ಕೆಲಸದ ಅರ್ಹತೆ

ಅದೊಂದು ದೊಡ್ಡ ‌ನಗರ‌ ಅಲ್ಲೊಬ್ಬ‌ ಬಲು ದೊಡ್ಡ ಉದ್ಯಮಿ ಹಾಗೂ ರಾಜಕಾರಣಿಗಳಾಗಿದ್ದರು. ಅವರಿಗೆ   ಶಿಕ್ಷಣ ‌ಸಂಸ್ಥೆಗಳು,  ಗೋಶಾಲೆಗಳು, ಧಾರ್ಮಿಕ‌ದತ್ತಿಗಳು, ಜವಳಿ ಅಂಗಡಿಗಳು ಹಾಗೂ ಇನ್ನೂ  ತರ ತರಹದ ವ್ಯಾಪಾರಗಳು ಇದ್ದವು. ಅವರಿಗೆ  ಮೂರು ಗಂಡು ಮಕ್ಕಳಿದ್ದು,  ವಿದ್ಯಾವಂತರಾಗಿ ತಂದೆಯ ವ್ಯಾಪಾರ ‌ವಹಿವಾಟುಗಳಿಗೆ ಸಹಕರಿಸುತ್ತಿದ್ದರು.‌ ಸಹಜವಾಗಿ ತಂದೆಯವರಿಗೆ ವಯಾಸ್ಸಾಗುತ್ತಿದ್ದಂತೆಯೇ ತಮ್ಮ ವ್ಯವಹಾರಗಳನ್ನು ತಮ್ಮ ಮಕ್ಕಳಿಗೆ ಹಂಚಿ‌‌ ವಿಶ್ರಾಂತ ‌ಜೀವನ ನಡೆದಸಲು ಯೋಚಿಸಿ‌ ಯಾವ ಯಾವ ಮಕ್ಕಳಿಗೆ ‌ಯಾವ ರೀತಿಯ ವ್ಯವಹಾರಗಳನ್ನು ಹಂಚಬೇಕೆನ್ನುವ ಜಿಜ್ಞಾಸೆಯಲ್ಲಿದ್ದರು.

ಅದೊಂದು ಬೇಸಿಗೆಯ ದಿನ  ಹೊರಗಡೆ ಬಹಳ ಬಿಸಿಲಿತ್ತು. ಆ ವ್ಯಾಪಾರಸ್ಥರು ತಮ್ಮ  ಹವಾನಿಯಂತ್ರಿತ  ಜವಳಿ ಅಂಗಡಿಯಲ್ಲಿ ‌ತಮ್ಮ‌ ಮೂರು ಮಕ್ಕಳೊಂದಿಗೆ ವ್ಯಾಪಾರ ‌ನಡೆಸುತ್ತಿದ್ದಾಗ ವಯಸ್ಸಾದ ಒಬ್ಬ ಬಡ ಹೆಂಗಸು ತನ್ನ ಮೊಮ್ಮಗಳೊಂದಿಗೆ ಸೀರೆ ಕೊಳ್ಳಲು ಅಂಗಡಿಗೆ ಬಂದಳು. ಎಲ್ಲಾ ರೀತಿಯ ‌ಗಿರಾಕಿಗಳನ್ನು‌ ಸ್ವಾಗತಿಸಿದಂತೆ  ಅವರನ್ನೂ  ಆದರಿಸಿ ಅವರಿಗೆ ಬೇಕಾದ ಬಟ್ಟೆಗಳನ್ನು ‌ತೋರಿಸತೊಡಗಿದರು. ಇವೆಲ್ಲದರ ಮಧ್ಯೆ, ಅಂಗಡಿಗೆ ಬರುವವರೆಲ್ಲರಿಗೂ ನೀಡುವಂತೆ ಅವರಿಗೂ ತಂಪು ಪಾನೀಯಗಳನ್ನು ನೀಡಿದರು. ಆ ಪುಟ್ಟ ಮೊಮ್ಮಗಳು ವಯೋ ಸಹಜವಾಗಿ ಕೇಳುವಂತೆ ಮತ್ತೊಂದು ಲೋಟ‌ ಪಾನೀಯವನ್ನು ಕೇಳಿದಾಗ ಅಂಗಡಿಯ ಸಿಬ್ಬಂದಿ ಬೇಸರಿಸದೆ ಕೊಟ್ಟರು. ಅದಲ್ಲದೇ ‌ ಆ ಮಗುವಿಗೆ ಚೆಂದದ ಬೆಲೂನನ್ನೂ ಕೊಟ್ಟಾಗ ಆ ಮಗುವಿನ ಆನಂದಕ್ಕೆ‌ ಪಾರವೇ ಇರಲಿಲ್ಲ. ಸುಮಾರು ‌ಒಂದು‌ ಘಂಟೆಗಳ ನಂತರ ನಮಗೆ ‌ಒಪ್ಪುವ  ಮತ್ತು ನಮ್ಮ ಅಂದಾಜಿಗೆ ತಕ್ಕ ಬಟ್ಟೆ ‌ಸಿಗಲಿಲ್ಲ ಎಂಬ ಕಾರಣ ನೀಡಿ  ಏನನ್ನೂ  ಕೊಂಡು ಕೊಳ್ಳದೆ ಆಕೆ ತನ್ನ ಮೂಮ್ಮಗಳೊಂದಿಗೆ ಹಾಗೆಯೇ ಹಿಂದಿರುಗಿದರು.

ಇದನ್ನೆಲ್ಲಾ ಗಮನಿಸುತ್ತಿದ್ದ ತಂದೆ ತಮ್ಮ ಮಕ್ಕಳನ್ನು ಕರೆದು ಇಲ್ಲಿಯವರೆಗೂ ಆ ಅಜ್ಜಿ ಮೊಮ್ಮಗಳು ನಡೆಸಿದ ವ್ಯಾಪಾರವನ್ನು  ಗಮನಿಸಿದ್ದೀರೀ ಎಂದು ಭಾವಿಸುತ್ತೇನೆ.  ಸುಮಾರು  ಒಂದು ಗಂಟೆಯವರೆಗೆ ನಮ್ಮ ಸಿಬ್ಬಂದಿಯವರು  ಅವರಿಗೆ ತರ ತರಹದ ಸೀರೆಗಳನ್ನು ತೋರಿಸಿದರೂ ಅವರು ಏನನ್ನೂ ಕೊಳ್ಳದೆ ಹಾಗೆ ಹೊರ ನಡೆದಿದ್ದಾರೆ. ಇದರ ಬಗ್ಗೆ ತಮ್ಮ ಅಭಿಪ್ರಾಯವೇನು? ಎಂದರು. ತಂದೆಯವರ ಈ ಮಾತನ್ನು ಕೇಳಿದ ಮೊದಲನೇ ಮಗ, ಅಪ್ಪಾ  ಇದು ಸುಡು ಬೇಸಿಗೆ, ಹೊರಗಡೆ ಬಿಸಿಲಿನ ಝಳ ತಡೆಯುವುದು ನಿಜಕ್ಕೂ ಅಸಹನೀಯವಾದ ಕಾರಣ ಪ್ರಾಯಶಃ ಸ್ವಲ್ಪ ಕಾಲ ತಂಪಾಗಿ ಇರಬಹುದೆಂದು ನಮ್ಮ ಅಂಗಡಿಗೆ ಬಂದಿರ ಬಹುದು. ಅಂಗಡಿಯ ತಂಪಾದ ವಾತಾವರಣದ ಜೊತೆ ತಂಪಾದ ಪಾನೀಯವನ್ನು ಸೇವಿಸಿದ ನಂತರ ಅವರಿಬ್ಬರಿಗೂ ಸಂತೋಷವಾಗಿರಬಹುದು. ಇದೂ ಕೂಡಾ ಒಂದು ರೀತಿಯ ಸಮಾಜ ಸೇವೆಯೇ ಎಂದು ಭಾವಿಸುತ್ತೇನೆ ಎಂದನು.

ಅದಕ್ಕೆ ಎರಡನೇ ಮಗ ಅಪ್ಪಾ, ಅಣ್ಣನ ಮಾತು ಸ್ವಲ್ಪ ಮಟ್ಟಿಗೆ  ಒಪ್ಪುವೆನಾದರೂ ಆಕೆ ಕೇವಲ ಕಾಲ ಕಳೆಯಲು ಬಂದಿರದೆ ನಿಜವಾಗಲೂ ಸೀರೆಗಳನ್ನು ಕೊಳ್ಳಲು ಬಂದಿದ್ದ ಹಾಗಿತ್ತು ಆಕೆಯ ವರ್ತನೆ.  ಅಂಗಡಿಗೆ ಬಂದೊಡನೆ ಆಕೆ ತನ್ನ ಸೆರಗಿನ ಗಂಟಿನಲ್ಲಿ  ಕಟ್ಟಿಟ್ಟಿದ್ದ ದುಡ್ಡನ್ನು ಎಣಿಸಿ ನೋಡಿದ್ದನ್ನು ನಾನು ಕಣ್ಣಾರೆ ಕಂಡೆ.  ಪ್ರತೀ ಬಾರಿ ನಮ್ಮ ಸಿಬ್ಬಂಧಿ ಆಕೆಗೆ ಸೀರೆಗಳನ್ನು ತೋರಿಸಿದಾಗಲೂ ಆಕೆ ಸೀರೆಯನ್ನು ನೋಡುವ ಮೊದಲು  ಸೀರೆಯ ಮೊಬಲಗಿನ ಚೀಟಿಯನ್ನು ನೋಡುತ್ತಿದ್ದಳು. ಹೀಗಾಗಿ  ಬಹುಶಃ ನಮ್ಮ ಅಂಗಡಿಯಲ್ಲಿ ನಮ್ಮ ಸೀರೆಗಳು ಕೇವಲ ಸ್ಥಿತಿವಂತರಿಗೆ ಸೀಮಿತವಾಗಿದ್ದು. ಬಡವರಿಗೆ ಎಟುಕದಿರಬಹುದು. ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಜನ ಸಾಮಾನ್ಯರಿಗೂ ಕೈಗೆಟುಕವ ಬೆಲೆಯಲ್ಲಿ ಲಭ್ಯವಾಗುವ ಸೀರೆಗಳನ್ನೂ ನಮ್ಮ ಅಂಗಡಿಯಲ್ಲಿ ಮಾರಾಟ ಮಾಡುವ ವ್ಯವಸ್ಥೆಯಾಗಬೇಕಿದೆ ಎಂದನು.

ಇವರಿಬ್ಬರಿಗೂ ತದ್ವಿರುದ್ದವಾಗಿ ಮೂರನೆಯ ಮಗ. ಅಪ್ಪಾ, ಇಂದು ಅವರು ನಮ್ಮ ಅಂಗಡಿಯಲ್ಲಿ ಏನನ್ನೂ ಖರೀದಿಸದಿರಬಹುದು. ಆವರು ನಮ್ಮ ಸಿಬ್ಬಂಧಿಯ ಒಂದು ಗಂಟೆಯ ಅವಧಿಯನ್ನು ಹಾಳು ಮಾಡಿರಲೂ ಬಹುದು. ನಮ್ಮ  ಎರಡು ಮೂರು ಲೋಟ ತಂಪು ಪಾನೀಯ ಹಾಗೂ ಕೆಲವು ಬೆಲೂನ್ಗಳು ವೃಥಾ ಖರ್ಚಾಗಿರಲೂ ಬಹುದು.   ಆದರೆ ಖಂಡಿತವಾಗಿಯೂ ಮುಂದೊಂದು ದಿನ ಈ ಎಲ್ಲಾ ಖರ್ಚುಗಳೂ ಸೇರಿ  ಆವರಿಂದ ನಮ್ಮ  ಅಂಗಡಿಗೆ ಖಂಡಿತವಾಗಿಯೂ ಲಾಭ ಆಗಿಯೇ ತೀರುತ್ತದೆ.   ವಯಸ್ಸಾದ ಅಜ್ಜಿಯ ಜೊತೆಗೆ ಆಕೆಯ ಮೊಮ್ಮಗಳು ನಮ್ಮ ಅಂಗಡಿಗೆ ಬಂದಿದ್ದಳು. ಮುಂದೊಂದು ದಿನ ಆಕೆ ದೊಡ್ಡವಳಾದ ಮೇಲೆ ಖಂಡಿತವಾಗಿಯೂ ನಮ್ಮ ಅಂಗಡಿಗೆ ಬಂದು ದೊಡ್ಡ ಮಟ್ಟದ ಖರೀದಿ ಮಾಡಿಯೇ ತೀರುತ್ತಾಳೆ ಏಕೆಂದರೆ  ಗೊತ್ತೋ ಗೊತ್ತಿಲ್ಲದೋ ನಮ್ಮ ಜನ ಯಾವುದೇ ಋಣವನ್ನು ಇಟ್ಟುಕೊಳ್ಳಲು ಬಯಸುವುದಿಲ್ಲ ಎಂದನು.

ತಮ್ಮ ಮೂರು ಮಕ್ಕಳ ಅಭಿಪ್ರಾಯಗಳನ್ನು ತದೇಕ ಚಿತ್ತದಿಂದ ಆಲಿಸುತ್ತಿದ್ದ ಆ ವ್ಯಾಪಾರಸ್ಥರು ಒಂದು ಧೃಡ ನಿರ್ಧಾರಕ್ಕೆ ಬಂದು ತಮ್ಮ ವಕೀಲರನ್ನು ಕರೆಯಿಸಿ ಅವರ ಸಮ್ಮುಖದಲ್ಲಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಈ ರೀತಿಯಾಗಿ ವಿಂಗಡಿಸಿದರು. ಮೊದಲನೇ ಮಗನ ಅಭಿಪ್ರಾಯದಲ್ಲಿ  ವ್ಯಾಪಾರಕ್ಕಿಂತ  ಬಡವರ ಬಗ್ಗೆ ಕನಿಕರ, ದಾನ ಧರ್ಮ ಇತ್ಯಾದಿಗಳು ಹೆಚ್ಚಾಗಿದ್ದರಿಂದ ಆತನಿಗೆ ತಮ್ಮ ಕೃಷಿ, ಹೈನೋದ್ಯಮ, ಗೋಶಾಲೆ ಮತ್ತು ಧಾರ್ಮಿಕ ದತ್ತಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಗಳನ್ನು ವಹಿಸಿದರು.

ಇನ್ನು ಎರಡನೆಯ ಮಗ ಅಂಗಡಿಯ ವ್ಯಾಪಾರದ ಜೊತೆ ಗಿರಾಕಿಗಳ ಹಾವ ಭಾವಗಳು ಮತ್ತು ಮನಸ್ಥಿತಿಯನ್ನರಿತು  ಅದಕ್ಕನುಗುಣವಾಗಿ ತನ್ನ ವ್ಯವಹಾರಗಳನ್ನು  ಶೀಘ್ರವಾಗಿ ಬದಲಿಸ ಬಲ್ಲವನಾದ್ದರಿಂದ ಆತನಿಗೆ ತಮ್ಮ ಶಿಕ್ಷಣ ಸಂಸ್ಘೆಗಳು ಮತ್ತು ಇತರೇ ವ್ಯಾಪಾರಗಳ ಜವಾಬ್ದಾರಿಯನ್ನು ನೀಡಿ, ಕಾಲ ಕಾಲಕ್ಕೆ ತಕ್ಕಂತೆ  ಜನರಿಗೆ ಅವಶ್ಯಕವಾಗಿರುವ  ಉದ್ಯಮಗಳನ್ನು ಮತ್ತು ಶಿಕ್ಷಣ ಸಂಸ್ಥೆಗಳನ್ನು ಜನಸಾಮಾನ್ಯರಿಗೆ ಅನುಕೂಲಕರವಾಗಿ ಅವರ ಕೈಗೆಟುಕುವ ರೀತಿಯಲ್ಲಿ ಪ್ರಾರಂಭಿಸುತ್ತಾ ಜನ ಸೇವೆ, ಜನಾರ್ಧನ ಸೇವೆಯನ್ನು ಮುಂದುವರಿಸಲು ಸೂಚಿಸಿದರು.

ಇನ್ನು ಮೂರನೆಯ ಮಗ  ಕೇವಲ ಇಂದಿನ ವ್ಯಾಪಾರಕ್ಕೇ ದುರಾಲೋಚಿಸದೆ, ಮುಂದಿನ ಹಲವಾರು ವರ್ಷಗಳಿಗೂ ಮುಂದುವರಿಸಿಕೊಂಡು ಹೋಗುವ ದೂರಾಲೋಚನೆ ಉಳ್ಳವನಾದ್ದರಿಂದ ಆತನಿಗೆ ತಮ್ಮ ವ್ಯವಹಾರದ ಬದಲು ರಾಜಕಾರಣದಲ್ಲಿ ಮುಂದುವರೆಯಲು ಸೂಚಿಸಿ, ತನ್ನ ಕುಶಾಗ್ರಮತಿಯಿಂದ  ನಮ್ಮ ದೇಶ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಧಾರ್ಮಿಕವಾಗಿ ಸದಾ ಸುಸ್ಥಿಯಲ್ಲಿಡುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿ ನಿರಾಳವಾಗಿ ರಾಮ, ಕೃಷ್ಣ , ಗೋವಿಂದ ಎನ್ನುತ್ತಾ ಭಗವಂತನ ನಾಮ ಸ್ಮರಣೆ ಮಾಡುತ್ತಾ ತಮ್ಮ ವಿಶ್ರಾಂತ ಜೀವನ ನಡೆಸ ತೊಡಗಿದರು.

ಎಲ್ಲರೂ ಇಂತಹ ತಂದೆಯಂತೆ  ತಮ್ಮ ಮಕ್ಕಳ ಅರ್ಹತೆಗೆ ಅನುಗುಣವಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಕೆಲಸಕ್ಕೆ ಹಚ್ಚಿದಲ್ಲಿ ಮಕ್ಕಳೂ ಕೂಡ ತಮ್ಮ ಆಸಕ್ತಿಕರ ವಿಷಯದಲ್ಲಿ ಗಂಭೀರವಾಗಿ ಆಧ್ಯಯನ ನಡೆಸಿ ಸ್ವಾಮಿ ಕಾರ್ಯ ಮತ್ತು ಸ್ವಕಾರ್ಯಗಳಲ್ಲಿ  ಅತ್ಯುತ್ತಮವಾಗಿ  ಮುಂದುವರೆಯಬಲ್ಲರು. ಆದರೆ ಇದನ್ನರಿಯದ ಬಹಳಷ್ಟು ಪೋಷಕರು ತಮ್ಮ ಇಚ್ಚೆಯನ್ನು ಮಕ್ಕಳ ಮೇಲೆ ಹೇರುತ್ತಿರುವುದು ವಿಪರ್ಯಾಸವೇ ಸರಿ

ಏನಂತೀರೀ?

ಸ್ವಾಮಿ ಭಕ್ತಿ ಮತ್ತು ಕರ್ತ್ಯವ್ಯ ನಿಷ್ಠೆ

ಅದೊಂದು ದೊಡ್ಡನಗರ ಅಲ್ಲೊಂದು ಬಾರೀ ವ್ಯವಹಾರಸ್ಥರ ಮನೆ.  ಅವರ ವ್ಯವಹಾರ ಇಡೀ ಪ್ರಪಂಚಾದ್ಯಂತ ಹರಡಿದ್ದು ಕುಟುಂಬದ ಯಜಮಾನರು ಸದಾ ಕಾಲ ದೇಶ ವಿದೇಶಗಳನ್ನು ಸುತ್ತುತ್ತಿದ್ದು, ಅಗೊಮ್ಮೆ ಈಗೊಮ್ಮೆ  ಕುಟುಂಬದೊಡನೆ ಕಾಲ ಕಳೆಯುತ್ತಿದ್ದದ್ದು ಸಹಜ ಪ್ರಕ್ರಿಯೆಯಾಗಿತ್ತು. ಅದೊಂದು ದಿನ ಯಾವುದೋ ಕೆಲಸದ ನಿಮಿತ್ತ  ಉದ್ಯೋಗಪತಿಗಳು ಪರ ಊರಿಗೆ ಹೊರಡಲು ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಹಾಗಾಗಿ  ಬೆಳ್ಳಂಬೆಳಿಗ್ಗೆಯೇ  ತಮ್ಮ ಮನೆಯಿಂದ ಹೊರಡಲು ಅನುವಾಗಿ ತಮ್ಮ ಕಾರನ್ನೇರಿ ಹೊರಟು ಮನೆಯ ಮುಂಬಾಗಿಲಿಗೆ ಬಂದಾಗ ಅವರ ಮನೆಯ ರಾತ್ರಿಯ ಪಾಳಿಯ ಕಾವಲುಗಾರ ಎಂದಿನಂತೆ ಪ್ರೀತಿಯಿಂದ ನಮಸ್ಕರಿಸಿ ಅಯ್ಯಾ, ನೀವು ಏನೂ ತಿಳಿಯದಿದ್ದರೆ  ಈ ದಿನದ ಪ್ರಯಾಣವನ್ನು ನೀವು ದಯವಿಟ್ಟು ಮಂದೂಡಬಹುದೇ? ಯಾಕೋ ಏನೋ ನನ್ನ ಮನಸ್ಸು ಈ ದಿನ ನಿಮಗೆ ಆಶುಭಕರ ಮತ್ತು ನಿಮಗೊಂದು ಅವಗಡ ಇದ್ದು ಪ್ರಾಣಪಾಯವಿದೆ ಎಂದು ಸೂಚಿಸುತ್ತಿದೆ. ನಿಮ್ಮ  ತಂದೆಯವರ ಕಾಲದಿಂದಲೂ ಈ ಮನೆಯ ನಿಷ್ಠಾವಂತ ಸೇವಕನಾಗಿದ್ದೇನೆ. ನಿಮ್ಮ ಮನೆಯ ಋಣ ನನ್ನ ಮೇಲಿದೆ.  ನಿಮ್ಮನ್ನು ಚಿಕ್ಕಂದಿನಿಂದಲೂ ಎತ್ತಿ ಆಡಿಸಿರುವ ಸಲಿಗೆಯಿಂದ ಈ ಮಾತನ್ನು  ಹೇಳುತ್ತಿದ್ದೇನೆ. ದಯವಿಟ್ಟು ಒಮ್ಮೆ ಯೋಚಿಸಿ ನೋಡಿ ಎಂದು ಪರಿ ಪರಿಯಾಗಿ ಬೇಡಿಕೊಂಡಾಗ,  ಅತ್ಯಂತ ಮಹತ್ತರವಾದ  ಕೆಲಸವಿದ್ದೂ ಅನಿವಾರ್ಯವಾಗಿ ಖುದ್ದಾಗಿ ಹೋಗಲೇಬೇಕಾದ ಪರಿಸ್ಥಿತಿ ಇದ್ದರೂ ಸಹಾ ಆ ಹಿರಿಯರ ಮಾತನ್ನು ಅಲ್ಲಗಳಿಯಲಾಗದೆ, ಆ ಸಮಯದಲ್ಲಿ ತಮ್ಮ ಸಹಾಯಕರಿಗೆ ಕರೆಮಾಡಿ, ತಮ್ಮ ಪ್ರವಾಸವನ್ನು ಮುಂದೂಡಲು ಸೂಚಿಸಿ ಮರಳಿ ಮನೆಯ ಒಳಗೆ ಹೋದದ್ದನ್ನು ನೋಡಿದ ಆ ಕಾವಲುಗಾರರಿಗೆ ಒಂದು ರೀತಿಯ ನೆಮ್ಮದಿ. ಅಷ್ಟು ದೊಡ್ಡ ವ್ಯವಹಾರಸ್ಥರು ತಮ್ಮ ಮಾತಿಗೆ ಓಗಟ್ಟಿದ್ದು ಅವರಿಗೆ ಹೆಮ್ಮೆಯಾಗಿ, ಅವರ ಇಡೀ ಕುಟುಂಬವು ಚೆನ್ನಾಗಿರಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತಾ, ಬೆಳಕು ಹರಿದ ನಂತರ ತಮ್ಮ ಪಾಳಿ ಮುಗಿಸಿ ಮತ್ತೊಬ್ಬ  ಕಾವಲುಗಾರರಿಗೆ ತಮ್ಮ ಕೆಲಸವನ್ನು ಒಪ್ಪಿಸಿ ತಮ್ಮ ಮನೆಗೆ ಮರಳಿದ್ದರು. ಇತ್ತ ತಮ್ಮ ಪ್ರವಾಸ ಅಚಾನಕ್ಕಾಗಿ ರದ್ದಾದ ಪ್ರಯುಕ್ತ ಮನೆಯಲ್ಲಿಯೇ ಇದ್ದ ಯಜಮಾನರು ಬೆಳಗಿನ ಉಪಹಾರ ಸೇವಿಸುತ್ತಾ ಟಿವಿಯಲ್ಲಿ ವಾರ್ತೆಗಳನ್ನು ನೋಡುತ್ತಿರುವಾಗ ಅವರ ಟಿವಿಯ ಪರದೆಯ ಮೇಲೆ ಬಂದ ಫ್ಲಾಷ್ ನ್ಯೂಸ್ ಅವರನ್ನು ಒಂದು ಕ್ಷಣ ದಿಗ್ರ್ಭಮೆ ಮಾಡಿಸಿತು. ಕೈಯಲ್ಲಿದ್ದ  ತಿಂಡಿಯ ತಟ್ಟೆ ತಮಗರಿವಿಲ್ಲದಂತೆಯೇ ನೆಲಕ್ಕೆ ಬಿದ್ದು ಜೋರಾಗಿ ಶಬ್ಧಮಾಡಿದಾಗ,  ಆ ಶಬ್ಧಕ್ಕೆ ಬೆದರಿ ಮನೆಯಲ್ಲಿದ್ದವರೆಲ್ಲರೂ ಊಟದ ಕೋಣೆಗೆ ಬಂದು ಏನಾಯ್ತು ಎಂದು ಕೇಳಿದಾಗಲೇ ಅವರು ವಾಸ್ತವ ಪ್ರಪಂಚಕ್ಕೆ ಮರಳಿದ್ದದ್ದು.  ಅಲ್ಲಿಯೇ ಇದ್ದ ತಮ್ಮ ತಾಯಿ ತಂದೆಯವರ ಕಾಲಿಗೆ ಬಿದ್ದು ನಮಸ್ಕರಿಸಿ ತಮ್ಮ  ಮಡದಿ ಮತ್ತು ಮಕ್ಕಳನ್ನು ಬಾಚಿ ತಬ್ಬಿಕೊಂಡು ಗಳಗಳನೆ ಕಣ್ಣಿರಧಾರೆ ಹರಿಸಿದಾಗಲೂ ಮನೆಯವರಿಗೆ ಏನಾಗುತ್ತಿದ್ದೆ  ಎಂಬುದರ ಅರಿವಿಲ್ಲದ್ದಾಗಿತ್ತು. ಸ್ವಲ್ಪ ಕ್ಷಣದ ನಂತರ ಸಾವರಿಸಿಕೊಂಡು  ಬಚ್ಚಲು ಮನೆಗೆ ಹೋಗಿ  ಕೈಕಾಲು ಮುಖವನ್ನು ತೊಳೆದುಕೊಂಡು ಶುಭ್ರರಾಗಿ ದೇವರ ಮನೆಗೆ ಬಂದು ದೇವರಿಗೆ ಒಂದು ದೀರ್ಘದಂಡ ನಮಸ್ಕಾರಗಳನ್ನು ಹಾಕಿ. ಭಗವಂತ ನಿನ್ನ ಲೀಲೆ ಅಪಾರ. ನೀನಿಂದು ನನ್ನ  ಜೀವವನ್ನು ಉಳಿಸಿದೆ ಎಂದು ಜೋರಾಗಿ ಹೇಳಿದಾಗ ಮನೆಯವರೆಲ್ಲರಿಗೂ ಪರಮಾಶ್ವರ್ಯ.  ಕೆಲಸದ ನಿಮಿತ್ತ ಪ್ರವಾಸಕ್ಕೆ ಹೋಗಬೇಕಿದ್ದವರು ಯಾರಿಗೂ ಹೇಳದಂತೆ ಪ್ರವಾಸವನ್ನು ರದ್ದು ಪಡಿಸಿ ಈ ರೀತಿಯಾಗಿ ಪರಿತಪಿಸುತ್ತಿರುವುದು ಮನೆಯವರಿಗೆಲ್ಲರಿಗೂ ಒಂದು ಕ್ಷಣ ಆಶ್ವರ್ಯತಂದಿತ್ತಾದರೂ ಅವರ ಬಾಯಿಯಿಂದಲೇ ಜೀವ ಉಳಿಯಿತಲ್ಲಾ ಎಂಬ ಮಾತನ್ನು ಕೇಳಿ ಮನೆಯವರೆಲ್ಲರೂ ಕೊಂಚ ನಿರಾಳರಾಗಿ ಎಲ್ಲರೂ ಒಟ್ಟಿಗೆ ಕುಳಿತು ವಿಚಾರವೇನು ಎಂದು ಕೇಳಲು,  ಅವರು ಟಿವಿಯ  ವಾರ್ತೆಯಲ್ಲಿ ಬಿತ್ತರವಾಗುತ್ತಿದ್ದ  ವಿಮಾನದ  ಅಪಘಾತದ ಸುದ್ದಿಯನ್ನು  ತೋರಿಸಿ, ತಾನೂ ಕೂಡಾ ಇಂದು  ಕೆಲಸದ ನಿಮಿತ್ತ  ಅದೇ ವಿಮಾನದಲ್ಲಿ ಪ್ರಯಾಣಿಸಬೇಕಾಗಿದ್ದು ರಾತ್ರಿಯ ಪಾಳಿಯ ಕಾವಲುಗಾರರ ಸಲಹೆಯ ಮೇರೆಗೆ ಪ್ರವಾಸ ರದ್ದು ಪಡಿಸಿದ ಕಾರಣ ತನ್ನ ಜೀವ ಉಳಿಯಿತೆಂದು ಹೇಳಿದಾಗ ಮನೆಯವರೆಲ್ಲರಿಗೂ ಸಂಭ್ರಮದ ಕ್ಷಣ ಮತ್ತು ಆ ಕಾವಲುಗಾರ ಮೇಲೆ ಒಂದು ರೀತಿಯ ಮಮಕಾರ. ತಮ್ಮ ಮಗನ ಜೀವವನ್ನು ಉಳಿಸಿದ ಆ ಕಾವಲುಗಾರನಿಗೆ  ಸೂಕ್ತ ರೀತಿಯಲ್ಲಿ ಸತ್ಕರಿಸ ಬೇಕೆಂದು  ಆಲೋಚಿಸಿ ಈ ಕೂಡಲೇ ಮನೆಗೆ ಬರಬೇಕೆಂದು ಆವರಿಗೆ ಕರೆ ಮಾಡಿಸಿದಾಗ ಆ ಕಾವಲುಗಾರನಿಗೆ ಒಂದು ರೀತಿಯ ಅಚ್ಚರಿ. ಆಗ ತಾನೆ ಕೆಲಸ ಮುಗಿಸಿ ಮನೆಗೆ ಬಂದು ವಿರಮಿಸುತ್ತಿದ್ದ  ಕಾವಲುಗಾರರಿಗೆ, ಎಂದು ಕರೆಯದ ಮನೆಯ ಹಿರಿಯರು  ಯಾವುದೇ ವಿಷಯ ತಿಳಿಸಿದೇ ಈ ಕೂಡಲೇ ತುರ್ತಾಗಿ ಬರಲು ತಿಳಿಸಿರುವ ಕಾರಣವಾದರೂ ಏನೂ? ತನ್ನಿಂದ ಏನಾದರೂ ತಪ್ಪಾಗಿದೆಯೇ ಎಂದು ಯೋಚಿಸುತ್ತಾ ,  ತಮ್ಮ ಮಡದಿಗೆ ದೊಡ್ಡವರು ಬರಲು ಹೇಳಿರುವ ವಿಚಾರ ತಿಳಿಸಿ ಭಯದಿಂದಲೇ ಕೆಲಸದ ಮನೆಗೆ ಬಂದಾಗ ಮನೆಯವರೆಲ್ಲರೂ ಅವರನ್ನು  ಆದರದಿಂದ ಬರಮಾಡಿಕೊಂಡಿದ್ದು ಅವರಿಗೆ ಕಸಿವಿಸಿಯಾಯಿತು. ಮನೆಯ ಹಿರಿಯರು ಆ ಕಾವಲುಗಾರರ ಕೈ ಹಿಡಿದು, ನಿಮ್ಮಿಂದ ಇಂದು ಮಹದುಪಕಾರವಾಯಿತು. ಭಗವಂತನ ರೂಪದಲ್ಲಿ ಬಂದು ತಮ್ಮ ಮಗನ ಪ್ರವಾಸವನ್ನು ರದ್ದು ಪಡಿಸಿ ತಮ್ಮ ಮಗನ ಜೀವವನ್ನು ವಿಮಾನಾಪಘಾತದಿಂದ ಪಾರುಮಾಡಿದ್ದನ್ನು ವಿವರಿಸಿ ಅವರಿಗೆ ಹಣ್ಣು ಹಂಪಲಿನ ಬುಟ್ಟಿಯ ಜೊತೆಗೆ ಒಂದು ದೊಡ್ಡ ಮಟ್ಟದ ನಗದನ್ನು ಉಡುಗೊರೆಯಾಗಿ ನೀಡಿದಾಗ ಅದನ್ನು ನಯವಾಗಿ ತಿರಸ್ಕರಿಸಿ, ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಲ್ಲವೂ ಭಗವಂತನ ಕೃಪೆ. ನಿಮ್ಮ ಮನೆಯ ಉಪ್ಪುಂಡ ಋಣ ನನ್ನ ಮೇಲಿದೆ. ನನ್ನ ಸ್ವಾಮಿನಿಷ್ಠೆ ಸದಾಕಾಲವೂ ನಿಮ್ಮ ಮನೆಯವರ ಮೇಲಿದ್ದು ನನ್ನ ಕರ್ತವ್ಯ ನಾನು ಪಾಲಿಸಿದ್ದೇನೆ. ಅದಕ್ಕೆ ನೀವು ಪ್ರತೀ ತಿಂಗಳು ಸಂಬಳ ಕೊಡುತ್ತಿದ್ದೀರಿ ಹಾಗಾಗಿ  ಹಣ್ಣುಗಳನ್ನು ತಿರಸ್ಕರಿವುದು ಒಳ್ಳೆಯ ಸಂಪ್ರದಾಯವಲ್ಲದ ಕಾರಣ, ಹಣ್ಣುಗಳನ್ನು ಮಾತ್ರ ತೆಗೆದುಕೊಳ್ಳುತ್ತೀನಿ. ದಯವಿಟ್ಟು ಹಣ ನನಗೆ ಬೇಡ ಎಂದರು.  ಆ ಕಾವಲುಗಾರರ ಸುಸಂಸ್ಕೃತಿಯನ್ನು ಹೊಗಳಿದರಾದರೂ ಮಗನ ಪ್ರಾಣವನ್ನು  ಉಳಿಸಿದವರಿಗೆ ಏನಾನ್ನಾದರೂ ಕೊಡಲೇ ಬೇಕೆನ್ನುವುದು  ನಮ್ಮ ಸಂಸ್ಕಾರ ಎಂದು ತಿಳಿಸಿ ಆ ಕಾಣಿಕೆಯನ್ನು ಸ್ವೀಕರಿಸಲೇ ಬೇಕೆಂದು ಆಗ್ರಹಿಸಿದರು. ಮನೆಯವರ ಒತ್ತಾಯ ಫೂರ್ವಕ ಆಗ್ರಹವನ್ನು ಒಲ್ಲದ ಮನಸ್ಸಿನಿಂದಲೇ ಪರಿಗಣಿಸಿ ಫಲ ಪುಷ್ಪಗಳೊಡನೆ ಕಾಣಿಕೆಯನ್ನು ಸ್ವೀಕರಿಸಿ ಮನೆಯವರೆಲ್ಲರಿಗೂ ವಂದಿಸಿ ತಮ್ಮ ಮನೆಗೆ ಮರಳಿದ್ದರು ಆ ಕಾವಲುಗಾರರು.

ಹಾಗೆಯೇ ಕೆಲ ತಿಂಗಳುಗಳು ಕಳೆದು, ಮನೆಯವರ ವ್ಯವಹಾರಗಳು ಇನ್ನಷ್ಟೂ  ಹೆಚ್ಚಾಗಿ ಎಲ್ಲರೂ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾಗ, ಅಂದೊಂದು ದಿನ ಮುಂಜಾನೆಯೇ  ವಿಮಾನ ಪ್ರಯಾಣ ಮಾಡುವ ಸುದ್ದಿ ತಿಳಿದ ಕಾವಲುಗಾರರು ಮತ್ತೊಮ್ಮೆ ತಮ್ಮ ಯಜಮಾನರ ಬಳಿ ಬಂದು ಈ ದಿನ ನೀವು ಪ್ರವಾಸ ಮಾಡುವುದು ಉಚಿತವಲ್ಲ ಎಂದು ಹೇಳಿದಾಗ ಕಳೆದ ಸಾರಿಯ ಅನುಭವವಿದ್ದ ಕಾರಣ ಹೆಚ್ಚೇನೂ ಮಾತನಾಡದೇ ತಮ್ಮ ಪ್ರವಾಸವನ್ನು ಮುಂದೂಡಿ ಸ್ವಲ್ಪ ಸಮಯದ ನಂತರ ಟಿವಿಯಲ್ಲಿ ಅವರು ಪ್ರಯಾಣ ಮಾಡಬೇಕಿದ್ದ ವಿಮಾನ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟಿದ್ದು ಎಲ್ಲಾ ಪ್ರಯಾಣಿಕರ ಪ್ರಣಾಪಾಯವಿರುವ ಸುದ್ದಿ ತಿಳಿದು ಮತ್ತೊಮ್ಮೆ ತಮ್ಮ ಪ್ರಾಣ ಉಳಿಸಿದ ಕಾವಲುಗಾರನನ್ನು  ಮನಸ್ಸಿನಲ್ಲಿಯೇ ನೆನೆದು ಸಂತೋಷಪಟ್ಟು ಆತನನ್ನು ಈ ಕೂಡಲೇ ಮನೆಗೆ ಬರಲು ಹೇಳಿ ಕಳುಹಿಸಿದರು.   ಮತ್ತೊಮ್ಮೆ ತನ್ನ ಕೆಲಸದ ಮನೆಯ ಯಜಮಾನರು ತುರ್ತಾಗಿ ಬರಲು ತಿಳಿಸಿರುವುದನ್ನು ಕೇಳಿ, ಈ ದಿನ ಮುಂಜಾನೆ ತಾವು ಅವರ ಪ್ರವಾಸವನ್ನು ರದ್ದು ಪಡಿಸಿದ್ದರ ಪ್ರಭಾವೇ ಇರಬೇಕೆಂದು ಯೋಚಿಸಿ, ವಿಷಯವೇನೆಂದು ತಿಳಿಯಲು ಒಮ್ಮೆ ಟಿವಿಯಲ್ಲಿ ವಾರ್ತೆಗೆಳನ್ನು ನೋಡಿದಾಗ ವಿಮಾನ ಅಪಹರಣವಾಗಿದ್ದ ಸುದ್ದಿ ಕೇಳಿ ಮತ್ತೊಮ್ಮೆ ತಮ್ಮ ಯಜಮಾನರ ಪ್ರಾಣ ಕಾಪಾಡಿದ್ದಕ್ಕೆ ಹೆಮ್ಮೆಯಾಯಿತು.  ಲಕ್ಷ್ಮಿ ಚಂಚಲೆ. ಒಂದು ಸಾರಿ ಅನಾಯಾಸವಾದ  ದುಡ್ಡನ್ನು  ನೋಡಿದ ಕೂಡಲೇ ಮನುಷ್ಯರ ಮನಸ್ಥಿತಿ ಬದಲಾಗುವುದು ಜಗದ ನಿಯಮ ಎನ್ನುವ ಹಾಗೆ ಕಳೆದ ಬಾರಿ ಪ್ರಾಣ ಉಳಿಸಿದಾಗ ಭಾರೀ ಮೊತ್ತದ ಕಾಣಿಕೆ ನೀಡಿದ್ದ ಯಜಮಾನರು ಈಗ ಮತ್ತೊಮ್ಮೆ ಕರೆದಿರುವ ಕಾರಣ ಅವರ ಬಹುಮಾನದ ನಿರೀಕ್ಷೆ  ಹೆಚ್ಚಾಗಿ, ಅವರ ಕೊಡುವ ಹಣದಿಂದ ಮನೆಯವರಿಗೆ, ಯಾರು ಯಾರಿಗೆ  ಏನೆಲ್ಲಾ ಖರೀದಿಸಬೇಕು ಎಂದು ಮನಸಿನಲ್ಲಿಯೇ  ಮಂಡಿಗೆ ಹಾಕುತ್ತಾ ಸಂತೋಷದಿಂದ ತಮ್ಮ ಕೆಲಸದ ಮನೆಗೆ ಬಂದರು. ಯಥಾ ರೀತಿಯಾಗಿ ಸಂಭ್ರಮದಿಂದಲೇ ಮಾತನಾಡಿಸಿದ ಮನೆಯವರು ಅವರನ್ನು ಕುಳ್ಳರಿಸಿ ಮತ್ತೊಮ್ಮೆ ಪ್ರಾಣಾಪಾಯದಿಂದ ಪಾರು ಮಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿ  ಮತ್ತದೇ ರೀತಿಯಾಗಿ ಫಲಪುಷ್ಪಗಳ ಜೊತೆ ಒಂದು ಲಕೋಟೆಯನ್ನಿರಿಸಿ ಅವರ ಕೈಗಿತ್ತಿದ್ದರು. ಕಳೆದ ಬಾರಿ ಉಡುಗೊರೆ ಬೇಡವೆಂದಿದ್ದರೂ ಈ ಬಾರಿ ಭಾರೀ ಮೊತ್ತದ  ಬಹುಮಾನದ  ನಿರೀಕ್ಷೆಯಲ್ಲಿದ್ದ ಕಾರಣ ಆ ಕೂಡಲೇ  ತಮ್ಮ ಯಜಮಾನರ ಸನ್ನಿಧಿಯಲ್ಲಿಯೇ ಲಕೋಟೆಯನ್ನು ಲಗು ಬಗನೆ ತೆಗೆದು ನೋಡಿದಾಗ ಅವರ ಎದೆ ಧಸಕ್ಕೆಂದು ಒಂದು ಕ್ಷಣ ತಮ್ಮನ್ನೇ ತಾವು ನಂಬಲಾಗದೇ ನಿಂತಲ್ಲೇ ಕುಸಿದು ಬಿದ್ದರೂ, ಕೂಡಲೇ ಸಾವರಿಸಿಕೊಂಡು ಇದೇನು ಯಜಮಾನರೇ ತಾವು ಈಬಾರಿ ಹೀಗೇಕೆ  ಮಾಡಿದಿರಿ? ಮತ್ತೊಮ್ಮೆ ಜೀವ ಉಳಿಸಿದರೂ ಈ ಬಡಪಾಯಿಯ ಜೀವದ  ಮೇಲೆ ಬರೆಯನ್ನೇಕೆ ಎಳೆದಿರಿ? ತಾನು ಮಾಡಿದ ತಪ್ಪಾದರೂ ಏನು ಎಂದು ತಿಳಿಸಿ ಎಂದಾಗ. ನಿಧಾನವಾಗಿ ಅವರ ಮೈತಡವಿ ಅವರನ್ನು ಅಲ್ಲಿಯೇ ಕುಳ್ಳರಿಸಿದ ಯಜಮಾನರು, ನೀವು ಮತ್ತೊಮ್ಮೆ ನಮ್ಮ ಮಗನ ಜೀವ ಉಳಿಸಿದ್ದಕಾಗಿ ನಮ್ಮ ಇಡೀ ಕುಟುಂಬ ನಿಮಗೆ ಆಜೀವ ಪರ್ಯಂತ ಋಣಿಗಳಾಗಿರುತ್ತೇವೆಯಾದರೂ, ಇನ್ನು ಮುಂದೆ ರಾತ್ರಿಯಪಾಳಿಯ ಕಾವಲುಗಾರಗಾಗಿ ನಿಮ್ಮ  ಸೇವೆ ನಮ್ಮ ಕುಟಂಬಕ್ಕೆ ಅವಶ್ಯಕತೆ ಇಲ್ಲದ ಕಾರಣ ನಿಮ್ಮನ್ನು ಕೆಲಸದಿಂದ ತೆಗೆಯುತ್ತಿರುವ ಪತ್ರವನ್ನು ನಿಮಗೆ ಕೊಟ್ಟಿದ್ದೇವೆ. ಅನ್ಯಥಾ ಭಾವಿಸದಿರಿ.  ಮಧ್ಯಾಹ್ನದ ನಂತರ ಕಛೇರಿಗೆ ಬಂದು ನಿಮ್ಮ ಇಷ್ಟು ದಿನದ ಕೆಲಸ ಮಾಡಿದ್ದಕ್ಕೆ ಸಲ್ಲಬೇಕಾದ ಎಲ್ಲಾ ರೀತಿಯ ಭತ್ಯೆಗಳನ್ನು ಪಡೆದುಕೊಂಡು ಹೋಗಿ ಎಂದು ತಿಳಿಸಿ ಮಧ್ಯಾಹ್ನ ಕಛೇರಿಯಲ್ಲಿ ಭೇಟಿಯಾಗೋಣ ಎಂದು ತಿಳಿಸಿ ಹೊರಟೇ ಬಿಟ್ಟರು.

ಅಪ್ಪಾ ತಂದೇ ಭಗವಂತಾ!! ಇದೆಂತಹ ಶಿಕ್ಷೆ ಕೊಟ್ಟೆಯಪ್ಪಾ? ಇದ್ದೊಂದು ಕೆಲಸವನ್ನೂ ಕಿತ್ತು ಕೊಂಡೆಯಲ್ಲಪ್ಪಾ?  ಮದುವೆ ವಯಸ್ಸಿಗೆ ಬಂದು ಬೆಳೆದು ನಿಂತಿರುವ ಮಗಳಿದ್ದಾಳಪ್ಪಾ!! ಮಗ ಈಗಷ್ಟೇ ಓದು ಮುಗಿಸಿ ಮುಂದಿನ ಭವಿಷ್ಯ ರೂಪಿಸಿ ಕೊಳ್ಳುವ ಭರದಲ್ಲಿದ್ದಾನಪ್ಪಾ!! ಈ ಇಳಿ ವಯಸ್ಸಿನಲ್ಲಿ ನನಗೆ ಯಾರು ಕೆಲಸ ಕೊಡುತ್ತಾರಪ್ಪಾ!!  ಈ ದುಬಾರೀ ಕಾಲದಲ್ಲಿ  ಇನ್ನು ಮುಂದೆ ಜೀವನ ನಡೆಸುವುದು ಹೇಗಪ್ಪಾ?  ಎಂದು ಭಗವಂತನನ್ನು ಮನದಲ್ಲಿಯೇ ನೆನೆಸಿಕೊಳ್ಳುತ್ತಾ , ತಮ್ಮ ಹಣೆಯ ಬರಹವನ್ನು ತಾವೇ ಹಳಿದುಕೊಳ್ಳುತ್ತಾ ಹುಟ್ಟಿಸಿದ ದೇವರು ಹುಲ್ಲನ್ನು ಮೇಯಿಸುವುದಿಲ್ಲಾ ಎನ್ನುವ ಭರವಸೆಯೊಂದಿಗೆ ಮಧ್ಯಾಹ್ನ  ತಮ್ಮ ಇಷ್ಟು ದಿನದ ಸೇವಾವಧಿಗೆ ಬರಬೇಕಿದ್ದ ಹಣವನ್ನು ಪಡೆಯಲು ಕಛೇರಿಗೆ ಹೋದಾಗ ಅವರಿಗೆ ಮತ್ತೊಂದು ಮಹದಾಶ್ವರ್ಯ ಕಾದಿತ್ತು.

ಕಛೇರಿಗೆ ಕಾಲಿಟ್ಟೊಡನೆಯೇ ಕಛೇರಿಯ ಸಿಬ್ಬಂಧಿಯೆಲ್ಲರೂ ಎರಡನೇ ಬಾರಿಗೆ ತಮ್ಮ ಯಜಮಾನರ ಜೀವವನ್ನು ಉಳಿದ ಬಗೆಯನ್ನು ಪರಿ ಪರಿಯಾಗಿ ಕೊಂಡಾದುತ್ತಿದ್ದರೂ ಇವರ ಮುಖದಲ್ಲಿ ಮಾತ್ರ ಕೊಂಚವೂ ನಗೆಯಿರದೆ ಇದ್ದ ಕೆಲಸಕ್ಕೆ ತಾನೇ ಕೈಯ್ಯಾರೆ ಗೋರಿ ತೋಡಿಕೊಂಡೆನಲ್ಲಾ.  ತನ್ನ ಪಾಡಿಗೆ ಸುಮ್ಮನಿದ್ದಿದ್ದರೆ ತಮ್ಮ ಕೆಲಸವೂ ಉಳಿದಿರುತ್ತಿತ್ತು. ಯಜಮಾನರ ಹಣೆಯಲ್ಲಿ ಬ್ರಹ್ಮ ಬರೆದ ವಿಧಿಯಂತೆ ಆಗುತ್ತಿತ್ತು ಎಂದು ಮನದಲ್ಲಿ  ನೆನೆಯುತ್ತಾ ಯಜಮಾನರ ಕರೆಯ ನಿರೀಕ್ಷೆಯಲ್ಲಿದ್ದಾಗ  ತಮ್ಮ ಸಹೋದ್ಯೋಗಿಯೊಬ್ಬರು ಯಜಮಾನರು ನಿಮ್ಮನ್ನು  ಭೇಟಿಯಾಗಲು ಕಾಯುತ್ತಿದ್ದಾರೆ ಬನ್ನಿ ಹೋಗೋಣ ಎಂದಾಗಲೇ ವಾಸ್ತವ ಪ್ರಪಂಚಕ್ಕೆ ಮರಳಿ ಅವರನ್ನು ಹಿಂಬಾಲಿಸಿದರು. ಯಜಮಾನರ ವಿಶಾಲ ಕೊಠಡಿಗೆ ಕಾಲಿಟ್ಟ ಕೊಡಲೇ ಮುಗಿಲು ಮುಟ್ಟುವ ಹಾಗೆ ಜೊರಾದ  ಚಪ್ಪಾಳೆ ಸದ್ದು  ಅವರನ್ನು ಆಶ್ಚರ್ಯ ಚಕಿತರನ್ನಾಗಿಸಿತ್ತು. ಅವರು ಬರುವ ಮುನ್ನವೇ ಪೂರ್ವ ಸಿದ್ಧತೆಂತೆ ಯಜಮಾನರಾದಿಯಾಗಿ  ಕಛೇರಿಯ ಬಹುತೇಕ ಸಿಬ್ಬಂಧಿ  ಅಲ್ಲಿದ್ದು ಅವರ ಬರುವಿಗೇ ಕಾಯುತ್ತಿದ್ದು ಅವರ ಸೇವೆಯನ್ನು ಕೊಂಡಾಡಿ ಅವರಿಗೆ ಹಾರ ತುರಾಯಿಗಳನ್ನು ಹಾಕಿ ಸನ್ಮಾನಿಸಿ ಮತ್ತೊಮ್ಮೆ ಫಲ ಪುಷ್ಗಗಳೊಂದಿಗೆ  ಎರೆಡು ಲಕೋಟೆಗಳನ್ನು ಕೊಟ್ಟು ಅದನ್ನು  ಆ ಕೂಡಲೇ ಅಲ್ಲಿಯೇ ನೋಡಲು ತಿಳಿಸಿದರು. ಎಲ್ಲರ ಆದರಾತಿತ್ಯಗಳಿಂದ ಮನಸ್ಸಂತೋಷಗೊಂಡಿತಾದರೂ ಕೆಲಸ ಹೋದ ದುಃಖದಲ್ಲಿ ಒಲ್ಲದ ಮನಸ್ಸಿನಿಂದ ಕೈಯಲ್ಲಿದ್ದ ಲಕೋಟೆಯನ್ನು ತೆಗೆದು ನೋಡಿದಾಗ ಎಲ್ಲಾ ದುಃಖಗಳೂ ಒಮ್ಮಿಂದೊಮ್ಮೆಲೆ ಮಾಯವಾಗಿ ತಮಗೇ ಅರಿವಿಲ್ಲದಂತೆಯೇ ತಮ್ಮ ಯಜಮಾನರಿಗೆ ಕೈ ಮುಗಿದು  ಕಾಲಿಗೆ ಎರಗಲು ಅನುವಾದಾಗ ಅದನ್ನು ತಡೆದ ಯಜಮಾನರು ಅವರನ್ನು ಆಲಂಗಿಸುತ್ತಾ , ಅವರನ್ನು ಅಲ್ಲಿಯೇ ಕುಳ್ಳರಿಸಿ ಎಲ್ಲರನ್ನು ಉದ್ದೇಶಿಸಿ ಮಾತಾನಾಡುತ್ತಾ , ಶ್ರೀಯುತರ *ಸ್ವಾಮಿಭಕ್ತಿಯನ್ನು ಅಪಾರವಾಗಿ ಕೊಂಡಾಡಿ* ಎಲ್ಲರೂ ಅದನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದಾಗ, ಶ್ರೀಯುತರ ಮನಸ್ಸು ನಿರಾಳವಾಗಿ, ಅವರ ಆನಂದಕ್ಕೆ  ಪಾರವೇ ಇಲ್ಲದೇ ಕಣ್ಣಿನಿಂದ ಆನಂದ ಭಾಷ್ಪ ಉಕ್ಕಿ ಹರಿಯಿತು. ಯಜಮಾನರು ತಮ್ಮ ಮಾತನ್ನು ಮುಂದುವರಿಸುತ್ತಾ,  *ಶ್ರೀಯುತರ  ಸ್ವಾಮಿಭಕ್ತಿ ಅನುಕರಣೀಯವಾದರೂ ಅವರ ಕರ್ತವ್ಯ ನಿಷ್ಠೆಯನ್ನು ಯಾರೂ  ಅನುಕರಿಸಬಾರದೆಂದು* ದಿಟ್ಟವಾಗಿ ಸ್ವಲ್ಪ ಎತ್ತದರ ಧ್ವನಿಯಲ್ಲಿ ಹೇಳಿದಾಗ ನೆರೆದಿದ್ದವರೆಲ್ಲರ ಮನದಲ್ಲಿ ಗೊಂದಲದ ವಾತಾವರಣ ಮೂಡಿತು. ಅದಕ್ಕೆ ಪ್ರತಿಯಾಗಿ ಯಜಮಾನರು ಶ್ರೀಯುತರು  ಅನೇಕ ವರ್ಷಗಳಿಂದ  ತಮ್ಮ ಮನೆ ಮತ್ತು ಕಛೇರಿಯಲ್ಲಿ ಭಧ್ರತಾ ಸಿಬ್ಬಂಧಿಯಾಗಿ  ಸೇವೆ ಸಲ್ಲಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾದರೂ ಅತ್ಯಂತ ಕುತೂಹಲಕಾರಿ ಸಂಗತಿಯೇನೆಂದರೆ ಪ್ರತೀ ಬಾರೀ ತಮ್ಮ ಮಗನ ಜೀವವನ್ನು ಕಾಪಾಡಿದಾಗಲೂ ಅವರು ರಾತ್ರಿಯ ಪಾಳಿಯ ಕೆಲಸಲ್ಲಿದ್ದು ಎರಡೂ ಬಾರಿಯೂ ಬೆಳಗಿನ ಜಾವವೇ ತಮ್ಮ ಮಗನನ್ನು ಎಚ್ಚರಿಸಿದ್ದರು. ಈ ರೀತಿಯಾಗಿ  ಅವಗಡ ಸಂಭವಿಸಿವುದು  ಅವರಿಗೆ ಹೇಗೆ ತಿಳಿಯುವುದು ಎಂಬುದನ್ನು ತಿಳಿಯುವ  ಕೂತೂಹಲವಾಗಿ ಅವರಿಗೇ ತಿಳಿಯದಂತೆ ಅವರ ಸಹೋದ್ಯೋಗಿಯನ್ನು ಅದರ ಕುರಿತು ತಿಳಿಯಲು ತಿಳಿಸಿದ್ದರು. ಅದೇ ರೀತಿ  ಆ ಸಹೋದ್ಯೋಗಿ ಶ್ರೀಯುತರನ್ನು  ಅಭಿನಂದಿಸಿ ಮಾತನಾಡುಸುತ್ತಾ   ನೀವೇನು ಜ್ಯೋತಿಷ್ಯ ಶ್ಯಾಸ್ತ್ರ ಕಲಿತಿದ್ದೀರಾ? ನಿಮಗೆ ಹೇಗೆ ಇದೆಲ್ಲಾ ತಿಳಿಯುತ್ತದೆ ಎಂದಾಗ ಮಾತಿನ ಭರದಲ್ಲಿ ಎರಡೂ ಬಾರಿ  ನನಗೆ ಸ್ವಪ್ನದಲ್ಲಿ  ಈ ವಿಷಯ ತಿಳಿದು ಬಂದ್ದಿದ್ದರಿಂದ ಯಜಮಾನರ ಜೀವವನ್ನು ಉಳಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದು ಯಥಾವತ್ತಾಗಿ ಯಜಮಾನರಿಗೆ ತಿಳಿದಿತ್ತು.  ಹಗಲಿರಲಿ, ರಾತ್ರಿಯಿರಲಿ ಕೆಲಸದ ಸಮಯದಲ್ಲಿ ಕರ್ತ್ಯವ್ಯದ  ಕಡೆ ಸದಾ ಜಾಗೃತರಾಗಿರಬೇಕು.  *ಆ ಎರಡೂ ಬಾರಿ ಅವರು ರಾತ್ರಿಯ ಪಾಳಿಯಲ್ಲಿದ್ದು ಕೆಲಸದ ಸಮಯದಲ್ಲಿ ನಿದ್ರಿಸಿ ಕನಸು ಕಂಡು ಯಜಮಾನರ ಜೀವವನ್ನು ಉಳಿಸಿದರಾದರೂ  ಕರ್ತವ್ಯಕ್ಕೆ ಚ್ಯುತಿ ತಂದ ಪರಿಣಾಮವಾಗಿ* ಅವರನ್ನು  ಈ ತತ್ ಕ್ಷಣದಿಂದಲೇ ಕೆಲಸದಿಂದ ನಿವೃತ್ತಗೊಳಿಸುತ್ತಿದ್ದೇವೆ. ಆದರೆ *ಅವರ ಸ್ವಾಮಿ ಭಕ್ತಿಗೆ ಮೆಚ್ಚಿ*  ಆವರ ಬದಲಿಗೆ ಅವರ ಮಗನಿಗೆ ನಮ್ಮ ಕಛೇರಿಯಲ್ಲಿಯೇ ಅವನ ವಿದ್ಯಾಭ್ಯಾಸಕ್ಕೆ  ಅನುಗುಣವಾಗಿ ಕೆಲಸ ನೀಡುತ್ತಿದ್ದೇವೆ. ಇಂತಹ ಸ್ವಾಮಿ ಭಕ್ತಿಯುಳ್ಳ ಸಂಸ್ಕಾರವಂತ ಕುಟುಂಬದ ಸೇವೆ ನಮಗೆ ಅತ್ಯಾವಶ್ಯಕ. ಬಹುಶಃ  ಈ ಘಟನೆ ಅವರ ಮಗನನ್ನೂ ಒಳಗೊಂಡು ಇಡೀ ಕಚೇರಿಯ ಸಿಬ್ಬಂಧಿಗೆ ಕರ್ತವ್ಯ ನಿಷ್ಠೆಯ ಕುರಿತಾದ  ಒಂದು ರೀತಿಯ ನೀತಿ ಪಾಠ. ಇದನ್ನು ಅರಿತು ಎಲ್ಲರು ಚೆನ್ನಾಗಿ ಸ್ವಾಮಿ ಕಾರ್ಯ ಮತ್ತು ಸ್ವಾಕಾರ್ಯದಿಂದ  ಕಛೇರಿಯನ್ನೂ ಬೆಳೆಸುತ್ತಾ ತಾವೂ ಬೆಳೆಯಿರಿ ಎಂದು ತಿಳಿ ಹೇಳಿ,  ಶ್ರೀಯುತರು  ಈ ಇಳಿ ವಯಸ್ಸಿನಲ್ಲಿ ರಾಮ ಕೃಷ್ಣಾ ಗೋವಿಂದಾ ಎನ್ನುತ್ತಾ ಭಗವಂತನನ್ನು ನೆನೆಯುತ್ತಾ ತಮ್ಮ ಮುಂದಿನ ಜೀವವನ್ನು  ಮಗನ ಆಶ್ರಯದಲ್ಲಿ ನೆಮ್ಮದಿಯಿಂದ  ಕಳೆಯಲಿ  ಎಂದು ಹಾರೈಸಿ ತಮ್ಮ ಮಾತನ್ನು ಮುಗಿಸುತ್ತಿದ್ದಂತೆಯೇ ನೆರೆದಿದ್ದವರೆಲ್ಲರೂ ಎದ್ದು ನಿಂತು ತುಂಬು ಹೃದಯದಿಂದ ತಮ್ಮ ಯಜಮಾನರಿಗೆ ಅಭಿನಂದಿಸುತ್ತಾ ಅವರ ಇಚ್ಚೆಯಂತೆಯೇ ತಾವೆಲ್ಲರೂ ಕೆಲಸ ಮಾಡುವುದಾಗಿ ಭರವಸೆ ಇತ್ತರು.

ಈ ಕಥೆ, ಇಂದಿನ ಕಾಲದ ಯುವ ತರುಣ ತರುಣಿಯರು, ವರ್ಷ ಇಲ್ಲವೇ ಎರಡು ವರ್ಷಗಳು ಕಳೆಯುವುದರಲ್ಲಿಯೇ ಕಂಪನಿಯಿಂದ ಕಂಪನಿ ಬದಲಿಸುತ್ತ, ಕೆಲಸದ ಸಮಯದಲ್ಲಿ ಕೆಲಸದ ಬಗ್ಗೆ ಕೇಂದ್ರೀಕರಿಸದೆ ಮತ್ತೊಂದ್ದರ ಬಗ್ಗೆ ಆಲೋಚಿಸುತ್ತಾ ತಾವೂ ಬೆಳೆಯದೆ ಆಶ್ರಯ ನೀಡಿದ ಕಂಪನಿಯನ್ನೂ ಬೆಳೆಸದೆ ಕಾಲ ತಳ್ಳುವವರಿಗೆ ಎಚ್ಚರಿಕೆಯ ಗಂಟೆ ಎಂದು ಭಾವಿಸುತ್ತೇನೆ.

ಏನಂತೀರೀ?

ಭಾರತರತ್ನ

ಒಂದೂರಲ್ಲೊಬ್ಬ ನಾಸ್ತಿಕನಿದ್ದ. ಅವನು ದೇವರನ್ನೂ ನಂಬುತ್ತಿರಲಿಲ್ಲ ಹಾಗೆಯೇ ಜ್ಯೋತಿಷಿಗಳನ್ನೂ ನಂಬುತ್ತಿರಲಿಲ್ಲ. ಹೇಗಾದರೂ ಮಾಡಿ ಜ್ಯೋತಿಷಿಗಳ ಬಂಡವಾಳವನ್ನು ಬಯಲು ಮಾಡಬೇಕೆಂದು ಹವಣಿಸುತ್ತಿದ್ದ. ಒಂದು ದಿನ ಅವನ ಸ್ನೇಹಿತನ ಮನೆಗೆ ಹೋಗಿದ್ದಾಗ ಅವರ ಮನೆಗೆ ಬಂದಿದ್ದ ಪ್ರಖ್ಯಾತ ಜ್ಯೋತಿಷಿಗಳನ್ನು ಇವನಿಗೆ ಪರಿಚಯಿಸಲಾಯಿತು. ಇಂತಹದ್ದೇ ಸುಸಂಧರ್ಭವನ್ನು ಎದುರು ನೋಡುತ್ತಿದ್ದ ಅವನಿಗೆ ರೊಟ್ಟಿ ಜಾರಿ ತುಪ್ಪಕ್ಕೇ ಬಿದ್ದಹಾಗಾಯಿತು.  ಹಾಗೆಯೇ ಜ್ಯೋತಿಷಿಗಳನ್ನು ಮಾತಿಗೆಳೆದು ನನ್ನಲ್ಲಿ ಒಂದು ಸಮಸ್ಯೆಯಿದೆ ಅದನ್ನು ಸ್ವಲ್ಪ ಬಗಹರಿಸುವಿರಾ ಎಂದು ಕೇಳಿದ. ಅವನ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದ ಜ್ಯೋತಿಷಿಗಳು ಮುಗುಳ್ನಗೆಯಿಂದ ಸರಿ ಸಮಸ್ಯೆ ಏನೆಂದು ಹೇಳಿ ನನ್ನ ಬುದ್ದಿಮತ್ತೆಯ ಪರಿಧಿಯಲ್ಲಿದ್ದರೆ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು. ಜ್ಯೋತಿಷಿಗಳು ಅಷ್ಟು ಬೇಗನೆ ಒಪ್ಪಿಕೊಂಡದ್ದು ಸ್ವಲ್ಪ ಅಚ್ಚರಿಯಾದರೂ ಹೇಗಾಗರೂ ಮಾಡಿ ಅವರನ್ನು ಸೋಲಿಸಲೇ ಬೇಕೆಂಬ ಫಣ ತೊಟ್ಟಿದ್ದ  ಆ ನಾಸ್ತಿಕ ಕೆಲ ಕ್ಷಣ ಹೊರಗೆ ಹೋಗಿ ಮತ್ತೆ ಜ್ಯೋತಿಷಿಗಳ  ಮುಂದೆ ಬಂದು  ಅವನ ಮುಷ್ಟಿಯನ್ನು ತೋರಿಸುತ್ತಾ ಈ ಮುಷ್ಟಿಯಲ್ಲೇನಿದೆ? ಎಂದು ಹೇಳುವಿರಾ ಎಂದು ಕೇಳಿದ. ಅವನ ಪ್ರಶ್ನೆಯನ್ನು ಕೇಳಿದ ಜ್ಯೋತಿಷಿಗಳು  ನಿನ್ನ ಮುಷ್ಟಿಯಲ್ಲಿ ಒಂದು ಕೀಟವಿದೆ ಎಂದರು. ಅವರ ಉತ್ತರಕ್ಕೆ ಮನಸ್ಸಿನಲ್ಲಿಯೇ ಬೆಚ್ಚಿದ ನಾಸ್ತಿಕ ತನ್ನ ಅಳುಕನ್ನು ತೋರಿಸಿಕೊಳ್ಳದೆ, ಸರಿ ಹಾಗಾದರೆ ಆ ಕೀಟ ಬದುಕಿದೆಯಾ? ಇಲ್ಲವೇ ಸತ್ತಿದೆಯಾ? ಎಂದು ಮರು ಪ್ರಶ್ನೆ ಹಾಕಿದ.  ನಾಸ್ತಿಕನ ಮರು ಪ್ರಶ್ನೆಗೆ ಸ್ವಲ್ಪ ಸಮಯ ಮೌನವಾಗಿದ್ದನ್ನು ಕಂಡ ನಾಸ್ತಿಕ, ಆಹಾ!! ನೋಡಿದ್ರಾ ನೀವು ಸೋತು ಬಿಟ್ಟಿರೀ. ನನ್ನ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಾಗಲಿಲ್ಲ  ಎಂದು ಕೇಕೇ ಹಾಕುತ್ತಿದ್ದನ್ನು ಕಂಡ ಜ್ಯೋತಿಷಿಗಳು. ಅಯ್ಯಾ  ನಿನ್ನ ಮುಷ್ಟಿಯಲ್ಲಿರುವ ಕೀಟದ ಅಳಿವು ಉಳಿವಿನ ಪ್ರಶ್ನೆ ನಿನ್ನ ಕೈಯಲ್ಲಿಯೇ ಇದೆ. ಒಂದು ವೇಳೆ ನಾನು ಕೀಟ ಬದುಕಿದೆ ಎಂದರೆ ನೀನು ಮುಷ್ಟಿಯನ್ನು ಗಟ್ಟಿಯಾಗಿಸಿ ಕೀಟವನ್ನು ಕೊಂದು ನನ್ನ ಉತ್ತರ ತಪ್ಪಿದೆ ಎನ್ನುತ್ತೀಯಾ. ಇಲ್ಲವೇ ನಾನು ಕೀಟ ಸತ್ತಿದೆ ಎಂದರೆ, ಬದುಕಿರುವ ಕೀಟವನ್ನು ಹಾಗೆಯೇ ತೋರಿಸಿ ನೋಡಿ ಕೀಟ ಬದುಕಿದೆ ಹಾಗಾಗಿ ನೀವು ತಪ್ಪು ಉತ್ತರಿಸಿ ಸೋತಿದ್ದೀರಿ ಅನ್ನುತ್ತೀಯೆ. ಸುಮ್ಮನೆ ನಾನು ನಿನ್ನ ಈ ಅಪ್ರಸ್ತುತ ಪ್ರಶ್ನೆಗೆ ಉತ್ತರಿಸಿ ಒಂದು ಕೀಟವನ್ನು ಪರೋಕ್ಷವಾಗಿ  ಕೊಲ್ಲಲು ಸಹಕರಿಸಿದ ಪಾಪವನ್ನು ಕಟ್ಟಿ ಕೊಳ್ಳಲಾರೆ.  ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ, ನೀನು ನಿನ್ನ ಬಯಕೆಯಂತೆಯೇ ಉತ್ತರವನ್ನು ಇತರರಿಂದ ಬಯಸುತ್ತೀಯೆ. ಅಂತೆಯೇ ನಿನ್ನ ಸ್ವಾರ್ಥ ಲಾಭಕ್ಕಾಗಿ  ದೇವರನ್ನೂ ಸಹ ಪ್ರಶ್ನಿಸಲು ಮತ್ತು ಪರೀಕ್ಷಿಸಲು ಪ್ರಯತ್ನಿಸುವುದೇ ಮೂರ್ಖತನ. ಸ್ವಲ್ಪ ಕಾಲ  ಸ್ವಾರ್ಥದಿಂದ ಹೊರಬಂದು ನಿಸ್ವಾರ್ಥದಿಂದ  ಭಗವಂತನನ್ನು ಧ್ಯಾನ ಮಾಡು ನಿನಗೇ ಭಗವಂತನು ಒಲಿಯುತ್ತಾನೆ ಎನ್ನುತ್ತಾರೆ.

ಬಹಳ ದಿನಗಳಿಂದಲೂ ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಶತಾಯುಷಿ ಅಕ್ಷರ ದಾಸೋಹೀ ಪರಮ ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಭಾರತರತ್ನವನ್ನು ನೀಡಬೇಕೆಂದು ಎಷ್ಟೋ ವರ್ಷಗಳಿಂದ ಹಲವರು ನಾನಾ ರೀತಿಯ ಪ್ರಯತ್ನಗಳನ್ನೂ ಮತ್ತು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದದ್ದು ನಮಗೆಲ್ಲರಿಗೂ  ತಿಳಿದಿದ್ದ ವಿಷಯ. ಕಾರಣಾಂತರಗಳಿಂದ  ಜನರ ಆಸೆಯನ್ನು ಈಡೇರಿಸುವ ಪ್ರಯತ್ನಗಳನ್ನು ಯಾವುದೇ ಸರ್ಕಾರಗಳು ಮಾಡದಿದ್ದದ್ದು ವಿಷಾಧನೀಯ. ಆದರೆ ನೆನ್ನೆ  ಸ್ವಾಮೀಜಿಯವರು ಇದ್ದಕ್ಕಿದ್ದಂತೆಯೇ ನಮ್ಮನ್ನು ಅಗಲಿದಾಗ ಇಡೀ ಪ್ರಪಂಚಾದ್ಯಂತ   ಕೋಟ್ಯಂತರ ಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿದ್ದಾಗ ಕೆಲ ಸ್ವಾರ್ಥಿಗಳು, ಪಟ್ಟ ಭಧ್ರ ಹಿತಾಸಕ್ತಿಗಳು ಮತ್ತು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಬಯಸುವ ಕೆಲ ಪುಡಾರಿಗಳು   ಪೂಜ್ಯ ಶ್ರೀಗಳಿಗೆ ಭಾರತರತ್ನ ನೀಡಲಿಲ್ಲವೆಂದೂ ಗಂಟಲು ಹರಿಯುವಂತೆ ಅರುಚಾಡುವುದನ್ನೂ, ದೃಷ್ಯ ಮಾಧ್ಯಮದ ಕ್ಯಾಮೆರಾಗಳ ಮುಂದೆ ಗೀಳುಡುತ್ತಿದ್ದರೆ, ಇನ್ನೂ ಕೆಲವು  ವಿಕೃತ  ಮನಸ್ಸಿನ ಜನ ಸ್ವಾಮೀಜಿಗಳ ಅಕಾಲಿಕ ಮರಣದ ಬಗ್ಗೆ ಅಸಹ್ಯಕರವಾಗಿ ಮತ್ತು ಅಶ್ಲೀಲವಾದ ಹೇಳಿಕೆಗಳನ್ನು   ಸಾಮಾಜಿಕ ಜಾಲ ತಾಣಗಳಲ್ಲಿ   ಹರಿಬಿಟ್ಟಿರುವುದು ನಿಜಕ್ಕೂ ದುಃಖಕರ. ಒಂದು ವೇಳೆ ಇಂತಹವರ ಮಾತುಗಳಿಗೆ ಸರ್ಕಾರಗಳು ಬಗ್ಗಿ ಸ್ವಾಮಿಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿದಲ್ಲಿ, ನೋಡಿದಿರಾ ನಮ್ಮ ಹೋರಾಟದ ಫಲವಾಗಿಯೇ ಇದು ದಕ್ಕಿದ್ದೆಂದು, ಇಲ್ಲವೇ   ಒಂದು ವೇಳೆ ಇಂತಹವರ ಮಾತುಗಳಿಗೆ ಸರ್ಕಾರಗಳು ಜಗ್ಗದೆ ಸ್ವಾಮಿಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿದೇ ಹೋದಲ್ಲಿ , ನೋಡಿದಿರಾ ಈ ಬಂಡ ಸರ್ಕಾರಗಳನ್ನು ಮತ್ತಿವರ  ಸ್ವಾಮಿ ಭಕ್ತಿಯನ್ನು ಇಂತಹ ಸರ್ಕಾರಗಳು ಬೇಕೆ ಎಂದು ಜನರನ್ನು  ಸರ್ಕಾರಗಳ ವಿರುದ್ಧ ಎತ್ತಿ ಕಟ್ಟಿ ತಮ್ಮ ಓಟ್ ಬ್ಯಾಂಕ್ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಯಾವುದೇ ಜಾತಿ, ಧರ್ಮಗಳನ್ನು ನೋಡದೆ  ನೂರಕ್ಕೂ ಅಧಿಕ ವರ್ಷ ಬಾಳಿ, ಸಾವಿರಾರು ವಿದ್ಯಾ ಸಂಸ್ಥೆಗಳನ್ನು ಕಟ್ಟಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುವುದರ ಮೂಲಕ, ಇಂದು ಕೋಟ್ಯಾಂತರ ಜನರ ಹಸಿವನ್ನು ಇಂಗಿಸಿದ ಮಹಾ ಚೇತನದ ಸಾವಿನಲ್ಲೂ ರಾಜಕಾರಣ ಮಾಡಲು ಹೊರಟಿರುವಂತಹಾ ಇಂತಹ ವಿಕೃತ ಮನಸ್ಸಿನ ಜನರನ್ನು ನೋಡುತ್ತಿದ್ದಾಗ ಮೇಲೆ ಹೇಳಿದ ನಾಸ್ತಿಕನ ದೃಷ್ಟಾಂತ ನೆನಪಿಗೆ ಬಂದಿತು. ಯಾರೇ ಬದುಕಲಿ, ಯಾರೇ ಸಾಯಲಿ, ಯಾವುದೇ ರೀತಿಯ ಭಾವನೆಗಳಿಲ್ಲದೆ, ಸಮಾಜದ ಕಾಳಜಿ ಇಲ್ಲದೇ ಕೇವಲ ಸ್ವಾರ್ಥಕ್ಕಾಗಿಯೇ ಇಂತಹ ಸಂಧರ್ಭಗಳನ್ನು ದುರುಪಯೋಗ ಪಡಿಸಿಕೊಳ್ಳುವ ಸಾವಿನ ಮನೆಯಲ್ಲಿ ಗಳ  ಹಿರಿಯುವ ಇಲ್ಲವೇ ಸಾವಿನ ಮನೆಯ ಮುಂದೆ ಹಾಕಿರುವ ಬೆಂಕಿಯಲ್ಲಿ  ಬೀಡಿ ಹಚ್ಚಿಕೊಂಡು ಚಳಿ ಹಚ್ಚಿಕೊಳ್ಳುವ ಮಂದಿಗೆ ಧಿಕ್ಕಾರವಿರಲಿ.

ಸ್ವಾಮೀಜಿಗಳು ಅದೆಷ್ಟೋ ವಿದ್ಯಾಸಂಸ್ಥೆಗಳನ್ನು ನಾಡಿನಾದ್ಯಂತ ಸ್ಥಾಪಿಸಿ ಅತ್ಯಂತ ಉನ್ನತ ಶಿಕ್ಷಣವನ್ನು ಕೈಗೆಟುಕುವ ಬೆಲೆಯಲ್ಲಿ ಹಲವಾರು ಸಲ ಆತ ನಿಜಕ್ಕೂ ಆರ್ಥಿಕವಾಗಿ ಬಡವನಾಗಿದ್ದಲ್ಲಿ ಉಚಿತವಾಗಿ ಶಿಕ್ಷಣವನ್ನು ನೀಡಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿದೆ. ತಮ್ಮ ಸಿದ್ದಗಂಗೆಯ ಆಶ್ರಮದ ಪಾಕ ಶಾಲೆಯಲ್ಲಿ ಅದೆಷ್ಟೋ ವರುಷಗಳಿಂದಲೂ ಹತ್ತಿಸಿದ ಬೆಂಕಿ ಆರಿರುವ ಉದಾಹರಣೆಯೇ ಇಲ್ಲ ಎಂಬ ಖ್ಯಾತಿಯನ್ನು ಪಡೆದಿದೆ. ಅಂದರೆ ದಿನದ 24ಗಂಟೆಗಳು,ವರ್ಷದ 365ದಿನಗಳೂ ಅಲ್ಲಿನ ಪಭೋಜನ ಶಾಲೆ ಭಕ್ತಾದಿಗಳಿಗೆ ಮತ್ತು ವಿದ್ಯಾರ್ಥಿಗಳ ಸೇವೆಗೆ ಸಿದ್ಧವಾಗಿರುತ್ತದೆ. ಅಲ್ಲಿಗೆ ಆಶ್ರಯ ಕೋರಲು ಬರುತ್ತಿದ್ದ ಎಲ್ಲ ಮಕ್ಕಳನ್ನೂ ಸ್ವಾಮೀಜಿಗಳೇ ಖುದ್ದಾಗಿ ಸಂದರ್ಶನ ಮಾಡುತ್ತಾ ಅಗತ್ಯವಿದ್ದವರನ್ನು ತಮ್ಮ ಆಶ್ರಮದಲ್ಲೇ ಉಚಿತ ಊಟ ಮತ್ತು ವಸತಿಯೊಂದಿಗೆ ಯೋಗ್ಯ ಶಿಕ್ಷಣ ಕೊಟ್ಟಿದ್ದಾರೆ. ಹಾಗೆ ಬೆಳೆದು ಬಂದ ಲಕ್ಷಾಂತರ ಮಂದಿ ಇಂದು ದೇಶ ವಿದೇಶಗಳಲ್ಲಿ ಅತ್ಯುತ್ತಮ ಮೌಲ್ಯಾಧಾರಿತ ಜೀವನ ನಡೆಸುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಸ್ವಾಮೀಜಿಗಳು ತಮ್ಮ ಮಠದ ಪೋಷಣೆಗೆ ಎಂದೂ ತಮ್ಮ ಹಳೆಯ ವಿಧ್ಯಾರ್ಥಿಗಳನ್ನು ಹಣ ಕೊಡಿರೆಂದು ಕೇಳಿರಲಿಲ್ಲ. ಯಾರ ಮುಂದೆಯೂ ಅಥವಾ ಯಾವ ಸರ್ಕಾರದ ಮುಂದಾಗಲೀ ಜೋಳಿಗೆ ಹಿಡಿದದ್ದೇ ಇಲ್ಲಾ.  ಸ್ವಾಮೀಜಿಗಳಿಂದ ಉಪಕೃತರಾದವರು ಮತ್ತು ಮಠದ ನಿಷ್ಠಾವಂತ ಭಕ್ತರು ಸ್ವಯಂಪ್ರೇರಣೆಯಿಂದ ಕೊಡುತ್ತಿದ್ದ ದೇಣಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಂದ ಬರುತ್ತಿದ್ದ ಆದಾಯದಲ್ಲೇ ಮಠವನ್ನು ಇಷ್ಟುದಿನ ಅಚ್ಚು ಕಟ್ಟಾಗಿ ನಡೆಸಿಕೊಂಡು ಕೋಟ್ಯಾಂತರ ಮಂದಿಯ ಬಾಳ ಬೆಳಕಾಗಿರುವ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಿರೆಂದು ಜೋಳಿಗೆ ಹಿಡಿಯುವುದು ಸ್ವಾಮೀಜಿಗಳಿಗೆ ಮತ್ತು ಅವರ ನಂಬಿಕೆಗಳಿಗೆ ಅವಮಾನ ಮಾಡಿದಂತೆಯೇ ಸರಿ.

ಈಗಾಗಲೇ ಸ್ವಾರ್ಥಕ್ಕಾಗಿ, ರಾಜಕೀಯ ಹಿತಾಸಕ್ತಿಗಳಿಗೆ ಮತ್ತು ಓಲೈಕೆಗಾಗಿ ಬೇಕಾಬಿಟ್ಟಿ ಭಾರತರತ್ನ ಪ್ರಶಸ್ತಿಗಳನ್ನು ಹಂಚಿ, ಪ್ರಶಸ್ತಿಯನ್ನೇ  ಅಪಮೌಲ್ಯವನ್ನಾಗಿ ಮಾಡಿರುವಾಗ, ಅರಿಷಡ್ವರ್ಗಗಳನ್ನು  ಮೆಟ್ಟಿ ನಿಂತಿದ್ದ,  ಸನ್ಯಾಸಿಗಳು ಮತ್ತು ಸಾಧು ಸಂತರೆಂದರೆ ಹೀಗಿರಬೇಕು ಎಂದು ಸದಾ ಸರಳ ಜೀವಿಯಾಗಿ ವಿಶ್ವಾದ್ಯಂತ ಪ್ರಸಿದ್ದರಾಗಿ ನಡೆದಾಡುವ ದೇವರೆಂದೇ ವಿಶ್ವ ವಿಖ್ಯಾತರಾಗಿದ್ದ  ಶ್ರೀ ಶಿವಕುಮಾರಸ್ವಾಮಿಗಳಿಗೆ  ಈಗ ಮರಣೋತ್ತರವಾಗಿ ಭಾರತರತ್ನ ನೀಡಿದರೆ  ಅದು ಕೇವಲ ತೋರ್ಪಡೆಗಾಗಿಯೋ ಇಲ್ಲವೇ , ಯಾರದ್ದೂ ಓಲೈಕೆಗಾಗಿಯೋ ಕೊಟ್ಟ ಪ್ರಶಸ್ತಿಯಾಗುವುದೇ ಹೊರತು ಅದಕ್ಕೆ ಬೆಲೆ  ಯಾವುದೇ ಹೆಚ್ಚಿನ ಬೆಲೆ ಇರುವುದಿಲ್ಲ.

ನಾವೆಲ್ಲಾ ಪ್ರತ್ಯಕ್ಷವಾಗಿ ಕಂಡ  ನಡೆದಾಡುವ ದೇವರು ಎಂದು ಪೂಜಿಸಿದ, ಆರಾಧಿಸಿದ  ಶ್ರೀ ಶಿವಕುಮಾರ ಸ್ವಾಮಿಗಳು, ಇನ್ನು ಮುಂದೆ ಭೌತಿಕವಾಗಿ ನಮ್ಮೊಂದಿಗೆ ಇರುವುದಿಲ್ಲವಾದರೂ ಮತ್ತು ಅವರ ದೈಹಿಕ ಅಗಲಿಕೆ ನಮ್ಮನ್ನು ಕಾಡುವುದಾದರೂ, ಅವರ ಹೇಳಿ ಕೊಟ್ಟ ಆದರ್ಶಗಳು, ಅವರ ಸರಳ ನಡೆ, ನುಡಿಗಳು  ಮತ್ತು ಆಶೀರ್ವಾದಗಳು, ಸದಾಕಾಲವೂ ನಮ್ಮೊಂದಿಗೆ  ಇದ್ದು, ನಮ್ಮನ್ನು ಚಿರಕಾಲವೂ ಕಾಪಾಡುತ್ತಲೇ ಇರುತ್ತದೆ.  ಈ ಕರ್ನಾಟಕದ ಅನರ್ಘ್ಯರತ್ನಕ್ಕೆ  ಸರ್ಕಾರ ಕೊಡುವ ಕಾಗದದ ಮರಣೋತ್ತರ ಭಾರತರತ್ನ ಪ್ರಶಸ್ತಿಗಿಂತ ಈಗಾಗಲೇ ವಿಶ್ವಾದ್ಯಂತ ಜನರುಗಳೇ ತಮ್ಮ ಹೃದಯಾಂತರಾಳದಿಂದ  ಮುಂದಿನ ಸಾವಿರಾರು ವರ್ಷಗಳಿಗೂ ಅಚ್ಚಳಿಯದಂತೆ ನೀಡಿರುವ  ವಿಶ್ವರತ್ನ ಗೌರವವೇ ಹೆಚ್ಚೆನಿಸುತ್ತದೆ.

ಏನಂತೀರೀ?

ಛಲವಿದ್ದಲ್ಲಿ ಗೆಲುವಿದೆ.

ಶಂಕರ ಒಂದು ಸಣ್ಣ ಅಕೌಂಟಿಂಗ್ ಸಾಫ್ಟ್ವೇರ್  ಕಂಪನಿಯೊಂದರಲ್ಲಿ  ಕಸ್ಟಮರ್ ಸಪೋರ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.  ದಿನ ನಿತ್ಯದ ಕೆಲಸಗಳಿಗೆ ಇನ್ನಷ್ಟು ಜನರ  ಅವಶ್ಯಕತೆ ಇದ್ದದ್ದರಿಂದ ಕೆಲವು ಸಿಬ್ಬಂಧ್ಧಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದ ಸಂಧರ್ಭದಲ್ಲಿಯೇ ಸತೀಶ್ ಅಲ್ಲಿಗೆ ಕೆಲಸ ಸೇರಿಕೊಂಡ ಅವನ ಜೊತೆಗೆ ಅವನ ಸಹೋದ್ಯೋಗಿಯಾಗಿದ್ದ ಬಾಲನನ್ನೂ ಒಂದೆರಡು ವಾರಗಳ ಅಂತರದಲ್ಲಿ ಅಲ್ಲಿಯೇ ಕೆಲಸಕ್ಕೆ ಸೇರಿಸಿದ. ಸತೀಶ್ ಬಿಎಸ್ಸಿ ಪದವೀಧರ ಆಗಷ್ಟೇ ಆವನಿಗೆ ಮದುವೆಯಾಗಿತ್ತು. ಬಾಲ ಬಿಕಾಂ ಪದವೀಧರ ಅವನಿಗಾಗಲೇ ಮದುವೆಯಾಗಿ ಒಬ್ಬ ಸಣ್ಣ ವಯಸ್ಸಿನ ಮಗನಿದ್ದ. ಇವರಿಬ್ಬರಿಗಿಂತಲೂ ಸಣ್ಣ ವಯಸ್ಸಿನವನಾಗಿದ್ದ ಶಂಕರನ ಜೊತೆ ಬಹಳ ಬೇಗ ಸ್ನೇಹ ಸಂಬಂಧ ಬೆಳೆದು, ಹೋಗಿ ಬನ್ನಿ ಇಂದ ಹೋಗೋ ಬಾರೋ ಎನ್ನುವಷ್ಟರ ಮಟ್ಟಿಗೆ ಸಲಿಗೆ ಆಯಿತು. ಕೆಲಸದ ಬಗ್ಗೆಯಾಗಲೀ ವಯಕ್ತಿಕ ವಿಷಯಗಳೇ ಆಗಲಿ ಒಬ್ಬರಿಗೊಬ್ಬರು ಹಂಚಿಕೊಂಡು ಸಮಸ್ಯೆಗಳನ್ನು ಬಗೆ ಹರಿಸುಕೊಳ್ಳುತ್ತಿದ್ದರು. ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಬರುವಷ್ಟು ಆತ್ಮೀಯತೆ ಬೆಳೆದಿತ್ತು.

ಕಂಪನಿ ಇನ್ನೂ ಚಿಕ್ಕದ್ದಾಗಿದ್ದರಿಂದ ಅಲ್ಲಿ ಕೊಡುತ್ತಿದ್ದ ಸಂಬಳ ಬಾಲ ಮತ್ತು ಸತೀಶನಿಗೆ ಸಾಲುತ್ತಿರಲಿಲ್ಲ. ಹಲವಾರು ಸಲ ನಿಗಧಿತ ಸಮಯಕ್ಕೆ ಸಂಬಳ ಕೊಡುತ್ತಿರಲಿಲ್ಲವಾದ್ದರಿಂದ ಸಂಸಾರಸ್ಥರಾಗಿದ್ದ ಅವರಿಬ್ಬರಿಗೆ ಬಹಳ ತೊಂದರೆಯಾಗುತ್ತಿತ್ತು. ಹಾಗಾಗಿ ಸತೀಶ ಸಂಜೆಯ ನಂತರ ಅಥವಾ ರಜೆದಿನಗಳಲ್ಲಿ  ಕೆಲವಾರು ಸಣ್ಣ ಸಣ್ಣ ವ್ಯಾಪಾರಸ್ಥರ ಲೆಕ್ಕಗಳನ್ನು ನೋಡಿಕೊಳ್ಳುತ್ತಿದ್ದರೆ, ಬಾಲ, ಗ್ರಾಫಿಕ್ ಡಿಜೈನಿಂಗನಲ್ಲಿ ಎತ್ತಿದ ಕೈ ಹಾಗಾಗಿ ಸಣ್ಣ ಪುಟ್ಟ ಗ್ರಾಫಿಕ್ ಮತ್ತು ಡಿಟಿಪಿ ಕೆಲಸಗಳನ್ನು ಮಾಡುತ್ತಾ ಹಾಗೂ ಹೀಗೂ ಜೀವನ ನಡೆಸುತ್ತಿದ್ದರು. ಬರು ಬರುತ್ತಾ ಸಂಬಳ ಸರಿಯಾಗಿ ಸಿಗದ ಕಾರಣ ಎಲ್ಲರೂ ಕಂಪನಿ ಬದಲಿಸುವ ನಿರ್ಧಾರಕ್ಕೆ ಬಂದರು.  ಅದೃಷ್ಟವೂ ಏನೋ ಎನ್ನುವಂತೆ ಸತೀಶ ಮತ್ತು ಬಾಲ ಇಬ್ಬರಿಗೂ ಮತ್ತೊಂದು ಕಂಪನಿಯಲ್ಲಿ ಒಳ್ಳೆಯ ಸಂಬಳದೊಂದಿಗೆ ಕೆಲಸ ಸಿಕ್ಕಿದ್ದರಿಂದ ಇಬ್ಬರೂ ಕಂಪನಿ ಬದಲಾಯಿಸಿದರೆ, ಅವರಿಬ್ಬರ ಹಾಗೆ ನಿರ್ಧಾರ ಧೈರ್ಯದ  ತೆಗೆದುಕೊಳ್ಳಲು ಸಾಧ್ಯಾವಾಗದ ಶಂಕರ ಅಲ್ಲಿಯೇ ಕೆಲಸ ಮುಂದುವರಿಸಿದ.

ಹೀಗೆ ಕೆಲವರು  ವರ್ಷಗಳು ಕಳೆದವು. ಸತೀಶನ ಮಗನ ನಾಮಕರಣಕ್ಕೆ  ಶಂಕರ ಹೋದರೆ, ಶಂಕರನ ಮದುವೆಗೆ ಬಾಲ ಮತ್ತು ಸತೀಶನ ಉಪಸ್ಥಿತಿಯಿತ್ತು. ಹಾಗೆಯೇ ಬಾಲನ ಮನೆಯ ಗೃಹಪ್ರವೇಶಕ್ಕೆ ಸತೀಶ ಮತ್ತು ಶಂಕರ ಸಂಸಾರ ಸಮೇತರಾಗಿ ಹಾಜರಾಗಿ, ಒಟ್ಟಿಗೆ ಕೆಲಸ ಮಾಡುತ್ತಿಲ್ಲವಾದರೂ ಗೆಳೆತನವನ್ನು ಇನ್ನೂ ಚೆನ್ನಾಗಿಯೇ ಮುಂದುವರಿಸಿಕೊಂಡು ಹೋಗುತ್ತಾ, ಒಬ್ಬರಿಗೊಬ್ಬರ  ಸುಖಃ ದುಃಖಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಮಧ್ಯದಲ್ಲಿ  ಬಾಲ ಮತ್ತು ಸತೀಶ ಇಬ್ಬರೂ ಎಷ್ಟುದಿನ ಹೀಗೆ ಮತ್ತೊಬ್ಬರ ಕೈಕೆಳೆಗೆ ದುಡಿಯುವುದು ಎಂದು ನಿರ್ಧರಿಸಿ, ಬಾಲ ತನ್ನ ದುಡಿಮೆಯಲ್ಲಿ ಉಳಿಸಿದ್ದ ಹಣದಲ್ಲಿ ನಗರದಿಂದ ಸ್ವಲ್ಪ ಹೊರವಲಯದಲ್ಲಿ ಕೃಷಿ ಜಮೀನನ್ನು ಖರೀದಿಸಿ, ಅಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದನು. ಅವನ ಜಮೀನಿನಲ್ಲಿಯೇ ಸಣ್ಣದೊಂದು ವಾಸಿಸಲು ಯೋಗ್ಯವಾದ ಮನೆಯೊಂದನ್ನು ಕಟ್ಟಿಸಿ ಅಲ್ಲಿ ಒಂದೆರಡು ಕೆಲಸಗಾರರನ್ನು ನೇಮಿಸಿ  ಆರಂಭದಲ್ಲಿ ವಾರಾಂತ್ಯಗಳಿಗೆ ಮೀಸಲಾಗಿದ್ದ ಅವನ ಕೃಷಿ,  ತನ್ನ  ಜಮೀನಿನ ಮಣ್ಣಿಗೆ ಸರಿಹೊಂದುವಂತಹ ತರಕಾರಿ ಬೆಳೆಗಳನ್ನು ಬೆಳೆಯುತ್ತಾ , ಜೊತೆ ಜೊತೆಗೆ ಹೂವು ಮತ್ತು ಹಣ್ಣುಗಳನ್ನು ಬೆಳೆಯುತ್ತಾ,  ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು  ತನ್ನ ಸತತ ಪರಿಶ್ರಮದಿಂದ ನಿಜವಾದ ಮಣ್ಣಿನ ಮಗನಾಗಿಯೇ ಮಾರ್ಪಾಟಾದನು. ಜೊತೆಗೆ ಒಂದೆರೆಡು ದನಕರುಗಳನ್ನು ಸಾಕಿ ಅದರಿಂದ ಉತ್ಪತ್ತಿಯಾಗುವ ಗೊಬ್ಬರದಿಂದಲೇ ತನ್ನ ಮನೆಗೆ ಬೇಕಾಗುವಷ್ಟು ಅಡುಗೆ ಅನಿಲವನ್ನು ತಯಾರಿಸಿಕೊಳ್ಳುವ ಮಟ್ಟಕ್ಕೆ ಬಂದು ಈಗ ಅದೇ ಯಂತ್ರವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಬೇಕಾದವರಿಗೆ ಅಳವಡಿಸುವ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಚಿಕ್ಕಂದಿನಿಂದಲೂ ಕಾರ್ ಬಗ್ಗೆ ಇದ್ದ ವ್ಯಾಮೋಹ ದಿಂದ ಬಗೆ ಬಗೆಯ ಕಾರ್ ಮಾಲಿಕರಾಗಿದ್ದಾರೆ. ಒಂದೆರಡು ಕಾರ್ಗಳನ್ನು ಓಲಾ-ಊಬರ್ ಟ್ಯಾಕ್ಸಿಗಳಾಗಿ ಪರಿವರ್ತಿಸಿ ಸಮಯ ಸಿಕ್ಕಾಗ ತಾವೇ ಓಲಾ ಕಾರ್ ಚಾಲಕರಾಗಿ ಆ ಕೆಲಸದ ಅನುಭವವನ್ನೂ ಸವಿಯುತ್ತಿದ್ದಾರೆ.

ಬಾಲನಿಂದ ಪ್ರೇರಿತನಾದ ಸತೀಶ ತಾನೂ ಇದ್ದ ಕೆಲಸವನ್ನು ತ್ಯಜಿಸಿ ತನಗೆ ಗೊತ್ತಿದ್ದ ಅಕೌಂಟಿಗ್ ಜೊತೆ  ಜೀವವಿಮೆ ಮತ್ತು ಕೆಲ ಮ್ಯೂಚ್ಯುಯಲ್ ಫಂಡ್ಗಳ ಏಜೆಂಟ್ ಆಗಿ ಸ್ವಾವಲಂಭಿಯಾಗಿ ಜೀವನ ನಡೆಸುತ್ತಿದ್ದಾಗಲೇ ಅದೆಲ್ಲಿಯೋ ಅಡಿಕೆ ತಟ್ಟೆಯ ವ್ಯಾಪಾರದಲ್ಲಿ ಒಳ್ಳೆಯ ಲಾಭವಿದೆ ಎಂದು ತಿಳಿದು, ತನ್ನ ಮಡದಿಯ ಹೆಸರಿನಲ್ಲಿ  ಸರಕಾರದ  ಸ್ತ್ರೀಶಕ್ತಿಯ ಅಡಿಯಲ್ಲಿ ಅಡಿಕೆ ತಟ್ಟೆಯನ್ನು ತಯಾರು ಮಾಡುವ ಸಣ್ಣ ಕಾರ್ಖಾನೆಯನ್ನು ಆರಂಭಿಸಿಯೇ ಬಿಟ್ಟ. ಮೊದಲೇ ಚುರುಕು ಬುದ್ಡಿಯ ಸತೀಶ ಸರ್ಕಾರದ ಎಲ್ಲಾ ರೀತಿಯ ಸೌಲಭ್ಯಗಳನ್ನೂ ಸದುಪಯೋಗ ಪಡಿಸಿಕೊಂಡು ಕೆಲವೇ ದಿನಗಳಲ್ಲಿ ಅತ್ಯುತ್ತಮ ಗುಣಮಟ್ಟದ ಅಡಿಕೆ ತಟ್ಟೆಯ ತಯಾರಕನಾದ.  ಇಂದು ಜಗತ್ತಿನಾದ್ಯಂತ ಆವರ ಅಡಿಕೆ ತಟ್ಟೆಗಳು ಮಾರಾಟವಾಗುತ್ತಿದೆ.  ಅಷ್ಟರಲ್ಲಿಯೇ ತನ್ನ ಪಿತ್ರಾರ್ಜಿತ ಆಸ್ತಿಯ ಪಾಲಿನಿಂದ ಬಂದ ಹಣದಲ್ಲಿ  ಮನೆಯೊಂದನ್ನು ಕಟ್ಟಿಸಿ ಕೆಳಗೆ ತನ್ನ ಅಡಿಕೆ ತಯಾರಿಕೆಯ ಕಾರ್ಖಾನೆ, ಮೊದಲ ಮಹಡಿಯನಲ್ಲಿ ತನ್ನ ಸರಕುಗಳ ದಾಸ್ತಾನು ಮತ್ತು ಎರಡನೆ ಮತ್ತು ಮೂರನೇ ಮಹಡಿಯಲ್ಲಿ ತನಗೆ  ವಾಸಿಸಲು ಯೋಗ್ಯವಾದಂತಹ ಭರ್ಜರಿಯಾಗಿ ಮನೆ ಕಟ್ಟಿಸಿ, ತನ್ನ ಕಾರ್ಖಾನೆಗೆ ಅವಶ್ಯಕವಿದ್ದ ವಿದ್ಯುತ್ ಪಡೆಯಲು ವಿದ್ಯುತ್ ಮಂಡಲಿಗೆ ಅರ್ಜಿಯನ್ನು ಗುಜರಾಯಿಸಿದನು. ಅಲ್ಲಿಂದ ಸತೀಶನ ಗ್ರಹಚಾರ ಕೆಡಲು ಶುರುವಾಯಿತು. ದಿನದಿಂದ ದಿನಕ್ಕೆ  ವಿದ್ಯುತ್ ಮಂಡಳಿಗೆ ಅಲೆಯುವುದೇ ಸತೀಶನ ಕೆಲಸವಾಗಿ ಹೋಯಿತು. ದಾಖಲೆಗಳೆಲ್ಲವೂ ಸರಿಯಿದ್ದರೂ, ಅದು ಸರಿಯಿಲ್ಲ, ಇದು ಸರಿಯಿಲ್ಲ, ಸಾಹೇಬರು ಇಲ್ಲಾ, ಒಂದು ವಾರ   ಬಿಟ್ಟು ಬನ್ನಿ ಹೀಗೆ ಹಾಗೆ ಎಂದು  ಎರಡು ಮೂರು ತಿಂಗಳು ಸತಾಯಿಸಿತೊಡಗಿದರು. ಇದರಿಂದ ಬೇಸತ್ತ ಸತೀಶ ನೇರವಾಗಿ ವಿದ್ಯುತ್ ಮಂಡಳಿಯ ಹಿರಿಯ ಅಧಿಕಾರಿಗಳಿಗೆ, ರಾಜ್ಯದ ಮುಖ್ಯಮಂತ್ರಿಗಳಿಗೆ,  ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಅವರಿಂದ ಉತ್ತರ ಬರುವಷ್ಟರಲ್ಲಿಯೇ ತನ್ನ ಮತ್ತೊಬ್ಬ ಸ್ನೇಹಿತನ ಸಲಹೆಯ ಮೇರೆಗೆ ಸೌರವಿದ್ಯುತ್ ಅಳವಡಿಸಿಕೊಳ್ಳುಲು ಮುಂದಾದನು. ಎರಡು ಮೂರು ತಿಂಗಳು ಕಾರ್ಖಾನೆ ನಡೆದಿರಲಿಲ್ಲ, ಮನೆ ಕಟ್ಟಿ ಕೈಯಲ್ಲಿ ಇದ್ದ ಹಣವೆಲ್ಲಾ ಖರ್ಚಾಗಿ ಸೌರವಿದ್ಯುತ್ಗೆ ಬೇಕಾದ ಹಣವನ್ನು ಹೊಂಚಲು ಹತ್ತಿದರಲ್ಲಿದ್ದ ಸಹಕಾರೀ ಬ್ಯಾಂಕ್ ಒಂದನ್ನು ಸಂಪರ್ಕಿಸಲು, ಅವರಿಂದಲೂ ಹೆಚ್ಚಿನ ಸಹಾಯ ದೊರಕದಿದ್ದಾಗ, ಹಾಗೂ ಹೀಗೂ ತನ್ನ  ಸ್ನೇಹಿತರ ಸಹಾಯದಿಂದ   ತನ್ನ  ಅಡಿಕೆ ತಟ್ಟೆಯ ಕಾರ್ಖಾನೆ ಮತ್ತು ಮನೆಗೆ ಅವಶ್ಯಕವಾಗುವುದಕ್ಕಿಂತ ಹೆಚ್ಚಿನ ವಿದ್ಯುತ್ತನ್ನು   ಸೌರಶಕ್ತಿಯ ಸಹಾಯದಿಂದಲೇ ಅಳವಡಿಸುಕೊಳ್ಳುವಷ್ಟರಲ್ಲಿಯೇ ವಿದ್ಯುತ್ ಮಂಡಳಿಗೆ  ಪ್ರಧಾನ ಮಂತ್ರಿಗಳ ಕಛೇರಿಯಿಂದ ಪತ್ರವೊಂದು ಬಂದು ಒಬ್ಬ ಮಹಿಳೆ ಸ್ವಂತ ಪರಿಶ್ರಮದಿಂದ ಗುಡಿಕೈಗಾರಿಕೆ ಆರಂಭಿಸಲು ಪ್ರಯತ್ನಿಸುತ್ತಿದ್ದರೆ, ಅದಕ್ಕೆ ಪೂರಕವಾಗಿ ಸಹಾಯ ಮಾಡುವ ಬದಲು ನಿರುತ್ಸಾಹ ತೋರುತ್ತಿರುವ ಮಂಡಳಿಗೆ ಛೀಮಾರಿ ಹಾಕಿ ಆದಷ್ಟು ಕೂಡಲೇ ಅಗತ್ಯವಿರುವಷ್ಟು  ವಿದ್ಯುತ್ ಸರಬರಾಜು ಮಾಡಲು ತಿಳಿಸುತ್ತಾರೆ.  ಪ್ರಧಾನ ಮಂತ್ರಿಗಳ ಕಛೇರಿಯಿಂದಲೇ ಪತ್ರ ಬಂದದನ್ನು  ನೋಡಿ ವಿದ್ಯುತ್ ಮಂಡಳಿಯ ಅಧಿಕಾರಿಗಳು ಎದ್ದೆನೋ ಬಿದ್ದೆನೋ ಎನ್ನುವಂತೆ ಸತೀಶನ ಮನೆಗೆ ಬಂದು ಅಗತ್ಯವಿರುವ ಎಲ್ಲಾ ಸಹಾಯಗಳನ್ನು ಮಾಡಲು ಸಿದ್ದರಿರುವುದಾಗಿ ತಿಳಿಸುತ್ತಾರೆ. ಆದರೆ ಸತೀಶ್ ದಂಪತಿಗಳು ಈಗಾಗಲೇ ಸೌರಶಕ್ತಿಯ ಮೇಲೆ ಬಹಳಷ್ಟು ಹಣ ವ್ಯಯಿಸಿದ್ದರಿಂದ ತಮ್ಮ ಕಾರ್ಖಾನೆ ಮತ್ತು ಮನೆಗೆ ಅವಶ್ಯಕವಾಗಿದ್ದಷ್ಟನ್ನು ಬಳೆಸಿಕೊಂಡು ಹೆಚ್ಚಿನ ವಿದ್ಯುತ್ತನ್ನು ವಿದ್ಯುತ್ ಮಂಡಳಿಗೆ ಹಿಂತಿರುಗಿ ಮಾರುವಂತಹ ಒಪ್ಪಂದಕ್ಕೆ ಬರುತ್ತಾರೆ.  ಸತೀಶ್ ದಂಪತಿಗಳು ಈ ಎಲ್ಲಾ ಸಮಸ್ಯೆಗಳಿಂದ ಆರಂಭದಲ್ಲಿ ಸ್ವಲ್ಪ ಹಣ ಮತ್ತು ಸಮಯವನ್ನು ಕಳೆದುಕೊಂಡರೂ , ಕೂಡಲೇ ಅದರಿಂದ ಸಾಕಷ್ಟು ಕಲಿತರು. ತಮ್ಮ ಮನೆಗೆ ಅಳವಡಿಸಿಕೊಂಡಿದ್ದ ಸೌರಶಕ್ತಿ ವಿದ್ಯುತ್ ಉಪಕರಣಗಳ ಪ್ರಯೋಜನವನ್ನು ತಮ್ಮೆಲ್ಲಾ ಬಂಧು ಮಿತ್ರರಿಗೂ ವಿವರಿಸಿ ಅವರಿಗೂ ಅದರಿಂದಾಗುವ ದೀರ್ಘಕಾಲದ ಲಾಭಗಳನ್ನು ಸವಿವರವಾಗಿ ಪಿಪಿಟಿ ಪ್ರೆಸೆಂಟೇಷನ್ ಮಾದರಿಯಲ್ಲಿ  ಪ್ರಚಾರ ಮಾಡಿ ಇಂದು ತಮ್ಮ ಅಡಿಕೆ ತಟ್ಟೆಯ ವ್ಯವಹಾರದೊಂದಿಗೆ ಸೌರವಿದ್ಯುತ್ ವ್ಯವಹಾರವನ್ನೂ ಜೊತೆ ಜೊತೆಗೆ ಯಶಸ್ವಿಯಾಗಿ ಮಾಡುತ್ತಿದ್ದಾರೆ.  ಯಾವ ಸಹಕಾರಿಬ್ಯಾಂಕ್ ಇವರಿಗೆ ಸಾಲವನ್ನು ಕೊಡಲು ಹಿಂದೇಟು ಹಾಕಿತ್ತೋ, ಇಂದು ಅದೇ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ ಸತೀಶ್.  ಈಗ ಸತೀಶ್ ದಂಪತಿಗಳ ಮಗನೂ ತನ್ನ ವಿದ್ಯಾಭ್ಯಾಸ ಮುಗಿಸಿ ಅಡಿಕೆ ತಟ್ಟೆ ತಯಾರು ಮಾಡುವ ಯಂತ್ರದಲ್ಲಿ ಬಾರೀ ಮಾರ್ಪಾಡನ್ನು ಮಾಡಿ ಅತ್ಯಂತ ಸರಳ ಖರ್ಚಿನಲ್ಲಿ ಗ್ರಾಮೀಣ ಭಾಗಗಳಲ್ಲಿಯೂ, ಸೌರವಿದ್ಯುತ್ನಿಂದ ಸುಲಭವಾಗಿ ಅಳವಡಿಸಬಹುದಾದ ಯಂತ್ರವನ್ನು ಆವಿಷ್ಕರಿಸಿ ಅದರ ಪೇಟೆಂಟ್ ಕೂಡ ಪಡೆದು ತನ್ನ ಪೋಷಕರೊಂದಿಗೆ  ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರೆ, ಸತೀಶ್ ದಂಪತಿಗಳು ಗ್ರಾಮೀಣ ಭಾಗದ  ಯುವಕರಿಗೆ  ಅಡಿಕೆ ತಟ್ಟೆ ಮತ್ತು ಸಗಣಿ  ಅನಿಲ ಯಂತ್ರಗಳ  ತರಭೇತಿ ನೀಡಿ ಸ್ವಾವಲಂಭಿಯಾಗಿ ಬದುಕಲು ಪ್ರತೀ ತಿಂಗಳೂ ರಾಜ್ಯದ ಹಲವಾರು ಭಾಗಗಳಲ್ಲಿ ತರಬೇತಿ ನೀಡುತ್ತಿದ್ದಾರೆ.

ಶಂಕರನ ಸ್ನೇಹಿತರು ಧೈರ್ಯದಿಂದ  ಇಷ್ಟೆಲ್ಲಾ ಸಾಧನೆ ಮಾಡಿದ್ದರೂ, ಅಂತಹ ಸಾಹಸಕ್ಕೆ ಕೈಹಾಕಲು ಭಯ ಪಟ್ಟ ಶಂಕರ ಇಂದಿಗೂ ಮತ್ತೊಂದು ಐಟಿ ಕಂಪನಿಯಲ್ಲಿ  ಉದ್ಯೋಗಿಯಾಗಿಯೇ ತಿಂಗಳ ಸಂಬಳ ಎಣಿಸುವ ಕಾರ್ಮಿಕನಾಗಿಯೇ ಉಳಿದಿದ್ದಾನೆ. ಅವನ ಸ್ನೇಹಿತರಾದ ಬಾಲ ಓದಿದ್ದು ಬಿಕಾಂ ಆದರೆ ಅದಕ್ಕೇ ಕಟ್ಟು ಬೀಳದೆ, ಸಪೋರ್ಟ್ ಇಂಜಿನಿಯರ್ ಡಿಟಿಪಿ ಆಪರೇಟರ್, ಸಾಫ್ಟ್ಬೇರ್ ಡೆಪೆಲಪರ್,  ಇಂದು ಉತ್ತಮ ಕೃಷಿಕ ಮತ್ತು ಕೆಲವು ಕಾರ್ ಮಾಲಿಕ. ಸತೀಶ್ ಓದಿದ್ದು ಬಿಎಸ್ಸಿ, ಕೆಲಸ ಆರಂಭಿಸಿದ್ದು ಅಕೌಂಟೆಂಟ್ , ಸಪೋರ್ಟ್ ಇಂಜಿನಿಯರ್,  ಈಗ ಇಡೀ  ಕುಟುಂಬವೇ ಯಶಸ್ವೀ ಉದ್ಯಮಿಗಳಾಗಿದ್ದಾರೆ ಮತ್ತು ನೂರಾರು ಗ್ರಾಮೀಣ ಪ್ರದೇಶದ ಜನರಿಗೆ ಆಶಾಕಿರಣವಾಗಿದ್ದಾರೆ.

ಇದೇ ರೀತಿ RTT (Ramesh Tours & Traves) ಮಾಲಿಕರದ್ದೂ ಒಂದು ಅದ್ಭುತ ಪಯಣ. ತಂದೆಯವರ ಪಾರಂಪರಿಕ ಕ್ಷೌರಿಕ ವೃತ್ತಿಯಿಂದ ಆರಂಭಿಸಿ, ತನ್ನ ತಾಯಿಯವರು ಮನೆಗೆಲಸ ಮಾಡುತ್ತಿದ್ದ ಮನೆಯ ಮಾಲಕಿಯ ಸಹಾಯದಿಂದ  ಮಾರುತಿ ಆಮ್ನಿ ಗಾಡಿಯನ್ನು ಖರೀದಿಸಿ ನಂತರ ಒಂದೊಂದೇ ಕಾರ್ ಖರೀದಿಸುತ್ತಾ ಇಂದು ಜಗತ್ತಿನ ಅತ್ಯಂತ ಪ್ರಸಿಧ್ಧವಾದ ನೂರಾರು ಕಾರ್ ಗಳ ಒಡೆಯರಾಗಿ ಬೆಂಗಳೂರಿಗೆ ಆಗಮಿಸುವ ಎಲ್ಲಾ ಗಣ್ಯಾತೀತ ವ್ಯಕ್ತಿಗಳಿಗೆ ಕೆಲವೊಂದು ಬಾರೀ  ಖುದ್ದಾಗಿ ತಾವೇ ವಾಹನ ಚಲಾಯಿಸುತ್ತಾ  ಸಮಯ ಸಿಕ್ಕಾಗಲೆಲ್ಲಾ ಕ್ಷೌರಿಕ ವೃತ್ತಿಯನ್ನೂ ಮುಂದುವರಿಸುತ್ತಿದ್ದಾರೆ.

ಈ ಮೇಲೆ ತಿಳಿಸಿದ ಎಲ್ಲಾ ನಿದರ್ಶನಗಳು ಕಾಲ್ಪನಿಕಕ್ಕೆ ಹೊರತಾಗಿ ನಿಜವಾದ ಸಾಧಕರ ಸಾಧನೆಯಾಗಿದೆ ಮತ್ತು ಅವರ ನಿತ್ಯದ  ಬದುಕಾಗಿದೆ. ಸುಮ್ಮನೆ ಕೆಲಸವಿಲ್ಲ, ಅಥವಾ ಮಾಡುತ್ತಿರುವ ಕೆಲಸದಲ್ಲಿ  ಸಂಬಳ ಸಾಲುತ್ತಿಲ್ಲ ಎಂದು ಯಾವುದೇ ಅಡ್ಡದಾರಿ ಹಿಡಿಯದೇ, ಸರ್ಕಾರವನ್ನು ತೆಗಳುತ್ತ ಕಾಲ ದೂಡದೇ, ಸರ್ಕಾರೀ ಸೌಲಭ್ಯಗಳನ್ನು ಸರಿಯಾಗಿ ಬಳೆಸಿಕೊಳ್ಳುತ್ತಾ ತಾವು ಪಡೆದ ಪದವಿಯ ಹೊರತಾಗಿ ಹೊಸ ಹೊಸಾ ದಾರಿಗಳನ್ನು ಕಂಡು ಕೊಳ್ಳುತ್ತಾ, ಧೈರ್ಯದಿಂದ ಎದುರಾಗಿದ್ದ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ  ತಮ್ಮ ಸ್ವಸಾಮರ್ಥ್ಯದಿಂದ ಸಾಧಕರಾಗಿದ್ದಲ್ಲದೆ ಹಲವಾರು ಯುವಕರಿಗೆ ಅನುಕರಣೀಯರಾಗಿದ್ದಾರೆ. ಛಲವೊಂದಿದ್ದರೆ ಗೆಲುವು ಸದಾ ನಮ್ಮದೇ ಎನ್ನುವುದಕ್ಕೆ  ಇಂತಹ ಸಾಧಕರೇ ನಿಜವಾದ ಉದಾಹರಣೆಯಲ್ಲವೇ?

ಏನಂತೀರೀ?

ಕೆಲಸ

ಶಂಕರ ಮತ್ತು  ಹರಿ ಇಬ್ಬರೂ ಪ್ರಾಣ ಸ್ನೇಹಿತರು. ಒಂದು ರೀತಿಯ ಚೆಡ್ಡಿ ದೋಸ್ತು ಕುಚಿಕು ಗೆಳೆಯರು. ಇಬ್ಬರೂ ಒಂದೇ ಶಾಲೆ .  ಹರಿ ತಂದೆ ಮತ್ತು ಶಂಕರನ ತಂದೆ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಆವರಿಬ್ಬರ ಮನೆ ಒಂದೇ ಕಡೆ ಇದ್ದುದ್ದರಿಂದ ಅವರಿಬ್ಬರ ಒಡನಾಟ ಹೆಚ್ಚಾಗಿಯೇ ಇತ್ತು.   ಹರಿಯ ತಾತ ಮತ್ತು ಚಿಕ್ಕಪ್ಪ ಅಡುಗೆ  ವೃತ್ತಿಯಲ್ಲಿದ್ದು ಅವರ ಮನೆಯಲ್ಲಿ ಏನಾದಾರೂ ವಿಶೇಷ ಆಡುಗೆ ಮಾಡಿದ್ದಲ್ಲಿ ಅದರಲ್ಲಿ ಶಂಕರನಿಗೆ ಒಂದು ಪಾಲು ಇದ್ದೇ  ಇರುತ್ತಿತ್ತು ಅಂತಹ ಗೆಳೆತನ ಅವರಿಬ್ಬರದ್ದು.

ಹರಿ, ಶಂಕರನಿಗಿಂತ ಓದಿನಲ್ಲಿ ಚುರುಕು. ಸದಾ ಪುಸ್ತಕದ ಹುಳು. ಶಂಕರನ ಹೊರತಾಗಿ ಅವನಿಗೆ ಬೇರಾವ ಗೆಳೆಯರೂ ಇರರಲಿಲ್ಲ. ಒಟ್ಟಿನಲ್ಲಿ ತಾನಾಯ್ತು, ತನ್ನ ಪಾಡಾಯ್ತು ಎನ್ನುವಂತಹವನು.  ಶಾಲೆಯಲ್ಲಿ ಅವನೇ ಎಲ್ಲರಿಗಿಂತಲೂ ಮೊದಲು. ಶಂಕರನೋ ಓದಿನಲ್ಲಿ ಸುಮಾರು. ಆದರೆ ಆಟೋಟಗಳಲ್ಲಿ ಚುರುಕು.  ಸಾಮಾನ್ಯ  ತಿಳುವಳಿಕೆಯಲ್ಲಿ  ಬಹಳ ಚುರುಕು.  ಸ್ನೇಹಜೀವಿ, ಕಲ್ಲನ್ನೂ ಮಾತನಾಡಿಸಬಲ್ಲಂತಹ ಛಾತಿಯವ. ಸದಾ ಪರರ ಹಿತಕ್ಕಾಗಿಯೇ ಕಾಯುವವ. ಹೈಸ್ಕೂಲಿನ ತನಕ ಒಟ್ಟಿಗೇ ಒಂದೇ ತರಗತಿಯಲ್ಲಿ ಓದಿದವರು ಕಾಲೇಜಿನಲ್ಲಿ ಹರಿ ವಿಜ್ಣಾನ ವಿಷಯ ತೆಗೆದುಕೊಂಡು ಇಂಜಿನಿಯರ್ ಆಗಿ ಪ್ರತಿಷ್ಠಿತ ಕಂಪನಿಯಲ್ಲಿ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಕೆಲಸ ಗಿಟ್ಟಿಸಿ ಮೊದಲನೇ  ತಿಂಗಳಿನಿಂದಲೇ  ಐದಂಕೆಯ ಸಂಬಳ ಪಡೆಯತೊಡಗಿದ. ಶಂಕರ ಕಾಮರ್ಸ್ ವಿಷಯ ತೆಗೆದುಕೊಂಡು ಬಿಕಾಂ ಮುಗಿಸಿ ಅಲ್ಲಿಲ್ಲಿ ಸಣ್ಣ ಪುಟ್ಟ ಕಡೆ ಕೆಲಸ ಮಾಡುತ್ತಿದ್ದ. ಪುರುಸೊತ್ತು ಇದ್ದಾಗಲೆಲ್ಲಾ ಹರಿಯವರ ಚಿಕ್ಕಪ್ಪನ ಜೊತೆ ಅಡುಗೆ ಕೆಲಸಕ್ಕೆ ಹೋಗುತ್ತಾ ಸರಿ ಸುಮಾರಾಗಿ ಅಡುಗೆ ಕೆಲಸವನ್ನೂ ಕಲಿತು ಅದರಲ್ಲಿ ಸಂಪಾದಿಸಿದ ಅಲ್ಪ ಸ್ವಲ್ಪ ಹಣವನ್ನು ಮನೆಗೂ ಕೊಡುತ್ತಾ ಜೀವನ ಸಾಗಿಸುತ್ತಿದ್ದ.

ಕೆಲಸದಲ್ಲಿ ಚುರುಕಾಗಿದ್ದ ಹರಿ ಬಲು ಬೇಗನೆ ಎತ್ತರದ ಹುದ್ದೆಗೆ ತಲುಪಿ ತನ್ನ ಗೆಳೆಯ ಶಂಕರನ ಆರ್ಥಿಕ ಪರಿಸ್ಥಿತಿ ನೋಡಲಾದರೆ ತನ್ನ  ಪ್ರಭಾವ ಬೀರಿ ತನ್ನದೇ ಕಛೇರಿಯ ಫೈನಾನ್ಸ್ ಡಿಪಾರ್ಟ್ಮೆಂಟ್ನಲ್ಲಿ  ಅಕೌಂಟೆಂಟ್ ಕೆಲಸ ಕೊಡಿಸಿ ಮತ್ತೆ  ಅವರಿಬ್ಬರೂ ಕಛೇರಿಗೆ ಒಟ್ಟಿಗೆ ಹೋಗಿ ಬರುವಂತವರಾದರು. ಇಬ್ಬರಿಗೂ ಮದುವೆಯಾಗಿ ಎರಡೆರಡು ಮಕ್ಕಳ ತಂದೆಯಾದರು.  ಆರ್ಥಿಕವಾಗಿ ಸಧೃಡನಾಗಿದ್ದ ಹರಿ, ತನ್ನ ಮಕ್ಕಳನ್ನು ಲಕ್ಷಾಂತರ ವಂತಿಕೆ ನೀಡಿ ನಗರದ ಅತ್ಯಂತ  ಪ್ರತಿಷ್ಠಿತ ಶಾಲೆಗೇ ಸೇರಿಸಿದ್ದ. ನಗರದ ಪ್ರತಿಷ್ಠಿತ ವ್ಯಕ್ತಿಗಳ ಮಕ್ಕಳೆಲ್ಲಾ ಅದೇ ಶಾಲೆಯಲ್ಲಿ ಓದುತ್ತಿದ್ದರು. ಆ ಶಾಲೆಯಲ್ಲಿ ತಮ್ಮ ಮಕ್ಕಳು ಓದುತ್ತಿದ್ದಾರೆ ಎಂದರೇನೇ ಪೋಷಕರಿಗೆ ಏನೋ ಒಂದು ಪ್ರತಿಷ್ಠೆ.  ಆ ಶಾಲೆಗೆ ಬರುವ ಮಕ್ಕಳೆಲ್ಲಾ ದೊಡ್ಡ ದೊಡ್ಡ  ಕಾರಿನಲ್ಲಿಯೇ ಓಡಾಟ ಹಾಗಾಗಿ ಹರಿ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲು ಕಂತಿನಲ್ಲಿ ಕೊಂಡಿದ್ದ ದುಬಾರಿ ಕಾರು ಅದನ್ನು ಚಲಾಯಿಸಲು ಚಾಲಕ. ಮಕ್ಕಳನ್ನು ಶಾಲೆಗೆ ಬಿಟ್ಟು ಮತ್ತು ಸಂಜೆ ಕರೆದುಕೊಂಡು ಬರುವ ಮಧ್ಯೆ ಸಿಗುವ ಸಮಯದಲ್ಲಿ ಹರಿಯ ಹೆಂಡತಿ ತನ್ನ ಗೆಳತಿಯರ ಮನೆಗೋ ಇಲ್ಲವೇ  ಶಾಪಿಂಗ್ ಮಾಡಲು ಕಾರನ್ನು ಉಪಯೋಗಿಸಿಕೊಳ್ಳುತ್ತಿದ್ದಳು. ದುಡ್ಡು ಹೆಚ್ಚಾದ ಮೇಲೆ ಹರಿ ತನ್ನ ಘನತೆಗೆ ತಕ್ಕಂತೆ ದೊಡ್ಡದಾದ ಅಪಾರ್ಟ್ಮೆಂಟ್ ಕಂತಿನಲ್ಲಿ ಕೊಂಡು  ಅತ್ಯಂತ ಅದ್ದೂರಿಯಿಂದ, ಮೋಜು ಮಸ್ತಿಯ ಜೀವನ ನಡೆಸುತ್ತಿದ್ದರು.

ಇತ್ತ ಶಂಕರ ತನ್ನ ತನಗೆ ಬರುತ್ತಿದ್ದ ಸಂಬಳದಲ್ಲಿ  ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಅವರ ಮದುವೆ ಮುಂಜಿಗಳಿಗೆ ಎಂದು ಸ್ವಲ್ಪ ಸ್ವಲ್ಪ ಕೂಡಿಡುತ್ತಾ, ತನ್ನ ಮನೆಯ ಹತ್ತಿದರಲ್ಲೇ ಇದ್ದ ಉತ್ತಮ ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದ.   ಸಮಯದ ಅನುಕೂಲದಂತೆ ಶಂಕರನ ತಂದೆಯವರಾಗಲೀ ಅಥವಾ ಅವನ ಮಡದಿಯಾಗಲೀ ದ್ವಿಚಕ್ರ ವಾಹನದಲ್ಲಿ ಶಾಲೆಗೆ ಬಿಟ್ಟು ಬರುತ್ತಿದ್ದರು. ಇಬ್ಬರಿಗೂ ಪುರುಸೊತ್ತಿಲ್ಲದಿದ್ದರೆ ಮಕ್ಕಳೇ ಬಿಎಂಟಿಸಿ ಬಸ್ಸಿನಲ್ಲೇ ಶಾಲೆಗೆ ಹೋಗುತ್ತಾ ಮಧ್ಯಮ ವರ್ಗದ ಜನರಂತೆ ಸುಖಃ ಸಂತೋಷದಿಂದ ಜೀವನ ನಡೆಸುತ್ತಿದ್ದರು.

ಅದೊಂದು ದಿನ ಜಾಗತೀಕ ಮಟ್ಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಅವರ ಕಛೇರಿ ಅಚಾನಕ್ಕಾಗಿ ಮುಚ್ಚಿ ಹೋಯಿತು. ಕಛೇರಿಯಲ್ಲಿ ಕೆಲಸಮಾಡುತ್ತಿದ್ದ ಎಲ್ಲಾ ಉದ್ಯೋಗಿಗಳಿಗೂ ಒಂದು ತಿಂಗಳ ಸಂಬಳ ಕೊಟ್ಟು ಮನೆಗೆ ಕಳುಹಿಸಿಬಿಟ್ಟರು. ಹಾಗಾಗಿ ಶಂಕರ ಮತ್ತು ಹರಿ ಇಬ್ಬರೂ ನಿರುದ್ಯೋಗಿಗಳಾಗಿಬಿಟ್ಟರು. ಹರಿ, ತಾನು ಹೇಗೋ ವಿದ್ಯಾವಂತ, ತನಗೆ ಸಾಕಷ್ಟು ಅನುಭವವಿದೆ ಹಾಗಾಗಿ ಕೆಲಸ ಸಿಗುವುದು ಕಷ್ಟವಾಗದು ಎಂದು ಎಣಿಸಿ ತನಗೆ ಗೊತ್ತಿದ್ದ ಎಲ್ಲಾ ಸ್ನೇಹಿತರಿಗೂ ತನಗೆ ಯಾವುದಾದರೂ ಕೆಲಸ ಹುಡುಕಿಕೊಡಲು ತಿಳಿಸಿ, ಹಲವಾರು ಜಾಬ್ ಪೋರ್ಟಲ್ನಲ್ಲಿ ತನ್ನ ರೆಸ್ಯೂಮ್ ಪೋಸ್ಟ್ ಮಾಡಿ ಕೆಲವು ಜಾಬ್ ಕನ್ಸಲ್ಟೆನ್ಸಿ ಗಳಿಗೂ ತನ್ನ ರೆಸ್ಯೂಮ್ ಕಳುಹಿಸಿ ಅವರಿಂದ ಯಾವುದಾದರೂ ಕೆಲಸದ ಕರೆ ಬರಬಹುದೆಂದು ಎಣಿಸುತ್ತಾ ಮನೆಯಲ್ಲೇ ದಿನ ಕಳೆಯಲು ಶುರುಮಾಡಿದ. ಆರಂಭದ ಮೂರ್ನಾಲ್ಕು ವಾರ ಕಾಲ ಕಳೆದದ್ದು ತಿಳಿಯಲಿಲ್ಲ. ಆಮೇಲೆ ಮನೆಯಲ್ಲಿ ಉಳಿಯುವುದು ಕಷ್ಟವಾಗತೊಡಗಿತು.  ಜಾಗತೀಕ ಸಮಸ್ಯೆಯಿಂದಾಗಿ ಬಹುತೇಕ ಕಂಪನಿಗಳು ಮುಚ್ಚಿಹೋಗಿದ್ದರಿಂದ ಎಲ್ಲೂ ಯಾರೂ ಮೂರ್ನಲ್ಕು ತಿಂಗಳು  ಹರಿಯನ್ನು  ಕೆಲಸಕ್ಕೆ ಕರಿಯಲೇ ಇಲ್ಲ,  ಮನೆ ಸಾಲ, ಕಾರ್ ಸಾಲ, ಮಕ್ಕಳ ಐಶಾರಾಮ್ಯ  ಜೀವನದ ಶೈಲಿಯಿಂದಾಗಿ ಹಣ ನೀರಿನಂತೆ ಖರ್ಚಾಗತೊಡಗಿತು. ಕೂಡಿಟ್ಟ ಹಣ ಎಷ್ಟುದಿನ ತಾನೇ ಬಂದೀತು?  ಕೈಯಲ್ಲಿದ್ದ ಹಣ ಕಡಿಮೆಯಾಗ ತೊಡಗಿದಂತೆ ಹರಿಯ ಸಹನೆಯ ಕಟ್ಟೆಯೂ ಒಡೆಯತೊಡಗಿತು. ಸಣ್ಣ ಸಣ್ಣ ವಿಷಯಗಳಿಗೂ ತಾಳ್ಮೆ ಕಳೆದುಕೊಂಡು ಎಲ್ಲರ ಮೇಲೂ ರೇಗಾಡುತ್ತಿದ್ದ. ಅವನ ಈ ದುವರ್ತನೆ ಮಡದಿ ಮಕ್ಕಳಿಗೂ ಬೇಸರ ತರಿಸಿತ್ತು.

ಇತ್ತ ಶಂಕರನೂ ಸಹಾ ತನಗೆ ಗೊತ್ತಿದ್ದ ಎಲ್ಲಾ ಸ್ನೇಹಿತರಿಗೂ ಕರೆ ಮಾಡಿ ತನ್ನ ಕೆಲಸ ಹೋದದ್ದನ್ನು ತಿಳಿಸಿ ತನಗೆ ಸೂಕ್ತವಾದ ಕೆಲಸ ಇದ್ದಲ್ಲಿ ತಿಳಿಸಲು ಹೇಳಿ ಮನೆಯಲ್ಲಿ ಸುಮ್ಮನೆ ಕೂರದೆ, ಹರಿಯ ಚಿಕ್ಕಪ್ಪನ ಜೊತೆ ಆಡುಗೆ ಕೆಲಸಕ್ಕೆ ಹೋಗತೊಡಗಿದ. ಪತಿಯ ಕಷ್ಟವನ್ನು  ಅರ್ಥ ಮಾಡಿಕೊಂಡ ಮಡದಿ ತನ್ನ ಕೈಯಲ್ಲಿ ಆದಷ್ಟೂ ಮನೆಯ ಖರ್ಚನ್ನು ಕಡಿಮೆ ಮಾಡುತ್ತಾ  ಮನೆಯಲ್ಲೇ ತನಗೆ ಗೊತ್ತಿದ್ದ ಮೆಣಸಿನಪುಡಿ, ಹುಳಿಪುಡಿ, ಚಟ್ನಿಪುಡಿ, ಪುಳಿಯೋಗರೆ ಗೊಜ್ಜು, ತರತರಹದ ಉಪ್ಪಿನಕಾಯಿಗಳನ್ನು ಮಾಡಿ ತನಗೆ ಗೊತ್ತಿದ್ದವರೆಲ್ಲರಿಗೂ ಮಾರಿ ತನ್ನ ಕೈಯಲ್ಲಿ ಆಗುವಷ್ಟು ಸಂಪಾದಿಸತೊಡಗಿದಳು.  ಹರಿ ಚಿಕ್ಕಪ್ಪನಿಗೆ  ಶಂಕರ ಜೊತೆಗೂಡಿದ್ದು ಆನೆಯ ಬಲ ಬಂದಂತಾಗಿತ್ತು. ಹರಿಯ ಚಿಕ್ಕಪ್ಪ ಆಡುಗೆ ಮನೆಯ ಕೆಲಸದಲ್ಲಿ ತೊಡಗಿದರೆ, ಶಂಕರ ಹೊರಗಡೆಯ ಕೆಲಸ ನೋಡಿ ಕೊಳ್ಳತೊಡಗಿದ. ಮಾರುಕಟ್ಟೆಗೆ ಹೋಗಿ ಸಾಮನು ಸರಂಜಾಮುಗಳನ್ನು ತರುವುದು, ತರಕಾರಿ ಹಣ್ಣುಗಳನ್ನು ತರುವುದು, ಮಾಡಿದ ಅಡುಗೆಯನ್ನು ಸರಿಯಾದ ಸಮಯಕ್ಕೆ  ಸರಿಯಾದ ಜಾಗಕ್ಕೆ ತಲುಪಿಸಿ ಅದನ್ನು ವಿತರಿಸಿ ಬರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡತೊಡಗಿದ. ತನಗೆ ಪರಿಚಯ ಇದ್ದ ಎಲ್ಲರಿಗೂ ತನ್ನ ಅಡುಗೆ ಕಾಟ್ರಾಂಕ್ಟ್  ಬಗ್ಗೆ ತಿಳಿಸಿ ಅವರ ಮನೆಯ ಸಭೆ ಸಮಾರಂಭಗಳ ಅಡುಗೆ ಕೆಲಸ ಗಿಟ್ಟಿಸತೊಡಗಿ ಅಡುಗೆ ಕೆಲಸದಲ್ಲಿಯೇ ನಿರತನಾದ ಕಾರಣದಿಂದಾಗಿ ತನಗೆ ಕೆಲಸ ಹೋಗಿ ನಿರುದ್ಯೋಗಿಯಾಗಿರುವೆ ಎನ್ನುದನ್ನೇ ಮರೆತು ಹೋಗಿದ್ದ.  ಶುಚಿ ರುಚಿಯಾಗಿ ಎಲ್ಲರ ಕೈಗೆಟುಕುವಂತೆ ದುಬಾರಿಯಾಗದೆ ಕೆಲಸ ಮಾಡುತ್ತಿದ್ದರಿಂದ  ಅಡುಗೆ ಕೆಲಸಗಳೂ ಹೆಚ್ಚು ಹೆಚ್ಚಾಗಿ ಬರತೊಡಗಿದ ಕಾರಣ ಹರಿಯ ಚಿಕ್ಕಪ್ಪ ಮತ್ತು ಶಂಕರನ ಸಂಗಡಿಗರಿಗೆ ತಮ್ಮ ಗ್ರಾಹಕರನ್ನು ಸಂತೃಪ್ತಿ ಪಡಿಸುವುದೇ ಕಷ್ಟವಾಗತೊಡಗಿತು.

ಅದೊಂದು ದಿನ ಶಂಕರ ಯಾವುದೋ ಕೆಲಸದ ನಿಮ್ಮಿತ್ತ ಹೊರಗೆ ಹೋಗಿದ್ದಾಗ ಹರಿಯ ಮೊಬೈಲ್ನಿಂದ ಕರೆ ಬಂದಿತು. ಬಹಳ ದಿನಗಳ ನಂತರ ಹರಿಯ ಕರೆಯನ್ನು ಕೇಳಿ ಸಂತೋಷಗೊಂಡು ಕರೆಯನ್ನು ಸ್ವೀಕರಿಸಿ, ಹೇಳೋ ಹರಿ ಹೇಗಿದ್ದೀಯಾ? ಕೆಲಸ ಹೋದ ಮೇಲೆ ಪತ್ತೇನೇ  ಇಲ್ಲಾ? ಇಲ್ಲೇ ಇದ್ಯಾ ಇಲ್ಲಾ ಯಾವುದಾದರೂ ಊರಿಗೆ ಹೋಗಿಬಿಟ್ಯಾ?  ನಿನಗೆ ಬಿಡಪ್ಪಾ ಎಲ್ಲರೂ ಕರೆದು ಕೆಲಸ ಕೊಡ್ತಾರೆ ಅಂತಾ ಒಂದೇ ಸಮನೆ ಮಾತಾನಾಡತೊಡಗಿದರೆ ಅತ್ತ ಕಡೆಯಿಂದ ಮಾತೇ ಕೇಳಿಸದೆ ಬರೀ ಅಳುವ ಶಬ್ಧ ಕೇಳಿಬರುತ್ತಿತ್ತು.  ಹರಿ, ಹರಿ, ಏನಾಯ್ತೋ ? ಯಾಕೋ ಅಳ್ತಾ ಇದ್ಯಾ ಹೇಳೋ ಅಂತಾ ಜೋರಾಗಿ ಕೂಗಿದಾಗ, ಅತ್ತ ಕಡೆಯಿಂದ ಅಳು ನಿಲ್ಲಿಸಿ, ಅಣ್ಣಾ, ನಾನು ಹರಿಯ ಹೆಂಡತಿ ಮಾತನಾಡುತ್ತಿದ್ದೇನೆ. ನಮ್ಮ ಮನೆಯವರಿಗೆ ತುಂಬಾನೇ ಹುಷಾರಿಲ್ಲದೆ ಆಸ್ಪತ್ರೆಗೆ ಸೇರಿಸಿದ್ದೇವೆ. ನನಗೆ ಕೈಕಾಲು ಆಡುತ್ತಿಲ್ಲ.  ಅದಕ್ಕೇ ನಿಮಗೆ ಕರೆ ಮಾಡಿದೆ ಎಂದರು.  ಆತ್ಮೀಯ ಗೆಳೆಯನಿಗೆ ಹುಶಾರಿಲ್ಲದ್ದನ್ನು ಕೇಳಿ ಆತಂಕ ಗೊಂಡ ಶಂಕರ ತನ್ನ ಸಹೋದ್ಯೋಗಿಗಳಿಗೆ  ಕೆಲಸ ನೋಡಿಕೊಳ್ಳಲು ತಿಳಿಸಿ, ಗೆಳೆಯನನ್ನು ಸೇರಿಸಿದ್ದ ಆಸ್ಪತ್ರೆಯ ಕಡೆಗೆ ಧಾವಿಸಿ ಹೋಗಿ ನೋಡಿದರೆ ಗೆಳೆಯನ್ನು ತುರ್ತುನಿಗಾ ಘಟಕದಲ್ಲಿ ಮೂಗಿಗೆ ಕೃತಕ ಉಸಿರಾಟ ಮುಖವಾಡ ಹಾಕಿದ್ದಾರೆ, ಕೈಗೆ ಡ್ರಿಪ್ಸ್ ಹಾಕಿದ್ದಾರೆ. ಪ್ರಜ್ಞೆ ಇಲ್ಲದೆ ಮಲಗಿದ್ದ ಕುಚಿಕು ಗೆಳೆಯನನ್ನು ನೋಡಿ ಶಂಕರನ ಕರುಳು ಚುರುಕ್ ಎಂದಿತು.  ಹೊರಗೆ ಬಂದು ಹರಿಯ ಹೆಂಡತಿಯವರ ಬಳಿ ಬಂದು ಹರಿಗೆ ಏನಾಯ್ತು ಎಂದು ವಿಚಾರಿಸಿದಾಗ ಅವರು ಹೇಳಿದ ವಿಷಯ ನಿಜಕ್ಕೂ ಆಶ್ಚರ್ಯ ತರುವಂತಿತ್ತು.

ಐದಾರು ತಿಂಗಳಿನಿಂದ ಕೆಲಸವಿಲ್ಲದ ಹರಿ ಆಕ್ಷರಶಃ ಕಂಗೆಟ್ಟಿದ್ದ. ಕೆಲಸ ಹೋಗಲಿ, ಕೆಲಸದ ಸಂದರ್ಶನವೂ ಸರಿಯಾಗಿ ಬರುತ್ತಿರಲಿಲ್ಲ. ಬಂದ ಒಂದೆರಡು ಸಂದರ್ಶನಗಳಲ್ಲಿ  ಇವನ ಅನುಭವ ಹೆಚ್ಚಾಗಿದೆ ಎಂದು ತಿರಸ್ಕರಿಸಿದರೆ ಇನ್ನು ಕೆಲವರು ಇವನ  ಕೆಲಸ ಕಳೆದು ಕೊಂಡ ಪರಿಸ್ಥಿತಿಯ ದುರ್ಲಾಭ ಪಡೆಯಲು ಅವನು ಅದಾಗಲೇ ಪಡೆಯುತ್ತಿದ್ದ ಸಂಬಳಕ್ಕಿಂತಲೂ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ಕೋರುತ್ತಿದ್ದರಿಂದ ಹರಿ ಬಹಳ ನೊಂದು ಖಿನ್ನತೆಗೆ ಒಳಗಾಗಿ ಇಂದು ಅಚಾನಕ್ಕಾಗಿ ಮನೆಯಲ್ಲಿ ಕುಸಿದು ಬಿದ್ದು ಲಘು ಹೃದಯಾಪಘಾತಕ್ಕೆ ಒಳಗಾಗಿದ್ದ.   ಕೆಲಸ ಇಲ್ಲದಿದ್ದ ಕಾರಣ  ಆರೋಗ್ಯ ವಿಮೆಯೂ ಇರಲಿಲ್ಲವಾದ್ದರಿಂದ ಶಂಕರನೇ ತನ್ನ ಬಳಿ ಇದ್ದ ದುಡ್ಡಿನಿಂದ ಆಸ್ಪತ್ರೆಯ ಬಿಲ್ ಕಟ್ಟಿ ಒಂದು ವಾರದ ನಂತರ ಹರಿಯನ್ನು ಮನೆಗೆ ಕರೆದು ತಂದಿದ್ದ.

ಹರಿ ಪುನಃ ಚೇತರಿಸಿಕೊಳ್ಳುವವರೆಗೂ ಶಂಕರ ಪ್ರತಿ ದಿನ ಹರಿಯ ಮನೆಗೆ ಬಂದು ಹೋಗಿ ಮಾಡುತ್ತಾ ಮನೆಯ ಎಲ್ಲಾ ಖರ್ಚುಗಳನ್ನು ನಿಭಾಯಿಸತೊಡಗಿದ್ದ. ದೇವರ ದಯೆಯೋ ಗೆಳೆಯನ ಆರೈಕೆಯ ಫಲದಿಂದಾಗಿ ಹರಿ ವೇಗವಾಗಿಯೇ ಚೇತರಿಸಿಕೊಂಡು ಮನೆಯ ಮುಂದೆ ವಾಕಿಂಗ್ ಮಾಡುವಷ್ಟು ಚೇತರಿಸಿಕೊಂಡ. ಗೆಳೆಯನ ಚೇತರಿಕೆ ನೋಡಿ ಖುಷಿಯಾದ ಶಂಕರ ಒಂದು ದಿನ ಹರಿಗೆ ತಮ್ಮ ಆಡುಗೆ ಮನೆಗೆ ಕರೆದು ಕೊಂಡು ಹೋಗಿ ತಮ್ಮ ಕೆಲಸವನ್ನು ತೋರಿಸಿ, ಸುಮ್ಮನೆ ಮನೆಯಲ್ಲಿ ಕುಳಿತು ಆರೋಗ್ಯ ಕೆಡಿಸಿಕೊಳ್ಳುವ ಬದಲು ಇಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ನೋಡಿ ಕೊಂಡರೆ ತಮಗೂ ಸಹಾಯವಾಗುತ್ತದೆ ಮತ್ತು ಹರಿಯ ಮನಸ್ಸಿಗೂ ಬೇಜಾರು ಕಳೆಯುತ್ತದೆ ಎಂದ.  ಶಂಕರನ ಮಾತನ್ನು ಕೇಳಿದ ಹರಿ, ಒಮ್ಮಿಂದೊಮ್ಮೆಲೆ ಗೆಳೆಯನ ಮೇಲೆ ಹೌಹಾರಿದ. ನಾನೇನು? ನನ್ನ ಅಂತಸ್ತೇನು? ನಾನು ನಿಮ್ಮ ಜೊತೆ ಅಡುಗೆ ಕೆಲಸ ಮಾಡುವುದಾ? ನನಗೆ ಆ ಕೆಲಸವೆಲ್ಲಾ ಇಷ್ಟಾ ಇಲ್ಲ. ಅದೇನಿದ್ದರೂ ನನ್ನ ತಾತ ಮತ್ತು ಚಿಕ್ಕಪ್ಪನ ಕಾಲಕ್ಕೇ ಇರಲಿ ಎಂದು ಕೂಗಾಡಿದ.

ಹರಿಯ ಕೂಗಾಟವನ್ನು ಕೇಳಿದ ಹರಿಯ ಚಿಕ್ಕಪ್ಪನವರೂ ಹೊರಗೆ ಬಂದು ಹರಿಯನ್ನು ತಮ್ಮ ಆಡಿಗೆ ಮನೆಯಲ್ಲಿ ನೋಡಿ ಖುಷಿಗೊಂಡು, ನೋಡು ಮಗು, ಯಾವುದೇ ಕೆಲಸದ ಬಗ್ಗೆ ತಾತ್ಸಾರ ಇರಬಾರದು.  ಶ್ರಧ್ಧೆಯಿಂದ ಮಾಡಬೇಕು. ಅಡುಗೆ ಕೆಲಸ ನಮ್ಮ ಕುಲ ಕಸುಬು. ಅಂದು ನಿಮ್ಮ ತಾತ ಅಡುಗೆ ಕೆಲಸ ಮಾಡಿ ನಿಮ್ಮ ತಂದೆಯವರನ್ನು ಓದಿಸಿ ಕೆಲಸಕ್ಕೆ ಸೇರಿಸಿದ್ದರಿಂದಲೇ ಅವರು ನಿನ್ನನ್ನು ಚೆನ್ನಾಗಿ ಓದಿಸಿ ಈ ಮಟ್ಟಕ್ಕೆ ತಂದಿದ್ದಾರೆ. ನೀನು ಮತ್ತು ಶಂಕರ ನಮ್ಮಂತೆ ಇದೇ ಅಡುಗೆ ಕೆಲಸ ಮಾಡಿಕೊಂಡೇ ಇರು ಎಂದು ಹೇಳುತ್ತಿಲ್ಲ. ಬೇರೆ ಕೆಲಸ ಸಿಗುವವರೆಗೂ ಇಲ್ಲಿಗೆ ಬಂದು ನಿನಗೆ ಏನು ಮಾಡಲು ಸಾಧ್ಯವೋ ಅದನ್ನು ಮಾಡು ನಿನಗೂ ಒಂದು ಬದಲಾವಣೆ ಇರುತ್ತದೆ ಮತ್ತು ಚಟುವಟಿಕೆಯಿಂದ ಇದ್ದರೆ ಆರೋಗ್ಯವೂ ಸುಧಾರಿಸುತ್ತದೆ ಎಂದರು.

ಗೆಳೆಯ ಮತ್ತು ಚಿಕ್ಕಪ್ಪನ ಮಾತನ್ನು ಅಷ್ಟು ಸುಲಭವಾಗಿ ತೆಗೆದು ಹಾಕಲು ಆಗದೆ  ಒಲ್ಲದ ಮನಸ್ಸಿನಿಂದಲೇ ಸರಿ ಸರಿ ನಾಳೆಯಿಂದಲೇ ಬರುತ್ತೇನೆ ಎಂದ.  ಹರಿ ಮನೆಗೆ ಬಂದು ಹೆಂಡತಿ ಮತ್ತು ಮಕ್ಕಳೊಂದಿಗೆ ತನ್ನ ಹೊಸ ಜವಾಬ್ಧಾರಿಯ ಬಗ್ಗೆ  ತಿಳಿಸಿದಾಗ ಅವರೆಲ್ಲರೂ ತಾತ್ಸಾರದಿಂದಲೇ ಏನೂ? ನೀವು ಅವರ ಜೊತೆ ಸೇರಿ ಆಡುಗೆ ಕೆಲಸ ಮಾಡ್ತೀರಾ? ಛೀ!! ನಮಗೆಲ್ಲಾ  ಅಸಹ್ಯ ಆಗುತ್ತದೆ. ದಯವಿಟ್ತು ಆ ಕೆಲಸ ಮಾಡಬೇಡಿ. ಬೇರೆಯವರಿಗೆ ಗೊತ್ತಾದರೆ ಗೇಲಿ ಮಾಡುತ್ತಾರೆ ಅಂತ ಹೇಳಿದರೂ, ಪ್ರಾಣ ಸ್ನೇಹಿತ ಮತ್ತು ಚಿಕ್ಕಪ್ಪನವರಿಗೆ ಮಾತು ಕೊಟ್ಟಿದ್ದೇನೆ. ಒಂದೆರಡು ವಾರ ನೋಡ್ತೀನಿ ಇಷ್ಟ ಆಗ್ದೇ ಹೋದ್ರೆ ಬಿಟ್ಟು ಬಿಡ್ತೀನಿ. ಅಷ್ಟರಲ್ಲಿ ಯಾವುದಾದರೂ ಕೆಲಸ ಸಿಕ್ಕಿಬಿಟ್ರೆ ಹೋಗ್ಬಿಡ್ತೀನಿ ಎಂದು ಹೇಳಿ ಮಾರನೆಯ ದಿನದಿಂದಲೇ ಹೊಸ ಕೆಲಸಕ್ಕೆ ಹೋಗ ತೋಡಗಿದ.

ಮೊದಲೆರಡು ದಿನ ಹೊಸ ಕೆಲಸ ಅವನಿಗೆ ರುಚಿಸಲಿಲ್ಲ. ದಿನ ಕಳೆದಂತೆ ಅವನು ಕೆಲಸಕ್ಕೆ ಹೊಂದಿಕೊಳ್ಳ ತೊಡಗಿದ. ಇವರು ಪ್ರತಿಯೊಂದಕ್ಕೂ ಕಷ್ಟ ಪಡುತ್ತಿದ್ದನ್ನು ನೋಡಿ ಮತ್ತು ಇವರ ಕೆಲಸವೆಲ್ಲ ಬಾಯಿ ಮಾತಿನಿಂದಲೇ ನಡೆಯುತ್ತಿತ್ತು ಯಾವುದೇ ಪ್ರಚಾರ ಮಾಡುತ್ತಿರದಿದ್ದನ್ನು ಸೂಕ್ಷ್ಮವಾಗಿ ಗಮನಿಸಿ  ಅವರ ಅಡುಗೆಗಳ ಒಳ್ಳೋಳ್ಳೆಯ ಫೋಟೋಗಳನ್ನು ತೆಗೆದು ಅದರ ವಿವರವನ್ನು  ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ನಂತರ ಇವರದ್ದೇ ಆದ ಒಂದು  ಸಣ್ಣದಾದ ವೆಬ್ ಸೈಟ್ ಆರಂಭಿಸಿ ಇವರ  ಎಲ್ಲಾ ವಿವರಗಳನ್ನು  ಪ್ರಚಾರ ಮಾಡಿದ. ತನಗೆ ಗೊತ್ತಿದ್ದ ಒಂದೆರಡು ಕಛೇರಿಯ ತಿಂಡಿ  ಮತ್ತು  ಊಟದ ಕಂಟ್ರಾಕ್ಟ್ ಕೊಡಿಸಿದ. ವೆಬ್ ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರದಿಂದ ಇವರಿಗೆ ಹೆಚ್ಚು ಹೆಚ್ಚು ಕೆಲಸಗಳು ಸಿಗತೊಡಗಿದವು. ಇವರ ಗುಂಪಿಗೆ ಇನ್ನಷ್ಟು ಜನರನ್ನು ಸೇರಿಸಿ ಕೊಂಡು ಸಣ್ಣದಾಗಿ ಮನೆಯಲ್ಲೇ ಮಾಡುತ್ತಿದ್ದ ಅಡುಗೆ ಕೆಲಸ ಈಗ  ದೊಡ್ಡದಾಗಿ ಒಂದು ಕಂಪನಿಯ ಹಾಗೆ ಮಾರ್ಪಾಟಾಯಿತು.  ಕಂಪನಿಗಳಿಗೆ ಆಹಾರ ಸರಬರಾಜು ಮಾಡುವುದಲ್ಲದೆ   ದಿನದಿಂದ ದಿನಕ್ಕೆ ಇವರಿಗೆ  ಮದುವೆ, ಮುಂಜಿ, ನಾಮಕರಣಗಳ ಜೊತೆಗೆ ದೊಡ್ದ ದೊಡ್ಡ  ಸಭೆ ಸಮಾರಂಭಗಳ ಕೆಲಸವೂ ಸಿಗತೊಡಗಿತು.

ಶಂಕರ ಒಳ್ಳೆಯ ಸಾಮಾನು ಸರಂಜಾಮುಗಳನ್ನು ತರುತ್ತಿದ್ದರೆ, ಹರಿಯ ಚಿಕ್ಕಪ್ಪನವರ ಸಾರಥ್ಯದಲ್ಲಿ  ಶುಚಿ ರುಚಿಯಾದ ಆಹಾರ ತಯಾರಾದರೆ, ಹರಿ ಅದನ್ನು ಕಾರ್ಪೋರೇಟ್ ಮಾದರಿಯಲ್ಲಿ ಎಲ್ಲರ ಮುಂದೆ ಪ್ರಸ್ತುತ ಪಡಿಸಿ ದೊಡ್ಡ  ಕೆಲಸಗಳನ್ನು ಗಿಟ್ಟಿಸಿ ಕೈ ತುಂಬಾ ಸಂಪಾದಿಸ ತೊಡಗಿದರು. ಮುಂದೆ ಹರಿ ಮತ್ತು ಶಂಕರನ ಮಕ್ಕಳು ಸಹ ಆಹಾರದ ವಿಷಯವಾಗಿಯೇ ಹೆಚ್ಚಿನ ವಿದ್ಯಾಬ್ಯಾಸ ಮಾಡಿ ತಮ್ಮ ತಂದೆಯರ ಜೊತೆಯಲ್ಲಿ ಕೆಲಸ ಮಾಡ ತೊಡಗಿದರು.    ಇವೆಲ್ಲದರೆ ಜೊತೆ, ಶಂಕರನ ಮನೆಯಲ್ಲಿ  ಸಣ್ಣದಾಗಿ ತಯಾರಾಗುತ್ತಿದ್ದ  ಸಿಧ್ಧ ಅಡುಗೆ ಪದಾರ್ಥಗಳು, ಚಟ್ನಿ ಪುಡಿ, ಹುಳಿ ಪುಡಿ, ಸಾರಿನಪುಡಿ, ಉಪ್ಪಿನ ಕಾಯಿ ಈಗ ದೊಡ್ದ ಮಟ್ಟದಲ್ಲಿ ಕಾರ್ಖಾನೆಯ ರೂಪದಲ್ಲಿ ತಯಾರಗ ತೊಡಗಿದವು. ಹರಿ ತನ್ನ  ವಿದೇಶಿ ಸಂಪರ್ಕದಿಂದ ತಮ್ಮ ಆಹಾರೋತ್ಪನ್ನಗಳನ್ನು ವಿದೇಶಗಳಿಗೂ ರಫ್ತುಮಾಡತೊಡಗಿ ಕೆಲವೇ ವರ್ಷಗಳೊಳಗೆ ದೇಶದಲ್ಲೇ ಅತೀ ದೊಡ್ಡ ಸಿದ್ದ ಆಹಾರ ಮತ್ತು ಅಡುಗೆ ಕಾಟ್ರಾಂಕ್ಟರ್ ಆಗಿ ಸಾವಿರಾರು ಕೆಲಸಗಾರರಿಗೆ ಕೆಲಸ ಕೊಟ್ಟು ಕೋಟ್ಯಾಂತರ ಹಣವನ್ನು ಸಂಪಾದಿಸಿ ನೆಮ್ಮದಿಯಿಂದ, ಆರೋಗ್ಯವಾಗಿ,ಸ್ವಾವಲಂಭಿಯಾಗಿ, ಪರೋಪಕಾರಿಯಾಗಿ ಸಾವಿರಾರು ಜನರ ಆಶ್ರಯದಾತರಾಗಿ ಸುಖವಾಗಿ ಜೀವನ ನಡೆಸುತ್ತಿದ್ದಾರೆ.  ಹರಿ ಮತ್ತು ಶಂಕರನ ತಂದೆಯರಿಂದ ಶುರುವಾದ ಗೆಳೆತನ, ಹರಿ ಮತ್ತು ಶಂಕರನಿಂದ ಮುಂದುವರೆದು ಈಗ ಹರಿಯ ದೊಡ್ಡ ಮಗನಿಗೆ ಶಂಕರನ ಮಗಳೊಂದಿಗೆ ಸಂಬಂಧ ಬೆಳೆಸಿ ಒಂದೇ ಕುಟುಂಬಸ್ತರಾಗಿದ್ದಾರೆ.

ನೆಮ್ಮದಿಯ ಜೀವನ ನಡೆಸಲು ವಿದ್ಯೆ ಅವಶ್ಯಕವಾದರೂ ವಿದ್ಯೆ ಕಲಿತ ಮೇಲೆ ಮಾಡುವ ಕೆಲಸದ ಮೇಲಿನ ಕೀಳರಿಮೆ ಇರಬಾರದು. ಹರಿಗೆ ವಿದ್ಯೆ ಇತ್ತು  ಅವನಿಗೆ ಜೀವನದಲ್ಲಿ ಎತ್ತರೆತ್ತರಕ್ಕೆ ಹೋಗುವ ಮಾರ್ಗ ಗೊತ್ತಿದ್ದರೂ ಸಮಸ್ಯೆಗಳು ಬಂದಾಗ ಅದನ್ನು ಬಗೆ ಹರಿಸುವ ಪರಿ ಗೊತ್ತಿರಲಿಲ್ಲ.  ಶಂಕರನಿಗೆ ವಿದ್ಯೆಗಿಂತ ಲೋಕ ಜ್ಞಾನ ಹೆಚ್ಚಾಗಿತ್ತು.  ಕೆಲಸದ ಮೇಲಿನ ಕೀಳರಿಮೆ ಇರಲಿಲ್ಲ ಮತ್ತು ಸಮಸ್ಯೆಗಳನ್ನು ಬಂದಾಗ ಅದನ್ನು  ಪರಿಹರಿಸುವ ಪರಿಜ್ಞಾನ ಇದ್ದ ಪರಿಣಮವಾಗಿಯೇ ಕೆಲಸ ಕಳೆದು ಕೊಂಡರೂ ಆಡುಗೆ ಕೆಲಸಕ್ಕೆ ಇಳಿಯುವ ಮೂಲಕ  ಅದೇ ಕೆಲಸವನ್ನು ಶ್ರದ್ಧಾ ಭಕ್ತಿಯಿಂದ ಮಾಡಿ ಉದ್ದಾರವಾಗಿದ್ದಲ್ಲದೆ ತನ್ನ ಗೆಳೆಯನ ಕಣ್ಣನ್ನು ತೆರಿಸಿ ಅವನಿಗೆ ತನ್ನ ಕುಲ ಕಸುಬಿನ ಮೇಲಿದ್ದ ಕೀಳರಿಮೆಯನ್ನು ಹೋಗಾಲಾಡಿಸಿ ಇಂದು  ಅವನನ್ನು ಅದೇ ಕೆಲಸದ ಮೂಲಕ ಸಮಾಜದ ಪ್ರತಿಷ್ಟಿತ ವ್ಯಕ್ತಿಯನ್ನಾಗಿಸಿದ.

ಇಂದಿನ ಯುವಜನತೆ  ತನ್ನ ವಿದ್ಯೆಗೆ ತಕ್ಕಂತಹ ಕೆಲಸವೇ ಬೇಕು. ಆರಂಭದಿಂದಲೂ ಐದಂಕಿಯ ಸಂಬಳವೇ ಬೇಕು, ಐಶಾರಾಮೀ ಜೀವನವೇ ಇರಬೇಕು ಎಂದು ಕನಸು ಕಾಣುತ್ತಾ ನಿರುದ್ಯೋಗಿಯಾಗಿರುವ ಬದಲು.   ಇನ್ನೊಬ್ಬರ ಕೈಕೆಳಗೆ ಕೆಲಸ  ಮಾಡುತ್ತಾ ತಿಂಗಳ ಕೊನೆಯ ದಿನಂಕವರೆಗೂ ಕಾದು ಸಂಬಳ ಪಡೆದ ಮೂರ್ನಾಲ್ಕು ದಿನಗಳ ಒಳಗೇ  ಅದನ್ನು ಖರ್ಚು ಮಾಡಿಕೊಂಡು ಮುಂದಿನ ಸಂಬಳದವರೆಗೂ ಕಾಯುವ ಬದಲು ತಾವೇ  ತಮಗೆ ಗೊತ್ತಿರುವ ಕೆಲಸವನ್ನೇ ಶ್ರಧ್ಧೆಯಿಂದ ಮಾಡುತ್ತಾ  ಸ್ವಾವಲಂಭನೆಯಿಂದ ಮತ್ತಷ್ಟು ಜನರಿಗೆ ಆಶ್ರಯದಾತರಾಗಿ ನೆಮ್ಮದಿಯ ಜೀವನ ನಡೆಸ ಬಹುದಲ್ಲವೇ?

ಏನಂತೀರೀ?

ಆಹಾರದ ಸದ್ಬಳಕೆ

ಆಶಾಡ ಕಳೆದು ಶ್ರಾವಣ, ಬಾದ್ರಪದ, ಆಶ್ವಯುಜ ಮತ್ತು ಕಾರ್ತೀಕ ಮಾಸಗಳು ಬಂದಿತೆಂದರೆ ಎಲ್ಲರಿಗೂ ಸುಗ್ಗಿಯೋ ಸುಗ್ಗಿ. ತರಕಾರಿ, ಹೂವು ಹಣ್ಣು ವ್ಯಾಪಾರಿಗಳಿಗೆ, ದಿನಸಿ, ಬಟ್ಟೆ ವ್ಯಾಪಾರಿಗಳಿಗೆ, ಎಲ್ಲರೀತಿಯ ಛತ್ರದವರಿಗೆ, ಬಾಣಸಿಗರಿಗೆ, ಪುರೋಹಿತರಿಗೆ ಪುರುಸೊತ್ತೇ ಇರುವುದಿಲ್ಲ. ಹೆಚ್ಚಿನ ಸಮಯಗಳಲ್ಲಿ ಒಳ್ಳೆಯ ಮಹೂರ್ತದ ಜೊತೆಗೆ ಛತ್ರ, ಅಡುಗೆಯವರ ಮತ್ತು ಪುರೋಹಿತರ ಸಮಯವನ್ನೂ ನೋಡಿಕೊಂಡೇ ಮದುವೆ ಮುಂಜಿಗಳನ್ನು ನಿರ್ಧರಿಸಬೇಕಾದಂತಹ ಪರಿಸ್ಥಿತಿ ಬಂದೊದಗಿದೆ.

ಈ ಶುಭ ಸಂದರ್ಭಗಳಲ್ಲಿ, ಎರಡು ಮೂರು, ಗೃಹಪ್ರವೇಶಗಳು, ಒಂದೆರೆಡು ನಿಶ್ಚಿತಾರ್ಥ, ಒಂದೆರಡು ಮದುವೆ ಮತ್ತು ಹುಟ್ಟಿದ ಹಬ್ಬಕ್ಕೆ ಹೋಗಲೇ ಬೇಕಾದ ಪರಿಸ್ಥಿತಿ. ತುಂಬಾ ಆತ್ಮೀಯವಾಗಿ, ಪ್ರೀತಿಯಿಂದ, ಇಂದಿನ ಕಾಲದಲ್ಲೂ ಮನೆಯವರೆಗೂ ಬಂದು ಆತ್ಮೀಯವಾಗಿ ಆಮಂತ್ರಿಸಿದಾಗ ಹೋಗದಿದ್ದರೆ, ಅವರಿಗೆ ವಿಶ್ವಾಸಕ್ಕೆ ಮತ್ತು ಬಂಧುತ್ವಕ್ಕೆ ಮಾಡಿದ ಅಪಮಾನ ಎಂದು ಕಛೇರಿಯ ನಡುವಿನಲ್ಲೂ ಅಲ್ಪ ಸ್ವಲ್ಪ ಸಮಯ ಮಾಡಿಕೊಂಡು ಸಪತ್ನಿ ಸಮೇತರಾಗಿ ಹೋಗಿರುವ ಎಷ್ಟೋ ಉದಾಹರಣೆಗಳು ಉಂಟು. ಇಂದಿನ ಕಾಲದಲ್ಲಿ ಮಂತ್ರಕ್ಕಿಂತ ತಂತ್ರವೇ ಹೆಚ್ಚು ಎನ್ನುವಂತೆ ಶಾಸ್ತ್ರ ಸಂಪ್ರದಾಯಕ್ಕಿಂತಲೂ ಫೋಟೋ ವೀಡೀಯೋಗಳಲ್ಲಿ ತೋರಿಕೆಯ ಆಡಂಬರವೇ ತುಸು ಹೆಚ್ಚೇ ಎನಿಸಿದರು ಕಾಲಾಯ ತಸ್ಮೈ ನಮಃ ಎಂದು ಯಾವುದೇ ಚಕಾರವೆತ್ತದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಸಭೆ ಸಮಾರಂಭಗಳ ಕರ್ತರು ಮತ್ತು ಪುರೋಹಿತರು ಶಾಸ್ತ್ರ ಸಂಪ್ರದಾಯದ ಕಡೆ ಗಮನಿಸಿದರೆ ಬಹುತೇಕ ಕಾರ್ಯಕ್ರಮಕ್ಕೆ ಬಂದವರೆಲ್ಲರ ಗಮನವೆಲ್ಲವೂ ಊಟ ತಿಂಡಿ ತೀರ್ಥಗಳ ಬಗ್ಗೆಯೇ ಇರುತ್ತದೆ ಎಂದು ಹೇಳಿದರೆ ಉತ್ಪ್ರೇಕ್ಷೆ ಏನಲ್ಲ. ಅದೇ ರೀತಿ ಕಾರ್ಯಕ್ರಮ ಬಹುತೇಕ ಮುಗಿಯುವ ಹಂತಕ್ಕೆ ಬಂದು ಎಲ್ಲರೂ ಉಡುಗೊರೆಗಳನ್ನು ಕೊಟ್ಟು ಮನೆಯವರಿಗೆಲ್ಲಾ ಶುಭಕೋರಿ ಊಟದ ಮನೆಯತ್ತ ಧಾವಿಸುವುದರಲ್ಲಿಯೇ ನಿರತರಾಗಿರುತ್ತಾರೆ.

ಹಿಂದೆಲ್ಲಾ ಅಚ್ಚು ಕಟ್ಟಾಗಿ ತೊಳೆದ ಅಗ್ರದ ಬಾಳೆ ಎಲೆಯನ್ನೋ ಇಲ್ಲವೇ ಮುತ್ತಗದ ಎಲೆಯನ್ನು ಸಾಲಾಗಿ ನೆಲದ ಮೇಲೆ ಜೋಡಿಸಿ, ಮಂದಲಿಗೆ (ಊಟದ ಚಾಪೆ) ಹಾಸಿ ಸ್ಟೀಲ್ ಲೋಟದ ತುಂಬಾ ನೀರು ತುಂಬಿಸಿ, ಎಲೆಗಳ ಮುಂದೆ ಎರಡೆಳೆಯ ರಂಗೋಲಿ ಎಳೆ ಎಳೆದು ಪ್ರತೀ ಎಲೆಗಳ ಮುಂದೆ ಸಣ್ಣಗೆ ದೀಪ ಹಚ್ಚಿಸಿಟ್ಟು ಊಟ ಮಾಡಲು ಬಂದಿರುವವರಿಗೆ ಸಂಭ್ರಮದ ವಾತಾವರಣ ಸೃಷ್ಟಿ ಮಾಡಿರುತ್ತಿದ್ದರು. ಬಂದವರೆಲ್ಲರೂ ಕೈಕಾಲು ತೊಳೆದುಕೊಂಡು ಸಾಲು ಸಾಲಾಗಿ ಪಂಕ್ತಿಯಲ್ಲಿ ಕುಳಿತು ಕೊಳ್ಳಲು ಆರಂಭಿಸಿದರೆ, ಅಡುಗೆ ಭಟ್ಟರುಗಳು ಸಾಲು ಸಾಲಿನಲ್ಲಿ ಬಂದು, ಎಲೆಯ ಬಲ ತುದಿಗೆ ಪಾಯಸ, ಎಲೆಯ ಅಗ್ರದ ಕಡೆಯಿಂದ ಎಡದಿಂದ ಬಲಕ್ಕೆ ಉಪ್ಪು, ಉಪ್ಪಿನಕಾಯಿ, ಹೆಸರು ಬೇಳೆ ಮತ್ತು ಕಡಲೇ ಬೇಳೆಗಳ ಕೋಸಂಬರಿ, ಅದರ ಪಕ್ಕದಲ್ಲಿ ಅಯಾಯಾ ಕಾಲದ ಅನುಗುಣವಾಗಿ ಲಭಿಸುವ ತರಕಾರಿಗಳ ಎರಡು ರೀತಿಯ ಚೆನ್ನಾಗಿ ಇಂಗು ತೆಂಗಿನ ಒಗ್ಗರಣೆ ಹಾಕಿ ಹದವಾಗಿ ಬಾಡಿಸಿದ ಪಲ್ಯಗಳು, ಅದರ ಮುಂಭಾಗದಲ್ಲಿ ಸಿಹಿ-ಹುಳಿ ಸಮಾಗಮದ ಗೊಜ್ಜು, ಎಲೆಯ ಎಡ ತುದಿಯಲ್ಲಿ ಚಿತ್ರಾನ್ನ ಇಲ್ಲವೇ ಪುಳಿಯೋಗರೆ ಅಥವಾ ಯಾವುದಾದರೂ ಕಲೆಸಿದ ಅನ್ನ. ಅದರ ಮೇಲೆ ಕರಿದ ಹಪ್ಪಳ, ಸಂಡಿಗೆ, ಬಾಳಕದ ಮೆಣಸಿನಕಾಯಿ (ಉಪ್ಪು ಮೆಣಸಿನಕಾಯಿ), ಎಲೆಯ ಬಲ ತುದಿಯಲ್ಲಿ ಬೂದುಕುಂಬಳದ ಮಜ್ಜಿಗೆ ಹುಳಿ, ಎಲೆಯ ಮಧ್ಯ ಭಾಗದಲ್ಲಿ ಬಿಸಿ ಬಿಸಿಯಾದ ಅನ್ನ ಅದರ ಮೇಲೆ ಹುಳಿ ತೊವ್ವೆ ಹಾಕಿ ತುಪ್ಪದ ಆಭಿಗಾರ ಮಾಡಿ, ಊಟದ ಶಾಂತಿ ಮಂತ್ರ ಸಹನಾ ವವತು ಸಾಮೂಹಿಕವಾಗಿ ಹೇಳಿ, ಓಂ ಶಾಂತಿ ಶಾಂತಿ ಶಾಂತಿಃ ಎಂದು ಮುಗಿಸುತ್ತಿದ್ದಂತೆ ಮನೆಯ ಹಿರಿಯರು ತಮ್ಮ ಮನೆ ದೇವರನ್ನು ನೆನೆದು ಗೋವಿಂದ ಹೇಳಿಸಿ, ಭೋಜನ ಕಾಲೇ ಸೀತಾ ರಾಮ ಸ್ಮರಣೆ ಮಾಡಿಸಿ, ಹರ ನಮಃ ಪಾರ್ವತಿ ಪತಯೇ, ಹರ ಹರ ಮಹಾದೇವ ಎಂದು ಹೇಳಿ ಮುಗಿಸುತ್ತಿದ್ದಂತೆಯೇ, ಅಡುಗೆಯವರು ಬಡಿಸುತ್ತಿದ್ದ ಬಿಸಿ ಬಿಸಿ ಹುಳಿದೊವ್ವೆಯನ್ನೂ ಇಲ್ಲವೇ ಚೆನ್ನಾಗಿ ಎಲ್ಲಾ ರೀತಿಯ ತರಕಾರಿ ಹಾಕಿ ಮಾಡಿದ ಹುಳಿ/ಕೂಟನ್ನು ಕಲೆಸಿ ತಿನ್ನುವ ರುಚಿ ವರ್ಣಿಸುವುದಕ್ಕಿಂತ ಅನುಭವಿಸಿದರೆ ಮಾತ್ರ ಆನಂದ. ಆದಾದ ನಂತರ ಕಟ್ಟೆ ಕಲಿಸಿದ ಅನ್ನದ ಮಧ್ಯೆ ಚೆನ್ನಾಗಿ ಹದವಾಗಿ ಕುದಿಸಿ ಇಂಗಿನ ಒಗ್ಗರಣೆ ಹಾಕಿದ ಬಿಸಿ ಬಿಸಿ ಬೇಳೆ ಸಾರು ಅದಕ್ಕೆ ಒಂದೆರಡು ಮಿಳ್ಳೆ ತುಪ್ಪ ಹಾಕಿಸಿಕೊಂಡು ಸಾರು ಎಲೆಯಿಂದ ಜಾರಿ ಹೋಗದಂತೆ ಹದವಾಗಿ ಕಲೆಸಿ ತಿನ್ನುವುದೇ ಒಂದು ಕಲೆ. ಚೆನ್ನಾಗಿ ಕಲೆಸಿದ ಸಾರನ್ನವನ್ನು ಸೊರ್ ಸೊರ್ ಎಂದು ಚಪ್ಪರಿಸಿ ಕೈನ ಐದೂ ಬೆರಳು ಬಾಯಿಯ ಒಳಗೆ ಫೂರ್ತಿ ಹಾಕಿಕೊಂಡು ಸಾರನ್ನ ತಿನ್ನುತ್ತಿದರೆ, ಸ್ವರ್ಗಕ್ಕೆ ಮೂರೇ ಗೇಣು. ಸಾರನ್ನ ತಿಂದು ಮುಗಿಸಿದ ನಂತರ ಅವರವರ ಅಂತಸ್ತಿಗೆ ತಕ್ಕಂತೆ ಲಾಡು, ಬೂಂದಿ, ಬಾದುಶಾ, ಜಿಲೇಬಿ, ಜಾಹಂಗೀರ್ ಇಲ್ಲವೇ ಬೇಳೆ ಒಬ್ಬಟ್ಟು ಅಥವಾ ಕಾಯಿ ಹೋಳಿಗೆ. ಇನ್ನು ಸ್ಥಿತಿವಂತರಾಗಿದ್ದರೆ ಪೇಣಿಯನ್ನೋ ಇಲ್ಲವೇ ಚಿರೋಟಿ ಜೊತೆಗೆ ಬೂರಾ ಸಕ್ಕರೆ ಮತ್ತು ಬಿಸಿ ಬಿಸಿ ಘಮ ಘಮವಾದ ಬಾದಾಮಿ ಹಾಲಿನೊಂದಿಗೆ ಕಲೆಸಿ ತಿಂದು ಮುಗಿಸುವುದರೊಳಗೆ, ಖಾರ ಖಾರವಾದ ಬೂಂದಿ ಇಲ್ಲವೇ ಹೀರೇ ಕಾಯಿ ಬಜ್ಜಿ ಅಥವಾ ಆಲೂಗೆಡ್ಡೆ ಬೋಂಡ ತಿನ್ನುವ ಅನುಭವ ಅವರ್ಣನೀಯ. ಇಷೃರ ಮಧ್ಯದಲ್ಲಿ ಪಂಕ್ತಿಯಲ್ಲಿದ್ದವರು ಯಾವುದಾದರೂ ದೇವರನಾಮವನ್ನೋ ಇಲ್ಲವೆ ಶ್ಲೋಕವನ್ನು ಎತ್ತರದ ಧನಿಯಲ್ಲಿ ಹೇಳಲು ಶುರುಮಾಡಿದರೆ ಒಬ್ಬರಿಗಿಂತ ಮತ್ತೊಬ್ಬರು ಒಂದಾದ ಮೇಲೆ ಮೂರ್ನಾಲ್ಕು ಹಾಡು/ಶ್ಲೋಕಗಳನ್ನು ಹೇಳುವಷ್ಟರಲ್ಲಿ, ಅಡುಗೆಯವರು ಮಾಡಿದ ಎಲ್ಲಾ ಪದಾರ್ಥಗಳನ್ನೂ ಮತ್ತೊಮ್ಮೆ ವಿಚಾರಣೆ ಮಾಡಿದ ನಂತರ ಸಲಿಗೆಯಿಂದ ಬಡಿಸಿದ ಕಲೆಸಿದ ಅನ್ನ ತಿಂದು ಮುಗಿಸಿ ಸ್ವಲ್ಪವೇ ಸ್ವಲ್ಪ ಅನ್ನ ಮೊಸರು ಹಾಕಿಸಿಕೊಂಡು ಅದಕ್ಕೆ ತಕ್ಕಷ್ಟು ಉಪ್ಪು ಹಾಕಿಕೊಂಡು ಕಲೆಸಿಕೊಂಡು ಉಪ್ಪಿನ ಕಾಯಿ ಜೊತೆ ನೆಂಚಿಕೊಂಡು ತಿಂದರೆ ಹೊಟ್ಟೆಯಲ್ಲಿ ತಣ್ಣಗಾದ ಹಿತಾನುಭವ. ಇಷೃರಲ್ಲಿ ಕೊಟ್ಟ ತಾಂಬೂಲವನ್ನು ಎಡಗೈಯಲ್ಲಿ ತೆಗೆದುಕೊಂಡು ಅಲ್ಲಿಯೇ ಅಕ್ಕ ಪಕ್ಕದಲ್ಲಿಯೇ ತೆಂಗಿನಕಾಯಿನ್ನು ಇಟ್ಟು, ಊಟ ಮುಗಿಯುವವರೆಗೂ ತಾಳ್ಮೆಯ ಪ್ರತೀಕವಾಗಿದ್ದವರು ಕೈ ತೊಳೆಯುವ ಹೊತ್ತಿಗೆ ಒಬ್ಬರಿಗಿಂತ ಮತ್ತೊಬ್ಬರು ಕೈ ತೊಳೆಯಲು ಏಕೆ ಆತುರ ತೋರುತ್ತಾರೆ ಎನ್ನುವುದು ಇಂದಿಗೂ ನನಗೆ ತಿಳಿಯದ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಊಟ ಮುಗಿಸಿ ಡರ್ ಎಂದು ತೇಗಿ ಅಲ್ಲಿಯೇ ತಟ್ಟೆಯಲ್ಲಿ ಇಟ್ಟಿದ್ದ ವಿಳ್ಳೇದೆಲೆ ಮತ್ತು ಚೂರಡಿಕೆ ಅದಕ್ಕೆ ಹದವಾಗಿ ಸುಣ್ಣ ಹಚ್ಚಿಕೊಂಡು ಬಾಯಿಯೊಳಗೆ ಮೆಲ್ಲುತ್ತಾ , ನಾಲಿಗೆ ಕೆಂಪಾಗಿದೆಯೇ ಎಂದು ನೋಡಿ ಕೊಂಡು ನಾಲಿಗೆ ಕೆಂಪಾಗಿದ್ದರೆ ಏನು ಸಾಧಿಸಿದಂತಹ ಅನುಭವ.

ಆದರೆ ಇಂದು ಮೇಲೆ ಹೇಳಿದಂತಹ ಬಹುತೇಕ ಪದ್ದತಿಗಳು ಮಾಯವಾಗಿ ಎಲ್ಲವೂ ನಗರೀಕರಣವಾಗಿದೆ. ಬಹುತೇಕ ಸಮಾರಂಭಗಳಲ್ಲಿ ಪಾನಿಪುರಿ, ಬೇಲ್ ಪುರಿ, ಮಸಾಲೆ ಪೂರಿ ಒಂದೆಡೆಯಾದರೆ, ಬಾಳೆಯ ಎಲೆಗಳ ಜಾಗದಲ್ಲಿ ಪ್ಲಾಸ್ಟಿಕ್ ತಟ್ಟೆ, ಲೋಟ, ನೆಲದ ಬದಲು ಕಾಲು ನೋವಿನ ಕುಂಟು ನೆಪ ಹೇಳಿ, ಟೇಬಲ್ಗಳು, ಇಲ್ಲವೇ ನಿಂತೇ ತಿನ್ನುವ ರೂಡಿ. ಕುಡಿಯಲು ನೀರಿನ ಬಾಟೆಲ್ಗಳು, ಬೇಳೆ ಕೊಸಂಬರಿ ಬದಲಾಗಿ ಅಮೇರಿಕನ್ ಜೋಳದ ಕೋಸಂಬರಿ, ಅನ್ನ ತಿಂದರೆ ದಪ್ಪಗಾಗುತ್ತೇವೆಂಬ ಭಯದಿಂದ ಮೈದಾ ಹಿಟ್ಟಿನ ರುಮಾಲಿ ರೋಟಿ ಅಥವಾ ಮೈದಾ ಹಿಟ್ಟಿನ ರೊಟ್ಟಿ, ಅದಕ್ಕೆ ಮಸಾಲೆ ಭರಿತ ಗೊಜ್ಜು, ಜೊತೆಗೆ ಬೇಳೆ ಕಟ್ಟು (ದಾಲ್), ನೆಂಚಿಕೊಳ್ಳಲು ಗೋಬಿ ಮಂಚೂರಿ ಜೊತೆಗೆ ಪಲಾವ್, ಬಿರ್ಯಾನಿ, ಘೀ ರೈಸ್ ಕುರ್ಮಾ, ಹಾಲಿನಿಂದ ತಯಾರಿಸಿದ ಸಿಹಿ ಪದಾರ್ಥಗಳಾದ ರಸಮಲೈ, ಚಂಪಾಕಲಿ, ಚಂ ಚಂ ಎಲ್ಲಾ ತಿಂದು ಮುಗಿಸಿ ಕೈ ತೊಳೆದು ಪಕ್ಕಕ್ಕೆ ಬಂದರೆ ತಣ್ಣಗಿನ ಐಸ್ ಕ್ರೀಮ್ ಜೊತೆಗೆ ಕ್ಯಾರೆಟ್ ಹಲ್ವಾ ಇಲ್ಲವೇ ಗುಲಾಬ್ ಜಾಮೂನು, ಬಗೆ ಬಗೆಯ ಕತ್ತರಿಸಿದ ಹಣ್ಣುಗಳು ಜೊತೆಗೆ ಪಾನ್ ಬೀಡಾಗಳದ್ದೇ ಕಾರು ಬಾರಾಗಿದೆ. ಇನ್ನೂ ಹಾಕಿಸಿಕೊಂಡ ಎಲ್ಲಾ ಪದಾರ್ಥಗಳನ್ನು ಬಹುತೇಕ ಮಂದಿ ಪೂರ್ತಿ ತಿನ್ನುವುದೇ ಇಲ್ಲ. ಕೋಳಿ ಕೆದಕಿದಂತೆ ತಟ್ಟೆಯಲ್ಲಿ ಆಹಾರವನ್ನು ಕೆದಕಿ ತಿನ್ನುವ ಶಾಸ್ತ್ರಮಾಡಿಂತೆ ಮಾಡಿ ಚೆಲ್ಲುವವರೇ ಹೆಚ್ಚಾಗಿದ್ದಾರೆ.

ಇತ್ತೀಚೆಗೆ ನಾನು ಬಹುತೇಕ ಮದುವೆ ಮನೆಗಳಲ್ಲಿ ಊಟ ಮಾಡುತ್ತಿರುವಾಗ ನಿಧಾನವಾಗಿ ಊಟ ಮಾಡಿ, ಸಾವಕಾಶವಾಗಿ ಏನನ್ನು ಬೇಕೋ ಕೇಳಿ ಹಾಕಿಸಿಕೊಳ್ಳಿ ಎಂದು ಹೆಣ್ಣಿನ ತಂದೆ ಮತ್ತು ತಾಯಿಯವರು ಕೈ ಮುಗಿದು ಎಲ್ಲರನ್ನೂ ವಿಚಾರಿಸುವುದನ್ನು ಕಂಡಾಗಲೆಲ್ಲಾ

ಒಂದು ಕ್ಷಣ, ನನಗೆ ಗಂಟಲು ಭಾರವಾಗಿ ಏನನ್ನೂ ನುಂಗಲು ಆಗದಂತಹ ಅನುಭವ. ನಾವೆಲ್ಲರೂ ತಿನ್ನುತ್ತಿರುವುದು ಮಧುಮಗಳ ತಂದೆಯ ಬೆವರಿನ ಪರಿಶ್ರಮದ ಫಲ. ಎಷ್ಟೋ ಕಷ್ಟ ಪಟ್ಟು ಸಾಲ ಸೋಲ ಮಾಡಿ, ನಡೆಸುತ್ತಿರುವ ಮದುವೆಯಲ್ಲಿ ಮಾಡಿಸಿರುವ ಅಡುಗೆಯನ್ನು ತಿನ್ನಲು ನಾವೆಷ್ಟು ಅರ್ಹರು ಎಂಬ ಪ್ರಶ್ನೆ ಕಾಡುತ್ತದೆ. ಮದುವೆ ಮನೆಯಲ್ಲಿ ಅಡುಗೆಗೆ ಉಪ್ಪು ಹೆಚ್ಚಾಗಿದ್ದಲ್ಲಿ ಬೇಸರಗೊಳ್ಳದಿರಿ. ಮಧು ಮಗಳ ತಂದೆ ತಾಯಿಯರ ಕಣ್ಣೀರು ಅಡುಗೆಗೆ ಜಾರಿ ಬಿದ್ದು ಅಡುಗೆ ಉಪ್ಪಾಗಿರಬಹುದು ಎಂಬ ಬರಹವನ್ನು ಇತ್ತೀಚೆಗೆ ವ್ಯಾಟ್ಸಾಪ್ನಲ್ಲಿ ಓದಿದ ನಂತರವಂತೂ ನನ್ನ ಮನಸಿನ ತುಮಲ ಇನ್ನೂ ಹೆಚ್ಚಾಗಿದೆ.

ಪ್ರತಿಯೊಂದು ಧಾನ್ಯ ಧಾನ್ಯಗಳ ಮೇಲೂ ತಿನ್ನುವವರ ಹೆಸರು ಬರದಿರುತ್ತದೆ ಎಂದು ತುಳಸೀ ದಾಸರು ಎಂದೋ ಹೇಳಿರುವಂತೆ , ನಮ್ಮ ಹೆಸರು ಆಂದಿನ ಕಾರ್ಯಕ್ರಮದ ಊಟದ ಮೇಲೆ ಬರೆದ್ದಿದ್ದಲ್ಲಿ ಮಾತ್ರವೇ ನಮಗೆ ತಿನ್ನುವ ಭಾಗ್ಯ ಇಲ್ಲದಿದ್ದಲ್ಲಿ ತಿನ್ನಲು ಅರ್ಹತೆಯೇ ಇರುವುದಿಲ್ಲ ಎಂದು ಎಷ್ಟೋ ಬಾರಿ ನನಗೆ ನಾನೇ ಸಮಾಧಾನ ಪಟ್ಟುಕೊಂಡಿದ್ದೇನೆ.

ಆದರೂ ಇಂದಿನ ಊಟದ ಮೇಲೆ ನಮ್ಮ ಹೆಸರು ಬರೆದಿದೆ ಎಂದು ಸಿಕ್ಕಾ ಪಟ್ಟೆ ಎಲೆಗೆ ಹಾಕಿಸಿಕೊಂಡು ಸುಮ್ಮನೆ ನೈವೇದ್ಯ ಮಾಡಿದಂತೆ ಎರೆಡೆರಡು ಕಾಳು ತಿಂದು ಆಹಾರವನ್ನು ಚೆಲ್ಲುವ ಅಧಿಕಾರ ನಮಗೇನಿದೆ? ಪ್ರಪಂಚಾದ್ಯಂತ ತಿನ್ನುವ ಆಹಾರಕ್ಕೆ ಮತ್ತು ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಿರುವಾಗ ನಾವು ಯಾರದ್ದೋ ಮನೆಯ ಸಮಾರಂಭದಲ್ಲಿ ಆಹಾರವನ್ನು ಅನಗತ್ಯವಾಗಿ ಚೆಲ್ಲುವುದು ಎಷ್ಟು ಸರಿ?

ಹಿಂದಿನ ಕಾಲದಲ್ಲಿ ಅಳಿದುಳಿದ ಎಂಜಲನ್ನು ಮನೆಯಲ್ಲಿ ಸಾಕಿರುವ ಎತ್ತುಗಳಿಗೆ ಕಲಗಚ್ಚಿನ ರೂಪದಲ್ಲಿ ಹಾಕುತ್ತಿದ್ದರು. ನಮ್ಮ ಎಂಜಲನ್ನು ಹಸುಗಳಿಗೆ ತಿನ್ನಿಸುತ್ತಿರಲಿಲ್ಲ. ನಾವು ತಿಂದು ಬಿಸಾಡಿದ ಪದಾರ್ಥಗಳನ್ನೇ ತಿಂದು ನಮಗೆ ಆರೊಗ್ಯಕರವಾದ ಗಟ್ಟಿ ಹಾಲನ್ನು ಹಸುಗಳು ಕೊಡುವ ಕಾರಣ ಅದು ಎಂಜಿಲಾಗುತ್ತದೆ. ಅಂತಹ ಹಾಲು ದೇವರ ನೈವೇದ್ಯಕ್ಕೆ ಬರುವುದಿಲ್ಲ ಎಂಬ ಭಾವನೆಯಾಗಿತ್ತು. ಇನ್ನು ಉಳಿದ ಎಂಜಲು ಎಲೆಗಳನ್ನು ಮನೆಯ ಪಕ್ಕದಲ್ಲಿರುತ್ತಿದ್ದ ತಿಪ್ಪೆಗೆ ಹಾಕಿ ಅದರ ಮೇಲೆ ಸ್ವಲ್ಪ ಮನೆಯ ಆಕಳ ಸಗಣಿಯನ್ನು ಹಾಕಿದರೆ ಫಲವತ್ತಾದ ನೈಸರ್ಗಿಕ ಸಾವಯವ ಗೊಬ್ಬರ ಕೃಷಿಗೆ ಉಚಿತವಾಗಿಯೇ ತಯಾರಾಗುತ್ತಿತ್ತು. ಇನ್ನು ಕೈ ತೊಳೆಯುವ ನೀರು, ಪಾತ್ರೆ ತೊಳೆಯುವ ನೀರು ಸೀದಾ ಮನೆಯ ಮುಂದೆಯೋ ಇಲ್ಲವೇ ಹಿತ್ತಲಿನಲ್ಲಿಯೋ ಹಾಕಿರುವ ಬಾಳೇಗಿಡಗಳಿಗೋ ಇಲ್ಲವೇ ಹೂವಿನ ಗಿಡ ಅಥವಾ ತರಕಾರಿಯ ಕೈತೋಟಕ್ಕೆ ನೀರುಣಿಸುತ್ತಿತ್ತು. ಹೀಗೆ ಪ್ರತಿಯೊಂದು ಕಸವೂ ರಸವಾಗಿ ಮಾರ್ಪಡುತ್ತಿದ್ದವು.

ಆದರೆ ಇಂದು ಪ್ಲಾಸ್ಟಿಕ್ ಯುಕ್ತ ಕಸವನ್ನು ವಿಲೇವಾರಿ ಮಾಡುವುದೇ ಬಹಳ ಸಮಸ್ಯೆಯಾಗಿದ್ದು, ಪರಿಸರದ ಹಾನಿಗೆ ನಮಗರಿವಿಲ್ಲದಂತೆ ನಾವೇ ಕಾರಣೀಕೃತರಾಗುತ್ತಿದ್ದೇವಲ್ಲವೇ? ಕೈ ಮತ್ತು ಪಾತ್ರೆ ತೊಳೆದ ನೀರು ಸೀದಾ ಚರಂಡಿಗೆ ಸೇರಿ ಅದು ಹಾಗೇ ಹರಿದು ಕೆರೆ, ಕೊಳ್ಳ, ನದಿಯನ್ನು ಸೇರಿ ನೀರನ್ನು ಕಲುಷಿತ ಗೊಳಿಸುತ್ತಿರುವುದು ನಿಜಕ್ಕೂ ಆಘಾತಕಾರಿ. ಇನ್ನು ಬಹುತೇಕ ಅಡುಗೆಯ ರುಚಿ ಹೆಚ್ಚಿಸುವುದ್ದಕ್ಕಾಗೆ ಬಳೆಸುತ್ತಿರುವ ತೈಲಗಳು ಎಷ್ಟು ಸುರಕ್ಷಿತ ಎಂದು ಯೋಚಿಸಿದ್ದೇವೆಯೇ? ಶುಧ್ಧ ತುಪ್ಪದ ಹೆಸರಿನಲ್ಲಿ ಪ್ರಾಣಿಗಳ ಕೊಬ್ಬನ್ನು ತಿನ್ನುತ್ತಿರುವುದರಂದಲೇ ಬಹುತೇಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಎಂಬುವ ಅರಿವಿದೆಯೇ? ಇನ್ನು ರಾಸಾಯನಿಕ ಕೃತಕ ಗೊಬ್ಬರಗಳಿಂದ ಬೆಳೆದ ಆಹಾರ, ಕೊಳಕು ಚರಂಡಿ ನೀರಿನಿಂದ ಬೆಳೆದ ತರಕಾರಿಗಳು ನಮ್ಮ ದೇಹಕ್ಕೆ ಎಷ್ಟು ಆರೋಗ್ಯಕರ?

ಹಾಗಂದ ಮಾತ್ರಕ್ಕೇ ನಾನು ಏನನ್ನೂ, ಏಲ್ಲಿಯೂ ತಿನ್ನಬಾರದೆಂದು ಹೇಳುತ್ತಿಲ್ಲ. ನಾವು ತಿನ್ನುವ ಆಹಾರಗಳನ್ನು ಒಮ್ಮೆ ಪರೀಕ್ಷಿಸಿ

ಸಾಧ್ಯವಾದಷ್ಟೂ ಆರೋಗ್ಯಕರವಾದ ಆಹಾರವನ್ನು ಸೇವಿಸೋಣ ಮತ್ತು ಆರೋಗ್ಯಕರ ಜೀವನ ನಡೆಸೋಣ. ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟೇ ಆಹಾರ ಸೇವಿಸಬೇಕೇ ಹೊರತು ಆಹಾರ ಸೇವಿಸುವಕ್ಕೇ ಬದುಕಬಾರದು ಅಲ್ಲವೇ?

ತಿಂದ ಅನ್ನ ಯಾರ ಹೊಟ್ಟೆಯಲ್ಲೂ ಶಾಶ್ವತವಾಗಿ ಇರಲಾರದಾದರೂ, ಹಸಿವನ್ನು ಬಲ್ಲವನಿಗೇ ಮಾತ್ರವೇ, ಆಹಾರದ ಮಹತ್ವದ ಅರಿವಿರುತ್ತದೆ. ನಾವು ತಿನ್ನುವ ಆಹಾರವನ್ನು ಬೆಳೆಯಲು ರೈತ ಬೆವರಿನ‌ ಜೊತೆ, ನೆತ್ತರನ್ನು ಬಸಿದಿರುತ್ತಾನೆ. ಹಾಗಾಗಿ ನಾವು ತಿನ್ನುವ ಆಹಾರವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳೋಣ, ವೃಥಾ ವ್ಯರ್ಥ ಮಾಡುವ ಮೂಲಕ ಅನ್ನದಾತನಿಗೂ ತಾಯಿ‌ ಅನ್ನಪೂರ್ಣೇಶ್ವರಿಗೂ ಅವಮಾನ ಪಡಿಸದಿರೋಣ.

ಇಂದು ವಿಶ್ವ ಆಹಾರ ದಿನ. ಮತ್ತೊಬ್ಬರ ಆಹಾರಕ್ಕೆ ಕೈ ಹಾಕಿ ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲವಾದ ಕಾರಣ, ನಮಗೆಷ್ಟು ಬೇಕೋ ಅಷ್ಟನ್ನು ಮಾತ್ರವೇ ಸೇವಿಸೋಣ. ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಲೋಕಾನೀ ಸನ್ಮಂಗಳಾನಿ‌ ಭವಂತು ಎನ್ನುವ ತತ್ವಕ್ಕೆ ಬದ್ದರಾಗಿರೋಣ.

ಏನಂತೀರೀ?

ಈಸ ಬೇಕು, ಇದ್ದು ಜಯಿಸಬೇಕು

ಶಂಕರ  ತನ್ನ ಸ್ನೇಹಿತರ ಒಡಗೂಡಿ ಕಂಪ್ಯೂಟರ್ ಸಂಬಂಧಿತ ವ್ಯವಹಾರಗಳನ್ನು ಮಾಡುತ್ತಿದ್ದಾಗ, ಅವನ  ಸ್ನೇಹಿತನ ಸಂಬಂಧಿ ಗಣಿ ಇವರ ಜೊತೆಗೆ ಸೇರಿಕೊಂಡ. ಗಣಿ ಎಲೆಕ್ಟ್ರಾನಿಕ್ಸ್ ಸಂಬಂಧ ಪಟ್ಟ ವಿಷಯಗಳಲ್ಲಿ ನಿಜಕ್ಕೂ ಅಪ್ರತಿಮ ಬುದ್ಧಿವಂತ . ಎಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಟ್ಟರೂ ಅದನ್ನು  ರಿಪೇರಿ ಮಾಡಿ ಬಿಡುವ ಛಾತಿ ಇತ್ತಾದರೂ, ಆಗ  ಕಂಪ್ಯೂಟರ್ ಬಗ್ಗೆ ಅಷ್ಟೋಂದು ತಿಳುವಳಿಕೆ ಇರಲಿಲ್ಲ.  ಶಂಕರ ಅದರ ತದ್ವಿರುದ್ಧ. ಶಂಕರನಿಗೆ ಕಂಪ್ಯೂಟರ್ ಬಳಕೆ ತಿಳಿದಿತ್ತು. ಎಲೆಕ್ಟ್ರಾನಿಕ್ಸ್ ಉಪಕರಣಗಳ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿತ್ತು. ಹಾಗಾಗಿ ಇಬ್ಬರೂ ಕೆಲವೇ ದಿನಗಳಲ್ಲಿ ಒಬ್ಬರಿಗೊಬ್ಬರು ತಮಗೆ ತಿಳಿದದ್ದನ್ನು ಹೇಳಿಕೊಡುತ್ತಾ ಅನ್ಯೋನ್ಯ ಗೆಳೆಯರಾಗಿಬಿಟ್ಟರು. ಏನೇ ಮಾಡಬೇಕಿದ್ದರೂ ಇಬ್ಬರೂ ಒಟ್ಟೋಟ್ಟಿಗೆ ಮಾಡುತ್ತಿದ್ದರು. ಇಬ್ಬರೂ ಆರಂಭದ ದಿನಗಳನ್ನು ಹೀರೋ ಪುಕ್ ದ್ವಿಚಕ್ರವಾಹನದಿಂದ ಆರಂಭಿಸಿ ನಂತರ ಬಜಾಜ್ ಚೇತಕ್, ನಂತರ ಮಾರುತಿ ಆಮ್ನಿ ಹೀಗೆ ಹಂತ ಹಂತವಾಗಿ ಜೀವನದಲ್ಲಿ ಏಳ್ಗೆಯಾಗ ತೊಡಗಿದರು.  ಮದುವೆಯಾದದ್ದೂ ಬಹುತೇಕ ಒಂದೇ ಸಮಯ, ಕೆಲವೇ ಕೆಲವು ತಿಂಗಳುಗಳ ಅಂತರ. ಮೊದಲು ಶಂಕರ ಮದುವೆಯಾದ  ನಂತರ ಅವನ ಇತರೇ ಸ್ನೇಹಿತರೂ ಕೆಲವು ದಿನಗಳ ಅಂತರದಲ್ಲಿ ಮದುವೆ ಮಾಡಿಕೊಂಡ ನಂತರ ಸಹಜವಾಗಿ ಗಣಿಯ ಮನೆಯಲ್ಲೂ ಗಣಿಗೆ ಹೆಣ್ಣು ನೋಡಲು ಆರಂಭಿಸಿದರು.  ಗಣಿ ಮೊದಲೇ ವರ್ಕೋಹಾಲಿಕ್. ಕೆಲಸದ ಚಟ ಬಿಟ್ಟರೆ ಮತ್ತೀನ್ನೇನೂ ಇಲ್ಲದವ. ಕೆಲಸಕ್ಕೆ ಒಮ್ಮೆ ಕುಳಿತನೆಂದರೆ ಅದು ಮುಗಿಯುವವರೆಗೂ, ತಿಂಡಿ ಊಟಗಳ ಪರಿವೇ ಇಲ್ಲದವ. ಅಂತಹ ಗಣಿ ತನಗೆ ಮದುವೆ ಬೇಡ ಎಂದು ಹಟ ಹಿಡಿದ.  ಕೊನೆಗೆ ಇಷ್ಟು ಬೇಗ ಬೇಡ ಎಂದು ವರಾತ ತೆಗೆದ.  ನಂತರ ತಂದೆ ತಾಯಿ, ಬಂಧುಗಳು ಮತ್ತು ಶಂಕರನ  ಒತ್ತಾಯಗಳಿಗೆ ಮಣಿದು ತಂದೆ ತಾಯಿ ನೋಡಿದ್ದ ಹೆಣ್ಣನ್ನು ಒಪ್ಪಿ, ವಧುವಿನ ಮನೆಯಲ್ಲಿನ ನಿಶ್ವಿತಾರ್ಥಕ್ಕೆ ಎಲ್ಲರನ್ನೂ ಆಹ್ವಾನಿಸಿದ.  ಮದುವೆ ಆಗುವುದೇ ಇಲ್ಲವೆಂದವ ಮದುವೆ ಆಗುತ್ತಿದ್ದಾನೆ ಎಂದರೆ  ಯಾರಿಗೆ ತಾನೇ ಸಂತೋಷವಾಗದು ಹಾಗಾಗಿ ಎಲ್ಲರೂ ಅವನ ನಿಶ್ವಿತಾರ್ಥಕ್ಕೆ ಅವನ ಭಾವಿ ಪತ್ನಿಯ ಮನೆಗೆ ನಿಗಧಿತ ದಿನದಂದು ಹೋದರು.

ಹುಡುಗಿಯ ತಂದೆಯವರು ಖಾಸಗೀ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದರೆ, ತಾಯಿ ಅಪ್ಪಟ ಗೃಹಿಣಿ. ಇನ್ನು ಅಣ್ಣ ಮತ್ತು ತಂಗಿ ಓದುತ್ತಿದ್ದರೆ, ಹುಡುಗಿ ಪದವಿಯನ್ನು ಆಗ ತಾನೇ ಮುಗಿಸಿದ್ದಾಕೆ. ಹೀಗೆ ಅದೊಂದು ಅಪ್ಪಟ ಮಧ್ಯಮ ವರ್ಗದ, ಸಂಪ್ರದಾಯಸ್ತ ಕುಟುಂಬ. ಗಣಿ ತನ್ನ ಭಾವೀ ಮಾವನವರಿಗೆ  ಶಂಕರನನ್ನು ಪರಿಚಯಿಸುತ್ತಾ ಈತ ನನ್ನ ಪ್ರಾಣ ಸ್ನೇಹಿತ ಎಂದರೆ ಗಣಿಯ ತಂದೆ ಇಂದು ಈ ಶುಭ ಸಮಾರಂಭ ನಡೆಯಲು ಈತನ ಪಾಲೂ ಇದೆ.  ಗಣಿ ಯಾರ ಮಾತನ್ನು ಕೇಳದಿದ್ದರೂ ಇವನ ಮಾತನನ್ನಂತೂ ತೆಗೆದು ಹಾಕುವುದಿಲ್ಲ. ಅವನೂ ಅಷ್ಟೇ, ನಮ್ಮ ಮಗ ಏನಾದರೂ ಹೇಳಿದಲ್ಲಿ ಹಾಗೆಯೇ ನಡೆದುಕೊಳ್ಳುತ್ತಾನೆ. ಒಟ್ಟಿನಲ್ಲಿ ಒಡ ಹುಟ್ಟದಿದ್ದರೂ ಅದಕ್ಕಿಂತ ಮಿಗಿಲಾಗಿ ಇವರಿಬ್ಬರೂ ಇದ್ದಾರೆ ಎಂದು ಹೇಳುತ್ತಿದ್ದರೆ, ಶಂಕರನಿಗೆ ಅವರ ಮಾತುಗಳೆಲ್ಲಾ ಕಿವಿಗೆ ಬೀಳುತ್ತಲೇ ಇರಲಿಲ್ಲ.  ಅವನ ಗಮನವೇನಿದ್ದರೂ ಗಣಿಯ ಮಾವನವರ ಮುಖದ ಮೇಲಿದ್ದ ಕ್ಷಾತ್ರ ತೇಜಸ್ಸಿನ ಕಡೆಗೇ ಇತ್ತು.  ಸತತ ಗಾಯತ್ರೀ ಮಂತ್ರದ ಪಠಣೆಯಿಂದ, ವೇದಾಧ್ಯಯನದಿಂದ ಮತ್ತು ಯೋಗಾಭ್ಯಾಸಗಳಿಂದ ಬೌಧ್ಧಿಕವಾಗಿಯೂ ಮತ್ತು ಶಾರೀರಿಕವಾಗಿಯೂ ಅತ್ಯಂತ ಪ್ರಜ್ವಲವಾಗಿ ಪ್ರಕಾಶಿಸುವಂತಿದ್ದರು.  ಆ ವಯಸ್ಸಿನಲ್ಲಿಯೂ ಅವರನ್ನು ಯಾರೇ ಆಗಲೀ ಒಮ್ಮೆ ನೋಡಿದರೆ, ಶಿರಬಾಗಿ  ಕೈ ಮುಗಿದು ನಮಸ್ಕರಿಸಲೇ ಬೇಕು ಎನ್ನುವಂತಿದ್ದರು. ಅಂತೆಯೇ ಶಂಕರನೂ ಸಹಾ ಆವರಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದ ಹಾಗೆಯೇ ಉಭಯ ಕುಶಲೋಪರಿಯನ್ನು ವಿಚಾರಿಸಿ, ನಿಜಕ್ಕೂ ಗಣಿಯಂತಹ ಅಳಿಯನ್ನು ಪಡೆಯುವುದಕ್ಕೆ ಪುಣ್ಯ ಮಾಡಿದ್ದೀರಿ. ನನ್ನ ಸ್ನೇಹಿತ ಎಂದು ಮುಖಃ ಸ್ತುತಿ ಮಾಡುತ್ತಿಲ್ಲ. ನಿಜಕ್ಕೂ ಅಪ್ಪಟ  ಆಪರಂಜಿಯಂತಹ ಸದಾ ಪರರ ಹಿತವನ್ನೇ ಬಯಸುವ ಹುಡುಗ. ನಿಮ್ಮ ಮಗಳು ನಿಶ್ವಿಂತವಾಗಿರುತ್ತಾಳೆ.  ಇಲ್ಲಿಯವರೆಗೂ ನಿಮಗೆ ಒಬ್ಬ ಗಂಡು ಮಗನಿದ್ದರೆ, ಇನ್ನು ಮುಂದೆ ಅವನ ಜೊತೆ ಹಿರಿಯಣ್ಣನಾಗಿ ನಮ್ಮ ಗಣಿ ಇರುತ್ತಾನೆ ಎಂದು ಧೈರ್ಯದಿಂದ ಹೇಳುತ್ತೇನೆ ಎಂದಾಗ  ಭಾವೀ ಅಳಿಯನ ಬಗ್ಗೆ ಇಂತಹ ಒಳ್ಳೆಯ ಮಾತುಗಳನ್ನು ಕೇಳಿ ಅವರ ಮನಸ್ಸಂತೋಷವಾಗಿದ್ದಂತೂ ಸುಳ್ಳಲ್ಲ. ಹೀಗೆ  ಶಂಕರ ಮತ್ತು ಗಣಿಯ ಮಾವನವರ ಮೊದಲ ಪರಿಚಯವಾಯಿತು.

ಕೆಲ ವರ್ಷಗಳ ನಂತರ  ಗಣಿಯ ಮಾವನವರ ಮನೆಗೆ ಶಂಕರ ಹೋಗಿದ್ದ.   ಮನೆಗೆ ಪ್ರವೇಶಿಸುತ್ತಿದ್ದಂತಯೇ ಮನೆಯ ಮುಂದಿನ ತೋಟ, ನಾನಾ ವಿಧದ ಹೂವಿನ ಗಿಡಗಳಿಂದ  ಎಂದಿಗಿಂತಲೂ ಹೆಚ್ಚಿಗೆ ನಳ ನಳಿಸುತ್ತಿತ್ತು. ಮನೆಯ ಒಳಗಿನಿಂದ ಸುಶ್ರಾವ್ಯ ಸಂಗೀತ ಕೇಳಿ ಬರುತ್ತಿತ್ತು.   ಇಬ್ಬರು ಹೆಣ್ಣು ಮಕ್ಕಳ ಮದುವೆಯನ್ನು ಮಾಡಿ ಮುಗಿಸಿ ಗಣಿನಿಗೂ ಮಗ ಹುಟ್ಟಿದ್ದರಿಂದ ಅವನ ಮಾವನವರು  ಮೊಮ್ಮಕ್ಕಳೊಂದಿಗೆ ನೆಮ್ಮದಿಯಿಂದ  ಕಾಲ ಕಳೆಯಲು ನಿರ್ಧರಿಸಿ, ತಮ್ಮ  ಕೆಲಸದಿಂದ ಸ್ವಯನಿವೃತ್ತಿ ಪಡೆದು ಕೈತೋಟವನ್ನು ನೋಡಿ ಕೊಂಡು ತಮ್ಮ ವೇದಾಧ್ಯಯನ, ಯೋಗ ಮತ್ತು ಸಾಹಿತ್ಯಾಸಕ್ತಿಗಳನ್ನು  ಮುಂದುವರಿಸಿಕೊಂಡು ಹೋಗುತ್ತಿದ್ದದ್ದು ತಿಳಿದುಬಂತು.  ಪರ ಊರಿನಲ್ಲಿದ್ದ  ಗಣಿಯ ಭಾವಮೈದುನ  ಅಂದು ಮನೆಯಲ್ಲಿಯೇ ಇದ್ದನ್ನು  ನೋಡಿ ಹಾಗೆಯೇ ಅವನೊಂದಿಗೆ ಮಾತನಾಡಿಸುತ್ತಿದ್ದಾಗ ಆತ ಅಲ್ಲಿಯ ಕೆಲಸ ಬಿಟ್ಟು ಬಂದು ಇಲ್ಲಿಯೇ  ಕೆಲಸಕ್ಕೆ  ಬಹಳ ದಿನಗಳಿಂದ ಹುಡುಕುತ್ತಿರುವುದನ್ನು ತಿಳಿದ ಶಂಕರ ಕೂಡಲೇ ತನ್ನ ಸ್ನೇಹಿತನಿಗೆ ಕರೆ ಮಾಡಿ ಅವನ ಬಳಿ ಗಣಿಯ ಭಾವ ಮೈದುನನಿಗೆ ಕೆಲಸ ಕೊಡಿಸಿದ. ಬಹಳ ದಿನಗಳಿಂದ ಕೆಲಸವಿಲ್ಲದೇ ಮನೆಯಲ್ಲಿಯೇ ಕಾಲಾಹರಣ ಮಾಡುತ್ತಿದ್ದ ಮಗನಿಗೆ ಕೂಡಲೇ ಕೆಲಸ ಕೊಡಿಸಿದ್ದರಿಂದ ಸಂತಸಗೊಂಡ ಗಣಿಯ ಮಾವನವರು ಶಂಕರನೊಂದಿಗಿನ ಅವರಿಬ್ಬರಲ್ಲಿಯೂ ಇದ್ದ  ಸಮಾನ ವಿಷಯಗಳಾದ ಸಾಹಿತ್ಯ ಮತ್ತು ದೇಶದ ಆಗು ಹೋಗುಗಳ  ಬಗ್ಗೆ ವಿಚಾರಿಸುತ್ತ  ಪರಸ್ಪರ ಇನ್ನೂ ಹೆಚ್ಚಿಗೆ ಆತ್ಮೀಯರಾದರು.

ಕೆಲವು ದಿನಗಳಲ್ಲಿಯೇ ಶಂಕರಿನಿಗೆ ಗಣಿಯಿಂದ ಕರೆ ಬಂದು ತಮ್ಮ ಮಾವನವರಿಗೆ   ಅಪಘಾತವಾದ ಪರಿಣಾಮ ತುರ್ತಾಗಿ ಶಸ್ತ್ರ ಚಿಕಿತ್ಸೆಯ ಪರಿಣಾಮವಾಗಿ ರಕ್ತದ ಅವಶ್ಯಕತೆ ಇದೆಯೆಂದು ತಿಳಿಸಿದ. ಶಂಕರ ತನ್ನ ಪರಿಚಯಸ್ಥರಿಗೆ ಕರೆ ಮಾಡಿ ಅಗತ್ಯವಿದ್ದ ರಕ್ತದಾನಿಗಳನ್ನು  ಆಸ್ಪತ್ರೆಗೆ ಕರೆತಂದು ರಕ್ತವನ್ನು ಕೊಡಿಸಿದ.  ಪರ ಊರಿನಲ್ಲಿ ತಮ್ಮ ಸಂಬಂಧೀಕರ ಮನೆಯಲ್ಲಿ ಹೋಮ ಮುಗಿಸಿಕೊಂಡು ರಾತ್ರಿಯಲ್ಲಿಯೇ ಪ್ರಯಾಣ ಮಾಡುತ್ತಿದ್ದ ಸಂಧರ್ಭದಲ್ಲಿ ಚಾಲಕ ಅಚಾನಕ್ಕಾಗಿ ನಿದ್ರೆಗೆ ಜಾರಿದ ಪರಿಣಾಮ ಗಾಡಿ ಹಳ್ಳಕ್ಕೆ ಬಿದ್ದು ಗಾಢನಿದ್ದೆಯಲ್ಲಿದ್ದ  ಗಣಿಯ ಕುಟುಂಬದವರಿಗೆಲ್ಲರಿಗೂ ಪೆಟ್ಟಾದರೆ ಹಿಂದಿನ ಆಸನದಲ್ಲಿ ಕುಳಿತಿದ್ದ ಗಣಿನ ಮಾವನವರ

ಬೆನ್ನುಹುರಿಗೆ  ತೀವ್ರತರವಾಗಿ ಪೆಟ್ಟಾಗಿ ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ಲಕ್ಷಾಂತರ ರೂಪಾಯಿ ಖರ್ಚುಮಾಡಿದ ಪರಿಣಾಮವೋ, ಗಣಿ ತಮ್ಮ ಮಾವನವರನ್ನು  ಅವರ  ಸ್ವಂತ ಮಗನಿಗಿಂತಲೂ ಅಧಿಕ ಶ್ರಧ್ಧೆಯಿಂದ  ಮತ್ತು ಆಸ್ತೆಯಿಂದ ನೋಡಿಕೊಂಡ ಪರಿಣಾಮವೋ, ಅಥವಾ ಅವರು ಆ ವರೆವಿಗೂ ಮಾಡಿದಂತಹ ಪುಣ್ಯದ ಫಲವೋ ಎಂಬಂತೆ  ಜೀವಾಪಾಯದಿಂದ ಹೊರಬಂದರೂ ಸೊಂಟದ ಕೆಳಗಿನ ಭಾಗ ಸಂಪೂರ್ಣವಾಗಿ ನಿಶ್ಕ್ರಿಯೆಗೊಂಡು ಅವರು ಮಂದೆಂದೂ ನಡೆಯಲೂ ಆಗದಂತೆ ಗಾಲಿಕುರ್ಚಿಯನ್ನೇ ಆಶ್ರಯಯಿಸುವಂತಾಗುತ್ತಾರೆ.

ಸಾಮಾನ್ಯವಾಗಿ ಇಂತಹ ಪರಿಸ್ಥಿತಿ ಇತರರಿಗೆ ಆಗಿದ್ದಲ್ಲಿ ಆಕಾಶವೇ ಕಳಚಿ ತಲೆಮೇಲೆ  ಬಿದ್ದಂತಾಗಿ, ದೇವರೇ  ನಮ್ಮ ಪಾಲಿಗೆ ನೀನಿಲ್ಲ. ನಿನ್ನನ್ನು ಅಷ್ಟು ಶ್ರಧ್ಧಾ ಭಕ್ತಿಯಿಂದ ಪೂಜಿಸಿರುವ ನನ್ನಂತಹ ಭಕ್ತನಿಗೆ  ಹೀಗೇಕೆ ಮಾಡಿದೆ ಎಂದು ದೇವರನ್ನು ಶಪಿಸುವುದು ಸಹಜ. ಆದರೆ ಇಲ್ಲಿ ಆದದ್ದೇ ಬೇರೆ.  ಗಣಿನ ಮಾವನವರು ತಮ್ಮ  ಪರಿಸ್ಥಿತಿಗೆ ಯಾರನ್ನೂ ಹಳಿಯದೆ, ಅಜಾಗರೂಕತೆಯಿಂದ ಅಪಘಾತ ಮಾಡಿದ ಚಾಲಕನ್ನೂ ದೂರದೆ, ಎಲ್ಲಾವೂ ತನ್ನ  ಹಿಂದಿನ ಜನ್ಮದ ಪ್ರಾರಬ್ಧ ಕರ್ಮ. ಅದನ್ನು  ಅನುಭವಿಸುತ್ತಲೇ ಅದನ್ನು ಮೆಟ್ಟಿ ನಿಲ್ಲುವ ಧೃಢ ಸಂಕಲ್ಪ ಮಾಡಿ ತಮ್ಮ ಜೀವನದ ಎರಡನೇ ಮಗ್ಗಲನ್ನು ಪ್ರಾರಂಭಿಸುತ್ತಾರೆ.

ನಡೆಯಲು ಆಗದೆ ತಮ್ಮೆಲ್ಲಾ ದಿನ ನಿತ್ಯದ ಕಾರ್ಯಗಳಿಗೆ  ಮಗನನ್ನೋ ಇಲ್ಲವೇ ಅಳಿಯನ್ನೋ ಆಶ್ರಯಸಬೇಕಾದಿದ್ದ ಶ್ರೀಯುತರು, ಕಾಲುಗಳಿಗೆ ಸ್ವಾದೀನವಿಲ್ಲದಿದ್ದರೇನಂತೆ ಕೈಗಳಲ್ಲಿ  ಕಸುವಿದೆ ಬುಧ್ದಿ ಶಕ್ತಿ ಚೆನ್ನಾಗಿಯೇ ಇದೆ. ಈಗ ಮೊದಲಿಗಿಂತಲೂ ಅಧಿಕ ಸಮಯವಿದೆ. ಇದನ್ನು  ಸುಮ್ಮನೆ ಕಾಲಾಹರಣ ಮಾಡದೆ ಸದ್ವಿನಿಯೋಗ ಮಾಡಿಕೊಳ್ಳಲು ನಿರ್ಧರಿಸಿ, ತಮ್ಮ ಪಾಡಿಗೆ ತಾವೇ ಗಾಲೀ ಕುರ್ಚಿಯನ್ನು ನಡೆಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಗಾಲಿ ಕುರ್ಚಿಯಲ್ಲಿಯೇ ಓಡಾಡುವುದು. ಮತ್ತು ಆ ಕೋಣೆಗಳ ಮಧ್ಯೆ ಇದ್ದ ಹೊಸಿಲುಗಳನ್ನು ದಾಟಲು ಎರಡೂ ಬದಿಯಲ್ಲಿ ಇಳಿಜಾರುಗಳನ್ನು ನಿರ್ಮಿಸಿಕೊಂಡು ಸುಲಭವಾಗಿ ತಮ್ಮ ದಿನನಿತ್ಯದ ಕಾರ್ಯಕ್ರಮಗಳನ್ನು ಯಾರ ಆಶ್ರಯವೂ  ಇಲ್ಲದೆ ತಾವೇ ಮಾಡುಕೊಳ್ಳುವಂತಾಗುತ್ತಾರೆ.  ತಮ್ಮ ಗಾಲಿ ಕುರ್ಚಿಯ ಎತ್ತರಕ್ಕೆ ಸರಿಹೋಗುವಂತೆ ಮಂಚ ಮತ್ತು ಹಾಸಿಗೆಯನ್ನು ಸರಿಪಡಿಸಿಕೊಂಡು ಹಾಸಿಗೆಯ ಪಕ್ಕದಲ್ಲಿಯೇ ಪುಸ್ತಕಗಳನ್ನು ಇಡಲು ಕಪಾಟು ಮತ್ತು ಅದರ ಪಕ್ಕದಲ್ಲಿಯೇ ಕುಳಿತು ಓದಲು ಅನುವಾಗವಂತೆ ಮೇಜನ್ನು ಅಳವಡಿಸಿ ಕೊಂಡು ಅದುವರೆಗೂ ಓದದೆ ಕಪಾಟಿನಲ್ಲಿ ಧೂಳು ಹಿಡಿದಿದ್ದ ಎಲ್ಲಾ ಪುಸ್ತಕಗಳನ್ನು ತಮ್ಮ ಮಸ್ತಕದಲ್ಲಿ ಅಳವಡಿಸಿಕೊಂಡು ಅದರಿಂದ ಸಂತೃಪ್ತರಾಗದೆ, ಸಂಸ್ಕೃತ ಭಾಷೆಯಲ್ಲಿದ್ದ ಹಲವಾರು ಶ್ಲೋಕಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಲು ನಿರ್ಧರಿಸಿ ಅದನ್ನು  ಲೇಖನಿಸತೊಡಗಿದರು. ನಂತರ ಅದನ್ನು ಪುಸ್ತಕ ರೂಪದಲ್ಲಿ ತರಲು ಅವರ ಕೈ ಬರಹವನ್ನು ಹೊರಗಿನ ವ್ಯಕ್ತಿಗಳ ಸಹಾಯದಿಂದ ಡಿಟಿಪಿ ಮಾಡಿಸಿ ನಂತರ ಅದನ್ನು ತಿದ್ದುಪಡಿ ಮಾಡಲು ಬೇರೆಯವರ ಸಹಾಯ ಬೇಕಾಗಿದ್ದನ್ನು ಮನಗೊಂಡ ಶ್ರೀಯುತರು ಆ ವಯಸ್ಸಿನಲ್ಲಿ ತಮ್ಮ ಅಳಿಯನ ಸಹಾಯದಿಂದ  ಅಲ್ಪ ಸ್ವಲ್ಪ ಕಂಪ್ಯೂಟರ್ ಬಳಕೆಯನ್ನು ಕಲಿತು ನಂತರ ಪುಸ್ತಕಗಳು ಮತ್ತದೇ   ಕಂಪ್ಯೂಟರ್ ಸಹಾಯದಿಂದ  ಸಂಪೂರ್ಣವಾಗಿ ಕಂಪ್ಯೂಟರ್ ಬಳೆಸುವುದನ್ನು ಕಲಿತೇ ಬಿಟ್ಟರು. ಶಂಕರನ ಸಹಾಯದಿಂದ ಅದೇ ಗಣಕ ಯಂತ್ರಕ್ಕೆ ಕನ್ನಡ ತಂತ್ರಾಂಶ ಅಳವಡಿಸಿ ಕೊಂಡು ಅವನಿಂದಲೇ ಕನ್ನಡದ ಕೀಲಿಮಣೆ ಬಳಕೆಯನ್ನು ಕಲಿತು ಕೆಲವೇ ಕೆಲವು ದಿನಗಳಲ್ಲಿ ತಮ್ಮ ಎಲ್ಲಾ ಕೈಬರಹಗಳನನ್ನೂ ತಾವೇ ಖುದ್ದಾಗಿ ಗಣಕೀಕರಣಗೊಳಿಸಿದ್ದಲ್ಲದೆ ತಮ್ಮ ಮುಂದಿನ ಎಲ್ಲಾ ಬರಹಗಳನ್ನು ನೇರವಾಗಿ ಗಣಕಯಂತ್ರದಲ್ಲೇ ಬರೆಯಲು ಆರಂಭಿಸಿದರು.

ಕೆಲ ದಿನಗಳ ನಂತರ ಶಂಕರ ಅವರ ಮನೆಗೆ ಮತ್ತೊಮ್ಮೆ ಹೋದಾಗ, ಶ್ರೀ ಶಂಕರಾಚಾರ್ಯರ ಕೃತಿಗಳು, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮಗಳನ್ನು ಶ್ತೀಮತಿ ಎಂ.ಎಸ್. ಸುಬ್ಬಲಕ್ಷ್ಮಿಯವರು ಹಾಡಿದ್ದ ರಾಗ ಮತ್ತು ತಾಳಗಳ ಅನುಗುಣವಾಗಿಯೇ ತರ್ಜುಮೆ ಮಾಡಿ ಅದನ್ನು  ಅವರೇ ಸುಶ್ರಾವ್ಯವಾಗಿ ಹಾಡಿ ತೋರಿಸಿದಾಗ ಶಂಕರನ ಕಣ್ಣಿನಲ್ಲಿ  ಅವನಿಗೇ ಅರಿವಿಲ್ಲದಂತೆ ಆನಂದ ಭಾಷ್ಪ  ಉಕ್ಕಿ ಬಂದು, ಛೇ ಭಗವಂತ ನಿಮ್ಮಂತಹವರಿಗೆ ಎಂತಹ ನೋವು ಕೊಟ್ಟು ಬಿಟ್ಟನಲ್ಲಾ ಎಂದ ತಕ್ಷಣವೇ ಒಂದು ಚೂರು ಬೇಸರಿಸದೇ, ಛೇ, ಛೇ ಛೇ! ಭಗವಂತನನ್ನೇಕೆ ದೂಷಿಸುತ್ತೀರೀ *ಆದದ್ದೆಲ್ಲಾ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತೂ* ಎನ್ನುವ ದಾಸರ ಪದವನ್ನು ಉಲ್ಲೇಕಿಸಿ, ಇದೂ ಕೂಡ ಭಗವಂತನ ಪ್ರೇರಣೆಯೇ.. ಹಿಂದಿನ ಜನ್ಮದ ಪಾಪದ ಫಲವನ್ನು ಈ ಜನ್ಮಮದಲ್ಲಿ ಅನುಭವಿಸಿಯೇ ತೀರಬೇಕಂತೆ ಎಂದು, ಆದರೆ ತಾವು ಇದನ್ನು  *ದೇವರು ಕೊಟ್ಟ ಶಿಕ್ಷೆ ಎಂದು ಭಾವಿಸದೆ ದೇವರೇ ನೀಡಿದ ವರ ಎಂದು ಭಾವಿಸುತ್ತೇನೆ* ಎಂದು ಸ್ಪಷ್ಟವಾಗಿ ಹೇಳಿದಾಗ, ಶಂಕರನಿಗೆ ಒಮ್ಮಂದೊಮ್ಮೆಲೆ ಆಶ್ಚರ್ಯ. ಅರೇ ಇದೇನು? ಹೀಗೇಕೆ ಹೇಳುತ್ತಿದ್ದಾರೆ ಎಂದು ಯೋಚಿಸುತ್ತಿರುವಾಗಲೇ, ಅವನ ಆ ಕ್ಷಣದ ಮೌನವನ್ನರಿತ ಶ್ರೀಯುತರು, ನೋಡೀ, ನನಗೆ ಹಿಂದಿನಂತೆ ಎಲ್ಲವೂ ಸರಿ ಇದ್ದಿದ್ದರೆ,  ಕೇವಲ ಲೌಕಿಕದಲ್ಲೇ ನನ್ನ  ಜೀವನವನ್ನು ಕಳೆಯುತ್ತಿದ್ದೆ ಮತ್ತು ಖಂಡಿತವಾಗಿಯೂ ಈ ಪರಿಯಾಗಿ ಭಗವಂತನನ್ನು  ಕಾಣಲು ಸಾಧ್ಯವಾಗುತ್ತಿರಲಿಲ್ಲ ಮತ್ತು  ಅವನ ಸೇವೆಯನ್ನು ಮಾಡಲು ಆಗುತ್ತಿರಲಿಲ್ಲ. ಈಗ ನನಗೆ ನನ್ನ ಕೆಲಸದ ಬಗ್ಗೆ ಸಾರ್ಥಕತೆ ಇದೆ ಹೆಮ್ಮೆಯಿದೆ. ಆ ಭಗವಂತನಲ್ಲಿ ಕೇಳಿಕೊಳ್ಳುವುದಿಷ್ಟೇ.  ಇರುವಷ್ಟು ದಿನ ಇದೇ ರೀತಿಯಲ್ಲೇ ಸಾಹಿತ್ಯ ರೂಪದಲ್ಲಿ  ನಿನ್ನ ಸೇವೆಯ ಮಾಡುವ ಅವಕಾಶ ಕೊಡು. *ಅನಾಯಾಸೇನ ಮರಣಂ, ವಿನಾದೈನೇನ ಜೀವನಂ* ಎನ್ನುವಂತೆ ಯಾರನ್ನೂ ಆಶ್ರಯಿಸದೇ, ಯಾರಲ್ಲೂ ಬೇಡದೆ, ಶಾಶ್ವತ ನೆಮ್ಮದಿಯನ್ನು ಕೊಡು ಎಂದಷ್ಟೇ ಕೇಳಿಕೊಳ್ಳುತ್ತೇನೆ ಎಂದಾಗ, ಶಂಕರ ತನಗರಿವಿಲ್ಲದಂತೆಯೇ ಅವರ ಕಾಲುಗಳಿಗೆರಗಿ, ಹಾಗೇಕೆ ಹೇಳುತ್ತೀರಿ,  ಪುರಾಣ ಕಥೆಗಳಲ್ಲಿ ರಾಜಋಷಿಗಳ ಬಗ್ಗೆ ಕೇಳಿದ್ದೆವು ಮತ್ತು ನೋಡಿದ್ದೆವು ಈಗ ಅದನ್ನು ಪ್ರತ್ಯಕ್ಷವಾಗಿ ನಿಮ್ಮ ಮೂಲಕ ಕಾಣುವ ಸೌಭಾಗ್ಯ  ನಮ್ಮದಾಗಿದೆ. ನೀವೂ ಇನ್ನೂ ಬಹಳಷ್ಟು ಸಾಧನೆ ಮಾಡುವುದಿದೆ ಮತ್ತು ನಮ್ಮಂತಹ ಕಿರಿಯರಿಗೆ ಮಾರ್ಗದರ್ಶನ ಮಾಡಬೇಕಿದೆ ಎಂದಿದ್ದಕೆ. ಎಲ್ಲವೂ ಆ ಶ್ರೀ ಹರಿಯ ಇಚ್ಚೆ. ಅವನ ಅನುಗ್ರಹವಿದ್ದಷ್ಟು ದಿನ  ಮುಂದುವರಿಸಿಕೊಂಡು ಹೋಗುತ್ತೇನೆ ಎಂದಿದ್ದರು.

ಭಗವಂತನೂ ಕೂಡಾ ತುಂಬಾ ಸ್ವಾರ್ಥಿನೇ.  ಈ ಭೂಲೋಕದಲ್ಲಿ ಇರುವ ಸಜ್ಜನರನ್ನೆಲ್ಲಾ  ಬಹಳ ಬೇಗನೆ ತನ್ನ ಬಳಿಗೆ ಕರೆಸಿಕೊಳ್ಳುತ್ತಾನೆ. ಹಾಗೆಯೇ ಇನ್ನೂ ಎಷ್ಟೋ ಕೆಲಸಗಳನ್ನು ಮಾಡಬೇಕೆಂದು ನಿರ್ಧರಿಸಿದ್ದ ಗಣಿಯವರ ಮಾವನವರನ್ನೂ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಬಳಿಗೆ ಕರಿಸಿಕೊಂಡೇ ಬಿಟ್ಟ, ಇಂದು ಅವರು ನಮ್ಮೊಂದಿಗೆ  ಭೌತಿವಾಗಿ ಇಲ್ಲದಿರಬಹುದು. ಆದರೆ ಅವರ ಛಲ,ಧೈರ್ಯ, ಮಾನಸಿಕ ಸ್ಥೈರ್ಯ, ಬಂದಂತಹ ವಿಷಮ ಪರಿಸ್ಥಿತಿಯನ್ನೂ ಆನಂದಿಸುವ ಪರಿ, ಅವರ ಸಾಹಿತ್ಯ ಕೃಷಿಯಿಂದಾಗಿ ನಮ್ಮ ಸ್ಮೃತಿ ಪಟಲದಲ್ಲಿ ಸದಾ ಕಾಲವೂ ಇದ್ದೇ ಇರುತ್ತದೆ.

ಈಸಬೇಕು ಇದ್ದು ಜಯಿಸಬೇಕು!

ಹೇಸಿಗೆ ಸಂಸಾರದಲ್ಲಿ ಆಶಾಲೇಶ ಇಡದ್ಹಾಂಗ

ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು

ಸ್ವಾಮಿ ರಾಮ ಎನುತ ಪಾಡಿ ಕಾಮಿತ ಕಯ್ಗೊಂಬರೆಲ್ಲ

ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ

ಮೀರಿಯಾಸೆ ಮಾಡದಲೆ ಧೀರಕೃಷ್ಣನ ಭಕುತರೆಲ್ಲ

ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆ ಪಟ್ಟ ಪರಿಯಂತೆ

ಮೋಸ ಹೋಗದ್ಹಾಂಗೆ *ಜಗದೀಶ ಪುರಂದರ ವಿಠಲನ* ನೆನೆದು!!

ಎನ್ನುವ ದಾಸರ ಪದದ ಹಾಗೆ ಅಕ್ಷರಶಃ ಮಾತು ಮತ್ತು ಕೃತಿಯಲ್ಲಿ  ಮಾಡಿ ತೋರಿಸಿ ಹೋದ ಆಂತಹ ಮಹಾಚೇತನರು ನಿಜಕ್ಕೂ ನಮ್ಮಂತಹವರಿಗೆ ಆದರಣಿಯರು ಮತ್ತು ಅನುಕರಣಿಯರು. ಇಂತಹ ಸಜ್ಜನರು ಮತ್ತೊಮ್ಮೆ  ಹುಟ್ಟಿಬರಲಿ ಎಂದಷ್ಟೇ  ನಾವು ಭಗವಂತನಲ್ಲಿ  ಪ್ರಾರ್ಥಿಸಬಹುದು

ಏನಂತೀರೀ?

ಇಲ್ಲೇ ಸ್ವರ್ಗ ಇಲ್ಲೇ ನರಕ

ಅದೊಂದು  ಬೆಳಿಗ್ಗೆ ಶಂಕರ ತನ್ನ ಕಛೇರಿಯಲ್ಲಿ  ಸಭೆಯೊಂದರಲ್ಲಿ ತುರ್ತಾಗಿ ಭಾಗವಹಿಸಲೇ ಬೇಕಾಗಿದ್ದ ಕಾರಣ ಮನೆಯಿಂದ  ಸ್ವಲ್ಪ ಬೇಗನೇ ಹೊರಟು, ತುಸು ಲಗು ಬಗನೇ ಕಾರ್ ಓಡಿಸುತ್ತಿದ್ದ.  ಅವರ ಕಾರಿನ ಸ್ವಲ್ಪ ಮುಂದೆ ಒಬ್ಬ ವಯಸ್ಕರೊಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆಯೇ  ಗಾಡಿ ನೆಲಕ್ಕೆ  ಜೋರಾಗಿ ಅಪ್ಪಳಿಸಿದ ಶಬ್ಧ ಕೇಳಿದೊಡನೆ ಶಂಕರ ದಢಾರ್ ಎಂದು ಕಾರ್ ನಿಲ್ಲಿಸಿದ. ವೃಧ್ಧರ  ಗಾಡಿಯೇನೋ ಸ್ವಲ್ಪ ದೂರದಲ್ಲಿ ರಸ್ತೆಯ ಮೇಲೆ ಬಿದ್ದಿತ್ತು. ಆದರೆ ಗಾಡಿ ಚಾಲನೆ ಮಾಡುತ್ತಿದ್ದ ವಯಸ್ಕರು ಒಂದು ಕ್ಷಣ ಕಾಣಲಿಲ್ಲವಾದರೂ, ಕೆಲವೇ ಕ್ಷಣದಲ್ಲಿ ಅಯ್ಯೋ,  ಅಮ್ಮಾ ಎನ್ನುವ ರೋದನ ಕೇಳಿ ಬಂತು.

ಶಂಕರಿನಿಗೋ ಪ್ರಾಣ ಸಂಕಟ. ಈಗಾಗಲೇ ಕಛೇರಿಗೆ ಹೋಗಲು ತಡವಾಗುತ್ತಿದೆ. ಆದರೆ ಕಣ್ಣ ಮುಂದೆ ನಡೆದ ಅವಘಡವನ್ನು ಮೀರಿ ಹೋಗಲು ಮನಸ್ಸಾಗದೆ ಮಾನವೀಯತೆ ದೃಷ್ಟಿಯಿಂದ ಕಾರ್ ತುಸು ಪಕ್ಕದಲ್ಲಿ ನಿಲ್ಲಿಸಿ, ಆಕ್ರಂದನ ಕೇಳಿ ಬರುತ್ತಿದ್ದ ಸ್ಥಳಕ್ಕೆ ಧಾವಿಸಿ ನೋಡಿದರೆ,  ಹಿಂದಿನ ದಿನವಷ್ಟೇ, ಯಾವುದೋ ಕೇಬಲ್ ಹಾಕಲು ಅಗೆದಿದ್ದ ಗುಂಡಿಯೊಳಗೆ ಬಿದ್ದು ಬಿಟ್ಟಿದ್ದಾರೆ.  ಶಂಕರ ಕೂಡಲೇ  ಅಲ್ಲಿಯೇ ಪಕ್ಕದಲ್ಲಿ ಕೆಲಸಗಾರರು ಇಟ್ಟು ಹೋಗಿದ್ದ ಏಣಿಯನ್ನು ಹಳ್ಳದೊಳಗೆ ಇಟ್ಟು ಸರ ಸರನೆ ಇಳಿದು ಮತ್ತೊಬ್ಬರ ಸಹಾಯದಿಂದ ಬಿದ್ದವರನ್ನು ಮೇಲಕ್ಕೆ ನಿಧಾನವಾಗಿ ತಂದು ಕುಳ್ಳರಿಸಿ ತನ್ನ ಕಾರಿನಲ್ಲಿದ್ದ ನೀರನ್ನು ಕುಡಿಸಿ ಅವರ ಮೈ ಕೈಗೆ ಆಗಿದ್ದ ಗಾಯಗಳನ್ನೆಲ್ಲಾ  ತನ್ನ ಕರ್ಚೀಫ್ನಲ್ಲಿ ಒರೆಸುತ್ತಿರುವಾಗಲೇ ಪೋಲೀಸರು ಬಂದು  108 ಆಂಬ್ಯುಲೆನ್ಸ್ಗೆ ಕರೆ ಮಾಡಿ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರು. ಇಷ್ಟರ ಮಧ್ಯದಲ್ಲಿ, ಗುರುತಿಲ್ಲದ ಪರಿಚಯವಿಲ್ಲದ ವ್ಯಕ್ತಿಗೆ ಇಷ್ಟೋಂದು ಆಸ್ತೆ ವಹಿಸಿ ಸಹಾಯ ಮಾಡುತ್ತಿದ್ದನ್ನು  ಗಮನಿಸಿದ ಆ ವೃಧ್ಧರು, ಶಂಕರನಿಗೆ,  ನೀನು ಯಾರ ಮಗನೋ ಕಾಣೆ, ದೇವರ ಬಂದಹಾಗೆ ಬಂದು ನನಗೆ ಸಹಾಯ ಮಾಡಿದೆ. ನಿನ್ನನ್ನು ದೇವರು ಚೆನ್ನಾಗಿ ಇಟ್ಟಿರಲಿ ಎಂದಾಗ, ಅಯ್ಯೋ ಬಿಡಿ ರಾಯರೇ,  ಮನುಷ್ಯ ಮನುಷ್ಯರಿಗೆ ಸಹಾಯಾಮಾಡದೇ ಇರಲಾಗುತ್ತದೆಯೇ? ಮಾನವೀಯತೆಯ ದೃಷ್ಟಿಯಿಂದ ನನ್ನ ಜಾಗದಲ್ಲಿ ಬೇರೆಯವರು ಯಾರಿದ್ದರೂ ಸಹಾಯ ಮಾಡುತ್ತಿದ್ದರು ಎಂದಾಗ, ನೀನು ಹೇಳಿದ್ದು ಸರಿಯಾದರೂ ಎಲ್ಲರಿಗೂ ಅಂತಹ ಮನಸ್ಸು ಇರುವುದಿಲ್ಲ. ಎಲ್ಲರೂ ಮೊಬೈಲ್ನಲ್ಲಿ  ವಿಡಿಯೋ ತೆಗೆಯುವುದರಲ್ಲೇ ಮಗ್ನರಾಗಿರುತ್ತಾರೆ. ನಿನ್ನಂತೆ ಸಹಾಯ ಮಾಡುವವರು ಬಹಳ ವಿರಳ ಎಂದು, ನೀನು ಇಂದು  ಮಾಡಿದ್ದು , ಮುಂದೆ ನಿನ್ನ ಮಕ್ಕಳನ್ನು ಕಾಪಾಡುತ್ತದೆ ಎಂದು ಹಾರೈಸಿದರು. ಅಷ್ಟರಲ್ಲಾಗಲೇ  ಆಂಬ್ಯುಲೆನ್ಸ್ ಬಂದು ಅವರನ್ನು ಕರೆದು ಕೊಂಡು ಹೋಯಿತು. ಶಂಕರನೂ ತನ್ನ ಬಾಸ್ ಅವರಿಗೆ  ಬಹಳ ತುರ್ತು ಕೆಲದಿಂದಾಗಿ ಇಂದಿನ ಮೀಟಿಂಗ್ ಬರಲು ತುಸು ಹೊತ್ತಾಗ ಬಹುದು ಅದಕ್ಕೆ ಕ್ಷಮೆ ಇರಲಿ ಎಂಬ ಸಂದೇಶ ರವಾನಿಸಿ ಲಗು ಬಗನೆ ಕಛೇರಿಯತ್ತ ಹೊರಟ.

ಒಳ್ಳೆಯ ಕೆಲಸ ಮಾಡುವವರಿಗೆ  ದೇವರ ಬೆಂಬಲ ಸದಾ ಕಾಲವೂ ಇರುತ್ತದೆ ಎನ್ನುವುದಕ್ಕೆ ಪುರಾವೆ ಎನ್ನುವಂತೆ,  ಅಂದಿನ ಮೀಟಿಂಗ್ಗೆ  ಹೊರಗಿನಿಂದ ಬರಬೇಕಿದ್ದವರೂ  ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡು ಕಛೇರಿಗೆ ಬರುವಷ್ಟರಲ್ಲಿ  ಶಂಕರನೂ ಕಛೇರಿಗೆ ತಲುಪಿ ಯವುದೇ ಆಭಾಸವಾಗದಂತೆ ಯಶಸ್ವಿಯಾಗಿ  ಮೀಟಿಂಗ್ ಮುಗಿಸಿ ಎಲ್ಲರ ಮೆಚ್ಚುಗೆಗೂ ಪಾತ್ರನಾಗಿ ನಂತರ ಊಟದ ಸಮಯದಲ್ಲಿ ನಡೆದದ್ದೆಲ್ಲವನ್ನೂ ತನ್ನ ಸಹೋದ್ಯೋಗಿಗಳಿಗೆ ಸವಿರವಾಗಿ ವಿವರಿಸಿದ್ದ.

ಕಛೇರಿಯನ್ನು ಮುಗಿಸಿ ಸಂಜೆ ಮನೆಯ ಗೇಟ್ ಬಳಿ ಬಂದು ಎಂದಿನಂತೆಯೇ ಗೇಟ್ ತೆಗೆಯಲು ಹಾರ್ನ್ ಮಾಡಿದ. ಹಾರ್ನ್ ಮಾಡಿದ ಒಂದೆರಡು ನಿಮಿಷಗಳಲ್ಲಿಯೇ ಮಗ ಓಡಿ ಬಂದು ಗೇಟ್ ತೆಗೆದು ಆ ಎರಡು ನಿಮಿಷಗಳಲ್ಲಿಯೇ ಇಡೀ ದಿನದ ವರದಿಯನ್ನು ಒದಗಿಸುತ್ತಿದ್ದ  ಮಗ  ಇಂದು ಬರಲೇ ಇಲ್ಲ.   ಮೂರ್ನಾಲ್ಕು ಬಾರಿ ಹಾರ್ನ್ ಮಾಡಿದಾಗ ಶಂಕರನ ಮಡದಿ ಒಳಗಿನಿಂದ ಬಂದು ಗೇಟ್ ತೆಗೆದಳು. ಮಕ್ಕಳು ಬಹುಶಃ ಊಟ ಮಾಡುತ್ತಿರಬೇಕೆಂದು ಭಾವಿಸಿದ ಶಂಕರ ಕಾರ್ ನಿಲ್ಲಿಸಿ ತನ್ನ ಲ್ಯಾಪ್ಟಾಪ್ ಬ್ಯಾಗ್ ಮತ್ತು ಊಟದ ಡಬ್ಬಿಯನ್ನು ತೆಗೆದುಕೊಂಡು ಮನೆ ಪ್ರವೇಶಿಸಿ, ಎಲ್ಲಮ್ಮಾ ನಿನ್ನ ಮಗ? ಸದ್ದೇ ಇಲ್ಲಾ? ಊಟ ಮಾಡ್ತಾ ಇದ್ದಾನಾ? ಎಂದು ತನ್ನ ಕೋಣೆಯತ್ತ ಕಣ್ಣು ಹಾಯಿಸಿದರೆ ಟಿವಿ ಮಾತ್ರ ಸದ್ದು ಮಾಡುತ್ತಿತ್ತು .ಆದರೆ, ಅಲ್ಲೆಲ್ಲೂ ಮಗನ ಪತ್ತೆಯೇ ಇರಲಿಲ್ಲ. ಅಯ್ಯೋ ಅವನ ಬಗ್ಗೆ ಏನು ಹೇಳೋದು?  ಅದೊಂದು ದೊಡ್ಡ ಕಥೆ. ಅಲ್ನೋಡಿ ಹೋಗಿ ಅವನ ರೂಮಿನಲ್ಲಿ ಮಲಗಿದ್ದಾನೆ.  ಕೈಕಾಲು ಮುಖ ತೊಳೆದುಕೊಂಡು ಬಟ್ಟೆ ಬದಲಾಯಿಸಿ ಬನ್ನಿ ಎಲ್ಲವನ್ನೂ ಹೇಳುತ್ತೇನೆ ಎಂದಾಗ, ಗಾಭರಿಯಾದ  ಶಂಕರ, ಅಯ್ಯೋ ರಾಮಾ!! ಏನಾಯ್ತಮ್ಮಾ? ಎಂದು ಬಚ್ಚಲು ಮನೆಗೆ ಹೋಗಿ ದಡಬಡನೆ ಕೈಕಾಲು ತೊಳೆದುಕೊಂದು ಮಗನ ಕೋಣೆಯತ್ತ ಧಾವಿಸಿ ಬಂದು ನೋಡಿದರೆ,  ಮಗನ ತಲೆ, ಕೈ ಮತ್ತು ಕಾಲುಗಳಿಗೆ ಪೆಟ್ಟಾಗಿ ಔಷಧಿಯ ಪಟ್ಟಿ ಕಟ್ಟಿದೆ. ಮಗ ಸುಮ್ಮನೆ ಮಲಗಿದ್ದಾನೆ.

ಏನಾಯ್ತಮ್ಮಾ? ಹೇಗಾಯ್ತಮ್ಮಾ? ಯಾಕೆ ನನಗೇನು ಹೇಳಲೇ ಇಲ್ವಲ್ಲಾ? ಎಂದು  ಒಂದೇ ಉಸಿರಿನಿಂದ ಮಡದಿಯತ್ತ ಕೇಳಲು, ಮಗು ಮಧ್ಯಾಹ್ನ ಶಾಲೆಯಿಂದ  ಮನೆಗೆ ಬರಲು ಬಸ್ ಕಾಯ್ತಾ ಇದ್ದಾಗ ಯಾರೋ ನಾಲ್ಕೈದು ಹುಡುಗರು ಬೈಕ್ನಲ್ಲಿ ಒಬ್ಬರಿಗೊಬ್ಬರು ಚೇಸ್ ಮಾಡುವ ಭರದಲ್ಲಿ ನಮ್ಮ ಮಗನಿಗೆ ಗುದ್ದಿ ತಪ್ಪಿಸಿಕೊಂಡು ಹೋಗಿದ್ದಾರೆ. ಸದ್ಯ  ಬಸ್ಗೆ ಕಾಯುತ್ತಿದ್ದ  ಯಾರೋ  ಪುಣ್ಯಾತ್ಮರು ಇವನನ್ನು ಅಲ್ಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಚಿಕಿತ್ಸೆ ಮಾಡಿಸಿ ಆಟೋದಲ್ಲಿ ಮನೆಯವರೆಗೂ ಕರೆದು ಕೊಂಡು ಬಿಟ್ಟು ಹೋದ್ರು.  ನೀವು ಕೂಡ ಇಂದು ಆಫೀಸಿನಲ್ಲಿ ಏನೋ ಇಂಪಾರ್ಟೆಂಟ್ ಮೀಟಿಂಗ್ನಲ್ಲಿ ಇದ್ರಿ. ಗಾಯಾನೂ ಹೆಚ್ಚಾಗಿರಲಿಲ್ಲವಾದ್ದ ಕಾರಣ ಸುಮ್ಮನೆ ನಿಮಗೆ ಗಾಭರಿ ಮಾಡುವುದು ಬೇಡ ಎಂದು ಹೇಳಲಿಲ್ಲ. ಮಾತ್ರೆಗಳನ್ನೆಲ್ಲಾ ಕೊಟ್ಟಿದ್ದಾರೆ ಒಂದೆರಡು ದಿನ  ಮನೆಯಲ್ಲೇ ಇದ್ರೆ ಸುಧಾರಿಸಿಕೊಂಡು ಬಿಡ್ತಾನೆ. ಚಿಕಿತ್ಸೆಗಾದ ದುಡ್ಡು ಅವರಿಗೆ ಕೊಡಲು ಹೋದಾಗ, ಅಯ್ಯೋ ಇವನೂ ಕೂಡ  ನನ್ನ  ಮೊಮ್ಮಗನಂತೆ, ಸದ್ಯ ದೇವರ ದಯೆ ಕೇವಲ ತರಚು ಗಾಯಗಳಾಗಿವೆ.  ಖರ್ಚೇನೂ ಹೆಚ್ಚಾಗಿಲ್ಲ.  ನೀವೇನು  ಕೊಡಬೇಕಿಲ್ಲ ಎಂದು ಎಲ್ಲಿಗೋ ತುರ್ತಾಗಿ ಹೋಗಬೇಕಾಗಿದ್ದರಿಂದ ಮನೆಯ ಒಳಗೂ ಬಾರದೇ, ಬಂದ ಆಟೋವಿನಲ್ಲಿಯೇ  ಹಿಂದಿರುಗಿ ಹೋರಟೇ ಹೋದರು ಎಂದಳು. ನೀನೇನಾದ್ರೂ ಅವರ ನಂಬರ್ ತೆಗೆದುಕೊಂಡೆಯಾ? ಅವರಿಗೆ ಕರೆ ಮಾಡಿ ಧನ್ಯವಾದಗಳನ್ನು ಹೇಳಬಹುದಿತ್ತು ಎಂದರೆ, ಇಲ್ಲಾರೀ  ಆ ಗಾಬರಿಯಲ್ಲಿ ಅದು ನನಗೆ ಹೊಳೆಯಲೇ ಇಲ್ಲ. ಒಟ್ಟಿನಲ್ಲಿ ದೇವರ ಹಾಗೆ ಬಂದು ನನ್ನ ಮಗನನ್ನು ಕಾಪಾಡಿದ ಅವರನ್ನು ಮತ್ತು ಅವರ ಕುಟುಂಬದವರನ್ನು ಆ ದೇವರು ಚೆನ್ನಾಗಿ ಇಟ್ಟಿರಲಿ ಎಂದಳು ಹಾರೈಸಿದಳು ಮಡದಿ.

ಮಡದಿಯ ಮಾತನ್ನು ಕೇಳುತ್ತಿದ್ದ ಶಂಕರ, ಇಂದು ಬೆಳೆಗ್ಗೆಯೇ ಆ ವೃದ್ದರು ನೀನು ಇಂದು  ಮಾಡಿದ್ದು , ಮುಂದೆ ನಿನ್ನ ಮಕ್ಕಳನ್ನು ಕಾಪಾಡುತ್ತದೆ ಎಂಬ ಹಾರೈಕೆಯ  ಫಲ ಇಷ್ಟು ಬೇಗ ಫಲಿಸುತ್ತದೆ ಎಂದು ಎಣಿಸಿರಲಿಲ್ಲ ಎಂದು ತನ್ನಷ್ಟಕ್ಕೆ ತಾನೇ ಗೊಣಕಿಕೊಂಡ.   ಅದೇ ಸಮಯದಲ್ಲಿ ಮನೆಯ ಮತ್ತೊಂದು ಕೋಣೆಯಿಂದ  ಟಿವಿಯಲ್ಲಿ ಅಂಬರೀಶ್ ಅಭಿನಯದ ನಾಗರಹೊಳೆ ಸಿನಿಮಾದ   ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೆ ಇಲ್ಲಾ ಸುಳ್ಳು. ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು*  ಎಂಬ ಹಾಡು  ಕೇಳಿ ಬರುತ್ತಿತ್ತು.  ಇದಕ್ಕೇ ಹೇಳುವುದಲ್ಲವೇ, ನಾವು  ಮಾಡಿಡ ಪಾಪ ಮತ್ತು  ಪುಣ್ಯಗಳ  ಫಲಗಳನ್ನು ಇಲ್ಲೇ ಅನುಭವಿಸುತ್ತೇವೆ ಅಂತ.

ಏನಂತೀರೀ?

ಮಡಿ ಬಟ್ಟೆ

ಶಂಕರ ಆಗಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದ.  ಬೇಸಿಗೆಯ ರಜೆಯಲ್ಲಿ  ಸುಮ್ಮನೆ ಮನೆಯ ಬಳಿ ಹುಡುಗರೊಂದಿಗೆ ಬಿಸಿಲಿನಲ್ಲಿ ಬೀದಿ ಸುತ್ತುವ ಬದಲು, ಬೇಸಿಗೆ ರಜೆಯನ್ನು ಸದ್ವಿನಿಯೋಗ ಪಡಿಸಿಕೊಳ್ಳಲು ಅವನ ತಾಯಿ ಅವನನ್ನು ಮಂಗಳೂರಿನ ಸಮೀಪದ ವೇದಶಿಬಿರಕ್ಕೆ ಕಳುಹಿಸಿದರು. ನಾಲ್ಕುವಾರಗಳ ಉಚಿತ ವೇದಶಿಬಿರ.  ಬೆಳಿಗ್ಗೆ  4.45ಕ್ಕೇ ಎಲ್ಲರೂ ಎದ್ದು ಕಡ್ಡಾಯವಾಗಿ ತಣ್ಣೀರಿನ ಸ್ನಾನ ಮಾಡಿ 5:30 ಕ್ಕೆಲ್ಲಾ ನಿತ್ಯಪೂಜೆಯಿಂದ ಆರಂಭವಾಗುವ ದಿನಚರಿ ಯೋಗಾಭ್ಯಾಸ, ವೇದಾಧ್ಯಯನ, ಸಂಸ್ಕೃತ ಪಾಠ, ತಿಂಡಿ, ಊಟಗಳ ಜೊತೆ ರಾತ್ರಿ  10 ಘಂಟೆಗೆ ಅನೌಪಚಾರಿಕದೊಂದಿಗೆ ದಿನ ಮುಕ್ತಾಯವಾಗುತ್ತಿತ್ತು. ಆರಂಭದಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೆ ಹೊಂದಿಕೊಳ್ಳಲು ಕಷ್ಟವಾದರೂ ಬಲುಬೇಗನೆ ಎಲ್ಲರೂ ಒಗ್ಗಿಕೊಂಡು ಶಿಬಿರವನ್ನು ಆನಂದಿಸ ತೊಡಗಿದರು.

ಶಿಬಿರಕ್ಕೆ ಐದಾರು ಜೊತೆ ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದ ಶಿಬಿರಾರ್ಥಿಗಳಿಗೆ ಬಟ್ಟೆ ಒಗೆದುಕೊಳ್ಳುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು.  ಮನೆಯಲ್ಲಾದರೆ ಅಮ್ಮನೋ, ಅಕ್ಕನೂ ಇಲ್ಲವೇ ಮನೆಗೆಲಸದವರು ಬಟ್ಟೆ ಒಗೆಯುತ್ತಿದ್ದರೆ, ಇಲ್ಲಿ ತಾವೇ ಒಗೆಯಬೇಕಾಗಿದ್ದರಿಂದ ಅಭ್ಯಾಸವಿಲ್ಲದೆ ಇಷ್ಟಪಡುತ್ತಿದ್ದರು.

ಆದರೆ, ಪವನ್ ಎಂಬ ಹುಡುಗ ಮಾತ್ರ ಪ್ರತಿದಿನವೂ ತಾನು ಉಟ್ಟ ಬಟ್ಟೆಯನ್ನಲ್ಲದೆ ಮಲಗುತ್ತಿದ್ದ ಜಮಖಾನ ಮತ್ತು ಹೊದಿಗೆಗಳನ್ನೂ ಬೆಳಿಗ್ಗೆ  ಸ್ನಾನ ಮಾಡುವಾಗಲೇ ನೆನಸಿಟ್ಟು  ಮಧ್ಯಾಹ್ನದ ಬಿಡುವಿನ ಸಮಯದಲ್ಲಿ  ಒಗೆದು ಶುಭ್ರ ಮಾಡಿಕೊಳ್ಳುತ್ತಿದ್ದದ್ದು ಎಲ್ಲರಿಗೂ ಸೋಜಿಗವೆನಿಸಿತ್ತು.  ಅದೊಮ್ಮೆ ಶಂಕರ ಮತ್ತು ಅವನ ಸ್ನೇಹಿತರು ಬಟ್ಟೆ ಒಗೆಯುತ್ತಿದ್ದ ಸಂದರ್ಭದಲ್ಲಿ ಪವನ್ ನೀನೇಕೆ ಪ್ರತಿದಿನವೂ ಹಾಸಿಗೆ ಹೊದಿಕೆಗಳ ಸಹಿತ  ಉಟ್ಟ ಬಟ್ಟೆಗಳನ್ನು ಒಗೆಯುತ್ತೀಯಾ? ಎಂದು ಕೇಳಿದಾಗ, ನಮ್ಮ ಮನೆಯಲ್ಲಿ ತುಂಬಾ ಮಡಿ ಹಾಗಾಗಿ ನಮ್ಮ ಅಮ್ಮ ಪ್ರತಿದಿನ ಎಲ್ಲಾ ಬಟ್ಟೆಗಳನ್ನು ಒಗೆದುಕೊಂಡು ಮಡಿ ಮಾಡೇ ಹಾಕಿಕೊಳ್ಳಲು ಹೇಳಿದ್ದಾರೆ ಎಂದಾಗ ಕೆಲವು ಸಂಪ್ರದಾಯಸ್ಥರ ಮನೆಗಳಲ್ಲಿ ಇರಬಹುದಾದ ಈ ರೀತಿಯ ಸತ್ಸಂಪ್ರದಾಯಗಳನ್ನು ಆಡಿಕೊಳ್ಳಬಾರದು. ಮೇಲಾಗಿ ಅದರಿಂದ ಇತರರಿಗೇನೂ ತೊಂದರೆ ಇಲ್ಲದ ಕಾರಣ  ಯಾರೂ ಕೂಡಾ ಅದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿರಲಿಲ್ಲ.

ಪ್ರತಿದಿನ ಮುಂಜಾನೆ ಸರಿಯಾಗಿ 4.45 ಕ್ಕೆ ಪ್ರಬಂಧಕರು ಸೀಟಿ ಹಾಕಿದ ಕೂಡಲೇ ಎಲ್ಲರೂ ಏಳುವ ಪದ್ದತಿ ರೂಢಿಯಾಗಿತ್ತು . ಅಂದೇಕೂ ಎಲ್ಲಾ ಶಿಬಿರಾರ್ಥಿಗಳು ಎದ್ದರೂ  ಪವನ್ ಎದ್ದೇ ಇರಲಿಲ್ಲ.  ಪವನ್ ಇನ್ನೂ  ಯಾಕೆ ಎದ್ದಿಲ್ಲ ಎಂದು  ಅವನ ಹತ್ತಿರ  ಹೋಗಿ ಎಬ್ಬಿಸಲು ಹೋದ ಶಂಕರಿನಿಗೆ ಒಂದು ಕ್ಷಣ ಗಾಭರಿ ಮತ್ತು ದಿಗ್ಭ್ರಮೆ. ಛೇ|  ಛೇ!! ಇದೇನು ಹೀಗಾಗಿದೆಯಲ್ಲಾ!! ಇಷ್ಟು ದೊಡ್ಡ ಹುಡುಗ ಈ ರೀತಿ ಮಾಡಿಕೊಳ್ಳಬಹುದಾ?  ಬೇರೆ ಯಾರಿಗಾದರೂ ಈ ವಿಷಯ ಗೊತ್ತಾದರೆ ಏನಂದುಕೊಂಡಾರು? ಪಾಪ ಅವನಿಗೆ ಎಷ್ತು ಬೇಸರವಾಗಬಹುದು?  ಎಂದೆಣಿಸಿ, ಮೆಲ್ಲನೆ ಪವನ, ಏಳೋ ಆಗಲಿ ಸೀಟಿ ಹೊಡೆದು ಐದು ಹತ್ತು ನಿಮಿಷಗಳಾಗಿವೆ. ಎಲ್ಲಾರೂ ಎದ್ದಾಗಿದೆ. ಇಂದೇನಾಯ್ತು ನಿನಗೆ?  ಎಂದು ಮೈ ಮುಟ್ಟಿ ಎಬ್ಬಿಸಿದರೆ, ಥಟ್ ಎಂದು ಗಾಬರಿಯಿಂದ ಎದ್ದ ಪವನನಿಗೆ ಕಣ್ಣ ಮುಂದಿದ್ದ ಶಂಕರನನ್ನು ನೋಡಿ ಒಂದು ಕ್ಷಣ ಮೌನಿಯಾದ. ತನ್ನೆಲ್ಲಾ ಗುಟ್ಟೆಲ್ಲಾ ಇಂದು ಇವನ ಮುಂದೆ ರಟ್ಟಾಯಿತಲ್ಲಾ, ಎನ್ನುವ ದುಗುಡ. ಕಣ್ಣಲ್ಲಿ ಕಣ್ಣಿಟ್ಟು ನೋಡಲು ಆಗದೆ ಸುಮ್ಮನೆ ತಲೆ ತಗ್ಗಿಸಿ ಕೊಂಡ. ಇದನ್ನೆಲ್ಲಾ ಗಮನಿಸಿದ ಶಂಕರ ಸರಿ ಬೇಗ ಏದ್ದೇಳು, ನಾನು ಏನನ್ನೂ ನೋಡಲಿಲ್ಲ, ನಾನು ಇದನ್ನು ಯಾರ ಬಳಿಯೂ ಹೇಳುವುದಿಲ್ಲಾ ಎಂದಾಗ ಪವನನಿಗೆ ಸ್ವಲ್ಪ ನೆಮ್ಮದಿ. 

ಇಬ್ಬರೂ ಒಟ್ಟಿಗೆ ಹಾಸಿಗೆ ಬಟ್ಟೆಗಳ ಸಮೇತ ಸ್ನಾನ ಮಾಡುತ್ತಿರುವಾಗ ಶಂಕರ ತಲೆಗೆ ಸ್ನಾನ ಮಾಡುತ್ತಿರುವುದನ್ನು ನೋಡಿದ ಪವನ, ಯಾಕೋ ಶಂಕರ ನೆನ್ನೆ ತಾನೇ ತಲೆಗೆ ಸ್ನಾನ ಮಾಡಿದ್ದೆ. ಇವತ್ತೂ  ಕೂಡ ತಲೆಗೆ ಸ್ನಾನ ಮಾಡ್ತಾ ಇದ್ದೀಯಲ್ಲಾ ?  ಏನು ಸಮಾಚಾರ ಎಂದಾಗ.  ಶಂಕರ ಮೆಲ್ಲಗೆ ಪವನ ಬಳಿ ಹೋಗಿ ಇನ್ನೇನಪ್ಪಾ ಮಾಡೋದು,  ಪವನನ ಮೂತ್ರದ ಮಡಿ ಬಟ್ಟೆಗಳನ್ನು ಮುಟ್ಟಿ ಪಾವನನಾದ ಮೇಲೆ ಶುಚಿರ್ಭೂತನಾಗಬೇಕಲ್ಲವೇ ಎಂದಾಗ ಸಣ್ಣಗೆ  ಹುಸಿ ಕೋಪ ತೋರಿಸುತ್ತಾ,  ನಾನು ಪ್ರತೀ ದಿನ ರಾತ್ರಿ ಮಲಗಿರುವಾಗ ಹಾಸಿಗೆಯಲ್ಲಿ  ಮೂತ್ರ ವಿಸರ್ಜಿಸಿ ಕೊಳ್ಳುವ ವಿಷಯ  ಯಾರ ಬಳಿಯೂ ಹೇಳುವುದಿಲ್ಲ ಎಂದು ಭಾಷೆ ಕೊಡು ಎಂದಾಗ. ಸರಿ ಆಯ್ತೋ ಬಿಡು ಮಾರಾಯ.. ನಾನಂತೂ ಯಾರ ಬಳಿಯೂ ಹೇಳುವುದಿಲ್ಲ  ನೀನಾಗಿ ನೀನೇ ಬಾಯಿ ಬಿಟ್ಟರೆ ನಾನದಕ್ಕೆ ಜವಾಬ್ಧಾರನಲ್ಲ ಎಂದಾಗ, ಹೋಗೋ ಹೋಗೋ  ಇಷ್ಟು ದಿನಾನೇ ಯಾರಿಗೂ ಹೇಳದೆ ಬಚ್ಚಿಟ್ಟಿದ್ದ ಸತ್ಯ ಇನ್ನು ಮುಂದೆ ಬಿಚ್ಚಿಡ್ತೀನಾ ಎಂದಾ..  ಅಂದಿನಿಂದಲೇ ಪ್ರತ್ರಿ ದಿನ ರಾತ್ರಿ ಮಲಗುವ ಮುನ್ನ ಶಂಕರನೇ ಕಡ್ಡಾಯವಾಗಿ ಪವನನನ್ನು ಶೌಚಾಲಯಕ್ಕೆ ಕೆರೆದುಕೊಂಡು ಹೋಗುವ ಪರಿಪಾಠ ಬೆಳೆಸಿದ. ಮಲಗುವ ಮುನ್ನ ರಾಮಸ್ಕಂದಂ….  ಕರಚರಣ ಕೃತಂವಾ…. ಅನಾಯಾಸೇನ ಮರಣಂ…. ಶ್ಲೋಕಗಳನ್ನು ಹೇಳಿಕೊಂಡು ಮಲಗುವ ಅಭ್ಯಾಸ ಮಾಡಿಸಿದ. ಅದೇ ಕೊನೇ ಪವನ ಮುಂದೆಂದೂ ಹಾಸಿಗೆಯನ್ನು ಒದ್ದೆ ಮಾಡುವ ಪ್ರಸಂಗವೇ ಬರಲಿಲ್ಲ  ಮತ್ತು ಪ್ರತಿದಿನ ಬಟ್ಟೆಗಳನ್ನು ಮಡಿ ಮಾಡುವ ಪ್ರಮೇಯವೇ  ಒದಗಲಿಲ್ಲ. ಇದಕ್ಕೇ ಅಲ್ಲವೇ ಹೇಳುವುದು ಆಪತ್ತಿನಲ್ಲಿ ಆಗುವವನೇ ಆಪ್ತಮಿತ್ರ ಎಂದು.

ಏನಂತೀರೀ?