ಗೃಹಿಣಿ ಗೃಹಮುಚ್ಯತೆ

ಅದೊಂದು ಸಂಪ್ರದಾಯಸ್ಥ ಕುಟುಂಬ ಮನೆಯ ತುಂಬಾ ಮಕ್ಕಳು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಾದ್ದರಿಂದ ಆ ಮನೆಯ ಮಗಳಿಗೆ ಲೋಯರ್ ಸೆಕೆಂಡರಿಗಿಂತ ಹೆಚ್ಚಿಗೆ ಓದಲಾಗಲಿಲ್ಲ. ಮನೆಯಲ್ಲಿಯೇ ಕುಳಿತು ಹಾಡು ಹಸೆ ಸಂಪ್ರದಾಯಗಳನ್ನು ತನ್ನ ಹಿರಿಯರಿಂದ ಕಲಿತುಕೊಳ್ಳುತ್ತಾಳೆ. ಮುಂದೆ ಮದುವೆಯ ವಯಸ್ಸು ಬಂದಾಗ ನೋಡಲು ಸುರದ್ರೂ ಪವತಿಯಾಗಿದ್ದರೂ ಕಡಿಮೆ ಓದಿನ ನೆಪವೊಡ್ಡಿ ಒಂದೆರಡು ಸಂಬಂಧಗಳು ಕೂಡಿ ಬರುವುದಿಲ್ಲವಾದರೂ, ಹಾಗೆ ಸಂಬಂಧ ಬೇಡ ಎಂದು ಹೋಗಿದ್ದವರೇ ಪುನಃ ಬಂದು ಆಗಿನ ಕಾಲಕ್ಕೇ ಇಂಜಿನಿಯರಿಂಗ್ ಓದಿದ್ದ ಹುಡುಗನೊಂದಿಗೆ ಆಕೆಯ ಮದುವೆಯಾಗಿ ತುಂಬು ಕುಟುಂಬದ ಸೊಸೆಯಾಗಿ, ಸುಖಃ ದಾಂಪತ್ಯದ ಕುರುಹಾಗಿ ಮುದ್ದಾದ ಮೂರು ಹೆಣ್ಣು ಮಕ್ಕಳ ತಾಯಿಯಾಗುತ್ತಾಳೆ. ತಾನು ಹೆಚ್ಚು ಓದದಿದ್ದರೇನಂತೆ, ತನ್ನ ಎಲ್ಲಾ ಆಸೆಗಳನ್ನು ತನ್ನ ಮಕ್ಕಳ ಮೂಲಕ ತೀರಿಸಿಕೊಳ್ಳುತ್ತಾಳೆ. ಮೊದಲ ಮಗಳು ಇಂಜಿನಿಯರ್, ಎರಡನೇ ಮಗಳು ಡಾಕ್ಟೃರ್ ಆದರೆ ಮೂರನೇಯವಳು ಸಂಗೀತ ಮತ್ತು ನೃತ್ಯ ಪಾರಂಗತಳನ್ನಾಗಿ ಮಾಡುವುದಲ್ಲದೇ ಅವರಿಗೆ ನಮ್ಮ ಸತ್ ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ಕಲಿಸಿ ಎಲ್ಲರಿಗೂ ಮದುವೆ ಮಾಡುತ್ತಾಳೆ. ಆ ಮಕ್ಕಳೆಲ್ಲಾ ಈಗ ದೇಶ ವಿದೇಶಗಳಲ್ಲಿ ನೆಲೆಸಿದ್ದಾರೆ. ಆಕೆ ಅವರನ್ನು ನೋಡಲು ಆಗಿಂದ್ದಾಗ್ಗೆ ಬೆಂಗಳೂರು ಮೈಸೂರಿಗೆ ಹೋಗುವ ಹಾಗೆ ದೇಶ ವಿದೇಶಗಳಲ್ಲಿ ಸುತ್ತಾಡುತ್ತಾ, ತನ್ನ ಮೊಮ್ಮಕ್ಕಳಿಗೂ ನಮ್ಮ ಭಾಷೆ, ಸಂಸ್ಕಾರ ಮತ್ತು ಸಂಸ್ಕೃತಿಯ ಪರಿಚಯವನ್ನು ಮಾಡಿಸುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾಳೆ.

ಮನೆಯಲ್ಲಿ ಮುದ್ದಾಗಿ ಬೆಳೆದ ಹುಡುಗಿ ಕಾಲೇಜು ಕಲಿಕೆಯ ಜೊತೆ ಜೊತೆಯಲ್ಲಿಯೇ ಬೆರಳಚ್ಚು ಮತ್ತು ಶೀಘ್ರಲಿಪಿಯನ್ನು ಉತ್ತಮ ದರ್ಜೆಯಲ್ಲಿ ಮುಗಿಸಿದ ಪರಿಣಾಮವಾಗಿ ಎರಡನೇ ವರ್ಷದ ಪದವಿ ಮುಗಿಯುವಷ್ಟರಲ್ಲಿಯೇ ಸರ್ಕಾರಿ ವೃತ್ತಿಯನ್ನು ಗಳಿಸುತ್ತಾಳೆ ಆಕೆ. ಮೂರನೇ ವರ್ಷದ ಪದವಿಯನ್ನು ದೂರ ಶಿಕ್ಷಣದ ಮುಖಾಂತರ ಮುಗಿಸುತ್ತಿದ್ದಂತೆಯೇ ತುಂಬಿದ ಸಂಪ್ರದಾಯಸ್ಥರ ಮನೆಯ ಸೊಸೆಯಾಗುತ್ತಾಳೆ. ತವರು ಮನೆಯ ಪದ್ದತಿಗಳಿಗೂ ಗಂಡನ ಮನೆಯ ಪದ್ದತಿಗಳಿಗೂ ಅಜಗಜಾಂತರ ವೆತ್ಯಾಸದಿಂದ ಆರಂಭದಲ್ಲಿ ತುಸು ತೊಂದರೆಯನ್ನು ಅನುಭವಿಸಿದರೂ ಕೆಲವೇ ದಿನಗಳಲ್ಲಿ ಗಂಡನ ಮನೆಯ ಪದ್ದತಿಗಳಿಗೆ ಮತ್ತು ಆಹಾರ ಶೈಲಿಗೆ ಒಗ್ಗಿ ಹೋಗಿ ತನ್ನ ಕೈ ಚೆಳಕದಿಂದ ತನ್ನ ಅತ್ತೆಯಿಂದಲೇ ಭೇಷ್ ಪಡೆಯುವಷ್ಟರ ಮಟ್ಟಿಗೆ ಆಗುತ್ತಾಳೆ. ಅತ್ತೆ ಅಕಾಲಿಕವಾಗಿ ಕಾಲವಾದ ನಂತರ ತನ್ನ ವಯೋವೃದ್ಧ ಮಾವನವರನ್ನೂ ಮತ್ತು ಮುದ್ದಾದ ಮಕ್ಕಳನ್ನು ಆರೈಕೆ ಮಾಡುವ ಸಲುವಾಗಿಯೇ ಕೈ ತುಂಬಾ ಸಂಬಳ ಬರುತ್ತಿದ್ದ ಸರ್ಕಾರಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದು ಅಪ್ಪಟ ಗೃಹಿಣಿಯಾಗಿ ತನ್ನ ಸಂಸಾರದ ನೊಗವನ್ನು ಸಂಪೂರ್ಣವಾಗಿ ಹೊತ್ತು ಕುಟುಂಬದ ಆರೈಕೆಯೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವುದರಲ್ಲಿ ಹರಿಸಿದ್ದಾಳೆ ತನ್ನ ಚಿತ್ತ.

ಅಲ್ಲೊಂದು ಹಳ್ಳಿಯಲ್ಲಿ ಒಬ್ಬ ರೈತಾಪಿ ಕುಟುಂಬ. ಅನೇಕ ದಿನಗಳಾದರೂ ದೇವರು ಆವರಿಗೆ ಮಕ್ಕಳ ಭಾಗ್ಯವನ್ನು ಕರುಣಿಸಲೇ ಇಲ್ಲ. ಅದಕ್ಕಾಗಿ ಅವರು ಮಾಡದ ಪೂಜೆಯಿಲ್ಲ ಕಟ್ಟದ ಹರಕೆ ಇಲ್ಲ. ಆದರೂ ಭಗವಂತನ ಅವರ ಮನೆಯಲ್ಲಿ ತೊಟ್ಟಿಲು ಕಟ್ಟುವ ಭಾಗ್ಯ ಕರುಣಿಸಲೇ ಇಲ್ಲ. ಮಕ್ಕಳಿಲ್ಲದಿದ್ದರೇನಂತೆ ಮಕ್ಕಳ ಬದಲಾಗಿ ಮರಗಳನ್ನೇ ಸಾಕೋಣ, ಪೋಷಿಸೋಣ ಎಂದು ತೀರ್ಮಾನಿಸಿದರು ಆ ದಂಪತಿಗಳು. ಆದರೆ ಅಕಾಲಿಕವಾಗಿ ಪತಿಯನ್ನು ಕಳೆದುಕೊಂಡರೂ ಧೃತಿಗೆಡೆದ ಆಕೆ, ತನ್ನ ಸ್ವಪ್ರಯತ್ನದಿಂದ ಲಕ್ಷಾಂತರ ಸಾಲು ಮರಗಳನ್ನು ರಸ್ತೆಯ ಬದಿಯಲ್ಲಿ ನೆಟ್ಟಿದ್ದಲ್ಲದೆ ಅವುಗಳನ್ನು ತನ್ನ ಹೆತ್ತ ಮಕ್ಕಳಿಗಿಂತಲೂ ಹೆಚ್ಚಿಗೆ ಪೋಷಿಸಿದ ಪರಿಣಾಮವಾಗಿ ಆ ಲಕ್ಷಾಂತರ ಮರಗಳೆಲ್ಲಾ ಇಂದು ಹೆಮ್ಮರಗಳಾಗಿ ಪರಿಸರವನ್ನು ಸಂರಕ್ಷಿಸುತ್ತಿವೆ. ಕೊಟ್ಯಾಂತರ ಜನರಿಗೆ ಶುಧ್ಧ ಗಾಳಿಯನ್ನು ನೀಡುತ್ತಿದೆಯಲ್ಲದೆ ಸಾವಿರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ತನ್ನ ಮನೆಯಲ್ಲಿ ತೊಟ್ಟಿಲು ಕಟ್ಟಲಾಗದಿದ್ದರೇನಂತೆ, ಲಕ್ಷಾಂತರ ಮನೆಗಳಲ್ಲಿ ತೊಟ್ಟಿಲು ಕಟ್ಟುವಷ್ಟು ಮರ ಮುಟ್ಟಗಳನ್ನು ಬೆಳೆಸಿದ್ದಾಳೆ ಆಕೆ.

ಅದೊಂದು ಸಣ್ಣ ಹಳ್ಳಿ. ಅಲ್ಲೊಂದು ಪುಟ್ಟ ಕುಟಂಬ, ಗಂಡ ಹೆಂಡತಿ ಮತ್ತು ಒಬ್ಬನೇ ಮಗ. ಜೀವನಕ್ಕೆ ಸಾಕಾಗುವಷ್ಟು ಜಮೀನು. ಆದರೆ ಮನೆಯ ಯಜಮಾನರಿಗೆ ನಾಟಕದ ಖಯಾಲಿ. ಸದಾ ಎಲ್ಲೆಂದರಲ್ಲಿ ನಾಟಕ ಮಾಡುವುದಾಗಲೀ ಅಥವಾ ನಾಟಕ ಕಲಿಸುವುದಕ್ಕಾಗಲೀ ತಿಂಗಳಾನು ಗಟ್ಟಲೆ ಮನೆಯನ್ನು ಬಿಟ್ಟು ಹೋಗುವ ಚಾಳಿ. ಚುರುಕಾದ ಮಗನಿಗೆ ವಿದ್ಯಾಭ್ಯಾಸ ಮಾಡಿಸಬೇಕು, ಜೀವನ ಸಾಗಿಸಬೇಕು. ಧೃತಿಗೆಡದ ಆಕೆ ಮನೆಯ ಮುಂದೆ ಪುಟ್ಟ ಹೋಟೆಲ್ ಅರಂಭಿಸಿದಳು. ಜನರಿಗೆ ಕಾಫೀ, ಟೀ, ಸಣ್ಣ ಪುಟ್ಟ ತಿಂಡಿಗಳನ್ನು ಉಣ ಬಡಿಸುತ್ತಲೇ ಸಂಸಾರ ಸಾಗಿಸ ತೊಡಗಿದಳು. ಎಂಜಲು ತಟ್ಟೆ ಲೋಟಗಳನ್ನು ತೊಳೆಯುತ್ತಾ ಜೊತೆ ಜೊತೆಗೆ ಓದುತ್ತಾ ಸ್ನಾತಕೋತ್ತರ ಪದವಿಯನ್ನು ಗಳಿಸಿ ಲಕ್ಷಾಂತರ ರೂಪಾಯಿಗಳ ಸಂಬಳ ಪಡೆಯುವಂತನಾದ ಮಗ. ಮಣ್ಣಿನ ಮೇಲಿನ ಆಸೆಯಿಂದ ಇದ್ದ ಕೆಲಸವನ್ನು ಬಿಟ್ಟು ತನ್ನ ಹಳ್ಳಿಯಲ್ಲಿಯೇ ಜಮೀನನ್ನು ಖರೀದಿಸಿ ಆಧುನಿಕ ಕೃಷಿವಂತನಾಗಿ ಲಕ್ಷಾಂತರ ರೂಪಾಯಿ ಸಂಪಾದಿಸಿದ. ನಗರದಲ್ಲಿ ಅರಮನೆಯಂತಹ ಬಂಗಲೆ ಇದ್ದರೂ, ಐಶಾರಾಮಿ ಕಾರ್ ಇದ್ದರೂ ಆ ತಾಯಿ ತನ್ನ ಹಿಂದಿನ ಕಷ್ಟಕಾರ್ಪಣ್ಯಗಳನ್ನು ಮರೆಯದೇ ಇಂದಿಗೂ ತನ್ನ ಹಳ್ಳಿಯಲ್ಲಿಯೇ ಕೃಷಿ ಮಾಡಿಸುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾಳೆ.

ಆಕೆ ತರಕಾರಿ ಮಾರುತ್ತಿದ್ದರೆ ಆಕೆಯ ಪತಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಅದೊಂದು ದಿನ ಒಂದು ಬಾರೀ ಖಾಯಿಲೆಗೆ ತುತ್ತಾಗಿ ಯಾವ ಸರ್ಕಾರೀ ಸೌಲಭ್ಯಗಳು ದೊರಕದೆ ಮತ್ತು ಸರಿಯಾದ ಚಿಕಿತ್ಸೆ ಅಗತ್ಯ ಸಮಯದಲ್ಲಿ ಸಿಗದೆ ಆತ ಮೃತ ಪಟ್ಟ. ಎರಡು ಸಣ್ಣ ಮಕ್ಕಳ ವಿಧವೆಯಾದ ಆಕೆ ಆ ಕ್ಷಣದಲ್ಲೇ ತನಗೆ ಎಷ್ಟೇ ಕಷ್ಟ ಬರಲಿ ತನ್ನ ಒಬ್ಬ ಮಗಳನ್ನು ಡಾಕ್ಟರ್ ಮತ್ತೊಬ್ಬ ಮಗನನ್ನು ಐ.ಎ.ಎಸ್ ಅಧಿಕಾರಿಯನ್ನಾಗಿ ಮಾಡಲೇ ಬೇಕೆಂದು ನಿರ್ಧರಿಸಿದಳು. ಮಕ್ಕಳೂ ಕಷ್ಟಪಟ್ಟು ಸರ್ಕಾರೀ ಶಾಲಾ ಕಾಲೇಜಿನಲ್ಲಿಯೇ ಅರ್ಹತೆಯ ಆಧಾರದ ಮೇಲೆ ಸೀಟ್ ಗಿಟ್ಟಿಸಿ ಅಮ್ಮನ ಕನಸನ್ನು ನನಸಾಗಿಸಿದರು. ಮಗಳು ತಮ್ಮದೇ ಊರಿನಲ್ಲಿ ತಾಯಿಯ ಉಳಿತಾಯದಲ್ಲೇ ಆಸ್ಪತ್ರೆಯನ್ನು ಕಟ್ಟಿಸಿ ರೋಗಿಗಳಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುತ್ತಿದ್ದರೆ, ಮಗ ಡಿಸಿ ಆಗಿ ತಾಯಿಯ ಕನಸುಗಳನ್ನು ಸಾಕಾರ ಮಾಡುತ್ತಿದ್ದಾನೆ. ಆ ತಾಯಿ ಯಥಾ ಪ್ರಕಾರ ತನ್ನ ತರಕಾರಿ ವ್ಯವಹಾರವನ್ನೇ ಮುಂದುವರಿಸಿದ್ದಾಳೆ.

ಪರಕೀಯರ ಧಾಳಿಯಿಂದ ನಮ್ಮ ದೇಶ ಮತ್ತು ಧರ್ಮ ತತ್ತರಿಸುತ್ತಿದ್ದಾಗ ಆ ಮಹಾತಾಯಿ ಜೀಜಾಬಾಯಿ ತನ್ನ ಮಗನಿಗೆ ರಾಮಾಯಣ ಮಹಾಭಾರತದ ಜೊತೆಗೆ ನಮ್ಮ ಅನೇಕ ವೀರರ ಕಥೆಗಳನ್ನು ಹೇಳಿ ಸಮರ್ಥ ರಾಮದಾಸರ ಬಳಿ ವಿದ್ಯೆ ಕಲಿಸಿ ಹಿಂದೂ ಸಾಮ್ರಾಜ್ಯದ ಪುನರ್ ಸ್ಥಾಪನೆಗೆ ಕಾರಣೀಭೂತಳಾದರು. ಅಂತೆಯೇ ನಿಮ್ಮ ಮಗ ಬಹಳ ದಡ್ದನಾಗಿದ್ದಾನೆ. ಅವನಿಗೆ ನಮ್ಮ ಶಾಲೆಯಲ್ಲಿ ಪಾಠ ಕಲಿಸಲು ಸಾಧ್ಯವಿಲ್ಲ ಎಂದು ಗುರುಗಳು ಹೇಳಿದಾಗ ಅವರಿಗೆ ಎದುರು ಮಾತನಾಡದೆ, ಮನೆಯಲ್ಲಿಯೇ ತನ್ನ ಮಗನಿಗೆ ವಿದ್ಯೆ ಕಲಿಸಿ ವಿದ್ಯುತ್ ಬಲ್ಬ್, ಕ್ಯಾಮೆರಾ, ಫೋಟೋಗ್ರಾಫಿ, ಮೂವಿ ಕ್ಯಾಮೆರಾಗಳು ಮತ್ತಿತರ ಹಲವಾರು ಉತ್ಪನಗಳನ್ನು ಕಂಡು ಹಿಡಿದ ಥಾಮಸ್ ಆಲ್ವ ಎಡಿಸನ್ ಎಂಬುವನನ್ನು ವಿಶ್ವ ವಿಖ್ಯಾತ ವಿಜ್ಞಾನಿಯನ್ನಾಗಿ ಮಾಡಿದ್ದದ್ದು ಆತನ ತಾಯಿ ನ್ಯಾನ್ಸಿ ಮಾಥ್ಯು ಎಲಿಯಾಟ್ ಎಂಬಾಕೆ .

ಈ ಎಲ್ಲಾ ಘಟನೆಗಳು ಕಾಲ್ಪನಿಕವಾಗಿರದೆ ನಿಜ ಜೀವನದಲ್ಲಿ ನಡೆದಂತಹ ಸತ್ಯ ಘಟನೆಗಳೇ ಆಗಿವೆ. ಹೆಣ್ಣುಮಕ್ಕಳ ಇಂತಹ ನೂರಾರು ಸಾಹಸ ಗಾಥೆಗಳು ನಮ್ಮೆಲ್ಲರ ನಿಜ ಜೀವನದಲ್ಲಿ ಹಲವಾರು ಬಾರಿ ನೋಡಿರುತ್ತೇವೆ ಇಲ್ಲವೇ ಕೇಳಿಯೇ ಇರುತ್ತೇವೆ. ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಹೆಣ್ಣುಮಕ್ಕಳು ಸಾಮಾಜಿಕವಾಗಿ ಸಕ್ರಿಯರಾದಷ್ಟೂ ಒಂದು ಸ್ವಸ್ಥ, ಸದೃಢ ಮನೆ ಮತ್ತು ಸಮಾಜ ಹೇಗೆ ನಿರ್ಮಾಣ ಆಗುತ್ತದೆ ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿದೆ. ಗಂಡಸರು ಎಷ್ಟೇ ದುಡಿದು ತಂದು ಹಾಗಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತಿರುವುದು ಹೆಣ್ಣೇ ಅಲ್ಲವೇ? ಆಕೆ ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ಗೆಳತಿಯಾಗಿ, ಬಾಳ ಸಂಗಾತಿಯಾಗಿ, ಗೃಹಿಣಿಯಾಗಿ, ತಾಯಿಯಾಗಿ, ಅಜ್ಜಿಯಾಗಿ, ಕಾಲ ಕಾಲಕ್ಕೆ ತಕ್ಕಂತೆ ವಯೋಸಹಜವಾಗಿ ನಾನಾ ರೀತಿಯ ಪಾತ್ರಗಳನ್ನು ನಮ್ಮ ಜೀವನದಲ್ಲಿ ಸಕ್ರೀಯವಾಗಿ ನಿಭಾಯಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.

ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ: | ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ ಕ್ರಿಯಾ | ಅಂದರೆ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ ಎನ್ನುತ್ತದೆ ನಮ್ಮ ಶಾಸ್ತ್ರಗಳು. ಅಹಲ್ಯ, ದ್ರೌಪತಿ, ಕುಂತಿ, ತಾರ ಮಂಡೋದರಿಯರಂತಹ ಪತಿವ್ರತೆಯರು ಜನ್ಮಿಸಿದ ನಾಡು ನಮ್ಮ ನಾಡು. ಪರ ಪುರುಷರೊಂದಿಗೆ ಸಂಭಾಷಣೆ ಮಾಡುವಾಗ ಸೆರೆಗಿನಿಂದ ಇಡೀ ಮುಖವನ್ನೇ ಮುಚ್ಚಿಕೊಂಡು ತಲೆ ಬಗ್ಗಿಸಿಯೇ ಮಾತನಾಡಿಸುವ ಸಂಸ್ಕೃತಿ ನಮ್ಮದು. ಪತಿಯೇ ತನ್ನ ಮುಂದೆ ನಿಂತಿದ್ದರೂ ಪತಿಯನ್ನು ತಲೆ ಎತ್ತಿನೋಡದೆ ಮಗನ ಅಂತ್ಯಕ್ರಿಯೆಗೆ ಗೋಳಾಡಿದ ಸತ್ಯ ಹರಿಶ್ಚಂದ್ರನ ಪತ್ನಿ ತಾರಮತಿ ಹುಟ್ಟಿದ ನಾಡಿದು. ಅಲ್ಲಾಹುದ್ದೀನ್ ಖಿಲ್ಚಿಯು ಮೋಸದಿಂದ ರಾಜನನ್ನು ಸೋಲಿಸಿ ರಾಣಿ ಪದ್ಮಾವತಿಯನ್ನು ವಶ ಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಪರ ಪುರುಷನ ಸೆರೆ ಸಿಗಬಾರದೆಂದು ತನ್ನನ್ನೇ ಆತ್ಮಾಹುತಿ ಮಾಡಿಕೊಂಡ ಇತಿಹಾಸವಿರುವ ನಾಡಿದು.

ಹೌದು ಇಂದು ಕಾಲ ಬದಲಾಗಿದೆ. ಹೆಣ್ಣು ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಮುಸುರೆ ತೊಳೆದುಕೊಂಡು ಕುಳಿತುಕೊಳ್ಳದೆ ಪುರುಷರ ಸರಿ ಸಮನಾಗಿ ಎಲ್ಲಾ ಉದ್ದಿಮೆಗಳಲ್ಲಿಯೂ ದುಡಿಯುತ್ತಿದ್ದಾಳೆ . ನಮ್ಮ ದೇಶದಲ್ಲಿ ಈಗಾಗಲೇ ಒಬ್ಬ ಹೆಂಗಸು ಪ್ರಧಾನಿಯಾಗಿದ್ದಾರೆ, ರಾಷ್ಟ್ರಪತಿಗಳಾಗಿದ್ದಾರೆ. ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳೂ ಆಗಿದ್ದಾರೆ. ನಮ್ಮ ದೇಶದ ಜವಳಿ ಮಂತ್ರಿ, ವಿದೇಶಾಂಗ ಸಚಿವೆ, ರಕ್ಷಣಾಮಂತ್ರಿಗಳು,ಹಣಕಾಸಿನ‌ ಮಂತ್ರಿಯಾಗಿಯೂ ಹೆಂಗಸರೇ ಆಳಿದ್ದಾರೆ. ಅದೇ ರೀತಿ ಪ್ರಪಂಚಾದ್ಯಂತ ನಾನಾ ರಾಷ್ಟ್ರಗಳ ಅಧ್ಯಕ್ಷೆಯರು ಮತ್ತು ಅನೇಕ ಬಹುರಾಷ್ಟ್ರೀಯ ಕಂಪನಿಗಳ ಆಡಳಿತ ನಿರ್ವಾಹಣಾ ಅಧಿಕಾರಿಯಾಗಳಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಟ್ಟಿನಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಹೆಣ್ಣು ನಿರ್ವಹಿಸದ ಪಾತ್ರವೇ ಇಲ್ಲವೇನೂ ಎನ್ನಬಹುದು. ಅದಕ್ಕೇ ಗೃಹಿಣಿ ಗೃಹಮುಚ್ಯತೆ ಎಂಬ ಸಂಸ್ಕೃತದ ನಾಣ್ಣುಡಿಯಂತೆ ಒಂದು ಗೃಹಕ್ಕೆ ಒಬ್ಬ ಗೃಹಿಣಿಯಿದ್ದರೆ ಅದು ಉತ್ತಮ ಗೃಹವಾಗುತ್ತದೆ. ಆಕೆ ಮನೆಯ ಒಳಗೆ ಮತ್ತು ಹೊರಗೂ ಗಂಡಸರ ಸರಿ ಸಮನಾಗಿ ದುಡಿಯುತ್ತಾಳಾದ್ದರಿಂದ ಆಕೆಯನ್ನು ಅಸಡ್ಡೆಯಿಂದ ಕಾಣುವುದಾಗಲಿ,ಆಕೆಯ ಕೆಲಸವನ್ನು ಅವಹೇಳನ ಮಾಡದೆ ಆಕೆಯೊಂದಿಗೆ ಆಕೆಯ ಕೆಲಸಗಳ ನ್ನು ಹಂಚಿಕೊಳ್ಳುವ ಮೂಲಕ ಆಕೆಗೆ ಸಹಕರಿಸೋಣ. ನಮಗೆಲ್ಲರಿಗೂ ತಿಳಿದುರುವಂತೆ ಒಬ್ಬ ತಾಯಿ ತನ್ನ ಹತ್ತು ಗಂಡು ಮಕ್ಕಳನ್ನು ಸಾಕ ಬಲ್ಲಳು ಆದರೆ ಅದೇ ಹತ್ತು ಗಂಡು ಮಕ್ಕಳು ಒಬ್ಬ ತಾಯಿಯನ್ನು ಸರಿಯಾಗಿ ನೋಡಿ ಕೊಳ್ಳಲಾರರು. ಪತಿಯ ಮರಣಾನಂತರ ಕುಟುಂಬದ ಸಂಪೂರ್ಣ ಜವಾಬ್ಧಾರಿಯನ್ನು ಪತ್ನಿಯೇ ವಹಿಸಿಕೊಂಡು ಸಂಸಾರವನ್ನು ಸುಗಮವಾಗಿ ಸಾಗಿಸಿದ ಅನೇಕ ಉದಾಹರಣೆಗಳಿವೆ. ಆದರೆ ಅದೇ ಪತ್ನಿಯ ಮರಣಾನಂತರ ಇಡೀ ಕುಟುಂಬವೇ ಚಿದ್ರ ಛಿದ್ರವಾದ ಉದಾಹಣೆಗಳೂ ಸಾಕಷ್ಟು ನಮ್ಮ ಮುಂದಿವೆ. ನಿಜವಾಗಿಯೂ ಹೆಣ್ಣನ್ನು ಆಲದ ಮರಕ್ಕೆ ಹೋಲಿಸಬಹುದೇನೋ? ಏಕೆಂದರೆ ಆಕೆ ಆಲದ ಮರದಂತೆ ವಿಶಾಲವಾಗಿ ಬೆಳೆದು ತನ್ನ ಸಂಸ್ಕಾರ, ಸಂಪ್ರದಾಯಗಳೆಂಬ ಬಿಳಲನ್ನು ಎಲ್ಲಾ ಕಡೆಗೂ ಹಬ್ಬಿಸಿ ತನ್ನ ಜೀವಿತಾವಧಿ ಎಲ್ಲರಿಗೂ ಆಶ್ರಯ ನೀಡಿಯೇ ತೀರುತ್ತಾಳೆ.

ಇಂದು ಮಾರ್ಚ್ 8ನೇ ತಾರೀಖು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ನಮ್ಮೆಲ್ಲರ ಬದುಕಿಗೆ ಮತ್ತು ಸಮಾಜಕ್ಕೆ ಸದಾ ದಾರಿ ದೀಪವಾಗಿರುವ ಎಲ್ಲಾ ಮಹಿಳೆಯರಿಗೂ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸೋಣ, ಕೃತಜ್ಞತೆ ಸಲ್ಲಿಸೋಣ ಮತ್ತು ಪ್ರೀತಿಯಿಂದ ವಂದಿಸೋಣ. ಈ ಆದರ ಮತ್ತು ಆಚರಣೆಗಳು ಕೇವಲ ಮಾರ್ಚ್ 8 ಒಂದೇ ದಿನಕ್ಕೇ ಸೀಮಿತವಾಗಿರದೇ, ಅದು ನಿರಂತರವಾಗಿರುವಂತೆ ನೋಡಿಕೊಳ್ಳುವ ಜವಾಬ್ಧಾರಿಯೂ ನಮ್ಮದೇ ಅಲ್ಲವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಭಾರತದ ಉತ್ತಮ ಭವಿಷ್ಯಕ್ಕಾಗಿ ಮೋದಿ ಮತ್ತೊಮ್ಮೆ

ನೀವೇನೂ ಮೋದಿ ಗೆಲ್ಬೇಕು ಅಂತಿರಾ ಆದ್ರೆ ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಬೇರೆ ಪಕ್ಷದ ಅಭ್ಯರ್ಥಿ ಉತ್ತಮವಾಗಿ ಕೆಲಸ ಮಾಡ್ತಾನೆ ಏನ್ ಮಾಡೋದು ?

ಸದ್ಯಕ್ಕೆ ಬಹುತೇಕರು ಕೇಳೊ ಪ್ರಶ್ನೆ ಇದು, ಸಣ್ಣದಾಗಿ ಒಂದ್ ರೌಂಡ್ ಪುರಾಣ ಸುತ್ಕೊಂಡ್ ಬರೋಣ, ಕುಂತಿ ಮಾಡಿದ ತಪ್ಪಿಗೆ ಕರ್ಣನ ಜನನವಾಯ್ತು, ಆಮೇಲೆ ಕೀಳು ಜಾತಿಯಲ್ಲಿ ಬೆಳೆದವ ಎಂಬ ಕಾರಣಕ್ಕೆ ದ್ರೋಣರು ಕರ್ಣನಿಗೆ ವಿದ್ಯೆ ಕಲಿಸಲಿಲ್ಲ, ತಾನು ಬ್ರಾಹ್ಮಣ ಅಂತ ಸುಳ್ಳು ಹೇಳಿ ಕ್ಷತ್ರಿಯರ ಕಟು ವಿರೋಧಿ ಪರಶುರಾಮರ ಬಳಿ ವಿದ್ಯೆ ಕಲಿತಕೊಂಡ ಕರ್ಣನು ಕೊನೆಗೆ ಅಲ್ಲೂ ಸತ್ಯ ಗೊತ್ತಾಗಿ ಪರಶುರಾಮರಿಂದ ಶಾಪ ಅಂಟಿಸಿಕೊಂಡ …

ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಿ ಕೊನೆಗೆ ಎಲ್ಲಾ ವಿದ್ಯೆಗಳಲ್ಲಿ ಅರ್ಜುನನಿಗಿಂತ ತಾನೆ ಶ್ರೇಷ್ಠ ಎಂಬುದನ್ನ ಸಾಬೀತು ಮಾಡಿದ, ಕೊನೆಗೆ ಅನಿವಾರ್ಯವಾಗಿ ಕೌರವರ ಪಕ್ಷ ಸೇರಿದ, ಇತ್ತ ಅರ್ಜುನ ಅತ್ತ ಕರ್ಣ ಇಬ್ಬರೂ ಅಪ್ರತಿಮ ವೀರರು ಮೇಲಾಗಿ ಅಣ್ಣ ತಮ್ಮಂದಿರು ಆದರೆ ಪಕ್ಷ ಮಾತ್ರ ಬೇರೆ..

ಈಗ ಮೂಲ ವಿಷಯಕ್ಕೆ ಬರೋಣ, ನಿಮ್ಮ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರ್ಜುನ ನಿಂತಿದ್ದಾನೆ ಬೇರೆ ಪಕ್ಷದಿಂದ ಕರ್ಣ ನಿಂತಿದ್ದಾನೆ ಅಂತ ಅನ್ಕೊಳ್ಳಿ ,ವಾಸ್ತವದಲ್ಲಿ ಅರ್ಜುನನಿಗಿಂತ ಕರ್ಣನೇ ಶ್ರೇಷ್ಠ ಅನ್ನೋದು ಸತ್ಯವಾದರೂ ಅವರಿಬ್ಬರನ್ನು ಮುನ್ನೆಡೆಸುವ ಪಕ್ಷಗಳನ್ನು ಸಹ ನಾವು ಗಮನಿಸಬೇಕು, ಅರ್ಜುನನ ಹಿಂದೆ ಮೋದಿಯಂತ ಶ್ರೀಕೃಷ್ಣ ಇದ್ದರೆ ಅತ್ತ ಕರ್ಣ ಇರುವುದು ದುರ್ಯೋಧನ ,ದುಶ್ಯಾಸನ,ಶಕುನಿ ಇರುವ ಮಹಾ ಘಟ್ ಬಂಧನ್ ಪಕ್ಷದಲ್ಲಿ,

ಇಲ್ಲಿ ಅರ್ಜುನ ತಪ್ಪು ಮಾಡಿದರೆ ತಿದ್ದಲು ಬಿಜೆಪಿಯಲ್ಲಿ ಕೃಷ್ಣ ಇದ್ದಾನೆ ಆದ್ರೆ ಕರ್ಣ ತಪ್ಪು ಮಾಡಿದ್ರೆ ಆ ತಪ್ಪುಗಳನ್ನು ಉತ್ತೇಜಿಸುವ ಮೂರ್ಖರು ಮಹಾ ಘಟ್ ಬಂಧನ್ ನಲ್ಲಿ ಇದಾರೆ ಅನ್ನೋದು ನೆನಪಿರಲಿ…

ಕೆಲವೊಮ್ಮೆ ವ್ಯಕ್ತಿಗಿಂತ ಆತನನ್ನು ನಿಯಂತ್ರಿಸುವ ಪಕ್ಷದ ಮೇಲೆ ನಂಬಿಕೆ ಇಡ್ಬೇಕಾಗುತ್ತೆ, ವ್ಯಕ್ತಿಯೇ ಮುಖ್ಯ ಅಂತ ಕೆಟ್ಟ ಪಕ್ಷದಲ್ಲಿ ಇರುವವನಿಗೆ ಬೆಂಬಲ ಕೊಟ್ರೆ ಆತನಿರುವ ಪಕ್ಷ ಆತನನ್ನು ಹಾಳು ಮಾಡುವುದಲ್ಲದೆ ಆತನಿಗೆ ಬೆಂಬಲ ಕೊಟ್ಟ ನಮ್ಮನ್ನು ಸಹ ಹಾಳು ಮಾಡುತ್ತೆ, ಸ್ವಲ್ಪ ಯೋಚಿಸಿ ಕೃಷ್ಣನಿರುವ ಪಕ್ಷ ಬೇಕೊ ಅಥ್ವಾ ಶಕುನಿ ಇರುವ ಪಕ್ಷ ಬೇಕೊ ಅಂತ…

ಹಾಗಂತ ಬಿಜೆಪಿಯಲ್ಲಿ ಇರುವವರೆಲ್ಲಾ ಅರ್ಜುನರು ಮತ್ತೆ ಮಹಾಕೆಟ್ ಬಂಧನ್ ನಲ್ಲಿ ಇರೋರೆಲ್ಲ ಕರ್ಣರು ಅಂತ ಅನ್ಕೋಬೇಡಿ, ಅಕಸ್ಮಾತ್ ನಿಮ್ಮ ಕ್ಷೇತ್ರದಲ್ಲಿ ಬಿಜೆಪಿಗಿಂತ ಬೇರೆ ಪಕ್ಷದ ಅಭ್ಯರ್ಥಿ ಉತ್ತಮ ಅನ್ಸಿದ್ರೆ ಮೇಲೆ ನಾ ಹೇಳಿದಂತೆ ಪಕ್ಷವನ್ನು ನೋಡಿ ಮತ ಹಾಕಿ ಅಷ್ಟೇ…

ಮಹಾಭಾರತದಲ್ಲಿ ಶ್ರೀಕೃಷ್ಣ ಹೇಗೆ ಪಾಂಡವರ ಪ್ರತಿ ಹೆಜ್ಜೆಯನ್ನು ಗಮನಿಸಿ ಅವರಿಗೆ ಸತ್ಯದ ಮಾರ್ಗ ತೋರಿಸುತ್ತಿದ್ದನೊ ಹಾಗೆ ನರೇಂದ್ರ ಮೋದಿ ಬಿಜೆಪಿ ನಾಯಕರ ಪ್ರತಿ ಹೆಜ್ಜೆಯನ್ನು ಗಮನಿಸುತ್ತಿದ್ದಾರೆ, ಸುಮ್ನೆ ಯೋಚಿಸಿ ಕಳೆದ ಐದು ವರ್ಷಗಳಲ್ಲಿ ಯಾವನಾದ್ರೂ ಒಬ್ಬ ಬಿಜೆಪಿ ನಾಯಕ ಹಗರಣ ಮಾಡಿದ್ದಾನ ಅಂತ? ಮಾಡಿಲ್ಲ ಅಲ್ವಾ ಯಾಕಂದ್ರೆ ಅವರ ಹಿಂದೆ ನರೇಂದ್ರ ಇದ್ದಾನೆ…

ಮುಂದೆ ಬರ್ತಿರೋದು ಕುರುಕ್ಷೇತ್ರ, ಕೃಷ್ಣನಿಗೆ ಬೆಂಬಲ ಕೊಟ್ಟು ದುರ್ಯೋಧನ ದುಶ್ಯಾಸನ ಶಕುನಿ ದ್ರೋಣರ ಮಹಾ ಘಟ್ ಬಂಧನ್ಗೆ ಅಂತಿಮ ಗೆರೆ ಎಳೆಯೋಣ…

ಭಾರತದ ಉತ್ತಮ ಭವಿಷ್ಯಕ್ಕಾಗಿ ಮೋದಿ ಮತ್ತೊಮ್ಮೆ

ಕೃಪೆ ವ್ಯಾಟ್ಯಾಪ್

ನಿಜಾಥ೯ದಲ್ಲಿ ಮಾನವರಾಗೋಣ

ಆತ್ಮೀಯರೇ, ಚಳಿ ಇಳಿಮುಖವಾಗಿ ನೀಧಾನವಾಫಿ ಬೇಸಿಗೆ ಕಾಲ ಆರಂಭವಾಗಿದೆ.

ಪಕ್ಷಿಸಂಕುಲಕ್ಕೆ ಇದು ಕಷ್ಟದ ಕಾಲ. ಬಾಯಾರಿಕೆ ತಣಿಸಿಕೊಳ್ಳಲು ನೀರನ್ನರಸುವ ಹಕ್ಕಿಗಳ ಉಳಿವಿಗಾಗಿ ನಮ್ಮ ಕೈತೋಟದಲ್ಲಿ, ತಾರಸಿಯ ಮೇಲೆ ಅಗಲವಾದ ಅಂಚು ದಪ್ಪಗಿರುವ ಮಣ್ಣಿನ ಅಥವಾ ಪ್ಲಾಸ್ಟಿಕ್ ಪಾತ್ರೆಯಲ್ಲಿ ಒಂದಿಷ್ಟು ನೀರನ್ನಿಡೋಣ. ಆ ಪಾತ್ರೆಯೊಳಗೆ ಪಕ್ಷಿಗಳು ಕುಳಿತು ನೀರು ಕುಡಿಯಲು ಅನುಕೂಲವಾಗುವ ಹಾಗೆ ಯಾವುದಾದರೂ ಒಂದೆರಡು ಕತ್ತರಿಸಿದ ಗಿಡಗಳ ಕಾಂಡಗಳನ್ನು ಹಾಕಿಡೋಣ. ಸಾಧ್ಯವಾದರೆ ಒಂದೆರಡು ಚಮಚೆ ಕಿರು ಧಾನ್ಯ ಗಳನ್ನೂ ಪಕ್ಕದಲ್ಲೇ ಇನ್ನೊಂದು ತಟ್ಟೆಯಲ್ಲಿಡೋಣ. ನಮ್ಮ ಪರಿಸರ ಸ್ವಚ್ಛ ಗೊಳಿಸಲು, ಗಿಡ ಮರ ಉಳಿಸಲು ಮತ್ತು ಬೆಳೆಸಲು ಈ ಪಕ್ಷಿಗಳ ಉಳಿವು ತುಂಬಾ ಅಗತ್ಯವಾಗಿದೆ. ಈಗಾಗಲೇ ಮೊಬೈಲ್ ತರಂಗಗಳಿಂದಾಗಿ ಗುಬ್ಬಚ್ಚಿಗಳು ಮಾಯವಾಗುತ್ತಿವೆ. ಕನಿಷ್ಠ ಪಕ್ಷ ಉಳಿದ ಪಕ್ಷಿಗಳನ್ನಾದರೂ ರಕ್ಷಿಸೋಣ.

ಈಗಾಗಲೇ, ಕೆರೆಬಾವಿಗಳನ್ನು ಮುಚ್ಚಿದ್ದೇವೆ..
ಕಾಡು ಕಡಿದು ಕಾಂಕ್ರೀಟ್ ನಾಡು ಕಟ್ಟಿದ್ದೇವೆ.
ಹಾರುವ ಹಕ್ಕಿಗಳ ರೆಕ್ಕೆ ಸೋತರೆ ಕೂರಲು ಮರಗಳಿಲ್ಲದಂತೆ ಮಾಡಿದ್ದೇವೆ.
ಕುಡಿಯುವ ಹನಿ ನೀರಿಗೆ ಪರದಾಡುವಂತೆ ಮಾಡಿದ್ದೇವೆ.
ಈ ತಪ್ಪುಗಳಿಗೆ ಕೊಂಚವಾದರೂ ಪ್ರಾಯಶ್ಚಿತ್ತ ಆಗಬೇಡವೆ?
ಪಕ್ಷಿಗಳ ಉಳಿವಿಗೆ ಆಹಾರ ಮತ್ತು ನೀರು ಕೊಡುವುದರ ಮೂಲಕ,
ನಮ್ಮ ಪಾಪಗಳಿಗೆ ಪರಿಹಾರ ಮಾಡಿಕೊಳ್ಳೋಣ,
ನಿಜಾಥ೯ದಲ್ಲಿ ಮಾನವರಾಗೋಣ.

ವ್ಯಾಟ್ಯಾಪ್ ಕೃಪೆ

ಮೌನವೇ ಪರಿಣಾಮಕಾರಿ ಅಸ್ತ್ರ

ಅಂದೊಂದು ದೊಡ್ಡ ಕಾಡು. ಅಲ್ಲಿ ಅನೇಕ ಬಗೆ ಬಗೆಯ ಗಿಡ ಮರಗಳು ನಾನಾ ರೀತಿಯ ಕಾಡು ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಆಶ್ರಯತಾಣವಾಗಿತ್ತು. ಎಲ್ಲಾ ಪ್ರಾಣಿ ಪಕ್ಷಿಗಳು ಸುಖಃದಿಂದ ನೆಮ್ಮದಿಯಿಂದ ತಮ್ಮ ಜೀವನವನ್ನು ನಡೆಸುತ್ತಿದ್ದವಾದರೂ ಅಗಾಗ ಅವುಗಳಿಗೆ ಪಕ್ಕದ ಊರಿನ ಬೇಟೆಗಾರಿಂದ ಸದಾ ತೊಂದರೆಯಾಗುತ್ತಲೇ ಇತ್ತು. ಕಾಡಿನ ರಾಜ ಇದು ಕಾಡಿನಲ್ಲಿ ಆಗುವ ಸಹಜ ಪ್ರಕ್ರಿಯೆ ಎಂದು ಸದಾ ಸುಮ್ಮನಾಗಿ ಬಿಡುತ್ತಿರಿಂದ ದಿನೇ ದಿನೇ ಬೇಟೆಗಾರರ ಧಾಳಿ ಹೆಚ್ಚುತ್ತಿತ್ತು. ಇದರಿಂದ ಬೇಸತ್ತು ನರಸತ್ತ ರಾಜನನ್ನು ಬದಲಿಸಿ ಭಲಾಡ್ಯ ರಾಜನನ್ನು ಆರಿಸಿಕೊಂಡವು. ಆದರೆ ಇದನ್ನು ಒಪ್ಪಿಕೊಳ್ಳದ ಕೆಲವು ಪ್ರಾಣಿಗಳು ತಮ್ಮಲ್ಲೇ ಗುಂಪು ರಚಿಸಿ ಕೊಂಡು ಹೊಸಾ ರಾಜನನ್ನು ಹೇಗಾದರೂ ಬಗ್ಗು ಬಡಿಯಬೇಕೆಂದು ಸದಾ ಕಾಲವೂ ಹವಣಿುಸುತ್ತಾ ಗುಟ್ಟಾಗಿ ಬೇಟೆಗಾರನಿಗೆ ಸಹಾಯ ಮಾಡತೊಡಗಿದವು. ಇದರ ಪರಿಣಾಮವಾಗಿ ಪ್ರಾಣಿ ಪಕ್ಷಿಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸತೊಡಗಿದವು. ಇದರಿಂದಾಗಿ ಕಾಡಿನ ರಾಜನಿಗೂ ಕೆಟ್ಟ ಹೆಸರು ಬರತೊಡಗಿತು ಮತ್ತು ಪ್ರಾಣಿ ಪಕ್ಷಿಗಳು ನೆಮ್ಮದಿಯಿಂದ ಇರಲು ಸಾಧ್ಯವಾಗದೇ ಸದಾಕಾಲವೂ ಭಯದ ವಾತಾವರಣದಲ್ಲಿಯೇ ಇರುವಂತಾಯಿತು. ಇದನ್ನು ಮನಗಂಡ ಕಾಡಿನ ಹಿರಿಯ ಪ್ರಾಣಿಗಳು ಎಲ್ಲರನ್ನೂ ಒಂದೆಡೆಗೆ ಸೇರಿಸಿ ನಾವೆಲ್ಲಾ ಒಗ್ಗಾಟ್ಟಾಗಿ ಇರದಿದ್ದಲ್ಲಿ ಉಳಿಗಾಲವೇ ಇರುವುದಿಲ್ಲ. ಕೆಲವೇ ದಿನಗಳಲ್ಲಿ ಇಡೀ ಕಾಡಿನ ಪ್ರಾಣಿಗಳಲ್ಲದೇ ಗಿಡಮರಗಳೂ ನಾಶವಾಗಿ ಬರಡಾಗುವುದರಲ್ಲಿ ಸಂದೇಹವೇ ಇಲ್ಲ. ಹಾಗಾಗಿ ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳು ಇದ್ದರೂ ಶತ್ರುಗಳ ಎದುರು ಅದನ್ನು ತೋರಿಸಿ ಕೊಳ್ಳದೆ ಒಗ್ಗಟ್ಟಾಗಿ ಹೋರಾಡಿದರೆ ಜಯವು ನಮ್ಮದೇ ಎಂದು ತಿಳಿ ಹೇಳಿದವು. ಅದೋಂದು ದಿನ ಅತಂತಹ ಪರಿಸ್ಥಿತಿ ಎದುರಾಗಿಯೇ ಬಿಟ್ಟಿತು. ಅತ್ತ ಬೇಟೆಗಾರರು ಹಾಕಿದ್ದ ಕಾಳುಗಳ ಆಸೆಗೆ ಬಿದ್ಡು ಪಕ್ಷಿಗಳು ಅವರನ ಬಲೆಗೆ ಬಿದ್ದರೆ ಇತ್ತ ಮರ ಕಟುಕರು ಬಾರೀ ಅಸ್ತ್ರಗಳೊಡನೆ ಕಾಡಿನ ಮರಗಳನ್ನು ಕಡಿಯಲು ಸಿಧ್ಧರಾಗಿ ಕಾಡಿಗೆ ದಾಂಗುಡಿ ಇಟ್ಟಿದ್ದರು. ಇದನ್ನು ನೋಡಿದ ಕಾಡಿನ ರಾಜ ತನ್ನೆಲ್ಲಾ ಪ್ರಾಣಿಗಳನ್ನು ಕರೆದು ಒಮ್ಮಿಂದೊಮ್ಮೆಲೆ ಮರ ಕಟುಕರ ಮೇಲೆ ಧಾಳಿ ಮಾಡಲು ಹೇಳಿ ತನ್ನ ಮುಂದಾಳತ್ವದಲ್ಲಿಯೇ ಅವರನ್ನು ಅಟ್ಟಿಸಿಕೊಂಡು ಹೋಯಿತು. ಪ್ರಾಣಿಗಳ ಈ ಪರಿಯ ಧಾಳಿಯನ್ನು ನಿರೀಕ್ಷಿಸದಿದ್ದ ಮರ ಕಟುಕರು ಎದ್ದೆನೋ ಬಿದ್ದೆನೋ ಎಂದು ಬದುಕಿದೆಯಾ ಬಡ ಜೀವ ಎಂದು ಚೆಲ್ಲಾ ಪಿಲ್ಲಿಯಾಗೆ ದಿಕ್ಕಾಪಾಲಾಗಿ ಓಡಿದರೆ ಕೆಲವರು ಪ್ರಾಣಿಗಳ ಕಾಲ್ತುಳಿತಕ್ಕೆ ಸಿಕ್ಕಿ ಕೈಕಾಲು ಮುರಿದುಕೊಂಡರು. ಅದೇ ರೀತಿ ಇಲಿಗಳು ಸರ ಸರನೆ ಒಂದಾಗಿ ಬಂದು ತಮ್ಮ ಹರಿತವಾದ ಹಲ್ಲುಗಳಿಂದ ಬೇಟೆಗಾರ ಬೀಸಿದ್ದ ಬಲೆಯನ್ನು ಕೆಲವೇ ನಿಮಿಷಗಳಲ್ಲಿ ಛಿದ್ರ ಛಿದ್ರಗೊಳಿಸಿ ಬಲೆಗೆ ಸಿಲುಕಿದ್ದ ಎಲ್ಲಾ ಪಕ್ಷಿಗಳನ್ನೂ ಕಾಪಾಡಿದವು. ಇದೇ ರೀತಿಯಾಗಿ ಒಂದೆರಡು ಧಾಳಿಗಳನ್ನು ಎಲ್ಲರೂ ಒಂದಾಗಿ ವಿರೋಧಿಸಿದ ಪರಿಣಾಮ ಮರ ಕಟುಕರು ಮತ್ತು ಬೇಟೆಗಾರರು ಮುಂದೆಂದೂ ಕಾಡಿನತ್ತ ತಲೆ ಹಾಕಬಾರದೆಂದು ತೀರ್ಮಾನಿಸಿ ಅತ್ತ ಕಡೆ ತಲೆ ಹಾಕಲೇ ಇಲ್ಲ. ಹಾಗಾಗಿ ಎಲ್ಲಾ ಪ್ರಾಣಿ ಪಕ್ಷಿಗಳು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಎತ್ತಿ ತೋರಿ ನೆಮ್ಮದಿಯಿಂದ ಅದೇ ಕಾಡಿನಲ್ಲಿ ನೂರ್ಕಾಲ ಜೀವಿಸಿದವು.

ಎರಡು ವಾರಗಳ ಹಿಂದೆ ಪಾಪೀಸ್ಥಾನದ ಉಗ್ರರಿಂದ ಕಾಶ್ಮೀರದ ಪುಲ್ವಾಮ ಬಳಿ ನಡೆದ ಧಾಳಿಯಲ್ಲಿ ನಮ್ಮ 40ಕ್ಕೂ ಅಧಿಕ ಸಂಖ್ಯೆಯ ಯೋಧರು ಹುತಾತ್ಮರಾದಾಗ ಇಡೀ ದೇಶವೇ ತಮ್ಮ ಸಂಬಂಧೀಕರೇ ಸತ್ತರೇನೋ ಎನ್ನುವಂತೆ ದುಃಖ್ಖಿಸಿ ದೇಶದ ನಾನಾ ಕಡೆ ತಮ್ಮ ಅಗಲಿದವರಿಗೆ ಶ್ರಧ್ಧಾಂಜಲಿ ಅರ್ಪಿಸಿದರಾದರೂ ಮನದಲ್ಲಿ ಪಾಪಿಗಳ ಪ್ರತಿಕಾರಕ್ಕೆ ಮನಸ್ಸು ಹಾತೊರೆಯುತ್ತಿತ್ತು. ಸಾಮಾನ್ಯ ಜನರ ಭಾವನೆಗಳೇ ಹಾಗಿರುವಾಗ ಇನ್ನು ದೇಶವಾಳುತ್ತಿರುವ ನಾಯಕರು ಮತ್ತು ದೇಶವನ್ನು ಕಾಪಾಡುತ್ತಿರುವ ಸೈನಿಕರ ರಕ್ತ ಇನ್ನೆಷ್ಟು ಕುದಿಯುತ್ತಿರಬೇಕು. ತಮ್ಮವರು ಸತ್ತ ಹನ್ನೆರಡನೇ ದಿನಕ್ಕೆ ಶ್ರಾಧ್ಧವನ್ನು ಮಾಡಿ ಹದಿಮೂರನೇ ದಿನ ವೈಕುಂಠ ಸಮಾರಾಧನೆಯ ಮೂಲಕ ಸದ್ಗತಿಯನ್ನು ಕೊಡಿಸುವಂತೆ ಸರಿಯಾಗಿ ಹದಿಮೂರನೇ ದಿನ ಬೆಳ್ಳಂಬೆಳಿಗ್ಗೆ ಇಡೀ ಜಗವೆಲ್ಲಾ ಮಲಗಿರಲು, ಶತ್ರುರಾಷ್ಟ್ರದ ಗಡಿಯನ್ನೂ ದಾಟಿ ಉಗ್ರರ ನೆಲೆಯನ್ನು ಧೂಳೀಪಟ ಮಾಡಿದರು. ಈ ಅಚಾನಕ್ಕಾದ ಧಾಳಿಯನ್ನು ಇಡೀ ವಿಶ್ವವೇ ಮೂಗಿನ ಮೇಲೆ ಬೆರಳಿಟ್ಟು ನೋಡಿದರೆ ಇಡೀ ದೇಶದ ಜನ ಜಾತೀ ಧರ್ಮವನ್ನು ಲೆಕ್ಕಿಸದೆ ಸಂಭ್ರಮಿಸಿದ್ದದ್ದು ಈಗ ಇತಿಹಾಸ.

ಶತ್ರು ರಾಷ್ಟ್ರ ಹಾಗು ಉಗ್ರಗಾಮಿಗಳ ನಾಯಕರುಗಳೇ ಭಾರತದ ವಾಯುಧಾಳಿಯನ್ನು ಒಪ್ಪಿಕೊಂಡವಾದರೂ ವಿಶ್ವದ ಮುಂದೆ ಅನುಮಾನ ತಾಳಲಾರದೇ ಯಾವುದೇ ಸಾವು ನೋವುಗಳಾಗಿಲ್ಲ. ಆರಂಭದಲ್ಲಿ ಭಾರತದ ಧಾಳಿಯನ್ನು ನಮ್ಮ ವಾಯುಸೇನಾ ಪಡೆಗಳು ಹಿಮ್ಮೆಟ್ಟಿಸಿದವು ಎಂದರೆ ನಂತರ ಕತ್ತಲಾಗಿದ್ದರಿಂದ ತಮ್ಮ ಸೇನೆ ಪ್ರತಿಧಾಳಿ ಮಾಡಲಾಗಲಿಲ್ಲ ಎಂದು ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ತಮ್ಮ ಅಳಲನ್ನು ತೋಡಿಕೊಂಡವು.

ಹೇಳಿ ಕೇಳಿ ಈಗ ದೇಶದಲ್ಲಿ ಚುನಾಚಣಾ ಕಾಲ. ಜನಮಾನಸದ ನೆನಪು ಬಹಳ ಕಡಿಮೆ ಕಳೆದ ನಾಲ್ಕೂವರೆ ವರ್ಷಗಳ ಸಾಧನೆಗಿಂತ ಈಗಿನ ಪ್ರಸ್ತುತ ಸಾಧನೆಗಳೇ ಮುಖ್ಯವಾಗುತ್ತದೆ. ಇದನ್ನು ಅರಿತ ಆಡಳಿತ ಪಕ್ಷದ ಕೆಲ ಹರುಕು ಬಾಯಿ ನಾಯಕರು ಇಂತಹ ಸಾಧನೆ ನಮಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿ ಕೊಡಬಹುದೆಂದು ಹೇಳಿದ್ದೇ ತಡ, ವಿರೋಧ ಪಕ್ಷಗಳು ತಮ್ಮ ಕುತ್ಸುಕ ಬುದ್ಧಿ ತೋರಿಸತೊಡಗಿದವು. ಇನ್ನು ಅಲ್ಲಿಯವರೆಗೂ ಅಂಡು ಸುಟ್ಟ ಬೆಕ್ಕಿನಂತಾಗಿ ಅತ್ತಿಂದಿತ್ತ ಅಲೆಯುತ್ತಿದ್ದ ಬಹುತೇಕ ವಿರೋಧ ಪಕ್ಷಗಳು ಒಮ್ಮಿಂದ್ದೊಮ್ಮೆಲೆ ಮುಗಿಬಿದ್ದವು. ಅದೆಲ್ಲೋ ದೂರದ ಪಶ್ವಿಮ ಬಂಗಾಳದಲ್ಲಿ ಕುಳಿತು ಬಾಂಗ್ಲಾದೇಶದವರಿಗೆ ಮಣೆ ಹಾಕುತ್ತಿರುವ ನಾಯಕಿ ಒಮ್ಮಿಂದೊಮ್ಮೆಲೆ ಸತ್ತವರ ಲೆಕ್ಕವನ್ನು ಕೇಳಿದರೆ, ತಾನು ಮತ್ತು ತನ್ನ ಪಕ್ಷದವರು ಮಾತ್ರವೇ ಸಾಚ ಮತ್ತು ಬುದ್ಧಿವಂತರು ಎಂದು ಕೊಂಡಿರುವ ದೆಹಲಿಯ ಮುಖ್ಯಮಂತ್ರಿ ಮತ್ತೊಮ್ಮೆ ಧಾಳಿಯ ಬಗ್ಗೆ ಅಪನಂಬಿಕೆ ತೋರಿಸಿ ಸಾಕ್ಷಿ ಪುರಾವೆ ಕೇಳಿದರೆ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸತ್ತವರು ಉಗ್ರರಾಗಿರದೆ ತಮ್ಮ ಬಂಧುಬಾಂಧವರೇನೂ ಎನ್ನುವಂತೆ ವಾಯುಧಾಳಿಯನ್ನು ಸಮರ್ಥಿಸುವರೆಲ್ಲಾ ಕೋಮುವಾದಿಗಳು ಎಂದು ಜರಿದು ಸೇನೆಯ ಶೌರ್ಯವನ್ನು ಕೊಂಡಾಡಿದರೆ ಒಂದು ಧರ್ಮದವರಿಗೆ ನೋವುಂಟಾಗಿ ರಾಜ್ಯದಲ್ಲಿ ಕೋಮು ಸೌಹಾರ್ಧಕ್ಕೆ ಧಕ್ಕೆ ಬರುತ್ತದೆ ಎಂದು ಗೀಳಿಟ್ಟರು. ಇನ್ನೂ ರಾಜಕಾರಣ ಮತ್ತು ಚಿತ್ರರಂಗದಲ್ಲಿಯೂ ಸವಕಲಾಗಿ ಚಲಾವಣೆಯಲ್ಲಿ ಇಲ್ಲದ ನಾಣ್ಯವಾಗಿರುವ ನಟಿ ಮಣಿ ವಾಯುಧಾಳಿಯಿಂದ ಉಗ್ರರು ಹತರಾಗಿದ್ದಾರೆ ಎನ್ನುವುದನ್ನು ನಂಬಲಾಗದು ಎಂದು ಉರಿಯುತ್ತಿದ್ದ ಬೆಂಕಿಯನ್ನು ನಂದಿಸುವುದಕ್ಕಿಂತ ತುಪ್ಪಾ ಹಾಕಿ ಉರಿಯನ್ನು ಜೋರು ಮಾಡಿದಳು.

ಇನ್ನೂ ಮಾಧ್ಯಮದವರ ಕುರಿತು ಮಾತನಾಡುವುದಕ್ಕಿಂತ ಸುಮ್ಮನಿರುವುದೇ ಲೇಸು. ಯಾವ ಸಂಧರ್ಭದಲ್ಲಿ ಹೇಗೆ ಮಾತನಾಡಬೇಕು ಎಂಬುದರ ಪರಿವೇ ಇಲ್ಲದೇ, ಕೇವಲ ಟಿಆರ್ಪಿಯ ಹಪಾಹಪಿಯಲ್ಲಿ ಅನ್ಯಗತ್ಯವಾಗಿ ಇಲ್ಲ ಸಲ್ಲದ ಅನಾವಶ್ಯಕ ಚರ್ಚೆಗಳನ್ನು ನಡೆಸುತ್ತಾ, ದೇಶಾದ್ಯಂತ ಜನರನ್ನು ಭಯಭೀತರನ್ನಾಗಿ ಮಾಡಿದರು ಎಂದರೆ ಅತಿಶಯೋಕ್ತಿಯೇನಲ್ಲ. ಮೊನ್ನೆ ಅಭಿನಂದನ್ ಅವರನ್ನು ಪಾಕ್ ಸೇನೆ ಪ್ರಶ್ನಿಸುತ್ತಿದ್ದಾಗ ಆತ, ಸಾರಿ ಸರ್, ನನ್ನ ವೃತ್ತಿ ಧರ್ಮದ ಅನುಗುಣವಾಗಿ ನಾನು ಏನನ್ನೂ ಹೇಳಲಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದರೆ, ಅವರು ಕೇಳಿದ ಪ್ರಶ್ತೆಗಳಿಗೆಲ್ಲಾ ನಮ್ಮ ಮಾಧ್ಯಮದವರೇ ಉತ್ತರಿಸಿ ಪಾಪೀಸ್ಥಾನಕ್ಕೆ ಪರೋಕ್ಷವಾಗಿ ಸಹಾಯ ಮಾಡಿದ್ದು ನಿಜಕ್ಕೂ ಖಂಡನೀಯ. ಅದೇ ರೀತಿ 2008 ಸೆಪ್ಟೆಂಬರ್ 11ರ ತಾಜ್ ಹೋಟೆಲ್ ಧಾಳಿಯ ಸಮಯದಲ್ಲಿಯೂ ಉಗ್ರರಿಗೆ ಹೊರ ಪ್ರಪಂಚದಲ್ಲಿ ಎನೇನಾಗುತ್ತಿದೆ ಎಂಬುದರ ವರದಿಯನ್ನು ಒದಗಿಸಿದ್ದೇ ನಮ್ಮೀ ಮಾಧ್ಯಮಗಳು ಎನ್ನುವುದು ವಿಷಾಧನೀಯ.

ಅದೇ ರೀತಿ ಮೊನ್ನೆ ವ್ಯಾಟ್ಯಾಪ್ನಲ್ಲಿ ಬಂದಿದ್ದ ಉಗ್ರರ ನಾಯಕನೊಬ್ಬನ ವಿಡಿಯೋದಲ್ಲಿ ಆತ ಮೋದಿಯವರನ್ನು ವಿರೋಧಿಸುವ ಭರದಲ್ಲಿ ತಮಗೆ ಭಾರತದಲ್ಲಿ ತಮ್ಮ ಸಂಘಟನೆಗೆ ಸಹಾಯ ಮಾಡಿದ ಭರ್ಕಾ ದತ್ ಮತ್ತು ಕಾಂಗ್ರೇಸ್ ನಾಯಕರರನ್ನು ಮನಸೋ ಇಚ್ಚೆ ಹೊಗಳಿರುವುದು ನಿಜಕ್ಕೂ ಆಶ್ಚರ್ಯ ಮತ್ತು ಖಂಡನೀಯ. ಮೋದಿಯವರು ಅಧಿಕಾರಕ್ಕೇರಿದ ಕೂಡಲೇ ಕಾಂಗ್ರೇಸ್ ಹಿರಿಯ ನಾಯಕ ಮಣಿಶಂಕರ್ ಐಯ್ಯರ್ ಪಾಪೀಸ್ಥಾನಕ್ಕೆ ಹೋಗಿ ಮೋದಿಯವರನ್ನು ಸೋಲಿಸಲು ಅವರ ಸಹಾಯ ಕೋರಿದರೆ, ಪಾಪಿಸ್ಥಾನದ ನೂತನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅಧಿಕಾರಗ್ರಹಣ ಸಂಧರ್ಭಕ್ಕೆ ಕಾಂಗ್ರೇಸ್ ಪಕ್ಷದ ಪ್ರತಿನಿಧಿಯಾಗಿ ಮಾಜಿ ಕ್ರಿಕೆಟ್ ಆಟಗಾರ ಮತ್ತು ಹಾಲಿ ಪಂಜಾಬ್ ಕಾಂಗ್ರೇಸ್ ಸರ್ಕಾರದ ಸಚಿವ ನವಜೋತ್ ಸಿಂಗ್ ಸಿದ್ಧು ಖುದ್ದಾಗಿ ಹಾಜರಿದ್ದು, ಐಸಿಸ್ ಸೇನಾ ದಂಡಾನಾಯಕನ್ನು ಅಪ್ಪಿ ಮುದ್ಡಾಡಿ ವಾಚಾಮಗೋಚರವಾಗಿ ಹೊಗಳಿದ್ದು ಮತ್ತು ಈ ವಾಯುಧಾಳಿಯನ್ನು ವಿರೋಧಿಸುತ್ತಾ ಅದಕ್ಕೆ ಸಾಕ್ಷಿ ಪುರಾವೆಗಳನ್ನು ಕೇಳಿದ್ದಲ್ಲದೆ, ಧಾಳಿಗೆ ಪ್ರತಿಧಾಳಿ ಮಾಡುವ ಬದಲು ಶಾಂತಿ ಮಾತುಕಥೆ ನಡೆಸಿ ಬಗೆ ಹರಿಸಿಕೊಳ್ಳಬೇಕು ಎಂದು ಪಾಪೀಸ್ಥಾನದ ಪರ ವಕಾಲತ್ತನ್ನು ವಹಿಸಿರುವುದು ನಿಜಕ್ಕೂ ಶೋಚನೀಯ.

ಪಾಪೀಸ್ಥಾನದ ಪ್ರತೀಬಾರಿಯ ಧಾಳಿಯ ಸಮಯದಲ್ಲಿ ಆ ಕ್ಷಣಕ್ಕೆ ಒಂದೆರಡು ಮಾತನಾಡಿ ಸುಮ್ಮನಾಗುತ್ತಿದ್ದ ನಮ್ಮ ದೇಶದ ನಾಯಕರ ಸ್ಥಾನದಲ್ಲಿ 56 ಇಂಚಿನ ಎದೆಗಾರಿಕೆಯ ಪ್ರಧಾನಿ ಆದ ಮೇಲಂತೂ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಸ್ಪಷ್ಟ ನಿಲುವಿನೊಂದಿಗೆ ಪುಲ್ವಾಮ ಧಾಳಿಯಾದ ನಂತರ ಅತ್ಯುತ್ತಮ ರಾಜತಂತ್ರಿಕ ನಡೆಯಿಂದ ವಿಶ್ವದ ನಾಯಕರನ್ನೆಲ್ಲಾ ತಮ್ಮೆಡೆಗೆ ಒಗ್ಗೂಡಿಸಿಕೊಂಡು, ಮೂರೂ ಸೇನಾ ನಾಯಕರ ಸಹಮತದೊಂದಿಗೆ ಯಾವುದೇ ರೀತಿಯ ಸುಳಿವನ್ನೂ ನೀಡದೇ ಏಕಾ ಏಕಿಯಾಗಿ ಪ್ರತಿಧಾಳಿ ನಡೆಸಿದ್ದದ್ದು ಪಾಪಿಸ್ಥಾನದ ಉಗ್ರಗಾಮಿಗಳ ನೆಲೆ ಮತ್ತು ಉಗ್ರಗಾಮಿಗಳನ್ನು ನಾಶ ಪಡಿಸುವದಷ್ಟೇ ಅಲ್ಲದೇ, ಅನಾವಶ್ಯಕವಾಗಿ ನಮ್ಮ ತಂಟೆಗೆ ಬಂದರೆ ಗಡಿಯನ್ನೂ ದಾಟಿ ಧಾಳಿ ಮಾಡುವ ಛಾತಿ ನಮಗಿದೆ ಎನ್ನುವುದನ್ನು ಪಾಪೀಸ್ಥಾನಕ್ಕೂ ಮತ್ತು ಇಡೀ ಜಗತ್ತಿಗೆ ತೋರಿಸುವುದಷ್ಟೇ ಆಗಿತ್ತು. ಕೇವಲ 21 ನಿಮಿಷಗಳ ವಾಯುಧಾಳಿಯಲ್ಲಿ ಕರಾರುವಾಕ್ಕಾಗಿ ಮೂರು ಉಗ್ರರ ನೆಲೆಗಳ ಮೇಲೆ ಧಾಳಿ ಮಾಡುವುದಷ್ಟೇ ನಮ್ಮ ಧ್ಯೇಯವಾಗಿತ್ತೇ ಹೊರತು ಸತ್ತವರು ಎಷ್ಟು ಎಂದು ಎಣಿಸುವುದಾಗಿರಲಿಲ್ಲ ಎಂಬುದನ್ನು ಈ ಹಿತಶತ್ರುಗಳಿಗೆ ಅರಿವು ಮೂಡಿಸಬೇಕಾಗಿದೆ.

ಒಟ್ಟಿನಲ್ಲಿ ದೇಶದ ಭಧ್ರತೆಗಾಗಿ ಭಾರತ ದೇಶದ ಸರ್ಕಾರ ತೆಗೆದುಕೊಂಡ ಇಂತಹ ದಿಟ್ಟ ನಿರ್ಧಾರಗಳಿಗೆ ಧರ್ಮ, ಜಾತಿ ಮತ್ತು ಓಟ್ ಬ್ಯಾಂಕ್ ರಾಜಕಾರಣವನ್ನು ಬೆರೆಸದೆ ಇಡೀ ದೇಶದ ಜನರೇ ಒಂದಾಗಿ ಪರಿಸ್ಥಿತಿ ಎದುರಿಸ ಬೇಕಾದ ಸಂಧರ್ಭದಲ್ಲಿ ನಮ್ಮವರೇ ಈ ರೀತಿಯ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ನಮ್ಮ ಸೈನಿಕರ ಪರಿಶ್ರಮವನ್ನು ಪ್ರಶ್ನಿಸುತ್ತಾ ಅವರ ನೈತಿಯತೆಯನ್ನು ಅಧೋಮುಖಗೊಳಿಸುವುದು ಎಷ್ಟು ಸರಿ? ದೇಶದ ನಾಯಕರು, ದೇಶದಲ್ಲಿ ಪ್ರಭಾವಿ ವ್ಯಕ್ತಿಗಳು, ಪ್ರಗತಿ ಪರರು, ದೇಶದ ಹಿತಚಿಂತಕರು, ದೇಶದ ಬುದ್ಧಿ ಜೀವಿಗಳು ಎಂದು ಬಿಂಬಿಸಿಕೊಳ್ಳುವವರೇ ಈ ರೀತಿಯಾಗಿ ಅಸಂಬದ್ಧ ಹೇಳಿಕೆಗಳನ್ನು ಕೊಡುವುದರ ಮೂಲಕ ಮತ್ತು ದೇಶದ ಭದ್ರತೆಯನ್ನು ಬದಿಗೊಟ್ಟು ಅನಾವಶ್ಯಕ ದೃಶ್ಯಗಳನ್ನು ತೋರಿಸಿ ಮತ್ತು ಚರ್ಚೆಗಳನ್ನು ನಡೆಸಿ ಶತ್ರು ರಾಷ್ಟ್ರಗಳಿಗೆ ವಿಷಯವನ್ನು ಸೋರುವುದನ್ನು ತಡೆಗಟ್ಟಲೇ ಬೇಕಾಗಿದೆ.

ನಮ್ಮ ದೇಶದ ಸೈನಿಕರು ಸರ್ಕಾರದ ಆಜ್ಞೆಯ ಮೇರೆಯಂತೆ ಕೆಲವೇ ನಿಮಿಷಗಳಲ್ಲಿ ಶತ್ರುರಾಷ್ಟ್ರಗಳ ಮೇಲೆ ಧಾಳಿ ನಡೆಸಿ ಭಯೋತ್ಪಾದರಕರ ಹುಟ್ಟನ್ನು ಅಡಗಿಸ ಬಲ್ಲರು. ಆದರೆ ನಮ್ಮ ದೇಶದೊಳಗೇ ನಮ್ಮ ನಿಮ್ಮ ನಡುವೆಯೇ ಇದ್ದು ನಮಗೇ ಅರಿವಿಲ್ಲದಂತೆಯೇ ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿಯೋ ಶತ್ರುಗಳಿಗೆ ನೆರವಾಗುವವರನ್ನು ಕಂಡು ಹಿಡಿಯಲು ಯಾರಿಗೇ ಆಗಲೀ ಅಸಾಧ್ಯ. ಹಾಗಾಗಿ ಸುಮ್ಮನೆ ತಮ್ಮ ಕೈಗಳಲ್ಲಿ ಏನೂ ಮಾಡಲಾಗದಿದ್ದರೂ ಕನಿಷ್ಠ ಪಕ್ಷ ಮೌನವೇ ಅಭರಣ ಎನ್ನುವ ರೀತಿಯಲ್ಲಿ ವರ್ತಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಅಲ್ಲವೇ? ಬಿಜೆಪಿ ಅಥವಾ ಮೋದಿಯವರ ಮೇಲೆ ವಯಕ್ತಿಕ ದ್ವೇಷವಿದ್ದರೆ ಅಥವಾ ಅವರ ಕಾರ್ಯ ವೈಖರಿ ಇಷ್ಟವಿಲ್ಲದಿದ್ದರೆ, ಖಂಡಿತವಾಗಿ ಅವರನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಎಲ್ಲಾ ಅವಕಾಶಗಳೂ ನಮ್ಮ ಮುಂದಿಲ್ಲವೇ?

ಮಾತು ಮನೆ ಕೆಡೆಸಿತು ತೂತು ಒಲೆ ಕೆಡೆಸಿತು ಎನ್ನುವ ಗಾದೆಯಂತೆ, ದೇಶವನ್ನು ಹಾಳು ಮಾಡಲು ಶತ್ರುಗಳು ಹೊರಗಿನಿಂದಲೇ ಬರಬೇಕೆಂದಿಲ್ಲ. ಒಳಗಿರುವ ಕೆಲ ಹಿತ ಶತ್ರುಗಳ ಇಂತಹ ಅನಾದರ ಮಾತುಗಳೇ ಸಾಕಲ್ಲವೇ? ದೇಶವಿದ್ದಲ್ಲಿ ಮಾತ್ರವೇ ಇವರಿಗೆ ಅಧಿಕಾರ. ಇನ್ನು ದೇಶವೇ ಶತ್ರುಗಳ ಧಾಳಿಯಿಂದ ನಾಶವಾದಲ್ಲಿ ಇವರು ಮಾಡುವುದಾದರೂ ಏನು ಎನ್ನುವ ಪರಿಜ್ಞಾನವಾದರೂ ಬೇಡವೇ? ಮೌನತೋ ಕಲಹಂ ನಾಸ್ತಿ ಎನ್ನುವ ಹಾಗೆ ಕೆಲವು ಬಾರಿ ಮೌನವೇ ಪರಿಣಾಮಕಾರಿ ಅಸ್ತ್ರ ಅದರಿಂದ ಯುದ್ಧವೇ ಇರುವುದಿಲ್ಲ ಎಂಬುದನ್ನು ಇವರಿಗೆ ಹೇಳುವ ಜವಾಬ್ಧಾರಿ ನಮ್ಮದೇ ಅಲ್ಲವೇ? ಆರಂಭದಲ್ಲಿ ಓದಿದ ಪ್ರಾಣಿಗಳು ಒಗ್ಗಟ್ಟಿನಿಂದಾಗಿ ತಮ್ಮ ಶತ್ರುಗಳನ್ನು ಹತ್ತಿಕ್ಕಿದ ಕಥೆಯಂತೆ ನಾವೆಲ್ಲರೂ ಒಗ್ಗೂಡಿದರೆ ನಮ್ಮ ಮೇಲೆ ಧಾಳಿ ಮಾಡುವ ದುಸ್ಸಾಹವನ್ನು ಯಾರೂ ಮಾಡಲಾರರು ಅಲ್ಲವೇ?

ಏನಂತೀರೀ?

ಅವರೇ ಮೇಳ

ರಂಗು ರಂಗಿನ ಶಬ್ಧ ಮತ್ತು ಬೆಳಕಿನ ಸಮ್ಮಿಳನದ ದೀಪಾವಳಿ ಹಬ್ಬ ಮುಗಿದು ಕನ್ನಡದ ಹಬ್ಬ ಕರ್ನಾಟಕ ರಾಜ್ಯೋತ್ಸವದ ಇಡೀ ತಿಂಗಳ ಭರಾಟೆ ಮುಗಿದು ಪ್ರಕೃತಿಯಲ್ಲೂ ತೀವ್ರವಾದ ಬದಲಾವಣೆಯಾಗಿ ಜನರನ್ನೆಲ್ಲಾ ಮಾಗಿಯ ಚಳಿಯಲ್ಲಿ ಗಡ ಗಡ ನಡುಗಿಸುತ್ತಾ ಮನೆಯಿಂದ ಹೊರಗಡೆ ಬಾರದಂತೆ ತಡೆದರೂ, ಬೆಂಗಳೂರಿನ ಜನರನ್ನೆಲ್ಲಾ ಸುಮಾರು ಎರಡು ವಾರಗಳ ಕಾಲ ಒಂದೆಡೆ ಒಗ್ಗೂಡಿಸುವ ಕಾರ್ಯಕ್ರಮವೆಂದರೆ ಬೆಂಗಳೂರಿನ ವಿಶ್ವೇಶ್ವರ ಪುರಂ ನ ತಿಂಡಿ ಬೀದಿಯಲ್ಲಿ ಪ್ರತೀವರ್ಷವೂ ವಾಸವೀ ಕಾಂಡಿಮೆಂಟ್ಸ್ ಅವರ ವತಿಯಿಂದ ನೆಡೆಸಲ್ಪಡುವ ಅವರೇ ಮೇಳ ಎಂದರೆ ಅತಿಶಯೋಕ್ತಿಯೇನಲ್ಲ.

ಧನುರ್ಮಾಸದ ಇಬ್ಬನಿಯು ಅವರೇಕಾಯಿಯ ಮೇಲೆ ಬಿದ್ದು ಒಂದು ರೀತಿಯ ಅಪ್ಯಾಯಮಾನವಾದ ಅವರೇಕಾಯಿಯ ಸೊಗಡಿನ ಘಮಲನ್ನು ಹೇಳಿ ಕೇಳುವುದಕ್ಕಿಂತ ಅನುಭವಿಸಿದರೇ ಒಂದು ರೀತಿಯ ಮಹದಾನಂದ. ಮೊದಲೆಲ್ಲಾ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಬಹುತೇಕ ಎಲ್ಲರ ಮನೆಗಳಲ್ಲಿಯ ಅಡುಗೆ ಮನೆಯಲ್ಲಿ ಬಳೆಸುವ ಒಂದು ಸಾಮಾನ್ಯ ಪದಾರ್ಥವೆಂದರೆ ಅವರೇಕಾಯಿ. ಅವರೇಕಾಯಿ ಉಪ್ಪಿಟ್ಟು, ಆವರೇಕಾಯಿ ಬಾತ್, ಅವರೇಕಾಯಿ ರೊಟ್ಟಿ, ಅವರೇ ಕಾಯಿ ಹುಳಿ, ಹಿತಕಿದ ಅವರೇಕಾಯಿ ಹುಳಿ, ಅವರೇಬೇಳೆ ಹುಗ್ಗಿ, ಅವರೇಕಾಯಿ ನುಚ್ಚಿನ ಉಂಡೆ, ಅವರೇಕಾಯಿ ಆಂಬೊಡೆ, ಖಾರದ ಅವರೆಕಾಳು ಹೀಗೆ ಅವರೇಕಾಯಿಂದ ಈ ರೀತಿಯಾದ ಕೆಲವೇ ಕೆಲವು ತಿಂಡಿಗಳು ತಯಾರಿಸಿ ಸವಿಯುತ್ತಿದ್ದದ್ದು ಸಹಜವಾಗಿರುತ್ತಿತ್ತು.

ಕಳೆದ ಎಂಟು ಹತ್ತು ವರ್ಷಗಳಲ್ಲಿ ಬೆಂಗಳೂರಿನ ವಿಶ್ವೇಶ್ವರ ಪುರಂ ನ ತಿಂಡಿ ಬೀದಿಯ ವಾಸವೀ ಕಾಂಡಿಮೆಂಟ್ಸ್ ಅವರು ನಿಜಕ್ಕೂ ಅವರೇಕಾಯಿಯಿಂದ ಊಹಿಸಲೂ ಅಸಾಧ್ಯವಾದ ಬಗೆ ಬಗೆಯಾದ ರುಚಿಕರವಾದ ತಿಂಡಿತಿನಿಸುಗಳನ್ನು ತಯಾರಿಸಿ ಅವರೇಕಾಯಿಯ ಮಹತ್ವವನ್ನು ಇನ್ನೂ ಹೆಚ್ಚಿಸಿದ್ದಾರೆ ಮತ್ತು ಅದನ್ನು ಪ್ರತೀ ವರ್ಷವೂ ಅದ್ದೂರಿಯಾಗಿ ಇನ್ನೂ ಬಗೆ ಬಗೆಯ ಹೊಸ ಹೊಸ ಅವರೇಕಾಯಿ ತಿನಿಸುಗಳನ್ನು ಆವಿಷ್ಕಾರ ಮಾಡುತ್ತಾ ಸಂಭ್ರಮದ ತಿನಿಸುಗಳ ಮೇಳ, ಜಾತ್ರೆಯನ್ನು ಏರ್ಪಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ. ಅದರ ಪ್ರತೀಕವಾಗಿ ಪ್ರತೀ ತಿಂಗಳು 1ನೇ ತಾರೀಖಿನಿಂದ 8ನೇ ತಾರೀಖಿನವರೆಗೂ ವಿ.ವಿ.ಪುರಂ ಫುಡ್ ಸ್ತ್ರೀಟ್ನಲ್ಲಿ ಅವರೇಮೇಳ ನಡೆಯುತ್ತಿದೆ. ಕಳೆದ ವರ್ಷ ಸ್ಥಳೀಯ ನಗರಪಾಲಿಕೆಯ ಸದಸ್ಯರು ಶುಚಿತ್ವದ. ಆಕ್ಷೇಪ ತೆಗೆದು ಅವರೇಮೇಳವನ್ನು ತಡೆಯಲು ಸಮರ್ಥರಾದರೆ, ಈ ವರ್ಷ ಅವರ ಪಾಲನ್ನು ಕರೋನ‌ ಮಹಾಮಾರಿ ನುಂಗಿಹಾಕಿದೆ.

ಎರಡು ವರ್ಷದ ಹಿಂದೆ ಮಡದಿಯೊಂದಿಗೆ ಈ ಅವರೇ ಮೇಳಕ್ಕೆ ಹೋಗಿ ಬಗೆ ಬಗೆಯ ಅವರೇ ಖಾದ್ಯಗಳನ್ನು ಸವಿದಿದ್ದ ರಸಾನುಭವ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಆರಂಭದ ದಿನಗಳ ಜನಜಂಗುಳಿ ಕಡಿಮೆಯಾದ ಮೇಲೆ ಹೋಗೋಣ ಎಂದು ನಿರ್ಧರಿಸಿ ವಾರಾಂತ್ಯದ ಶನಿವಾರ ಮಧ್ಯಾಹ್ನ ಪತ್ನಿ ಸಮೇತನಾಗಿ ಅಲ್ಲಿಗೆ ಹೋದರೆ ಅಲ್ಲಿಯ ವಾತಾವರಣ ನಿಜಕ್ಕೂ ಅಚ್ಚರಿ ತರಿಸಿತು. ಬೆಂಗಳೂರಿನ ಜನರಿಗೆ ಶುಚಿರುಚಿಕರವಾದ ತಿಂಡಿತಿನಿಸುಗಳು ಎಲ್ಲಿಯೇ ಸಿಗಲಿ, ಅದು ಹೇಗೆಯೇ ಇರಲಿ, ಆರಂಭದ ದಿನದಿಂದ ಅಂತಿಮ ದಿನದ, ಅಂತಿಮ ಕ್ಷಣದವರೆಗೂ ಅದರ ಸಂಪೂರ್ಣ ಲಾಭವನ್ನು ಪಡೆಯುತ್ತಾರೆ ಎನ್ನುವುದಕ್ಕೆ ಇದುವೇ ಸಾಕ್ಷಿಯಾಗಿತ್ತು. ಇನ್ನೂ ಹಾಲು ಕುಡಿಯುತ್ತಿರುವ ಹಸುಗಲ್ಲದ ಮಗುವಿನಿಂದ ಹಿಡಿದು ವಯೋವೃಧ್ಧರವರೆಗೂ ಆಬಾಲವೃಧ್ಧರಾದಿಯಾಗಿ ಅಲ್ಲಿ ಸರತಿಯಲ್ಲಿ ನಿಂತು ಬಗೆ ಬಗೆ ತಿಂಡಿಯ ರುಚಿಯನ್ನು ಸವಿಯುವುದನ್ನು ನೋಡುವುದೇ ಒಂದು ಆನಂದ.

ಅವರೇ ಕಾಯಿ ದೋಸೆ, ಪಡ್ಡು,, ಬಿಸಿ ಬಿಸಿ ಮಸಾಲೆ ವಡೆ, ಹುಸ್ಲಿ, ಉಪ್ಪಿಟ್ಟು, ಅವರೇಕಾಯಿ ಚಿತ್ರಾನ್ನ, ಆವರೇಕಾಯಿ ಬಾತ್, ಅವರೇ ಕಾಯಿ ಇಡ್ಲಿ ಕಡುಬು, ರೊಟ್ಟಿ, ಅವರೇಕಾಯಿ ಒತ್ತು ಶ್ಯಾವಿಗೆ ಹೀಗೆ ರುಚಿಕರವಾದ ತಿಂಡಿಗಳಾದರೆ, ಅವರೇಕಾಯಿ ಜಾಮೂನು, ಜಿಲೇಬಿ, ಬರ್ಫಿ, ಅವರೇಕಾಯಿ ಒಬ್ಬಟ್ಟು ಹೀಗೆ ಬಗೆ ಬಗೆಯ ಸಿಹಿ ತಿಂಡಿಗಳ ಜೊತೆ ಇತ್ತೀಚಿನ ಮಕ್ಕಳು ಮತ್ತು ಯುವ ಜನತೆ ಇಷ್ಟಪಡುವ ಅವರೇಬೇಳೆ ರೋಲ್, ಅವರೇಕಾಳು ಬೇಬಿ ಕಾರ್ನ್, ಅವರೇ ಮಶ್ರೂಮ್, ಆವರೇಕಾಳು ಮಂಚೂರಿಯನ್, ಅವರೇಕಾಳು ಪಾವ್ ಬಾಜಿ, ಎಲ್ಲದ್ದಕ್ಕೂ ಮಿಗಿಲಾಗಿ ಅವರೇಕಾಯಿ ಪಾನಿಪುರಿ ನಿಜಕ್ಕೂ ಬಾಯಿರುಚಿಯನ್ನು ಹೆಚ್ಚಿಸಿದ್ದಂತೂ ಸುಳ್ಳಲ್ಲ. ಅವರೇ ಕಾಯಿ ಐಸ್ ಕ್ರೀಂ ಬಗ್ಗೆ ನಾನು ವಿವರಿಸುವುದಕ್ಕಿಂತ ನೀವೇ ಅದನ್ನು ತಿಂದು ಸವಿದರೇನೇ ಚೆಂದ.

ಸಿಲಿಕಾನ್ ಸಿಟಿ. ಇಲ್ಲಿ ಸಾಫ್ಟ್ವೇರ್ ಕಂಪನಿಗಳು ಹೆಚ್ಚಾಗಿ ಬೆಂಗಳೂರಿನ ಜನರು ಐಶಾರಾಮಿ ಹೋಟೆಲ್ಗಳಲ್ಲಿಯೇ ಹೆಚ್ಚಾಗಿ ತಿನ್ನುವುದು ಎಂದು ಹೊರ ಜಗತ್ತು ನಂಬಿದ್ದರೆ ಅದು ಶುಧ್ಧ ಸುಳ್ಳು. ರುಚಿಯಾಗಿದ್ದರೆ, ಶುಚಿಯ ಕಡೆಯೂ ಗಮನ ಹರಿಸದೆ ರಸ್ತೆಯ ಬದಿಯಲ್ಲೇ ತಿಂದು ಮೂಲೆಯಲ್ಲಿ ಕೈ ತೊಳೆದು, ಸಣ್ಣಗೆ ಡರ್ ಎಂದು ತೇಗುವುದನ್ನು ನೋಡಲು ಇಲ್ಲಿಗೆ ಬರಲೇ ಬೇಕು. ಮನೆಯಲ್ಲಿ ಆರೋಗ್ಯದ ನೆಪದಲ್ಲಿ ಅನ್ನ, ಕರಿದ ತಿಂಡಿ. ತುಪ್ಪಾ / ಎಣ್ಣೆ ಪದಾರ್ಥಗಳಿಂದ ದೂರವಿರುವ ಮಂದಿ ಇಲ್ಲಿ ಅದನ್ನೆಲ್ಲಾ ಬದಿಗಿಟ್ಟು ದೋಸೆ ಬೇಯಿಸುವಾಗ ಸುರಿಯುವ ಎಣ್ಣೆ, ಹೋಳಿಗೆಯ ರುಚಿಯನ್ನು ಹೆಚ್ಚಿಸಲು ಪಿಚಕಾರಿಯ ರೀತಿಯಲ್ಲಿ ಸುರಿಯುವ ತುಪ್ಪಾ, ಕೈ ಇದೆ ಎನ್ನುವುದನ್ನು ಮರೆತು ಎಲ್ಲದ್ದಕ್ಕೂ ಚಮಚಗಳನ್ನು ಬಳೆಸುವ ಮಂದಿ ಅದೆಲ್ಲವನ್ನೂ ಮರೆತು ಇಲ್ಲಿ ಐದೂ ಬೆರಳುಗಳನ್ನು ಬಾಯಿಯೊಳಗೆ ಹಾಕಿಕೊಂಡು ಸೊರ್ ಸೊರ್ ಎಂದು ಹಿತಕವರೇ ಬೇಳೆ ಹುಳಿಯನ್ನು ಸವಿಯುವುದು, ಕೈ ತೊಳೆಯಲು ನೀರೀಲ್ಲ, ಒರೆಸಿಕೊಳ್ಳಲು ಟಿಶ್ಯು ಪೇಪರ್ ಸಿಗುವುದಿಲ್ಲ ಎನ್ನುವುದನ್ನು ಮನಗೊಂಡು ಎಲ್ಲಾ ತಿಂದು ಮುಗಿದ ನಂತರ ಅಕ್ಕ ಪಕ್ಕದವರು ನೋಡುತ್ತಿದ್ದಾರೆ ಎನ್ನುವುದನ್ನೂ ಮರೆತು ಎಲ್ಲಾ ಬೆರಳುಗಳನ್ನು ಒಂದೊಂದಾಗಿ ಚೀಪುವುದನ್ನು ನೋಡುವುದೇ ಬಲು ಗಮ್ಮತ್ತು. ಮನೆಯಲ್ಲಿ ಒಬ್ಬರ ತಟ್ಟೆಯಲ್ಲಿ ಮತ್ತೊಬ್ಬರು ಎಂದೂ ಕೈ ಹಾಕದವರು, ಎಂಜಲು ತಿನ್ನದವರು, ಇಲ್ಲಿ ಬಂದ ಮೇಲೆ ಎಲ್ಲಾ ತಿಂಡಿಗಳ ರುಚಿಯನ್ನು ಸವಿಯಲೇ ಬೇಕು ಎಂದು ನಿರ್ಧರಿಸಿ ಇಡೀ ಕುಟುಂಬದವರೆಲ್ಲಾ ಬಗೆ ಬಗೆಯ ತಿಂಡಿಗಳನ್ನು ತೆಗೆದುಕೊಂಡು ಎಲ್ಲರೂ ಒಂದೇ ತಟ್ಟೆಗೆ ಕೈ ಹಾಕಿ ತಿನ್ನುವುದು ನಿಜಕ್ಕೂ ಬಂಧು ಬಾಂಧವ್ಯವನ್ನು ಹೆಚ್ಚಿಸುವುದರಲ್ಲಿ ಮಹತ್ತರ ಪಾತ್ರವಹಿಸುತ್ತಿದೆ ಎಂದರೆ ಸುಳ್ಳಾಗದು.

ಅವರೇ ಮೇಳ ಒಂದು ವಾರದಿಂದ ಹತ್ತು ದಿನಗಳು ಇರುತ್ತದೆ ಎಂದು ನಿರ್ಧರಿಸಿರುತ್ತಾರಾದರೂ, ಜನರ ಅಪೇಕ್ಷೆಯಂತೆ ಮಳೆ ನಿಂತು ಹೋದ ಮೇಲೇ ಹನಿಗಳು ಉದುರುವ ಹಾಗೆ‌ ಮತ್ತೆ‌ ಕೆಲವು ದಿನಗಳ ಕಾಲ ಮುಂದುವರೆಸುವುದು ಅವರೇಮೇಳದ ಖ್ಯಾತಿಯನ್ನು ತೋರಿಸುತ್ತದೆ. ಮುಂದಿನ ವರ್ಷ ಈ ಕರೋನ ಸಾಂಕ್ರಾಮಿಕ ರೋಗ ಕಳೆದು, ನಗರಪಾಲಿಕೆಯ ಸಂಕಷ್ಟಗಳೆಲ್ಲವೂ ಕಳೆದು ಮತ್ತೆ ಅವರೇ ಮೇಳ ಆರಂಭವಾದಲ್ಲಿ, ಖಂಡಿತವಾಗಿಯೂ ಸಮಯ ಮಾಡಿಕೊಂಡು ಕುಟುಂಬದ ಸಮೇತರಾಗಿ ಅವರೇ ಮೇಳಕ್ಕೆ ಹೋಗಿ ರುಚಿ ರುಚಿಯಾದ, ಬಿಸಿ ಬಿಸಿಯಾದ, ಬಗೆ ಬಗೆಯಾದ ತಿಂಡಿಗಳನ್ನು ಸವಿಯೋಣ. ಅಲ್ಲಿ ಎಲ್ಲಾ ಬಗೆಯ ತಿಂಡಿಗಳ ಪಾರ್ಸಲ್ ವ್ಯವಸ್ಥೆ ಇದ್ದರೂ, ಮನೆಗೆ ತಂದು ತಣ್ಣಗೆ ತಿನ್ನುವ ಬದಲು, ನಮ್ಮೆಲ್ಲಾ ಹಮ್ಮು ಬಿಮ್ಮು ಬಿಟ್ಟು ಅಲ್ಲಿಯೇ ಸರದಿಯಲ್ಲಿ ಕಾಯುತ್ತಾ ಬಿಸಿ ಬಿಸಿಯಾಗಿ ತಿನ್ನುವ ಮಜವೇ ಬೇರೆ.

ಏನಂತೀರೀ

ನಿಮ್ಮವನೇ ಉಮಾಸುತ

ಆಭರಣ ಅಂಗಡಿಯ ಅವಾಂತರ

ಅದೊಮ್ಮೆ ಗಂಡ ತನ್ನ ಹೆಂಡತಿಗೆ ತಮ್ಮ ವಿವಾಹ ವಾರ್ಷಿಕೋತ್ಸವ ನೆನಪಿನ ಕಾಣಿಕೆಯಾಗಿ ವಿಶೇಷ ಉಡುಗೊರೆಯನ್ನು ನೀಡಲು ಹತ್ತಿರದ ಚಿನ್ನದ ಅಂಗಡಿಗೆ ಕರೆದುಕೊಂಡು ಹೋದರು. ಸೀರೆ, ಚಿನ್ನದ ಅಂಗಡಿಗಳಿಗೆ ಹೆಂಗಸರೊಂದಿಗೆ ಹೋದರೆ ಆಗಬಹುದಾದ ಸಮಯವೇ ಅಂದೂ ಕೂಡಾ ಆಗಿತ್ತು. ಇದು ತೋರಿಸಿ, ಅದು ತೋರಿಸಿ. ಇಷ್ಟೇ ದುಡ್ದಿನಲ್ಲಿ ಮತ್ತೊಂದು ಡಿಝೈನ್ ತೋರಿಸಿ. ಇದು ಸ್ವಲ್ಪ ದೊಡ್ಡದಾಯ್ತು. ಸ್ವಲ್ಪ ಚಿಕ್ಕದಿದ್ದರೆ ನೋಡಿ. ಇಲ್ಲಾ ಇಲ್ಲ ಇದು ತುಂಬಾನೇ ಚಿಕ್ಕದಾಯ್ತು ನನಗೆ ಸರಿ ಹೊಂದದು ಎಂದು ಹೀಗೇ ಹಾಗೆ ತರತರಹದ ಆಭರಣಗಳನ್ನು ನೋಡುತ್ತಾ ಒಂದೆರಡು ಗಂಟೆಗಳು ಕಳೆದದ್ದೇ ಗೊತ್ತಾಗಲಿಲ್ಲ. ರೀ ಇದು ಚೆನ್ನಾಗಿ ಕಾಣುತ್ತಾ ಅಂತ ಆಕೆ ಕೇಳಿದ್ದಕ್ಕೆ. ಹೂಂ. ತುಂಬಾನೇ ಚೆನ್ನಾಗಿದೆ ಅಂದ್ರೆ. ಏ ಹೋಗ್ರೀ ನಿಮಗೆ ಸರಿಯಾಗಿ ಹೇಳೋದಕ್ಕೇ ಬರೋದಿಲ್ಲ. ಇದು ನನಗೆ ಅಷ್ಟೋಂದು ಚೆನ್ನಾಗಿ ಕಾಣೋದಿಲ್ಲ. ಹೋಗ್ಲಿ ಬಿಡಿ ಇದನ್ನು ನೋಡಿ ಹೇಗನ್ನಿಸುತ್ತೇ ಎಂದಾಗ, ಅವನಿಗೆ ಕಳೆದ ಬಾರಿಯ ಅನುಭವದ ನೆನಪಾಗಿ, ಇದು ನಿನಗೆ ಒಂದು ಚೂರೂ ಚೆನ್ನಾಗಿ ಕಾಣಿಸುವುದಿಲ್ಲ ಎಂದಾಗ. ಏನ್ರೀ ನಿಮಗೇ ಕೊಂಚವೂ ಟೇಸ್ಟೇ ಇಲ್ಲ. ಇದು ನನಗೆ ತಂಬಾ ಚೆನ್ನಾಗಿ ಕಾಣುತ್ತದೆ. ನಾನು ಇದನ್ನೇ ತೆಗೆದುಕೊಳ್ತೀನಿ ಅಂದಾಗ ಅದಾಗಲೇ ಒಂದೆರಡು ಗಂಟೆ ಸುಮ್ಮನೆ ಕಳೆದಿದ್ದ ಪತಿರಾಯರ ಹೊಟ್ಟೆಯೂ ಚುರುಗುಟ್ಟುತ್ತಿತ್ತು. ಇನ್ನೇನಾದರೂ ಹೇಳಿದರೆ ಮತ್ತೆ ಕಾಲ ವ್ಯರ್ಥವಾಗುತ್ತದೆ ಎಂದು ಆಲೋಚಿಸಿ ವಿಧಿ ಇಲ್ಲದೆ ಸರಿ ಎಂದು ತಲೆ ಅಲ್ಲಾಡಿಸಿದ ಪತಿರಾಯ, ಅಂಗಡಿಯವನತ್ತ ತಿರುಗಿ ಏನಪ್ಪಾ, ಇದೇ ಇರ್ಲಿ ಬಿಡಿ. ಲೆಖ್ಖ ಮಾಡಿ ದುಡ್ಡು ಎಷ್ಟು ಆಗುತ್ತೇ ಅಂತಾ ಕೇಳ್ತಾನೆ.

ಅದಕ್ಕೆ ಅಂಗಡಿಯಾತ, ಸಾರ್ ಹಿಂದೆ ಎಂದಾದರೂ ನಮ್ಮ ಅಂಗಡಿಗೆ ಬಂದಿದ್ರಾ? ಎಂದು ಕೇಳಿದಕ್ಕೆ, ಇಲ್ಲಪ್ಪ. ಇದೇ ಮೊದಲ ಬಾರಿ ನಿಮ್ಮ ಅಂಗಡಿಗೆ ಬಂದಿರೋದು ಎಂದ ಪತಿರಾಯ. ಸರಿ ಪರ್ವಾಗಿಲ್ಲ ಬಿಡಿ. ಈ ಫಾರ್ಮ್ ಸ್ವಲ್ಪ ಭರ್ತಿಮಾಡಿ. ನಿಮ್ಮ ಹೊಸಾ ಅಕೌಂಟ್ ತರೆದು ಬಿಲ್ ಮಾಡಿಬಿಡ್ತೀನಿ ಎಂದ ಅಂಗಡಿಯವ. ಛೇ ಅದಕ್ಕೇ ಇಂತಾ ದೊಡ್ಡ ಅಂಗಡಿಗಳಿಗೆ ಬರಬಾರದು ಎಂದು ಮನಸ್ಸಿನಲ್ಲೇ ಗೊಣಗುತ್ತಾ ಫಾರ್ಮ್ ಭರ್ತಿ ಮಾಡ್ತಿದ್ದಾಗ. ಸಾರಿ ಸರ್ ನಿಮ್ಮ ಮೊಬೈಲ್ ನಂಬರ್ ಕೊಡ್ತೀರಾ! ಎಂದು ಮೊಬೈಲ್ ನಂಬರರನ್ನು ಕೇಳಿ ತನ್ನ ತನ್ನ ಕಂಪ್ಯೂಟರ್ನಲ್ಲಿ ಎಂಟರ್ ಮಾಡುತ್ತಿದ್ದಂತೆಯೇ, ಇದೇನ್ ಸಾರ್? ನೀವಾಗ್ಲೆ ನಮ್ಮ ಗ್ರಾಹಕರಿದ್ದೀರಿ! ನೀವು ಆ ಫಾರ್ಮ್ ಭರ್ತಿ ಮಾಡೋ ಅವಶ್ಯಕತೆ ಇಲ್ಲಾ. ನಮ್ಮ ಕೆಲಸ ಸುಲಭವಾಯ್ತು. ನೋಡಿ ಇದೇನಾ ನಿಮ್ಮ ಮನೆ ವಿಳಾಸ? ಇದೇನಾ ನಿಮ್ಮ ಹುಟ್ಟಿದ ದಿನ? ಮತ್ತು ಇದೇ ಅಲ್ವಾ ನಿಮ್ಮ ಮದುವೆ ದಿನ ಅಂತ ಎಲ್ಲವನ್ನೂ ಪಟ ಪಟನೇ ಪುರೋಹಿತರಂತೆ ಇಡೀ ಜಾತಕಾನೇ ಹೇಳಿದ್ದನ್ನು ಕೇಳಿ, ಒಮ್ಮಿಂದೊಮ್ಮೆಲೆ ಕರೆಂಟ್ ಶಾಕ್ ಹೊಡೆದ ಕಾಗೆಯಂತಾದ ಪತಿರಾಯ!. ಹೇ ಅದು ಹೇಗಾಗತ್ತೇ?. ನಾನು ಇದೇ ಮೊದಲಬಾರಿಗೆ ನಿಮ್ಮ ಅಂಗಡಿಗೆ ಬರ್ತಾ ಇರೋದು. ನನ್ನ ಡೇಟಾ ನಿಮ್ಮ ಬಳಿ ಇರೋದಕ್ಕೇ ಛಾನ್ಸೇ ಇಲ್ಲ ಎಂದು ದಬಾಯಿಸಿ ತನ್ನ ಮಡದಿಯತ್ತ ಆತಂಕದಿಂದಲೇ ನೋಡಿದ!. ಇವರಿಬ್ಬರ ಸಂಭಾಷಣೆಯನ್ನಾಲಿಸುತ್ತಿದ್ದ ಮಡದಿ ತನ್ನ ಪತಿಯತ್ತ ಅನುಮಾನಾಸ್ಪದವಾಗಿ ನೋಡುತ್ತಾ, ಮನಸ್ಸಿನಲ್ಲಿಯೇ ನನಗೆ ಗೊತ್ತಿಲ್ಲದೆ ಇವರು ಯಾರ ಜೊತೆ ಇಲ್ಲಿಗೆ ಬಂದು ಏನು‌ ಕೊಡಿಸಿರಬಹುದು? ಎಂದು ಯೋಚಿಸುತ್ತಾ , ಅಂಗಡಿಯವರ ಮುಂದೆ ಅದನ್ನೆಲ್ಲಾ ತೋರಿಸದೆ, ಸ್ವಲ್ಪ ಸರಿಯಾಗಿ ನೋಡಾಪ್ಪಾ, ನಮ್ಮ ಮನೆಯವರು ಆ ತರಹದವರಲ್ಲಾ. ಶ್ರೀರಾಮ ಚಂದ್ರನಂತಹವರು ಎಂದು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದಳು.

ಸರಿ ಸಾರ್ ಸ್ವಲ್ಪ ಸಮಯ ಕೊಡಿ ನಾನು ನೋಡಿ ಹೇಳ್ತೀನಿ ಎಂದು ತನ್ನ ಹಿರಿಯವರನ್ನು ವಿಚಾರಿಸಲು ಒಳಗೆ ಹೋದಾಗ, ಅಬ್ಬಾ! ಬೀಸೋ ದೊಣ್ಣೆ ತಪ್ಪಿದರೆ ನೂರು ವರ್ಷ ಆಯಸ್ಸು ಎಂದು ಕೊಂಡು ಪೆಚ್ಚು ಮೊರೆಯಿಂದ ತನ್ನ ಪತ್ನಿಯತ್ತ ನೋಡಿದರೆ ಆಕೆಯ ಮುಖದಲ್ಲಿ ದುರ್ಗಿಯೇ ಕಾಣುತ್ತಿದ್ದಳು. ಲೇ, ಲೇ.. ಅಲ್ವೇ ನನಗೇನು ಗೊತ್ತಿಲ್ಲ ಕಣೇ. ನನ್ನದೇನೂ ತಪ್ಪಿಲ್ಲ. ನಿನ್ನ ಅಣೆಗೂ ನಾನು ಇಲ್ಲಿಗೆ ಯಾವತ್ತೂ ಬಂದಿಲ್ಲ ಕಣೇ.. ನನ್ನ ಮೇಲೆ ನಂಬಿಕೆ ಇಲ್ವಾ? ಅಂತ ಮೆಲು ಧನಿಯಲ್ಲಿ ಪರಿಪರಿಯಾಗಿ ಸಮಾಧಾನ ಪಡಿಸುತ್ತಾ, ಅದು ಹೇಗೆ ಅವರಬಳಿ ನನ್ನ ಡೇಟ ಇದೆಯೋ ನನಗಂತೂ ಗೊತ್ತಾಗ್ತಾ ಇಲ್ಲಾ ಎಂದು ಆಕೆಯನ್ನು ಸಮಾಧಾನ ಪಡಿಸಲು ಯತ್ನಿಸಿದರೆ, ಇಲ್ಲೇನು ಮಾತು? ಮೊದಲು ಮನೆಗೆ ಬನ್ನಿ. ಎಲ್ಲವನ್ನೂ ಕೂಲಂಕುಶವಾಗಿ ಮಾತಾನಾಡೋಣ ಎಂದಳು ಪತ್ನಿ. ಛೇ ಇದೊಳ್ಳೆ ಗ್ರಹಚಾರ ಆಯ್ತಲ್ಲಪ್ಪಾ! ಸುಖಾ ಸುಮ್ಮನೆ ಬೇಡವಾದ ವಿಷಯದಲ್ಲಿ‌ ತಗಲುಹಾಕಿ ಕೊಂಡು ಬಿಟ್ನಲ್ಲಪ್ಪಾ! ಎಂದು ಕೊಳ್ಳುತ್ತಿರುವಾಗಲೇ, ಒಳಗಿನಿಂದ ತನ್ನ ಹಿರಿಯ ಅಧಿಕಾರಿಯೊಂದಿಗೆ ಬಂದ ಅಂಗಡಿಯವ, ಸಾರ್ ಇತ್ತೀಚೆಗೆ ನೀವೇನಾದ್ರೂ ವಾಚ್ ಕೊಂಡು ಕೊಂಡಿದ್ರಾ? ಅಂತ ಕೇಳಿದ್ದಕ್ಕೆ ಹೌದು ಹೌದು. ನಾನೇ ನಮ್ಮೆಜಮಾನರ ಹುಟ್ಟಿದ ಹಬ್ಬಕ್ಕೆ ಉಡುಗೊರೆಯಾಗಿ ಒಳ್ಳೆಯ ಕೈ ಗಡಿಯಾರ ಕೊಡ್ಸಿದ್ದೇ ಅದಕ್ಕೇನಿವಾಗಾ? ಎಂದು ಸ್ವಲ್ಪ ಜೋರಾಗಿಯೇ ಕೇಳಿದಳು ಪತ್ನಿ. ಏನಿಲ್ಲಾ ಮೇಡಂ. ಸ್ವಲ್ಪ ಸಮಾಧಾನ ಮಾಡಿಕೊಳ್ಳಿ. ನೀವು ವಾಚ್ ತೆಗೆದುಕೊಂಡ್ರಲ್ಲಾ ಆ ಕಂಪನಿ ಮತ್ತು ನಮ್ಮ ಅಂಗಡಿ ಒಂದೇ ಗ್ರೂಪ್ ಕಂಪನಿ. ಹಾಗಾಗಿ ಅಲ್ಲಿ ನೀವು ಕೊಟ್ಟಿದ್ದ ಡೀಟೈಲ್ಸ್ ನಮ್ಮ ಸೆಂಟ್ರಲ್ ಡೇಟಾಬೇಸ್ನಲ್ಲಿ ಇದ್ದಿದ್ದರಿಂದಲೇ ಇಂದು ನಿಮ್ಮ ಡೇಟಾ ಹೇಳಿದ್ದು ಎಂದು ಅಂಗಡಿಯವನು ಹೇಳಿದಾಗ, ಗಂಡನ ಮೇಲಿದ್ದ ಕೋಪ ಜರ್ ಅಂತಾ ಇಳಿದು ಹೋಗಿ, ಛೇ ! ಸುಮ್ಮನೇ ನಮ್ಮ ಮನೆಯವರ ಕುರಿತು ಅಪಾರ್ಥ ಮಾಡಿಕೊಂಡೆನಲ್ಲಾ ಎಂದು ಪತ್ನಿ ತನ್ನ ಪತಿಯ ಕಡೆ ಹುಸಿ ನಗೆಯಿಂದ ನೋಡಿದ್ದನ್ನು‌ ಕಂಡ ಪತಿರಾಯನಿಗೆ ಅಬ್ಬಾ ಬದುಕಿದೆಯಾ ಬಡ ಜೀವ ಎನ್ನುವಂತಾಗಿ ಅಂಗಡಿಯಲ್ಲಿ ಇರುವುದನ್ನೇ ಮರೆತು ಪತ್ನಿಯನ್ನು ಬರ ಸೆಳೆದು ಮುತ್ತಿಟ್ಟ.

ಸರ್ ಹೇಗೋ ನಿಮ್ಮ ಮದುವೆ ಆನಿವರ್ಸರಿ ಇನ್ನು ಒಂದು ವಾರದಲ್ಲಿರೋದರಿಂದ ನಿಮಗೆ ಇನ್ನೂ ಐದು ಪರ್ಸೆಂಟ್ ಡಿಸ್ಕೌಂಟ್ ಕೊಡ್ತಾ ಇದ್ದೀವಿ. ಬಿಲ್ ಮಾಡ್ಲಾ ಸರ್ ಎಂದಾಗ ನಿರಾಳ ಮನಸ್ಸಿನಿಂದ ಸರಿ ಬೇಗ ಬೇಗ ಮುಗಿಸಿ‌. ಇನ್ನೂ ಸ್ವಲ್ಪ ಹೊತ್ತು ಇಲ್ಲೇ ಇದ್ರೆ ಮತ್ತೆ ಯಾವುದಕ್ಕಾದ್ರು ಸಿಕ್ಕಿ ಹಾಕಿಸ್ಬಿಟ್ರೆ ಕಷ್ಟ ಎಂದು ಹಣ‌ ಕೊಟ್ಟು ಸಂತೋಷದಿಂದ ಪತ್ನಿಯೊಡನೆ ಭರ್ಜರಿಯಾಗಿ ಹೊರಗಡೆ ಊಟ ಮುಗಿಸಿ ಮನೆಯತ್ತ ಸಾಗಿದರು.

ಒಟ್ನಲ್ಲಿ ಜನರಿಗೆ ಉಪಯೋಗಕ್ಕೆ ಅಂತಾ ಇರೋ ಈ ಟೆಕ್ನಾಲಜಿಗಳು ಕೆಲವೊಮ್ಮೆ ಇಂತಹ ಅಭಾಸಕ್ಕೀಡು‌ ಮಾಡುವುದಂತೂ ಸುಳ್ಳಲ್ಲಾ.

ಏನಂತೀರಿ?

ಇಂತಿ ನಿಮ್ಮ ಉಮಾಸುತ