾಮಾಯಣಗಳನ್ನು ಓದಿದ ನಂತರ,   prevention is better than cure  ಎನ್ನುವ ಆಂಗ್ಲ ನಾಣ್ಣುಡಿಯಂತೆ ಅಗತ್ಯವಿದ್ದಾಗ  ಮಾತ್ರ ( ನನ್ನನ್ನೂ ಒಳಗೊಂಡು)  ಮೊಬೈಲ್ ಬಳೆಸುತ್ತಾ, ಅಗತ್ಯ ಕೆಲಸಗಳನ್ನು ಪೂರೈಸುತ್ತಾ ಮನೆ ಮನಗಳನ್ನು ಗೆಲ್ಲುವ ಪ್ರಯತ್ನ ಮಾಡೋಣವೇ?

ಏನಂತೀರಿ?

ವೀರ ಸಾವರ್ಕರ್

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸುಖಾಸುಮ್ಮನೆ ಒಂದು ದಿನದ ಮಟ್ಟಿಗೆ ಸೆರೆಮನೆ ವಾಸ ಅನುಭವಿಸಿದವರೆಲ್ಲಾ, ಸ್ಚಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಿಕೊಂಡು ಸರ್ಕಾರದ ಸವಲತ್ತು ಪಡೆಕೊಂಡರೆ, ಸ್ವತಃ ಉಗ್ರ ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರೇರಣಾದಾಯಕರಾಗಿದ್ದ ಜನರಿಂದ ಪ್ರೀತಿಯಿಂದ ವೀರ್ ಸಾವರ್ಕರ್ ಎಂದು ಕರೆಸಿಕೊಳುತ್ತಿದ್ದ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಮದಿನವಾದ ಮೇ 28ರಂದು ಅವರ ಸಾಧನೆಗಳನ್ನು ಮತ್ತು ಅವರು ಅನುಭವಿಸಿದ ಕಷ್ಟಗಳನ್ನು ಮೆಲುಕು ಹಾಕುವ ಪ್ರಯತ್ನವೇ ಈ ಲೇಖನ.

ವೀರ ಸಾವರ್ಕರ್ ಅವರನ್ನು ಮತ್ತು ಅವರ ಸಾಧನೆ ಅವರು ಅನುಭವಿಸಿದ ಕಷ್ಟವನ್ನು ಸರಿಯಾಗಿ ಅರ್ಥ ಮಾಡಿಕೊಂಡವರಿಗಿಂತ ಅವರ ಬಗ್ಗೆ ತಪ್ಪಾಗಿ ಪೂರ್ವಾಗ್ರಹ ಪೀಡಿತರಾಗಿ ಅವರ ಬಗ್ಗೆ ಆಡಿಕೊಂಡವರೇ ಹೆಚ್ಚು. ಸಾವರ್ಕರ್ ಅವರಿದ್ದ ಅಂಡಮಾನ್ ಸೆಲ್ಯುಲಾರ್ ಜೈಲಿನ ಕ್ರೂರತನ ಅಲ್ಲಿ ಅವರು ಅನುಭಬಿಸಿದ ಕಷ್ಟವನ್ನು ಒಮ್ಮೆ ಅರಿತಲ್ಲಿ ಸಾವರ್ಕರ್ ಅವರ ಬಗ್ಗೆ ಅವರ ಖಂಡಿತವಾಗಿಯೂ ಗೌರವ ಮೂಡುತ್ತದೆ.

ಅಂದು 1910 ಮಾರ್ಚ್ 13, ಭಾನುವಾರ. ಆ ವ್ಯಕ್ತಿ ಪ್ಯಾರಿಸ್ ನಿಂದ ಲಂಡನ್ನಿನ ಕಡೆಗೆ ಹೊರಡುವ ರೈಲು ಹತ್ತಿದ್ದರು. ಲಂಡನ್ನಿನ ವಿಕ್ಟೋರಿಯಾ ನಿಲ್ದಾಣ ಪ್ರವೇಶಿಸುವ ಹೊತ್ತಿಗೆ ರಾತ್ರಿ 2 ಗಂಟೆ. ನಾಲ್ಕಾರು ಗುಪ್ತಚರರು ಧಡಧಡನೆ ಓಡಿ ಬಂದವರೇ ಕೂಡಲೇ ಅವರನ್ನು ಬಂಧಿಸಿದರು. ರಾಜದ್ರೋಹ, ಜಾಕ್ಸನ್ ಕೊಲೆಗೆ ನೆರವಾದ ಅಪರಾಧ, ಲಂಡನ್ನಿನಲ್ಲಿ ಶಸ್ತ್ರಾಸ್ತ್ರ ಶೇಖರಣೆ, ಭಾರತ ಹಾಗೂ ಲಂಡನ್ನಿನಲ್ಲಿ ಮಾಡಿದ ರಾಜದ್ರೋಹ ಭಾಷಣಗಳು, ಪರಾರಿ ಹೀಗೆ ಹತ್ತಾರು ಆರೋಪಗಳನ್ನು ಹೊರಿಸಿದ್ದರು.   ಜೂನ್ ಪ್ರಾರಂಭದಲ್ಲಿ ಕೋರ್ಟ್ ಆಫ್ ಕ್ರಿಮಿನಲ್ ಅಪೀಲ್ ಇವರನ್ನು ಭಾರತ ಸರಕಾರಕ್ಕೆ ಒಪ್ಪಿಸಬೇಕಾಗಿ ತೀರ್ಪು ಹೊರಹಾಕಿತು. ಜುಲೈ ಮೊದಲ ದಿನ ಆ ವ್ಯಕ್ತಿಯನ್ನು ಹೊತ್ತ ಠಮೊರಿಯಾ ಹಡಗು ಭಾರತದ ಕಡೆ ಬರುತ್ತಿದ್ದಾಗ, ಹಡಗಿನ ಶೌಚಾಲಯದ ಕಿಟಕಿಯಿಂದ ಸ್ವಾತಂತ್ರ್ಯ ಲಕ್ಷ್ಮೀ ಕೀ ಜೈ ಎಂದು ಹಾರಿ ಜಿಗಿದವರೇ, ಮುಳುಗುತ್ತಾ, ಏಳುತ್ತಾ ದಡ ಸೇರಿದರು. ಅಲ್ಲಿನ ಸ್ಥಳೀಯ ಪೋಲೀಸರ ಕೆಟ್ಟ ನಿರ್ಧಾರದಿಂದಾಗಿ ಆವರನ್ನು ಮತ್ತೆ ಬಂಧಿಸಿ ಕೈ ಕಾಲುಗಳಿಗೆ ಬೇಡಿ ಹಾಕಿ ಮತ್ತೆ ಹಡಗಿಗೆ ಎಳೆದೊಯ್ದರು. ಆ ರೀತಿಯ ದುರ್ವಿಧಿಗೆ ಬಲಿಯಾದವರೇ ಶ್ರಿ ವೀರ ಸಾವರ್ಕರ್.

ಹಡಗು ಜುಲೈ 22 ಮುಂಬೈ ತಲುಪಿದ ಕೂಡಲೇ ನಾಸಿಕದ ಜೈಲು ಸೇರಿದರು. ಕೆಲ ದಿನಗಳ ನಂತರ ಯರವಡಾ ಜೈಲಿಗೆ ವರ್ಗಾವಣೆಯಾಗಿ. ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಸಮುದ್ರದ ಮಧ್ಯದಲ್ಲಿಯೇ ತಪ್ಪಿಸಿ ಕೊಂಡ ಈ ವ್ಯಕ್ತಿಯನ್ನು ಇಲ್ಲಿಯ ಸೆರೆಮನೆಗೆ ಹಾಕಿದರೆ ಸುಮ್ಮನಿರುವುದಿಲ್ಲ ಎಂದು ಭಾವಿಸಿ 24.12.1910 25 ವರ್ಷಗಳ ಕಾಲಾಪಾನಿ ಶಿಕ್ಷೆ ಹಾಗೂ ಆಸ್ತಿ ಪಾಸ್ತಿಗಳ ಜಪ್ತಿ. ಮತ್ತೆ 30.01.1911 ರಂದು ಜಾಕ್ಸನ್ ಕೊಲೆಗೆ ನೆರವಾದ ಆರೋಪಕ್ಕಾಗಿ ಮತ್ತೊಂದು ಆಜನ್ಮ ಕಾರಾವಾಸದ ತೀರ್ಪು ಹೊರಬಂದಿತು. ಹೀಗೆ ಒಟ್ಟಿನಲ್ಲಿ 50 ವರ್ಷಗಳ ಕರಿನೀರಿನ ಶಿಕ್ಷೆಗೆ ಒಳಪಡಿಸಿ ಸಾವರ್ಕರ್ ಅವರನ್ನು
1911 ಜೂನ್ 27 ರಂದು ‘ಮಹಾರಾಜ’ ಹಡಗಿನಲ್ಲಿ ಸಾಗಿಸಸಿ ಜುಲೈ 4 ರಂದು ಅಂಡಮಾನಿನ ಸೆಲ್ಯುಲರ್ ಜೈಲಿಗೆ ಸೇರಿಸಲಾಯಿತು.

andaman1ಈ ಅಂಡಮಾನ್ ಸೆಲ್ಯುಲಾರ್ ಸೆರೆಮನೆಯನ್ನು 1896 ರಲ್ಲಿ ಕಟ್ಟಲು ಆರಂಭಿಸಿ, ಅದು ಪೂರ್ಣಗೊಂಡಿದ್ದು 1906 ರಲ್ಲಿ!! ಇದರ ಮೂಲ ಕಟ್ಟಡವು ಕಡುಗೆಂಪಿನ-ಇಟ್ಟಿಗೆಯದ್ದಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಬೇಕಾದ ಇಟ್ಟಿಗೆಗಳನ್ನು ಬರ್ಮಾದಿಂದ ತರಲಾಗಿತ್ತು. ಈ ಕಟ್ಟಡಕ್ಕೆ ಏಳು ರೆಕ್ಕೆಗಳಂತೆ ಕಮಾನುಗಳಿದ್ದು, ಮಧ್ಯದ ಗೋಪುರವು ಅದರ ಸಮತೋಲನ ಮಾಡಿದಂತೆ ಕಾಣಿಸುತ್ತದೆ. ಅಲ್ಲಿನ ಗೃಹರಕ್ಷಕ ದಳದವರು ಕೈದಿಗಳ ಮೇಲೆ ಸದಾ ಕಣ್ಣಿಡಲೂ ಸಹ ಇದು ನೆರವಾಗುತ್ತಿತ್ತು. ಈ ರೆಕ್ಕೆಗಳ ಆಕಾರದ ಅಂಚುಗಳು ಗೋಪುರದ ಮೇಲ್ಭಾಗದಲ್ಲಿ ಸಾಲಿನಂತೆ ಬೈಸಿಕಲ್ ಚಕ್ರಕ್ಕಿರುವ ಮೊನೆಗಳಂತೆ ಕಾಣುತ್ತಿದ್ದವು. ದೊಡ್ಡದಾದ ಗಂಟೆಯೊಂದನ್ನು ಗೋಪುರದಲ್ಲಿಡಲಾಗಿತ್ತು, ಯಾವಾಗಲಾದರೂ ತುರ್ತು ಸಂದರ್ಭ ಬಂದಾಗ ಸಂಭಂಧಿಸಿದವರನ್ನು ಎಚ್ಚರಿಸಲು ಇದು ಅನುಕೂಲವಾಗುತ್ತಿತ್ತು.

andaman3ಪ್ರತಿ ರೆಕ್ಕೆಯ ಅಂಚಿನಲ್ಲಿ ಪೂರ್ಣಗೊಂಡ ಭಾಗದಲ್ಲಿ ಮೂರು ಮಹಡಿಯ ಅಂಕಣಗಳಿದ್ದವು. ಒಟ್ಟು 698 ಕೋಶದಂತಹ ಗೂಡುಗಳಿದ್ದವೇ ವಿನಹ ಮಲಗುವ ಅಥವಾ ವಿಶ್ರಾಂತಿಯ ಪಡಶಾಲೆಗಳಿರಲಿಲ್ಲ. ಪ್ರತಿ ಕೋಶದಲ್ಲೂ 4.5 ಮೀಟರ್ * 2.7 ಮೀಟರ್ಸ್ ಅಥವಾ 15*8 ಅಡಿ ಉದ್ದದ ಈ ಕೊಠಡಿಗಳಿಗೆ ಮೂರು ಮೀಟರ್ ಎತ್ತರದಲ್ಲಿ ಗಾಳಿ-ಬೆಳಕಿಗೊಂದು ಕಿಂಡಿಯಿತ್ತು. ಈ ಸೆಲ್ಯುಲರ್ ಜೈಲ್ ಅನ್ನುವ ಶಬ್ದವು ಯಾವುದೇ ಕೈದಿಯು ಇನ್ನೊಬ್ಬನೊಂದಿಗೆ ಯಾವುದೇ ರೀತಿಯ ಸಂವಹನ-ಸಂಪರ್ಕ ಮಾಡಬಾರದೆಂಬ ಉದ್ದೇಶದಿಂದ ಇದನ್ನು ಕೋಶದ ಮಾದರಿ ನಿರ್ಮಿಸಲಾಗಿತ್ತು. ಅವರೆಲ್ಲರನ್ನೂ ಒಂಟಿಯಾಗಿ ಏಕಾಂಗಿತನದಲ್ಲೇ ಇರುವಂತೆ ನೋಡಿಕೊಳ್ಳಲಾಗುತ್ತಿತ್ತು.

ಈ ಸೆಲ್ಯುಲರ್ ಜೈಲನ್ನು ಹಿಂದಿಯಲ್ಲಿ ಕಾಲಾಪಾನಿ ಎಂದು ಕರೆಯಲಾಗುತ್ತಿತ್ತು, ಅಕ್ಷರಶಃ ಇದನ್ನು ಕಪ್ಪು ನೀರು ಎಂದು ಭಾಷಾಂತರಿಸಲಾಗಿದ್ದು, ಸಮುದ್ರದ ಆಳದ ನೀರಿನಲ್ಲಿನ ಮತ್ತು ದೂರದಲ್ಲಿರುವ ಅಜ್ಞಾತವಾಸದ ಮನೆ ಇದಾಗಿತ್ತು. ಈ ಜೈಲಿನ ಸುತ್ತಲಿರುವ ಸಮುದ್ರದ ನೀರು ಬಹಳ ಆಳವಾಗಿದ್ದು ಕಪ್ಪು ಬಣ್ಣದ್ದಾಗಿ ಕಾಣುತ್ತದೆ. ಹಾಗಾಗಿ ಕಾಲಾಪಾನಿ ಎಂದು ಹೆಸರು ಬಂದಿರಬಹುದು. ಜೊತೆಯಲ್ಲಿ ಇಲ್ಲಿನ ಚಿತ್ರ ವಿಚಿತ್ರ ಅಮಾನವೀಯ ಶಿಕ್ಷೆಯನ್ನು ಅನುಭವಿಸಿದವರು ಕೊಟ್ಟ ಹೆಸರೂ ಇದಾಗಿರಬಹುದು. ಅಷ್ಟೇ ಅಲ್ಲದೇ ಇಲ್ಲಿ ನೀಡುತ್ತಿರುವ ನರಕ ಸದೃಶ ಶಿಕ್ಷೆ ಹೊರಜಗತ್ತಿಗೆ ಗೊತ್ತಾಗುತ್ತಲೇ ಇರಲಿಲ್ಲ. ಅದೂ ಒಂದು ಕಾರಣದಿಂದ ಕಾಲಾಪಾನೀ ಎಂಬ ಹೆಸರು ಬಂದಿರಬಹುದು.

ಈ ಸೆರೆಮನೆಗೆ ಕಳುಹಿಸಲಾಗುತ್ತಿದ್ದ ಖೈದಿಗಳಿಗೆ ಅತಿ ಕೆಟ್ಟ ರೀತಿಯಲ್ಲಿ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಆದರೆ ಈ ಪ್ರದೇಶವನ್ನು ಭಾರತದ ಪ್ರಮುಖ ಭಾಗವೆಂದು ಯಾವತ್ತು ಯಾರು ಕೂಡ ಪರಿಗಣಿಸಿರಲಿಲ್ಲ, ಬದಲಾಗಿ ಇದನ್ನು ವಿದೇಶವೆಂದೇ ಭಾವಿಸಲಾಗಿತ್ತು. ಅಷ್ಟೇ ಅಲ್ಲದೇ, ಇದನ್ನು ರಾಜಕೀಯ ಖೈದಿಗಳ ಕುಖ್ಯಾತ ದ್ವೀಪ ಎಂದೂ ಭಾವಿಸಲಾಗಿತ್ತು.

ಮಟ ಮಟ ಮಧ್ಯಾಹ್ನದ ಸೂರ್ಯನ ಭಯಂಕರವಾದ ಬಿಸಿಲಿನ ಬೇಗೆಯ ನಡುವೆಯೂ ತೆಂಗಿನಕಾಯಿಯ ನಾರನ್ನು ಹಲವರು ತೆಗೆಯುತ್ತಿದ್ದರೆ ಮತ್ತೆ ಹಲವರು ಅದೇ ನಾರನ್ನು ಬಳೆಸಿಕೊಂಡು ತಮ್ಮ ಕೈಗಳ ಮೂಲಕ ತೊಡೆಯ ಮೇಲೆ ಹಗ್ಗವನ್ನು ಹೊಸೆಯಬೇಕಾಗುತ್ತಿತ್ತು. ನೆತ್ತಿಯ ಮೇಲೆ ಉರಿಯುವ ಸೂರ್ಯನ ಕಿರಣಗಳು ಹಗ್ಗ ಹೊಸೆದೂ ಹೊಸೆದೂ ನೆತ್ತರು ಹರಿಸುವ ಕೈ ಮತ್ತು ತೊಡೆಗಳು ಹೀಗೆ ರಕ್ತದ ಮಡುವಿನಲ್ಲಿ ತುಂಬಿಹೋದರೂ ಒಂದು ಚೂರೂ ಕರಗದ ಕಲ್ಲಿನಂತಹ ಹೃದಯದ ಬ್ರಿಟಿಷ್ ಆಧಿಕಾರಿಗಳು. ಸತತ ಕೆಲಸದಿಂದ ದೇಶ ದಣಿದು ನಿಶಕ್ತಿಯಿಂದ ಕೆಲಕಾಲ ಕೆಲಸ ನಿಲ್ಲಿಸಿದರೆ ಅಥವಾ ಗಂಟಲಿನ ಪಸೆ ಆರಿ ಹೋಗಿ ಕುಡಿಯಲು ಒಂದು ಲೋಟ ಕೇಳಿದರೆ ಅಲ್ಲಿನ ಸಿಬ್ಬಂದಿಗಳು ನಿಲ್ಲಿಸದೇ ಕೊಡುತ್ತಿದ್ದದ್ದು ಕೇವಲ ಚಾವಟಿ ಏಟುಗಳನ್ನು ಮಾತ್ರ. ಇದು ಬಂಗಾಳ ಕೊಲ್ಲಿಯ ಭಾರತದದ್ದೇ ಭೂಭಾಗವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿದ್ದ ಕ್ರೂರ ಬ್ರಿಟಿಷ್‍ರ ವಸಾಹತುಗಳ ಸೆಲ್ಯುಲರ್ ಜೈಲಿಗೆ ಕಳುಹಿಸಲಾದ ರಾಜಕೀಯ ಖೈದಿಗಳ ಪರಿಸ್ಥಿತಿಯಾಗಿತ್ತು.

sav1ಸಣ್ಣ ಪುಟ್ಟ ಕಾರಣಗಳಿಗೂ ಕೂಡ ಬ್ರಿಟಿಷ್ ಸರ್ಕಾರ ಭಾರತೀಯರಿಗೆ ಕಾಲಾಪಾನೀ ಶಿಕ್ಷೆ ವಿಧಿಸುತ್ತಿತ್ತು. ಅಷ್ಟೇ ಅಲ್ಲದೇ, ಅಪರಾಧಿಗಳನ್ನು ಪ್ರಾಣಿಗಿಂತಲೂ ಕಡೆಯಾಗಿ ನೋಡುತ್ತಿದ್ದರು. ಹುಳುಗಳಿಂದ ಕೂಡಿದ ಆಹಾರ, ಕುಡಿಯಲು ಕೊಳಕು ನೀರು ಅದರಲ್ಲೂ ದಿನಕ್ಕೆ ಎರಡು ಲೋಟ ಮಾತ್ರ ನೀಡಲಾಗುತ್ತಿತ್ತಲ್ಲದೇ, ಅವರು ಕೊಟ್ಟ ಆಹಾರಗಳನ್ನು ತಿನ್ನಲೇಬೇಕು. ಒಂದು ವೇಳೆ ಅದನ್ನು ತಿರಸ್ಕರಿಸಿದರೆ ಕಠಿಣ ಶಿಕ್ಷೆ. ಮಲ-ಮೂತ್ರ ವಿಸರ್ಜನೆಗೂ ಜೈಲರನ ಅನುಮತಿ ಕೇಳಬೇಕಾಗುತ್ತಿತ್ತು. ಅಲ್ಲಿಯ ವ್ಯವಸ್ಥೆಯನ್ನು ವಿರೋಧೀಸುವ ಖೈದಿಗಳಿಗಂತೂ ಊಹಿಸಲು ಸಾಧ್ಯವಾಗದ ಶಿಕ್ಷೆಗಳು. ಆಯಾಸಗೊಂಡು ನಿಲ್ಲಿಸಿದರೆ ಛಾಟಿ ಏಟು. ಕೈಕಾಲು ಮಡಚದ ಹಾಗೆ ಕಬ್ಬಿಣದ ಸರಳುಗಳನ್ನು ಹಾಕಿ ವಾರಗಟ್ಟಲೆ ನಿಲ್ಲಿಸುತ್ತಿದ್ದರು. ಆದರೆ ಬ್ಯಾರಿ ಮತ್ತು ಇತರ ಬ್ರಿಟಿಷ್ ಅಧಿಕಾರಿಗಳು ಮಾತ್ರ ಐಷಾರಾಮಿ ಜೀವನವನ್ನು ನಡೆಸುತ್ತಿದ್ದರು. ಅಷ್ಟೇ ಅಲ್ಲದೇ,ಟೆನ್ನಿಸ್ ಕೋರ್ಟ್, ಬೇಕರಿ, ಈಜುಕೊಳ ಮತ್ತು ಕ್ಲಬ್ ಹೌಸ್ ಗಳನ್ನು ಅಧಿಕಾರಿಗಳು ಹೊಂದಿದ್ದರು.

ಇನ್ನು ತಿನ್ನಲು ಅವರಿಗೆ ಕೊಡುತ್ತಿದ್ದದ್ದೂ ಅನ್ನದ ಗಂಜಿ. ಅದೂ ಒಂದು ತೆಂಗಿನ ಕರಟವನ್ನು ಬೆತ್ತಕ್ಕೆ ಕಟ್ಟಿ ಮಾಡಿದ ಕಚ್ಚಾ ಸೌಟು ಡಬ್ಬುವಿನಲ್ಲಿ ಒಂದು ಡಬ್ಬು. ಅದಕ್ಕೂ ಉಪ್ಪು ಸಾಲುತ್ತಿರಲಿಲ್ಲ. ಏಕೆಂದರೆ ಇಡೀ ದಿನಕ್ಕೆ ಚಿಟಿಕೆ ಉಪ್ಪು ಕೊಡುತ್ತಿದ್ದರು. ಅದು ಮಧ್ಯಾಹ್ನದ ದಾಲ್‍ಗೂ ಬೇಕಾಗುತ್ತಿತ್ತು. ಹೀಗಾಗಿ ರುಚಿಯಏ ಇಲ್ಲದೇ ಉಪ್ಪಿಲ್ಲದ ಗಂಜಿಯನ್ನು ಸೇವಿಸಿಯೇ ಅದೆಷ್ಟೋ ದಿನಗಳನ್ನು ಕಳೆದರು.

ಸಾವರ್ಕರ್ ಅವರನ್ನು 1911 ಜುಲೈ 4 ರಂದು ಅಂಡಮಾನಿನ ಸೆಲ್ಯುಲರ್ ಜೈಲಿಗೆ ಕರೆತಂದು ಅವರನ್ನು ಗಾಣದಿಂದ ಎಣ್ಣೆಯನ್ನು ತೆಗೆಯುವ ಕೆಲಸಕ್ಕೆ ಹೂಡಲಾಯಿತು. ಪ್ರತೀ ದಿನ ಅವರು ಕಡ್ಡಾಯವಾಗಿ ಮೂವತ್ತು ಪೌಂಡ್ ಕೊಬ್ಬರಿ ಎಣ್ಣೆ ತೆಗೆಯಬೇಕಾಗಿತ್ತು. ತಪ್ಪಿದರೆ ಶಿಕ್ಷೆ, ದಣಿವಾಗಿ ನಿಂತರೆ ಚಾವಟಿಯ ಹೊಡೆತ, ಕೈಗಳಲ್ಲಿ ರಕ್ತ, ಎದೆಯಲ್ಲಿ ಉರಿ, ತಲೆ ಸುತ್ತು… ಹೀಗೆ ನರಕಯಾತನೆ. ಮಲಮೂತ್ರ ವಿಸರ್ಜನೆಗೂ ಸಮಯ ನಿಶ್ಚಿತ! ಬೆಳಿಗ್ಗೆ 6 ರಿಂದ 10 ರವರೆಗೆ, ಮಧ್ಯಾಹ್ನ 12 ರಿಂದ 5 ರವರೆಗೆ ಗೋಡೆ ಕಡೆ ಮುಖ ಮಾಡಿ ಬೇಡಿ ಹಾಕಲಾಗುತ್ತಿತ್ತು. ವರ್ಷಕ್ಕೆ ಒಂದು ಸಲ ಕಾಗದ ಬರೆಯುವ ಅವಕಾಶ. ಅರೆ ಅನ್ನ, ಗಬ್ಬು ನೀರು, ಮಣ್ಣು ಕಲ್ಲು ಬೆವರು ಬೆರೆಸಿದ ಊಟ, ಇದು ಅಲ್ಲಿನ ಆಹಾರ ವ್ಯವಸ್ಥೆ. ಬೆಳಗ್ಗೆ ಎದ್ದರೆ ಅದೇ ಜೈಲು ಖಾನೆ, ಮರದ ಹಲಗೆ, ಕೊರೆಯುವ ಚಳಿ, ಹರಕು ಕಂಬಳಿ! ಅದೇ ತೆಂಗಿನ ನಾರು ಬಿಡಿಸುವ ಕೆಲಸ, ಅದೇ ಎಣ್ಣೆಯ ಗಾಣ, ನೀರು ಇಟ್ಟಿಗೆ ಹೊರುವುದು ಸಾವಕರ್ರರ ಪ್ರತಿನಿತ್ಯದ ಕರ್ತವ್ಯವಾಗಿತ್ತು. ಇಷ್ಟೆಲ್ಲಾ ಕಷ್ಟಗಳ ಮಧ್ಯೆಯೂ ಸಾವರ್ಕರ್ ಅವರು ತಮ್ಮ ಕೈಗಳಿಗೆ ಹಾಕಿದ ಬೇಡಿಯಿಂದಲೇ ಗೋಡೆಗಳ ಮೇಲೆ ತಮ್ಮ ಕವನಗಳನ್ನು ರಚಿಸಿ ಅದನ್ನು ಕಂಠಸ್ಥ ಮಾಡಿ  ಅವರು ಬಿಡುಗಡೆಯಾದ ನಂತರ ಅದನ್ನು ಪುಸ್ತಕ ರೂಪಕಕ್ಕೆ ತರಲಾಯಿತು.

andaman9ಸೆಲ್ಯುಲಾರ್ ಜೈಲಿನಿಂದ ಬಿಡುಗಡೆಯ ನಂತರ, ಸಾವಾರ್ಕರ್ ಅವರು ತಾವು ಎದುರಿಸಿದ ಅಸಹನೀಯ ಪರಿಸ್ಥಿತಿಗಳ ಬಗ್ಗೆ, ವಿಶೇಷವಾಗಿ ಕ್ರೂರ ಐರಿಶ್ ಜೈಲರ್ ಡೇವಿಡ್ ಬ್ಯಾರಿಯ ಬಗ್ಗೆ, ಸ್ವಯಂ ಘೋಷಿತ ಗಾಡ್ ಆಫ್ ಪೋರ್ಟ್ ಬೇರ್ ಬಗ್ಗೆ ವ್ಯಾಪಕವಾಗಿ ಹೀಗೆ ಬರೆದಿದ್ದಾರೆ. ಈ ಜೈಲಿಗೆ ಪ್ರವೇಶಿಸುವುದು ಎಂದರೆ ಸಾವಿನ ದವಡೆಗೆ ಪ್ರವೇಶಿಸಿದಂತೆ. ದೇಹ ಮತ್ತು ಮನಸ್ಸುಗಳು ಅನುಭವಿಸುತ್ತಿದ್ದ ಯಾತನೆಯನ್ನು ಹೇಗೆ ವಿವರಿಸುವುದು? ಜೈಲಿನ ಬದುಕು, ಕಠಿಣ ಕೆಲಸ, ಕಡಿಮೆ ಊಟ, ಕಡಿಮೆ ಬಟ್ಟೆ, ಹೊಡೆತ ಇವೆಲ್ಲವಕ್ಕಿಂತಲೂ ಮಲಮೂತ್ರ ಬಾಧೆ ತೀರಿಸಿಕೊಳ್ಳುವುದೇ ಕಷ್ಟವಾಗಿತ್ತು. ಅದರ ವ್ಯವಸ್ಥೆಯಾಗುವ ತನಕ ಖೈದಿ ಕಾಯಬೇಕಿತ್ತು. ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಹೀಗೆ ದಿನಕ್ಕೆ ಮೂರು ಸಲ ಮಾತ್ರ ಅವಕಾಶವಿತ್ತು. ನಿಯಮಿತ ಸಮಯದ ನಡುವೆ ಹೋಗುವುದು ಕೆಟ್ಟ ನಡತೆಯೆಂದು ಭಾವಿಸಲಾಗುತ್ತಿತ್ತು. ರಾತ್ರಿ ಪುಟ್ಟ ಮಣ್ಣಿನ ಕುಡಿಕೆಯಲ್ಲಿ ಮೂತ್ರಬಾಧೆ ತೀರಿಸಿಕೊಳ್ಳಬೇಕು. ಜೈಲರ್ ಬ್ಯಾರಿ ಕೆಲವೊಮ್ಮೆ ಹೀಗೆನ್ನುತ್ತಿದ್ದ: “ಕೇಳಿ, ಖೈದಿಗಳೇ. ಇಡಿಯ ಜಗತ್ತಿಗೆ ಒಬ್ಬನೆ ದೇವರು. ಅವನು ಮೇಲೆ ಸ್ವರ್ಗದಲ್ಲಿದ್ದಾನೆ. ಆದರೆ ಇಲ್ಲಿ ಪೋರ್ಟ್ ಬ್ಲೇರಿನಲ್ಲಿ ಇಬ್ಬರು ದೇವರು. ಆಕಾಶದಲ್ಲಿ ಅವನು, ನೆಲದ ಮೇಲಿನ ದೇವರು ನಾನು. ಆಕಾಶದ ದೇವರು ನೀವು ಸತ್ತ ನಂತರ ಬಹುಮಾನ ಕೊಡಬಹುದು, ಆದರೆ ನೆಲದ ಮೇಲಿನ ದೇವರು ಹಾಗಲ್ಲ, ನಾನು ಬದುಕಿರುವಾಗಲೆ ನಿಮಗೆ ಒಳ್ಳೆಯದು ಮಾಡುತ್ತೇನೆ. ಆದ್ದರಿಂದ ಖೈದಿಗಳಾಗಿ ಸನ್ನಡತೆ ತೋರಿಸಿ. ನನ್ನ ವಿರುದ್ಧ ಯಾವುದೇ ಮೇಲಧಿಕಾರಿಗೆ ನೀವು ದೂರಿತ್ತರೂ ಉಪಯೋಗವಿಲ್ಲ, ನೆನಪಿಡಿ. ಎಂದು.

ಆದ್ಯಾಗೂ, ಇಂದು ಜೈಲು “ಭಾರತದಲ್ಲಿನ ಸ್ವಾತಂತ್ರ್ಯ ಚಳುವಳಿಯ ಸಂಕೇತವಾಗಿದೆ” . ಭಾರತದ ಮೂಲೆಮೂಲೆಯ ತರುಣ ಕ್ರಾಂತಿಕಾರಿಗಳ ಬೆವರು, ನೆತ್ತರು, ಕಣ್ಣೀರು ಹೀರಿದ ಸೆಲ್ಯುಲಾರ್ ಜೈಲು 1979ರಲ್ಲಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲ್ಪಟ್ಟಿತು. ಜೈಲಿನಲ್ಲಿದ್ದವರು ಧರಿಸುತ್ತಿದ್ದ ಗೋಣಿ ಉಡುಪು, ದಿನಕ್ಕೆ ಕನಿಷ್ಟ 30 ಪೌಂಡ್ ಎಣ್ಣೆ ತೆಗೆಯಲು ಕಾಯಿ ಒಡೆದು ರುಬ್ಬಬೇಕಿದ್ದ ಎಣ್ಣೆಗಾಣ, ನೇಣುಮನೆ, ಅಂತ್ಯಸಂಸ್ಕಾರ ವಿಧಿಯ ಪೀಠ, ಹೊಡೆತ ತಿನ್ನುವ ಸ್ಥಳ ಎಲ್ಲವೂ ಮೂಕಸಾಕ್ಷಿಗಳಾಗಿ ಆವರಣದಲ್ಲಿ ನಿಂತಿವೆ. ಪ್ರಸ್ತುತ ಜೈಲಿನಲ್ಲಿ ಪ್ರತಿದಿನ ಸಂಜೆ ನಡೆಯುವ ಸೌಂಡ್ ಅಂಡ್ ಲೈಟ್ ಶೋನಲ್ಲಿ ಜೈಲುವಾಸಿಗಳ ದನಿ ಹಾಗೂ ಜೈಲು ಆವರಣದ ಮರ ಮಾತನಾಡುವಂತೆ ನಿರೂಪಿಸುತ್ತ ನೋಡುಗರ ದೇಶಪ್ರೇಮವನ್ನು ರಿಚಾರ್ಜ್ ಮಾಡಲು ಪ್ರಯತ್ನಿಸಲಾಗುತ್ತಿದೆ.

1921 ರಲ್ಲಿ ಅಂಡಮಾನಿನಿಂದ ಭಾರತದ ಆಲಿ ಪುರ ಜೈಲಿಗೆ ಸಾವರ್ಕರ್ ಅವರನ್ನು ವರ್ಗಾಯಿಸಲಾಯಿತು, ನಂತರ ರತ್ನಗಿರಿಯ ಸೆರೆಮನೆ ವಾಸ, ತದನಂತರ 1923 ರಲ್ಲಿ ಯರವಡಾ ಜೈಲಿಗೆ ಸ್ಥಳಾಂತರಿ ಸಲಾಯಿತು. ಜನವರಿ 6, 1924 ಇನ್ನು 5 ವರುಷಗಳ ಕಾಲ ರಾಜಕಾರಣದಲ್ಲಿ ಭಾಗವಹಿಸಬಾರದು ಮತ್ತು ರತ್ನಗಿರಿ ಯಲ್ಲಿಯೇ ಸ್ಥಾನ ಬದ್ಧತೆಯಲ್ಲಿ ಇರಬೇಕು ಎಂಬ ಷರತ್ತಿನೊಂದಿಗೆ ಅವರನ್ನು ಬಿಡುಗಡೆ ಮಾಡಲಾಯಿತು. ಒಂದು ವೇಳೆ ಈ ರೀತಿಯಾಗಿ ಮುಂಗಡವಾಗಿಯೇ ಸಾವರ್ಕರರು ಬಿಡುಗಡೆಯಾಗದಿದ್ದರೆ, ತಮ್ಮ 50 ವರುಷಗಳ ಶಿಕ್ಷೆಯ ಅವಧಿಯನ್ನು ಸಂಪೂರ್ಣ 1960 ರ ಡಿಸೆಂಬರ್ 24 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಅಂಡಮಾನ್ ನ ಸೆರೆ ವಾಸದ ಭಾರತಕ್ಕೆ ಮರಳಿ ಇಲ್ಲಿಯೂ ಸುಮಾರು 13 ವರ್ಷಗಳ ಕಾಲ ರತ್ನಾಗಿರಿಯಲ್ಲಿ ಗೃಹ ಬಂಧನದಲ್ಲಿ ಒಳಗಾಗಿ, ಒಟ್ಟಾರೆ 27 ವರ್ಷಗಳ ಕಾಲ ಸಾವರ್ಕರ್ ಅವರು ಬ್ರಿಟಿಷರ ಸೆರೆಯಾಳಾಗಿದ್ದು ನಿಜಕ್ಕೂ ದೌರ್ಭಾಗ್ಯವೇ ಸರಿ.

ಸ್ವಾತಂತ್ರ್ಯಾ ನಂತರ ರಾಜಕೀಯದಿಂದ ದೂರವಿದ್ದ ಸಾವರ್ಕರ್ ಅವರನ್ನು ಗಾಂಧಿ ಹತ್ಯೆಯ ಆರೋಪವನ್ನು ಸಾವರ್ಕರ ಅವರ ಮೇಲೆ ಹೊರಿಸಲಾಯಿತು. 1948 ರ ಮೇ 24 ರಂದು ದಿಲ್ಲಿಗೆ ಬಂದ ಕೂಡಲೇ ಮೇ 27 ರಂದು ವಿಚಾರಣೆ ಆರಂಭಸಿ 1949 ಫೆಬ್ರವರಿ 10 ವಿನಾಯಕ ಡಿ.ಸಾವಕರ್ರ ಅವರು ತಪ್ಪಿತಸ್ಥರಲ್ಲದಿರುವುದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ ಎನ್ನುವ ತೀರ್ಪು ಹೊರಬರುವ ಮೂಲಕ ಸತ್ಯವೇ ಗೆದ್ದಿತು.

savarkarಇಂದು ಮೇ 28 ಸಾವರ್ಕರ ರ ಜನ್ಮ ದಿನ, ಭಾರತೀಯರಿಗೆ ಸುದಿನ. ಭಾರತದ ಇತಿಹಾಸದಲ್ಲಿ ಸಾವರ್ಕರ್ ಎನ್ನುವ ಹೆಸರೇ ಹೋರಾಟಕ್ಕೆ ಪರ್ಯಾಯ, ಕ್ರಾಂತಿಕಾರಿಗಳಿಗೆ ಸ್ಪೂರ್ತಿ, ಜಗತ್ತಿನ ಕ್ರಾಂತಿಕಾರಿಗಳ ಇತಿಹಾಸದಲ್ಲಿ ಸಾವರ್ಕರರಿಗೆ ಸರಿಸಾಟಿ ಬೇರೊಬ್ಬರಿಲ್ಲ. ಮೃತ್ಯುವನ್ನು ಚಕ್ರವ್ಯೂಹದಂತೆ ಭೇದಿಸಿದ ವೀರ. ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸಿಗೆ ಒಂಥರ ಸಂತೋಷ ವಾಗುತ್ತದೆ. ಜಗತ್ತಿನಲ್ಲಿ ಅವರು ಅನುಭವಿಸಿದಷ್ಟು ನೋವುಗಳನ್ನು ದೀರ್ಘಕಾಲದ ಕಠಿಣ ಕರಿನೀರಿನ ಕಾರ್ಯಾಗೃಹದ ವಾಸ ಅನುಭವಿಸಿದವರು ವಿರಳ. ಮೃತ್ಯುಂಜಯ ಎಂಬ ಅಭಿದಾನಕ್ಕೆ ಅವರಷ್ಟು ಅರ್ಹರಾದವರು ಬೇರಾರೂ ಇಲ್ಲ. ಇಪ್ಪತ್ತನೆಯ ಶತಮಾನದ ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿ ಅಂದು ಭಾರತದ ಸ್ವಾತಂತ್ರ್ಯ ಆಂದೋಲನಕ್ಕೆ ಭದ್ರ ಅಡಿಪಾಯವನ್ನು ಹಾಕಿದವರು ವಿನಾಯಕ ದಾಮೋದರ ಸಾವರರ್ಕರ್ ಎಂದರೆ ಅತಿಶಯೋಕ್ತಿಯೇನಲ್ಲ.

1950ರ ದೇಶದ ಮೊದಲ ಗಣರಾಜ್ಯೋತ್ಸವಕ್ಕೆ ಸಾವರ್ಕರರಿಗೆ ಆಮಂತ್ರಣ ನೀಡಿರಲಿಲ್ಲ. ಅದೇ ಸಮಯದಲ್ಲಿ ಲಿಯಾಖತ್ ಅಲಿಯ ಭಾರತ ಭೇಟಿಯ ಸಂದರ್ಭದಲ್ಲಿ ಕಾನೂನು ವ್ಯವಸ್ಥೆಗೆ ಭಂಗವಾಗುತ್ತದೆಂಬ ನೆಪವೊಡ್ಡಿದ ನೆಹರೂ ಸರಕಾರ ಅರವತ್ತೇಳು ವರ್ಷದ ವೃದ್ಧ ಸಾವರ್‌ಕರರನ್ನು ಬಂಧಿಸಿ ಬೆಳಗಾವಿ ಜೈಲಿಗೆ ಕಳುಹಿಸಿತು. ಆಗ ಸಾವರ್ಕರ ಗೌರವಾರ್ಥ ದೇಶಾದ್ಯಂತ ಯುವಕರು ‘ಮೃತ್ಯುಂಜಯ ದಿವಸ್’ ಆಚರಿಸಿದಾಗ ಸಾವರ್ಕರರನ್ನು ಬಂಧಿಸಿಟ್ಟ ಜೈಲನ್ನು ನೆಲಸಮ ಮಾಡಬೇಕೆಂಬ ಪ್ರಸ್ತಾಪ ಬಂದಿತ್ತು. ಆದರೆ ಸಂಸದ ಕೆ.ಆರ್. ಗಣೇಶ್ ಅವರ ಪ್ರತಿಭಟನೆಯಿಂದ ಅದು ನಿಂತಿತು.

1966 ಫೆಬ್ರುವರಿ 26 ಸಾವರರ್ಕರ್ ನಿಧನರಾದಾಗ ಇಡೀ ದೇಶವೇ ಕಣ್ಣಿರಿಟ್ಟರೂ. ಅಂದಿನ ಕಾಂಗ್ರೇಸ್ ಸರ್ಕಾರ ಅವರ ಶರೀರವನ್ನು ಕೊಂಡೊಯ್ಯಲು ಗನ್ ಕ್ಯಾರೇಜ್ ಕೊಡಲು ನಿರಾಕರಿಸಿತು. ಆಗ ಸಾವರ್ಕರ್ ಅವರ ಕಟ್ಟಾ ಅಭಿಮಾನಿ, ನಟ ವಿ. ಶಾಂತಾರಾಮ್ ತಮ್ಮ ಸ್ವಂತ ಖರ್ಚಿನಿಂದ ಗನ್ ಕ್ಯಾರೇಜ್ ವ್ಯವಸ್ಥೆ ಮಾಡಿದರು. ಅಂದಿನ ಮಹಾರಾಷ್ಟ್ರ ಸರಕಾರದ ಯಾವೊಬ್ಬ ಸಚಿವರೂ ಸಹಾ ಸಾವರ್ಕರ್ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲಿಲ್ಲ. ಲೋಕಸಭೆ ಅವರಿಗೆ ಗೌರವಾರ್ಪಣೆ ಮಾಡಬೇಕೆಂಬ ಪ್ರಸ್ತಾವನೆ ಬಂದಾಗ ಸಾವರ್ಕರ್ ಈ ಸಂಸತ್ತಿನ ಸದಸ್ಯನಾಗಿರಲಿಲ್ಲ ಎಂಬ ಕಾರಣ ನೀಡಿ ಅದನ್ನು ಸಭಾಧ್ಯಕ್ಷರು ತಿರಸ್ಕರಿಸಿದರು. ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಹಾಕಲು ಕಾಂಗ್ರೇಸ್ ಸರ್ಕಾರ ಹಿಂದೇಟು ಹಾಕುತ್ತಿದ್ದಾಗ ವಾಜಪೇಯಿಯವರ ಸರ್ಕಾರದ ಕಾಲದಲ್ಲಿ ವಿರೋಧ ಪಕ್ಷಗಳ ಭಾರೀ ಸದ್ದು ಗದ್ದಲಗಳ ನಡುವೆಯೂ ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಹಾಕಲಾಯಿತು. ಇಂದಿಗೂ ಸಹಾ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ಕೊಡುವ ವಿಷಯದಲ್ಲಿ ಅನೇಕ ಚರ್ಚೆಗಳು ಆಗುತ್ತಿದೆ.

sav2ಸರ್ಕಾರದ ನಿಲುವುಗಳು ಏನೇ ಇದ್ದರೂ ಸಾವರ್ಕರ್ ಒಬ್ಬ ಸಾಮಾನ್ಯ ವ್ಯಕ್ತಿಯಾಗಿರದೇ, ಇಡೀ ಭಾರತದ ಆಸ್ತಿ. ಸ್ವಾತಂತ್ರ್ಯ , ಸ್ವಾಭಿಮಾನ, ಹಿಂದುತ್ವ, ಧೈರ್ಯ, ಯುಕ್ತಿ , ಶಕ್ತಿ , ಎದೆಗಾರಿಕೆ, ನಿಸ್ವಾರ್ಥ ರಾಷ್ಟ್ರಭಕ್ತಿ, ಇವಲ್ಲವುಗಳ ಸಂಕೇತ. ಸಾವರ್ಕರ್ ಎಂದರೆ ಕಿಚ್ಚು, , ಆತ್ಮಾಭಿಮಾನ, ದೇಶಭಕ್ತಿ , ಸಮರ್ಪಣೆ. ಆದರ್ಶ, ನಿಷ್ಠೆ, ಸಾಹಸ, ಪರಾಕ್ರಮ, ಸಂಯಮ, ಸಹನಶೀಲತೆ, ಆತ್ಮವಿಶ್ವಾಸ, ಛಲ, ಜಾಣ್ಮೆ, ವಿವೇಕ, ನೇತೃತ್ವ, ಆತ್ಮಾರ್ಪಣೆ ಅವೆಲ್ಲದರ ಸಂಗಮವೇ ವಿನಾಯಕ ದಾಮೋದರ ಸಾವರ್ಕರ್. ಇಂತಹ ವೀರ ಸಾವರ್ಕರ್ ನಿಜಕ್ಕೂ ಪ್ರಾಥಃಸ್ಮರಣಿಯರೇ ಸರಿ.

ಏನಂತೀರೀ?

ಸುಭ್ರಹ್ಮಣ್ಯ ಷಷ್ಠಿ ಅವಾಂತರ

ನಾವುಗಳು ಚಿಕ್ಕವರಿದ್ದಾಗ ನಮಗೆಲ್ಲಾ ಆಷಾಡ ಮಾಸ   ಮುಗಿದು ಎಂದು ಶ್ರಾವಣ ಮಾಸ ಬರುತ್ತದೋ ಎಂಬ ಕಾತುರ. ಏಕೆಂದರೆ, ಭೀಮನ ಅಮಾವಸ್ಯೆಯಿಂದ ಆರಂಭವಾಗುವ ಹಬ್ಬಗಳ ಮತ್ತು ರಜೆಗಳ ಸಾಲು ಗೌರಿ, ಗಣೇಶ ದಾಟಿ ದಸರಾ ಮುಗಿದು ದೀಪಾವಳಿ ಮತ್ತು ಉತ್ತಾನದ್ವಾದಸಿ (ಮರಿ ದೀಪಾವಳಿ) ಹೊತ್ತಿಗೆ ಮುಗಿಯುತ್ತಿತ್ತು  ಹಬ್ಬಗಳ ದಿನ ಹೊಸ ಬಟ್ಟೆ, ರುಚಿ ತಿಂಡಿ ತೀರ್ಥಗಳ ಜೊತೆಗೆ ರಜಾದಿನಗಳಂದು ಇಡೀದಿನ ಕ್ರಿಕೆಟ್ ಆಡಲು ಭರ ಪೂರ ಸಮಯ ಸಿಗುತ್ತಿದ್ದದ್ದು ನಮ್ಮಗೆ ಹೆಚ್ಚಿನ ಮಜ ಕೊಡುತ್ತಿತ್ತು.  ಬೆಳಿಗ್ಗೆ ಸ್ನಾನ ಮುಗಿಸಿ ತಿಂಡಿ ತಿಂದು ಆಡಲು ಹೊರಟವೆಂದರೆ ಮಧ್ಯಾಹ್ನ ಊಟಕ್ಕೆ  ಬಂದರೆ ಬಂದೆವು ಇಲ್ಲವೇ ಒಟ್ಟಿಗೆ ಸಂಜೆ ಕತ್ತಲಾದ ಮೇಲೆ ಮನೆಗೆ ಬರುತ್ತಿದ್ದೆವು.  ಹಬ್ಬದ ದಿವಸ ತಂದೆಯವರು ಹೇಗೂ  ಬೈಯುತ್ತಿರಲಿಲ್ಲವಾದ್ದರಿಂದ  ಭಂಡ ಧೈರ್ಯ ನಮಗೆ.

ಈ ಎಲ್ಲಾ ಹಬ್ಬಗಳಿಗಿಂತ ನನಗಂತೂ ಭೀಮನ ಅಮಾವಸ್ಯೆ ಮತ್ತು  ಸುಭ್ರಹ್ಮಣ್ಯ ಷಷ್ಠಿ  ಎಂದರೆ ಬಲು ಪ್ರೀತಿ. ಏಕಂದರೆ  ಅಂದಿನ ಕಾಲದಲ್ಲಿ ನಮಗೆಂದು ಪಾಕೆಟ್ ಮನಿ ಕೊಡುವ ಅಭ್ಯಾಸವೇ ನಮ್ಮ ಮನೆಯಲ್ಲಿ ಇರಲಿಲ್ಲ. ಏನೇ ಬೇಕಂದರೂ ಸರಿಯಾದ ಕಾರಣ ತಿಳಿಸಿ ಅಗತ್ಯವಿದ್ದಷ್ಟೇ ದುಡ್ಡನ್ನು ಕೊಡುತ್ತಿದ್ದರು. ಆಕಸ್ಮಾತ್ ಹೆಚ್ಚಿನ ಹಣ ನೀಡಿದ್ದಲ್ಲಿ, ಸರಿಯಾದ ಚಿಲ್ಲರೆ ತಂದು ಕೊಡಲೇ ಬೇಕಿತ್ತು. ಹಾಗಾಗಿ ನಮಗೆ ಕ್ರಿಕೆಟ್ ಮ್ಯಾಚ್ ಆಡುವಾಗ ಬೆಟ್ಟಿಂಗ್ ಕಟ್ಟಲು  ಹಣವೇ ಸಿಗುತ್ತಿರಲಿಲ್ಲ. ಆದರೆ ಭೀಮನ ಅಮಾವಾಸ್ಯೆಯಂದು ಹೊಸಿಲಿನ ಮೇಲೆ ಗಂಡು ಮಕ್ಕಳ ಮೊಣಕೈನಿಂದ ಉದ್ದಿನ ಕಡುಬು ಇಲ್ಲವೇ ಕರಿದ ಕಡುಬಿನಿಂದ  ಭಂಡಾರ ಹೊಡೆಸುವುದು ನಮ್ಮ ಮನೆಯಲ್ಲಿ  ಆಚರಿಸುತ್ತಿದ್ದ ಪದ್ದತಿ.  ಆ ಭಂಡಾರದ ಜೊತೆಯಲ್ಲಿ ದಕ್ಷಿಣೆಗೆಂದು ಇಡುತ್ತಿದ್ದ  ಐದೋ, ಹತ್ತು  (ಇಂದು ಐದು ನೂರು, ಸಾವಿರ ರೂಪಾಯಿಗಳವರೆಗೆ ತಲುಪಿದೆ)  ರೂಪಾಯಿಗಳೇ ನಮಗೆ ಸಿಗುತ್ತಿದ್ದ ನಿಧಿ. ಹಾಗಾಗಿ ಅದಕ್ಕೇ ನಾನು ಬಕ ಪಕ್ಷಿಯಂತೆ ಒಂದು ವರ್ಷಗಳಿಂದ ಕಾಯುತ್ತಲಿರುತ್ತಿದೆ. ಆ ದುಡ್ಡನ್ನು ಅಮ್ಮಾ ಡಬ್ಬಿ ಗಡಿಗೆಯಲ್ಲಿ ಹಾಕಲು ಹೇಳುತ್ತಿದ್ದರಾರರೂ ಅದು ಹೇಗೂ ಅಮ್ಮನ ಕಣ್ಣುತಪ್ಪಿಸಿ ನನ್ನ ಜೋಬಿನೊಳಕ್ಕೆ ಹಾಕಿ ಕೊಳ್ಳುತ್ತಿದ್ದೆ. ನಂತರ ಅದೇ ದುಡ್ಡಿನಲ್ಲಿ  ಕ್ರಿಕೆಟ್ ಮ್ಯಾಚ್ ಆಡಲು ಇಲ್ಲವೇ ಬಾಲ್ ಖರೀದಿಸಲು ಉಪಯೋಗಿಸುತ್ತಿದ್ದೆ.  ಅದೇ ರೀತಿ ಸುಬ್ಬರಾಯನ ಷಷ್ಠಿ  ಮತ್ತು  ಮುಂಜಿಗಳು ಬಂದಿತೆಂದರೆ ನನ್ನಂತಹ ಬ್ರಹ್ಮಚಾರಿಗಳಿಗೆ ಸುಗ್ಗಿಯೋ ಸುಗ್ಗಿ.  ಒಂಟಿ ಪಂಚೆ ಜೊತೆ, ಭೂರೀ ಭೋಜನ ಮತ್ತು ಯಥಾಶಕ್ತಿ ದಕ್ಷಿಣೆಗಳು ನಮ್ಮನ್ನು  ಮತ್ತಷ್ಟು ಆರ್ಥಿಕವಾಗಿ ಸಧೃಡಗೊಳಿಸುತ್ತಿದ್ದವು. ಅಂತಹ ಒಂದು ಸುಬ್ಬರಾಯನ ಷಷ್ಠಿಯ ಮಜಬೂತಾದ  ಅನುಭವವನ್ನೇ ಇಂದು ನಾನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ.

ನರಹರಿ ಅಂದಿಗೂ, ಇಂದಿಗೂ ಮತ್ತು ಮುಂದೆಂದಿಗೂ ನನ್ನ ಆತ್ಮೀಯ ಗೆಳೆಯರ ಸಾಲಿನಲ್ಲಿ ಅಗ್ರ ಶ್ರೇಣಿಯವ.  ನರಹರಿ ಎಂದು ಅವನ ಹೆಸರಿದ್ದರೂ ನಮಗೆಲ್ಲಾ ಹರೀ ಎಂದೇ ಸುಪರಿಚಿತ. ಆವರ ತಂದೆಯವರು ಮತ್ತು ನನ್ನ ತಂದೆಯವರು ಒಟ್ಟಿಗೆ ಬಿಇಎಲ್ ಕಾರ್ಖಾನೆಗೆ ಸೇರಿಕೊಂಡು, ಒಟ್ಟೊಟ್ಟಿಗೇ ತರಭೇತಿ ಪಡೆದು ಒಂದೇ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದವರು. ಆವರ ಮನೆಯೂ ನಮ್ಮ ಮನೆಯ ಸಮೀಪವೇ ಇತ್ತು. ವಯಸ್ಸಿನಲ್ಲಿ ನನಗೂ ಅವನಿಗೂ ಐದು ವರ್ಷಗಳ ಅಂತರವಿದ್ದರೂ ನಾವಿಬ್ಬರೂ ಗಳಸ್ಯ ಗಂಟಸ್ಯರೇ.  ನಮ್ಮ ಮನೆಯಲ್ಲಿ ಏನೇ ತಿಂಡಿಗಳನ್ನು ಮಾಡಿದರೂ ಅದರಲ್ಲಿ ಹರಿಯ ಪಾಲಿರುತ್ತಿತ್ತು. ಅದೇ ರೀತಿ ಅವರ ಮನೆಯಲ್ಲೂ ನನಗೂ ಪಾಲಿರುತ್ತಿತ್ತು. ನನ್ನ ತಾಯಿಯಂತೂ ನಾವಿಬ್ಬರೂ ಸದಾ ಜೊತೆಯಲ್ಲಿರುತ್ತಿದ್ದನ್ನು ನೋದಿ ಒಡ ಹುಟ್ಟದಿದ್ದರೂ ಒಳ್ಳೆ ರಾಮ ಲಕ್ಷ್ಮಣರಂತೆ ಇದ್ದೀರಿ, ಹಾಗೆಯೇ ಸದಾಕಾಲವೂ ಇರಿ ಎಂದೇ ಹರಸುತ್ತಿದ್ದರು. ಇಂದು ನಮ್ಮ ತಾಯಿಯವರು ನಮ್ಮನ್ನಗಲಿದ್ದರೂ ಅವರ ಇಚ್ಛೆಯಂತೆ ಅದೇ ಗೆಳೆತನವನ್ನು ಇಂದಿಗೂ ನಾವಿಬ್ಬರೂ  ಮುಂದುವರಿಸಿಕೊಂಡು ಬರುತ್ತಿದ್ದೇವೆ. ನಮ್ಮಿಬ್ಬರ ಮನೆಯಲ್ಲಿಯ ಯಾವುದೇ ಶುಭ/ಅಶುಭ ಕಾರ್ಯಕ್ತಮಗಳಾದರೂ ಒಬ್ಬರು ಮತ್ತೊಬ್ಬರಿಲ್ಲದೆ ನಡೆದ ನೆನಪಿಲ್ಲ.

ಇಂತಹ ಹರಿ ಮನೆಯಲ್ಲಿಯಲ್ಲಿ  ಒಮ್ಮೆ ನನ್ನನ್ನು  ಸುಭ್ರಹ್ಮಣ್ಯ ಷಷ್ಠಿಗೆ ಬ್ರಹ್ಮಚಾರಿಯಾಗಿ ಬರಲು ಹೇಳಿದ್ದರು.  ನಾನು,  ಹರೀ ಎಷ್ಟು ಹೊತ್ತಿಗೆ ಬರಬೇಕೋ ಎಂದು ಕೇಳಿದ್ದಾಗ, ಅವನು 1:30-2 ಘಂಟೆಗೆ ಬಂದು ಬಿಡೋ ಎಂದಿದ್ದ. ಆಂದು ಭಾನುವಾರ. ನಾನು ಸ್ನಾನ ಸಂಧ್ಯಾವಂದನೆ ಮುಗಿಸಿ  (ಅಂದು ಷಷ್ಠಿಗೆ ಬ್ರಹ್ಮಚಾರಿಯಾಗಿ ಹೋಗಲು ಒಪ್ಪಿಕೊಂಡಿದ್ದರಿಂದ, ತಿಂಡಿ ತಿನ್ನುವ ಹಾಗಿರಲಿಲ್ಲ)  ಮನೆಯ ಮುಂದಿನ ತೋಟದಲ್ಲಿ ಗಿಡಗಳಿಗೆ ನೀರುಣಿಸುತ್ತಿದ್ದೆ.  ಆದೇ ಸಮಯದಲ್ಲಿ ನಮ್ಮ ಮನೆಯ ಸಮೀಪದಲ್ಲೇ ಇರುವ ಮತ್ತೊಬ್ಬ ಸ್ನೇಹಿತ ಕೃಷ್ಣೀ (ಕೃಷ್ಣಮೂರ್ತಿ, ಗಾಲಿ ಮತ್ತು ಅಚ್ಚು ಕಾರ್ಖಾನೆಯ ಕ್ರಿಕೆಟ್ ಪಟು) ಮನೆಗೆ ಬಂದು ಬಾರೋ, ಕ್ರಿಕೆಟ್ ಮ್ಯಾಚ್ ಆಡಲು ಹೋಗೋಣ ಎಂದು ಕರೆದ. ನಾನು ಇಲ್ಲಾ ಕೃಷ್ಣೀ  ಇವತ್ತು  ಮಧ್ಯಾಹ್ನ ಎಲ್ಲಿಗೂ ಹೋಗಬೇಕು ಬರಲು ಆಗುತ್ತಿಲ್ಲ  ಮುಂದಿನ ವಾರ ಖಂಡಿತ ಬರ್ತೀನಿ ಅಂದೆ. ಅದಕ್ಕೆ ಅವನು ಹೇ ಇವತ್ತು ಟೆನ್ನಿಸ್ ಬಾಲ್ ಮ್ಯಾಚ್ ಅಲ್ಲಾ ಮಗಾ, ಲೆದರ್ ಬಾಲ್ ಮ್ಯಾಚ್ ಏರ್ಫೋಸ್ ಟೀಮ್ ಮೇಲೇ ಅಂತ ಪುಸಲಾಯಿದ. ಲೆದರ್ ಬಾಲ್ ಮ್ಯಾಚಾ? ಎಷ್ಟು ಹೊತ್ತಿಗೆ ಮುಗಿಯುತ್ತದೆ ಎಂದು ಆಸೆಯಿಂದ ಕೇಳಿದೆ. 9-9:30ಕ್ಕೆ ಹೊತ್ತಿಗೆ ಆರಂಭವಾಗಿ 12-12:30 ವರೆಗೆ ಮುಗಿಯುತ್ತದೆ. ಇಪ್ಪತ್ತು ಓವರ್ ಮ್ಯಾಚ್ ಅಂತ ಹೇಳಿದ.  ಹರಿ ಹೇಗೂ ಒಂದೂವರೆಗೆ ಬರಲು ಹೇಳಿದ್ದಾನೆ, ನಾನೂ ಅಷ್ಟು ಹೊತ್ತಿಗೆ  ಲೆದರ್ ಬಾಲ್ ಮ್ಯಾಚ್ ಮುಗುಸಿ ಕೊಂಡು ಬರಬಹುದು ಎಂದು ಯೋಚಿಸಿ ಶೂ ಹಾಕಿಕೊಂಡು ಸೈಕಲ್ ಹತ್ತಿ ಮ್ಯಾಚ್ ಆಡಲು ಹೋಗಿಯೇ ಬಿಟ್ಟೆ. ಟಾಸ್ ಹಾಕಿ ನಾವೇ ಟಾಸ್ ಗೆದ್ದು ಎದುರಾಳಿಗೆ  ಮೊದಲು ಬ್ಯಾಟ್ ಮಾಡಲು ಕೇಳಿದ್ದೆವು. ಆಷ್ಟರಲ್ಲಿ ನಮ್ಮ ತಂಡ ಸದಸ್ಯನೊಬ್ಬ 20 ಓವರ್ ಬದಲು  30 ಓವರ್ ಆಡೋಣ ಅವರನ್ನು ಬೇಗನೆ  ಔಟ್ ಮಾಡಿಬಿಟ್ರೆ ನಮಗೆ ಪೂರ್ತಿ 30 ಓವರ್ ಆಡಬಹುದು ಎಂಬ ಸಲಹೆ ಕೊಟ್ಟೇ ಬಿಟ್ಟ. ಸರಿ ನಮ್ಮ ತಂಡದ ನಾಯಕ ಕೃಷ್ಣಿ  ಹಾಗು ಎದುರಾಳಿ ತಂಡದ ನಾಯಕ ಒಪ್ಪಿಕೊಂಡು ಆಟ ಶುರುವಾಯಿತು. ಆರಂಭದಲ್ಲಿ ಎರಡ್ಮೂರು ವಿಕೆಟ್ ಬಿದ್ಡಾಗ ನಮ್ಮ ನಿರ್ಧಾರ ಸರಿಯಾಗಿದೆ ಎಂದೆನೆಸಿದರು ನಂತರ ಬಂದ ಆಟಗಾರರು ನಿಂತು ಆಡತೊಡಗಿದರು. ನನಗೋ ಸಮಯ ಜಾಸ್ತಿ ಆಗುತ್ತಿರುವ ಬಗ್ಗೆ ಕಳವಳ.  ಹಾಗೂ ಹೀಗೂ ವಿಕೆಟ್ ಉರಳುತ್ತಾ 29.5 ಓವರ್ಗೆ  ಎಲ್ಲರೂ ಔಟ್ ಆದಾಗ ಸಮಯ   ಮಧ್ಯಾಹ್ನ 12.45. ನಾನು ಬ್ಯಾಟ್ ಮಾಡುವುದಿಲ್ಲ. ನಾನು ಮನೆಗೆ ಹೊರಟು ಹೋಗುತ್ತೇನೆ ಎಂದು ಕೃಷ್ಣಿ ಬಳಿ ಕೇಳಿದಾಗ, ಅದೆಲ್ಲಾ ಬೇಡಾ ನೀನೇ ಓಪನಿಂಗ್ ಮಾಡು ಎಂದ. ಅಕ್ಕಿ ಮೇಲೆ ಆಸೆ ನೆಂಟರ ಮೇಲಿನ ಪ್ರೀತಿ ಎನ್ನುವಂತೆ ಇತ್ತ ಆಟ,  ಅತ್ತ ಊಟ. ಸರಿ ಒಂದೆರಡು ಓವರ್ ಆಡಿ ಹೋದರಾಯ್ತು ಎಂದು ಪ್ಯಾಡ್ ಕಟ್ಟಿಕೊಂಡು ಗ್ಲೌಸ್ ಹಾಕಿ ಕೊಂಡು ಆಡಲು ಇಳಿದೇ ಬಿಟ್ಟೆ.  ನಾನೊಂದು ಬಗೆದರೆ ದೈವ ಒಂದು ಬಗೆದೀತು ಎನ್ನುವ ಹಾಗೆ ಅಂದು ನಾನು ಮುಟ್ಟಿದ್ದೆಲ್ಲಾ  ಚಿನ್ನ ಎನ್ನುವಂತೆ ಹೊಡೆದದ್ದೆಲ್ಲಾ ರನ್ಗಳೇ . ಔಟೇ ಆಗ್ತಾ ಇಲ್ಲ. ಹಾಗೂ ಹೀಗೂ 10-12  ಓವರ್ ಆಟ ಮುಗಿತಾ ಬಂತು ನಾನು  32 ರನ್ ಹೊಡೆದು ರನ್ ಔಟ್ ಆದಾಗ ಸಮಯ 1:50.  ಓಡೋಡಿ ಪ್ಯಾಡ್,  ಗ್ಲೌಸ್ ಎಲ್ಲಾ ಬಿಚ್ಚಾಕಿ ಮನೆಕಡೆಗೆ ಹೋದಾಗ ರೇಡಿಯೋದಲ್ಲಿ  ಮಧ್ಯಾಹ್ನ  2:10ರ ಪ್ರದೇಶ ಸಮಾಚಾರ ಬರುತ್ತಿತ್ತು. ಮನೆಗೆ ಹೋದ ತಕ್ಷಣವೇ ನಮ್ಮ ತಂದೆ  ನನ್ನ ಮೇಲೆ ಸಿಡಿಮಿಡಿಗೊಂಡು ಏಲ್ಲಿ  ಹೋಗಿದ್ದೆ ಎಂದು ಏರು ದನಿಯಲ್ಲಿ ಕೇಳಿದರು? ಇದೇನಪ್ಪಾ, ಹೀಗೇಕಾಡ್ತಾ ಇದ್ದಾರೆ ನಮ್ಮಪ್ಪಾ? ಎಂದು ಕೊಂಡಾಗ  ಹರಿ ಈಗಾಗಲೇ 4-5 ಬಾರಿ ಅಂಡು ಸುಟ್ಟ ಬೆಕ್ಕಿನಂತೆ ನಮ್ಮ ಮನೆಗೆ ನನ್ನನ್ನು ಹುಡುಕಿಕೊಂಡು  ಬಂದು ಹೋಗಿದ್ದು ಗೊತ್ತಾಯ್ತು. ಸರಿ ಸರಿ. ಅವರ ಮನೆಯಲ್ಲಿ  ಎಲ್ಲರೂ ಕಾಯುತ್ತಿದ್ದಾರೆ. ಕೈ ಕಾಲು ತೊಳಿದುಕೊಂಡು ಪಂಚೆ ಉಟ್ಟು ಕೊಂಡು ಹೋಗು ಎಂದರು ನಮ್ಮ ತಂದೆಯವರು. ಇಲ್ಲಾ  ಈಗಾಗಲೇ ಸಮಯ ಆಗಿ ಹೋಗಿದೆ. ನಾನು ಹೋಗೋದಿಲ್ಲಾ ಎಂದೆ.  ಹೋದ್ರೆ ಅವರ ಮನೆಯಲ್ಲೆಲ್ಲಾ ಬೈದುಕೊಳ್ಳುತ್ತಾರೆ ಎಂದೆ. ಅದಕ್ಕವರು ಹೇ ಹಾಗೆಲ್ಲಾ ಮಾಡಬಾರದು.  ಬ್ರಹ್ಮಚಾರಿಗಳ ಪೂಜೆಮಾಡಿ ಊಟ ಹಾಕದ ಹೊರತು ಅವರ ಮನೆಯಲ್ಲಿ ಯಾರೂ ಕೂಡಾ ಊಟ ಮಾಡುವ ಹಾಗಿಲ್ಲ ಹೋಗು ತಡ ಮಾಡ ಬೇಡ ಎಂದು ತಿಳಿ ಹೇಳಿ ಕಳುಹಿಸಿದರು.  ಸರಿ ಎಂದು ಒಲ್ಲದ ಮನಸ್ಸಿನಿಂದಲೇ ಹರಿ ಮನೆಗೆ ಹೋದಾಗ ಆಗಲೇ ಬಂದ ನೆಂಟರಿಸ್ಟರೆಲ್ಲಾ ಹಸಿವಿನಿಂದ ತತ್ತರಿಸಿ ನನ್ನ ಬರುವನ್ನೇ ಕಾಯುತ್ತಿದ್ದರು. ನನ್ನನ್ನು ನೋಡಿ ಹರಿ, ಓ ಶ್ರೀಕಂಠಾ ಬಂದ್ಯಾ, ಬಾ,ಬಾ, ಹೋಗಿ ಸ್ನಾನ ಮಾಡಿಕೊಂಡು ಮಡಿ ಪಂಚೆ ಉಟ್ಟಿಕೋ ಎಲ್ಲರೂ ನಿನಗಾಗಿಯೇ ಕಾಯ್ದು ಕಾಯ್ದು ಸುಸ್ತಾಗಿದ್ದಾರೆ ಎಂದು ಸಮಚಿತ್ತದಂದ ಹೇಳಿದಾಗ ನಾನು ಅಬ್ಬಾ ಬದುಕಿದೆಯಾ ಬಡ ಜೀವ ಎಂದು ಸದ್ದಿಲ್ಲದೆ ಬಚ್ಚಲಿನತ್ತ ಓಡಿದ್ದೆ. ಮಡಿಯುಟ್ಟು ದೇವರ ಮನೆ ಮುಂದೆ ಕುಳಿತಾಗ, ಹರಿ ಒಬ್ಬನನ್ನು ಬಿಟ್ಟು ಬೇರೆ ಯಾರೂ ನನ್ನನ್ನು ಮಾತಾನಾಡಿಸುವುದು ಬಿಡಿ, ನೋಡುತ್ತಲೂ ಇರಲಿಲ್ಲ. ಅವರ ತಾತ ಅಜ್ಜಿ  ನನ್ನನ್ನು ಹರಿಗಿಂತಲೂ ತುಸು ಹೆಚ್ಚೇ ಇಷ್ಟ ಪಡುತ್ತಿದ್ದವರು ಅಂದೇಕೋ ನಾನು ತಡವಾಗಿ ಬಂದಿದ್ದಕ್ಕೆ ಕೋಪಗೊಂಡಿದ್ದರು. ಇನ್ನು ಅವರ ಅಪ್ಪಾ ಅಮ್ಮಾ   ಕೂಡಾ ನನ್ನ ನೋಡಿ ಸಿಡಿಮಿಡಿ ಗೊಂಡಾಗ, ಅಯ್ಯೋ ತಂದೆಯವರ ಮಾತನ್ನು   ಕೇಳಿ ಬರಬಾರದಿತ್ತು ಎಂದೆನಿಸುತ್ತಿತ್ತು. ಸರಿ ಹೇಗೂ ನನ್ನಿಂದ ತಪ್ಪಾಗಿದೆ ತೆಪ್ಪಗಿರಲೇ ಬೇಕು ಎಂದು ಕೊಂಡು. ಹೇಗೋ  ಬಂದದ್ದೂ ಆಗಿದೆ.  ಆಗಿದ್ದು ಆಗಿಯೇ ಹೋಗಲಿ  ಎಂದು  ಚಾಪೆ ಮೇಲೆ ಕುಳಿತು ಕೊಂಡೆ. ಹರಿಯವರ ಅಜ್ಜಿ  ಮತ್ತವರ ಅವರಮ್ಮ ನನಗೂ ಮತ್ತು  ಮತ್ತೊಬ್ಬ ವಟುವಿಗೆ ಪೂಜೆ ಮಾಡಿ ಆರತಿ ಎತ್ತಿ ಎಲೆ ಬಡಿಸಿ ಊಟ ಬಡಿಸಿ ಮನೆಯವರೆಲ್ಲಾ ನಮ್ಮಿಬ್ಬರಿಗೂ ನಮಸ್ಕಾರ ಮಾಡಿ ನಮಗೆ ಊಟ ಮಾಡಲು ಹೇಳಿದರು. ಸಾಮಾನ್ಯವಾಗಿ ವಟುಗಳ ಊಟ ಮುಗಿದು ನಮಗೆ ಫಲ ತಾಂಬೂಲ ದಕ್ಷಿಣೆ ಎಲ್ಲಾ ಕೊಟ್ಟ ಮೇಲೆಯೇ ಉಳಿದವರೆಲ್ಲಾ ಊಟ ಮಾಡುತ್ತಿದ್ದದ್ದು ಸಂಪ್ರದಾಯ.  ಆದರೆ ಆಗಾಗಲೇ ಸಮಯ ಮೂರರ ಸಮೀಪವಾಗಿದ್ದ ಕಾರಣ ಎಲ್ಲರೂ ನಮ್ಮೊಟ್ಟಿಗೇ ಊಟಕ್ಕೆ ಕುಳಿತೇ ಬಿಟ್ಟರು. ಸಾಮಾನ್ಯವಾಗಿ ಅವರ ಮನೆಯಲ್ಲಿ ಎಲ್ಲರೂ ಊಟ ಮಾಡುವಾಗ ನಗು ನಗುತ್ತಾ ಬಾಯ್ತುಂಬಾ ಮಾತನಾಡುತ್ತಾ  ಊಟ ಮಾಡುತ್ತಿದ್ದವರು ಅಂದು ಎಲ್ಲವೂ ಗಪ್ ಚುಪ್. ಬರೀ ಕೈ ಬಾಯಿಗೆ ಮಾತ್ರ ಕೆಲಸ. ಸರಿ ನಾನು ಕೂಡಾ ಒಲ್ಲದ ಮನಸ್ಸಿನಿಂದಲೇ ಬಡಿಸಿದ್ದ ಎಲ್ಲವನ್ನೂ  ಗಬ ಗಮ ಎಂದು  ತಿಂದು ಯಾವುದೇ ರುಚಿ ಗಿಚಿಯ ಪರಿವೇ ಇಲ್ಲದೇ ತಿಂಡೆದ್ದಿದ್ದೆ.  ಊಟ ಮಾಡಿ ಕೈ ತೊಳೆದುಕೊಂಡು ಫಲ ತಾಂಬೂಲ ದಕ್ಷಿಣೆ  ತೆಗೆದುಕೊಂಡು ಯಾರನ್ನೂ ಮಾತನಾಡಿಸದೇ, ಬರ್ತಿನೋ ಹರಿ ಎಂದು ಅವನತ್ತ ತಿರಿಗಿಯೂ ನೋಡದೆ ಕಾಲ್ಕಿತ್ತಿದ್ದೆ. ಮಂದಿನ ಒಂದು ವಾರ ಹರೀ ನಮ್ಮ ಮನೆಯ ಕಡೆ ಸುಳಿಯಲೇ ಇಲ್ಲ. ನಾನೂ ಕೂಡಾ ಅವನಿಗೆ ನನ್ನ ಮೇಲಿನ ಕೋಪ ಇಳಿದ ಮೇಲೆ ಹೊದರಾಯ್ತು ಎಂದು ಸುಮ್ಮನಿದ್ದೆ. ಮತ್ತೆ ಮುಂದಿನ ಭಾನುವಾರ ಬೆಳಿಗ್ಗೆ ಹರಿ ಮನೆಗೆ ಬ್ಯಾಟ್ ಬಾಲ್ ಹಿಡಿದುಕೊಂಡು ಬಂದೇ ಬಿಟ್ಟ, ನಾನು ಕೂಡಾ ವಿಕೆಟ್ಗಳನ್ನ ಹಿಡಿದು ಕೊಂಡು ಕ್ರಿಕೆಟ್ ಆಡಲು ಹೊರಟೆ ಬಿಟ್ಟ. ಗಂಡ ಹೆಂಡತಿಯರ ಜಗಳ ಊಂಡು ಮಲಗುವ ತನಕವಾದರೆ, ನನ್ನ, ಹರಿ ಕೋಪ ಮುಂದಿನ ಕ್ರಿಕೆಟ್ ಮ್ಯಾಜ್ ವರೆಗೆ  ಎನ್ನುವಂತಾಗಿತ್ತು.

ಆದೇ ಕಡೆ . ಮುಂದೆದೂ ಹರಿ ಮನೆಯವರು ನನ್ನನ್ನು ಸುಭ್ರಹ್ಮಣ್ಯ ಷಷ್ಠಿಗೆ ಬ್ರಹ್ಮಚಾರಿಯಾಗಿ ಬರಲು ಹೇಳಲೇ ಇಲ್ಲಾ, ನಾನೂ ಕೂಡಾ ಇನ್ನಾವುದೇ ಮನೆಗೂ ಬ್ರಹ್ಮಚಾರಿಯಾಗಿ ಹೋಗಲು ಮನಸೇ ಮಾಡಲಿಲ್ಲ. ಅದಕ್ಕೇ ಹೇಳೋದು ಹರ್ಷದ ಕೂಳಿಗೆ ಆಸೆ ಪಟ್ಟು,  ವರ್ಷದ ಕೂಳನ್ನು  ಕಳೆದು ಕೊಳ್ಳವಾರದು ಎಂದು

ಏನಂತೀರೀ?

ದೇವರಿಗೆ ಅರ್ಪಿಸಿದ  ನೈವೇದ್ಯ ದೇವರಿಗೆ ತಲುಪುತ್ತದೆಯೇ?

ಸುಮಾರು ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ಒಬ್ಬ ಆಸ್ತಿಕ ಮಹಾಶಯರು ಬೆಂಗಳೂರಿನಿಂದ ತಿರುಪತಿ ವೇಂಕಟರಮಣನನ್ನು   ದರ್ಶನ ಮಾಡಲು ನಿರ್ಧರಿಸಿದರು. ಆವತ್ತಿನ ಕಾಲದಲ್ಲಿ ಇಂದಿನಂತೆ ಮೋಟಾರು ವಾಹನಗಳು ಇನ್ನೂ ಹೆಚ್ಚಿನ ಪ್ರಚಲಿತವಿಲ್ಲದಿದ್ದ ಕಾರಣ, ಎತ್ತಿನ ಗಾಡಿಯಲ್ಲಿಯೇ ಹೋಗಲು ನಿರ್ಧರಿಸಿ ಸಕಲ ಸಿದ್ಢತೆಗಳೊಂದಿಗೆ ಒಳ್ಳೆಯ ಮಹೂರ್ತ ನೋಡಿ ಕುಟುಂಬ ಸಮೇತರಾಗಿ ಗಾಡಿಯಲ್ಲಿ ಹೊರಟೇ ಬಿಟ್ಟರು. ಬಹಳ ಅನುಷ್ಟಾಂತರಾದ ಶ್ರೀಯುತರು ಮಾರ್ಗದ ಬದಿಯಲ್ಲಿಯೇ ಇರುತ್ತಿದ್ದ ಅರವಟ್ಟಿಗೆಗಳಲ್ಲಿ ತಂಗಿ, ಅಲ್ಲಿಯೇ ಅಡುಗೆ ಮಾಡಿಕೊಂಡು ತಮ್ಮ ಪ್ರಯಾಣ ಮುಂದುವರಿಸಿದ್ದರು. ಸುಮಾರು ಹದಿನೈದು ಇಪ್ಪತ್ತು ದಿನಗಳ ಪ್ರಯಾಣದ ಮದ್ಯದಲ್ಲಿ ತಮ್ಮ ಜೊತೆಯಲ್ಲಿ ತಂದಿದ್ದ ಕುಡಿಯವ ನೀರು ಖಾಲಿಯಾಗಿ ಹತ್ತಿರದಲ್ಲಿ ಎಲ್ಲಾದರೂ ನೀರು ಸಿಗುತ್ತದೆಯೇ ಎಂದು ನೋಡುತ್ತಿರುವಾಗ ದೂರದಲ್ಲಿ ಒಬ್ಬ ರೈತ ತನ್ನ  ಬಾಳೇತೋಟಕ್ಕೆ ತನ್ನ ಭಾವಿಯಿಂದ ನೀರು ತೆಗೆದು ಏತ ನೀರಾವರಿ ಮೂಲಕ ನೀರುಣಿಸುತ್ತಿದ್ದನ್ನು ಕಂಡು ಮರುಭೂಮಿಯಲ್ಲಿ ನೀರು ಕಂಡಾಗ  ಸಂತಸ ಪಡುವಂತೆ ಸಂತೋಷ ಪಟ್ಟು, ಆ ರೈತನ ಬಳಿ ಹೋಗಿ ಅಯ್ಯಾ, ಪ್ರಯಾಣದ ಆಯಾಸದಿಂದ ಬಳಲಿದ್ದೇನೆ. ದಯವಿಟ್ತು ಕುಡಿಯಲು ಸ್ವಲ್ಪ ನೀರನ್ನು ಕೊಡುವೆಯಾ ಎಂದಾಗ, ಆತ ಅಯ್ಯೋ ಸಾಮ್ಯಾರ? ಕುಡಿಯುವ ನೀರಿಗೆ ಯಾವ ದೊಣ್ಣೆ ನಾಯಕನ ಅಪ್ಪಣೆ?. ದಾರಾಳವಾಗಿ ಮನಸೋ ಇಚ್ಚೆ ಕುಡಿಯಿರಿ ಎಂದ.  ಅಲ್ಲಿಯೇ ಸಮೀಪದಲ್ಲಿದ್ದ ಆಲದ ಮರದ ಬುಡದಲ್ಲಿ ತಂದಿದ್ದ ಬುತ್ತಿಯನ್ನು  ಆ ರೈತನೊಂದಿಗೆ ಹಂಚಿಕೊಂಡು ತಿಂದು, ಹೊಟ್ಟೆ ತುಂಬ ನೀರನ್ನು ಕುಡಿದು, ಮುಂದಿನ ಪ್ರಯಾಣಕ್ಕೆ ಬೇಕಾಗುವಷ್ಟು ನೀರನ್ನು ತುಂಬಿಸಿಕೊಂಡು , ಮರದಡಿಯಲ್ಲಿ  ಬೀಸುತ್ತಿದ್ದ ತಂಗಾಳಿಗೆ ಮನಸೋತು  ಸ್ವಲ್ಪ ಕಾಲ  ವಿರಮಿಸುತ್ತಾ ರೈತನೊಂದಿಗೆ ಲೋಕಾಭಿರಾಮವಾಗಿ ಮಾತಿಗಿಳಿದರು. ಹಾಗೆಯೇ ಮಾತು ಮುಂದುವರೆಯುತ್ತಿದ್ದಾಗ ತಿರುಮಲನ ದರ್ಶನಕ್ಕೆ ಹೋಗುತ್ತಿರುವುದನ್ನು ಕೇಳಿದ ರೈತ, ಸ್ವಾಮೀ, ಆ ಏಳುಕೊಂಡಲವಾಡನ ನೋಡುವ ಭಾಗ್ಯ  ನನಗೆಂದು ದೊರಕುವುದೋ ನಾಕಾಣೆ, ದಯವಿಟ್ಟು ನನ್ನದೊಂದು ಸಣ್ಣ ಕೋರಿಕೆಯನ್ನು ನೆರವೇರಿಸುವಿರಾ ಎಂದು ವಿನಮ್ರದಿಂದ ಕೇಳಿದನು.  ಹೇಗೂ ಗಾಡಿಯಲ್ಲಿ ಪ್ರಯಣಿಸುತ್ತಿದ್ದೀರಿ  ನಾನು ಎರಡು ಕಾಯಿ ಬಾಳೇಹಣ್ಣುಗಳ  ಗೊನೆಯನ್ನು ನಿಮಗೆ  ಕೊಡುತ್ತೇನೆ. ನೀವು ಅಲ್ಲಿಗೆ ತಲುಪವ ಹೊತ್ತಿಗೆ ಮಾಗಿರುತ್ತದೆ. ದಯವಿಟ್ಟು ನನ್ನ ಪರವಾಗಿ ಶ್ರೀನಿವಾಸನಿಗೆ ಸಮರ್ಪಿಸಿ  ಬಿಡಿ ಎಂದನು. ದೇವರಿಗೆ  ಭಕ್ತರ ಕಾಣಿಕೆ ಕೊಡುವುದನ್ನು ಇಲ್ಲವೆನ್ನಲಾಗದೆ, ಸಾಮಾನುಗಳು ತುಂಬಿದ್ದ ಗಾಡಿಯಲ್ಲಿ  ಬಾಳೇಗೊನೆಗೆ  ಸ್ವಲ್ಪ ಜಾಗ ಮಾಡಿ ಪ್ರಯಾಣ ಮುಂದುವರೆಸಿದರು.  ಹೀಗೇ ನಾಲ್ಕೈದು ದಿನಗಳು ಕಳೆದು ಬಿಸಿಲಿನ ಝಳಕ್ಕೋ ಏನೂ ಗಾಡಿಯಲ್ಲಿಟ್ಟಿದ್ದ ಬಾಳೇಗೊನೆ ಪಕ್ವವಾಗಿ ಮಾಗಿ ಗೊನೆಯಿಂದ ಒಂದೊಂದಾಗಿ ಹಣ್ಣುಗಳು ಉದರ ತೊಡಗಿದವು.   ಆ ಶ್ರೀಹರಿಗೆ ನೈವೇದ್ಯ ತಲುಪಿಸುವ ರೈತನ ಅಭೀಷ್ಟೆಗಳನ್ನು ಮನಗೊಂಡು ಚೆನ್ನಾಗಿ ಹಣ್ಣಾಗಿ ಬಿದ್ದ ಹಣ್ಣುಗಳನ್ನು ಬಿಸಾಡಲು ಮನಸ್ಸುಬಾರದೇ, ಭಗವಂತಾ ಈ ಹಣ್ಣು ನಿನಗೇ ಸಮರ್ಪಿತವಾಗಲಿ, ರೈತನ ಇಷ್ಟಾರ್ಥಗಳು ಪೂರೈಸು ಎಂದು ಬೇಡಿಕೊಳ್ಳುತ್ತಾ ಬಾಳೇ ಹಣ್ಣುಗಳನ್ನು ತಾವೇ ತಿನ್ನುತ್ತಾ ಪ್ರಯಾಣ ಮುಂದುವರೆಸಿ, ಸಪ್ತಗಿರಿಯನ್ನು ದಾಟಿ ತಿರುಪತಿಗೆ ತಲುಪಿದಾಗ ಏರಡೂ ಗೊನೆಗಳಲ್ಲಿ ಕೇವಲ ಎರಡೆರಡು ಬಾಳೇ ಹಣ್ಣುಗಳು ಮಾತ್ರ ಉಳಿದಿದ್ದವು.  ಛತ್ರದಲ್ಲಿ ಶುಚಿರ್ಭೂತರಾಗಿ ಮಡಿಯಿಂದ ಸಪ್ತಗಿರಿವಾಸನನ್ನು ದರ್ಶನ ಮಾಡಿ ಭಕ್ತಿಭಾವದಿಂದ ಉಳಿದಿದ್ದ ನಾಲ್ಕೇ ನಾಲ್ಕು ಹಣ್ಣುಗಳನ್ನು ಭಗವಂತನಿಗೆ ಸಮರ್ಪಿಸಿ ಹಣ್ಣುಗಳನ್ನು ತಿಂದಿದ್ದಕ್ಕಾಗಿ ದಯವಿಟ್ಟು ಮನ್ನಿಸು ಹಾಗೂ ರೈತನ ಕುಟುಂಬವನ್ನು ಆಶೀರ್ವದಿಸು ಎಂದು ಬೇಡಿಕೊಂಡು ಎರಡು ಮೂರು ದಿನಗಳವರೆಗೂ ಶ್ರೀ ಕ್ಷೇತ್ರದಲ್ಲಿಯೇ ತಂಗಿದ್ದು, ಸುತ್ತಮುತ್ತಲಿನ ಪದ್ಮಾವತಿಯನ್ನೂ ಒಳಗೊಂಡ  ದೇವಸ್ಥಾನಗಳಿಗೆಲ್ಲಾ ಭೇಟಿಕೊಟ್ಟು ಬೆಂಗಳೂರಿನ ಕಡೆಗೆ ಹಿಂತಿರುಗ ತೊಡಗಿದರು.

baleದಾರಿಯಲ್ಲಿ ಬರುವಾಗ ದೇವರಿಗೆ ಅರ್ಪಿಸಲು ಕೊಟ್ಟಿದ್ದ ಬಾಳೇ ಹಣ್ಣುಗಳನ್ನು ತಾವೇ ತಿಂದದ್ದಕ್ಕಾಗಿ ಮನಸ್ಸಿನಲ್ಲಿಯೇ ಪರಿತಪಿಸುತ್ತಾ , ಭಗವಂತಾ ಹಿಂದಿರುಗುವ ವೇಳೆಯಲ್ಲಿ ದಯವಿಟ್ಟು ಆ ರೈತನು ನನಗೆ ಸಿಗದಿರುವಂತೆ ನೋಡಿಕೊಳ್ಳಪ್ಪಾ, ಆವನಿಗೆ ಮುಖ ತೋರಿಸಲು ನನಗೆ ಸಾದ್ಯವಿಲ್ಲ ಎಂದು ಪಶ್ವಾತ್ತಾಪ ಪಡುತ್ತಾ ದಾರಿ ಸವೆಸಿದರು. ತಾನೊಂದು ಬಗೆದರೇ ದೈವವೊಂದು ಬಗೆದೀತು ಎನ್ನುವ ಹಾಗೆ, ಆ ರೈತನ ಊರಿಗೆ ಬರುವ ಹೊತ್ತಿಗೆ ಸಂಜೆಯಾಗಿತ್ತು . ಇವರ ಆಗಮನವನ್ನೇ ಕಾಯುತ್ತಿದ್ದನೇನೂ ಎನ್ನುವಂತೆ ಆ ರೈತನೂ ಕೂಡಾ ಇವರು ಬರುತ್ತಿದ್ದದ್ದನ್ನು ದೂರದಿಂದಲೇ ಗಮನಿಸಿ ಇವರತ್ತ ಓಡೋಡಿ ಬರತೊಡಗಿದ.  ರೈತ ಇವರತ್ತ ಧಾವಿಸಿ ಬರುತ್ತಿದ್ದನ್ನು ಗಮನಿಸಿದ ಶ್ರೀಯುತರಿಗೆ ಮನಸ್ಸಿನಲ್ಲಿ ಆತಂಕ ಹಾಗೂ ತಳಮಳ. ಗೋವಿಂದಾ, ಗೋವಿಂದಾ, ಎಲ್ಲಾ  ಬಾಳೇಹಣ್ಣುಗಳನ್ನು ತಾನೇ ತಿಂದು ಕೇವಲ ಎರಡೇ ಎರಡು ಹಣ್ಣುಗಳನ್ನು  ದೇವರಿಗೆ ಅರ್ಪಿಸಿದ್ದದ್ದು ಆತನಿಗೆ ತಿಳಿಯದಿರಲಿ. ನೀನೇ ನನ್ನನ್ನು ಕಾಪಾಡಬೇಕು ಎಂದು ದೇವರನ್ನು ಮನಸ್ಸಿನಲ್ಲೇ ಪ್ರಾರ್ಥಿಸ ತೊಡಗಿದರು.  ರೈತನು ಇವರ ಸಮೀಪ ಬಂದು ನಮಸ್ಕರಿಸಿ, ಏನು ಸ್ವಾಮಿ ಎಂಥ ಕೆಲಸ ಮಾಡಿಬಿಟ್ರಿ? ನಿಮ್ಮಂತಹ ಸಜ್ಜನರು ಹೀಗೆ ಮಾಡಬಹುದಾ? ನಿಮ್ಮಿಂದ ಇಂತಹದ್ದನ್ನು ನಾನು ನಿರೀಕ್ಷಿಸಲಿರಲಿಲ್ಲ ಎಂದು ಒಂದೇ ಉಸಿರಿನಲ್ಲಿ ಪ್ರಶ್ನಿಸುತ್ತಿದ್ದರೆ, ಇವರಿಗೆ ತಲೆತಿರುಗಿ ಬೀಳುವಂತಹ ಅನುಭವ. ತಾನು ಬಾಳೇ ಹಣ್ಣುಗಳನ್ನು ತಿಂದದ್ದು  ಇವನಿಗೆ ತಿಳಿದು ಹೋಯ್ತಾ? ಅಯ್ಯೋ ಭಗವಂತಾ ಈಗೇನು ಮಾಡುವುದು ಎಂದು ಕೊಳ್ಳುತ್ತಾ, ಛೇ, ಛೇ ಹಾಗೇನಿಲ್ಲಾ ಅಂತಹದ್ದೇನೂ ಆಗಲಿಲ್ಲಾ ಎಂದು ಸಾವರಿಸಿ ಮಾತನಾಡಲು ಮುಂದುವರಿಸಿದಾಗ. ರೈತನು ಇವರ ಮಾತನ್ನು ತುಂಡರಿಸಿ, *ಅಲ್ಲಾ ಬುದ್ದೀ ನಾನು ನಿಮಗೆ ಕೊಟ್ಟಿದ್ದ ಎರಡೂ ಬಾಳೇಗೊನೆಗಳನ್ನು ದೇವರಿಗೆ ಸಮರ್ಪಿಸಿ ಅದರಲ್ಲಿ ಎರೆಡೆರಡು ಬಾಳೇ ಹಣ್ಣುಗಳನ್ನು ನೀವೇ ತಿಂದಿರಂತೇ?*  ಕೇಳಿದ್ದರೆ ನಾನೇ ಎರಡೇನೂ, ನಾಲ್ಕು ಗೊನೆ ಕೊಡುತ್ತಿರಲಿಲ್ಲವೇ ಎಂದು ಕೇಳಿದಾಗ, ಒಮ್ಮಿಂದೊಮ್ಮೆಲೆ ಇವರ ಎದೆ ಧಸಕ್ಕೆಂದಿತು. ಇದೇನಿದು, ಈತ ಹೇಳುತ್ತಿರುವುದೇ ಬೇರೆ ನಡೆದದ್ದೇ ಬೇರೆ ಎಂದು ಕೊಂಡು, ಸಮೀಪದಲ್ಲೇ ಇದ್ದ ಮರದಡಿಯಲ್ಲಿ ಅವನನ್ನೂ ಕುಳ್ಳರಿಸಿ ದಯವಿಟ್ಟು ನನ್ನ ತಪ್ಪನ್ನು ಮನ್ನಿಸಿಬಿಡು ಎಂದು ಪರಿ ಪರಿಯಾಗಿ ಬೇಡಿಕೊಂಡು ನಡೆದದ್ದನ್ನೆಲ್ಲವನ್ನೂ ಸವಿಸ್ತಾರವಾಗಿ ವಿವರಿಸಿ, ಆತನಿಗೆ ಆ ವಿಷಯ ಹೇಗೆ ಗೊತ್ತಾಯಿತೆಂದು ಕೇಳಿದರು. ರೈತನು ಇವರಿಗೆ ಬಾಳೇ ಗೊನೆಯನ್ನು ಕೊಟ್ಟು ಕಳುಹಿಸಿದ ನಂತರ ಅಪ್ಪಾ ತಂದೇ, ನಿನ್ನನ್ನು ಕಣ್ತುಂಬಾ ನೋಡುವ ಆಸೆ ನನಗೆಂದು ದಯಪಾಲಿಸುವೆಯೋ ನಾನರಿಯೆ. ಆದರೆ ಒಬ್ಬ ಸಜ್ಜನರ ಮೂಲಕ ನನ್ನ ಪರಿಶ್ರಮದಿಂದ ನಿನ್ನ ಕರುಣೆಯಿಂದಲೇ  ಬೆಳೆದ ಬಾಳೇಹಣ್ಣುಗಳನ್ನು ನಿನ್ನೆಡೆಗೆ  ಕಳುಹಿಸುತ್ತಿದ್ದೇನೆ. ದಯವಿಟ್ಟು ಸ್ವೀಕರಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡು ಎಂದು ಬೇಡಿಕೊಂಡಿರುತ್ತಾನೆ. ಆದಾದ ಕೆಲವು ದಿನಗಳ ನಂತರ ಭಗವಂತನು ರೈತನ ಕನಸಿನಲ್ಲಿ ಬಂದು, ಭಕ್ತಾ, ನೀನು ಕಳುಹಿಸಿದ ಬಾಳೇಗೊನೆಗಳಲ್ಲಿ ಎರೆಡೆರಡು ಹಣ್ಣುಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಹಣ್ಣುಗಳು ನನಗೆ ಸಮರ್ಪಿತವಾದವು. ನನ್ನ ಆಶೀರ್ವಾದ ಸದಾ ನಿನ್ನ ಮೇಲೆ ಇದ್ದೇ ಇರುತ್ತದೆ. ನಿಷ್ಠೆ ನಿಯಮದಿಂದ ಸತ್ಯಮಾರ್ಗದಲ್ಲಿ ದಾನ ಧರ್ಮಗಳನ್ನು ಪಾಲಿಸುತ್ತಾ ಜೀವನ ನಡೆಸು ಎಂದು ಹರೆಸಿ ಮಾಯವಾಗಿರುತ್ತಾನೆ.  ಕನಸಿನಲ್ಲಿ ಭಗವಂತ ಬಂದು ಆಶೀರ್ವದಿಸಿದ್ದಕ್ಕೆ  ಸಂತೋಷವಾದರೂ ಇಡೀ ಗೊನೆ ಭಗವಂತನಿಗೆ ತಲುಪಲಿಲ್ಲವಲ್ಲಾ ಎಂಬ ಬೇಸರವೂ ಕಾಡಿ, ಹಾಗೇಕೆ ಮಾಡಿದರೆಂದ ಶ್ರೀಯುತನ್ನು ಕೇಳಲೇ ಬೇಕೆಂದು ನಿರ್ಧರಿಸಿ ಅವರ ಆಗಮನಕ್ಕೇ ಕಾಯುತ್ತಿರುತ್ತಾನೆ.  ನಡೆದ ವಿಷಯವೆಲ್ಲವೂ ಇಬ್ಬರಿಗೂ  ತಿಳಿದು ಮನಸ್ಸು ಹಗುರವಾಗಿ ಭಗವಂತನ ಲೀಲೆಯ ಮಂದೆ  ತಮ್ಮದ್ದೇನು ನಡೆಯುವುದಿಲ್ಲ  ಎಂದು ತಿಳಿದು ಆ ದಿನ ಅಲ್ಲಿಯೇ ರೈತನ ಮನೆಯ ಆತಿಥ್ಯ ಸ್ವೀಕರಿಸಿ, ರೈತನೂ ತಾನು ಬೆಳೆದಿದ್ದ  ಧವಸ ಧಾನ್ಯಗಳನ್ನೂ, ಒಂದೆರಡು ಬಾಳೇಗೊನೆಗಳನ್ನು ಶ್ರೀಯುತರಿಗೆ  ಪ್ರೀತಿ ಪೂರ್ವಕವಾಗಿ ಕೊಟ್ಟು ತಮ್ಮಿಬ್ಬರ ಸ್ನೇಹಸಂಬಂಧ ಹೀಗೆಯೇ ಮುಂದುವರಿಯಲಿ ಎಂದು ಆಶೀಸುತ್ತಾ, ಮರುದಿನ ತಮ್ಮ ಊರಿನೆಡೆಗೆ ಪ್ರಯಾಣ ಬೆಳೆಸಿದರು.

ಭಕ್ತಿಯಿಮ್ದ ಸಂಕಲ್ಪ ಮಾಡಿ ಏನನ್ನೇ ಆಗಲಿ, ಯಾರ ಮೂಲಕವಾದರೂ  ಅರ್ಪಿಸಿದರೂ ಅದು ಭಗವಂತನಿಗೆ ಖಂಡಿತವಾಗಿಯೂ ನೇರವಾಗಿ ತಲುಪಿಯೇ ತಲುಪುತ್ತದೆ ಎನ್ನುವುದಕ್ಕೇ ಈ ದೃಷ್ಟಾಂತವೇ ಸಾಕ್ಷಿ. ಇಂದು ಮೊದಲನೇ ಶ್ರಾವಣ ಶನಿವಾರ. ಶ್ರೀಪತಿಯನ್ನು  ಭಕ್ತಿಯಿಂದ ನೆನೆದು, ಯಥಾಶಕ್ತಿ ಪೂಜೆಗೈದು, ಕೈಲಾದ ಮಟ್ತಿಗೆ ದಾನ ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗೋಣ

ನಮ್ಮ ರಾಜ್ಯದ ಕೊಡಗು ಹಾಗೂ ನೆರೆ ರಾಜ್ಯ ಕೇರಳದಲ್ಲಿ ಪ್ರಕೃತಿ ವಿಕೋಪದಿಂದ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದು ದಿನನಿತ್ಯದ ಜೀವನಕ್ಕೆ ಪರಿತಪಿಸುತ್ತಿರುವ ಈ ಸಂಧರ್ಭದಲ್ಲಿ ಕಾಣದಾ ದೇವರನ್ನು ಕಷ್ಟ ಪಟ್ಟು ಹುಡುಕಿ ಕಾಣಿಕೆಗಳನ್ನು ಸಮರ್ಪಿಸುವ ಬದಲು, ಅವಶ್ಯಕತೆ ಇರುವ  ಕೊಡಗು ಮತ್ತು ಕೇರಳದ ನಮ್ಮ ಬಂಧು-ಬಾಂಧವರಿಗೆ  ಕೈಲಾದಷ್ಟು ಸಹಾಯ ಮಾಡೋಣ.

ವೀಡಿಯೋ Story : https://youtu.be/g_-yCMaPXmc 

ಏನಂತೀರೀ?