ನೆರೆಹೊರೆ

ಮೊನ್ನೆ ರಾತ್ರಿ ವಾಯುವಿಹಾರಕ್ಕೆಂದು ಹೋಗುತ್ತಿದ್ದಾಗ  ದಾರಿಯಲ್ಲಿ ನನ್ನ ಸ್ನೇಹಿತರೊಬ್ಬರು ಸಿಕ್ಕಿ, ಇದೇನು ಇಷ್ಟು ಹೊತ್ತಿನಲ್ಲಿ ಈ ಕಡೆಯಲ್ಲಿ ಎಂದಾಗ, ಏನೂ ಇಲ್ಲಾ ಸಾರ್, ಇಲ್ಲೇ ಪಕ್ಕದ ರಸ್ತೆಯಲ್ಲಿರುವ ನಮ್ಮ ಸ್ನೇಹಿತರೊಬ್ಬರು ಊರಿಗೆ ಹೋಗಿದ್ದಾರೆ. ಅದಕ್ಕಾಗಿ ಅವರ ಮನೆಯಲ್ಲಿ ರಾತ್ರಿ ಹೊತ್ತು ಮಲಗಲು ಹೇಳಿದ್ದಾರೆ. ಅದಕ್ಕಾಗಿ  ಹೋಗುತ್ತಿದ್ದೇನೆ.  ಕಾಲ ಸರಿಯಿಲ್ಲ ನೋಡಿ ಎಂದರು. ಅದಕ್ಕೆ ನಾನು ಹೌದು ಸಾರ್ ಎಂದು ಹೂಂ ಗುಟ್ಟಿ ನನ್ನ ವಾಯುವಿಹಾರ ಮುಂದುವರಿಸಿ ಹಾಗೇ ಯೋಚಿಸುತ್ತಿದ್ದಾಗ, ಅರೇ ಹೌದಲ್ಲಾ, ಈ ಪದ್ದತಿ ಈಗ ಅಪರೂಪವಾಗಿದೆಯಲ್ಲಾ  ಎಂದೆನಿಸಿತು.

ನಾವೆಲ್ಲಾ ಚಿಕ್ಕವರಿದ್ದಾಗ ನಮ್ಮ ನೆರೆಹೊರೆಯವರು ಅಥವಾ ಸಮೀಪದಲ್ಲೇ ಇರುವ  ಬಂಧು ಮಿತ್ರರು ಅಥವಾ ನಾವೇ ನಮ್ಮ ಮನೆಯವರೆಲ್ಲಾ  ಮೂರ್ನಾಲ್ಕು ದಿನಗಳಿಗೂ ಹೆಚ್ಚಿಗೆ  ಮನೆಯಿಂದ  ಹೊರಗೆ ಹೋಗಬೇಕಾದರೆ, ನಮ್ಮ  ಅಕ್ಕ ಪಕ್ಕದರಿಗೆ ಹಗಲಿನಲ್ಲಿ ಮನೆಯತ್ತ ಗಮನವಿಡಲು ತಿಳಿಸಿ ರಾತ್ರಿಯ ಹೊತ್ತಿನಲ್ಲಿ ಆವರ ಮನೆಯಲ್ಲಿರುವ ಯಾರಾದರೂ ವಯಸ್ಕರು ಆ ಮನೆಗಳಲ್ಲಿ ಮಲಗುವ ಸಂಪ್ರದಾಯವಿರುತ್ತಿತ್ತು.  ನಾನೂ ಕೂಡ  ಹೈಸ್ಕೂಲ್ ಅಥವಾ ಕಾಲೇಜಿನಲ್ಲಿ ಓದುತ್ತಿದ್ದ ಕಾಲದಲ್ಲಿ  ಹಲವಾರು ಬಾರಿ ಈ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಹಾಗೆ ಮಲಗಲು ಹೋಗುವಾಗ, ಅವರಿಗೆ ಪ್ರತ್ಯೇಕವಾಗಿ ಹಾಸಿಗೆ, ಹೊದಿಗೆ, ಕುಡಿಯಲು ನೀರು, ಓದಲು ಕೆಲವು ವಾರ ಪತ್ರಿಕೆಗಳು ಅಥವಾ ಒಳ್ಳೆಯ ಪುಸ್ತಕಗಳು ಇಡುತ್ತಿದ್ದರು (ಕೇಬಲ್ ಟಿವಿ ಬಂದ ನಂತರ ಪುಸ್ತಕಗಳಿಗೆ ಕಲ್ಲು ಬಿತ್ತು).  ಕೆಲವೊಂದು ಬಾರಿ ಹಣ್ಣು ಹಂಪಲುಗಳನ್ನೂ ಮನೆಯವರು ಇಡ್ಡುತ್ತಿದ್ದ ಕಾಲವಿತ್ತು.

 ಅದೇ ರೀತಿ ಯಾರಾದರು ಬಂಧು ಮಿತ್ರರು  ಅಚಾನಕ್ಕಾಗಿ (ಈಗಿನ ಹಾಗೆ ಮೊದಲೇ ಕರೆ ಮಾಡಿ ಅಪ್ಪಣೆ ಕೋರಿ ಮನೆಗೆ ಬರುವ ಸಂಪ್ರದಾಯ ಆಗಿರಲಿಲ್ಲ)   ಮಧ್ಯಾಹ್ನ  ಊಟದ  ಸಮಯದಲ್ಲಿ ಹಸಿವಿನಿಂದ ಮನೆಗೆ ಬಂದರೆ  ನಮ್ಮ ಮನೆಯಲ್ಲಿ  ಅವರಿಗೆ ಸಾಕಾಗುವಷ್ಟು ಆಹಾರ ಇಲ್ಲದಿದ್ದಲ್ಲಿ ಮತ್ತು ಹೊಸದಾಗಿ ಆಹಾರ ತಯಾರು ಮಾಡಲು ಸಮಯ ಹಿಡಿಯುತ್ತಿದ್ದ ಕಾರಣ ನಮ್ಮ ಅಕ್ಕ ಪಕ್ಕದವರ ಮನೆಗೆ ಹೋಗಿ ಅವರ ಮನೆಯಿಂದ ಯಾವುದೇ ರೀತಿಯ ಮುಜುಗರವಿಲ್ಲದೆ ಆಹಾರ ತೆಗೆದು ಕೊಂಡು ಬಂದು, ಬಂದ ನೆಂಟರಿಷ್ಟರನ್ನು ಸತ್ಕರಿಸುವ ಪದ್ದತಿ ಜಾರಿಗೆಯಲ್ಲಿತ್ತು. ಅದೇ ರೀತಿ ಅವರ ಮನೆಗೂ ನಮ್ಮ ಮನೆಯ ಅಹಾರಗಳು ಹೋಗುತ್ತಿದ್ದವು.

ಇನ್ನು ಕೆಲವು ಸಮಯ ಮನೆಗೆ ರಾತ್ರಿ ಹೊತ್ತಿನಲ್ಲಿ ಎಂಟು ಹತ್ತು  ಜನ ಸಂಬಂಧೀಕರು ಬಂದರೆ ಅವರಿಗೆ ನಮ್ಮ ಮನೆಯಲ್ಲಿ ಮಲಗಲು ಅಗತ್ಯವಿದ್ದಷ್ಟು ಜಾಗವಿರದಿದ್ದಲ್ಲಿ , ಅವರ ಊಟೋಪಚಾರಗಳು ಎಲ್ಲವೂ ಮುಗಿದ ಮೇಲೆ ಕೆಲವರಿಗೆ ಅಕ್ಕ ಪಕ್ಕದ ಮನೆಗಳಲ್ಲಿ  ಮಲಗಲು ವ್ಯವಸ್ಥೆ ಮಾಡಲಾಗುತ್ತಿತ್ತು. ಹಾಗೆ ಮಲಗಿದ್ದ  ಮನೆಯವರು  ನಮ್ಮ ಮನೆಯ ಬಂಧುಗಳನ್ನು ಅವರ ಮನೆಯ ಬಂಧುಗಳೆಂದೇ ಭಾವಿಸಿ ಅವರಿಗೆ ತಕ್ಕ ಅನುಕೂಲಗಳನ್ನೆಲ್ಲಾ ಮಾಡಿಕೊಟ್ಟು  ಬೆಳಗ್ಗೆ ಅವರ ಮನೆಯಲ್ಲಿಯೇ ಸ್ನಾನಾನಂತರ ಕಾಫೀ   ಕೆಲವು ಬಾರಿ ತಿಂಡಿಯನ್ನೂ ಮಾಡಿ ಕೊಟ್ಟ ಉದಾಹರಣೆಗಳೆಷ್ಟೋ ಇವೆ.

ಮೊದಲೆಲ್ಲಾ ನಮ್ಮ ಊರಿನಲ್ಲಿ ಯಾರದಾದರೂ ಮನೆಯಲ್ಲಿ ಸತ್ಯನಾರಾಯಣ ಫೂಜೆ, ನಾಮಕರಣ, ಇಲ್ಲವೆ ಮತ್ತಾವುದೇ ಸಣ್ಣ ಪುಟ್ಟ ಸಮಾರಂಭಗಳು ಇದ್ದಲ್ಲಿ ಅಕ್ಕ ಪಕ್ಕದವರೆಲ್ಲಾ ಒಂದಾಗಿಯೇ ಕೂಡಿ ಆಚರಿಸುತ್ತಿದ್ದರು. ಎಲ್ಲ ಮನೆಯ ಹೆಂಗಳೆಯರು ತರಕಾರಿ ಹೆಚ್ಚಿ, ಮನೆಯ ಮುಂದೆ ರಂಗೋಲಿ ಹಾಕುವುದು, ಹೂ ಕಟ್ಟುವುದು, ದೇವರನ್ನು ಅಣಿ ಮಾಡುತ್ತಿದ್ದರೆ, ಗಂಡಸರೆಲ್ಲಾ,  ಚಪ್ಪರ,  ತಳಿರು ತೋರಣಗಳ ವ್ಯವಸ್ಥೆಯ ಜೊತೆಗೆ ತಾವೇ ಅಡುಗೆಯನ್ನೂ ಮಾಡಿದರೆ, ಚಿಕ್ಕ ಮಕ್ಕಳು, ಚಾಪೆ, ಊಟದ ಎಲೆಗಳನ್ನು ಹಾಕುವುದು ನೀರು, ಉಪ್ಪು ಬಡಿಸುವ ವ್ಯವಸ್ಥೆಗಳಲ್ಲಿ ತೊಡಗಿ ಕೊಳ್ಳುತ್ತಿದ್ದರು. ಹೀಗೆ ಒಬ್ಬರ ಮನೆಯ ಸಭೆ ಸಮಾರಂಭಗಳು ಇಡೀ ನೆರೆಹೊರೆಯವರಿಗೆಲ್ಲಾ ಒಟ್ಟಿಗೆ ಬೆರೆತು ಸಂಭ್ರಮಿಸುವ ಸುಮಧುರ ವಾತಾವರಣವಿರುತ್ತಿತ್ತು.

ಇಂದು ಆಧುನಿಕ ಜಗತ್ತಿಗೆ ನಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಂತೆಯೇ ಅಭಿಭಕ್ತ ಕುಟುಂಬಗಳೆಲ್ಲಾ ವಿಭಕ್ತ ಕುಟುಂಬಗಳಾಗಿ,  ಬಹುತೇಕ ಮೇಲೆ ತಿಳಿಸಿದಂತಹ ಎಲ್ಲಾ ಸಂಸ್ಕೃತಿಗಳೂ  ಮಾಯವಾಗಿ ಹೋಗುತ್ತಿರುವುದು ವಿಪರ್ಯಾಸವೇ ಸರಿ. ನೆರೆಹೊರೆಯವರನ್ನು ಬಿಡಿ, ಮುಂಚೆ ಸಮಾರಂಭಗಳಿಗೆ ಎರಡು ದಿನಗಳ ಮುಂಚೆಯೇ ಕುಟುಂಬಸಮೇತರಾಗಿ ಆಗಮಿಸಿ, ಬರುವಾಗ ತಮ್ಮ ಕೈಯಲ್ಲಾದ ಮಟ್ಟಿಗೆ ಅಕ್ಕಿ, ತೆಂಗಿನಕಾಯಿ, ತರಕಾರಿಗಳು ಇಲ್ಲವೇ ಬಾಳೆ ಎಲೆ, ವಿಳ್ಳೇದೆಲೆ ಅಡಿಕೆಗಳ ಸಮೇತ ಬಂದು  ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ  ಕೈ ಜೋಡಿಸಿ ಸಮಾರಂಭ ಮುಗಿದು ಎರಡು ದಿನಗಳಾದ ನಂತರವೇ ಹೋಗುತ್ತಿದ್ದ ಬಂಧುಗಳು ಇಂದು ಸಮಾರಂಭದ ದಿನವೇ ಒಬ್ಬರೂ ಇಲ್ಲವೇ ಇಬ್ಬರು ಆಗಮಿಸಿ ಊಟ ಮುಗಿದು ಕೈತೊಳೆಯುತ್ತಿದ್ದಂತೆಯೇ ಜೈ ಎನ್ನುವ ಪರಿಸ್ಥಿತಿ ಬಂದೊದಗಿದೆ.

ಅಂದು ಎಲ್ಲರ ಮನೆಗಳು ದೂರ ದೂರ ಇದ್ದರೂ ಸಂಬಂಧಗಳು ಮಾತ್ರ ಹತ್ತಿರವೇ ಇರುತ್ತಿದ್ದವು. ಇಂದು ಅದೇ ಮನೆಗಳ ಜಾಗದಲ್ಲಿ ಬಹು ಅಂತಸ್ತಿನ ಕಟ್ಟಡಗಳು ತೆಲೆಯೆತ್ತಿ ಹತ್ತಾರು ಮನೆಗಳು ಅಕ್ಕಪಕ್ಕದಲ್ಲೇ ಜೋಡಿಸಿಕೊಂಡೇ ಇದ್ದರೂ ನೆರೆಹೊರೆಯವರ ಪರಿಚಯವೇ ಹೆಚ್ಚಿನವರಿಗೆ ಇಲ್ಲದಿರುವುದು ಶೋಚನೀಯವಾಗಿದೆ.   ಅಕಸ್ಮಾತ್ ಹಾಗೇನಾದರೂ ಪರಿಚಯವಿದ್ದಲ್ಲಿ ಹಾಯ್! ಬಾಯ್! ಇಲ್ಲವೇ ಹೆಚ್ಚೆಂದರೆ ವ್ಯಾಟ್ಯಾಪ್ ಗುಡ್ ಮಾರ್ನಿಂಗ್ ಅಥವಾ ಗುಡ್ ನೈಟ್ ಗಳಿಗೆ ಮೀಸಲಾಗಿ, ಹೆಚ್ಚೆಂದರೆ ಅವರ ಪ್ರವಾಸವೋ ಇಲ್ಲವೇ ಸಭೆ ಸಮಾರಂಭಗಳನ್ನು ಅವರ ಫೇಸ್ಬುಕ್ ಅಥವಾ ವ್ಯಾಟ್ಯಾಪ್ ಸ್ಟೇಟಸ್ನಿಂದ ತಿಳಿಯಬೇಕಾಗಿ  ಬಂದಿರುವುದು ನಮ್ಮ ದೌರ್ಭಾಗ್ಯವೇ ಸರಿ.

ಅಂದು ಎಲ್ಲರ  ಮನೆಗಳು ಚಿಕ್ಕದಿರುತ್ತಿದ್ದವು ಆದರೆ ಮನಗಳು ವಿಶಾಲವಾಗಿರುತ್ತಿದ್ದವು. ಇಂದು ಎಲ್ಲರ ಮನೆಗಳೂ ವಿಶಾಲವಾಗಿವೆಯಾದರೂ ಮನಗಳು ಮಾತ್ರ ಸಂಕುಚಿತವಾಗಿವೆ.  ಇನ್ನೂ ಕಾಲ ಮಿಂಚಿ ಹೋಗುವ ಮೊದಲು ನಮ್ಮ ನೆರೆಹೊರೆಯ ಮತ್ತು ಬಂಧು-ಬಾಂಧವರ ಸಂಬಂಧಗಳನ್ನು  ವೃದ್ದಿಸಿಕೊಳ್ಳುವ ಜೊತೆಗೆ ಬಾಂಧವ್ಯಗಳನ್ನು ಗಟ್ಟಿ ಮಾಡಿಕೊಳ್ಳೋಣ ಮತ್ತು ನೆಮ್ಮದಿಯ ಸಹಬಾಳ್ವೆ ನಡೆಸೋಣ. ಮುಂದಿನ ತಲೆಮಾರಿನವರಿಗೂ ಒಳ್ಳೆಯ  ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಉಳಿಸಿ ಹೋಗೋಣ.

ಏನಂತೀರೀ?

ಕಾಫೀ ಪುರಾಣ

ಬಿಸಿ ಬಿಸಿ ಕಾಫಿ

ಶಂಕರನ ಮನೆಯವರು ಒಟ್ಟು ಕುಟುಂಬದವರು.  ಮನೆಯಲ್ಲಿ ಮಕ್ಕಳ ಸಂಖ್ಯೆಯೂ ಅಧಿಕವೇ. ಹಾಗೆಯೇ ಮನೆಗೆ ಬಂದು  ಹೋಗುವವರು ತುಸು ಹೆಚ್ಚೇ.  ಬಂದವರಿಗೆ ಕಾಫೀ ತಿಂಡಿ, ಊಟೋಪಚಾರ ಮಾಡುವುದು ಅವರ ಮನೆಯಲ್ಲಿ  ನಡೆದು ಬಂದ ಸಂಪ್ರದಾಯ. ಹಾಗೆ ಪ್ರತೀ ಬಾರಿ ಕಾಫೀ ಮಾಡಿದಾಗಲೂ ಮಕ್ಕಳೂ ಕಾಫಿ ಕುಡಿಯಲು ಬಯಸುವುದು ಸಹಜ.  ಹಾಗಾಗಿ ಸುಮ್ಮನೆ ಬಂದು ಹೋದವರೆಲ್ಲರ ಜೊತೆಯೂ ಕಾಫಿ ಕುಡಿಯುತ್ತಾ ಹೋದರೆ ಮಕ್ಕಳಿಗೆ ಕಾಫಿ ಚಟವಾಗುತ್ತದೆ ಎಂದು ತಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಕಾಫೀ ಅಭ್ಯಾಸ ಮಾಡಿಸದೇ ಇದ್ದರೆ ಮಕ್ಕಳ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ನಿರ್ಧರಿಸಿದರು. ಅದರಂತೆ ಮಕ್ಕಳಿಗೆ ಬೆಳಿಗ್ಗೆ  ಮತ್ತು ಸಂಜೆ ಹಾಲು ಕೊಡುವ ಅಭ್ಯಾಸ ಮಾಡಿದರು. ಆದರೆ ಮಕ್ಕಳು ಯಾರೂ ಕಾಫಿ ಕುಡಿಯುವುದಿಲ್ಲ ಎಂದರೆ ಅವರ ಮನೆಯಲ್ಲಿ ಕಾಫಿ ಖರ್ಚು ಕಡಿಮೆ ಎಂದು ಭಾವಿಸಬೇಕಿರಲಿಲ್ಲ. ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಅವರ ಮನೆಯಲ್ಲಿ  ಕಾಫಿ ಡಿಕಾಕ್ಷನ್ ಸಿದ್ದವಿದ್ದು ,   ಬೆಳಿಗ್ಗೆ ಎದ್ದೊಡನೆಯೇ ಕಾಫಿ, ತಿಂಡಿಗೆ ಮುಂಚೆ ಕಾಫಿ, ತಿಂಡಿ ತಿಂದಾದ ನಂತರ ಕಾಫೀ, ಮಧ್ಯಾಹ್ನ ಊಟದ ನಂತರ ಕಾಫಿ, ಸಂಜೆ ಕಾಫಿ ಹೀಗೆ  ಮಕ್ಕಳ ಪಾಲನ್ನು  ಸೇರಿಸಿ  ಅಷ್ಟೂ ಕಾಫಿಯನ್ನು  ಹಿರಿಯರೇ ಹೀರುತ್ತಿದ್ದರು. ಆದರೆ  ಶಂಕರನ  ಮನೆಯ ಮಕ್ಕಳಿಗೆ ಕಾಫಿ ಟೀ ರುಚಿಯೇ ಪರಿಚಯವಿರಲಿಲ್ಲ.

ಸುಮಾರು ವರ್ಷಗಳ ನಂತರ  ಅದೊಂದು ದಿನ  ಶಂಕರನ ಮನೆಯ ಹಿರಿಯರೆಲ್ಲಾ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಯಾವುದೋ ಸಮಾರಂಭಕ್ಕೆ ಹೋಗಿದ್ದರು. ಅದೇ ಸಮಯಕ್ಕೆ ಶಂಕರನ ತಂದೆಯ ಸ್ನೇಹಿತರು ತಮ್ಮ ಹೆಂಡತಿ ಮತ್ತು  ಸಣ್ಣ ವಯಸ್ಸಿನ ಮಗನೊಂದಿಗೆ ತಮ್ಮ ಮನೆಯ ಗೃಹಪ್ರವೇಶಕ್ಕೆ ಆಮಂತ್ರಿಸಲು ಮನೆಗೆ ಬಂದಿದ್ದರು. ಸರಿ ಬಂದಿರುವವರಿಗೆ  ಶಂಕರ ಮತ್ತವನ ತಂಗಿ ಸೇರಿ ಕಾಫಿ ಮಾಡಿಕೊಟ್ಟು  ಬಂದವರ ಜೊತೆ ಮಾತಾನಾಡಲು ಕುಳಿತರು. ದೊಡ್ಡವರೇನೂ ಸುಮ್ಮನೆ ಕಾಫಿ ಕುಡಿಯತೊಡಗಿದರು. ಆದರೆ ಅವರ ಜೊತೆಯಲ್ಲಿ ಬಂದಿದ್ದ ಹುಡುಗ ಒಂದು ತೊಟ್ಟು ಕಾಫಿಯನ್ನು ಹೀರಿದ ಕೂಡಲೇ ಮುಖ ಕಪ್ಪಿಟ್ಟಿತು. ಅವನು ಆ ರೀತಿ ಅಸಹ್ಯ ಮಾಡಿಕೊಂಡದ್ದು ಶಂಕರ ಮತ್ತವನ ತಂಗಿಗೆ ಒಂದು ರೀತಿಯ ಕಸಿವಿಸಿ. ಯಾಕೋ ಸಂಜೀವಾ, ಕಾಫಿ ಚೆನ್ನಾಗಿಲ್ವಾ?  ಸ್ವಲ್ಪ ಸ್ಟ್ರಾಂಗ್ ಆಯ್ತಾ? ಇರು ಸ್ವಲ್ಪ ಹಾಲು ಬೆರೆಸಲಾ? ಅಂತ ಕೇಳಿದ ಶಂಕರ.  ಅದಕ್ಕೆ ಸಂಜೀವಾ, ಅಯ್ಯೋ ಅಣ್ಣಾ ಕಾಫಿಗೇ ಸಕ್ಕರೇನೇ ಹಾಕಿಲ್ಲ ಅದಕ್ಕೇ ತಂಬಾ ಕಹಿಯಾಗಿದೆ ಎಂದ.  ಅಯ್ಯೋ ಅತ್ತೆ ಮಾವಾ ನೀವಾದರೂ  ಕಾಫಿಗೆ ಸಕ್ಕರೆ ಹಾಕಿಲ್ಲಾ ಅಂತ ಹೇಳ್ಬಾರ್ದಾ ಅಂದ್ರೆ, ಅವರು ಅಯ್ಯೋ ಬಿಡ್ರೋ ಮಕ್ಕಳಾ ನಮಗೆ ಗೊತ್ತಿಲ್ವಾ ನಿಮಗೆ ಕಾಫಿ ಕುಡಿದ ಅಭ್ಯಾಸವಿಲ್ಲ ಹಾಗಾಗಿ ಇಂತಹ ಸಣ್ಣ ಪುಟ್ಟ ತಪ್ಪುಗಳು ಆಗುವುದು ಸಹಜ. ಅದನ್ನು ಎತ್ತಿ ಆಡಿ ತೋರಿಸಿ ನಿಮ್ಮಂತಹ ಸಣ್ಣ ಮಕ್ಕಳ  ಮನಸ್ಸು ಬೇಜಾರು ಮಾಡುವದಕ್ಕೆ ನಮಗೆ ಮನಸ್ಸಾಗಲಿಲ್ಲ ಎಂದರು. ಆಷ್ಟರಲ್ಲಾಗಲೇ ಶಂಕರ ತಂಗಿ ಓಡಿ ಹೋಗಿ  ಬಟ್ಟಲಿನಲ್ಲಿ ಸಕ್ಕರೆ ಮತ್ತು ಚಮಚಗಳನ್ನು ತಂದು ಎಲ್ಲರಿಗೂ ಅವರ ರುಚಿಗೆ ತಕ್ಕಂತೆ ಸಕ್ಕರೆ ಬೆರೆಸಿದಳು.

ಮುಂದೆ ಶಂಕರ ದೊಡ್ಡವನಾಗಿ ತನ್ನ ಮದುವೆಯ ಆಮಂತ್ರಣ ಪತ್ರ ಕೊಡಲು ತನ್ನ ತಂದೆಯವರ ಜೊತೆ  ಅದೇ ಸ್ನೇಹಿತರ ಮನೆಗೆ ಹೋದಾಗಾ,ಆವರು ತಮ್ಮ ಶುಗರ್ ಲೆಸ್  ಕಾಫಿ ಪುರಾಣವನ್ನು ನೆನಸಿಕೊಂಡು, ಏನಯ್ಯಾ ಮಿತ್ರಾ, ಕಡೇ ಪಕ್ಷ ನಿನ್ನ ಭಾವೀ ಪತ್ನಿಗಾದರೂ ಕಾಫಿ, ಟೀ ಕುಡಿಯುವ ಅಭ್ಯಾಸವಿದೆಯೋ?  ಪರವಾಗಿಲ್ಲಾ ಬಿಡು ಈಗ ಹೇಗಿದ್ರೂ ನಡೆಯುತ್ತೆ.  ಈಗ ನಾವೆಲ್ಲಾ ಕುಡಿತಾ ಇರೋದೇ ಲೆಸ್ ಶುಗರ್ ಕಾಫಿ ಅಂತ ಹುಸಿ ನಗೆಯಾಡಿದರು. ಹೇ ಮಾವಾ, ಇನ್ಮುಂದೆ  ನಿಮಗೆ ಅಂತ ಸಮಸ್ಯೆ ಇರೋದಿಲ್ಲ. ನನ್ನ ಭಾವಿ ಪತ್ನಿ ತುಂಬಾ ಚೆನ್ನಾಗಿ ಕಾಫಿ ಟೀ ಮಾಡ್ತಾಳೆ ಅಂತ ಎಲ್ಲರೂ ಹೇಳ್ತಾರೆ. ಮದುವೆ ಆದ್ಮೇಲೆ  ನೀವೂ ನಮ್ಮನೆಗೆ ಒಂದ್ಸಲ ಬಂದು  ಸಿಹಿ ಸಿಹಿ ರುಚಿಯಾದ ಕಾಫಿ ಜೊತೆ ಅವಳ ಕೈ ರುಚಿಯನ್ನೂ ನೋಡಿವಿರಂತೆ  ಎಂದ ಶಂಕರ.  ಶಂಕರನ ಈ ಮಾತನ್ನು ಕೇಳಿದ ಅಂದಿನ ಪುಟ್ಟ ಹುಡುಗ ಇಂದಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿ ಸಂಜೀವಾ, ಅಣ್ಣಾ ,  ಅಪ್ಪ ಅಮ್ಮ ಜೊತೆ ನಾನೂ ಬರ್ತೀನಿ. ಮೊದಲು ನಾನು ಕಾಫೀ ಕುಡಿದು ನಂತರ ಅವರಿಗೆ  ಕುಡಿಸೋಣ ಅದರಿಂದ ಆಭಾಸವೂ ತಪ್ಪುತ್ತದೆ ಎಂದಾಗ ಎಲ್ಲರೂ ಗೊಳ್ ಎಂದು ನಕ್ಕಿದ್ದೇ ನಕ್ಕಿದ್ದು.

ಅಂದಿನಿಂದ ಶಂಕರನ ಮನೆಯಲ್ಲಿ  ಅಡಿಕೆಗೆ  ಹೋದ ಮಾನ ಆನೆ ಕೊಟ್ಟ್ರೂ ಬರೋದಿಲ್ಲ ಅನ್ನೂ ಗಾದೆ ಜೊತೆಗೆ ಶುಗರ್ ಲೆಸ್ ಕಾಫಿಗೆ ಹೋದ ಮಾನ ಎಷ್ಟೇ ಶುಗರ್ ಹಾಕಿದ್ರೂ ಬರೋದಿಲ್ಲ ಅನ್ನೋ ಗಾದೆ ಮನೆ ಮಾತಾಯ್ತು. ಸರಿ, ಇನ್ನೇನು ಮತ್ತೇ  ಹೇಗೂ  ಶಂಕ್ರನ ಹೆಂಡತಿ ಘಮ ಘಮವಾದ ಕಾಫಿ ಮಾಡ್ತಾರಂತೆ  ನಡೀರಿ ಎಲ್ಲಾರೂ ಒಮ್ಮೆ ಅವರ ಕೈ ರುಚಿಯ ಕಾಫಿ ಕುಡಿದೇ ಬರೋಣ.

ಏನಂತೀರೀ?

ಆಂಬ್ಯುಲೆನ್ಸ್ ಬಂತು ದಾರಿ ಕೊಡಿ

ಆಂಬ್ಯುಲೆನ್ಸ್ ಬಂತು ದಾರಿ ಕೊಡಿ

ನಾವುಗಳು ಎಂತಹದ್ದೇ ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ  ಆಂಬ್ಯುಲೆನ್ಸ್ ಶಬ್ಧ ಕೇಳಿದ ತಕ್ಷಣ ಎಲ್ಲರೂ ಅಕ್ಕ ಪಕ್ಕಕ್ಕೆ ಕಷ್ಟ ಪಟ್ಟಾದರೂ ಸರಿದು ಆಂಬ್ಯುಲೆನ್ಸ್ ಹೋಗಲು ಜಾಗ ಮಾಡಿ ಕೊಡುತ್ತೇವೆ. ಅಕಸ್ಮಾತ್ ಯಾರಾದರೂ ಜಾಗ ಮಾಡಿ ಕೊಡಲು ತಡ ಮಾಡಿದಲ್ಲಿ ಅವರ ಮೇಲೆ ಜೋರು ಮಾಡಿಯಾದರೂ ಆಂಬ್ಯುಲೆನ್ಸ್ ಹೋಗಲು ಅನುವು ಮಾಡಿಕೊಡುತ್ತೇವೆ.  ಏಕೆಂದೆರೆ,  ಆ ಆಂಬ್ಯುಲೆನ್ಸ್ ಗಾಡಿಯಲ್ಲಿ ಯಾವುದೋ ಒಂದು ಜೀವ  ಜೀವನ್ಮರಣ ಸ್ಥಿತಿಯಲ್ಲಿರುತ್ತದೆ. ಆ ಜೀವಕ್ಕೆ  ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ತಲುಪಿ ಸೂಕ್ತವಾದ ಚಿಕಿತ್ಸೆ ದೊರೆತು ಚೇತರಿಸಿಕೊಳ್ಳಬಹುದೇನೋ ಎನ್ನುವ ಆಶಾಭಾವನೆ ಎಲ್ಲರದ್ದು. ಇನ್ನು ಆಂಬ್ಯುಲೆನ್ಸ್ ಒಳಗೆ ಇರುವ ರೋಗಿಗೆ ಮತ್ತು ಅವರ ಕುಟುಂಬದವರ ಅತಂಕ ನಿಜಕ್ಕೂ ಹೇಳಲಾಗದು ಮತ್ತು ಆಂತಹ ಪರಿಸ್ಥಿತಿ ಯಾವ ಶತೃಗಳಿಗೂ ಬಾರದಿರಲಿ ಎಂದೇ ನನ್ನ  ಹಾರೈಕೆ.   ವಯಕ್ತಿವಾಗಿ  ಈ ವಿಷಯದಲ್ಲಿ ನನಗೆ ಬಹಳ ಅನುಭವಿದೆ. ಏಕೆಂದೆರೆ  ತಾವೇ ಆಂಬ್ಯುಲೆನ್ಸ್ ಏರಿ  ಆಮ್ಲಜನಕದ ಮುಸುಕನ್ನು ತಾವೇ ಧರಿಸಿ ಮಲಗಿದ ಕೆಲವೇ ನಿಮಿಷಗಳಲ್ಲಿ  ನಮ್ಮ ತಂದೆಯವರು ಆಂಬ್ಯುಲೆನ್ಸ್ ಗಾಡಿಯಲ್ಲೇ  ಪ್ರಾಣ ತ್ಯಜಿಸಿರುವುದು ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ.  ತಂದೆಯವರು ಆಂಬ್ಯುಲೆನ್ಸನಲ್ಲೇ  ಮೃತರಾದದ್ದು ತಿಳಿದ ಮೇಲೂ , ಆಶಾವಾದಿಯಾಗಿ ಚಾಲಕನಿಗೆ ತುಸು ವೇಗದಿಂದ  ಹೋಗಲು ತಿಳಿಸಿ  ಆಸ್ಪತ್ರೆಗೆ ತಂದೆಯವರನ್ನು  ಕರೆದು ಕೊಂಡು ಹೋದಾಗ, ಅಯ್ಯೋ ಸಾರ್ ಇನ್ನು ಸ್ವಲ್ಪ ಹೊತ್ತಿನ ಮುಂಚೆ ಕರೆದು ಕೊಂಡು ಬಂದಿದ್ದರೆ ಅವರ ಪ್ರಾಣವನ್ನು ಉಳಿಸಬಹುದಿತ್ತೇನೋ, ಈಗ ಅವರ ಪ್ರಾಣ ಪಕ್ಷಿ ಹಾರಿಹೋಗಿದೆ  ನಾವು ಏನೂ ಮಾಡಲಾಗುತ್ತಿಲ್ಲ ದಯವಿಟ್ಟು ಕ್ಷಮಿಸಿ  ಎಂದು ಡಾಕ್ಟರ್ ಅವರು ಹೇಳಿರುವುದು ಇನ್ನೂ ನನ್ನ ಕಿವಿಯ ಮೇಲಿದೆ. ಹಾಗಾಗಿ ಅಂದಿನಿಂದ  ನಾನು  ಎಷ್ಟು ದೂರದಲ್ಲಿಂದಲಾದರೂ ಆಂಬ್ಯುಲೆನ್ಸ್ ಶಬ್ಧ ಕೇಳಿದೊಡನೆಯೇ  ಇದ್ದ  ಸ್ಥಳದಲ್ಲಿಯೇ ದಾರಿ ಮಾಡಿಕೊಟ್ಟು ಭಗವಂತಾ ಆ ರೋಗಿಯನ್ನು ಅಪಾಯದಿಂದ ಆದಷ್ಟು ಬೇಗನೇ ಪಾರು ಮಾಡು ಎಂದೇ ಕೇಳಿ ಕೊಳ್ಳುತ್ತೇನೆ. ಬಹುಷಃ ನನ್ನಂತೆಯೇ ಎಲ್ಲರೂ ಅದೇ ಭಾವನೆಯಲ್ಲಿಯೇ ಇರುತ್ತಾರೆ.

ಆದರೆ ಇಂತಹ ವಿಶೇಷ ಸವಲತ್ತುಗಳನ್ನು ಕೆಲ ವಿದ್ರೋಹಿಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ಗಾಭರಿ ತರಿಸುತ್ತಿರುವ  ಸಂಗತಿಯಾಗಿದೆ. ಮೊನ್ನೆ ವಿಶಾಖಪಟ್ಟಣದಲ್ಲಿ ಸುಮಾರು ಮೂರು ಕೋಟಿಗಳಷ್ಟು ಬೆಲೆ ಬಾಳುವ 1,813 ಕೆಜಿ ಗಾಂಜಾವನ್ನು ಆ್ಯಂಬುಲೆನ್ಸ್​ ಮೂಲಕ ಕೆಲ  ದೇಶ ದ್ರೋಹಿಗಳು ಸಾಗಿಸುತ್ತಿದ್ದಾಗ ಪೋಲೀಸರ ಕೈಗೆ ಸಿಕ್ಕಿ ಬಿದ್ದಿರುವುದು ನಿಜಕ್ಕೂ ಆತಂಕ ತರುವಂತಾಗಿದೆ. ಇಂದೇನೂ ಸಿಕ್ಕಿ ಬಿದ್ದಿದ್ದಾರೆ. ಆದರೆ ಇಂತಹ ಕೃತ್ಯ ಎಷ್ಟು ದಿನಗಳಿಂದ ನಡೆಯುತ್ತಿತ್ತೋ ಯಾರು ಬಲ್ಲರು? ಅದೇ ರೀತಿ ಕೆಲ ದಿನಗಳ ಹಿಂದೆ ಆಂಬ್ಯುಲೆನ್ಸ್ ಚಾಲಕನೊಬ್ಬ ತನ್ನ ಪ್ರೇಯಸಿಯನ್ನು ಕಾಲೇಜಿಗೆ ಬಿಡಲು ಕರ್ಕಶವಾಗಿ ಆಂಬ್ಯುಲೆನ್ಸ್ ಶಬ್ಧ ಮಾಡುತ್ತಾ ಹೋಗುತ್ತಿದ್ದಾಗ ಪೋಲಿಸರ ಕೈಗೆ ಸಿಕ್ಕಿಬಿದ್ದು ಗೂಸಾ ತಿಂದ್ದಿದ್ದ ವಿಡಿಯೋ ವ್ಯಾಟ್ಸಾಪ್ನಲ್ಲಿ ವೈರಲ್ ಆಗಿದೆ. ಆಂಬ್ಯುಲೆನ್ಸಗಳನ್ನು ಪೋಲೀಸರು ತಪಾಸಣೆ ಮಾಡುವುದಿಲ್ಲ ಎಂಬುದನ್ನೇ ನಪ ಮಾಡಿಕೊಂಡು ದೇಶ ವಿದ್ರೋಹಿಗಳನ್ನೂ ಸಮಾಜಘಾತಕರನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶವಕ್ಕೆ ಸುರಕ್ಷಿತವಾಗಿ ತಲುಪಿಸುವಂತಹ ಕುಕೃತ್ಯಗಳನ್ನೂ ಮಾಡಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.

ರೋಗಿಗಳು ಸರಿಯಾದ ಸಮಯದಲ್ಲಿ  ಆಸ್ಪತ್ರೆಗೆ ತಲುಪಿ ಗುಣಮುಖರಾಗಲೀ ಎಂದು  ಯಾವುದೇ ತಪಾಸಣೆ ಇಲ್ಲದೇ ಮತ್ತು ಯಾವುವೇ  ರಸ್ತೆ ಸಂಚಾರ ನಿಯಮಗಳು ಇಲ್ಲದೇ ಸುಗಮವಾಗಿ ತಲುಪಲು ಅನುವು ಮಾಡಿಕೊಟ್ಟಿರುವುದನ್ನೇ  ಈ ರೀತಿಯಾಗಿ ದುರುಪಯೋಗ ಮಾಡಿ ಕೊಳ್ಳುವ ದುರುಳರಿಗೆ  ಆ ಭಗವಂತನೇ ಬುದ್ದಿ ಕೊಟ್ಟು ಸರಿಯಾದ ಮಾರ್ಗದಲ್ಲಿ ನಡೆಯುವಂತಾಗಬೇಕು.  ಅಮೇರಿಕಾದ ಮಾಜೀ ಅಧ್ಯಕ್ಷ ಜಾನ್ ಎಫ್ ಕೆನಡಿಯವರು ಹೇಳಿರುವಂತೆ ದೇಶ ನಿನಗೇನು ಮಾಡಿದೆ ಎಂದು ಪ್ರಶ್ನಿಸುವ ಮೊದಲು, ದೇಶಕ್ಕೆ ನೀನೇನು ಮಾಡಿದೆ ಎಂದು ಹೇಳು ಎನ್ನುವಂತೆ  ಕೊಟ್ಟ ಸವಲತ್ತುಗಳನ್ನು ದುರುಪಯೋಗಿಸಿ ಕೊಳ್ಳಬಾರದೆಂಬ  ಮನೋಭಾವ ಜನರಿಗೆ ವಯಕ್ತಿಕವಾಗಿಯೇ ಬರಬೇಕೇ ಹೊರತು ಸರ್ಕಾರದ ಯಾವುದೇ ಕಾನೂನಿಗಳಿಂದಲ್ಲ ಮತ್ತು ಪೋಲೀಸರ ಒತ್ತಡಗಳಿಂದಲ್ಲ ಎನ್ನುವುದನ್ನು ಎಲ್ಲರೂ  ಮನಗೊಂಡರೆ ಇಡೀ ನಾಡಿಗೇ ಒಳ್ಳೆಯದು

ಏನಂತೀರೀ?

1983 ಕ್ರಿಕೆಟ್ ವರ್ಲ್ಡಕಪ್, ಭಾರತದ ಯಶೋಗಾಥೆ

ಜೂನ್‌ 25, 1983, ಆಗ ನಾನು‌ ಎಂಟನೇ‌ ತರಗತಿಯಲ್ಲಿ‌ ಓದುತ್ತಿದೆ.‌ ಸಾಧಾರಣ ಮಧ್ಯಮ ಕುಟುಂಬದವರಾಗಿದ್ದ ನಮಗೆ ಸ್ವಂತ‌ ಟಿವಿ ಹೊಂದುವುದು ಕಷ್ಟಕರವಾದ ದಿನವದು. ಅಲ್ಲೋ ಇಲ್ಲೋ ಒಬ್ಬೊಬ್ಬರ ‌ಮನೆಯಲ್ಲಿ, ಕೋನಾರ್ಕ್ ಅಥವಾ ಸಾಲಿಡೇರ್ ಅಥವಾ ಡಯೋನೋರಾ ಅಥವಾ ಬಿಪಿಎಲ್ ಕಂಪನಿಗಳ ಕಪ್ಪು ಬಿಳಿಪಿನ ಟಿವಿ ಇರುತ್ತಿದ್ದ ಕಾಲವದು. ಮೂಗಿಗಿಂತ ಮೂಗಿನ ನತ್ತೇ ಭಾರವೆಂಬಂತೆ, ಟಿವಿಗಿಂತ ಆಂಟೆನಾ ಬಾರೀ ದೊಡ್ಡದಾಗಿರುತ್ತಿತ್ತು. ಮನೆಯ ಮೇಲಿನ ಆಂಟೆನಾದ ಗಾತ್ರದಿಂದಲೇ ಮನೆಯವರ ಸಿರಿತನ ಗುರುತಿಸುತ್ತಿದ್ದ ಕಾಲವದು.

ಶಾಲೆ ಮುಗಿಸಿ ಮನೆಗೆ ಬಂದ ನನಗೆ ಅಚಾನಕ್ಕಾಗಿ ಫೈನಲ್ ತಲುಪಿದ್ದ ಭಾರತ ಮತ್ತು ಅಂದಿನ ಕ್ರಿಕೆಟ್ ಜಗತ್ತಿನಲ್ಲಿ ದೈತ್ಯರೆಂದೇ ಪ್ರಸಿದ್ದರಾಗಿದ್ದ ಹಾಗೂ ಎರಡು ಸಲ ಪ್ರಶಸ್ತಿಯನ್ನು ಪಡೆದು ಮೂರನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿ ಹ್ಯಾಟ್ರಿಕ್ ಸಾಧಿಸಲು ಹಾತೊರೆಯುತ್ತಿದ್ದ ವೆಸ್ಟ್ ಇಂಡೀಸ್ ತಂಡಗಳ ನಡುವೆ ಇಂಗ್ಲೇಂಡಿನ ಕ್ರಿಕೆಟ್ ಕಾಶೀ ಎಂದೇ ಖ್ಯಾತಿ ಹೊಂದಿರುವ ಲಾರ್ಡ್ಸ್ ಮೈದಾನದಲ್ಲಿ ಪಂದ್ಯ ನೋಡುವ ತವಕ.

ನಮ್ಮ ನೆರೆ ಹೊರೆಯ ಯಾರ ಮನೆಯಲ್ಲಿಯೂ ಟಿವಿ ಇರದ ಕಾರಣ ನನ್ನ ಸ್ನೇಹಿತ ಗುರುಪ್ರಸನ್ನನ ಮನೆಗೆ ಹೋಗಲು ಅಮ್ಮನ ಅಪ್ಪಣೆ ಕೋರಿದೆ. ಆದರೆ ಸ್ನೇಹಿತನ ಮನೆ ಸುಮಾರು ದೂರವಿದ್ದ ಕಾರಣ ಅಮ್ಮಾ ಕಳುಹಿಸಲು ಒಪ್ಪದ ಕಾರಣ ವಿಧಿ ಇಲ್ಲದೆ ಮನೆಯಲ್ಲಿಯೇ ಇದ್ದ ಟ್ರಾನ್ಸಿಸ್ಟರ್ ರೇಡಿಯೋನಲ್ಲಿ ವೀಕ್ಷಕ ವಿವರಣೆ ಕೇಳಲಾರಂಬಿಸಿದೆ. ನನ್ನ ಅಂದಿನ ಹೀರೋ ಆಗಿದ್ದ ಕೃಷ್ಣಮಾಚಾರಿ ಶ್ರೀಕಾಂತ್, (ನನ್ನ ಹೆಸರು ಶ್ರೀಕಂಠ ಅಂತಾದರೂ ಕೆಲವರು ನನ್ನನ್ನು ಶ್ರೀಕಾಂತ್ ಎಂದೇ ಕರೆಯುತ್ತಿದ್ದರಿಂದ ನಾನು ನನ್ನನ್ನು ಕೆ.ಶ್ರೀಕಾಂತ್ ನೊಂದಿಗೆ ಹೋಲಿಸಿಕೊಂಡು ಒಳಗೊಳಗೇ ಸಂತೋಷ ಪಡುತ್ತಿದ್ದೆ) ಮತ್ತು ಗವಾಸ್ಕರ್ ಆಡಲು ಬಂದಾಗ ಮೈಯ್ಯೆಲ್ಲಾ ಕಿವಿಯಾಗಿಸಿ ವೀಕ್ಷಕವಿವರಣೆ ಕೇಳುತ್ತಾ, ಶ್ರೀಕಾಂತನ ಆಕ್ರಮಣಕಾರಿ ಆಟವನ್ನು ಮನಸ್ಸಿನಲ್ಲೇ ‌ನೆನಪಿಕೊಳ್ಳುತ್ತಿರುವಾಗಲೇ ಗವಾಸ್ಕರ್ ಕೇವಲ ಎರಡು ರನ್‌ ಗಳಿಸಿ ಔಟಾದಾಗ ಹಿಡಿ ಶಾಪಹಾಕಿದ್ದೆ. ನಂತರ ಬಂದ ಮೋಹಿಂದರ್ ಅಮರ್ ನಾಥ್ ಮತ್ತು ಶ್ರೀಕಾಂತ್ ಪಟ ಪಟನೆ ರನ್ ಗಳಿಸಿ ತಂಡದ ಮೊತ್ತ 59 ಆಗಿದ್ದಾಗ 32 ರನ್ ಗಳಿಸಿದ್ದ ಶ್ರೀಕಾಂತ್ ಔಟಾದಾಗ ಆಕಾಶವೇ ಕಳಚಿಬಿದ್ದ ಅನುಭವ.

ಆನಂತರ ಬಂದ ಯಶ್ಪಾಲ್ ಶರ್ಮಾ, ಸೆಮಿ ಫೈನಲ್ ವೀರ ಸಂದೀಪ್ ಪಾಟೀಲ್, ದಿಟ್ಟ ನಾಯಕ‌ ಕಪಿಲ್ ದೇವ್ ಅಷ್ಟಿಷ್ಟು ರನ್‌ಗಳಿಸಿ 111ಕ್ಕೆ 6 ವಿಕೆಟ್ ಕಳೆದುಕೊಂಡಾಗಲಂತೂ ತಡೆಯಲಾರದಂರಹ ದುಖಃ. ತಿರುಪತಿ ತಿಮ್ಮಪ್ಪನ ‌ಮೂರು ನಾಮದಂತೆ ನಮ್ಮ ತಂಡಕ್ಕೂ ಸೋಲೇ ಗತಿ ಎಂಬ ನೋವು ಒಂದೆಡೆಯಾದರೆ, ಅಚಾನಕ್ಕಾಗಿ ಫೈನಲ್ ತಲುಪಿರುವುದೇ ಹೆಚ್ಚು ಇನ್ನು ಟ್ರೋಫಿ ಗೆಲ್ಲುವ ಕನಸು ಕಾಣುವುದು ಎಷ್ಟು ಸರೀ ?  ಅದೂ ದೈತ್ಯ ವೆಸ್ಟ್ ಇಂಡೀಸರ ಮುಂದೆ ಎಂಬ ಜಿಜ್ಞಾಸೆ.

ಅಂತೂ ಇಂತೂ ಅಂದಿನ ಕಾಲದ ಆಪತ್ಬಾಂಧವ ಕಿರ್ಮಾನಿ, ಮದನ್ ಲಾಲ್ ಮತ್ತು ಸಂಧುಗಳಂತಹ ಬಾಲಂಗೋಚಿಗಳು ಅಡ್ಡಾದಿಡ್ಡಿ ಬ್ಯಾಟ್ ಬೀಸಿದುದರ ಪರಿಣಾಮವಾಗಿ ಹಾಗೂ 20 ಇತರೇ ರನ್ಗಳ ಸಹಾಯದಿಂದಾಗಿ 54.4 ಓವರ್‌ಗಳಲ್ಲಿ( ಆಗ 60 ಓವರ್‌ಗಳ ಪಂದ್ಯ) 183ಕ್ಕೆ ಆಲ್ ಔಟಾದಾಗ, ನಾನು ಪಂದ್ಯವನ್ನು ನನ್ನ ಮನಸ್ಸಿನಿಂದ ತೆಗೆದುಹಾಕಿ ಸೋತು ಹೋದವೆಂಬ ಭಾವನೆ ನನ್ಲಲ್ಲಿ.

ಅಷ್ಟು ಹೊತ್ತಿಗೆ ನಮ್ಮ ತಂದೆಯವರು ಕಛೇರಿ ಮುಗಿಸಿ ಮನೆಗೆ ಬಂದು ಸ್ಕೋರ್ ಎಷ್ಟಾಯಿತೆಂದಾಗ ಕೋಪದಿಂದಲೇ ಸೋಲುವ‌ ಪಂದ್ಯದ ಸ್ಕೋರ್ ಕೇಳಿ ಏನು‌ ಪ್ರಯೋಜನ? ಎಂದು ರೇಗಾಡಿದ ನೆನಪು. ಸಂಗೀತ, ಸಾಹಿತ್ಯದ ಜೊತೆಗೆ ಅಪಾರವಾದ ಕ್ರಿಕೆಟ್ ಪ್ರೇಮಿಯಾಗಿದ್ದ (ಇತ್ತೀಚೆಗೆ ಸಾಯುವ ಹಿಂದಿನ ದಿನವೂ ರಾತ್ರಿ 11ರ ವರೆಗೆ ಕ್ರಿಕೆಟ್ ನೋಡಿ ಮರುದಿನ ಬೆಳಿಗ್ಗೆ ನಿಧನರಾದದ್ದು ವಿಪರ್ಯಾಸ) ನನ್ನ ತಂದೆಯವರ ಒತ್ತಾಯದ ಮೇರೆಗೆ ಅವರೊಂದಿಗೆ ಸೈಕಲ್ ಏರಿ ಕೈಯಲ್ಲಿ ಟ್ರಾನ್ಸಿಸ್ಟರ್ ಹಿಡಿದು ಸ್ನೇಹಿತನ ಮನೆಗೆ ಟಿವಿ ನೋಡಲು ಹೊರಟೇ ಬಿಟ್ಟೆವು.

wc2ಅಂದಿನ ದಿನಗಳಲ್ಲಿ ಅತ್ಯಂತ ನೆಚ್ಚಿನ ಆರಂಭ ಆಟಗಾರರಾದ. ಗ್ರೀನೀಚ್ ಮತ್ತು ಹೇನ್ಸ್ ಕ್ರೀಸ್ಗೆ ಇಳಿದಾಗ ಇವರಿಬ್ಬರೇ ಪಂದ್ಯ ‌ಮುಗಿಸುತ್ತಾರೆಂಬ ಕಲ್ಪನೆ ನನ್ನದು. ಆದರೆ ನಾವೊಂದು ಬಗೆದರೆ ದೈವ ಒಂದು ಬಗೆದೀತು ಎನ್ನುವ ಹಾಗೆ ಕೇವಲ ಒಂದು ರನ್ ಗಳಿಸಿ ಸಂಧು ಬೌಲಿಂಗ್ನಲ್ಲಿ ಗ್ರೀನಿಚ್ ಔಟಾದಾಗ ರಸ್ತೆ ಎಂಬ ಪರಿಯೂ ಇಲ್ಲದೆ ಬಿಇಎಲ್ ಕಾರ್ಖಾನೆಯ ಮುಂಭಾಗದಲ್ಲಿ ಸೈಕಲ್ ಮೇಲೇ ಕುಳಿತೇ ಜೋರಾಗಿ ಕಿರುಚಿದ ನೆನಪು ಇನ್ನೂ ಹಚ್ಚ ಹಸಿರಾಗಿದೆ. ನಂತರ ಬಂದ ವಿವಿಯನ್ ರಿಚರ್ಡ್ಸ್ ಪಟಪಟನೆ ರನ್ ಗಳಿಸುತ್ತಿದ್ದಾಗ ಅಯ್ಯೋ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲಾ ಎಂಬ ಹಪಾಹಪಿ. ಅಂತೂ ಇಂತೂ ಸ್ನೇಹಿತನ ಮನೆಗೆ ತಲುಪುವ ವೇಳೆ ಹೇನ್ಸ್ ಕೂಡಾ ಔಟಾಗಿ 55ಕ್ಕೆ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು ವೆಸ್ಟ್ ಇಂಡೀಸ್ ತಂಡ. ದೇವೆರ ಕೃಪೆ ಮತ್ತು ಅದೃಷ್ಟ ನಮ್ಮ ಕಡೆ ಇದ್ದರೆ ನಮ್ಮನ್ನು ತಡೆಗಟ್ಟಲು ಯಾರಿಗೂ ಸಾಧ್ಯವಿಲ್ಲ ಎನ್ನುವ ಹಾಗೆ ಮದನ್ ಲಾಲ್ ಎಸೆತದಲ್ಲಿ ರಿಚರ್ಡ್ಸ ಆಗಸಕ್ಕೇ ಗುರಿ‌ ಇಟ್ಟಂತೆ ಹೊಡೆದ ಚೆಂಡನ್ನು ಹಿಂಬದಿಗೆ ಓಡುತ್ತಾ ಇಡೀ ಗಮನವನ್ನೆಲ್ಲಾ ಚೆಂಡಿನ ಮೇಲೆಯೇ ಕೇಂದ್ರೀಕರಿಸಿ ಎದೆಯೆತ್ತರದಲ್ಲೇ ಕಪಿಲ್ ದೇವ್ ಹಿಡದೇ ಬಿಟ್ಟಾಗ ಹೃದಯ ಬಾಯಿಗೆ ಬಂದ ಅನುಭವ. ಮುಂದೆ ಬಂದ ಅತಿರಥ ಮಹಾರಥ ಲಾಯ್ಡ್, ಗೋಮ್ಸ್ ಬಚ್ಚೂಸ್ ತರೆಗಲೆಗಳಂತೆ ಬಿನ್ನಿ, ಮದನ್ ಲಾಲರಿಗೆ ಔಟಾದಾಗ, ನಮಗೂ ಪಂದ್ಯ ಗೆಲ್ಲುವ ಭರವಸೆ ಮೂಡುತ್ತಿರುವಾಗಲೇ ವಿಕೆಟ್ ಕೀಪರ್ ಡೂಜಾನ್ ಮತ್ತು ವೇಗಿ ಮಾಲ್ಕಮ್ ಮಾರ್ಷಲ್ ಚೆಂಡನ್ನು ಮೈದಾನದ ಮೂಲೆ ಮೂಲೆಗೂ ಅಟ್ಟುತ್ತಿದ್ದಾಗ ನನ್ನ ಮನದಲ್ಲಿ‌ ಮತ್ತೊಮ್ಮೆ ದಟ್ಟವಾದ ಕಾರ್ಮೋಡ ಕವಿದ ವಾತಾವರಣ.

wc4ಅಲ್ಲಿಯವರೆಗೂ ಸುಮ್ಮನಿದ್ದ ಕಪಿಲ್, ಮೊಹಿಂದರ್ ಅಮರ್‌ನಾಥ್ ಕೈಯಲ್ಲಿ ಚೆಂಡನ್ನು ಕೊಟ್ಟಾಗ‌ ಛೇ, ಇದ್ಯಾಕೆ ಹೀಗೆ ಮಾಡಿ ಬಿಟ್ಟ? ಕಪಿಲ್ಗೇನು ತಲೆ ಕೆಟ್ಟದೆಯೇ, ಕೀರ್ತಿ ಆಝಾದ್ ಇಲ್ಲವೇ ಸಂದೀಪ್ ಪಾಟೀಲ್ ಅಂತಹ ಅನುಭವಿಗಳ ಕೈಯಲ್ಲಿ ಬೋಲಿಂಗ್ ‌ಮಾಡಿಸ ಬಾರದೇ? ಎಂದು ಗೊಣಗಿದ್ದೂ ಉಂಟು. ಆಟ ಸಾಗುತ್ತಿದ್ದ ಡೋಲಾಯಮಾನ ಪರಿಸ್ಥತಿಯಲ್ಲಿ ನನ್ನ ಸ್ನೇಹಿತನ ಅಮ್ಮ ಕೊಟ್ಟ ತಿಂಡಿಯನ್ನೂ ತಿನ್ನಲು ಸಾಧ್ಯವಾಗಲೇ ಇಲ್ಲ. ಪ್ಯಾಂಟಿನ ಹಿಂದಕ್ಕೆ ಸಿಕ್ಕಿಸಿ ಕೊಂಡಿದ್ದ ಕೈವಸ್ತ್ರದಿಂದ ಒದ್ದೆಯಾಗಿದ್ದ ಚೆಂಡನ್ನು ಒರೆಸಿಕೊಂಡು ಮೊಹಿಂದರ್ ನಿಧಾನವಾಗಿ ವಿಕೇಟ್ ದಾಟಿಕೊಂಡು ಬಂದು ಡುಜಾನ್ ಕಡೆ ಎಸೆದ ಚೆಂಡು, ಜೋರಾಗಿ ಬೀಸಿದ ಬ್ಯಾಟಿಗೆ ತಾಕದೆ ಸೀದಾ ಹೋಗಿ ವಿಕೆಟ್ ಉರುಳಿಸಿದಾಗ ನನ್ನ‌ ಪಾಲಿಗೆ ಭಾರತ ಮುಕ್ಕಾಲು ಭಾಗ ಪಂದ್ಯ ಗೆದ್ದಾಗಿತ್ತು. ನೆರೆದಿದ್ದ ಪ್ರೇಕ್ಷಕರೆಲ್ಲರೂ ಹುಚ್ಚೆದ್ದು ಕುಣಿಯಲಾರಂಭಿಸಿ ಮೈದಾನಕ್ಕೂ ನುಗ್ಗಲಾರಂಭಿಸಿದಾಗ ಅವರನ್ನು ತಡೆಯುವುದು ಪೋಲಿಸರಿಗೆ ಅಸಾಧ್ಯವಾಯಿತು. ನಂತರ ನಡೆದದ್ದೆಲ್ಲಾ ಇತಿಹಾಸ. ಮೊಹಿಂದರ್ ಬೋಲಿಂಗ್ನಲ್ಲಿ ಮೈಕಲ್ ಹೋಲ್ಡಿಂಗ್ ಎಲ್ಬಿಗೆ ಔಟಾದ ಕೂಡಲೇ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಊಹಿಸಲೂ ಅಸಾಧ್ಯವಾದ ಫಲಿತಾಂಶ ಅದಾಗಿತ್ತು ಕೇವಲ 140ಕ್ಕೆ ತನ್ನೆಲ್ಲಾ ವಿಕೆಟ್‌ ಕಳೆದು‌ಕೊಂಡು ವೆಸ್ಟ ಇಂಡೀಸ್ ಭಾರತದ ವಿರುದ್ಧ 43ರನ್ಗಳ ಅಂತರದಲ್ಲಿ ಸೋಲನ್ನೊಪ್ಪಿತ್ತು.

ಇಂದಿಗೆ ಸರಿಯಾಗಿ 35 ವರ್ಷಗಳ ಹಿಂದೆ ಕ್ರಿಕೆಟ್ನಲ್ಲಿ ಏನೇನೂ ಆಗಿರದಿದ್ದ ಭಾರತ, ಅಂದಿನ ಕ್ರಿಕೆಟ್ ‌ದೈತ್ಯರಾದ ವೆಸ್ಟ್ ಇಂಡೀಸರನ್ನು ಸೋಲಿಸಿ ಇಡೀ ‌ವಿಶ್ಚಕ್ಕೇ ಅಚ್ವರಿಯನ್ನು ಮೂಡಿಸಿತ್ತು.

wc3ಪಂದ್ಯದ ನಂತರ ಕಪಿಲ್ ದೇವ್ ಸೂಟ್ ಹಾಕಿ‌ಕೊಂಡು ವರ್ಲ್ಡ್‌ ಕಪ್ಪನ್ನು ಎತ್ತಿ‌ ಹಿಡಿದು ಮುತ್ತಿಕ್ಕುತ್ತಿದ್ದಾಗ ಟಿವಿಯ ಮುಂದೆ ಕುಳಿತಿದ್ದ ಇಡೀ ಮಂದಿಗೆ ಅದೇನನ್ನೂ‌ ಸಾಧಿಸಿದ ಸಾರ್ಥಕ ಅನುಭವ.

ಪಂದ್ಯ ಮುಗಿದ ಕೂಡಲೇ ಮನೆಯಿಂದ ಹೊರಬಂದು ಸ್ನೇಹಿತರೊಂದಿಗೆ ತಂದೆಯವರ ಜೊತೆಗೂಡಿ ಬೋಲೋ……. ಭಾ…..ರ…ತ್… ಮಾತಾಕೀ ಜೈ ಎಂದು ಅದೆಷ್ಟು ಬಾರಿ‌ ಕೂಗಿದ್ದೆವೂ ಲೆಕ್ಕಕ್ಕಿಲ್ಲ.

wc1ಇದಾದ‌ ನಂತರ ಭಾರತ ಹಲವಾರು ‌ನಾಯಕರ‌ ಅಡಿಯಲ್ಲಿ ಸಾವಿರಾರು ಪ್ರಶಸ್ತಿಗಳನ್ನು ‌ಗೆದ್ದಿರ ಬಹುದು. ಇದಾದ ನಂತರ ಹಲವಾರು ಜಗತ್ಪ್ರಸಿದ್ಧ ಆಟಗಾರರು ಭಾರತ ತಂಡವನ್ನು ಪ್ರತಿನಿಸಿದ್ದಿರಬಹುದಾದರೂ ವಯಕ್ತಿಕವಾಗಿ ನನಗೆ ನಾಯಕ ಕಪಿಲ್ ಮತ್ತವರ ಅಂದಿನ ತಂಡವೇ ಭಾರತದ ಶ್ರೇಷ್ಠ ಕ್ರಿಕೆಟ್ ತಂಡ‌ ಎನಿಸುತ್ತದೆ.

ಈ ವಿಶ್ವಕಪ್ ಗೆದ್ದ ನಂತರ ಪ್ರಪಂಚಾದ್ಯಂತ ನೆಲೆಸಿದ್ದ ಅಪಾರ ಭಾರತೀಯರಲ್ಲಿ ಹೆಮ್ಮೆ‌ ಮೂಡಿಸಿದ್ದಂತೂ ಸತ್ಯ. ಈ ಪ್ರಶಸ್ತಿ ಭಾರತದ ಎಲ್ಲಾ ವರ್ಗದ ಜನರಲ್ಲೂ ಸ್ವಾಭಿಮಾನ ಬಡಿದೆಬ್ಬಿಸಿದ್ದಂತೂ ಸುಳ್ಳಲ್ಲ.

ಏನಂತೀರೀ?

1983 Prudential World Cup

ಕೀರ್ತಿ ಶೇಷ ಶ್ರೀ ಬಾ ನಂ ಶಿವಮೂರ್ತಿಯವರ ಜೀವನದ ಕಿರು ಪರಿಚಯ

 

ಶಿಲ್ಪ ಕಲೆಗಳ ತವರೂರಾದ ಹಾಸನ‌ಜಿಲ್ಲೆಯ ಆರಂಭದ ಊರಾದ,  ಗುರು ವಿದ್ಯಾರಣ್ಯರ ಹುಟ್ಟೂರು ‌ಎಂಬ ಪ್ರತೀತಿಯನ್ನು ಪಡೆದಿರುವಂತಹ ಪುಟ್ಟ ಗ್ರಾಮ ಬಾಳಗಂಚಿಯ ಖ್ಯಾತ ವಾಗ್ಗೇಯಕಾರರೂ, ಹರಿಕಥಾ‌ ವಿದ್ವಾನ್ ಮತ್ತು‌ ಗಮಕ ವಿದ್ವಾನ್ ಶ್ರೀ ನಂಜುಡಯ್ಯ ಹಾಗೂ ಶ್ರೀಮತಿ ಚೆನ್ನಮ್ಮ‌ನವರ ಗರ್ಭದಲ್ಲಿ‌ 1937ರ ‌ಜೂನ್‌‌ 6‌‌ ರಂದು‌ ಹಲವು‌ ವರ್ಷಗಳಿಂದ ದೇವರ  ಪೂಜೆ ಮಾಡಿದ ಫಲವಾಗಿ ಹೋಳೇನರಸೀಪುರ‌ದಲ್ಲಿ‌ ಜನನವಾದ ಪುತ್ರ‌ ರತ್ನನಿಗೆ ಗುರು‌ಹಿರಿಯರ‌ ಸಮ್ಮುಖದಲ್ಲಿ‌ ಶಿವಮೂರ್ತಿಎಂದು ನಾಮಕರಣ ‌ಮಾಡಿದರು.

ಸತ್ಯಹರಿಶ್ಚಂದ್ರರ ಅಪರಾವತಾರ ಶಾನುಭೋಗ ತಂದೆ, ಹೆಸರಿಗೆ‌ ತಕ್ಕಂತೆ ವೀರ ವನಿತೆ ಚೆನ್ನಮ್ಮನವರ  ಮುದ್ದು ಜೇಷ್ಠ ಕುವರನಾದರೂ ಬೆಳೆದದ್ದು ದೊಡ್ಡಮ್ಮ‌ನವರ‌ ಆರೈಕೆಯಲ್ಲೇ. ಬಹುಷಃ ಪ್ರಪಂಚದಲ್ಲೇ  ತಂದೆ ತಾಯಿಯರನ್ನು ಚಿಕ್ಕಪ್ಪ, ಚಿಕ್ಕಮ್ಮ ಎಂದು ಕರೆದ ಪ್ರಪ್ರಥಮ ಪುತ್ರ ಇವರೇ ಇರಬೇಕು. ಹೆಸರಿಗೆ‌ ಶ್ಯಾನುಭೋಗ‌ ಕುಟುಂಬವಾದರೂ ಮನೆಯಲ್ಲಿ ಕಿತ್ತು ತಿನ್ನುವ ಬಡತನ.  ದುಡಿಯುವ ಕೈ ಒಂದಾದರೆ, ತಿನ್ನುವ ಕೈ ಹದಿನಾಲ್ಕು. ರಾಮೋತ್ಸವ, ಗಣೇಶೋತ್ಸವ,‌ ರಾಮ ಸಾಮ್ರಾಜ್ಯ‌ ಪಟ್ಟಾಭಿಷೇಕದಲ್ಲಿ  ಯಾರಾದರೂ ಕರೆಸಿ‌ ಹರಿಕಥೆ ಮಾಡಿಸಿದಲ್ಲಿ‌ ಮನೆಯಲ್ಲಿ ‌ನಾಲ್ಕು ಕಾಸು ಓಡಾಟ, ಹೊಟ್ಟೆ ‌ತುಂಬಾ ಊಟ. ಇಲ್ಲದಿದ್ದಲ್ಲಿ  ಸೊಪ್ಪು,‌ ಸೆದೆ, ಬೇಯಿಸಿದ‌ ಅಳಿದುಳಿದ ಕಾಳುಗಳೇ‌ ಆಹಾರ.

ಪ್ರಾಥಮಿಕ ಶಾಲಾಭ್ಯಾಸ ಹುಟ್ಟೂರಿನಲ್ಲಿ ಪ್ರಾರಂಭವಾಗಿ, ದೊಡ್ಡಪ್ಪನ  ಊರಾದ‌ ತುರುವೇಕೆರೆ, ಅಜ್ಜಿ‌ಯ ಮನೆ ಹೋಳೆನರಸೀಪುರ, ತಂದೆ‌ ಮತ್ತು ಖ್ಯಾತ ಬರಹಗಾರ ರಾಮಸ್ವಾಮಿ ‌ಅಯ್ಯಂಗಾರರ ಗೆಳೆತನದ  ಪ್ರತೀಕವಾಗಿ ‌ಗೋರೂರಿನಲ್ಲಿ  ನಡೆಯಿತಾದರೂ ಜೀವನೋಪಾಯಕ್ಕಾಗಿ ಅಕ್ಕ ಪಕ್ಕದ ಮನೆಯ ವಾರಾನ್ನವೇ ಆಶ್ರಯವಾಯಿತು. ಮುಂದೆ ಹಿರಿಸಾವೆಯಲ್ಲಿ  ಹೈಸ್ಕೂಲ್ ವಿದ್ಯಾಭ್ಯಾಸ‌ ಮುಂದುವರೆಸಿ‌ SSLCಯನ್ನು ಉತ್ತಮ‌ ಶ್ರೇಣಿಯಲ್ಲಿ ಮುಗಿಸಿದರಾದರೂ ಮನೆಯ ಪರಿಸ್ಥಿತಿಯ ಫಲವಾಗಿ ‌ಕಾಯಕಕ್ಕೆ‌ ಇಳಿಯಬೇಕಾಯಿತು.

ಇದ್ದ ಅಲ್ಪ ಸ್ವಲ್ಪ ಜಮೀನಿನಲ್ಲಿ ಬೇಸಾಯ ಆರಂಭಿಸಿ ಕುಟುಂಬದ ನಿರ್ವಹಣೆಗಾಗಿ ಅಕ್ಕ ಪಕ್ಕದವರ ಜಮೀನಿನಲ್ಲಿಯೂ ಕೆಲಸ ಮಾಡುತ್ತಾರೆ. ಮಳೆ ಇಲ್ಲದೆ ನೀರಿಗಾಗಿ ಹಾಹಾಕಾರವಾದಾಗ ಅಧಿಕ ದೈಹಿಕ ಪರಿಶ್ರಮದ ಭಾವಿ ತೋಡುವ ಕೆಲಸವನ್ನೂ ಮಾಡುತ್ತಾರೆ. ಇದೇ ಸಮಯದಲ್ಲಿ ಸಂಭಂಧಿಕರ ಸಲಹೆ ಮೇರೆಗೆ ತುಮಕೂರಿಗೆ ವಾಸ್ಥವ್ಯ ಬದಲಿಸಿ ಸರ್ಕಾರೀ ಹೊಲಿಗೆ ತರಬೇತಿಯಲ್ಲಿ  ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಪರಿಣಾಮವಾಗಿ ಹೊಲಿಗೆ ಯಂತ್ರವನ್ನೂ ಬಹುಮಾನವಾಗಿ ಪಡೆದು ಹೊಲಿಗೆ ವೃತ್ತಿಯನ್ನು ಆರಂಭಿಸಲು ಯೋಚಿಸಿದರಾದರೂ ತಂಗಿಯ ಮದುವೆಗೆ ದುಡ್ಡಿನ ಆಭಾವದ ಕಾರಣಕ್ಕಾಗಿ ಹೊಲಿಗೆ ಯಂತ್ರವನ್ನು ಮಾರಿ ಬಿಡುತ್ತಾರೆ. ನಂತರ ಸಹಕಾರ ಸಂಘದ ತರಬೇತಿಗೆ ಸೇರಿ‌ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿ  ಕೆಲಸ ಪಡೆದರಾದರೂ ಅಂದಿನ ಸರ್ಕಾರದ ಬದಲಾದ ನಿಯಮದ ಅನುಗುಣವಾಗಿ ಇದ್ದ ಕೆಲಸವನ್ನು ಕಳೆದುಕೊಂಡು ಕೆಲವು ದಿನ ಅಕ್ಕನ ಊರಾದ ಕಗ್ಗರೆಯಲ್ಲೂ ಮತ್ತು ತಮ್ಮ ಊರಿನಲ್ಲೂ  ಬೇಸಾಯವನ್ನು ಮುಂದುವರೆಸುತ್ತಾ ತಮ್ಮ ಆರಾಧ್ಯದೈವ  ಲಕ್ಷ್ಮೀ ನರಸಿಂಹ ದೇವರ ಅರ್ಚಕರಾಗಿಯೂ ಜೀವನ ನಡೆಸುತ್ತಿದ್ದಾಗಲೇ‌ ತಮ್ಮ ಬಾಳಿನ ಮಹತ್ತರ ತಿರುವು ಅವರ ಮೈಸೂರು ದೊಡ್ಡಪ್ಪನವರ ಮೂಲಕ ಪಡೆಯುತ್ತಾರೆ. ಬುದ್ದಿವಂತನಾದರೂ ಪರಿಸ್ಥಿತಿಯ ಅನುಗುಣವಾಗಿ ಊರಿನಲ್ಲೇ ಕೊಳೆಯುತ್ತಿದ್ದ ಪ್ರತಿಭೆಗೆ ಆತ್ಮ ಸ್ಥೈರ್ಯ ತುಂಬಿದ ಅವರ ದೊಡ್ಡಪ್ಪ ಅವರನ್ನು ಮೈಸೂರಿಗೆ ಕರೆದೊಯ್ದು ತಮ್ಮ ಮನೆಯಲ್ಲಿ ಕೆಲವು ದಿನಗಳವರೆವಿಗೂ ಆಶ್ರಯ ಕೊಡುತ್ತಾರೆ.

ಮೈಸೂರಿಲ್ಲಿ‌ ದೊಡ್ಡಪ್ಪ-ದೊಡ್ಡಮ್ಮನ ಮನೆಯ ಪರಿಸ್ಥಿತಿಯನ್ನು ಕೊಡಲೇ ಅರಿತು ಅವರಿಗೆ ಹೆಚ್ಚು‌ ಹೊರೆಯಾಗಬಾರದೆಂದು ನಿರ್ಧರಿಸಿ, ಬೆಳ್ಳಂ ಬೆಳಗ್ಗೆಯೇ ಚುಮು ಚುಮು ಚಳಿ, ಗಾಳಿ, ಮಳೆಯನ್ನೂ ಲೆಕ್ಕಿಸದೆ ಮನೆ ಮನೆಗೆ ವೃತ್ತಪತ್ರಿಕೆ ಮಾರುವ ಕೆಲಸ ಆರಂಭಿಸಿ, ಹಗಲಿನಲ್ಲಿ ಅಂಗಡಿಗಳಲ್ಲಿ ಲೆಕ್ಕ ಬರೆಯುವ ಕೆಲಸವನ್ನು ಮಾಡಿದರಾದರೂ ಅದರಲ್ಲಿ ಹೆಚ್ಚಿನ ಆಸಕ್ತಿ ಇರದ ಕಾರಣ ಮೈಸೂರಿನ ಸರ್ಕಾರಿ ಐಟಿಐ ಫಿಟ್ಟರ್ ತರಬೇತಿಗೆ ಸೇರಿಕೊಳ್ಳತ್ತಾರೆ. ಅಲ್ಲಿ ಶ್ರೀ ಸುಬ್ರಹ್ಮಣ್ಯಂರಂತ ಗುರುಗಳ ನೆಚ್ಚಿನ ಶಿಷ್ಯರಾಗಿ ಅವರ ಮಾರ್ಗದರ್ಶನದಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅಂದಿನ‌ ದಿನದಲ್ಲೇ ಪ್ರಖ್ಯಾತ ಕಾರ್ಖಾನೆಯಾದ ಭಾರತ್‌ ಎಲೆಕ್ಟ್ರಾನಿಕ್ಸ್ ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಮೂಲಕ ಅವರ ಜೀವನದ ಎರಡನೇ ಮಗ್ಗಲು‌ ಬೆಂಗಳೂರಿನಲ್ಲಿ ಆರಂಭವಾಗುತ್ತದೆ.

ಕೆಲಸ‌‌ ಸಿಕ್ಕ‌ ಎರಡು‌ ವರ್ಷಗಳ‌ ನಂತರ ಕೆಜಿಎಫ್ ನ ರಾಜಾರಾವ್ ಮತ್ತು ವಿಶಾಲಾಕ್ಷಿಯವರ ಹಿರಿಯ ಪುತ್ರಿ ಉಮಾರವರನ್ನು ವರಿಸಿ‌ ಸುಖಃ ಸಂಸಾರದ ಫಲವಾಗಿ  ಶ್ರೀಕಂಠ, ಸುಧಾ ಮತ್ತು ‌ಲಕ್ಷ್ಮಿ ಎಂಬ ಮಕ್ಕಳ ತಂದೆಯೂ ಆಗುತ್ತಾರೆ. ಈ ನಡುವೆ‌ ಮಾವನವರ ಅಕಾಲಿಕ ಮರಣದಿಂದಾಗಿ ಸಂಪೂರ್ಣ ಕುಟುಂಬದ ಹೊಣೆ ಹೊತ್ತು ಅವರ ಉಳಿದ‌ ನಾಲ್ಕೂ ನಾದಿನಿಯರ ಹಾಗೂ ಭಾವ ಮೈದುನನ ಮತ್ತು‌ ತಮ್ಮ, ತಂಗಿಯಂದಿರ‌ ಮದುವೆಯನ್ನು ಅವರ ಸಾರಥ್ಯದಲ್ಲಿಯೇ ಉತ್ತಮ ಸಂಬಂಧಗಳೊಂದಿಗೆ ಮಾಡಿ ಮುಗಿಸಿ, ತಮ್ಮ ಮಕ್ಕಳ‌ ವಿದ್ಯಾಭ್ಯಾಸತ್ತ ಗಮನ ಹರಿಸುತ್ತಿರುವಾಗಲೇ ತಮ್ಮಲ್ಲಿ ಸುಪ್ತವಾಗಿ‌ ಅಡಗಿದ್ದ ಹಾಗೂ ಬಾಲ್ಯದಿಂದಲೂ ಹಂಬಲಿಸುತ್ತಿದ್ದ ಮತ್ತು ತಂದೆಯವರ ಪ್ರಭಾವದಿಂದಾಗಿ ಕರ್ನಾಟಕದ ಸಂಗೀತವನ್ನು ‌ವಿದ್ವಾನ್ ಶ್ರೀ ಚಿಂತಲಪಲ್ಲಿ‌‌ ರಂಗರಾಯರಲ್ಲೂ

ಗಮಕ‌ವನ್ನು ಗುರುಗಳದ ಶ್ರೀ ‌ನಾರಾಯಣರಲ್ಲೂ ಮುಂದುವರೆಸಿ‌ ವಿದ್ವತ್‌ ಪರೀಕ್ಷೆಯನ್ನು ಪೂರ್ಣಗೊಳಿಸುತ್ತಾರೆ.‌

ಇವೆರಡರ ಜೊತೆ ಜೊತೆಯಲ್ಲಿ ಬಾಲ್ಯದಲ್ಲಿ ತಂದೆಯವರ ಒಡಗೂಡಿ ಮೈಸೂರಿನ ದಸರಾ ಸಂಗೀತೋತ್ಸವಕ್ಕೆ ಹೋಗಿದ್ದ ಸಂದರ್ಭದಲ್ಲಿ‌ ಮೋರ್ಚಿಂಗ್ ವಾದನವನ್ನು ‌ಕೇಳಿ ಅದರ ನಾದಕ್ಕೆ ಮನಸೋತು‌‌ ಏಕಲವ್ಯನಂತೆ ಸ್ವಸಾಮಾರ್ಥ್ಯದಿಂದ ಮೋರ್ಚಿಂಗ್ ವಾದನವನ್ನು ಕರಗರತ ಮಾಡಿಕೊಂಡು ಹಲವಾರು ಪ್ರಖ್ಯಾತ ‌ವಿದ್ಚಾಂಸರ ಕಛೇರಿಗಳಲ್ಲೂ ಹೆಸರಾಂತ ‌ನೃತ್ಯ‌ಕಾರ್ಯಕ್ರಮಗಳಲ್ಲಿ ಅಮೋಘವಾಗಿ‌ ನುಡಿಸಿ ವಿದ್ವತ್ ಜನರ ಮೆಚ್ಚುಗೆ ‌ಗಳಿಸುತ್ತಾರೆ. ತಮ್ಮ‌ ಗಾಯನ‌ ಸಿರಿಯಿಂದ ಅನೇಕ ಅಂತರ್ ಕಾರ್ಖಾನೆಗಳ‌ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿ ತಮ್ಮ ಕಾರ್ಖಾನೆಯ ಹಿರಿಮೆಯನ್ನು ಎತ್ತಿ ಹಿಡಿದಿರುತ್ತಾರೆ. ಬೆಂಗಳೂರಿನ‌‌ ಹಲವಾರು ದೇವಸ್ಥಾನಗಳು ಮತ್ತು ‌ಭಜನಾ‌ ಮಂಡಳಿಗಳಲ್ಲಿ‌ ಸಕ್ರೀಯರಾಗಿ ತಮ್ಮ ಸುಶ್ರಾವ್ಯ ಕಂಠಸಿರಿಯಿಂದ ಭಗವಂತನ ನಾಮ‌ಸ್ಮರಣೆ ಮಾಡುತ್ತಾ ಹಲವಾರು ಪ್ರಶಸ್ತಿ‌ ಪುರಸ್ಕಾರಗಳಿಗೆ ಭಾಜನರಾಗುತ್ತಾರೆ.

 ಅವುಗಳಲ್ಲಿ‌

ಶಂಕರ‌ ಸೇವಾ‌‌ ಸಮಿತಿಯ ಭಜನ‌‌ ಸಾಮ್ರಾಟ

ತ್ಯಾಗರಾಜ ಗಾನ ಸಭೆಯಲ್ಲಿ ಪಡೆದ ಗಮಕ-ಮುಖಶಂಖು ಕಲಾಭೂಷಣ 

ಗಮಕ ಕಲಾ‌ ಪರಿಷತ್ತಿನಲ್ಲಿ‌ ಪಡೆದ ಗಮಕ ಕಲಾ‌ರತ್ನ ಪ್ರಶಸ್ತಿಗಳು ಪ್ರಮುಖವಾದವುಗಳು.

ತಮ್ಮ ಎಲ್ಲ‌ ಮಕ್ಕಳ ಮುಂಜಿ ಮದುವೆಗಳನ್ನು‌ ಸಕಾಲದಲ್ಲಿ ಮಾಡಿ ಆರು ಮೊಮಕ್ಕಳ ಮುದ್ದಿನ ತಾತನಾಗಿ ಅವರಿಗೆಲ್ಲಾ, ಶ್ಲೋಕ, ಭಗವದ್ಗೀತೆ, ಬಾಲಪಾಠ, ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುತ್ತಾ ಸಂತೋಷದಿಂದ  ಭಗವಂತನ ನಾಮಸ್ಮರಣೆ ಮಾಡುತ್ತಾ ನಿವೃತ್ತ ಜೀವನ ನಡೆಸುತ್ತಿರುವಾಗಲೇ ತಮ್ಮ ಮುದ್ದಿನ ಮಡದಿಯನ್ನು  ಕಳೆದು ಕೊಳ್ಳುತ್ತಾರೆ.  ಪತ್ನಿಯ ಅಕಾಲಿಕ ಮರಣದ ದುಖಃದಿಂದ ಕೆಲಕಾಲ ಮಂಕಾದರೂ ಬಹಳ ಬೇಗ ಚೇತರಿಸಿಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಟಿಟಿಡಿ ಧರ್ಮ ಪ್ರಚಾರ ಸಮಿತಿಯ ಕಾರ್ಯಗಳಲ್ಲಿ, ಗುರು ನಾರಾಯಣರೊಂದಿಗೆ ಹಲವಾರು ಗಮಕ ಕಾರ್ಯಕ್ರಮಗಳಲ್ಲಿ ಕಾವ್ಯ ವಾಚನ ಮತ್ತು ವ್ಯಾಖ್ಯಾನ ಕಾರರಾಗಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ನಮ್ಮ ಸನಾತನ ಸಂಸ್ಕೃತಿಯ ಪರಿಚಯವನ್ನು ನಾಡಿನಾದ್ಯಂತ ಪಸರಿಸುವ ಹೆಮ್ಮೆಯ ಸಂಗತಿಯ ಭಾಗವಾಗುತ್ತಾರೆ.

ಇಷ್ಟಲ್ಲಾ ಬಹುಮುಖ ಪ್ರತಿಭೆಯ ಜೊತೆಗೆ ಕಾರ್ಮಿಕ ಕವಿ ಗಮಕಿ ಶಿವಮೂರ್ತಿ ಎಂಬ ಕಾವ್ಯ ನಾಮದೊಂದಿಗೆ ಹಲವಾರು ಹಾಡುಗಳನ್ನು ಅದರಲ್ಲೂ ವಿಶೇಷವಾಗಿ ಭಾಮಿನೀ ಷಟ್ಪದಿಯಲ್ಲಿ ರಚಿಸುತ್ತಿದ್ದ  ಆಶೀರ್ವಚನಗಳನ್ನು  ಕೇಳುವುದೇ ಮಹದಾನಂದ

ಶ್ರೀ ವನಿತೆಯರಸನೆ…

ಶರಣ ಸಂಗವ್ಯಸನ..

ಭೂ ವ್ಯೋಮ ಪಾತಾಳ..

ಗೀತೆ ಶ್ರೀ ಹರಿ ಮುಖ ಜಾತೆ….

ಶೈಲ ಬಾಲೆ ಸ್ವರ್ಣಾಂಬೆ ..

 ಮುಂತಾದವುಗಳನ್ನು ಅವರ ಕಂಚಿನ ಕಂಠದಲ್ಲಿ ಕೇಳಿದುದರ ನಿನಾದ ಇನ್ನೂ ನಮ್ಮ ಕಿವಿಗಳಗಲ್ಲಿ ಗುನುಗುಡುತ್ತಿದೆ.

ಆರೋಗ್ಯವೇ ಭಾಗ್ಯ ಎಂಬುದನ್ನು ಬಹಳವಾಗಿ ನಂಬಿದ್ದ ಶಿವಮೂರ್ತಿಗಳು ದೀರ್ಘ ನಡಿಗೆ, ಪ್ರಾಣಾಯಾಮ, ಯೋಗಸನಗಳನ್ನು ಚಾಚೂ ತಪ್ಪದೆ ಅಭ್ಯಾಸ ಮಾಡುತ್ತಾ ಉತ್ತಮವಾದ ಜೀವನ ನಡೆಸುತ್ತಿರುವಾಗಲೇ ಜಾತಸ್ಯ ಮರಣಂ  ದೃವಂ ಅಂದರೆ ಹುಟ್ಟಿದವರು ಸಾಯಲೇ ಬೇಕೆಂಬ ಜಗದ ನಿಯಮದಂತೆ ದಿ. 2.10.2017 ರಂದು ತೀವ್ರ ಹೃದಯ ಸ್ಥಂಭನದಿಂದಾಗಿ ಅಕಾಲಿಕವಾಗಿ ಅಗಲಿ ನಮ್ಮನ್ನೆಲ್ಲಾ ತಬ್ಬಲಿಗಳನ್ನಾಗಿಸುತ್ತಾರೆ.

ಒಟ್ಟಿನಲ್ಲಿ ಹೇಳ ಬೇಕೆಂದರೆ ಆಡು‌ ಮುಟ್ಟದ ಸೊಪ್ಪಿಲ್ಲ, ಶಿವಮೂರ್ತಿಗಳಿಗೆ ಗೊತ್ತಿಲ್ಲದಿದ್ದ ಕಲೆಯೇ ಇಲ್ಲ

ಎಂದು ಹೇಳಿದರೂ‌‌ ಅತಿಶಯೋಕ್ತಿ ಆಗಲಾರದು.  ಇಂತಹ ಹಿರಿಯ ಚೇತನದ ಅಗಲಿಕೆ ನಮ್ಮ ಕುಟುಂಬಕ್ಕೂ ಹಾಗೂ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವೇ ಸರಿ.

ಪ್ರತಿದಿನ ಪೂಜಿಸುವಾಗ ಕೇಳಿಕೊಳ್ಳುವ ಹಾಗೆ, ಅನಾಯಾಸೇನ  ಮರಣಂ  ವಿನಾ ದೈನ್ಯೇನ ಜೀವನಂ ದೇಹಿಮೇ ಕೃಪಯಾ ಶಂಭೋ ತ್ವಹಿ ಭಕ್ತಿ ಅಚಂಚಲಾಂ

ನಿರಾಯಾಸವಾಗಿ ಯಾವುದೇ ರೀತಿಯಲ್ಲಿ ನರಳದೆ, ಯಾರನ್ನೂ ನರಳಿಸದೆ, ಯಾರನ್ನೂ ನೋಯಿಸದೇ, ಯಾರಲ್ಲೂ ಬೇಡದೆ, ಸಾಧ್ಯವಾದಷ್ಟು  ಕೊಡುಗೈ ದಾನಿಯಾಗಿಯೇ ಆ ಭಗವಂತನ ಸನ್ನಿಧಿಯನ್ನು ಸೇರಿದ ನಮ್ಮ ತಂದೆಯವರಿಗೆ ನಮ್ಮ ಭಕ್ತಿ ಪೂರ್ವಕ ಶ್ರಧ್ದಾಂಜಲಿಯನ್ನು ಅರ್ಪಿಸುತ್ತೇವೆ.

ಜಾರ್ಜ್ ಫರ್ನಾಂಡೀಸ್

ಕಾರ್ಮಿಕ ನಾಯಕ, ಜನ ಪರ ಹೋರಾಟಗಾರ,  ಪ್ರಭುಧ್ಧ ವಾಗ್ಮಿ, ಅಪ್ಪಟ ದೇಶ ಪ್ರೇಮಿ, ಸರಳ ವ್ಯಕ್ತಿತ್ವ,  ನಡೆ ಮತ್ತು ನುಡಿಗಳಲ್ಲಿಯೂ ಅಕ್ಷರಶಃ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದ ಧೀಮಂತ ನಾಯಕ, ಮಾಜೀ ರಕ್ಷ್ಣಣಾ ಮಂತ್ರಿ ಶ್ರೀ ಜಾರ್ಜ್ ಫರ್ನಾಂಡೀಸ್ ಅವರು ಇಂದು ಮುಂಜಾನೆ  ವಯೋಸಹಜ ಮತ್ತು  ದೀರ್ಘಕಾಲೀನ ಅನಾರೋಗ್ಯದ ಪರಿಣಾಮವಾಗಿ ನಮ್ಮೆಲ್ಲರನ್ನು ಅಗಲಿರುವುದು ನಿಜಕ್ಕೂ ದುಃಖಕರ.   ಇಂದಿನ ಅಧಿಕಾರಶಾಹಿ ರಾಜಕಾರಣಿಗಳ ಮಧ್ಯೆಯೂ ಅಪರೂಪವಾಗಿ ಸರಳ ಸಜ್ಜನಿಕೆಗೆ ಹೆಸರಾಗಿದ್ದ ಧೀಮಂತ ನಾಯಕನನ್ನು ಕಳೆದುಕೊಂಡಂತಾಗಿದೆ.

1930 ಜೂನ್ 3 ರಂದು  ಮಂಗಳೂರಿನ ಕೊಂಕಣಿ ಕ್ಯಾಥೋಲಿಕ್ ಸಾಂಪ್ರದಾಯಕ ಮನೆಯಲ್ಲಿ ಜನಿಸಿದ ಜಾರ್ಜ್ ಅವರು ವಿಧ್ಯಾರ್ಥಿ ದಸೆಯಿಂದಲೂ ಬಹಳ ಚುರುಕು, ಧೈರ್ಯಶಾಲಿ ಮತ್ತು ಗುರು- ಹಿರಿಯರಿಗೆ ವಿಧೇಯಕನಾದವರಾಗಿದ್ದ ಕಾರಣ ಅವರ ತಂದೆ ಅವರನ್ನು ಕ್ರೈಸ್ತ ಪಾದ್ರಿಯನ್ನಾಗಿ ಮಾಡಬೇಕೆಂದು ನಿರ್ಧರಿಸಿ ಹದಿನಾರನೇ ವಯಸ್ಸಿನಲ್ಲಿಯೇ ಮುಂಬೈಯಿಗೆ ಕಳುಹಿಸಿರುತ್ತಾರೆ. ತಂದೆಗೆ ತಕ್ಕ ಮಗನಂತೆ ಸುಮಾರು ಎರಡು ವರ್ಷಗಳ ಕಾಲ ಕ್ರೈಸ್ತ ಗುರುವಾಗಲು ಅಧ್ಯಯನ ನಡೆಸಿದ ನಂತರ ಅಲ್ಲಿನ  ತಾರತಮ್ಯ, ಒಳ ಜಗಳ ಮತ್ತು ಒಳ ರಾಜಕೀಯಗಳಿಂದ ಬೇಸತ್ತು, ಮಂಗಳೂರಿಗೆ ಹಿಂದಿರುಗಿ ಕೆಲ ಕಾಲ ಅಲ್ಲಿನ ಖಾಸಗೀ ರಸ್ತೆ ಸಾರಿಗೆ ಮತ್ತು ಹೊಟೇಲ್ಗಳ ಮಾಲೀಕರಿಂದ   ದೌರ್ಜನ್ಯಕ್ಕೊಳಗಾದ ಕೆಲಸಗಾರರನ್ನು ಸಂಘಟಿಸುತ್ತಾ  ಸಕ್ರೀಯ ರಾಜಕೀಯ ನಾಯಕನಾಗಿ  ಹೊರಹೊಮ್ಮುತ್ತಾರೆ. ಅಲ್ಲಿಂದ ತಮ್ಮ ವಾಸ್ತ್ಯವ್ಯವನ್ನು ಪುನಃ ಮುಂಬೈಗೆ ಬದಲಾಯಿಸಿ  ಮುಂಬೈ ಬಂದರಿನ ಅಸಂಘಟಿತ  ಕಾರ್ಮಿಕರ ಹಕ್ಕುಗಳ ಪರವಾಗಿ ಹೋರಾಟಕ್ಕೆ ಇಳಿದು  ಜೊತೆ ಹೊತೆಗೆ ಜೀವನದ ನಿರ್ವಹಣೆಗೆ  ಪತ್ರಿಕಾರಂಗದಲ್ಲೂ ಕೊಂಚ ಕೈಯನ್ನಾಡಿಸಿ ತಮ್ಮ ನಿರರ್ಗಳ  ಕೊಂಕಣಿ, ಕನ್ನಡ, ತುಳು, ಇಂಗ್ಲೀಷ್, ಹಿಂದಿ, ಮಲೆಯಾಳಂ, ತಮಿಳು ಮತ್ತು ಮರಾಠಿ ಭಾಷೆಗಳ ಪಾಂಡಿತ್ಯದಿಂದ  ಮುಂಬೈ ಜನರ ಮನಗೆದ್ದು ಸಮಾಜವಾದಿ ರಾಮಮನೋಹರ್ ಲೋಹಿಯಾ ಅವರ ಪ್ರಭಾವಕ್ಕೊಳಗಾಗಿ  ಸಮಾಜವಾದಿ ಕಾರ್ಮಿಕರ ಸಂಘಟನೆಗೆ ಸೇರಿ ಬಾಂಬೆ ಮುನ್ಸಿಪಲ್ ಕಾರ್ಪೋರೇಶನ್ ಸದಸ್ಯರಾಗಿದ್ದ ಹೆಗ್ಗಳಿಕೆ ಅವರದ್ದು.

ಕಾಂಗ್ರೇಸ್ ಎಂದರೆ ಇಂದಿರಾ, ಇಂದಿರ ಎಂದರೆ ಕಾಂಗ್ರೇಸ್ ಎನ್ನುವಂತಹ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಕಾಂಗ್ರೇಸ್ ಪಕ್ಷದ ಪ್ರಭಲ ವಿರೋಧಿಗಳಾಗಿದ್ದ ಶ್ರೀಯುತರು  1977ರಲ್ಲಿ  ಪ್ರಜಪ್ರಭುತ್ವವನ್ನೇ ಹತ್ತಿಕ್ಕಿ ಸರ್ವಾಧಿಕಾರಿ ಧೋರಣೆಯಿಂದ  ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯನ್ನು ಘೋಷಿಸಿ ತಮ್ಮ ವಿರೋಧಿಗಳನ್ನೆಲ್ಲಾ ಜೈಲಿನಲ್ಲಿ ಬಂಧಿಸಿದಾಗ ಸಹಜವಾಗಿಯೇ ಜಾರ್ಜ್ ಅವರೂ ಜೈಲಿನಲ್ಲಿ ಬಂಧಿಯಾಗಿ ಜಯಪ್ರಕಾಶ್ ನಾರಾಯಣ್, ಅಟಲ್ ಜೀ, ಅಡ್ವಾನಿಯವರ ಒಡನಾಟಕ್ಕೆ ಒಳಗಾಗಿ ಎಲ್ಲಾ ವಿರೋಧ ಪಕ್ಷಗಳೂ ಒಂದಾಗಿ ಕಟ್ಟಿದ ಜನತಾ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾಗಿ  ನಂತರ ನಡೆದ ಚುನಾಚಣೆಯಲ್ಲಿ  ಜೈಲಿನಿಂದಲೇ ಸ್ಪರ್ಧಿಸಿ ವಿಜಯಶಾಲಿಯಾಗಿ

ಮೊರಾರ್ಜಿದೇಸಾಯಿಯವರ  ಪ್ರಪ್ರಥಮ ಕಾಂಗ್ರೇಸ್ಸೇತರ ಸರ್ಕಾರದಲ್ಲಿ  ಕೈಗಾರಿಕೆ ಮತ್ತು ಸಂಪರ್ಕ ಮಂತ್ರಿಯಾಗಿದ್ದರು. ನಂತರ ತೊಂಬತ್ತರ ದಶಕದಲ್ಲಿ ವಿ.ಪಿ.ಸಿಂಗ್ ಅವರ ಸರ್ಕಾರದಲ್ಲಿ ರೈಲ್ವೇ ಇಲಾಖೆಯ ಮಂತ್ರಿಯಾಗಿ ರೈಲ್ವೇ ಇಲಾಖೆಯಲ್ಲಿ ಬಹಳಷ್ಟು ಸುಧಾರಣೆಯ ಹರಿಕಾರರಾದರು. ಅವರ ಕಾಲದಲ್ಲೇ ನಮ್ಮ ಕೊಂಕಣ ರೈಲು ಚುರುಕುಗೊಂಡ್ಡದ್ದು.

ಕಾಲ ಕ್ರಮೇಣದಲ್ಲಿ ತಮ್ಮ ರಾಜಕೀಯ ನೆಲೆಯನ್ನು ಶಾಶ್ವತವಾಗಿ ಬಿಹಾರದಲ್ಲಿಯೇ ಕಂಡುಕೊಂಡ ಫರ್ನಾಂಡೀಸರು ನಂತರ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ  ಎನ್.ಡಿ.ಏ ಸರ್ಕಾರದಲ್ಲಿ ರಕ್ಷಣಾ ಮಂತ್ರಿಯಾಗುವುದರ ಮೂಲಕ ರಾಜಕೀಯದ ಉಚ್ರಾಯ ಸ್ಥಿತಿಯನ್ನು ತಲುಪಿದರು ಎಂದರೆ ಅತಿಶಯೋಕ್ತಿ ಏನಲ್ಲ. ಪಾಕೀಸ್ಥಾನದ ಜನರಲ್ ಮುಷಾರಫ್ನ ಕುತಂತ್ರದಿಂದಾಗಿ 1999ರಲ್ಲಿ ಕಾರ್ಗಿಲ್ ಯುದ್ಧ ನಡೆದ ಸಂಧರ್ಭದಲ್ಲಿ ಅಟಲ್ ಜೀ ಮತ್ತು ಅಡ್ವಾಣಿಯವರ  ಜೊತೆಯಲ್ಲಿ  ಕೈಜೋಡಿಸಿ ರಕ್ಷಣಾ ಮಂತ್ರಿಯಾಗಿ ತೆಗೆದುಕಂಡ ದಿಟ್ಟ ನಿರ್ಧಾರಗಳಿಂದಾಗಿಯೇ  ಪಾಪಿ(ಕಿ)ಸ್ಥಾನವನ್ನು ಬಗ್ಗು ಬಡಿಯಲು ಸಾಧ್ಯವಾಯಿತು ಎಂದರೆ ಅತಿಶಯೋಕ್ತಿಯೇನಲ್ಲ. ಅದುವರಿವಿಗೂ ರಕ್ಷಣ ಸಚಿವರೆಂದರೆ ಸೂಟು ಬೂಟ್ ಹಾಕಿಕೊಂಡು ದೆಹಲಿಯಲ್ಲಿಯೇ ವಾಸ್ಥವ್ಯ ಹೂಡಿ, ಹವಾನಿಯಂತ್ರಿತ ಕೊಠಡಿಗಳಿಂದಲೇ ಮೂರೂ ಸೈನ್ಯಗಳನ್ನು ನಿಯಂತ್ರಿಸುತ್ತಿದ್ದವರಿಗೆ ಸಡ್ಡು ಹೊಡೆದು,ಯುಧ್ಧದಲ್ಲಿ ಸೈನಿಕರ ಬೆಂಬಲಕ್ಕೆ ನಿಂತು ವಿಶ್ವದಲ್ಲೇ ಅತೀ ಎತ್ತರದ ಯುದ್ಧ ಭೂಮಿ ಎಂದು ಖ್ಯಾತಿಯಾಗಿರುವ  ಸಿಯಾಚಿನ್(6000 ಮೀ.)ಗೆ 18ಕ್ಕೂ ಹೆಚ್ಚು ಬಾರಿ ಕೇವಲ ಜುಬ್ಬಾಪೈಜಾಮಧಾರಿಯಾಗಿ ಭೇಟಿ ನೀಡಿ ಸೈನಿಕರ  ಸ್ಥೈರ್ಯವನ್ನು ಹೆಚ್ಚಿದ್ದರು. ಮಿಗ್ ನೌಕೆಯನ್ನು ಏರಿದ ಪ್ರಪಥಮ ಮಂತ್ರಿ ಎನ್ನುವ ಹೆಗ್ಗಳಿಕೆಯೂ ಅವರದ್ದೇ.

ಜಾರ್ಜ್ ಫರ್ನಾಂಡೀಸ್ ಎಷ್ಟೇ ಸರಳ, ಸ್ವಾಭಿಮಾನಿ ಮತ್ತು ನಿಸ್ವಾರ್ಥ ಮನುಷ್ಯರಾದರೂ ಆರೋಪಗಳು ಅವರನ್ನು ಬೆಂಬಿಡದೆ ಬೆನ್ನು ಹತ್ತಿದವು. ಆದುವರೆವಿಗೂ ಆಡಳಿತ ನಡೆಸಿದ್ದ ಎಲ್ಲಾ ಸರ್ಕಾರಗಳಿಗಿಂತಲೂ ಅತೀ  ಹೆಚ್ಚಿನ ಅನುದಾನವನ್ನು ರಕ್ಷಣ ಇಲಾಖೆಗೆ  ಬಿಡುಗಡೆ ಮಾಡಿದ್ದರೂ ಕೆಲ ಹಿತಶತ್ರುಗಳ ಕುತಂತ್ರದಿಂದಾಗಿ ಸೈನಿಕರ ಶವ ಪೆಟ್ಟಿಗೆಯ ಖರೀಧಿಯ ವಿಷಯದಲ್ಲಿ ಲಂಚ ಪಡೆದ ಆರೋಪವನ್ನು ಹೊತ್ತು ಕೆಲಕಾಲ ಮಂತ್ರಿಗಿರಿಗೆ ರಾಜೀನಾಮೆ ಕೊಟ್ಟಿದ್ದರು ನಂತರ ವಾಜಪೇಯಿಯವರ ಒತ್ತಾಯಕ್ಕೆ ಮಣಿದು ಪುನಃ ರಕ್ಷಣಾ ಖಾತೆಗೆ ಮಂತ್ರಿಯಾಗಿ ಮರಳಿದರೂ ಹಿಂದಿನ ಮೋಡಿಗೆ ಮರಳಲಾಗದಿದ್ದದ್ದು ನಮ್ಮೆಲ್ಲರ  ದೌರ್ಭಾಗ್ಯವೇ ಸರಿ.  ಈ ಗುರುತರ ಆರೋಪಗಳಿಂದ ನೊಂದು ಬೆಂದ ಹೃದಯ ಮತ್ತೆಂದೂ ಚೇತರಿಸಿಕೊಳ್ಳಲೇ ಇಲ್ಲ. ನಂತರ ದಿನಗಳಲ್ಲಿ ತಮ್ಮ ಪಕ್ಷದ ನಾಯಕರುಗಳಿಂದಲೇ ಅವಕೃಪೆಗೆ ಒಳಗಾಗಿ ಹಾಗೂ ಹೀಗೂ ರಾಜ್ಯಸಭಾ ಸದಸ್ಯರಾದರೂ  ಅಲ್ಜಮೈರ್ ಎಂಬ ಮರೆಗುಳಿ  ಖಾಯಿಲೆಗೆ ತುತ್ತಾಗಿ ಯಾರನ್ನೂ ಗುರುತಿಸಲಾಗದ ಸ್ಥಿತಿಗೆ ತಲುಪಿ ಸುಮಾರು ದಶಕಗಳಿಗೂ ಅಧಿಕ ಕಾಲ ಅದೇ ಸ್ಥಿತಿಯಲ್ಲಿ  ಇದ್ದು , ಇಂದು ಹಾಸಿಗೆಯಿಂದಲೇ ನಮ್ಮೆಲ್ಲರನ್ನೂ ಅಗಲಿದ್ದಾರೆ.

ಮಾತೃಭಾಷೆ ಕೊಂಕಣಿಯಾದರೂ ಆಡು ಭಾಷೆಯ ಮೂಲಕ  ಕನ್ನಡಿಗರೇ ಆಗಿದ್ದ ಜಾರ್ಜ್ ಫರ್ನಾಂಡಿಸರ ಕುಟುಂಬಸ್ತರಿಗೂ ಮತ್ತು   ಬೆಂಗಳೂರಿಗೂ ಒಂದು  ಅವಿನಾವಭಾವ ಸಂಬಂಧ. ಆವರ  ಸಹೋದರರಾದ ಮೈಕಲ್ ಫರ್ನಾಂಡೀಸ್ ಬೆಂಗಳೂರಿನಲ್ಲಿ ಹಲವಾರು ಕಾರ್ಖಾನೆಗಳಲ್ಲಿ ಕಾರ್ಮಿಕ ನಾಯಕನಾಗಿದ್ದರೆ ಅವರ ಮತ್ತೊಬ್ಬ ತಮ್ಮ ಲಾರೆನ್ಸ್  ಫರ್ನಾಂಡೀಸ್ ಬೆಂಗಳೂರಿನ ಮಾಜೀ ಮೇಯರ್ ಆಗಿದ್ದವರು. ಜಾರ್ಜ್ ಫರ್ನಾಂಡಿಸರೂ ಕೂಡಾ ಒಮ್ಮೆ ಬೆಂಗಳೂರು ಉತ್ತರ ಲೋಕಸಭಾಕ್ಷೇತ್ರದಿಂದ ಸ್ಪರ್ಧಿಸಿ ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ಮಾಜಿ ರೈಲ್ವೇ ಮಂತ್ರಿ ಜಾಫರ್ ಷರೀಫರ ವಿರುದ್ಧ ಸೋಲನ್ನು ಕಂಡ್ದಿದ್ದರು.  ಇಂದಿನ ರಾಜಕಾರಣದಲ್ಲಿ ಒಮ್ಮೆ ನಗರಸಭಾ ಸದಸ್ಯರಾದರೆ ಸಾಕೂ ಇನ್ನು ನಾಲ್ಕು ತಲೆಮಾರುಗಳಿಗೆ ಆಗುವಷ್ಟು ಸಂಪಾದನೆ ಮಾಡುವಂತಹವರೇ ಹೆಚ್ಚಾಗಿರುವಾಗ ಐವತ್ತು ವರ್ಷಕ್ಕೂ ಹೆಚ್ಚಿನ ಅವಧಿಗಳ ವರೆಗೆ ದೇಶಾದ್ಯಂತ ನಾನಾ ರೀತಿಯ ರಾಜಕೀಯ ಪದವಿಗಳನ್ನು ಅಲಂಕರಿಸಿದ ಈ ವ್ಯಕ್ತಿ, ಎಂತಹ ವಿಷಮ ಸ್ಥಿತಿಯಲ್ಲಿಯೂ ಜುಬ್ಬ ಪೈಜಮ ಹೆಚ್ಚೆಂದರೆ ಅದರ ಮೇಲೊಂದು ಅರ್ಧ ತೋಳೀನ ಕೋಟು ಇಲ್ಲವೇ ಒಂದು ಶಾಲು ಹೊದ್ದು ಸರಳ ಸಜ್ಜನಿಕೆಯಿಂದ ಜನಮನವನ್ನು ಗೆದ್ದವರು.  ಈ ಲೋಕಕ್ಕೆ ಬರೀ ಕೈಯಲ್ಲೇ ಬಂದು, ಹಾಗೆಯೇ ಹೋಗುವಾಗಲೂ ಬರೀ ಕೈಯಲ್ಲಿಯೇ ಸಂತನಂತೆಯೇ  ಮರೆಯಾಗಿ ಹೋದ ಜಾರ್ಜ್ ಫರ್ನಾಂಡೀಸ್ ಅವರಿಂದ   ಇಂದಿನ ರಾಜಕಾರಣಿಗಳು ಬಹಳಷ್ಟು ಕಲಿಯಬೇಕಾಗಿರುವುದಂತೂ ಸತ್ಯ, ಸತ್ಯ, ಸತ್ಯ.

ಹುಟ್ಟಿದ್ದು  ಕ್ರೈಸ್ತ ಧರ್ಮದಲ್ಲಿ , ಓದಿ ಬೆಳೆದದ್ದೆಲ್ಲಾ ಹಿಂದೂ ಸ್ನೇಹಿತರುಗಳೊಂದಿಗೆ, ವಿವಾಹವಾದದ್ದು  ಮಾಜಿ ಕೇಂದ್ರ ಸಚಿವ ಮುಸ್ಲಿಂ ಧರ್ಮದ ಹುಮಾಯುನ್ ಕಬೀರ್ ಅವರ ಪುತ್ರಿ ಲೈಲಾ ಕಬೀರ್ ಅವರನ್ನು.  ಹುಟ್ಟಿ ಬೆಳೆದದ್ದು ಕರ್ನಾಟಕದ ಕರಾವಳಿ ಮಂಗಳೂರಿನಲ್ಲಿ, ರಾಜಕೀಯ ಆರಂಭಿಸಿದ್ದು ಮಹಾರಾಷ್ಟ್ರದ ಬಾಂಬೆ ನಗರದಲ್ಲಿ, ನಂತರ ಬಿಹಾರದಲ್ಲಿ ರಾಜಕೀಯ ನೆಲೆ ಕಂಡುಕೊಂಡು, ರಾಜಕೀಯದ ಉಚ್ರಾಯ ಸ್ಥಿತಿಯನ್ನು ತಲುಪಿದ್ದು ದೇಶದ ರಾಜಧಾನಿ ನವದೆಹಲಿಯಲ್ಲಿ. ಈ ರೀತಿಯಾಗಿ ದೇಶದ ಎಲ್ಲಾ ಭಾಗಗಳಲ್ಲಿಯೂ ಎಲ್ಲರ ಮನೆಸೂರೆಗೊಂಡು ನಿಜವಾದ ಭಾರತೀಯರಾಗಿದ್ದಂತಹ ಒಬ್ಬ ಸರಳ ಸಜ್ಜನ ಅಪರೂಪದ ನಾಯಕನನ್ನು  ನಾವಿಂದು ಕಳೆದುಕೊಂಡಿದ್ದೇವೆ.   ಪ್ರಸ್ತುತ ರಾಜಕಾರಣಿಗಳ ಪೈಕಿ ಅಂತಹ  ಮತ್ತೊಬ್ಬ  ರಾಜಕಾರಣಿಗಳನ್ನು ಪಡೆಯುವ ಸಂಭವೇ ಇಲ್ಲ ಎಂದರೂ ತಪ್ಪಾಗಲಾರದು.  ನಾವೆಲ್ಲಾ ಇಲ್ಲಿಂದಲೇ ನಮ್ಮನ್ನೆಲ್ಲ ಅಗಲಿದ ಅಂತಹ ಸರಳ  ಸಜ್ಜನರ ಆತ್ಮಕ್ಕೆ  ಆ ಭಗವಂತ ಶಾಂತಿ ಕೊಡಲಿ ಮತ್ತು  ಸಾಧ್ಯವಾದರೆ ಅವರು ಮತ್ತೊಮ್ಮೆ ನಮ್ಮ ರಾಜ್ಯದಲ್ಲಿಯೇ ಹುಟ್ಟಿ ಬರಲಿ ಎಂದಷ್ಟೇ ಕೋರಬಹುದು.

ಏನಂತೀರೀ?

ಹಸಿವು

ಅದೊಂದು ಶನಿವಾರದ ದಿನ.  ಬೆಳಿಗ್ಗೆ ಶಂಕರ ಕಛೇರಿಗೆ ಹೊರಡಲು ಅನುವಾಗಿ ತಿಂಡಿ ತಿನ್ನುತ್ತಿದ್ದ. ಅಡುಗೆ ಮನೆಯೊಳಗೆ ಅವನ ಮಡದಿ ಮಯೂರಿ ಮಗ ಸಮೀರನೊಂದಿಗೆ ಏನೋ ಸಮಾಧಾನ ಮಾಡುತ್ತಿದ್ದಳು ಆದರೆ ಅದನ್ನು ಕೇಳಲು ತಯಾರಿಲ್ಲದ ಮಗ, ಸ್ವಲ್ಪ ಹೆಚ್ಚಾಗಿಯೇ ಕಿರಿಕಿರಿ ಮಾಡುತ್ತಿದ್ದ. ಮೊದ ಮೊದಲು  ಅಮ್ಮಾ ಮಗನ ನಡುವಿನ ವಿಷಯಕ್ಕೆ ತಾನೇಕೇ ಹೋಗುವುದು ಎಂದು ಸುಮ್ಮನಿದ್ದರೂ, ಮಡದಿಯು ಪರಿಪರಿಯಾಗಿ ಸಂತೈಸಲು ಪ್ರಯತ್ನಿಸಿದ್ದರೂ ಒಪ್ಪಿಕೊಳ್ಳದೆ ಪಿರಿಪಿರಿ ಮಾಡುತ್ತಿದ್ದ ಮಗನನ್ನು ಕಂಡ ಶಂಕರ, ಏನದು? ಏನಾಗ್ತಾ ಇದೇ? ಎಂದು ತುಸು ಎತ್ತರದ ಧನಿಯಲ್ಲಿ ವಿ‍ಚಾರಿಸಿದಾಗ, ಸಹಜವಾಗಿಯೇ ತಾಯಿಯ ಕರುಳು ಏನು ಇಲ್ಲಾರೀ , ಏನೋ ಅಮ್ಮಾ ಮಗನ ನಡುವಿನ ವಿಷಯ ನಾವೇ ಬಗೆ ಹರಿಸಿಕೊಳ್ಳುತ್ತೇವೆ ಎಂದಳು.  ಏನೂ? ತಿಂಡಿ ತಟ್ಟೆ  ಹಿಡಿದು ಐದು ಹತ್ತು ನಿಮಿಷಗಳಾಯ್ತು. ಇನ್ನೂ  ಅಮ್ಮಾ ಮಗನ ವಿಷಯ ಬಗೆ ಹರಿಯಲಿಲ್ಲ ಅಂದ್ರೇ ಅದೇನು ಅಂಥಾ ಗಹನವಾದ ವಿಷಯ ಎಂದಾಗ, ಅದೇನೂ ಇಲ್ಲಾರೀ, ಇವತ್ತು ತಿಂಡಿಗೆ ಹುಳಿಯವಲಕ್ಕಿ (ಗೊಜ್ಜವಲಕ್ಕಿ) ಮಾಡಿದ್ದಿನಲ್ಲಾ, ಅದು ನಿಮ್ಮ ಮಗನಿಗೆ ಇಷ್ಟವಿಲ್ಲವಂತೆ ಅದಕ್ಕೆ ಮ್ಯಾಗಿ ಮಾಡಿಕೊಳ್ತೀನಿ ಇಲ್ಲವೇ ಹಾಗೇ ಹಸಿದುಕೊಂಡು ಹೋಗ್ತೀನಿ ಅಂತಾ ಹಠ ಹಿಡಿದಿದ್ದಾನೆ. ಮಧ್ಯಾಹ್ನ ಊಟದ ಡಬ್ಬಿಗೂ ತೆಗೆದುಕೊಂಡು ಹೋಗೋದಿಲ್ವಂತೆ ಎಂದಳು.

ಏನೋ ಮಗೂ ಅದ್ಯಾಕೋ ಹಾಗೆ ಹೇಳ್ತೀಯಾ? ಎಷ್ಟು ರುಚಿಯಾಗಿದೆಯಲ್ಲೋ?  ನೋಡು ನಾನೂ ಅದನ್ನೇ ತಿನ್ತಾಇದ್ದೀನಿ ಮತ್ತು ಅದನ್ನೇ ಮಧ್ಯಾಹ್ನದ ಊಟಕ್ಕೂ  ಡಬ್ಬಿಯಲ್ಲಿ  ಕಟ್ಟಿಕೊಂಡು  ಹೋಗ್ತಾ ಇದ್ದೀನಿ. ಆಹಾರ ದೇವರ ಪ್ರಸಾದದ  ಸಮಾನ. ಅದನ್ನು ಹಾಗೆ ಬೇಡಾ ಎನ್ನಬಾರದು. ಸುಮ್ಮನೆ ಕಣ್ಣು ಒತ್ತಿಕೊಂಡು ತಿಂದುಕೊಂಡು ಹೋಗು. ಬೇಕಾದ್ರೆ ಸ್ವಲ್ಪ ಮೊಸರು ಹಾಕಿಸಿಕೊಂಡು ತಿನ್ನು. ತುಂಬಾ ಚೆನ್ನಾಗಿರುತ್ತದೆ. ಮೊಸರು ಆರೋಗ್ಯಕ್ಕೂ ತಂಪು ಎಂದ. ಇಲ್ಲಾಪ್ಪಾ ನನಗೆ ಇಷ್ಟಾ ಇಲ್ಲ. ಅಮ್ಮಾ ಸಿಹಿಯಾಗಿ ಮಾಡಿರ್ತಾರೆ ನನಗೆ ಇಷ್ಟ ಇಲ್ಲ ಎಂದ. ಓ ಅಷ್ಟೇನಾ? ಅದಕ್ಕೇನಂತೆ? ಜೊತೆಗೆ ಒಂದು ಚೂರು ಹೇರಳೇ ಕಾಯಿ ಉಪ್ಪಿನಕಾಯಿಯನ್ನೋ ಇಲ್ಲವೇ ಬಾಳಕದ ಮೆಣಸಿಕಾಯಿ (ಉಪ್ಪು ಮೆಣಸಿನಕಾಯಿ) ನೆಂಚಿಕೊಂಡು ತಿಂದರಾಯ್ತು. ಮಯೂರಿ ನನ್ನ ಡಬ್ಬಿಗೂ ಉಪ್ಪಿನಕಾಯಿ ಜೊತೆಗೆ ಸ್ವಲ್ಪ ಮೊಸರು ಕೊಡು ಮಧ್ಯಾಹ್ನದ ವೇಳೆಗೆ ಅವಲಕ್ಕಿ ಬಿರುಸಾಗಿ ಗಂಟಲೊಳಗೆ ಇಳಿಯುವುದಿಲ್ಲ ಎಂದ ಶಂಕರ, ಮಗೂ ಬೇಗ ಬೇಗ ತಿನ್ನು  ಸ್ಪೆಷಲ್ ಕ್ಲಾಸ್ಗೆ ತಡವಾಗುತ್ತದೆ. ಆಮೇಲೆ ಸುಮ್ಮನೆ ಹೊರಗೆ ನಿಲ್ಲಿಸಿ ನಮಗೆ ಕರೆ ಮಾಡ್ತಾರೆ ಅಂದ.  ಅದಾವುದಕ್ಕೂ ಒಪ್ಪದ ಮಗ ಮೊಂಡು ಹಠ ಹಿಡಿದು, ನನಗೆ ಬೇಡಾ ಅಂದ್ರೆ ಬೇಡಾ. ಮ್ಯಾಗಿ ಮಾಡಿಕೊಡುವುದಾದರೆ ಸರಿ ಇಲ್ಲಾಂದ್ರೆ ನಾನು ಹಾಗೆ ಹಸಿದು ಕೊಂಡೇ ಇರ್ತೀನಿ ಹಾಗೇ ಶಾಲೆಗೂ ಹೋಗ್ತೀನೀ ಎಂದು ತುಸು ಜೋರಾಗಿಯೇ ಹೇಳಿದ್ದು, ಶಂಕರ ಮತ್ತು ಮಯೂರಿಯರ ಪಿತ್ತ ನೆತ್ತಿಗೇರಿಸಿತ್ತು.  ಅದುವರೆವಿಗೂ ಸಮಾಧಾನವಾಗಿ ತಿಂಡಿ ತಿನ್ನುತ್ತಿದ್ದ ಶಂಕರ  ತಿಂಡಿ ತಟ್ಟೆ ಕೆಳಗಿಟ್ಟು ಕೈತೊಳೆದುಕೊಂಡು ಬೆಳೆಯುತ್ತಿರುವ ಹುಡುಗ  ಈ ಹಾಳೂ ಮೂಳೂ ಜೆಂಕ್ ಫುಡ್ ತಿಂದ್ರೆ ಶಕ್ತಿಯಾದ್ರೂ ಎಲ್ಲಿಂದ ಬರಬೇಕು? ನಿಮ್ಮ ತಾತನ ಕಾಲದಲ್ಲಿ ಮನೆಯಲ್ಲಿ ತಿನ್ನುವುದಕ್ಕೇ ಏನು ಇರ್ತಾಯಿರಲಿಲ್ಲ ಅದಕ್ಕೆ ಅವರಿವರ ಮನೆಯಲ್ಲಿ  ವಾರಾನ್ನಾ ಮಾಡಿ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿ ತಮ್ಮ ಮಕ್ಕಳಿಗೆ ಆ ರೀತಿಯ ತೊಂದರೆ ಆಗಬಾರದೆಂದು ನಮ್ಮಗೆಲ್ಲ  ಅವರಿಗೆ ಕೈಯಲ್ಲಿ ಆದಷ್ಟು ಒಳ್ಳೆಯ ತಿಂಡಿ ಊಟ ಹಾಕಿ ಸಾಕಿದ್ರು. ನಾವು ಏನು ಮಾಡಿ ಹಾಕ್ತಿದ್ರೋ ಅದನ್ನೇ ಪ್ರಸಾದ ಎಂದು ತಿಳಿದು ತಿಂದು ಬೆಳೆದು ದೊಡ್ಡವರಾದ ಮೇಲೆ ನಮ್ಮ ರೀತಿ ನಿಮಗೆ ಇರಬಾರದೂ ಅಂತ ಅತ್ಯಂತ ವೈಭವೋಪೇತವಾಗಿ ರುಚಿರುಚಿಯಾಗಿ ಮಾಡಿ ಹಾಕಿದ್ರೂನೂ ತಿನ್ನೋದಕ್ಕೇ ಇಷ್ಟೋಂದು ಕೊಬ್ಬು ಆಡ್ತೀರಲ್ಲೋ, ಮಯೂರೀ,  ಅವನು ಕೇಳಿ ಕೇಳಿದ್ದೆಲ್ಲಾ ಮಾಡಿ ಹಾಕಿ ಮುದ್ದು ಮಾಡಿ ಆವನನ್ನೀಗ ಮೊದ್ದು ಮಾಡಿಟ್ಟಿದ್ದೀಯಾ, ಅವನಿಗೆ ಅನ್ನದ  ಬೆಲೆ ಗೊತ್ತಿಲ್ಲ ಹಸಿವಿನ ರುಚಿ ಗೊತ್ತಿಲ್ಲಾ. ಇವತ್ತು ಒಂದು ದಿನ ಹಸಿದು ಕೊಂಡೇ ಹೋಗಲಿ ಆಗ ಗೊತ್ತಾಗುತ್ತೆ ಹಸಿವಿನ ಬೆಲೆ ಏನು?  ಎಂದು ಎತ್ತರದ ಧನಿಯಲ್ಲಿ ಹೇಳಿದರೂ, ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞ ಎನ್ನುವಂತೆ ಉಬಾ ಶುಬಾ ಎನ್ನದೆ ತನ್ನ ಮೊಂಡು ಹಠದಲ್ಲಿಯೇ ಇದ್ದ ಸಮೀರ.   

ಅದೇ ಸಮಯಕ್ಕೆ  ಯಾರೋ ಮಕ್ಕಳು ಆಂಟೀ ಆಂಟೀ ಏನಾದ್ರೂ ಕೆಲಸ ಇದ್ಯಾ? ನಿಮ್ಮ ಗಾರ್ಡನ್ ಕ್ಲೀನ್ ಮಾಡ್ಬೇಕಾ? ಇಲ್ಲಾ ನಿಮ್ಮ ಮನೆ ಮುಂದಿರುವ ಮೋರಿ ಕ್ಲೀನ್, ಇಲ್ಲಾ ಗಾಡಿ ತೋಳಿಬೇಕಾ ಹೇಳಿ ಆಂಟಿ, ಏನ್ ಕೆಲ್ಸಾ ಹೇಳಿದ್ರೂ ಮಾಡ್ತೀವಿ. ಸ್ವಲ್ಪ ತಿನ್ನೋದಕ್ಕೆ ತಿಂಡಿ ಮತ್ತು ನಿಮಗೆ ಮನಸ್ಸಿಗೆ ಬಂದಷ್ಟು ದುಡ್ಡು ಕೊಡಿ, ಅಂತಾ ಮನೆಯ ಮುಂದಿನ ಗೇಟ್ ಬಳಿ ಜೋರಾಗಿ  ಕೂಗುತ್ತಿರುವುದು ಕೇಳಿ ಬಂತು. ಮಗನೊಂದಿಗೆ ಹೊರಗೆ ಬಂದು ಆ ಮೂರ್ನಾಲ್ಕು ಮಕ್ಕಳನ್ನು ನೋಡಿದರೆ ಯಾರಿಗೂ ಆರು, ಎಂಟು ವರ್ಷಗಳು ದಾಟಿರಲಿಲ್ಲ.  ಮೈಮೇಲೆ ಸರಿಯಾದ ಬಟ್ಟೆಯೂ ಇರಲಿಲ್ಲ. ಕಣ್ಣಿನಲ್ಲಿ ಹೊಳಪಿರಲಿಲ್ಲ.  ಗಂಟಲಲ್ಲಿ ಹಸಿವಿನ ಆರ್ದ್ರತೆ ಇತ್ತು.  ಆ ಮಕ್ಕಳ ಬಳಿ ಬಂದು ಯಾಕೋ ಮಕ್ಳಾ!! ಶಾಲೆಗೆ ಹೋಗುವುದಿಲ್ಲವೇನೋ?  ಇಷ್ಟು ಚಿಕ್ಕವಯಸ್ಸಿನಲ್ಲಿಯೇ ಕೆಲಸ ಮಾಡೋದಿಕ್ಕೆ ಬಂದಿದ್ದೀರಲ್ಲೋ ಅಂದ್ರೆ, ಏನು ಮಾಡೋದು ಅಂಕಲ್ ಮನೆ ತುಂಬಾ ಮಕ್ಕಳು ಅಪ್ಪಾ, ಅಣ್ಣ, ಗ್ಯಾರೇಜ್ ಹೋಗ್ತಾರೆ ಅಮ್ಮಾ ಮನೆ ಕೆಲ್ಸಾ ಮಾಡ್ತಾರೆ. ತರೋ ದುಡ್ಡು  ಮನೆಗೆ ಸಾಕಾಗೊಲ್ಲ.  ಶಾಲೆ ಇರೋ ದಿವಸ  ಶಾಲೆಯಲ್ಲಿ ಕೊಡೋ  ಬಿಸಿ ಊಟದಲ್ಲೇ ಹೇಗೋ ಹೊಟ್ಟೆ ತುಂಬತ್ತೆ. ಅದಕ್ಕೇ ಶಾಲೆಗೆ ರಜೆ  ಇರುವಾಗ  ಹೀಗೆ ಸಣ್ನ ಪುಟ್ಟ ಕೆಲಸ ಮಾಡ್ತೀವೀ. ನೀವು ಕೊಟ್ಟ ಅಲ್ಪ ಸ್ವಲ್ಪ ದುಡ್ಡಿನಲ್ಲಿ  ಪುಸ್ತಕ, ಪೆನ್ಸಿಲ್ ತಗೋತೀವಿ. ಏನಾದರೂ ಕೊಟ್ರೆ ತಿನ್ನುತ್ತೀವಿ ಎಂದಾಗ ಮನಸ್ಸು ಚುರ್ ಎಂದಿತು.  ಶಂಕರ  ಪಕ್ಕದಲ್ಲೇ ನಿಂತಿದ್ದ  ಮಗನ ಕಡೆ ನೋಡಿದ. ಹೇಳುವುದಕ್ಕೆ ಮತ್ತು ಕೇಳುವುದಕ್ಕೇನು  ಇರಲಿಲ್ಲ.  ಬುದ್ದಿ ತಿಳಿದಿದ್ದ  ಮಗನಿಗೆ ಎಲ್ಲವೂ ಅರ್ಥವಾಗಿತ್ತು. ಸುಮ್ಮನೆ ಮನೆಯೊಳಗೆ ಹೋಗಿ ಅಮ್ಮಾ ತಿಂಡಿ ಕೊಡಿ ಹೊತ್ತಾಯ್ತು ಎಂದ. ಹೊರಗೆ ನಡೆದ ಸಂಗತಿಗಳ ಅರಿವಿಲ್ಲದ ಮಯೂರಿ ಇದೇನಪ್ಪಾ ಮಗ ಇಷ್ಟು ಬೇಗನೆ ಸರಿ ಹೋದ್ನಲ್ಲಾ  ಅವರಪ್ಪ ಅದೇನು ಮೋಡಿ ಮಾಡಿದ್ರೋ ಏನೋ? ಸರಿ ನನಗೆಯಾಕೆ ಬೇಕು ಮಗ ತಿಂಡಿ ತಿಂದ್ರೆ ಸಾಕು ಎಂದು ಮನಸ್ಸಿನಲ್ಲಿಯೇ ಯೋಚಿಸಿ ಮಗನಿಗೆ ತಿಂಡಿ ತಟ್ಟೆ ಕೊಟ್ಟು  ಡಬ್ಬಿ ಕಟ್ಟಲು ಶುರು ಹಚ್ಚಿಕೊಳ್ಳುವಷ್ಟರಲ್ಲಿಯೇ, ಹೊರಗಿನಿಂದಲೇ ಶಂಕರ, ಮಯೂರಿಯನ್ನು ಕರೆದು, ನೋಡು ಈ ಮಕ್ಕಳಿಗೆಲ್ಲಾ  ಹೊಟ್ಟೆ ತುಂಬಾ  ತಿಂಡಿ ತಿನ್ನಲು ಕೊಡು. ಮಾಡಿದ ತಿಂಡಿ ಸಾಲದೇ ಹೋದ್ರೆ ನನ್ನ ಡಬ್ಬಿಯಿಂದ ತೆಗೆದುಕೋ, ನಾನು ಬೇಕಿದ್ರೆ, ಆಫೀಸಿನಲ್ಲಿಯೇ ಊಟ ಮಾಡಿಕೊಳ್ತೀನಿ ಇಲ್ಲಾಂದ್ರೆ ಮೂರ್ನಲ್ಕು ಹಣ್ಣುಗಳು ಇದ್ದರೆ ಕೊಟ್ಟು ಬಿಡು. ಇವತ್ತು ಫಲಾಹಾರ ಮಾಡ್ತೀನಿ ಅಂತ ತನ್ನ  ಮಡದಿಗೆ ಹೇಳಿ, ಮಕ್ಕಳತ್ತ ತಿರುಗಿ, ನೋಡೋ ಮಕ್ಳಾ, ನೀವೆಲ್ಲಾ ಚಿಕ್ಕ ಮಕ್ಕಳು ನಿಮ್ಮ ಹತ್ತಿರ ಕೆಲಸ ಮಾಡಿಸಿ ಕೊಳ್ಳುವುದು ತಪ್ಪು. ಹಾಗೇ ನಿಮಗೆ ದುಡ್ಡು ಕೊಡುವುದೂ ತಪ್ಪು. ನೀವಾದ್ರೂ ಏನು ಮಾಡ್ತೀರಿ, ಹೆತ್ತವರು ಗೊತ್ತು ಗುರಿ ಇಲ್ಲದೆ ಮಾಡಿದ  ತಪ್ಪಿಗೆ ನಿಮ್ಮನ್ನು ದೂರುವುದು ಸರಿಯಲ್ಲ. ಆದರೂ ನಿಮಗೆ ಓದಿನ ಹಸಿವಿದೆ. ನಿಜವಾದ ಹಸಿವಿನ ಅರಿವಿದೆ.  ಹಸಿದು ಬಂದಿರುವ ಶತ್ರುಗಳಿಗೂ ಮೊದಲು ಉಣಬಡಿಸಿ ನಂತರ ಕಾದಾಡು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಹಾಗಾಗಿ ನೀವೇನೂ ನಮ್ಮ ಮನೆಯಲ್ಲಿ ಯಾವುದೇ ಕೆಲಸ ಮಾಡಬೇಕಿಲ್ಲ. ತಿಂಡಿ ಕೊಡ್ತಾರೆ. ಹೊಟ್ಟೆ ತುಂಬಾ ತಿನ್ನಿ. ಹಾಗೆ ಈ ದುಡ್ಡು ಜೋಪಾನವಾಗಿ  ಅಮ್ಮನ ಕೈಗೆ  ಕೊಟ್ಟು   ನಿಮ್ಮ ಓದಿನ ಅವಶ್ಯಕತೆಗೆ ಬಳೆಸಿಕೊಳ್ಳಿ. ಸುಖಾ ಸುಮ್ಮನೆ  ಖರ್ಚು ಮಾಡಬೇಡಿ ಎಂದು ಹೇಳಿ  ಕಛೇರಿಗೆ ಹೊರಡಲು ಸಿಧ್ಧವಾದನು.  ಮಕ್ಕಳ ಸ್ಥಿತಿಗತಿಗಳನ್ನು  ನೋಡಿದ ತಕ್ಷಣವೇ ಅರಿತ ಮಯೂರಿಯೂ  ಮಕ್ಕಳಿಗೆ  ತಿಂಡಿ ಕೊಡಲು ಹೋದರೆ, ಆ ಮಕ್ಕಳಲ್ಲಿ ಒಬ್ಬ ಆಂಟಿ  ತಿಂಡಿನಾ ಓಂದು ಕವರಿನಲ್ಲಿ ಹಾಕಿ ಕೊಡ್ತೀರಾ?  ಮನೆಗೆ ತೆಗೆದುಕೊಂಡು ಹೋಗಿ ನಮ್ಮ ತಮ್ಮ, ತಂಗಿ ಜೊತೆ ತಿನ್ತೀವಿ ಎಂದು ಹೇಳಿದಾಗ, ಅಲ್ಲಿಯೇ ತಿಂಡಿ ತಿನ್ನುತ್ತಿದ್ದ ಸಮೀರನಿಗೆ   ಹಸಿವು ಎಂದರೆ ಹೇಗಿರುತ್ತದೆ ಎಂಬ  ಅರಿವು ಆಗಿದ್ದಂತೂ ಸುಳ್ಳಲ್ಲ.  ಮಯೂರಿ ಕೂಡ ತಿಂಡಿಯನ್ನು ಪೊಟ್ಟಣದಲ್ಲಿ ಕಟ್ಟಿ ಕೊಡುತ್ತಾ  ಮಗನಿಗೆ ಚಿಕ್ಕದಾಗಿದ್ದ ಕೆಲವು ಬಟ್ಟೆಗಳನ್ನೂ ಜೊತೆಗೆ  ಕೊಟ್ಟು ಅದರ ಜೊತೆಗೆ ಮನೆಯಲ್ಲಿ  ತನ್ನ ಮಕ್ಕಳು   ಉಪಯೋಗಿಸದೇ ಇದ್ದ ಖಾಲೀ ಪುಸ್ತಕಗಳು ಮತ್ತು ಪೆನ್ಸಿಲ್ಗಳನ್ನು ಕೊಟ್ಟು ಕಳುಹಿಸಿದಳು.

ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮಗನೆಡೆಗೆ ತಿರುಗಿ ನೋಡಿದ ಶಂಕರ, ನೋಡಿದೆಯಾಪ್ಪಾ  ನಿಜವಾದ ಹೊಟ್ಟೆಯ ಹಸಿವು ಮತ್ತು ಓದಿನ ಹಸಿವು ಹೇಗೆ ಇರುತ್ತದೆ ಅಂತಾ. ನಿಮಗೆಲ್ಲಾ  ಈ ರೀತಿಯ ತೊಂದರೆಗಳಾಗದಿರಲಿ ಎಂದು ನಾವು ಚೆನ್ನಾಗಿ ಹೊಟ್ಟೆ, ಬಟ್ಟೆ ಮತ್ತು ಓದಿಗೆ ಯಾವುದೇ ರೀತಿಯ ತೊಂದರೆಯಾಗದಂತೆ  ನೋಡಿಕೊಂಡರೆ, ಅದನ್ನು ಅರಿಯದೆ ಸುಮ್ಮನೆ ಅಪ್ಪಾ ಅಮ್ಮನ ಮೇಲೆ  ದರ್ಪು ತೋರಿಸುತ್ತೀರಿ ಎಂದಾಗ ಮಗನಿಗೆ ತನ್ನ ತಪ್ಪಿನ ಅರಿವಾಗಿ ಇಲ್ಲಪ್ಪಾ ಇನ್ನು ಮುಂದೆ ಹಾಗೆ ಹಠ ಮಾಡುವುದುದಿಲ್ಲ ನನ್ನನ್ನು ಕ್ಷಮಿಸಿ ಎಂದ. ಮಾಡಿದರ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದವರಿಗೆ ಇನ್ನೂ ಹೆಚ್ಚಿಗೆ ತಿಳುವಳಿಗೆ  ಹೇಳುವುದು ಸರಿಯಲ್ಲ ಎಂದು ನಿರ್ಥರಿಸಿದ ಶಂಕರ,  ಸರಿ ಸರಿ, ಮೊದಲು ಅಮ್ಮನ ಬಳಿ ಹೋಗಿ ಕ್ಷಮೆ ಕೇಳು ಅವಳಿಗೇ ತುಂಬಾ ಬೇಜಾರಾಗಿರುವುದು ಎಂದ. ಕಾಲಿಗೆ ಬಿದ್ದ ಮಗನನ್ನು ಕೈ ಎತ್ತುತ್ತಾ ಸರಿ ಬಿಡು ಗೊತ್ತಿಲ್ಲದೆ ಹೀಗೆ ಮಾಡಿದೆ. ಮುಂದೆಂದೂ ಇಂತಹ ಪರಿಸ್ಥಿತಿ ಬರದೇ ಇರಲಿ ಎಂದು ಮಗನನ್ನು ಬರಸೆಳೆದು ಮಗನ ಹಣೆಯ ಮೇಲೆ ಮುತ್ತಿಟ್ಟಳು ಮಯೂರಿ. ಎಷ್ಟಾದರೂ ಅವಳದ್ದು ಹೆತ್ತ ತಾಯಿಯ ಕರುಳಲ್ಲವೇ, ತಾಯಿ ಕ್ಷಮಯಾಧರಿತ್ರಿಯಲ್ಲವೇ

ಏನಂತೀರಿ

ಪುನರ್ಜನ್ಮ

ಶಂಕರ ಮೊನ್ನೆ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನಕ್ಕೆ ಸರದಿಯ ಸಾಲಿನಲ್ಲಿ ನಿಂತಿದ್ದಾಗಲೇ,  ಶಂಕರಾಚಾರ್ಯವಿರಚಿತ ಎಂ.ಎಸ್. ಸುಬ್ಬಲಕ್ಷ್ಮಿಯವರ ಸುಶ್ರಾವ್ಯ ಕಂಠದ ಭಜಗೋವಿಂದಂ ಭಜಗೋವಿಂದಂ ಶ್ಲೋಕ ಕೇಳುತ್ತಲೇ ಅವನಿಗೆ ತಾನು ಸಣ್ಣನಿದ್ದಾಗ ಅವನ ತಾತ ಆ ಶ್ಲೋಕಗಳನ್ನು ಹೇಳಿಕೊಡುತ್ತಿದ್ದದ್ದು  ಮತ್ತು ಅದರ ಜೊತೆ ಹೇಳಿದ ಸುಂದರ ಪ್ರಸಂಗವೊಂದು ನೆನಪಿಗೆ ಬಂತು.  ಆಗ  ಶಂಕರನಿಗೆ ಏಳೆಂಟು ವರ್ಷಗಳಿರಬಹುದು . ಪರೀಕ್ಷೆ ಮುಗಿದು ಬೇಸಿಗೆ ರಜಾ ಬಂದಿತೆಂದರೆ ತಾತನ ಮನೆಗೆ ಹೋಗುವುದಕ್ಕೆ ಅವನಿಗೆ ಪಂಚ ಪ್ರಾಣ. ಅದೇ ರೀತೀ ಅವನ ತಾತನೂ ಅಷ್ಟೇ. ಮೊಮ್ಮಗನ ಪರೀಕ್ಷೆ ಮುಗಿಯುವುದಕ್ಕೇ ಕಾಯುತ್ತಿದ್ದು,  ಪರೀಕ್ಷೆ ಮುಗಿಯುತ್ತಿದ್ದಂತೆಯೇ ಅವರೇ  ಬಂದೋ ಇಲ್ಲವೇ ಮಗನ ಮೂಲಕವೋ ಮೊಮ್ಮಗನನ್ನು ಊರಿಗೆ ಕರೆಸಿಕೊಂಡು ಬಿಡುತ್ತಿದ್ದರು.  ಯುಗಾದಿ ನಂತರದ ಒಂದು ತಿಂಗಳ ಪೂರ್ತಿಯೂ ಅವರ ಊರಿನಲ್ಲಿ ಮತ್ತು ಸುತ್ತ ಮುತ್ತಲಿನ ಊರಿನಲ್ಲಿ ಊರ ಹಬ್ಬದ ಸಡಗರ. ಪ್ರತಿ ದಿನ ಮೊಮ್ಮಗನನ್ನು ಕರೆದುಕೊಂಡು  ಅಕ್ಕ ಪಕ್ಕದ ಊರುಗಳ ಜಾತ್ರೆಗೆ ಹೋಗುವುದು, ಬಿಡುವಿದ್ದ ಸಮಯದಲ್ಲಿ ದೇವಸ್ಥಾನದ ಕಲ್ಯಾಣಿಯಲ್ಲಿ ಮೊಮ್ಮಗನಿಗೆ ಈಜು ಕಲಿಸುವುದು, ಶ್ಲೋಕ, ಬಾಯಿ ಪಾಠಗಳನ್ನು ಹೇಳಿಕೊಡುವುದು, ತೋಟಕ್ಕೆ ಕರೆದುಕೊಂಡು ಹೋಗಿ ಎಳನೀರು ಕುಡಿಸುವುದೆಂದರೆ ಅವರಿಗೆ ಅದೇನೋ ಅಮಿತಾನಂದ. ಸಂಜೆಯಾಯಿತೆಂದರೆ ಊರಿನ  ರಂಗಮಂಟಪದ ಎದುರು ತಮಟೆಯ ಗತ್ತಿಗೆ  ಊರಿನ ಆಬಾಲ ವೃಧ್ಧರಾದಿ ಗಂಡಸರು  ರಂಗ ಕುಣಿಯುವುದನ್ನು  ನೋಡುವುದೇ ಶಂಕರನಿಗೆ ಮಹದಾನಂದ. ಕೆಲವೊಂದು ಬಾರಿ ತಾತನ ಶಲ್ಯವನ್ನು ಎಳೆದುಕೊಂಡು ಹೋಗಿ ತಾನೂ ಅವರೊಡನೆ ತನ್ನ ಪುಟ್ಟ ಪುಟ್ಟ  ಹೆಜ್ಜೆಗಳಲ್ಲಿ  ರಂಗ ಕುಣಿಯುತ್ತಿದ್ದರೆ. ಅವರ ತಾತ ಎಲ್ಲರಿಗೂ ಅದನ್ನು ತೋರಿಸುತ್ತಾ ನೋಡ್ರೋ ನಮ್ಮ ಮೊಮ್ಮಗ ಹೇಗೆ ಕುಣಿಯುತ್ತಾನೆ ಎಂದರೆ, ಎಷ್ಟಾದರೂ  ನಮ್ಮ ಊರಿನ ಶಾನುಭೋಗರ ಕುಡಿಯಲ್ಲವೇ? ಇದಲ್ಲಾ ರಕ್ತದಲ್ಲೇ ಬಂದಿದೆ ಬಿಡಿ ಎಂದು ಅಲ್ಲಿದ್ದವರು ಹೇಳುತ್ತಿದ್ದರು.

ಅದೊಂದು ದಿನ ಶಂಕರ  ಮನೆಯಲ್ಲಿ  ಸ್ನಾನ ಮಾಡುವುದು ಬೇಡ.  ಊರ ದೇವತೆಯ ದೇವಾಲಯದ ಮುಂದಿರುವ ಕಲ್ಯಾಣಿಯಲ್ಲೇ ಸ್ನಾನ ಮಾಡೋಣ ಎಂದು ಹಠ ಹಿಡಿದ. ತಾನನಿಗೋ ಮೊಮ್ಮಗನನ್ನು ಕಲ್ಯಾಣಿಗೆ ಕರೆದುಕೊಂಡು ಹೋಗುವ ಆಸೆ. ಆದರೆ ಅಜ್ಜಿ ಆದಾಗಲೇ ಬಚ್ಚಲಿನಲ್ಲಿ ಬಿಸಿ ನೀರು ಕಾಯಿಸಿಯಾಗಿತ್ತು ಹಾಗಾಗಿ ಬೇಡ ಎಂದರು. ಆದರೂ ಮೊಮ್ಮಗನ ಬೆಂಬೆಡದ ಹಠಕ್ಕೆ ಮಣಿದು ತಾತ ಮೊಮ್ಮಗ ಟವೆಲ್ ಮತ್ತು ಬಟ್ಟೆಗಳನ್ನು ಹಿಡಿದುಕೊಂಡು ಕಲ್ಯಾಣಿಗೆ ಹೋಗಿ ನೀರಿಗೆ ಇಳಿದು ಮನಸೋ ಇಚ್ಚೆ ಆಟವಾಡತೊಡಗಿದರು. ತಾತ ಆ ವಯಸ್ಸಿನಲ್ಲಿಯೂ ಲೀಲಾಜಾಲವಾಗಿ ಈಜುತ್ತಿದ್ದಲ್ಲದೆ, ನೀರಿನ ಮೇಲೆ  ಕೆಲ ಯೋಗಾಸನವನ್ನೂ ಮಾಡುತ್ತಿದ್ದರು. ಗಂಟೆ ಗಟ್ಟಲೆ ನೀರಿನ ಮೇಲೆ ಆರಾಮವಾಗಿ ಪದ್ಮಾಸನ ಹಾಕಿಕೊಂಡು ಮಲಗುವುದು  ಅವರಿಗೆ ಕರಗತವಾಗಿತ್ತು.   ಸೂರ್ಯ ಕೂಡಾ ನೆತ್ತಿಯಮೇಲೆ ಬರುತ್ತಿದ್ದ. ಹೊಟ್ಟೆ ಕೂಡಾ ಚುರುಗುಟ್ಟುತ್ತಿದ್ದರಿಂದ ಇಬ್ಬರೂ ನೀರಿನಿಂದ ಹೊರಗೆ ಬಂದು ಟವಲ್ನಿಂದ ಮೈ ಒರೆಸಿಕೊಳ್ಳುತ್ತಿದ್ದಾಗ ಶಂಕರ ತಾತನ ತೊಡೆಯ ಮೇಲೆ ತ್ರಿಶೂಲಾಕಾರದ ಬರೆ ನೋಡಿ, ಎನು ತಾತಾ, ನೀವೂ ಕೂಡಾ ಚಿಕ್ಕ ವಯಸ್ಸಿನಲ್ಲಿ ನನ್ನಂತೆಯೇ ಚೇಷ್ಟೆ ಮಾಡಿ ನಿಮ್ಮ ಅಮ್ಮನ ಕೈಯಲ್ಲಿ ಬರೆ ಎಳೆಸಿಕೊಂಡಿದ್ರಾ ಎಂದು ತಾತನ ಬರೆಯನ್ನು ತೋರಿಸಿದ. ಮೊಮ್ಮಗನ ಈ ಪ್ರಶ್ನೆಗೆ ಮುಗುಳ್ನಗುತ್ತಾ, ಓ ಇದಾ, ಇದು ನಮ್ಮ ಅಮ್ಮ ಎಳೆದ ಬರೆಯಲ್ಲಾ. ಇದು ಆ ಯಮ ಧರ್ಮರಾಯ ಎಳೆದು ಕಳಿಸಿದ ಬರೆ. ಬಾ ಮನೆಗೆ ಹೋಗುತ್ತಾ ದಾರಿಯಲ್ಲಿ ಎಲ್ಲಾ ಹೇಳುತ್ತೇನೆ ಎಂದು ಹೇಳಿ ಒದ್ದೆ ಬಟ್ಟೆ ಬದಲಾಯಿಸಿ, ದೇವಸ್ಥಾನಕ್ಕೆ ಹೋಗಿ, ಇಬ್ಬರೂ ವೀಭೂತಿ ಧರಿಸಿ, ನಮಸ್ಕರಿಸಿ ತಮ್ಮ ಕಥೆಯನ್ನು ತಮ್ಮ ಮೊಮ್ಮಗನಿಗೆ ಹೇಳುತ್ತಾ ಮನೆಯ ಕಡೆಗೆ  ಹೆಜ್ಜೆ ಹಾಕ ತೊಡಗಿದರು.

ನೋಡು ಮಗು, ನಾನಾಗ  ನಿನ್ನಷ್ಟೇ ಸಣ್ಣ ವಯಸ್ಸಿನ ಹುಡುಗ. ನಾನು ನಮ್ಮ ಅಮ್ಮನ ಹೊಟ್ಟೆಯಲ್ಲಿ ಇರುವಾಗಲೇ ನನ್ನ ಅಪ್ಪ ತೀರಿಕೊಂಡಿದ್ದರು. ಅಂದು ನಮ್ಮ ತಂದೆಯವರ ಶ್ರಾಧ್ಧ. ನಾನಿನ್ನೂ ಸಣ್ಣವನಾಗಿದ್ದರಿಂದ ನನ್ನನ್ನು ಹೊರಗಡೆ ಆಟವಾಡಲು ಬಿಟ್ಟು ನಮ್ಮ ಅಣ್ಣಂದಿರೂ ಮತ್ತು ಚಿಕ್ಕಪ್ಪ, ದೊಡ್ಡಪ್ಪಂದಿರು ಮನೆಯ ಒಳಗೆ ತಿಥಿ ಮಾಡುತ್ತಿದ್ದರು. ಆದೇನಾಯ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆಯೇ ಜೋರಾಗಿ ಕೂಗುತ್ತಾ ಬಿದ್ದು ಬಿಟ್ಟನಂತೆ. ಮನೆಯೊಳಗಿನಿಂದ ನಮ್ಮ ಅಮ್ಮ ಮತ್ತು ಅಕ್ಕ ಬಂದು ನೋಡಿದರೆ ನಾನು ನೆಲದ ಮೇಲೆ ಉಸಿರಾಡದೇ  ಬಿದ್ದಿದ್ದೆ.  ಅಕ್ಕ ಮತ್ತು ಅಮ್ಮನಿಗೆ ನಾನು ಸತ್ತು  ಹೋಗಿದ್ದದ್ದು ಗೊತ್ತಾಗಿ ಮನೆಯಲ್ಲಿ ತಿಥಿ ನಡೆಯುತ್ತಿದ್ದರಿಂದ ಮೈಲಿಗೆ ಆಗುವ ಕಾರಣ ಯಾರಿಗೂ ತಿಳಿಯಬಾರದೆಂದು ಗೋಣೀ ಚೀಲದಲ್ಲಿ ನನ್ನನ್ನು ಹಾಕಿ ಅದಕ್ಕೆ ದಾರ ಕಟ್ಟಿ ಹಿತ್ತಲಿನ ಕೊಟ್ಟಿಗೆಯಲ್ಲಿರಿಸಿ, ಅಳುತ್ತಲೇ ನಾಲ್ಕು ಚೊಂಚು ನೀರಿನಿಂದ ಸ್ನಾನ ಮಾಡಿ ತಿಥಿ ಮುಗಿಯುವುದನ್ನೇ ಕಾಯುತ್ತಿದ್ದರಂತೆ.  ಅದಾಗಿ ಒಂದೆರಡು ಗಂಟೆಯೊಳಗೆ ಇದ್ದಕ್ಕಿದಂತೆಯೇ ನಾನು ಮತ್ತೆ ಜೋರಾಗಿ ಕಿರುಚಾಡಿದ್ದನ್ನು ಕೇಳಿ ಹಿತ್ತಲಿಗೆ ಬಂದು ನೋಡಿದರೆ, ಗೋಣಿ ಚೀಲದ ಒಳಗೆ ಹೊರಳಾಡುತ್ತಿದ್ದ ನನ್ನನ್ನು ಹೊರಗೆ ತೆಗೆದಾಗ  ನೋಡಿದಾಗ ತೊಡೆ ಹಿಡಿದುಕೊಂಡು ಅಮ್ಮಾ ಅಯ್ಯೋ ಉರಿ ಉರಿ ಎಂದು ಅಳುತ್ತಿದ್ದೆ. ಆಗ ಹಾಗೇಕೆ ಅಳುತ್ತಿದ್ದೇನೆ ಎಂದು ನೋಡಿದರೆ ತೊಡೆಯ ಮೇಲೆ  ಆಗ ತಾನೇ ಹಾಕಿದ  ತ್ರಿಶೂಲಾಕಾರದ ಈ ರೀತಿಯ ಬರೆ ಇತ್ತು.  ಅಯ್ಯೋ ರಾಮ. ಸತ್ತು ಹೋಗಿದ್ದವನನ್ನು ನಾವೇ ಗೋಣಿ ಚೀಲದಲ್ಲಿ ಕಟ್ಟಿಹಾಕಿದ್ದರೆ, ಈಗ ಬರೆ ಹಾಕಿಸಿಕೊಂಡು ಅದು ಹೇಗೆ ಬದುಕಿದ ಎಂದು ಯೋಚಿಸುತ್ತಿರುವಾಗ, ಅಮ್ಮಾ ಅದೇನೋ ನನಗೆ  ಕನಸು ಬಿತ್ತಮ್ಮ. ಯಾರೋ ಇಬ್ಬರು ದಾಂಡಿಗರು ನನ್ನನ್ನು ಎಲ್ಲಿಗೂ ಕರೆದುಕೊಂಡು ಹೋಗಿ  ನಾಟಕದಲ್ಲಿ ಬರುವ  ಯಮಧರ್ಮನ ಮುಂದೆ ನಿಲ್ಲಿಸಿದರು. ಆದರೆ ಅಲ್ಲಿ ಬಂದವನೊಬ್ಬ, ಅಯ್ಯೋ ತಪ್ಪು ಕೆಲಸ ಮಾಡಿದ್ದೀರಿ. ನಾನು ಹೇಳಿದ ನಂಜುಂಡ ಈ ವ್ಯಕ್ತಿಯಲ್ಲಾ. ಅವನೂ ಕೂಡಾ ಅದೇ ಊರಿನವನೇ, ಆವನಿಗೆ ವಯಸ್ಸಾಗಿದೆ. ಈ ಕೂಡಲೇ ಇವನನ್ನು ಅಲ್ಲಿಯೇ ಬಿಟ್ಟು ನಾನು ಹೇಳಿದ ನಂಜುಂಡನನ್ನು ಕರೆ ತನ್ನಿ ಎಂದು ಆಜ್ನಾಪಿಸಿದ. ಹಾಗೆಯೇ ಇಲ್ಲಿಗೆ ಬಂದು ಹೋಗಿದ್ದ ಕುರುಹಾಗಿ ಈ ಬರೆ ಎಳೆದು ಕಳುಹಿಸಲು ಹೇಳಿದ.  ನನಗೆ ಎಚ್ಚರವಾಗಿ ನೋಡಿದರೆ ನಿಜವಾಗಲೂ ನನಗೆ ಬರೆ ಹಾಕಿದ್ದರು ಮತ್ತು ಗೋಣಿ ಚೀಲದಲ್ಲಿ ಬಂಧಿಸಿದ್ದರು ಎಂದೆ.  ಇದನ್ನು ಕೇಳಿದ  ನಮ್ಮ ಅಮ್ಮ ಮತ್ತು ಅಕ್ಕನಿಗೆ ಸೋಜಿಗವಾಗಿ, ಕೂಡಲೇ ಅಕ್ಕ ಪಕ್ಕದ ಬೀದಿಯಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ನಂಜುಂಡನ ಮನೆಗೆ ಓಡಿ ಹೋಗಿ ನೋಡಿದರೆ, ಆಗಷ್ಟೇ ನಂಜುಂಡ ತೀರಿಹೋಗಿದ್ದ ವಿಷಯ ತಿಳಿಯಿತಂತೆ.  ಎಂದು ನಿಟ್ಟುಸಿರು ಬಿಡುತ್ತಿದ್ದಂತೆಯೇ  ತಾತಾ ಮೊಮ್ಮಗ ಮನೆಯ ಸಮೀಪ ಬಂದಾಗಿತ್ತು.  ಓಹೋ ಹಾಗಾದ್ರೆ  ನೀವು ಸತ್ತು ಬದುಕಿದ್ರಾ? ಅಂದರೆ ನೀವೇ ಹೇಳಿಕೊಡುವ  ಭಜಗೋವಿಂದಂನಲ್ಲಿ  ಬರುವ ಹಾಗೆ ಪುನರಪಿ ಜನನಂ, ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ ಅನ್ನೋ ಹಾಗಾಯ್ತು ಅಲ್ಲವೇ ತಾತಾ ಎಂದಾಗ, ಮೊಮ್ಮಗನ ಜಾಣ್ಮೆಗೆ ಮೆಚ್ಚಿ ಹೌದಪ್ಪಾ ಅದು ಹಾಗೇ ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯಲ್ಲಿರುವ ಸಂಸಾರಕ್ಕೆ ಪಾರವೇ ಇಲ್ಲ. ಇದನ್ನು ಸುಲಭವಾಗಿ ದಾಟಲಾಗುವುದಿಲ್ಲ. ನಿನಗೆ ಈಗ ಅರ್ಥ ಆಗುವುದಿಲ್ಲ. ಮುಂದೆ ನಿಮ್ಮಪ್ಪನ ರೀತಿ ದೊಡ್ಡವನಾದ ಮೇಲೆ ತಿಳಿಯುತ್ತದೆ ಎಂದಿದ್ದರು.

ಆ ಸುಂದರ ಪ್ರಸಂಗವನ್ನು  ಮೆಲುಕು ಹಾಕುತ್ತಾ ಸರದಿಯ ಸಾಲಿನಲ್ಲಿ ಮುಂದುವರಿಯುತ್ತಿದ್ದಾಗಲೇ, ಅರ್ಚನೆ ಮಾಡಿಸುವವರು ಯಾರಾದರೂ ಇದ್ದಾರಾ ಎಂದು ಅರ್ಚಕರು ಹೇಳಿದಾಗಲೇ ವಾಸ್ತವ ಪ್ರಪಂಚಕ್ಕೆ ಮರಳಿ, ಆಗಲಿದ ತಾತನನ್ನು ನೆನೆಯತ್ತಾ , ದೇವರ ದರ್ಶನ ಕಣ್ತುಂಬ ಮಾಡಿದ ಶಂಕರ.  ನಮ್ಮ ಪುರಾಣ ಪುಣ್ಯ ಕಥೆಗಳಲ್ಲಿ ಹೇಳಿದಂತೆ  ಪುನರ್ಜನ್ಮ ಅನ್ನುವುದು ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಅದರ ಕುರಿತು ನಮ್ಮ ನಂಬಿಕೆಯಂತೂ ಕಡಿಮೆಯಾಗುವುದಿಲ್ಲ. ಏಕೆಂದರೆ ಇಂತಹ ಕಠು ಸತ್ಯ ಪ್ರಸಂಗಗಳು ನಮ್ಮನ್ನು ನಂಬುವಂತೆಯೇ ಮಾಡುತ್ತದೆ.

ಏನಂತೀರೀ?

ಅಹಂ

ಅದೊಂದು ಮಧ್ಯಮ ವರ್ಗದ ಕುಟುಂಬ. ಯಜಮಾನರು ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯೊಡತಿ ಅಪ್ಪಟ ಗೃಹಿಣಿ. ಇರುವ ಒಬ್ಬನೇ ಒಬ್ಬ ಮಗನನ್ನು ಹೊಟ್ಟೆ, ಬಟ್ಟೆ ಕಟ್ಟಿ  ಸಾಕಿ ಸಲಹಿ ಒಳ್ಳೆಯ ವಿದ್ಯಾವಂತನನ್ನಾಗಿ ಮಾಡಿದರು. ಆ ಹುಡುಗನೂ ಅಷ್ಟೇ  ತಂಬಾ ಬುದ್ಧಿವಂತ. ಕಠಿಣ ಪರಿಶ್ರಮದಿಂದ ಓದಿ ಐದಂಕಿ ಸಂಬಳ ಪಡೆಯುವಷ್ಟು ಎತ್ತರಕ್ಕೆ ಬೆಳೆದ. ವಯಸ್ಸಿಗೆ ಬಂದ ಮಗನಿಗೆ ವಧು ಅನ್ವೇಷಣೆಗಾಗಿ ವಧುವರ ಕೇಂದ್ರಕ್ಕೆ  ಹೋಗಿದ್ದರು.

ಅದೇ  ಸಮಯಕ್ಕೆ  ಊರಿನ ಮತ್ತೊಂದು ಭಾಗದಲ್ಲಿದ್ದ ಇನ್ನೊಂದು ಮಧ್ಯಮ ವರ್ಗದ ಕುಟುಂಬದ ಒಬ್ಬಳೇ  ಸುರದ್ರೂಪಿಯಾದ  ಡಿಗ್ರಿ ಮುಗಿಸಿ  ಹತ್ತಿರದ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಾ ತಕ್ಕಮಟ್ಟಿಗೆ ಸಂಬಳ ಪಡೆಯುತ್ತಿದ್ದ  (ಅವಳ ದುಡಿಮೆ ಅವಳ ಅಲಂಕಾರಿಕ ವಸ್ತುಗಳಿಗೇ ಖರ್ಚಾಗುತ್ತಿತ್ತು) ಹೆಣ್ಣಿನ ತಂದೆ ತಾಯಿಯರೂ ಅದೇ ಕೇಂದ್ರಕ್ಕೆ ಬಂದಿದ್ದರು .ಅಲ್ಲಿ  ಒಬ್ಬರಿಗೊಬ್ಬರು ಪರಿಚಯವಾಗಿ ಹುಡುಗಿಯ ಸೌಂದರ್ಯಕ್ಕೆ ಹುಡುಗ, ಹುಡುಗನ ಸಂಬಳಕ್ಕೆ ಹುಡುಗಿ, ಪರಸ್ಪರ ಆಕರ್ಷಿತರಾಗಿ ಇಬ್ಬರಿಗೂ ಮದುವೆ ನಿಶ್ಚಯವಾಯಿತು.

ಒಳ್ಳೆಯ ಸಂಬಂಧ. ವರದಕ್ಷಿಣೆ ಏನು ಕೇಳಲಿಲ್ಲ. ಹಾಗಾಗಿ ಮದುವೆಯನ್ನು ಶಕ್ತಿ ಮೀರೀ ಸಾಲಾ ಸೋಲ ಮಾಡಿ, ಬಹಳ ವಿಜೃಂಭಣೆಯಿಂದ ಅದ್ದೂರಿಯಿಂದ ಮಾಡಲಾಯಿತು. ಮದುವೆಯಾದ ಎರಡು ಮೂರು ತಿಂಗಳು ಮಧುಚಂದ್ರ, ನೆಂಟರಿಷ್ಟರ ಮನೆಗೆ ಹೋಗಿ ಬರುವುದರಲ್ಲೇ ಕಾಲ ಕಳೆದು ಹೋದದ್ದು  ನವ ದಂಪತಿಗಳಿಗೆ ಗೊತ್ತೇ  ಆಗಲಿಲ್ಲ. 

ಪ್ರತಿದಿನ ಗಂಡ ಹೆಂಡತಿ ಒಟ್ಟಿಗೆ ಆಫೀಸಿಗೆ ಹೋಗಿ ಸಂಜೆ ಮನೆಗೆ ಬರುವ ದಾರಿಯಲ್ಲೇ ಏನಾದರೂ ತಿಂದು ಬರುತ್ತಿದ್ದರು.  ಇದೇ ರಾಗವನ್ನು ನೋಡಿ ನೋಡಿ ಬೇಸತ್ತ  ತಂದೆ ತಾಯಿಯರು ಒಮ್ಮೆ ಮಗ ಸೊಸೆಯರಿಗೆ, ಇದೇನಪ್ಪಾ ಇದು ಮನೇನೋ ಲಾಡ್ಜೋ? ಬರೀ ರಾತ್ರಿ ಮಲಕ್ಕೋಳದಿಕ್ಕೆ ಮಾತ್ರ ಬರ್ತೀರಿ ಇಂದು ಸುಸಂಸ್ಕೃತ ಸಂಸಾರವಂತರ  ಮನೆ. ನಮಗೂ ಮಗ ಸೊಸೆ ಜೊತೆ ನೆಮ್ಮದಿಯಾಗಿ ಒಟ್ಟಿಗೆ ಕುಳಿತು ಊಟ ಮಾಡೋ ಆಸೆ ಇದೆ. ಯಾವಾಗಲಾದರೂ ಒಮ್ಮೊಮ್ಮೆ ಸೊಸೆ ಕೈ ರುಚಿ ನೋಡೋ ಆಸೆ ಇದೆ. ಮೊಮ್ಮಕ್ಕಳನ್ನು ಎತ್ತಿ ಮುದ್ದು ಮಾಡ್ಬೇಕು ಅಂತ ಇದೆ  ಅಂತ ಕೇಳಿದ್ದೇ ತಡ.  ಸೊಸೆಗೆ ಅದೆಲ್ಲಿತ್ತೋ  ರೋಷಾ, ವೇಷಾ, ನೋಡ್ರಿ, ನೋಡ್ರಿ, ಹೇಗೆ ಮಾತಾಡ್ತಾರೆ   ನಿಮ್ಮ ಅಪ್ಪ  ಅಮ್ಮ.  ನಾನೇನು ನಿಮ್ಮನ್ನು ಮದುವೆ ಆಗಿದ್ದು ಈ ಮನೆಯಲ್ಲಿ ಕೆಲಸ ಮಾಡೋದಿಕ್ಕಾ? ನಾನೇನು ಬೇಯಿಸಿ ಹಾಕೋಕೆ ಅಡುಗೆಯವಳಾ? ಇಲ್ಲಾ ನಿಮಗೆ ಮಕ್ಕಳನ್ನು ಹೆತ್ತು ಕೊಡೋ ಮೆಶಿನ್ನಾ?  ಒಂದು ಮಾತು ಹೇಳ್ತೀನಿ ಚೆನ್ನಾಗಿ ಎಲ್ಲರೂ ಕೇಳಿಸಿ ಕೊಳ್ಳಿ.  ನನಗಂತೂ ಮಕ್ಕಳನ್ನು ಹೆರುವ ಆಸೆ ಇಲ್ಲ.  ಮಕ್ಕಳಾದ್ರೆ, ನನ್ನ  ಸೌಂದರ್ಯವೆಲ್ಲಾ ಮಂಕಾಗುತ್ತದೆ. ಆಮೇಲೆ ಯಾರೂ ನನ್ನ ಕಡೆ ತಿರುಗಿಯೂ ನೋಡೋದಿಲ್ಲ. ಮಕ್ಕಳು ಏನಾದರೂ ಬೇಕಿದ್ದಲ್ಲಿ, ಯಾವುದಾದರೂ ಅನಾಥಾಶ್ರಮದಿಂದ ತಂದು ಸಾಕೋಣ ಎಂದಳು.

ತಮ್ಮ ವಂಶೋಧ್ಧಾರದ ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ, ರಾಮಾಕೃಷ್ಣಾ ಗೋವಿಂದಾ ಎಂದು ನಮ್ಮ ಉಳಿದ ಜೀವನವನ್ನು ಕಳೆಯ ಬೇಕು ಅಂತ ಅಂದುಕೊಂಡಿದ್ದ ಅತ್ತೆ ಮಾವನವರಿಗೆ ಸೊಸೆಯ ಮಾತು ಗರ ಬಡಿದಂತಾಗಿತ್ತು. ಗಂಡನಿಗೂ ಹೆಂಡತಿಯ ಮಾತು ಕೇಳಿ ಆಶ್ಚರ್ಯದ ಜೊತೆಗೆ  ಬೇಸರವೂ ಆಯಿತು. ಅಪ್ಪಾ ಅಮ್ಮಂದಿರ ಮುಂದೆ ಮಾತಾನಾಡುವುವುದು ಬೇಡ ಎಂದು ಸುಮ್ಮನೆ ಹೆಂಡತಿಯನ್ನು  ತನ್ನ ಕೋಣೆಗೆ ಕರೆದೊಯ್ದು ಇದೇನು? ಎಂತಾ ಮಾತಾಡ್ತಾ ಇದ್ಯಾ? ಅವರು ಕೇಳಿದ್ದರಲ್ಲಿ ತಪ್ಪೇನಿದೆ?  ಹಾಗೆ ದೊಡ್ಡವರ ಮುಂದೆ ಗೌರವ ಇಲ್ಲದೆ ಮಾತಾನಾಡಿದ್ದು ನನಗೆ ಒಂದು ಚೂರು ಹಿಡಿಸಲಿಲ್ಲ. ಹೋಗಿ ಅಪ್ಪಾ  ಅಮ್ಮಾನ ಬಳಿ ಕ್ಷಮೆ ಕೇಳು ಎಂದ. ಆದರೆ  ಸೊಸೆ ತನ್ನ ಅಹಂನಿಂದಾಗಿ ಯಾರ ಮಾತನ್ನೂ ಕೇಳಲು ಸಿದ್ಧಳಿರಲಿಲ್ಲ.

ನಾನೇನು ತಪ್ಪು ಮಾತಾನಾಡಿದೆ ಅಂತ ಕ್ಷಮೆ ಕೇಳಲಿ? ಅವರಿಗೆ ನಾವು ಅವರ ಮನೆಯಲ್ಲಿ ಬಿಟ್ಟಿ ತಿನ್ನುತ್ತಿದ್ದೇವೆ ಅನ್ನೋ ಭಾವನೆ.  ಮನೆ ಅವರೇ ಕಟ್ಟಿಸಿರಬಹುದು ಆದರೆ ದುಡಿದು ತಂದು ಹಾಕುತ್ತಿರುವವರು ನೀವೇ ತಾನೇ?  ಸುಮ್ಮನೆ ಮನೆಯಲಿ ಕುಳಿತು ನಿಮ್ಮ ಸಂಪಾದನೆಯಲ್ಲಿ ತಿಂದು ಬದುಕುತ್ತಿರುವವರಿಗೇ ಇಷ್ಟು ಅಹಂ ಇರಬೇಕಾದರೆ ನಾನು ಕೆಲಸಕ್ಕೆ ಹೋಗುತ್ತಿರುವವಳು. ಇನ್ನು ನನಗೆಷ್ಟಿರ ಬೇಡ? ನೋಡಿ ನಾನೀಗ ಒಂದು ನಿರ್ಧಾರಕ್ಕೆ ಬಂದಾಗಿದೆ. ನಿಮಗೆ ನಾನು ಬೇಕು ಅಂತಂದ್ರೆ, ಈಗಿಂದ್ದೀಗಲೇ ಬೇರೆ ಮನೆ ಮಾಡೋಣ. ಈ ರೀತಿಯಾಗಿ ಬೈಸಿಕೊಂಡು ನನಗೆ ಒಂದು ಕ್ಷಣವೂ ಈ ಮನೆಯಲ್ಲಿ ಇರುವುದಕ್ಕೆ ಆಗುವುದಿಲ್ಲ.ನಾನು ಬಟ್ಟೆ ಜೋಡಿಸಿ ಕೊಳ್ತೀನಿ. ಮನೆ ಸಿಗುವವರೆಗೆ ಆಫೀಸ್ ಹತ್ತಿರ ಇರುವ ಯಾವುದಾದರೂ ಹೋಟೆಲ್ನಲ್ಲಿ ಇರೋಣ. ಒಂದು ವಾರದೊಳಗೆ ಅಲ್ಲೇ  ಯಾವುದಾದರೂ ಮನೆ ಹುಡ್ಕೋಳ್ಳೋಣ. ಆಫೀಸ್ ಕ್ಯಾಂಟೀನ್ನಲ್ಲೇ ಬೆಳಿಗ್ಗೆ  ತಿಂಡಿ ಮಧ್ಯಾಹ್ನದ ಊಟ ಮಾಡಿ ಕೊಂಡ್ರಾಯ್ತು . ಇನ್ನು ಸಂಜೆ ಬರ್ತಾ ಎಲ್ಲಾದರೂ ಊಟ ಮಾಡೋಣ ಇಲ್ಲಾಂದ್ರೆ ಹೇಗೂ ಸ್ವಿಗ್ಗಿ, ಇಲ್ಲಾ  ಝೊಮಾಟೋ ಇದ್ದೇ ಇದೆ.  ಆರ್ಡರ್ ಮಾಡಿದ್ರೆ ಅರ್ಧ ಗಂಟೆಯೊಳಗೆ ತಂದು ಕೊಡ್ತಾರೆ. ಇನ್ನೂ ವೀಕೆಂಡ್ನಲ್ಲಿ ನಮ್ಮ  ಅಮ್ಮನ ಮನೆಗೆ ಹೋಗ್ಬಿಡೋಣ. ಅಲ್ಲೇ ಎಲ್ಲಾ ಮುಗಿದು ಹೋಗುತ್ತದೆ ಎಂದಾಗ,   ಗಂಡನಿಗೆ ಅದು ಎಲ್ಲಿತ್ತೋ ಕೋಪ. ಏನೂ ಮಾತಾಡ್ತಾ ಇದ್ದೀಯಾ ಅಂತಾ ಗೋತ್ತಾ?  ಇದೇನು ಸಂಸಾರ ಮಾಡೋ ಹುಟ್ಟಾ? ನಾನು ಅಪ್ಪ ಅಮ್ಮನ ಬಿಟ್ಟು ಎಲ್ಲೂ ಬರೋದಿಲ್ಲ . ನೀನು ಬೇಕಿದ್ರೆ ಎಲ್ಲಿಗಾದರೂ ಹೋಗು ಎಂದು ಸಿಟ್ಟಿನಲ್ಲಿ ಹೇಳಿದ್ದೇ ತಡಾ, ಹೆಂಡತಿ ಜೋಡಿಸಿಕೊಂಡು ಇಟ್ಟಿದ್ದ  ಬಟ್ಟೆ ಬರೆಗಳನ್ನು ಎತ್ತಿ ಕೊಂಡು ಓಲಾ ಬುಕ್ ಮಾಡಿಕೊಂಡು ಅಷ್ಟು ರಾತ್ರಿ ಹೊತ್ತಿನಲ್ಲಿ ಅಮ್ಮನ ಮನೆಗೆ ಹೊರಟೇ ಬಿಟ್ಟಳು.

ಇಷ್ಟು ತಡ ಹೊತ್ತಿನಲ್ಲಿ ಹೇಳದೇ ಕೇಳದೆ ದುರು ದುರು ಎಂದು ಬಂದ ಮಗಳನ್ನು ನೋಡಿ ಆಶ್ವರ್ಯಚಕಿತರಾದ ಅಪ್ಪಾ ಅಮ್ಮಾ, ಏನಮ್ಮಾ ಒಬ್ಬಳೇ ಇಷ್ಟು ಹೊತ್ತಿನಲ್ಲಿ ಒಬ್ಬಳೇ ಬಂದಿದ್ದೀಯಾ? ಅಳಿಯಂದಿರು ಎಲ್ಲಿ? ಮನೆಯಲ್ಲಿ ಏನಾದ್ರೂ ಮಾತು ಕತೆ ಆಯ್ತಾ ಅಂತಾ ಕೇಳುವ ಮನಸ್ಸಾದ್ರೂ  ಮಗಳ ಕೋಪ ಕಡಿಮೆ ಆದ ಮೇಲೆ ಕೇಳೋಣ ಅಂತ ಸುಮ್ಮನಾದರು. ಮಗಳೋ ಸುಮ್ಮನೆ ಅವಳ ಕೋಣೆಗೆ ಹೋಗಿ ಬಾಗಿಲು ಹಾಕಿ ಕೊಂಡವಳು  ಮಾರನೇ ದಿನ ಆಫೀಸಿಗೆ ಹೋಗಿ ಸಂಜೆ ಬರುವಾಗ ಪೋಲಿಸ್ ಠಾಣೆಗೆ ಹೋಗಿ ತನ್ನ ಗಂಡನ ಮನೆಯವರ ಮೇಲೆ ವರದಕ್ಷಿಣೆಯ ಕೇಸ್ ಹಾಕಿ,  ಲಾಯರ್ ಆಫೀಸ್ಗೆ ಹೋಗಿ ವಿಚ್ಚೇದನಕ್ಕೆ ಕೋರಿಕೆ ಸಲ್ಲಿಸಿಯೇ ಬಂದಳು.

ತಂದೆ ತಾಯಿ ಎಷ್ಟೇ ಪರಿ ಪರಿಯಾಗಿ ಬೇಡಿ ಕೊಂಡರೂ ಸಂಪಾದನೆ ಮಾಡುತ್ತಿದ್ದ ಮಗಳ ಮನಸ್ಸು ಕರಗಲೇ ಇಲ್ಲ.  ಹೆಣ್ಣು ಸ್ವಲ್ಪ ತಗ್ಗಿ ಬಗ್ಗಿ ನಡೆಯಬೇಕಮ್ಮಾ ಎಂದು ಬುದ್ದಿವಾದ ಹೇಳಿದ್ದಕ್ಕೆ, ಅಪ್ಪಾ ಅಮ್ಮನ  ಮನೆಯನ್ನೂ ಬಿಟ್ಟು ತನ್ನ ಆಫೀಸಿನ ಬಳಿಯೇ ಪೇಯಿಂಗ್ ಗೆಸ್ಟಾಗಿದ್ದಾಳೆ.  ಇನ್ನು  ಯಾವ ತಪ್ಪನ್ನೂ ಮಾಡದ ಗಂಡನ ಮನೆಯವರು ಪೋಲಿಸರ ವಿಚಾರಣೆಯಿಂದ ಹೈರಾಣಾಗಿದ್ದಾರೆ. ಪ್ರತಿ ತಿಂಗಳು ಕೋರ್ಟು ಕಛೇರಿ ಅಂತಾ ಅಲೆಯುತ್ತಿದ್ದಾರೆ. ಹೆಣ್ಣು ಹೆತ್ತ ತಪ್ಪಿಗಾಗಿ ಅವಳ ತಂದೆ ತಾಯಿಯರು ಮಗಳ ಮದುವೆಗಾಗಿ ಮಾಡಿದ್ದ ಸಾಲ  ತೀರಿಸುತ್ತಾ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.

ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಃ ” ಎಲ್ಲಿ ನಾರಿಯು ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ಇರುತ್ತಾರೆ ಎನ್ನುಂತಹ ನಾಡಿದು.   ನಮ್ಮ ದೇಶದ ನಮ್ಮ ಸಂಸ್ಕೃತಿಯಲ್ಲಿ ಎಂದಿಗೂ ಗಂಡು ಹೆಣ್ಣು ಸರಿ ಸಮಾನ ಎಂದು ಭಾವಿಸಲೇ ಇಲ್ಲ. ಬದಲಾಗಿ ಹೆಣ್ಣನ್ನು ಒಬ್ಬ ಮಮತೆಯ ತಾಯಿಯಾಗಿ, ನೆಚ್ಚಿನ ಗೃಹಿಣಿಯಾಗಿ  ಎಲ್ಲದ್ದಕ್ಕೂ ಹೆಚ್ಚಿಗೆ ಶಕ್ತಿ ದೇವತೆಯಾಗಿ ಆರಾಧಿಸುತ್ತೇವೆ. ಗಂಡ ಹೊರಗೆ ಹೋಗಿ  ತನ್ನ ಶಕ್ತಿ ಮೀರಿ ಸಂಪಾದಿಸಿ ತಂದು ತನ್ನ ಕುಟುಂಬವನ್ನು ಸಾಕುವ ಪದ್ದತಿ ಇತ್ತೇ ಹೊರತು ಹೆಂಡತಿಯ ಸಂಬಳದಲ್ಲಿ ಬದುಕುವ ದೈನೇಸಿ ಸ್ಥಿತಿಯಲ್ಲಿ ಎಂದೂ ಇರಲೇ ಇಲ್ಲ.  ಆದರೆ ಇಂದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ಮುಳುಗಿ ಪ್ರತಿಯೊದರಲ್ಲಿಯೂ ಹೆಣ್ಣು ಗಂಡಿಗೆ ಸಮಾನ ಎನ್ನುವ  ಅನಾವಶ್ಯಕ ಪೈಪೋಟಿಗೆ ಇಳಿದು ಮನೆ ಮನಗಳು ಹಾಳಾಗುತ್ತಿರುವುದನ್ನು ನೋಡುವುದಕ್ಕೆ ನಿಜಕ್ಕೂ  ಬಹಳ ಬೇಸರವಾಗುತ್ತಿದೆ.

ಏನಂತೀರೀ?